Tuesday, December 27, 2016

ಫಸ್ಟು ಬಸ್ಸಿಗೆ ಸರಿ ಮಿಗಿಲುಂಟೇ...?

ಆಗ ತಾನೆ ಮಿಂದು ಬಂದವಳಂತೆ ಮೈಯ್ಯಿಂದ ತೊಟ್ಟಿಕ್ಕುವ ಹನಿಗಳು, ಸ್ಫಟಿಕದಂತೆ ಸ್ವಚ್ಛಂದವಾಗಿ ಹೊಳೆಯುವ ಕನ್ನಡಿಗಳು... ತೊಳೆದು ಶುಚಿಯಾದ ಕಪ್ಪು ಚಕ್ರಗಳು, ಮೈಲಿಗಟ್ಟಲೆ ಪ್ರಯಾಣಕ್ಕೆ ಸಿದ್ಧವಾದ ಧೀರೋದ್ದಾತ ಭಂಗಿ, ಡ್ರೈವರ್ ಮಾಮನ ಪಕ್ಕದ ದೇವರ ಫೋಟೋಗೆ ಹಾಕಿದ ಕೆಂಪು ದಾಸವಾಳ, ಕನಕಾಂಬರ ಹೂಗಳ ತೊನೆಯುವ ಮಾಲೆ... ಪರಿಸರವೆಲ್ಲಾ ಘಂ ಅನಿಸುವ ಅಗರಬತ್ತಿ ಸುವಾಸನೆಯ ಭಕ್ತಿ ಭಾವ ಪರಾಕಾಷ್ಠೆ...!

ಹೌದು, ಫಸ್ಟ್ ಬಸ್ಸಿನ ಪ್ರಯಾಣ ಆರಂಭಕ್ಕೂ ಮೊದಲು ಬೆಳ್ಳಂಬೆಳಗ್ಗೆ ೬ಗಂಟೆಗೋ, ೬.೩೦ಕ್ಕೋ ಯಾವುದೇ ಊರಿಗೆ ಹೋದರೂ ಕಾಣುವ ದೃಶ್ಯವಿದು... ಪಾತ್ರಗಳು, ಬಸ್ಸಿನ ಬಣ್ಣ, ಹಾಕಿದ ಮಾಲೆ, ಓಡುವ ರೂಟು ಬದಲಾಗಬಹುದು... ಆದರೆ ಫಸ್ಟು ಬಸ್ಸಿನ ಪ್ರಯಾಣದ ಸುಖ ಮಾತ್ರ ಅಷ್ಟೇ ತಾಜಾ.. ಅಷ್ಟೇ ಆಹ್ಲಾದಕರ ಅಷ್ಟೇ ಥಂಡ ಥಂಡ ಕೂಲ್ ಕೂಲ್, ಅಲ್ವ?


ಮಧುರ ಅನುಭೂತಿ: ಯಾಂತ್ರಿಕ ಬದುಕಿನ ಏಕತಾನತೆ ಕಳೆಯಬಲ್ಲ ಕೆಲವು ಅನುಭೂತಿಗಳಲ್ಲಿ ಫಸ್ಟ್ ಬಸ್ಸಿನ ರೂಟ್ ಪ್ರಯಾಣವೂ ಒಂದು. ಈಗೀಗ ಕಾರು, ಬೈಕುಗಳ ಸಂಖ್ಯೆ ಜಾಸ್ತಿಯಾದಂತೆ ಧಾವಂತದಲ್ಲಿ ಎದ್ದು ನಾಲ್ಕಾರು ಮೈಲಿ ಟಾರ್ಚು ಲೈಟು ಹಿಡ್ಕೊಂಡು ನಡೆದು ನದಿ ಪಕ್ಕದ ಬಸ್ ಸ್ಟಾಂಡಿನೆದುರು ನಿಂತ ಫಸ್ಟ್ ಬಸ್ಸೇರಿ ಸಿಟಿಗೆ ಹೋಗುವವರ ಸಂಖ್ಯೆ ಕಡಿಮೆ ಇರಬಹುದು. ಒಂದು ಕಾಲದಲ್ಲಿ ಅದೊಂದು ಮಹತ್ಸಾಧನೆ...ದೂರದೂರಿಗೆ ಹೋಗುವ ತುಸು ಉದ್ವೇಗ, ಬಸ್ ಸಿಗ್ತದೋ ಇಲ್ಲವೋ ಎಂಬ ಟೆನ್ಶನ್ನು, ಕೈಲಿ ಮಣಭಾರದ ಬ್ಯಾಗುಗಳು, ಕೊರೆಯುವ ಚಳಿ, ಬಗಲಲ್ಲಿ ಮಕ್ಕಳು, ಮರಿಗಳು... ಹಾಗೂ ಹೀಗೂ ಏರಿ, ದಿಣ್ಣೆ ದಾಟಿ, ಹಳ್ಳ ತೊರೆ ಕಳೆದು... ಡಾಂಬರು ರಸ್ತೆಯ ಪಕ್ಕ ರಾತ್ರಿಯೆಲ್ಲಾ ಹಾಲ್ಟ್ ಮಾಡಿ ಇನ್ನೇನೂ ಹೊರಡುವ ಔದಾಸೀನ್ಯದಲ್ಲಿರುವ ಬಸ್ಸನ್ನು ಏರಿದಾಗಲೇ ಢವಗುಟ್ಟುವ ಎದೆ ಹದಕ್ಕೆ ಬರೋದು! 


ಕೊನೆಗೂ ಬಸ್ಸು ಸಿಕ್ಕಿ, ಅಲ್ಲೊಂದು ಸುರಕ್ಷಿತ ಸೀಟೂ ಸಿಕ್ಕಿ ಉಸ್ಸಪ್ಪ ಅಂದಾಗ ಸಮಾಧಾನ ಆಗೋದು. ಬೆಳಗ್ಗಿನ ಬಸ್ಸೇ ಹಾಗೆ. ನಿದ್ರೆ ಕಳೆದು ಖುಷಿ ಖುಷಿಯಾದ ಭಾವ, ಬೆಳಗ್ಗಿನ ಸೂರ್ಯೋದಯ, ಜೊತೆಗೆ ನಸು ಮಂಜು, ವೈಪರ್ ಹಾಕದಿದ್ರೆ ದಾರಿ ಕಾಣದೇನೋ ಎಂಬಂಥ ತುಸು ಮಂಜು, ಹಗಲಿಡೀ ಕಾಡಿ ಸುಸ್ತಾಗಿ ತಲೆ ಮರೆಸಿದ ರಸ್ತೆ ಬದಿಯ ಧೂಳು, ಬೇಗ..ಬೇಗ... ರೈಟ್ ರೈಟ್ ಎಂಬ ಧಾವಂತವಿಲ್ಲದೆ ನಿಧಾನಕ್ಕೆ ಹೊರಡುವ ಗಾಡಿಯ ವೇಗ... ಅಷ್ಟೇನು ರಶ್ಶಿಲ್ಲದೆ ಬೇಕಾದ ಸೀಟಲ್ಲಿ ಕೂರಬಲ್ಲ ವಿಶೇಷ ಅವಕಾಶ ಸಿಗೋದಿದ್ರೇ ಅದು ಫಸ್ಟ್ ಬಸ್ಸಿನಲ್ಲಿ ಮಾತ್ರ, ಅಲ್ವ?


ಎಲ್ಲಿಗೋ ಪಯಣ...: ಅದೆಷ್ಟು ಮನೆಯ ತರಕಾರಿ, ಹಾಲು ಪೇಟೆಗೆ ಸೇರಬೇಕೋ? ಅದೆಷ್ಟು ಮಂದಿ ನೆಂಟರು, ಇಷ್ಟರ ಮನೆ ಸೇರಬೇಕೋ? ಅದೆಷ್ಟು ಮಂದಿಯ ಮನಗಳು ಬೆಚ್ಚಗಿನ ಕೆಲಸದ ಕನಸು ಹೊತ್ತು ದೂರದೂರು ತಲುಪಬೇಕೋ? ವಾರದ ರಜೆಗೆಂದು ಬಂದು ಅತ್ತು ಕರೆದು ಮನಸ್ಸಿಲ್ಲದ ಮನಸ್ಸಿಂದ ಹೊರಟು ದೂರದ ಹಾಸ್ಟೆಲ್ಲಿಗೆ, ಕಾಲೇಜಿಗೆ ಫಸ್ಟು ಬಸ್ಸಿನಲ್ಲೇ ಹೋಗಿ ಮುಟ್ಟಬೇಕಾದ ಇನ್ನೆಷ್ಟು ಮಂದಿ ಇದ್ದಾರೋ? ಅಲ್ಲೆಲ್ಲ ಗಂಭೀರ ಮೌನದ ಹಿಂದಿನ ಅಷ್ಟೂ ಮನಸ್ಸುಗಳು ಮುಂಜಾವಿನ ಸೂರ್ಯೋದಯದ ಜೊತೆಗೇ ಮನೆ ಬಿಟ್ಟು ತಮ್ಮೂರು ಬಿಟ್ಟು ಮತ್ತೊಂದೆಡೆ ಸಾಗಬೇಕಾದ ಖುಷಿಗೋ, ದುಖಕ್ಕೋ ನೆಚ್ಚಿಕೊಂಡಿರೋದು ಫಸ್ಟು ಬಸ್ಸನ್ನೇ...


ಟೈರು ಸರಿ ಇದೆಯಾ, ಡೀಸೆಲ್ ಲೀಕ್ ಆಗ್ತಿದೆಯಾ, ಟಿಕೆಟ್ ಬುಕ್ಕು ಸಾಕಷ್ಟಿದೆಯಾ ಅಂತ ಠೀವಿಯಿಂದ ಚೆಕ್ ಮಾಡಿ ಬಸ್  ಹತ್ತುವ ಡ್ರೈವರ್, ಕಂಡಕ್ಟರ್ ಮಾಮಂದಿರೇ ಚಿಕ್ಕವರಿದ್ದಾಗ ನಮ್ಮ ಪಾಲಿಗೆ ದೊಡ್ಡ ಹೀರೋಗಳು, ಹಿಡಿಯಷ್ಟು ದೊಡ್ಡದ ಸ್ಟಿಯರಿಂಗ್ ತಿರುಗಿಸಿ, ಒಂದಷ್ಟು ಹೊತ್ತು ಬಸ್ಸನ್ನು ಸ್ಟಾರ್ಟಿಂಗ್ ಮೋಡ್‌ನಲ್ಲಿಟ್ಟು ವಾಮ್ ಅಪ್ ಮಾಡುವ ಗತ್ತು ಗೈರತ್ತು ಕಂಡು, ಆದರೆ ಡ್ರೈವರೇ ಆಗಬೇಕೆಂಬ ಕನಸು ಕಂಡಿದ್ದು ಇಂತಹದ್ದೇ ಫಸ್ಟ್ ಬಸ್ಸಿನಲ್ಲಿ.
ಆ ಬಸ್ ಕೈಕೊಟ್ಟರೆ, ಅರ್ಧದಲ್ಲಿ ಠಿಕಾಣಿ ಹೂಡಿದರೆ ಅಷ್ಟೂ ಮಂದಿಯ ಎಷ್ಟೆಷ್ಟೋ ಕನಸುಗಳಿಗೆ ಕೊಕ್ಕೆ ಖಂಡಿತ. ಫಸ್ಟ್ ಟ್ರಿಪ್ಪಾದ ಕಾರಣ ಸೆಕೆಂಡಿಗೂ ಚ್ಯುತಿಯಾಗದಂತೆ  ಸಮಯ ಪಾಲಿಸುವ ಡ್ರೈವರ್, ಕಂಡಕ್ಟರ್‌ಗಳು ಮುಂದಿನ ಸಾಟ್ಪಿನಲ್ಲಿ ಕಾಲು ಗಂಟೆ ಚಹಾ ಕುಡಿಯಲು ನಿಲ್ಲಿಸೋದು ಬೇರೆ ವಿಷಯ.
ಫಸ್ಟ್ ಸ್ಟಾಪಿನಿಂದ ಹೊರಡುವ ಅಷ್ಟೂ ಮಂದಿ ಅದೇ ಊರಿನವರಾಗಿರುವುದರಿಂದ ಮಾತನಾಡಲೂ ಸಾಕಷ್ಟು ವಿಚಾರಗಳಿರುತ್ತವೆ, ಬಿಗಿದ ತುಟಿಯ ಬಿಗುಮಾನ, ಅಸಹಜ ಗಾಂಭೀರ್ಯತೆ ಫಸ್ಟು ಟ್ರಿಪ್ಪಿಗೆ ಅನ್ವಯಿಸುವುದಿಲ್ಲ. ಮತ್ತೆ, ಯಾರು ಎಲ್ಲಿ ಇಳೀತಾರೆ ಅಂತ ಕಂಡಕ್ಟರ್ ಮಾಮನಿಗೆ ಗೊತ್ತಿರೋ ಕಾರಣ, ಯಾರ ಹತ್ರನೂ ಎಲ್ಲಿಗೆಂದು ಕೇಳದೆ ಟಿಕೆಟ್ ಇಶ್ಯೂ ಮಾಡುವ ವಿಶೇಷ ಸಂದರ್ಭ ಬೆಳಗ್ಗೆ ಮಾತ್ರ ಸಿಗೋದು ಅನ್ನೋದು ಬೋನಸ್ ವಿಷಯ...


ಲಾಸ್ಟ್ ಟ್ರಿಪ್ ಉಸ್ಸಪ್ಪ!:
ಅಂತೂ ಇಂತೂ ದಿನಪೂರ್ತಿ ಓಡಾಡಿ, ಅರಚಿ, ಕಾದಾಡಿ, ಓವರ್‌ಟೇಕ್‌ಗಳನ್ನು ಮಾಡಿ, ಹತ್ತಿಸಿ, ಇಳಿಸಿ, ಬಳಲಿ ಬೆಂಡಾಗಿ ಲಾಸ್ಟ್ ಟ್ರಿಪ್ ಮತ್ತದೇ ಊರಿಗೆ ಬರುವ ಹೊತ್ತಿಗೆ ನಾವು ನಾವಾಗಿರೋದಿಲ್ಲ...
ಮೈತುಂಬ ಬಳಲಿಕೆ, ಹರಿದ ಬೆವರು, ಬಸ್ಸು ತುಂಬ ರಶ್ಶೋ ರಶ್ಶು, ಕಾಲಿಡಲೂ ಜಾಗವಿಲ್ಲ, ಹಿಂದಿನ ಸೀಟಲ್ಲಿ ಕುಳಿತವರ ಬಾಯಿಂದ ಏನೇನೋ ವಾಸನೆ, ಜೋಲಾಡಿ ಹೆಗಲಿಗೆ ಬೀಳುವ ದೇಹಗಳು, ಬೆಳಗ್ಗೆ ಶುಭ್ರವಾಗಿ ತೊಳೆದ ಬಾಡಿ ಮೇಲೆ ಧೂಳಿನ ದಪ್ಪ ಹೊದಿಕೆ, ಹಸಿವಾದ ಹೊಟ್ಟೆಗಳು, ಒಮ್ಮೆ ಮನೆ ಸೇರಿದರೆ ಸಾಕೆಂಬ ತುಡಿತ...
ಏನಂತೀರಾ... ಫಸ್ಟು ಬಸ್ಸೇ ವಾಸಿಯಲ್ವ?
-ಕೃಷ್ಣಮೋಹನ ತಲೆಂಗಳ.

Tuesday, December 20, 2016

ಪುಟ್ಟ ಪುಟ್ಟ ಖುಷಿಗಳ ದೊಡ್ಡ ದೊಡ್ಡ ನೆನಪು!

ಕಾಲ ಯಾವಾಗ ಬದಲಾಯಿತೊ ಗೊತ್ತೇ ಆಗಲಿಲ್ಲ 🕐🕜🕤🕧

*ಮನೆ ಮಂದಿಯೆಲ್ಲಾ ಒಂದೇ ಸಾಬೂನು ಉಪಯೋಗಿಸುತ್ತಿದ್ವಿ*

*ದೂರದರ್ಶನದಲ್ಲಿ ಭಾನುವಾರ ಸಂಜೆ ನಾಲ್ಕಕ್ಕೆ ಬರುತ್ತಿದ್ದ ಚಲನಚಿತ್ರ ನೋಡೋದೇ ಖುಷಿ*

*ಶೆಟ್ರಂಗಡಿಗೆ ಚೀಟಿ ಕೊಟ್ಟು ಸಾಮಾನು ತರುತ್ತಿದ್ದೆವು*


*ಬೆಲ್ಲ ಕ್ಯಾಂಡಿ ತಿನ್ನೊದು ಯಾವಾಗ ನಿಲ್ಲಿಸಿದೆವು*

*ಅಪ್ಪ ತರುತ್ತಿದ್ದ ಬಟ್ಟೆಯ ಸಂಭ್ರಮ ಇವತ್ತಿನ ಮಾಲ್ ನಲ್ಲಿ ಸಿಗುತ್ತಿಲ್ಲ*

*ಕಾದಂಬರಿ ಓದೋರ ಒಂದು ಬಳಗವೇ ಇರುತ್ತಿತ್ತು*

*ಊರ ಜಾತ್ರೆಗಿಂತ ದೊಡ್ಡ ಪ್ರೋಗ್ರಾಮ ಇರಲೇ ಇಲ್ಲ*

*ಎಲ್ಲಾ ಧರ್ಮದವರು ಒಟ್ಟಿಗೆ ಹಬ್ಬ ಆಚರಿಸ್ತಾ ಇದ್ದೆವು*

*ಜ್ವರಕ್ಕೆ ಅಮ್ಮನ ಕಾಫಿ/ಕಷಾಯ ಸಾಕಾಗ್ತಾ ಇತ್ತು*

*ಕಿವಿ ನೋವು, ಹೊಟ್ಟೆ ನೋವು, ಶೀತ, ಕೆಮ್ಮು, ಗಂಟಲು ನೋವು ಖಯಿಲೆ ಅಂದ್ರೆ ಇವಷ್ಟೆ ಆಗಿತ್ತು*

*ಸಕ್ಕರೆ ಖಯಿಲೆ ಅವಾಗ ಶ್ರೀಮಂತರಿಗೆ ಮಾತ್ರ*

*ಬಿಲ್ಡಿಂಗಿಗಿಂತ ಮರಗಳೇ ಜಾಸ್ತಿ ಇದ್ದವು*

*ಲಗೋರಿ, ಜಿಬ್ಲಿ, ಕ್ರಿಕೆಟ್ ಫೇಮಸ್ ಆಗಿತ್ತು*

*ಭೂತದ ಮನೆ, ಭೂತ ಬಂಗ್ಲೆ ಊರಿಗೊಂದು ಇರುತ್ತಿತ್ತು*

*ಸಂಜೆ ಏಳಕ್ಕೆ ಎಲ್ಲಾ ಮನೆಲಿ ಇರುತ್ತಿದ್ವಿ*

*5 ಪೈಸೆಗೆ ಚಾಕ್ಲೆಟ್ ಸಿಗ್ತಾ ಇತ್ತು. ದೊಡ್ಡ ಚಾಕ್ಲೇಟ್ ಅಂದರೆ 2 ರೂಪಾಯಿ ಕಿಸ್ ಮಿ ಬಾರ್ ಚಾಕ್ಲೇಟ್*

*ಆದಿತ್ಯವಾರ ಕೂದಲು ಕಟ್ಟಿಂಗೆ ಲೈನ್ ಕಾಯ್ತಾ ಇದ್ದೆವು*

*ಹುಡುಗೀರಿಗೆ ಅಮ್ಮನದ್ದೆ ಬ್ಯೂಟಿ ಪಾರ್ಲರ್*

*ದೊಡ್ಡೋರ ಅಂಗಿ ಸಣ್ಣವರಿಗೆ ಬಳುವಳಿಯಾಗಿ ಬರುತ್ತಿತ್ತು*

*ಮಳೆ ಬೆಳಗ್ಗೆ ಶಾಲೆಗೆ ಹೋಗುವಾಗ ಮತ್ತು ಸಂಜೆ ಬರುವಾಗ ಜೋರಾಗಿ ಹೊಡಿತ್ತಿತ್ತು ಆಮೇಲೆ ದಿನ ಇಡೀ ಜಿಟಿಜಿಟಿ ಸುರಿತಾ ಇತ್ತು*

*ಮಗ್ಗಿ ಹೇಳೊದೆ ದೊಡ್ಡ ಅಸೈನ್ಮಂಟು*

*ಗುಬ್ಬಿ ಮನೆ ಅಂಗಳದಲ್ಲೇ, ಸಂಜೆ ಆದ್ರೆ ಬೇರೆ ಬೇರೆ ಸದ್ದಿನ ಹಕ್ಕಿಗಳು*

*ಟ್ರಾಫಿಕ್ ಜಾಮ್ ಕೇಳಿ ಗೊತ್ತಿತ್ತು ನೋಡಿ ಗೊತ್ತಿರಲಿಲ್ಲ*

*ತರಕಾರಿ ತರೋದಕ್ಕೆ ಕೈ ಚೀಲ ನಾವೆ ತಗೊಂಡು ಹೊಗ್ತಾ ಇದ್ದೆವು*

*ನೆಲದಲ್ಲಿ ಡಿಪ್ಸ್ ತಗಿಯೋದೆ ದೊಡ್ಡ ಜಿಮ್ ಆಗಿತ್ತು*

*ಯಾರಿಗಾದರು ನೋವಾದರೆ ನಮಗೂ ದುಃಖ ಆಗ್ತಾ ಇತ್ತು, ಸ್ಮಯ್ಲಿ/ಇಮೊಜಿ ಕಳುಹಿಸುತ್ತಾ ಇರ್ಲಿಲ್ಲ*

*ಮನೆಮಂದಿ ಒಟ್ಟಿಗೆ ಕೂತು ಮಾತಾಡೋದೆ ವಾಟ್ಸಪ್ ಗ್ರೂಪ್ ಆಗಿತ್ತು*

*ಫೋಟೊ ತೆಗೆದ್ರೆ ಕ್ಲೀನ್ ಆಗಿ ಬರೋಕೆ ಕಾಯ್ತಾ ಇದ್ದೆವು*

*ಪೇಪರಿನಲ್ಲಿ ಅಪಘಾತದಂತ ಸುದ್ದಿ ಬಂದ್ರೆ ಮರುಗುತ್ತಿದ್ದವು*

*ಒಬ್ರು ಯಾರೊ ಫೇಸ್ ಬುಕ್ ತರ ಎಲ್ಲಾ ವಿಷಯ ಮನೆಗೆ ಬಂದು ಅಪ್ಲೋಡ್ ಮಾಡ್ತಾ ಇದ್ದರು/ ಅದೆ ಮನೆಯಿಂದ ವಿಷಯ ಡಾವ್ನ್ಲೋಡ್ ಕೂಡ ಮಾಡ್ತ ಇದ್ರು*

*ಅಂಗಡಿ ಶೆಟ್ರಿಗೆ, ಊರ ಡಾಕ್ಟ್ರಿಗೆ, ಶಾಲಾ ಮಾಸ್ತರಿಗೆ ಮನೆಯವರೆಲ್ಲರ ಪರಿಚಯ ಮತ್ತು ವಿಷಯ ತಿಳಿದಿತ್ತು*

ಕಾಲ ಬದಲಾಗಿದ್ದು ಗೊತ್ತೇ ಆಗ್ಲಿಲ್ಲ... ಆದರೆ ನೆನಪುಗಳು ಇನ್ನೂ ಡಿಲೀಟ್ ಆಗಿಲ್ಲ.... ಡಿಲೀಟ್ ಆಗೊ ಮೊದಲು ಸಂದೇಶ....


...........

ವಾಟ್ಸ್ಯಾಪ್ ನಲ್ಲಿ ಬಂದ ಈ ಸಂದೇಶ ಇನ್ನಷ್ಟು ಸಂಗತಿಗಳನ್ನು ಮೆಲುಕು ಹಾಕುವಂತೆ ಮಾಡಿತು. ಬದುಕಿನಲ್ಲಿ ಪುಟ್ಟ ಪುಟ್ಟ ಖುಷಿಗಳನ್ನು ದೊಡ್ಡದನ್ನು ಪಡೆಯುವ ಧಾವಂತದಲ್ಲಿ, ವ್ಯಸ್ತರೆಂಬ ಭ್ರಮೆಯಲ್ಲಿ ಕಳೆದುಕೊಳ್ಳುತ್ತಿದ್ದೇವಲ್ವ...?


ಅದೇ 24 ಗಂಟೆಗಳ ದಿನ ಈಗಲೂ ಇರೋದು, ಅಷ್ಟೇ ವಿಸ್ತೀರ್ಣದ ಭೂಮಿ ಈಗಲೂ ಇರೋದು, ಅದೇ ಸೂರ್ಯ, ಅದೇ ಚಂದ್ರ, ಅದೇ ನೀರು (ಸ್ವಲ್ಪ ಕಲುಷಿತವಾಗಿರ್ಬಹುದು ಅಷ್ಟೇ)... ಆದರೆ, ಬದುಕಿನಲ್ಲಿ ದೊಡ್ಡೋರಾಗ್ತಾ ಹೋದಂತೆ ಆದ್ಯತೆಗಳು ಬದಲಾಗ್ತಾ ಹೋಗ್ತವೆ ಅನಿಸುತ್ತದೆ. ಅದು ಕಾಲ ಸಹಜವೂ ಇರಬಹುದು. ವಯೋಸಹಜವೂ ಇರಬಹುದು. ಮಗುವೊಂದು ಮುಗ್ಧವಾಗಿ ಅನುಭವಿಸುವ ಆನಂದವನ್ನು ದೊಡ್ಡವರು ನೋಡಿ ಖುಷಿ ಪಡಬಹುದೇ ವಿನಹ ಮತ್ತೊಮ್ಮೆ ಮಗುವಾಗಿ ಅಷ್ಟೇ ಖುಷಿ ಖುಷಿಯಾಗಿ ಆ ಆನಂದ ಪಡೆಯುವುದು ತುಸು ಕಷ್ಟವೇ ಇರಬಹುದೇನೋ...


ಸುಮ್ನೆ ಯೋಚಿಸಿ ನೋಡಿ...
ಗುಡ್ಡದಲ್ಲಿ ನಡೆಯುತ್ತಾ ಹೋಗುತ್ತಿದ್ದಾಗ ಕಾಲು ದಾರಿಯಲ್ಲಿ ಬಿದ್ದು ಸಿಕ್ಕಿದ ಗೇರು ಬೀಜ, ರಶ್ ಇರುವ ಬಸ್ಸಿನಲ್ಲಿ ನೇತಾಡ್ತಾ ಹೋಗುತ್ತಿದ್ದಾಗ ಏಕಾಏಕಿ ಕಿಟಕಿ ಪಕ್ಕದಲ್ಲೇ ಸೀಟು ಸಿಕ್ಕಿದ್ದು, ತುಂಬ ಸಾರಿ ರೇಡಿಯೋದ ಕೋರಿಕೆ ವಿಭಾಗಕ್ಕೆ ಪತ್ರ ಪತ್ರ ಬರೆದೂ ಬರೆದೂ ಸುಸ್ತಾಗಿ ಕೊನೆಗೊಂದು ದಿನ ನಿಮ್ಮ ಹೆಸರು, ಊರಿನ ಸಹಿತ ರೇಡಿಯೋದಲ್ಲಿ ಸವಿ ಸವಿಯಾಗಿ ಪ್ರಸಾರ ಆಗಿದ್ದು, ತುಂಬಾ ಬೋರ್ ಆಗ್ತಾ ಇದ್ದ ದಿನ ಅಕಸ್ಮಾತ್ತಾಗಿ ಬಾಲ ಮಂಗಳ ಓದಲು ಸಿಕ್ಕಿದ್ದು, ಯಾವತ್ತೋ ಕಳುಹಿಸಿದ ಪುಟ್ಟ ಚುಟುಕು ಕವಿತೆ ಪತ್ರಿಕೆಯ ಕೊನೆಯ ಪುಟದಲ್ಲಿ ಹೆಸರು ಸಹಿತ ಅಚ್ಚಾಗಿದ್ದು, ಜೋರಾಗಿ ಮಳೆ ಬರ್ತಾ ಇದ್ದಾಗ ಲಾಸ್ಟ್ ಪಿರಿಯಡ್ ಕಟ್ ಮಾಡಿ ಶಾಲೆಯಲ್ಲಿ ಲಾಂಗ್ ಬೆಲ್ ಆಗಿದ್ದು, ಜ್ವರ ಬರ್ತಾ ಇದೆ, ಇಂದು ಶಾಲೆಗೆ ಹೋಗಬೇಕಾಗಿಲ್ಲ ಅಂತ ಅನಿಸಿದ್ದು....ಹೊಸದಾಗಿ ಮೊಬೈಲ್ ತಗೊಂಡಾಗ ಅಪರೂಪಕ್ಕೊಂದು ಎಸ್ ಎಂಎಸ್ ಬಂದಿದ್ದು, ತಪ್ಪಿ ಯಾರೋ ಮಿಸ್ಡ್ ಕಾಲ್ ಮಾಡಿದ್ದು... ಹೀಗೆ ಹೀಗೆ ಬೇಕಾದಷ್ಟು ವಿಚಾರಗಳು ಪ್ರತಿಯೊಬ್ಬರ ಬದುಕಿನಲ್ಲೂ ಇರ್ತವೆ....


ತುಂಬಾ ಸಿಲ್ಲಿ ಸಿಲ್ಲಿ ಇರಬಹುದಾದ ಸಂದರ್ಭ, ಸಿಲ್ಲಿ ಸಿಲ್ಲಿ ಅನಿಸಬಹುದಾದ ಖುಷಿ... ಆದರೆ, ಬೆಚ್ಚಗಿನ ನೆನಪುಗಳಲ್ಲಿ ಅವಿತಿದ್ದು, ಯಾವತ್ತು ಹೊರ ತೆಗೆದರೂ ಮತ್ತೆ ಮತ್ತೆ ಮಧುರ ಮಧುರ ನೆನಪಾಗಿ ಕಾಡುವ ವಿಚಾರಗಳು ಅಂದ್ರೆ ನೀವೂ ಒಪ್ಪಿಕೊಳ್ತೀರಿ ಅಂದ್ಕೋತೇನೆ...

ಪರಿಸ್ಥಿತಿ, ನಿರೀಕ್ಷೆ, ವಯಸ್ಸು, ಕಾಲಮಾನ ಎಲ್ಲವೂ ಸೇರಿ ಖುಷಿಗೊಂದು ಹೊಸ ಭಾಷ್ಯ ಬರೆಯುತ್ತದೆ ಅನಿಸುತ್ತದೆ. ಚಿಕ್ಕವರಿದ್ದಾಗ ಹುಚ್ಚು ಕಟ್ಟಿ ಯಾರ್ಯಾರದ್ದೋ ಮನೆಗೆ ಹೋಗಿ ಬ್ಲ್ಯಾಕ್ ಆಂಡ್ ವೈಟ್ ಟಿ.ವಿ.ಯಲ್ಲಿ ಚಂದನ ವಾಹಿನಿಯಲ್ಲಿ ಭಾನುವಾರ ಸಂಜೆ 4 ಗಂಟೆಗೆ ಹೋಗಿ ನೋಡುತ್ತಿದ್ದ ಕನ್ನಡ ಸಿನಿಮಾ ಈಗ ನಮ್ಮದೇ ಮನೆಯ ಕಲರ್ ಟಿ.ವಿ.ಯಲ್ಲಿ ದಿನಕ್ಕೆ ನಾಲ್ಕಾರು ಬಂದರೂ ಕಂಪ್ಲೀಟ್ ನೋಡಲು ಯಾಕೆ ಇಷ್ಟ ಆಗುವುದಿಲ್ಲ....

ರಾತ್ರಿ ಚಾಪೆಯ ಮೇಲೆ ಲಾಟಿನ್ ಇಟ್ಟು ಪುಸ್ತಕ ಓದ್ತಾ ಇದ್ದರೆ ನಿದ್ದೆನೇ ಬರೋದಿಲ್ಲ ಎಂಬಂಥ ಪರಿಸ್ಥಿತಿಯಿದ್ದದ್ದು ಇಂದು ಯಾಕೆ ಪುಸ್ತಕಗಳು ಅಟ್ಟ ಸೇರಿವೆ...

ಇಡೀ ರಾತ್ರಿ ನಿದ್ರೆ ಗೆಟ್ಟು ಯಕ್ಷಗಾನ ನೋಡುತ್ತಿದ್ದಾಗ ಆಗದಿದ್ದ ಸುಸ್ತು, ಇಂದು ಯಾಕೆ ಕಾಲಮಿತಿಯ ಬಯಲಾಟ ನೋಡಿದಾಗಲೂ ಕಾಡುತ್ತದೆ...

ಹೊತ್ತಿಗೆ ಸರಿಯಾಗಿ ಬಸ್ಸು ಬಾರದಿದ್ದಾಗ ಗೊಣಗಿಕೊಂಡು ನಡೆಯುವವರು, ಅಂದು ಹೇಗೆ ಮೈಲುಗಟ್ಟಲೆ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದದ್ದು...

ಅಲ್ವ?

ಯೋಚಿಸಿ ನೋಡಿ..


ಆದ್ಯತೆಗಳು ಬದಲಾಗೋದು, ಒಂದು ಸಂದರ್ಭವನ್ನು ಸ್ವೀಕರಿಸುವ ಮನಸ್ಥಿತಿ ಬದಲಾಗಿರೋದು, ಅಪರೂಪಕ್ಕೆ ಸಿಗೋದೆಲ್ಲಾ ಬಯಸಿದಾಗ ಸಿಗೋದು, ಕಾದು ಕಾದು ಪಡೆಯುತ್ತಿದ್ದದ್ದು ಆನ್ ಲೈನ್ ಮೂಲಕ ಮನೆ ಬಾಗಿಲಿಗೇ ಬರೋದು...
ಅಪರೂಪಕ್ಕೆ ಬರ್ತಾ ಇದ್ದ ಎಸ್ಎಂಎಸ್ ನೀಡ್ತಾ ಇದ್ದ ಪುಳಕದ ಜಾಗಕ್ಕೆ ತಲೆ ಚಿಟ್ಟು ಹಿಡಿಸೋ ವಾಟ್ಸಪ್ ಗ್ರೂಪ್ ಮೆಸೇಜ್ ಗಳಂತಹ ಟ್ವೆಂಟಿಫೋರ್ ಸೆವೆನ್ ಮಾದರಿಯ ಸಂವಹನ ಜಾಲ ತಾಣಗಳು ದಾಳಿಯಿಟ್ಟಿದ್ದು ಅನಿವಾರ್ಯ ಕರ್ಮವೆಂಬಂತೆ ನಾವೂ ಅದರ ಭಾಗವಾಗಿರೋದು...

ಬೇಕಾಗಿಯೋ, ಬೇಕಾಗಿಲ್ಲದೆಯೋ ತಲೆ ಬಗ್ಗಿಸಿ ಚಾಟ್ ಮಾಡ್ತಾ ಬಿಝಿಯಾಗಿರೋವಂಥದ್ದು...


ಸುಮ್ಮನೆ ಕಡಲ ತಡಿಯಲ್ಲಿ ಕುಳಿತು ಬಂದು ಹೋಗುವ ಅಲೆಗಳನ್ನೇ ನೋಡ್ತಾ ಒಂದಷ್ಟು ತಿಳ್ಕೊಳ್ಳೋದು...
ಮುಂಜಾನೆ ಮಂಜಿನಲ್ಲಿ ನೆನೆದ ಗದ್ದೆಯ ಬದುವಿನ ಹುಲ್ಲಿನ ಮೇಲೆ ಬರಿಗಾಲಲ್ಲಿ ನಡೆಯೋದು..
ರಾತ್ರಿ ಮಲಗುವ ಮೊದಲು ರೇಡಿಯೋದಲ್ಲಿ ಕೂಲ್ ಕೂಲ್ ಆಗಿ ವಿವಿಧ್ ಭಾರತಿಯ ಹಾಡುಗಳನ್ನು ಕೇಳೋದು...
ಎಲ್ಲವನ್ನೂ ಮರೆತು ಪುಟಗಳು ಹಳದಿಯಾದ ಹಳೇ ವಾಸನೆ ಹೊತ್ತ ಪುಸ್ತಕದ ತುಂಬೆಲ್ಲಾ ಹರಡಿದ ಕಾದಂಬರಿ ಓದೋದು...
ಜಾತ್ರೆಯಲ್ಲಿ ಕಾಣುವ ತಿರುಗುವ ಗಿರಗಟ್ಲೆ ತೊಟ್ಟಿಲಲ್ಲಿ ಕುಳಿತು ಕೇಕೇ ಹಾಕೋದು...
ಇಂತಹ ಖುಷಿಗಳನ್ನು ಆಗಿಗಲಾದರೂ ಪಡೆಯಲಾಗದಷ್ಟು ಬಿಝಿ ಇರ್ತೇವಾ?
ನಾವು...
ಅಥವಾ ಮತ್ತದೇ ಪುರುಸೊತ್ತಿಲ್ಲದ ಜಗತ್ತಿನಲ್ಲಿ ಫಲಿತಾಂಶವೇ ಇಲ್ಲದ ವ್ಯಸ್ತರೆಂದುಕೊಂಡ ಬದುಕಿನ ಚಾಟ್ ಜಗತ್ತಿನಲ್ಲಿ ಕಳೆದು ಉದಾಸೀನರಾಗಿ ಹಲಬುವುದಕ್ಕೇ ಸೀಮಿತರಾಗಿಬಿಡಬೇಕ...


ಸುಮ್ಮನೆ ಚಿಂತಿಸಿ ನೋಡಿ....


Tuesday, November 29, 2016

ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ!


