Saturday, November 21, 2015

ಸೆಲ್ಫೀಯೆಂಬೋ ತತ್ವಜ್ಞಾನ...

ಸೆಲ್ಫೀ ಅನ್ನೋದು ಒಂದು ಕ್ರೇಝ್ ಮಾತ್ರವಲ್ಲ ಒಂದು ತತ್ವಜ್ಞಾನವೂ ಹೌದಲ್ವೇ...
ಅಂಗೈಯಗಲದ ಜಂಗಮ ದೂರವಾಣಿಯೆಂಬೋ ಅದ್ಭುತದಲ್ಲಿ ನಮ್ಮನ್ನು ನಾವು ಕಂಡುಕೊಳ್ಳಲು ಅವಕಾಶ. ಮಾತ್ರವಲ್ಲ, ವೈವಿಧ್ಯಮಯವಾಗಿ ಅದನ್ನು ಜಗದೊಡನೆ ಹಂಚಿಕೊಳ್ಳಲು (ಶೇರ್) ಉತ್ತಮ ಅವಕಾಶಗಳ ಆಯ್ಕೆ ಬೇರೆ.
----------
ಮನೆ,ಕಚೇರಿ,ಸಮಾಜವೆಂಬೋ ಸ್ಪೇಸ್ ನಲ್ಲಿ ನಮಗಿರಬಹುದಾದ ಹತ್ತು ಹಲವು ಪಾತ್ರಗಳು (ರೂಪಗಳು), ಈ ನಡುವೆ ನಮ್ಮನ್ನು ನಾವು ಕಂಡುಕೊಳ್ಳುವುದು ಯಾವಾಗ... ಅದಕ್ಕೇ ಇದೆಯಲ್ಲ ಸೆಲ್ಫೀ..
ಮುಖದೆದುರು ಫ್ರಂಟ್ ಕ್ಯಾಮೆರಾ ಹೊಂದಿಸಿ ನಮ್ಮದೇ ಬೆರಳಲ್ಲಿ ಕ್ಲಿಕ್ಕಿಸಿದರೆ ಸೆಲ್ಫೀ ರೆಡಿ. ರುಚಿಗೆ ತಕ್ಕಷ್ಟು ನಗು, ವಾರೆನೋಟ ಜೊತೆಗಿದ್ದರೆ ಸಾಕು.
ನಮ್ಮದೇ ಪ್ರತಿರೂಪ ಕಂಡುಕೊಳ್ಳುವ ಬೆರಗು, ನಾಚಿಕೆ, ನಿರೀಕ್ಷೆಗಳೊಂದಿಗೆ ಮೂಡುವ ತದ್ರೂಪವನ್ನು ಹಂಚಿಕೊಂಡು ಒಂದಷ್ಟು ಕಮೆಂಟು, ಲೈಕು ಸಿಗುತ್ತದೋ ಎಂಬ ಕಾತರ ಬೇರೆ.
-----------
ನಮ್ಮನ್ನು ಕಂಡುಕೊಳ್ಳಲು ಇರುವ ಮಾರ್ಗ ಆತ್ಮವಿಮರ್ಶೆ ಅಲ್ಲವೇ... ಅಂದು ಹೇಗಿದ್ದೆ, ಇಂದು ಹೇಗಾದೆ... ಎಷ್ಟು ಪಾಪ ಇದ್ದೆ, ಈಗೆಷ್ಟು ಜೋರಾಗಿದ್ಯೋ.... ಅಂದು ಅಳುಮುಂಜಿಯ ಹಾಗಿದ್ದವ, ಮಾತನಾಡಿದರೆ ನಾಚಿ ಕೆಂಪಾಗುತ್ತಿದ್ದವ ಇಂದೆಷ್ಟು ಮಾತನಾಡುತ್ತಿಯೋ, ಗಾಳಿ ಊದಿದರೆ ಹಾರಿ ಹೋಗುವ ಹಾಗಿದ್ಯಲ್ಲ, ಈಗೆಷ್ಟು ದೊಡ್ಡ ಹೊಟ್ಟೆ ನಿನಗೆ, ಬಫೂನ್ ಥರ ಆಗಿದ್ದಿಯಾ.... ಹೀಗೆ, ವರುಷಗಳ ನಂತರ ಕಂಡವರು ಅದೇ ಹಿಂದಿನ ಸಲುಗೆಯಿಂದ ಕಮೆಂಟು ಮಾಡುತ್ತಿದ್ದರೆ ನಾವು ಮತ್ತೊಮ್ಮೆ ಅವರ ಬಾಯಲ್ಲಿ ನಮ್ಮನ್ನು ಕಂಡುಕೊಳ್ಳುತ್ತೇವೆ ಅಲ್ವೇ...
