Thursday, July 7, 2016

ವೈರಾಗ್ಯ ವಿಚಾರ...ಶೂನ್ಯದೊಳಗೊಂದು ಸುತ್ತು


ಪಾರಮಾರ್ಥಿಕತೆ, ಆಧ್ಯಾತ್ಮ, ಮನಃಶ್ಶಾಂತಿಗೆ ಧ್ಯಾನವೂ ಬೇಕೆಂಬ ತೀವ್ರ ಹಂಬಲ ಬರುವುದು ವೈರಾಗ್ಯದ ಅಥವಾ ಸತ್ಯದರ್ಶನದ ಸ್ಥಿತಿಯಲ್ಲಿ. ಪ್ರಾಪಂಚಿಕ ಮೋಹಕ್ಕೆ ಸಿಲುಕುವುದು. ವಸ್ತುನಿಷ್ಠ ಬದುಕು ಸಾಗಿಸುವುದು ಮನುಷ್ಯ ಸಹಜ ಗುಣ. ಅದನ್ನು ಮೀರುವ ಬದುಕು, ತಾಳ್ಮೆ, ಸ್ಥಿತಿಪ್ರಜ್ಞತೆ ರೂಢಿಸುವುದು ಮಹಾತ್ಮರ, ಆದರ್ಶ ಪುರುಷರ ತಪಸ್ಸು. ಮಹಾತ್ಮರ ಮಾತುಗಳು ಇತರರಿಗೆ ಮಾದರಿಯಾಗುವುದು ಅವರು ನಮಗಿಂತ ಭಿನ್ನರಾಗಿ ಯೋಚಿಸಿದ್ದಾರೆ ಎಂಬು ಕಾರಣಕ್ಕೆ.

 
---------------------------
ವೈರಾಗ್ಯ ಸ್ಥಿತಿ ಜೀವನೋತ್ಸಾಹಕ್ಕೆ ತುಸು ತಡೆ ಹಾಕುತ್ತದೆ ಎನ್ನುವುದು ವಾಸ್ತವ. ಆದರೆ, ವೈರಾಗ್ಯದಲ್ಲಿ ನಡೆಯುವಷ್ಟು ಬದುಕಿನ ಕುರಿತ ವಿಮರ್ಶೆ, ಸಿಂಹಾವಲೋಕನ, ಯತಾರ್ಥ ತಿಳಿದುಕೊಳ್ಳುವ ಪ್ರಯತ್ನ ಬೇರೆ ಸಂದರ್ಭಗಳಲ್ಲೂ ಅಷ್ಟಾಗಿ ನಡೆಯುವುದಿಲ್ಲವೇನೋ. ನಮ್ಮೊಳಗೆ ಅವಿತಿರುವ ಹೆಚ್ಚೇ ಅನ್ನಿಸಬಹುದಾದ ಅಹಂ, ಅತಿ ಆತ್ಮವಿಶ್ವಾಸ, ನಾವೇ ಶಾಶ್ವತವೆಂಬ ಹುಚ್ಚು ಭ್ರಮೆ, ವಾಸ್ತವವನ್ನು ಮೀರಿ ಕಾಣುವ ಕಾಲ್ಪನಿಕ ಅತಿಶಯವಾದ ಕನಸುಗಳ ಲೋಕದಿಂದ ಮರಳಿ ವಾಸ್ತವಕ್ಕೆ ಎಳೆ ತರುವ ಸ್ಥಿತಿ ವೈರಾಗ್ಯದಲ್ಲಿದೆ.
ಹಿನ್ನಡೆ ಕಂಡಾಗಲೇ ಗಾಡಿಗೆ ಬ್ರೇಕ್ ಬೀಳೋದು: ಒಂದು ನೋವು, ಒಂದು ಸೋಲು, ಒಂದು ತಪ್ಪು, ಒಂದು ಹಿನ್ನಡೆ ಬಂದಾಗಲೇ ನಾವು ನಮ್ಮ ಬಗ್ಗೆ ಯೋಚಿಸುವ ಹಾಗೆ ಆಗುವುದು. ಶರವೇಗದ ಬದುಕಿನ ಬಂಡಿಯ ನಾಗಾಲೋಟಕ್ಕೆ ಬ್ರೇಕ್ ಹಾಕಿ, ಗಾಡಿಯನ್ನು ಪಕ್ಕಕ್ಕ್ಕೆ ನಿಲ್ಲಿಸಿ ‘ನನ್ನ ಗಾಡಿ ಸರಿ ಇದೆಯೇ?’ ಅಂತ ಪರೀಕ್ಷೆ ಮಾಡುವ ಗೋಜಿಗೆ ಹೋಗುವುದು.
