Saturday, February 21, 2015

ಹಾಡು ಹಳೆಯದಾದರೇನು...ಭಾವ ನವನವೀನ...!

/internet picture
Aksar Is Duniya Mein, Anjaane Milte Hain
Anjaani Raaho Mein, Milke Kho Jaate Hain
Lekin Hameshaa Woh Yaad Aate Hain...

ಧಡ್ ಕನ್ ಚಿತ್ರದ ಹಾಡು ಎಷ್ಟು ಅರ್ಥ ಗರ್ಭಿತ ಅನ್ನಿಸುವುದಿದೇ... ಎಷ್ಟೋ ಬಾರಿ ಚಿತ್ರಗೀತೆಯಾ...ಅಂತ ಮೂಗು ಮುರಿಯುವುದನ್ನು ಕಾಣುತ್ತೇವೆ. ಆದರೆ ಚಿತ್ರಗೀತೆಯಲ್ಲೂ ಎಷ್ಟೊಂದು ಅರ್ಥಗರ್ಭಿತ ಹಾಡುಗಳಿವೆ, ಎಷ್ಟೊಂದು ನೆನಪುಗಳ ಮೂಟೆಗಳಿವೆ... ಅಲ್ವ...

ಚಿತ್ರಗೀತೆ ಅಂತಲ್ಲ, ಹಾಡುಗಳೇ ಹಾಗೆ ಒಂಥರಾ ಬದುಕಿನ ಹಿಸ್ಟ್ರಿಗೆ ಕನ್ನಡಿ ಹಿಡಿದ ಹಾಗೆ. ಚಿಕ್ಕಂದನಿಂದಲೂ ಕೇಳುತ್ತಾ ಬಂದಿರಬಹುದಾದ ಒಂದೊಂದು ಹಾಡುಗಳೂ ದೊಡ್ಡವರಾಗುತ್ತಾ ಬಂದ ಹಾಗೆ ಆಯಾ ಕಾಲಘಟ್ಟದ ನೆನಪಗಳಗೆ ರಾಯಭಾರಿ ಇದ್ದ ಹಾಗೆ ಅನ್ನಿಸುತ್ತವೆ...
ಎಲ್ಲಿ ಮನಕಳುಕಿರದೋ... ಎಂಬ ಪ್ರಾರ್ಥನೆ ಕೇಳಿದ ಕೂಡಲೇ ಪ್ರೈಮರಿ ಶಾಲೆಯ ಬೆಳಗ್ಗಿನ ಹೊತ್ತು ನೆನಪಾದರೆ, ಜನಗಣ ಮನ...ಕಿವಿಗೆ ಬಿದ್ದ ಕೂಡಲೇ ಶಾಲೆ ಬಿಟ್ಟು ಮನೆಗೆ ಹೋಗುವುದೇ ಮೊದಲು ನೆನಪಾಗುವುದು...
ಜನಗಣಮನ... ಮುಗಿದ ಕೂಡಲೇ ಲಾಂಗ್ ಬೆಲ್ ಹೋಡಿತಾರೆ ಅಂತಾನೆ ಅನ್ನಿಸುವಷ್ಟು ಮಟ್ಟಿಗೆ ಈ ಗೀತೆ ಮನಸ್ಸಿನಲ್ಲಿ ಅಚ್ಚಾಗಿರುತ್ತದೆ ಅಲ್ವ...
ಹಾಡುಗಳನ್ನು ಕೇಳುವವರು, ಗೀತೆಗಳಿಗೆ ಕಿವಿಯಾಗುವವರಿಗೆಲ್ಲ ಅದರ ರಾಗ, ತಾಳ ಜ್ಞಾನ ಇರುತ್ತದೆ, ಇರಲೇಬೇಕು ಎಂದೇನಿಲ್ಲ. ಭಾವವೇ ಅಲ್ವೇ ಮೊದಲಿಗೆ ಆಕರ್ಷಿಸುವುದು. 