ನಮ್ಮ ಇಷ್ಟದ ಜೀವದ ಬಗ್ಗೆ ಇರುವ ಪೊಸೆಸಿವ್‌ನೆಸ್ ಅಥವಾ ವಿಪರೀತ ಕಾಳಜಿ, ನಿರೀಕ್ಷೆಯೇ ಮನಸ್ಸನ್ನು ಪ್ರಯೋಗಕ್ಕೆ ಇಡುತ್ತದೆ. ಒತ್ತಡದ ಬದುಕಿನಲ್ಲಿ ಜನ ವ್ಯಸ್ತರಾಗಿರುತ್ತಾರೆ ಅಂತ ಗೊತ್ತಿದ್ದರೂ ಸುಮ್ ಸುಮ್ನೇ ನಿರೀಕ್ಷೆಗಳನ್ನು ಇರಿಸಿರುತ್ತೇವೆ. ಅವನು ‘ಈ ಥರ ಅವಾಯ್ಡ್ ಮಾಡಿದ್ರೆ ಇನ್ನು ಮಾತನಾಡಲ್ಲ’ ಅಂತ ಕೈಗೊಳ್ಳುವ ಹುಸಿ ನಿರ್ಧಾರ ಮರೆತು ಎಂದಿಗಿಂತ ಹೆಚ್ಚು ಜಗಳ ಮಾಡುತ್ತೇವೆ. ಮಾತು ಬಿಡುತ್ತೇವೆ. ಮಾತು ಮುಂದುವರಿಸಲೇ ಸಿಟ್ಟು ಮಾಡುತ್ತೇವೆ! ಮರುದಿನ ಮತ್ತದೇ ನಿರೀಕ್ಷೆ, ತುಡಿತ, ಅವನ ಉಸಿರ ತಾಳದ ಲಯ ತಪ್ಪಿದೆಯೇ ಎಂದು ಪರೀಕ್ಷಿಸಿ ಹುಸಿ ಆತಂಕಕ್ಕೆ ದೂಡುವ ಮನಸ್ಸು...
-------------------------

ನಮಗೆ ಒಬ್ಬರು ಇಷ್ಟ ಅಂತ ಆದರೆ, ಅವರಿಗೆ ನೋವಾದರೆ, ಹುಶಾರಿಲ್ಲದಿದ್ದರೆ ಮನಸ್ಸಿನಲ್ಲೇ ಸಂಕಟ ಪಡ್ತೇವಲ್ವ?  ಅವರೆಷ್ಟೇ ಬೈದ್ರೂ ಮತ್ತೆ ಮತ್ತೆ ಮಾತನಾಡ್ತೇವಲ್ವ? ಅವರಿರುವ ಜಾಗವನ್ನೋ, ಅವರು ಇಷ್ಟಪಡುವುದನ್ನೋ ನಾವೂ ಪ್ರೀತ್ಸೋಕೆ ಶುರು ಮಾಡ್ತೇವಲ್ವ, ಇದಕ್ಕೆಲ್ಲ ಏನು ಹೆಸರು?
ಅವರು ನಮ್ಜೊತೆ ಸರಿಯಾಗಿ ಮಾತನಾಡದೆ ಇದ್ರೂ ಅವರ ನಾಲ್ಕಕ್ಷರದ ಒಂದು ಪದಕ್ಕೂ ಎಷ್ಟೊಂದು ಮಹತ್ವ ಕೊಟ್ಟು ಸಂಭಾಷಿಸುತ್ತೇವಲ್ವ? ಅವರು ಆದಷ್ಟು ನಮ್ಮ ಹತ್ರಾನೇ ಮಾತನಾಡಲಿ ಅಂತ ಆಶಿಸುತ್ತೇವಲ್ವ? ಅವರು ಅಂದಿದ್ದು ಮನಸಿಗೆ ನೋವಾದ್ರೂ ಅದನ್ನು ಅಷ್ಟೇ ಆನಂದದಿಂದ ಸ್ವೀಕರಿಸಿ ಅದರ ಬಗ್ಗೆ ಗಂಟೆಗಟ್ಟಲೆ ಮನಸ್ಸಿನಲ್ಲೇ ಗುದ್ದಾಡ್ತೇವಲ್ವ? ನಿಮಗೆ ಇಂತಹದ್ದೊಂದು ಭಾವನೆಗಳನ್ನು ತರುವ ಸ್ನೇಹಿತರಿದ್ದಾರಾ?
ಕಡೆಗೆ ಅವರಲ್ಲಿ ಮೆಟೀರಿಯಲಿಸ್ಟಿಕ್ ಆಗಿ ಕಾಣುವಂತಹ ಪ್ರಾಯ, ಬಣ್ಣ, ಉಡುಪು, ಅಂದ ಚೆಂದ, ಯಾವುದನ್ನೂ ಗಮನಿಸದೆ ಕೇವಲ ಅವರ ಮನಸ್ಸನ್ನೂ, ಅದರಲ್ಲಿ ನಮಗೋಸ್ಕರ ಇರಬಹುದಾದ ಒಲವೋ, ವಾತ್ಸಲ್ಯವೋ, ಕರುಣೆಯೋ, ಕನಿಷ್ಠ ಅನುಕಂಪವೋ ಯಾವುದನ್ನೋ ಅತ್ಯಂತ ಅಮೂಲ್ಯವಾದ ಖಜಾನೆ ಅಂತ ಪರಿಗಣಿಸ್ತೇವಲ್ವ, ಇದಕ್ಕೇನು ಹೇಳಬೇಕು?
ಹೇಳಿ ಕೇಳಿ ಬಾರದ ಅಕ್ಕರೆ: ಹೌದು, ಕಾರಣವೇ ಇಲ್ಲದೆ ಹುಟ್ಟಿಕೊಳ್ಳುವ ಅಭಿಮಾನದ ಜೊತೆಗೊಂದು ಅಕ್ಕರೆ, ಅದರ ಹಿಂದೆ ಒಂದಷ್ಟು ಪೊಸೆಸಿವ್‌ನೆಸ್ ಹಾಗೂ ನಿರೀಕ್ಷೆ ಎಲ್ಲ ಸೇರಿ ನಿಮ್ಮ ಆತ್ಮೀಯತೆಯ ಸಂವಹನದಲ್ಲೊಂದು ಪುಟ್ಟ ನೋವು, ಹತಾಶೆ ಆಗೀಗ ಕಾಡುವುದು ಸಹಜ.
ಆತ್ಮೀಯ ಜೀವವೊಂದು ನಮಕೋಸ್ಕರ ಹಿಡಿಯಷ್ಟು ಪ್ರೀತಿ, ಅರೆಕ್ಷಣ ಸಮಯ ಮೀಸಲಿಡಬೇಕು, ಮಾತಿಗೆ ಪ್ರತಿಕ್ರಿಯಿಸಬೇಕು, ಜೋಕಿಗೆ ನಗಬೇಕು, ಕಾತರಕ್ಕೊಂದು ಅಚ್ಚರಿಯ ನೋಟ ಕೊಡಬೇಕೆಂಬೆಲ್ಲಾ ನಿರೀಕ್ಷೆ ಸಹಜ. ಅದು ದಂಪತಿಯಿರಬಹುದು, ಸ್ನೇಹಿತರಿರಬಹುದು, ಮುಖ ಪರಿಚಯವೇ ಇಲ್ಲದ, ಭಾಷೆಯೇ ಅರಿಯದ ಆನ್‌ಲೈನ್ ಸ್ನೇಹಿತನಿರಬಹುದು. ಸಂಬಂಧದ ಹಿಂದಿನ ಕಾಳಜಿ, ನಿರೀಕ್ಷೆ ನಿರಾಸೆಯಾದಾಗ ಮೂಡ್ ಆಫ್ ಆಗುವುದು ಸಹಜ.
ಉತ್ತರ ಬಾರದಿದ್ರೆ ಅಸಹನೆ!:
ನೀವು ಮಾಡಿದ ಒಂದು ಮೆಸೇಜ್, ಹೋದ ಮಿಸ್ಡ್ ಕಾಲ್, ಈ ಮೇಲ್ ಯಾವುದಕ್ಕೂ ಒಂದಷ್ಟು ಗಂಟೆ ಪ್ರತಿಕ್ರಿಯೆಯೇ ಬಾರದೇ ಹೋದಾಗ ನಿಮ್ಮನ್ನು ಸಂಶಯ ಕಾಡುವುದು ಸಹಜ. ಅವನು ಸೇಫ್ ಆಗಿದ್ದಾನೆ ತಾನೆ? ತೊಂದರೆಗೆ ಸಿಲುಕಿಲ್ಲ ತಾನೆ? ಅಥವಾ ನನ್ನನ್ನು ಬಿಟ್ಟು ಇನ್ಯಾರ ಹತ್ರಾನೋ ಚಾಟ್ ಮಾಡ್ತಾ ಇರಬಹುದಾ? ಈಗೀಗ ನನ್ನನ್ನು ಅವಾಯ್ಡ್  ಮಾಡ್ತಾ ಇದ್ದಾನ? ಅಥವಾ ನಾನು ಮಾತನಾಡಿದ್ದು ಏನಾದರೂ ಹೆಚ್ಚು ಕಡಿಮೆಯಾಯ್ತ? ಇತ್ಯಾದಿ, ಇತ್ಯಾದಿ...
‘ಹಾಯ್‌‘ ಅಂತ ಬೆಳಗ್ಗೆ ಕಳಿಸಿದ ಮೆಸೇಜಿಗೆ ಸಂಜೆ ೬ ಗಂಟೆಯ ವೇಳೆಗೆ, ‘ಸಾರಿ ಬಿಝಿ ಇದ್ದೆ’ ಅಂತ ಮೂರು ಪದದ ಉತ್ತರ ಬಂದಾಗ ನಿರಾಳವಾದರೂ, ಸಿಟ್ಟು ಒದ್ದುಕೊಂಡು ಬರುತ್ತದಲ್ಲ, ಇದನ್ನು ಆಗಲೇ ಹೇಳಬಹುದಿತ್ತಲ್ವ ಅಂತ. ಪರಿಚಯವಾದಾಗ ಗಂಟೆಗಟ್ಟಲೆ ಮಾತನಾಡ್ತಾ ಇದ್ದವನು ಈಗ ಯಾಕೆ ನಾನು ಮಾತನಾಡಿಸಿದ್ರೆ ಮಾತ್ರ, ಅದೂ ಒತ್ತಾಯಕ್ಕೆಂಬಂತೆ ಉತ್ತರ ಕೊಡ್ತಾನೆ ಎಂಬ ವಿಮರ್ಶೆ ಬೇರೆ ಹುಟ್ಟಿಕೊಳ್ಳುತ್ತದೆ!
ಸುಲಭಕ್ಕೆ ಕಳಚಿಕೊಳ್ಳೋದಿಲ್ಲ: ಹುಚ್ಚು ಹುಚ್ಚೇ ಸಿಟ್ಟು, ಆತಂಕ ತರುವ ಬೆಚ್ಚನೆಯ ಸಂಬಂಧ ಹಾಗೆಲ್ಲಾ ತುಂಡಾಗುವುದಿಲ್ಲ ಬಿಡಿ. ನೀವು ಬೇಡ ಅಂದುಕೊಂಡರೂ ಆ ಭಾವ ಬೆಸುಗೆ ಮತ್ತೆ ನಿಮ್ಮನ್ನು ಹುಡುಕಿ ಕಟ್ಟಿ ಬಿಡುತ್ತದೆ.
ನಿಮಗೆ ಗೊತ್ತಾ?
-ಯಾರ ಜೊತೆಗೆ ಜಾಸ್ತಿ ಪ್ರೀತಿ ಇರುತ್ತದೋ ಅವರೊಂದಿಗೆ ಜಗಳವಾಗುವುದೂ ಜಾಸ್ತಿನೇ. ಅದು ಮೌಲ್ಯಕ್ಕೋಸ್ಕರ ಮಾಡುವ ಚರ್ಚೆಯೇ ಹೊರತು ದ್ವೇಷವಲ್ಲ.
-ನಾವು ಇಷ್ಟ ಪಡುವ ಜೀವ ನಮಗೋಸ್ಕರ ಸಮಯ ಮೀಸಲಿಡಬೇಕು ಎಂಬ ನಿರೀಕ್ಷೆಯೇ ನಮ್ಮೊಳಗೆ ತಳಮಳಗಳನ್ನು ಹುಟ್ಟುಹಾಕುವುದು. ಅವರ ಬಗ್ಗೆ ವಿಪರೀತ ಕಾಳಜಿಯನ್ನು ಇಟ್ಟುಕೊಂಡು ಸ್ವಲ್ಪ ಹೊತ್ತು ದೂರ ಹೋದಾಗಲೂ ವಿನಾ ಆತಂಕ ಮೂಡಿಸಿ ಕಾಡಿಸುವುದು.
-ಒಂದೊಮ್ಮೆ ಅರ್ಥ ಮಾಡಿಕೊಂಡು ಜೊತೆಗಿರುವ ಸ್ನೇಹಿತರು ಒಂದು ದಿನವೋ, ಒಂದು ವಾರವೋ ಮೂಡ್ ಬದಲಿಸಿದ್ದಾರೆ ಅಥವಾ ಮೌನವಾಗಿದ್ದಾರೆ ಎಂಬ ಮಾತ್ರಕ್ಕೆ ಅವರ ಸ್ವಭಾವ ಬದಲಾಗಿದೆ, ನಮ್ಮನ್ನು ವಂಚಿಸಿದ್ದಾರೆ, ದೂರವಿಟ್ಟಿದ್ದಾರೆ ಎಂದೆಲ್ಲಾ ದುಡುಕಿ ತೀರ್ಮಾನಿಸುವುದು ಖಂಡಿತಾ ಸರಿಯಲ್ಲ. ಅವರವರ ವೈಯಕ್ತಿಕ ಬದುಕು, ಪರಿಸ್ಥಿತಿ, ಸಂದರ್ಭಗಳು ತಾತ್ಕಾಲಿಕವಾಗಿ ಅವರನ್ನು ಹಾಗೆ ಮಾಡಿರಬಹುದು. ಅವನೇನು, ಹೇಗೆ ಅಂತ ಅಂತ ನನಗೆ ಗೊತ್ತಿದ್ದ ಮೇಲೆ ಯಾವತ್ತಿದ್ದರೂ ಅವನು ಹಾಗೇನೇ ಇರ್ತಾನೆ ಅನ್ನುವ ಧೈರ್ಯ ನಿಮಗಿದ್ದ ಮೇಲೆ ವೃಥಾ ಸಂಶಯ, ಭೀತಿಗೆ ಆಸ್ಪದವೇ ಇರಬಾರದು.
-ಸುಮ್ ಸುಮ್ನೇ ನಿಮ್ಮ ಪ್ರೀತಿಪಾತ್ರರ ಜೊತೆ ಕಾಲು ಕೆರೆದು ಜಗಳ ಮಾಡಿ, ಮಾತು ಬಿಟ್ಟ ಮೇಲೆ ಏನೋ ಕಳ್ಕೊಂಡ ಫೀಲ್ ಆವರಿಸಿಕೊಳ್ತಾ ಇದೆ, ಖಾಲಿ ಖಾಲಿ ಅನಿಸ್ತಾ ಇದೆ ಅಂತಾದ್ರೆ ಮತ್ತೊಮ್ಮೆ ಮಾತಡಬೇಕು ಎಂಬುದೇ ಅರ್ಥ. ಒಂದು ಪುಟ್ಟ ದುಡುಕು ಅಷ್ಟು ಕಾಲದ ದೀರ್ಘ ಸಂಬಂಧಕ್ಕೆ ಪೂರ್ಣವಿರಾಮ ಹಾಕಬಾರದಲ್ವ... ರಿಫ್ರೆಶ್ ಬಟನ್ ಥರ ಸಣ್ಣ ಸಣ್ಣ ಜಗಳಗಳು.
-ನೆನಪಿಟ್ಟುಕೊಳ್ಳಿ, ಕಾರಣವೇ ಇಲ್ಲದ ಆರಾಧನೆ, ಅಭಿಮಾನ, ಪ್ರೀತಿಯ ಋಣವನ್ನು ಎಂದಿಗೂ ತೀರಿಸಲಾಗದು. ಅವರಿಗೋಸ್ಕರ ಸ್ವಲ್ಪ ಸಮಯ ಮೀಸಲಿಟ್ಟು ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳುವುದು ದೊಡ್ಡ ಗುಣ. ಒಂದು ಬ್ಲಾಂಕ್ ಮೆಸೇಜು, ಮಿಸ್ಡ್ ಕಾಲು, ಮೌನ ಸಂಭಾಷಣೆಯೂ ಸಂಬಂಧದ ಕೊಂಡಿಯನ್ನು ತುಂಡಾಗದಂತೆ ಕಾಪಾಡುವ ನೋವು ನಿವಾರಕಗಳು ಎಂಬುದೂ ಗೊತ್ತಿರಲಿ.
-ಕೃಷ್ಣಮೋಹನ ತಲೆಂಗಳ.

Monday, November 28, 2016

ಗಡಿ ದಾಟಿ ಸದ್ದು ಮಾಡಿದೆ ‘ಕುಡ್ಲ’ದ ಭಾಷೆ!

ಒಂದು ಕಾಲವಿತ್ತು, ಮಂಗಳೂರು, ಉಡುಪಿ ಜಿಲ್ಲೆಗಳ ಭಾಷೆಯನ್ನು ಸಿನಿಮಾಗಳಲ್ಲಿ ಬಳಸುವುದೆಂದರೆ ಅದು- ‘ಎಂಥದು ಮಾರಾಯ’, ‘ಭಯಂಕರ ಉಂಟು ಗೊತ್ತುಂಟೊ?’ ಎಂಬಲ್ಲಿಗೆ ಸೀಮಿತವಾಗಿತ್ತು. ಇಂದು ಹಿರಿತೆರೆ, ಕಿರಿತೆರೆ ಎರಡರಲ್ಲೂ ಕರಾವಳಿ ಜಿಲ್ಲೆಗಳ ಕನ್ನಡ ಹಾಗೂ ಇಲ್ಲಿನ ಸೊಗಡು ತುಳು ಭಾಷೆಯನ್ನು ಒಂದು ಭಾಷಾ ಶೈಲಿಯಾಗಿ ಯಶಸ್ವಿಯಾಗಿ ಬಳಸಲಾಗುತ್ತದೆ. ಮಂಗಳೂರು ಕನ್ನಡವೆಂಬ ಪ್ರತ್ಯೇಕತೆಯ ಬದಲಿಗೆ ಕುಡ್ಲದ (ಮಂಗಳೂರಿನ) ಭಾಷೆಯನ್ನು ಮುಖ್ಯವಾಹಿನಿ ಆದರಿಸಿ ಪ್ರೀತಿಸತೊಡಗಿದೆ...
---------------------
ಮಂಗಳೂರು, ಉಡುಪಿ, ಕುಂದಾಪುರದ ಮಂದಿ ಬೆಂಗಳೂರಿಗೋ, ಮುಂಬೈಗೋ, ಗಲ್ಫಿಗೋ ಹೋದಾಗ ಪರಸ್ಪರ ಪರಿಚಯವಾಗಲು ಬೇರೇನೂ ಕೊಂಡಿ ಬೇಕಾಗಿಲ್ಲ. ಒಂದೇ ಭಾಷೆಯವರಿಬ್ಬರು ಪರವೂರಲ್ಲಿ ಸಿಕ್ಕಿದರೆ ‘ಈರ್ ಕುಡ್ಲದಾರ?’ (ನೀವು ಮಂಗಳೂರಿನವರ) ಎಂದು ಕೇಳಿದರೆ ಸಾಕು. ಸ್ನೇಹ ಬೆಳೆಯಲು ಬೇರೇನೂ ಬೇಡ.
 ಮಾತಿನಲ್ಲೇ ಪರವೂರ ಮಂದಿ ಕರಾವಳಿಗರನ್ನು ಗುರುತು ಹಿಡಿತಾರೆ, ಪದಗಳನ್ನು ಬಿಡಿಸಿ ಬಿಡಿಸಿ ಮಂಗಳೂರಿಗರು ಮಾತನಾಡುತ್ತಿದ್ದರೆ, ‘ನೀವು ಮಂಗ್ಳೂರವರ’ ಎಂದು ಕೇಳಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಮಂಗಳೂರಿಗರ ಗ್ರಾಂಥಿಕ ಶೈಲಿಯ ಕನ್ನಡ ಬಳಕೆಯೇ ಇದಕ್ಕೆ ಕಾರಣ. ಜೊತೆಗೆ ಮಂಗಳೂರಿನ ತುಳು, ಬ್ಯಾರಿ ಭಾಷೆ (ಮುಸ್ಲಿಮರು), ಕೊಂಕಣಿ ಹಾಗೂ ಕುಂದಾಪುರದ ಕುಂದ ಕನ್ನಡದಂತಹ ನಾಲ್ಕು ವಿಶಿಷ್ಟ ಭಾಷೆಗಳು ಈ ಮಂಗ್ಳೂರ ಕನ್ನಡ ಹಾಗೂ ಅದರೊಂದಿಗಿನ ಪದ ಬಳಕೆ ಮೇಲೆ ಅಗಾಧ ಪರಿಣಾಮ ಬೀರಿದೆ. ಮಂಗಳೂರಿಗರೂ ಕನ್ನಡಿಗರು ಹೌದು. ಆದರೆ ಯಾವುದೇ ಮಾತೃಭಾಷೆಯವನಾಗಿರಲಿ ತುಳು ಸಂಭಾಷಣೆಯನ್ನೇ ಹೆಚ್ಚು ಕಂಫರ್ಟೇಬಲ್ ಅಂದುಕೊಂಡಿರುತ್ತಾನೆ!
ಗಡಿ ದಾಟಿದೆ ಕುಡ್ಲದ ಭಾಷೆ: ಕಳೆದ ಕೆಲವು ವರ್ಷಗಳಿಂದ ಬಂದ ಸಿನಿಮಾಗಳು, ಕಿರಿತೆರೆ ಧಾರಾವಾಹಿಗಳೂ ಮಂಗ್ಳೂರಿನ ಕನ್ನಡ, ತುಳು ಶೈಲಿಯ ಸಂಭಾಷಣೆ, ಹಾಡಿನ ಸಾಹಿತ್ಯ ಬಳಸಿ ಯಶಸ್ವಿಯಾಗಿ ರಾಜ್ಯ ವ್ಯಾಪಿ ಪ್ರೇಕ್ಷಕರನ್ನು ತಲುಪಿದೆ. ಇತ್ತೀಚೆಗೆ ಬಂದ ‘ರಂಗಿತರಂಗ’ ಹಾಗೂ ‘ಉಳಿದವರು ಕಂಡಂತೆ’ ಚಿತ್ರಗಳು ಇದಕ್ಕೆ ಅತ್ಯಂತ ಯಶಸ್ವಿ ಉದಾಹರಣೆ. ಮಂಗಳೂರು ಮೂಲದವರು ಈ ಸಿನಿಮಾ ನಿರ್ಮಿಸಿದ್ದೂ ಇದಕ್ಕೆ ಕಾರಣವಿರಬಹುದು.
ಭಾಷೆಯನ್ನು ಅಪಭ್ರಂಶಗೊಳಿಸದೆ ಆಯಾ ಪ್ರಾದೇಶಿಕ ಸೊಗಡಿನಲ್ಲೇ ಕಟ್ಟಿಕೊಟ್ಟರೆ ಅದು ಯಾರನ್ನೂ ನೋಯಿಸುವುದಿಲ್ಲ, ಮಾತ್ರವಲ್ಲ ಪರವೂರ ಮಂದಿಗೂ ಆ ಭಾಷೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ‘ರಂಗಿತರಂಗ’ದಿಂದ ಮನೆ ಮಾತಾದ ‘ಡೆನ್ನಾನ ಡೆನ್ನಾನಾ.... ಗುಡ್ಡೇಡ್ ಭೂತಾ ಉಂಡುಗೇ...’ ಸಾಲುಗಳು ಕರಾವಳಿಯ ಜನಪ್ರಿಯ ‘ಪಾಡ್ದನ ಶೈಲಿ’ಯನ್ನು ಅಳವಡಿಸಿಕೊಂಡ ಹಾಡು.
ದಶಕದ ಹಿಂದೆ ಬಂದ ಗಣೇಶ್ ಅಭಿನಯದ ‘ಕೃಷ್ಣ’ ಚಿತ್ರದಲ್ಲಿ ‘ಗೊಲ್ಲರ ಗೊಲ್ಲ ಇವನು ಗೋಪಿ ಲೋಲ ಮುರಾರಿ...’ ಹಾಡಿನಲ್ಲೂ ಪಾಡ್ದನದ ಸಾಲುಗಳಿವೆ. ವಿ.ಮನೋಹರ್ ಸಂಗೀತ ನಿರ್ದೇಶನದ ಕಾರಂತರ ಕಾದಂಬರಿ ಆಧರಿಸಿದ ‘ಚಿಗುರಿದ ಕನಸು’ ಚಿತ್ರದಲ್ಲೂ ‘ಸಿಂಗಾರ ಕಣಕಣದಲ್ಲಿ...’ ಹಾಡಿನಲ್ಲೂ ತುಳು ಪಾಡ್ದನದ ಸಾಲುಗಳಿವೆ. ಕರಾವಳಿಯ ಯಕ್ಷಗಾನದ ಸ್ಟೆಪ್ ಹಾಗೂ ಹಾಡುಗಳನ್ನು ಬಳಸಿದ ಚಿತ್ರಗೀತೆಗಳಿಗೆ ಲೆಕ್ಕವಿಲ್ಲ.
ಕನ್ನಡಕ್ಕೆ ಸೀಮಿತವಲ್ಲ: ಈ ಪ್ರಯೋಗ ಸ್ಯಾಂಡಲ್ ವುಡ್‌ನಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ಹಿಂದಿ ಸಿನಿಮಾದಲ್ಲೂ ಗುಜರಾತಿ, ಮರಾಠಿ, ಬೆಂಗಾಳಿ, ಉರ್ದು , ತಮಿಳು, ಮಲೆಯಾಳಂ ಭಾಷೆಗಳನ್ನು ಸಮರ್ಥವಾಗಿ ಹಾಗೂ ಆಯಾ ಪ್ರಾದೇಶಿಕ ಸೊಗಡಿನಲ್ಲೇ ಬಳಸಲಾಗುತ್ತಿದೆ. ಪ್ರೇಕ್ಷಕರೂ ಅದನ್ನು ಸ್ವೀಕರಿಸಿದ್ದಾರೆ.
ಕನ್ನಡ ಸಿನಿ ರಂಗವೂ ಮಂಗ್ಳೂರು ಕನ್ನಡ, ಮಂಡ್ಯ ಕನ್ನಡ, ಧಾರವಾಡ ಕನ್ನಡಗಳ ಶೈಲಿ ಅಳವಡಿಸಿಕೊಂಡಿರುವುದು ಇದೇ ಫಾರ್ಮುಲಾ ಬಳಸಿಕೊಂಡು. ಗಂಗಾವತಿ ಪ್ರಾಣೇಶ್ ಅವರು ಉತ್ತರ ಕರ್ನಾಟಕ ಭಾಷೆಯಲ್ಲೇ ಜೋಕು ಹೇಳಿದರೂ ಜನ ನಗುವುದಕ್ಕೆ ಕಾರಣ ಆ ಶೈಲಿಯನ್ನು ಕೇಳಲು ರೂಢಿಯಾಗಿರುವುದರಿಂದ ಎನ್ನುವುದನ್ನು ಮರೆಯುವ ಹಾಗಿಲ್ಲ. ಜೊತೆಗೆ ಇಂತಹ ಭಾಷೆ ಬಳಸಿದ ಸಿನಿಮಾಗಳ ಮಾರುಕಟ್ಟೆಯೂ ಆಯಾ ಜಿಲ್ಲೆಗಳ ಗಡಿ ಮೀರಿ ವಿಸ್ತರಣೆಯಾಗುತ್ತಿದೆ.
ಮಂಗಳೂರು ಭಾಗದ ಕನ್ನಡ ಹಾಗೂ ತುಳುವಿನಲ್ಲಿ ಬಳಕೆಯಾಗುವ ‘ಬೋಡ ಶೀರಾ’, ‘ಎಂಚಿ ಸಾವುಯಾ’, ‘ಎಂಥ ಅವಸ್ಥೆ ಮಾರಾಯ...’ ಇತ್ಯಾದಿ ಪದಪುಂಜಗಳು ‘ಉಳಿದವರು ಕಂಡಂತೆ’ ಮತ್ತಿತರ ಚಿತ್ರಗಳಲ್ಲಿ ಧಾರಾಳ ಬಳಕೆಯಾಗಿವೆ. ಹಾಸ್ಯದ ಉದ್ದೇಶದಿಂದ ಕನ್ನಡ ಸಂಭಾಷಣೆಯ ಜೊತೆಗೇ ಇವನ್ನು ಬಳಸಲಾಗುತ್ತಿದೆ.
ಕಿರುತೆರೆಗೂ ಬಂತು: ಇದೇ ಮಾನದಂಡ ಇಟ್ಟುಕೊಂಡು ಕಿರುತೆರೆಯಲ್ಲೂ ಮಂಗ್ಳೂರ ಕನ್ನಡ, ತುಳು ಬಳಕೆಗೆ ಸಾಕಷ್ಟು ವೇದಿಕೆ ಕಲ್ಪಿಸಲಾಗಿದೆ.
ನಟ ಸೃಜನ್ ಲೋಕೇಶ್ ನಿರ್ಮಿಸುತ್ತಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಜಾ ಟಾಕೀಸ್’ನಲ್ಲಿ ಮಂಗಳೂರಿನ ನಟ ನವೀನ್ ಡಿ. ಪಡೀಲ್ ಕೆಲ ಕಾಲ ಭಾಗವಹಿಸಿ ಮಂಗ್ಳೂರ ಭಾಷೆ ಮಾತನಾಡಿದ್ದರು, ಪ್ರೇಕ್ಷಕರನ್ನು ನಗಿಸಿದ್ದರು. ಸುವರ್ಣ ವಾಹಿನಿಯಲ್ಲಿ ‘ಪಂಚರಂಗಿ ಪೋಂ ಪೋಂ’ ಧಾರಾವಾಹಿಯಲ್ಲಿ ನಟ ರಾಘವೇಂದ್ರ ರೈ ಅವರೂ ಇದೇ ಮಂಗ್ಳೂರ ಕನ್ನಡ ಬಳಸಿ ಗಮನ ಸೆಳೆದಿದ್ದರು. ಇದೇ ಮಾದರಿಯಲ್ಲಿ ಈಗ ‘ಮಂಗ್ಳೂರು ಹುಡುಗ, ಧಾರಾವಾಡ ಹುಡುಗಿ’ ಮಾದರಿಯ ಧಾರಾವಾಹಿಗಳು ಬರುತ್ತಿವೆ. ರಿಯಾಲಿಟಿ ಶೋಗಳಲ್ಲೂ ಅಷ್ಟೇ, ಮಂಗಳೂರು, ಉಡುಪಿ ಭಾಗದ ಸ್ಪರ್ಧಿಗಳು ತುಳುವಿನಲ್ಲೇ ಮಾತನಾಡುವುದು, ಇಲ್ಲಿನ ಕನ್ನಡ ಶೈಲಿ ಬಳಸುವುದೂ ಸಹಜವಾಗಿ ಹೋಗಿದೆ. ಝೀ ಕನ್ನಡದಲ್ಲಿ ಬರ್ತಾ ಇರುವ ‘ಕಾಮಿಡಿ ಕಿಲಾಡಿಗಳು’ ಎಪಿಸೋಡುಗಳಲ್ಲೂ ಮಂಗ್ಳೂರು ಕನ್ನಡ ಧಾರಾಳ ಬಳಕೆಯಾಗಿದ್ದು, ತೀರ್ಪುಗಾರರನ್ನೂ ಆಕರ್ಷಿಸಿದೆ.
ಹಿಂದೆಯೂ ಬಂದಿತ್ತು: ವರ್ಷಗಳ ಹಿಂದೆ ಬಂದ ಕಾಶಿನಾಥ್ ಅಭಿನಯದ ‘ಲವ್ ಮಾಡಿ ನೋಡು’ ಚಿತ್ರದ ನಾಯಕ ‘ಮಂಗಳೂರು ಮಂಜುನಾಥ’ನ ಮಾತು, ಉಪೇಂದ್ರ ಅಭಿನಯದ ‘ಬುದ್ಧಿವಂತ’ ಸಿನಿಮಾದ ನಾಯಕ ‘ನಾನವನಲ್ಲ, ನಾನವನಲ್ಲ’ ಅನ್ನುವಂಥ ಡೈಲಾಗ್‌ಗಳು ಜನಪ್ರಿಯವಾಗಿದ್ದವು.
ಯಶಸ್ಸಿನ ಹಿಂದಿರುವವರು...: ಒಂದು ಪ್ರದೇಶದ ಭಾಷೆಯನ್ನು ಅರ್ಧರ್ಧ ತಿಳಿದವರು ಬಳಸಿ ಹಾಸ್ಯ ಮಾಡುವುದಕ್ಕೂ, ಅದೇ ಊರಿನಿಂದ ಬಂದವರು ಸಮರ್ಥವಾಗಿ ಬಳಸುವುದಕ್ಕೂ ವ್ಯತ್ಯಾಸವಿದೆ. ಎರಡನೇ ವಿಭಾಗದಿಂದ ಈ ಭಾಷೆ ಉಳಿದವರಿಗೂ ಚೆನ್ನಾಗಿ ತಿಳಿಯುತ್ತದಲ್ಲದೆ, ಅಪಭ್ರಂಶವಾಗುವುದು ತಪ್ಪುತ್ತದೆ. ಕರಾವಳಿ ಭಾಗದಿಂದ ಹೋದ, ಮಂಗ್ಳೂರು ಭಾಷೆಯನ್ನು ಹತ್ತಿರದಿಂದ ಬಲ್ಲ ಗುರುಕಿರಣ್, ವಿ.ಮನೋಹರ್, ರಕ್ಷಿತ್ ರೈ, ಅನೂಪ್ ಭಂಡಾರಿ ಮತ್ತಿತರ ಪ್ರತಿಭೆಗಳೂ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿವೆ.

--------------

ಕನ್ನಡ ಇಂಡಸ್ಟ್ರಿಯಲ್ಲಿ ತುಳುವಿನವರೂ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಇಂತಹ ಬದಲಾವಣೆ ಆಗುತ್ತಿದೆ. ಅನೂಪ್ ಭಂಡಾರಿ ಮತ್ತಿತರರು ಕರಾವಳಿಯವರೇ ಆಗಿರುವುದರಿಂದ ಇಂತಹ ಪ್ರತಿಭಾವಂತರಿಗೆ, ಹುಟ್ಟಿದ ನಾಡಿಗೆ ಕೊಡುಗೆ ಕೊಡಬೇಕು ಎಂಬ ತುಡಿತ ಇರುವುದರಿಂದ ಇಂತಹ ಪ್ರಯೋಗ ಮಾಡಿದ್ದಾರೆ. ಮಂಗಳೂರು ಭಾಗದ ಪ್ರೇಕ್ಷಕರಿಗೆ ಇಷ್ಟವಾದ ವಿಷಯವನ್ನು ಇಡೀ ರಾಜ್ಯದ ಮಾಸ್ ಆಡಿಯನ್ಸ್‌ಗೆ ತಲುಪಿಸುವಲ್ಲಿ ಇಂತಹ ಪ್ರಯೋಗ ಸಹಕಾರಿ. ಈಗ ಕನ್ನಡದವರೂ ತುಳುವಿನ ವಿಶೇಷ ಡಯಲಾಗ್ ಬಂದರೆ ಕೇಳಲು ಆಸಕ್ತಿ ತೋರಿಸುತ್ತಾರೆ. ಸಾಹಿತ್ಯಿಕವಾಗಿ ಒಂದು ಭಾಷೆಯವರು ಮತ್ತೊಂದು ಭಾಷೆಯನ್ನು ಪ್ರೀತಿಸಬೇಕು. ಅದು ಭಾಷೆಗಳ ಬೆಳವಣಿಗೆಗೆ ಸಹಕಾರಿ.
-ಶಶಿರಾಜ್ ಕಾವೂರು, ತುಳು ಚಿತ್ರಸಾಹಿತಿ.
----------
-ಕೃಷ್ಣಮೋಹನ ತಲೆಂಗಳ.

Sunday, November 6, 2016

ಬಲ್ಲಿರೇನಯ್ಯ? "ಯಕ್ಷಕೂಟ"ಕ್ಕೆ ಎರಡರ ಸಂಭ್ರಮ!


ಯಕ್ಷಗಾನವನ್ನು, ಕ್ರಿಕೆಟನ್ನು, ಪ್ರವಾಸವನ್ನು, ಅದರ ಅನುಭವವನ್ನು ನಾಲ್ಕಾರು ಮಂದಿಯ ಜೊತೆ ಹಂಚಿಕೊಂಡು ಸವಿದಾಗ ರುಚಿ ಜಾಸ್ತಿ. ನೀವು ಬರ್ತೀರ, ನೀವು ಬರ್ತೀರ ಅಂತ ಹೋಗೋಕಿಂತ ಮೊದಲು ಕೇಳೋದು, ಹಾಗಿತ್ತು, ಹೀಗಿತ್ತು ಅಂತ ಹೋಗಿ ಬಂದ ಮೇಲೆ ಹೇಳ್ಕೊಳ್ಳೋದು, ಅದರ ಬಗ್ಗೆ ಚರ್ಚೆ ಮಾಡುವುದು, ಫೋಟೊಗಳನ್ನು ಹಂಚಿಕೊಳ್ಳುವುದರಿಂದ ಆಟಕ್ಕೆ, ಪ್ರವಾಸಕ್ಕೆ, ಕ್ರಿಕೆಟ್ ಮ್ಯಾಚು ನೋಡೋದಿಕ್ಕೆ ಹೋದ ಸಂತೋಷ ಇಮ್ಮಡಿಯಾಗಲು ಸಾಧ್ಯ. ನಮ್ಮ ನಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ಗಂಟೆಗಟ್ಟಲೆ ಮಾತನಾಡಿದರೂ ಅದು ಸುಸ್ತೆನಿಸುವುದಿಲ್ಲ. ಅದೇ ಕಾರಣಕ್ಕೆ ನಮ್ಮ ಯಕ್ಷಗಾನದ ವಾಟ್ಸಪ್ ಗ್ರೂಪು ಯಶಸ್ವಿಯಾಗಿರುವುದು. ಅದು ಆರಂಭವಾಗಿ ಎರಡು ವರ್ಷ ಪೂರ್ತಿಯಾಯಿತು ಎಂಬ ಸಾರ್ಥಕತೆಯ ಜೊತೆಗೆ ಭರ್ತಿ 256ಕ್ಕೆ 256ರ ಕ್ವೋಟಾ ಭರ್ತಿಯಾಗಿದೆ ಎಂಬ ಸಂತೋಷವೂ ಜೊತೆಗಿದೆ....


