ತೋಚಿದ್ದು...ಗೀಚಿದ್ದು ಭಾಗ 1

1) ಹಸಿವೆಯನ್ನು ಭೌತಿಕ ರೂಪದಲ್ಲಿ ತೋರಿಸಲಾಗದು, ಅದು ಅನುಭವ. ಸತ್ಯಸಂಧತೆ, ಪ್ರಾಮಾಣಿಕತೆ, ಬದ್ಧತೆ, ಕಾಳಜಿ, ಹಠ... ಇವನ್ನೆಲ್ಲ ಹೊರತೆಗೆದು ಪ್ರದರ್ಶಿಸುವುದಕ್ಕಾಗುವುದಿಲ್ಲ, ತಕ್ಕಡಿಯಲ್ಲಿ ತೂಗುವುದಕ್ಕಾಗುವುದಿಲ್ಲ, ಎಕ್ಸರೇ ಅಥವಾ ಸ್ಕ್ಯಾನಿಂಗ್ ಮಾಡಿ ಪರೀಕ್ಷಿಸುವುದಕ್ಕೂ ಅಸಾಧ್ಯ. ಅರ್ಥ ಮಾಡುವ, ಕಂಡುಕೊಳ್ಳುವ ಮನಸ್ಸಿರುವವರಿಗೆ ಗೋಚರವಾಗುತ್ತದೆ. ಭಾವಗಳು, ಅನುಭೂತಿಗಳನ್ನು ಸಾಕ್ಷಿ ಮತ್ತು ಅಂಕಿ ಅಂಶಗಳ ಸಹಿತ ಹಾಜರುಪಡಿಸುವುದಕ್ಕಾಗುವುದಿಲ್ಲ. ಅದು ಕಂಡುಕೊಳ್ಳಬೇಕಾದ ವಿಚಾರ. ತನಗೆ ಖುಷಿ ಕೊಡುವ ಯಾವುದೇ ಭಾವ ಪ್ರಚಾರಕ್ಕೆ ಪ್ರಕಟಗೊಳ್ಳಬೇಕಾಗಿಲ್ಲ, ಪ್ರಕ್ರಿಯೆಯಲ್ಲಿ ಅಡಕವಾಗಿದ್ದರೆ ಸಾಕು!
-KmohanT (07052019)

----------

2) ಬದುಕಿನಲ್ಲಿ‌ ಕ್ಷುಲ್ಲಕ, ಸಣ್ಣ ವಿಷಯ ಎಂಬುದು ಯಾವುದೂ ಇಲ್ಲ. ಒಂದು‌ ಮಾತು, ಒಂದು ಕರೆ, ಒಂದು ಸಣ್ಣ ನಿರ್ಧಾರ, ಪ್ರತಿಕ್ರಿಯೆ, ನೆರವು, ಬದಲಾವಣೆ, ಟೀಕೆ, ಪ್ರಶಂಸೆ ಪ್ರತಿಯೊಂದಕ್ಕೂ ತನ್ನದೇ ಬೆಲೆ ಇದೆ. ಜೀವನದ "ಪ್ರತಿಯೊಂದು" ಸಣ್ಣ ಅನುಭವ, ನಡೆ ಕೂಡಾ ತಿಳಿವಳಿಕೆಯನ್ನು ನಮಗರಿವಿಲ್ಲದೇ ಬೆಳೆಸುತ್ತಲೇ ಹೋಗುತ್ತದೆ. ಒಂದು ಸಣ್ಣ ಮರೆವು, ಸಣ್ಣ ನಿರ್ಲಕ್ಷ್ಯ, ಸಣ್ಣ ಅಹಂ, ಸಣ್ಣದೊಂದು ಅತಿ ಆತ್ಮವಿಶ್ವಾಸ ಕೂಡಾ ದೊಡ್ಡ ಪಾಠವನ್ನು‌ ಕಲಿಸಬಹುದು. ಬಾಳಿನುದ್ದಕ್ಕೂ ಸಿಗುವ ಯಾವುದೂ ಸಣ್ಣದಲ್ಲ, ಯಾರೂ ಕ್ಷುಲ್ಲಕರಲ್ಲ. ಅಪ್ರಬುದ್ಧ ಗ್ರಹಿಕೆಯಿಂದ ಸಣ್ಣತನ ನಿರ್ಧಾರವಾಗುತ್ತದೆ!
-KmohanT (06052019)

-------------

3) ಸಾಮಾಜಿಕ‌ ಜಾಲತಾಣನ್ನು ನಾವು ನಿರ್ವಹಿಸಬೇಕೇ ವಿನಃ ಜಾಲತಾಣಗಳೇ ನಮ್ಮನ್ನು ನಿರ್ವಹಿಸುವಷ್ಟು ದೌರ್ಬಲ್ಯ ಆವರಿಸಬಾರದು. ಧ್ಯಾನದಲ್ಲಿ, ಪ್ರಯಾಣದಲ್ಲಿ, ಊಟದಲ್ಲಿ, ಹೊತ್ತುಗೊತ್ತಿಲ್ಲದೆ online ಇರುವುದು ಅನಿವಾರ್ಯ ಎಂಬುದು ನಾವೇ ಸೃಷ್ಟಿಸಿಕೊಂಡ ಭ್ರಮೆ ಅಷ್ಟೆ. ಜಾಲತಾಣಗಳನ್ನು ಎಷ್ಟು ಬಳಸುತ್ತೇವೆಯೋ, ಅಷ್ಟೇ ಅಂತರವಿರಿಸಿ ಸ್ಥಿತಿಪ್ರಜ್ಞತೆ ಕಾಯುವುದನ್ನೂ ರೂಢಿಸಬೇಕು. ಜಾಲತಾಣವೆಂದರೆ ಆಪ್ತಸಮಾಲೋಚಕನೋ, ಕಂಡದ್ದನ್ನು ಎಸೆಯುವ ಕಸದಬುಟ್ಟಿಯೋ, Recycle Bin ಅಲ್ಲ. ಸಂವಹನದ ವೇದಿಕೆ ಅಷ್ಟೆ. ಒಂದಷ್ಟು ಭ್ರಮೆ, ರೋಚಕತೆ, ಅತಿಯಾದ ವೇಗ, ತ್ವರಿತ ಪ್ರತಿಕ್ರಿಯೆಗಳೇ ಅಮಲೇರಿಸುತ್ತದೆ ಎಂಬುದನ್ನು ಅರಿತು, ಬದುಕಿನ ಮಹತ್ವದ ಕ್ಷಣಗಳನ್ನು ಜಾಲತಾಣಗಳಿಗೋಸ್ಕರ ಕಳೆದುಕೊಳ್ಳುತ್ತೇವೆಂಬ ಪ್ರಜ್ಞೆ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು!
-KmohanT (05052019)

---------

4) ಮುಗ್ಧತೆ, ನಾಚಿಕೆ, ಕುತೂಹಲ, ಅಚ್ಚರಿ ಮನುಷ್ಯ ಸಹಜ ಗುಣಗಳು. ಇವನ್ನೆಲ್ಲ ತೋರಿಕೆಗೋಸ್ಕರ ಮಾಡಹೊರಟರೆ ಬದುಕಿನ ಸೂಕ್ಷ್ಮತೆಗಳನ್ನು ಕಳೆದುಕೊಂಡಿರುವುದರ ಕುರುಹು ಅನ್ನಬೇಕಾಗುತ್ತದೆ. ನಡವಳಿಕೆ, ಉಡುಪು, ಮಾತು ಸಹಜವಾಗಿದ್ದರೆ ಅಂತವರು "ಎದ್ದು ಕಾಣದಿರಬಹುದು", ಆಕರ್ಷಕ ಅನ್ನಿಸದಿರಬಹುದು. ಆದರೆ ಸಹಜವಾಗಿರುವವರು ಇಲ್ಲಿ ಸಿಕ್ಕರೂ, ಇನ್ನೆಲ್ಲೋ ಸಿಕ್ಕರೂ ಹಾಗೆಯೇ ಇರುತ್ತಾರೆ. ಮೇಕಪ್ ತೊಳೆದ ನಂತರದ ಮುಖ, ಮುಖವಾಡ ಕಳಚಿಟ್ಟ ಬಳಿಕದ ಸ್ವಭಾವ ಎರಡೂ ಅವರಿಗೆ ಪ್ರತ್ಯೇಕ ಇರುವುದಿಲ್ಲ. ಸೃಷ್ಟಿಯಲ್ಲಿ ಸಹಜವಾಗಿಯೇ ಕಾಣಿಸಿಕೊಳ್ಳುವ ಎಲ್ಲ ವಿಚಾರ ಜನಪ್ರಿಯ ಇರಲಾರದು. ಆದರೆ ಅದರ ಆಹ್ಲಾದಕತೆ ರೆಡಿಮೇಡ್ ವ್ಯಕ್ತಿತ್ವದಲ್ಲಿ ಸಿಕ್ಕಲು ಅಸಾಧ್ಯ. ಸಹಜತೆಗೆ ಪ್ರಚಾರದ ಅಗತ್ಯ ಇರುವುದಿಲ್ಲ!
-KmohanT (04052019)

---------

5) ಎಷ್ಟು ಸುದೀರ್ಘವಾಗಿ ಚಿಂತೆ ಮಾಡಿದರೂ ಸಂಭವಿಸಿದ ಘಟನೆಯನ್ನು undo ಮಾಡಲಾಗದು. ಚಿಂತನೆ ಇಲ್ಲದ ಚಿಂತೆ ಚಿಂತಾಕ್ರಾಂತರನ್ನಾಗಿಸುತ್ತದೆ, ವಿವೇಚನಾ ಶಕ್ತಿಯನ್ನು‌ ಕುಂದಿಸುತ್ತದೆ, ಸಾಧ್ಯತೆಗಳ ಕುರಿತು ಯೋಚಿಸುವ ಆಶಾವಾದದ ಬಾಗಿಲು ಹಾಕುತ್ತದೆ. ಅಸಲಿಗೆ ಚಿಂತೆ ಮಾಡುವುದಲ್ಲ, ಚಿಂತೆ ಕಾಡುವುದು. ಆದರೂ ಚಿಂತೆಯನ್ನು ಮೀರಿದ ಚಿಂತನೆ ಮೂಡುವ ವರೆಗೆ ಚಿಂತೆಯೇ ಚಿತ್ತ ಸ್ವಾಸ್ಥ್ಯವನ್ನು ಕದಡಿ ಬದುಕಿನ ಪುಟ್ಟ ಪುಟ್ಟ ಖುಷಿಗಳನ್ನು ವಿಷಾದದ ಭೂತ ಗನ್ನಡಿಯಲ್ಲಿ ಭಯಂಕರವಾಗಿ ತೋರಿಸುತ್ತಾ ಕೇಕೆ ಹಾಕುತ್ತದೆ!
-KmohanT (03052019)

---------

6) ಒಂದೇ ಕಿಟಕಿಯಿಂದ ಎಷ್ಟು ಸಲ ಹೊರಗೆ ನೋಡಿದರೂ ಅದೇ ದೃಶ್ಯ, ಅದೇ ರೂಪದಲ್ಲಿ ಕಾಣುತ್ತದೆ. ದೃಷ್ಟಿ ಬದಲಿಸಿ ನೋಡಿದರೆ ಮಾತ್ರ ಹಲವು ಆಯಾಮಗಳ ವೀಕ್ಷಣೆ, ಸಂಪೂರ್ಣ ಚಿತ್ರಣ ಕಾಣಲು ಸಾಧ್ಯ. ವ್ಯಕ್ತಿತ್ವಗಳೂ ಅಷ್ಟೆ, ಈ ಕ್ಷಣಕ್ಕೆ ಕಣ್ಣೆದುರು ಕಂಡ ಒಂದು ಆಯಾಮವೇ ಅವರ ಸಂಪೂರ್ಣ ನಡವಳಿಕೆಯ ಸಾರವಾಗಿರಬೇಕಾಗಿಲ್ಲ. ಕಂಡದ್ದಕ್ಕಿಂತ ಕಾಣದ್ದು ಸಾಕಷ್ಟಿರುತ್ತವೆ. ಅದನ್ನು ಅರಿಯದೆ ಒಂದು ನಿದರ್ಶನ, ಯಾರೋ ಹೇಳಿ ಕೊಟ್ಟ ಮಾತಿಗೆ ಕಟ್ಟುಬಿದ್ದು ವ್ಯಕ್ತಿಗಳ ಬಗ್ಗೆ ದುಡುಕಿ ತೀರ್ಮಾನಕ್ಕೆ ಬರುವುದು ವಿವೇಕವಲ್ಲ. ರುಚಿಯೆಂದುಕೊಂಡು ತಿನ್ನುವ ಹಣ್ಣಿನಲ್ಲಿ ಹುಳವಿದೆಯೆಂದು ಯಾರಾದರು ಹೇಳಿದರೆ ಸಾಕು, "ಹುಳ ಕಾಣದಿದ್ದರೂ" ವಾಕರಿಕೆ ಬಂದು ತಿನ್ನುವ ಆಸಕ್ತಿ ಹೋಗುತ್ತದೆ. ಒಬ್ಬರ ಬಗ್ಗೆ ಪೂರ್ವಾಗ್ರಹದಿಂದ ಹೇಳುವ ಮಾತುಗಳೂ ಅಷ್ಟೆ, ಗ್ರಹಿಕೆಗೆ ಬಿಟ್ಟದ್ದು!
-KmohanT (02052019)

