Tuesday, April 14, 2015

ಸಾವಿರ ಕಾಲಕು ಮರೆಯದ ನೆನಪು...


ಕಾಲೇಜಿಗೆ ದೊಡ್ಡ ನಮಸ್ಕಾರ ಹೇಳಿ ಬಂದ ನಂತರ ಅತ್ತ ತಲೆ ಹಾಕಿಲ್ವ.... ವರ್ಷಗಳ ಮೇಲೆ ವರುಷಗಳು ಉರುಳಿದ ಬಳಿಕ ನೀವು ಕಲಿತ, ನಿಮಗೆ ಕಲಿಸಿದ, ನೀವು ಕಲಿಸಿದ ಕಾಲೇಜಿಗೆ ನಿಶ್ಯಬ್ಧವಾಗಿ ಒಂದು ಸುತ್ತು ಬರುವ ಪ್ರಯತ್ನ ಮಾಡಿದ್ದೀರ.... ಹಾಗೇನಾದರೂ ನೀವು ಮೈ ಆಟೋಗ್ರಾಫ್ ಸಿನಿಮಾದ ಸುದೀಪ್ ಥರ ಸುತ್ತು ಬಂದರೆ ತಲೆಯೊಳಗೆ ಸಾವಿರ ಸಾವಿರ ನೆನಪುಗಳ ರೀಲುಗಳು ಸುರುಳಿ ಬಿಚ್ಚಿಕೊಂಡು ಸೀನ್ ಮೇಲ್ ಸೀನ್ ಬಂದ ಹಾಗೆ ಕಣ್ಣಿಗೆ ಕಟ್ಟುತ್ತದೇ ಅಥವಾ ಕಟ್ಟಬಹುದು ಅಲ್ವ...

ಆಗಿನ ಮನಸ್ಸು, ಆಗಿನ ಹುಡುಗಾಟ, ಇಡೀ ಕಾಲೇಜಿಗೆ ನಾವೇ, ಇದು ನಮ್ಮದೇ ಕಾಲೇಜ್, ಇಲ್ಲಿ ನಮ್ಮದೇ ಆಟ ಎಂಬಂತಹ ಭಾವಗಳೆಲ್ಲಾ ಯಾವತ್ತಿಗೋ ಮಣ್ಣು ಹಿಡಿದು ಹೋಗಿದ್ದು, ಮತ್ತೊಮ್ಮೆ ಎಷ್ಟೋ ವರ್ಷಗಳ ಬಳಿಕ ಕಾಲೇಜಿಗೆ ಸುತ್ತು ಹೊಡೆದರೆ, ಇಷ್ಟು ದೊಡ್ಡ ಕಾಲೇಜಿನ ಮುಂದೆ ನಾನೆಷ್ಟು ಸಣ್ಣವ.... ಇಂದು ಇಲ್ಲಿಗೆ ಕಾಲಿಟ್ಟಾಗ ನನ್ನದೇನೂ ಇಲ್ಲಿ ನಡೆಯುವುದಿಲ್ಲ.... ನನ್ನ ಹೆಸರಿಡಿದು ಕರೆಯುವವರೂ ಇಲ್ಲ.... ಆಗಿನ ಹುಡುಗಾಟದ ದಿನಗಳೇ ಚೆನ್ನಾಗಿದ್ದವು... ಗಾಢ ನಿದ್ದೆಯಲ್ಲಿ ಮೂಡಿದ ಕನಸಿನ ಹಾಗೆ ಕಳೆದು ಹೋದ ದಿನಗಳು ಎಂದು ಭಾಸವಾಗದಿದ್ದರೆ ಮತ್ತೆ ಕೇಳಿ....