ನಮಗೇ ನೆನಪಿರದ ಅವರ ಒಡನಾಟದ ಕ್ಷಣಗಳು ಬದುಕಿನ ಸಿಂಹಾವಲೋಕನವಾಗಿ ಹೊರಬರುತ್ತಿದ್ದರೆ, ನಾವೇ ಮರೆತಿರಬಹುದಾದ ಅಂದೊಂದು ಕಾಲದ ನಮ್ಮನ್ನು ಮತ್ತೆ ಬ್ಲಾಕ್ ಆಂಡ್ ವೈಟ್ ನಲ್ಲಿ ಕಾಣುವ ಸೌಭಾಗ್ಯವೇ ಸರಿ.
-------------
ಎಲ್ಲೋ ಬಂಡವಾಳ ಬರಿದಾದಾಗ, ಎಲ್ಲೋ ಮಾತಿನಲ್ಲಿ ಸೋತಾಗ, ಎಲ್ಲೋ ನಿರೀಕ್ಷೆಗಳು ನಿರಾಸೆಯಾಗಿ ಖಾಲಿ ಖಾಲಿ ಅನ್ನಿಸಿದಾಗ, ಮತ್ತೆಲ್ಲೋ ಮತ್ಯಾರೋ ನೀನೇನೋ ಈಗ ಹೀಗೆ ಎಂದು ನಿಮ್ಮನ್ನು ತುಸು ಎಚ್ಚರಿಸಿದಾಗ ಮತ್ತೆ ನಮ್ಮನ್ನು ನಾವು ಕಂಡುಕೊಳ್ಳುವ ಆತ್ಮವಿಮರ್ಶೆ ಅರಿವಿಲ್ಲದೇ ಸಾಗುತ್ತದೆ.
ಬದುಕಿನಲ್ಲಿ ನಮ್ಮನ್ನು ಎಚ್ಚರಿಸುವವರು, ಸಾಂತ್ವನ ಹೇಳುವವರು, ತಿದ್ದುವವರು, ಮೇಲೆತ್ತಿ ನಿಲ್ಲಿಸುವವರು, ಜಾಗರೂಕತೆಯಿಂದ ಸೇತುವೆ ದಾಟಿಸುವವರು ಹಲವರು ಸಿಗುತ್ತಾರೆ. ಆಗೆಲ್ಲ ಆ ಆಸರೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವುದಿಲ್ಲವೇ... ನಮ್ಮ ಯಶಸ್ಸಿನ ಸೆಲ್ಫೀಯಲ್ಲಿ ಅವರೂ ಫ್ರೇಮಿನೊಳಗೆ ಸೇರಿಕೊಳ್ಳುವುದಿಲ್ಲವೇ...ನಮ್ಮನ್ನು ಸೆಲ್ಫೀ ಫ್ರೇಮಿನೊಳಗೆ ಸೇರಿಸಲು ಕೈಜೋಡಿಸಿದ ಅಷ್ಟೂ ಮಂದಿಯ ಸ್ಮರಣೆಯೊಂದಿದ್ದರೆ ಸಾಕು ಅವರು ಮಾಡಿದ, ಮಾಡಿರಬಹುದಾದ ಸಹಾಯಕ್ಕೆ ಸಾರ್ಥಕತೆ ನೀಡಲು.