ಎಷ್ಟೋ ಬಾರಿ ಯಾರ‌್ಯಾರಿಗೋ ಸ್ಪರ್ಧೆ ನೀಡುವ ಭ್ರಮೆಯಲ್ಲಿ, ಯಾರನ್ನೋ ಹಣಿಯುವ ಹುಚ್ಚಿನಲ್ಲಿ, ಯಾರ ಮೇಲೋ ಅಧಿಕಾರ ಚಲಾಯಿಸುವ ಹುಚ್ಚು ಹುನ್ನಾರದಲ್ಲಿ ನಾವೆಷ್ಟು ದಿನ ಶಾಶ್ವತವೆಂಬ ಸತ್ಯವನ್ನು ಮರೆತಿರುತ್ತೇವೆ. ಇದು ಮನುಷ್ಯ ಸಹಜ ಗುಣ. ‘೯೦ ದಾಟಿದ ವೃದ್ಧನೂ ಲೈಫ್ ಟೈಮ್ ವ್ಯಾಲಿಡಿಟಿ ಇರುವ ಮೊಬೈಲ್ ಪ್ಲಾನ್ ಹಾಕಿಸಿದ’ ಎಂಬ ಜೋಕಿನ ಹಾಗೆ.
ಪ್ರತಿ ವ್ಯಕ್ತಿಯಲ್ಲೂ ಜೀವನೋತ್ಸವ, ಸಕಾರಾತ್ಮಕ ಮನೋಭಾವ ಖಂಡಿತಾ ಬೇಕು. ‘ನಾಳೆ ನಾನು ಸಾಯಬಹುದು, ಮತ್ತೇಕೆ ಬದುಕಿರಬೇಕು?’ ಎಂಬಿತ್ಯಾದಿ ಋಣಾತ್ಮಕ ಮನೋಭಾವ ಬೇಕು ಎಂದು ಹೇಳುತ್ತಿರುವುದಲ್ಲ. ಆದರೆ, ಕ್ಷಣಿಕವಾಗಿರುವ ಬದುಕಿನಲ್ಲಿ ನಾವೆಷ್ಟು ದಿನ ಇರಬಲ್ಲೆವು, ಎಷ್ಟು ದಿನ ಹಕ್ಕು ಚಲಾವಣೆ, ಅಹಂಭಾವ ಪ್ರದರ್ಶನ, ತೀರದ ಹಗೆ ಪಾಲಿಸುತ್ತಾ ಬರುವುದು... ಇವನ್ನೆಲ್ಲ ಮಾಡಬಲ್ಲೆವು ಎಂಬ ಬಗ್ಗೆ ಸ್ವವಿಮರ್ಶೆ ಮಾಡಿಕೊಳ್ಳುವುದು ಒಳಿತು.
ಈ ಹಿಂದೆ ಹೀಗೆ ಮಾಡಿದವರೆಲ್ಲ ಹೋಗುವಾಗ ಏನು ಕೊಂಡು ಹೋದರು? ಅವರಂದುಕೊಂಡ ಹಾಗೆ ಎಲ್ಲ ಆಯಿತೇ? ಅಥವಾ ಶಾಶ್ವತವಾಗಿ ಅವರು ಮಾಡಿದ್ದೇನು? ಇತರರಿಗಾಗಿ ಉಳಿಸಿದ್ದೇನು? ಎಂಬುದೆಲ್ಲಾ ಚಿಂತನೆಗೆ ಕಾಡುವುದು ಅವರು ನಮ್ಮನ್ನು ಅಗಲಿದಾಗ (ಸ್ಮಶಾನ ವೈರಾಗ್ಯ). ಆತ್ಮೀಯರೊಬ್ಬರು ಅಗಲಿಗಾದಲೆಲ್ಲಾ ಅವರ ಕುರಿತ ಚಿಂತನೆಯಲ್ಲಿ ಇಂತಹದ್ದನ್ನು ಕಂಡುಕೊಳ್ಳಲು ಅವಕಾಶ ಸಿಗುವುದು ಹಾಗೂ ಒಂದು ಸತ್ಯದ ಬೆಳಕು ಮೂಡುವುದು.
ಹೋಗುವಾಗ ಕೊಂಡು ಹೋಗುವುದು ಏನೂ ಇಲ್ಲ, ಕೊನೆಗೆ ಶರೀರ ಕೂಡಾ ಭೂಮಿಯಲ್ಲೇ ಮಣ್ಣಾಗುವುದು, ಶರೀರ ಕೂಡಾ ಎದ್ದು ಎಲ್ಲೂ ಹೋಗುವುದಿಲ್ಲ. ನಾಲ್ಕು ಜನರಿಗೆ ಒಳ್ಳೆಯದು ಮಾಡಿದರೆ ಮಾತ್ರ ಅದರ ನೆನಪು ಉಳಿಯುತ್ತದೆ. ಅಂತಹ ಒಳ್ಳೆ ಕಾರ್ಯಕ್ಕೆ ಇಂತಹದ್ದೊಂದು ವೈರಾಗ್ಯ ದಿಕ್ಕು ತೋರಿಸಿದರೆ ಹುಚ್ಚು ಭ್ರಮೆಗಳನ್ನು ಕಳಚಿ ಬದುಕಲು ಸಾಧ್ಯವಾಗುತ್ತದೆ.