ಒಂದೊಂದು ಹಾಡು ಸಾಹಿತ್ಯ, ರಾಗ, ಹಾಡಿದವರು ಅಥವಾ ಅದರ ಚಿತ್ರೀಕರಣದಿಂದ ಇಷ್ಟವಾಗಬಹುದು. ಇನ್ನು ಕೆಲವು ಹಾಡು ಕಾರಣವೇ ಇಲ್ಲದೆ ಕಾಡಬಹುದು. ಒಂದು ಹುರುಪು, ವೈರಾಗ್ಯ, ನಿರ್ಲಿಪ್ತತೆಯನ್ನು ಹುಟ್ಟು ಹಾಕಬಹುದು. ಯಾಕೆ ಆ ಹಾಡು ಇಷ್ಟವಾಯಿತು ಎಂದು ಕೇಳಿದರೆ ಉತ್ತರವೇ ಇಲ್ಲ ಎನ್ನುವ ಹಾಗೆ...
ನಾನೆ ಎಂಬ ಭಾವ ನಾಶವಾಯಿತು... 
ಬಿಸಿಲಾದರೇನು-ಮಳೆಯಾದರೇನು....
ದಿಲ್ ಸೇ ರೇ...
ಅನಾಥ ಮಗುವಾದೆ...(ಶಂಕರ್ ನಾಗ್)
ಕಿತ್ನಾ ಪ್ಯಾರಾ ತುಜೇ ರಬ್ನೇ ಬನಾಯಾ (ರಾಜಾ ಹಿಂದುಸ್ತಾನಿ)...
ಅಕ್ಸರ್ ಇಸ್ ದುನಿಯಾ ಮೇ...(ದಡಕನ್)...
ಹೀಗೆ ನೂರಾರು ಹಾಡುಗಳು ಕಾರಣವೇ ಇಲ್ಲದೆ ಇಷ್ಟವಾಗುತ್ತದೆ, ಎಷ್ಟು ಬಾರಿ ಕೇಳಿದರೂ ಹಳತೆನಿಸುವುದಿಲ್ಲ. ಒಂದು ರಿಫ್ರೆಶಿಂಗ್ ಪರಿಮಳದ ಹಾಗೆ...
ಮೋಡಿ ಹಾಕಿ ಕಾಡಿದ ಹಾಡುಗಳು...
ಬದುಕಿನ ಪ್ರತಿ ಮಜಲಗಳಲ್ಲೂ ಕೇಳಿರಬಹುದಾದ ಹಾಡುಗಳು ಆಯಾ ಕಾಲ ಘಟ್ಟದಲ್ಲಿ ನಾವಿದ್ದ ಸನ್ನಿವೇಶ, ಕುಟುಂಬ, ಬದುಕಿನ ಕಷ್ಟ, ಅಸಹಾಯಕತೆ, ಮೂಕರೋಧನಗಳಿಗೆ ತಳಕು ಹಾಕಿರಬಹುದು. ಎಂದೋ ದುಖದಲ್ಲಿದ್ದಾಗ ತನ್ನಷ್ಟಕ್ಕೇ ರೇಡಿಯೋದಲ್ಲಿ ಬರುತ್ತಿದ್ದ ....ಬಾನಿಗೊಂದು ಎಲ್ಲೆ ಎಲ್ಲಿದೇ.....ನಿನ್ನಾಸೆಗೆಲ್ಲಿ ಕೊನೆಯಿದೆ.... ಎಂಬ ಹಾಡು ಥಟ್ಟನೆ ನಿಮ್ಮ ಗಮನ ಸೆಳೆಯಬಹುದು. ಆ ಹೊತ್ತಿಗೆ ನಿಮಗೊಂದು ಬೆಚ್ಚನೆಯ ಸಾಂತ್ವನ ಹೇಳಿರಬಹುದು...
ಮುಂದೆ ನೀವು ಎಷ್ಟೇ ಬೇಳೆದು ದೊಡ್ಡವರಾದರೂ ಮನಸ್ಸಿನಲ್ಲಿ ರಿಜಿಸ್ಟರ್ ಆಗಿರುವ ಆ ಹಾಡು ಕೇಳಿದಾಗಲೆಲ್ಲಾ ಅದೇ ಮೂಡಿಗೆ ಹಾಡು ಕೊಂಡೊಯ್ಯುವುದು ಸುಳ್ಳಲ್ಲ....
ಹಾಡು ಹಾಡಿದ ಎಸ್ಪಯೋ, ಪಿಬಿಶ್ರೀನಿವಾಸೋ, ಉದಿತ್ ನಾರಾಯಣ್, ಕಿಶೋರ್ ಕುಮಾರ್, ರಫಿ, ಅಲ್ಕಾ ಯಾಗ್ನಿಕ್ ಎಲ್ಲ ಹೆಗಲ ಮೇಲೆ
ಹಸ್ತ ಇಟ್ಟು ಸಾಂತ್ವನ ಹೇಳಿದ ಗೆಳೆಯರೆನಿಸಲೂಬಹುದು...