---------

7) ಈ ಕ್ಷಣಕ್ಕೆ ನಮ್ಮೆದುರಿಗೆ ಕಾಣುವ ಪರಿಸರವೇ ಸಾರ್ವಕಾಲಿಕ ಸ್ಥಿತಿಯಲ್ಲ‌. ಹೊತ್ತು, ಸಂದರ್ಭ, ಪರಿಸ್ಥಿತಿಗನುಸಾರ ಆಯಾಮಗಳಿರುತ್ತವೆ. ನಮಗೆ ಕಾಣಿಸುವ ವ್ಯಕ್ತಿತ್ವಗಳೂ ಹಾಗೆಯೇ....!
-KmohanT (01052019)

---------

8) ಸೋಲು, ಅನಾರೋಗ್ಯ, ಸಂಧಿಗ್ಧತೆ, ಅಸಹಾಯಕತೆ, ಅಗಲುವಿಕೆ ಮತ್ತಿತರ ಸಂದರ್ಭಗಳು ಅಳುತ್ತಾ ಕೂರುವುದರಿಂದ, ಉದ್ವೇಗದ ಮಾತುಗಳಿಂದ, ವಾದ-ಪ್ರತಿ ವಾದಗಳಿಂದ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರಿಂದ ಖಂಡಿತಾ ಪರಿಹಾರ ಆಗುವುದಿಲ್ಲ. ತಾಳ್ಮೆಯಿಂದ ಪರಿಸ್ಥಿತಿ ಅರ್ಥ ಮಾಡಿಕೊಂಡು, ವಸ್ತುಸ್ಥಿತಿ ಸ್ವೀಕರಿಸಿಕೊಂಡು ಯೋಚಿಸಿದಾಗ ಮಾತ್ರ ಹೊರಬರಲು "ದಾರಿ ಇದ್ದರೆ" ಕಾಣಿಸುತ್ತದೆ. ಸಮಚಿತ್ತ ಕಳೆದು ವಿವೇಚನೆ ಮರೆತಾಗ, ಸಿಟ್ಟು ಆವಾಹಿಸಿಕೊಂಡಾಗ ಉಂಟಾಗುವ ಭಾವಾವೇಶ ಪ್ರಕಟದಿಂದ ಆ ಕ್ಷಣಕ್ಕೆ ಮನಸು ಹಗುರಾದ ಹಾಗೆ ತೋಚಬಹುದೇ ಹೊರತು ಮೂಲ ಸಮಸ್ಯೆ ಹಾಗೆಯೇ ಉಳಿದಿರುತ್ತದೆ!
-KmohanT (01052019)

---------

9) ನಾವು ಕಂಡ ನಾವು ನಾವಾಗಿರುತ್ತೇವೆ ವಿನಃ ಅವರಿವರೊಳಗೆ ಹುಡುಕಿದರೆ, ಹೋಲಿಸಿದರೆ, ಪೂರ್ವಾಗ್ರಹದ ತಕ್ಕಡಿಯಲ್ಲಿ ತೂಗಿದರೆ ಅದು ನಾವಾಗಿರುವುದಿಲ್ಲ. ನಾನು ಹೀಗೆಯೇ ಎಂದು ನಮ್ಮೊಳಗಿನ ನಮ್ಮನ್ನು ನಾವಾಗಿ ನಾವು ಕಂಡಷ್ಟು ಸ್ಪಷ್ಟವಾಗಿ ತೋರಿಸಲು ಎಲ್ಲ ಸಂದರ್ಭಗಳಲ್ಲಿ ಸುಲಭವಿಲ್ಲ. ನಮ್ಮಲ್ಲಿ ನಮಗೇ ನಂಬಿಕೆ ಇಲ್ಲದಿದ್ದರೆ ಮತ್ಯಾರ ಮೇಲೂ ನಂಬಿಕೆ ಬಾರದು. ಪ್ರಭಾವಗಳು, ಪರಿಸ್ಥಿತಿಗಳ ಹೊರತೂ ಕೈಲಾದ ಮಟ್ಟಿಗೆ ನಾವು ನಮ್ಮಿಷ್ಟದಂತೆ ನಾವಾಗಬೇಕು. ನಮಗೇ ನಾವು ಸ್ಪಷ್ಟವಾಗಿ ಕಂಡಾಗ ಪದೇ ಪದೇ ಸ್ಪಷ್ಟನೆ, ಪ್ರಚಾರ ಕೊಡುವುದರ ಆಸಕ್ತಿ ಹೊರಟುಹೋಗುತ್ತದೆ. ನಮ್ಮೊಳಗಿನ ನಮಗೆ ಸರಿ ತಪ್ಪುಗಳ ಪ್ರಜ್ಞೆ ಇರುತ್ತದೆ. ಅದನ್ನು ಮೀರಿ ನಡೆಯ ಹೊರಟಾಗ ನಾವು ನಾವಾಗಿ ಉಳಿಯುವುದಿಲ್ಲ. ಇತರರು ನಮ್ಮನ್ನು ನಾವ್ಯಾರೆಂದು ನಿರ್ಧರಿಸುತ್ತಾರೆ!
-KmohanT (29042019)

----------

10) ನಮ್ಮ ತಪ್ಪು ಇಲ್ಲದಿದ್ದರೂ ಕೆಲವೊಮ್ಮೆ ದುರದೃಷ್ಟ ಮತ್ತು ಕಾಲದ ಮಹಿಮೆಯಿಂದ ಅಪಮಾನ, ನಿಂದನೆ, ಹಿನ್ನಡೆಗಳನ್ನು ಎದುರಿಸಬೇಕಾಗುತ್ತದೆ. ಅಧಿಕಾರದ ಗರ್ವ, ಅಹಂಕಾರ ಅಥವಾ ಕ್ಷಣಿಕ ಶಕ್ತಿಯ ಮದದಿಂದ ಎದುರಾಗುವ ಕೆಣಕುವಿಕೆ ಅಥವಾ ಸೊಕ್ಕಿನ ವರ್ತನೆಗಳಿಗೆ ತಕ್ಷಣದ ಉದ್ವೇಗ, ಬೇಸರ, ಸಿಟ್ಟಿನಲ್ಲಿ ಪ್ರತಿಕ್ರಿಯಿಸುವುದು ಅವಿವೇಕ. ಪ್ರತಿಯೊಬ್ಬರಿಗೂ ತನ್ನನ್ನು "ನಿರೂಪಿಸಲು" ದೇವರು ಅವಕಾಶ ನೀಡಿಯೇ ನೀಡುತ್ತಾನೆ. ಅಲ್ಲಿಯ ತನಕ ತಾಳ್ಮೆ ಬೇಕು. ಪ್ರಾಮಾಣಿಕತೆಗೆ ಬೆಲೆ ಇರುವುದು ನಿಜವಾದರೆ ಕಾಲವೇ ಉತ್ತರಿಸಲೂ ಬಹುದು. ಅಹಂಕಾರಕ್ಕೆ ವಾದವಲ್ಲ... ವರ್ತನೆ ಉತ್ತರವಾಗಬೇಕು. ದೊಡ್ಡ ಧ್ವನಿ ಮತ್ತು ದರ್ಪದ ಮಾತು ಗೆಲವಿನ ಪ್ರತಿರೂಪವಲ್ಲ, ಆತ್ಮವಿಶ್ವಾಸ ಮತ್ತು ಸೂಕ್ತ ಸಂದರ್ಭದ ದೃಢ ಮಾತು ಸತ್ಯಕ್ಕೆ ಪ್ರತಿಬಿಂಬ!
-KmohanT (27042019)