ಎರಡು ವರ್ಷಗಳ ಹಿಂದೆ 2014ರಲ್ಲಿ, ವಾಟ್ಸಪ್ ಪ್ರವರ್ಧಮಾನಕ್ಕೆ ಬಂದು ಕೆಲವು ತಿಂಗಳುಗಳಾದ ಸಂದರ್ಭವದು. ಆಗ (ಅಕ್ಟೋಬರ್ ವೇಳೆಗೆ) ಯಕ್ಷಗಾನಕ್ಕೆ ಸಂಬಂಧಿಸಿದ ನಾಲ್ಕೈದು ಗ್ರೂಪುಗಳಿದ್ದಾವು (ಸರೀ ಮಾಹಿತಿಯಿಲ್ಲ). ನವೆಂಬರಿನಲ್ಲಿ ಯಕ್ಷಗಾನ ಮೇಳಗಳು ತಿರುಗಾಟಕ್ಕೆ ಹೊರಡುವ ಸಮಯ. ರಾತ್ರಿ ಪಾಳಿಯ ಕೆಲಸವಾದರೂ (ಮಂಗಳೂರಿನಲ್ಲಿ) ಕೆಲಸದ ಬಳಿಕ ನಗರದಲ್ಲೆಲ್ಲಾದರೂ ಬಯಲಾಟವಿದ್ದರೆ ಹೋಗುವ ಹವ್ಯಾಸವಿತ್ತು. ಆಗ ಪತ್ರಕರ್ತ ಮಿತ್ರರಲ್ಲಿ, ಇಂದು ಇಂತಹ ಕಡೆ ಆಟವಿದೆ, ಹೋಗುವನಾ ಎಂದು ಕೇಳುವ ಕ್ರಮ. ಸಮಾನ ಮನಸ್ಕ ನಾಲ್ಕೈದು ಮಂದಿ ಪತ್ರಕರ್ತ ಮಿತ್ರರಿದ್ದರು. ಅವರನ್ನು ಕೇಳಬೇಕಾದರೆ ಒಂದೋ ಪ್ರತ್ಯೇಕ ಎಸ್ ಎಂಎಸ್ ಮಾಡಬೇಕು ಅಥವಾ ಗ್ರೂಪ್ ಎಸ್ ಎಂಎಸ್ ಮಾಡಬೇಕು. ಇದೆಲ್ಲ ರಗಳೆ ಯಾಕೆ ಎಂದುಕೊಂಡು ಆಗ ತಾನೇ ಕಲಿತ ವಿದ್ಯೆ ವಾಟ್ಸಪ್ ಗ್ರೂಪು ಹುಟ್ಟು ಹಾಕುವ ಪ್ರಯತ್ನವಾಯಿತು. ಕೇವಲ ಐದೋ, ಆರು ಮಂದಿಯನ್ನು ಸೇರಿಸಿ ... ಇಂದು ಇಂತಹ ಕಡೆ ಬಯಲಾಟವಿದೆ ಹೋಗುವನಾ... ಎಂದು ಕೇಳುವ ಒಂದೇ ಉದ್ದೇಶದಿಂದ ಬಲ್ಲಿರೇನಯ್ಯ ಯಕ್ಷಗಾನ ಗ್ರೂಪು ಹುಟ್ಟಿಕೊಂಡಿತು.

ಸ್ನೇಹಿತರಿಗೆ (ಅವರಲ್ಲಿ ಬಹುತೇಕ ಎಲ್ಲರೂ ಇಂದಿಗೂ ಈ ಗ್ರೂಪಿನಲ್ಲಿ ಇದ್ದಾರೆ) ಈ ಪ್ರಯತ್ನ ಇಷ್ಟವಾಯಿತು. ನನ್ನ ಇಂತಹ ಒಬ್ಬ ಸ್ನೇಹಿತ ಇದ್ದಾನೆ ಅವನನ್ನು ಸೇರಿಸಿ ಎಂಬ ಕೋರಿಕೆ ಬಂತು. ಅವರನ್ನು ಸೇರಿಸಿದ್ದಾಯಿತು. ಪ್ರತಿಯೊಬ್ಬರೂ ಅವರವರ ಯಕ್ಷಗಾನ ಮರ್ಲ್ ಇರುವ ಸ್ನೇಹಿತರ ಹೆಸರು ಸೇರಿಸಲು ಕೋರಿದರು. ಅವರು ನಂತರ ಅವರ ಸ್ನೇಹಿತರನ್ನು ರೆಫರ್ ಮಾಡಿದರು... ಈಗ ಸಂಖ್ಯೆ 10,20,30 ದಾಟ ತೊಡಗಿತು. ನಡು ನಡುವೇ ನಾನೇ ಕೆಲವು ಯಕ್ಷಗಾನ ಪ್ರಿಯ ಪರಿಚಿತರನ್ನು ಕಂಡಾಗ ಗ್ರೂಪಿಗೆ ಸೇರಿಸುವುದಾ ಎಂದು ಕೇಳಿ ಸೇರಿಸಿದೆ. ಹೀಗೆ....40,50ರ ಹಾಗೆ ಸಂಖ್ಯೆ ಹೆಚ್ಚುತ್ತಾ ಹೋಗಿ ಕೊನೆಗೆ ಮಾರ್ಚ್ ವೇಳೆಗೆ ಅದು 100 ದಾಟಿತು (ಆಗ ಗುಂಪಿನ ಗರಿಷ್ಠ ಸಂಖ್ಯೆ 100). ಆಗ ಎರಡನೇ ಗ್ರೂಪ್ ಆರಂಭಿಸಲಾಯಿತು. ಆ ಹೊತ್ತಿಗೆ ಬಹಳಷ್ಟು ಯಕ್ಷಗಾನ ಗ್ರೂಪುಗಳು ಪ್ರವರ್ಧಮಾನಕ್ಕೆ ಬಂದಿದ್ದವು. ಆದರೂ ಬಹಳಷ್ಟು ಮಂದಿ ನನ್ನ ಪರಿಚಿತರು, ಅಪರಿಚಿತರೂ ಗ್ರೂಪಿಗೆ ಯಾರ್ಯಾರದ್ದೋ ಶಿಫಾರಸಿನ ಮೇರೆಗೆ ಸೇರಿದ್ದರು.

ಎರಡು ಗ್ರೂಪುಗಳಲ್ಲಿ ಸಮಾನವಾಗಿ ಪೋಸ್ಟ್ ಗಳನ್ನು ಶೇರ್ ಮಾಡುವುದಕ್ಕಿಂತ ಹೈಕ್ ಮೆಸೆಂಜರಿನಲ್ಲಿ ಸಂವಹನ ಸುಲಭವಾಗಬಹುದು ಎಂದುಕೊಂಡು ಬಲ್ಲಿರೇನಯ್ಯ ಹೈಕ್ ಗ್ರೂಪು ರೂಪಿಸಿದರೂ ಅದು ಯಶಸ್ವಿಯಾಗಲಿಲ್ಲ. ಎಲ್ಲರೂ ವಾಟ್ಸಪ್ ಗೆ ಒಗ್ಗಿ ಹೋಗಿದ್ದರು. ಮತ್ತೆ ವಾಟ್ಸಪ್ ಕೃಪೆಯಿಂದ ಗುಂಪಿನ ಗರಿಷ್ಠ ಸಂಖ್ಯೆ 256ಕ್ಕೇರಿದಾಗ ನಿಟ್ಟುಸಿರುಬಿಟ್ಟೆವು. ಈಗ ಗುಂಪು ತುಂಬಿದೆ, ಭರ್ತಿ 256 ಮಂದಿ ಇದ್ದಾರೆ.
ಗುಂಪು ಬೆಳೆಯುತ್ತಾ ಹೋದಾಗ ಬಹುತೇಕ ಮೂಕ್ಕಾಲು ಪಾಲು ಮಂದಿ ಅಪರಿಚಿತರಾಗಿದ್ದರು. ಗುಂಪಿನಲ್ಲಿ ಮಾತನಾಡುತ್ತಾ ಮಾತನಾಡುತ್ತಾ ಯಕ್ಷಗಾನದ ಹೆಸರಿನಲ್ಲಿ ಪರಿಚಿತರಾಗಿದ್ದಾರೆ. ಇನ್ನಷ್ಟು ಮಂದಿ, ಸುಮಾರು 100ರಷ್ಟು ಮಂದಿ ಯಾವತ್ತೂ ಪ್ರತಿಕ್ರಿಯೆ ನೀಡುವುದೇ ಇಲ್ಲ. ಹಾಗಂತ ಅವರು ನಿಷ್ಕ್ರಿಯರಲ್ಲ. ಸದಾ ಚಟುವಟಿಕೆಗಳನ್ನು ಗಮನಿಸುತ್ತಲೇ ಇರುತ್ತಾರೆ. ಅದು ಗಮನಕ್ಕೆ ಬಂದಿದೆ. ಎಲ್ಲರೂ ಒಂದಲ್ಲಾ ಒಂದು ವೃತ್ತಿನಿರತರಾಗಿರುವುದರಿಂದ ಅವರದೇ ರೀತಿಗಳಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಎಂಬುದು ಸಂತೋಷದ ಸಂಗತಿ.ಶಿಸ್ತು ಸಂಯಮಿಗಳ ಸಂಗಮ


ನಮ್ಮ ಬಳಗ 10ರಲ್ಲಿ ಹನ್ನೊಂದಾಗಬಾರದು ಎಂಬ ಸದುದ್ದೇಶ ಸದಾ ಜೊತೆಗಿದ್ದೇ ನಡೆಯುತ್ತಿದೆ. ಗುಂಪಿನ ಉದ್ದೇಶ ತುಂಬಾ ಸರಳ. ಯಕ್ಷಗಾನದ ಕುರಿತ ಪೂರ್ವ ಮಾಹಿತಿಗಳನ್ನು ಹಂಚಿಕೊಳ್ಳುವುದು, ನಡೆಯುತ್ತಿರುವ ಯಕ್ಷಗಾನದ ಫೋಟೊ, ಆಡಿಯೋ, ವಿಡಿಯೋಗಳನ್ನು ತಕ್ಷಣ ಹಂಚಿಕೊಳ್ಳುವ ಮೂಲಕ ನೇರ ಪ್ರಸಾರ ನೀಡುವುದು ಮತ್ತು ಯಕ್ಷಗಾನಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಯಾವುದೇ ಮಾಧ್ಯಮದಿಂದ ಇಲ್ಲಿ ಹಂಚಿಕೊಳ್ಳುವುದು. ಉಳಿದಂತೆ ಜನ್ಮದಿನದ ಶುಭಾಶಯಗಳು, ಜೋಕುಗಳು ಸೇರಿದಂತೆ ಇನ್ಯಾವುದೇ ವಿಚಾರ ಹಂಚುವುದು ಇಲ್ಲಿ ನಿಷಿದ್ಧ. ಗುಂಪಿನ ನಿಮಯಗಳನ್ನು ಎಲ್ಲರೂ ಪಾಲಿಸುತ್ತಿರುವುದರಿಂದ ಇಲ್ಲಿ ಶಿಸ್ತು ಮನೆ ಮಾಡಿದೆ. ಗುಂಪು ಶಿಸ್ತುಬದ್ಧವಾಗಿರಬೇಕು ಎಂಬ ಕಾರಣಕ್ಕೆ ಕೆಲವು ಅಂಶಗಳನ್ನು ಎರಡು ವರ್ಷಗಳಿಂದಲೂ ಪಾಲಿಸಲಾಗುತ್ತಿದೆ.


-ಗುಂಪಿಗೆ ಸೇರುವ ಪ್ರತಿಯೊಬ್ಬರನ್ನೂ ಎಲ್ಲರಿಗೂ ಪರಿಚಯಿಸಿಯೇ ಸೇರಿಸಲಾಗುತ್ತದೆ. ಅನಾಮಧೇಯರಾದವರನ್ನು ತಕ್ಷಣಕ್ಕೆ ಸೇರಿಸುವುದಿಲ್ಲ
-ಸೇರ್ಪಡೆಯಾದ ಪ್ರತಿಯೊಬ್ಬರಿಗೂ ಗುಂಪಿನ ನಿಯಮಗಳನ್ನು ವೈಯಕ್ತಿಕ ಸಂದೇಶದ ಮೂಲಕ ಕಳುಹಿಸಲಾಗುತ್ತದೆ.
-ಗುಂಪಿನ ಪ್ರತಿಯೊಬ್ಬರ ಹೆಸರೂ ಅಡ್ಮಿನ್ ಬಳಿ ಸೇವ್ ಆಗಿರುತ್ತದೆ.
-ಯಾವುದೇ ಆಡಿಯೋ, ವಿಡಿಯೋ, ಫೋಟೊಗಳನ್ನು ವಿವರ ಇಲ್ಲದೆ ಬೇಕಾಬಿಟ್ಟಿ ಶೇರ್ ಮಾಡದಿರುವಂತೆ ಸೂಚಿಸಲಾಗಿದೆ. ಆ ಮೂವರ ಮಾಹಿತಿ ಎಲ್ಲರನ್ನೂ ತಲಪುತ್ತದೆ.

-ಇತರ ಗ್ರೂಪುಗಳು ಅಥವಾ ಫೇಸ್ ಬುಕ್ ನಿಂದ ಮಾಹಿತಿ ಹಂಚುವುದಿದ್ದರೆ ಕೃಪೆ ಎಂದು ಕೃತಜ್ಞತೆ ಸೂಚಿಸಲು ಕೋರಲಾಗಿದೆ.
-ಕಲಾವಿದರ ವೈಯಕ್ತಿಕ ನಿಂದನೆ, ಕೆಲವೇ ನಿಗದಿತ ಕಲಾವಿದರ ಹೊಗಳಿಕೆ, ಅತಿರೇಕದ ಆರಾಧನೆಗೆ ಅವಕಾಶವಿಲ್ಲ. ಎಲ್ಲರೂ, ಎಲ್ಲದಕ್ಕೂ ಸಮಾನ ಗೌರವ ಇರಬೇಕು.
-ಇಲ್ಲಿ ಹಂಚಿಕೊಳ್ಳುವ ಪೋಸ್ಟುಗಳಿಗೆ ಮಿತಿಯಿಲ್ಲ. ಯಕ್ಷಗಾನವೆಂದರೇ ಗೌಜಿ. ಹಾಗಾಗಿ ಮೇಳಗಳ ತಿರುಗಾಟದ ಸಂದರ್ಭ ಗುಂಪು ಗಿಜಿಗುಟ್ಟುತ್ತಿರುತ್ತದೆ. ಆದರೆ ಯಾವುದೇ ಪೋಸ್ಟುಗಳು ವಿವರ ಸಹಿತ ಇರಬೇಕು ಅಷ್ಟೆ. ಒಂದು ಆಟಕ್ಕೆ ಹೋಗಿದ್ದರೆ ಅದರ ಮಾಹಿತಿ ನೀಡದೆ ಕೇವಲ ಆಡಿಯೋ ಹಾಗುತ್ತಿದ್ದರೆ ಅದು ಯಾರನ್ನೂ ತಲಪುವುವಿಲ್ಲ.
- ಗ್ರೂಪಿನಲ್ಲಿ ವಾಯ್ಸ್ ಕ್ಲಿಪ್ ಶೇರ್ ಮಾಡುವುದನ್ನು ಕಡ್ಡಾಯ ನಿಷೇಧಿಸಲಾಗಿದೆ. ಅದು ಆಟೋ ಡೌನ್ ಲೋಡ್ ಆಗುವುದರಿಂದ ಈ ಕಳಕಳಿ. ಆಗೊಮ್ಮೆ, ಈಗೊಮ್ಮೆ ಇದರ ಉಲ್ಲಂಘನೆ ಆದರೂ ಬಹುತೇಕ ಎಲ್ಲರೂ ಪಾಲಿಸುತ್ತಿದ್ದಾರೆ.


ಗುಂಪು ಕಟ್ಟಿದವರು ಹಲವರು


ಬಲ್ಲಿರೇನಯ್ಯ ಯಕ್ಷಕೂಟವನ್ನು ಪೋಷಿಸಿ ಬೆಳೆಸಿದವರು ಹಲವರು. ಯಾರ ಹೆಸರನ್ನೂ ಇಲ್ಲಿ ಉಲ್ಲೇಖಿಸುವುದಿಲ್ಲ. ಪಟ್ಟಿ ದೊಡ್ಡದಿದೆ. ಎರಡು ವರ್ಷಗಳಿಂದ ನಿರಂತರವಾಗಿ ಗ್ರೂಪಿನಲ್ಲಿರುವುವವರು ಹಲವರು. ಅವರ ಬದ್ಧತೆ ಬಹಳ ದೊಡ್ಡದು. ಇಂದಿಗೂ ಅದೇ ಉತ್ಸಾಹದಿಂದ ಗುಂಪಿನಲ್ಲಿ ಪೋಸ್ಟುಗಳನ್ನು ಹಂಚಿಕೊಂಡು ಪೋಷಿಸುತ್ತಿದ್ದಾರೆ. ಎರಡು ವರ್ಷಗಳಲ್ಲಿ ಯಾವುದೇ ಜಗಳ, ವೈಮನಸ್ಸು ಇಲ್ಲಿ ಆಗಿಲ್ಲ ಎಂದು ಹೇಳಲು ತುಂಬಾ ಸಂತೋಷವಿದೆ. ವೈಯಕ್ತಿಕ ಕಾರಣಗಳಿಂದ ಸುಮಾರು 30, 40 ಮಂದಿ ಗ್ರೂಪ್ ಬಿಟ್ಟಿದ್ದಾರೆ. ಅದರಲ್ಲಿ ಹಲವರು ಮತ್ತೆ ಸೇರಿದ್ದಾರೆ. ತುಂಬ ಮಂದಿ ತಾತ್ಕಾಲಿಕವಾಗಿ ಗ್ರೂಪ್ ಬಿಡುವಾಗ ಮತ್ತೆ ಬರುತ್ತೇನೆ, ಸ್ಥಾನ ಕಾದಿರಿಸಿ ಎಂದು ಹೇಳುವಷ್ಟ ಔದಾರ್ಯ ತೋರಿದ್ದಕ್ಕೆ ನಾನು ಸಾಕ್ಷಿ.
ಇಲ್ಲಿ ತುಂಬ ಮಂದಿ ಪತ್ರಕರ್ತರಿದ್ದಾರೆ, ವೈದ್ಯರಿದ್ದಾರೆ, ಶಿಕ್ಷಕರಿದ್ದಾರೆ, ಟೆಕ್ಕಿಗಳಿದ್ದಾರೆ, ಹತ್ತು ಹಲವು ಪಾಳಿಗಳಲ್ಲಿ ಹತ್ತು ಹಲವು ಕೆಲಸ ಮಾಡುತ್ತಾ ಯಾವ್ಯಾವುದೋ ಊರಲ್ಲಿರುವವರಿದ್ದಾರೆ. ಗುಂಪಿಗೆ ಮಾರ್ಗದರ್ಶಕರಾಗಿ ಹವ್ಯಾಸಿ, ವೃತ್ತಿಪರ ಭಾಗವತರು, ಹವ್ಯಾಸಿ ಕಲಾವಿದರಿದ್ದಾರೆ. ಬೆಂಗಳೂರಿನಲ್ಲಿರುವವರೇ ಸುಮಾರು 40,50 ಮಂದಿ ಇದ್ದಾರೆ. ಅಮೆರಿಕಾ, ಗಲ್ಫ್ ನಲ್ಲಿರುವ ಸದಸ್ಯರೂ (ಊರಿನಿಂದ ಹೋದವರು) ಇದ್ದಾರೆ. ಗಣ್ಯ ಬರಹಗಾರರು, ಚಿಂತಕರು, ಯುವಕರು, ವಯಸ್ಕರು, ಮಹಿಳೆಯರು ಎಲ್ಲಾ ವರ್ಗದವರೂ ಇದ್ದಾರೆ. ತುಂಬ ಮಂದಿ ವೈಯಕ್ತಿಕವಾಗಿ ಪರಿಚಿತರಲ್ಲ. ಆದರೆ ಯಕ್ಷಗಾನದ ಹೆಸರು ಬಂದಾಗ ಒಂದೇ ಕುಟುಂಬದವರ ಥರ.

ನಮ್ಮ ಈ ಯಕ್ಷಕೂಟ ವಿಶಿಷ್ಟವಾದದ್ದು, ಎಲ್ಲಿಯೂ ಇಲ್ಲದಂಥದ್ದು ಅಂಥ ಹೇಳುವುದಿಲ್ಲ. ಈ ಕಾಲಘಟ್ಟದಲ್ಲಿ ವಾಟ್ಸಪ್ ಗ್ರೂಪುಗಳು ಸಾಕಷ್ಟಿವೆ. ಯಶಸ್ವಿಯಾಗಿ ಯಕ್ಷಗಾನ ಕೂಟಗಳನ್ನು ಹಮ್ಮಿಕೊಂಡಿವೆ, ಕಲಾಸೇವೆ ಮಾಡುತ್ತಿವೆ. ಈ ಮೂಲಕ ಗಮನ ಸೆಳೆದಿವೆ.
ಆದರೆ, ಶಿಸ್ತು, ಸಂಯಮ ಹಾಗೂ ವಿಷಯಕ್ಕೆ ಪೂರಕವಾಗಿಯೇ ಗುಂಪು ಬೆಳೆಯಬೇಕು. ಯಕ್ಷಗಾನ ಮಾಹಿತಿ ವಿನಿಮಯ ಎಂಬ ಸರಳ ತತ್ವವೇ ಮುಂದೆಯೂ ಗ್ರೂಪು ಬೆಳೆಯಲು ಟಾನಿಕ್ ಆಗಬೇಕು ಎಂಬ ಕಳಕಳಿ ನನ್ನದು.
ದೊಡ್ಡ ದೊಡ್ಡ ಯಕ್ಷಗಾನ ಗ್ರೂಪುಗಳ ಅಡ್ಮಿನ್ ಗಳು ನಮ್ಮ ಗ್ರೂಪಿನಲ್ಲೂ ಇದ್ದಾರೆ. ಡಾ.ಪದ್ಮನಾಭ ಕಾಮತ್ ಅವರು, ಲಕ್ಷ್ಮಿ ಮಚ್ಚಿನ, ರವೀಶ್ ಉಪ್ಪಿನಂಗಡಿ, ವಿನಯಕೃಷ್ಣ, ಸತೀಶ್ ಮಂಜೇಶ್ವರ ಮತ್ತಿತರರು.... ಅವರೆಲ್ಲರ ಪ್ರೋತ್ಸಾಹ, ಕೊಡುಗೆ ಗ್ರೂಪಿನಲ್ಲಿ ನಿರಂತರ ಇದೆ. ಸತ್ಯನಾರಾಯಣ ಪುಣ್ಚಿತ್ತಾಯರು, ಮುರಳಿಕೃಷ್ಣ ಶಾಸ್ತ್ರಿ, ದುರ್ಗಾಪರಮೇಶ್ವರಿ ಕುಕ್ಕಿಲ, ಭವ್ಯಶ್ರೀ ಮಂಡೆಕೋಲು ಮತ್ತಿತರ ಭಾಗವತರಿದ್ದಾರೆ. ನಿರಂತರ ಹಾಡುಗಳನ್ನು ಶೇರ್ ಮಾಡುತ್ತಿರುವ ಅಕ್ಷಯಕೃಷ್ಣರಂಥ ಕಿರಿಯ ಸ್ನೇಹಿತರು, ಕಾರ್ಯದೊತ್ತಡದ ನಡುವೆಯೂ ನೇರ ಪ್ರಸಾರಗಳನ್ನು ನೀಡಿ ಗ್ರೂಪನ್ನು ಶ್ರೀಮಂತವಾಗಿಸಿದ್ದೀರಿ. ಬಹಳಷ್ಟು ಸಂದರ್ಭಗಳಲ್ಲಿ ಕೆಲಸದೊತ್ತಡದಲ್ಲಿ ಎಲ್ಲ ಪೋಸ್ಟುಗಳಿಗೆ ಪ್ರತಿಕ್ರಿಯಿಸಲು ಅಸಾಧ್ಯ. ಆದರೆ, ನಿಮ್ಮ ಪೋಸ್ಟುಗಳಿಗೆ ಯಾರ ಪ್ರತಿಕ್ರಿಯೆ ಬಂದಿಲ್ಲ ಎಂಬ ಮಾತ್ರಕ್ಕೆ ಯಾರೂ ನೋಡುತ್ತಿಲ್ಲ ಎಂದು ಅರ್ಥವಲ್ಲ. ತುಂಬ ಮಂದಿ ಸೈಲೆಂಟ್ ಆಗಿ ಗಮನಿಸುತ್ತಲೇ ಇರುತ್ತಾರೆ. ಸರಿ ತಪ್ಪು ಪ್ರಶ್ನೆ ಬಂದಾಗ ಪ್ರತಿಕ್ರಿಯಿಸಿ ತಿದ್ದುತ್ತಾರೆ.

ಇಲ್ಲಿ ಯಕ್ಷಗಾನದ ಬಗ್ಗೆ ಬಲ್ಲವರು ಮಾತ್ರ ಇರುವುದಲ್ಲ. ಇತ್ತೀಚೆಗಷ್ಟೇ ಯಕ್ಷಗಾನದ ಬಗ್ಗೆ ಕುತೂಹಲ ಹುಟ್ಟಿ ತಿಳ್ಕೊಳ್ತಾ ಇರುವ ಎಳೆಯರೂ ಇದ್ದಾರೆ. ಅವರೂ ಗುಂಪಿನ ಜೊತೆ ಜೊತೆಗೆ ಇನ್ನಷ್ಟು ಮಾಹಿತಿ ತಿಳ್ಕೊಳ್ಳಲಿ ಎಂಬ ಕಾರಣಕ್ಕೆ ಎಲ್ಲಾ ಪೋಸ್ಟುಗಳಲ್ಲೂ ಪ್ರಸಂಗ, ಕಲಾವಿದರ ವಿವರ ನೀಡಿ ಎಂದು ಆಗಾಗ ಕೇಳಿಕೊಳ್ಳುತ್ತಿರುವುದು.ಈ ಮೂಲಕ ಯುವ ಸದಸ್ಯರೂ ಯಕ್ಷಗಾನದ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗುತ್ತದೆ ಅಲ್ವೇ?


ನಾವು ದೊಡ್ಡ ಯಕ್ಷಗಾನ ಕೂಟಗಳನ್ನು ಸಂಘಟಿಸಿಲ್ಲ, ಕನಿಷ್ಠ ಒಂದು ಮೀಟಿಂಗ್ ಕೂಡಾ ಮಾಡಿಲ್ಲ, ಎಷ್ಟೋ ಮಂದಿಯ ಮುಖ ಪರಿಚಯವೇ ಇಲ್ಲ. ಇಲ್ಲಿ ಯಾವುದೇ ದುಡ್ಡಿನ ವ್ಯವಹಾರವಿಲ್ಲ. ಆದರೂ ತುಂಬ ಸಮಯ ಪರಿಚಿತರ ಹಾಗೆ ಯಕ್ಷಗಾನದ ಬಗ್ಗೆ ಇಲ್ಲಿ ಮಾಹಿತಿ ವಿನಿಮಯವಾಗುತ್ತದೆ. ಅದುವೇ ತಂತ್ರಜ್ಞಾನದ ಶಕ್ತಿ ಹಾಗೂ ಯಕ್ಷಗಾನದ ಪವರ್.

ಪುಟ್ಟದೊಂದು ಅಂಗೈಯಗಲದ ಮೊಬೈಲ್ ಮೂಲಕ 256 ಮಂದಿ ಒಟ್ಟಿಗೆ ಕುಳಿತು ಯಕ್ಷಗಾನದ ಬಗ್ಗೆಯೇ ಮಾತನಾಡಲು ಸಾಧ್ಯವಾಗಿರುವುದು. ಅಂತಹ ಗುಂಪಿಗೆ ಎರಡು ವರ್ಷ ಪೂರ್ಣವಾಗಿರುವುದು ತುಂಬ ಖುಷಿ ತಂದಿದೆ. ಗುಂಪಿನ ನಿಯಮಗಳ ಬಗ್ಗೆ ಸದಾ ನಿಮ್ಮ ಗೌರವ ಇರಲಿ. ಈ ವರ್ಷದ ಯಕ್ಷ ತಿರುಗಾಟವೂ ನಮ್ಮ ಗುಂಪಿನಲ್ಲಿನ ರೈಸಲಿ... ಸಹಕಾರ, ಪ್ರೋತ್ಸಾಹ, ತಪ್ಪಿದಾಗ ಮಾರ್ಗದರ್ಶನ ಇರಲಿ...


ಯಕ್ಷಗಾನಂ ಗೆಲ್ಗೆ.
-ಕೃಷ್ಣಮೋಹನ (ಬಲ್ಲಿರೇನಯ್ಯ ಯಕ್ಷಕೂಟ).

Tuesday, October 18, 2016


ನಾವು ಹುಟ್ಟಿರೋದೇ ಡ್ರಾಮಾ ಮಾಡೋಕೆ...!

ಡಿಗ್ರೀ ಓದ್ತಾ ಇದ್ದಾಗ ಒಬ್ಬರು ಲೆಕ್ಚರರ್ ಇದ್ರು. ತುಂಬ ಗೌರವ ಅವರ ಬಗ್ಗೆ. ಕಾಲೇಜು ಬಿಟ್ಟು ಎರಡು ವರ್ಷದ ನಂತರ ಒಮ್ಮೆ ಕ್ಯಾಂಟೀನ್‌ನಲ್ಲಿ ಸಿಕ್ಕಿದ್ರು. ನನ್ನ ಕಂಡ ತಕ್ಷಣ ಬಲದ ಕೈಯನ್ನು ಬೆನ್ನ ಹಿಂದೆ ಬಚ್ಚಿಟ್ಟುಕೊಂಡ್ರು.  ನಾನು ಕೂಡಾ ಒಂದು ಅರ್ಧ ನಿಮಿಷ ಮಾತನಾಡಿದ ಅಲ್ಲಿಂದ ಹೋದೆ, ಇಲ್ಲದಿದ್ದರೆ, ಅವಕ ಕೈ ಸುಟ್ಟುಹೋಗ್ತಿತ್ತು! ಕಾರಣ, ಅವರ ಕೈಲಿ ಇದ್ದಿದ್ದು ಸಿಗರೇಟ್!
ಈ ಪ್ರಕರಣದ ನಂತರವೂ ನನಗೆ ಅವರ ಮೇಲಿನ ಗೌರವ ತುಸುವೂ ಕಡಿಮೆಯಾಗಿಲ್ಲ. ಆದಾಗ್ಯೂ ನನ್ನನ್ನು ಕಂಡ ತಕ್ಷಣ ಸಿಗರೇಟ್ ಹಿಡಿದ ಕೈ ಹಿಂದೆ ಕೊಂಡು ಹೋಗದೆ ಹಾಗೆಯೇ ಮುಂದುವರಿಸಿದ್ದರೆ, ನನಗೆ ಅವರ ಮೇಲಿನ ವಿಶ್ವಾಸ ಜಾಸ್ತಿಯಾಗ್ತಿತ್ತು. ಕಾರಣ, ಅವರೆಂದೂ ಕಾಲೇಜಲ್ಲಿ ನೀವು ಸಿಗರೇಟ್ ಸೇದಬಾರದೆಂದು ಬುದ್ಧಿವಾದ ಹೇಳಿರಲಿಲ್ಲ. ತಾತ್ಕಾಲಿಕವಾಗಿ ನಾವು ನಮ್ಮನ್ನು ತೋರಿಸ್ಕೊಳ್ಳೋದಕ್ಕಿಂತ (ಡ್ರಾಮಾ ಮಾಡೋದಕ್ಕಿಂತ) ಇದ್ದ ಹಾಗೆ ತೋರಿಸ್ಕೊಳ್ಳೋದ್ರಲ್ಲಿರುವ ಸಮಾಧಾನ, ದೃಢತೆ ಜಾಸ್ತಿ ಹಾಗೂ ಹೆಚ್ಚಿನ ಆತ್ಮವಿಶ್ವಾಸ ತುಂಬುವಂಥದ್ದು ಅಲ್ವೇ? ಎಷ್ಟು ಹೊತ್ತು ಅಂತ ಸುಡ್ತಾ ಇರುವ ಸಿಗರೇಟ್‌ನ್ನು ಬೆನ್ನ ಹಿಂದೆ ಬಚ್ಚಿಡಬಹುದು, ಆ ಮೂಲಕ ಒಂದು ಇಮೇಜ್‌ನ್ನು ಕೃತಕವಾಗಿ ಸೃಷ್ಟಿಸಬಹುದು? ಕೊನೆಗೊಮ್ಮೆ ಅದು ಕೈಯ್ಯನ್ನು ಸುಟ್ಟೇ ಸುಡ್ತದೆ ಅಲ್ವ?
ಫಿಲ್ಟರ್ ಇಲ್ಲದೆ ಬದುಕೋದು ಕಷ್ಟ, ಆದರೆ...:


ಬದುಕಿನಲ್ಲಿ ಎಲ್ಲಾ ಕಡೆ, ಎಲ್ಲಾ ಸಂದರ್ಭ, ಎಲ್ಲರ ಜೊತೆ ಒಂದೇ ರೀತಿ ಇರೋದಕ್ಕೆ ಆಗೋದಿಲ್ಲ. ಮನೆ, ಕಚೇರಿ, ಕ್ಲಬು, ದೇವಸ್ಥಾನ, ಆಟ, ಸಮಾರಂಭ ಹೀಗೆ... ಒಂದೊಂದು ಕಡೆಯ ನಿರೀಕ್ಷೆಗಳು, ಪರಿಸ್ಥಿತಿಗಳನ್ನು ನಿಭಾಯಿಸುವಲ್ಲಿ, ನಾವು ಆವಾಹಿಸಿಕೊಂಡಿರುವ ‘ಪಾತ್ರ’ಗಳು ಒಂದೊಂದು ಥರ. ಎಲ್ಲಾ ಪಾತ್ರಗಳಿಗೂ ನ್ಯಾಯ ಸಲ್ಲಿಸಲೇಬೇಕು. ಆಯಾ ಜಾಗದ, ವಾತಾವರಣದ ಶಿಷ್ಟಾಚಾರಕ್ಕನುಗುಣವಾಗಿ ವರ್ತಿಸಲೇಬೇಕು. ಹಾಗಂತ ನಮ್ಮತನವನ್ನೇ ಬಿಟ್ಟು ಕೊಡಬೇಕಾದಷ್ಟು ಬಾಗುವ, ಬೀಗುವ, ಸುಳ್ಳು ಸುಳ್ಳೇ ತೋರಿಸ್ಕೊಳ್ಳುವ ಡ್ರಾಮಾ ಮಾಡಬೇಕಾದ ಅವಶ್ಯಕತೆಯಿದೆಯಾ? ದಿನದ ಕೊನೆಗೆ ನಾವು ನಾವೇ ಆಗಿ ಜಗತ್ತಿಗೆ ಕಾಣಬೇಕಾದ ಅನಿವಾರ್ಯತೆ ಇಲ್ಲವಾ?