ಹೊಂದಿಸಿ ಬರೆಯಿರಿ... ಥರ ಹಾಡಿನೊಂದಿಗೆ ಮೂಡ್ ಕೂಡಾ ಥಳಕು ಹಾಕಿರುವುದರಿಂದಲೇ ಹಾಡು ಕಾಡುವುದಿರಬೇಕು....
ಚಿಕ್ಕವರಿದ್ದಾಗ ರೇಡಿಯೋದ ಕೋರಿಕೆಯಲ್ಲಿ ಬರುತ್ತಿದ್ದ ತರಿಕೆರೆ ಏರಿ ಮೇಲೆ.... ತಾಳಿಕಟ್ಟುವ ಶುಭವೇಳೆ..... ಸೋಲೆ ಇಲ್ಲಾ ನಿನ್ನಾ ಹಾಡು ಹಾಡುವಾಗ..... ನೀ ಮೀಟಿದ ನೆನಪೆಲ್ಲಾವೂ.... ಇಂತಹ ಅಸಂಖ್ಯಾತ ಹಾಡುಗಳನ್ನು ಕೇಳುವಾಗಲೆಲ್ಲಾ ಅವೆಲ್ಲ ಎಂದೂ ಮರೆಯದ ಹಾಡುಗಳೆಂಬ ಭಾವ ಮೂಡುವುದು ಸುಳ್ಳಲ್ಲ....
ಮುಂದೆ ಶಾಲೆ, ಕಾಲೇಜುಗಳಲ್ಲೂ ಅಷ್ಟೇ... ಮೊದಲ ಬಾರಿಗೆ ಸಿನಿಮಾದಲ್ಲಿ ನೋಡಿದಾ ಹಾಡು, ಯಾರೋ ನಿಮ್ಮ ಇಷ್ಟದವರು ಕಾಲೇಜ್ ಸ್ಟೇಜಿನಲ್ಲಿ ಹಾಡಿದ ಹಾಡು, ನಿಮ್ಮ ಆಟೋಗ್ರಾಫ್ ಪುಸ್ತಕದಲ್ಲಿ ನೀವು ಇಷ್ಟಪಟ್ಟಾತನೋ, ಆಕೆಯೋ ಗೀಚಿರಬಹುದಾದ ಇನ್ಯಾವುದೋ ಹಾಡುಗಳ ಸಾಲುಗಳನ್ನು ಅಕಸ್ಮಾತ್ ಮತ್ತೆಲ್ಲೋ ರೇಡಿಯೋದಲ್ಲೋ, ಟಿ.ವಿ.ಯಲ್ಲೋ ಕೇಳಿದಾಗ ತಕ್ಷಣ ಅಲ್ಲೊಂದು ಲಿಂಕ್ ಸಿಕ್ಕಿ ಕೆಲಕಾಲ ಮತ್ತೆ ಮೆಲುಕುಗಳಿಗೆ ಹಾಡು ಹಾದಿಯಾಗುತ್ತದೆ ಅಲ್ವೇ...
ನೀವು ಹೇಳಬೆಕೆಂದುಕೊಂಡ, ಆಡಬೇಕೆಂದುುಕೊಂ ಭಾವಗಳು ಹೇಳಲಾಗದೇ ಮನದಲ್ಲೋ ಮೂಕವಾದರೇ, ಅದೇ ಭಾವಕ್ಕೆ ಕವಿಯೊಬ್ಬ ಅಕ್ಷರಗಳ ರೂಪ ಕೊಟ್ಟು ಹಾಡಾದರೇ ಅದು ಹೆಚ್ಚು ಆಪ್ತವಾಗಬಲ್ಲುುದು.. ಮಳೆ ನಿಂತು ಹೋದೆ ಮೇಲೆ ಹನಿಯೊಂದು ಮೂಡಿದೆ.....
ಇವನು ಗೆಳೆಯನಲ್ಲ.....
ಹುಡುಗ ಹುಡುಗ ಮುದ್ದಿನ ಹುಡುಗ...
ನೂರೂ ಜನ್ಮಕೂ .... ಮತ್ತಿತರ ಹಾಡುಗಳ ಹಾಗೆ...