ಕಾಡುವ ಶೂನ್ಯತೆ: ಸ್ಮಶಾನ ವೈರಾಗ್ಯ, ಪ್ರಸವ ವೈರಾಗ್ಯ, ಉದರ ವೈರಾಗ್ಯಗಳಂತಹ ವೈರಾಗ್ಯಗಳನ್ನು ಅನುಭವಿಸದ ವ್ಯಕ್ತಿ ಇರಲಾರ. ಆ ಕ್ಷಣಕ್ಕೆ ಕಾಡುವ ಶೂನ್ಯತೆ, ಎಲ್ಲ ನಶ್ವರವೆಂಬ ಹತಾಶೆ, ಎಲ್ಲವೂ ಸುಳ್ಳು, ತಾನು ಸೊನ್ನೆ, ಎಷ್ಟು ಕಷ್ಟಪಟ್ಟರೂ ಇಂತಹದ್ದೊಂದು ಹಂತ ದಾಟಿಯೇ ಮನುಷ್ಯ ಮುಂದುವರಿಯುತ್ತಾನೆ ಎಂಬಿತ್ಯಾದಿ ಸತ್ಯಗಳು ಕಾಡುವುದು, ಹಿಂಡಿ ಹಿಪ್ಪೆ ಮಾಡುವುದು ಇಂತಹ ವೈರಾಗ್ಯಗಳ ಸಂದರ್ಭದಲ್ಲೇ.
ಆತ್ಮೀಯರು ಅಗಲಿ ಹೋದಾಗ, ಅವರನ್ನು ಮರಳಿ ಮಣ್ಣಿಗೆ ಸೇರಿಸಿದಾಗ, ಪ್ರಸವ ವೇದನೆಯಲ್ಲಿ ಹೆಣ್ಣನ್ನು ಕಾಡುವ ಅಪಾರ ನೋವು, ಅದಕ್ಕೆ ಸಾಕ್ಷಿಗಳಾಗುವವರ ಪ್ರತಿಕ್ರಿಯೆ, ಕಡು ಬಡತನದಲ್ಲಿನ ಹತಾಶೆ.... ಇಂತಹ ಆಯಾ ಸನ್ನಿವೇಶ ಮನಃಸ್ಥಿತಿ ಮನುಷ್ಯನ ಚಿಂತನೆಯ ಧಾಟಿಯನ್ನೇ ಕೆಲ ದಿನಗಳ ಮಟ್ಟಿಗಾದರೂ ಬದಲಿಸಬಲ್ಲುದು. ಮಾಡುತ್ತಿರುವ ಚಟುವಟಿಕೆಗಳಿಂದ ವಿಮುಖರಾಗಿ ಲೌಕಿಕ ಬದುಕಿನ ವಾಸ್ತವಗಳ ಕುರಿತು ಚಿಂತಿಸುವ, ಧ್ಯಾನಿಸುವ, ಆಧ್ಯಾತ್ಮದತ್ತ ಒಲವು ತೋರುವ ಹಾಗೆ ಮಾಡಬುಹುದು.
ಆದರೆ ಕಾಲಕ್ಕೆ ಎಲ್ಲವನ್ನೂ ಮರೆಸುವ ಅಥವಾ ಎಲ್ಲದರ ತೀವ್ರತೆಯನ್ನು ಕಡಿಮೆ ಮಾಡುವ ಅಪಾರ ಶಕ್ತಿಯಿದೆ. ಮತ್ತೆ ಇದೇ ಕಾಲದ ಮೋಹದಲ್ಲಿ ಮತ್ತೆ ಲೌಕಿಕತೆ ಪ್ರಾಪ್ತಿಯಾಗುತ್ತದೆ, ವಸ್ತುನಿಷ್ಠ ಬದುಕು ಮುಂದುವರಿಯುತ್ತದೆ. ನಾನು, ನನ್ನದು, ನನ್ನ ಅಧಿಕಾರ, ನನ್ನ ಜಗತ್ತೆಂಬ ಮಾಯೆ ಆವರಿಸುತ್ತದೆ. ವೈರಾಗ್ಯದ ಪ್ರಮಾಣ ಕಡಿಮೆಯಾದಂತೆ ಪ್ರಾಪಂಚಿಕ ಲೋಕದಲ್ಲಿ ನಮ್ಮನ್ನು ನಾವು ಕಳೆದುಕೊಂಡು ಬಿಡುತ್ತೇವೆ.
