Monday, September 8, 2008

ಏನಾಗಲೀ...ಮುಂದೆ ಸಾಗು ನೀ...

ರೀಶ ಹಾಗೆ ಹೋಗ್ಬಹುದು ಅಂತ ನಾವು ಯಾರೂ ಅಂದ್ಕೊಂಡಿರ್‍ಲಿಲ್ಲ. ಅದು ಹಾಗೇ ಅಲ್ವ? ಸಾವು ಮುಹೂರ್ತ ನೋಡಿ ಬರೋದಿಲ್ಲ.
ಅಂದು ಬೆಳಿಗ್ಗೆ ೭.೩೦ಕ್ಕೆ ಅವನ ಪಕ್ಕದ ಮನೆಯೋರು ಯಾರೋ ನಂಗೆ ಫೋನ್ ಮಾಡಿ ಹೇಳಿದಾಗ್ಲೇ ಗೊತ್ತಾಗಿದ್ದು, ಹರೀಶ ಇನ್ನಿಲ್ಲ ಅಂತ. ಸಾವಿಗೆ ಸಿಕ್ಕ ಸುಂದರ ಕಾರಣ ‘ಇಲಿ ಜ್ವರ’ ಅಂತ! ಅದೂ ಅಷ್ಟೆ, ಅವನಿಗೆ ಇಲಿ ಜ್ವರ ಬಂದಿತ್ತು ಅಂತಾನೂ ನಂಗೆ ಗೊತ್ತಾಗಿದ್ದು ಅವನ ‘ಪ್ರಯಾಣ’ ಮುಗಿದ ಮೇಲೇನೆ. ಇದಕ್ಕೆ ಸರಿಯಾಗಿ ಒಂದು ವಾರ ಮೊದಲು ಫಾರೂಕ್ ಮದುವೆಗೆ ನಾವೆಲ್ಲಾ ಸ್ನೇಹಿತರು ಸೇರಿದ್ರೂ ಹರೀಶ ‘ಬಸ್ ತಪ್ಪಿತು’ಅಂತ ತಪ್ಪಿಸಿಕೊಂಡಾಗ ನಾನೇ ಬೈದಿದ್ದೆ (ಮೊಬೈಲ್‌ನಲ್ಲಿ) ಅದೇ ಕೊನೆ ನಾನು ಅವ್ನ ಹತ್ರ ಮಾತಾಡಿದ್ದು. ಸರಿಯಾಗಿ ಒಂದು ವಾರದ ನಂತ್ರ ಸತ್ತ ಸುದ್ದಿ. ಪುಣ್ಯಾತ್ಮ ಹೇಳನೇ ಇಲ್ಲ ತನಗೆ ಜ್ವರ ಬಂದಿತ್ತು ಅಂತ. ಆಫ್ಟರಾಲ್ ಅವನಿಗೇ ಗೊತ್ತಿರ್‍ಲಿಲ್ಲ ತನಗೆ ವಕ್ಕರಿಸಿದ್ದು ಇಲಿ ಜ್ವರ ಅಂತ. ಏನೇನೂ ಆರಾಮ ಇಲ್ಲ ಅಂತ ಭಾನುವಾರ ರಾತ್ರಿ ಮಂಗಳೂರಲ್ಲಿ ಆಸ್ಪತ್ರೆ ಐಸಿಯುನಲ್ಲಿ ಸೇರಿದೋನು ಸೋಮವಾರ ಬೆಳಿಗ್ಗೆ ೬,೩೦ರ ಹೊತ್ತಿಗೆ ಹೆಣವಾಗಿದ್ದ.