ಎಲ್ಲವನ್ನೂ ಎಲ್ಲರ ಜೊತೆ ಹೇಳಿಕೊಳ್ಳೋದಿಕ್ಕೆ ಆಗೋದಿಲ್ಲ. ಪ್ರತಿಯೊಬ್ಬರ ಬದುಕಿನಲ್ಲಿರೋ ರಹಸ್ಯಗಳನ್ನೆಲ್ಲಾ ಎಲ್ಲರ ಜೊತೆ ಪಾರದರ್ಶಕವಾಗಿ ಶೇರ್ ಮಾಡಿಕೊಳ್ಳೋದಿಕ್ಕೆ ಅಸಾಧ್ಯ. ಸಾಮಾಜಿಕ ಅರೋಗ್ಯಕ್ಕೂ ಅದು ಪೂರಕವಲ್ಲ. ಆದರೆ, ನಾವು ಹೇಗಿದ್ದೀವಿ, ನಮ್ಮ ಸಾಮರ್ಥ್ಯ, ನಮ್ಮ ಅಸ್ತಿತ್ವ, ನಮ್ಮ ಚಿಂತನೆ, ನಮ್ಮ ನಿಲುವು, ನಮ್ಮ ವಯಸ್ಸು, ನಮ್ಮ ಸಾಧನೆಗಳ ಬಗ್ಗೆ ಸುಳ್ಳು ಸುಳ್ಳೇ ಹೇಳಿಕೊಂಡು, ಸಾಮಾಜಿಕ ಜಾಲ ತಾಣಗಳಲ್ಲಿ ನಮ್ಮ ಕುರಿತು ಇಲ್ಲದ್ದನ್ನೆಲ್ಲಾ ಬರೆದುಕೊಂಡು, ದಿಕ್ಕು ತಪ್ಪಿಸುವ ಫೋಟೊಗಳನ್ನು ಹಂಚ್ಕೊಂಡು ಸಾಧಿಸುವುದಾದರೂ ಏನನ್ನೂ? ಪುಕ್ಕಟೆ ಲೈಕುಗಳು, ಅದಕ್ಕೊಂದಿಷ್ಟು ಕಮೆಂಟುಗಳನ್ನು ಓದಿ ಪಡುವ ಹುಸಿ ನೆಮ್ಮದಿಗೂ, ನಿಜಕ್ಕೂ ನಾವಿರುವುದಕ್ಕೂ ವ್ಯತ್ಯಾಸ ಇದೆ ಅನ್ನುವ ಸತ್ಯ ನಮ್ಮನ್ನು ಚುಚ್ಚಲ್ವ?
ಇತಿಮಿತಿಗಳನ್ನೂ ಒಪ್ಕೊಳ್ಳಿ: ದೌರ್ಬಲ್ಯಗಳು, ಹಿನ್ನಡೆಗಳು, ಮಿತಿಗಳಲಿಲ್ಲದ ವ್ಯಕ್ತಿಗಳೇ ಇಲ್ಲ. ಪ್ರಧಾನಿಯಿಂದ ಸೇವಕನ ವರೆಗೆ ಎಲ್ಲರಿಗೂ ಮಿತಿಗಳಿವೆ. ಹಾಗಂತ ಪ್ರತಿಯೊಬ್ಬರಿಗೂ ತಮ್ಮದೇ ಆದ ಸಾಮರ್ಥ್ಯಗಳೂ ಇವೆ. ರೂಪ, ದುಡ್ಡು, ಅಧಿಕಾರಗಳು ಮಾತ್ರ ನಿಮ್ಮ ವ್ಯಕ್ತಿತ್ವ, ನಿಮಗೊಂದು ಸ್ಥಾನಮಾನವನ್ನು ದಕ್ಕಿಸುವುದಲ್ಲ. ಒಂದು ವೇಳೆ ದಕ್ಕಿಸಿದರೂ ಅದು ಶಾಶ್ವತವಲ್ಲ. ದೀರ್ಘಾವಧಿಗೊಂದು ಮರ್ಯಾದೆ, ದೀರ್ಘಾವಧಿಗೊಂದು ಬಾಂಧವ್ಯ, ದೃಢ ವಿಶ್ವಾಸ ಗಳಿಸುವ ಆಸೆಯಿದ್ದರೆ ನೀವು ಹೇಗೆ ಇದ್ದೀರೋ ಹಾಗೆಯ ತೋರಿಸ್ಕೊಳ್ತಾ ಬನ್ನಿ. ‘ಇಲ್ಲ’ಗಳ ಸೋಗಿನಲ್ಲಿ ಹುಸಿ ಇಮೇಜ್ ಸೃಷ್ಟಿಸುವ ಡ್ರಾಮಾಕ್ಕಿಂತ ಇದ್ದುದರಲ್ಲಿ ಇದ್ದ ಹಾಗೆ ಗಟ್ಟಿಯಾಗಿರೋದು ಲೇಸು, ವಾಸಿ.
-----------------
ಡ್ರಾಮಾ ಮಾಡ್ದೇ ಬದುಕೋದು ಹೇಗೆ?
೧) ನಿಮಗೆ ಗೊತ್ತಾ?  ನೀವು ಹೇಗೆಯೇ ಇದ್ದರೂ ನಿಮ್ಮನ್ನು ಲೈಕ್ ಮಾಡುವವರು ಈ ಜಗತ್ತಿನಲ್ಲಿ ಕೆಲವಾರದೂ ಇದ್ದೇ ಇರ್ತಾರೆ. ಅವರ ಸಂಖ್ಯೆ ಬೆರಳೆಣಿಕೆಯಷ್ಟಾದರೂ ಸರಿ, ಆ ಸಂಬಂಧದ ಎಳೆ ತುಂಬ ಗಟ್ಟಿಯಾಗಿರುತ್ತದೆ. ಅಷ್ಟು ಪ್ರಜ್ನೆ ನಮ್ಮೊಳಗಿದ್ದರೆ ಸಾಕು.
೨) ಸುಳ್ಳು ಹೇಳದ ವ್ಯಕ್ತಿತ್ವಗಳು ಯಾವತ್ತೂ ತಮ್ಮ ಬಗ್ಗೆ ಜಾಸ್ತಿ ಸಮರ್ಥನೆ, ಸ್ವಹೊಗಳಿಕೆ ಕೊಡಬೇಕಾದ ಸನ್ನಿವೇಶವೇ ಬರೋದಿಲ್ಲ. ಸ್ವಾಭಿಮಾನವನ್ನೂ ಕಳೆದುಕೊಳ್ಳಬೇಕಾಗಿರುವುದಿಲ್ಲ.
೩) ಬದುಕಿನ ಎಲ್ಲ ವಿಚಾರಗಳನ್ನು ಎಲ್ಲರೊಂದಿಗೆ ಹೇಳ್ಕೊಳ್ಳೋದಿಕ್ಕೆ ಆಗೋದಿಲ್ಲ, ಸತ್ಯ. ಆದರೆ, ನಮ್ಮ ಸಾಮರ್ಥ್ಯ, ನಮ್ಮ ಪ್ಲಸ್-ಮೈಸರ್ ನಮಗೇ ಗೊತ್ತಿರುತ್ತದೆ. ಅದನ್ನು ಹಾಗೆಯೇ ಒಪ್ಪಿಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನೀವಿದ್ದ ಹಾಗೆಯೇ ತೋರಿಸಿಕೊಳ್ಳಿ. ಅದರಿಂದ ಸಿಗುವ ಮನಃಶಾಂತಿಗೆ ಬೆಲೆ ಕಟ್ಟಲಾಗದು.
೪) ಯಾರದ್ದೋ ಕಾರಿನೆದುರು ನಿಂತು ಫೋಟೊ ತೆಗೆಸ್ಕೊಳ್ಳಿ, ಪರವಾಗಿಲ್ಲ. ಆದರೆ ಅದು ನಿಮ್ಮದೇ ಕಾರು ಅಂಥ ಹೇಳುವಷ್ಟು ಮಟ್ಟಿಗೆ ಅಧೋಗತಿಗೆ ಇಳಿಯುವುದು ಬೇಡ. ಮುಂದೊಮ್ಮೆ ಆ ಸುಳ್ಳನ್ನು ಸಮರ್ಥಿಸಲು ಹತ್ತಾರು ಸುಳ್ಳುಗಳನ್ನು ಹೇಳುವುದು ತುಂಬಾ ದಯನೀಯ ಪರಿಸ್ಥಿತಿಗೆ ನಮ್ಮನ್ನು ತಳ್ಳುತ್ತದೆ, ನೆನಪಿರಲಿ.
೫) ಯಾರನ್ನೋ ಹೊಗಳಿ, ಪೂಸಿ ಹೊಡೆದು ಮಾಡಿಸಿಕೊಳ್ಳುವ ಕೆಲಸಕ್ಕೆ ಅಷ್ಟೇ ಆಯುಷ್ಯವಿರುವುದು. ಜೊತೆಗೆ ನಮ್ಮತನವನ್ನು ಕಳೆದುಕೊಳ್ಳುವುದು ಬೇರೆ, ಗೊತ್ತಿರಲಿ.
೬) ಇನ್ನೊಬ್ಬರಿಗೆ ನಮ್ಮ ಬಗ್ಗೆ ಸುಳ್ಳು ಮಾಹಿತಿ ಕೊಟ್ಟು, ಸುಳ್ಳು ಹೇಳಿ ಗೊಂದಲ ಮೂಡಿಸಿ ಪಡುವ ವಿಕೃತ ಸಂತೋಷ ಇದೆಯಲ್ಲ, ಅದೊಂದು ಅಸಹಜ ಮನಸ್ಥಿತಿಯನ್ನು ಹುಟ್ಟು ಹಾಕುವುದು ಮಾತ್ರವಲ್ಲ, ಇನ್ನೊಬ್ಬರ ವಿಶ್ವಾಸ ಕಳೆದುಕೊಳ್ಳುವುದಕ್ಕೆ ರಹದಾರಿಯೂ ಹೌದು.
೭) ನಾಟಕೀಯತೆಯಿಲ್ಲದೆ ಬದುಕುವವರು ಜಾಸ್ತಿ ಸುಳ್ಳು ಹೇಳಬೇಕಾದ ಸಂದರ್ಭ ಇರೋದಿಲ್ಲ. ಯಾಕಂದರೆ ಜಗತ್ತಿಗೆ ಗೊತ್ತಿರುತ್ತದೆ ನೀವಿರೋದೇ ಹೀಗೆಂದು. ಜಗತ್ತೇ ನಿಮ್ಮ ಪಾಲಿಗೆ ಸಾಕ್ಷಿಯಾಗಿರುತ್ತದೆ!
೮) ಸುಳ್ಳು, ಕಪಟ, ಚಿಲ್ಲರೆ ರಾಜಕೀಯಗಳಿಂದ ಜನಪ್ರಿಯತೆ ಪಡೆಯಬಹುದು. ಆದರೆ ಅಂತಿಮವಾಗಿ ಅವು ನೀರ ಮೇಲಿನ ಗುಳ್ಳೆಗಳು. ಸತ್ಯ, ವಾಸ್ತವಿಕ, ನೈಜತೆಯೇ ಅಂತಿಮವಾಗಿ ಗೆಲ್ಲುವುದು. ಇದಕ್ಕೆ ಇತಿಹಾಸ, ಪುರಾಣಗಳಲ್ಲಿ ನಾವು ಓದಿದ್ದು, ಕೇಳಿದ್ದೇ ಸಾಕ್ಷಿ.
೯) ಕತ್ತಲೆ ಕಳೆದ ಮೇಲೆ ಬೆಳಕು ಮೂಡಲೇಬೇಕು. ಸುಳ್ಳಿನ ಮುಖವಾಡ ಒಂದು ದಿನ ಕಳಚಲೇ ಬೇಕು, ಅರಿವಿರಲಿ.
೧೦) ಇಮೇಜ್ ಅನ್ನುವುದು ಸಾಧನೆಯಿಂದ ಬರಬೇಕು ಹೊರತು ಸುಳ್ಳು ಸುಳ್ಳೇ ಸೃಷ್ಟಿಸಿಕೊಳ್ಳುವ ವಸ್ತುವಲ್ಲ. ನಿಜ ತಾನೆ!
---------
-ಕೃಷ್ಣಮೋಹನ ತಲೆಂಗಳ.

Monday, October 17, 2016

ಕರಾವಳಿಯಲ್ಲಿ ಮತ್ತೆ ಯಕ್ಷಗಾನವೇ ಫೇವರಿಟ್!

ಪಾರಂಪರಿಕ ಕಲೆಗಳಿಗೆ ಪ್ರೇಕ್ಷಕರಿಲ್ಲ, ಯುವಜನತೆಗೆ ಆಸಕ್ತಿಯಿಲ್ಲ ಎಂಬ ಆರೋಪಗಳು ಮಿಥ್ಯ ಎಂಬುದು ಕರಾವಳಿ ಜಿಲ್ಲೆಗಳಲ್ಲಿ ಸಾಬೀತಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು (ಕೇರಳ) ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮತ್ತೆ ವಿಜೃಂಭಿಸುತ್ತಿರುವ ಯಕ್ಷಗಾನ ಗಾನವೈಭವ, ನಾಟ್ಯವೈಭವ, ಕಾಲಮಿತಿಯ ಬಯಲಾಟಗಳೇ ಇದಕ್ಕೆ ಸಾಕ್ಷಿ.


ಶತಮಾನಗಳ ಇತಿಹಾಸವಿರುವ ಯಕ್ಷಗಾನದಲ್ಲಿ ಇಂದು ವೃತ್ತಿಪರ, ಹವ್ಯಾಸಿ ಸೇರಿದಂತೆ ೧೦೦ಕ್ಕೂ ಜಾಸ್ತಿ ಮೇಳಗಳು (ಪ್ರದರ್ಶನ ತಂಡಗಳು) ಇವೆ. ಪ್ರತಿವರ್ಷ ನವೆಂಬರ್‌ನಿಂದ ಮೇ ತಿಂಗಳ ತನಕ ಊರೂರು ಸುತ್ತಿ ಸಾವಿರಾರು ಯಕ್ಷಗಾನ ಪ್ರದರ್ಶನ ನೀಡುತ್ತಿವೆ. ಮಳೆಗಾಲದಲ್ಲೂ ಪ್ರವಾಸಿ ಮೇಳಗಳು, ಹಬ್ಬ ಹರಿದಿನಗಳ ಸಂದರ್ಭ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಿರಂತರ ನಡೆಯುತ್ತಿವೆ. ಯಕ್ಷಗಾನರಂಗದಲ್ಲಿ ಸಾವಿರಾರು ಕಲಾವಿದರಿದ್ದಾರೆ. ದೇಶ, ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. 


ಈಗಿನ ಟಿ.ವಿ., ಮೊಬೈಲು, ಕಂಪ್ಯೂಟರು, ಸೋಶಿಯಲ್ ಮೀಡಿಯಾಗಳಿಲ್ಲದ ಆ ದಿನಗಳಲ್ಲಿ (ಸುಮಾರು ಎರಡು ದಶಕದ ಹಿಂದೆ) ಕರಾವಳಿ ಮಂದಿಯ ಏಕೈಕ ಮನರಂಜನಾ ಮಾಧ್ಯಮವಾಗಿದ್ದುದು ಯಕ್ಷಗಾನ, ತಾಳಮದ್ದಳೆ (ಸಂಭಾಷಣೆ ಮಾತ್ರ, ಕುಣಿತ, ವೇಷಗಳಿಲ್ಲ) ಮಾತ್ರ. ಬರಬರುತ್ತಾ ಸಂಗೀತ ರಸಮಂಜರಿ, ಜಾದೂ, ಮಿಮಿಕ್ರಿ, ತುಳು ನಾಟಕಗಳು, ಫಿಲ್ಮೀ ಡ್ಯಾನ್ಸ್‌ಗಳು ಯಕ್ಷಗಾನದ ಜಾಗದಲ್ಲಿ ತಾವೂ ಪಾಲು ಪಡೆಯತೊಡಗಿದವು. ಶಾಲಾ ವಾರ್ಷಿಕೋತ್ಸವ, ಮದುವೆ ಮುಂಜಿ, ಗೌರಿ ಗಣೇಶ, ಅಷ್ಟಮಿ, ದಸರಾ ಹಬ್ಬಗಳಲ್ಲೆಲ್ಲಾ ಯಕ್ಷಗಾನ ಪ್ರದರ್ಶನವಿರಿಸಿದರೆ ಜನ ಸೇರೋದಿಲ್ಲ. ತುಳು ನಾಟಕವೋ, ಫಿಲ್ಮೀ ಡ್ಯಾನ್ಸೋ, ಆರ್ಕೆಸ್ಟ್ರಾನೋ ಇರಿಸಿದರೆ ಮಾತ್ರ ಜನ ಬರುತ್ತಾರೆ ಎಂಬ ಅಪವಾದವಿತ್ತು.
ಕಾಲ ಬದಲಾಯ್ತು: ಈಗ ಕಾಲಚಕ್ರ ಮತ್ತೆ ತಿರುಗಿದೆ. ಹಿರಿಯರೊಂದಿಗೆ ಹೊಸ ತಲೆಮಾರಿನ ಭಾಗವತರು, ಹೊಸ ತಲೆಮಾರಿನ ಪ್ರೇಕ್ಷಕರು, ಪೂರಕವಾದ ಆಧುನಿಕ ಮಾಧ್ಯಮದ ಪ್ರಚಾರ, ಕಾಲಮಿತಿಯ ಪ್ರಯೋಗಗಳಿಂದ ಕರಾವಳಿಯಾದ್ಯಂತ ಯಕ್ಷಗಾನ ಮತ್ತೆ ಸ್ಥಾನ ಪಡೆಯುತ್ತಿದೆ. ಹಬ್ಬಗಳು, ದೇವಸ್ಥಾನದ ಜಾತ್ರೆಗಳು, ವಾರ್ಷಿಕೋತ್ಸವಗಳು, ಅಷ್ಟೇ ಯಾಕೆ ಮದುವೆ, ಗೃಹಪ್ರವೇಶಗಳಲ್ಲೂ ಯಕ್ಷಗಾನಕ್ಕೆ ದೊಡ್ಡದೊಂದು ಸ್ಥಾನಮಾನ ಸಿಕ್ಕಿದೆ. ಸೀಮಿತ ಅವಧಿಯಲ್ಲಿ ಪ್ರಸಿದ್ಧ ಭಾಗವತರನ್ನು ಕರೆಸಿ ಹಾಡುಗಾರಿಕೆ ಇರಿಸುವ ‘ಯಕ್ಷಗಾನ ಗಾನ ವೈಭವ’, ಆಯ್ದ ಪ್ರಸಂಗಗಳ ನಾಟ್ಯ ಪ್ರಕಾರವನ್ನು ಮಾತ್ರ ಪ್ರಸ್ತುತಪಡಿಸುವ ಯಕ್ಷಗಾನ ನಾಟ್ಯವೈಭವ, ಚುಟುಕಾಗಿ ಪ್ರದರ್ಶನಗೊಳ್ಳುವ ಕಾಲಮಿತಿಯ ಬಯಲಾಟಗಳನ್ನು ಜನ ಇಷ್ಟಪಡುತ್ತಿದ್ದಾರೆ.
ಒಂದು ಕಾಲದಲ್ಲಿ ಧನಿಕರು, ದೇವಸ್ಥಾನಗಳು, ಊರ ಗಣ್ಯರ ರಾಜಾಶ್ರಯದಲ್ಲಿ ಪ್ರದರ್ಶನ ಕಾಣುತ್ತಿದ್ದ ಯಕ್ಷಗಾನವನ್ನು ಇಂದು ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಯುವಕ ಮಂಡಲಗಳು ಮಾತ್ರವಲ್ಲ, ಯಕ್ಷಗಾನ ಅಭಿಮಾನಿಗಳ ವಾಟ್ಸಪ್ ಗ್ರೂಪುಗಳೂ ಆಡಿಸುತ್ತಿವೆ!
ಯಾಕೆ ದಿಢೀರ್ ಜನಪ್ರಿಯತೆ ಸಿಕ್ತು?:
-ಈಗಿನ ಮಂದಿಗೆ ಇಡೀ ರಾತ್ರಿ ಕುಳಿತು ಬಯಲಾಟ ನೋಡುವ ತಾಳ್ಮೆಯಿಲ್ಲ. ಈಗಿನ ಜೀವನ ಶೈಲಿಗೆ ಅದು ಒಗ್ಗುವುದೂ ಇಲ್ಲ. ಹಾಗಾಗಿ ಕಾಲಮಿತಿಯ ಪ್ರದರ್ಶನಗಳು ಜನರಿಗೆ ತುಂಬಾ ಇಷ್ಟವಾಗುತ್ತಿವೆ.
-ಜನಪ್ರಿಯ ಕಲಾವಿದರನ್ನು ಕರೆಸಿ ಆಡುವ ಪ್ರದರ್ಶನಗಳಲ್ಲಿ ತಮಗಿಷ್ಟದ ಕಲಾವಿದರ ಹಾಡು, ಚೆಂಡೆ-ಮದ್ದಳೆ ವೈಭವ ಆಲಿಸುವ ಅವಕಾಶವಿರುವುದರಿಂದ ಪ್ರೇಕ್ಷಕರಿಗೆ ಆಯ್ಕೆ ಸ್ವಾತಂತ್ರ್ಯ ಸಿಕ್ಕಿದೆ.
-ಯುವ ತಲೆಮಾರಿನ ಭಾಗವತರು, ಕಲಾವಿದರಿಗೆ ಅವರದ್ದೇ ಆದ ಆರಾಧಕರು, ಅಭಿಮಾನಿಗಳ ವರ್ಗ ಹುಟ್ಟಿಕೊಂಟಿದೆ. ತಮಗಿಷ್ಟದ ಕಲಾವಿದರ ಪ್ರದರ್ಶನ ನೋಡುವುದಕ್ಕೆಂದೇ ಮಧ್ಯರಾತ್ರಿಯೂ ಎದ್ದು ಬಯಲಾಟಗಳಿಗೆ ಬರುವ ಪ್ರೇಕ್ಷಕ ವರ್ಗ ಹುಟ್ಟಿಕೊಂಡಿದೆ. ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು, ರಾಘವೇಂದ್ರ ಆಚಾರ್ಯ ಜನ್ಸಾಲೆ ಸೇರಿದಂತೆ ಹಲವು ಯುವ ಭಾಗವತರಿಗೆ, ಕಲಾವಿದರಿಗೆ ಅಪಾರ ಪ್ರಮಾಣದ ಆರಾಧಕರು ಕರಾವಳಿಯಲ್ಲಿದ್ದಾರೆ. ತೆಂಕು-ಬಡಗು ತಿಟ್ಟಿನ ವ್ಯತ್ಯಾಸವಿಲ್ಲದೆ ಪ್ರೇಕ್ಷಕರು ಇವರ ಗಾನವೈಭವಗಳನ್ನು ಆಸ್ವಾದಿಸುತ್ತಾರೆ.
-ಒಂದು ಕಾಲದಲ್ಲಿ ರಂಗಸ್ಥಳ, ಚೌಕಿಯನ್ನು ಬಿಟ್ಟು ಪ್ರೇಕ್ಷಕರಿಂದ ದೂರವೇ ಇರುತ್ತಿದ್ದ ಕಲಾವಿದರು ಇಂದು ಫೇಸ್‌ಬುಕ್, ವಾಟ್ಸಪ್, ಮೊಬೈಲ್ ಸಂಪರ್ಕ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಯಕ್ಷಗಾನ ಪ್ರದರ್ಶನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಸಿಗುತ್ತಿದೆ. ಯಕ್ಷಗಾನ ಕುರಿತು ಸಾಕಷ್ಟು ಪತ್ರಿಕೆಗಳು, ವೆಬ್‌ತಾಣಗಳು ಹುಟ್ಟಿಕೊಂಡಿದ್ದು ಪ್ರದರ್ಶನಗಳ ಒಳಿತು ಕೆಡುಕುಗಳ ಬಗ್ಗೆ ತಕ್ಷಣದ ಹಿಮ್ಮಾಹಿತಿ ಕಲಾವಿದರಿಗೂ ಸಿಗುತ್ತಿದ್ದು, ಪ್ರೇಕ್ಷಕ-ಕಲಾವಿದರ ನಡುವಿನ ಅಂತರ ಕಡಿಮೆಯಾಗಿದೆ.
-ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್‌ಗಳಲ್ಲಿ ಯಕ್ಷಗಾನ ಅಭಿಮಾನಿಗಳ ನೂರಾರು ಗ್ರೂಪುಗಳು ಹುಟ್ಟಿಕೊಂಡಿವೆ. ಕಲಾವಿದರು, ಮೇಳಗಳು, ತಿಟ್ಟುಗಳ ಹೆಸರಿನಲ್ಲಿ ಅನೇಕಾನೇಕ ಗುಂಪುಗಳಿದ್ದು, ಅವುಗಳಲ್ಲಿ ಯಕ್ಷಗಾನ ಮಾಹಿತಿ, ಹಾಡು, ವಿಡಿಯೋ, ಬರಹಗಳು ಕ್ಷಣ ಕ್ಷಣಕ್ಕೆ ಸಾವಿರಗಟ್ಟಲೆ ಮಂದಿಯನ್ನು ತಲಪುತ್ತಿದೆ. ಹೀಗೆ ಆಧುನಿಕ ಮಾಧ್ಯಮಗಳೂ ಯಕ್ಷಗಾನ ಪ್ರಸಾರದಲ್ಲಿ ತುಂಬಾ ಪ್ರಧಾನ ಪಾತ್ರ ವಹಿಸಿವೆ.
-ಹಿಂದಿನ ಕಾಲದ ಹಾಗೆ ಈಗ ಯಕ್ಷಗಾನ ಪ್ರದರ್ಶನಗಳಿಗೆ ಹೋಗುವುದು ಕಷ್ಟವಲ್ಲ, ಸಾಕಷ್ಟು ವಾಹನ ವ್ಯವಸ್ಥೆಯಿದೆ. ಬಯಲಾಟಗಳಲ್ಲಿ ಆಹಾರ, ಪಾನೀಯದಂಥಹ ಉಪಚಾರಗಳೂ ಸಿಗುತ್ತವೆ. ಹಿಂದಿನ ಹಾಗೆ ಬಯಲಲ್ಲಿ ಕುಳಿತು ಪ್ರದರ್ಶನ ನೋಡಬೇಕಾಗಿಲ್ಲ. ಉತ್ತಮ ಆಸನ ವ್ಯವಸ್ಥೆ, ಮಳೆಗೆ ಚಪ್ಪರದ ವ್ಯವಸ್ಥೆಯೂ ಇರುತ್ತದೆ. ಹೀಗಾಗಿ ಪ್ರೇಕ್ಷಕರಿಗೆ ಉತ್ತಮ ಅನುಕೂಲ ಇರುವಾಗ ಸಹಜವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.


ಅನುಕೂಲ ಏನೇನಾಯ್ತು?:
-ಬದಲಾದ ಸನ್ನಿವೇಶದಲ್ಲಿ ಕಲಾವಿದರಿಗೆ ಉತ್ತಮ ಗೌರವ ಸಿಗುತ್ತಿದೆ. ಬಹಳಷ್ಟು ಕಲಾವಿದರು ಸೆಲೆಬ್ರಿಟಿಗಳಾಗಿದ್ದಾರೆ. ವಿದೇಶಗಳು, ಹೊರರಾಜ್ಯಗಳಲ್ಲೂ ಯಕ್ಷಗಾನಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ.
-ಯಕ್ಷಗಾನ ಕಲಾವಿದರ ಆರ್ಥಿಕ ಸ್ಥಿತಿ (ಎಲ್ಲರದ್ದೂ ಅಲ್ಲ) ಈ ಜನಪ್ರಿಯತೆಯಿಂದ ಸುಧಾರಿಸಿದೆ. ಅದ್ಧೂರಿಯ ಯಕ್ಷಗಾನ ಬಯಲಾಟಗಳೂ ಹೆಚ್ಚುತ್ತಿದ್ದು, ಅದ್ಧೂರಿ ಪ್ರದರ್ಶನಗಳನ್ನು ಮಾಡಿದರೆ ಪ್ರೇಕ್ಷಕರು ಬರುತ್ತಾರೆ ಎಂಬುದು ದೃಢಪಟ್ಟಿದೆ.
-ಕಾಲಮಿತಿಯ ಬಯಲಾಟಗಳಿಂದಾಗಿ ಇಡೀ ರಾತ್ರಿ ನಿದ್ರೆ ಕೆಡಬೇಕಾದ ಅನಿವಾರ್ಯತೆಯಿಲ್ಲ. ರಾತ್ರಿ ೧೨ ಗಂಟೆ ತನಕವೋ, ೧ ಗಂಟೆ ತನಕವೋ ಪೂರ್ತಿ ಪ್ರದರ್ಶನ ನೋಡಿದ ತೃಪ್ತಿಯಿಂದ ಪ್ರೇಕ್ಷಕರು ಮನೆಗೆ ಮರಳಬಹುದು.
-ಯಕ್ಷಗಾನಕ್ಕೆ ಭವಿಷ್ಯವಿಲ್ಲ ಎಂಬ ಮಾತನ್ನು ಈಗಿನ ಟ್ರೆಂಡ್ ಸುಳ್ಳು ಮಾಡಿದೆ. ಉತ್ತಮ ಪ್ರೋತ್ಸಾಹದಿಂದ ಯುವ ಕಲಾವಿದರು ಬೆಳೆಯುತ್ತಿದ್ದಾರೆ. ಅವರ ಅಭಿಮಾನಿಗಳಾಗಿರುವ ಯುವ ಪ್ರೇಕ್ಷಕರು ಕೂಡಾ...


ವೇಗದ ಬೆಳವಣಿಗೆಯ ಹಿನ್ನಡೆಯೇನು:?
-ಕಡಿಮೆ ಅವಧಿಯಲ್ಲಿ ಪ್ರಸ್ತುತಪಡಿಸುವ ಗಾನವೈಭವ, ರಸಮಂಜರಿ ಜೊತೆಗಿನ ಫ್ಯೂಶನ್‌ನಂತಹ ಪ್ರದರ್ಶನ, ಒಂದೇ ರಾಗವನ್ನು ದೀರ್ಘವಾಗಿ ಆಲಾಪನೆ ಮಾಡುವುದು, ರಾಷ್ಟ್ರಭಕ್ತಿಗೀತೆ, ಭಕ್ತಿಗೀತೆ, ಭಾವಗೀತೆಗಳನ್ನೂ ಯಕ್ಷಗಾನೀಯ ಶೈಲಿಯಲ್ಲಿ ಹಾಡುವ ಪ್ರಯೋಗಗಳು, ನಾಲ್ಕೈದು ಚೆಂಡೆ ಮದ್ದಳೆಗಳ ವಾದನದಂತಹ ಪ್ರದರ್ಶನಗಳು ಜನಪ್ರಿಯತೆಯನ್ನೇನೋ ಪಡೆದಿವೆ. ಆದರೆ, ಇಂತಹ ಜನಪ್ರಿಯತೆ ಸುದೀರ್ಘ ಅವಧಿಯಲ್ಲಿ ಉಳಿದೀತೇ ಎಂಬ ಸಂಶಯವನ್ನು ಹಿರಿಯ ಕಲಾವಿದರು ವ್ಯಕ್ತಪಡಿಸುತ್ತಾರೆ. ಈಗಿನ ಕಾಲಮಾನಕ್ಕೆ ಇದು ಸರಿ. ಆದರೆ, ಈ ಅಭಿರುಚಿ ದೀರ್ಘಕಾಲ ಉಳಿದೀತೆಂದು ಹೇಳಲಾಗದು.
-ಯಕ್ಷಗಾನ ಕುರಿತು ಹೆಚ್ಚಿರುವ ಕ್ರೇಝ್‌ನಿಂದ ರಸಮಂಜರಿ, ತುಳು ನಾಟಕಗಳ ಕಲೆಕ್ಷನ್‌ಗಳು ಕರಾವಳಿಯಲ್ಲಿ ಗಣನೀಯವಾಗಿ ಕಡಿಮೆಯಾಗಿವೆ. ಇದನ್ನು ಸಂಘಟಕರೇ ಒಪ್ಪಿಕೊಳ್ಳುತ್ತಾರೆ. ಹಾಡುಗಾರರು, ನಾಟಕ ಕಲಾವಿದರಿಗೆ ಅವಕಾಶಗಳೇನೋ ಇವೆ. ಆದರೆ ನಾಲ್ಕೈದು ವರ್ಷಗಳ ಹಿಂದಿನಷ್ಟಿಲ್ಲ.
-ಕೆಲವು ನವೀನ ಪ್ರಯೋಗಗಳಿಗೆ ಪ್ರೇಕ್ಷಕರಿಂದ ಬೀಳುವ ಚಪ್ಪಾಳೆಗಳು, ಶಿಳ್ಳೆಗಳು ಎಷ್ಟೋ ಬಾರಿ ಕಲಾವಿದರಿಗೆ ಸಂತಸ ಕೊಡುತ್ತದೆ. ಆದರೆ, ಇದರಿಂದ ಮಾತ್ರ ಕಲಾವಿದರು ಬೆಳೆಯುವುದಲ್ಲ. ಪಾರಂಪರಿಕ ಶೈಲಿಯನ್ನೂ ಬೆಳೆಯಕೊಡಬೇಕು ಎಂಬುದು ವಿದ್ವಾಂಸರ ಅಭಿಮತ.
-ಕಾಲಮಿತಿಯಲ್ಲಿ ಯಕ್ಷಗಾನ ಪ್ರದರ್ಶನಗಳಿಂದ ಯಕ್ಷಗಾನಕ್ಕೆ ನ್ಯಾಯ ಸಲ್ಲಿಸಲಾಗದು ಎಂಬ ಅಪವಾದವಿದೆ. ವಿವಿಧ ರಾಗಗಳು, ಕಥಾವಿಸ್ತರಾಕ್ಕೆ, ವೇಷಗಳ ವೈವಿಧ್ಯತೆ, ಮಾತುಗಾರಿಕೆಗೆ ಕತ್ತರಿ ಬಿದ್ದು ಪೂರ್ಣ ಆಸ್ವಾದನೆ ಆಗದು ಎಂಬ ವಾಸ್ತವವೂ ಎದುರಿಗಿದೆ.
------

ಇಂದಿನ ಹೊಸ ಪ್ರೇಕ್ಷಕರಿಗೆ ಸುದೀರ್ಘ ಅವಧಿಯ ಕಾಲ ಕುಳಿತು ಬಯಲಾಟ ನೋಡುವ ತಾಳ್ಮೆಯಿಲ್ಲ. ಗಾನವೈಭವ, ಕಾಲಮಿತಿಯಂತಹ ಪ್ರಯೋಗಗಳು ಕಲಾವಿದರಿಗೆ ಸಾಕಷ್ಟು ಅವಕಾಶ ಕಲ್ಪಿಸಿವೆ, ಆರ್ಥಿಕ ಭದ್ರತೆ ನೀಡಿದೆ. ಬಹಳಷ್ಟು ಕಲಾವಿದರು ಇಂದು ಹೀರೋಗಳಾಗಿದ್ದಾರೆ. ಯಕ್ಷಗಾನದಲ್ಲೂ ಹೊಸತನ್ನು ಯೋಚಿಸುತ್ತಾ ಇರಬೇಕು. ಒಂದೇ ಶೈಲಿಯ ಪ್ರಯೋಗ ಮಾಡುತ್ತಿದ್ದರೆ ಅದಕ್ಕೆ ಹೆಚ್ಚು ಆಯುಷ್ಯ ಇರದು. ಪ್ರಯೋಗಗಳು ನಡೆಯುತ್ತಾ ಇರಬೇಕು.
-ವಾದಿರಾಜ ಕಲ್ಲೂರಾಯ, ಉಪನ್ಯಾಸಕ, ಯಕ್ಷಗಾನ ಕಲಾವಿದ, ನಿರೂಪಕ.
--------------
ಯಕ್ಷಾಭಿಮಾನ ಜಾಸ್ತಿಯಾಗಿರುವುದು ಖುಷಿಯ ವಿಚಾರ. ಆದರೆ, ಸಮಗ್ರ ಯಕ್ಷಗಾನವನ್ನು ಸ್ವೀಕರಿಸುವ, ನೋಡುವ ಕಲಾಭಿಮಾನಿಗಳ ಸಂಖ್ಯೆಕಡಿಮೆಯಾಗುತ್ತಿದೆ. ರಂಗದ ಒಂದು ಭಾಗದಲ್ಲೇ ತೃಪ್ತಿ ಪಡುವ, ಸುಖ ಅನುಭವಿಸುವವರ ಸಂಖ್ಯೆ ಹೆಚ್ಚಾಗುವುದು ಸಮಗ್ರ ಯಕ್ಷಗಾನದ ಬೆಳವಣಿಗೆ ದೃಷ್ಟಿಯಿಂದ ಪೂರಕವಲ್ಲ.
-ನಾ.ಕಾರಂತ ಪೆರಾಜೆ, ಯಕ್ಷಗಾನ ಕಲಾವಿದ, ಬರಹಗಾರ.
---------
-ಕೃಷ್ಣಮೋಹನ ತಲೆಂಗಳ.

Monday, October 10, 2016

ಚೆಂಡೆ ಪೆಟ್ಟು ಕೇಳಿ ಆಟಕ್ಕೆ ಹೋಗುತ್ತಿದ್ದ ದಿನವಿತ್ತು...!

ಒಂದು ಕಾಲವಿತ್ತು, ಯಕ್ಷಗಾನಕ್ಕೆ ಹೋಗುವಾಗ ಚೆಂಡೆಯ ಪೆಟ್ಟಿನ ಸದ್ದು ಕೇಳಿದ ದಿಕ್ಕಿನತ್ತ ಸಾಗುವುದು. ಕೈಯಲ್ಲಿ ತೆಂಗಿನ ಸೋಗೆಯ ಸೂಟೆ (ದೊಂದಿ), ಕೂರಲು, ಮಲಗಲು ಓಲೆ ಚಾಪೆ ಜೊತೆಗೆ ಹೋದರೆ ಮತ್ತೆ ಮನೆಗೆ ಮರಳುವುದು ಇಡೀ ರಾತ್ರಿ ಆಟ ನೋಡಿ ಸೂರ್ಯ ಮೂಡಿದ ಮೇಲೆಯೇ. ನಡುವೆ ಮನೆಗೆ ಬರಲು ವಾಹನವಾಗಲೀ, ಬೆಳಕಿನ ವ್ಯವಸ್ಥೆಯಾಗಲೀ ಇರಲಿಲ್ಲ. ಅರ್ಧರ್ಧ ಆಟ ನೋಡುವ ಮನಸ್ಥಿತಿ ಕೂಡಾ ಆಗ ಇರಲಿಲ್ಲವೆನ್ನಿ...

................


ಸುಮಾರು 20 ,30 ವರ್ಷಗಳ ನಂತರ ಈಗ ಪರಿಸ್ಥಿತಿ, ಮನಸ್ಥಿತಿ ಎರಡೂ ಬದಲಾಗಿದೆ. ಇಡೀ ರಾತ್ರಿ ಕುಳಿತು ಆಟ ನೋಡುವ (ಮೇಳದ ಆಟಗಳು) ಮನಸ್ಥಿತಿ ಇಳಿಮುಖವಾಗಿದೆ. ಮೊಬೈಲಿನಲ್ಲಿ, ಕಂಪ್ಯೂಟರಿನಲ್ಲಿ, ಬ್ಯಾನರಿನಲ್ಲಿ, ವಾಟ್ಸಪು, ಫೇಸ್ಬುಕುಗಳಲ್ಲಿ ಆಟದ ಪ್ರಚಾರ ಅದ್ಭುತವಾಗಿ ಸಾಗುತ್ತದೆ. ಒಂದು ಪುಟ್ಟ ಊರಿನಲ್ಲಿ ನಡೆಯುವ ಯಕ್ಷೋತ್ಸವದ ಆಮಂತ್ರಣ ಹತ್ತಾರು ವಾಟ್ಸಪ್ ಗ್ರೂಪುಗಳ ಮೂಲಕ ಸಾವಿರಗಟ್ಟಲೆ ಮಂದಿಯನ್ನು ತಲಪುತ್ತಿದೆ (ಬರುವವರೆಷ್ಟು ಮಂದಿ ಅನ್ನುವುದು ಬೇರೆ ವಿಷಯ). ಹೀಗಾಗಿ ಮಾಹಿತಿ ತಿಳಿಯುವುದೇನೂ ಕಷ್ಟವಲ್ಲ. ಈಗ ಜೀಪಿಗೆ ಮೈಕು ಕಟ್ಟಿ ಒಂದೇ ಒಂದು ಆಟ ಎಂದು ಈಗ ಪ್ರಚಾರ ಮಾಡುವುದು ಅಪರೂಪ... ಹ್ಯಾಂಡ್ ಬಿಲ್ಲನ್ನು ಜೀಪಿನಿಂದ ಎಸೆದರು ಹಿಂದೆಯೇ ಓಡಿ ಹೋಗಿ ಹೆಕ್ಕುವ ಮಕ್ಕಳೂ ಈಗ ಸಿಗಲಿಕ್ಕಿಲ್ಲ. ಅದ್ದೂರಿಯ ಆಮಂತ್ರಣ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಯಕ್ಷಪ್ರಿಯರನ್ನು ತಲಪುತ್ತದೆ. ಚೆಂಡೆ ಸದ್ದು ಕೇಳಿ ದೊಂದಿ ಹಿಡಿದು ಆಟದ ದಿಕ್ಕಿನತ್ತ ನಡೆಯುವವರೂ ಕಮ್ಮಿ. ವಾಹನಗಳಲ್ಲಿ, ಸ್ನೇಹಿತರೊಂದಿಗೆ ಆಟಕ್ಕೆ ಹೋದರೆ ತಮಗೆ ಬೇಕಾದ ಭಾಗ, ಬೇಕಾದ ಭಾಗವತರ ಹಾಡು ಕೇಳಿ ಬಂದರೆ ಮುಗಿಯಿತು. ಆಟ ನೋಡಿದ ಖುಷಿ ದಕ್ಕುತ್ತದೆ.

...................

ಅಂದು ಆಟ ನೋಡಲು ಕುರ್ಚಿಗಳಿರಲಿಲ್ಲ. ಪುಟ್ಟ ಮಕ್ಕಳು ರಂಗಸ್ಥಳ ಎದುರು ಚಾಪೆ ಬಿಡಿಸಿ ಕೂರುತ್ತಿದ್ದರೆ, ದೊಡ್ಡವರಿಗೆ (ಶಾಲೆಯ ಮೈದಾನವಾದರೆ) ಬೆಂಚು, ಅತಿ ಗಣ್ಯರಿಗೆ ಮರದ ಚೇರು ಅಷ್ಟೆ. ಟಿಕೆಟಿನ ಆಟವಾದರೆ ಬೇರೆ ಸಂಗತಿ. ಇಂದು ಹಾಗಲ್ಲ. ನೂರುಗಟ್ಟಲೆ ಚೇರುಗಳು ಸಾಲು ಸಾಲಾಗಿ ಕಾದಿರುತ್ತವೆ. ಪ್ರೇಕ್ಷಕರು ಬರಲು. ಮಳೆ ಬಂದರೆ ಚಪ್ಪರ, ಹಸಿವಾದರೆ ಊಟ, ನಿದ್ರೆ ತೂಗದಂತೆ ಚಹಾ, ಚಟ್ಟಂಬಡೆ ಎಷ್ಟು ವ್ಯವಸ್ಥೆ, ಎಷ್ಟು ಆತಿಥ್ಯ, ಎಷ್ಟು ಸುಲಲಿತ ಆಟ ನೋಡುವುದು. ಏನೂ ಬೇಡ, ಆಟವಾಡುವಲ್ಲಿಗೆ ಹೋಗುವುದೇ ಕಷ್ಟ ಎನಿಸಿದರೆ ಮನೆಯಲ್ಲೇ ಕುಳಿತು ಲೋಕಲ್ ಚಾನೆಲ್ನಲ್ಲಿ ಲೈವ್ ವೀಕ್ಷಿಸಬಹುದು, ನೀವು ಊರಲ್ಲಿ ಇಲ್ಲ ಪರದೇಶಿಗಳಾಗಿದ್ದರೆ ಅಲ್ಲೂ ನೀವು ಇಂಟರ್ನೆಟ್ ಮೂಲಕ ಲೈವ್ ವೀಕ್ಷಿಸಬಹುದು. ಲೈವ್ ನೋಡಲು ಪುರಸೊತ್ತಿಲ್ಲ ಅಂತ ಇಟ್ಟುಕೊಳ್ಳಿ... ಮತ್ತೂ ಒಂದು ಆಯ್ಕೆಯಿದೆ. ಆಗಾಗ ರಿಪೀಟ್ ಟೆಲಿಕಾಸ್ಟ್ ಆಗುತ್ತಿರುತ್ತದೆ, ಆಗಲಾದರೂ ನೋಡಬಹುದು... ಇಷ್ಟೆಲ್ಲಾ ವ್ಯವಸ್ಥೆಯಿದ್ದರೂ ಇಡೀ ರಾತ್ರಿ ತಾಳ್ಮೆಯಿಂದ ಕುಳಿತು ಆಟ ನೋಡುವುದಕ್ಕೆ ಪುರುಸೊತ್ತಾಗುವುದಿಲ್ಲ, ನಿಭಾಯಿಸಲು ಕಷ್ಟವಾಗುತ್ತದೆ.