ಇಲ್ಲವಾದಲ್ಲಿ ‘ಏಳೇಳು ಜನ್ಮ ದಾಟಿದರೂ ಅವನನ್ನು ಬಿಡಲಾರೆ’ ಎಂಬಿತ್ಯಾದಿ ಹುಚ್ಚು ದ್ವೇಷಗಳನ್ನು ಹಿಡಿದುಕೊಂಡು ನಮ್ಮನ್ನೇ ನಾವು ಮೋಸ ಮಾಡಿಕೊಂಡ ಹಾಗೆ ಅಲ್ವೇ? ನಾಳೆ ದಿನದ ನಮ್ಮ ಬದುಕಿನ ಬಗ್ಗೆ ಇಂದು ನಮಗೇ ನಿಶ್ಚಿತತೆ ಇಲ್ಲದಿರುವಾಗ ಇನ್ಯಾರನ್ನೋ ಏಳೇಳು ಜನ್ಮದ ವರೆಗೂ ಕಾಡುತ್ತೇನೆ ಎಂಬುದು ಹುಚ್ಚಲ್ಲದೆ ಮತ್ತೇನು? ಇದು ಸಿನಿಮಾ ಪರದೆಯಲ್ಲಿ ನೋಡಲು ಲೇಸು ಅಷ್ಟೆ.
ವೈರಾಗ್ಯದಿಂದಲೇ ಬದುಕು ಬದಲಾಯಿಸಿದ್ರು!:
ಬದುಕಿನ ಕಟು ವಾಸ್ತವಗಳನ್ನು ಕಂಡ ಬುದ್ಧ ಸರ್ವಸಂಗ ಪರಿತ್ಯಾಗಿಯಾಗಿದ್ದು, ತುಂಡು ಬಟ್ಟೆಯುಟ್ಟ ಮಹಿಳೆಯ ಕಡುಬಡತನ ಕಂಡ ಗಾಂಧೀಜಿ ಎರಡು ಬಟ್ಟೆಗಳಲ್ಲೇ ಉಳಿದ ಬದುಕು ಸಾಗಿಸಿದ್ದು, ಅಪವಾದವನ್ನು ಕೇಳಿದ ಶ್ರೀರಾಮ ಪತ್ನಿಯನ್ನು ಕಾಡಿನಲ್ಲಿ ಬಿಟ್ಟು ಬರಲು ಹೇಳಿದ್ದು, ಬಾಹುಬಲಿ ದಿಗಂಬರನಾಗಿ ತಪಸ್ಸಿಗೆ ನಿಂತಿದ್ದು ಇಂತಹದ್ದೇ ವೈರಾಗ್ಯದ ಸನ್ನಿವೇಶಗಳಲ್ಲಿ ತಾನೇ? ಅಷ್ಟೆತ್ತರಕ್ಕೆ ನಿಂತಿರುವ ಬಾಹುಬಲಿಯ ವಿಗ್ರಹ, ಮುಖದಲ್ಲಿರುವ ಭಾವಗಳನ್ನು ನೋಡಿದರೆ ವಿರಾಟ್ ವಿರಾಗಿಯ ಕತೆಯನ್ನು ಆ ನೋಟವೇ ಹೇಳುತ್ತದೆ. ವೈರಾಗ್ಯ ಈ ಮಹಾತ್ಮರ ಬದುಕಿಗೊಂದು ದೊಡ್ಡ ತಿರುವಾಯಿತು. ಆದರೆ ಜನ ಸಾಮಾನ್ಯರನ್ನು ಆಗೊಮ್ಮೆ, ಈಗೊಮ್ಮೆ ಕಾಡುವ ವೈರಾಗ್ಯ ಬದುಕಿನಲ್ಲಿ ಬರುವ ಅಲ್ಪವಿರಾಮ ಹೊರತು ಜನ ಪ್ರತಿದಿನ ಅದೇ ಗುಂಗಿನಲ್ಲಿ ಇರೋದಿಲ್ಲ. ಕಾಲಾಯ ತಸ್ಮೈ ನಮಃ ಅನ್ನುವ ಹಾಗೆ ಎಲ್ಲದರ ತೀವ್ರದೆ ದಿನಗಳಂತೆ ಕಡಿಮೆಯಾಗುತ್ತದೆ, ಆದರೆ ಆತ್ಮವಿಮರ್ಶೆಗೆ ವೈರಾಗ್ಯಕ್ಕಿಂತ ದೊಡ್ಡ ಕೊಠಡಿ ಸಿಗದೇನೋ!
-ಕೃಷ್ಣಮೋಹನ ತಲೆಂಗಳ.