ನಾನು, ಫಾರೂಕ್, ಜಗ್ಗ, ನವೀನ ದಾರಿ ಹುಡ್ಕೊಂಡು ಹರೀಶನ ಮನೆಗೆ ಹೋಗೋ ಹೊತ್ತಿಗೆ ಬಾಡಿ ಬರ್ತಾ ಇತ್ತು. ಮದುವೆಗೆ ಬಾರದಿದ್ರೂ ಒಂದು ವಾರದೊಳಗೆ ಎಲ್ಲಾದರೂ ಮೀಟ್ ಆಗುವ ಅಂತ ನಾವು ಆರು ಜನ (೫ ವರ್ಷ ಒಟ್ಟಿಗೆ ಕಲ್ತ ನಮ್ಮದೊಂದು ಗ್ರೂಪ್ ಇದೆ) ಮಾತಾಡ್ಕೊಂಡೂ ಇದ್ದೆವು. ಆದ್ರೆ ಅಂಥಹ ಪರಿಸ್ಥಿತಿಲಿ ಹರೀಶನ ಬಾಯಿಗೆ ತುಳಸಿ ತೀರ್ಥ ಹಾಕೋದಿಕ್ಕೆ ಸೇರ್ತೇವೆ ಅಂತ ಖಂಡಿತಾ ಅಂದ್ಕೊಂಡಿರ್‍ಲಿಲ್ಲ. ‘ಇಲಿ ಜ್ವರಕ್ಕೆ ಉಪನ್ಯಾಸಕ ಬಲಿ’ ಅಂತ ಸಿಂಗಲ್ ಕಾಲಂ ಸು‌ದ್ದಿ ಆದಲ್ಲಿಗೆ ಹರೀಶ ಕಣ್ಮರೆಯಾಗಿ ಬಿಡ್ತಾನಾ? ಹರೀಶನಂತೋರು ಸತ್ತಲ್ಲಿಗೆ ಯಾರಿಗೂ ತುಂಬಲಾರದ ನಷ್ಟ ಆಗೋದಿಲ್ವ? ಈ ಸಾವು ನ್ಯಾಯವ? ಅಂತ ಅನ್ನಿಸ್ತಾನೆ ಇರ್‍ತದೆ. ಬಟ್, ತುಂಬ ಬಳಲೋದು ಅವನ ಫ್ಯಾಮಿಲಿ.
ಪಿಯುಸಿ ಓದ್ತಾ ಇದ್ದಾಗ್ಲೆ ಹರೀಶನ ತಂದೆ ಸತ್ರು. ಅವರಿವರ ತೋಟಕ್ಕೆ ನೀರು ಹಾಕಿ ಕೂಲಿ ಮಾಡಿ ಕಾಲೇಜಿಗೆ ಬರ್ತಾ ಇದ್ದ ಹರೀಶ ಅಕೌಂಟನ್ಸಿಯಲ್ಲಿ ೧೦೦/೧೦೦ ತೆಗೀತಾ ಇದ್ದಿದ್ದು ಈಗ್ಲೂ ನೆನಪಿದೆ. ಡಿಗ್ರಿ ಮುಗಿದ ಮೇಲೆ ವಿಚಿತ್ರ ತಲೆನೋವು ಬಂದು ಒಂದು ವರ್ಷ ಮನೇಲಿ ಕೂತ. ಸ್ನೇಹಿತರ ಒತ್ತಾಯಕ್ಕೆ ಎಂ.ಕಾಂ. ಮಾಡಿದ್ದೇ ಮಾಡಿದ್ದು, ೩ ಕಡೆ ಪಾರ್ಟ್ ಟೈಂ ಕೆಲ್ಸಾ ಸಿಕ್ತು. ಹಾಗೆ ಟೆಂಪರರಿ ಕೆಲ್ಸಾ ಮಾಡ್ತಾ ಇದ್ದೋನಿಗೆ ಸಾಯೊಕಿಂತ ೨ ತಿಂಗಳು ಮೊದಲಷ್ಟೇ ಪರ್ಮನೆಂಟ್ ಕೆಲ್ಸಾ ಆಗೋ ಪ್ರಕ್ರಿಯೆ ಶುರು ಆಗಿತ್ತು ನಂಗೇ ಫೋನ್ ಮಾಡಿದ್ದ ಕೂಡ. ತನ್ನ ಗೆಳತಿಯ ಬಗ್ಗೂ ತುಂಬಾ ಹೇಳ್ತಾ ಇದ್ದ. ಒಬ್ಬ ತಂಗಿ, ಇಬ್ಬರು ತಮ್ಮ, ಅಮ್ಮನನ್ನು ನೋಡ್ಕೋತಾ ಇದ್ದ ಹರೀಶ ಏಕಾಏಕಿ ಹೋಗಿಬಿಟ್ಟಿದ್ದಾನೆ.
