Sunday, January 1, 2017

ಕನ್ನಡಪ್ರಭದ ಪುಟಗಳಲ್ಲಿ....2016ರ ಹಿನ್ನೋಟ.ಹೊಸ ವರ್ಷವೆಂಬ ಬದಲಾವಣೆಯ ಪರ್ವ!

ಮರಕುಟಿಕ ಪಕ್ಷಿಗೆ ಮರವನ್ನು ಕುಕ್ಕಿ ಕುಕ್ಕಿ ತೂತು ಕೊರೆದು ಆಹಾರ ಹುಡುಕಿ ತಿನ್ನೋದೇ ಕಾಯಕ. ಆದರೆ, ದಿನವಿಡೀ ಮರವನ್ನು ಕುಟುಕಿ ಕೊಕ್ಕುಗಳು ನೋವಾದಾಗ ರಾತ್ರಿ ಮಲಗುವ ಮುನ್ನ ಮರಕುಟಿಕ ಅಂದುಕೊಳ್ಳುತ್ತದಂತೆ, ನಾಳೆಯಿಂದ ಈ ಕಸುಬು ಸಾಕು, ಮತ್ತೆ ಬೇರೆ ಕೆಲಸ ನೋಡಬೇಕು, ಕಷ್ಟವಾಗುತ್ತದೆ ಅಂತ.... ಆದರೆ ರಾತ್ರಿ ಮಲಗಿ ಬೆಳಗಾಗಿ ಏಳಲು ಪುರುಸೊತ್ತಿಲ್ಲ, ಮರ ಕುಟಿಕ ಮತ್ಯಾವುದೇ ಮರದ ತುದಿಯಲ್ಲಿ ಪ್ರತ್ಯಕ್ಷವಾಗಿರುತ್ತದೆ ಟಕಾ ಟಕಾ ಸದ್ದು ಮಾಡುತ್ತಾ ಕುಟುಕುತ್ತಾ ಇರುತ್ತದೆ...

ಕೈಗೊಂಡ ನಿರ್ಧಾರಗಳನ್ನು ಜಾರಿಗೆ ತರುವಲ್ಲಿ ಕೆಲವೊಮ್ಮೆ ನಾವೂ ಹೀಗೆಯೇ ಮರಕುಟಿಕ ಪಕ್ಷಿಯಂತಾಗುತ್ತೇವೆಯಾ...ಸ್ವಲ್ಪ ಯೋಚಿಸಿ...
ಪ್ರತಿ 365 ದಿನಗಳ ಬಳಿಕ ಕ್ಯಾಲೆಂಡರ್ ಬದಲಾಗುತ್ತದೆ, ಮತ್ತೆ ಹೊಸ ವರ್ಷ ಬರುತ್ತದೆ...ಕಾಗದದಲ್ಲಿ, ಮೊಬೈಲಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಹೊಸ ವರ್ಷದ ಶುಭಾಶಯಗಳ ರಾಶಿ, ರಾಶಿ, ಬದಲಾಗುವ ಮಾತುಗಳು, ಬದಲಾಗಬೇಕೆಂಬ ತುಡಿತಗಳು, ಹೊಸದೇನಾದರೂ ಸಾಧನೆಯಾಗಬೇಕೆಂಬ ಹಂಬಲ... ನಾನೂ ಬದಲಾಗುತ್ತೇನೆಂಬ ದೃಢ ನಿರ್ಧಾರ. ಹೊಸ ವರ್ಷದಲ್ಲಾದರೂ ಹೊಸತನ್ನು ಮಾಡಿ ತೋರಿಸುತ್ತೇನೆಂಬ ಛಲಭರಿತ ಆವೇಶ. ಹೌದು ಜನವರಿ ಬಂದು ಫೆಬ್ರವರಿ ಮಾಗುವ ಹೊತ್ತಿಗೆ ನಿರ್ಧಾರದ ಬಲ ಕುಂದುವುದು ಮಾತ್ರವಲ್ಲ, ಅಂದುಕೊಂಡದ್ದು ಜಾರಿಯಾಗುವುದು ಅಷ್ಟು ಸುಲಭವಲ್ಲ ಎಂಬ ಸತ್ಯವೂ ಛಲವಾದಿಗಳಿಗೆ ತಿಳಿದಿರುತ್ತದೆ. ಮತ್ತದೇ ಮಾಸಗಳು, ಬದುಕು, ಮತ್ತೊಂದು ಡಿಸೆಂಬರ್ ತನಕ. 


