Tuesday, December 26, 2017

2017ರಲ್ಲಿ ಕನ್ನಡಪ್ರಭದ ಪುಟಗಳಲ್ಲಿ....
ಬೆಟ್ಟದ ಹೂವು


ಬೋಳುಗುಡ್ಡದ ಮೇಲೆ
ಭಾರಿ ಬಂಡೆಯ ನಡುವೆ
ಪುಟ್ಟದೊಂದು ಬೋನ್ಸಾಯ್ ಗಿಡ
ಗಾಳಿಗೆ ತಲೆದೂಗಿ ಸುಗಂಧ ಹರಡಿ
ಬರಡು ಭೂಮಿಯ ನಡುವಿನ ಸಣ್ಣ ಕೊಳದ ಹಾಗೆ

ಬೆಟ್ಟ ಹತ್ತಲಾಗದು, ಕೈಗೆಟುಕಲಾರದು,
ಹೂವ ನೇವರಿಸಿ ಕೀಳಲಾಗದು,
ಅಷ್ಟು ದೂರದಿಂದಲೇ ಮನ ದುಂಬಿ...
ಸಿಕ್ಕಿಯೂ ಸಿಕ್ಕದ ಹಾಗೆ,
ದಕ್ಕಲಾಗದ ಅಸ್ಪಷ್ಟ ಕನಸಿನ ಹಾಗೆ...

ಉರಿಬಿಸಿಲಿಗೆ ಸೊಬಗಿನ ತಂಪು
ಬಾನು ಭುವಿಯ ತಾಪಕ್ಕೆ
ನಸು ಪರಿಮಳದ ಕಂಪು
ಮಾತಿಗೂ ಮೀರಿದ ಮೌನದ ಹಾಡು
ಆಡದೆಯೇ ತಲಪುವ ಭಾವ ನೋಡು...

ಕಿತ್ತರೆ ಸತ್ತು ಹೋಗುವ ಭೀತಿ
ಅಲುಗಿದರೆ ದಳ ಉದುರುವ ರೀತಿ
ದಕ್ಕಿಸಿಕೊಳ್ಳದೆ, ಇದ್ದಲ್ಲಿ ಇರುವ ಹಾಗೆ
ಕಂಡಲ್ಲಿಂದಲೇ ಮಾತನಾಡಿಸಿದರೆ ಹೇಗೆ?
ಅಸ್ತಿತ್ವವೇ ಅಚ್ಚರಿ, ಮೌನದಲ್ಲೇ ಕಳಕಳಿ...

ನೀರೆರದವರಿಲ್ಲ, ಪರಿಚಯ ಮಾಡಿಸಿದವರೂ ಇಲ್ಲ
ಎಷ್ಟು ದಿನದ ಅಸ್ತಿತ್ವವೋ ಬರೆದಿಲ್ಲ,
ಪುಟ್ಟದೊಂದು ಅಚ್ಚರಿಗೆ, ಹೆಸರಿಡದ ಬಾಂಧವ್ಯಕ್ಕೆ
ಬೆಲೆಯಿಲ್ಲದ ಸೊಬಗಿಗೆ, ಸ್ನೇಹಕ್ಕೆ
ಗುರುತರ ಗುರುತು ಬೆಟ್ಟದ ಹೂವು...


-KM

Thursday, December 21, 2017

‘ಕೆಂಪು ಕಳವೆ’ಯನ್ನು ಶ್ರವ್ಯ ಮಾಧ್ಯಮದಲ್ಲಿ ‘ಓದಿದ್ದು’....

ಶುರುವಾದ ಪ್ರತಿಯೊಂದೂ ಕೊನೆಗೊಳ್ಳಲೇ ಬೇಕು. ಹೌದು. ಕಳೆದ ಏಪ್ರಿಲ್‌ನಲ್ಲಿ ಆರಂಭವಾದ ಬಾನುಲಿ ಧಾರಾವಾಹಿ ‘ಕೆಂಪು ಕಳವೆ’ ೩೫ನೇ ಕಂತಿನೊಂದಿಗೆ ಡಿ.೨೪ರಂದು ಕೊನೆಗೊಳ್ಳುತ್ತಿದೆ. ಸುದೀರ್ಘ ಕಥೆ, ಸುದೀರ್ಘ ಸರಣಿ ಕೂಡಾ ಹೌದು. ಇಡೀ ಧಾರಾವಾಹಿಯ ಅಷ್ಟೂ ಭಾಗ ಕಳೆದ ಏಪ್ರಿಲ್‌ನಲ್ಲಿ ಮೂರು ದಿನಗಳಲ್ಲಿ ಧ್ವನಿಮುದ್ರಣ ಕಂಡಿತ್ತು. ಸರೋಜಿನಿ ಶೆಟ್ಟಿ, ಚಿನ್ನಾ ಕಾಸರಗೋಡು ಅವರಂತಹ ಹಿರಿಯ ಪಳಗಿದ ನಟರೊಂದಿಗೆ, ರಂಗಕರ್ಮಿಗಳು, ಇತ್ತೀಚೆಗೆ ನಾಟಕ ಧ್ವನಿಪರೀಕ್ಷೆಯಲ್ಲಿ ಆಯ್ಕೆಯಾದ ಕಲಾವಿದರೂ ಸೇರಿದ ತಂಡವಿದು. ಆಯಾ ಪಾತ್ರಗಳಿಗೆ ಅಗತ್ಯ ಸ್ಕ್ರಿಪ್ಟ್‌ಗಳನ್ನು ಅಚ್ಚುಕಟ್ಟಾಗಿ ರೂಪಿಸಿದ್ದ ಡಾ.ಸ್ವಾಮಿ ಸರ್ ನೇತೃತ್ವದ ತಂಡ ಪಾತ್ರಗಳಿಗನುಗುಣವಾಗಿ ಧ್ವನಿಮುದ್ರಣ ನಡೆಸುತ್ತಾ ಬಂದಿದ್ದು, ಪೂರ್ತಿ ಕತೆ ಆ ಹಂತದಲ್ಲಿ ಬಹುಷಃ ಯಾವ ಪಾತ್ರಧಾರಿಗಳಿಗೂ ಅರ್ಥವಾಗಿರಲಾರದು. ಹಿನ್ನೆಲೆ ಸಂಗೀತ ಸಹಿತ ರೇಡಿಯೋದಲ್ಲಿ ಪ್ರಸಾರವಾಗುತ್ತಾ ಬಂದಾಗಲೇ ಕಥಾ ಹಂದರ ಅನಾವರಣವಾಗಿದ್ದು...
ಕೆಂಪುಕಳವೆ ಕುರಿತು ತೋಚಿದ್ದು, ಗೀಚಿದ್ದು...: 
---------------


ಪ್ರತಿ ಬದುಕೂ ಒಂದು ಕಥೆಯೇ. ಪ್ರತಿಯೊಬ್ಬರ ಜೀವನಯಾತ್ರೆಯೂ ಧಾರಾವಾಹಿಯೇ. ಆದರೆ ಪ್ರತಿ ಜೀವನಗಾಥೆ ಬರಹವಾಗುವುದಿಲ್ಲ. ದಾಖಲಾಗಬೇಕಾದ ಅನುಭವಗಳೆಲ್ಲ ಕಥೆಗಳೋ, ಕಾದಂಬರಿಗಳೋ ಆಗುವುದಿಲ್ಲ. ಸಿನಿಮೀಯ ಜೀವನದ ತಿರುವುಗಳು ಎಂದಿಗೂ ಲೋಕಮುಖಕ್ಕೆ ಪ್ರಕಟವಾಗುವುದಿಲ್ಲ. ಜೀವನಾದರ್ಶಗಳು ಎಷ್ಟೋ ಬಾರಿ ತೆರೆ ಮರೆಯಲ್ಲಿ ಇತಿಹಾಸಗಳಾಗಿರುತ್ತವೆ. ಹಿರಿಯ ಲೇಖಕ ಕೆ.ಟಿ.ಗಟ್ಟಿ ಅವರು ತಾವು ಬದುಕಿನಲ್ಲಿ ಕಂಡದ್ದನ್ನೇ (ಅವರೇ ಹೇಳಿಕೊಂಡ ಹಾಗೆ) ದಾಖಲಿಸಿ ರಚಿಸಿದ ೪೫೩ ಪುಟಗಳ ಕಾದಂಬರಿ ಕೆಂಪು ಕಳವೆ ಮಂಗಳೂರು ಆಕಾಶವಾಣಿಯಲ್ಲಿ ಕಳೆದ ೩೪ ವಾರಗಳಿಂದ ಬಾನುಲಿ ಧಾರಾವಾಹಿ ರೂಪದಲ್ಲಿ ಪ್ರಸರಾಗುತ್ತಿತ್ತು. ಈ ಸರಣಿ ಡಿ.೨೪ರಂದು ೩೫ನೇ ಕಂತಿನೊಂದಿಗೆ ಕೊನೆಗೊಳ್ಳುತ್ತಿದೆ. ಸಾಮಾಜಿಕ ಗುರುತಿಸುವಿಕೆಯನ್ನೇ ಹೊಂದಿರದ ಮಾನು ಮತ್ತವಳ ಕುಟುಂಬದ ಒಂದು ತಲೆಮಾರಿನ ಕತೆಯ ಪ್ರಸ್ತುತಿ ಕೇಳುಗರನ್ನು ಪರಿಣಾಮಕಾರಿಯಾಗಿ ತಲುಪಿದೆ ಎನ್ನುವುದೇ ಈ ಕಾಲದ ವಿಶೇಷ ಹಾಗೂ ಸ್ವರ ಮಾಧ್ಯಮದ ಗೆಲವು ಕೂಡಾ...

ಇತಿಹಾಸಕ್ಕೂ ವರ್ತಮಾನಕ್ಕೂ ಸೇತು...: ಕಾಸರ ಎಂಬ ಪಟ್ಟಣದ ಸಮೀಪದ ಚೂರಿ ಎಂಬ ಗ್ರಾಮದ ಮಾನು ಎಂಬ ಮಹಿಳೆಯ ಹೆಸರೇ ಅಪರೂಪವಾಗಿರುವ ಮಾರ ಎಂಬ ಜಾತಿಗೆ ಸೇರಿದ ಕುಟುಂಬದ ಕಥೆ. ಬಿರುಮ ಎಂಬ ಮಣ್ಣಿನ ಗೋಡೆ ಕಟ್ಟುವ ಕಾಡುವಾಸಿ ಮೂಲದ ಜನಾಂಗದ ಧೀರನ ಪತ್ನಿ ಮಾನು. ಇಡೀ ಕಥೆಯಲ್ಲಿ ಜೀವನ್ಮುಖಿ ಉತ್ಸಾಹವಾಗಿರುವ ಮಹಿಳೆ. ಆಕೆಗೆ ಮೂವರು ಗಂಡು ಮಕ್ಕಳು ಮಾದ, ಜೂಜ, ಬೂದ. ಪತಿ ಅಕಾಲದಲ್ಲಿ ಮೃತಪಟ್ಟ ಬಳಿಕ. ಮಕ್ಕಳನ್ನು ಆಕೆಯ ಸಾಕುತ್ತಾಳೆ. ಕಥಾ ನಾಯಕ ಮಾದನಿಂದ ತೊಡಗಿ ಇತರ ಮೂವರು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಾರೆ. ತೀರಾ ಹಿಂದುಳಿದ ಜನಾಂಗಕ್ಕೆ ಸೇರಿದ ಅವರೂ ಬದುಕುತ್ತಾ, ಎಡರು ತೊಡರುಗಳನ್ನು ಎದುರಿಸುತ್ತಾ ಬೆಳೆದು ಶೈಕ್ಷಣಿಕವಾಗಿಯೂ ಗಟ್ಟಿಯಾಗಿ ತುಳಿತಗಳಿಗೆಲ್ಲ ಉತ್ತರ ನೀಡುವಷ್ಟರ ಮಟ್ಟಿಗೆ ಮುಂದೆ ಬಂದಿರುತ್ತಾರೆ.... 
ಚೂರಿಯೆಂಬ ಗ್ರಾಮದಲ್ಲಿ ಬೇರೆ ಬೇರೆ ಬೆಳವಣಿಗೆಗಳಿಗೆ ಸಾಕ್ಷಿಯಾಗಿ ಬೆಳೆದು ಬಂದ ಮಾನು ಮತ್ತವಳ ಕುಟುಂಬದ ಒಟ್ಟೂ ಬದುಕೇ ಕೆಂಪು ಕಳವೆ. ಅದು ಮಾನುವಿನ ದೊಡ್ಡ ಮಗ ಮಾದನ ಮೂಲಕ ನಿರೂಪಣೆಯಾಗುತ್ತಾ ಹೋಗುತ್ತದೆ.

ಕೆಂಪು ಕಳವೆ ಎಂಬ ಸಂಕೇತ: 
ಊರಿನ ಧನಿಕ ಶಿವರಾಮಯ್ಯ ಒಂದು ಕಾಲದಲ್ಲಿ ಮಾದನ ಮನೆಯಿಂದ ಕೊಂಡು ಹೋಗಿದ್ದ ಒಂದು ಸೇರು ಕೆಂಪು ಕಳವೆ (ಸುಗಂಧ ಭರಿತ ಬತ್ತದ ತಳಿ) ಯನ್ನು ವಾಪಸ್ ಮಾಡುವುದೇ ಇಲ್ಲ. ಎಳವೆಯಲ್ಲಿ ಕೇಳಲು ಹೋದ ಮಾದನನ್ನು ಜಾತಿ ಹೆಸರಿನಲ್ಲಿ ಅವಮಾನಿಸಿ ಕಳುಹಿಸುತ್ತಾನೆ. ಎಷ್ಟೋ ವರ್ಷದ ಬಳಿಕ ಓದು ಬರಹ ಕಲಿತ ಬಳಿಕವೂ ಮಾದನಿಗೆ ಅವರ ಮನೆಯಿಂದ ತಂದ ಬತ್ತವನ್ನು ಕೊಡಲು ಶಿವರಾಮಯ್ಯ ಒಪ್ಪುವುದೇ ಇಲ್ಲ. ಕೊನೆಗೆ ಶಿವರಾಮಯ್ಯನ ಮಗಳು, ತನ್ನ ಸಪಪಾಠಿ ಗೌರಿಯನ್ನೇ ಮದುವೆಯಾಗುವ ಮಾದ ಆ ಕೆಂಪು ಕಳವೆ ಬತ್ತವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ ಮಾತ್ರವಲ್ಲ. ಮಾನುವಿನ ಮನೆಯವರೂ ಬತ್ತ ಬೆಳೆದು ತಮ್ಮ ಸ್ವಾಭಿಮಾನ ಕಾಪಾಡಿಕೊಳ್ಳುತ್ತಾರೆ.

ಈ ಕತೆಯುದ್ದಕ್ಕೂ ಗ್ರಾಮ್ಯ ಪರಿಸರ, ಅಲ್ಲಿನ ಕ್ಷುಲ್ಲಕ ರಾಜಕೀಯ, ಮನಸ್ಸನ್ನು ಹಸಿರುಗೊಳಿಸುವ ಹಳ್ಳಿಯ ಹಸಿರಿನ ವಿವರಣೆ, ಕೃಷಿ ಪ್ರೀತಿ, ಚೂರಿ ಗ್ರಾಮವನ್ನು ಕಾಡಿದ ಕಳ್ಳಬಟ್ಟಿ ಸಾರಾಯಿಯ ಕಾಟ, ಪೇತ್ರು ಮತ್ತು ಅವನ ಮನೆಯವರು ಊರಿನವರಿಗೆ ಕೊಡುವ ಕಾಟ, ಲೋಭಿ ಕೊಗ್ಗು ಪೈಯಂತಹ ಪ್ರಾತಿನಿಧಿಕ ವರ್ತಕರು, ಜಾತಿ ಬಗ್ಗೆ ದ್ವಂದ್ವಗಳೊಂದಿಗೆ ಮಾದನನ್ನು ಕಾಡುವ ಕವಿ ಕುಮಾರ, ಮಾದನ ಬದುಕನ್ನೇ ಬದಲಿಸಿದ ಗೆಳೆಯ ಹರಿ, ಆತನ ತಂದೆ ಉಮೇಶ ರಾಯರು, ಮೇಷ್ಟ್ರು ಚಂದ್ರಕಾಂತ ಶರ್ಮ, ಓದಲು ಕಲಿಸಿದ ಗುರುಗಳಾದ ಶ್ರೀಧರ ಶರ್ಮರು ಹೀಗೆ ಬದುಕನ್ನು ಕುಗ್ಗಿಸುವ ಮತ್ತು ಜೀವನ ಪ್ರೀತಿ ಕಲಿಸಿದ ಎರಡೂ ಮಾದರಿಯ ಪಾತ್ರಗಳು ಕಾದಂಬರಿಯುದ್ದಕ್ಕೂ ಕಾಡುತ್ತವೆ

ಸ್ವಾತಂತ್ರ್ಯಪೂರ್ವದಲ್ಲಿ ಆರಂಭವಾಗುವ ಕತೆ ಅದೇ ಚಿತ್ರಣವನ್ನು ಹೊಂದಿದೆ. ಬೆಳೆದ ಬತ್ತಕ್ಕೆ ಲೆವಿ (ತೆರಿಗೆ) ಹಾಕುವುದು, ಮನೆ ಮನೆಗೆ ಬೆಳೆ ಪರಿಶೀಲಿಸಲು ಬರುವ ಕಂದಾಯ ಇಲಾಖೆಯವರು, ಪೊಲೀಸರು, ಬತ್ತವನ್ನು ರಹಸ್ಯ ಕೋಣೆಯಲ್ಲಿ ಬಚ್ಚಿಡುವ ಮಾನ ಮತ್ತವರ ಮನೆಯವರು...ಒಂದು ಹಂತದ ಶಿಕ್ಷಣದ ಬಳಿಕ ಅಪ್ಪಟ ಕೃಷಿಕನಾಗುವ ಜೂಜ. ಕೃಷಿಯಿಂದಲೇ ಬದುಕು ಆರಂಭಿಸಿ ಬಳಿಕ ವರ್ತಕನೂ ಆಗಿ ಸ್ವಾವಲಂಬಿಯಾದ ಉದಾಹರಣೆ ಕತೆಯುದ್ದಕ್ಕೂ ಆವರಿಸಿಕೊಳ್ಳುತ್ತದೆ...

