Saturday, September 24, 2016

ನೋಡಿದನು ಕಲಿ ರಕ್ತಬೀಜನು.... (ಶ್ರೀದೇವಿ ಮಹಾತ್ಮೆಯಲ್ಲಿ ಕಾಡುವ ಸಾತ್ವಿಕ ರಾಕ್ಷಸ)


ಇಡೀ ರಾತ್ರಿಯ ಆಟ ನೊಡಿದ ದಣಿವಿನ ಅಂತಿಮ ಘಟ್ಟ...ಬೆಳಗ್ಗಿನ ಜಾವ 5 ಗಂಟೆಯ ಹೊತ್ತಿಗೆ ಅಷ್ಟೂ ಪ್ರಸಂಗಕ್ಕೊಂದು ಸ್ವರೂಪ ಕೊಡುವಂತೆ, ಅರೆನಿದ್ರೆಯಲ್ಲಿದವರಿದ್ದರೆ ಎಚ್ಚರಿಸಿ ಸೆಟೆದು ಕುಳಿತುಕೊಳ್ಳುವಂತಹ ಪಾತ್ರ ಪ್ರವೇಶವಾಗುತ್ತದೆ. ವೇಗದ ಪ್ರವೇಶ, ನಂತರದ ವಿವರ ಸಂಭಾಷಣೆ, ನಾಟ್ಯ, ಭಾವ, ಭಂಗಿ ಹಾಗೂ ಪಾತ್ರ ಪೋಷಣೆ ಎಲ್ಲದರಲ್ಲೂ ಗಮನ ಸೆಳೆಯುವ ಪಾತ್ರ ಶ್ರೀದೇವಿ ಮಹಾತ್ಮೆ ಪ್ರಸಂಗದ ರಕ್ತಬೀಜಾಸುರ. 

ಮೇದಿನಿ ನಿರ್ಮಾಣ, ಮಹಿಷ ಮರ್ಧಿನಿ ಹಾಗೂ ಶಾಂಭವಿ ವಿಲಾಸವೆಂಬ ಮೂರು ಕಥಾನಕಗಳ ಮಿಶ್ರಣ ಶ್ರೀದೇವಿ ಮಹಾತ್ಮೆ ಕರಾವಳಿ ಭಾಗದ ನಿತ್ಯ ನೂತನ ಪ್ರಸಂಗ. ಯಕ್ಷಗಾನಾಭಿಮಾನಿಗಳು ಸತತ ನೋಡಿದರೂ ಇನ್ನಷ್ಟು ನೋಡುವಂತೆ ಮಾಡುವ, ಯಕ್ಷಗಾನದ ಇತಿಹಾಸದಲ್ಲಿ ಲಕ್ಷಾಂತರ ಪ್ರದರ್ಶನಗಳನ್ನು ಕಂಡಿರುವ ಶ್ರೀದೇವಿ ಮಹಾತ್ಮೆಯ ಕಥಾ ರಚನೆಯೇ ಹಾಗಿದೆ. ರಾತ್ರಿ 10 ಗಂಟೆ ಕಥೆ ಆರಂಭವಾದರೆ ಮುಂಜಾವಿನ 6 ಗಂಟೆಯ ತನಕ ಸತತ ಹಿಡಿದಿಟ್ಟುಕೊಳ್ಳುವಂತೆ ಮಾಡುವ ಪಾತ್ರಗಳ ಸಂಯೋಜನೆ, ಪದಗಳು ಹಾಗೂ ಧಾರ್ಮಿಕವಾಗಿಯೂ ವಿಶೇಷ ಮಹತ್ವ ಪಡೆದಿರುವ ಬಹುತೇಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರು ಹೆಚ್ಚಾಗಿ ಆಡುವ ಪ್ರಸಂಗವಿದು. ಇತರ ಮೇಳದವರೂ, ತೆಂಕು, ಬಡಗು ಉಭಯ ತಿಟ್ಟುಗಳಲ್ಲೂ ಸತತ ಪ್ರದರ್ಶನ ಕಾಣುವ ಕಥಾನಕವಿದು.