ಹೌದಲ್ವ ಸ್ನೇಹಿತರೇ, ಮತ್ತೆ ಹೊಸ ವರ್ಷ ಬಂದಾಗಿದೆ, 2017ರ ಸಾಲಿಗೆ ಕಾಲಿರಿಸಿ ಆಗಿದೆ. ಹೊಸ ಉತ್ಸಾಹ, ಹೊಸ ಕ್ಯಾಲೆಂಡರ್, ಹೊಸ ಚಿಂತನೆ, ಶುಭಾಶಯ ಒಂಥರಾ ತಾಜಾ ಗಾಳಿ ಸೇವಿಸಿದ ಅನುಭವ. 


ಹಬ್ಬ, ಪರ್ವ, ಕಾಲ ನಿರ್ಣಯ, ಹೊಸ ದಿನ, ಕಾಲಘಟ್ಟದ ಮೈಲುಗಲ್ಲುಗಳನ್ನು ಊರಿ ರೂಪಿಸಿದವರು ನಾವು ಮನುಷ್ಯರೇ. ಹಾಗೊಂದು ಪರ್ವಗಳನ್ನು ಆರೋಪಿಸಿಕೊಂಡು ಖುಷಿ ಪಟ್ಟು ಮತ್ತಷ್ಟು ಜೀವನೋತ್ಸಾಹ ತುಂಬುವ ಸಂದರ್ಭಗಳನ್ನು ಸೃಷ್ಟಿಸಿಕೊಂಡವರೂ ನಾವೇ ಹೌದು. ಈ ಪೈಕಿ ಹೊಸ ವರ್ಷಾಚರಣೆಯೂ ಒಂದು.
ಕ್ರಿಸ್ತಶತಕ ಎನಿಸಿಕೊಳ್ಳುವ ಕಾಲಗಣನೆಗೆ ಚಾಲನೆ ದೊರೆತದ್ದು ಕ್ರಿಸ್ತ ಸತ್ತು ಬದುಕಿದ ಐದಾರು ಶತಮಾನಗಳ ನಂತರವೇ. ಕ್ರಿಸ್ತಶಕ ೫೨೫ರಲ್ಲಿ ಆಳ್ವಿಕೆ ನಡೆಸಿದ್ದ ಡಯೊನೀಷಿಯಸ್ ಎಂಬ ಚಕ್ರವರ್ತಿಯು ಆ ವರ್ಷವನ್ನು ಒಂದು ಅಂದಾಜಿನಲ್ಲಿ ಕ್ರಿಸ್ತಾವತಾರದ ೫೨೫ನೇ ವರ್ಷ ಎಂಬುದಾಗಿ ಘೋಷಿಸಿದ. ಅಂದಿನಿಂದ ಕ್ರಿಸ್ತಶಕೆ ಎನ್ನುವ ಪರಿಪಾಠ ಮೊದಲಾಯಿತು.