ಆತ್ಮದ ಹಾಗೆ ಕಾಲೇಜ್ ಅಂತ ಹೇಳಬಹುದೇನೋ... ಅದಕ್ಕೆ ಆಕಾರ, ಭಾವ, ಭಾಷೆ, ಭಾವನೆ ಇದೆಯಾ... ಹಾರಾಡಿದವನಿಗೂ ಕಾಲೇಜ್ ಕ್ಯಾಂಪಸ್ ನೀಡಿದೆ, ಸದ್ದಿಲ್ಲದೆ ಬಂದು, ಸದ್ದಿಲ್ಲದೆ ಮನೆಗೆ ಹೋಗುವ ಸೋ ಕಾಲ್ಡ್ ಗಾಂಧಿ ಎನಿಸಿಕೊಂಡ ಕೆಟಗರಿ ಮಕ್ಕಳನ್ನೂ ಕಾಲೇಜ್ ತಬ್ಬಿಕೊಂಡಿದೆ. ಡಿಸ್ಟಿಂಕ್ಷನ್‌ ಪಡೆದವನನ್ನೂ, ತಿಪ್ಪರಲಾಗ ಹಾಕಿದವನನನ್ನೂ ಕಾಲೇಜ್ ಒಂದೇ ದೃಷ್ಟಿಯಿಂದ ಕಂಡಿದೆ. ಆ ಕೆಂಪು ಕಲ್ಲಿನ ಕಟ್ಟಡ, ದೊಡ್ಡ ಬಾಗಿಲು, ಇಷ್ಟುದ್ದದ ರವೀಂದ್ರ ಕಲಾ ಭವನ, ಹಸಿರು ಫ್ರೇಮಿನ ಕಿಟಕಿಗಳು, ರಾಜರ ಅರಮನೆಯಂತಹ ಹಿಡಿಗೆ ಸಿಲುಕದ ಅಷ್ಟಗಲದ ಕಂಭಗಳು, ಎದುರು ಕಿವಿಗಡಚಿಕ್ಕುವ ವಾಹನಗಳ ಹಾರನ್ ನಡುವೆನೇ ಪಾಠ ಕೇಳುವ ಅನಿವಾರ್ಯತೆ.... ಎಲ್ಲ ಸಹಜ ಫೀಚರ್‌ ಗಳ ನಡುವೆ ಎಲ್ಲಾ ಕೆಟಗರಿಯವರಿಗೂ ಕಲಿಸಿದ ಕಟ್ಟಡವದು ಕಾಲೇಜ್....ಪಾಸಿಟಿವ್ ಆಗಿ ಬಳಸಿದವನಿಗೆ ಕಾಲೇಜ್ ಪಾಸಿಟಿವ್ ಅನ್ನಿಸಬಹುದು. ನೆಗೆಟಿವ್ ದಾರಿ ಹಿಡಿದರೆ... ಅದೇ ದಾರಿ ತೋರಿಸಬಹುದು... ಅಷ್ಟೇ... ಇದರಲ್ಲಿ ಕಾಲೇಜಿನ ತಪ್ಪೇನಿಲ್ಲ. ನಾವು ಆ ಕಾಲೇಜನ್ನು ಹೇಗೆ ಬಳಸುತ್ತೇವೋ ಹಾಗೆ...ಅವರವರ ಭಾವಕ್ಕೆ ಭಕುತಿಕೆ.... ಒಬ್ಬ ಭಾರಿ ಗಮ್ಮತ್ ಮಲ್ತೆ, ಅಂದರೆ, ಇನ್ನೊಬ್ಬ ತುಂಬಾ ಕಲ್ತೆ, ಅನ್ನಬಹುದು. ಮತ್ತೊಬ್ಬನಿಗೆ ಅಲ್ಲಿಯೇ ಬಾಳ ಸಂಗಾತಿ ಒಲಿದರಬಹುದು. ಮಗದೊಬ್ಬ ಡಿಬಾರ್ ಆಗಿರಬಹುದು, ಉಗಿಸಿಕೊಂಡಿರಬಹುದು, ಪ್ರೈಸ್ ತಂದುಕೊಟ್ಟಿರಬಹುದು. ವಿಶಾಲ ಸಭಾಂಗಣದ ರಸಮಂಜರಿಯಲ್ಲಿ ಹಾಡಿ ಶಹಬ್ಬಾಸ್ ಗಿಟ್ಟಿಸಿಕೊಂಡಿರಬಹುದು.... ಕಾಲೇಜಿನ ಗೋಡೆಗಳು, ಸ್ತಬ್ಧ ನೋಟಿಸ್ ಬೋರ್ಡ್ ಗಳು, ಕ್ಯಾಂಟೀನ್, ಸ್ಟಾಫ್ ರೂಂ, ಎನ್‌ ಎಸ್‌ ಎಸ್ ಕೊಠಡಿ, ಎಂದೂ ಮುಚ್ಚದ ಗೇಟು, ನವ್ಯ ಕವನಗಳಿಗೆ ವೇದಿಕೆಯಾಗುವ ಟಿಪಿಕಲ್ ಟಾಯ್ಲೆಟ್ಟು.. ಪ್ರಶಾಂತವಾಗಿರುವ ಸೈನ್ಸ್ ಬ್ಲಾಕ್.... ಹೀಗೆ ಮೂಲೆ ಮೂಲೆಯೂ ಕಾಲೇಜು ಬದುಕಿನ ಕಥೆಗಳನ್ನು ಮೌನವಾಗಿ ಒದರುವಂತೆ ಭಾವಸವಾಗಬಹುದು... ಬೇಕಿದ್ದರೆ ನೀವು ಕಲಿತ ಕಾಲೇಜಿಗೊಮ್ಮೆ ಭೇಟಿ ಕೊಟ್ಟು ನೋಡಿ...