ಯಾವತ್ತೂ ತನ್ನ ಆರ್ಥಿಕ ಕಷ್ಗಗಳನ್ನ ಅನಿವಾರ್ಯ ಅನ್ನಿಸದ ಹೊರತೂ ಹೇಳ್ತಾ ಇರ್‍ಲಿಲ್ಲ. ಉಪನ್ಯಾಸಕ ಆದ ಮೇಲು ಭಾನುವಾರಗಳಲ್ಲಿ ಹರೀಶ ತಾನು ಮೊದಲು ಕೆಲ್ಸಕ್ಕೆ ಹೋಗ್ತಾ ಇದ್ದ ಮನೆಗಳಿಗೆ ಗೊಬ್ಬರ ಹೊರೋಕೆ ಹೋಗ್ತಾ ಇದ್ನಂತೆ. ಹಾಗಂತ ಅವನ ಪಕ್ಕದ ಮನೆಯ ಭಟ್ರು ಹೇಳಿದ್ರು. ಒಬ್ಬ ಮೌನಿ, ಸರಳ, ಕಷ್ಟಪಟ್ಟು ಬದುಕಿ ಸ್ವಾಭಿಮಾನದಿಂದ ನಮ್ಮ ಕಣ್ಣೆದುರೇ ಮೇಲೆ ಬಂದ ಗೆಳೆಯ ದಿಢೀರ್‍ ತೊರೆದು ಹೋಗಿದ್ದು ಖಂಡಿತಾ ನ್ಯಾಯವಲ್ಲ. ಕಳೆದ ಮಾರ್ಚ್‌ನಲ್ಲಿ ನಾವೆಲ್ಲಾ ಪಿಲಿಕುಳಕ್ಕೆ ಹೋಗಿ ಒಟ್ಟಿಗೆ ಫೋಟೊ ತೆಗೆಸ್ಕೊಂಡದ್ದೇ ಕೊನೆ.
ಇದು ಒಬ್ಬ ಹರೀಶನ ಕಥೆ. ನನ್ನ ಗೆಳೆಯನಾಗಿದ್ದಕ್ಕೆ ಇಷ್ಟೆಲ್ಲಾ ಗೊತ್ತು. ನಮ್ಮ ಜಿಲ್ಲೆಯಲ್ಲಿ ಕೊನೆಗಾಲಕ್ಕೆ ಜ್ವರ ಬಂದ ನೆಪದಲ್ಲಿ ಚಿಕೂನ್ ಗುನ್ಯಾ ಕಾಡಿ ಹೆಚ್ಚು ಕಡಿಮೆ ೭೫ ಜನ ತೀರಿಹೋಗಿ‌‌ದ್ದಾರೆ. ಪ್ರತಿ ಮನೆಯಲ್ಲೂ ಇಂಥದ್ದೊಂದು ನೋವಿನ ಎಳೆ ಇರಲೇಬೇಕು. ಆದರೆ ಮಾಧ್ಯಮಗಳಿಗೆ ಸಾವು ಸಂಖ್ಯೆ ಮಾತ್ರ! ಸಾವಿನ ಮನೆಯಲ್ಲಿ ಆವರಿಸಿಕೊಳ್ಳೋ ದುಃಖ ಸ್ಮಶಾನ ವೈರಾಗ್ಯ. ಆ ಅನುಕಂಪ, ಹೊಗಳಿಕೆ ಜೊತೆಗೆ ಒಬ್ಬ ಸತ್ತಾಗ ಬದುಕು ಕ್ಷಣಿಕ ಅಂದುಕೊಳ್ಳೋ ಅಷ್ಟೂ ಮಂದಿ ದಿನಕಳೆದಂತೆ ನಾರ್ಮಲ್ ಆಗ್ತಾರೆ. ತುಂಬಲಾರದ ನಷ್ಟ ಅನುಭಸೊದು, ಆ ಪ್ರೀತಿಯನ್ನು ಕಳಕೊಳ್ಳೋರು ಹರೀಶನ ಅಮ್ಮ, ತಂಗಿ, ತಮ್ಮಂದ್ರು. ಸದ್ದಿಲ್ಲದೆ, ಯಾರಿಗೂ ಉಪದ್ರ ಕೊಡದೆ ಬದುಕಿ ಹೋದ ಹರೀಶನಂತೋರ ಬಗ್ಗೆ ಬರೆಯೋಕೆ ಕಾಲಂಗಳೇ ಇರೋದಿಲ್ಲ ಅಲ್ವ? ಅಗಲಿದ ಮೇಲೇನೆ ಬೆಲೆ ಸ್ಹಷ್ಟವಾಗಿ ಗೊತ್ತಾಗೊದು. ಆ ನಷ್ಟ ಲೆಕ್ಕಕ್ಕೆ ಸಿಗೋದಲ್ಲ!