ಸಾರ್ವತ್ರಿಕವಾಗಿ ಬಳಕೆಯಲ್ಲಿರುವ ಗ್ರೆಗರಿಯನ್ ಕ್ಯಾಲೆಂಡರ್ ಪ್ರಕಾರ ಇಸವಿಗಳನ್ನು ಸೂಚಿಸುವಾಗ ಡಿಸೆಂಬರ್ ಕಳೆದು ಜನವರಿ ಬಂದಾಗ ನಾವೊಂದು ವರ್ಷ ದಾಟಿ ಹೊಸ ವರ್ಷದಲ್ಲಿ ಕಾಲಿರಿಸಿರುತ್ತೇವೆ.
ಬದುಕಿನಲ್ಲಿ, ಇತಿಹಾಸದಲ್ಲಿ ಸಾಧನೆ, ವಯಸ್ಸು, ದಿನಸೂಚಿಯ ಸ್ಪಷ್ಟ ಗಣನೆಗೆ ಕಾಲ ನಿರ್ಣಯಬೇಕೇ ಬೇಕು. ತಿಂದುಂಡು ಮಲಗುವಲ್ಲಿಗೆ ಮನುಷ್ಯ ಜೀವನ ಸೀಮಿತವಲ್ಲ. ಹಾಗಾಗಿ ನಾವೆಷ್ಟು ಬೆಳೆದಿದ್ದೇವೆ, ಎಷ್ಟು ದಿನಗಳನ್ನು ಕಳೆದಿದ್ದೇವೆ, ನಮ್ಮ ಮುಂದೆ ಇನ್ನೆಷ್ಟು ದಿನಗಳು ಬಾಕಿ ಇವೆ ಇತ್ಯಾದಿ ಎಲ್ಲವನ್ನೂ ಅರಿಯಲೆಂದೇ ಶತಮಾನಗಳ ಹಿಂದೆಯೇ ಹಿರಿಯರು ರೂಪಿಸಿದ ಕಾಲ ನಿರ್ಣಯದ ಅಂಗವಾದ ವರ್ಷಗಳ ಪರಿಗಣನೆ ಬೇಕೇ ಬೇಕು. ದಿನ, ವಾರ, ತಿಂಗಳು, ವರ್ಷಗಳ ಗಣನೆ, ಗಡುವು ಇದ್ದಾಗಲೇ ಮಾಡುವ ಕೆಲಸಕ್ಕೊಂದು ಗುರಿ, ಮಿತಿ, ಸ್ಪಷ್ಟವಾದ ನೀಲ ನಕಾಶೆ ಇರುತ್ತದೆ, ವಾಹನದಲ್ಲಿ ಇಂಧನ ಮುಗಿಯವ ಹೊತ್ತಿಗೆ ಕೆಂಪು ಸೂಚಕ ಕಂಡಾಗ ನಾವು ಮತ್ತೆ ಇಂಧನ ಬದಲಾಯಿಸುತ್ತೇವಲ್ಲ, ಹಾಗೆ ಕ್ಯಾಲೆಂಡರ್ ಬದಲಾವಣೆಯೂ ನಮ್ಮ ವಯಸ್ಸು ಹೆಚ್ಚಾಗಿದ್ದನ್ನು, ಇನ್ನು ನಡೆಯಬೇಕಾಗಿದ್ದನ್ನು ಸೂಚಿಸುವ ಮಾರ್ಗದರ್ಶಕನೂ ಹೌದು. ಏನಂತೀರ...

ಆಗಲೇ ಹೇಳಿದ ಹಾಗೆ,
ಹೊಸ ವರ್ಷವೆಂಬುದು ಕಾಲನಿರ್ಣಯದ ಒಂದು ಭಾಗ. 365 ತಾಜಾ ದಿನಗಳನ್ನು ಕಣ್ಣೆದುರು ಇರಿಸುವ ಸುದಿನ. ಬದಲಾಗುವುದಿದ್ದರೆ ಬದಲಾಗು ಎಂದು ಹೊಸದೊಂದು ಅವಕಾಶ ಎಂದೂ ತಿಳಿಯಬಹುದು. ಜನವರಿ 1 ಬಂದರೇನಂತೆ ಅದೇ ಸೂರ್ಯೋದಯ, ಅದೇ ಬದುಕು, ಅದೇ ಮನೆ, ಪರಿಸರ ಎಂಬಿತ್ಯಾದಿ ವಾದಗಳೂ ಇಲ್ಲದಿಲ್ಲ. ಆದರೆ, ಹೊಸ ವರ್ಷವನ್ನು ಹೊಸದೊಂದು ಅವಕಾಶ ಎಂದುಕೊಂಡು ಮುಂದೆ ಹೋದರೆ ಮತ್ತಷ್ಟು ಧನಾತ್ಮಕ ಬದುಕಿಗದು ಪ್ರೇರಣೆಯಾದೀತು ಎಂಬುದರಲ್ಲಿ ಸಂಶಯವಿಲ್ಲ ಅಲ್ವ...