ಮಹಿಷ ವಧೆ, ಚಂಡ ಮುಂಡ, ಧೂಮ್ರಾಕ್ಷಾದಿ ದೈತ್ಯರ ಸಂಹಾರವಾದ ಬಳಿಕ ಇನ್ನೇನು, ಕದಂಬಾ ವನದಲ್ಲಿರುವ ಶಾಂಭವಿಯನ್ನು ಎದುರಿಸಲು ಸ್ವತಹ ಶುಂಭ ದಾನವ ಹೊರಡಲು ಉದ್ಯುಕ್ತನಾಗುವ ವೇಳೆಗೆ ಮಿಂಚಿನ ವೇಗದಲ್ಲಿ (ಬಹುತೇಕ ಮುಂಜಾನೆಯ 5 ಗಂಟೆಗೆ) ಸಭಾ ಪ್ರವೇಶ ಮಾಡುವ ರಕ್ತಬೀಜನ ಪಾತ್ರ ಮುಂದಿನ ಸಾಧಾರಣ ಒಂದು ಗಂಟೆ ಕಾಲ ಸಭಿಕರನ್ನು ಹಿಡಿದಿಟ್ಟುಕೊಳ್ಳುವುದು ಮಾತ್ರವಲ್ಲ, ರಾಕ್ಷಸ ಪಾತ್ರವಾದರೂ ದೇವಿ ಮಹಾತ್ಮೆಯ ಅಲಿಖಿತ ಹೀರೋ ಥರ ಭಾಸವಾಗುತ್ತಾನೆ. ಪಾತ್ರದೊಳಗೆ ಕಾಣುವ ಸಾತ್ವಿಕತೆ, ಶುಂಭ ದಾನವನಿಗೆ ಹೇಳುವ ಹಿತವಚನಗಳು, ಅವರಿಬ್ಬರ ನಡುವಿನ ಸಂವಾದ, ಬಳಿಕ ಕದಂಬಾ ವನದಲ್ಲಿ ಶ್ರೀದೇವಿಯನ್ನು ಸ್ತುತಿಸುವುದು, ಕ್ಷಮೆ ಕೇಳುವುದು, ನಂತರ ಹೋರಾಡುವುದು, ಹಣೆಯೊಡೆದ ವೇಳೆ ರಕ್ತವನ್ನು ಭೂಮಿಗೆ ಚೆಲ್ಲಿದಾಗ ಕೋಟಿ ಕೋಟಿ ಸಂಖ್ಯೆಯಲ್ಲಿ ರಕ್ತಬೀಜರು ಹುಟ್ಟುವುದು, ಶ್ರೀದೇವಿಯೇ ರಕ್ತೇಶ್ವರಿಯಾಗಿ ಬೃಹತ್ ನಾಲಗೆ ಚಾಚಿ ರಕ್ತವನ್ನು ಭೂಮಿಗೆ ಬೀಳದಂತೆ ತಡೆದು ರಕ್ತಬೀಜನನ್ನು ಕೊಲ್ಲುವುದು... ನಂತರ 10 ನಿಮಿಷದಲ್ಲಿ ಶುಂಭ ನಿಶುಂಭರ ವಧೆಯೊಂದಿಗೆ ಪ್ರಸಂಗ ಕೊನೆಯಾಗುತ್ತದೆ. ಆವೇಳೆಗೆ ಮುಂಜಾನೆಯ ಸೂರ್ಯ ಮೂಡಿರುತ್ತಾನೆ.


ಆಟದ ಬಯಲು ಬಿಟ್ಟು ಮನೆಗೆ ಹೊರಟರೂ ಮತ್ತೆ ಮತ್ತೆ ಕಾಡುವುದು ರಕ್ತಬೀಜನ ಪಾತ್ರವೇ... ಯಾವುದೇ ಮೇಳದ ಅಗ್ರ ಶ್ರೇಣಿಯ ಕಲಾವಿದರು ನಿರ್ವಹಿಸುವ ರಕ್ತಬೀಜನ ಪಾತ್ರ ಪ್ರವೇಶವಾಗುವುದೇ ಮುಂಜಾನೆ 5 ಗಂಟೆಗೆ, ಪಾತ್ರ ನಿರ್ವಹಣೆ ಸುಮಾರು ಒಂದು ಗಂಟೆ ಕಾಲ. ಆದರೂ ಆ ಪಾತ್ರಕ್ಕೆ ಅಷ್ಟು ತೂಕವಿದೆ, ಪೈಪೋಟಿಯಿದೆ, ಯಕ್ಷಗಾನ ವಿದ್ವಾಂಸರ ಕಡು ವಿಮರ್ಶೆಗೂ ಒಳಗಾಗುವ ಪಾತ್ರವದು. ಅದ್ಭುತ ಬಣ್ಣಗಾರಿಕೆ, ಕುಣಿತ, ನುರಿತ ವಾಕ್ಚಾತುರ್ಯ, ಭಾವಾಭಿನಯ, ಬೆಳಗ್ಗಿನ ಜಾವ ಕ್ಲಪ್ತ ಸಮಯದಲ್ಲಿ ಪ್ರಸಂಗವನ್ನು ಕೊಂಡುಹೋಗಬೇಕಾದ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಯೇ ರಕ್ತಬೀಜನ ಪಾತ್ರ ಮೆರೆಯುತ್ತದೆ. ಇಂದು ಯಾರು ರಕ್ತಬೀಜ ಹಾಕುತ್ತಾರಂತೆ ಎಂದು ಕೇಳಿಯೇ ಯಕ್ಷಪ್ರಿಯರು ಆಟಕ್ಕೆ ಹೋಗುವುದುಂಟು.

