Wednesday, January 11, 2017

ನಂಬಿಕೆಯೆಂದರೆ ದೇವರ ಹಾಗೆ!....ನಂಬಿ ಕೆಟ್ಟವರಿಲ್ಲವೋ...

ಜಗತ್ತು ನಿಂತಿರುವುದು ಕೇವಲ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಸಿ.ಸಿ. ಕ್ಯಾಮೆರಾ, ಬಾಂಬ್ ಡಿಟೆಕ್ಟರು, ಮಂಪರು ಪರೀಕ್ಷೆಯಂತಹ ವೈಜ್ಞಾನಿಕ ಲೆಕ್ಕಾಚಾರಗಳ ಮೇಲೆ ಮಾತ್ರವಲ್ಲ. ಅಲ್ಲಿ ಇನ್ನೂ ನಂಬಿಕೆ, ವಿಶ್ವಾಸ, ಆರಾಧನೆಗಳಿಗೆ ಬೆಲೆ ಇದೆ. ಮಾನವೀಯತೆ, ಸೌಜನ್ಯ, ಭಕ್ತಿ ಅಂತ ಕರೆಯೋದು ಇದನ್ನೇ. ನಂಬಿಕೆಯೆಂಬುದು ವ್ಯವಹಾರದ ಪರಿಧಿಯನ್ನು ಮೀರಿ ನಿಂತ ಅನುಭೂತಿ!
--------------


ನೀವೊಂದು ಬಸ್ ನಿಲ್ದಾಣದಲ್ಲಿದ್ದೀರಿ, ಸಹಪ್ರಯಾಣಿಕರೊಬ್ಬರಲ್ಲಿ ಬಸ್ಸೆಷ್ಟು ಗಂಟೆಗೆ ಬರುತ್ತದೆ? ಎಂದು ಪ್ರಶ್ನಿಸುತ್ತೀರಿ. ಅವರು ೧೦ ಗಂಟೆಗೆ ಎನ್ನುತ್ತಾರೆ. ತಕ್ಷಣ ಇನ್ನೊಬ್ಬರಲ್ಲಿ ‘ಬಸ್ಸೆಷ್ಟು ಗಂಟೆಗೆ ಬರುತ್ತದೆ?’ ಎಂದು ಮತ್ತೊಮ್ಮೆ ಕೇಳುತ್ತೀರಿ. ಅದೂ ಮೊದಲನೆಯವರ ಎದುರೇ! ಎರಡನೆಯವರೂ ನಿಮಗೆ ‘೧೦ ಗಂಟೆಗೆ ’ ಎಂದು ಉತ್ತರಿಸುತ್ತಾರೆ.


ಹಾಗಿದ್ದರೆ, ಒಟ್ಟೂ ಪ್ರಕ್ರಿಯೆ ಅರ್ಥವೇನು? ಮೊದಲು ಉತ್ತರ ನೀಡಿದವರ ಮೇಲೆ ನಂಬಿಕೆ ಇಲ್ಲವೆಂದಲ್ಲವೇ? ಅಥವಾ ನೀವು ಸಿಕ್ಕಾಪಟ್ಟೆ ದೂರಾಲೋಚನೆಯವರಾಗಿದ್ದು ಎಲ್ಲಾ ಮಾಹಿತಿಯನ್ನು ದೃಢಪಡಿಸುತ್ತೀರೆಂದೇ? ಏನೇ ಆಗಲಿ, ಮೊದಲು ಉತ್ತರ ನೀಡಿದವರ ಎದುರಿಗೇ ಇನ್ನೊಬ್ಬರೊಡನೆ ಅದೇ ಪ್ರಶ್ನೆ ಕೇಳಿದರೆ ಮೊದಲು ಉತ್ತರ ನೀಡಿದವರ ಮನಸ್ಥಿತಿ ಹೇಗಿದ್ದೀತು ಯೋಚಿಸಿದ್ದೀರ?
