Tuesday, October 18, 2016


ನಾವು ಹುಟ್ಟಿರೋದೇ ಡ್ರಾಮಾ ಮಾಡೋಕೆ...!

ಡಿಗ್ರೀ ಓದ್ತಾ ಇದ್ದಾಗ ಒಬ್ಬರು ಲೆಕ್ಚರರ್ ಇದ್ರು. ತುಂಬ ಗೌರವ ಅವರ ಬಗ್ಗೆ. ಕಾಲೇಜು ಬಿಟ್ಟು ಎರಡು ವರ್ಷದ ನಂತರ ಒಮ್ಮೆ ಕ್ಯಾಂಟೀನ್‌ನಲ್ಲಿ ಸಿಕ್ಕಿದ್ರು. ನನ್ನ ಕಂಡ ತಕ್ಷಣ ಬಲದ ಕೈಯನ್ನು ಬೆನ್ನ ಹಿಂದೆ ಬಚ್ಚಿಟ್ಟುಕೊಂಡ್ರು.  ನಾನು ಕೂಡಾ ಒಂದು ಅರ್ಧ ನಿಮಿಷ ಮಾತನಾಡಿದ ಅಲ್ಲಿಂದ ಹೋದೆ, ಇಲ್ಲದಿದ್ದರೆ, ಅವಕ ಕೈ ಸುಟ್ಟುಹೋಗ್ತಿತ್ತು! ಕಾರಣ, ಅವರ ಕೈಲಿ ಇದ್ದಿದ್ದು ಸಿಗರೇಟ್!
ಈ ಪ್ರಕರಣದ ನಂತರವೂ ನನಗೆ ಅವರ ಮೇಲಿನ ಗೌರವ ತುಸುವೂ ಕಡಿಮೆಯಾಗಿಲ್ಲ. ಆದಾಗ್ಯೂ ನನ್ನನ್ನು ಕಂಡ ತಕ್ಷಣ ಸಿಗರೇಟ್ ಹಿಡಿದ ಕೈ ಹಿಂದೆ ಕೊಂಡು ಹೋಗದೆ ಹಾಗೆಯೇ ಮುಂದುವರಿಸಿದ್ದರೆ, ನನಗೆ ಅವರ ಮೇಲಿನ ವಿಶ್ವಾಸ ಜಾಸ್ತಿಯಾಗ್ತಿತ್ತು. ಕಾರಣ, ಅವರೆಂದೂ ಕಾಲೇಜಲ್ಲಿ ನೀವು ಸಿಗರೇಟ್ ಸೇದಬಾರದೆಂದು ಬುದ್ಧಿವಾದ ಹೇಳಿರಲಿಲ್ಲ. ತಾತ್ಕಾಲಿಕವಾಗಿ ನಾವು ನಮ್ಮನ್ನು ತೋರಿಸ್ಕೊಳ್ಳೋದಕ್ಕಿಂತ (ಡ್ರಾಮಾ ಮಾಡೋದಕ್ಕಿಂತ) ಇದ್ದ ಹಾಗೆ ತೋರಿಸ್ಕೊಳ್ಳೋದ್ರಲ್ಲಿರುವ ಸಮಾಧಾನ, ದೃಢತೆ ಜಾಸ್ತಿ ಹಾಗೂ ಹೆಚ್ಚಿನ ಆತ್ಮವಿಶ್ವಾಸ ತುಂಬುವಂಥದ್ದು ಅಲ್ವೇ? ಎಷ್ಟು ಹೊತ್ತು ಅಂತ ಸುಡ್ತಾ ಇರುವ ಸಿಗರೇಟ್‌ನ್ನು ಬೆನ್ನ ಹಿಂದೆ ಬಚ್ಚಿಡಬಹುದು, ಆ ಮೂಲಕ ಒಂದು ಇಮೇಜ್‌ನ್ನು ಕೃತಕವಾಗಿ ಸೃಷ್ಟಿಸಬಹುದು? ಕೊನೆಗೊಮ್ಮೆ ಅದು ಕೈಯ್ಯನ್ನು ಸುಟ್ಟೇ ಸುಡ್ತದೆ ಅಲ್ವ?
