Tuesday, March 3, 2015

ಕಾಲವನ್ನು ತಡೆಯೋರು ಯಾರೂ ಇಲ್ಲ....ಹೌದಲ್ವೇ...ಕಳೆದ ಬದುಕು, ಓಡುವ ಕಾಲಕ್ಕೆ ಬ್ರೇಕ್ ಇಲ್ಲ, ರಿವೈಂಡ್ ಮಾಡಿ ಮತ್ತೆ ಪ್ಲೇಬ್ಯಾಕ್ ಕೊಡೋ ಹಾಗಿಲ್ಲ... ಫ್ಲಾಶ್ ಬ್ಲಾಕ್ ಮತ್ತೆ ಎದುರಿಗೆ ಬರೋದಿಲ್ಲ.. ಅಷ್ಟೇ ಯಾಕೆ... ಬದುಕು ಸ್ಟ್ರಕ್ ಆಯ್ತು ಅನಿಸಿದರೆ 
ಕಂಟ್ರೋಲ್-ಆಲ್ಟ್-ಡಿಲೀಟ್ ಕೊಟ್ಟು ರೀಸ್ಟಾರ್ಟ್ ಮಾಡೋ ಹಾಗೂ ಇಲ್ಲ... ಕಾಲದ ಜೊತೆಗೆ ನಾವು... ನಮಗಾಗಿ ಕಾಲ ಅಲ್ಲ...
ಎಷ್ಟೋ ಬಾರಿ ಅನ್ನಿಸುವುದಿದೆ... ಒಂದು ಪ್ರಕರಣ, ವ್ಯವಸ್ಥೆ, ಸಂಬಂಧದ ಶುರುವಿಗೆ ಹೋಗಿ ಆಗಿರುವ ಗೊಂದಲ, ತಪ್ಪುಗಳನ್ನು ಡಿಲೀಟ್ ಮಾಡಿ ಸರಿಪಡಿಸುವ ಅಂತ. ಆದರೆ, ಕಾಲದ ಮುಂದೆ ಅಸಹಾಯಕರು, ಪ್ರೇಕ್ಷಕರು ಅಷ್ಟೇ.... ಟ್ರ್ಯಾಕ್ನಲ್ಲಿ ಮನುಷ್ಯ ಅಡ್ಡ ನಿಂತಿದ್ದು ಕಂಡರೂ ತಕ್ಷಣ ಬ್ರೇಕ್ ಹಾಕಲಾಗದ ರೈಲು ಚಾಲಕನ ಹಾಗೆ....

