Thursday, February 26, 2015

ಮೌನಗಳ ಹಾಡು ಮಧುರ......


ಹೇಳಬಾರದು ಅಂದುಕೊಂಡ ಮಾತನ್ನು ಬಾಯಿ ತಪ್ಪಿ ಹೇಳಿದ ಬಳಿಕ ತುಟಿಕಚ್ಚಿ, ತಲೆ ಚಚ್ಚಿ ಪ್ರಯೋಜನ ಏನು...ಅಥವಾ ಅಯಾಚಿತವಾಗಿ ಬಾಯಿಂದ ಮಾತು ಬಂದರೂ ಅದರ ಹಿಂದೆ ದುರುದ್ದೇಶವೇನೂ ಇರಲಿಲ್ಲ ಎಂದು ಸ್ಪಷ್ಟಪಡಿಸಲು ಒಂದಿಷ್ಟು ಡ್ಯಾಮೇಜ್ ಕಂಟ್ರೋಲ್ ವಿಧಾಗಳ ಪ್ರಯೋಗ ಆಗಬೇಕಾಗುತ್ತದೆ ಅಲ್ಲವೇ
ಅದಕ್ಕೇ ಹೇಳಿದ್ದು ಮೌನಗಳ ಮಾತು ಮಧುರ ಅಂತ....