----------

11) ವೈಯಕ್ತಿಕ ಹತಾಶೆಗಳನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣ ವೇದಿಕೆಯಲ್ಲ. ಅದು, ನಾಲ್ಕು ರಸ್ತೆ ಕೂಡುವ ವೃತ್ತದಲ್ಲಿ ಬೆತ್ತಲಾಗಿ ನಿಂತು ಕೂಗಿದ ಹಾಗೆ! ಜನ ಅವಸರದಲ್ಲಿ ಹೋಗ್ತಾ ಇರ್ತಾರೆ. ಕೆಲವರು ನಿಂತು ಮನರಂಜನೆ ಅನುಭವಿಸಬಹುದು, ತಮ್ಮ ಮೂಗಿನ ನೇರಕ್ಕೆ ಉಚಿತ ಸಲಹೆ ಕೊಡಬಹುದು, ನಮ್ಮ ವ್ಯಕ್ತಿತ್ವದ ಬಗ್ಗೆ ಒಂದು ಲೇಬಲ್ ಹಚ್ಚಬಹುದು, ಇದರಿಂದ ತಮಗೇನು ಲಾಭವೆಂದು ಲೆಕ್ಕ ಹಾಕಬಹುದು ಅಷ್ಟೆ. ಬೇಸರ, ಹತಾಶೆ, ಪ್ರಯಾಣದ ವಿವರ, ಮನಸ್ಥಿತಿ ವಿವರಣೆ, ವೈಯಕ್ತಿಕ ಬದುಕಿನ ಅತಿ ರಂಜಿತ ವರ್ಣನೆ...ವಿನಾ ಕಾರಣ ಕೋಲು ಕೊಟ್ಟು ಹೊಡೆಸಿಕೊಂಡ ಹಾಗೆ ಅಷ್ಟೆ. ಅಷ್ಟಕ್ಕೂ ಸಮಸ್ಯೆಗಳಿಗೆ ಪರಿಹಾರ ಹೇಳಬಲ್ಲವರು ನಮ್ಮ ಅರ್ಥ ಮಾಡಿಕೊಂಡ ಆಪ್ತರೇ ಹೊರತು "ಸಾರ್ವಜನಿಕರಲ್ಲ". ಲೈಕು ಮತ್ತು ಕಮೆಂಟುಗಳಲ್ಲಿ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಅಪ್ರಬುದ್ಧ ಅಥವಾ ಅಸಹಜವಾಗಿ ಕಾಣುತ್ತದೆ!
....
ಇನ್ನೊಂದು ವಿಷಯ FB ಯ
like ಮತ್ತು ಕಮೆಂಟ್ ಬಗ್ಗೆ...
ತುಂಬ ಜನ ತಮ್ಮ ಪೋಸ್ಟುಗಳಿಗೆ ಲೈಕ್/ಕಮೆಂಟ್ ಬರ್ತಾ ಇಲ್ಲ ಅಂತ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸ್ತಾರೆ. ಅಥವಾ ನೀವ್ಯಾಕೆ ನನ್ನ ಪೋಸ್ಟಿಗೆ ಲೈಕ್ ಮಾಡಿಲ್ಲ ಅಂತ ನೊಂದುಕೊಂಡು ನೇರವಾಗಿ ಪ್ರಶ್ನಿಸ್ತಾರೆ. ಈ ಥರ ಹತಾಶೆ ಯಾಕೆ? ಲೈಕು/ಕಮೆಂಟುಗಳಿಗೋಸ್ಕರ ಅಲ್ಲ ತಾನೆ ನಾವು ಬರೆಯೋದು? ಲೈಕು ಕೊಟ್ಟವರೆಲ್ಲ ನಾವು ಬರೆದದ್ದನ್ನು ಓದುತ್ತಾರೆಂದೂ, ಲೈಕ್ ಕೊಡದವರು ಓದುವುದಿಲ್ಲವೆಂದು ಹೇಳಿದವರು ಯಾರು? ಕೆಲವು ಮಂದಿ ತುಂಬ ಆಸಕ್ತಿಯಿಂದ ಓದಿ ವಿವರವಾಗಿ ಕಮೆಂಟುಗಳನ್ನು ಓದಿ ಪ್ರೋತ್ಸಾಹಿಸುತ್ತಾರೆ. ಅದು ಅವರವರ ಆಸಕ್ತಿ, ಸಮಯಾವಕಾಶ ಮತ್ತು ಆದ್ಯತೆಗಳನ್ನು ಅವಲಂಬಿಸಿ ಇರುತ್ತದೆ. ಇದನ್ನು ಹೊರತು ಪಡಿಸಿ " ನಿನಗೆ ನಾ ಲೈಕು ಕೊಟ್ಟರೆ, ನನಗೆ ನೀನು ಲೈಕು ಕೊಡು" ಎನ್ನುವ ಕೊಡುಕೊಳ್ಳುವಿಕೆ ಮಾಡಲು ಇದು ವ್ಯವಹಾರವಲ್ಲವಲ್ಲ. ಸಹಜವಾಗಿ ನಡೆಯಬೇಕಾದ ಪ್ರಕ್ರಿಯೆ. ನಮ್ಮ ವಾಲ್ ನಲ್ಲಿ ಬರುವುದು ಮಾತ್ರ ಪ್ರತಿಕ್ರಿಯೆಗಳಲ್ಲ. ವೈಯಕ್ತಿಕವಾಗಿ ಕೂಡಾ ಪ್ರತಿಕ್ರಿಯೆ ಬರಬಹುದು.
ನಮಗೆ ಕೊಡಲಾದ ಪ್ರಶಸ್ತಿಯ ಮೊತ್ತ ಎಷ್ಟು? ಎಷ್ಟು ಅದ್ಧೂರಿಯ ಸಮಾರಂಭದಲ್ಲಿ ಪ್ರಶಸ್ತಿ ಕೊಟ್ಟರು ಎಂಬುದರ ಮೇಲೆ ಪ್ರಶಸ್ತಿಯ ಶ್ರೇಷ್ಠತೆ ನಿರ್ಧಾರ ಆಗುವುದಲ್ಲ. ಪ್ರಶಸ್ತಿ ಕೊಟ್ಟವರು ಯಾರು, ಯಾವ ಸಂಸ್ಥೆ ಎಂಬುದರ ಮೇಲೆ ಪ್ರಶಸ್ತಿಯ ಗೌರವ ನಿರ್ಧಾರ ಆಗುವುದು. ಅದೇ ರೀತಿ ಲೈಕು ಮತ್ತು ಕಮೆಂಟುಗಳ "ಮಾತ್ರ" ಬರಹದ ಶ್ರೇಷ್ಠತೆಗೆ ಮಾನದಂಡವೋ ತೀರ್ಪು ನೀಡುವ ಅಂಶವೂ ಆಗಿರಬೇಕಾಗಿಲ್ಲ. ಎಷ್ಟು ಮಂದಿ ಬರೆದದ್ದನ್ನು ಅರ್ಥ ಮಾಡಿದ್ದಾರೆ, ಎಷ್ಟು ಜನರನ್ನು ತಲುಪಿದೆ? ನೈಜ ವಿಮರ್ಶೆ ಮಾಡಿದ್ದಾರೆ? ಎಂಬುದೇ ಮುಖ್ಯ. ಬರಹಗಳಿಗೆ ಸಾಮಾಜಿಕ ಜಾಲತಾಣ ಒಂದು ವೇದಿಕೆ ಅಷ್ಟೆ ಹೊರತು, ಇದುವೇ ನಮ್ಮ ಅರ್ಹತೆ ನಿಗದಿಪಡಿಸುವ ಅಂತಿಮ‌ ಸ್ಥಳವಲ್ಲ!
-KmohanT (26042019)

---------

12) ಎಷ್ಟೇ ಯೋಚಿಸಿದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ನಾವು ಬಳಸುವುದು ಕೆಲವೇ ಸೆಕೆಂಡುಗಳು. ಆದರೆ ಅದರ ಪರಿಣಾಮ ಸುದೀರ್ಘ. ಉದ್ವೇಗರಹಿತ, ದೂರದೃಷ್ಟಿಯ, ಸಮಚಿತ್ತ ಮತ್ತು ನಿಷ್ಠುರತೆ ನಿರ್ಧಾರ ಕೈಗೊಳ್ಳುವ ಹೊತ್ತಿಗೆ ಬೇಕು. ಆ ಹೊತ್ತಿನ ಮನಸ್ಥಿತಿ, ಉಚಿತ ಸಲಹೆಗಳು, ನಮ್ಮ ವಿಷಯ ಗ್ರಹಿಕೆಯ ಪರಿಪಕ್ವತೆ...ನಿರ್ಧಾರವನ್ನು‌ ನಿರ್ಧರಿಸುತ್ತವೆ! ಎಷ್ಟೇ ಬುದ್ಧಿವಂತರೆನಿಸಿದವರೂ ಕೂಡ ತಪ್ಪು ನಿರ್ಧಾರಗಳನ್ನು ಕೈಗೊಳ್ತಾರೆ. ಕೂಡುರಸ್ತೆಯಲ್ಲಿ ಅರಿವಿಲ್ಲದೇ ತಪ್ಪು ದಾರಿಯಲ್ಲಿ ಹೋಗಲು ಸೆಕುಂಡಿನ ಅರ್ಧ ಭಾಗ ಸಾಕು. ತುಂಬ ದೂರ ಸಾಗಿದ ಬಳಿಕ ಅರಿವಾದರೂ, ಅಷ್ಟು ಹೊತ್ತಿನ ಪಯಣ, ಮರಳಿ ಬರುವ ಪಯಣ ನಿಷ್ಫಲವಾಗಿರುತ್ತದೆ. ದಾರಿ ಸುತ್ತುಬಳಸು ಅಂತ ಗೊತ್ತಾದ ಬಳಿಕ ತುಂಬ ಜನ ತಡವಾದರೂ ಅಡ್ಡಿಯಿಲ್ಲವೆಂದು ಅದರಲ್ಲೇ ಮುಂದುವರಿಯುತ್ತಾರೆ, ಹಲವರು ಮರಳುವ ದಾರಿಯನ್ನೇ ಕಳೆದುಕೊಂಡಿರುತ್ತಾರೆ!
-KmohanT (25042019)

------------

13) ಕೇಳಿಸುವವರಿಗಿಂತ ಹೇಳುವವರ ಸಂಖ್ಯೆ ಜಾಸ್ತಿ. ಅರ್ಥ ಮಾಡಿಕೊಳ್ಳಲು ಕೇಳುವುದಕ್ಕಿಂತ ಉತ್ತರ ಕೊಡುವ ಆತುರದಲ್ಲಿ ಕೇಳುವವರೇ ಅಧಿಕ. ಕೇಳಿಸಿಕೊಳ್ಳುವಾತ ಮನಸಿಟ್ಟು ಕೇಳಿಸದಿದ್ದರೆ ಹೇಳುವುದು ವ್ಯರ್ಥವಾಗುತ್ತದೆ. ಅಧಿಕ ಮಾತು, ಉಚಿತ ಸಲಹೆ ಕೊಡುವುದಕ್ಕಿಂತ ಉತ್ತಮ ಶ್ರೋತೃವಾಗುವುದು ಕಷ್ಟದ ಕೆಲಸ. ಕೇಳಿಯೂ ಕೇಳದಂತಿರುವುದು, ಕೇಳಿಸದಷ್ಟು ನಿರ್ಲಿಪ್ತನಾಗಿರುವುದು, ಕೇಳಬಾರದ್ದನ್ನು ಕೇಳುವುದು, ಮತ್ತೊಬ್ಬರಿಗೆ ಹೇಳುವುದಕ್ಕೋಸ್ಕರ ಕೇಳುವುದು, ಅರೆಬರೆ ಕೇಳಿಸಿಕೊಳ್ಳುವುದು ಉತ್ತಮ ಬಾಂಧವ್ಯಕ್ಕೆ ಮಾರಕ. ಮೌನ, ಸಹನೆ, ಸೂಕ್ತ ಸಮಯದ ವರೆಗೆ ಸಂಯಮದಿಂದ ಇರಬಲ್ಲ ಶಕ್ತಿ ಉತ್ತಮ‌ ಕೇಳುಗನನ್ನು ರೂಪಿಸುತ್ತದೆ. ಹೇಳುವವರಿಗಿಂತ ಕೇಳಿಸಿಕೊಳ್ಳುವವರೇ ಹೆಚ್ಚು ಆಪ್ತರಾಗುತ್ತಾರೆ. ಆತುರದಿಂದ ಹೇಳುವವರ ಎದುರು ತಾಳ್ಮೆಯಿಂದ ಕೇಳುವವರು ಬೌದ್ಧಿಕವಾಗಿ ಹೆಚ್ಚು ಪ್ರೌಢರಾಗುತ್ತಾರೆ.
-KmohanT (23042019)

-------------

14) ಬದುಕಿನಲ್ಲಿ ಟೀಕೆಗಳು ಸಹಜ. ನಮ್ಮ ತಪ್ಪುಗಳನ್ನು ತೋರಿಸುವ ಟೀಕೆಗಳನ್ನು ಸ್ವೀಕರಿಸಿ ತಿದ್ದಿಕೊಳ್ಳಬೇಕು. ತೇಜೋವಧೆ ಮತ್ತು ವಿತಂಡವಾದದ ಟೀಕೆಗಳಿಗೆ ಉದಾಸೀನವೇ ಮದ್ದು. ಪ್ರತಿಯೊಂದನ್ನೂ ಅಪಾರ್ಥವೇ ಮಾಡುವ, ಮೊಂಡುವಾದ ಮಾಡುವ ಏಕಪಕ್ಷೀಯ ಮನಸ್ಥಿತಿ ಉಳ್ಳವರಿಗೆ ವಾಸ್ತವವನ್ನು ಅರ್ಥ ಮಾಡಿಸಿ ನಂಬಿಸುವುದು ಕಷ್ಟ ಮತ್ತು ಅದು ಕಾಲಹರಣ ಅಷ್ಟೆ. ಅಪಾರ್ಥದ ಟೀಕೆಗಳಿಗೆ ಕಂಗೆಟ್ಟು ನಮ್ಮನ್ನು ಸಮರ್ಥಿಸುತ್ತಾ, ಪ್ರತಿಯೊಬ್ಬರನ್ನೂ ಮೆಚ್ಚಿಸುತ್ತಾ ಕೂತರೆ ನಾವು ಮುಂದೆ ಹೋಗುವುದು ಹೇಗೆ? ಕ್ಷುಲ್ಲಕ ಟೀಕೆಗೆ ನಮ್ಮ ನಡವಳಿಕೆ ಉತ್ತರವಾಗಬೇಕು ಹೊರತು ವ್ಯರ್ಥ ಪ್ರತಿವಾದವಲ್ಲ. ಮೌನ ಎಂದರೆ ಪಲಾಯನವಾದ, ಸೋಲೊಪ್ಪಿಕೊಳ್ಳುವುದು ಮತ್ತು ದೌರ್ಬಲ್ಯವಲ್ಲ. ಮೌನವೆಂದರೆ ನಮಗೆ ನಮ್ಮ ಮೇಲಿರುವ ನಂಬಿಕೆ ಮತ್ತು ಸಹನೆಯ ಪ್ರತೀಕ!
-KmohanT (23042019)