ಜನವರಿ ಆರಂಭದ ಮುಂಜಾನೆಯ ಕುಳಿರ್ಗಾಳಿ, ತೆಳು ಮಂಜು, ಹೊಸದೊಂದು ಸೂರ್ಯೋದಯ ಕಾಣುತ್ತಿದ್ದೇವೆಂಬ ರೋಮಾಂಚನ ಮಾತ್ರವಲ್ಲ, ಹಳತನ್ನು ಬಿಟ್ಟು ಹೊಸದಾಗುತ್ತಿದ್ದೇವೆಂಬ ಕನವರಿಕೆಯೂ ಜೊತೆಗಿರುತ್ತದೆ.

ಕಾಲ ತನ್ನ ಪಾಡಿಗೆ ತಾನಿರುತ್ತದೆ, ಅಥವಾ ನಿರಂತರವಾಗಿರುವ ಕಾಲವನ್ನು ಹಗಲಿರುಳುಗಳಾಗುವ ಮೂಲಕ ದಿನ, ವಾರ, ತಿಂಗಳುಗಳಾಗಿ ವರ್ಷದ ರೂಪ ಕೊಟ್ಟು ವಿಭಿಸಜಿಸಿದ್ದು ನಾವು. ಅದನ್ನು 12 ತಿಂಗಳುಗಳಾಗಿ ಪಾಲು ಮಾಡಿ, ಗಡಿ ಹಾಕಿ ಇದರೊಳಗೆ ಬದಲಾಗಿದ್ದೇವೆ, ಬದಲಾಗುತ್ತೇವೆ, ಇಷ್ಟು ಬದಲಾಗಬಹುದೆಂಬ ಮಿತಿಗಳನ್ನು ಹಾಕಿರುವವರು ನಾವೇ.


ಅಷ್ಟಕ್ಕೂ, ಹೋದ ವರ್ಷ ಬದಲಾಗಿದ್ದೇನು, ಬದಲಾಗಿದ್ದೆಷ್ಟು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಪುಟ್ಟದಾಗಿದ್ದ ಮೊಬೈಲ್ ಜಾಗಕ್ಕೆ 4ಜಿ ಇರೋ ದೊಡ್ಡ ಹ್ಯಾಂಡ್‌ಸೆಟ್ ಬಂದಿದೆಯಾ? ಮನೆಯ ಟಿ.ವಿ.ಯಲ್ಲಿ ಕನ್ನಡ ಸುದ್ದಿ ವಾಹಿನಿಗಳ ಸಂಖ್ಯೆ ಜಾಸ್ತಿ ಆಗಿದೆಯಾ...ಹೆದ್ದಾರಿಯಲ್ಲಿ ಹೊಂಡಗಳ ಸಂಖ್ಯೆ ಜಾಸ್ತಿ ಆಗಿದೆಯಾ...? ಬಿಹಾರ, ದೆಹಲಿ, ಕಾಶ್ಮೀರದಲ್ಲಿ ಸರ್ಕಾರಗಳು ಬದಲಾದ್ವ...ಹೀಗೆ ಬದಲಾವಣೆಗೆ ಬಾಹ್ಯ ಸ್ವರೂಪದಲ್ಲೇ ಮಾಪನ ಸಿಗುತ್ತದೆ ಹೊರತು ಆಂತರಿಕ ಪರಿಧಿಯಲ್ಲಲ್ಲ.

ಹೋದ ವರ್ಷ ಜ.1ರಂದು ನಮ್ಮಲ್ಲಿ ಆಗಬೇಕೆಂದುಕೊಂಡಿದ್ದ ಬದಲಾವಣೆಗೆ ನಮ್ಮ ದೇಹ, ಮನಸ್ಸು ಒಗ್ಗಿಕೊಂಡಿದೆಯೇ ಎಂದು ನೋಡುವ, ಸ್ವಮೌಲ್ಯಮಾಪನ ಮಾಡುವ ಅಪಾಯಕ್ಕೇ ನಾವು ಕೈಹಾಕುವುದಿಲ್ಲ. ಯಾಕಂದರೆ ನಮ್ಮ ಕಣ್ಣೆದುರೇ ನಮ್ಮ ‘ವೈಫಲ್ಯಗಳ ಮೌಲ್ಯಮಾಪನ’ ರುಚಿಸದ ಸಂಗತಿ ಅಲ್ವ..