---------------
ಮುಖವಾಡಗಳನ್ನು ಕಳಚಲು ನಮ್ಮನ್ನು ನಾವು ನೇರ ಕಂಡುಕೊಳ್ಳಬೇಕಾಗುತ್ತದೆ. ನೇರ ನಡೆನುಡಿಯಲ್ಲಿ, ಸ್ವಂತ ನಿರ್ಧಾರಗಳಲ್ಲಿ, ಸ್ವತಂತ್ರ ಯೋಜನೆಗಳ ಹಿಂದೆ ಮುಖವಾಡಗಳು ಬೇಕಾಗಿಲ್ಲ. ಆದರೆ, ನೀನಿರಬೇಕಾಗಿದ್ದು ಹೀಗಲ್ಲ, ಹಾಗೆ ಅಂತ ಯಾರಿಗಾದರೂ ತೋರಿಸಿಕೊಟ್ಟು, ಅವರೊಳಗೆ ಅವರನ್ನು ಕಾಣುವ ಹಾಗೆ ಮಾಡಿದ ಸಾರ್ಥಕ ಭಾವ ನಿಮ್ಮೊಳಗೆ ಮೂಡಿದಾಗಲೇ ನಿಮಗೆ ನಿರಾಳ ಅನ್ನಿಸುವುದು ಅಲ್ವ...
ಎಷ್ಟೋ ಸೆಲ್ಫೀಗಳ ಫ್ರೇಮಿನೊಳಗೆ ನೀವಿಲ್ಲದಿರಬಹುದು, ಆದರೆ ಅದನ್ನು ಕ್ಲಿಕ್ಕಿಸಲು ಕಲಿಸಿದ ನೆನಪು ಮಾತ್ರ ಗಾಢ ಅಲ್ವ
---------------
ಎಲ್ಲವನ್ನೂ ಮಾತುಗಳಲ್ಲಿ ಕಟ್ಟಿಕೊಡಲು, ಎಲ್ಲವನ್ನೂ ಮಾತಿನಲ್ಲಿ ಬಿಂಬಿಸಲು, ಎಲ್ಲ ಆಕರ್ಷಣೆ, ಬಾಂಧವ್ಯ, ಸಹಕಾರ, ಔದಾರ್ಯಕ್ಕೆ ಅಕ್ಷರ ರೂಪ, ಮಾತಿನ ರೂಪ ಕೊಡಲು, ವರ್ಣಿಸಲು ಅಸಾಧ್ಯ. ಆದರೆ, ಅವೆಲ್ಲದರ ಕುರಿತ ಅಮೂರ್ತ ಕಲ್ಪನೆ ಮನಸ್ಸಿನೊಳಗಿರುತ್ತದೆ. ಅವಕ್ಕೆ ಹೆಸರಿಡಲು ಹೊರಟಾಗಲೇ ನಾವು ಸೋಲುವುದು. ಸಂಬಂಧಕ್ಕೊಂದು, ಸಹಾಯಕ್ಕೊಂದು, ಪರಿಸ್ಥಿತಿಗೊಂದು ಹೆಸರಿಟ್ಟು ಕಟ್ಟಿ ಹಾಕಲು ಹೊರಟರೆ ಅವು ಫ್ರೇಮಿನೊಳಗೆ ಬಂಧಿಯಾಗಲು ಕೇಳದೆ ಒಂದು ಹೋಗಿ ಇನ್ನೊಂದಾಗುವುದು. ಅವುಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡುವುದೇ ಲೇಸು...
----------------
ವಿಷಾದವನ್ನು, ವಿದಾಯವನ್ನು ನಿಶ್ಯಬ್ಧದಷ್ಟು ಸ್ವಾರಸ್ಯವಾಗಿ ಇನ್ಯಾವುದೇ ಭಾಷೆ ವರ್ಣಿಸಲಾಗದಂತೆ. ಹೌದಲ್ವ.... ನಿಶ್ಯಬ್ಧಕ್ಕೂ ಒಂದು ಓಘವಿದೆ. ಅದೂ ಮಾತನಾಡುತ್ತದೆ. ಅರ್ಥ ಮಾಡುವವರು ಇರುವ ತನಕ. 