ಸುಮ, ಐಡಾ, ಮೂಸ ಮತ್ತವನ ಮನೆಯವರು... ಹೀಗೆ ಎಲ್ಲ ಧರ್ಮಕ್ಕೆ ಸೇರಿದ ಎಲ್ಲ ವಿಚಾರಗಳಿಗೆ ಹೊಂದಿಕೊಂಡ ವ್ಯಕ್ತಿತ್ವಗಳು ಕಾಣಸಿಗುತ್ತವೆ ಚೂರಿ ಗ್ರಾಮದಲ್ಲಿ.
ಕಾದಂಬರಿಯಿಡೀ ನಾಯಕ ಮಾದನ ಅಂತರಾತ್ಮವೇ ‘ದೇವರು’ ಎಂಬ ಹೆಸರಿನಲ್ಲಿ ನೀಡುವ ಮಾರ್ಗದರ್ಶನದ ಮಾತುಗಳು ಒಟ್ಟೂ ಕತೆಯ ಆಶಯವನ್ನು ಆಗಾಗ ಸಮ್ಮರಿ ರೂಪದಲ್ಲಿ ನೀಡುತ್ತಾ ಹೋಗುತ್ತದೆ. ಈ ಪಾತ್ರವು ಹಲವು ಜಿಜ್ನಾಸೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತದೆ.

ಕಾಡುವ ತತ್ವಜ್ಞಾನ: ಇದಕ್ಕೆ ಹೊರತಾಗಿ ಇಡೀ ಕಾದಂಬರಿಯನ್ನು ಆವರಿಸಿರುವ ಫಿಲಾಸಫಿ ಬದುಕಿನ ಎಷ್ಟೋ ಸತ್ಯಗಳನ್ನು ಪರಿಣಾಮಕಾರಿಯಾಗಿ ಬಿಚ್ಚಿಡುತ್ತವೆ. ಮಾದನಾಗಲಿ, ಅವನಮ್ಮ ಮಾನುವಾಗಲೀ, ದೇವರು, ಚಂದ್ರಕಾಂತ ಶರ್ಮರು... ಕತೆಯ ನಡುನಡುವೆ ಉದ್ಧರಿಸುವ ಜೀವನಾನುಭವಗಳ ಪಾಠ ಓದುಗ ಅಥವಾ ಕೇಳುಗನ ಬದುಕಿನಲ್ಲಿ ಬಂದಿರುವಂಥಹ ಸತ್ಯಗಳೇ ಆಗಿವೆ. ಈ ಕಾರಣಕ್ಕೆ ಕತೆಯನ್ನು ಪ್ರತಿಯೊಬ್ಬರೂ ಎಲ್ಲೋ ಒಂದು ಕಡೆ ತಮ್ಮ ಬದುಕಿನೊಂದಿಗೆ ಸಮೀಕರಿಸಿ ನೋಡಬಹುದಾದ ಪ್ರಮೇಯವಿದೆ.

ಕತೆಯ ಪ್ರತಿ ಪಾತ್ರಕ್ಕೂ ಒಂದು ಆರಂಭದ ಜೊತೆಗೆ ತಾರ್ಕಿಕ ಅಂತ್ಯ ಅಥವಾ ನಡೆಯನ್ನು ಲೇಖಕರು ಯಶಸ್ವಿಯಾಗಿ ಒದಗಿಸಿದ್ದಾರೆ. ಯಾವುದೇ ಪ್ರಶ್ನೆಗಳು, ಗೊಂದಲಗಳನ್ನು ಬಾಕಿ ಇರಿಸದೆ ಕತೆಯನ್ನು ಮುಗಿಸುತ್ತಾರೆ. ಹಳ್ಳಿ, ಅಲ್ಲಿನ ಹಸಿರು, ನೀರು, ತಾಂತ್ರಿಕ ಬೆಳವಣಿಗೆ ಕಾಣದ ಹಿಂದಿನ ಕಾಲದ ಬದುಕು, ರಿವಾಜುಗಳು, ಜಾತಿಯ ಕಾಟ, ಅಸ್ಪೃಶ್ಯತೆ, ಸಾಮಾಜಿಕ ಕ್ರಾಂತಿ, ಸ್ವಾಭಿಮಾನ, ನವಿರು ಪ್ರೀತಿ, ವಾಂಛೆ ಎಲ್ಲವನ್ನೂ ಹದವಾಗಿ ಬೆರೆಸಿದ್ದಾರೆ. ಚೂರಿ ಎಂಬ ಗ್ರಾಮವಂತೂ ಕಣ್ಣಿಗೆ ಕಟ್ಟುವ ಹಾಗಿದೆ.

ಓದುವ ಕತೆ ಕೇಳುವ ಧಾರಾವಾಹಿಯಾಗಿದ್ದು: ಇನ್ನು ಈ ಕಾದಂಬರಿಯನ್ನು ರೇಡಿಯೋ ಧಾರಾವಾಹಿಯಾಗಿ ಪರಿವರ್ತಿಸಿದ ಮಂಗಳೂರು ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕ ಡಾ.ಬಿ.ಎಂ.ಶರಭೇಂದ್ರ ಸ್ವಾಮಿಯರ ಪ್ರಯತ್ನದ ಬಗ್ಗೆ ಉಲ್ಲೇಖಿಸಲೇ ಬೇಕು. ಓದಲೆಂದೇ ಕೆ.ಟಿ.ಗಟ್ಟಿಯವರು ರಚಿಸಿದ ಕೃತಿಯನ್ನು ಬಾನುಲಿಯೆಂಬೋ ಶ್ರವ್ಯ ಮಾಧ್ಯಮಕ್ಕೆ ಭಟ್ಟಿ ಇಳಿಸುವುದು ಸುಲಭದ ಮಾತಲ್ಲ. ಈ ಸೂಕ್ಷ್ಮವಾದ ಕತೆ ಕೇಳುಗರನ್ನು ಎಷ್ಟರ ಮಟ್ಟಿಗೆ ತಲುಪಬಹುದು ಎಂದು ಕಲ್ಪಿಸಿ ಅದರ ಸ್ಕ್ರಿಪ್ಟ್ ತಯಾರಿಯೂ ಸುಲಭದ ಮಾತಲ್ಲ. ಡಾ.ಸ್ವಾಮಿ ಮತ್ತು ಬಾನುಲಿಯ ಅವರ ನಿರ್ಮಾಣ ನೆರವಿನ ತಂಡ ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದಲ್ಲಿಗೇ ಧಾರಾವಾಹಿಗೆ ಅರ್ಧ ಪಾಲು ನ್ಯಾಯ ದೊರಕಿಸಿದೆ. ಇನ್ನು ಮಾನುವಿನ ಪಾತ್ರ ನಿರ್ವಹಿಸಿದ ಹಿರಿಯ ಕಲಾವಿದ ಸರೋಜಿನಿ ಶೆಟ್ಟಿ, ಗಂಭೀರ ಸ್ವರದ ದೇವರಾದ ಚಂದ್ರಹಾಸ ಉಳ್ಳಾಲ, ಜೂಜ ಪಾತ್ರಧಾರಿ ಕ್ರಿಸ್ಟೋಫರ್ ಡಿಸೋಜ ಸೇರಿದಂತೆ ಆಯಾ ಪಾತ್ರಗಳಿಗೆ ಜೀವ ತುಂಬಿದ ಕಲಾವಿದರು, ಕತೆಯ ನಿರ್ಮಾಣದಲ್ಲಿ ಬಳಸಿದ ಹಿನ್ನೆಲೆ ಸಂಗೀತ. ಇಡೀ ಕತೆಯನ್ನು ನಿರೂಪಕ ಹಾಗೂ ನಿರೂಪಕಿ ಮೂಲಕ ವಿವರಿಸಿದ ತಂತ್ರ ನಿರೂಪಕರಾಗಿ ಡಾ.ಶರಭೇಂದ್ರ ಸ್ವಾಮಿ ಹಾಗೂ ನಿರೂಪಕಿಯಾಗಿ ಎಸ್. ಉಷಾಲತಾ, ಮಂಜುಳಾ ಸುಬ್ರಹ್ಮಣ್ಯ, ಗಾಯತ್ರಿ ನಾನಿಲ್ ಹಾಗೂ ರೂಪಶ್ರೀ ನಾಗರಾಜ್ ಅವರ ನಿರೂಪಣೆಯೂ ಧಾರಾವಾಹಿಯನ್ನು ‘ಜನ ರೇಡಿಯೋ ಕೇಳುವುದಿಲ್ಲ’ ಎಂಬ ವಿಶಿಷ್ಟ ಆರೋಪವಿರುವ ಈ ಕಾಲದಲ್ಲೂ ಆಸಕ್ತ ಕೇಳುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಮಂಗಳೂರು ಬಾನುಲಿಯಲ್ಲಿ ‘ಕತೆ ಇನ್ನೂ ಇದೆ’, ಅನುಭವದಡುಗೆಯ ಮಾಡಿ, ತಾಳಮದ್ದಳೆ ಎಂಬಿತ್ಯಾದಿ ಬಾನುಲಿಗೆಂದೇ ಸಿದ್ಧಪಡಿಸಿದ ಕೆ.ಟಿ.ಗಟ್ಟಿಯವರ ಧಾರಾವಾಹಿಗಳು ಪ್ರಸಾರವಾದ ಬಳಿಕ ಮೊದಲ ಬಾಲಿಗೆ ನಿರ್ದೇಶಕ ಡಾ.ಶರಭೇಂದ್ರ ಸ್ವಾಮಿಯವರು ಕೆ.ಟಿ.ಗಟ್ಟಿಯವರ ಜೀವನ ಕಥನ ಕೆಂಪು ಕಳವೆ ಎಂಬ ಕಾದಂಬರಿಯನ್ನೇ ಬಾನುಲಿಯ ನಿರೂಪಾವಣಾ ಧಾರಾವಾಹಿಯಾಗಿ ಪರಿವರ್ತಿಸಿ ಕತೆಗೆ ಕುಂದುಂಟಾಗದ ಹಾಗೆ ಕೇಳುಗರಿಗೆ ತಲುಪಿಸಿದ್ದಾರೆ. ಸುದೀರ್ಘವಾದ ೩೪ ಕಂತುಗಳಲ್ಲಿ ಪ್ರತಿ ವಾರ ಅರ್ಧರ್ಧ ಗಂಟೆ ಪ್ರಸಾರವಾಗುತ್ತಾ ಬಂದು ಡಿ.೨೪ರಂದು ೩೫ನೇ ಹಾಗೂ ಕೊನೆಯ ಕಂತಿನೊಂದಿಗೆ ಮುಕ್ತಾಯ ಕಾಣಲಿದೆ.

ಓದುವಿಕೆಗೆ ಸೂಕ್ತವಾದ ಕೃತಿಯನ್ನು ಕೇಳುವಿಕೆಗೆ ಅನುಕೂಲವಾಗುವಂತೆ ಸಿದ್ಧಪಡಿಸಿ, ಬಳಿಕ ಪ್ರಸ್ತುತಪಡಿಸಿ, ಸಂಕಲನ ಮಾಡಿ ಅದಕ್ಕೆ ಜೀವ ತುಂಬಿ, ಮತ್ತೆ ಪ್ರಸಾರ ಮಾಡಿದ ಮಂಗಳೂರು ಆಕಾಶವಾಣಿ ಗೆದ್ದಿದೆ, ಜೊತೆಗೆ ಲೇಖಕ ಕೆ.ಟಿ.ಗಟ್ಟಿ, ನಿರ್ದೇಶಕ ಡಾ.ಬಿ.ಎಂ.ಶರಭೇಂದ್ರ ಸ್ವಾಮಿಯವರು ಅಭಿನಂದನಾರ್ಹರು. ನಿರ್ಮಾಣದಲ್ಲಿ ನೆರವಾದ ಆಕಾಶವಾಣಿಯ ದೀಪಾ ಪಾವಂಜೆ, ಗೀತಾ ಉದಯ್ ಹಾಗೂ ವಿದ್ಯಾ ಎಸ್. ಕೂಡಾ. ಮತ್ತಷ್ಟು ಕೃತಿಗಳು ಆಲಿಸುವಿಕೆಗೆ ಕೇಳುಗರಿಗೆ ಒದಗಿ ಬರಲಿ ಎಂಬ ಆಶಯದೊಂದಿಗೆ...
-ಕೆಎಂ

Thursday, December 14, 2017

ಬಾಗಿಲಿನಾಚೆಯ ಲೋಕವೇ ಬೇರೆ...ಬೆಳ್ಳಿ ಪರದೆಯ ಮೇಲೆ ದೊಡ್ಡ ಆದರ್ಶದ ಚಿತ್ರ
ತ್ಯಾಗ, ಮೊಗೆದಷ್ಟು ಮುಗಿಯದ ಪ್ರೀತಿ,
ಕಣ್ಣೀರ ಧಾರೆ, ಹೊಡೆದಾಟ
ಕೊನೆಗೆ ಹಿಡಿಯಷ್ಟು ಸಂದೇಶ
ಕತೆ ಮುಗಿದು ಕಣ್ಮುಂಬಿ ಹೊರ ಬಂದರೆ...
ಅದೇ ಕರ್ಕಶ ಹಾರ್ನು, ಪುರುಸೊತ್ತಿಲ್ಲ ಓಡುವ ವಾಹನ ಸಾಲು
ಹೊಗೆ, ಬಿಸಿಲು, ನಿರ್ಲಿಪ್ತ ಅವಸರ...
ಕತ್ತಲೆಯ ಕತೆಯಿಂದ ಹೊರ ಬಂದರೆ ಬೇರೆಯೇ ಜಗತ್ತು
ರಸ್ತೆಗಿಳಿದ ಮೇಲೆ ಥಿಯೇಟರಲ್ಲಿ ಕಂಡ ಆದರ್ಶಕ್ಕಿಷ್ಟು ಮಣ್ಣು ಬಿತ್ತು!

ಆಸ್ಪತ್ರೆಯೊಳಗೆ ಇಂಜಕ್ಷನ್ ಚುಚ್ಚುವ
ದಾದಿಯ ಕಣ್ಣಲ್ಲಿ ನೋವು ಹುಡುಕಿದ ಹಾಗೆ...
ವ್ಯತಿರಿಕ್ತ ಭಾವಗಳಲ್ಲಿ ಸಿಗದ ಸಂತಸ ಅರಸಿದರೆ ಹೇಗೆ?
ಐಸಿಯು ಹೊರಗೆ ಮಡುಗಟ್ಟಿದ ನೋವಿಗೂ,
ವಾರ್ಡುಗಳಲ್ಲಿ ಸಿಡಿಯುವ ಜೋಕಿಗೂ ಮ್ಯಾಚೇ ಆಗ್ತಿಲ್ಲ
ಆಸ್ಪತ್ರೆಗೂ, ಥಿಯೇಟಿರಿಗೂ ಹೊರಗಿನ ರಸ್ತೆಗೂ
ಗೋಡೆ ಮಾತ್ರ ಅಡ್ಡ, ಅಂತರ ಅಗಾಧ
ಗೋಡೆಗಳೊಳಗಿನ ವೇದನೆಗೂ, ರಸ್ತೆ ಮೇಲಿನ
ಪುರುಸೊತ್ತಿಲ್ಲದ ಬದುಕಿಗೂ ಲಿಂಕೇ ಸಿಗ್ತಿಲ್ಲ!


ಪರದೆ ಮೇಲಿನ ಚಿತ್ರಕ್ಕೆ ಶಿಳ್ಳೆ ಹೋಡೀಬಹುದು
ಕಣ್ಣು ಮಂಜಾಗಬಹುದು, ಕ್ಷಣಿಕ ವೈರಾಗ್ಯ ಬರಬಹುದು
ಆದರೆ, ತಿದ್ದುವುದು, ತೀಡುವುದು, ಕತ್ತರಿಸಲಾಗದು ಕತೆಯ
ಪರದೆಯ ಮುಂದೆ ಕತೆಗೆ ಪ್ರೇಕ್ಷಕನೆಂಬ ವಾಸ್ತವ
ಆಸ್ಪತ್ರೆಯೊಳಗೆ ಪರಿಸ್ಥಿತಿಗೆ ನಿರೀಕ್ಷಕನೆಂಬ ನಿರ್ಲಿಪ್ತ
ಕೆಲವೊಮ್ಮೆ ಪ್ರಾರ್ಥನೆ, ಕಾಣಿಸದ ವಿಧಿಗೆ ಮೊರೆ...
ಅಲ್ಲಿಯೂ, ಇಲ್ಲಿಯೂ ನಡೆಯುವುದಕ್ಕೆ ಸಾಕ್ಷಿಗಳೇ ಹೊರತು...
ಇಲ್ಲಿ ಕಂಡದ್ದಕ್ಕೆ ತನಗೆ ಹೊರಗೆಲ್ಲೂ ಸ್ಪಂದನೆ ಸಿಕ್ಕದು
ದೊರಕಲಾಗದ್ದಕ್ಕೆ ರಸ್ತೆಯೂ, ಅಲ್ಲಿನ ಅವಸರವೂ ಮಾತನಾಡದು!
-KM

Saturday, November 25, 2017

ಚಲಿಸಲಾಗದ ಹೆಬ್ಬಂಡೆ...
ತೆರೆಗಳ ಅಷ್ಟೂ ಆಟಕ್ಕೆ
ಗಡಸು ಹೆಬ್ಬಂಡೆಯೇ ಸಾಕ್ಷಿ
ವೀಕ್ಷಣೆಗೂ, ಅಲೆಯ ಪ್ರೋಕ್ಷಣೆಗೂ
ಕಣ್ಗಾವಲು, ಮೂಕ ಪ್ರೇಕ್ಷಕ
ಹೇಳುವುದಕ್ಕೂ, ಕೇಳುವುದಕ್ಕೂ
ಬಾಯಿಯಿಲ್ಲ, ಕಾಲು ಬರುವುದಿಲ್ಲ
ಅಸಲಿಗೆ ಹೃದಯವೇ ಇಲ್ಲ, ಇದ್ದರೂ ಕಾಣುವುದಿಲ್ಲ.