ಒಮ್ಮೆ ಪರಮ ಸಾತ್ವಿಕನಾಗಿ, ಒಡೆಯ ಶುಂಭನಿಗೆ ಹಿತವಚನ ಹೇಳುವ ಮಂತ್ರಿಯಾಗಿ, ಸ್ವತಹ ಯುದ್ಧಕ್ಕೆ ಹೊರಡುವ ಸೇನಾನಾಯಕನಾಗಿ, ಮತ್ತೆ ಕದಂಬಾ ವನದಲ್ಲಿ ಶ್ರೀದೇವಿಯ ಭಕುತನಾಗಿ, ಭಜನಕನಾಗಿ, ಆಕೆ ಸಂಧಾನವನ್ನು ಧಿಕ್ಕರಿಸಿದಾಗ ಟಿಪಿಕಲ್ ರಾಕ್ಷಸನಾಗಿ ಮೆರೆಯುವ ವಿವಿಧ ಹಂತಗಳನ್ನು ಒಳಗೊಂಡಿರುವ ಅಷ್ಟೂ ವಿಭಾಗಗಳೂ ಆಕರ್ಷಕವೇ ಆಗಿದೆ.
ಧನುಜೇಶ ಕೇಳೆನ್ನಾ ಮಾತ....
ಅಲ್ಪನೇ ಧೂಮ್ರಲೋಚನನು..
ತರುಣಿಯಲ್ಲ ಅವಳ್ ಆದಿಮಾಯೆ...
ನಿನಗೆ ನಾಚಿಕೆಯೇ...
ನೋಡಿದನು ಕಲಿ ರಕ್ತಬೀಜನು...
ಏನಾಕಂನಿಭವಕ್ತ್ರೇ...


ಹೀಗೆ, ರಕ್ತಬೀಜನ ಪಾತ್ರದಲ್ಲಿ ಬರುವ ಅಷ್ಟೂ ಪದ (ಹಾಡುಗಳು) ಮತ್ತೆ ಮತ್ತೆ ಕೇಳುವಂಥದ್ದು. ಸಾಮಾನ್ಯವಾಗಿ ಮೇಳದ ಪ್ರಧಾನ ಭಾಗವತರ ಉಪಸ್ಥಿತಿಯಲ್ಲಿ ಕೇಳಿ ಬರುವ ಈ ಮೇಲಿನ ಎಲ್ಲಾ ಬದಗಳನ್ನೂ ಪ್ರೇಕ್ಷಕರನ್ನು ಪಿನ್ ಡ್ರಾಪ್ ಸೈಲೆನ್ಸಿನಲ್ಲಿ ಆಲಿಸುತ್ತಾರೆ. ಇಡೀ ರಾತ್ರಿ ನಿದ್ದೆಗೆಟ್ಟ ಅಮಲಿನಲ್ಲಿರುವವರೂ, ಚಳಿಯಲ್ಲಿ ಸ್ವೆಟರ್ ತೊಟ್ಟು ಬೀಡಿಯೆಳೆದು ನಿದ್ದೆ ಕೊಡವಿದವರೂ, ಚುರುಮುರಿ, ಚಹಾ ಕುಡಿದು ಮತ್ತೆ ಫ್ರೆಶ್ ಆಗಿ ಬಂದವರೂ, ಬೆಳಗ್ಗೆ 2 ಗಂಟೆಗೆ ಪ್ರಧಾನ ಭಾಗವತರು ಬರುವ ವೇಳೆಗೆ ತಾಜಾ ನಿದ್ದೆ ಮುಗಿಸಿ ಬಂದು ಉಲ್ಲಸಿತರಾಗುವವರೆಲ್ಲರೂ ಮಂತ್ರಮುಗ್ಧರಾಗಿ ನೋಡುವ ಸನ್ನಿವೇಶವದು....