ಸೆಲ್ಫೀಯಲ್ಲಿ ಫೋಕಸ್ ಆಗುವ ಮುಖ ನಮ್ಮದಾದರೂ ನಮ್ಮನ್ನು ಇಲ್ಲಿವರೆಗೆ ತಂದು ನಿಲ್ಲಿಸಿದವರ ಮುಖ ಅಸ್ಪಷ್ಟವಾಗಿ ಫ್ರೇಮಿನೊಳಗೆ ಕಾಣುತ್ತಲೇ ಇರುತ್ತದೆ. ಹಿಡಿದು ತಂದು ಎದುರು ನಿಲ್ಲಿಸಲಾಗದಷ್ಟು ದೂರದಲ್ಲಿ ಮತ್ತೆಲ್ಲೋ...
ಜಾಸ್ತಿ ಮುಖದ ಹತ್ತಿದ ಕ್ಯಾಮೆರಾ ಹಿಡಿದರೆ ಫೋಕಸಿಂಗ್ ಹೆಚ್ಚು ಕಡಿಮೆಯಾಗಿ ಚಿತ್ರ ವಿಕಾರವಾಗುತ್ತದೆ.... ಬದುಕಿನಲ್ಲೂ ಅಷ್ಟೆ ಅಲ್ವ ತುಂಬ "ಉನ್ನತ ಸ್ಥಾನ" ಕೊಟ್ಟಂತಹ, ಅಥವಾ ಗೌರವಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಹತ್ತಿರದಿಂದ ಕಂಡಾಗ ಭ್ರಮನಿರಸನ ಅನ್ನಿಸಿದರೆ ಅದು ಫೋಕಸಿಂಗ್ ತಪ್ಪು ಅಲ್ವೇ... ತುಂಬಾ ಹತ್ತಿರದಿಂದ ಕಾಣುವ ವ್ಯಕ್ತಿತ್ವ ಇನ್ನೇನೋ ಆಗಿದ್ದರೆ, ದೂರದಿಂದ ಕಾಣುವುದಕ್ಕೆ ಮಾತ್ರ ಚಂದ ಅಂತಿದ್ದರೆ ಹತ್ತಿರಕ್ಕೊಂದು, ದೂರಕ್ಕೊಂದು ದ್ವಂದ್ವ ವ್ಯಕ್ತಿತ್ವ ಇದೆಯೆಂದಲ್ವೇ...
ಸೆಲ್ಫೀ ತತ್ವಜ್ಞಾನವೂ ಇದನ್ನೇ ಹೇಳೋದು. ಮುಖದ ಹತ್ತಿರ ಹತ್ತಿರ ಬಂದ ಹಾಗೆ ಮುಖ ವಿಕಾರ... ಅದೇ ದೂರ ಹಿಡಿದರೆ ಚೆಂದ, ಸರಳ, ಆಕರ್ಷಕ....
----------
ಕೆಲವೊಂದು ಅಸಹಾಯಕತೆ, ಕೆಲವೊಂದು ಸಂದಿಗ್ಥಗಳನ್ನು ಎಲ್ಲೂ ಶೇರ್ ಮಾಡಿಕೊಳ್ಳಲಾಗದೆ ಉಂಟಾಗುವ ಏಕಾಂಗಿತನದ ಹಾಗೆ ಸೆಲ್ಫೀಗಳು. ಎದುರೂ ನೀವೇ...ಹಿಂದೆಯೂ ನೀವೇ...ಕ್ಲಿಕ್ಕಿಸುವವರು ಯಾರೂ ಇಲ್ಲ. ಅಲ್ಲಿ ಕಣ್ಣೀರು, ಆನಂದಭಾಷ್ಪ ಎರಡಕ್ಕೂ ನೀವೇ ಸಾಕ್ಷಿ..ಕ್ಲಿಕ್ಕಿನಲ್ಲಿ ಮೂಡುವ ನಗು ಮಾತ್ರ ಕಾಣಿಸೋದು. ಅದರ ಹಿಂದಿನ ಕಣ್ಣೀರು, ಒಂಟಿತನ, ಅಸಹಾಯಕತೆ ಯಾರಿಗೂ ಕಾಣ್ಸೋದಿಲ್ಲ ಅಲ್ವ.