ಈ ವರ್ಷ ಖರ್ಚು ಕಡಿಮೆ ಮಾಡ್ಕೊಳ್ತೇನೆ, ಇನ್ನೆರಡು ವರ್ಷಕ್ಕೆ ಹೊಸ ಸ್ಮಾರ್ಟ್‌ಫೋನ್ ಖರೀದಿ ಇಲ್ಲ, ಟಿ.ವಿ.ನೋಡುವುದು ಕಡಿಮೆ ಮಾಡುತ್ತೇನೆ, ದಿನಕ್ಕೆ ಎರಡೇ ಸಿಗರೇಟ್ ಸೇದೋದು... ಕನಿಷ್ಠ ಐದು ಕೆ.ಜಿ.ತೂಕ ಇಳಿಸಿಕೊಳ್ಳುತ್ತೇನೆ... ಅಂತೆಲ್ಲಾ ತಮಗೆ ತಾವೇ ವಿಧಿಸಿಕೊಂಡ ಬದಲಾವಣೆಯ ಕಟ್ಟುಪಾಡುಗಳು ಫೆಬ್ರವರಿ, ಮಾರ್ಚ್ ವೇಳೆಗೇ ಹಳ್ಳ ಹಿಡಿದು ಡಿಸೆಂಬರ್ ಹೊತ್ತಿಗೆ ‘ನಾನೆಲ್ಲಿ ಬದಲಾಗಬೇಕೆಂದುಕೊಂಡಿದ್ದೇ’ ಎಂಬುದೇ ಮರೆತು ಹೋಗುವರೆಗೆ  ಔದಾಸೀನ್ಯ ಕಾಡಿರುತ್ತದೆ. ಅಷ್ಟಾದರೂ ಡಿ.31 ಬಂದ ಹಾಗೆಲ್ಲಾ ಮತ್ತೆ ಬದಲಾಗುತ್ತೇವೆಂದು ಮೈಕೊಡವಿ ಎದ್ದು ನಿಲ್ಲುವು ಹುರುಪು.

ಎಲ್ಲಕ್ಕಿಂತ ಹೆಚ್ಚಾಗಿ ತುಂಬ ಮಂದಿ ಜ.1ರಿಂದ ಹೊಸವರ್ಷ ತಾಜಾ ತಾಜಾ ಸಿಗುವ ಡೈರಿಗಳಲ್ಲಿ ‘ನೀಟಾಗಿ ದಿನಚರಿ ಬರೆದಿಡುತ್ತೇನೆ’ ಅಂದುಕೊಂಡು ಪ್ರತಿಜ್ಞೆ ಮಾಡಿರುತ್ತಾರೆ. ನಾಲ್ಕೈದು ದಿನ ಹೊಸ ಘಾಟಿನ ಪುಟಗಳನ್ನು ತೆರೆದು ಅಂದವಾಗಿ ಡೈರಿ ಬರೆಯುತ್ತಿರುವವರು ಏನೇನೋ ನೆಪವೊಡ್ಡಿ ತಮಗೆ ತಾವೇ ಪುರುಸೊತ್ತಿಲ್ಲವೆಂದು ಸಮಾಧಾನ ಮಾಡಿಕೊಂಡು ಹಾಕಿದ ಪ್ರತಿಜ್ಞೆ ಮರೆವ ಮಹನೀಯರಾಗುತ್ತೇವೆ...

ಆದರೂ ಡಿ.31 ಬಂದಾಗ ಬದಲಾಗುವ ತುಡಿತ.
ಯಾಕೆ ಗೊತ್ತ...?