-----------

15) ಹಲವು ಸಮಯದಿಂದ ನೋಡುತ್ತಿದ್ದೇವೆ ಎಂಬ ಒಂದೇ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ನಾವು ಪೂರ್ಣ ಅರ್ಥ ಮಾಡಿಕೊಂಡಿರಬೇಕಿಲ್ಲ. ಅವರು ನಮಗೆ ಕಾಣಿಸಿದ್ದು, ಮೂರನೇ ವ್ಯಕ್ತಿ ಅವರ ಬಗ್ಗೆ ಹೇಳಿದ್ದು, ನಮ್ಮ ಕಣ್ಣುಗಳಿಂದಲೇ ಅವರನ್ನು ಕಂಡದ್ದು... ಈ ಮೂರೂ ರೀತಿಯ ಗ್ರಹಿಕೆಗಳಿಗೆ ವ್ಯತ್ಯಾಸ ಇರುತ್ತದೆ. ಬೇರೆಯವರು ಹೇಳುವುದು ಪೂರ್ವಾಗ್ರಹ ಸೃಷ್ಟಿಸಿದರೆ, ನಾವು ಅರೆಬರೆ ಕಂಡದ್ದು ಅಪಾರ್ಥಗಳಿಗೆ ಕಾರಣ ಆಗಬಹುದು. "ತಾನು ಹೀಗೆಯೇ ಇರುವುದೆಂದು" ಒಬ್ಬ ಹೇಳಿಕೊಳ್ಳದ ಹೊರತು ನಾವು ನಮ್ಮದೇ ಗ್ರಹಿಕೆ ಮಟ್ಟದಿಂದ ಅವರ ಬಗ್ಗೆ ನಿರ್ಣಾಯಕ ಅಭಿಪ್ರಾಯ ಹೊಂದಿ, ಅವರು ಆ ಥರ ಇಲ್ಲವೆಂದು ನಮಗನಿಸಿದರೆ ಅದು ಅವರ ತಪ್ಪಲ್ಲ. ನಮ್ಮೊಳಗಿರುವ ಗ್ರಹಿಕೆಯೇ ತಪ್ಪು. ತನ್ನ ಇಷ್ಟದಂತೆ ಬದುಕುವ ಹಕ್ಕು ಎಲ್ಲರಿಗಿದೆ. ಅವರವರ ಗ್ರಹಣ ಶಕ್ತಿ, ವಿವೇಚನೆ ಸಾಮರ್ಥ್ಯಕ್ಕನುಗುಣವಾಗಿ ಅವರಿವರು "ಅರ್ಥ" ವಾಗ್ತಾರೆ.
ಹಲವು ಸಂದರ್ಭಗಳಲ್ಲಿ ದೂರದಿಂದ ಕಂಡು/ಕೇಳಿದ ವ್ಯಕ್ತಿಯ ಸಮೀಪ ದರ್ಶನ/ಒಡನಾಟದ ಬಳಿಕ ಅವರ ಕುರಿತು ನಮಗಿರುವ ಅಭಿಪ್ರಾಯ/ಅಭಿಮಾನ ಬದಲಾಗುತ್ತದೆ. ಎಷ್ಟೋ ಬಾರಿ‌ ನಮ್ಮ ಸಮೀಪವರ್ತಿಗಳಿಗಿಂತ ದೂರದಿಂದಲೇ ಕಾಣುವ ವ್ಯಕ್ತಿ ಹೆಚ್ಚು ವಿವೇಚನೆಯ, ವಿವೇಕದ, ಸಮಚಿತ್ತದ ಸವ್ಯಸಾಚಿಗಳಂತೆ ಕಾಣಿಸುತ್ತಾರೆ. ಇದಕ್ಕೆ ಕಾರಣ ಸ್ಪಷ್ಟ: ದೂರದಿಂದ ಅವರು "ಕಾಣಿಸಿಕೊಂಡಿರುತ್ತಾರೆ" ಹೊರತು ನಾವು ಹತ್ತಿರದಿಂದ "ಕಂಡುಕೊಂಡಿರುವುದಿಲ್ಲ, ಸಮೀಪದಲ್ಲಿ ಇರುವವರ ಥರ ದೂರದಿಂದ ಕಾಣುವ ವ್ಯಕ್ತಿಗಳ ಬಲಹೀನತೆ, ದೌರ್ಬಲ್ಯ ಎರಡೂ ತಿಳಿಯುವುದಿಲ್ಲ, ಪ್ರತಿಭೆ ಅಥವಾ ಸೌಂದರ್ಯ ಮಾತ್ರ ಕಂಡು ಬರುತ್ತದೆ. ಜಗತ್ತಿನಲ್ಲಿ ದೌರ್ಬಲ್ಯ, ಮಿತಿಗಳಿಲ್ಲದವರು ಯಾರೂ ಇಲ್ಲ, ಪ್ರಮಾಣ ಹೆಚ್ಚು ಕಮ್ಮಿ ಇರಬಹುದಷ್ಟೆ!
-KmohanT (22042019)


---------


16) ಸಿಸಿ ಟಿವಿ, ಆಧಾರ್ ಕಾರ್ಡ್, ಗುರುತು ಚೀಟಿ, ಗುಣನಡತೆಗೆ ದೃಢಪತ್ರಗಳೆಲ್ಲ ನಮ್ಮ ಪ್ರಾಮಾಣಿಕತೆಗೆ ಆಧುನಿಕ‌ ಕಾಲಘಟ್ಟ ಒದಗಿಸಿರುವ ಸಂಕೇತಗಳು. ಇವ್ಯಾವುದೂ ಇಲ್ಲದೇ ಒಬ್ಬ ವ್ಯಕ್ತಿ ಪ್ರಾಮಾಣಿಕ, ಸತ್ಯಸಂಧನಾಗಿರಲು ಹಾಗೂ ದಾಖಲೆಗಳನ್ನು ನೀಡದೇ ಅದನ್ನು ಗುರುತಿಸಲು ಸಾಧ್ಯವಿದೆ. ಪ್ರಯೋಗಾಲಯದ ವರದಿ ಬರುವುದಕ್ಕೂ ಮೊದಲೇ ಲಕ್ಷಣಗಳನ್ನು ಕಂಡು ರೋಗ ಗುರುತಿಸಬಲ್ಲ ನುರಿತ ವೈದ್ಯರ ಹಾಗೆ (ಲ್ಯಾಬ್ ರಿಪೋರ್ಟ್ ಇಲ್ಲದೆ ಚಿಕಿತ್ಸೆ ಕೊಡಬೇಕಂದಲ್ಲ. ಕೊನೆಪಕ್ಷ ರೋಗ ಗುರುತಿಸಬಹುದು) ಆದರೆ ಜಗತ್ತು ಈ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದೆ. ದಾಖಲೆಯಿಲ್ಲದೆ ಸತ್ಯವೂ "ನಿಜ" ಎನಿಸುವುದಿಲ್ಲ. ಅಂತಹ ಸಂದರ್ಭದಲ್ಲೇ ಸಾತ್ವಿಕತೆ ಪುಕ್ಕಲುತನದಂತೆ, ನೇರ ಮಾತು ಕೊಂಕು ನುಡಿಯಂತೆ, ಸತ್ಯಸಂಧತೆ ನಾಟಕದಂಥೆ, ಮೌನ ಮತ್ತು ತಾಳ್ಮೆ ದೌರ್ಬಲ್ಯದಂತೆ ಕಾಣಿಸುತ್ತದೆ!
-KmohanT (21042019)


---------


17) ವ್ಯಕ್ತಿಯ ದಿರಿಸು, ಭಾಷಣ, ಹೊರಗಿನ ಗಾಂಭೀರ್ಯ "ಮಾತ್ರ" ಕಂಡು ಯೋಗ್ಯತೆ ಅಳೆಯಲಾಗದು. ಎಷ್ಟು ಮಂದಿ ಜೈಕಾರ ಹಾಕುತ್ತಾರೆಂಬ ಒಂದೇ ಆಧಾರದಲ್ಲಿ ವ್ಯಕ್ತಿಯ ಶ್ರೇಷ್ಠತೆ ನಿರ್ಧರಿಸುವುದು ಪ್ರೌಢತೆಯಲ್ಲ. ಜನಪ್ರಿಯವಾದದ್ದೆಲ್ಲ ಶ್ರೇಷ್ಠ, ಪ್ರಚಾರದಲ್ಲಿ ಇಲ್ಲದ್ದು/ಇಲ್ಲದವರು ಕನಿಷ್ಠ ಎಂದೂ ಅರ್ಥ ಅಲ್ಲ. ಜಗತ್ತಿನಲ್ಲಿ ಪ್ರಚಾರವೇ ಇಲ್ಲದೆ ಪರೋಪಕಾರಿಗಳಾಗಿರುವವರು, ಸದ್ದಿಲ್ಲದೆ, ಸೊಕ್ಕಿಲ್ಲದೆ, ಪರರಿಗೆ ಮೋಸ/ಉಪದ್ರ ಮಾಡದೆ ಸಾಧಿಸಿ ಬದುಕುವ ಸಾವಿರಾರು ಮಂದಿ ಇದ್ದಾರೆ. ಪ್ರಚಾರ, ಅಧಿಕಾರ ಇಲ್ಲದೆ ಎಲ್ಲೋ ಮರೆಯಾಗಿರುತ್ತಾರೆ. ಗೆದ್ದೆತ್ತಿನ ಬಾಲ ಹಿಡಿದು ನಾವೂ ಶ್ರೇಷ್ಠರಾದೆವೆಂದುಕೊಳ್ಳುವುದು ಮೂರ್ಖತನ. ಸಹಜವಾಗಿ ಸಾಧಿಸುವ/ಬದುಕುವ ಮಂದಿಯನ್ನು ಗುರುತಿಸಿದರೆ ಪ್ರಚಾರ ಸಿಗದಿರಬಹುದು, ಆದರೆ ಆಗ ಸಿಕ್ಕುವ ಆತ್ಮತೃಪ್ತಿಗೆ ಬೆಲೆ ಕಟ್ಟಲಾಗದು!
-KmohanT (19042019)


----------------

18) ನಾನು ಮತ ಚಲಾಯಿಸಿದ್ದೇನೆ. ಮತ ಚಲಾಯಿಸಿದ ಬಳಿಕ ಸಹಜವಾಗಿಯೇ ಇದ್ದೇನೆ. ಭಾವೋದ್ವೇಗಕ್ಕೆ ಒಳಗಾಗುವಂಥದ್ದೇನೂ ಕಂಡಿಲ್ಲ. ಮತ ಚಲಾಯಿಸುವುದು ಅವರವರ ಹಕ್ಕು ಮತ್ತು ಇಷ್ಟ. ನನ್ನ ಶಾಯಿ ಸಹಿತ ಬೆರಳಿನ ಚಿತ್ರ ನೋಡಿ ಯಾರೂ ಸ್ಫೂರ್ತಿಗೊಂಡು ಮತ ಹಾಕಲು ತೆರಳುತ್ತಾರೆಂಬ ಭ್ರಮೆ ನನಗಿಲ್ಲ. Statusನಲ್ಲಿ ಬೆರಳಿನ ಚಿತ್ರ ಹಾಕದವರು ಮತವೇ ಹಾಕಿಲ್ಲ ಎಂದು ಜನ ಅಂದುಕೊಂಡಾರೆಂಬ ಕೀಳರಿಮೆ ಯಾರಿಗೂ ಬೇಡ. ಮತ ಚಲಾವಣೆ ಯಾವ ರೀತಿ ವೈಯಕ್ತಿಕ ಆಯ್ಕೆಯೋ ಬೆರಳಿನ ಚಿತ್ರ ಹಾಕುವುದು ಕೂಡಾ ಅವರವರ ಇಷ್ಟ. ಎಲ್ಲಿ ತನಕ ಗೆದ್ದ ಅಭ್ಯರ್ಥಿಗಳಿಗೆ ತಾವು ಪಡೆದ ಮತಗಳು ಅಮೂಲ್ಯ, ಜನರ ನಂಬಿಕೆ ಉಳಿಸಬೇಕೆಂದು ಅನ್ನಿಸುವುದಿಲ್ಲವೋ ಅಲ್ಲಿ ತನಕ ನನಗೂ ಮತ ಚಲಾವಣೆ exciting ಸಂಗತಿಯೆಂದು ಅನ್ಸೋದೇ ಇಲ್ಲ...!
-KmohanT (18042019)