-------


ಪಿಯುಸಿಗೆ ಸೈಕಲ್ನಲ್ಲಿ ಹೋಗುತ್ತಿದ್ದಾಗ ಆಗುತ್ತಿದ್ದ ಖುಷಿಯನ್ನು ಕಾರು, ಬೈಕ್ ಕೊಡುವುದಿಲ್ಲ... 10 ಪೈಸೆಗೆ ಸಿಗುತ್ತಿದ್ದ ಶುಂಠಿ ಕಾರದ ಮಿಠಾಯಿ ರುಚಿ 70 ರುಪಾಯಯ ಗಡ್ ಬಡ್ ನಲ್ಲಿ ಕಾಣಸಿಗುವುದಿಲ್ಲ.... ಬಸ್ಸಿನ ಸೈಡ್ ಕಿಟಿಕಿ ಪಕ್ಕ ಕುಳಿತು ತಂಗಾಳಿಗೆ ಮುಖವೊಡ್ಡಿ ಹೋಗುವ ಸುಖ ಎಸಿ ಐರಾವತದಲ್ಲಿ ಕುಳಿತಾಗ ಆಗುವುದಿಲ್ಲ.... ಗುಡ್ಡಕ್ಕೆ ಹೋಗಿ ಬೆವರು ಸುರಿಸಿ, ಮುಳ್ಳಿನಿಂದ ಗೀರಿಸಿಕೊಂಡು ಸುಡು ಬಿಸಿಲಿನಲ್ಲಿ ಕೊಯ್ದು ತಂದು ತಿನ್ನುತ್ತಿದ್ದ ಗೇರು ಹಣ್ಣಿನ ರುಚಿ ಹಲಸಿನ ಹಣ್ಣಿನ ಫ್ಲೇವರ್ ಹಾಕಿದ ಐಸ್ ಕ್ರೀಂನಲ್ಲಿ ಸಿಗಲಾರದು...
ಡಿಡಿ1 ಚಾನೆಲ್ನನಲ್ಲಿ ವಾರಕ್ಕೊಂದೇ ಕನ್ನಡ ಸಿನಿಮಾ, ಚಿತ್ರಹಾರ್, ಚಿತ್ರಮಂಜರಿಗಳನ್ನು ಪಕ್ಕದ ಮನೆಗೆ ಹೋಗಿ ನೋಡುತ್ತಿದ್ದಾಗ ಆಗುತ್ತಿದ್ದ ಥ್ರಿಲ್... ಇಂದು ಸಾವಿರಗಟ್ಟಲೇ ಸಿನಿಮಾ ದಿನಪೂರ್ತಿ ಬಿತ್ತರವಾಗುತ್ತಿದ್ದರೂ ನೋಡಬೇಕೆಂದು ಅನ್ನಿಸುವಂತೆ ಮಾಡುವುದಿಲ್ಲ...
ದಿನಾ ಮಲಗುವ ಮೊದಲು ರೇಡಿಯೋ ಕೇಳುತ್ತಾ ನಿದ್ದೆ ಮಾಡುತ್ತಿದ್ದ ಖುಷಿಯನ್ನು ಮೊಬೈಲ್ನಿನಿಂದ ಹೊರಟು ಕಿವಿಸೇರುವ ಇಯರ್ ಫೋನ್ ನೀಡುವುದಿಲ್ಲ....
ನಾನು ಬರೆದ ಪತ್ರಗಳಿಗೆ ನಾಲ್ಕೈದು ಪುಟದ ರಿಪ್ಲೈಯನ್ನು ಹೊತ್ತ ಕವರ್ ಮನೆಗೆ ಬಂದಾಗ ಕೊಡುತ್ತಿದ್ದ ಆಪ್ಯಾಯತೆಯನ್ನು ವಾಟ್ಸಾಪ್ ನ ಫಾರ್ ವಾರ್ಡೆಡ್ ಸಂದೇಶ ಕೊಡ್ತಾ ಇಲ್ಲ...
ವಯಸ್ಸೂ ಹಾಗಿತ್ತು... ವ್ಯವಸ್ಥೆಯೂ ಹಾಗಿತ್ತು... ಕಾಲವೂ ಹಾಗಿತ್ತು...
ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೆ ಇರದು...ಎಂಬ ಉಮರ್ ಖಯಾಮನ ಸಾಲುಗಳ ಹಾಗೆ...

----------


ಬಾಗಿಲಿಗೆ ದಿನಾ ಹಾಕುವ ಬೀಗವನ್ನು ಗಮನಿಸುವುದಿಲ್ಲ, ದಿನಾ ಎಷ್ಟೋ ತುಕ್ಕುು ಹಿಡಿಯುತ್ತಿದೆ ಅಂತ. ಬೈಕಿನ ಟಯರ್ ಗೆ ದಿನಾ ಪಟ್ಟಿ ಹಿಡಿದು ಅಳೆಯುವುದಿಲ್ಲ, ಎಷ್ಟು ಸವೆದಿದೆ ಅಂತ. ಒಂದು ದಿನ ಬೆಳಗ್ಗೆ ಸಡನ್ ಗೊತ್ತಾಗುತ್ತೆ...
ಬೀಗದ ಕೈ ತುಕ್ಕು ಹಿಡಿದಿದೆ, ಬೈಕಿನ ಟಯರ್ ಫ್ಲಾಟ್ ಆಗಿದೆ. ಅಂತ. ವಯಸ್ಸು ಕೂಡಾ ಹಾಗೇ ಅಲ್ವ... ಅಬ್ಬಾ ಪ್ರಾಯ ಆಯ್ತಾ ಅನ್ನಿಸುತ್ತದೆ. ಆಗಲೆ ಫ್ಲಾಶ್ ಬ್ಯಾಕ್ ನಲ್ಲಿ ಹೇಳಿದಂತಹ ಸೊಗಸು, ಮಿಸ್ ಮಾಡ್ಕೊಳ್ತಿದ್ದೇನೆ ಅನ್ನಿಸೋದು. ಅಷ್ಟು ದಿನ ಕಾಡದ ಭಾವ ಅಂದು ಮಾತ್ರ ಯಾಕೆ ಆವರಿಸಿಕೊಳ್ಳುತ್ತದೆ, ಸವೆದ ಟಯರ್ ನ ಹಾಗೆ. ಇನ್ನಷ್ಟು ಜವಾಬ್ದಾರಿಯಿಂದ ಇರಬೇಕು ಎಂಬುದಕ್ಕೆ ಅದು ಸೂಚನೆಯೋ ಏನೋ...