ದಡಕ್ಕೆ ಬಂದು ಬೀಳುವ
ಅಲೆಗಳದ್ದು ಏನೇನೋ ಹೊರೆಕಾಣಿಕೆ
ಮತ್ತೆ ಬಾಚಿ ಸೆಳೆದು ಒಡಲಿಗೆಳೆಯುವ ಕಡಲು...
ಬಿಡಲು, ಕೊಡಲು ದಡಕ್ಕೂ ಹಕ್ಕಿಲ್ಲ
ಕೊಚ್ಚಿ ಹೋಗಿದ್ದರ ಬಗ್ಗೆ
ಅಳುವ ಹಾಗಿಲ್ಲ, ಮೋಹ ಪಡುವಂತಿಲ್ಲ
ಅಸಲಿಗೆ ಹೃದಯವೇ ಇಲ್ಲ, ಇದ್ದರೂ ಕಾಣುವುದಿಲ್ಲ.


ಆಡ ಬಂದವರ ಸೆಳೆದು ನೀರುಪಾಲಾದರೂ
ಜಡ ದೇಹವ ಮತ್ತೆ ದಡಕ್ಕೆ ದೂಡಿದರೂ
ಬಂಡೆ ಅಳುವುದಿಲ್ಲ, ಕಣ್ಣೀರು ಸಲ್ಲ
ರಾಶಿ ರಾಶಿ ಮೀನು ಬಲೆಗೆ ಬಿದ್ದರೂ
ಕ್ಲೇಶ, ರೋಷ, ಹರುಷ ಬಂದು ಕೂತು ಹೋದರು
ಮನಸು ಕರಗುವುದಿಲ್ಲ, ಅರಳುವುದಿಲ್ಲ
ಅಸಲಿಗೆ ಹೃದಯವೇ ಇಲ್ಲ, ಇದ್ದರೂ ಕಾಣುವುದಿಲ್ಲ...

ಅಲೆ ಬಂದು ಗುದ್ದಿದರೂ,
ನಸುವಾಗಿ ಚುಂಬಿಸಿದರೂ
ಬಂಡೆಗದರ ಪಾಶವಿಲ್ಲ, ಸ್ಪರ್ಶಿಸಿದರೂ ಸ್ಪಂದನೆಯಿಲ್ಲ
ಪಾಶಾಣ ಕರಗುವುದಿಲ್ಲ, ಕದಲುವುದೂ ಸಲ್ಲ
ಗಾಢ ಮೌನ, ಕಪ್ಪು ವದನ
ಚಾಚಿದ ದೇಹದ ಭಾವವೇ ಕಾಣುವುದಿಲ್ಲ,
ಅಸಲಿಗೆ ಹೃದಯವೇ ಇಲ್ಲ, ಇದ್ದರೂ ಕಾಣುವುದಿಲ್ಲ...


ಇಂದು, ನಾಳೆ ಮತ್ತೈದು ವರ್ಷದ ಬಳಿಕ
ಎಂದು ಹೋದರೂ ಬಂಡೆಯದ್ದದೇ ಭಂಗಿ
ಭಾವರಹಿತ ಕಲ್ಲುಗುಂಡು,
ನೀರಲ್ಲೇ ಇದ್ದರೂ ಕರಗದ ಹಠವಾದಿ
ವಿಧಿಯ ಕಂಡು ಜಡಗಟ್ಟಿದ ಆತ್ಮ
ಇದ್ದರೂ ಇಲ್ಲದ ಹಾಗೆ, ನೋಡದ ಹಾಗೆ...
ಅಸಲಿಗೆ ಹೃದಯವೇ ಇಲ್ಲ, ಇದ್ದರೂ ಕಾಣುವುದಿಲ್ಲ

-KM

Thursday, November 16, 2017

ತೋಚಿದ್ದು... ಗೀಚಿದ್ದು 2

ಕಾಣುವುದಕ್ಕಿಂತ ನೋಡುವುದೇ ವೇದ್ಯವಾಗುವುದು...


ಮಳೆ ನಿಂತ ಬಳಿಕವೂ ಮರಗಳಿಂದ, ಮನೆಯ ಛಾವಣಿಯಿಂದ ಹನಿ ನೀರು ತೊಟ್ಟಿಕ್ಕುತ್ತಿರುತ್ತದೆ. ಲಯಬದ್ಧವಾಗಿ ನೀರು ಭೂಮಿಗೆ ಬೀಳುತ್ತಿರುತ್ತದೆ. ಮಳೆ ನಿಂತ ಬಳಿಕವೂ ನಸು ಛಳಿಯ ಗಾಳಿ ಸುಳಿಯುತ್ತಲೇ ಇರುತ್ತದೆ. ನೆನೆದ ಮಣ್ಣಿನ ಪರಿಮಳ, ಗುಡ್ಡದಿಂದ ಇಳಿದು ಬರುವ ಮಳೆ ನೀರಿನ ಧಾರೆ, ಗಾಳಿಗೆ ಬಾಗಿ ಇನ್ನೊಂದು ಮರದ ಆಸರೆ ಪಡೆದ ಅಡಕೆ ಮರಗಳು, ನೆಲನೋಟಕವಾದ ಹೂವಿನ ಗಿಡಗಳು... ಎಷ್ಟೊಂದು ಕುರುಹುಗಳು ಮಳೆ ಬಂದದ್ದಕ್ಕೆ...

ಆದರೆ ಮಳೆಯನ್ನು ಆಸ್ವಾದಿಸುವ ಮನಸ್ಥಿತಿ ಇಲ್ಲದ ವೇಳೆಯಲ್ಲಿ, ಇಲ್ಲದ ಸನ್ನಿವೇಶದಲ್ಲಿ ತೊಟ್ಟಿಕ್ಕುವ ಹನಿಗಳೂ ಮನಸ್ಸು ಕೆದಕುವ ಪೆಟ್ಟಿನ ಹಾಗೆ ಭಾಸವಾದೀತು. ಅಷ್ಟೊಂದು ಲಯಬದ್ಧವಾಗಿ, ನಿಶ್ಯಬ್ಧವನ್ನು ಬೇಧಿಸಿ ಉಂಟು ಮಾಡುವ ನಿನಾದದ ಸದ್ದು ಕೂಡಾ ಖುಷಿ ಕೊಡಲಾರದು... ಮನಸ್ಸು ಅದನ್ನು ಆಸ್ವಾದಿಸುವಷ್ಟು ಸುಕೋಮಲವಾಗಿರಲಾರದು.

ಹೌದಲ್ಲ
ಒಂದೇ ಸನ್ನಿವೇಶ, ಒಂದೇ ಪರಿಸ್ಥಿತಿ ಮನಸ್ಸನ್ನು ಹೊಕ್ಕು ಅಲ್ಲೊಂದು ಬಿಂಬ ಮೂಡಿಸಲು ನಮ್ಮ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಧನಾತ್ಮಕವಾಗಿಯೂ, ನಕಾರಾತ್ಮಕವಾಗಿಯೂ ಸನ್ನಿವೇಶ ಗ್ರಹಿಕೆಯಾಗುವುದು ನಮ್ಮ ಮೂಡನ್ನು ಅವಲಂಬಿಸಿರುತ್ತದೆ. ಮನಸ್ಸು ಪ್ರಫುಲ್ಲವಾಗಿದ್ದಾಗ, ಶಾಂತವಾಗಿದ್ದಾಗ ಪ್ರತಿಯೊಂದರಲ್ಲೂ ಸೌಂದರ್ಯವನ್ನೂ, ಆಹ್ಲಾದಕತೆಯನ್ನೂ, ಚೈತನ್ಯವನ್ನೂ ಕಾಣಲು ಸಾಧ್ಯವಾಗುತ್ತದೆ...

ಮನಸ್ಸು ವ್ಯಗ್ರವಾಗಿದ್ದರೆ, ಅಶಾಂತವಾಗಿದ್ದರೆ, ನೊಂದಿದ್ದರೆ ಅದೇ ಸಂದರ್ಭ ಭಿನ್ನವಾಗಿ ಕಾಡಬಹುದು. ಮಳೆ ತಂದ ಅವಾಂತರಗಳೇ ಎದ್ದು ತೋರಬಹುದು, ಅಯ್ಯೋ ಮಳೆ ಬಂತಲ್ಲಾ ಎಂದನ್ನಿಸಬಹುದು...

ಪ್ರಕೃತಿ, ಸೃಷ್ಟಿಗಳೆಲ್ಲ ಅವು ಶಾಶ್ವತ. ಅವನ್ನು ಅನುಭವಿಸುವ ಮನುಷ್ಯ, ಆತನ ಮನಸ್ಸು ಮಾತ್ರ ಚಂಚಲ ಹಾಗೂ ಕ್ಷಣಿಕ.

......


ಅವರವರ ನಿಲ್ದಾಣದ ತನಕ..


ದೂರದ ದಾರಿಯ ಪ್ರಯಾಣಕ್ಕೆ ಒಂದು ಟಿಕೆಟು ಖರೀದಿಸಿ ಇಟ್ಟಿರುತ್ತೀರಿ. ಆಗೆಲ್ಲಾ ಪಕ್ಕದಲ್ಲಿಯೋ, ಎದುರಿನಲ್ಲಿಯೋ ಪ್ರಯಾಣಿಸುವವರು ಯಾರೆಂದು ಸರ್ವೇ ಮಾಡಿ, ಅವರ ಜಾತಕ ನೋಡಿ, ವಾಸ್ತು ಪರೀಕ್ಷಿಸಿ ಯಾರೂ ಪ್ರಯಾಣಿಸುವ ಪ್ರಮೇಯವಿಲ್ಲ...
ಒಂದಷ್ಟು ಬೇಕಾದ ಸೀಟಿಗಾಗಿ ಪ್ರಯತ್ನಿಸಬಹುದು. ನಂತರರ ಅವರವ ಅದೃಷ್ಟಕ್ಕೆ ಬಿಟ್ಟ ಸೀಟಿನಲ್ಲಿ ಕುಳಿತು ಪ್ರಯಾಣಿಸಬೇಕಾಗಿರುವುದು ಅವರವರ ಅದೃಷ್ಟಕ್ಕೆ ಬಿಟ್ಟದ್ದು.
ಇಂತಹ ಸಂದರ್ಭದಲ್ಲಿ ಪಕ್ಕದಲ್ಲೋ, ಎದುರಿನಲ್ಲೋ ಕುಳಿತ ಪ್ರಯಾಣಿಕನ ವರ್ತನೆ ನಿಮಗೆ ಇಷ್ಟವಾದರೆ... ಅಯ್ಯಾ ನೀನು ನನಗೆ ಒಳ್ಳೆಯ ಸ್ನೇಹಿತನಾಗಿದ್ದೀ, ಇನ್ನು ಸ್ವಲ್ಪ ಹೊತ್ತು ನನ್ನ ಜೊತೆಗೇ ಪ್ರಯಾಣಿಸು ಎಂದು ಅಂಗಲಾಚಲಾಗುತ್ತದೆಯೇ... ಇಲ್ಲ ತಾನೆ. ಅಥವಾ ಹತ್ತಿರ ಕುಳಿತ ಸಹ ಪ್ರಯಾಣಿಕನ ವರ್ತನೆ ಇಷ್ಟವಾಗದಿದ್ದರೆ... ರೀ ಸ್ವಾಮಿ, ನಿಮ್ಮ ಸ್ವಭಾವ ನನಗೆ ಹಿಡಿಸಿಲ್ಲ, ದಯವಿಟ್ಟು ಇಲ್ಲಿಯೇ ಇಳಿಯಿರಿ ಎಂದು ತಾಕೀತು ಮಾಡಲಾಗುತ್ತದೆಯೇ...

ಇಲ್ಲ ತಾನೆ?
ಯಾಕೆಂದರೆ ನಾವು ಪ್ರಯಾಣಿಸುತ್ತಿರುವ ಬಸ್ಸೋ,ರೈಲೋ ನಮ್ಮ ಸ್ವಂತದ್ದಲ್ಲ. ಎಲ್ಲರ ಹಾಗೆ ನಾವೂ ಪ್ರಯಾಣಿಕರು. ಯಾರು ಎಲ್ಲಿ ಹತ್ತಿ ಎಲ್ಲಿ ಇಳಿಯಬೇಕೆಂದು ನಿರ್ಧರಿಸುವವರು ನಾವಲ್ಲ. ಅದು ಅವರವ ನಿರ್ಧಾರಕ್ಕೆ ಅವಶ್ಯಕತೆಗಳಿಗೆ ಸಂಬಂಧಿಸಿದ್ದು. ಅಥವಾ ಎಲ್ಲರ ಪ್ರಯಾಣಿವನ್ನು ನಿರ್ಧರಿಸುವವನು ಎಲ್ಲಿಯೋ ಇದ್ದರೂ ಇರಬಹುದು. ಪ್ರಯಾಣದಲ್ಲಿ ಜೊತೆಗಿರುವವರು ಇಷ್ಟವಾಗದಿದ್ದರೂ ಹೊಂದಾಣಿಕೆಯಿಂದ ಇರುವುದು, ಇಷ್ಟವಾದ ಪ್ರಯಾಣಿಕರು ಮತ್ತಷ್ಟು ಹೊತ್ತು ಇಲ್ಲದೆ ಅವರವರ ನಿಲ್ದಾಣದಲ್ಲಿ ಇಳಿದಾಗ ನಿರ್ಲಿಪ್ತರಾಗಿ ಬೀಳ್ಕೊಡುವುದೇ ಇರುವ ಆಯ್ಕೆಗಳು. ಎಲ್ಲಿ ವ್ಯಕ್ತಿಗೆ ಬೇರೆ ಆಯ್ಕೆಗಳೇ ಇಲ್ಲವಾಗುತ್ತದೆಯೇ ಅಲ್ಲಿ ನಿರ್ಲಿಪ್ತತೆಗೆ ಮೊರೆ ಹೋಗದೆ ಬೇರೆ ದಾರಿಗಳೇ ಇರುವುದಿಲ್ಲ. ಒಂದು ವೇಳೆ ನಿರ್ಲಿಪ್ತತೆ ರೂಢಿಸಿಕೊಳ್ಳದಿದ್ದರೆ ಬಾಕಿ ಉಳಿದ ಪ್ರಯಾಣ ಮತ್ತಷ್ಟು ಅಸಹನೀಯವಾಗಿ ಕಾಡಬಹುದು. ನೋಡುಗರಿಗೆ ನಿಷ್ಠುರತೆಯಂತೆ ಕಂಡರೂ ಬೇರೆ ದಾರಿಯಿಲ್ಲ. ನಾವೆಲ್ಲಿ ಹೋಗಿ ತಲುಪಬೇಕೆಂದುಕೊಂಡಿದ್ದೇವೆಯೋ ಅಲ್ಲಿಯ ವರೆಗೆ ಹೋಗಿ ತಲುಪಲೇಬೇಕು. ಯಾರು ಎಲ್ಲಿ ಪ್ರಯಾಣದಲ್ಲಿ ಜೊತೆಯಾಗುತ್ತಾರೆ, ಅವರೇನು ಮಾತನಾಡುತ್ತಾರೆ, ಯಾರು ಎಲ್ಲಿ ಇಳಿದು ಹೋಗುತ್ತಾರೆ ಎಂಬುದರ ಆಧಾರದಲ್ಲಿ ನಮ್ಮ ಪ್ರಯಾಣದ ಗುರಿ ಬದಲಾಗಲಾರದು. ಮಾತ್ರವಲ್ಲ, ಯಾರ್ಯಾರು ನಮ್ಮ ಸಹಪ್ರಯಾಣಿಕರಾಗಿ ಬರಬೇಕೆಂದು ನಿರ್ಧರಿಸುವ ಹಕ್ಕೂ ನಮಗಿರುವುದಿಲ್ಲ.