ಹಲವು ಸಂದರ್ಭಗಳಲ್ಲಿ ಹೀಗಾಗುತ್ತದೆ. ಕಾರಣ, ಪರಿಣಾಮಗಳ ಬಗ್ಗೆ ಯೋಚಿಸದೆ ನಾವು ವರ್ತಿಸುತ್ತೇವೆ. ಹಾಗಾಗಿ ನಾವು ಬೇರೆಯವರ ದೃಷ್ಟಿಯಲ್ಲಿ ನಂಬಿಕೆ ಕಳೆದುಕೊಳ್ಳುವುದು ಮಾತ್ರವಲ್ಲ, ಸ್ವತಃ ನಮಗೆ ನಮ್ಮ ಕುರಿತು ಪದೇ ಪದೇ ಆತಂಕ, ಸಂಶಯಗಳು ಹುಟ್ಟಿ ನಂಬಿಕೆ ಕಳೆದುಕೊಳ್ಳುವ ಹಾಗಾಗುತ್ತದೆ.


ಯಾಕೆ ಹೀಗಾಗುತ್ತದೆ?: ಎಷ್ಟೋ ಬಾರಿ ಸಂಬಂಧಗಳನ್ನು ಹಗುರವಾಗಿ ತೆಗೆದುಕೊಳ್ಳುವುದೋ, ಅತಿಯಾದ ಆತ್ಮವಿಶ್ವಾಸವೋ, ಪರಿಣಾಮಗಳ ವಿವೇಚನೆ ಇಲ್ಲದಿರುವುದೋ, ನನ್ನ ಮೂಗಿನ ನೇರಕ್ಕೆ ಇತರರು ಹೊಂದಿಕೊಂಡು ಹೋಗಲಿ ಎಂಬ ಉಡಾಫೆಯೋ? ಅಂತೂ ಇಂತಹ ವಿಶ್ವಾಸ ಕಳೆದುಕೊಳ್ಳುವ ಪ್ರಸಂಗಗಳು ನಿತ್ಯ ಬದುಕಿನಲ್ಲಿ ಎದುರಾಗುತ್ತಲೇ ಇರುತ್ತದೆ. ವಿಶ್ವಾಸಾರ್ಹವಲ್ಲದ ಹೇಳಿಕೆಗಳನ್ನು ರಾಜಕಾರಣಿಗಳು, ಗಣ್ಯರು ಮಾಧ್ಯಮಗಳಲ್ಲಿ ನೀಡಿ, ಅದು ವಿವಾದವಾದ ಬಳಿಕ ಅಲ್ಲಗಳೆಯುವುದು, ತಾನು ಹಾಗೆ ಹೇಳಿಯೇ ಇಲ್ಲ ಎಂದು ವಾದಿಸುವುದಕ್ಕೂ ನಾವು ಸಾಕ್ಷಿಗಳಾಗುತ್ತೇವೆ. ವಿಶ್ವಾಸಕ್ಕೆ ದ್ರೋಹವಾಗಬಲ್ಲ, ಅಥವಾ ವಿಶ್ವಾಸಾರ್ಹವಲ್ಲದ ಹೇಳಿಕೆ, ಕೆಲಸ, ನಡವಳಿಕೆಗಳನ್ನು ಬಳಿಕ ಅಲ್ಲಗಳೆಯಬಹುದು, ತಿರುಚಬಹುದು ಅಥವಾ ತೇಪೆ ಹಚ್ಚಬಹುದು, ಹಾಗಂತ ಆತ್ಮಸಾಕ್ಷಿಗೆ ವಂಚಿಸಲು ಸಾಧ್ಯವಿಲ್ಲ.