ಕ್ಯಾಲೆಂಡರ್, ವಾಚು, ಅಲಾರಂ ಎಲ್ಲ ಕಾಲವನ್ನು ಭಾಗ ಮಾಡಿ ಆಗಾಗ ಘಳಿಗೆಗಳು ಕಳೆದುಹೋದಂತೆ ನಮ್ಮನ್ನು ಎಚ್ಚರಿಸುವ ಮಾನದಂಡಗಳು. ಇಂತಹ ಕಾಲಘಟ್ಟಗಳ ಪರಿಧಿ ಇಲ್ಲದೆ ಹೋದರೆ ಗುರಿಯಿಲ್ಲದ ಸರದಾರರಾಗುವ ಅಪಾಯವಿದೆ. ಕನಿಷ್ಠ ಪಕ್ಷ ಜನವರಿ ಬಂದಾಗಲಾದರೂ ಬದಲಾಗಬೇಕೆಂದುಕೊಳ್ಳುವವರಿಗೆ ಒಂದು ಚುಚ್ಚುಮದ್ದು ಈ ಹೊಸ ವರ್ಷ. ಬದಲಾಗುವುದು ಕ್ಯಾಲೆಂಡರ್ ಮಾತ್ರ ಎಂಬ ವಾದ ಇದೆ. ಆದರೆ, ಅದೇ ಕ್ಯಾಲೆಂಡರ್ ಇತರ ಬದಲಾವಣೆಗೊಂದು ಆರಂಭಿಕ ಸೈರನ್ ಆದರೆ ನಾವದನ್ನು ಯಾಕೆ ಧನಾತ್ಮಕವಾಗಿ ತೆಗೆದುಕೊಳ್ಳಬಾರದು?

ಬದಲಾಗುತ್ತೇವೆಂದುಕೊಂಡವರ ಪೈಕಿ ಶೇ.10 ಮಂದಿ ಶೇ.10ರಷ್ಟಾದರೂ ಬದಲಾದರೆ, ಇನ್ನಷ್ಟು ಮಂದಿಗೆ ಅದು ಶೇ.10ರಷ್ಟು ಸ್ಫೂರ್ತಿ ನೀಡಿದರೂ ಸಮಗ್ರವಾಗಿ ಒಂದಷ್ಟು ಬದಲಾವಣೆ ಆಗಿಯೇ ಆಗುತ್ತದೆ. ಅದುವೇ ಕಾಲದ ಮಹಿಮೆ.

ಎಂತಹ ಚಂಡಮಾರುತ, ಗಾಳಿ ಮಳೆ, ಭೂಕಂಪ ಸಂಭವಿಸಿದರೂ ಸೂರ್ಯದೇವ ಮಾರನೇ ದಿನ ನಸು ಕೆಂಪಾಗಿ ಮೂಡಣದಲ್ಲಿ ಉದಯಿಸಿಯೇ ಉದಯಿಸುತ್ತಾನೆ. ಭೂಮಿ ಹೊತ್ತಿ ಉರಿದರೂ, ಕೊಲೆ, ಸುಲಿಗೆ, ಯುದ್ಧ ಪಾತಕ ಸಂಭವಿಸಿದರೂ ಬಾನಲ್ಲಿ ಚಂದಿರ ತಣ್ಣಗೆ ನಗುತ್ತಿರುತ್ತಾನೆ. ಈ ಮೂಲಕ ಪ್ರಕತಿ ಕಲಿಸುವ ಗಟ್ಟಿತನದ, ಎಲ್ಲವನ್ನೂ ಸಮಭಾವದಿಂದ ತೆಗೆದುಕೊಳ್ಳುವ ಪಾಠಕ್ಕೆ ನಾವು ಕಣ್ಣುಗಳಾಗಬೇಕು. ಹೋದ ವರ್ಘ ಘಟಿಸಿದ ಋಣಾತ್ಮಕ ಅಂಶಗಳನ್ನೆಲ್ಲ ನಮಗೊಂದು ಉತ್ತಮ ಪಾಠವೆಂದುಕೊಂಡರೆ, ನಾಳಿನ ಹೊಸ ಸೂರ್ಯೋದವಯನ್ನು ಹೊಸ ದಾರಿಗೆ ಬೆಳಕಾಗುವ ಅಂಶವೆಂದುಕೊಂಡರೆ ಸಮಚಿತ್ತದಿಂದ ಬಾಳು ಮುಂದುವರಿಸಲು ಸಾಧ್ಯವಾಗುತ್ತದೆ. ಅದುವೇ ಹೊಸ ಕ್ಯಾಲೆಂಡರ್ ವರ್ಷ ಸಾರುವ ಸಂದೇಶ.