ಹಾಗಾಗಿ ಯಾರು ಎಷ್ಟುಸಮಯ ಜೊತೆಗೆ ಪ್ರಯಾಣಿಸಿದ್ದಾರೋ ಅಷ್ಟು ಹೊತ್ತು ಅವರ ಜೊತೆ ಹೊಂದಾಣಿಕೆಯಿಂದ ಇರಲು ಪ್ರಯತ್ನ ಪಡಬೇಕಲ್ಲವೇ... ಸಹ ಪ್ರಯಾಣಿಕ ಅನುಕೂಲನಾಗಿದ್ದರೆ ಖುಷಿ ಪಡಬೇಕಲ್ಲವೇ... ಖುಷಿ ಕೊಟ್ಟವರು ತಾಣ ಬಂದಾಗ ಇಳಿದು ಹೋದರೆಂದು ಖಿನ್ನರಾಗುವುದಕ್ಕೆ ಅರ್ಥವಿದೆಯೇ...
ಮಾತ್ರವಲ್ಲ. ನನ್ನ ಮನಸ್ಥಿತಿಗೂ ನನ್ನ ಸಹಪ್ರಯಾಣಿಕನ ಮನಸ್ಥಿತಿಗೂ ಹೊಂದಣಿಕೆ ಆಗುತ್ತಿಲ್ಲವೆಂದು ಜಗಳ ಕಾಯುವುದಕ್ಕೆ ಅರ್ಥವಿದೆಯೇ...
ನೆನಪಿಟ್ಟುಕೊಳ್ಳಿ.... ಒಟ್ಟೂ ಪ್ರಯಾಣದಲ್ಲಿ ಬೇರೆ ಬೇರೆ ಲೆಕ್ಕಾಚಾರದಲ್ಲಿ ಪ್ರಯಾಣಿಕರು ಒಟ್ಟಾಗುತ್ತಾರೆ. ಹೆಚ್ಚೂ ಆಗದೆ, ಕಡಿಮೆಯೂ ಆಗದ ಹಾಗೆ ಅವರವರ ನಿಲ್ದಾಮದಲ್ಲಿ ಹತ್ತಿ, ಇಳಿಯುತ್ತಾರೆ... ತೀರಾ ಆಕಸ್ಮಿಕವೆಂಬಂಥ ಭೇಟಿ, ಅಗಲುವಿಕೆ ಅಷ್ಟೇ...
ಅಲ್ಲಿ ಅತಿಯಾದ ಭಾವುಕತೆಗೂ ಅತಿಯಾದ ನೊಂದುಕೊಳ್ಳುವಿಕೆಯೂ ಸಹಜವಾದರೂ ಅದರಿಂದ ಪ್ರಯೋಜನವಾದರೇನು. ಅಂತಿಮವಾಗಿ, ನಮ್ಮನ್ನು ಮೈಲುಗಟ್ಟಲೆ ದೂರದಿಂದ ಹೊತ್ತು ತರುವ ಬಸ್ಸೋ, ರೈಲು ಕೂಡಾ ಒಂದು ಪುಟ್ಟ ಪದವನ್ನೂ ಹೇಳದೆ ನಿರ್ಲಿಪ್ತವಾಗಿ ಮುಂದಿನ ನಿಲ್ದಾಣದತ್ತ ಹೊರಟುಹೋಗುತ್ತದೆ. ಕೈಯ್ಯಲ್ಲಿ ಉಳಿಯುವುದು ನಾವು ಖರೀದಿಸಿದ ಟಿಕೆಟು, ದೂರದಲ್ಲಿ ಅಸ್ಪಷ್ಟವಾಗಿ ಕಾಣುವ ಹಿಂದಿನ ಲೈಟು ಮಾತ್ರ.

ಪ್ರಯಾಣವೂ ಎಷ್ಟೊಂದು ಫಿಲಾಸಫಿ ತೋರಿಸಿಕೊಡುತ್ತದೆ ಅಲ್ವೇ...

................................ಹಾಯಿ ದೋಣಿಯ ಹಾಗೆ...ಸಮುದ್ರದ ನಡುವೆಯೊಂದು ಹಾಯಿ ದೋಣಿ...
ಅಂಬಿಗನಿಲ್ಲ, ಮೋಟಾರು ಅಳವಡಿಸಿಲ್ಲ, ಗಾಳಿ ಬಂದ ದಿಕ್ಕಿಗೆ ಸಾಗಲೇಬೇಕು ದೋಣಿ.
ದೋಣಿ ಸಾಗಿ ದಡವನ್ನೂ ಸೇರಬಹುದು, ಜಾಸ್ತಿ ಗಾಳಿ ಬಂದು ಮಗುಚಿದರೆ ಮುಳುಗಲೂ ಬಹುದು.
ನಿರ್ಜನ ಕಡಲಿನ ನಡುವೆ ಮುಳುಗಿದರೆ ಅದಕ್ಕೆ ಸಾಕ್ಷಿಯಾದರೂ ಎಲ್ಲಿದೆ?
ಮುಳುಗಿದರೆ, ದೋಣಿಯೊಳಗಿರುವವರು ಮುಳುಗಲೇಬೇಕು ತಾನೆ...?
ಜೀವಿಯೊಂದರ ಬದುಕು ಪೂರ್ವನಿಗದಿತ ಅಂತಾದರೆ ಬಹುಷಃ ಆ ಹಾಯಿದೋಣಿಯೊಳಗಿರುವವರಿಗೂ ಒಂದು ಆಯುಷ್ಯ ಅಂತ ಇರುತ್ತದೆ. ಅಲ್ವ? 
ತಾನೆಷ್ಟೇ ಹೊಯ್ದಾಡಿದರೂ ಬದುಕುವ ಪ್ರಯತ್ನ ಮಾಡಿದರೂ ನಿಗದಿತ ಅವಧಿಯ ತನಕ ಪೇಚಾಡುವುದು ತಪ್ಪಿದ್ದಲ್ಲ... ಮುಳುಗಲೇ ಬೇಕೆಂದು ಹಣೆಯಲ್ಲಿ ಬರೆದಿದ್ದರೆ ಸಣ್ಣದೊಂದು ಸುಳಿಯೂ ದೋಣಿಯನ್ನು ಮುಳುಗಿಸಬಲ್ಲದು. ಇಲ್ಲವಾದರಲ್ಲಿ, ಊಹೆಗೂ ಸಿಲುಕದ ಜಲರಾಶಿಯೊಳಗೆ ಪುಟ್ಟದೊಂದು ಹಾಯಿ ದೋಣಿಗೆ ಹುಟ್ಟು ಹಾಕಿ ಬಚಾವಾಗುತ್ತೇನೆಂಬ ಪ್ರಯತ್ನ ಹುಚ್ಚಲ್ಲದೆ ಮತ್ತೇನು?
ಸಮುದ್ರದ ತಟ ಚಂದ, ಅಲೆಗಳ ಹೊಯ್ದಾಟ ಚಂದ, ಮುಳುಗುವ ಸೂರ್ಯ ಚೆಂದ, ಮರಳ ರಾಶಿ ಮೇಲೆ ಬರಿಗಾಲಲಲ್ಲಿ ನಡೆಯುವುದು ಚೆಂದ. ಹೌದಲ್ಲ? ಆದರೆ ಮುಳುಗುವ ಹೊತ್ತಿಗೆ ಇವುಗಳೆಲ್ಲಾ ಚೆಂದವಾಗಿಯೇ ಕಾಣಿಸುತ್ತದೆಯೇ? ಅಥವಾ ಆ ಅನುಭೂತಿಯನ್ನು ಆಸ್ವಾದಿಸುವ ಮನ:ಸ್ಥಿತಿ ಅಲ್ಲಿರುತ್ತದೆಯೇ...
ಎಂತಹ ಸೌಂದರ್ಯ ರಾಶಿಯಾದರೂ ಪರಿಸ್ಥಿತಿಯ ಇಬ್ಬಂದಿಯಲ್ಲಿ ಸಿಕ್ಕಿದ ಹೊತ್ತಿಗೆ ಅಸಹಾಯಕವಾಗಿ ಕಾಣಿಸುವುದೋ, ಏನೂ ಅಲ್ಲದಂತೆ ಭಾಸವಾಗುವುದೋ ಸಹಜವೋ ಏನೋ...!
 
ಸುರಿಯುವ ಮಳೆ, ಕಾಲಿಗೆ ಕಚಗುಳಿ ಇಡುವ ಇಬ್ಬನಿ, ಜಾಜಿ ಮಲ್ಲಿಗೆಯ ಪರಿಮಳ, ಮುಸ್ಸಂಜೆ ಉದಿಯಿಸುವ ಚಂದಿರ ಎಲ್ಲಾ ಕಾಡಬೇಕಾದರೆ ಮನಸ್ಸು ಪ್ರಶಾಂತವಾಗಿರಬೇಕು, ಹಾಯಿ ದೋಣಿಯ ಹೊಯ್ದಾಟದ ಉದ್ವೇಗದಲ್ಲಿ ಅವು ಕಾಣಿಸುವುದೇ ಇಲ್ಲ... ಕಂಡರೂ ಕಚಗುಳಿ ನೀಡುವುದಿಲ್ಲ...ಮತ್ತೆ ಮಧುರ ನೆನಪುಗಳಾಗಿ ಕಾಡುವುದೂ ಇಲ್ಲ...
 
ದಟ್ಟ ನೀರಿನ ನಡುವೆ ಪೇಚಾಡುವ ದೋಣಿಯನ್ನು ದಡದಿಂದ ನೋಡಬಲ್ಲವರು ನೂರಾರು ಮಂದಿಯಿದ್ದರೂ ಮುಳುಗುವ ಹೊತ್ತಿಗೆ ಅಲ್ಲಿಂದ ಸಲಹೆ ಕೊಟ್ಟಾರೇ ವಿನಃ ಹತ್ತಿರ ಬಂದು ದೋಣಿಯ ಎತ್ತಿ ಹಿಡಿಯಲಾರರಲ್ಲವೇ? ಅದು ಮತ್ತೊಂದು ದೋಣಿ ಮುಳುಗಿದ ಸುದ್ದಿಗೆ ಸೀಮಿತವಾಗಿ ಉಳಿಯಬಹುದೇ...?
 
ಮೊಬೈಲಿನಲ್ಲಿ ಸಾವಿರ ಸಾವಿರ ಕಾಂಟ್ಯಾಕ್ಟುಗಳು ರಕ್ಷಿಸುವ ಜ್ಞಾಪಕಕೋಶ ಇದ್ದರೂ, ಗಂಟೆಗೆ ನೂರು ಗಟ್ಟಲೆ ಸಂದೇಶಗಳು ಬಂದು ಬಿದ್ದರೂ... ಕೂತಲ್ಲಿ, ನಿಂತಲ್ಲಿ ಬರುವ ಕರೆಗಳು ಕಾಯುತ್ತಿದ್ದರೂ ಅಸಹಾಯಕತೆಯಲ್ಲಿ, ದಡ ಕಾಣದ ಹೊಯ್ದಾಟದಲ್ಲಿ ಎಲ್ಲರೂ ಒಂಟಿಗಳೇ...
ಹೋಗುವಾಗಲೂ, ಬರುವಾಗಲೂ...

Wednesday, November 15, 2017

ತೋಚಿದ್ದು... ಗೀಚಿದ್ದು 1
ಒಂದಷ್ಟು ನಿರೀಕ್ಷೆ ಬೇಕೆಂದು ಮೂಡಿದ್ದೋ, ಆವರಿಸಿದ್ದೋ...
ನಿರೀಕ್ಷೆಗೆ ವ್ಯತಿರಿಕ್ತಗಳಾದಾಗ ಭಾವಶೂನ್ಯ
ಮನುಷ್ಯ ಸಹಜ ಗುಣ.
ತೆಗೆದುಕೊಂಡ ನಿರ್ಧಾರಗಳು ಜಾರಿಯಾದ ಕೆಲವೇ ದಿನಗಳಲ್ಲಿ ಮತ್ತೆ ನಿರ್ಧಾರಗಳ ಹಿಂದಿನ ಗಟ್ಟಿನತನ ಕರಗಿ ಶಿಥಿಲಗಾವುದೇ ಬಹುಷಹ ಇದಕ್ಕೆಕಾರಣ.
ಸಿದ್ಧಾಂತಗಳು, ಬೌದ್ಧಿಕ ಬರಹಗಳು ಹೇಳುವುದನ್ನು ಕೇಳಿಯೋ, ಓದಿಯೋ, ಅರ್ಥ ಮಾಡಿಕೊಂಡರೂ ನಿತ್ಯಜೀವನದಲ್ಲಿ ನಿರ್ಧಾರಗಳನ್ನು ನಿರ್ಧರಿಸುವ ಅಂಶಗಳೇ ಬೇರೆ ಇರುತ್ತವೆ. ಅಲ್ಲಿ ಹಸಿವು, ಬಾಯಾರಿಕೆಯ ಥರಹವೇ ನಿರೀಕ್ಷೆಗಳೂ ಮೂಡಿಯೇ ಮೂಡುತ್ತವೆ.

ನಮ್ಮ ಕುರಿತು ನಾವು ನಿರ್ಧಾರಗಳನ್ನು ಕೈಗೊಳ್ಳಬಹುದೇ ಹೊರತು. ಸುತ್ತಮುತ್ತಲಿನವರು ನಾನು ಹೇಳಿದಂತೆ, ನಾನು ನಿರ್ಧರಿಸಿದಂತೆ, ನನ್ನ ನಂಬಿಕೆಯಂತೆ ಬದುಕಬೇಕು, ಆಡಬೇಕು ಎಂದುಕೊಂಡರೆ ಅದು ಅಸಹಜವೇ ಸರಿ. ನಿರೀಕ್ಷೆಗಳ ಮಿತಿ ನಮ್ಮ ಮಿತಿಯೊಳಗೆ, ನಮ್ಮೊಳಗೊಂದು ಬದಲಾವಣೆ ತರುವ ಮಟ್ಟಿಗೆ ಇದ್ದರೆ ಉತ್ತಮ. ಅದರಾಚೆಗಿನ ವ್ಯಕ್ತಿತ್ವಗಳು, ಅವರ ನಡೆ ನುಡಿ, ಅವರ ಅಭಿರುಚಿಗಳು ಅವರು ನಿಮ್ಮ ಸ್ನೇಹಿತರೇ ಆಗಲಿ, ಬಂಧುಗಳೇ ಆಗಲಿ ನಿರ್ಧರಿಸುವವರು, ನಿರೀಕ್ಷಿಸುವವರು ನೀವಲ್ಲ ಎಂಬುದು ತಿಳಿದಿದ್ದರೆ ಒಳಿತು. ಎಷ್ಟೋ ಬಾರಿ ವಿರುದ್ಧ ಧ್ರುವಗಳೂ ಸ್ನೇಹಿತರಾಗುತ್ತವೆ ಯಾಕಂದರೆ ಅವರನ್ನು ಇದ್ದ ಹಾಗೆ ಸ್ವೀಕರಿಸುವುದರಿಂದ ಯಾವುದೋ ಕಾಮನ್ ಫ್ಯಾಕ್ಟರ್ ಅವರನ್ನು ಬಂಧಿಸಿರುತ್ತದೆ ಹೊರತು ಅವರಿಗೆ ಪರಸ್ಪರ ಆಗದ ವಿಚಾರಗಳು ಅವರ ಸ್ನೇಹಕ್ಕೆ ಅಡ್ಡಿಯಾಗಿರುವುದಿಲ್ಲ.
ಕಾಮನ್ ಫ್ಯಾಕ್ಟರ್ ಬಿಟ್ಟು ಇತರ ಅಂಶಗಳಲ್ಲೂ ಅವರ ಚಿಂತನೆ ನಮ್ಮ ಚಿಂತನೆಗೆ ಹೊಂದಿಕೆಯಾಗಬೇಕು, ನನ್ನ ಯೋಚನೆಗೆ ಅನುಗುಣವಾಗಿ ಸ್ನೇಹಿತನೂ ಯೋಚಿಸಬೇಕು, ನಡೆದುಕೊಳ್ಳಬೇಕು ಎಂದುಕೊಳ್ಳುವುದು ಶುದ್ಧ ಸ್ವಾರ್ಥವೇ ಹೊರತು ವೈಚಾರಿಕ ಪ್ರಜ್ಞೆಯಂತೂ ಆಗಲು ಸಾಧ್ಯವಿಲ್ಲ. ಹೊಂದಿಕೆಯಾಗದಿದ್ದರೆ ಮೌನವಾಗಿರಬೇಕೆ ಹೊರತು ಇನ್ನೇನೋ ಮಾಡದಿರುವುದು ಕ್ಷೇಮ.

............


ಒಂದು ದಿನ ಆಫ್ ಲೈನ್ ಇದ್ದು ನೋಡಿ
ಭೂಮಿಯೇನೂ ಅಡಿಮೇಲಾಗುವುದಿಲ್ಲ.

ಕ್ಷಣ ಕ್ಷಣಕ್ಕೂ ಮೆಸೇಜುಗಳನ್ನು ನೋಡುತ್ತಲೇ ಇಲ್ಲದಿದ್ದರೆ ಕಳೆದುಕೊಳ್ಳುವುದೇನೂ ಇಲ್ಲ.
ಕೊನೆ ಪಕ್ಷ ರಜೆಯ ದಿನವಾದರೂ ಆಫ್ ಲೈನ್ ಹೋಗಿ ನೋಡಿ. ವಾಟ್ಸಪ್ಪೋ, ಫೇಸುಬುಕ್ಕೋ ಇವಕೆಲ್ಲಾ ಏಕಾಏಕಿ ಬಂದು ರಾಶಿ ಬೀಳುವ ಮೆಸೇಜುಗಳನ್ನು ಒಂದೇ ಬಾರಿಿ ನೋಡಿ ಉತ್ತರಿಸಲೂ ಸಾಧ್ಯವಾಗುತ್ತದೆ. ಈ ಮೂಲಕ ಇಡೀ ದಿನ ಕೈಯ್ಯಲ್ಲೇ ಮೊಬೈಲು ಹಿಡಿದು ಕೂರುವುದು ತಪ್ಪುತ್ತದೆ. ಆ ಸಮಯವನ್ನು ಬೇರೆ ಉಪಯುಕ್ತ ಕಾರ್ಯಕ್ಕೆ ಬಳಸಬಹುದು.
ಜೊತೆಗೆ ಎಲ್ಲೋ ಜನಜಂಗುಳಿಯಲ್ಲಿದ್ದೇನೆಂಬ ಮುಜುಗರ ಬಿಟ್ಟು ತುಸು ಏಕಾಂತದ ಖುಷಿ ಅನುಭವಿಸಬಹುದು. ಕೆಲಸಕ್ಕೆ ಬಾರದ ಫಾರ್ವರ್ಡ್ ಸಂದೇಶಗಳನ್ನು ಡಿಲೀಟ್ ಮಾಡುತ್ತಾ ಕೂರುವ ಬದಲು ಆಸಕ್ತಿಯಿರುವ ಇನ್ನಾನಾದರೂ ಕೆಲಸ ಮಾಡಬಹುದು.
ಆನ್ ಲೈನ್ ಇಲ್ಲದ ತಕ್ಷಣ ದೊಡ್ಡದೇನೋ ಸಂಭವಿಸುವತ್ತದೆ ಎಂಬಂಥ ಅವ್ಯಕ್ತ ಆತಂಕ ಹಾಸ್ಯಾಸ್ಪದ.