ಫಿಲ್ಟರ್ ಇಲ್ಲದೆ ಬದುಕೋದು ಕಷ್ಟ, ಆದರೆ...:


ಬದುಕಿನಲ್ಲಿ ಎಲ್ಲಾ ಕಡೆ, ಎಲ್ಲಾ ಸಂದರ್ಭ, ಎಲ್ಲರ ಜೊತೆ ಒಂದೇ ರೀತಿ ಇರೋದಕ್ಕೆ ಆಗೋದಿಲ್ಲ. ಮನೆ, ಕಚೇರಿ, ಕ್ಲಬು, ದೇವಸ್ಥಾನ, ಆಟ, ಸಮಾರಂಭ ಹೀಗೆ... ಒಂದೊಂದು ಕಡೆಯ ನಿರೀಕ್ಷೆಗಳು, ಪರಿಸ್ಥಿತಿಗಳನ್ನು ನಿಭಾಯಿಸುವಲ್ಲಿ, ನಾವು ಆವಾಹಿಸಿಕೊಂಡಿರುವ ‘ಪಾತ್ರ’ಗಳು ಒಂದೊಂದು ಥರ. ಎಲ್ಲಾ ಪಾತ್ರಗಳಿಗೂ ನ್ಯಾಯ ಸಲ್ಲಿಸಲೇಬೇಕು. ಆಯಾ ಜಾಗದ, ವಾತಾವರಣದ ಶಿಷ್ಟಾಚಾರಕ್ಕನುಗುಣವಾಗಿ ವರ್ತಿಸಲೇಬೇಕು. ಹಾಗಂತ ನಮ್ಮತನವನ್ನೇ ಬಿಟ್ಟು ಕೊಡಬೇಕಾದಷ್ಟು ಬಾಗುವ, ಬೀಗುವ, ಸುಳ್ಳು ಸುಳ್ಳೇ ತೋರಿಸ್ಕೊಳ್ಳುವ ಡ್ರಾಮಾ ಮಾಡಬೇಕಾದ ಅವಶ್ಯಕತೆಯಿದೆಯಾ? ದಿನದ ಕೊನೆಗೆ ನಾವು ನಾವೇ ಆಗಿ ಜಗತ್ತಿಗೆ ಕಾಣಬೇಕಾದ ಅನಿವಾರ್ಯತೆ ಇಲ್ಲವಾ?


ಎಲ್ಲವನ್ನೂ ಎಲ್ಲರ ಜೊತೆ ಹೇಳಿಕೊಳ್ಳೋದಿಕ್ಕೆ ಆಗೋದಿಲ್ಲ. ಪ್ರತಿಯೊಬ್ಬರ ಬದುಕಿನಲ್ಲಿರೋ ರಹಸ್ಯಗಳನ್ನೆಲ್ಲಾ ಎಲ್ಲರ ಜೊತೆ ಪಾರದರ್ಶಕವಾಗಿ ಶೇರ್ ಮಾಡಿಕೊಳ್ಳೋದಿಕ್ಕೆ ಅಸಾಧ್ಯ. ಸಾಮಾಜಿಕ ಅರೋಗ್ಯಕ್ಕೂ ಅದು ಪೂರಕವಲ್ಲ. ಆದರೆ, ನಾವು ಹೇಗಿದ್ದೀವಿ, ನಮ್ಮ ಸಾಮರ್ಥ್ಯ, ನಮ್ಮ ಅಸ್ತಿತ್ವ, ನಮ್ಮ ಚಿಂತನೆ, ನಮ್ಮ ನಿಲುವು, ನಮ್ಮ ವಯಸ್ಸು, ನಮ್ಮ ಸಾಧನೆಗಳ ಬಗ್ಗೆ ಸುಳ್ಳು ಸುಳ್ಳೇ ಹೇಳಿಕೊಂಡು, ಸಾಮಾಜಿಕ ಜಾಲ ತಾಣಗಳಲ್ಲಿ ನಮ್ಮ ಕುರಿತು ಇಲ್ಲದ್ದನ್ನೆಲ್ಲಾ ಬರೆದುಕೊಂಡು, ದಿಕ್ಕು ತಪ್ಪಿಸುವ ಫೋಟೊಗಳನ್ನು ಹಂಚ್ಕೊಂಡು ಸಾಧಿಸುವುದಾದರೂ ಏನನ್ನೂ? ಪುಕ್ಕಟೆ ಲೈಕುಗಳು, ಅದಕ್ಕೊಂದಿಷ್ಟು ಕಮೆಂಟುಗಳನ್ನು ಓದಿ ಪಡುವ ಹುಸಿ ನೆಮ್ಮದಿಗೂ, ನಿಜಕ್ಕೂ ನಾವಿರುವುದಕ್ಕೂ ವ್ಯತ್ಯಾಸ ಇದೆ ಅನ್ನುವ ಸತ್ಯ ನಮ್ಮನ್ನು ಚುಚ್ಚಲ್ವ?