-----------


19) ಸಾತ್ವಿಕತೆ, ದಾಕ್ಷಿಣ್ಯದ ಪ್ರವೃತ್ತಿ ಸೌಜನ್ಯದ ಪ್ರತಿರೂಪ ಇರಬೇಕೇ ಹೊರತು ದೌರ್ಬಲ್ಯ ಆಗಬಾರದು. ಪ್ರತಿ ವ್ಯಕ್ತಿಗೂ ಬದುಕಿನ ಇತರ ಎಲ್ಲ ಪಾತ್ರಗಳ ನಡುವೆ ತನ್ನನ್ನು ತಾನು ಕಂಡುಕೊಳ್ಳಲು ತನ್ನದೇ ಆದ space ಇರಬೇಕು. ದಾಕ್ಷಿಣ್ಯವೇ ದೌರ್ಬಲ್ಯವಾದರೆ ತಮ್ಮ ಬಾಯಿ ಚಪಲಕ್ಕೆ ಆ ವೈಯಕ್ತಿಕ ಸಮಯಾವಕಾಶವನ್ನು ಕೆಡಿಸುವವರು, ಬಿಟ್ಟಿ ಕೆಲಸ ಮಾಡಿಸುವವರು, ನಂಬಿಕೆಗಳ ಮೇಲೆ ಪ್ರಹಾರ ಮಾಡುವವರ ಸಂಖ್ಯೆ ಹೆಚ್ಚುತ್ತದೆ. ನಮ್ಮದೇ ಆದ ಸಮಯ, ನಂಬಿಕೆ, ಚಿಂತನೆಗಳ ನಿಯಂತ್ರಣ ಅವರಿವರ ಕೈಯ್ಯಲ್ಲಿ ಕಳೆದು ಹೋಗುತ್ತದೆ. ಸಹನೆ ಮತ್ತು ನಿಷ್ಠುರತೆಯ ಸಮತೋಲಿತ ಪ್ರಯೋಗ ಆಗದಿದ್ದರೆ ನಮ್ಮ ಸಾತ್ವಿಕತೆಯೇ ನಮ್ಮ ಅಸಹಾಯಕತೆ, ಲೋಪವಾಗಿ ಕಾಡುತ್ತದೆ!
-KmohanT (13042019)


------------


20) ಜಗತ್ತಿನಲ್ಲಿ ಯಾರೂ ಪ್ರಶ್ನಾತೀತರಲ್ಲ. ಪ್ರಶ್ನೆಗಳು ವಿಚಾರ ಮಂಥನಕ್ಕೆ, ವಾಸ್ತವವನ್ನು ಪ್ರಖರಗೊಳಿಸಲು ಸಹಕಾರಿಯಾಗಿರುತ್ತವೆ. ಪ್ರಶ್ನಿಸಿದಾತನೊಂದಿಗೆ ಉತ್ತರಿಸಿದವರೂ ಬೆಳೆಯುತ್ತಾರೆ, ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಾರೆ. ಆರೋಗ್ಯಕರ ಸಂವಾದಕ್ಕೂ ವೇದಿಕೆ ಆಗುತ್ತದೆ. ತನ್ನ ಬಗ್ಗೆ ತನಗೇ ವಿಶ್ವಾಸ ಇರುವ ವ್ಯಕ್ತಿ ಪ್ರಶ್ನೆಗಳಿಗೆ ಹಿಂಜರಿಯುವ ಅಗತ್ಯ ಇಲ್ಲ. ಪ್ರಶ್ನೆಗಳಲ್ಲಿ ಪ್ರಿಯವೂ, ಅಪ್ರಿಯವೂ ಇರಬಹುದು. ಉತ್ತರಿಸದಿರುವ ಆಯ್ಕೆಯಿದೆ. ಆದರೆ ಪ್ರಶ್ನೆಗಳನ್ನೇ ಹತ್ತಿಕ್ಕುವುದು ಸರ್ವಾಧಿಕಾರದ ಮನಸ್ಥಿತಿಯ ಸಾಮಾನ್ಯ ಲಕ್ಷಣ. ಬಹುತೇಕ ಸಂದರ್ಭಗಳಲ್ಲಿ ಮೊದಲು ಪ್ರಶ್ನೆಯೆತ್ತಿದಾತ "ಪ್ರತ್ಯೇಕ"ನಾಗುತ್ತಾನೆ, ಧ್ವನಿ‌ ಒಂಟಿಯಾಗಿರುತ್ತದೆ. ಪ್ರಶ್ನೆಯಿಂದ ಒಂದು ಫಲ ಸಿಕ್ಕರೆ ಹಂಚಿಕೊಳ್ಳಲು ಸಾಂದರ್ಭಿಕ ಫಲಾನುಭವಿಗಳು ಹುಟ್ಟಿಕೊಳ್ಳುತ್ತಾರೆ!
-KmohanT (12042019)


----------


21) ಪ್ರಭಾವ, ಪ್ರಚಾರ, ಸೊಬಗಿಲ್ಲದ ವ್ಯಕ್ತಿಗಳಿಗೂ ವ್ಯಕ್ತಿತ್ವ ಇರುತ್ತದೆ. ವ್ಯಕ್ತಿಗಳ ನಂಬಿಕೆ, ಸಮಸ್ಯೆ, ಗೊಂದಲ ಇತ್ಯಾದಿಗಳು ಬೆರಳಚ್ಚಿನ ಥರ. ಬೇರೆಯವರ ಜೊತೆ ಹೋಲಿಸುವುದು ಸಾಧುವಲ್ಲ. ಹಿನ್ನೆಲೆಗಳು ಭಿನ್ನ ಇರ್ತವೆ. ಬೇರೆಯವರಿಗೆ ತೊಂದರೆಯಾಗದ, ಆತ್ಮಸಾಕ್ಷಿ ಮೆಚ್ಚುವ ರೀತಿ ಬದುಕುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ವಿನಾ ಕಾರಣ ನಮ್ಮ ನಂಬಿಕೆಗಳನ್ನು ಹೀಯಾಳಿಸುವ, ಧೈರ್ಯ ಕುಗ್ಗಿಸುವ, ತಪ್ಪುಗಳನ್ನು ಮಾತ್ರ ಹುಡುಕುವ, ಸ್ವಾರ್ಥಕ್ಕೆ ಬಳಸುವವ ಸಂಪರ್ಕದಲ್ಲೇ ಇದ್ದರೆ ನಮ್ಮ ಬಗ್ಗೆ ನಮಗೇ ಸಂಶಯ ಬರಬಹುದು. ನಮ್ಮ ವಾಹನವನ್ನು ನಮ್ಮಷ್ಟು ಸಲೀಸಾಗಿ ಯಾರೂ ಚಲಾಯಿಸಲಾರರು. ನಮ್ಮ ಸಮಸ್ಯೆ, ಗೊಂದಲಗಳು, ಕಟ್ಟಿಕೊಂಡ ನಂಬಿಕೆಗಳೂ ಅಷ್ಟೆ!
-KmohanT (11042019)


---------


22) ನದಿಯಲ್ಲಿ ಎಷ್ಟೇ ನೀರು ಹರಿಯುತ್ತಿದ್ದರೂ ಬೊಗಸೆಗೆ ನಿಲುಕುವುದು ಸ್ವಲ್ಪ ಮಾತ್ರ. ಮತ್ತೆಲ್ಲ ಬೆರಳೆಡೆಯಿಂದ ಸೋರಿ ಹೋಗುತ್ತದೆ. ನೀರಿನ ಸೊಬಗನ್ನು ನೋಡಿ ಖುಷಿ ಪಡಬಹುದೇ ಹೊರತು ಅದೆಲ್ಲವನ್ನೂ ಸ್ವಾಧೀನಪಡಿಸಿ ಹೊತ್ತೊಯ್ಯಲು ಅಸಾಧ್ಯ. ಅದಕ್ಕೊಂದು ಮಿತಿ, ವಿಧಿ ಇದೆ. ಇದು ಋಣಾತ್ಮಕ ಚಿಂತನೆಯಾಗಬೇಕಿಲ್ಲ. ವಾಸ್ತವಿಕ ಪ್ರಜ್ಞೆ ಅಷ್ಟೆ. ಜೀವನೋತ್ಸಾಹ, ಪ್ರಯತ್ನ, ಆಶಾಭಾವ, ಪ್ರಭಾವ, ಬಲಾಢ್ಯತೆಗೆ ಹೊರತಾದ ಒಂದು ಅದೃಷ್ಟ, ಯೋಗ್ಯತೆ ಲಭ್ಯತೆಯನ್ನು ಅಂತಿಮವಾಗಿ ನಿರ್ಧರಿಸುತ್ತದೆ. ಬೆರಳೆಡೆ ಸೋರಿ ಹೋಗುವ ನೀರಿನ ಹಾಗೆ ನಮ್ಮ ಇತಿಮಿತಿ, ಯೋಗ್ಯತೆಯ ಅರಿವಿಗೆ ನಿರೀಕ್ಷೆಗಳು ಸೀಮಿತವಾಗಿದ್ದರೆ ನಿರಾಸೆಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಬಹುದು.
-KmohanT (10042019)


------------


23) ಸಿನಿಮಾ, ಕಾದಂಬರಿಗಳಂಥಹ ಮಾಧ್ಯಮಗಳು so called ಆದರ್ಶ ಬದುಕಿನ ಬಗ್ಗೆ ಕಟ್ಟಿಕೊಡುವ ಪೂರ್ವಾಗ್ರಹಗಳೇ ನಿಜಬದುಕಿನಲ್ಲಿ ಹೋಲಿಕೆ, ನಿರೀಕ್ಷೆಗಳಿಗೆ ಕಾರಣವಾಗುತ್ತವೆ. ಶುಭಂ ಅಂದ ನಂತರದ್ದೆಲ್ಲ ಸುಖವೇ ಇರುವುದು ಸಿನಿಮಾಗೆ ಸೀಮಿತ ಅಷ್ಟೆ. ಬದುಕು ಕಥೆಯಾಗಬಹುದೇ ವಿನಃ ಕಥೆ ಬದುಕಾಗಲು ಕಷ್ಟ ಇದೆ. ಬದುಕಿನ ಪ್ರತಿ ಅನುಭೂತಿಗೂ ಒಂದು ವ್ಯಾಲಿಡಿಟಿ ಇರುತ್ತದೆ. ಅವಧಿ ಮುಗಿದ ತಕ್ಷಣ ಅವು ಕಳಚಿಕೊಳ್ಳುತ್ತವೆ. ನಿರ್ಲಿಪ್ತವಾಗಿ ಅವನ್ನು ಸ್ವೀಕರಿಸಲೇಬೇಕು. ಮತ್ತೊಂದು ಅನುಭೂತಿಗೆ ತೆರೆದುಕೊಳ್ಳಬೇಕು. ಸಿನಿಮಾವಲ್ಲದ ಬದುಕಿಗೆ ನಿರ್ದೇಶಕರಿಲ್ಲ. ದೃಶ್ಯಗಳಿರ್ತವೆ. ಇಂದಿನ ದೃಶ್ಯಗಳು ನಾಳೆಗೆ ನೆನಪುಗಳು!
-KmohanT (09042019)


------------------


24) ಅತಿ ರಂಜನೀಯ, ಮುಖಸ್ತುತಿ, ಚತುರತೆಯ ಮಾತುಗಳು ಬಹುಬೇಗ ಆಕರ್ಷಿಸುತ್ತವೆ. ನೇರ ಮತ್ತು ಪ್ರಾಮಾಣಿಕ ಮಾತುಗಳನ್ನು ಸುಲಭದಲ್ಲಿ ಯಾರೂ ನಂಬುವುದಿಲ್ಲ. ಹಲವು ಬಾರಿ ನೇರ ಮಾತುಗಳಿಗೆ ಪುರಾವೆ, ಸಮರ್ಥನೆ ಕೊಡಬೇಕಾಗುತ್ತದೆ. ನಮ್ಮನ್ನು ಅರ್ಥ ಮಾಡಿಕೊಂಡವರು, ಹಿತೈಷಿಗಳು ನಮ್ಮ ಕಷ್ಟದಲ್ಲಿ "ಎದೆಗುಂದಿಸುವ" ಮಾತಾಡುವುದಿಲ್ಲ, ಧೈರ್ಯ ತುಂಬುತ್ತಾರೆ, ತಪ್ಪುಗಳನ್ನು ತೋರಿಸಿ ಸರಿಪಡಿಸುತ್ತಾರೆ. ಅದು ಪ್ರತಿ ಫಲಾಪೇಕ್ಷೆಯಿಲ್ಲದ ಕಾಳಜಿ. ಅತಿ ವಿನಯ, ವೃಥಾ ಹೊಗಳಿಕೆ, ಅಸಹಜ ಸಂವಹನ, ಉಚಿತ ಸಲಹೆಗಳು ಯಾರ ಕಡೆಯಿಂದಾದರೂ ಬಂದಾಗ ಜಾಗೃತರಾಗಿರಲೇ ಬೇಕು. ಇಲ್ಲವಾದಲ್ಲಿ ಭ್ರಮೆಗೊಳಗಾಗಿ "ಕಳೆದುಹೋಗುವ" ಅಪಾಯವಿದೆ.
-KmohanT (08042019)