---------------------

ಬದುಕಿನಲ್ಲಿ ರಿವೈಂಡ್ ಆಪ್ಶನ್ ಇದ್ದಿದ್ದರೆ ಅಷ್ಟೂ ಬದುಕಿನಲ್ಲಿ ಹಿಂದೆ ಹೋಗಿ ಜವಾಬ್ದಾರಿಯಿಂದ ಇರಬಹುದಿತ್ತು ಅಂದುಕೊಳ್ಳುವುದು ಭ್ರಮೆ ಅಷ್ಟೆ... ಮತ್ತೊಂದು ಆಪ್ಶನ್ ಸಿಕ್ಕಾಗಲೂ ತಪ್ಪು ಮಾಡುವವರು ತಪ್ಪು ಮಾಡುತ್ತಲೇ ಇರುತ್ತಾರೆ (ಮಾಡ್ತೇವೆ, ಎಡವುತ್ತೇವೆ), ಮಾಡದವರು ಮಹಾತ್ಮರಾಗಬಹುದೋ ಏನೋ...

--------------

ಈ ಗೊಂದಲಗಳು ಯಾರನ್ನೂ ಬಿಟ್ಟಿಲ್ಲ.... ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅನ್ನುವುದನ್ನು...
 ಬದುಕಿನಲ್ಲಿ ಸ್ವಲ್ಪ ಹಿಂದೆ ತಿರುಗಿ ನೋಡಿ, ಎಷ್ಟು ಜನರನ್ನು ನಂಬದ್ದೀರಿ...ಎಷ್ಟು ಜನ ಪಾಠ ಕಲಿಸಿದರು...ಎಷ್ಟು ಜನ ಈಗಲೂ ಒಟ್ಟಿಗೆ ಇದ್ದೀರಿ, ಜೊತೆಗೆ ಬಾರದವರನ್ನು ಬಿಟ್ಟು ಮುಂದೆ ಬಂದಾಗಿನಿಂದ ನೀವು ಕಳೆದುಕೊಂಡಿದ್ದೀರಿ... ಸ್ವಲ್ಪ ಲೆಕ್ಕ ಹಾಕಿದರೆ ನಂಬಿಕೆಯ ಕೂಡು ಕಳೆಯುವಿಕೆಗೆ ನಮಗೆ ನಾವೇ ವ್ಯಾಲ್ಯೂವೇಶನ್ ಮಾಡ್ಕೋಬಹುುದು...
ಯಾರೋ ಪರಿಚಿತರಾಗ್ತಾರೆ... ತುಂಬ ಹಿತೈಷಿ, ಅಕ್ಕರೆ, ಸಲುಗೆ, ನಂಬಿಕಸ್ಠರು, ಅಭಿಮಾನಕ್ಕೆ ಪಾತ್ರರು ಅಂದುಕೊಳ್ತೇವೆ... ಮತ್ತಿನ್ನೇನೋ ನಡೆದಾಗ ಅಂದುಕೊಳ್ಳುತ್ತೇವೆ.... ಅಂದುಕೊಂಡಷ್ಟು ಇಲ್ಲವೆಂದೋ, ಜನ ಹೀಗೆ ಅಂತ ಗೊತ್ತಾಗಲಿಲ್ಲ ಅಂತಾನೋ... ಆಗಲೇ ಕನ್ ಫ್ಯೂಶನ್ ಶುರು ಆಗೋದು ಯಾರ ಜೊತೆ ಏನು ಹೇಳ್ಕೋಬಹುದು, ಎಷ್ಟು ಹೇಳ್ಕೋಬಹುದು, ನಾವು ಅಭಿಮಾನಿಸುವಷ್ಟುು ಮಟ್ಟಿಗೆ ಅವರು ಯೋಗ್ಯರೇ... ಆಂತರ್ಯದಲ್ಲೂ ನಮ್ಮ ಬಗ್ಗೆ ನಂಬಿಕೆ ಇದೆಯೇ.. ಅಥವಾ ಪುರುಸೊತ್ತಿನಲ್ಲಿ ಮಾತ್ರ ಹುಟ್ಟಿಕೊಳ್ಳುವ ಅಭಿಮಾನವೇ ಅಂತ...
ಹೀಗೆಲ್ಲ ನಂಬಿಕೆಯ ಪ್ರಶ್ನೇ ಬಂದಾಗಲೆಲ್ಲಾ ಅನ್ಸಲ್ವ ಬದಕು ರಿವೈಂಡ್ ಆಗಬೇಕಿತ್ತು... ಮತ್ತೆ ಶುರುವಿಂದ ಎಲ್ಲ ಶುರುವಾಗಬೇಕಿತ್ತು ಅಂತ...