ಇತಿಮಿತಿಗಳನ್ನೂ ಒಪ್ಕೊಳ್ಳಿ: ದೌರ್ಬಲ್ಯಗಳು, ಹಿನ್ನಡೆಗಳು, ಮಿತಿಗಳಲಿಲ್ಲದ ವ್ಯಕ್ತಿಗಳೇ ಇಲ್ಲ. ಪ್ರಧಾನಿಯಿಂದ ಸೇವಕನ ವರೆಗೆ ಎಲ್ಲರಿಗೂ ಮಿತಿಗಳಿವೆ. ಹಾಗಂತ ಪ್ರತಿಯೊಬ್ಬರಿಗೂ ತಮ್ಮದೇ ಆದ ಸಾಮರ್ಥ್ಯಗಳೂ ಇವೆ. ರೂಪ, ದುಡ್ಡು, ಅಧಿಕಾರಗಳು ಮಾತ್ರ ನಿಮ್ಮ ವ್ಯಕ್ತಿತ್ವ, ನಿಮಗೊಂದು ಸ್ಥಾನಮಾನವನ್ನು ದಕ್ಕಿಸುವುದಲ್ಲ. ಒಂದು ವೇಳೆ ದಕ್ಕಿಸಿದರೂ ಅದು ಶಾಶ್ವತವಲ್ಲ. ದೀರ್ಘಾವಧಿಗೊಂದು ಮರ್ಯಾದೆ, ದೀರ್ಘಾವಧಿಗೊಂದು ಬಾಂಧವ್ಯ, ದೃಢ ವಿಶ್ವಾಸ ಗಳಿಸುವ ಆಸೆಯಿದ್ದರೆ ನೀವು ಹೇಗೆ ಇದ್ದೀರೋ ಹಾಗೆಯ ತೋರಿಸ್ಕೊಳ್ತಾ ಬನ್ನಿ. ‘ಇಲ್ಲ’ಗಳ ಸೋಗಿನಲ್ಲಿ ಹುಸಿ ಇಮೇಜ್ ಸೃಷ್ಟಿಸುವ ಡ್ರಾಮಾಕ್ಕಿಂತ ಇದ್ದುದರಲ್ಲಿ ಇದ್ದ ಹಾಗೆ ಗಟ್ಟಿಯಾಗಿರೋದು ಲೇಸು, ವಾಸಿ.
-----------------
ಡ್ರಾಮಾ ಮಾಡ್ದೇ ಬದುಕೋದು ಹೇಗೆ?
೧) ನಿಮಗೆ ಗೊತ್ತಾ?  ನೀವು ಹೇಗೆಯೇ ಇದ್ದರೂ ನಿಮ್ಮನ್ನು ಲೈಕ್ ಮಾಡುವವರು ಈ ಜಗತ್ತಿನಲ್ಲಿ ಕೆಲವಾರದೂ ಇದ್ದೇ ಇರ್ತಾರೆ. ಅವರ ಸಂಖ್ಯೆ ಬೆರಳೆಣಿಕೆಯಷ್ಟಾದರೂ ಸರಿ, ಆ ಸಂಬಂಧದ ಎಳೆ ತುಂಬ ಗಟ್ಟಿಯಾಗಿರುತ್ತದೆ. ಅಷ್ಟು ಪ್ರಜ್ನೆ ನಮ್ಮೊಳಗಿದ್ದರೆ ಸಾಕು.
೨) ಸುಳ್ಳು ಹೇಳದ ವ್ಯಕ್ತಿತ್ವಗಳು ಯಾವತ್ತೂ ತಮ್ಮ ಬಗ್ಗೆ ಜಾಸ್ತಿ ಸಮರ್ಥನೆ, ಸ್ವಹೊಗಳಿಕೆ ಕೊಡಬೇಕಾದ ಸನ್ನಿವೇಶವೇ ಬರೋದಿಲ್ಲ. ಸ್ವಾಭಿಮಾನವನ್ನೂ ಕಳೆದುಕೊಳ್ಳಬೇಕಾಗಿರುವುದಿಲ್ಲ.
೩) ಬದುಕಿನ ಎಲ್ಲ ವಿಚಾರಗಳನ್ನು ಎಲ್ಲರೊಂದಿಗೆ ಹೇಳ್ಕೊಳ್ಳೋದಿಕ್ಕೆ ಆಗೋದಿಲ್ಲ, ಸತ್ಯ. ಆದರೆ, ನಮ್ಮ ಸಾಮರ್ಥ್ಯ, ನಮ್ಮ ಪ್ಲಸ್-ಮೈಸರ್ ನಮಗೇ ಗೊತ್ತಿರುತ್ತದೆ. ಅದನ್ನು ಹಾಗೆಯೇ ಒಪ್ಪಿಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನೀವಿದ್ದ ಹಾಗೆಯೇ ತೋರಿಸಿಕೊಳ್ಳಿ. ಅದರಿಂದ ಸಿಗುವ ಮನಃಶಾಂತಿಗೆ ಬೆಲೆ ಕಟ್ಟಲಾಗದು.