ಕಾಲೇಜಿನಲ್ಲಿ ತಡವಾಗಿ ಬಂದು, ಕ್ಲಾಸ್ ಬಂಕ್ ಮಾಡಿ ಸೆಂಟ್ರಲ್ ಟಾಕೀಸಿನಲ್ಲಿ ಕಹೋನಾ ಪ್ಯಾರ್ ಹೇ ನೋಡಿ.... ಎಕ್ಸಾಂಗಾಗುವಾಗ ಓದಿ ಪಾಸುಗವ ಕೆಟಗರಿ ಇದೆ. ಬೆಳ್ಳಂಬೆಳಗ್ಗೆ ಬೇಗ ಬಂದು ತತ್ವಜ್ಷಾನಿಗಳ ಹಾಗೆ ರವೀಂದ್ರ ಕಲಾಭವನದ ಎದುರಿನ ಚಾಚಿದ ಸೋಮಾರಿ ಕಟ್ಟೆಯಲ್ಲಿ ತತ್ವಜ್ನಾನಿಗಳ ಹಾಗೆ ಕುಳಿತು ಏನನ್ನೋ ಯೋಚಿಸುತ್ತಾ, ಅವು ದಾಲಾಪುಜ್ಜಿ ಬುಡು ಅಂತ ಸದಾ ನೆಗೆಟಿವ್ ಡಯ್ಲಾಗ್ ಬಿಟ್ಟು, ಪರೀಕ್ಷೆಗೂ ಬಂಕ್ ಹಾಕುವ ಮಂದಿ ಮತ್ತೊಂದೆಡೆ. ತಲೆ ತಗ್ಗಿಸಿ ಕಾಲೇಜಿಗೆ ಬಂದು, ಒಂದೂ ಕ್ಲಾಸು ತಪ್ಪಿಸದೆ, ಎಲ್ಲಿಯೂ ಸಿಕ್ಕಿ ಬೀಳದೆ, ಕೊನೆಗೆ ಆಟೋಗ್ರಾಫ್ ಪುಸ್ತಕದಲ್ಲಿ ಮಾತ್ರ ನೆನಪುಳಿಸಿ ಬಿಡುವ ಸೋ ಕಾಲ್ಡ್ ಗಾಂಧಿ ಕ್ಲಾಸ್‌ ವಿದ್ಯಾರ್ಥಿಗಳು ಇಲ್ಲಿಗೇ ಬರುತ್ತಾರೆ. ಲೆಕ್ಚರರ್ಸ್ಗೆ ಗಾಂಧಿ ಕ್ಲಾಸ್ ಮಕ್ಕಳು ಮಾತ್ರವಲ್ಲ ತರ್ಲೆಗಳೂ ನೆನಪಲ್ಲಿರ್ತಾರೆ ಅಲ್ವ....
ಕಾಲೇಜಿನಲ್ಲಿ ಗಾಂಧಿ ಥರ ಇದ್ದವರು ಮುಂದೆ ಏನೇನೋ ಆಗಿಬಿಡಬಹುದು.... ಕಾಲೇಜಿನಲ್ಲಿ ಸಕಲ ಕಲಾ ಪಾರಂಗತರಂತೆ ಮೆರೆದವರು ಸಮಾಜಕ್ಕೆ ಬಂದು ಗಾಂಧಿಯಂತೆ ಪೋಸನ್ನೂ ಕೊಡಬಹುದೇನೋ... ಅಂತೂ ಗಾಂಧಿ ಹೆಸರು ಮಿಸ್ ಯೂಸ್ ಮಾಡುವಲ್ಲಿ ಎರಡೂ ವರ್ಗದವರು ಸಮರ್ಥರೇ ಆಗಿರುತ್ತಾರೆ ಅನ್ನುಸುತ್ತದೆ...