....................

ಒಂದು ಕಾಲವಿತ್ತು, ರಾಕ್ಷಸನೋ, ದೇವತೆಯೋ ಮಹಿಷಾಸುರನೋ ವೇಷ ಹಾಕಿ ರಂಜಿಸಿದ ಮಾತ್ರಕ್ಕೆ ಕಲಾವಿದರು ಯಾರೆಂದು ಎಳೆಯ ತಲೆಗಳಿಗೆ ಗೊತ್ತಾಗುತ್ತಲೇ ಇರಲಿಲ್ಲ. ಮಾಗಿದ ತಲೆಗಳು ಗುರುತು ಹಿಡಿಯುತ್ತಿದ್ದವು ಇಂತಿಂಥವರ ವೇಷವೆಂದು. ಮಹಿಷಾಸುರ ವೇಷ ಕಳಚಿದ ಮೇಲೆ ಹೇಗಿದ್ದಿರಬಹುದು ಎಂಬ ಕಲ್ಪನೆ ಮಾಡಲು ಕಷ್ಟವಾಗುತ್ತಿತ್ತು. ಇಂದು ಹಾಗಲ್ಲ, ಯಾವ್ಯಾವ ಆಟದಲ್ಲಿ ಯಾರ್ಯಾರಿಗೆ ಏನೇನು ವೇಷ ಎಂಬ ಮಾಹಿತಿ ವಿವರ ವಿವರವಾಗಿ ತಿಳಿಯುತ್ತದೆ. ಮಾತ್ರವಲ್ಲ ಫೇಸ್ಬುಕ್ಕಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ಮೂಲಕ ಕಲಾವಿದರ ಫ್ರೆಂಡುಗಳಾಗಿ ಖುಷಿ ಪಡಬಹುದು. ಕಲಾವಿದರ ಅಭಿಮಾನಿ ಬಳಗ ಕಟ್ಟಿಕೊಂಡು ಇನ್ನಷ್ಟು ಪ್ರಚಾರ ಕೊಡಬಹುದು. ಆನ್ ಲೈನ್ ಇದ್ದರೆ ಕಲಾವಿದರಿಗೆ ಅಲ್ಲಿಂದಲೇ ನೇರ ಫೀಡ್ ಬ್ಯಾಕ್ ಕೊಡಬಹುದು. ನಿಮ್ಮ ಆಟ ಹೀಗಾಗಿದೆ ಅಂತ. ಇಂದು ಕಲಾಭಿಮಾನಿಗಳಿಗೆ ಸಾಕಷ್ಟು ಆಯ್ಕೆಗಳಿವೆ. ಈ ಆಟ ಬಿಟ್ಟರೆ ಆ ಆಟ, ಅದು ಬಿಟ್ಟರೆ ಮತ್ತೊಂದು. ಯಾಕೆಂದರೆ ಪ್ರದರ್ಶನಗಳಿಗೆ ಕೊರತೆಯಿಲ್ಲ. ಇಷ್ಟದ ಕಲಾವಿದರ, ಇಷ್ಟದ ಸಮಯ, ಇಷ್ಟದ ಜಾಗದಲ್ಲೇ ಪ್ರದರ್ಶನಗಳನ್ನು ಏರ್ಪಡಿಸುವ ಸಂದರ್ಭಗಳು ಹೆಚ್ಚಿವೆ. ಆದ್ದರಿಂದ ಕಲಾಭಿಮಾನಿ ಚೂಸಿಯಾಗಿರ್ತಾನೆ. ಬೇಕಾದ್ದನ್ನು, ಬೇಕಾದಲ್ಲಿ ಆರಿಸಿ ನೋಡುವ ಸ್ವಾತಂತ್ರ್ಯ ಪಡೆದುಕೊಂಡಿದ್ದಾನೆ.

.........


ಅಂದು ಕಲಾವಿದರಿಗೂ ಓಡಾಟ, ವ್ಯವಸ್ಥೆ ಎಷ್ಟು ಕಷ್ಟವಿತ್ತು. ರಂಗಸ್ಥಳಕ್ಕೆ ಮ್ಯಾಟ್ ಹಾಕುತ್ತಿರಲಿಲ್ಲ. ತೌಡಿನ ಪುಡಿಯಲ್ಲಿ ಅಕ್ಷರಶಹ ಧೂಳೆಬ್ಬಿಸಿ ಕುಣಿಯಬೇಕಿತ್ತು. ಊರಿನಿಂದ ಊರಿಗೆ ಹೋಗಲು ಸಾಮಾನು ಸರಂಜಾಮು ತುಂಬಿದ ಲಾರಿಗಳಲ್ಲೇ ನೇತಾಡಿಕೊಂಡು ನಿದ್ದೆಗೆಟ್ಟು ಹೋಗಬೇಕು. ಸ್ವಂತ ವಾಹನ ಹೊಂದಿದವರು ಬೆರಳೆಣಿಕೆಯ ಮಂದಿ ಇದ್ದಾರು. ಬಹುತೇಕ ಕಲಾವಿದರು ಮನೆಗೆ ಹೋಗುವುದು ಯಾವತ್ತೋ ಒಂದು ದಿನ ಅಷ್ಟೆ. ಮಧ್ಯರಾತ್ರಿ ವಾಹನ ಸ್ಟಾರ್ಟ್ ಮಾಡಿ ಹೋಗುವ ಸಂದರ್ಭಗಳು ಬಲು ಅಪರೂಪ. ಇಂದು ಹಾಗಲ್ಲ, ಕೆಲವು ಕಲಾವಿದರಾದರೂ ಸ್ವಂತ ವಾಹನ ಹೊಂದಿದ್ದಾರೆ. ಜನಪ್ರಿಯರು ಒಂದೇ ರಾತ್ರಿ ಎರಡು ಮೂರು ಪ್ರದರ್ಶನಗಳನ್ನೂ ನಿಭಾಯಿಸಬಲ್ಲವರಾಗಿದ್ದಾರೆ. ಓಡಾಟಕ್ಕೆ ಎಲ್ಲಾ ಮೇಳಗಳಲ್ಲಿ ಸುಸಜ್ಜಿತ ಬಸ್ ವ್ಯವಸ್ಥೆಯಿದೆ. ಸಂಪರ್ಕ ಸಾಧನ ಸುಲಭವಾದ ಕಾರಣ ಹತ್ತಿರ ಆಟವಿದ್ದರೆ ದಿನಾ ಮನೆಗೂ ಹೋಗಬಹುದು. ಮೊಬೈಲ್ ಸಂಪರ್ಕ ಇರುವ ಕಾರಣ ಕಲಾವಿದನ ಮನೆಯವರು ಬೇಕಾದಾಗ ಅವರನ್ನು ಸಂಪರ್ಕಿಸಬಹುದು. ಹಿಂದಿನ ಕಾಲ ಊಹಿಸಿ, ಯಾವುದೋ ಊರಿನಲ್ಲಿರುವ ಕಲಾವಿದನಿಗೆ ತುರ್ತಾಗಿ ಸಂಪರ್ಕಿಸಬೇಕಾದರೆ ಏನೂ ಮಾಡುವ ಹಾಗಿಲ್ಲ. ಮೇಳಕ್ಕೆ ಲ್ಯಾಂಡ್ ಲೈನ್ ಫೋನೂ ಇರುವುದಿಲ್ಲವಲ್ಲ. ಜನಪ್ರಿಯ ಕಲಾವಿದರಿಗೆ ಮಳೆಗಾಲದಲ್ಲೂ ಸಾಕಷ್ಟು ಪ್ರದರ್ಶನ ಬುಕಿಂಗ್ ಇರುವುದರಿಂದ, ಪ್ರವಾಸಿ ಮೇಳಗಳಿರುವುದರಿಂದ ಕೈತುಂಬಾ ಕೆಲಸವೂ ಇರುತ್ತದೆ... ಹಾಗಾಗಿ ಬದುಕು ತುಸು ಹಸನಾಗಿದೆ. ಇದಕ್ಕೆ ಹೊರತಾದ ಕಲಾವಿದರೂ ಇರಬಹುದು...

..............


ಯಕ್ಷಗಾನಕ್ಕೆ ಕಲಾವಿದರು ಕಡಿಮೆಯಾಗಿಲ್ಲ, ಪ್ರೇಕ್ಷಕರೂ ಜಾಸ್ತಿಯಾಗಿದ್ದಾರೆ ಹೊರತು ಕಡಿಮೆಯಾಗಿಲ್ಲ. ಪ್ರೇಕ್ಷಕರ ಮನೋಭಾವ ಬದಲಾಗಿದೆ. ಜನರಿಗೆ ಪುರುಸೊತ್ತು ಕಡಿಮೆಯಾಗಿದೆ. ಕಲಾವಿದರಿಗೆ ಪ್ರಚಾರ, ಅವಕಾಶ, ಗೌರವ ಜಾಸ್ತಿ ಸಿಗುತ್ತಿದೆ. ಪ್ರದರ್ಶನಗಳು ಜಾಸ್ತಿಯಾಗಿವೆ. ಆದರೆ, ಕೆಲವೊಮ್ಮೆ ಅಬ್ಬರ, ಆಡಂಬರ, ಅತೀವ ಕಾಲಮಿತಿಯ ನಡುವೆ 20 ವರ್ಷಗಳ ಹಿಂದೆ ಕಂಡಂಥ ಯಕ್ಷಗಾನದ ತೀವ್ರ ಅನುಭೂತಿ ಸಿಗುತ್ತಿಲ್ಲವೇನೋ ಎಂಬ ಆತಂಕ ಇದೆ ಅಷ್ಟೆ.

-ಕೆಎಂ ತಲೆಂಗಳ, (ಬಲ್ಲಿರೇನಯ್ಯ, ಯಕ್ಷಕೂಟದ ಬರಹ).

Saturday, September 24, 2016

ನೋಡಿದನು ಕಲಿ ರಕ್ತಬೀಜನು.... (ಶ್ರೀದೇವಿ ಮಹಾತ್ಮೆಯಲ್ಲಿ ಕಾಡುವ ಸಾತ್ವಿಕ ರಾಕ್ಷಸ)


ಇಡೀ ರಾತ್ರಿಯ ಆಟ ನೊಡಿದ ದಣಿವಿನ ಅಂತಿಮ ಘಟ್ಟ...ಬೆಳಗ್ಗಿನ ಜಾವ 5 ಗಂಟೆಯ ಹೊತ್ತಿಗೆ ಅಷ್ಟೂ ಪ್ರಸಂಗಕ್ಕೊಂದು ಸ್ವರೂಪ ಕೊಡುವಂತೆ, ಅರೆನಿದ್ರೆಯಲ್ಲಿದವರಿದ್ದರೆ ಎಚ್ಚರಿಸಿ ಸೆಟೆದು ಕುಳಿತುಕೊಳ್ಳುವಂತಹ ಪಾತ್ರ ಪ್ರವೇಶವಾಗುತ್ತದೆ. ವೇಗದ ಪ್ರವೇಶ, ನಂತರದ ವಿವರ ಸಂಭಾಷಣೆ, ನಾಟ್ಯ, ಭಾವ, ಭಂಗಿ ಹಾಗೂ ಪಾತ್ರ ಪೋಷಣೆ ಎಲ್ಲದರಲ್ಲೂ ಗಮನ ಸೆಳೆಯುವ ಪಾತ್ರ ಶ್ರೀದೇವಿ ಮಹಾತ್ಮೆ ಪ್ರಸಂಗದ ರಕ್ತಬೀಜಾಸುರ. 

ಮೇದಿನಿ ನಿರ್ಮಾಣ, ಮಹಿಷ ಮರ್ಧಿನಿ ಹಾಗೂ ಶಾಂಭವಿ ವಿಲಾಸವೆಂಬ ಮೂರು ಕಥಾನಕಗಳ ಮಿಶ್ರಣ ಶ್ರೀದೇವಿ ಮಹಾತ್ಮೆ ಕರಾವಳಿ ಭಾಗದ ನಿತ್ಯ ನೂತನ ಪ್ರಸಂಗ. ಯಕ್ಷಗಾನಾಭಿಮಾನಿಗಳು ಸತತ ನೋಡಿದರೂ ಇನ್ನಷ್ಟು ನೋಡುವಂತೆ ಮಾಡುವ, ಯಕ್ಷಗಾನದ ಇತಿಹಾಸದಲ್ಲಿ ಲಕ್ಷಾಂತರ ಪ್ರದರ್ಶನಗಳನ್ನು ಕಂಡಿರುವ ಶ್ರೀದೇವಿ ಮಹಾತ್ಮೆಯ ಕಥಾ ರಚನೆಯೇ ಹಾಗಿದೆ. ರಾತ್ರಿ 10 ಗಂಟೆ ಕಥೆ ಆರಂಭವಾದರೆ ಮುಂಜಾವಿನ 6 ಗಂಟೆಯ ತನಕ ಸತತ ಹಿಡಿದಿಟ್ಟುಕೊಳ್ಳುವಂತೆ ಮಾಡುವ ಪಾತ್ರಗಳ ಸಂಯೋಜನೆ, ಪದಗಳು ಹಾಗೂ ಧಾರ್ಮಿಕವಾಗಿಯೂ ವಿಶೇಷ ಮಹತ್ವ ಪಡೆದಿರುವ ಬಹುತೇಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರು ಹೆಚ್ಚಾಗಿ ಆಡುವ ಪ್ರಸಂಗವಿದು. ಇತರ ಮೇಳದವರೂ, ತೆಂಕು, ಬಡಗು ಉಭಯ ತಿಟ್ಟುಗಳಲ್ಲೂ ಸತತ ಪ್ರದರ್ಶನ ಕಾಣುವ ಕಥಾನಕವಿದು.

ಮಹಿಷ ವಧೆ, ಚಂಡ ಮುಂಡ, ಧೂಮ್ರಾಕ್ಷಾದಿ ದೈತ್ಯರ ಸಂಹಾರವಾದ ಬಳಿಕ ಇನ್ನೇನು, ಕದಂಬಾ ವನದಲ್ಲಿರುವ ಶಾಂಭವಿಯನ್ನು ಎದುರಿಸಲು ಸ್ವತಹ ಶುಂಭ ದಾನವ ಹೊರಡಲು ಉದ್ಯುಕ್ತನಾಗುವ ವೇಳೆಗೆ ಮಿಂಚಿನ ವೇಗದಲ್ಲಿ (ಬಹುತೇಕ ಮುಂಜಾನೆಯ 5 ಗಂಟೆಗೆ) ಸಭಾ ಪ್ರವೇಶ ಮಾಡುವ ರಕ್ತಬೀಜನ ಪಾತ್ರ ಮುಂದಿನ ಸಾಧಾರಣ ಒಂದು ಗಂಟೆ ಕಾಲ ಸಭಿಕರನ್ನು ಹಿಡಿದಿಟ್ಟುಕೊಳ್ಳುವುದು ಮಾತ್ರವಲ್ಲ, ರಾಕ್ಷಸ ಪಾತ್ರವಾದರೂ ದೇವಿ ಮಹಾತ್ಮೆಯ ಅಲಿಖಿತ ಹೀರೋ ಥರ ಭಾಸವಾಗುತ್ತಾನೆ. ಪಾತ್ರದೊಳಗೆ ಕಾಣುವ ಸಾತ್ವಿಕತೆ, ಶುಂಭ ದಾನವನಿಗೆ ಹೇಳುವ ಹಿತವಚನಗಳು, ಅವರಿಬ್ಬರ ನಡುವಿನ ಸಂವಾದ, ಬಳಿಕ ಕದಂಬಾ ವನದಲ್ಲಿ ಶ್ರೀದೇವಿಯನ್ನು ಸ್ತುತಿಸುವುದು, ಕ್ಷಮೆ ಕೇಳುವುದು, ನಂತರ ಹೋರಾಡುವುದು, ಹಣೆಯೊಡೆದ ವೇಳೆ ರಕ್ತವನ್ನು ಭೂಮಿಗೆ ಚೆಲ್ಲಿದಾಗ ಕೋಟಿ ಕೋಟಿ ಸಂಖ್ಯೆಯಲ್ಲಿ ರಕ್ತಬೀಜರು ಹುಟ್ಟುವುದು, ಶ್ರೀದೇವಿಯೇ ರಕ್ತೇಶ್ವರಿಯಾಗಿ ಬೃಹತ್ ನಾಲಗೆ ಚಾಚಿ ರಕ್ತವನ್ನು ಭೂಮಿಗೆ ಬೀಳದಂತೆ ತಡೆದು ರಕ್ತಬೀಜನನ್ನು ಕೊಲ್ಲುವುದು... ನಂತರ 10 ನಿಮಿಷದಲ್ಲಿ ಶುಂಭ ನಿಶುಂಭರ ವಧೆಯೊಂದಿಗೆ ಪ್ರಸಂಗ ಕೊನೆಯಾಗುತ್ತದೆ. ಆವೇಳೆಗೆ ಮುಂಜಾನೆಯ ಸೂರ್ಯ ಮೂಡಿರುತ್ತಾನೆ.


ಆಟದ ಬಯಲು ಬಿಟ್ಟು ಮನೆಗೆ ಹೊರಟರೂ ಮತ್ತೆ ಮತ್ತೆ ಕಾಡುವುದು ರಕ್ತಬೀಜನ ಪಾತ್ರವೇ... ಯಾವುದೇ ಮೇಳದ ಅಗ್ರ ಶ್ರೇಣಿಯ ಕಲಾವಿದರು ನಿರ್ವಹಿಸುವ ರಕ್ತಬೀಜನ ಪಾತ್ರ ಪ್ರವೇಶವಾಗುವುದೇ ಮುಂಜಾನೆ 5 ಗಂಟೆಗೆ, ಪಾತ್ರ ನಿರ್ವಹಣೆ ಸುಮಾರು ಒಂದು ಗಂಟೆ ಕಾಲ. ಆದರೂ ಆ ಪಾತ್ರಕ್ಕೆ ಅಷ್ಟು ತೂಕವಿದೆ, ಪೈಪೋಟಿಯಿದೆ, ಯಕ್ಷಗಾನ ವಿದ್ವಾಂಸರ ಕಡು ವಿಮರ್ಶೆಗೂ ಒಳಗಾಗುವ ಪಾತ್ರವದು. ಅದ್ಭುತ ಬಣ್ಣಗಾರಿಕೆ, ಕುಣಿತ, ನುರಿತ ವಾಕ್ಚಾತುರ್ಯ, ಭಾವಾಭಿನಯ, ಬೆಳಗ್ಗಿನ ಜಾವ ಕ್ಲಪ್ತ ಸಮಯದಲ್ಲಿ ಪ್ರಸಂಗವನ್ನು ಕೊಂಡುಹೋಗಬೇಕಾದ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಯೇ ರಕ್ತಬೀಜನ ಪಾತ್ರ ಮೆರೆಯುತ್ತದೆ. ಇಂದು ಯಾರು ರಕ್ತಬೀಜ ಹಾಕುತ್ತಾರಂತೆ ಎಂದು ಕೇಳಿಯೇ ಯಕ್ಷಪ್ರಿಯರು ಆಟಕ್ಕೆ ಹೋಗುವುದುಂಟು.

ಒಮ್ಮೆ ಪರಮ ಸಾತ್ವಿಕನಾಗಿ, ಒಡೆಯ ಶುಂಭನಿಗೆ ಹಿತವಚನ ಹೇಳುವ ಮಂತ್ರಿಯಾಗಿ, ಸ್ವತಹ ಯುದ್ಧಕ್ಕೆ ಹೊರಡುವ ಸೇನಾನಾಯಕನಾಗಿ, ಮತ್ತೆ ಕದಂಬಾ ವನದಲ್ಲಿ ಶ್ರೀದೇವಿಯ ಭಕುತನಾಗಿ, ಭಜನಕನಾಗಿ, ಆಕೆ ಸಂಧಾನವನ್ನು ಧಿಕ್ಕರಿಸಿದಾಗ ಟಿಪಿಕಲ್ ರಾಕ್ಷಸನಾಗಿ ಮೆರೆಯುವ ವಿವಿಧ ಹಂತಗಳನ್ನು ಒಳಗೊಂಡಿರುವ ಅಷ್ಟೂ ವಿಭಾಗಗಳೂ ಆಕರ್ಷಕವೇ ಆಗಿದೆ.
ಧನುಜೇಶ ಕೇಳೆನ್ನಾ ಮಾತ....
ಅಲ್ಪನೇ ಧೂಮ್ರಲೋಚನನು..
ತರುಣಿಯಲ್ಲ ಅವಳ್ ಆದಿಮಾಯೆ...
ನಿನಗೆ ನಾಚಿಕೆಯೇ...
ನೋಡಿದನು ಕಲಿ ರಕ್ತಬೀಜನು...
ಏನಾಕಂನಿಭವಕ್ತ್ರೇ...


ಹೀಗೆ, ರಕ್ತಬೀಜನ ಪಾತ್ರದಲ್ಲಿ ಬರುವ ಅಷ್ಟೂ ಪದ (ಹಾಡುಗಳು) ಮತ್ತೆ ಮತ್ತೆ ಕೇಳುವಂಥದ್ದು. ಸಾಮಾನ್ಯವಾಗಿ ಮೇಳದ ಪ್ರಧಾನ ಭಾಗವತರ ಉಪಸ್ಥಿತಿಯಲ್ಲಿ ಕೇಳಿ ಬರುವ ಈ ಮೇಲಿನ ಎಲ್ಲಾ ಬದಗಳನ್ನೂ ಪ್ರೇಕ್ಷಕರನ್ನು ಪಿನ್ ಡ್ರಾಪ್ ಸೈಲೆನ್ಸಿನಲ್ಲಿ ಆಲಿಸುತ್ತಾರೆ. ಇಡೀ ರಾತ್ರಿ ನಿದ್ದೆಗೆಟ್ಟ ಅಮಲಿನಲ್ಲಿರುವವರೂ, ಚಳಿಯಲ್ಲಿ ಸ್ವೆಟರ್ ತೊಟ್ಟು ಬೀಡಿಯೆಳೆದು ನಿದ್ದೆ ಕೊಡವಿದವರೂ, ಚುರುಮುರಿ, ಚಹಾ ಕುಡಿದು ಮತ್ತೆ ಫ್ರೆಶ್ ಆಗಿ ಬಂದವರೂ, ಬೆಳಗ್ಗೆ 2 ಗಂಟೆಗೆ ಪ್ರಧಾನ ಭಾಗವತರು ಬರುವ ವೇಳೆಗೆ ತಾಜಾ ನಿದ್ದೆ ಮುಗಿಸಿ ಬಂದು ಉಲ್ಲಸಿತರಾಗುವವರೆಲ್ಲರೂ ಮಂತ್ರಮುಗ್ಧರಾಗಿ ನೋಡುವ ಸನ್ನಿವೇಶವದು....

ತೆಂಕಿನಲ್ಲಿ ಸದ್ಯ ಸುಣ್ಣಂಬಳ ವಿಶ್ವೇಶ್ವರ ಭಟ್ (ಕಟೀಲು ಆರನೇ ಮೇಳ), ಸುಬ್ರಾಯ ಹೊಳ್ಳ ಕಾಸರಗೋಡು, ಜಯಪ್ರಕಾಶ ಶೆಟ್ಟಿ ಪೆರ್ಮುದೆ (ಹೊಸನಗರ ಮೇಳ), ಸಂತೋಷ್ ಕುಮಾರ್ ಮಾನ್ಯ (ಎಡನೀರು ಮೇಳ), ಗಣೇಶ ಶೆಟ್ಟಿ ಕನ್ನಡಿಕಟ್ಟೆ (ಕಟೀಲು ಮೂರನೇ ಮೇಳ), ಬೆಳ್ಳಾರೆ ಮಂಜುನಾಥ ಭಟ್ (ಕಟೀಲು ಎರಡನೇ ಮೇಳ), ಗಣೇಶ ಚಂದ್ರಮಂಡಲ (ಕಟೀಲು ನಾಲ್ಕನೇ ಮೇಳ), ರಾಕೇಶ್ ರೈ ಅಡ್ಕ (ಕಟೀಲು ಐದನೇ ಮೇಳ), ಗಣೇಶ ಅರಳ (ಕಟೀಲು ಒಂದನೇ ಮೇಳ), ಸೂರಿಕುಮೇರು ಗೋವಿಂದ ಭಟ್ (ಧರ್ಮಸ್ಥಳ ಮೇಳ), ಕೊಳ್ತಿಗೆ ನಾರಾಯಣ ಗೌಡ (ಭಗವತಿ ಮೇಳ)...ಸೇರಿದಂತೆ ಘಟಾನುಘಟಿ ರಕ್ತಬೀಜ ಪಾತ್ರ ನಿರ್ವಹಿಸುವವರಿದ್ದಾರೆ. ಪೆರುವಾಯಿ ನಾರಾಯಣ ಶೆಟ್ಟಿ, ಸಂಪಾಜೆ ಶೀನಪ್ಪ ರೈ ಅವರಂತಹ ಹಿರಿಯ ತಲೆಮಾರಿನ ರಕ್ತಬೀಜ ಪಾತ್ರದಲ್ಲಿ ಹೆಸರುವಾಸಿಗಳಾದವರಿದ್ದಾರೆ. 

ಪ್ರತಿಯೊಬ್ಬರ ಪಾತ್ರ ಪೋಷಣೆಗೂ ಅವರದ್ದೇ ಆದ ವೈಶಿಷ್ಟ್ಯವಿದೆ. ಏನೇ ಇದ್ದರೂ ಮಾತು, ಕುಣಿತ, ಬಣ್ಣ ತ್ರಿವಳಿ ಸಂಗಮವಾದರೇನೇ ರಕ್ತಬೀಜ ಪಾತ್ರದ ಗಾಂಭೀರ್ಯ, ಸ್ವಾರಸ್ಯ ಹೆಚ್ಚುವುದು.

ಕತೆಯೊಂದಕ್ಕೆ ತಿರುವು ತರಬಲ್ಲ, ಕತೆಯ ಹರಿವನ್ನು ಇನ್ನಷ್ಟು ಚುರುಕು ಮಾಡಬಲ್ಲ, ಇಡೀ ರಂಗವನ್ನು ಆವರಿಸಿ ಕತೆಗೊಂದು ತಾರ್ಕಿಕ ಕ್ಲೈಮಾಕ್ಸ್ ತರಬಲ್ಲ, ಕತೆಯ ಓಘಕ್ಕೆ ಇನ್ನೊಂದು ಆಯಾಮ ಕೊಡಬಲ್ಲ... ಯಾವತ್ತೂ ಕಾಡುವ ಪಾತ್ರ ರಕ್ತಬೀಜ... ನೀವೇನಂತೀರಿ....(ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟದಲ್ಲಿ ಬರುವ ರಕ್ತಬೀಜಾಸುರನ ಬಗ್ಗೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನ್ನ ಅನಿಸಿಕೆಯಿದು. ಯಾವುದೇ ಜಿಜ್ಞಾಸೆ, ಪಾಂಡಿತ್ಯ ಇದ್ದು ಬರೆದುದಲ್ಲ. ಒಬ್ಬ ಸಾಧಾರಣ ಪ್ರೇಕ್ಷಕನ ಅನಿಸಿಕೆಯೆಂದಷ್ಟೇ ಸ್ವೀಕರಿಸಿ)

-ಕೆ.ಎಂ.ತಲೆಂಗಳ.  (ಬಲ್ಲಿರೇನಯ್ಯ ಯಕ್ಷಕೂಟ, ವಾಟ್ಸಪ್ ಬಳಗಕ್ಕಾಗಿ).

Sunday, August 28, 2016

ನಿರಾಸೆಗಳ ಹಿಂದೆ ನಿರೀಕ್ಷೆಯೆಂಬ ದುಷ್ಟ!


ಮರಕುಟಿಕ ಅಂತೊಂದು ಪಕ್ಷಿಯಿದೆ. ಮರವನ್ನು ತನ್ನ ಕೊಕ್ಕಿನಿಂದ ಕುಕ್ಕಿ ತೂತು ಮಾಡಿ ಹುಳ ಹುಪ್ಪಟೆಳನ್ನು ಕಿತ್ತು ತಿನ್ನೋದೆ ಅದರ ಬದುಕು. ದಿನವಿಡೀ ಮರ ಕುಕ್ಕಿ ರಾತ್ರಿ ತನ್ನ ಕೊಕ್ಕು ನೋಯುವಾಗ ಅದು ಅಂದುಕೊಳ್ಳುತ್ತದಂತೆ, ‘ಈ ಬದುಕು ಸಾಕು, ನಾಳೆಯಿಂದ ಆಹಾರ ಹುಡುಕಲು ಬೇರೆ ಮಾರ್ಗ ನೋಡಬೇಕು’ ಅಂತ. ಆದರೆ, ಮರುದಿನ ಸೂರ್ಯೋದಯವಾದರೆ ಸಾಕು, ಮರಕುಟಿಕ ಎಲ್ಲ ಮರೆತು ಮತ್ತದೇ ಮರ ಕುಕ್ಕುವ ಕಾಯಕದಲ್ಲ ವ್ಯಸ್ತವಾಗಿ ಬಿಡುತ್ತದೆ. ಕೊಕ್ಕು ನೋಯುತ್ತದಾದರೂ ಅದಕ್ಕೆ ಆ ಕಸುಬು ಬಿಟ್ಟು ಬೇರೆ ಗೊತ್ತಿಲ್ಲ. ಕೆಲವೊಮ್ಮೆ ನಾವೂ ಹಾಗೆ... ಪರಿಣಾಮಗಳು ಗೊತ್ತಿದ್ದರೂ ನಾವು ಮತ್ತದೆ ಹುಸಿ ನಿರೀಕ್ಷೆಗಳಿಗೆ ಜೋತು ಬಿದ್ದು ನೆಮ್ಮದಿ ಕಳೆದುಕೊಳ್ಳುತ್ತಿದ್ದೇವಾ? ಇದ್ದುದನ್ನು ಇದ್ದಂತೆ ಯಾಕೆ ಸ್ವೀಕರಿಸ್ತಾ ಇಲ್ಲ?

............