---------------------------


ಹಾಗೆ ನೋಡುವುದಕ್ಕೆ ಹೋದರೆ, ಮಾತಿಗಿಂತ ಹೆಚ್ಚು ಸಂಭಾಷಣೆ ಮೌನದಲ್ಲಿ ನಡೆಯಬಹುದು ಅಲ್ವೇ.... ಮಾತಿನಲ್ಲಿ ವೈಭವವೋ, ತಪ್ಪು ಕಲ್ಪನೆಯೋ, ವಿವಾದವೋ, ನಿಂದನೆಯೋ ಹುಟ್ಟಿ ಒಂದು ಸಂಬಂಧವನ್ನೇ ಹಾಳುಗೆಡಹಬಹುದು.
ಆದರೆ, ಮೌನ ಹಾಗಲ್ಲ. ಮಾತು ಗೆಲ್ಲದನ್ನು ಮೌನ ಗೆಲ್ಲಬಹುುದು. ಮಾತು ಹಾಳು ಮಾಡಿ ಹುಟ್ಟು ಹಾಕಿದ ತೂತನ್ನು ಮೌನ ಮುಚ್ಚಬಹುದು. ದ್ವೇಷ ಸರಿಸಿ, ಪ್ರೀತಿ ಹುಟ್ಟಿಸಬಹುದು. ಆದರೆ ಮೌನ ಸಕರಾಣಾತ್ಮಕವಾಗಿರಬೇಕು ಅಷ್ಟೇ. ಮೌನ ನಿರುಪದ್ರವಿ ಅಹಿಂಸಾತ್ಮಕ ಅಸ್ತ್ರದ ಹಾಗೆ...
ಹಾಗೆಂದ ಮಾತ್ರಕ್ಕೆ ಮೌನಿಗಳೆಲ್ಲಾ ಪಾಪ (ಸಾಧು), ನಿರುಪದ್ರವಿಗಳೆಂದಲ್ಲ. ಸ್ವಭಾವತಃ ಮೌನಿಗಳಾಗಿರುವ ಸಾಧು ಜೀವಿಗಳು ಬೇರೆ. ಯಾವುದೋ ಉದ್ದೇಶವಿರಿಸಿ ಅಸಹಜ ಮೌನ ಆಚರಿಸುವ ಜೀವಿಗಳು ಬೇರೆ. ತಮ್ಮ ಯಾವುದೋ ದೌರ್ಬಲ್ಯ ಬಹಿರಂಗ ಆಗಬಾರದೆಂದು ಮೌನಿಗಳಾಗುವವರು ಇದ್ದಾರೆ. ಆಯ್ದ ಜಾಗದಲ್ಲಿ ಮೌನಿಗಳಂತೆ ವರ್ತಿಸಿ, ಮತ್ತೊಂದು ಕಡೆ ಹಾರಾಡುವವರೂ ಇದ್ದಾರೆ, ಮೌನ ಮುರಿದು ಬಾಯಿ ಬಿಟ್ಟರೆ ಎಲ್ಲಿ ಬಂಡವಾಳ ಬಯಲಾಗಬಹುದೋ ಎಂದ ಚಿಂತೆ ಇದ್ದರೂ ಇದ್ದೀತು. ಇಂತಹ ಅಸಹಜ ಮೌನ ಸಂದೇಹಗಳನ್ನೂ ಹುಟ್ಟು ಹಾಕಬಲ್ಲುದು.
ಆದರೆ, ಮೌನಿಗಳು ಉತ್ತಮ ಕೇಳುಗರೂ ಆಗಿರಬಹುದಲ್ವೇ... ಮಾತು ಕಡಿಮೆಯಾದ ಕಾರಣ ಆಲಿಸಲು ಅವರ ಬಳಿ ಹೆಚ್ಚು ಸಮಯಾವಕಾಶ ಇರುತ್ತದೆ. ಗಮನಿಸುವಿಕೆಯೂ ಚುರುಕಾಗಿರುತ್ತದೆ. ಎಂತಹದ್ದೇ ಪ್ರಚೋದನಕಾರಿ ಹೇಳಿಕೆಗಳಿಗೂ ಮೌನವೇ ಉತ್ತರವಾಗಿದ್ದ ಪಕ್ಷದಲ್ಲಿ ಅಲ್ಲಿ ಕಲಹಕ್ಕೆ ಜಾಗ ಕಡಿಮೆ.
ಮಾತೇ ಆಡದೆ, ನಿಲುವನ್ನೇ ಹೇಳದ ಪಕ್ಷದಲ್ಲಿ ತಮ್ಮ ಭಾವನೆಗಳನ್ನು ಕಾಯ್ದಿರಿಸಿಕೊಂಡು ಪ್ರತ್ಯೇಕವಾಗಿರುವ ಉದ್ದೇಶವಿದ್ದರೂ ಇದ್ದೀತು. ಹಾಗೆಂದು ಮಾತನಾಡಬೇಕಾದ ಅನಿವಾರ್ಯ ಸಂದರ್ಭದಲ್ಲೂ ಅಸಹಜ ಮೌನ ತೋರಿಸುವುದು ಕಿರಿಕಿರಿ ಜೊತೆಗೆ ವಿಚಿತ್ರ ಅನ್ನಿಸುವುದು ಸುಳ್ಳಲ್ಲ.