---------

25) ಒಬ್ಬ ವ್ಯಕ್ತಿಯ ಉಡುಪು, ಮುಖದಲ್ಲಿ "ಕಾಣಿಸುವ" ನಿರಾಳತೆ, ನಗು, ಹೊರಗಿನ ಮಾತುಗಳು, ಡಿಪಿ, ಸ್ಟೇಟಸ್ ಸಂದೇಶಗಳನ್ನು ದೂರದಿಂದ ಗಮನಿಸಿದ ಮಾತ್ರಕ್ಕೆ ಅವರ ಆಂತರ್ಯ ಅರ್ಥೈಸಿ ಇಂಥದ್ದೇ ಮನಸ್ಥಿತಿಯವರೆಂದು ನಿಖರವಾಗಿ ಅಂದಾಜಿಸುವುದು ಕಷ್ಟ. ಹೊರಗೆ ಕಾಣಿಸದ ಕಷ್ಟ, ಗೊಂದಲ, ತುಮುಲ, ಮತ್ಸರ, ಸಮಯಸಾಧಕತನ, ಅಸಹಾಯಕತೆ ಇತ್ಯಾದಿ ಯಾವುದೇ ಪ್ರವೃತ್ತಿ/ಪರಿಸ್ಥಿತಿ ತಿಳಿಯಬೇಕಾದರೆ ಒಡನಾಟ, ಗಮನಿಸುವಿಕೆ ಇದ್ದರೆ ಮಾತ್ರ ಸಾಧ್ಯ. ದೂರದಿಂದ ಕಾಣುವ ನಗುಮುಖದವರೆಲ್ಲ ಸುಖಿಗಳೆಂದೂ, ಮೌನಿಗಳು ನಿರ್ಲಿಪ್ತರೆಂದೂ, ಚತುರ ಮಾತುಗಾರರೆಲ್ಲ ಅಷ್ಟೇ ಹೃದಯವಂತರೆಂದೂ "ಅಂದುಕೊಂಡರೆ" ಎಲ್ಲ ಸಂದರ್ಭಗಳಲ್ಲಿ ನಿಜವಾಗದು. ಕಾಣುವುದಕ್ಕಿಂತ, "ಕಂಡುಕೊಳ್ಳುವುದೇ" ಹೆಚ್ಚು ಸತ್ಯವಾಗಿರ್ತದೆ.
-KmohanT (07042019)


-------------------

26) ಒಂದು ಘಟನೆ ಹೇಗೆ ಪ್ರಚಾರಗೊಳ್ಳುತ್ತದೆ ಎಂಬುದರ ಆಧಾರದಲ್ಲಿ ವಾಸ್ತವ ಬೇರೆ ಬೇರೆ ಆಯಾಮ ಪಡೆಯುತ್ತಾ ಹೋಗುತ್ತದೆ. ಅವರವರ ಮೂಗಿನ ನೇರಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಿಸಿದರೂ ಸಂಭವಿಸಿದ ವಾಸ್ತವ ಹಾಗೆಯೇ ಇರುತ್ತದೆ. ಸತ್ಯದ ವಿರುದ್ಧ ಎಷ್ಟೇ ಅಪಪ್ರಚಾರ ಮಾಡಿದರೂ ಸತ್ಯ ಸುಳ್ಳಾಗುವುದಿಲ್ಲ. ಸುಳ್ಳನ್ನು ನೂರಾರು ಬಾರಿ ಸಮರ್ಥಿಸಿ ಮಾತಾಡಿದರೂ ಸುಳ್ಳು ಸತ್ಯವಾಗುವುದಿಲ್ಲ. ಯಾರನ್ನೋ ಮೆಚ್ಚಿಸಲು ಅಥವಾ ಸ್ವಲಾಭಕ್ಕೆ ಅಪಪ್ರಚಾರ ಮಾಡುವವರಿಂದ ಸಮಾನ ಅಂತರ ಕಾಯ್ದುಕೊಳ್ಳುವುದು ಲೇಸು. ಇಂಥವರ ಪ್ರಭಾವಕ್ಕೆ ಸಿಲುಕಿದರೆ ಸ್ವಾಭಿಮಾನ ಮತ್ತು ಸ್ವವಿಶ್ಲೇಷಣೆ ಸಾಮರ್ಥ್ಯ ಎರಡನ್ನೂ ಕಳೆದುಕೊಳ್ಳಬೇಕಾದೀತು!
-KmohanT (05042019)


-----

27)   ಮನಸ್ಸಿಗೆ ಆಪ್ತವಾಗುವ ಕೆಲಸದಿಂದ ಬಳಲಿಕೆ ತಿಳಿಯುವುದಿಲ್ಲ. ಅಂಥ ಕೆಲಸಗಳಿಗೆ ಯಾರ ಪಾರಿತೋಷಕ, ಹೊಗಳಿಕೆಯ ಅಗತ್ಯವೂ ಇರುವುದಿಲ್ಲ. ಕೆಲಸದ ಯಶಸ್ಸು ಕೊಡುವ ಸಮಾಧಾನ ಜೀವನೋತ್ಸಾಹವನ್ನು ಹೆಚ್ಚಿಸಬಲ್ಲುದು. ಅದಕ್ಕೆ ಪ್ರಚಾರದ ಹಂಗೂ ಬೇಕಾಗುವುದಿಲ್ಲ. ಸದ್ದಿಲ್ಲದೆ ನೇಪಥ್ಯದಲ್ಲಿ ಮಾಡುವ ನಿಷ್ಕಾಮ ಕೆಲಸಗಳು ಎಷ್ಟೋ ಬಾರಿ ಹೊರಪ್ರಪಂಚಕ್ಕೆ ತಿಳಿಯುವುದೇ ಇಲ್ಲ. ಪ್ರಚಾರದ ಹಂಗಿಲ್ಲದೆ ಮಾಡುವ ಕೆಲಸಗಳ ಹಿಂದೆ ಬಹಳಷ್ಟು ನಿರಾಳತೆ ಇರುತ್ತದೆ ಮತ್ತು ಅದು ಪ್ರಾಮಾಣಿಕವಾಗಿರುತ್ತದೆ. ಇದು ತೋರಿಸಿಕೊಳ್ಳುವ ವಿಚಾರವಲ್ಲ "ಕಂಡುಕೊಳ್ಳಬೇಕಾದ" ಅಂಶ!
-KmohanT (03042019)


---------

28)
ಸಮಾರಂಭಕ್ಕೆಂದು ಕೊಟ್ಟ ಬ್ಯಾಡ್ಜ್, ಶಾಲೆಯ ವಿದ್ಯಾರ್ಥಿಯೆಂಬ ಪಟ್ಟ, ಸಂಸ್ಥೆಯಲ್ಲಿ ಸಿಬ್ಬಂದಿಯೆಂಬ ಹೆಮ್ಮೆ, ಚುನಾವಣೆಯಲ್ಲಿ ಗೆದ್ದ ಗರ್ವ, ಬಸ್ಸು ಪ್ರಯಾಣಿಕನೆಂಬ ಮೋಹ ಎಲ್ಲ ಅದರದರ ಅವಧಿ, ಸ್ಥಾನಮಾನ ಕಳೆಯುವ ತನಕ ಮಾತ್ರ. ಸಮಾರಂಭ ಮುಗಿದ ಮೇಲೆ, ಶಾಲೆ ಬಿಟ್ಟ ಮೇಲೆ, ಕೆಲಸದ ಅವಧಿ ತೀರಿದ ಬಳಿಕ, ನಾಯಕತ್ವದ ದಿನ ಪೂರ್ತಿಯಾದ ನಂತರ, ಬಸ್ಸಿಳಿದು ನಡೆಯುತ್ತಿರುವಾಗ ಈ ಯಾವ ಪಟ್ಟಗಳೂ, ಅಧಿಕಾರಗಳೂ, ಮರ್ಯಾದೆಗಳೂ ಜೊತೆಗಿರುವುದಿಲ್ಲ. ಕೊನೆ ತನಕ ಶರತ್ತಿಲ್ಲದೆ ಜೊತೆಗೆ ಬರುವುದು ಮತ್ತು ಗುರುತು ನೀಡುವುದು ವ್ಯಕ್ತಿತ್ವ ಮಾತ್ರ!
-KmohanT (02042019) 


----------

29)
ದಿನದ 24 ಗಂಟೆಗಳ ಕಾಲ ನಮ್ಮ ಜೊತೆಗಿರುವವರು ನಾವೇ. ನಮ್ಮನ್ನು ನಾವು ಕಂಡಷ್ಟು ಇನ್ಯಾರೂ ಕಾಣಲು ಸಾಧ್ಯವಿಲ್ಲ. ನಾವು ಕಾಣದ್ದನ್ನು ಬೇರೆಯವರು ನಮ್ಮಲ್ಲಿ ಕಂಡು ತಮ್ಮದೇ ವ್ಯಾಖ್ಯಾನಗಳನ್ನು ಕೊಟ್ಟರೆ ಅದಕ್ಕೆ ದಾಖಲೆಗಳ ಸಹಿತ ಸಾಕ್ಷಿಗಳನ್ನು ಒದಗಿಸಿ ನಮ್ಮನ್ನು ನಾವು ಸಮರ್ಥಿಸಿಕೊಳ್ಳಲು ಅಸಾಧ್ಯ. ಪ್ರದರ್ಶನದಲ್ಲಿ ಕಾಣದ ಕಳವಳ, ಅಸಹಾಯಕತೆ, ಪ್ರಾಮಾಣಿಕತೆಗಳೆಲ್ಲ ಆಂತರ್ಯದ ಅನುಭೂತಿಗಳು. ಅವುಗಳಿಗೆ ದಾಖಲೆಗಳಿರುವುದಿಲ್ಲ. ಇವೆಲ್ಲ ವಿಶ್ವಾಸ, ನಂಬಿಕೆ, ಸೂಕ್ಷ್ಮ ಗಮನಿಸುವಿಕೆಗೆ ನಿಲುಕುವಂಥದ್ದು. ಅಂತಹ ಸೂಕ್ಷ್ಮತೆ ಕಳೆದುಕೊಂಡ ಸಂಬಂಧಗಳೆಲ್ಲ ವ್ಯಾವಹಾರಿಕ ಮತ್ತು ಯಾಂತ್ರಿಕವಾಗಿರುತ್ತವೆ, ಅಷ್ಟೆ...
-KmohanT (31042019)


--------------

30)
ಪ್ರತಿ ಖುಷಿ/ಯಶಸ್ಸಿಗೂ "ಯಾರೋ ಬರೆದಿರಿಸಿದ" ವ್ಯಾಲಿಡಿಟಿ ಇರುತ್ತದೆ. ಒಂದು ಸಂತಸದ ಕ್ಷಣ/ಗೆಲವಿನೊಂದಿಗೆ ನಿರಂತರ ಇರಲಾಗುವುದಿಲ್ಲ. ಒಂದು ಖುಷಿಯ ಅಮಲಿನಲ್ಲಿರುವವರು ಮತ್ತೊಂದು ಸವಾಲು, ಮತ್ತೊಂದು ಪರೀಕ್ಷೆಗೆ ಸಿದ್ಧರಿರಲೇಬೇಕು. ರಶ್ಶಿನಲ್ಲಿರುವ ಬಸ್ಸಿನಲ್ಲಿ ಯಾರಿಗೆ ಯಾವ ಸೀಟು ಸಿಗುತ್ತದೆಂದು ಹೇಳಲು ಸಾಧ್ಯವಿಲ್ಲವೋ ಅದೇ ರೀತಿ ಮುಂದಿನ ಕ್ಷಣದಲ್ಲಿ ನಾವೇನು ಎದುರಿಸಬೇಕೆಂಬುದನ್ನು ದಿವ್ಯದೃಷ್ಟಿಯಿಂದ ಅರಿತು ಪ್ರಾಕ್ಟೀಸ್ ನಡೆಸಿ ಬದುಕಲಾಗುವುದಿಲ್ಲ. ಆಸ್ತಿಕರು ಇದನ್ನೇ ವಿಧಿಬರಹ ಎನ್ನುತ್ತಾರೆ.
-KmohanT (26032019)