ಆತ್ಮಸಾಕ್ಷಿಯೇ ಸತ್ಯ:  ಎಲ್ಲವನ್ನೂ ಸರಿ ತಪ್ಪುಗಳ ತಕ್ಕಡಿಯಲ್ಲಿ ಇಟ್ಟು ತೂಗುವುದು, ವಾದ-ವಿವಾದದಲ್ಲಿ ಗೆದ್ದ ಪಕ್ಷವೇ ಸರಿಯೆಂದು ಅಂದುಕೊಳ್ಳುವುದು, ವೈಜ್ಞಾನಿಕ ಲೆಕ್ಕಾಚಾರ, ತಂತ್ರಜ್ಞಾನಗಳು ತೋರಿಸುವುದೇ ಅಂತಿಮವೆಂದು ಭ್ರಮಿಸುವುದು ಇವೆಲ್ಲ ಆತ್ಮಸಾಕ್ಷಿಯ ಸತ್ಯಕ್ಕೆ ಸರಿಸಮವಲ್ಲ. ತಪ್ಪು ಮಾಡಿದವನಿಗೆ, ಸುಳ್ಳು ಹೇಳಿದವನಿಗೆ ಖಂಡಿತಾ ಗೊತ್ತಿರುತ್ತದೆ, ತನ್ನಿಂದ ತಪ್ಪಾಗಿದೆ ಎಂದು. ಎಷ್ಟೋ ಬಾರಿ ಅಹಂ ಅಡ್ಡ ಬರುತ್ತದೆ ಅದನ್ನು ಒಪ್ಪಿಕೊಳ್ಳುವುದಕ್ಕೆ. ಹಾಗಾಗಿ ಒಂದು ತಪ್ಪಿನ ಸಮರ್ಥನೆಗೆ ಇನ್ನೊಂದು ಸುಳ್ಳು, ಬಳಿಕ ವೃಥಾ ವಾದ ವಿವಾದ... ಹೀಗೆ ಅನಾವಶ್ಯಕ ಎಳೆದಾಟ, ವಿವಾದಗಳ ಬಳಿಕ ಅಂತಿಮ ಸತ್ಯ ಎಲ್ಲೋ ಮೂಲೆಗುಂಪಾಗಿರುತ್ತದೆ. ಅಥವಾ ಮೂಲ ವಿವಾದಕ್ಕಿಂತ ಬಳಿಕ ಹುಟ್ಟಿಕೊಂಡ ರೆಕ್ಕೆಪುಕ್ಕಗಳೇ ಮಹತ್ವ ಪಡೆದುಕೊಂಡಿರುತ್ತವೆ. 


ವಿಶ್ವಾಸವಿದ್ದಲ್ಲಿ, ನಂಬಿಕೆ ಹುಟ್ಟಿಕೊಂಡಲ್ಲಿ ಗೊಂದಲ, ದ್ವೇಷ, ಸಂಶಯಗಳಿಗೆ ಜಾಗವಿರುವುದಿಲ್ಲ. ಮನಸ್ಸು ಪ್ರಶಾಂತವಾಗಿರುತ್ತದೆ, ಧ್ಯಾನಸ್ಥ ಸನ್ಯಾಸಿಯ ಹಾಗೆ. ಗಲಿಬಿಲಿ, ಮುಂಗೋಪ, ಆತಂಕಗಳು ಕಡಿಮೆಯಾಗುತ್ತವೆ. ಪ್ರಶಾಂತ ಮನಸ್ಸು ಹಲವಷ್ಟು ಧನಾತ್ಮಕ ಕಾರ್ಯಗಳಿಗೆ ಪ್ರೇರಣೆಯಾಗುವೂ ಸತ್ಯ. ಹೇಗೆ ಗೊತ್ತಾ? ನೀವು ಪ್ರಯಾಣಿಸುತ್ತಿರುವ ವಿಮಾನ ಸುರಕ್ಷಿತವಾಗಿ ಮುಂದಿನ ನಿಲ್ದಾಣ ತಲಪುತ್ತದೆ, ನನ್ನ ಪೈಲಟ್ ಆ ಕಾರ್ಯವನ್ನು ಸಮರ್ಥವಾಗಿ ಮಾಡುತ್ತಾನೆ ಎಂಬ ನಂಬಿಕೆಯಿದ್ದರೆ ಆರಾಮವಾಗಿ ಸೀಟಿಗೊರಗಿ ವಿಮಾನದಲ್ಲೇ ನಿದ್ರೆ ಮಾಡಬಹುದು, ಕಿಟಕಿ ಹೊರಗೆ ಚೆಲ್ಲಾಟವಾಗುವ ಮೋಡಗಳ ಸೌಂದರ್ಯವನ್ನು ಆಸ್ವಾದಿಸಬಹುದು, ಪುಟ್ಟದೊಂದು ಇಷ್ಟದ ಹಾಡಿನ ಸಾಲನ್ನು ಗುನುಗುನಿಸಬಹುದು. ಅದರ ಬದಲು, ಈ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಕಾಣಬಹುದೇ, ಪೈಲಟ್‌ಗೆ ಆ ಸಾಮರ್ಥ್ಯ ಇರಬಹುದೇ, ವಿಮಾನವೇನಾದರೂ ಸ್ಫೋಟವಾಗಬಹುದೇ? ಎಂಬಿತ್ಯಾದಿ ಸಂಶಯದ ಹುಳ ಮನಸ್ಸನ್ನು ಹೊಕ್ಕರೆ ಮುಗಿಯಿತು. ನಿಲ್ದಾಣ ತಲಪುವ ತನಕ ನೀವು ನೀವಾಗಿರುವುದಿಲ್ಲ. ಆತಂಕವೇ ನಿಮ್ಮನ್ನು ಅರ್ಧದಷ್ಟು ಕೊಂದಿರುತ್ತದೆ!