ತೆಂಕಿನಲ್ಲಿ ಸದ್ಯ ಸುಣ್ಣಂಬಳ ವಿಶ್ವೇಶ್ವರ ಭಟ್ (ಕಟೀಲು ಆರನೇ ಮೇಳ), ಸುಬ್ರಾಯ ಹೊಳ್ಳ ಕಾಸರಗೋಡು, ಜಯಪ್ರಕಾಶ ಶೆಟ್ಟಿ ಪೆರ್ಮುದೆ (ಹೊಸನಗರ ಮೇಳ), ಸಂತೋಷ್ ಕುಮಾರ್ ಮಾನ್ಯ (ಎಡನೀರು ಮೇಳ), ಗಣೇಶ ಶೆಟ್ಟಿ ಕನ್ನಡಿಕಟ್ಟೆ (ಕಟೀಲು ಮೂರನೇ ಮೇಳ), ಬೆಳ್ಳಾರೆ ಮಂಜುನಾಥ ಭಟ್ (ಕಟೀಲು ಎರಡನೇ ಮೇಳ), ಗಣೇಶ ಚಂದ್ರಮಂಡಲ (ಕಟೀಲು ನಾಲ್ಕನೇ ಮೇಳ), ರಾಕೇಶ್ ರೈ ಅಡ್ಕ (ಕಟೀಲು ಐದನೇ ಮೇಳ), ಗಣೇಶ ಅರಳ (ಕಟೀಲು ಒಂದನೇ ಮೇಳ), ಸೂರಿಕುಮೇರು ಗೋವಿಂದ ಭಟ್ (ಧರ್ಮಸ್ಥಳ ಮೇಳ), ಕೊಳ್ತಿಗೆ ನಾರಾಯಣ ಗೌಡ (ಭಗವತಿ ಮೇಳ)...ಸೇರಿದಂತೆ ಘಟಾನುಘಟಿ ರಕ್ತಬೀಜ ಪಾತ್ರ ನಿರ್ವಹಿಸುವವರಿದ್ದಾರೆ. ಪೆರುವಾಯಿ ನಾರಾಯಣ ಶೆಟ್ಟಿ, ಸಂಪಾಜೆ ಶೀನಪ್ಪ ರೈ ಅವರಂತಹ ಹಿರಿಯ ತಲೆಮಾರಿನ ರಕ್ತಬೀಜ ಪಾತ್ರದಲ್ಲಿ ಹೆಸರುವಾಸಿಗಳಾದವರಿದ್ದಾರೆ. 

ಪ್ರತಿಯೊಬ್ಬರ ಪಾತ್ರ ಪೋಷಣೆಗೂ ಅವರದ್ದೇ ಆದ ವೈಶಿಷ್ಟ್ಯವಿದೆ. ಏನೇ ಇದ್ದರೂ ಮಾತು, ಕುಣಿತ, ಬಣ್ಣ ತ್ರಿವಳಿ ಸಂಗಮವಾದರೇನೇ ರಕ್ತಬೀಜ ಪಾತ್ರದ ಗಾಂಭೀರ್ಯ, ಸ್ವಾರಸ್ಯ ಹೆಚ್ಚುವುದು.

ಕತೆಯೊಂದಕ್ಕೆ ತಿರುವು ತರಬಲ್ಲ, ಕತೆಯ ಹರಿವನ್ನು ಇನ್ನಷ್ಟು ಚುರುಕು ಮಾಡಬಲ್ಲ, ಇಡೀ ರಂಗವನ್ನು ಆವರಿಸಿ ಕತೆಗೊಂದು ತಾರ್ಕಿಕ ಕ್ಲೈಮಾಕ್ಸ್ ತರಬಲ್ಲ, ಕತೆಯ ಓಘಕ್ಕೆ ಇನ್ನೊಂದು ಆಯಾಮ ಕೊಡಬಲ್ಲ... ಯಾವತ್ತೂ ಕಾಡುವ ಪಾತ್ರ ರಕ್ತಬೀಜ... ನೀವೇನಂತೀರಿ....(ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟದಲ್ಲಿ ಬರುವ ರಕ್ತಬೀಜಾಸುರನ ಬಗ್ಗೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನ್ನ ಅನಿಸಿಕೆಯಿದು. ಯಾವುದೇ ಜಿಜ್ಞಾಸೆ, ಪಾಂಡಿತ್ಯ ಇದ್ದು ಬರೆದುದಲ್ಲ. ಒಬ್ಬ ಸಾಧಾರಣ ಪ್ರೇಕ್ಷಕನ ಅನಿಸಿಕೆಯೆಂದಷ್ಟೇ ಸ್ವೀಕರಿಸಿ)

-ಕೆ.ಎಂ.ತಲೆಂಗಳ.  (ಬಲ್ಲಿರೇನಯ್ಯ ಯಕ್ಷಕೂಟ, ವಾಟ್ಸಪ್ ಬಳಗಕ್ಕಾಗಿ).