Sunday, February 14, 2016

ಕಾಣದ ಕಡಲಿಗೇ....

ಕಡಲ ತಡಿಯ ಇಷ್ಟಪಡದವರೆಷ್ಟು ಮಂದಿ...
ಅಬ್ಬರಿಸುವ ಕಡಲ ತಡಿಯುದ್ದಕ್ಕೂ, ಕಡಲ ಅಲೆಯ ಹಾಗೆ, ಬೀಸುವ ತಂಗಾಳಿ, ಮುಳುಗುವ ಸೂರ್ಯನ ಹಾಗೆ ಆಹ್ಲಾದಕತೆಯನ್ನು ಹಂಚಿಕೊಳ್ಳಲು ಕಡಲ ತಡಿಗಿಂತ ಗದ್ದಲದ ಆದರೂ ಪ್ರಶಾಂತ ಎನಿಸುವ ಜಾಗ ಇನ್ನೊಂದು ಸಿಗದು. ನೆತ್ತಿ ಸುಡುವ ಬಿಸಿಲಿದ್ದರೂ ತಂಗಾಳಿಯ ಸೋಂಕು ಮಾತ್ರ ಬಿಸಿಯಾದ ತಲೆಯನ್ನು ಒಂದಿಷ್ಟು ಹಗುರಗೊಳಿಸಿ, ತನ್ನ ತೆಕ್ಕೆಗೆ ಬಂದವರನ್ನೆಲ್ಲ ಖುಷಿ ಪಡಿಸಿ ಕಳುಹಿಸಬಲ್ಲ ಮಾಂತ್ರಿಕನಲ್ವೇ ಕಡಲ ತಡಿ.

---------------------------------------------------
ನೂರಾರು ನದಿಗಳ ರಾಜ, ಸಹಸ್ರಾರು ಜನರ ಮೆಚ್ಚಿನ ಕಣ್ಮಣಿ, ದಿನಪೂರ್ತಿ ಅಲೆಗಳ ಅಬ್ಬರ ಬೋಟುಗಳಿಗೆ ಸೆರಗನೊಡ್ಡುವ ಸಮುದ್ರವೂ ಒಂದೊಂದು ಬಾರಿ ತುಂಬಾ ಒಂಟಿ ಅನಿಸುವುದಿಲ್ವೇ...
ಸೂರ್ಯ ಮುಳುಗಿದ ಮೇಲೆ ಕಡಲರಾಜನನ್ನು ಎಲ್ಲರೂ ಒಂಟಿಯಾಗಿ ಬಿಟ್ಟು ಹೋಗುತ್ತಾರೆ. ಸೂರ್ಯಾಸ್ತದಲ್ಲೋ, ವೀಕೆಂಡುಗಳಲ್ಲೋ ಮಾತ್ರ ಆತ ಇಷ್ಟವಾಗೋದು. ಉಳಿದ ಸಮಯದಲ್ಲಿ ಅಲ್ಲಿಯೇ ಇರಲು ಪುರುಸೊತ್ತು ಯಾರಿಗಿದೆ ಹೇಳಿ...

ಆದರೂ ಯಾರೆ ಇರಲಿ, ಯಾರೇ ಬಿಡಲಿ ದಡಕ್ಕೆ ಅಲೆಗಳು ಅಪ್ಪಳಿಸುತ್ತಲೇ ಇರುತ್ತವೆ. ನೊರೆಗಳು ಉಕ್ಕತ್ತಲೇ ಇರುತ್ತವೆ. ಅವನೊಳಗಿನ ಒಂಟಿತನ, ಇರಬಹುದಾದ ಕಣ್ಣೀರು ಸಮುದ್ರದ ಗ್ಯಾಲನ್ ಗಟ್ಟಲೆ ಉಪ್ಪು ನೀರಿನೊಳಗೆ ಕರಗಿ ಹೋಗಿದ್ದು ಯಾರಿಗೂ ಕಾಣಿಸದು. ಸಮುದ್ರವೆಷ್ಟು ಗಂಭೀರ, ಎಷ್ಟು ಬಲಶಾಲಿ, ಬೀಚಿನಲ್ಲೆಷ್ಟು ರಭಸ, ಅಬ್ಬರ, ರೌದ್ರ ಎಂದೆಲ್ಲಾ ಹೇಳುವ ನಾವು ಕಡಲ ಅಂತರಂಗವನ್ನು ಶೋಧಿಸುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ.