‘ಆಸೆಯೇ ದುಖಕ್ಕೆ ಮೂಲ’ ಎಂದು ಅಂದು ಬುದ್ಧ ಹೇಳಿದ್ದು.... ಅದನ್ನು ‘ನಿರೀಕ್ಷೆಯೇ ನಿರಾಸೆಗಳಿಗೆ ಮೂಲ’ ಎಂದೂ ವಿಸ್ತರಿಸಬಹುದು ಅಲ್ವ? ಸಾಮಾನ್ಯ ಜ್ಞಾನ ಇರುವ ಪ್ರತಿಯೊಬ್ಬರಿಗೂ ಗೊತು,್ತ ಸಾಮಾಜಿಕ ಒಡನಾಟ, ಕೌಟುಂಬಿಕ ಬದುಕನಲ್ಲಿ ಹಾಸಿಗೆ ಮೀರಿ ಕಾಲು ಚಾಚಿಸುವ ನಿರೀಕ್ಷೆಗಳೇ ನಮ್ಮೊಳಗೊಂದು ಭ್ರಮ ನಿರಸನ, ನಿರಾಸೆ, ವೇದನೆಗಳನ್ನು ಹುಟ್ಟು ಹಾಕುವುದೆಂದು. ಅದು ಗೊತ್ತಿದ್ದೂ ಗೊತ್ತಿದ್ದೂ ನಮ್ಮೊಳಗೆ ಮೂಡಬಹುದಾದ ನಿರೀಕ್ಷೆಗಳಿಗೆ ಜೋತು ಬೀಳುವುದನ್ನು ನಾವು ನಿಲ್ಲಿಸುವುದಿಲ್ಲ. ಬಹುತೇಕ ನಿರೀಕ್ಷೆಗಳು ನಮ್ಮ ನಿಯಂತ್ರಣದೊಳಗೆ, ನಮ್ಮ ನಿರ್ಧಾರದ ಪರಿಧಿಯೊಳಗೇ ಕ್ಷಯಿಸುವಂಥವು. ಆದರೂ ಆ ಒಂದು ಮೋಹ, ಮಾಯೆಯ ಭ್ರಮೆಯಿಂದ ತಕ್ಷಣಕ್ಕೆ ಹೊರಬರಲು ಸಾಧ್ಯವಾಗುವುದಿಲ್ಲ.
ಕಂಡದ್ದು ಕಂಡ ಹಾಗೇ...: ಒಂದು ಸ್ನೇಹ, ಸಂಬಂಧ, ಒಂದು ಪರಿಸ್ಥಿತಿ, ಕೆಲಸ, ಅವಕಾಶವನ್ನು ಎಷ್ಟೋ ಬಾರಿ ಇದ್ದುದನ್ನು ಇದ್ದ ಹಾಗೆ ಸ್ವೀಕರಿಸುವಲ್ಲಿ ನಾವು ಎಡವುತ್ತೇವೆ. ಪ್ರತಿಯೊಂದರ ಇತಿಮಿತಿ ನಮಗೆ ಗೊತ್ತಿರುವುದೇ ಆದರೂ, ಇನ್ನಷ್ಟರ ನಿರೀಕ್ಷೆ ಅಥವಾ ನಮ್ಮ ಮೂಗಿನ ನೇರಕ್ಕೆ, ನಮ್ಮ ನಿರೀಕ್ಷೆಯ ತಾಳಕ್ಕೆ, ನಮ್ಮ ಮಾತಿನ ಧಾಟಿಗೆ ನಮ್ಮ ಸಂಪರ್ಕದಲ್ಲಿರುವುದು ನಿಲುಕಬೇಕು, ಬಾಗಬೇಕು, ಅನುಸರಿಸಬೇಕೆಂಬ ಹಂಬಲ.
ಸುಮ್ನೆ ಯೋಚಿಸಿ, ಬಹಳಷ್ಟು ಬಾರಿ ಕೈಗೂಡದ ಹಂಬಲಗಳನ್ನು ಪೋಷಿಸಿ, ಅವು ಹುಚ್ಚುತನವೆಂದು ಗೊತ್ತಿದ್ದೂ ಗೊತ್ತಿದ್ದೂ ಮತ್ತೊಮ್ಮೆ ಅವು ಸಂಭವಿಸದೆ ಹೋದಾಗ ನೊಂದುಕೊಳ್ಳುವುದು ಸ್ವಯಂಕೃತಾಪರಾಧ ಹೊರತು ಬೇರೆಯವರನ್ನು ದೂಷಿಸಿ ಪ್ರಯೋಜನವಿಲ್ಲ, ಅಲ್ವ?
ಜಸ್ಟ್ ಪಾಸ್ ಆಗುವಂತೆ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಸಾಧಿಸುವ ಕನಸು ಕಟ್ಟಿ, ಕೊನೆಗೆ ಅದೃಷ್ಟವಶಾತ್ ಫಸ್ಟ್ ಕ್ಲಾಸ್‌ನಲ್ಲಿ ಪಾಸಾದರೆ, ಅದಕ್ಕೂ ಸಂತಸ ಪಡದೆ ಅತ್ತರೆ ಅದು ಭ್ರಮೆ ಎನ್ನಲು ಬುದ್ಧನಂತೆ ತತ್ವಜ್ಞಾನಿಯಾಗಬೇಕಿಲ್ಲ. ಸಾಮಾನ್ಯ ಜ್ಞಾನ ಬೆಳೆಸಿಕೊಂಡರೆ ಸಾಕು!
ಅದಕ್ಕೇ ದಾರ್ಶನಿಕರೊಬ್ಬರು ಹೇಳಿದ್ದಾರೆ...
‘ಯಾವತ್ತೂ ನಿರೀಕ್ಷಿಸಬೇಡ, ಕಲ್ಪಿಸಬೇಡ, ಕೇಳಬೇಡ, ಆಗ್ರಹಿಸಬೇಡ, ಅದೇನು ಸಂಭವಿಸಲಿದೆಯೋ ಅದು ಘಟಿಸಲಿ, ಅದೇನು ಸಂಭವಿಸಬೇಕಿತ್ತೋ ಅದೇ ಆಗಲಿ, ಅದನ್ನು ನೀನು ಸ್ವೀಕರಿಸು’ ಅಂತ.
ಇದು ಆಧ್ಯಾತ್ಮಿಕ ಚಿಂತನೆಯ ಧಾಟಿ ಎನಿಸಿದರೂ ಇಲ್ಲೊಂದು ಬದುಕಿನ ಕಟು ವಾಸ್ತವದ ಚಿತ್ರಣ ಸಿಗುತ್ತದೆ.
---------
ನಿರೀಕ್ಷೆಗಳ ಹತ್ತು ಹಲವು ಮುಖ:
೧) ಅವನು/ಅವಳು ಹೀಗೆಯೇ ಇರಲೆಂಬ ನಿರೀಕ್ಷೆ: ಬದುಕಿನ ವಿವಿಧ ಮಜಲುಗಳಲ್ಲಿ ಸಂಪರ್ಕಕ್ಕೆ ಬರುವ ಸಹಪಾಠಿಯೋ, ಸ್ನೇಹಿತರೋ, ಸಹೋದ್ಯೋಗಿಗಳೋ ಯಾರೆ ಇರಲಿ... ಅವನು/ಅವಳು ಹೀಗೆಯೇ ಇದ್ರೆ ಚಂದ ಎಂಬ ಪೂರ್ವಾಗ್ರಹ ಪೀಡಿತ ನಿರೀಕ್ಷೆ ಎಷ್ಟೋ ಬಾರಿ ಸಂಬಂಧಗಳ ಎಳೆಗಳನ್ನು ಸಡಿಲಗೊಳಿಸುವುದು. ಪ್ರತಿಯೊಬ್ಬರೂ ಬೆಳೆದು ಬಂದ ದಾರಿ, ಕೌಟುಂಬಿಕ ಹಿನ್ನೆಲೆ, ದೊರೆತ ಅವಕಾಶಗಳು, ಅವರ ಅಧ್ಯಯನ ವಿಧಾನ, ಬದುಕಿನ ದಾರಿಯಲ್ಲಿ ಎದುರಿಸಿದ ಪರಿಸ್ಥಿತಿಗಳ ಆಧಾರದಲ್ಲಿ ಅವರವರ ಚಿಂತನೆ, ನಂಬಿಕೆ, ಮನೋಧರ್ಮ, ನಡವಳಿಕೆ ರೂಪುಗೊಂಡಿರುತ್ತದೆ. ಇದು ನನ್ನ, ನಿಮ್ಮ ಸಹಿತ ಪ್ರತಿಯೊಬ್ಬರ ಬಾಳಿನಲ್ಲೂ ಇರುವ ಸತ್ಯ. ಹಾಗಾಗಿ ಯಾರೋ ಒಬ್ಬರು ನಿಮ್ಮ ಸ್ನೇಹಿತರ ವಲಯಕ್ಕೆ ಬಂದ ತಕ್ಷಣ ನಿಮ್ಮ ನಂಬಿಕೆಗನುಗುಣವಾಗಿ ಅವರು ಇರಬೇಕು, ನಿಮ್ಮ ಅಭಿರುಚಿಗನುಗುಣವಾಗಿ ವರ್ತಿಸಬೇಕು ಎಂದು ನೀವು ನಿರೀಕ್ಷಿಸುವುದು ತಪ್ಪಾಗುತ್ತದೆ. ಇಬ್ಬರು ವ್ಯಕ್ತಿಗಳ ನಡುವಿರುವ ಸಾಮಾನ್ಯ ಅಭಿರುಚಿಗಳ ಕಾರಣಕ್ಕೆ ಸ್ನೇಹ ಚಿಗುರೊಡೆಯುತ್ತದೆ. ಅದೇ ತಳಹದಿ ಮೇಲೆ ಮುಂದುವರಿಯುತ್ತದೆ ವಿನಃ ನೂರಕ್ಕೆ ನೂರು ಇಬ್ಬರ ಚಿಂತನೆಗಳು ಒಂದೇ ಎಂಬ ಕಾರಣಕ್ಕಲ್ಲ. ಹಾಗಾಗಿ ನಿಮ್ಮ ಒಡನಾಡಿಗಳೆಲ್ಲಾ ನಿಮ್ಮ ಮೂಗಿನ ನೇರಕ್ಕೆ ಇರಬೇಕೆಂದು ಅಪೇಕ್ಷಿಸುವುದು ತಪ್ಪು. ಉದಾ: ನಿಮಗೆ ಮಾಂಸಾಹಾರ ತಿನ್ನುವುದು ಇಷ್ಟವಿಲ್ಲ, ಹಾಗಂತ ನಿಮ್ಮ ಸ್ನೇಹಿತರೂ ತಿನ್ನಬಾರದು ಎಂದರೆ ಹೇಗೆ? ಯಾವತ್ತೋ ಒಮ್ಮೆ ಅವರು ಮಾಸಾಂಹಾರ ತಿನ್ನುತ್ತಿದ್ದುದನ್ನು ಕಂಡು ‘ನಿನ್ನಿಂದ ಇದನ್ನು ನಿರೀಕ್ಷಿಸಿರಲಿಲ್ಲ ನಂಗೆ ಹರ್ಟ್ ಆಯ್ತು’ ಎಂದು ಮುಖ ತಿರುಗಿಸಿಕೊಂಡರೆ ಹೇಗೆ? ತಪ್ಪು ತಿಂದವರದ್ದಲ್ಲ, ತಿನ್ನೋದಿಲ್ಲ ಎಂದು ನಿರೀಕ್ಷಿಸಿದ ನಿಮ್ಮದು.
೨) ಬಂದಿದ್ದನ್ನು ಹಾಗೆಯೇ ಸ್ವೀಕರಿಸುವುದು: ಒಬ್ಬ ಸ್ನೇಹಿತನಿರಲಿ, ಒಂದು ಪರಿಸ್ಥಿತಿಯಿರಲಿ, ಒಂದು ಅವಕಾಶವಿರಲಿ ಎಷ್ಟೋ ಬಾರಿ ಬಂದಿದ್ದನ್ನು ಹಾಗೆಯೇ ಸ್ವೀಕರಿಸುವುದು ಜಾಣತನ ಹಾಗೂ ಅದು ಸಹಜ ಪ್ರವೃತ್ತಿ ಕೂಡಾ. ಯಾಕೆಂದರೆ ನಮ್ಮ ಮೂಗಿನ ನೇರಕ್ಕೆ ಜಗತ್ತು ಇರುವುದಲ್ಲ, ಜಗತ್ತಿನೊಳಗೆ ನಾವಿರುವುದು. ಪ್ರತಿಯೊಬ್ಬರಿಗೂ ಅವರವರ ಇಷ್ಟದಂತೆ ಬದುಕುವ ಹಕ್ಕಿದೆ.  ಈ ನಡುವೆ ಕಂಡು ಬರುವ ಕೆಲವು ದೈಹಿಕ ನ್ಯೂನತೆಗಳು, ಅವಕಾಶದ ಕೊರತೆಗಳು, ದುರಾದೃಷ್ಟದ ಕ್ಷಣಗಳನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ (ಮಾನವ ಪ್ರಯತ್ನದ ಹೊರತಾದ ಸಂದರ್ಭಗಳು). ಹಾಗಾಗಿ ಅವುಗಳ ಬಗ್ಗೆ ಕೊರಗುತ್ತಾ ಕೂರುವ ಬದಲು, ಬಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹಾಗೆಯೇ ಸ್ವೀಕರಿಸುವುದು ಆರೋಗ್ಯವಂತ ಮನಸ್ಸುಗಳ ವೃದ್ಧಿಗೆ ಸಹಕಾರಿ. ಕೊರಗಿದ ಕೂಡಲೇ, ಕೋಪಿಸಿಕೊಂಡ ಕೂಡಲೇ ಪರಿಸ್ಥಿತಿ ಬದಲಾಗುವುದಿಲ್ಲ. ಒಂದು ಅವಕಾಶ, ಒಬ್ಬ ಸ್ನೇಹಿತನನ್ನು ಅವನ ಉತ್ತಮ ಗುಣ, ಕೊರತೆಗಳ ಸಹಿತ ಸ್ವೀಕರಿಸಿದರೇನೇ ಸ್ನೇಹ, ಅವಕಾಶಗಳು ಉಳಿಯುವುದು. ಇಲ್ಲವಾದರೆ ನೀವೊಬ್ಬ ಪ್ರತ್ಯೇಕವಾದಿಯಾಗಿ ಬದುಕಬೇಕಾದೀತು ಅಷ್ಟೆ.
೩) ನಿರೀಕ್ಷೆಗಳನ್ನು ಬದಿಗಿರಿಸಿ ವಾಸ್ತವವಾದಿಗಳಾಗಿ: ಬದುಕಿನಲ್ಲಿ ಅನುಭವಿಸಿದ ಸನ್ನಿವೇಶಗಳು, ಕಲಿತ ಪಾಠಗಳು ಅನುಭವದ ಮೂಟೆಯೊಳಗೆ ಸಾಕಷ್ಟು ವಿಚಾರಗಳನ್ನು ತುಂಬಿರುತ್ತವೆ. ಹಾಗಾಗಿ ‘ಈ ದಾರಿಯಲ್ಲಿ ಹೋದರೆ ಎಲ್ಲಿ ತಲುಪೀತು?’ ಎಂಬ ಜ್ಞಾನ ಖಂಡಿತಾ ಪ್ರತಿಯೊಬ್ಬರಲ್ಲಿ ಇರುತ್ತದೆ. ಅರಬ್ಬಿ ಸಮುದ್ರಕ್ಕೆ ಹೋಗುವ ದಾರಿಯಲ್ಲಿ ನಡೆದು ಹಿಮಾಲಯ ತಲುಪಬೇಕು ಎಂಬ ಹುಚ್ಚು ಭ್ರಮೆ, ನಿರೀಕ್ಷೆ ಹೊಂದುವುದು ಮೂರ್ಖತನ. ಹಾಗೆಯೇ ದಿಢೀರ್ ಶ್ರೀಮಂತರಾಗಬೇಕು, ಸುಂದರವಾಗಿ, ಐಷಾರಾಮಿಯಾಗಿರುವುದು ಎಲ್ಲ ನನ್ನ ಪಾಲಾಗಬೇಕು, ನಾನು ಏಕಾಏಕಿ ಪ್ರಸಿದ್ಧನಾಗಬೇಕು ಎಂಬಿತ್ಯಾದಿ ಹುಚ್ಚು ನಿರೀಕ್ಷೆಗಳು, ಅದನ್ನು ಈಡೇರಿಸಲು ಹಿಡಿಯುವ ವಾಮ ಮಾರ್ಗಗಳು ಇವೆಲ್ಲಾ ಅಸಹಜ ನಡವಳಿಕೆಗಳ ಉತ್ಪತ್ತಿಗೆ ರಹದಾರಿಗಳು ಹೊರತು ದೀರ್ಘಾವಧಿಯಲ್ಲಿ ಬದುಕನ್ನು ಬೆಳಗುವ ಅಂಶಗಳಲ್ಲ. ಹಾಗಾಗಿ ಹುಸಿ ನಿರೀಕ್ಷೆ, ನಿಮ್ಮ ಅಂತರಾತ್ಮವನ್ನೇ ಮೋಸಗೊಳಿಸುವಂತಹ ಭ್ರಮೆಗಳೊಂದಿಗೆ ಬದುಕುವ ಬದಲು ವಾಸ್ತವವಾದಿಗಳಾಗಲು ಪ್ರಯತ್ನಿಸಿ. ಆಗ ಎಷ್ಟೋ ಪ್ರಮಾಣದ ನಿರಾಸೆಗಳನ್ನು ಕಡಿಮೆಗೊಳಿಸಬಹುದು. ವಿನಾ ಕಾರಣ ಕೊರಗು, ನಿರಾಸೆ, ಋಣಾತ್ಮಕ ಚಿಂತನೆಗಳನ್ನು ತಪ್ಪಿಸಿ ಆಹ್ಲಾದಕರ ಬದುಕು ರೂಪಿಸಬಹುದು. ಏನಂತೀರಿ?

Tuesday, August 16, 2016

‘ಒರಟ’

ಮೊದ ಮೊದಲು ನಿಮ್ಮ ದುಡುಕು, ಸಿಟ್ಟನ್ನು ಅಕ್ಕಪಕ್ಕದವರು, ಸ್ನೇಹಿತರು ಸಹಿಸಿಕೊಂಡಾರು. ಆದರೆ ಕೂತಲ್ಲಿ, ನಿಂತಲ್ಲಿ ಸಿಟ್ಟು ಬರುತ್ತದೆ ಎಂದಾದರೆ, ನಿಮ್ಮಿಂದ ಉಗಿಸಿಕೊಳ್ಳುವುದೇ ನಿಮ್ಮ ಆಪ್ತರ ಪಾಡು ಎಂದಾದರೆ ನೀವೊಬ್ಬ ‘ಒರಟ’ ಎನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಸಿಟ್ಟಿನಲ್ಲಿ ಆಡುವ ಮಾತಿನ ಬಗ್ಗೆ ಎಚ್ಚರವಿರಲಿ. ಸಿಟ್ಟಿನಲ್ಲಿ ಆಡಿದ ಮಾತು ವಿವೇಚನೆಗೆ ತಲಪುವಾಗ ತುಂಬಾ ತಡವಾದೀತು!
ಅಯ್ಯೋ ಹಂಗಂದ್ ಬಿಟ್ರಾ? ಹೇಳಿ ಆಯ್ತಾ? ಮೆಸೇಜ್ ಮೂವ್ ಆಯ್ತ? ಏನೂ ಮಾಡೋಕಾಗಲ್ಲ. ತಲೆ ತಲೆ ಚಚ್ಚಿಕೊಳ್ಬೇಕಷ್ಟೆ!
ಗಡಿಬಿಡಿಯ ಬದುಕು, ಈಗಲೂ ದಿನಕ್ಕೆ ೨೪ ಗಂಟೆ ಇದ್ರೂ ಪುರ್ಸೊತ್ತಿಲ್ಲದ ಓಡಾಟ, ಅಂಗೈ ಬಿಟ್ಟು ಕದಲದ ಮೊಬೈಲ್‌ನಲ್ಲಿ ಮೆಸೇಜ್‌ಗಳ ಹರಿದಾಟ. ಖಾಸಗಿತನವೇ ಇಲ್ಲವೇನೋ ಎಂಬಂತ ಭಾವನೆ ನಡುವೆ ದುಡುಕಿ ಆಡುವ ಮಾತುಗಳು ಮತ್ತಷ್ಟು ಸಂಕಷ್ಟ ಉಂಟು ಮಾಡುವುದು ಸುಳ್ಳಲ್ಲ.
ಸಾಧು ಹಸುವಿನಂತೆ ಕಾಣೋ ಮನುಷ್ಯ ಪ್ರಾಣಿಯೂ ಸಿಟ್ಟು ಬಂದಾಗ ಇನ್ನೊಂದು ಮುಖ ತೋರಿಸ್ತಾನೆ. ಅಥವಾ ಸಿಟ್ಟು ಆ ದರ್ಶನ ಮಾಡಿಸುತ್ತದೆ. ಆಲ್ಕೋಹಾಲ್ ತಗೊಂಡು ಮಾತಾಡೋದಕ್ಕು, ಸಿಟ್ಟು ನಮ್ಮನ್ನು ಮಾತಾಡಿಸೋದಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇರೋದಿಲ್ಲ. ಅಲ್ಲಿ ಮಾತುಗಳನ್ನು ಸೆನ್ಸರ್ ಮಾಡಲು ಜಗತ್ತಿನ ಯಾವ ಶಕ್ತಿಗೂ ಅಸಾಧ್ಯವೇನೋ. ನಿತ್ಯ ಬದುಕಿನಲ್ಲಿ ಮನಸ್ಸಿನಲ್ಲಿ ಹುಟ್ಟುವ ಮಾತು, ಅನಿಸಿಕೆ, ಸಿಟ್ಟು, ಸೆಡವು, ಬೇಸರಗಳನ್ನೆಲ್ಲಾ ‘ಉಪೇಂದ್ರ’ ಸಿನಿಮಾ ಹೀರೋ ಥರ ಫಿಲ್ಟರ್ ಇಲ್ಲದೇನೇ ಹೇಳ್ಕೊಂಡು ತಿರುಗಾಡೋದಕೆ ಸಾಧ್ಯವಿಲ್ಲ. ಯಾಕೆಂದರೆ ಒಂದು ಸಭ್ಯತೆ, ಶಿಷ್ಟಾಚಾರ, ಸಹನೆಯಿಂದ ಬದುಕುವ ವ್ಯವಸ್ಥೆ ನಮ್ಮದು. ಹೇಳೋದಕ್ಕೂ, ಕೇಳೋದಕ್ಕೂ ಒಂದು ವ್ಯವಸ್ಥೆಯನ್ನು ಹಿರಿಯರು ರೂಪಿಸಿದ್ದಾರೆ. ಎಲ್ಲರೂ ಹಂಗಂಗೇ ಮಾತಾಡಿಬಿಟ್ಟರೆ ‘ಒಂದು ಸಿಟ್ಟು ಬಂದು ಬಾವಿಗೆ ಹಾರಿದಾತ, ಇನ್ನೊಂದು ಸಿಟ್ಟು ಬಂದಾಗ ಮೇಲೆ ಬರಲಾರ’ ಎಂಬಂಥ ಸಂಧಿಗ್ಧತೆಗೆ ಕಾರಣವಾಗುತ್ತದೆ.


ಎಲ್ಲಾ ಮಾತೂ, ಎಲ್ಲೂ ಸಂಭಾಷಣೆಯನ್ನು ರಿಹರ್ಸಲ್ ಮಾಡಿ ಆಡಲು ಅಸಾಧ್ಯ, ನಿಜ. ಆದರೆ, ತಲೆಯೆಂಬೋ ಸಿ.ಪಿ.ಯು.ನಲ್ಲಿರುವ ವಿವೇಚನೆ ಎಂಬ ಸಾಫ್ಟ್‌ವೇರ್ ಬಳಸಿ ಯೋಚಿಸಿ ಮಾತನಾಡಬೇಕಾದ ಜವಾಬ್ದಾರಿ ಜೊತೆಗೆ ಕರ್ತವ್ಯವೂ ನಮಗಿದೆ. ಯಾಕೆಂದರೆ ಸಂಬಂಧದ ತಳಹದಿ ಸಂವಹನ, ಸಂವಹನದ ಪ್ರಬಲ ಮಾಧ್ಯಮ ಮಾತು (ಮೆಸೇಜ್, ಬರಹ ಎಲ್ಲವೂ). ಅವು ಸರಿಯಾಗಿ ಸಂವಹನ ಆಗದ ಹೊರತು ಸಂಬಂಧವೂ ಉಳಿಯಲಾರದು.


ಸಿಟ್ಟಿನಿಂದಲೇ ಇಕ್ಕಟ್ಟು: ಆವಾಗ್ಲೇ ಹೇಳಿದ ಹಾಗೆ ಸಿಟ್ಟು ಬಂದಾಗ ವಿವೇಕ ಕೈಕೊಟ್ಟಿರುತ್ತದೆ. ಏನು ಯೋಚನೆ ಬರುತ್ತದೆ, ಏನು ಮಾತು ಹೊರಡುತ್ತದೆ, ಏನು ರೋಷ ಹೊರ ಹೊಮ್ಮುತ್ತದೆ ಹೇಳಲಾಗದು. ಆಗ ಆರೋಪಿಗಳು.ಅಪರಾಧಿಗಳು, ನಿರಪರಾಧಿಗಳು ಎಲ್ಲರ ಮೇಲೂ ರೋಷ ಹುಟ್ಟಿ ಸಾರಾಸಗಟಾಗಿ ಬೈಯ್ದು ಬಿಡುವ ಸಂದರ್ಭಗಳೂ ಇರುತ್ತವೆ. ಬೈದು ಎಷ್ಟೋ ಹೊತ್ತಾಗಿ ಆವೇಶ ಇಳಿದ ಮೇಲೆ ಬೈದವನಿಗೇ ಅನ್ನಿಸುವುದೂ ಇದೇ, ಇಷ್ಟೆಲ್ಲಾ ಬೇಕಿತ್ತ ಅಂತ. ಕೊನೆಗೊಮ್ಮೆ ತಪ್ಪು ತನ್ನದೇ ಎಂಬಂಥ ಸಂದರ್ಭ ಅರ್ಥವಾಗುವ ಹೊತ್ತಿಗೆ ಬೈಗುಳ ತಿಂದಾತ ಎಲ್ಲೋ ಕಣ್ಮರೆಯಾಗಿರುತ್ತಾನೆ. ಒಂದು ಯಕಶ್ಚಿತ್ ಸಿಟ್ಟು ಒಂದು ಚೆಂದದ ಸಂಬಂಧದ ಬುಡಕ್ಕೆ ಪೆಟ್ಟು ಹಾಕುತ್ತದೆ. ಪದೇ ಪದೇ ಹೀಗಾದಾಲೂ ಯಾಕೆ ನಾವು ಬುದ್ಧಿ ಕಲಿಯುವುದಿಲ್ಲ.


.....................
ಹೀಗೆ ಮಾಡಿ:


೧) ಸಿಟ್ಟು ಜಾಸ್ತಿಯಾದರೆ ಮೌನಕ್ಕೆ ಶರಣಾಗಲು ಪ್ರಯತ್ನಿಸಿ. ಸಂಭಾಷಣೆಯ ಸುರಕ್ಷಿತ ವಲಯ ಮೌನ!
೨) ಮಾತು, ಮೆಸೇಜು, ಬರವಣಿಗೆಗೆ ಸಿಟ್ಟು ಕಡಿಮೆಯಾಗುವ ತನಕ ರೆಸ್ಟ್ ಕೊಡಿ.
೩) ಯಾರಿಗೋ ಬೈಯ್ಯಲು, ಯಾರನ್ನೋ ನಿಂದಿಸಲು ಏನನ್ನೋ ಟೈಪ್ ಮಾಡಿದರೂ ಆ ಕ್ಷಣಕ್ಕೆ ಅದನ್ನು ಕಳುಹಿಸುವ ಆತುರ ಬೇಡ. ಸಿಟ್ಟು ಶಮನವಾಗುವ ತನಕ ಕಾಯಿರಿ
೪) ಸಾಮಾಜಿಕ ಜಾಲ ತಾಣಗಳಲ್ಲಿ ನಿಮ್ಮ ಸಿಟ್ಟು, ಸೆಡವು ತೋರಿಸುವ ಬರಹ, ಫೋಟೊ ಹಾಕುವ ಕೆಟ್ಟ ಹಪಹಪಿಕೆ ಬಿಡಿ.
೫) ಸಿಟ್ಟು ಶಮನಕ್ಕೆ ಮಾರ್ಗ ಹುಡುಕಿ. ನಿಮ್ಮ ಆತ್ಮೀಯ ಜೀವಗಳಿಗೊಂದು ಕರೆ ಮಾಡಿ ಮಾತನಾಡಿ, ಒಂದು ನಡಿಗೆ ಹೋಗಿ, ಇಷ್ಟದ ಹಾಡು ಕೇಳಿ. ಏನೂ ಇಲ್ಲದಿದ್ದರೆ ಸಣ್ಣದೊಂದು ನಿದ್ರೆ ಮಾಡಿ ಫ್ರೆಶ್ ಆಗಿ.
೬) ಸಿಟ್ಟಿನಲ್ಲಿ ಹೇಳಿದ ಮಾತನ್ನು ಮತ್ತೆ ರಿಪೇರಿ ಮಾಡಲಾಗದು. ಅದರಿಂದಾಗುವ ದುಷ್ಟರಿಣಾಮಗಳೇನು ಅನ್ನುವುದು ಪದೇ ಪದೇ ನಿಮ್ಮ ಗಮನದಲ್ಲಿರಲಿ. ಹಾಗಿದ್ದಾಗ ಸಿಟ್ಟಿನ ಸೈಡ್ ಇಫೆಕ್ಟ್‌ಗಳು ಸದಾ ನೆನಪಲ್ಲಿರುತ್ತದೆ.
೭) ನಿಮ್ಮದು ದುಡುಕು ಸ್ವಭಾವವಾದರೆ ನಿಮ್ಮ ಸ್ನೇಹಿತರಿಗೂ ಅದನ್ನು ತಿಳಿಸಿ. ಕೊನೆಪಕ್ಷ ನಿಮ್ಮನ್ನು ಅರ್ಥ ಮಾಡಿಕೊಳ್ಳಲಾದರೂ ಪ್ರಯತ್ನಿಸಿಯಾರು!
೮) ವಿನಾ ಕಾರಣ ಸಿಟ್ಟು ಬರಿಸುವವರಿಂದ ದೂರವಿರಲು ಪ್ರಯತ್ನಿಸಿ, ಅವರನ್ನು ಕಂಡು ನಕ್ಕು ಸುಮ್ಮನಾಗಿ
೯) ಯಾರ ಕುರಿತಾದರೂ ಪೂರ್ವಾಗ್ರಹದಿಂದ ದ್ವೇಷದ ಮೂಟೆಯನ್ನು ಕಟ್ಟಿ ಕೂರಬೇಡಿ. ಹೇಳಲಿರುವುದನ್ನು ನೇರವಾಗಿ ಹೇಳಿಬಿಡಿ. ಇಲ್ಲವಾದಲ್ಲಿ ಕೋಪ ಬಂದಾಗ ಅವೆಲ್ಲಾ ವಾಂತಿಯಾದೀತು!
೧೦) ದುಡುಕಿ ಆಡುವ ಮಾತು ನಿಮ್ಮನ್ನು ಘಾಸಿಗೊಳಿಸುವಂತೆ, ನಿಮ್ಮಿಂದ ಬೈಸಿಕೊಂಡವನನ್ನೂ ಅದು ಗಾಯಗೊಳಿಸುತ್ತದೆ ಎಂಬ ಸಾಮಾನ್ಯಜ್ಞಾನವಿರಲಿ!

Thursday, July 7, 2016

ವೈರಾಗ್ಯ ವಿಚಾರ...ಶೂನ್ಯದೊಳಗೊಂದು ಸುತ್ತು


ಪಾರಮಾರ್ಥಿಕತೆ, ಆಧ್ಯಾತ್ಮ, ಮನಃಶ್ಶಾಂತಿಗೆ ಧ್ಯಾನವೂ ಬೇಕೆಂಬ ತೀವ್ರ ಹಂಬಲ ಬರುವುದು ವೈರಾಗ್ಯದ ಅಥವಾ ಸತ್ಯದರ್ಶನದ ಸ್ಥಿತಿಯಲ್ಲಿ. ಪ್ರಾಪಂಚಿಕ ಮೋಹಕ್ಕೆ ಸಿಲುಕುವುದು. ವಸ್ತುನಿಷ್ಠ ಬದುಕು ಸಾಗಿಸುವುದು ಮನುಷ್ಯ ಸಹಜ ಗುಣ. ಅದನ್ನು ಮೀರುವ ಬದುಕು, ತಾಳ್ಮೆ, ಸ್ಥಿತಿಪ್ರಜ್ಞತೆ ರೂಢಿಸುವುದು ಮಹಾತ್ಮರ, ಆದರ್ಶ ಪುರುಷರ ತಪಸ್ಸು. ಮಹಾತ್ಮರ ಮಾತುಗಳು ಇತರರಿಗೆ ಮಾದರಿಯಾಗುವುದು ಅವರು ನಮಗಿಂತ ಭಿನ್ನರಾಗಿ ಯೋಚಿಸಿದ್ದಾರೆ ಎಂಬು ಕಾರಣಕ್ಕೆ.

 
---------------------------
ವೈರಾಗ್ಯ ಸ್ಥಿತಿ ಜೀವನೋತ್ಸಾಹಕ್ಕೆ ತುಸು ತಡೆ ಹಾಕುತ್ತದೆ ಎನ್ನುವುದು ವಾಸ್ತವ. ಆದರೆ, ವೈರಾಗ್ಯದಲ್ಲಿ ನಡೆಯುವಷ್ಟು ಬದುಕಿನ ಕುರಿತ ವಿಮರ್ಶೆ, ಸಿಂಹಾವಲೋಕನ, ಯತಾರ್ಥ ತಿಳಿದುಕೊಳ್ಳುವ ಪ್ರಯತ್ನ ಬೇರೆ ಸಂದರ್ಭಗಳಲ್ಲೂ ಅಷ್ಟಾಗಿ ನಡೆಯುವುದಿಲ್ಲವೇನೋ. ನಮ್ಮೊಳಗೆ ಅವಿತಿರುವ ಹೆಚ್ಚೇ ಅನ್ನಿಸಬಹುದಾದ ಅಹಂ, ಅತಿ ಆತ್ಮವಿಶ್ವಾಸ, ನಾವೇ ಶಾಶ್ವತವೆಂಬ ಹುಚ್ಚು ಭ್ರಮೆ, ವಾಸ್ತವವನ್ನು ಮೀರಿ ಕಾಣುವ ಕಾಲ್ಪನಿಕ ಅತಿಶಯವಾದ ಕನಸುಗಳ ಲೋಕದಿಂದ ಮರಳಿ ವಾಸ್ತವಕ್ಕೆ ಎಳೆ ತರುವ ಸ್ಥಿತಿ ವೈರಾಗ್ಯದಲ್ಲಿದೆ.
ಹಿನ್ನಡೆ ಕಂಡಾಗಲೇ ಗಾಡಿಗೆ ಬ್ರೇಕ್ ಬೀಳೋದು: ಒಂದು ನೋವು, ಒಂದು ಸೋಲು, ಒಂದು ತಪ್ಪು, ಒಂದು ಹಿನ್ನಡೆ ಬಂದಾಗಲೇ ನಾವು ನಮ್ಮ ಬಗ್ಗೆ ಯೋಚಿಸುವ ಹಾಗೆ ಆಗುವುದು. ಶರವೇಗದ ಬದುಕಿನ ಬಂಡಿಯ ನಾಗಾಲೋಟಕ್ಕೆ ಬ್ರೇಕ್ ಹಾಕಿ, ಗಾಡಿಯನ್ನು ಪಕ್ಕಕ್ಕ್ಕೆ ನಿಲ್ಲಿಸಿ ‘ನನ್ನ ಗಾಡಿ ಸರಿ ಇದೆಯೇ?’ ಅಂತ ಪರೀಕ್ಷೆ ಮಾಡುವ ಗೋಜಿಗೆ ಹೋಗುವುದು.
ಎಷ್ಟೋ ಬಾರಿ ಯಾರ‌್ಯಾರಿಗೋ ಸ್ಪರ್ಧೆ ನೀಡುವ ಭ್ರಮೆಯಲ್ಲಿ, ಯಾರನ್ನೋ ಹಣಿಯುವ ಹುಚ್ಚಿನಲ್ಲಿ, ಯಾರ ಮೇಲೋ ಅಧಿಕಾರ ಚಲಾಯಿಸುವ ಹುಚ್ಚು ಹುನ್ನಾರದಲ್ಲಿ ನಾವೆಷ್ಟು ದಿನ ಶಾಶ್ವತವೆಂಬ ಸತ್ಯವನ್ನು ಮರೆತಿರುತ್ತೇವೆ. ಇದು ಮನುಷ್ಯ ಸಹಜ ಗುಣ. ‘೯೦ ದಾಟಿದ ವೃದ್ಧನೂ ಲೈಫ್ ಟೈಮ್ ವ್ಯಾಲಿಡಿಟಿ ಇರುವ ಮೊಬೈಲ್ ಪ್ಲಾನ್ ಹಾಕಿಸಿದ’ ಎಂಬ ಜೋಕಿನ ಹಾಗೆ.
ಪ್ರತಿ ವ್ಯಕ್ತಿಯಲ್ಲೂ ಜೀವನೋತ್ಸವ, ಸಕಾರಾತ್ಮಕ ಮನೋಭಾವ ಖಂಡಿತಾ ಬೇಕು. ‘ನಾಳೆ ನಾನು ಸಾಯಬಹುದು, ಮತ್ತೇಕೆ ಬದುಕಿರಬೇಕು?’ ಎಂಬಿತ್ಯಾದಿ ಋಣಾತ್ಮಕ ಮನೋಭಾವ ಬೇಕು ಎಂದು ಹೇಳುತ್ತಿರುವುದಲ್ಲ. ಆದರೆ, ಕ್ಷಣಿಕವಾಗಿರುವ ಬದುಕಿನಲ್ಲಿ ನಾವೆಷ್ಟು ದಿನ ಇರಬಲ್ಲೆವು, ಎಷ್ಟು ದಿನ ಹಕ್ಕು ಚಲಾವಣೆ, ಅಹಂಭಾವ ಪ್ರದರ್ಶನ, ತೀರದ ಹಗೆ ಪಾಲಿಸುತ್ತಾ ಬರುವುದು... ಇವನ್ನೆಲ್ಲ ಮಾಡಬಲ್ಲೆವು ಎಂಬ ಬಗ್ಗೆ ಸ್ವವಿಮರ್ಶೆ ಮಾಡಿಕೊಳ್ಳುವುದು ಒಳಿತು.
ಈ ಹಿಂದೆ ಹೀಗೆ ಮಾಡಿದವರೆಲ್ಲ ಹೋಗುವಾಗ ಏನು ಕೊಂಡು ಹೋದರು? ಅವರಂದುಕೊಂಡ ಹಾಗೆ ಎಲ್ಲ ಆಯಿತೇ? ಅಥವಾ ಶಾಶ್ವತವಾಗಿ ಅವರು ಮಾಡಿದ್ದೇನು? ಇತರರಿಗಾಗಿ ಉಳಿಸಿದ್ದೇನು? ಎಂಬುದೆಲ್ಲಾ ಚಿಂತನೆಗೆ ಕಾಡುವುದು ಅವರು ನಮ್ಮನ್ನು ಅಗಲಿದಾಗ (ಸ್ಮಶಾನ ವೈರಾಗ್ಯ). ಆತ್ಮೀಯರೊಬ್ಬರು ಅಗಲಿಗಾದಲೆಲ್ಲಾ ಅವರ ಕುರಿತ ಚಿಂತನೆಯಲ್ಲಿ ಇಂತಹದ್ದನ್ನು ಕಂಡುಕೊಳ್ಳಲು ಅವಕಾಶ ಸಿಗುವುದು ಹಾಗೂ ಒಂದು ಸತ್ಯದ ಬೆಳಕು ಮೂಡುವುದು.
ಹೋಗುವಾಗ ಕೊಂಡು ಹೋಗುವುದು ಏನೂ ಇಲ್ಲ, ಕೊನೆಗೆ ಶರೀರ ಕೂಡಾ ಭೂಮಿಯಲ್ಲೇ ಮಣ್ಣಾಗುವುದು, ಶರೀರ ಕೂಡಾ ಎದ್ದು ಎಲ್ಲೂ ಹೋಗುವುದಿಲ್ಲ. ನಾಲ್ಕು ಜನರಿಗೆ ಒಳ್ಳೆಯದು ಮಾಡಿದರೆ ಮಾತ್ರ ಅದರ ನೆನಪು ಉಳಿಯುತ್ತದೆ. ಅಂತಹ ಒಳ್ಳೆ ಕಾರ್ಯಕ್ಕೆ ಇಂತಹದ್ದೊಂದು ವೈರಾಗ್ಯ ದಿಕ್ಕು ತೋರಿಸಿದರೆ ಹುಚ್ಚು ಭ್ರಮೆಗಳನ್ನು ಕಳಚಿ ಬದುಕಲು ಸಾಧ್ಯವಾಗುತ್ತದೆ.
ಕಾಡುವ ಶೂನ್ಯತೆ: ಸ್ಮಶಾನ ವೈರಾಗ್ಯ, ಪ್ರಸವ ವೈರಾಗ್ಯ, ಉದರ ವೈರಾಗ್ಯಗಳಂತಹ ವೈರಾಗ್ಯಗಳನ್ನು ಅನುಭವಿಸದ ವ್ಯಕ್ತಿ ಇರಲಾರ. ಆ ಕ್ಷಣಕ್ಕೆ ಕಾಡುವ ಶೂನ್ಯತೆ, ಎಲ್ಲ ನಶ್ವರವೆಂಬ ಹತಾಶೆ, ಎಲ್ಲವೂ ಸುಳ್ಳು, ತಾನು ಸೊನ್ನೆ, ಎಷ್ಟು ಕಷ್ಟಪಟ್ಟರೂ ಇಂತಹದ್ದೊಂದು ಹಂತ ದಾಟಿಯೇ ಮನುಷ್ಯ ಮುಂದುವರಿಯುತ್ತಾನೆ ಎಂಬಿತ್ಯಾದಿ ಸತ್ಯಗಳು ಕಾಡುವುದು, ಹಿಂಡಿ ಹಿಪ್ಪೆ ಮಾಡುವುದು ಇಂತಹ ವೈರಾಗ್ಯಗಳ ಸಂದರ್ಭದಲ್ಲೇ.
ಆತ್ಮೀಯರು ಅಗಲಿ ಹೋದಾಗ, ಅವರನ್ನು ಮರಳಿ ಮಣ್ಣಿಗೆ ಸೇರಿಸಿದಾಗ, ಪ್ರಸವ ವೇದನೆಯಲ್ಲಿ ಹೆಣ್ಣನ್ನು ಕಾಡುವ ಅಪಾರ ನೋವು, ಅದಕ್ಕೆ ಸಾಕ್ಷಿಗಳಾಗುವವರ ಪ್ರತಿಕ್ರಿಯೆ, ಕಡು ಬಡತನದಲ್ಲಿನ ಹತಾಶೆ.... ಇಂತಹ ಆಯಾ ಸನ್ನಿವೇಶ ಮನಃಸ್ಥಿತಿ ಮನುಷ್ಯನ ಚಿಂತನೆಯ ಧಾಟಿಯನ್ನೇ ಕೆಲ ದಿನಗಳ ಮಟ್ಟಿಗಾದರೂ ಬದಲಿಸಬಲ್ಲುದು. ಮಾಡುತ್ತಿರುವ ಚಟುವಟಿಕೆಗಳಿಂದ ವಿಮುಖರಾಗಿ ಲೌಕಿಕ ಬದುಕಿನ ವಾಸ್ತವಗಳ ಕುರಿತು ಚಿಂತಿಸುವ, ಧ್ಯಾನಿಸುವ, ಆಧ್ಯಾತ್ಮದತ್ತ ಒಲವು ತೋರುವ ಹಾಗೆ ಮಾಡಬುಹುದು.
ಆದರೆ ಕಾಲಕ್ಕೆ ಎಲ್ಲವನ್ನೂ ಮರೆಸುವ ಅಥವಾ ಎಲ್ಲದರ ತೀವ್ರತೆಯನ್ನು ಕಡಿಮೆ ಮಾಡುವ ಅಪಾರ ಶಕ್ತಿಯಿದೆ. ಮತ್ತೆ ಇದೇ ಕಾಲದ ಮೋಹದಲ್ಲಿ ಮತ್ತೆ ಲೌಕಿಕತೆ ಪ್ರಾಪ್ತಿಯಾಗುತ್ತದೆ, ವಸ್ತುನಿಷ್ಠ ಬದುಕು ಮುಂದುವರಿಯುತ್ತದೆ. ನಾನು, ನನ್ನದು, ನನ್ನ ಅಧಿಕಾರ, ನನ್ನ ಜಗತ್ತೆಂಬ ಮಾಯೆ ಆವರಿಸುತ್ತದೆ. ವೈರಾಗ್ಯದ ಪ್ರಮಾಣ ಕಡಿಮೆಯಾದಂತೆ ಪ್ರಾಪಂಚಿಕ ಲೋಕದಲ್ಲಿ ನಮ್ಮನ್ನು ನಾವು ಕಳೆದುಕೊಂಡು ಬಿಡುತ್ತೇವೆ.
ಇಲ್ಲವಾದಲ್ಲಿ ‘ಏಳೇಳು ಜನ್ಮ ದಾಟಿದರೂ ಅವನನ್ನು ಬಿಡಲಾರೆ’ ಎಂಬಿತ್ಯಾದಿ ಹುಚ್ಚು ದ್ವೇಷಗಳನ್ನು ಹಿಡಿದುಕೊಂಡು ನಮ್ಮನ್ನೇ ನಾವು ಮೋಸ ಮಾಡಿಕೊಂಡ ಹಾಗೆ ಅಲ್ವೇ? ನಾಳೆ ದಿನದ ನಮ್ಮ ಬದುಕಿನ ಬಗ್ಗೆ ಇಂದು ನಮಗೇ ನಿಶ್ಚಿತತೆ ಇಲ್ಲದಿರುವಾಗ ಇನ್ಯಾರನ್ನೋ ಏಳೇಳು ಜನ್ಮದ ವರೆಗೂ ಕಾಡುತ್ತೇನೆ ಎಂಬುದು ಹುಚ್ಚಲ್ಲದೆ ಮತ್ತೇನು? ಇದು ಸಿನಿಮಾ ಪರದೆಯಲ್ಲಿ ನೋಡಲು ಲೇಸು ಅಷ್ಟೆ.
ವೈರಾಗ್ಯದಿಂದಲೇ ಬದುಕು ಬದಲಾಯಿಸಿದ್ರು!:
ಬದುಕಿನ ಕಟು ವಾಸ್ತವಗಳನ್ನು ಕಂಡ ಬುದ್ಧ ಸರ್ವಸಂಗ ಪರಿತ್ಯಾಗಿಯಾಗಿದ್ದು, ತುಂಡು ಬಟ್ಟೆಯುಟ್ಟ ಮಹಿಳೆಯ ಕಡುಬಡತನ ಕಂಡ ಗಾಂಧೀಜಿ ಎರಡು ಬಟ್ಟೆಗಳಲ್ಲೇ ಉಳಿದ ಬದುಕು ಸಾಗಿಸಿದ್ದು, ಅಪವಾದವನ್ನು ಕೇಳಿದ ಶ್ರೀರಾಮ ಪತ್ನಿಯನ್ನು ಕಾಡಿನಲ್ಲಿ ಬಿಟ್ಟು ಬರಲು ಹೇಳಿದ್ದು, ಬಾಹುಬಲಿ ದಿಗಂಬರನಾಗಿ ತಪಸ್ಸಿಗೆ ನಿಂತಿದ್ದು ಇಂತಹದ್ದೇ ವೈರಾಗ್ಯದ ಸನ್ನಿವೇಶಗಳಲ್ಲಿ ತಾನೇ? ಅಷ್ಟೆತ್ತರಕ್ಕೆ ನಿಂತಿರುವ ಬಾಹುಬಲಿಯ ವಿಗ್ರಹ, ಮುಖದಲ್ಲಿರುವ ಭಾವಗಳನ್ನು ನೋಡಿದರೆ ವಿರಾಟ್ ವಿರಾಗಿಯ ಕತೆಯನ್ನು ಆ ನೋಟವೇ ಹೇಳುತ್ತದೆ. ವೈರಾಗ್ಯ ಈ ಮಹಾತ್ಮರ ಬದುಕಿಗೊಂದು ದೊಡ್ಡ ತಿರುವಾಯಿತು. ಆದರೆ ಜನ ಸಾಮಾನ್ಯರನ್ನು ಆಗೊಮ್ಮೆ, ಈಗೊಮ್ಮೆ ಕಾಡುವ ವೈರಾಗ್ಯ ಬದುಕಿನಲ್ಲಿ ಬರುವ ಅಲ್ಪವಿರಾಮ ಹೊರತು ಜನ ಪ್ರತಿದಿನ ಅದೇ ಗುಂಗಿನಲ್ಲಿ ಇರೋದಿಲ್ಲ. ಕಾಲಾಯ ತಸ್ಮೈ ನಮಃ ಅನ್ನುವ ಹಾಗೆ ಎಲ್ಲದರ ತೀವ್ರದೆ ದಿನಗಳಂತೆ ಕಡಿಮೆಯಾಗುತ್ತದೆ, ಆದರೆ ಆತ್ಮವಿಮರ್ಶೆಗೆ ವೈರಾಗ್ಯಕ್ಕಿಂತ ದೊಡ್ಡ ಕೊಠಡಿ ಸಿಗದೇನೋ!
-ಕೃಷ್ಣಮೋಹನ ತಲೆಂಗಳ.