..............

ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಂದಾಗ ಏನು ಮಾಡಬೇಕು
ಅವರವರಿಗೆ ಅವರವ ಅನಿಸಿಕೆ ಹೇಳುವ ಹಕ್ಕಿದೆ.
ಆದರೆ ಇನ್ನೊಬ್ಬರ ಭಾವನೆಗಳನ್ನು ಕೆಣಕುವ ಅಥವಾ ಪ್ರಶ್ನಿಸುವ (ಸಮಾಜಘಾತುಕವಲ್ಲದ ನಂಬಿಕೆಗಳ ಬಗ್ಗೆ) ಹಕ್ಕಿಲ್ಲ. ಸಮಸ್ಯೆ ಶುರುವಾಗುವುದೇ ಇಲ್ಲಿ.
ನಾನು ನಂಬುವ ವಿಚಾರ ಸತ್ಯ, ಪಕ್ಕದವನ ನಂಬಿಕೆ ಸುಳ್ಳು ಎಂಬ ಖಚಿತ ಅನಿಸಿಕೆಯನ್ನು ಸಾದ್ಯಂತ ಹೇರಲು ಹೊರಟಾಗ ಆಗುವ ಎಡವಟ್ಟು. ಅದೇ ರೀತಿ ಪಕ್ಕದವನ ಅನಿಸಿಕೆ ಅವನ ನಂಬಿಕೆ. ಅದನ್ನು ಆತ ನಂಬಿದ್ದರೆ ನಿಮಗೇನು ಕಷ್ಟ. ಸುಮ್ಮನಿದ್ದು ಬಿಡಿ. ಅದರಿಂದ ನಿಮಗೇನೂ ನಷ್ಟವಿಲ್ಲ, ಕಷ್ಟವೂ ಇಲ್ಲ. ಆತನ ನಂಬಿಕೆ ಸುಳ್ಳಾದರೆ ಅದರಿಂದ ಕಷ್ಟವಾಗುವುದು ಅವನಿಗೇ ತಾನೆ. ನೀವ್ಯಾಕೆ ಉರಿದು ಬೀಳುತ್ತೀರಿ.
ಇದನ್ನು ಹೊರತುಪಡಿಸಿ ನಮಗೇ ಏಟು ಬಿತ್ತು ಎನ್ನುವ ಹಾಗೆ ಸಾಮಾಜಿಕ ಜಾಲ ತಾಣಗಳಲ್ಲಿ ಎಗರಿ ಬೀಳುವುದು, ಹಾರಾಡುವುದರಿಂದಲೇ ಸಂಘರ್ಷಗಳು ಶುರುವಾಗುವುದು.
ಅಂದ ಹಾಗೆ ಇಂತಹ ಸಂಘರ್ಷಗಳು ಅವಾಚ್ಯ ಪದ ಬಳಕೆಗೆ ಸೀಮಿತವಾಗಿರುತ್ತವೆಯೇಹೊರತು ತಾರ್ಕಿಕ ಅಂತ್ಯ ಕಾಣುವುದೇ ಇಲ್ಲ...


Tuesday, November 14, 2017

ದೂರದ ಬೆಟ್ಟ...ದೂರದಲ್ಲೊಂದು ಬೆಟ್ಟದ ಶ್ರೇಣಿ... ಮಸುಕು ಮಸುಕು ಶಿಖರ, ನೀಲಿ ಮಿಶ್ರಿತ ಹಸಿರು ಮರಗಳ ಸಾಲು, ಕಾಲಿಡಲೂ ಜಾಗವಿರಲಾರದೆಂಬ ಭಾಸ, ಪುಟ್ಟ ಬೆಳ್ಳಿಯ ತಂತಿಯಂತೆ ಕಾಣುವ ಜಲಪಾತದ ಬಿಂಬ, ಮುಗಿಲು ಚುಂಬಿಸುವಷ್ಟು ಎತ್ತರವಿರಬಹುದೆಂಬ ಅಚ್ಚರಿ... ಬಹುಷಹ ಆ ಬೆಟ್ಟದ ತುದಿ ವರೆಗೆ ನಡೆದು ಹೋಗಲು ಅಸಾಧ್ಯವೇ ಎಂಬ ಸ್ವನಿರ್ಣಯ ನಾವಿದ್ದಲ್ಲೇ ಮಾಡೋಣ ಎನಿಸಬಹುದು...
ಅಸಲಿಗೆ ದೂರದಿಂದ ಕಂಡ ಬೆಟ್ಟದ ಬಳಿಗೆ ತಾಳ್ಮೆಯಿಂದ ಹೋದರೆ, ನಡೆದು ನೋಡಿದರೆ, ಪರೀಕ್ಷಿಸುವ ಸಂಯಮ ಇದ್ದರೆ, ಆ ಬೆಟ್ಟ ದೂರಕ್ಕೆ ಗೋಚರವಾದ ಸ್ಥಿತಿಯಲ್ಲೇ ಇರುತ್ತದೆಯೇ...?


ಇರಬೇಕಾಗಿಲ್ಲ. ಬಿಲ್ ಕುಲ್ ಇರಬೇಕಿಲ್ಲ. ಒತ್ತೊತ್ತಾಗಿಲ್ಲದೆ ವಿರಳವಾಗಿರುವ ಮರಗಳ ಸಮೂಹವೂ ದೂರದಿಂದ ಕಂಡಾಗ ದಟ್ಟಾರಣ್ಯದ ಹಾಗೆ ಗೋಚರವಾಗುತ್ತದೆ, ಬೆಳ್ಳಿ ತಂತಿಯ ಹಾಗಿ ನಿಶ್ಯಬ್ಧವಾಗಿ ಹರಿಯುವ ನೀರನ ಧಾರೆ ದೊಡ್ಡದೊಂದು ಸದ್ದಿನಿಂದ ಧುಮುಕುವ ಜಲಪಾತವಾಗಿರಲೂ ಬಹುದು, ಮರಗಳ ನಡುವೆ, ಪುಟ್ಟ ಪುಟ್ಟ ಹುಲ್ಲುಗಾವಲುಗಳಿದ್ದು ಮನುಷ್ಯರು, ಪ್ರಾಣಿಗಳು ನಡೆದಾಡುವಷ್ಟು ಕಾಲು ದಾರಿಗಳೂ ಇರುತ್ತವೆ. ಇನ್ನೂ ವಿಶೇಷವೇನೆಂದರೆ, ಪ್ರಪಂಚದ ಅತಿ ಎತ್ತರದ ಬೆಟ್ಟವೆಂದು ನಾವಂದುಕೊಳ್ಳುವಂತೆ ಮಾಡಿದ ಆ ಶಿಖರದ ತುದಿ ತಲುಪಿ ಸುತ್ತಮುತ್ತ ನೋಡಿದರೆ ಅದಕ್ಕಿಂತ ಎತ್ತರದ ಇನ್ನಷ್ಟು ಶಿಖರಗಳು ನಮ್ಮನ್ನು ಮರಳು ಮಾಡುತ್ತವೆ... ಅಲ್ವೇ..?

ಕಣ್ಣಿಗೆ ಕಂಡದ್ದು, ನಮ್ಮ ಯೋಚನೆಯ ಸೀಮಿತ ವ್ಯಾಪ್ತಿಯಲ್ಲಿ ನಾವು ಗ್ರಹಿಸಿದ್ದು, ಅದಕ್ಕೆ ಮತ್ತಷ್ಟು ನಿರೀಕ್ಷೆಗಳು, ಊಹೆಗಳನ್ನು ಬೆರೆಸಿದ್ದು ಸೇರಿಸಿ ಒಂದು ಚಿತ್ರಣ ನಮ್ಮ ಮನಸ್ಸಿನಲ್ಲಿ ಮೂಡುತ್ತದೆಯಲ್ವ ಅದುವೆ ನಿಜವಾಗಿರಬೇಕಾಗಿಲ್ಲ. ಬೆಟ್ಟವೇ ಇರಲಿ ವ್ಯಕ್ತಿಯೇ ಇರಲಿ ವರ್ಷಗಟ್ಟಲೆ ದೂರದಿಂದಲೇ ಅವರನ್ನು ಗಮನಿಸುತ್ತಾ ನಮ್ಮದೇ ಚಿತ್ರಣ ಸೃಷ್ಟಿಯಾಗಿ, ಅದಕ್ಕೆ ಮತ್ತಷ್ಟು ಆಧಾರರಹಿತ ವ್ಯಕ್ತಿತ್ವದ ಕಲ್ಪನೆಗಳು ಸೇರಿ ಒಂದು ಪೂರ್ವಗ್ರಹ ಮಾದರಿಯ ನಿಲುವು ಸಿದ್ಧವಾಗಿರುತ್ತದೆ. ಅದು ಮನಸ್ಸಿನಲ್ಲಿ ಆಳವಾಗಿ ನೆಲೆಯಾಗಿರುತ್ತದೆ. ದೂರದಿಂದ ಬೆಟ್ಟವನ್ನಾಗಲೀ, ಬೆಟ್ಟದಂತಿರುವ ವ್ಯಕ್ತಿಯನ್ನಾಗಲೀ ಕಂಡಾಗಲೆಲ್ಲಾ ನಮ್ಮ ಮನಸ್ಸಿನಲ್ಲಿ ಬೇರೂರಿರುವ ಪೂರ್ವಾಗ್ರಹಿತ ವ್ಯಕ್ತಿತ್ವವೇ ಮೌನವಾಗಿ ನಮಗೆ ಅವರನ್ನು ಪರಿಚಯಿಸುತ್ತಾ ಇರುತ್ತದೆ.

ಆದರೆ...
ಯಾವತ್ತೋ ಒಂದು ದಿನ ಬೆಟ್ಟದ ಬಳಿಗೆ ಹೋಗುವ ಸಂದರ್ಭ ಬಂದಾಗಲೇ ತಿಳಿಯುವುದು. ಇಷ್ಟು ವರ್ಷದಿಂದ ಕಂಡ ಬೆಟ್ಟ ಅದಿರುವುದು ಹಾಗಲ್ಲ, ವಾಸ್ತವ ಬೇರೆ ಅಂತ.

ವ್ಯಕ್ತಿಗಳ ಹತ್ತಿರ ಹೋಗಿ ಮಾತನಾಡಿದಾಗ ನಮ್ಮ ನಿಲುವು ಬದಲಾಗಬಹುದು, ಅವರು ಆತ್ಮೀಯರಾದಾಗ ನಿಲುವು ಮತ್ತಷ್ಟು ಬದಲಾಗಬಹುದು, ಅವರು ನಿಮ್ಮ ಆತ್ಮೀಯರಾಗಿ ಇನ್ನಷ್ಟು ಅವರ ಬದುಕಿನ ಬಗ್ಗೆ ನಿಮಗೆ ತಿಳಿದುಕೊಳ್ಳಲು ಅವಕಾಶ ಸಿಕ್ಕರೆ ನಿಮ್ಮ ಕಲ್ಪನೆಯ ಅವರ ವ್ಯಕ್ತಿತ್ವಕ್ಕೂ ವಾಸ್ತವದಲ್ಲಿ ಅವರಿರುವ ರೀತಿಗೂ ವ್ಯತ್ಯಾಸವನ್ನು ಕಂಡುಕೊಳ್ಳಲು ನಿಮಗೆ ಸಾಧ್ಯವಾಗಬಹುದು.

ಪರಮ ದುರಹಂಕಾರಿಯಂತೆ ಕಾಣುವಾತ ಪರಮ ಸಾತ್ವಿಕನಿರಬಹುದು, ನಗುಮುಖದ ಅರಸರಂತೆ ಓಡಾಡುವರು ಅತ್ಯಂತ ಮುಂಗೋಪಿಗಳಿರಬಹುದು, ಅತಿ ವಿನಯ ಪ್ರದರ್ಶಿಸುತ್ತಾ ಹತ್ತಿರ ಬರುವವರು ಪರಮ ಚಾಲಾಕಿಗಳಿರಬಹುದು. ಯಾರೊಡನೆಯೂ ಬೆರೆಯದೆ ತಮ್ಮ ಪಾಡಿಗೆ ಮೌನಿಗಳಾಗಿರುವವರು ವೈಯಕ್ತಿಕ ಸಂಬಂಧಗಳಲ್ಲಿ ಅತ್ಯಂತ ಸ್ನೇಹಪರರಾಗಿ, ಸಮಸ್ಯೆಗಳಿಗೆ ಸ್ಪಂದಿಸುವವರಾಗಿರಬಹುದು. ಅವರ ಬದುಕಿನಲ್ಲಿ ಯಾಕೆ ಮೌನ ಆವರಿಸಿದೆ ಎಂಬುದು ಅವರನ್ನು ಮಾತನಾಡಿಸಿದಾಗಲಷ್ಟೇ ನಿಮಗೆ ತಿಳಿಯಬಹುದು.

ಮನಸ್ಸಿನಾಳದಲ್ಲಿ ಹುದುಗಿರುವ ಆತ್ಮೀಯತೆ, ಸ್ನೇಹ, ಪ್ರೀತಿ, ದ್ವೇಷ, ತಿರಸ್ಕಾರಗಳ ಮಾಪನವನ್ನು, ಅದು ಶೇಖರವಾಗಿರಲು ಕಾರಣವನ್ನು, ಅದರ ಹಿನ್ನೆಲೆಯನ್ನು ಕೇವಲ ವರ್ಷಗಟಲ್ಲೇ ದೂರದಿಂದಲೇ ನೋಡುತ್ತಾ ಬಂದಾಗ ಮಾತ್ರ ಕಂಡುಹಿಡಿಯಲು ಸಾಧ್ಯವಿಲ್ಲ. ಅಂತಹ ಯಂತ್ರಗಳು ಇನ್ನೂ ಅಭಿವೃದ್ಧಿಯಾಗಿಲ್ಲ. ಇದೇ ಕಾರಣಕ್ಕೆ ವ್ಯಕ್ತಿ ವ್ಯಕ್ತಿಗಳ ನಡುವೆ ವಿನಾ ಕಾರಣದ ಅಪ್ರಚೋದಿತ ಪೂರ್ವಾಗ್ರಹಗಳಿರುತ್ತವೆ.

ಬಿಗಿದುಟಿ, ಗಂಭೀರ ವದನ, ಅಸ್ತವ್ಯಸ್ತ ಉಡುಪು, ಶೂನ್ಯದತ್ತ ದೃಷ್ಟಿ, ನತಮಸ್ತಕರಾಗಿ ನಡೆಯೋದು, ಭೇಟಿಯಾದರೂ ಜಾಸ್ತಿ ಮಾತನಾಡದೇ ಇರುವುದು, ತಮ್ಮ ಬಗ್ಗೆ ಏನೂ ಹೇಳದಿರುವುದು, ಯಾವಾಗಲೂ ಒಂಟಿಯಾಗಿರಲು ಬಯಸೋದು...
ಹೀಗೆಲ್ಲಾ ಇರುವುದಕ್ಕೆ ಏನಾದರೂ ಕಾರಣಗಳಿರುತ್ತವೆ ಅಲ್ಲವೇ...? ವಿನಾ ಕಾರಣ ಯಾರೂ ಹಾಗಿರುವುದಿಲ್ಲ. ಎಷ್ಟೋ ಬಾರಿ ಪರಿಚಯ ಆದವರನ್ನೇ ಅರ್ಥ ಮಾಡಿಕೊಳ್ಳಲು, ತಿಳಿದುಕೊಳ್ಳಲು ವರ್ಷಗಟ್ಟಲಿನ ಸಾಮಿಪ್ಯವೇ ಸಾಕಾಗುವುದಿಲ್ಲ ಅವರಾಗಿ ಹೇಳಿಕೊಳ್ಳುವ ತನಕ.


ಹಿರಿಯ ಸಾಹಿತಿಯೊಬ್ಬರು ಹೇಳುತ್ತಾರೆ... ವ್ಯಕ್ತಿಗಳನ್ನು ದೂರದಿಂದ ಕಂಡಾಗ ಇರುವ ಅಭಿಮಾನ ಎಷ್ಟೋ ಸಾರಿ ಅವರನ್ನು ಹತ್ತಿರದಿಂದ ಕಂಡಾಗ ಕಡಿಮೆಯಾಗುತ್ತದೆ ಅಂತ. ಅವರ ಕುರಿತಾಗಿ ನಮಗಿರುವ ಅಭಿಮಾನ, ಆರಾಧನೆ, ಅವರೊಬ್ಬ ಮಹೋನ್ನತ ವ್ಯಕ್ತಿಯಾಗಿರಬಹುದೆಂಬ ಹುಸಿ ಕಲ್ಪನೆಗಳು ಅವರ ಪರಿಚಯವಾಗಿ, ಅವರ ವ್ಯಕ್ತಿತ್ವದ ನಿಜ ದರ್ಶನವಾದ ನಂತರ ಹೊರಟು ಹೋಗುವುದಿದೆ.
ಯಾಕೆಂದರೆ ಬಾಹ್ಯವಾಗಿ ಕಂಡು ಬರುವ ನಗು, ಉಡುಪು, ನಡೆನುಡಿ, ಅವರಿವರು ಹೇಳಿವುದು ಮಾತ್ರ ಪೂರ್ಣ ವ್ಯಕ್ತಿತ್ವವಾಗಿರಬೇಕಾಗಿಲ್ಲ. ನಮ್ಮ ಕಣ್ಣುಗಳೇನೂ ಎಕ್ಸರೇ ಪಟಲಗಳನ್ನು ಹೊಂದಿಲ್ಲವಲ್ಲ. ನೈಜತೆ ಗೊತ್ತಾಗಬೇಕಾದರೆ ಸಾಮಿಪ್ಯ ಬೇಕು, ಮತ್ತು ಕೆಲವು ನಿದರ್ಶನಗಳು ಸಿಗಬೇಕು. ಅದಕ್ಕೇ ಸಾಹಿತಿಗಳು ಹೇಳಿದ್ದು.... ದೂರದಿಂದ ಕಾಣುವಾಗ, ಗೌರವಿಸುವಾಗ ಇರುವ ಗೌರವ ಹತ್ತಿರದಿಂದ ಕಂಡಾಗ ತನ್ನಷ್ಟಕ್ಕೇ ಮಾಯವಾಗುತ್ತದೆ ಅಂತ.