ರೌದ್ರಕ್ಕೂ, ಅಬ್ಬರಕ್ಕೂ, ಶೌರ್ಯಕ್ಕೂ ಒಂದು ಸೌಮ್ಯ ಮುಖವೂ ಇರುತ್ತದೆ. ನಗಿಸುವವರಿಗೂ, ಬಲಶಾಲಿಗಳ ಒಳಗೂ ಒಂದು ಅಸಹಾಯಕತೆ, ಬಿಕ್ಕಳಿಕೆ ಇರುತ್ತದೆ. ಅದನ್ನು ಎಷ್ಟೋ ಬಾರಿ ಯಾರ ಜೊತೆಗೂ ಹೇಳಿಕೊಳ್ಳಲಾಗದು. ಸಮುದ್ರದ ಹಾಗೆ. ದೂರದಿಂದ ಕಾಣುವಾಗ, ಸೊಬಗ, ಗಾತ್ರ, ಶೌರ್ಯ ಕಂಡಾಗ ಪರಮ ತೃಪ್ತ, ಧೈರ್ಯಶಾಲಿ, ಸುಖೀ ಜೀವನ, ಯಾರ ಹಂಗೂ ಇಲ್ಲ ಎಂಬಿತ್ಯಾದಿ ನೆಗಳ್ತೆಗೆ ಪಾತ್ರರಾದವರೂ ಒಳಗೊಳಗೆ ಅತ್ತರೆ, ಕೊರಗಿದರೆ ಮರುಗುವವರು ಯಾರು. ಕಣ್ಣಿಗೆ ಕಂಡಿದ್ದು ಮಾತ್ರ ನಮಗೆ ವೇದ್ಯವಾಗುವುದು, ಅರ್ಥವಾಗುವುದು, ಹೇಳಲಾಗದ್ದು, ನಿವೇದಿಸಲಾಗದ್ದು, ವಿವರಿಸಲಾಗದ್ದು ಒಳಗೊಳಗೆ ಬೇಯುತ್ತಿದ್ದರೆ ಅದು ಕಣ್ಣಿಗೆ ಕಾಣುವುದಿಲ್ಲ. ಕಡಲೊಡಿನ ಲಾವಾರಸದ ಹಾಗೆ ಅಲ್ಲೇ ಕುದಿಯುತ್ತಿರುತ್ತದೆ. ಸೂರ್ಯಸ್ತದ ಬಂಗಾರದ ವರ್ಣ ಪ್ರತಿಫಲಿಸುವಾಗ ಸೆಲ್ಫೀ ತೆಗೆದು ಖುಷಿ ಪಟ್ಟು ಮರಳುತ್ತೇವೆ.

ಸಮುದ್ರ ಮಾತ್ರ ಅಲ್ಲೇ, ಅದೇ ಜಾಗದಲ್ಲಿ ತೆರೆಗಳನ್ನು ತಳ್ಳುತ್ತಾ, ನೊರೆ ಸೂಸುತ್ತಾ, ಕಡು ಕತ್ತಲಲ್ಲೂ ಉಬ್ಬರ, ಇಳಿತಕ್ಕೆ ನಿರ್ಲಿಪ್ತವಾಗಿ ತನ್ನನ್ನು ತೆರೆದುಕೊಳ್ಳುತ್ತಲೇ ಇರುತ್ತದೆ. ಅದರ ಕರ್ಮವದು. ಕರ್ಮವನ್ನು  ಪಾಲಿಸಲೇ ಬೇಕು. ಅದರೊಳಗೆ ಸೌಂದರ್ಯವನ್ನೋ, ರೌದ್ರವನ್ನೋ ಹುಡುಕುವವರು ನಾವು.

ಈ ನಡುವೆ ಸಮುದ್ರ ಅತ್ತರೆ ಅದು ಅಷ್ಟು ದೊಡ್ಡ ಅಲೆ ಬಂಡೆಗೆ ಅಪ್ಪಳಿಸುವ ಸದ್ದಿನ ನಡುವೆ ಕೇಳಿಸದೇ ಹೋದೀತು. ಸಮುದ್ರಕ್ಕೂ ಜಿಗುಪ್ಸೆ ಬಂದರೆ ಅಷ್ಟು ವಿಶಾಲ ಒಡಲಿನಲ್ಲಿ ಅದನ್ನು ಕಾಣಲಾಗದು. ದಡದಲ್ಲೇ ಕುಳಿತು ಏಕಾಗ್ರತೆಯಿಂದ ನೋಡುತ್ತಲೇ ಕುಳಿತರೆ ಸಮುದ್ರವನ್ನೂ ಸ್ವಲ್ಪ ಸ್ವಲ್ಪ ಅರ್ಥ ಮಾಡಿಕೊಳ್ಳಬಹುದೋ ಏನೋ... ಆದರೂ ಕಷ್ಟವೇ ಬಿಡಿ.

ತನ್ನದೇ ಲೋಕ, ತನ್ನದೇ ಏಕಾಂತ, ತನ್ನದೇ ಒಂದು ವಿಷಣ್ಣ ನಗು, ಮೌನ ರೋಧನ, ಬಿಡಿಸಿದಷ್ಟೂ ಮುಗಿಯದ ಅಲೆಗಳ ಮಡಿಕೆ, ವಿಚಿತ್ರ ಘಮಲು, ಅಂಟಿದಂತಾಗಿ ಮತ್ತೆ ಉದುರಿ ಹೋಗುವ ಮರಳ ರಾಶಿ, ಎಷ್ಟಿದ್ದರೂ ಕುಡಿಯಲಾಗದ ಉಪ್ಪು ನೀರು, ಸಂಜೆ ಮಾತ್ರ ತಂಪು ನೀಡಿ ನಡು ಮಧ್ಯಾಹ್ನ ನೆತ್ತಿ ಸುಡುವು ಸೂರ್ಯ... ಎಷ್ಟೊಂದು ವೈರುಧ್ಯಗಳ ಕಡಲನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ...