Thursday, March 31, 2016

ಅದು ರೈಗಳು ಹೋದ ದಿನವೂ ಏಪ್ರಿಲ್ 1


ಆರೇಳು ವರ್ಷಗಳ ಹಿಂದಿನ ಮಾತು... ಅವತ್ತೂ ಏಪ್ರಿಲ್ 1. ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಎಸ್.ಎನ್.ಭಟ್ರು ಕರೆ ಮಾಡಿ ರೈಗಳು ಹೋಗಿಬಿಟ್ರು ಅಂದಾಗ ನಂಬಲಾಗಲಿಲ್ಲ. ನಂಬುವ ಮಾತೂ ಆಗಿರಲಿಲ್ಲ. ಮತ್ತೆ ಮತ್ತೆ ಕೇಳಿ ಖಚಿತಪಡಿಸಿದಾಗ ಗೊತ್ತಾಯ್ತು. ಮಂಗಳೂರು ಆಕಾಶವಾಣಿಯ ಜನಪ್ರಿಯ ಉದ್ಘೋಷಕ, ಎಲ್ಲರ ಪ್ರೀತಿಯ ಅಜ್ಜ ಕೆ.ಆರ್.ರೈಗಳು (ಶ್ರೀ ಕಲ್ಕಾಡಿ ರಮಾನಂದ ರೈ) ಎಲ್ಲರನ್ನು ಬಿಟ್ಟು ಅಗಲಿದ್ದಾರೆ ಅಂತ.
ಈ ವಿಚಾರವನ್ನು ತಕ್ಷಣ ಮಾಧ್ಯಮ ಮಿತ್ರರಿಗೆ, ಸ್ನೇಹಿತರಿಗೆ ಎಸ್ಎಂಎಸ್ (ಆಗ ವಾಟ್ಸಾಪ್ ಇರ್ಲಿಲ್ಲ) ಮೂಲಕ ತಿಳಿಸಿದಾಗ ಯಾರೂ ನಂಬಲಿಲ್ಲ. ಎಲ್ಲರೂ ಹೇಳ್ತಾ ಇದ್ದಿದ್ದು ಇವತ್ತು ಏಪ್ರಿಲ್ 1, ಫೂಲ್ ಮಾಡ್ತಾ ಇದ್ದೀಯ ಅಂತ. ಹೌದು ಎಲ್ಲರನ್ನೂ ನಗಿಸಿ, ತಾವೂ ನಗ್ತಾ ಇದ್ದ ನಿಗರ್ವಿ, ಸಾತ್ವಿಕ ಸ್ವಭಾವದ ರೈಗಳು ತಾವು ಇಹ ಬಿಟ್ಟು ತೆರಳುವಾಗಲೂ ಅದನ್ನು ಯಾರೂ ನಂಬದ ದಿನವೇ ಅದಾಗಿದ್ದು ವಿಪರ್ಯಾಸ... ಪ್ರತಿ ವರ್ಷ ಏಪ್ರಿಲ್ 1 ಬಂದಾಗಲೆಲ್ಲಾ ಇದೇ ವಿಚಾರ ಕಾಡುತ್ತದೆ, ಶ್ರೀಯುತ ರೈಗಳ ಧ್ವನಿ ಗುಂಯ್ ಗುಡುತ್ತಾ ಇರುತ್ತದೆ..

.....ಇದು ಚಿತ್ರದ ಹೆಸರು!!
ವಿಚಿತ್ರ ಸಿನಿಮಾಗಳ ಹೆಸರನ್ನು ಚಿತ್ರಗೀತೆ ಕಾರ್ಯಕ್ರಮದ ನಡುವೆ ಹೇಳಬೇಕಾದಾಗಲೆಲ್ಲಾ ಕೆ.ಆರ್.ರೈಗಳು ಬಳಸುತ್ತಿದ್ದ ಹಾಸ್ಯಮಿಶ್ರಿತ ವಾಕ್ಯವಿದು, ಕೇಳುಗರಿಗೂ ತುಂಬಾ ಇಷ್ಟವಾಗತ್ತಿತ್ತು. ಟಿ.ವಿ.ಯೂ, ಮೊಬೈಲೂ ಇಷ್ಟೊಂದು ಉಚ್ಛ್ರಾಯ ಸ್ಥಿತಿ ತಲುಪದಿದ್ದ 80-90ರ ದಶಕದಲ್ಲಿ ಮಂಗಳೂರು ಆಕಾಶವಾಣಿಯ ಲಕ್ಷಾಂತರ ಕೇಳುಗರ ಮನ ಗೆದ್ದ ಹಿರಿಯ ಜೀವ ಶ್ರೀಯುತ ರೈಗಳು. ಈಗಿನ ಭಾಷೆಯಲ್ಲಿ ಹೇಳುವುದಾದರೇ ಆ ಕಾಲಕ್ಕೆ ಅಪಾರ ಟಿಆರ್ ಪಿ ಪಡೆದಿದ್ದು ಬಾನುಲಿಯ ಉದ್ಘೋಷಕರು (ಅನೌನ್ಸರ್) ಕೆ.ಆರ್.ರೈಗಳು. ಓರ್ವ ಆರ್.ಜೆ.ಯನ್ನುಜನ ಹೇಗೆ ಇಂದು ನೆನಪಿಟ್ಟು ಆರಾಧಿಸುತ್ತಾರೋ ಅದೇ ಥರ ಕೆ.ಆರ್.ರೈಗಳನ್ನು ಕೇಳುಗರು ಪ್ರೀತಿಸುತ್ತಿದ್ದರು.

ಆ ಕಾಲದಲ್ಲಿ ಮಂಗಳೂರು ಆಕಾಶವಾಣಿ ನಿಲಯ ವೀಕ್ಷಣೆಗೆ ಬರುತ್ತಿದ್ದ ರೇಡಿಯೋ ಕೇಳುಗರು ಮೊದಲು ಕೇಳ್ತಾ ಇದ್ದ ಪ್ರಶ್ನೆ  ಅಜ್ಜ (ಅದು ಮಾತುಕತೆ ಎಂಬ ಕೌಟುಂಬಿಕ ಸಂಭಾಷಣೆಯಲ್ಲಿ ರೈಗಳು ನಿರ್ವಹಿಸ್ತಾ ಇದ್ದ ಪಾತ್ರ) ಎಲ್ಲಿದ್ದಾರೆ, ಶಾಂತಕ್ಕ (ಮಾಲತಿ ಆರ್. ಭಟ್) ಎಲ್ಲಿದ್ದಾರೆ ಎಂದು. ಅಷ್ಟರ ಮಟ್ಟಿಗೆ ರೈಗಳ ನಿರೂಪಣೆ, ಅವರ ಗಡಸು ಧ್ವನಿ, ಮಾತಿನ ಧಾಟಿ ಎಲ್ಲರನ್ನೂ ಸೆಳೆಯುತ್ತಿತ್ತು.
ಬಾನುಲಿಯಲ್ಲಿ ಕೆಲಸ ನಿರ್ವಹಿಸಲು ಸಿಕ್ಕಿದ ಅತ್ಯಲ್ಪ ವರ್ಷಗಳ ಅವಕಾಶದಲ್ಲೇ ಕೆ.ಆರ್.ರೈಗಳ ಪರಿಚಯವಾದಲ್ಲಿ ಅವರ ಸಾತ್ವಿಕತೆ ಕಂಡು ಬೆರಗಾಗಿದ್ದೇನೆ. ಅಷ್ಟೊಂದು ಅಪಾರ ಅಭಿಮಾನಿಗಳಿದ್ದರೂ, ಹಿರಿಯ ಉದ್ಯೋಗಿಯಾಗಿದ್ದರೂ ಅವರೊಳಗಿದ್ದ ನಿಗರ್ವಿ ವ್ಯಕ್ತಿತ್ವ... ಇಂದು ಬಂದು ನಾಳೆ ಹೋಗುವ ನನ್ನಂತಹ ತಾತ್ಕಾಲಿಕ ನಿರೂಪಕರಿಗೂ ಗೌರವ ಕೊಟ್ಟು, ನೆನಪಿಟ್ಟು ಮಾತನಾಡುವ, ಕಿಚಾಯಿಸುವ ಅವರ ಗುಣವನ್ನು ಯಾವತ್ತೂ ಮರೆಯಲಾರೆ. ಸ್ಥೂಲ ಕಾಯ, ವಿಶಿಷ್ಟ ನಿಧಾನ ನಡಿಗೆ, ತಲೆಯಲ್ಲೊಂದು ಕ್ಯಾಪ್, ವಿಶಿಷ್ಟ ಧ್ವನಿ, ಎರಡೂ ಕೈ ಜೋಡಿಸಿ ಮಾತನಾಡುವ ರೀತಿಯ ಎಲ್ಲಕ್ಕಿಂತ ಹೆಚ್ಚು ಗಂಭೀರವಾದ ಆ ಸ್ವರ ಯಾವತ್ತೂ ಕಣ್ಣಿಗೆ ಕಟ್ಟಿದಂತೆ, ಕಿವಿಗೆ ಕೇಳಿದಂತಿದೆ.


ಟ್ರೆಕ್ಸ್ ರೂಂನಲ್ಲೋ, ಕ್ಯಾಂಟೀನಿನಲ್ಲೋ ಎಲ್ಲೇ ಕಂಡರೂ ಅವರು ಮಾತನಾಡಿಸದೆ ಹೋಗುವವರಲ್ಲ. ಯಾವುದಕ್ಕೂ ತಲೆ ಕೆಡಿಸದ ಸ್ಥಿತಪ್ರಜ್ಞರಂತೆ ತಮ್ಮ ಪಾಡಿಗೆ ತಾವು ಎಂಬಂತಿದ್ದ ರೈಗಳನ್ನು ಎಲ್ಲರೂ ಪ್ರೀತಿಸುತ್ತಿದ್ದರು. ಅವರನ್ನೇ ನೋಡಲೆಂದೇ ಆಕಾಶವಾಣಿಗೆ ಬರುವವರನ್ನೂ ಕಂಡಿದ್ದೇನೆ. ಬಹುಶಃ ಈಗ ಅವರು ಇದ್ದಿದ್ದರೆ ಸಾಕಷ್ಟು ಸೆಲ್ಫೀಗಳು ಅವರೊಂದಿಗೆ ಕ್ಲಿಕ್ಕಾಗುತ್ತಿದ್ದವೇನೋ....


80-90ರ ದಶಕದಲ್ಲಿ ಬರುತ್ತಿದ್ದ ಅವರ ಕೆಂಚನ ಕುರ್ಲರಿ, ತ್ಯಾಂಪನ ಮಾಹಿತಿ ಕಾರ್ಯಕ್ರಮದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದವರು ಕೆ.ಆರ್.ರೈಗಳು. ಮಂಗಳೂರು ಆಕಾಶವಾಣಿಯ ಮತ್ತೊಂದು ಜನಪ್ರಿಯ ಕಾರ್ಯಕ್ರಮ ಮಾತುಕತೆ (ಕನ್ನಡ ಕೌಟುಂಬಿಕ ಸಂಭಾಷಣೆ)ಯಲ್ಲಿ ಅಪ್ಪಟ ವೃದ್ಧನ ಧ್ವನಿಯಲ್ಲಿ ಮಾತನಾಡುತ್ತಿದ್ದುದು ತುಂಬಾ ಹಿಟ್ ಆಗಿತ್ತು. ಏನಾ ಸುರೇಸಾ... ಎಂತದ್ದೇನಾ ನಿಂದು ಅಂತ ಅಟ್ಟಹಾಸದಿಂದ ನಗುತ್ತಾ ಇದ್ದಿದ್ದನ್ನು ಕೇಳುಗರು ತುಂಬಾ ಮೆಚ್ಚುತ್ತಿದ್ದರು. ಅವರು ಚಿತ್ರಗೀತೆಯನ್ನು, ಕೋರಿಕೆ ಕಾರ್ಯಕ್ರಮವನ್ನು ನಿರೂಪಿಸುತ್ತಾ ಇದ್ದ ರೀತಿ, ಅವರಿಗೆ ಪ್ರಶಸ್ತಿ ತಂದುಕೊಟ್ಟ ರೂಪಕಗಳು, ಬಾನುಲಿ ನಾಟಕಗಳಲ್ಲಿ ಮೂಡಿಬರುತ್ತಿದ್ದ ಅವರ ಧ್ವನಿ, ಅವರು ನಿರೂಪಿಸುತ್ತಿದ್ದ ಅಪಾರ ತುಳು ಕಾರ್ಯಕ್ರಮಗಳು ತುಂಬಾ ಹೆಸರು ತಂದು ಕೊಟ್ಟಿದ್ದವು. 
ಚಿತ್ರಗೀತೆ ನಿರೂಪಣೆಯಲ್ಲಿ ಅವರದೇ ಆದ ಧಾಟಿ ಅವರಿಗೆ ಹೆಸರು ತಂದುಕೊಟ್ಟಿತ್ತು. ಅವರ ಆರೋಗ್ಯ ಯಾಕೆ ಕೆಟ್ಟಿತು, ಯಾಕೆ ವೃತ್ತಿ ಬದುಕಿನ ಉತ್ತರಾರ್ಧದಲ್ಲೇ ಅವರು ಎಲ್ಲರನ್ನು ಅಗಲಿದರು ಎಂಬುದು ಪ್ರಶ್ನೆಯಲ್ಲ. ಬಾನುಲಿಯಲ್ಲಿ ಇದ್ದಷ್ಟೂ ದಿನ ಅವರು ತೋರಿಸಿದ ಲವಲವಿಕೆ, ಎಂತಹ ಕಿರಿಯ ಸಹೋದ್ಯೋಗಿಯಲ್ಲೂ ಭೇದ ಕಾಣದೆ ಹತ್ತಿರ ಕರೆದು ಮಾತನಾಡಿಸುತ್ತಿದ್ದ ಸಾತ್ವಿಕತೆ, ಅವರ ಧ್ವನಿಯಲ್ಲಿ ಕೇಳಬಹುದಾದ ಆತ್ಮೀಯತೆಯೇ ಅವರನ್ನು ಪ್ರೀತಿ ಪಾತ್ರರನ್ನಾಗಿಸಿದ್ದು....


ಈಗಿನ ಹಾಗೆ ಫೇಸ್ ಬುಕ್, ವಾಟ್ಸಾಪ್, ಟ್ವೀಟರ್ ಆ ಇರ್ಲಿಲ್ಲ. ಅಸಲಿಗೆ ಅವರ ಹತ್ರ ಮೊಬೈಲ್ ಫೋನ್ ಇತ್ತಾ ಅಂತಲೂ ಗೊತ್ತಿಲ್ಲ. ಆದರೆ ಮಂಗಳೂರು, ಉಡುಪಿ, ಕಾಸರಗೋಡು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದ ಭಾಗದ ಲಕ್ಷಾಂತರ ಮಂದಿ ಕೇಳುಗರು  (ನಾನೂ ಸೇರಿದಂತೆ) ಚಿಕ್ಕಂದಿನಿಂದ ಕೇಳುತ್ತಾ ಬಂದ ಧ್ವನಿ ಕೆ.ಆರ್.ರೈಗಳದ್ದು. ಯಾವತ್ತೋ ಒಂದು ದಿನ ಅವರು ಮೃತಪಟ್ಟ ಸುದ್ದಿಯನ್ನು ಡ್ರಾಫ್ಟ್ ಮಾಡಬೇಕಾಗಬಹುದು ಅಂತ ಎಂದಿಗೂ ಅಂದುಕೊಂಡಿರಲಿಲ್ಲ. ರೇಡಿಯೋವೇ ಪ್ರಧಾನವಾಗಿದ್ದ ದಿನಗಳ ಶ್ರೋತೃಗಳು ಇವತ್ತಿಗೂ ಅವರ ಧ್ವನಿ, ನಿರೂಪಣೆಯನ್ನು ನೆನಪಿಸುತ್ತಾರೆಂದರೆ ಗೊತ್ತಾಗುತ್ತದೆ ಅವರ ಮೂಡಿಸಿದ ಛಾಪು.


ಕೆಲವರು ವಿನಾ ಕಾರಣ ಇಷ್ಟವಾಗುತ್ತಾ, ಕಾಡುತ್ತಾರೆ, ಕಾರಣ ಹೇಳದೆ ಆತ್ಮೀಯತೆ ಹುಟ್ಟಿಕೊಳ್ಳುತ್ತದೆ.... ತುಂಬಾ ಹತ್ತಿರದವರೇನೋ ಎಂಬಷ್ಟು ಮಟ್ಟಿಗೆ. ಇನ್ನು ಕೆಲವರು ವರ್ಷಗಟಲ್ಲೇ ಜೊತೆಗಿದ್ದರೂ, ಪಕ್ಕದಲ್ಲೇ ಕೂತರೂ ಯಾಂತ್ರಿಕತೆ ಚೌಕಟ್ಟಿನೊಳಗೆ ಯಾವುದೇ ಭಾವ-ಬಂಧ ಕೆಲಸ ಮಾಡುವುದಿಲ್ಲ. ಪ್ರೀತಿಯೋ, ನಿರ್ಲಿಪ್ತತೆಯೋ ನಾವು ರೂಪಿಸಿದ ಪ್ರೀತಿಯ ವಲಯ, ಸಾತ್ವಿಕತೆ, ನಿಗರ್ವಿ ವ್ಯಕ್ತಿತ್ವದ ಫಲಿತಾಂಶಗಳು ಅಲ್ವೇ...
ಹಾಗಂತೆ ಇಷ್ಟವಾದವರು, ಹತ್ತಿರವಾದವರೆಲ್ಲಾ ಜೊತೆ ಜೊತೆಗೇ ನಡೆಯುತ್ತಿರಬೇಕು, ಪಕ್ಕದಲ್ಲೇ ಕೂರಬೇಕೆಂದು ಕಟ್ಟಿ ಹಾಕಲಾಗುತ್ತದೆಯೇ.... ಅವರವರ ಕಾಲ ಬಂದಾಗ ದೂರ ತೀರವ ಸೇರಲೇ ಬೇಕು. ತಡೆಯುವ ಶಕ್ತಿ ಯಾರಿಗೂ ಇಲ್ಲ.
ದೈಹಿಕವಾಗಿ ದೂರವಾದರು ಮಾನಸಿಕವಾಗಿ ನೆನಪಾಗ್ತಾ ಕಾಡುತ್ತಾರೆ. ಅವರು ಕೊಟ್ಟ ಲವಲವಿಕೆ, ಅವರ ಉತ್ಸಾಹ, ಅವರಿಂದ ಕಲಿತ ತುಸು ಖುಷಿ ಖುಷಿಯ ವಿಚಾರಗಳೇ ಅವರ ನೆನಪನ್ನು ಜೀವಂತವಾಗಿರಿಸುವುದು. 

ಅದೇ ಹೇಳ್ತಾರಲ್ಲ...
ಯಾರ ಜೊತೆ ಎಷ್ಟು ದೂರ ನಡೆದಿದ್ದೀರಿ ಎಂಬ ಕಾರಣ ಅವರು ನಿಮಗೆ ಹತ್ತಿರವಾಗುವುದಲ್ಲ, ಯಾರ ಹೆಜ್ಜೆ ಗುರುತು ನಿಮ್ಮ ಎದೆಯಾಳದಲ್ಲಿ ಇಷ್ಟು ಚೆನ್ನಾಗಿ ಮೂಡಿದೆ ಎಂಬ ಕಾರಣಕ್ಕೆ ಹತ್ತಿರವಾಗ್ತಾರೆ ಅಂತ....
ಪ್ರತಿ ಏಪ್ರಿಲ್ 1ರಂದು ರೈಗಳ ಅಗಲುವಿಕೆ ತೀವ್ರವಾಗಿ ಕಾಡುತ್ತದೆ. ರೈಗಳು ಮತ್ತೆ ಹುಟ್ಟಿ ಬರಲಿ, ಅದೇ ಗಡಸು, ನವಿರು ನಿರೂಪಣೆಯನ್ನು ಮತ್ತೆ ಹೊತ್ತು ತರಲಿ...
-ಕೃಷ್ಣಮೋಹನ, ಕನ್ನಡಪ್ರಭ.

Friday, February 26, 2016

ವಾಟ್ಸಾಪು ಗುಂಪುಗಾರಿಕೆ!

ಒಂದೂರಲ್ಲಿ ಒಬ್ಬ ರಾಜ ಇದ್ನಂತೆ. ಯಾವುದೋ ದೊಡ್ಡ ಕಾರ್ಯಕ್ರಮ ನಡೆಸಲು ಅವನಿಗೆ ತುಂಬಾ ಹಾಲಿನ ಅಗತ್ಯ ಇತ್ತು. ಅದಕ್ಕೆ ಒಂದು ಕಟ್ಟಪ್ಪಣೆ ಹೊರಡ್ಸಿದ. ಅರಮನೆ ಎದುರು ದೊಡ್ಡದೊಂದು ಪಾತ್ರೆ ಇರಿಸಿ, ಅದರ ಬಾಯಿಯನ್ನು ಬಟ್ಟೆಯಿಂದ ಕಟ್ಟಿದ, ನಂತರ ಎಲ್ಲಾ ಪ್ರಜೆಗಳು ಒಂದೊಂದುಲೋಟ ಹಾಲನ್ನು ಪಾತ್ರೆಗೆ ಹೊಯ್ಯುುವಂತೆ ಸೂಚಿಸಿದ. ಸರಿ ಎಲ್ಲರೂ ಕ್ಯೂನಲ್ಲಿ ಬಂದು ಹಾಲು ಹೊಯ್ಯತೊಡಗಿದರು. 
ಒಬ್ಬ ಆಲಸಿ ಪ್ರಜೆ ಗುಂಡ ಯೋಚಿಸಿದ, ಸಾವಿರಗಟ್ಟಲೆ ಮಂದಿ ಹಾಲು ಹೊಯ್ತಾರೆ. ಸುಮ್ನೆ ಒಂದು ಲೋಟ ಹಾಲು ವೇಸ್ಟ್, ನಾನೊಬ್ಬ ಹಾಲಿನ ಬದಲು ನೀರು ಹೊಯ್ದರೆ ಯಾರಿಗೆ ತಾನೆ ಗೊತ್ತಾಗುತ್ತೆ, ಯಾರೋ ಫ್ಯಾಟ್ ಟೆಸ್ಟ್ ಮಾಡಲ್ವಲ್ಲ ಅಂದ್ಕೊಂಡು ಹಾಲಿನ ಬದಲು ಒಂದು ನೀರು ಹೊಯ್ದು ಏನೂ ಗೊತ್ತಿಲ್ಲದಂತೆ ಮನೆಗೆ ಬಂದ (ಪುಣ್ಯಕ್ಕೆ ಆಗ ಸಿ.ಸಿ.ಕ್ಯಾಮೆರಾ ಇರ್ಲಿಲ್ವೇನೋ). 
ಸಂಜೆ ವೇಳೆಗೆ ಎಲ್ಲರೂ ಹಾಲು ಹೊಯ್ದಾದ ಬಳಿಕ ರಾಜ ಪಾತ್ರೆಗೆ ಕಟ್ಟಿದ ಬಟ್ಟೆ ಓಪನ್ ಮಾಡ್ಸಿದಾಗ ಅವನಿಗೆ ಶಾಕ್. ಯಾಕೆ ಗೊತ್ತಾ, ಅಲ್ಲಿ ಕೇವಲ ನೀರು ತುಂಬಿತ್ತು.... ಪ್ರತಿಯೊಬ್ಬರೂ ಗುಂಡನ ಥರ ಅತಿ ಬುದ್ಧಿವಂತಿಕೆ ಮಾಡಿ ನೀರನ್ನೇ ಹೊಯ್ದಿದ್ರು.... ನಾನೊಬ್ಬ ನೀರು ಹೊಯ್ದ್ರೆ ಯಾರಿಗೆ ತಾನೋ ಗೊತ್ತಾಗುತ್ತೆ ಅಂತ..
ಈ ಕಥೆ ಯಾಕೆ ಹೇಳಿದೆ ಅಂದ್ರೆ ನಮ್ಮ ವಾಟ್ಸಾಪ್ ಗ್ರೂಪುಗಳೂ ಈ ಪಾಲಿನ ಪಾತ್ರೆ ಥರ ಆಗಿದೆ....
ನಾನೊಬ್ಬ ದೊಡ್ಡ ಮೆಸೇಜ್ ಫಾರ್ವರ್ಡ್ ಮಾಡಿದ್ರೆ ಯಾರಿಗೇನು ನಷ್ಟ ಅಂದ್ಕೊಳ್ಳೋದು, ದೊಡ್ಡ ದೊಡ್ಡ ಮೆಸೇಜ್ ಫಾರ್ವರ್ಡ್ ಮಾಡೋದು. ಓದೋರು ಯಾರೂ ಇಲ್ಲ...ಫಾರ್ವಾರ್ಡ್ ಮಾಡೋರೇ ಎಲ್ಲ....ಬೇಕಾದ್ದು, ಬೇಡದ್ದು ಎಲ್ಲಸೇರಿ ರಗ್ದಾ ಸಮೋಸ ಥರ ಆಗಿ ವಾಟ್ಸಾಪ್ ಗ್ರೂಪುಗಳ ಗಾಂಭೀರ್ಯತೆಯೇ ಕಡಿಮೆ ಆಗ್ತಿದೆಯೇನೋ ಅನ್ನಿಸ್ತಿದೆ...


ಹೌದು, 
ತ್ವರಿತ ಹಾಗೂ ಅತಿ ಸುಲಭವಾಗಿ, ಪರಿಣಾಮಕಾರಿಯಾಗಿ ಏಕಕಾಲಕ್ಕೆ ಮಲ್ಟಿಮೀಡಿಯಾ ಸಹಿತ 256 ಮಂದಿಯನ್ನು ತಲುಪಬಹುದಾದ ಅದ್ಭುತ ವಾಹಿನಿ ವಾಟ್ಸಾಪ್. ತುಂಬ ಸದ್ಬಳಕೆಗೆ ಅವಕಾಶವಿದೆ. ಇದೇ ಕಾರಣಕ್ಕೆ ಸಮಾನಾಸಕ್ತರೆಲ್ಲಾ ಸೇರ್ಕೊಂಡು ಸಾವಿರ ಸಾವಿರ ವಿಷಯ ಪ್ರಧಾನ ವಾಟ್ಸಾಪ್ ಗ್ರೂಪು ಮಾಡ್ಕೊಂಡಿದ್ದಾರೆ...
ಮನೆಗೊಂದು, ಕುಟುಂಬಕ್ಕೊಂದು, ಕ್ಲಾಸಿಗೊಂದು, ಅಲ್ಯೂಮ್ನಿ ಗೆಳೆಯರಿಗೊಂದು, ಪತ್ರಿಕೆ ಓದುಗರಿಗೊಂದು, ಯಕ್ಷಗಾನ ನೋಡುವವರಿಗೊಂದು, ವಕೀಲರಿಗೆ, ಡಾಕ್ಟರುಗಳಿಗೆ, ಲೆಕ್ಚರರುಗಳಿಗೆ... ಹೀಗೆ ನೂರೆಂಟು ಗ್ರೂಪುಗಳು. ಮತ್ತೆ ಅದರೆಡೆಯಲ್ಲಿ ಭಿನ್ನಮತ ಎದ್ದರೆ ಮತ್ತೊಂದು ಪ್ರತ್ಯೇಕ ಗ್ರೂಪು...
ಹೀಗೆ ಸಕ್ರಿಯ ವಾಟ್ಸಾಪ್ ಬಳಕೆದಾರನೊಬ್ಬ ಕನಿಷ್ಠ 10-20 ಗ್ರೂಪುಗಳ ಘನ ಸದಸ್ಯರಾಗಿರುತ್ತಾರೆ.

ಮೊದಮೊದಲೇ ಪ್ರತಿ ಗ್ರೂಪುಗಳೂ ವಿಷಯನಿಷ್ಠವಾಗಿ, ಗ್ರೂಪಿನ ಹೆಸರು, ಉದ್ದೇಶಕ್ಕೆ ಅನುಗುಣವಾಗಿ ಕಾರ್ಯ ಮಾಡುತ್ತಿರುತ್ತದೆ. ಬರ ಬರುತ್ತಾ ಅಲ್ಲಿ ಫಾರ್ವರ್ಡ್ ಮೆಸೇಜುಗಳು, ಮೈಲುದ್ದದ ಎಲ್ಲಿಂದಲೋ ಎತ್ಹಾಕಿದ ಗಂಭೀರ ಸಂದೇಶಗಳು, ದೊಡ್ಡ ದೊಡ್ಡ ವಿಡಿಯೋಗಳು ದಾಳಿಯಿಡುತ್ತವೆ.
ಅಲ್ಲಿ ವಿಚಿತ್ರ ಜೀವಿ ಬಂತಂತೆ, ಇಲ್ಲಿ ತಲೆ ಒಡ್ದು ಸತ್ರಂತೆ ಅನ್ನುವ ಪೇಕ್ ಮೆಸೇಜುಗಳು, ಫೋಟೊಗಳು, ಜೊತೆಗೆ ಎಡದವರನ್ನೂ, ಬಲದವರನ್ನೂ ಪ್ರಚೋದಿಸುವ ಕಮೆಂಟ್ಸ್ ಗಳು, ಕೆರಳಿಸುವಂತಹ ಸಂದೇಶಗಳ ರಾಶಿ ರಾಶಿ.... ಗ್ರೂಪಿನ ಉದ್ದೇಶ, ಗುರಿ, ಅಲ್ಲಿನ ಸಾಮರಸ್ಯದ ಪರಿಸ್ಥಿತಿ ಯಾವದನ್ನೋ ನೋಡದೆ ಫಾರ್ವರ್ಡ್ ಮಾಡ್ತನೇ ಇರೋದು. ಯಾವುದಾದರೂ ಗ್ರೂಪ್ ಮೆಂಬರನ್ನು ಕೇಳಿ ನೋಡಿ, ಅಲ್ಲಿ ಬರೋ ಮೆಸೇಜ್ ಗಳನ್ನೆಲ್ಲಾ ಓದ್ತೀರಾ ಅಂತ. ಶೇ.90 ಮಂದಿ ಓದೋದು ಬೀಡಿ, ನೋಡೋದೇ ಇಲ್ಲ. ಯಾಕೆಂದರೆ, ಅವ ಸದಸ್ಯನಾಗಿರುವ ಅಷ್ಟೂ ಗ್ರೂಪುಗಳಲ್ಲಿ ಅದೇ ಮೆಸೇಜ್ ನೋಡಿ ನೋಡಿ ತಲೆ ಚಿಟ್ಟು ಹಿಡಿದಿರುತ್ತದೆ. ಈ ಮೆಸೇಜ್ ಗಳ ಭರಾಟೆಯಲ್ಲಿ ಬಡಪಾಟಿ ಅಡ್ಮಿನ್ನು ಮುಖ್ಯ ಸೂಚನೆ ಪೋಸ್ಟ್ ಮಾಡಿದ್ರೆ ಅದು ಹೇಳ ಹೆಸರಿಲ್ಲದೆ ಕಾಲಡಿಗೆ ಸಿಕ್ಕಿ ಚಿಂದಿ ಚಿತ್ರಾನ್ನವಾಗಿರುತ್ತದೆ.

ಬರ್ತಾ ಬರ್ತಾ ಎಲ್ರೂ ಗ್ರೂಪುಗಳ ಮೆಸೇಜ್ ಗಳನ್ನು ಕ್ಲಿಯರ್ ಚಾಟ್ ಕೊಟ್ಟು ಆರಾಮವಾಗಿ ಮಲಗ್ತಾರೆ. ಕೊನೆಗೆ ರೋಸಿ ಹೋಗಿ ಸದ್ದಿಲ್ಲದೆ ಕ್ವಿಟ್ ಆಗ್ತಾರೆ. ಇದ್ರಿಂದ ಗ್ರೂಪು ಆರಂಭಿಸಿದ ಉದ್ದೇಶ ಈಡೇರುವುದಿಲ್ಲ ಮತ್ರವಲ್ಲ, ವಾಟ್ಸಾಪಿನಲ್ಲಿ ಏನಾದ್ರೂ ಗಂಭೀರವಾಗಿದ್ದು ಪೋಸ್ಟ್ ಮಾಡಿದ್ರೆ ಯಾರೂ ಕ್ಯಾರ್ ಮಾಡದ ಹಾಗೆ ಆಗಿದೆ. ಪರ್ಸನಲ್ ಮೆಸೇಜ್ ಹಾಕಿದ್ರೆ ಮಾತ್ರ ಉತ್ತರ. ಗ್ರೂಪುಗಳು ಗಾಂಭೀರ್ಯ ಕಳಕೊಳ್ತಿವೆ. ಅವನ್ನೆಲ್ಲಾ ಫಾಲೋ ಮಾಡುವ ತಾಳ್ಮೆ ಯಾರಿಗೂ ಉಳಿದಿಲ್ಲ.

ತುಂಬಾ ಮಂದಿಗೆ ಸುಮ್ನೇ ಮೆಸೇಜ್ ಫಾರ್ವರ್ಡ್ ಮಾಡುವ ಚಟ. ಅದರಲ್ಲಿ ಏನಿದೆ ಅಂತ ನೋಡುವ ತಾಳ್ಮೆಯೂ ಇಲ್ಲ. ಅದರ ಪರಿಣಾಮ, ಅದರಿಂದಾಗುವ ಕಿರಿಕಿರಿ ಯಾರಿಗೂ ಬೇಕಾಗಿಲ್ಲ. ಮೊದಲು ನಾವು ಓದುಗರಾಗಬೇಕು, ನಂತರ ಬೇರೆಯವರಿಗೆ ಓದಲು ನೀಡಬೇಕು. ಇದು ಸರಳ ಸಭ್ಯತೆ. ಅದು ಬಿಟ್ಟು, ನಾವೂ ಓದದೆ, ಬೇರೆಯವರಿಗೂ ಓದಲೂ ಬಿಡದೆ ಸಂದೇಶಗಳನ್ನು ರಾಶಿ ಹಾಕುವುದು ಸಭ್ಯತೆಯಲ್ಲ. 