ಕಾಲೇಜಿನಲ್ಲಿ ಓದುವ ವೇಳೆಯ ವಯಸ್ಸೇ ಅಂಥಹದ್ದು... ಆಗಿನ ಸ್ಪಿರಿಟ್ಟೇ ಅಂತದ್ದು... ಆಗಿನ ಹುಚ್ಚು ಧೈರ್ಯಗಳೇ ಅಂಥಹದ್ದು.... ಮುಂದೆ ಬದುಕು ಕಲಿಸುವ ಅನುಭವಗಳ ಮುಂದೆ ಕಾಲೇಜಿನ ಪ್ರತಿ ಅನುಭವವನ್ನು ತಾಳೆ ನೋಡುವ ಸಂದರ್ಭ ಬರುತ್ತದೆ. ಆಗ ನಮ್ಮ ಹುಚ್ಚಾಟಗಳನ್ನು ನೋಡಿ ಅನುಭವಿ ಲೆಕ್ಚರರ್ಸ್ ಯಾಕೆ ನಕ್ಕು ಸುಮ್ಮನಾಗುತ್ತಿದ್ದರು ಅಂತ ಗೊತ್ತಾಗುತ್ತದೆ... ಅಲ್ವ....
ಅಲ್ಲಿ ಕಲ್ತಿದ್ದು, ಬಿಟ್ಟಿದ್ದು, ಅಲ್ಲಿನ ಬೊಬ್ಬಾಟ, ಹಾರಾಟ, ಪಿಸುಮಾತು, ಕುಡಿನೋಟ, ಆತಂಕ, ವಿರಹ, ದುಮ್ಮಾನ, ಟೆನ್ಶನ್, ಕಾಣದ ಭವಿಷ್ಯದ ಕುರಿತ ಸಣ್ಣ ತೊಳಲಾಟ....ಲೆಕ್ಚರರ್ಸ್ ಪದೇ ಪದೇ ಹೇಳುತ್ತಿದ್ದು ಕಿವಿಮಾತು ಎಲ್ಲ ಮತ್ತೆ ಮತ್ತೆ ಎದ್ದು ಬಂದ ಹಾಗಾಗಬಹುದು.

ಎಷ್ಟು ಬಳಸ್ಕೊಂಡಿದ್ದೆವು, ಮಿಸ್ ಮಾಡ್ಕೊಂಡೆವು, ಏನು ಮಾಡ್ಬಹುದಿತ್ತು, ಏನು ಮಾಡ್ಬಾರ್ದಿತ್ತು ಛೆ... ಅಂತ ಅನ್ನಿಸಲೂ ಬಹುದು....
ಆದರೆ, ಕಳೆದ ದಿನಗಳು ಕಳೆದವು, ನಾವು ಹಾರಾಡುತ್ತಿದ್ದ ಕ್ಯಾಂಪಸ್ ನಲ್ಲಿ ಇನ್ಯಾರೋ ರಾಜರ ಹಾಗೆ ಹಾರಾಡುತ್ತಿರುತ್ತಾರೆ... ನಿಮ್ಮನ್ನಲ್ಲಿ ಯಾರೂ ಕಂಡು, ಆದರಿಸಿ, ರಾಜ ಮರ್ಯಾದೆ ನೀಡುವವರಿರುವುದಿಲ್ಲ. ನಾಳೆ ಅವರೂ ಕಲಿತು ಹೊರಗೆ ಹೋದ ಮೇಲೆ ನಮ್ಮ ಹಾಗೆಯೇ ಅಲ್ವ ಅಂತ ಒಳಗೊಳಗೇ ಅಂದುಕೊಂಡು ನೀವು ಖುಷಿ ಪಡಬಹುದು.
ಕಳೆದ ದಿನಗಳ ದುಗುಡದ ಸಹಿತ ಒಂದು ಸುತ್ತು ಬಂದು ಮತ್ತೆ ರಿಫ್ರೆಶ್ ಆಗುವುದಷ್ಟೇ ನಮ್ಮೆದುರಿಗಿರುವ ಮಾರ್ಗ.

ಮೊನ್ನೆ, ನಾನು ಕಾಲೇಜಿಗೆ ಹೋದಾಗ, 15 ವರ್ಷಗಳ ನಂತರ ಭೇಟಿಯಾದ ಆಗಿನ ಲೆಕ್ಚರರ್, ಈಗಿನ ಪ್ರಾಂಶುಪಾಲರಾದ ಸುನಂದಾ ಮೇಡಂ, ನನ್ನನ್ನು ಕಂಡಾಕ್ಷಣ ನೀವು... ಅಲ್ವ ಅಂತ ಹೆಸರು ಹಿಡಿದು ಕರೆದಾಗ ಆಶ್ಚರ್ಯ,ಸಂಭ್ರಮ ಒಟ್ಟೊಟ್ಟಿಗೇ ಆಯ್ತು... ಹಾಗೆ ಇಷ್ಟೆಲ್ಲ ಬರೆಯಬೇಕಾಯ್ತು.... ನಿಮ್ಮ ನೆನಪಿನ ಬುತ್ತಿಯಲ್ಲೂ ಅನುಭವಗಳ ಹೂರಣ ಇರಬಹುದಲ್ವ.... ಇದೇ ಥರ....