ಇದೇ ಮಾತನ್ನು ವಿರುದ್ಧಾರ್ಥಕವಾಗಿಯೂ ಬಳಸಬಹುದು.
ದೂರದಿಂದ ಕಾಣುವಾಗ ನಮಗೆ ಇಷ್ಟವೇ ಆಗದವರು ಹತ್ತಿರದವರಾದಾಗ ಅವರೊಳಗಿರಬಹುದಾದ ಮಾನವೀಯ ಅಂಶಗಳು ನಮ್ಮನ್ನು ಸೆಳೆಯಬಹುದು. ಅವರು ಆಪ್ತರಾಗಬಹುದು. ಅರ್ಥವೇ ಆಗದ ವ್ಯಕ್ತಿಗಳೂ ಹಾಗಿರಲು ಯಾಕೆ ಕಾರಣ ಎಂಬುದೂ ನಮ್ಮ ಅರಿವಿಗೆ ಸಿಗಬಹುದು...


ಎಲ್ಲದಕ್ಕೂ ಕಾಣುವ ಕಣ್ಣು, ಅದನ್ನು ವಿಶ್ಲೇಷಿಸಬಲ್ಲ ನಿಷ್ಪಕ್ಷಪಾತ ಮನಸ್ಸು ಮತ್ತು ಹತ್ತಿರ ಹೋಗಿ ಮಾತನಾಡಿಸುವ ತಾಳ್ಮೆ, ವಿವೇಚನೆ ಮತ್ತು ಪೂರ್ವಾಗ್ರಹವನ್ನು ಬಿಟ್ಟು ಅರಿತುಕೊಳ್ಳುವ ಮನಸ್ಸು ಬೇಕು ಅಲ್ವೇ....

Saturday, November 11, 2017

ಹೊಸದೊಂದು ಯಕ್ಷಋತುವಿನೊಂದಿಗೆ...
ಮತ್ತೊಂದು ಯಕ್ಷಋತು ಶುರುವಾಗಿದೆ.
ಮಳೆಗಾಲದಲ್ಲಿ ಅಲ್ಲಲ್ಲಿ, ಸಭಾಂಗಣಗಳಲ್ಲಿ, ಸಭೆ ಸಮಾರಂಭಗಳಲ್ಲಿ ನಡೆಯುತ್ತಿದ್ದ ಆಟಗಳನ್ನು ಇನ್ನು ಮುಂದಿನ ಪತ್ತನಾಜೆ ವರೆಗೆ ಮೇಳಗಳ ಬ್ಯಾನರುಗಳಲ್ಲಿ ಬಯಲಲ್ಲೇ ಕುಳಿತು ಆಸ್ವಾದಿಸಬಹುದು. ಮೇಳಗಳೆಲ್ಲ ಮತ್ತೆ ಎಡಿಟ್ ಆಗಿ, ಪರಿಷ್ಕೃತಗಳಾಗಿ, ರಿನೇಮ್ ಹೊಂದಿ, ಕೂಡಿಸುವಿಕೆ, ಕಳೆಯುವಿಗೆಗಳನ್ನು ದಾಟಿ ಬಂದು ಸಜ್ಜಾಗಿವೆ. ಟೆಂಟು ಮೇಳಗಳು, ಹರಿಕೆ ಮೇಳಗಳ ಚೆಂಡೆಯ ಪೆಟ್ಟಿನ ಸದ್ದು ಝೇಂಕರಿಸಲು ಶುರುವಾಗಿ ವಾರವೇ ಕಳೆಯಿತು.


ಯಾಕೋ ಈ ಬಾರಿ ಯಕ್ಷಗಾನ ಮಾಧ್ಯಮಗಳಲ್ಲಿ ವಿವಿಧ ಕಾರಣಗಳಿಗೆ ಸುದ್ದಿಯಾಗಿದೆ. ಬಯಲಾಟಗಳಿಗೆ ಇರುವ ಬೇಡಿಕೆಗಳು, ಕಲಾವಿದರ ಆಯ್ಕೆ ಗೊಂದಲಗಳು, ಪ್ರದರ್ಶನದಲ್ಲಾದ ಎಡವಟ್ಟುಗಳು, ರಂಗದಲ್ಲೇ ಪ್ರಾಣ ತ್ಯಜಿಸಿದ ಕಲಾವಿದರು, ಅಕಾಲದಲ್ಲಿ ಅಗಲಿದ ಹಿರಿಯರು...
ಹೀಗೆ ಯಕ್ಷಗಾನ ಸುದ್ದಿಗಳು ಈ ಬಾರಿ ಹೆಚ್ಚೇ ಸದ್ದು ಮಾಡಿವೆ...
ಹಳೆ ಬೇರು, ಹೊಸ ಚಿಗುರುಗಳ ಸಂಗಮದಲ್ಲಿ 2017 18ನೇ ಸಾಲಿನ ಯಕ್ಷಗಾನ ತಿರುಗಾಟ ಆರಂಭವಾಗಿದೆ.ಈಗ ಪರಿಷ್ಕೃತ ಮೊಬೈಲುಗಳು ಯಕ್ಷಪ್ರೇಮಿಗಳ ಕೈಯ್ಯಲ್ಲೂ ಇವೆ, 4ಜಿ ನೆಟ್ ವರ್ಕು, ಬಲಿಷ್ಠ ಬ್ಯಾಟರಿ ವ್ಯವಸ್ಥೆಗಳೂ ಇವೆ. ಎಲ್ಲೋ ಮೂಲೆಯಲ್ಲಿ ಆಗುವ ಆಟವೂ ಈಗ ಮೊಬೈಲುಗಳ ಮೂಲಕ ಜಗಜ್ಜಾಹೀರು. ಆಟಕ್ಕೆ ಸರಾಗವಾಗಿ ಹೋಗಲು ಅವಕಾಶವಿರುವ ಅದೃಷ್ಟಶಾಲಿಗಳು, ಎಲ್ಲಿಯೋ ಕುಳಿತು ವಾಟ್ಸಪು ಗ್ರೂಪುಗಳಲ್ಲಿ ಬರುವ ಆಟಗಳ ದೃಶ್ಯಗಳನ್ನು ಕಂಡು ಬರಿದೇ ಮರುಗುವವರು, ಲೈಕು ಕೊಟ್ಟು ಸುಮ್ಮನಾಗುವವರು, ನೋಡಿಯೂ ಮಾತನಾಡದವರು ಈಗ ಮೈಕೊಡವಿ ಎದ್ದಿದ್ದಾರೆ. ಯಾವ ಮೇಳಕ್ಕೆ ಯಾರಂತೆ, ಭಾಗವತರು ಎಲ್ಲಿಗೆ ಹೋದರಂತೆ, ಕಾಲಮಿತಿಯಾ... ಹೀಗೆಲ್ಲಾ ಚರ್ಚೆಗಳು ಶುರುವಾಗಿದೆ. ಟಿ.ವಿ.ಗಳು, ಧಾರಾವಾಹಿಗಳು, ವಾಟ್ಸಪ್ಪುಗಳು ಸಂಸ್ಕೃತಿಯನ್ನು ಕೊಲ್ಲುತ್ತಿವೆ ಎಂಬ ಬೊಬ್ಬೆ ನಡುವೆಯೂ ಯಕ್ಷಗಾನ ಮೇಳಗಳಲ್ಲಿನ ಕಲಾವಿದರ ಬದಲಾವಣೆ ಬಗ್ಗೆ ಎಷ್ಟೊಂದು ಚರ್ಚೆಗಳು ನಡೆಯುತ್ತಿವೆಯಲ್ಲ ಎಂದು ಆಶ್ಚರ್ಯ ಆಗುತ್ತಿದೆ. ಬಹುಷಹ ತಂತ್ರಜ್ಞಾನ ಎಷ್ಟೇ ಬದಲಾದರೂ ಯಕ್ಷಗಾನ ಅವನ್ನು ಬಳಸಿಕೊಂಡಿದೆ ಹೊರತು ಅದರಿಂದ ಪೆಟ್ಟು ತಿಂದಿಲ್ಲ. ಹಾಗೆ ನೋಡಲು ಹೋದರೆ ಸ್ಮಾರ್ಟ್ ಫೋನ್ ಜನಪ್ರಿಯವಾದಂತೆ ಕಲಾವಿದ, ಪ್ರೇಕ್ಷಕರ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಆಟಕ್ಕೆ ಹೋಗುವ ಆಟಪ್ರಿಯರೆಲ್ಲಾ ಗುಂಪುಗಳನ್ನು ಕಟ್ಟಿಕೊಂಡು ಒಂದಾಗುತ್ತಿದ್ದಾರೆ. ಆ ತಮಗೆ ಬೇಕಾದ ಪ್ರಸಂಗಗಳನ್ನು ಆಯ್ದು ಆಟಗಳನ್ನು ಆಡಿಸುತ್ತಿದ್ದಾರೆ, ಆಟಕ್ಕೆ ಹೋಗುವ ಯುವಕರ ಸಂಖ್ಯೆ ಜಾಸ್ತಿಯಾಗಿದೆ. ರಂಗದಲ್ಲಿ ಸರಿ ಕಾಣದ್ದನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಡುತ್ತಿದ್ದಾರೆ....
ಹಾಗಾಗಿ ಈ ಯುಗ ತಂತ್ರಜ್ಞಾನದ್ದೇ ಕಾರುಬಾರು. ಪ್ರೇಕ್ಷಕರೆಲ್ಲಾ ಫೋಟೊಗ್ರಾಫರುಗಳು, ರಂಗದಲ್ಲಿ ಕಂಡದನ್ನು ಆಗಿಂದಾಗ್ಗೆ ಸೆರೆ ಹಿಡಿದು ಆಟಕ್ಕೆ ಬಾರದವರಿಗೆ ತೋರಿಸುವ ಹಪಹಪಿಕೆ ಉಳ್ಳವರು.


ಯಕ್ಷಗಾನವೇ ಇರಲಿ, ಕ್ರಿಕೆಟ್ಟೇ ಇರಲಿ... ತಮಗೆ ಇಷ್ಟವಾದದ್ದನ್ನು ಮತ್ತೆ ನಾಲ್ಕು ಜನರಿಗೆ ಹಂಚಿ ಅಧರ ಬಗ್ಗೆ ಚರ್ಚೆ ಮಾಡುವುದು ಅದರ ಗೀಳು (ಅಭಿಮಾನ) ಅಂಟಿಸಿಕೊಂಡವರಿಗೆ ಇಷ್ಟದ ವಿಚಾರವೇ ಸರಿ. ಇದೇ ಫಾರ್ಮುಲಾ ಬಳಸಿಯೇ ಯಕ್ಷಗಾನದ ವಾಟ್ಸಪ್ ಗ್ರೂಪುಗಳು ಸಕ್ರಿಯವಾಗಿರುವುದು. ಅಷ್ಟೇ ಅಲ್ಲ, ಹೊಸ ಕಲಾವಿದರು, ಹೊಸ ಮೇಳಗಳ ಬಗ್ಗೆಯೂ ಮಾಹಿತಿ ವಿನಿಮಯ ಆಟಕ್ಕೆ ಹೋಗದವರನ್ನೂ ಹೋಗಿಸುವ ಹಾಗೆ ಮಾಡುತ್ತದೆ...

ರಾತ್ರಿ ಊಟ ಮುಗಿಸಿ, ಸೂಟೆ ಹಿಡಿದು ಕಾಡುವ ಚಳಿ ನಡುವೆ ಶಾಲು ಹೊದ್ದು ಮೈಲುಗಟ್ಟಲೆ ಆಟಕ್ಕೆ ಹೋಗುವ ದೃಶ್ಯಗಳು ಈಗ ಅಪರೂಪ. ಸಂಜೆ ಹೊತ್ತಿಗೇ ಶುರುವಾಗುವ ಆಟಕ್ಕೆ ಹೋಗುವ ಮಂದಿ ರಾತ್ರಿ 11, 12ರ ವೇಳೆಗೆ ಆಟ ಮುಗಿಸಿ ಮನೆ ತಲುಪಿ ಮಲಗಿರುತ್ತಾರೆ. ಕಾಲಮಿತಿಯ ಮಹಿಮೆ. ಆಟವೆಲ್ಲಿದೆ ಎಂದು ಚೆಂಡೆ ಪೆಟ್ಟಿನ ಸದ್ದು ಕೇಳಿ ದಿಕ್ಕು ಗುರುತಿಸಿ ಅಲೆಯಬೇಕಾದ ಪ್ರಮೇಯವಿಲ್ಲ. ವಾಟ್ಸಪು ಗ್ರೂಪುಗಳಲ್ಲಿ ಮಾಹಿತಿ ಲಭ್ಯ.
ಮುಂಜಾನೆ ಅಲರಾಂ ಇಟ್ಟು ಆಟಕ್ಕೆ ಹೋಗುವ ವರ್ಗವೇ ಬೇರೆ. ಇಷ್ಟದ ಭಾಗವತ, ಇಷ್ಟದ ಕಲಾವಿದ, ಇಷ್ಟದ ಮೇಳ, ಇಷ್ಟದ ಪ್ರಸಂಗಗಳ ಕೆಟಗರಿ ಮಾಡಿ ಬೇಕು ಬೇಕಾದ ಹಾಗೆ ಆಟಕ್ಕೆ ಹೋಗಬಲ್ಲವರು ಅದೃಷ್ಟಶಾಲಿಗಳು...ಹೋಗಲಾಗದವರು ಕೂತದಲ್ಲಿಯೇ ಆಟದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುವ ಕಾರಣ ಅವರೂ ಅದೃಷ್ಟಶಾಲಿಗಳು...ಅಲ್ವೇ...

ಈ ಋತುವಿನಲ್ಲೂ ಆಟಗಳು ವಿಜೃಂಭಿಸಲಿ, ಒಳ್ಳೆ ಕಾರಣಕ್ಕೆ ಸುದ್ದಿಯಾಗಲಿ... ನಭೂತೋ ಎಂಬಂತೆ ಮೆರೆಯಲಿ...
ಯಕ್ಷಗಾನಂ ಗೆಲ್ಗೆ.

-ಕೆಎಂ, (ಬಲ್ಲಿರೇನಯ್ಯ, ಯಕ್ಷಕೂಟ, ವಾಟ್ಸಪ್ ಬಳಗ).
Friday, November 10, 2017

ಕಾಲಮಿತಿಯ ಖುಷಿ!

 
ಅಲ್ಪಕಾಲದ ವಿರಾಮಲ್ಲೊಂದು
ಖುಷಿಯೆಂಬೋ ಪಾತರಗಿತ್ತಿ
ಏಕಾಏಕಿ ಸನಿಹ ಬಂದು
ನಕ್ಕು ಮಾತನಾಡಿ
ಯೋಗ ಕ್ಷೇಮ ಕೇಳಿ
ಸುಗಂಧ ಹರಡಿ ಕನಸು ಬಿಚ್ಚಿಟ್ಟು
ಮನಸು ಅರಳಿಸಿದ ಜಾದೂ


ಕೆಲಕಾಲ ಇಹ ಮರೆಸಿ
ಮತ್ತೆ ಬಣ್ಣಗಳ ತೋರಿ
ಶುಭ್ರ ಬೆಳಕು ಹರವಿ
ಶಾಂತತೆಯ ಪ್ರಭಾವಳಿ ಬಿಡಿಸಿ
ಇಳಿದನಿಯ ಮಾತಲ್ಲೇ ಮೈದಡವಿ
ಸಂತೈಸಿ, ಪುಟ್ಟ ಹಾರಾಟದಲ್ಲೇ
ಸಮಯವ ಕಿರಿದು ಮಾಡಿದ ಅಚ್ಚರಿ

ದೀರ್ಘ ಕದನದ ನಡುವೆ
ಚಿಕ್ಕದೊಂದು ಆಹ್ಲಾದಕತೆಯ ಮಿಂಚು
ಕೆಲಕಾಲ ಚೆಂದದ ಚಿತ್ರ
ಸ್ಫೂರ್ತಿಗೊಂದು ತಂಗಾಳಿ ಸುರಿಸಿ
ಸಾಂತ್ವನವ ಬೆರೆಸಿ
ನೋವ ಮರೆಸಿ
ಹರಸುವ ಅಲ್ಪವಿರಾಮದ ಸಾಂಗತ್ಯ


ಹೊತ್ತು ಮುಗಿದ ಮೇಲೆ
ಯಾರೂ ನಿಲ್ಲುವುದಿಲ್ಲ...
ಪಾತರಗಿತ್ತಿಯೂ ಹೊರತಲ್ಲ,
ದೂರದಿಂದ ಕರೆತಂದ ಬಸ್ಸು
ತಂಗುದಾಣ ಬಂದಾಗ ನಿರ್ಭಾವುಕವಾಗಿ
ಇಳಿಸಿ, ಮುಂದುವರಿವ ಹಾಗೆ
ಉಳಿಯುವುದು ಪಯಣದ ನೆನಪು ಮಾತ್ರ...!

ಕಾಲಮಿತಿಯ ಖುಷಿ!