೪) ಯಾರದ್ದೋ ಕಾರಿನೆದುರು ನಿಂತು ಫೋಟೊ ತೆಗೆಸ್ಕೊಳ್ಳಿ, ಪರವಾಗಿಲ್ಲ. ಆದರೆ ಅದು ನಿಮ್ಮದೇ ಕಾರು ಅಂಥ ಹೇಳುವಷ್ಟು ಮಟ್ಟಿಗೆ ಅಧೋಗತಿಗೆ ಇಳಿಯುವುದು ಬೇಡ. ಮುಂದೊಮ್ಮೆ ಆ ಸುಳ್ಳನ್ನು ಸಮರ್ಥಿಸಲು ಹತ್ತಾರು ಸುಳ್ಳುಗಳನ್ನು ಹೇಳುವುದು ತುಂಬಾ ದಯನೀಯ ಪರಿಸ್ಥಿತಿಗೆ ನಮ್ಮನ್ನು ತಳ್ಳುತ್ತದೆ, ನೆನಪಿರಲಿ.
೫) ಯಾರನ್ನೋ ಹೊಗಳಿ, ಪೂಸಿ ಹೊಡೆದು ಮಾಡಿಸಿಕೊಳ್ಳುವ ಕೆಲಸಕ್ಕೆ ಅಷ್ಟೇ ಆಯುಷ್ಯವಿರುವುದು. ಜೊತೆಗೆ ನಮ್ಮತನವನ್ನು ಕಳೆದುಕೊಳ್ಳುವುದು ಬೇರೆ, ಗೊತ್ತಿರಲಿ.
೬) ಇನ್ನೊಬ್ಬರಿಗೆ ನಮ್ಮ ಬಗ್ಗೆ ಸುಳ್ಳು ಮಾಹಿತಿ ಕೊಟ್ಟು, ಸುಳ್ಳು ಹೇಳಿ ಗೊಂದಲ ಮೂಡಿಸಿ ಪಡುವ ವಿಕೃತ ಸಂತೋಷ ಇದೆಯಲ್ಲ, ಅದೊಂದು ಅಸಹಜ ಮನಸ್ಥಿತಿಯನ್ನು ಹುಟ್ಟು ಹಾಕುವುದು ಮಾತ್ರವಲ್ಲ, ಇನ್ನೊಬ್ಬರ ವಿಶ್ವಾಸ ಕಳೆದುಕೊಳ್ಳುವುದಕ್ಕೆ ರಹದಾರಿಯೂ ಹೌದು.
೭) ನಾಟಕೀಯತೆಯಿಲ್ಲದೆ ಬದುಕುವವರು ಜಾಸ್ತಿ ಸುಳ್ಳು ಹೇಳಬೇಕಾದ ಸಂದರ್ಭ ಇರೋದಿಲ್ಲ. ಯಾಕಂದರೆ ಜಗತ್ತಿಗೆ ಗೊತ್ತಿರುತ್ತದೆ ನೀವಿರೋದೇ ಹೀಗೆಂದು. ಜಗತ್ತೇ ನಿಮ್ಮ ಪಾಲಿಗೆ ಸಾಕ್ಷಿಯಾಗಿರುತ್ತದೆ!
೮) ಸುಳ್ಳು, ಕಪಟ, ಚಿಲ್ಲರೆ ರಾಜಕೀಯಗಳಿಂದ ಜನಪ್ರಿಯತೆ ಪಡೆಯಬಹುದು. ಆದರೆ ಅಂತಿಮವಾಗಿ ಅವು ನೀರ ಮೇಲಿನ ಗುಳ್ಳೆಗಳು. ಸತ್ಯ, ವಾಸ್ತವಿಕ, ನೈಜತೆಯೇ ಅಂತಿಮವಾಗಿ ಗೆಲ್ಲುವುದು. ಇದಕ್ಕೆ ಇತಿಹಾಸ, ಪುರಾಣಗಳಲ್ಲಿ ನಾವು ಓದಿದ್ದು, ಕೇಳಿದ್ದೇ ಸಾಕ್ಷಿ.
೯) ಕತ್ತಲೆ ಕಳೆದ ಮೇಲೆ ಬೆಳಕು ಮೂಡಲೇಬೇಕು. ಸುಳ್ಳಿನ ಮುಖವಾಡ ಒಂದು ದಿನ ಕಳಚಲೇ ಬೇಕು, ಅರಿವಿರಲಿ.
೧೦) ಇಮೇಜ್ ಅನ್ನುವುದು ಸಾಧನೆಯಿಂದ ಬರಬೇಕು ಹೊರತು ಸುಳ್ಳು ಸುಳ್ಳೇ ಸೃಷ್ಟಿಸಿಕೊಳ್ಳುವ ವಸ್ತುವಲ್ಲ. ನಿಜ ತಾನೆ!
---------
-ಕೃಷ್ಣಮೋಹನ ತಲೆಂಗಳ.