--------------

ನಾವು ಯಾರದ್ದೋ ಅಭಿಮಾನಿಗಳಾಗಿರ್ತೀವಿ.. ಪ್ರೀತಿಪಾತ್ರರ ಅಂದುಕೊಂಡಿರ್ತೀವಿ (ನೆನಪಿಡಿ, ನಾವು ಅಂದುಕೊಂಡಿರ್ತೀವಿ, ಅವರಲ್ಲ). ಯಾವುದೋ ಮನಸ್ತಾಪ ಬಂದಾಗ, ಅಥವಾ ಪರಸ್ಪರ ವೇವ್ ಲೆಂಗ್ತ್ ಮ್ಯಾಚ್ ಆಗುವುದಿಲ್ಲ ಅಂತ ಅನ್ನಿಸಿದಾಗ ನಮ್ಮ ನಂಬಿಕೆಯ ಮೇಲೆ ಸಂಶಯ ಬರೋದು, ರೀ ಲಾಗಿನ್ ಆಗ್ಬೇಕು ಅನ್ಸೋುದು...


-------------


ಬದುಕು ಯಂತ್ರವಲ್ಲ, ಭಾವನೆ, ನಂಬಿಕೆ, ಪ್ರಯತ್ನ, ಅದೃಷ್ಟಗಳ ಕೂಡಾಟ. ಅಲ್ಲಿ ಬಟನ್ ಒತ್ತಿ ಪರಿಸ್ಥಿತಿಯ ನಿಯಂತ್ರಣ ಅಥವಾ ಭೂತಕಾಲಕ್ಕೆ ಹೋಗಿ ಎಲ್ಲ ಬಿಚ್ಚಿ ಮತ್ತೆ ಕಟ್ಟುವ ಆಪ್ಶನ್ ಇಲ್ಲ....
ಭೂತವನ್ನು ನೋಡಿ ಕಲಿಯುವ ಅವಕಾಶ ಜೊತೆಗಿದೆ ಅಷ್ಟೇ....
---------