ಕಳೆದ ವರ್ಷದ ಏನೇ ನಡೆದಿರಬಹುದು, ಆ ಭಾಗಕ್ಕೆ ರಿವೈಂಡ್ ಆಗಿ ಹೋಗಲು ಸಾಧ್ಯವಿಲ್ಲ. ಆದರೆ ಮುಂದೊಂದು 12 ತಿಂಗಳ ತಾಜಾ ಗೊಂಚಲು ನಮ್ಮ ಮುಂದಿದೆ. ಅಲ್ಲಿ ನಾವು ಮತ್ತೆ ಬದಲಾಗಬೇಕಂದುಕೊಂಡಷ್ಟೂ ಬದಲಾಗಬಹುದು. ಈ ಡಿ.31ಕ್ಕೆ ಕಾಡಿದ ನಿರಾಸೆ ಕಾಡದಿರಬೇಕಾದರೆ ಪ್ರತಿದಿನದ ಕೊನೆಗೂ ಇಂದು ಡಿ.31 ಎಂಬಷ್ಟು ಜತನದಿಂದ ಸ್ಮರಿಸಿಕೊಂಡು ನಾಳೆ ಮಾಡುವುದನ್ನು ಇಂದೇ ಮಾಡು ಎಂಬಷ್ಟು ಕಾಳಜಿಯಿಂದ ನಿರ್ಧಾರಗಳನ್ನು ಕಾರ್ಯಗತಗೊಳಿಸಿದರೆ ಮತ್ತೆ ಡಿ.31ರಂದು ಹಿಂದಿರುಗಿ ನೋಡಿ ಅಳುವ ಪ್ರಮೇಯ ಬರುವುದಿಲ್ಲ.

ವರ್ಷದ ಪ್ರತಿ ಕಾಲಘಟ್ಟದಲ್ಲೂ ಅಷ್ಟೇ, ‘ಅಯ್ಯೋ 8 ತಿಂಗಳು ಕಳೆಯಿತು ಇನ್ನು ನಾಲ್ಕೇ ತಿಂಗಳು ಉಳಿದಿದೆ’ ಅನ್ನು ಋಣಾತ್ಮಕ ಚಿಂತನೆ ಬೇಡ. ‘ಎಂಟು ತಿಂಗಳು ಕಳೆದರೇನಾಯಿತು ಇನ್ನೂ ನಾಲ್ಕು ತಿಂಗಳು ಇದೆಯಲ್ಲ?’ ಎಂಬ ಆತ್ಮವಿಶ್ವಾಸ ಜೊತೆಗದ್ದರೆ ನಿಮಗೆ ಯಾವ ಎನರ್ಜಿ ಬೂಸ್ಟರ್ ಕೂಡಾ ಬೇಕಾಗಿಲ್ಲ. ಪ್ರತಿದಿನವೂ ಹೊಸ ವರ್ಷವಾಗಿ ಕಾಣಬಹುದು.

ಕೊನೆಯ ಮಾತು: ಶ್ರೇಷ್ಠ ಕವಿಯೊಬ್ಬರ ಸ್ಫೂರ್ತಿ ಕೊಡುವ ಈ ಕಾವ್ಯದ ಸಾಲುಗಳನ್ನು ಗುನುಗುನಿಸುತ್ತಿರಿ ‘ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೆ ಇರದು, ಇಂದು ಸೊಗವಿರಲು ಮರೆತು ಅಳುವುದು ಏಕೆ?’.


ಮಂಗಳೂರು ಆಕಾಶವಾಣಿಯಲ್ಲಿ (03.01.2017) ಪ್ರಸಾರದ ಭಾಷಣದ ಪ್ರತಿ...