ವಿಶ್ವಾಸ ದೇವರ ಹಾಗೆ:
 ವಿಶ್ವಾಸವೆಂದರೆ ದೇವರ ಹಾಗೆ. ಸರ್ವಶಕ್ತನ ಮೇಲೆ ನಂಬಿಕೆ ಇರಿಸುತ್ತೇವಲ್ಲ ಹಾಗೆ. ಅಲ್ಲಿ ಕಪಟವಾಗಲಿ, ಸ್ವಾರ್ಥವಾಗಲಿ, ಏನನ್ನಾದರೂ ಪಡೆಯುತ್ತೇನೆಂಬ ಲೋಭವಾಗಲಿ, ನಾನು ನಂಬುವ ದೇವರು ನಂಬಿಕೆಗೆ ಅರ್ಹನೇ? ಎಂಬ ಕಿಂಚಿತ್ ಸಂಶಯವಾಗಲೀ ಯಾವುದೂ ಇರುವುದಿಲ್ಲ. ಪೂರ್ಣ ಶರಣಾಗತಿಯ ಭಾವ ಹಾಗೂ ನಮ್ಮನ್ನು ನಾವು ತೆರೆದುಕೊಳ್ಳುವ ಸಾತ್ವಿಕತೆಯ ಪರಮಾವಧಿಯ ಪ್ರಾರ್ಥನೆಯದು. ದೇವನೆದುರು ಪಾಪ ನಿವೇದಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದೂ ಇದೇ ಕಾರಣಕ್ಕೆ. ಆತ ಸರ್ವವಂದ್ಯ, ಪ್ರಶ್ನಾತೀತ ಶಕ್ತಿ ಎಂಬ ಅಚಲ ನಂಬಿಕೆಗೋಸ್ಕರ. ಅಂತಹ ಸರ್ವಶಕ್ತಿಯ ಕಲ್ಪನೆ, ಪೂರ್ಣ ಶರಣಾಗತಿಯೊಂದಿಗಿನ ವಿಧೇಯ ಭಾವವೇ ನಮ್ಮಲ್ಲಿರಬಹುದಾದ ಅಹಂನ್ನು ಕೊಲ್ಲಲು, ಪಾಪಪ್ರಜ್ಞೆಯನ್ನು ಕಳೆಯಲು ನಮ್ಮನ್ನು ಸಜ್ಜುಗೊಳಿಸುತ್ತದೆ. ಹಾಗಾಗಿ ದೇವನೊಂದಿಗಿನ ಅದೇ ನಂಬಿಕೆಯನ್ನುಯಾರ ಜೊತೆಗಿರಿಸುತ್ತೇವೆಯೋ ಅವರನ್ನು ವಿಶ್ವಾಸಾರ್ಹರು ಎಂದುಕೊಳ್ಳುತ್ತೇವೆ. ಈ ವಿಶ್ವಾಸಕ್ಕೆ ಧಕ್ಕೆ ತರುವುದು ಹಾಗೂ ನಮ್ಮನ್ನು ನಾವು ವಂಚಿಸುವುದು ಎರಡೂ ಒಂದೇ. ನಂಬಿಕೆ ಬೆಲೆ ಕಟ್ಟಲಾಗದ ವಸ್ತು, ವ್ಯಕ್ತಿತ್ವಕ್ಕೊಂದು ಹೊಳಪು ನೀಡುವ ವಿಷಯವದು. ಹಾಗಾಗಿ ವಿಶ್ವಾಸವೊಂದು ಉತ್ತಮ ಸಂಬಂಧದ ತಳಹದಿ, ಆತ್ಮೀಯತೆಯ ಬೆಸುಗೆ, ಖಾಸಗಿ ಬಾಂಧವ್ಯದ ಕೊಂಡಿ ಎಂಬುದು ಸದಾ ನೆನಪಿರಲಿ.