ಯಾರನ್ನೋ ಮೊದಲ ಬಾರಿಗೆ ನೋಡಿದಗಲೇ ತುಂಬಾ ಹತ್ತಿರದವರು ಅನ್ಸೋದು..... ವರ್ಷಗಳಿಂದ ಪಕ್ಕದಲ್ಲೇ ಕುಳಿತಿದ್ದರೂ ಮಾತನಾಡಲೂ ಬೇಕೆಂದಿಲ್ಲ ಅನ್ನಿಸುವುದಕ್ಕೂ ಇದೇ ಕಾರಣ... ಅಪ್ರೋಚ್.... 
ಮಾತು ಆಂತರ್ಯದಿಂದ ಬರುತ್ತದೋ, ಸಾಂದರ್ಭಿಕವಾಗಿ ಬರುತ್ತದೋ ಅಂತ. ನೈಜ ಕಾಳಜಿ, ಪ್ರೀತಿ, ಸ್ನೇಹ, ಅಭಿಮಾನದಲ್ಲಿ ಸ್ವಾರ್ಥ, ಏನೋ ವಾಪಸ್ ಸಿಗುತ್ತದೆ ಅನ್ನೋ ನಿರೀಕ್ಷೆ ಇರಲಾರದು, ಜಸ್ಟ್ ಸ್ನೇಹ ದ್ಯಾಟ್ಸ್ ಇಟ್... 
ಅದು ಪುರುಸೋತ್ತಿದ್ದಾಗ ಮಾತ್ರ ಮಾಡುವ ಮೆಸೇಜ್ ಥರ, ಪುರುಸೊತ್ತಾದಾಗ ಮಾತ್ರ ಕೊಡುವ ರಿಪ್ಲೈ ಹಾಗಲ್ಲ.... ಅರ್ಥ ಮಾಡ್ಕೊಂಡು ಮಾಡುವ ವ್ಯವಹಾರ....

----------------


ನಾನು ಸಣ್ಣವನಿದ್ದಾಗ ಲೋಕ ಚೆನ್ನಾಗಿತ್ತು, ಈಗ ಕೆಟ್ಟು ಹೋಗಿದೆ ಅನ್ನುವ ವಾದ ಮೂರ್ಖತನದ್ದು ಮತ್ತು ಬಾಲಿಶ. ಆಗಿನ ಕಾಲದ  ಬದುಕು ಅಂದಿಗೆ, ಈಗಿನದ್ದು ಇಂದಿಗೆ, ಅಂದೂ ಇಂದೂ ಜೊತೆಗಿರುವ ಮನಸ್ಸು ಅದೇ ಆಗಿರೋದ್ರಿಂದ ವಯಸ್ಸು ಹೆಚ್ಚಾಗ್ತಾ ಹೋಗಂತೆ ಭೂತ ಮತ್ತು ವರ್ತಮಾನವನ್ನು ಹೋಲಿಕೆ ಮಾಡಲು ತೊಡಗುತ್ತದೆ. ಆಗಲೆ, ಕಳಕೊಂಡೆ.... ಅಂತ ಅನ್ನಿಸಲು ಶುರುವಾಗುವುದು....
ಮತ್ತದೇ ಸಾಲು ನೆನಪಾಗುವುದು... ಕಾಲವನ್ನು ತಡೆಯೋರು ಯಾರೂ ಇಲ್ಲ.......

-----------------


ಬೆಳಗ್ಗಿನಿಂದ ಬರ್ಥ್ ಡೇ ವಿಶ್ ಮಾಡಿ ಫೇಸ್ ಬುಕ್, ವಾಟ್ಸಾಪ್, ಎಸ್ಎಂಎಸ್ ಗಳಲ್ಲಿ ಅಬ್ಬಾ...ಎಷ್ಟು ಮಂದಿ ಸಂದೇಶ ಕಳುಹಿಸಿದರು... ಬಹುಶಃ ಹುಟ್ಟಿದ ದಿನವನ್ನು (ಹಬ್ಬ ಖಂಡಿತಾ ಅಲ್ಲ) ನೆನಪಿಸಿ ವಿಶೇಷ ಅನ್ನಿಸುವುದೇ ಸ್ನೇಹಿತರು... ಇಂದು ವಿಶೇಷ ದಿನ ಅಂತ ನೆನಪಿಸುತ್ತಲೇ ಇರುತ್ತಾರೆ, ಭಾವುಕರಾಗಿಸುತ್ತಾರೆ...ಮೊಬೈಲ್ ಅಕ್ಷರಶಃ ಹ್ಯಾಂಗ್ ಆಗಿತ್ತು....ಥ್ಯಾಂಕ್ಸ್ (ತುಂಬಾ ನೀರಸ ಪದ ಅಲ್ವ)...ನನಗೆ 35 ಕಳೆದಿದ್ದನ್ನು ನೆನಪು ಮಾಡಿ ಕೊಟ್ಟಿದ್ದಕ್ಕೆ.....