ವರುಷಗಳ ಹಿಂದೆ ಚಂದನದಲ್ಲಿ ವಾರಕ್ಕೊಮ್ಮೆ ಮಾತ್ರ ಪ್ರಸಾರವಾಗುತ್ತಿದ್ದ ಚಿತ್ರಮಂಜರಿಯಲ್ಲಿ ಪದೇ ಪದೇ ಬರುತ್ತಿದ್ದ ಹಾಡು, ಮೊದಲ ಬಾರಿಗೆ ಮನೆಗೆ ಟೇಪ್ ರೆಕಾರ್ಡರ್ ತಂದಾಗ ತಂದಿದ ಕ್ಯಾಸೆಟ್ ಹಾಕಿ ನೂರಾರು ಬಾರಿ ಪದೇ ಪದೇ ಕೇಳಿದ ಕುಮಾರ್ ಶಾನು ಹಾಡಿದ ಇನ್ಯಾವುದೋ ಹಾಡು... ಕಾಲೇಜನಿಂದ ಪ್ರವಾಸ ಹೋಗಿದ್ದಾಗ ಬಸ್ನಲ್ಲಿ ಎಲ್ರೂ ಸೇರಿ ಕುಣಿಯುವ ಹಾಗೆ ಮಾಡಿದ ಮತ್ತೊಂದು ಹಾಡು ಕೇಳಿದಾಗಲೆಲ್ಲಾ ಅದು ಕಾಡುತ್ತದೆ ಅಲ್ವ....
ಹಾಡು ಮೌನ ಸಂಗಾತಿ... ನಿಮ್ಮ ಪಾಡಿಗೆ ಕಿವಿಗೆ ಇಯರ್ ಫೋನ್ ಹಾಕಿಯೂ ಕೇಳಬಹುದು. ಅಥವಾ ಬಸ್ನನಲ್ಲೋ ಯಾವುದೇ ಆರ್ಕೆಸ್ಟ್ರಾದಲ್ಲೋ ಥಟ್ಟನೆ ಎಂದೋ ಕಳೆದು ಹೋದ ಗೆಳೆಯನ ಹಾಗೆ ಹಳೆ ಹಾಡು ಹೀಗೆ ಬಂದು ಹಾಗೆ ಮಾಯವಾದಗಲೂ ಅದರ ಜಾಡು ಹಿಡಿದು ಹೋಗಬೇಕೆನ್ನಿಸಬಹದು....

ಡಿಗ್ರೀ ಫೈನಲ್ ಇಯರ್ ನಲ್ಲಿ ಇದ್ದಾಗ ಕಾಲೇಜ್ ಪಕ್ಕದ ಸೆಂಟ್ರಲ್ ಟಾಕೀಸ್ಗೆ ಕಹೋ ನಾ ಪ್ಯಾರ್ ಹೈ ಸಿನಿಮಾ ಬಂದಿತ್ತು. ಹಿಟ್ ಆಗಿತ್ತು. ಎಲ್ಲರೂ ಕ್ಲಾಸ್ ಬಂಕ್ ಮಾಡಿ ಸಿನಿಮಾಗೆ ಹೋಗ್ತಿದ್ದರು. ಅದರ ಹಾಡು ಬಂದಾಗಲೆಲ್ಲಾ ವಿ.ವಿ. ಕಾಲೇಜ್ ನೆನಪೇ ಕಾಡುತ್ತದೆ...
ಪಿ.ಜಿಯಲ್ಲಿದ್ದಾಗ ಕ್ಲಾಸಿನಿಂದ ಎಲ್ಲರೂ ಸೇರಿ ಲಗಾನ್ ಫಿಲ್ಮಿಗೆ ಹೋಗಿದ್ದ ನೆನಪು...ಸುಮಾರು ಮೂರು ಕಾಲು ಗಂಟೆಯ ದೀರ್ಘ ಅವಧಿಯ ಸಿನಿಮಾ.... ಈಗಲೂ ರಾಧ ಕೈಸೇ ನ ಜಲೇ... ಹಾಡು ಕೇಳುವಾಗ 
ಆ ಕ್ಲಾಸ್ ರೂಂ ಪರಿಸರ ಕೋಲಾಟ ಆಡುತ್ತಿರುತ್ತದೆ. ಸ್ನೇಹಿತರೊಬ್ಬರಿಂದ ಅದರ ಕ್ಯಾಸೆಟ್ ಎರವಲು ಪಡೆದು ಆಗಾಗ ಕೇಳತ್ತಿದ್ದ ಹಾಡು...ಓರೆ ಚೋರಿ... ಹಾಡು.
ಬಹುಶಃ ದೇವದಾಸ್ ಸಿನಿಮಾದ ಸಿಲ್ ಸಿಲಾ ಹೇ ಚಾಹತ್ ಕ... ಹಾಡು ಕೂಡಾ ಹಾಗೆಯೇ...
ಯಾರೇ ನೀನು ಚೆಲುವೆ, ಯಜಮಾನ...ಹೀಗೆ ದೊಡ್ಡ ಹೆಸರು ಮಾಡಿದ್ದ ಸಿನಿಮಾಗಳ ಹಾಡುಗಳು ಸದಾ ಹಸಿರು....