 
ಅಲ್ಪಕಾಲದ ವಿರಾಮಲ್ಲೊಂದು
ಖುಷಿಯೆಂಬೋ ಪಾತರಗಿತ್ತಿ
ಏಕಾಏಕಿ ಸನಿಹ ಬಂದು
ನಕ್ಕು ಮಾತನಾಡಿ
ಯೋಗ ಕ್ಷೇಮ ಕೇಳಿ
ಸುಗಂಧ ಹರಡಿ ಕನಸು ಬಿಚ್ಚಿಟ್ಟು
ಮನಸು ಅರಳಿಸಿದ ಜಾದೂ


ಕೆಲಕಾಲ ಇಹ ಮರೆಸಿ
ಮತ್ತೆ ಬಣ್ಣಗಳ ತೋರಿ
ಶುಭ್ರ ಬೆಳಕು ಹರವಿ
ಶಾಂತತೆಯ ಪ್ರಭಾವಳಿ ಬಿಡಿಸಿ
ಇಳಿದನಿಯ ಮಾತಲ್ಲೇ ಮೈದಡವಿ
ಸಂತೈಸಿ, ಪುಟ್ಟ ಹಾರಾಟದಲ್ಲೇ
ಸಮಯವ ಕಿರಿದು ಮಾಡಿದ ಅಚ್ಚರಿ

ದೀರ್ಘ ಕದನದ ನಡುವೆ
ಚಿಕ್ಕದೊಂದು ಆಹ್ಲಾದಕತೆಯ ಮಿಂಚು
ಕೆಲಕಾಲ ಚೆಂದದ ಚಿತ್ರ
ಸ್ಫೂರ್ತಿಗೊಂದು ತಂಗಾಳಿ ಸುರಿಸಿ
ಸಾಂತ್ವನವ ಬೆರೆಸಿ
ನೋವ ಮರೆಸಿ
ಹರಸುವ ಅಲ್ಪವಿರಾಮದ ಸಾಂಗತ್ಯ


ಹೊತ್ತು ಮುಗಿದ ಮೇಲೆ
ಯಾರೂ ನಿಲ್ಲುವುದಿಲ್ಲ...
ಪಾತರಗಿತ್ತಿಯೂ ಹೊರತಲ್ಲ,
ದೂರದಿಂದ ಕರೆತಂದ ಬಸ್ಸು
ತಂಗುದಾಣ ಬಂದಾಗ ನಿರ್ಭಾವುಕವಾಗಿ
ಇಳಿಸಿ, ಮುಂದುವರಿವ ಹಾಗೆ
ಉಳಿಯುವುದು ಪಯಣದ ನೆನಪು ಮಾತ್ರ...!

Sunday, November 5, 2017

ಅಂತರ್ ದೃಷ್ಟಿಗೆ ಖಾಸಗಿ ಮೊಗಸಾಲೆ...
ನಾವು ಮಾತ್ರ ಎತ್ತರದಲ್ಲಿದ್ದು ಜಗತ್ತು ಪಕ್ಷಿನೋಟಕ್ಕೆ ಗೋಚರವಾಗುವ ಜಾಗವಲ್ವ ಬಾಲ್ಕನಿ?
ಎಲ್ಲಿಯೂ ಕಾಣಲಾಗದ ದೃಷ್ಟಿಕೋನ, ಆಯಾಮಕ್ಕೆೊಂದು ಎತ್ತರದ ವೇದಿಕೆ ಮತ್ತೊಂದು ಪುಟ್ಟದಾದ ಖಾಸಗಿ ಕಾರ್ನರ್ ಕೂಡಾ ಹೌದಲ್ವ?


ನಾವು ಚಿಕ್ಕದಾಗಿ ಜಗತ್ತಿಗೆ ಕಂಡರೂ ಜಗತ್ತು ನಮಗೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರದ ಹಾಗೆ ಖುಲ್ಲಂ ಖುಲ್ಲಾ ಕಾಣಿಸೋದು.
ವಠಾರದುದ್ದಕ್ಕೂ ಹಾದು ಹೋಗಿರುವ ರಸ್ತೆ, ಅವರವಸರವಾಗಿ ಹಾದು ಹೋಗುವ ಮಂದಿ, ಎಲ್ಲಿಂದಲೋ ಬಂದು ಇನ್ನೆಲ್ಲಿಗೋ ಸಾಗುವ ನಾಗರಿಕರು... ಕಂಠ ಶೋಷಣೆ ಮಾಡಿ ಗಾಡಿಗಳಲ್ಲಿ ತರಕಾರಿಗಳು, ಕನಕಾಂಬರ, ಮಲ್ಲಿಗೆ, ಮತ್ತಿನ್ನೇನ್ನೇನೋ ಮಾರುತ್ತಾ ಬರುವ ಚತುರ ವ್ಯಾಪಾರಿಗಳು...
ಹಾಗೆ ನೋಡುವುದಕ್ಕೆ ಹೋದರೆ ಬಾಲ್ಕನಿಯ ನೋಟ ಟಿ.ವಿ.ಪರದೆಯಲ್ಲಿ ಕಂಡ ಹಾಗೆ. ನೀವೆಷ್ಟೇ ಇಣುಕಿದರೂ ಪರದೆಯ ಹಿಂದಿನದ್ದು, ಅಕ್ಕಪಕ್ಕದ್ದು ಕಾಣಿಸುವುದಿಲ್ಲ. ಬಾಲ್ಕನಿಯಲ್ಲೂ ಹಾಗೆ ಅದೊಂದು ಫ್ರೇಮಿನ ಹಾಗೆ. ಆ ಚೌಕಟ್ಟು ಮೀರಿ ನೋಡುವುದಕ್ಕೆ ಹೋದರೆ ಬಾಲ್ಕನಿಯಿಂದ ಉರುಳಿ ಧರಾಶಾಹಿಗಳಾಗುವ ಅಪಾಯವಿದೆ.


ಎಡದ ಮೂಲೆಯಲ್ಲಿ ಓ ಅಷ್ಟು ದೂರ. ಬಲದ ಮೂಲೆಯಲ್ಲಿ ಕಣ್ಣು ಎಟಕುವಷ್ಟು ದೂರ ಬಿಟ್ಟರೆ ಅದರಾಚೆಗೆ ಮಸುಕು ಮಸುಕು ಅಥವಾ ಅಲ್ಲಿಗೇ ಮುಕ್ತಾಯವಾದ ಹಾಗೆ ದೃಷ್ಟಿಕೋನ. ಅತ್ತಿಂದಿತ್ತ ಸಾಗುವವರು ಈ ಚೌಕಟ್ಟಿನ ಅಂಚಿನ ವರೆಗೆ ಮಾತ್ರ ಕಾಣಿಸುತ್ತಾರೆ. ಅದರಾಚೆಗೆ ಅವರೆತ್ತ ಹೋಗುತ್ತಾರೆ ಎಂಬ ಬಗ್ಗೆ ಕುತೂಹಲ ಇರಬಹುದಷ್ಟೇ ಹೊರತು ಅವರನ್ನು ಅನುಸರಿಸಿ ದೃಷ್ಟಿ ಹೋಗದು. ಇಂತಹ ಸೀಮಿತಗಳು ದೇವರು ಒದಗಿಸಿದ ಸೌಕರ್ಯವೂ ಇರಬಹುದು. ಪ್ರತಿ ವ್ಯಕ್ತಿತ್ವವನ್ನು ಹಿಂಬಾಲಿಸುತ್ತಲೇ, ಪ್ರತಿ ಸಮಸ್ಯೆಯನ್ನು ಅನುಸರಿಸುತ್ತಲೇ ಹೋಗಲು ಮಾನವ ಮೆದಳುಗೆ ಬಹುಷಹ ಧಾರಣಾ ಶಕ್ತಿ ಸಾಲದು. ಅದಕ್ಕೆ ಚೌಕಟ್ಟು ಮುಗಿಯುವ ತನಕವಷ್ಟೇ ನಮ್ಮ ಅರಿವಿಗೆ ಅವರು ಬರುತ್ತಾರೆ. ಅದರಾಚಿನದ್ದು ಮತ್ತೆ ಚಿಂತನೆಗೆ ಬಿಟ್ಟದ್ದು ಅಷ್ಟೇ. ಹೋಗುವವರೆಲ್ಲರ ಬಗ್ಗೆ ಯೋಚಿಸುತ್ತಾ ಕೂತರೆ, ಚಿಂತಿಸಹೊರಟರೆ ಒಂದೊಂದು ನಡಿಗೆಯ ಹಿಂದಿನ ಕತೆಗಳನ್ನು, ಒಗಟುಗಳನ್ನು ಬಿಡಿಸುತ್ತಾ ಕೂರಲು ಆಯುಷ್ಯ ಸಾಕಾಗುವುದೇ...


ಮೇಲೆ ನೋಡಿದರೆ ಆಕಾಶ. ಹಗಲು ಪ್ರಖರ ಸೂರ್ಯನ ಶಾಖ ಚುಚ್ಚಿದರೆ, ರಾತ್ರಿ ಮೂಡುವ ಚಂದ್ರಮನ ತಂಪು ಸಾಲದೆನಿಸುತ್ತದೆ. ಫೋಟೊ ತೆಗೆಯಹೊರಟರೆ ಸಾವಿರ ಸಾವಿರ ಕಂಪೋಸಿಶನ್ ಗಳಿಗೆ ಆಹಾರ ಒದಗಿಸುತ್ತದೆ ಆಕಾಶ. ಚದುರಿದ ಮೋಡ, ಒಗ್ಗೂಟಿದ ಮೋಡ, ವಿ ಆಕಾರದಲ್ಲಿ ಹಾರುವ ಪಕ್ಷಿಗಳು, ಹೆಸರೇ ಗೊತ್ತಿಲ್ಲದೆ ರಂಗೋಲಿ ಬಿಡಿಸುವ ರಾತ್ರಿ ಚುಕ್ಕಿಗಳು, ದೂರದಲ್ಲಿ ಮೊರೆಯುವ ಸಮುದ್ರದ ಬದಿಯಿಂದ ಹಾಗೆಯೇ ಧಾವಿಸಿ ಬರುವ ಮಳೆಯ ಪದರ ಪದರವಾದ ನೇರ ಪ್ರಸಾರ...


ಪಕ್ಕದ ಮನೆಯವರ ಸಂಪಿಗೆ ಮರದ ತುದಿಯಿಂದ ದಾಟಿ ಬರುವ ಘಮಘಮ ನಾಸಿಕಕ್ಕೆ ತಾಕಿದಾಗ ಉಂಟಾಗುವ ತಾಜಾ ಭಾವ, ನೈಜತೆಗೊಂದು ಸಾಕ್ಷಿ...
ಅಷ್ಟೊಂದು ಗದ್ದಲ ಸುತ್ತಮುತ್ತವಿದ್ದರೂ ಬಾಲ್ಕನಿ ಕಟ್ಟಿಕೊಡುವ ಏಕಾಂತದ ಸುಖಕ್ಕೆ ಅರೆನಿಮಿಷವಾದರೂ ಕಟ್ಟಿಟ್ಟ ಚೌಕಟ್ಟಿನ ದೃಶ್ಯಾವಳಿಗಳಿಗೆ, ಅಲ್ಲೇ ಹುಟ್ಟಿ ಅಲ್ಲೆ ಸತ್ತ ಕನಸುಗಳಿಗೆ, ಮಳೆ ಸಿಂಚನಕ್ಕೆ ಒದ್ದೆಯಾದ ಮುಖದ ತಂಪಿಗೆ, ಅರ್ಧರ್ಧ ಬರೆದಿಟ್ಟ ಕವನಗಳಿಗೆ, ದಿಗಂತವ ನೋಡುತ್ತಾ ಬಿಟ್ಟ ನಿಟ್ಟುಸಿರುಗಳಿಗೆ, ಮಧ್ಯಾಹ್ನ ಹೋಗುವ ವಿಮಾನಕ್ಕೆ ಬರಿದೇ ಮಾಡಿದ ಟಾಟಾಗಳಿಗೆ ಬೆಲೆ ಕಟ್ಟಲುಂಟೇ... ಅಥವಾ ಟೆಂಪರರಿ ಫೈಲ್ ಗಳ ರೂಪದಲ್ಲಿ ಅಲ್ಲಿಂದಲ್ಲಿಗೇ ಡಿಲೀಟ್ ಆಗಿ ಹೋಗುವ ನನಸುಗಳ ಸರಮಾಲೆಯೇ... ಬಾಲ್ಕನಿ ದಾಟಿ ಆಚೆ ಹೋದಾಗ ಕಾಣುವ ಹೊಸ ಲೋಕಕ್ಕೊಂದು ಕನಸಿನ ಚಿತ್ತಾರದ ನೆನಪುಗಳ ಗಾಢ ಅನುಭೂತಿಯ ನೀಡುವ ಪುಟ್ಟ ಸೌಧದ ಹಾಗೆ.

Saturday, November 4, 2017

ಬಲ್ಲಿರೇನಯ್ಯ...? ಮೂರು ವರ್ಷ ಭರ್ತಿಯಾಯಿತು!

ನಮಸ್ತೆ....

ಹೀಗೊಂದು ಸ್ವಗತ...

ಹೌದು... ಬಲ್ಲಿರೇನಯ್ಯ ಯಕ್ಷಕೂಟ ಹೆಸರಿನ ಈ ವಾಟ್ಸಪ್ ಗ್ರೂಪು ಶುರುವಾಗಿ ಈ ನವೆಂಬರ್ 7ನೇ ತಾರೀಕಿಗೆ ಮೂರು ವರ್ಷಗಳು ಭರ್ತಿಯಾದವು. 2014ರಲ್ಲಿ ಆಟಕ್ಕೆ ಹೋಗುವ ಸಮಾನಾಸಕ್ತ ಗೆಳೆಯರನ್ನು ಒಂದೇ ಕ್ಲಿಕ್ಕಿನಲ್ಲಿ ಸಂಪರ್ಕಿಸುವ ಉದ್ದೇಶದಿಂದ ಶುರು ಮಾಡಿದ್ದು. ಇಂದು ಬಹುತೇಕ ದಿನಗಳಲ್ಲಿ 256ಕ್ಕೆ 256 ಸದಸ್ಯರ ಭರ್ತಿ ಕೋರಂ ಮೂಲಕ ಯಕ್ಷಗಾನದ ವಿಚಾರಕ್ಕೆ ಮಾತ್ರ ಸೀಮಿತವಾಗಿರುವ ಮೂಲಕ ಜವಾಬ್ದಾರಿಯುತವಾಗಿರುವ ಯಕ್ಷಪ್ರೇಮಿಗಳ ಬಳಗವೆಂಬ ಸಾರ್ಥಕತೆ ಹೊಂದಿದೆ. ಯಕ್ಷಗಾನದ ಮಾಹಿತಿ ಪ್ರಸಾರ, ಹಂಚಿಕೊಳ್ಳುವಿಕೆ ಎಂಬುದು ನಮ್ಮ ಈ ಗ್ರೂಪಿನ ಏಕೈಕ ಅಜೆಂಡಾ. ಅದಕ್ಕೆ ಪೂರಕವಾಗಿದೆ ಗ್ರೂಪು ಎಂಬುದು ನನ್ನ ಅನಿಸಿಕೆ.

ಯಕ್ಷಗಾನಕ್ಕೊಂದು ಗ್ರೂಪು ಮಾಡುವುದು, ಅದಕ್ಕೆ ಒಂದಷ್ಟು ಸದಸ್ಯರನ್ನು ಸೇರಿಸುವುದು ಇಂದಿನ ದಿನಗಳಲ್ಲಿ ದೊಡ್ಡ ಸಾಧನೆಯೋ, ಅಪರೂಪದ ವಿಚಾರವೋ, ಗ್ರೂಪಿಗೆ ಮೂರು ವರ್ಷ ತುಂಬುವುದು ಇವೆಲ್ಲ ಐತಿಹಾಸಿಕ ಸಾಧನೆಯೋ ಅಲ್ಲವೇ ಅಲ್ಲ. ಆದರೆ,
ಮೂರು ವರ್ಷಗಳ ಹಿಂದೆ ವಿನಾ ಕಾರಣ ಹೀಗೊಂದು ಗ್ರೂಪನ್ನು ಯಾವುದೇ ಜವಾಬ್ದಾರಿಗಳಿಲ್ಲದೆ ಶುರು ಮಾಡುವಾಗ ವಾಟ್ಸಪ್ಪು ಎಂಬ ಈ ಮಾಧ್ಯಮ ಈಗಿನ ಮಟ್ಟಕ್ಕೆ ಬೆಳೆದಿರಲಿಲ್ಲ. ಬಹುಶಹ 4ಜಿ ಯುಗ ಆಗ ಆರಂಭವಾಗಿರಲಿಲ್ಲ. ಬಹುತೇಕರ ಕೈಲಿ ವಾಟ್ಸಪ್ಪು ಇರಲೂ ಇಲ್ಲ. ಯಕ್ಷಗಾನಕ್ಕೆಂದು ಆಗ ಮೀಸಲಾಗಿದ್ದ ಗ್ರೂಪುಗಳು ಬಹುಷ ಎರಡೋ ಮೂರೋ ಅಂತ ನನ್ನ ನೆನಪು.
ಹಾಗಾಗಿ ನಮ್ಮ ಈ ಗ್ರೂಪು ಶುರುವಾದಾಗ ಅದಕ್ಕೆ ತುಂಬ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಇಷ್ಟು ಮಂದಿಯನ್ನು ಸೇರಿಸಬೇಕೆಂಬ ಉದ್ದೇಶವೇ ಇಲ್ಲದಿದ್ದರೂ ಸ್ನೇಹಿತರು, ಸಮಾನನಮಸ್ಕರ ಶಿಫಾರಸ್ಸಿನಿಂದಲೇ ನೋಡ ನೋಡುತ್ತಿದ್ದಂತೆ ಗ್ರೂಪು ತುಂಬಿ ಹೋಯಿತು. ವಾಟ್ಸಪ್ ಬಳಗದ ಗರಿಷ್ಠ ಸದಸ್ಯರ ಸಂಖ್ಯೆ 100ಕ್ಕೆ ಸೀಮಿತವಾಗಿದ್ದಾಗ ಅನಿವಾರ್ಯವಾಗಿ ಇನ್ನೊಂದು ಗುಂಪು ಮಾಡಬೇಕಾಗಿ ಬಂತು. ನಡುವೆಯೊಮ್ಮೆ ಹೈಕ್ ಮೆಸೆಂಜರ್ ಪ್ರಯೋಗ ನಡೆಸಿದರೂ ಅದು ಯಶಸ್ವಿಯಾಗಲಿಲ್ಲ. ವಾಟ್ಸಪ್ ಸದಸ್ಯರ ಸಂಖ್ಯೆಯನ್ನು 256ಕ್ಕೆ ಏರಿಸಿದಾಗ ನಮ್ಮ ಗುಂಪಿಗೂ ಹೆಚ್ಚು ಬಲ ಬಂತು.