ಎಲ್ಲಿಯೂ ಹೇಳಲಾಗದೆ ತನ್ನೆದುರು ಬಂದು ಕೂತು ಪಿಸುಗುಟ್ಟುವ ಜೋಡಿಗಳು, ಬದುಕು ಸಾಕೆಂದು ಬಂದು ಹಾರುವ ವೈರಾಗಿಗಳು, ಹೊಟ್ಟೆ ಪಾಡಿಗೆ ಕಡು ಗಾಳಿಯಲ್ಲೂ ದೋಣಿ ತಂದು ರಾತ್ರಿಯಿಡೀ ಮೀನುಗಾರಿಕೆಗೆ ಹೊರಡುವ ಮಂದಿ, ಗಾಳಿಪಟ ಹಿಡಿದು ಬಂದು ಮರಳಲ್ಲಿ ಗೂಡು ಕಟ್ಟುವ ಸುಖೀ ಕುಟುಂಬಗಳು ಎಲ್ಲದಕ್ಕೂ, ಎಲ್ಲರಿಗೂ ಸಮುದ್ರ ಮೂಕ ಪ್ರೇಕ್ಷಕ. ಯಾರ ಬಗೆಗೂ ಸಮುದ್ರ ಷರಾ ಬರೆಯುವುದಿಲ್ಲ. ಮಾತೂ ಆಡುವುದಿಲ್ಲ. ವಿರಾಟ್ ವಿರಾಗಿ, ವಿಚಿತ್ರ ನಿರ್ಲಿಪ್ತತೆ ಹಾಗೂ ಅಪಾರ ಕರುಣಾಮಯಿ. 

ಎಂತಹದ್ದೇ ಕಲ್ಮಶ ಎಸೆದರೂ ಆ ಕ್ಷಣಕ್ಕೆ ನುಂಗಿಕೊಂಡು ಮತ್ತೆಲ್ಲಿಯೋ ಮತ್ತೆ ದಡಕ್ಕೆ ತಂದು ಹಾಗುವ ನಿಸ್ವಾರ್ಥಿ.... ಒಳಗೊಂದು, ಹೊರಗೊಂದು ಭಾವವಿಲ್ಲ ಸಮುದ್ರಕ್ಕೆ. ಆಚೆ ನೋಡೋಣವೆಂದರೆ ಸಮುದ್ರದ ಆಚೆ ಬದಿ ಕಾಣಿಸುವುದೇ ಇಲ್ಲ. ಅಷ್ಟೊಂದು ಅಗಾಧ, ಆಳ, ದೀರ್ಘ.

ಅದಕ್ಕೇ ಒಬ್ಬೊಬ್ಬರಿಗೆ ಒಂದೊಂದು ರೀತಿಯ ದೃಶ್ಯಕಾವ್ಯ...
ಮಹಾನ್ ಮೌನಿ, ದೀರ್ಘ, ಅಪಾರ ದೇಹಿ, ಶೃಂಗಾರ ಪ್ರಧಾನ, ರೋಮ್ಯಾಂಟಿಕ್ ವಾತಾವರಣ, ಬದುಕು ಕೊನೆಗಾಣಿಸಲು ಸೂಕ್ತ ಜಾಗ, ಧ್ಯಾನಕ್ಕೆ ಪ್ರಶಸ್ತ, ಕವನ ಬರೆಯಲು, ದೀರ್ಘ ಯೋಚನೆಯಲ್ಲಿ ತೊಡಗಲು ಎಲ್ಲದಕ್ಕೂ ಒಳ್ಳೆ ಜಾಗ... ಹೀಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಒಂದೇ ಕಡಲು. ಆದರೆ ಕಂಡುಬರುವ ಆಂಗಲ್ ಮಾತ್ರ ಬೇರೆ ಬರೆ...

ಆದರೂ ಕಡಲಾಳದಲ್ಲಿ ಮೊರೆಯುವ ಕ್ಷೀಣ ದನಿ, ಪುಟ್ಟದೊಂದು ಅಳು, ಮೌನದಾಲಾಪನೆಗೆ ಕಿವಿಕೊಟ್ಟು ನೋಡಲು ಪ್ರಯತ್ನಿಸಿ.... ನಿಮಗೂ ಕೇಳಿಸೀತು...
ಕಡಲು ಕರೆದು ಹೇಳದು, ಅದು ಮೌನಿ, ಬಾಯಿ ಬರುವುದಿಲ್ಲ. ಎದೆಗೆ ಕಿವಿಗೊಟ್ಟರೆ ಅಷ್ಟಿಷ್ಟು ಅರ್ಥವಾದೀತು. ಮಹಾಮೌನಿಯ ಪಿಸುಮಾತು... ಕೇಳಿಯೂ ಕೇಳಿಸದ ಹಾಗೆ....