-----------

31)
ಸಮಚಿತ್ತ, ನಿರ್ಲಿಪ್ತತೆ, ಧನಾತ್ಮಕ ಚಿಂತನೆ ಇತ್ಯಾದಿ ಇತ್ಯಾದಿಗಳ ಬಗ್ಗೆ ಪುಸ್ತಕಗಳಲ್ಲಿ ಓದುವಾಗ ತುಂಬಾ ಪರಿಣಾಮಕಾರಿ ಅನಿಸುತ್ತದೆ. ಆದರೆ,
ನಿಜ ಬದುಕಿನ ಪರಿಸ್ಥಿತಿ ಮತ್ತು ಅವರವರ ಅದೃಷ್ಟಗಳ ವಿಚಾರಕ್ಕೆ ಬಂದಾಗ "ಓದಿದ ವಿಚಾರಗಳ" ಅನುಷ್ಠಾನ ಎಷ್ಟು ಕಠಿಣ ಎಂಬ ಅರಿವು ಪ್ರತಿಯೊಬ್ಬರಿಗೂ ಆಗಾಗ ಆಗುತ್ತಲೇ ಇರುತ್ತದೆ. ಹೇಳುವುದು, ಬರೆಯುವುದು ಮತ್ತು ಬೋಧಿಸುವುದಕ್ಕೂ... ನೈಜ ಸನ್ನಿವೇಶಗಳಲ್ಲಿ ಅವುಗಳನ್ನು ಅಳವಡಿಸುವುದಕ್ಕೂ ತುಂಬ ವ್ಯತ್ಯಾಸಗಳಿರುತ್ತವೆ. ಪ್ರತಿಯೊಬ್ಬನ ಬದುಕೂ ವಿಭಿನ್ನ, ಬರಹಕ್ಕೆ ಯೋಗ್ಯವಿರುತ್ತದೆ. "ಬರೆದಿಟ್ಟಂತೆ" ಬದುಕು ಸಾಗಿಸಲು ಕಷ್ಟ. ಆದರೆ, ಸಾಗಿ ಬಂದ ಬದುಕಿನ ಬಗ್ಗೆ ಬರೆಯಬಹುದು!
-KmohanT (25032019)


---------

32)
ಯಾರದ್ದೂ ಹಂಗಿಗೊಳಗಾಗದೆ ನಮ್ಮ ಪಾಡಿಗೆ ನಾವು ಬದುಕುತ್ತೇವೆ ಅನ್ನುವ ಅತಿ ಆತ್ಮವಿಶ್ವಾಸ ಸುಳ್ಳು. ಪ್ರತ್ಯಕ್ಷ/ಪರೋಕ್ಷವಾಗಿ ಹಲವರ ಸಹಾಯ ಪಡೆದೇ ಜೀವನ ಸಾಗುತ್ತದೆ. ಎಷ್ಟೋ ಬಾರಿ ಸಹಾಯ ಮಾಡಿದವರಿಗೆ ಪ್ರತ್ಯುಪಕಾರ ಮಾಡಲು ಅಸಾಧ್ಯವಾಗಬಹುದು. ಎಷ್ಟೋ ಋಣಗಳನ್ನು ತೀರಿಸಲು ಪರಿಸ್ಥಿತಿಗಳಿಂದಾಗಿ ಆಗದಿರಬಹುದು. ಆದರೆ ಕನಿಷ್ಠ ಕೃತಜ್ಞತಾ ಭಾವವಾದರೂ ಇರಬೇಕಾದ್ದು ಧರ್ಮ. ನಾವು ಯಾರಿಗೂ ಉಪಕಾರ ಮಾಡದಿದ್ದರೂ/ಮಾಡಲು ಆಗದಿದ್ದರೂ ಪರವಾಗಿಲ್ಲ. ಉಪದ್ರ ಆಗದಂತೆ ನೋಡಿಕೊಂಡರೆ ಅದೇ ದೊಡ್ಡ ಉಪಕಾರ! ಏನೂ‌ ಮಾಡಲಾಗಿಲ್ಲ ಅಂತ ಏನೋ ಮಾಡಲು ಹೋಗಿ ಅದು ಇನ್ನೇನೋ ಆಗಿ, ಮಾಡದೇ ಇದ್ದದ್ದಕ್ಕಿಂತಲೂ ಮಾಡಲು ಹೊರಟದ್ದೇ "ಉಪದ್ರ ಆಯ್ತಲ್ಲ" ಅಂತ ಅನಿಸುವ ಮಟ್ಟಿಗೆ "ಏನೂ ಮಾಡದಿರಲು" ಪ್ರಯತ್ನಿಸಿದರೆ ಅದಕ್ಕಿಂತ ಉಪಕಾರ ಬೇರಿಲ್ಲ!
-KmohanT (24032019)


------

33)
ಖುಷಿ ಎನ್ನುವುದು ಹುಡುಕಿದಲ್ಲಿ ಸಿಗುವುದಿಲ್ಲ. ಖುಷಿಯನ್ನು ಖರೀದಿಸಲು, ಕೃತಕವಾಗಿ ಸೃಷ್ಟಿ ಮಾಡಲು ಆಗುವುದಿಲ್ಲ. ನಮ್ಮ ಖುಷಿ ಇನ್ಯಾರಲ್ಲೋ ಇದೆ ಅಂದುಕೊಳ್ಳುವುದು ಭ್ರಮೆ ಅಷ್ಟೆ. ಹಾಗಂದುಕೊಂಡರೆ ಅವರ ಮನಸ್ಥಿತಿ ನಮ್ಮ ಮನಸ್ಥಿತಿಯ ಮೇಲೆ ವಿನಾ ಕಾರಣ ಪರಿಣಾಮ ಬೀರೀತು ಅಷ್ಟೆ. ಖುಷಿ ಅನುಭೂತಿ ಹೊಂದುವುದರಲ್ಲಿರೋದು, ಅದು ನಮ್ಮೊಳಗೇ ಇರುತ್ತದೆ. ಒತ್ತಡ, ಆತಂಕ, ಕುಂದಿದ ಮನಸ್ಥಿತಿ ಅದನ್ನು ಕಾಣದಂತೆ ಮಾಡುತ್ತದೆ. "ಖುಷಿ" ನದಿಯಲ್ಲಿ ತೇಲಿ ಬರುವ ಹೂವಿನ ಹಾಗೆ, ಅದು ನಮ್ಮ ಬಳಿ ಬಂದಾಗ ಕೈಚಾಚಿ ಹಿಡಿದರೆ ಹೂವು ನಮ್ಮ ಪಾಲಾದೀತು. ಆ ಸೆಕೆಂಡುಗಳ ಅವಧಿಯಲ್ಲಿ ನಾವು ಅನ್ಯಮನಸ್ಕರಾಗಿದ್ದರೆ ಹತ್ತಿರ ಬಂದ ಹೂವು ತನ್ನಷ್ಟಕೇ ಮುಂದೆ ತೇಲಿ ಹೋದೀತು. ಸಣ್ಣ ಸಣ್ಣ ಅನುಭೂತಿಗಳನ್ನೂ ಗುರುತಿಸುವುದರಲ್ಲಿ ಖುಷಿ ಅಡಗಿದೆ.
-KmohanT (22032019)


-------

34)
ಶ್ರೇಷ್ಠತೆ ಎಂಬುದು ಮಾಗಿದ ವಯಸ್ಸು, ಕೈಯ್ಯಲ್ಲಿರುವ ದುಡ್ಡು, ಗೌರವಾನ್ವಿತ ವ್ಯಕ್ತಿಗಳ ಒಡನಾಟದ ಪ್ರಚಾರ, ಮಾಡಿದ್ದೆಲ್ಲ ಸರಿ ಎನ್ನುತ್ತಾ ಸುತ್ತಮುತ್ತಲಿರುವ ಹೊಗಳುಭಟರ ಸಂಖ್ಯೆಯಿಂದ ನಿರ್ಧಾರವಾಗುವುದಲ್ಲ. ಇವೆಲ್ಲ ತಾನೇ "ಪ್ರಶ್ನಾತೀತ ನಾಯಕ" ಎಂದು "ತೋರಿಸಿಕೊಳ್ಳುವವರ" ಪ್ರದರ್ಶನ ಅಷ್ಟೆ. ಹೃದಯವೈಶಾಲ್ಯ, ನಿಷ್ಪಕ್ಷಪಾತ ನ್ಯಾಯ ತೀರ್ಮಾನ, ಕೇಳಿಸಿಕೊಳ್ಳುವ ತಾಳ್ಮೆ, ಅನುಯಾಯಿಗಳ ಸಾಮರ್ಥ್ಯವನ್ನು ಗುರುತಿಸುವ ಸೂಕ್ಷ್ಮತೆ, ಸ್ಪಂದಿಸುವ ಮನಸ್ಸಿರುವವರು ಶ್ರೇಷ್ಠರೆನಿಸುತ್ತಾರೆ. ಅತಿ ನಯವಿನಯ, ಅಚ್ಚುಕಟ್ಟಾದ ಉಡುಪುಗಳಿಂದ ಶ್ರೇಷ್ಠತೆ ನಿರ್ಧಾರವಾಗುವುದಿಲ್ಲ, ಯೋಗ್ಯತೆ ಚಿಂತನೆಗಳ‌ ಮೂಸೆಯಲ್ಲಿ ಅರಳುತ್ತದೆ.
ತಾನೇ ಶ್ರೇಷ್ಠನೆಂದು ತೋರಿಸಿಕೊಂಡು ತಿರುಗಾಡುವುದು ತಾತ್ಕಾಲಿಕ. ಜನರು ತಾವಾಗಿ ಗುರುತಿಸುವ ಶ್ರೇಷ್ಠತೆ ಶಾಶ್ವತ.
-KmohanT (12032019)


---------

35) 
ನಿರೀಕ್ಷೆ, ಕನಸು, ಯೋಜನೆಗಳು ಏನೇ ಇರಲಿ, ಬದುಕಿನಲ್ಲಿ ಕೆಲವು ಸನ್ನಿವೇಶಗಳು ಹಾಗೂ ವ್ಯಕ್ತಿಗಳನ್ನು ಇದ್ದ ಹಾಗೆ ಸ್ವೀಕರಿಸಲೇಬೇಕು. "ತನಗೆ ಪೂರಕವಾಗಿಲ್ಲ" ಎಂಬ ಕಾರಣಕ್ಕೆ ಒಂದು ಸಂದರ್ಭವನ್ನು ನಿರಾಕರಿಸಲು ಅಥವಾ ಪರಿಸ್ಥಿತಿಯಿಂದ ಓಡಿ ಹೋಗಲು ಅಸಾಧ್ಯ. ವಿನಾ ಕಾರಣ ಒದಗಿದ ಕಷ್ಟ ಅಥವಾ ಸವಾಲನ್ನು ಇದ್ದ ಹಾಗೆ ಒಪ್ಪಿಕೊಂಡರೆ ಬಳಿಕ ಅದರಿಂದ ಹೊರ ಬರಲು ಪ್ರಯತ್ನಿಸಬಹುದು. ಬದಲಾಗದ ವ್ಯಕ್ತಿಗಳು ಅಥವಾ ಪರಿಸ್ಥಿತಿಯನ್ನು ಯಥಾವತ್ತಾಗಿ ಸ್ವೀಕರಿಸದೆ ಜಾರಿಕೊಳ್ಳ ಹೋದರೆ ಸವಾಲು ತಪ್ಪುವುದಿಲ್ಲ, ಹೊರ ಬರುವ ದಾರಿಯೂ ಕಾಣುವುದಿಲ್ಲ. ತೀರಾ ಆಸ್ತಿಕರು ಇದನ್ನು ವಿಧಿ/ಹಣೆಬರಹ ಎಂದರೆ, ವೈಚಾರಿಕರು ಪರಿಸ್ಥಿತಿ/ಬದುಕಿನ ವಾಸ್ತವ ಎನ್ನುತ್ತಾರೆ. ಹೆಸರೇನೇ ಕೊಟ್ಟರೂ "ವಾಸ್ತವ" ವನ್ನು ಒಪ್ಪಿಕೊಳ್ಳದೇ ಹೋದರೆ ಎಡಬಿಡಂಗಿಗಳಾಗಿ ಅಳಿದುಳಿದ ಖುಷಿಯನ್ನೂ ಕಳೆದುಕೊಳ್ಳುವ ಅಪಾಯವಿದೆ!
-KmohanT (20032019)