ಸಾಗುವ ಬದುಕಿನಲ್ಲಿ ಎಡವುದು, ತಪ್ಪುಗಳು, ಪ್ರಮಾದ ಸಹಜ. ಗೊತ್ತಿದ್ದೋ, ಇಲ್ಲದೆಯೋ ವಿಶ್ವಾಸ ಕಳೆದುಕೊಳ್ಳುವ ಪ್ರಸಂಗಗಳೂ ಸಂಭವಿಸಬಹುದು. ಆದರೆ, ಅದು ಗೊತ್ತಾದ ಬಳಿಕ ಸರಿಪಡಿಸುವ ಅಥವಾ ನಮ್ಮ ಕಡೆಯಿಂದ ತಪ್ಪಾದಲ್ಲಿ ಪ್ರಮಾಣಿಕವಾಗಿ ವಿಷಾದ/ಕ್ಷಮೆ ಯಾಚಿಸುವ ಹೃದಯ ವೈಶಾಲ್ಯತೆ ಇದ್ದಲ್ಲಿ ಜಾರಿ ಹೋಗಬಹುದಾದ ನಂಬಿಕೆಯ ಕೊಂಡಿ ಮತ್ತೊಮ್ಮೆ ಜೋಡಿ ಬರಬಹುದು. ಕ್ಷಮೆ ಹಾಗೂ ನಂಬಿಕೆ ಮನಸ್ಸನ್ನು ವಿಶಾಲಗೊಳಿಸುತ್ತದೆ, ಮತ್ತಷ್ಟು ಪ್ರೀತಿ, ವಿಶ್ವಾಸದ ಧಾರೆಯನ್ನು ಹುಟ್ಟುಹಾಕುತ್ತದೆ.


----------
ನಂಬಿಕೆಯ ಮೇಲೊಂದು ವಿಶ್ವಾಸ....
೧) ವಿಶ್ವಾಸವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಅದಕ್ಕೆ ಕುಂದುಂಟಾದರೆ ತಕ್ಷಣ ಒಪ್ಪುವ, ಸರಿಪಡಿಸಿಕೊಳ್ಳುವ ನೇರ ನಡೆ ಬೇಕು.
೨) ನಂಬಿಕೆ ವಿಫಲವಾದರೆ ಅದು ನಂಬಿದವನ ತಪ್ಪೂ ಇರಬಹುದು, ಆದರೆ ನಂಬಿಕೆ ಕಳೆದುಕೊಳ್ಳುವಂತೆ ನಡೆದುಕೊಂಡವನೂ ನೈತಿಕವಾಗಿ ಕೆಳಗಿಳಿಯುತ್ತಾನೆ.
೩) ಅಚಲ ನಂಬಿಕೆ ಮನಸ್ಸಲ್ಲೊಂದು ನಿರಾಳತೆಗೆ ಜಾಗ ಕಲ್ಪಿಸುತ್ತದೆ. ಅದು ಬಾಳಿಗೊಂದು ಏಕಾಗ್ರತೆ ತರುತ್ತದೆ.
೪) ದೇವರು ಸರ್ವಶಕ್ತನೆಂಬ ನಂಬಿಕೆಯೇ ಆಸ್ತಿಕರೊಳಗೊಂದು ಸಾತ್ವಿಕತೆಯನ್ನು ಹುಟ್ಟಿಸುತ್ತದೆ.
೫) ಎನ್ನಂಥ ಭಕ್ತರು ಅನಂತ ನಿನಗಿಹರು, ನಿನ್ನಂಥ ಸ್ವಾಮಿ ಎನಗಿಲ್ಲ... ಎಂಬ ಶರಣಾಗತಿಯ ಭಾವ ದೃಢನಂಬಿಕೆಯ ಮನಸ್ಥಿತಿಗೊಂದು ಸಾಕ್ಷಿ.