---------------------


ಮೌನವೂ ಮಾತನಾಡಬಹುದು. ಮೌನವೂ ನಿಮ್ಮ ಕೋಪ, ನಿರಾಸೆ, ವಿಷಾದ, ಸಂತೋಷ, ಆಪ್ಯಾಯತೆಗಳ ಪ್ರತಿಕ್ರಿಯೆಗೆ ವಾಹಕವಾಗಬಲ್ಲುದು. ಅದು ಪ್ರಕಟವಾಗುವ ರೀತಿಯಲ್ಲಿ ಪ್ರಕಟವಾದರೆ ಮಾತ್ರ.
ಕಣ್ಣೂ ಮಾತನಾಡುತ್ತದೆ. ಒಂದು ಮಿಸ್ಡ್ ಕಾಲ್, ಬ್ಲಾಂಕ್ ಮೆಸೇಜ್ ಕೂಡಾ ಮಾತನಾಡುತ್ತದೆ. ಸಿಟ್ಟು ಬಂದಾಗ ಕೂಗಾಡಿ, ಹೊಡೆದಾಡಿ, ಕುಣಿದಲ್ಲಿಗೆ ಮಾತ್ರ ಆಕ್ರೋಶ ಪ್ರಕಟವಾಗುವುದಲ್ಲ. ಒಂದು ಮೌನವೂ ನಿಮ್ಮ ಪ್ರತಿಭಟನೆಗೆ, ಅಸಹನೆಗೆ ವಾಹಕವಾಬಲ್ಲದು. ಜೊತೆಗೆ ಯಾರಿಗೂ ತೊಂದರೆ ಕೊಡದೆ ಅಹಿಂಸತ್ಮಕವಾಗಿ ಅಸಮಾಧಾನ ಹೊರಗೆಡಹುವ ದಾರಿಯೂ ಹೌದು ತಾನೆ....ಅದಕ್ಕೆ ಅಲ್ವೇ ಮಹಾತ್ಮರು ಸಿಟ್ಟು ಬಂದಾಗ ಮೌನ ವ್ರತ ಕೈಗೊಳ್ಳುವುದು. ಸಾತ್ವಿಕ ಸಿಟ್ಟಿನ ತಾಪ ಯಾರಿಗೆ ತಟ್ಟಬೇಕೋ ಅವರಿಗೆ ತಟ್ಟಿಯೇ ತಟ್ಟುತ್ತದೆ.

----------------------------ಸಿಟ್ಟಿನ ಪ್ರಕಟಕ್ಕೆ ಕೂಗಾಟ, ಬೈದಾಟ ದಾರಿ ಅಂದುಕೊಳ್ಳುವುದು ಭ್ರಮೆ ಅಷ್ಟ. ಅದರಿಂದ ಅಸಮಾಧಾನ ಇನ್ನೂ ಹೆಚ್ಚುವ ಸಂಭವ ಜಾಸ್ತಿ. ಮೌನ ಪ್ರತಿಭಟನೆಯಿಂದಲೂ ಸಿಟ್ಟು ಶಮನವೂ, ಬಹಿರಂಗವೂ ಆಗಬಹುದು.
ಪ್ರೀತಿ, ಸ್ನೇಹದಲ್ಲೂ ಅಷ್ಟೆ ಸಕಾರಾಣಾತ್ಮಕ ಮೌನ ಮಾತನಾಡುತ್ತದೆ. ಗಂಟೆಗಟ್ಟೆಲೆ ಮಾತನಾಡುವವರು, ಆಲಂಗಿಸಿ, ಹಸ್ತಲಾಘವ ಮಾಡಿ, ಸಾಷ್ಟಾಂಗ ಅಡ್ಡ ಬಿದ್ದು, ಸಾರ್ ಸರ್ ಅನ್ನುತ್ತಾ ಹಿಂದೆ ಮುಂದೆ ಹೋದರೆ ಮಾತ್ರ ಒಬ್ಬ ವ್ಯಕ್ತಿ ಬಗ್ಗೆ ಗೌರವ, ಪ್ರೀತಿ, ಆದರ ಇದೆ ಎಂದರ್ಥವಾಗಬೇಕಿಲ್ಲ.
ಕಣ್ಸನ್ನೆಯ ಒಂದು ನಗು, ಆತ್ಮೀಯ ಜೆಸ್ಟರ್ ಇದ್ದರೆ ಮೌನವೇ ನಿಮ್ಮ ಅಭಿಮಾನಕ್ಕೆ ಪರದೆಯಾಗಬಹುದು. ಮೌನ ಹಿತಮಿತವಾದ ಪ್ರಕಟಣೆಗೆ ಒಂದು ದಾರಿಯಲ್ವ....
ಯಾಕಂದರೆ ಅರ್ಥೈಸುವಿಕೆ ಇದ್ದಲ್ಲಿ ಮಾತು ಮಾತ್ರ ಸಂಬಂಧಕ್ಕೆ ಬಂಡವಾಳವಲ್ಲ ಮೌನವೂ ಆಗಬಲ್ಲುದು....
ಹಾಗೆ ನೋಡುವುದಕ್ಕೆ ಹೋದರೆ ಎಷ್ಟೋ ಭಾವನೆಗಳನ್ನು ಮಾತಿನಲ್ಲಿ ಪ್ರಕಟಿಸಲು ಸಾಧ್ಯವೇ ಇಲ್ಲ, ಅಥವಾ ತುಂಬಾ ಕಷ್ಟ. ಅದೇ ಭಾವನೆ, ಸಾಂತ್ವನ, ಪ್ರೋತ್ಸಾಹವನ್ನು ಒಂದು ಮೌನ, ಸ್ಪರ್ಶ, ನೋಟ ಪ್ರಕಟಿಸಬಹುದು. ಎಷ್ಟೋ ಭಾವನೆ, ಸಂಬಂಧಗಳನ್ನು ಕಟ್ಟಿ ಕೊಡುವಲ್ಲಿ ಮಾತು ಸೋಲುತ್ತದೆ....ಎಡವುತ್ತದೆ... ಮಾತಿಗೆ ಶಬ್ದಗಳನ್ನು ಹುಡುಕುವಲ್ಲಿ ಚಡಪಡಿಸುತ್ತದೆ.
 ಮೌನ ಹಾಗಲ್ಲ, ಅರ್ಥವಾಗುವವರಿಗೆ ಮೌನವೂ ಸಂವಹನಿಸುತ್ತದೆ.