ತುಂಬ ಖುಷಿಯ ಸಂಗತಿ ಎಂದರೆ ಗುಂಪಿನ ಆರಂಭದ ದಿನಗಳಲ್ಲಿ ಜೊತೆಗಿರುವ ತುಂಬಾ ಸ್ನೇಹಿತರೂ ಈಗಲೂ ಜೊತೆಗಿದ್ದಾರೆ. ಎಷ್ಟೋ ಮಂದಿಯ ಮುಖ ಪರಿಚಯ, ಮಾತನಾಡಿ ಗುರ್ತವೂ ಇಲ್ಲ. ಆದರೂ ಯಕ್ಷಗಾನದ ಕಾರಣಕ್ಕೆ ಅವರಿಲ್ಲಿ ಆಪ್ತರಾಗಿದ್ದಾರೆ. ಯಾವ ರೀತಿ ತಾಂಬೂಲ ಮೆಲ್ಲುವವರು ವಿನಾ ಕಾರಣ ಆಪ್ತರಾಗುತ್ತಾರೋ ಹಾಗೆಯೇ ಯಕ್ಷಗಾನದ ಹುಚ್ಚು ನಮ್ಮನ್ನಿಲ್ಲಿ ಬಂಧಿಸಿದೆ.
ನನಗಿನ್ನೂ ನೆನಪಿದೆ. ಒಮ್ಮೆ ಕದ್ರಿಯಲ್ಲಿ ಆಟವೊಂದರಲ್ಲಿ ಸಿಕ್ಕಿದ ಕರ್ಣಾಟಕ ಬ್ಯಾಂಕಿನ ಉದ್ಯೋಗಿ ಶ್ರೀ ಶ್ರೀಕಾಂತ ರಾವ್ ಆಟದ ಬಗ್ಗೆ ನನ್ನಲ್ಲಿ ಮಾಹಿತಿ ಕೇಳಿದರು. ನಮ್ಮ ಗ್ರೂಪಿನ ಬಗ್ಗೆ ತಿಳಿಸಿದೆ, ಆಸಕ್ತಿ ತೋರಿದರು. ಸೇರಿಸಿದೆ, ನನಗವರ ಪರಿಚಯವೇ ಇಲ್ಲ. ಅವರು ಇಂದಿಗೂ ಬಳಗದಲ್ಲಿದ್ದಾರೆ. ಇಂತಹ ನೂರಾರು ಮಂದಿ ಇದ್ದಾರೆ ಇಂದು ನಮ್ಮ ಜೊತೆ. ಕೆಲವರು ನಿಶ್ಯಬ್ದರಾಗಿ, ಹಲವರು ಸಕ್ರಿಯರಾಗಿ. ಸಹಜವಾಗಿ ಮಂಗಳೂರಿಗರೇ ಇಲ್ಲಿ ಜಾಸ್ತಿ. ಹಾಗಂತ ಕುಂದಾಪುರ, ಉಡುಪಿ, ಕಾಸರಗೋಡು, ಅಮೆರಿಕಾ, ಅಬುದಾಭಿ, ಕೊಡಗು, ಮುಂಬೈ, ಚೆನ್ನೈ, ತುಮಕೂರು, ಬೆಂಗಳೂರು... ಹೀಗೆ ಪರವೂರಲ್ಲಿ ನೆಲೆಸಿರುವ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರವರ ಮನೆಯಲ್ಲೇ ಕುಳಿತು ಇಲ್ಲಿನ ಆಟಗಳ ತುಣುಕುಗಳನ್ನು ಕಂಡು ಪ್ರೋತ್ಸಾಹಿಸುತ್ತಾರೆ. ತೆಂಕು, ಬಡಗು ಎರಡೂ ತಿಟ್ಟುಗಳ ಆಸಕ್ತರಿದ್ದಾರೆ. ಮಹಿಳೆಯರೂ ಇದ್ದಾರೆ. ನನ್ನ ಹೆಚ್ಚಿನ ಸಂಪರ್ಕದ ಮಾಧ್ಯಮ ಮಿತ್ರರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವೃತ್ತಿಪರ ಹಾಗೂ ಹಿರಿಯ ಕಲಾವಿದರಾದ ಸತ್ಯನಾರಾಯಣ ಪುಣ್ಚಿತ್ತಾಯರು, ವಾದಿರಾಜ ಕಲ್ಲೂರಾಯರು, ನಾ.ಕಾರಂತ ಪೆರಾಜೆ ಅವರು, ದುರ್ಗಾಪರಮೇಶ್ವರಿ ಕುಕ್ಕಿಲ ಅವರು, ಮುರಳಿಕೃಷ್ಣ ತೆಂಕಬೈಲು ಅವರು, ಭವ್ಯಶ್ರೀ ಕುಲ್ಕುಂದ ಮತ್ತಿತರರು ನಮ್ಮ ನಡುವೆ ಇದ್ದಾರೆ. ಹಿರಿಯ ಸಾಹಿತಿ
ಮಾತ್ರವಲ್ಲ ಸದಸ್ಯರ ಪೈಕಿ ಹವ್ಯಾಸಿಗಳು ತುಂಬಾ ಮಂದಿ ಇದ್ದಾರೆ. ಆಗೊಮ್ಮೆ ಈಗೊಮ್ಮೆ ಅವರ ಪ್ರತಿಭೆ ಬೆಳಕಿಗೆ ಬರುತ್ತದೆ.

ಅಡ್ಮಿನ್ ಗ್ರೂಪಿಗೆ ಸದಸ್ಯರನ್ನು ಸೇರಿಸುತ್ತಾನೆ ಅಷ್ಟೆ. ಅದನ್ನು ಚೆಂದದಿಂದ, ಒಪ್ಪ ಓರಣದಿಂದ ಕರೆದೊಯ್ಯುವುದು ಸದಸ್ಯರು. ಬೆಳಗ್ಗೆದ್ದ ತಕ್ಷಣ ಮಾಧ್ಯಮ ವರದಿಗಳನ್ನು ಅಚ್ಚುಕಟ್ಟಾಗಿ ಹಂಚಿಕೊಳ್ಳುವ ಬೆಂಗಳೂರಿ ಜಯ ರೈ ಅವರು, ಎಲ್ಲಿಯೇ ಆಟಕ್ಕೆ ಹೋದರೂ ಚೆನ್ನಾಗಿ ವಿವರ ಸಹಿತ ಆಡಿಯೋ ಹಂಚಿಕೊಳ್ಳುವ ಹಿರಿಯರಾದ ಸತೀಶ್ ಮಂಜೇಶ್ವರರು, ಅಕ್ಷಯಕೃಷ್ಣ, ಆನೆಕಲ್ಲು ಗಣೇಶ ಪ್ರಸಾದ್, ಇತರ ಮಾಹಿತಿ ಹಂಚಿಕೊಳ್ಳುವ ಮಿಥುನ್ ಉಡುಪರು, ಮಚ್ಚಿನ, ಕೃಷ್ಣ ಶರ್ಮ, ರವಿ ಮಾಸ್ಟರ್ ಕೊಡಗು, ಕರುಣಾಕರ ಬಳ್ಕೂರು, ಸಂದೇಶ್, ನೆಕ್ಕರಮೂಲೆ, ರಘು ಮುಳಿಯ, ಶಶಿಧರ, ರವೀಶ್, ಶಂಕರ್, ಕೃಷ್ಣಪ್ರಮೋದ, ಪ್ರಕಾಶ್, ಈಶ್ವರಚಂದ್ರ, ಬೆಂಗಳೂರಿನಲ್ಲಿರುವ ಹಲವು ಗೆಳೆಯರ ಸಹಿತ ಹಲವು ಮಂದಿ ಗ್ರೂಪನ್ನು ಬೆಳೆಸಿದ್ದಾರೆ (ಕೆಲವರ ಹೆಸರು ಬಿಟ್ಟು ಹೋಗಿರಬಹುದು... ಕ್ಷಮಿಸಿ, ನೆನಪಿಗೆ ಬಂದ ಹೆಸರುಗಳನ್ನಷ್ಟೇ ಉಲ್ಲೇಖಿಸಿದ್ದೇನೆ).

ಬೇರೆ ಯಕ್ಷಗಾನ ಗ್ರೂಪುಗಳ ಅಡ್ಮಿನ್ ಗಳಾಗಿರುವ ಸತೀಶ್ ಮಂಜೇಶ್ವರ, ಲಕ್ಷ್ಮಿ ಮಚ್ಚಿನ, ರವೀಶ್ ಉಪ್ಪಿನಂಗಡಿ, ಕಲಾಪೋಷಕರಾದ ಡಾ.ಪದ್ಮನಾಭ ಕಾಮತ್ ಸರ್...ಸೇರಿದಂತೆ ಹೀಗೆ ಸೂಕ್ಷ್ಮವಾಗಿ ಗ್ರೂಪನ್ನು ಗಮನಿಸಿ, ಪ್ರೋತ್ಸಾಹಿಸುವ ಹಲವು ಮಂದಿ ಇಲ್ಲಿದ್ದಾರೆ.

ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಹಂಚಿಕೊಳ್ಳುವ ಹರೀಶ ಮಾಂಬಾಡಿ, ಹರೀಶ್ ಕುಲ್ಕುಂದ, ಜಿತೇಂದ್ರ ಕುಂದೇಶ್ವರ, ಸೌಮ್ಯಶ್ರೀ ಮಾರ್ನಾಡು, ಕೋಡಿಬೆಟ್ಟು ರಾಜಲಕ್ಷ್ಮೀ ಸೇರಿದಂತೆ ಹತ್ತಾರು ಮಂದಿ ಗ್ರೂಪಿಗೆ ಬೌದ್ಧಿಕ ಗಾಂಭೀರ್ಯತೆ ತಂದುಕೊಡುತ್ತಾರೆ.

ಇನ್ನು ರಾತ್ರಿಯ ಆಟವನ್ನು ಅಲ್ಲಿಂದಲೇ ಲೈವ್ ನೀಡುವುದರಲ್ಲಿ ನಮ್ಮ ಗ್ರೂಪು ಸದಾ ಮುಂದೆ ಇದೆ ಎಂಬುದು ಖುಷಿಯ ವಿಚಾರ. ಜೊತೆಗೆ ಗ್ರೂಪಿನ ನಿಯಮವನ್ನು ಎಲ್ಲರೂ ಗೌರವಿಸುತ್ತಾರೆ ಎಂಬುದು ಕೂಡಾ....ಯಕ್ಷಗಾನದ ಕುರಿತು ಯಾವುದೇ ಹೊಸ ಸುದ್ದಿ ಇದ್ದರೆ ತಕ್ಷಣ ನಾವದನ್ನು ಗುಂಪಿನಲ್ಲಿ ಹಾಕಲು ಪ್ರಯತ್ನಿಸುದ್ದೇವೆ. ಯಾವುದೇ ಸಂದರ್ಭ ವದಂತಿಗಳು ಅಥವಾ ಕಪೋಲಕಲ್ಪಿತ ಸುದ್ದಿಗಳಿಗೆ ಇಲ್ಲಿ ಅವಕಾಶವಿಲ್ಲ. ಯಾವುದೇ ಕಲಾವಿದರು, ಮೇಳಗಳು, ತಿಟ್ಟುಗಳು, ಕಲಾಪೋಷಕರ ವೈಯಕ್ತಿಕ ನಿಂದನೆಗಳಿಗೂ ಇಲ್ಲಿ ಅವಕಾಶವಿಲ್ಲ.

ಅವರವ ಕೆಲಸ, ಪರಿಸ್ಥಿತಿಗಳ ಕಾರಣದಿಂದ ನಾನೂ ಸೇರಿದಂತೆ ಈ ಗ್ರೂಪಿನಲ್ಲಿರುವ ಹಲವರಿಗೆ ಯಕ್ಷಗಾನ ಇಷ್ಟವಾದರೂ ಬಯಲಾಟಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭ ಆಟ ನಡೆಯುವ ಮಾಹಿತಿ, ನಡೆದ ಆಟಗಳ ಮಾಹಿತಿ ಹಾಗೂ ಆ ಕುರಿತ ಚರ್ಚೆಗಳು, ಹೊಸ ಬೆಳವಣಿಗೆಗಳು, ಕಲಾವಿದರ ಬದಲಾವಣೆ ಇತ್ಯಾದಿ ಮಾಹಿತಿಗಳ ವಿನಿಯಮ ಒಂದು ಹೋಮ್ಲಿ ಫೀಲ್ ಕೊಡುತ್ತದೆ ಎಂಬುದು ನನ್ನ ಅನಿಸಿದೆ.

ವೈಯಕ್ತಿಕವಾಗಿ ನನಗೆ ಈ ಗ್ರೂಪಿನಿಂದ ಎಷ್ಟೋ ಮಂದಿ ಪರಿಚಯವಾಗಿದ್ದಾರೆ. ಎಷ್ಟೋ ಮೇಳಗಳ ಕಲಾವಿದರ ಕುರಿತು ಮಾಹಿತಿ ಸಿಕ್ಕಿದೆ. ಹಾಗಾಗಿ ವ್ಯವಸ್ಥಿತವಾಗಿ ಯಕ್ಷಗಾನವನ್ನು ತಿಳಿದುಕೊಳ್ಳಲು ಸಹಾಯವಾಗಿದೆ... ನಿಮಗೂ ಪ್ರಯೋಜನವಾಗಿರಬಹುದು.


ಏನೇ ಇರಲಿ. ಬದಲಾದ ಕಾಲಘಟ್ಟ, ತಂತ್ರಜ್ಞಾನಕ್ಕೆ ಯಕ್ಷಗಾನವೂ ತೆರೆದುಕೊಂಡಿದೆ. ಜೊತೆಗೆ ವಾಟ್ಸಪ್ಪಿನಂತಹ ಗುಂಪು ಅದರ ಉಳಿವಿಗೆ ದೊಡ್ಡದೊಂದು ಕೊಡುಗೆ ತನ್ನದೇ ರೀತಿಯಲ್ಲಿ ಕೊಡುತ್ತಿರುವುದು ಸತ್ಯ. ವಾಟ್ಸಪ್ಪು ಗುಂಪುಗಳೆಂದರೆ ಅಲರ್ಜಿಯಾಗುವಷ್ಟು ಮಟ್ಟಿಗೆ ಇಂದು ವ್ಯಾಪಿಸಿದ್ದು ಸತ್ಯ. ಆದರೆ, ವಿಷಯನಿಷ್ಠವಾಗಿದ್ದರೆ ಅದು ಯಾರಿಗೂ ಹೊರೆ ಎನ್ನಿಸುವುದಿಲ್ಲ ಎಂಬುದನ್ನು ಮೂರು ವರ್ಷ ತುಂಬಿರುವ ನಮ್ಮ ಈ ಬಳಗ ಸಾಬೀತುಪಡಿಸಿದೆ ಎಂದು ನಾನು ವಿನಮ್ರತೆಯಿಂದ ಅಂದುಕೊಳ್ಳುತ್ತೇನೆ.


(ಲೇಖನದಲ್ಲಿ ಸಕ್ರಿಯ ಸದಸ್ಯರ ಹೆಸರುಗಳನ್ನು ಬಳಸುವಾಗ ಕಣ್ತಪ್ಪಿನಿಂದ ಹೆಸರುಗಳು ಬಿಟ್ಟು ಹೋಗಿರುವ ಸಾಧ್ಯತೆ ಇದೆ. ದಯವಿಟ್ಟು ಅನ್ಯಥಾ ಭಾವಿಸಬಾರದು. ಗುಂಪು ಬೆಳೆಯುವಲ್ಲಿ ಪ್ರತಿ ಸದಸ್ಯರ ಪಾತ್ರವೂ ಬಲುದೊಡ್ಡದು. ಅದಕ್ಕೆ ಕೃತಜ್ಞನಾಗಿದ್ದೇನೆ).


ಈ ಸುದೀರ್ಘ ಬರಹ ಓದಿದ ಗೌರವಾನ್ವಿತ ಸದಸ್ಯರು ದಯವಿಟ್ಟು ಗುಂಪಿನಲ್ಲಿ ನಿಮ್ಮ ಅನುಭವವನ್ನು ಹಂಚಿಕೊಳ್ಳಬೇಕೆಂದು ವಿನಂತಿಸುತ್ತೇನೆ. ದಯವಿಟ್ಟು ಗುಂಪಿನ ನಿಮಯಪಾಲನೆ ಹಾಗೂ ಕಲಾ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ನಿಮ್ಮ ಸಹಕಾರಿ ಇನ್ನೂ ಮುಂದೆಯೂ ಇರಲಿ.
ಯಕ್ಷಗಾನಂ ಗೆಲ್ಗೆ

-ಕೆಎಂ (ಅಡ್ಮಿನ್)