ಹಿಂದೆಲ್ಲಾ ಆಟೋ, ಅಂಬಾಸಿಡರ್ ಕಾರಿನಲ್ಲಿ ಲಾಟರಿ ಮಾರಾಟ ಪ್ರಚಾರ ಮಾಡಿಕೊಂಡು ಬರುವಾಗ ಆ ಕಾಲದ ಜನಪ್ರಿಯ ಹಾಡುಗಳನ್ನು ಹಾಕಿಕೊಂಡು ಬರುತ್ತಿದ್ದರು. ಆ ಕಿರಿಗುಟ್ಟುವ ಮೈಕಿನಲ್ಲಿ ಹಾಡು ಕೇಳಲು ಖುಷಿಯಾಗತ್ತಿತ್ತು.ರಾಮಾಚಾರಿ, ಪುಟ್ನಂಜ, ಸಾಜನ್, ತಾಳ್....ಹೀಗೆ ಆ ಕಾಲದ ಸಿನಿಮಾಗಳ ಹಾಡುಗಳಿಗೆ ಭಾರಿ ಪ್ರಚಾರ ಇತ್ತು. ಆಗ ಸಿಡಿ ಬಿಡಿ ಕ್ಯಾಸೆಟ್ ಕೊಳ್ಳುವುದು ಕೂಡಾ ದೊಡ್ಡ ಸಂಗತಿ ಆಗಿತ್ತು. ಏನಿದ್ದರೂ ರೇಡಿಯೋ ಮಾತ್ರ.
ಟಿವಿಯಲ್ಲಿ ವಾರಕ್ಕೊಂದು ಚಿತ್ರಹಾರ್, ಒಂದು ರಂಗೋಲಿ, ಮತ್ತೊಂದು ಚತ್ರಮಂಜರಿ ಮಾತ್ರ. ಅದನ್ನು ನೋಡಲು ಮನೆಯಲ್ಲಿ ಟಿ.ವಿ. ಇದ್ದರೆ ತಾನೆ...

ಈಗ ಕಾಲ ಅನೂಹ್ಯವಾಗಿ ಬದಲಾಗಿದೆ. ಸಿನಿಮಾ ಬರುವ ಮೊದಲೇ ವಾಟ್ಸಾಪ್ನಲ್ಲೇ ಹಾಡುಗಳು ಪ್ರತ್ಯಕ್ಷ. ಅದರ ಕರೋಕೆ ಕೂಡಾ. ಸಾಹಿತ್ಯ ಗೂಗಲ್ ಸರ್ಚ್ ಕೊಟ್ಟರೆ ಸಲೀಸಾಗಿ ಸಿಗುತ್ತದೆ... ಹಾಗಾಗಿ ಹಾಡು ಕೇಳೋದು ತುಂಬಾ ತ್ರಾಸವೇನಲ್ಲ. ಪುರುಸೊತ್ತು ಇದ್ದರೆ ಸಾಕು...
ಪ್ರಂಖಡ ಸಂಗೀತಗಾರನೋ, ತಾಳ-ರಾಗ ಪಂಡಿತನೋ ಮಾತ್ರ ಹಾಡುಗಳನ್ನು ಅನುಭವಿಸುವುದಲ್ಲ. ಅವೆಲ್ಲ ಗೊತ್ತಿಲ್ಲದ ಪಾಮರರೂ ಹಾಡಿನ ಭಾವ ಅನುಭವಿಸಬಲ್ಲರು. ಅವರದೇ ರೀತಿಯ ವಿಮರ್ಶಕರಾಗಬಲ್ಲರು.... ಅವರದೋ ಲೋಕ ಕಟ್ಟಿಕೊಂಡು ಅಲ್ಲಿ ಹಾಡುಗಳಿಗೆ ಕಿವಿಯಾಗಬಲ್ಲರು. ರಿವೈಂಡ್ ಬಟನ್ ಥರ ಹಾಡು ಕೇಳುತ್ತಾ ಒಂದಷ್ಟು ಕಾಲ ಕಣ್ಣ ಪರದೆ ಮುಂದೆ ಹೆಳೆ ಕ್ಯಾಸೆಟ್ ಒಂದರ ದೃಶ್ಯಗಳಿಗೆ ಸಾಕ್ಷಿಯಾಗಬಲ್ಲರು....
ಅದು ಹಾಡಿನ ಶಕ್ತಿ....