----------------------------

ಮೌನ ಎನರ್ಜಿಯನ್ನು ಉಳಿಸುವುದು ಮಾತ್ರವಲ್ಲ, ಇತರರು ಹೇಳುವನ್ನು ಕೇಳಿಸಿಕೊಳ್ಳುವ ತಾಳ್ಮೆಯನ್ನೂ ಹುಟ್ಟು ಹಾಕುತ್ತದೆ. ಎಷ್ಟೋ ಸಂದರ್ಭಗಳನ್ನು ಏನೋ ಮಾತನಾಡಲು ಹೋಗಿ ಇನ್ನೇನೋ ಯಡವಟ್ಟಾಗುವ ಸಂದರ್ಭಗಳಲ್ಲಿ ಮೌನ ಮರ್ಯಾದೆಯನ್ನೂ ಉಳಿಸುತ್ತದೆ ಅಲ್ವ.... ಹಾಗನಿಸಲ್ವ...
ಮೌನಿಗಳಿಗೂ ಭಾವನೆಗಳಿವೆ. ಪ್ರಕಟವಾಗುವುದು ಕಡಿಮೆ ಅಷ್ಟೆ. ಅದು ಅವರವರ ಸ್ವಭಾವ. ಆದರೆ, ಅಸಹಜ ಮೌನ ಮಾತ್ರ ಸಾಂದರ್ಭಿಕ.
ಏಕಾಂತ, ಏಕಾಂಗಿತನ, ಒಂಟಿತನದಲ್ಲಿ ಹುಟ್ಟಿಕೊಳ್ಳುವ ಮೌನ ಭಯಾನಕ ಸ್ವರೂಕ್ಕೆ ಹೋಗದಿರಲಿ. ಮೌನ ಬಳಸುವಲ್ಲಿ ಮಾತ್ರ ಬಳಸಿ, ಅದುವೇ ಚಾಳಿಯದರೂ ಕಷ್ಟ. ಮೌನ ಮಾತನಾಡಬಹುದಾದ ಜಾಗದಲ್ಲೇ ಮೌನವೇ ಮಾತಾಗಬಹುದು. ಮೌನಕ್ಕೂ ಸೋಲಾದರೆ ಮತ್ತೆ ಮಾತನಾಡುವುದು ಅನಿವಾರ್ಯ...
ಅದು ಮತ್ತೊಂದು ಮೌನಕ್ಕೆ ಮುನ್ನುಡಿಯೂ ಆಗಬಹುದೇನೋ...