ಗ್ರೂಪುಗಳಿಗೊಂದು ನಿಯಮ ಇರುತ್ತದೆ ಸಾಮಾನ್ಯವಾಗಿ. ಅದನ್ನು ಗೌರವಿಸಬೇಕು. ಅದಕ್ಕೊಂದು ಉದ್ದೇಶವಿರುತ್ತದೆ, ಅದಕ್ಕೆ ಪೂರಕವಾಗಿ ನಡೆಯಬೇಕು. ಹೊರತು ನಮ್ಮ ವೈಯಕ್ತಿಕ ಸಿದ್ಧಾಂತಗಳ ಪ್ರಚಾರಕೆ, ಯಾರನ್ನೋ ಅವಹೇಳನ ಮಾಡುವುದಕ್ಕೆ, ವ್ಯಕ್ತಿಗತ ಜಗಳಗಳಿಗೆ ಗ್ರೂಪನ್ನು ಬಳಸುವುದು ಸೂಕ್ತವಲ್ಲ. ವೈಯಕ್ತಿಕ ಅವಹೇಳನ ಮಾಡಿ, ಗ್ರೂಪಿನಲ್ಲಿ ಎಲ್ಲರ ಪಾಲಿಗೆ ನಕ್ಷತ್ರಿಕರಾಗುವುದು ಸೂಕ್ತವಲ್ಲ. ನಮ್ಮವೈಯಕ್ತಿಕ ಇಷ್ಟಾನಿಷ್ಟ, ಸಿದ್ಧಾಂತ, ಪಾಂಡಿತ್ಯ ಪ್ರದ್ರರ್ಶನಕ್ಕೆ ಯಾರೋ ರೂಪಿಸಿದ ಗ್ರೂಪು ವೇದಿಕೆ ಅಲ್ಲ ಅನ್ನುವುದು ನೆನಪಿರಬೇಕು. ಪ್ರತಿ ಗ್ರೂಪ್ ಕೂಡಾ ಶಿಸ್ತುಬದ್ಧವಾಗಿ ತನ್ನ ಉದ್ದೇಶಗಳಿಗಷ್ಟೇ ಸೀಮಿತ ಸಂದೇಶಗಳಗೆ ವಾಹಕವಾದರೆ ವಾಟ್ಸಾಪ್ ಗ್ರೂಪುಗಳ ಮರ್ಯಾದೆ ಸ್ವಲ್ಪವಾದರೂ ಉಳಿದೀತು... ಏನಂತೀರಿ...
ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುವೆ.
-ಕೆಎಂ.

Sunday, February 14, 2016

ಕಾಣದ ಕಡಲಿಗೇ....

ಕಡಲ ತಡಿಯ ಇಷ್ಟಪಡದವರೆಷ್ಟು ಮಂದಿ...
ಅಬ್ಬರಿಸುವ ಕಡಲ ತಡಿಯುದ್ದಕ್ಕೂ, ಕಡಲ ಅಲೆಯ ಹಾಗೆ, ಬೀಸುವ ತಂಗಾಳಿ, ಮುಳುಗುವ ಸೂರ್ಯನ ಹಾಗೆ ಆಹ್ಲಾದಕತೆಯನ್ನು ಹಂಚಿಕೊಳ್ಳಲು ಕಡಲ ತಡಿಗಿಂತ ಗದ್ದಲದ ಆದರೂ ಪ್ರಶಾಂತ ಎನಿಸುವ ಜಾಗ ಇನ್ನೊಂದು ಸಿಗದು. ನೆತ್ತಿ ಸುಡುವ ಬಿಸಿಲಿದ್ದರೂ ತಂಗಾಳಿಯ ಸೋಂಕು ಮಾತ್ರ ಬಿಸಿಯಾದ ತಲೆಯನ್ನು ಒಂದಿಷ್ಟು ಹಗುರಗೊಳಿಸಿ, ತನ್ನ ತೆಕ್ಕೆಗೆ ಬಂದವರನ್ನೆಲ್ಲ ಖುಷಿ ಪಡಿಸಿ ಕಳುಹಿಸಬಲ್ಲ ಮಾಂತ್ರಿಕನಲ್ವೇ ಕಡಲ ತಡಿ.

---------------------------------------------------
ನೂರಾರು ನದಿಗಳ ರಾಜ, ಸಹಸ್ರಾರು ಜನರ ಮೆಚ್ಚಿನ ಕಣ್ಮಣಿ, ದಿನಪೂರ್ತಿ ಅಲೆಗಳ ಅಬ್ಬರ ಬೋಟುಗಳಿಗೆ ಸೆರಗನೊಡ್ಡುವ ಸಮುದ್ರವೂ ಒಂದೊಂದು ಬಾರಿ ತುಂಬಾ ಒಂಟಿ ಅನಿಸುವುದಿಲ್ವೇ...
ಸೂರ್ಯ ಮುಳುಗಿದ ಮೇಲೆ ಕಡಲರಾಜನನ್ನು ಎಲ್ಲರೂ ಒಂಟಿಯಾಗಿ ಬಿಟ್ಟು ಹೋಗುತ್ತಾರೆ. ಸೂರ್ಯಾಸ್ತದಲ್ಲೋ, ವೀಕೆಂಡುಗಳಲ್ಲೋ ಮಾತ್ರ ಆತ ಇಷ್ಟವಾಗೋದು. ಉಳಿದ ಸಮಯದಲ್ಲಿ ಅಲ್ಲಿಯೇ ಇರಲು ಪುರುಸೊತ್ತು ಯಾರಿಗಿದೆ ಹೇಳಿ...

ಆದರೂ ಯಾರೆ ಇರಲಿ, ಯಾರೇ ಬಿಡಲಿ ದಡಕ್ಕೆ ಅಲೆಗಳು ಅಪ್ಪಳಿಸುತ್ತಲೇ ಇರುತ್ತವೆ. ನೊರೆಗಳು ಉಕ್ಕತ್ತಲೇ ಇರುತ್ತವೆ. ಅವನೊಳಗಿನ ಒಂಟಿತನ, ಇರಬಹುದಾದ ಕಣ್ಣೀರು ಸಮುದ್ರದ ಗ್ಯಾಲನ್ ಗಟ್ಟಲೆ ಉಪ್ಪು ನೀರಿನೊಳಗೆ ಕರಗಿ ಹೋಗಿದ್ದು ಯಾರಿಗೂ ಕಾಣಿಸದು. ಸಮುದ್ರವೆಷ್ಟು ಗಂಭೀರ, ಎಷ್ಟು ಬಲಶಾಲಿ, ಬೀಚಿನಲ್ಲೆಷ್ಟು ರಭಸ, ಅಬ್ಬರ, ರೌದ್ರ ಎಂದೆಲ್ಲಾ ಹೇಳುವ ನಾವು ಕಡಲ ಅಂತರಂಗವನ್ನು ಶೋಧಿಸುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ.

ರೌದ್ರಕ್ಕೂ, ಅಬ್ಬರಕ್ಕೂ, ಶೌರ್ಯಕ್ಕೂ ಒಂದು ಸೌಮ್ಯ ಮುಖವೂ ಇರುತ್ತದೆ. ನಗಿಸುವವರಿಗೂ, ಬಲಶಾಲಿಗಳ ಒಳಗೂ ಒಂದು ಅಸಹಾಯಕತೆ, ಬಿಕ್ಕಳಿಕೆ ಇರುತ್ತದೆ. ಅದನ್ನು ಎಷ್ಟೋ ಬಾರಿ ಯಾರ ಜೊತೆಗೂ ಹೇಳಿಕೊಳ್ಳಲಾಗದು. ಸಮುದ್ರದ ಹಾಗೆ. ದೂರದಿಂದ ಕಾಣುವಾಗ, ಸೊಬಗ, ಗಾತ್ರ, ಶೌರ್ಯ ಕಂಡಾಗ ಪರಮ ತೃಪ್ತ, ಧೈರ್ಯಶಾಲಿ, ಸುಖೀ ಜೀವನ, ಯಾರ ಹಂಗೂ ಇಲ್ಲ ಎಂಬಿತ್ಯಾದಿ ನೆಗಳ್ತೆಗೆ ಪಾತ್ರರಾದವರೂ ಒಳಗೊಳಗೆ ಅತ್ತರೆ, ಕೊರಗಿದರೆ ಮರುಗುವವರು ಯಾರು. ಕಣ್ಣಿಗೆ ಕಂಡಿದ್ದು ಮಾತ್ರ ನಮಗೆ ವೇದ್ಯವಾಗುವುದು, ಅರ್ಥವಾಗುವುದು, ಹೇಳಲಾಗದ್ದು, ನಿವೇದಿಸಲಾಗದ್ದು, ವಿವರಿಸಲಾಗದ್ದು ಒಳಗೊಳಗೆ ಬೇಯುತ್ತಿದ್ದರೆ ಅದು ಕಣ್ಣಿಗೆ ಕಾಣುವುದಿಲ್ಲ. ಕಡಲೊಡಿನ ಲಾವಾರಸದ ಹಾಗೆ ಅಲ್ಲೇ ಕುದಿಯುತ್ತಿರುತ್ತದೆ. ಸೂರ್ಯಸ್ತದ ಬಂಗಾರದ ವರ್ಣ ಪ್ರತಿಫಲಿಸುವಾಗ ಸೆಲ್ಫೀ ತೆಗೆದು ಖುಷಿ ಪಟ್ಟು ಮರಳುತ್ತೇವೆ.

ಸಮುದ್ರ ಮಾತ್ರ ಅಲ್ಲೇ, ಅದೇ ಜಾಗದಲ್ಲಿ ತೆರೆಗಳನ್ನು ತಳ್ಳುತ್ತಾ, ನೊರೆ ಸೂಸುತ್ತಾ, ಕಡು ಕತ್ತಲಲ್ಲೂ ಉಬ್ಬರ, ಇಳಿತಕ್ಕೆ ನಿರ್ಲಿಪ್ತವಾಗಿ ತನ್ನನ್ನು ತೆರೆದುಕೊಳ್ಳುತ್ತಲೇ ಇರುತ್ತದೆ. ಅದರ ಕರ್ಮವದು. ಕರ್ಮವನ್ನು  ಪಾಲಿಸಲೇ ಬೇಕು. ಅದರೊಳಗೆ ಸೌಂದರ್ಯವನ್ನೋ, ರೌದ್ರವನ್ನೋ ಹುಡುಕುವವರು ನಾವು.

ಈ ನಡುವೆ ಸಮುದ್ರ ಅತ್ತರೆ ಅದು ಅಷ್ಟು ದೊಡ್ಡ ಅಲೆ ಬಂಡೆಗೆ ಅಪ್ಪಳಿಸುವ ಸದ್ದಿನ ನಡುವೆ ಕೇಳಿಸದೇ ಹೋದೀತು. ಸಮುದ್ರಕ್ಕೂ ಜಿಗುಪ್ಸೆ ಬಂದರೆ ಅಷ್ಟು ವಿಶಾಲ ಒಡಲಿನಲ್ಲಿ ಅದನ್ನು ಕಾಣಲಾಗದು. ದಡದಲ್ಲೇ ಕುಳಿತು ಏಕಾಗ್ರತೆಯಿಂದ ನೋಡುತ್ತಲೇ ಕುಳಿತರೆ ಸಮುದ್ರವನ್ನೂ ಸ್ವಲ್ಪ ಸ್ವಲ್ಪ ಅರ್ಥ ಮಾಡಿಕೊಳ್ಳಬಹುದೋ ಏನೋ... ಆದರೂ ಕಷ್ಟವೇ ಬಿಡಿ.

ತನ್ನದೇ ಲೋಕ, ತನ್ನದೇ ಏಕಾಂತ, ತನ್ನದೇ ಒಂದು ವಿಷಣ್ಣ ನಗು, ಮೌನ ರೋಧನ, ಬಿಡಿಸಿದಷ್ಟೂ ಮುಗಿಯದ ಅಲೆಗಳ ಮಡಿಕೆ, ವಿಚಿತ್ರ ಘಮಲು, ಅಂಟಿದಂತಾಗಿ ಮತ್ತೆ ಉದುರಿ ಹೋಗುವ ಮರಳ ರಾಶಿ, ಎಷ್ಟಿದ್ದರೂ ಕುಡಿಯಲಾಗದ ಉಪ್ಪು ನೀರು, ಸಂಜೆ ಮಾತ್ರ ತಂಪು ನೀಡಿ ನಡು ಮಧ್ಯಾಹ್ನ ನೆತ್ತಿ ಸುಡುವು ಸೂರ್ಯ... ಎಷ್ಟೊಂದು ವೈರುಧ್ಯಗಳ ಕಡಲನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ...

ಎಲ್ಲಿಯೂ ಹೇಳಲಾಗದೆ ತನ್ನೆದುರು ಬಂದು ಕೂತು ಪಿಸುಗುಟ್ಟುವ ಜೋಡಿಗಳು, ಬದುಕು ಸಾಕೆಂದು ಬಂದು ಹಾರುವ ವೈರಾಗಿಗಳು, ಹೊಟ್ಟೆ ಪಾಡಿಗೆ ಕಡು ಗಾಳಿಯಲ್ಲೂ ದೋಣಿ ತಂದು ರಾತ್ರಿಯಿಡೀ ಮೀನುಗಾರಿಕೆಗೆ ಹೊರಡುವ ಮಂದಿ, ಗಾಳಿಪಟ ಹಿಡಿದು ಬಂದು ಮರಳಲ್ಲಿ ಗೂಡು ಕಟ್ಟುವ ಸುಖೀ ಕುಟುಂಬಗಳು ಎಲ್ಲದಕ್ಕೂ, ಎಲ್ಲರಿಗೂ ಸಮುದ್ರ ಮೂಕ ಪ್ರೇಕ್ಷಕ. ಯಾರ ಬಗೆಗೂ ಸಮುದ್ರ ಷರಾ ಬರೆಯುವುದಿಲ್ಲ. ಮಾತೂ ಆಡುವುದಿಲ್ಲ. ವಿರಾಟ್ ವಿರಾಗಿ, ವಿಚಿತ್ರ ನಿರ್ಲಿಪ್ತತೆ ಹಾಗೂ ಅಪಾರ ಕರುಣಾಮಯಿ. 

ಎಂತಹದ್ದೇ ಕಲ್ಮಶ ಎಸೆದರೂ ಆ ಕ್ಷಣಕ್ಕೆ ನುಂಗಿಕೊಂಡು ಮತ್ತೆಲ್ಲಿಯೋ ಮತ್ತೆ ದಡಕ್ಕೆ ತಂದು ಹಾಗುವ ನಿಸ್ವಾರ್ಥಿ.... ಒಳಗೊಂದು, ಹೊರಗೊಂದು ಭಾವವಿಲ್ಲ ಸಮುದ್ರಕ್ಕೆ. ಆಚೆ ನೋಡೋಣವೆಂದರೆ ಸಮುದ್ರದ ಆಚೆ ಬದಿ ಕಾಣಿಸುವುದೇ ಇಲ್ಲ. ಅಷ್ಟೊಂದು ಅಗಾಧ, ಆಳ, ದೀರ್ಘ.

ಅದಕ್ಕೇ ಒಬ್ಬೊಬ್ಬರಿಗೆ ಒಂದೊಂದು ರೀತಿಯ ದೃಶ್ಯಕಾವ್ಯ...
ಮಹಾನ್ ಮೌನಿ, ದೀರ್ಘ, ಅಪಾರ ದೇಹಿ, ಶೃಂಗಾರ ಪ್ರಧಾನ, ರೋಮ್ಯಾಂಟಿಕ್ ವಾತಾವರಣ, ಬದುಕು ಕೊನೆಗಾಣಿಸಲು ಸೂಕ್ತ ಜಾಗ, ಧ್ಯಾನಕ್ಕೆ ಪ್ರಶಸ್ತ, ಕವನ ಬರೆಯಲು, ದೀರ್ಘ ಯೋಚನೆಯಲ್ಲಿ ತೊಡಗಲು ಎಲ್ಲದಕ್ಕೂ ಒಳ್ಳೆ ಜಾಗ... ಹೀಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಒಂದೇ ಕಡಲು. ಆದರೆ ಕಂಡುಬರುವ ಆಂಗಲ್ ಮಾತ್ರ ಬೇರೆ ಬರೆ...

ಆದರೂ ಕಡಲಾಳದಲ್ಲಿ ಮೊರೆಯುವ ಕ್ಷೀಣ ದನಿ, ಪುಟ್ಟದೊಂದು ಅಳು, ಮೌನದಾಲಾಪನೆಗೆ ಕಿವಿಕೊಟ್ಟು ನೋಡಲು ಪ್ರಯತ್ನಿಸಿ.... ನಿಮಗೂ ಕೇಳಿಸೀತು...
ಕಡಲು ಕರೆದು ಹೇಳದು, ಅದು ಮೌನಿ, ಬಾಯಿ ಬರುವುದಿಲ್ಲ. ಎದೆಗೆ ಕಿವಿಗೊಟ್ಟರೆ ಅಷ್ಟಿಷ್ಟು ಅರ್ಥವಾದೀತು. ಮಹಾಮೌನಿಯ ಪಿಸುಮಾತು... ಕೇಳಿಯೂ ಕೇಳಿಸದ ಹಾಗೆ....

Saturday, February 13, 2016

ಹರ್ ದಿಲ್ ಜೋ ಪ್ಯಾರ್ ಕರೇಗಾ....
ಪ್ರೀತಿಯೆಂಬುದು ಒಂದು ಫೀಲಿಂಗ್, ಹೃದಯದಲ್ಲಿನ ಒಂದು ಹುಟ್ಟು ಮಚ್ಚೆ, ಅದನ್ನು ಅನುಭವಿಸಬೇಕೆ ವಿನಃ ಮತ್ತೊಬ್ಬರು ವಿವರಿಸಿದರೆ ಕೇಳಬೇಕೆಂಬುದು ಹಾಸ್ಯಾಸ್ಪದ.
-ಖ್ಯಾತ ಲೇಖಕರೊಬ್ಬರ ಸಾಲುಗಳಿವು.
--------------------
ಈ ಪ್ರಪಂಚದಲ್ಲಿ ಯಾರಿಗಾದರೂ ನಾವು ಜವಾಬ್ದಾರರಾಗಿರಬೇಕಾಗಿ ಬಂದರೆ ಅದು ನಾವು ಪ್ರೀತಿಸಿದವರಿಗೆ ಮಾತ್ರವೇ. ಅದು ಎಷ್ಟೇ ಚಿಕ್ಕ ಕೆಲಸಕ್ಕಾದರೂ ತೆಗೆದುಕೊಳ್ಳಿ, ಎಷ್ಟೇ ಚಿಕ್ಕ ನಿರ್ಣಯಕ್ಕಾದರೂ ಸರಿ...
ಸೋ ಕಾಲ್ಡ್ ಪ್ರೇಮಿಗಳ ದಿನಾಚರಣೆಯ ಮುನ್ನಾದಿನ ಅಂದುಕೊಂಡಿದ್ದು...

ಪ್ರೀತಿಯೆಂದರೆ ಮೌನವಲ್ವೇ... ಅದನ್ನು ಬಾಯಿಯಿಂದ, ಪೆನ್ನಿನಿಂದ, ಕೃತಿಯಿಂದ ಹೇಳಹೊರಟರೇ ತುಸು ಹೆಚ್ಚೋ ಕಮ್ಮಿಯೋ ಆಗಿ ಹೆಚ್ಚುಕಮ್ಮಿಯಾದೀತು...
ಅದು ಅನುಭವಕ್ಕೆ, ಚಿಂತನೆಗೆ, ಆದರ ಅನುಭೂತಿಗೆ ವೇದ್ಯವಾಗುವುದು. ಪ್ರೀತಿಸಿದಾತನಿಗೂ, ಪ್ರೀತಿಸಲ್ಪಟ್ಟವನಿಗೂ ಅದು ಗೊತ್ತಾಗೇ ಆಗುತ್ತದೆ... ಇದಕ್ಕಿಂತ ಹೆಚ್ಚಿನ ಡೆಫಿನಿಶನ್, ಗ್ರೀಟಿಂಗ್ ಕಾರ್ಡು, ಕವನದ ಸಾಲುಗಳು ಪ್ರೀತಿಗೆ ಬೇಕಾ...

----------
ಪ್ರೀತಿಯ ಅಭಿವ್ಯಕ್ತಿ ಕುರಿತು ಎಲ್ಲೋ ಓದಿದ ಸುಂದರ ಸಾಲುಗಳಿವು...

ತುಂಬಾ ಪ್ರೀತಿ ಪಾತ್ರರಿಬ್ಬರು ಎಷ್ಟೋ ಕಾಲದ ಬಳಿಕ ಸಂಧಿಸಿದಾಗ ಮರದ ಕೆಳಗಿನ ಕಲ್ಲು ಬೆಂಚಿನಲ್ಲಿ ಅಕ್ಕಪಕ್ಕ ಮೌನವಾಗಿ ಗಂಟೆಗಳ ಕಾಲ ಕುಳಿತು ಎದ್ದು ಹೋದ ಮೇಲೆ ತುಂಬಾ  ಮಾತನಾಡಿದ ಭಾವ ಮೂಡುವುದಿದ್ದರೆ ಅವರ ನಡುವಿನ ಪ್ರೀತಿ, ಅರ್ಥೈಸಿಕೊಳ್ಳುವಿಕೆ  ಆ ಲೆವೆಲ್ಲಿಗೆ ಇದೆ ಅಂತ ಅರ್ಥ. ನಿಜ ಅನ್ನಿಸುತ್ತದೆ.

ಮಾತಿಗೆ, ಬರವಣಿಗೆಗೆ, ಅಭಿವ್ಯಕ್ತಿಗೆ ನಿಲುಕದ್ದು ಪ್ರೀತಿ. ಸ್ಕೋಪ್, ಮೆರಿಟ್, ಡಿಮೆರಿಟ್ ಲೆಕ್ಕ ಹಾಕಿ ಮುಂದುವರಿಯಲಾಗದ ಅಸಹಾಯಕತೆ ಪ್ರೀತಿ... ಹೇಳ್ಕೊಂಡೇ, ಕೇಳ್ಕೊಂಡೇ ಬಾರದ್ದು ಪ್ರೀತಿ. ಸಿಗಬೇಕಾದಲ್ಲಿ ಸಿಕ್ಕದೆ, ಸಿಗಬೇಕಾದ ಹೊತ್ತಿಗೆ ನಿಲುಕದೆ, ಸಿಕ್ಕು ಹಾಕಿಕೊಂಡಿರುವುದು ಪ್ರೀತಿ... ಅದು ಪಕ್ಕಾ ಅನುಭೂತಿ. ಭಾವನಾತ್ಮಕ ತಲ್ಲಣ...
ಅದಕ್ಕೊಂದು ಚೌಕಟ್ಟು, ಶಿಸ್ತು, ತುಂಟತನ, ನಿರೀಕ್ಷೆಗಳ ಮಿತಿ ಹಾಕಿದವರು, ಅದನ್ನು ಜಾಗರೂಕತೆಯಂದ ಎಣ್ಣೆ ತುಂಬಿದ ಬಟ್ಟಲಿನ ಹಾಗೆ ಜೋಪಾನವಾಗಿಡುವವರು ನಾವೇ...
ಅದಕ್ಕೆ ಪ್ರೀತಿಯಲ್ಲಿ ಆಹ್ಲಾದಕತೆ ಇದ್ದಷ್ಟೇ ದುಖವೂ, ಕಣ್ಣೀರಿಗೂ ಜಾಗವಿರುತ್ತದೆ...


ಎಷ್ಟೋ ಬಾರಿ ಅಕ್ಷರಗಳಲ್ಲಿ, ಆಡುವ ಮಾತಿನ ಪದಗಳಲ್ಲಿ, ಧಾಟಿಯಲ್ಲಿ, ಒಂದು ಅವಾಯ್ಡ್ ಮಾಡಿದ ನಿಮಿಷಗಳಲ್ಲಿ, ಯಾಕೆ... ಸಂದೇಶಗಳ ನಡುವಿನ ಮೌನದಲ್ಲಿ ಮಿಸ್ಡ್ ಕಾಲಿನಲ್ಲಿ, ಬ್ಲಾಂಕ್ ಮೆಸೇಜ್ ಗಳಲ್ಲೆಲ್ಲಾ ಪ್ರೀತಿಯನ್ನು ಹುಡುಕುತ್ತೇವೆ. ದೂರ ಮಾಡಿದೆ, ದೂರವಿದ್ದೇನೆ, ಎಲ್ಲ ಕಳಚಿಕೊಂಡಿದ್ದೇನೆ ಎಂದುಕೊಳ್ಳುವಾತ, ಆಕೆ ದೂರವಾದ ಅಷ್ಟೂ ಹೊತ್ತೂ ದೂರವಾಗಿಸಿದ್ದನ್ನು ನೆನೆದು ಮತ್ತೆ ಆ ಬಂಧವನ್ನು ಗಟ್ಟಿ ಮಾಡುತ್ತಾರೆ ಹೊರತು ದೂರವಾಗುವುದು ಭ್ರಮ ಅಷ್ಟೆ. ಅಲ್ಲಿ ಬುದ್ಧಿ, ವಿವೇಕ, ವಿವೇಚನೆ, ಸಹನೆ, ನೈತಿಕತೆಯ ಬೇರೆ ಬೇರೆ ಬ್ರೇಕುಗಳ ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ.


ಹೇಳದೆ ಆವರಿಸುವ ಪ್ರೀತಿ, ಕೇಳದೆ ದಾಳಿಯಿಡುವ ಮೋಹ, ಕಂಡು ಕೇಳರಿಯದ ಸಂದಿಗ್ಧ, ಗೊಂದಲ, ಕಾತರ, ಕುತೂಹಲ, ಉದ್ವಿಗ್ನತೆಯ ಹಂತಗಳು ಪ್ರೀತಿಯ ಮಾಯೆ. ಹೇಳದೆ ಮೂಡುವ ಪ್ರೀತಿ ಹೇಳದೆ ಸದ್ದಿಲ್ಲದೇ ಅಲ್ಲಲ್ಲಿಗೇ ಸತ್ತು ಸಮಾಧಿ ಸೇರುವ ಉದಾಹರಣೆಗಳೆಷ್ಟು ಬೇಡ. ಹುಟ್ಟಿಕೊಂಡ ಪ್ರೀತಿಯನ್ನೆಲ್ಲರೂ ಹೇಳಿಕೊಳ್ಳುವುದಿಲ್ಲ, ಹೇಳಿಕೊಳ್ಳುವ ಅಗತ್ಯವೂ ಇಲ್ಲ, ಹೇಳಲಿಕ್ಕೆ ಆಗುವುದಿಲ್ಲ ಕೂಡಾ, ಆ ಪ್ರೀತಿ ತನಗೆ ತಾನೇ ಸಾಂತ್ವನ ಹೇಳುವ, ತನ್ನಲ್ಲೇ ಭಾವನೆಗಳನ್ನು ಬಚ್ಚಿಟ್ಟಕೊಳ್ಳುವಂತಾದಾಗ ನಿರಾಸೆ, ವಿರಹ, ಮತ್ತೆ ಸಾಂತ್ವನವೆಲ್ಲ ನಿರೀಕ್ಷಿತವೇ. ನಿರ್ಲಿಪ್ತ ಜೀವಿಗಳಿಗೆಲ್ಲ ಗೊತ್ತಿರುತ್ತದೆ ಹೇಳದೆ ಹೋದ ಪ್ರೀತಿ ಎಲ್ಲಿಗೆ ಹೋಗಿ ತಲಪುತ್ತದೆ ಎಂದು. ಕೈಗೂಡದ ಪ್ರೀತಿಯನ್ನು ಹೇಳಿದರೂ ಅಷ್ಟೇ... ಹೇಳದಿದ್ದರೂ ಅಷ್ಟೇ... ಪ್ರೀತಿಸಿದವನಿಗೂ, ಪ್ರೀತಿಪಾತ್ರನಿಗೂ ಅದು ಗೊತ್ತಿರುತ್ತದೆ. ವಿಚಿತ್ರವೆಂದರೆ ಇಬ್ಬರೂ ಬಾಯಿ ಬಿಟ್ಟು ಹೇಳಿರುವುದಿಲ್ಲ. ಸುತ್ತು ಬಳಸು ಮಾತು, ಒಗಟಿನ ಸಂಭಾಷಣೆ, ಅಂತ್ಯವೇ ಇಲ್ಲದ ಹರಟೆ ಎಲ್ಲ ಮುಗಿದ ಮೇಲೂ ಹೇಳ ಬೇಕಾದ ಮಾತುಗಳನ್ನು ಹೇಳಿರುವುದೇ ಇಲ್ಲ. ಹೇಳಲು ಸಾಧ್ಯವಾಗುವುದೇ ಇಲ್ಲ.... ಆದರೂ ಸುಪ್ತವಾಗಿರುವ ಪ್ರೀತಿ ಸುಪ್ತವಾಗಿಯೇ ಸದ್ದಡಗಿಸಿ ಮುಂದೊಂದು ದಿನ ಸತ್ತು ಸಮಾಧಿ ಸೇರಿದ ನೆನಪುಗಳ ಹಾಗೆ. ಸಮಾಧಿಯನ್ನು ಕಂಡಾಗಲೆಲ್ಲಾ ಅದೇ ಜೀವಿತದ ನೆನಪು...

ಪ್ರೀತಿ ಹುಟ್ಟಿಸುವ ಕಾತರ, ಕಳೆದುಕೊಂಡಂತೆ ಮಾಡುವ ಚಡಪಡಿಕೆ, ನೆಪ ಹುಡುಕಿ ಆಡುವ ಮಾತುಗಳು.... ಸಿಟ್ಟು ಮಾಡ್ಕೊಂಡು ಹೋಗು ನಡೆ ಎಂದು ಅಬ್ಬರಿಸಿ ಮುಖ ತಿರುವಿದ ಬಳಿಕ ಸ್ವಲ್ಪ ಹೊತ್ತು ಕಳೆದು ಮಾತನಾಡಿಸಲಿಲ್ಲ ಯಾಕೆ ಎಂದು ಮತ್ತೆ ಜಗಳದ ಧಾಟಿಯಲ್ಲೇ ಮಾತಿಗಿಳಿದು ರಾಜಿ ಮಾಡಿಕೊಳ್ಳುವ ಪರಿ.... ಸಿಟ್ಟಿನಲ್ಲೂ ಕಾಡುವುದು ಮತ್ತೆ ಪ್ರೀತಿಯೇ ಅಲ್ಲವೇ..

ದೂರ ಹೋಗಬಹುದು, ದೂರಬಹುದು, ದೂರದಿಂದಲೇ ನೋಡುತ್ತಿರಬಹುದು, ಎದುರಿಗೆ ಸಿಗದಿರಬಹುದು, ಮಾತನಾಡಿಸದೇ ಹೋಗಬಹುದು, ಕಂಡೂ ಕಾಣದಂತೆ ನಡೆಯಬಹುದು, ಆದರೆ ಎದೆಯ ಬಗೆದರೆ ತುಡಿಯುವ ಪ್ರೀತಿಯ ಮಿಡಿತವನ್ನು ಮುಚ್ಚಿಟ್ಟರೂ ಅದರ ಕಂಪನ ಮಾತ್ರ ಕಾಣುವವರಿಗೆ ಕಾಣಿಸುತ್ತದೆ. ಅದನ್ನು ಡಿಲೀಟ್ ಮಾಡುವಂತಿದ್ದರೆ ಜಗತ್ತು ಹೀಗಿರುತ್ತಿರಲಿಲ್ಲ. ಇಷ್ಟೊಂದು ಪ್ರೇಮ ಕವನ, ಹಾಡುಗಳು, ಸಿನಿಮಾಗಳಿಗೆ ಪ್ರೇರಣೆಯೇ ಇರುತ್ತಿರಲಿಲ್ಲ....
ನೆನಪುಗಳೇ ಪ್ರೀತಿಯ ಸಮಾಧಿಗೆ ಹಾಕಿದ ಬೀಗದ ಕೈಗಳನ್ನು ಸಡಿಲಗೊಳಿಸುವ ಶತ್ರುಗಳು. ದಿನವಿಡೀ ಕಾಡದಿದ್ದರೂ ಆಗಾಗ್ಗೆ ನೆನಪು ಹುಟ್ಟಿಸಿ ಪುಟ ತಿರುಗಿಸುವ ಕಾಣದ ಕೈಗಳವು.
----------

ಕಾತರ, ಚಡಪಡಿಕೆ, ನಿರಾಸೆ, ಕಣ್ಣೀರು, ಅಸಹಾಯಕತೆ ಕಾಡಿಸುವ, ಪೀಡಿಸುವ ಪ್ರೀತಿಯಲ್ಲೂ ಒಂದು ಸಾಂತ್ವನವೂ ಇದೆ. ದುಷ್ಟರನ್ನೂ ಸಾತ್ವಿಕರನ್ನಾಗಿಸುವ ಮಮತೆಯಿದೆ, ಅವಸರದ ಮನುಷ್ಯನನ್ನು ಕಾಯಿಸುವ, ಕೂಡಿಸುವ, ಪರೀಕ್ಷಿಸುವ ಮಾಯೆಯಿದೆ, ಒಂದು ಪ್ರಾಮಾಣಿಕತೆಯನ್ನು, ಬದ್ಧತೆಯನ್ನು, ಉತ್ತರದಾಯಿತ್ವವನ್ನು ಕಟ್ಟಿಕೊಡುವ ಅಪಾರ ಅಂತರಶಕ್ತಿಯ ಚೇತನ ಪ್ರೀತಿ. ಯಾರ ಜೊತೆಗೇ ಇರಲಿ.... 
ಶುರುವಿಗೇ ಹೇಳಿದ ಹಾಗೆ ಪ್ರೀತಿಸುವವ ಕುರಿತು ನಮಗಿರುವ ಬದ್ಧತೆಯನ್ನು ಪ್ರಶ್ನಿಸಲಾಗದು. ಒಂದು ಕ್ಷಣದ ಸಿಟ್ಟು, ಒಂದು ಎದುರು ಮಾತು, ಒಂದು ಅಗಲುವಿಕೆ, ಒಂದು ನಿರಾಸೆಯ ಕಂಪನ ಮೂಡಿಸಿದರೂ ಆಂತರ್ಯದಲ್ಲಿರುವ ಪ್ರೀತಿಯ ಜೊತೆಗೆ ಅವರ ಕುರಿತ ಅಪಾರ ಗೌರವ, ಯಾವತ್ತಿಗೂ ಸುಖವಾಗಿರಲಿ ಎಂಬ ಆಶಯ ಹಾಗೂ ತೋರಿಸಿಯೂ ತೋರಿಸದಂತಹ ಸಲುಗೆ, ಅಧಿಕಾರ ಮತ್ತು ಅಪಾರ ಕಾಳಜಿ (ಪೊಸೆಸಿವ್ ನೆಸ್ ಕೂಡಾ) ಪ್ರೀತಿ ಜೊತೆಗೆ ಉಚಿತವಾಗಿ ಬರುವ ಬೈ ಪ್ರಾಡಕ್ಟ್ ಗಳೇನೋ...

ಮೌನಕ್ಕಿಂತ ಮಿಗಿಲಾಗಿ ಪ್ರೀತಿಯನ್ನು, ಕಾಳಜಿಯನ್ನು, ವಿದಾಯವನ್ನು ಹೇಳಲಾಗದು. ಮಾತುಗಳು ಸೋಲುವಲ್ಲಿ, ನಮ್ಮನ್ನು ಮಾವು ಸಮರ್ಥಿಸುವಲ್ಲಿ ವಿಫಲರಾಗುವಲ್ಲಿ, ಹೇಳಿಕೊಂಡು ಹಗುರಗಾವು ಸಾಧ್ಯತೆ ಕ್ಷೀಣಿಸದಲ್ಲಿ ಮೌನವೇ ಮಾತಾಗುವುದು. ಅದನ್ನು ಗ್ರಹಿಸುವ ಮನಸ್ಸಿಗೆ ಆ ಮೌನ ಅಷ್ಟೇ ಮೌನವಾಗಿ ಹೇಳಬೇಕಾದ್ದನ್ನು ತಲುಪಿಸುವ ವರೆಗೆ...
-----------

ಪ್ರೀತಿಯ ಬಗ್ಗೆ ಕಂಡು ಬಂದ ಮೆಚ್ಚಿನ ಸಾಲುಗಳು...

--------
ನಾವೆಷ್ಟೇ ಪ್ರೀತಿಸುವವರು, ಒಮ್ಮೆಗೆ ನಮ್ಮನ್ನು ಅವಾಯ್ಡ್ ಮಾಡುತ್ತಿದಾರೆಂದು ತಿಳಿದರೆ, ಅವರನ್ನು ಮತ್ತಷ್ಟು ನೋಡಬೇಕೆಂಬ ಆಸೆ ಮತ್ತಷ್ಟು ತೀವ್ರವಾಗುವುದು ಸಹಜ. ದೂರವಾಗಲು ಕಾರಣಗಳು ತಿಳಿದಾಗಲೂ ಅಷ್ಟೇ..
-ಪ್ರಸಿದ್ಧ ಕಾದಂಬರಿಕಾರರೊಬ್ಬರ ಸಾಲುಗಳಿವು...
---------
ಒಬ್ಬ ಮನುಷ್ಯನ ಬಗ್ಗೆ ನಾವು ಯಾವುದಕ್ಕಾಗಿ ಇಷ್ಟಪಡುತ್ತೇವೇಯೋ, ಗೌರವ ಇಡುತ್ತೇವೆಯೋ, ಅದನ್ನು ಮುಂದಾಗಿಟ್ಟುಕೊಂಡು ನಾವು ಇನ್ನೊಂದು ಸನ್ನಿವೇಶದಲ್ಲಿ ಅದೇ ಮನುಷ್ಯನ ಬಗ್ಗೆ ಅಥವಾ ಬೇರೊಬ್ಬರ ಬಗ್ಗೆ ಕೆಟ್ಟ ಅಭಿಪ್ರಾಯ ಬಿತ್ತರಿಸುತ್ತೇವೆ.
-ಶಾಂತಾರಾಮ ಸೋಮಯಾಜಿ.

------
ಅತಿ ಒರಟುತನ ವ್ಯಕ್ತಿತ್ವವನ್ನು ಹಾಳು ಮಾಡುವಂತೆಯೇ ಅತೀ ಸೂಕ್ಷ್ಮತೆಯೂ ವ್ಯಕ್ತಿಯ ಮನಸ್ಸಿನ ಸೂಕ್ಷ್ಮತೆಯೂ ವ್ಯಕ್ತಿಯ ಮನಸ್ಸಿನ ನೆಮ್ಮದಿಯನ್ನು ಕಳೆದು ಬಿಡುತ್ತದೆ.
-----
ಹೃದಯದಲ್ಲಿ ಹುದುಗಿದ ಪ್ರೇಮದ ಪ್ರಮಾಣಕ್ಕೆ ಮಾತಿನ ಅಳತೆ ಅನಾವಶ್ಯಕ
-ಎಂ.ವಿ.ಸೀತಾರಾಮಯ್ಯ
-------
ಒಂಟಿತನ ಬೇರೆ, ಏಕಾಂತ ಬೇರೆ. ಪ್ರೀತಿಸುವ ವ್ಯಕ್ತಿಯಿದ್ದರೆ ಏಕಾಂತದಲ್ಲಿ ಆ ಬಾಗಿಲು ಕೊಡುವ ಸಂತೋಷವನ್ನು ಯಾವುದೂ ಕೊಡುವುದಿಲ್ಲ. ಪ್ರೀತಿಸಲು ಯಾರೂ ಇಲ್ಲದಾಗ ಉಂಟಾಗುವುದು ಒಂಟಿತನ. ಅಷ್ಟು ಭಯಂಕರವಾದುದು ಇನ್ಯಾವುದೂ ಇಲ್ಲ.
-ಓರ್ವ ಕಾದಂಬರಿಕಾರ.