2-3 ತಿಂಗಳ ಪುಟ್ಟ ಕಂದಮ್ಮ ಕೂಡಾ ಮೊಬೈಲ್ ನಲ್ಲಿ ಹಾಡು ಪ್ಲೇ ಮಾಡಿದರೆ ಅಳು ನಿಲ್ಲಿಸಿ ನಕ್ಕು ನಿದ್ದಗೆ ಶರಣಾಗುತ್ತದೆ.... ಬದುಕಿನ ಇಳಿಸಂಜೆಯಲ್ಲಿರೋ ವೃದ್ಧರೂ ಶಾಸ್ತ್ರೀಯ ಸಂಗಿತವೋ, ಯಕ್ಷಗಾನದ ಹಾಡುಗಳನ್ನೋ ಕೇಳುತ್ತಾ ಭಾವಜಿಜ್ಞಾಸೆಗೆ ಒಳಗಾಗುತ್ತಾರೆ. ಹೊಟೇಲಿನಲ್ಲಿ ದೋಸೆ ಹೊಯ್ಯುವವರು, ಪೆಟ್ಟಿಗೆ ಅಂಗಡಿನಲ್ಲಿ ಬೀಡಾ ಕಟ್ಟುವವರು, ಗ್ಯಾರೇಜಿನಲ್ಲಿ ಟೈರಿಗೆ ಪಂಕ್ಚರ್ ಹಾಕುವವರು ಎಫ್ ಎಂ ರೇಡಿಯೋಗಳ ಬ್ಯಾಕ್ ಟೂ ಬ್ಯಾಕ್ ಮೂರು ಹಾಡುಗಳಿಗೋ, ರೆಟ್ರೋ ರಾತ್ರಿಗೋ ಕಿವಿಯಾಗುತ್ತಲೇ ಕೆಲಸದಲ್ಲಿ ಉತ್ಸಾಹ ಕಂಡುಕೊಳ್ಳಲು ತೊಡಗುತ್ತಾರೆ. 
ಕಿಲೋಮೀಟರ್ ಗಟ್ಟಲೆ ಡ್ರೈವ್ ಮಾಡುವವರೂ, ಮುಸ್ಸಂಜೆ ರಸ್ತೇಲಿ ಒಂಟಿಯಾಗಿ ಬಿರಬಿರನೆ ನಡೆಯುವವರೂ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಯಾವುದೋ ಹಾಡು ಕೇಳಿಕೊಂಡು ಸಾಗುತ್ತಾರೆ...
ಮತ್ತಷ್ಟು ಮಂದಿ ರೇಡಿಯೋದ ಕೋರಿಕೆ ವಿಭಾಗಕ್ಕೆ ಪತ್ರ ಬರೆದು ಹಾಡಿನ ಜೊತೆಗೆ ಹೆಸರು ಬರುತ್ತಾ ಅಂತ ಕಾಯುತ್ತಾ ಫುಲ್ ಕಾರ್ಯಕ್ರಮ ಕೇಳ್ತಾ ಇರ್ತಾರೆ.

ಹಾಗಾಗಿಯೇ ಹೇಳಿದ್ದು....ಧಡಕನ್ ಚಿತ್ರದ ಹಾಡಿನ ಹಾಗೆ... ಅಕ್ಸರ್ ಇಸ್ ದುನಿಯಾ ಮೇ ಅನ್ ಜಾನೇ ಮಿಲ್ತೇ ಹೇ... ಅನ್ ಜಾನೇ ರಾಹೋ ಮೇ ಮಿಲ್ಕೇ ಖೋ ಜಾತೆ ಹೇ... ಲೇಕಿನ್ ಹಮೇಶ ಓ ಯಾದ್ ಆತೇ ಹೇ....


ಹೌದಲ್ವ.... ಕಳೆದು ಹೋದವ ಥರ, ಹಾಡುಗಳು ಕಾಡುತ್ತಲೇ ಇರ್ತಾವೆ.....