-------------

36)
ಹೇಳುವವರು ಮತ್ತು ಕೇಳುವವರ ಮನಸ್ಥಿತಿಯ ಸಮತೋಲನದಲ್ಲಿ ಮಾತ್ರ ಒಂದು ಸಂವಹನ ಪರಿಣಾಮಕಾರಿಯಾಗಿ ನಡೆಯಬಹುದು. ತಾನು ಮಾತ್ರ ಕಂಡುಕೊಂಡ ಎಷ್ಟೋ ವಿಚಾರಗಳನ್ನು ಇತರರಿಗೆ ಹೇಳಿ ಅರ್ಥ ಮಾಡಿಸುವುದು ಸುಲಭವಲ್ಲ. ಪ್ರತಿಯೊಬ್ಬರೂ ಅವರವರ ಗ್ರಹಿಕೆಗೆ ತಕ್ಕ ಹಾಗೆ ಹೇಳಿದ್ದನ್ನು ಅರ್ಥ ಮಾಡಿಕೊಳ್ತಾರೆ, ಅರ್ಥ ಮಾಡಿದ್ದಕ್ಕೆ ತಕ್ಕ ಹಾಗೆ ವಿಮರ್ಶೆ ಮಾಡುತ್ತಾರೆ. ಅಪಾರ್ಥ ಸಂಭವಿಸುವುದು "ಹೇಳಬೇಕಾದ ವಿಚಾರ ಹೇಳಿದ ಧಾಟಿಯಲ್ಲೇ ಅರ್ಥ ಆಗದೇ ಇದ್ದಾಗ" ಅಥವಾ ಸರಿಯಾಗಿ ಕೇಳಿಸಿಕೊಳ್ಳದಿದ್ದಾಗ. ನಮ್ಮ ದೃಷ್ಟಿಕೋನದಿಂದಲೇ ಎಲ್ಲವನ್ನೂ ನೋಡಲಾಗದು. ಹೇಳುವವರ ಜಾಗದಲ್ಲಿ ನಿಂತು ಯೋಚಿಸಿದಾಗ ಮಾತ್ರ ಕೇಳಿಸಿಕೊಂಡದ್ದು ಸರಿಯಾಗಿ ಹೃದಯವನ್ನು ತಟ್ಟೀತು.
-KmohanT. (19032019)


-----------

37)
ಪ್ರತಿಯೊಬ್ಬರ ಬದುಕೂ ಬಿಡುಗಡೆಯಾಗದ ಕಾದಂಬರಿ ಥರ. ಒಬ್ಬೊಬ್ಬರ ಜೀವನದಲ್ಲೂ ಹೊರಗಡೆ ಕಾಣಿಸದ, ಹೇಳಿಕೊಂಡಿರದ ಕಥೆಗಳು ಇರ್ತವೆ. . ಪುಟಗಳನ್ನು ಮಗುಚುತ್ತಾ ಹೋದಾಗಲಷ್ಟೇ ಕಥೆ ಮನವರಿಕೆ ಆಗಲು ಸಾಧ್ಯ. ಪುಸ್ತಕದ ರಕ್ಷಾ ಪುಟ ನೋಡಿ ತಿಳಿದುಕೊಳ್ಳುವುದಕ್ಕೂ ಓದಿ ಅರ್ಥ ಮಾಡಿಕೊಳ್ಳುವುದಕ್ಕೂ ಅಜಗಜಾಂತರವಿದೆ. ಎಷ್ಟೋ ಸಲ, ನಮ್ಮ ಬಗ್ಗೆ ನಮಗೆ ಎಲ್ಲವನ್ನೂ ಹೇಳಲು ಸಾಧ್ಯವಾಗುವುದಿಲ್ಲ. ಹೇಳಿದರೂ ಅದು ಪರಿಣಾಮಕಾರಿ ಆಗಬೇಕೆಂದಿಲ್ಲ. ಹೇಳಿದ್ದು ಇತರರಿಗೆ ಎಷ್ಟರ ಮಟ್ಟಿಗೆ ಅರ್ಥವಾಗುವುದೋ ಗೊತ್ತಿಲ್ಲ. ಒಬ್ಬರು ತಾವಾಗಿ ನಮ್ಮೆದುರು ಕಾಣಿಸಿಕೊಳ್ಳುವುದಕ್ಕೂ, ನಾವಾಗಿ ಕಂಡುಕೊಳ್ಳುವುದಕ್ಕೂ ತುಂಬ ವ್ಯತ್ಯಾಸವಿದೆ. ಪುಸ್ತಕವನ್ನು ಹೊರಗಿನಿಂದಲೇ ನೋಡಿ ಕೃತಿ ವಿಮರ್ಶೆ ಮಾಡುವುದು ಸೂಕ್ತವಲ್ಲ!
-KmohanT (18032019)


------

38)
ಮೌನ ದೌರ್ಬಲ್ಯವಲ್ಲ, ಆಂತರ್ಯದ ಶಕ್ತಿ. ಸಾತ್ವಿಕತೆಯೂ ಇರಬಹುದು. ಎಷ್ಟೋ ಸಲ ಉದ್ವೇಗದಿಂದ ದುಡುಕಿ ಆಡಿಬಿಡುವ ಮಾತನ್ನು ಅದುಮಿಟ್ಟು ಮೌನಕ್ಕೆ ಶರಣಾದರೆ ಅದರಿಂದ ಬಹಳಷ್ಟು ಮನಃಶಾಂತಿಯನ್ನು ಉಳಿಸಬಹುದು, ಅಪಾರ್ಥಗಳನ್ನು ತಡೆಯಬಹುದು. ಮೌನವು ಸ್ವವಿಮರ್ಶೆಗೆ ಅವಕಾಶ ಕಲ್ಪಿಸಿ, ತಾಳ್ಮೆ, ವಿವೇಚನಾ ಶಕ್ತಿಯನ್ನು ಹೆಚ್ಚಿಸಬಲ್ಲುದು. ದುರಹಂಕಾರ, ಅಧಿಕಪ್ರಸಂಗ, ಸಂಚುಗಳಿಗೆ ಮೌನ ಪ್ರತಿಕ್ರಿಯೆ ಆಗಿರಲಿ, ಸೂಕ್ತ ನಡವಳಿಕೆಯೇ ಉತ್ತರವಾಗಿರಲಿ. ಕೆಣಕುವವರಿಗೂ ಮೌನವೇ ಪ್ರತಿಕ್ರಿಯೆ ಆದರೆ ಕೆಣಕುವ ಪ್ರಕ್ರಿಯೆಯೇ ನಿಷ್ಪ್ರಯೋಜಕವಾಗುತ್ತದೆ.
-KmohanT (19032019)


------

39)
ಪ್ರತಿಯೊಬ್ಬರೂ ತಮ್ಮದೇ ಕೆಲಸಗಳು, ಜವಾಬ್ದಾರಿಗಳಲ್ಲಿ ವ್ಯಸ್ತರಾಗಿರುತ್ತಾರೆ. ವ್ಯಸ್ತ ಬದುಕಿನ ಸವಾಲುಗಳನ್ನು ಶಾಂತಿಯುತವಾಗಿ ಕೊಂಡೊಯ್ಯಲು ತನ್ನದೇ ಆದ "ಸಮಯಾವಕಾಶ" ಪ್ರತಿಯೊಬ್ಬರಿಗೂ ಬೇಕು. ಅವರ ಆ ವೈಯಕ್ತಿಕ ಸಮಯವನ್ನು ಇತರರೂ ಗೌರವಿಸಬೇಕು. ಅವಸರದಲ್ಲಿರುವ ವ್ಯಕ್ತಿಯ ಸಮಯಾವಕಾಶ ತಿಳಿಯದೇ ತಡೆದು ಮಾತಾಡಿಸುವುದು, ಆತನ ಮೂಡ್ ಗಮನಿಸದೆ ನಮ್ಮದೇ ಧಾಟಿಲಿ‌ ಚರ್ಚಿಸುವುದು, ಕೇಳಿಸಿಕೊಳ್ಳಲು ಇಷ್ಟ ಇಲ್ಲದ ವಿಚಾರವನ್ನು ಪದೇ ಪದೇ ಆತನ ಮೇಲೆ ಹೇರುವುದು ಖಂಡಿತಾ ಸೂಕ್ತವಲ್ಲ. ಎಷ್ಟೇ ಆಪ್ತರಿರಲಿ ಸಮಯಾವಕಾಶ ಮತ್ತು ಮನಸ್ಥಿತಿ ಗಮನಿಸದೆ ಏಕಮುಖ ಅಭಿಪ್ರಾಯ ವಿನಿಮಯ ಸಭ್ಯತೆ ಆಗುವುದಿಲ್ಲ. ನನ್ನ ಮೂಡ್ ಸರಿಯಿದ್ದರೆ ಜಗತ್ತೇ ಸರಿಯಿರುತ್ತದೆ, ನನ್ನ ಮೂಡ್ ಸರಿ ಇಲ್ಲದಿದ್ದರೆ ಜಗತ್ತೇ ನನ್ನ ಜೊತೆ ಅಳುತ್ತದೆ ಅಂದುಕೊಳ್ಳುವುದು ಅಸಹಜ ಕಲ್ಪನೆ.
-KmohanT (16032019)


-----------

40)
ವ್ಯಕ್ತಿ ಹುಟ್ಟಿದಾಗ ಶಿಶು. ಸತ್ತ ತಕ್ಷಣ ಮೃತದೇಹ. ಆತನ ಹೆಸರು, ಹುದ್ದೆ, ಪ್ರಭಾವ, ಸಂಪತ್ತು, ಅಹಂ ಎಲ್ಲ ದೇಹದಲ್ಲಿ ಉಸಿರು/ಚೈತನ್ಯ ಇರುವ ವರೆಗೆ ಮಾತ್ರ. ಚೇತನ ಕಳೆದುಕೊಂಡ ಮೇಲೆ ಅದ್ಯಾವುದೂ ಗುರುತಿನ ಭಾಗವಾಗಿ ಅಥವಾ ಸ್ವಾಧೀನದಲ್ಲಿ ಇರುವುದಿಲ್ಲ. ನಿರಂತರ ಅಸ್ತಿತ್ವದಲ್ಲಿರುವ ವಿಶ್ವದಲ್ಲಿ ನಮ್ಮದೆಷ್ಟು ಸಣ್ಣ ಪಾತ್ರವೆಂಬುದನ್ನು ಈ ತತ್ವ ಸಾರಿ ಹೇಳುತ್ತದೆ. ನಾವು ಜಡವಾಗಿದ್ದರೂ, ಚೇತನಶೀಲರಾಗಿದ್ದರೂ ರಾತ್ರಿ, ಬೆಳಗು ಸಹಿತ ಕಾಲ ಪ್ರವಹಿಸುತ್ತಲೇ ಇರುತ್ತದೆ. ನಮ್ಮಿಂದ ಜಗತ್ತಲ್ಲ, ಜಗತ್ತಲ್ಲಿ ನಾವು. ಹೆಸರು ಸಾಂಕೇತಿಕ ಅಷ್ಟೆ‌. ಪ್ರವೃತ್ತಿಯೇ ಪ್ರತಿಯೊಬ್ಬರ ಸಹಿಯಾಗಿರುತ್ತದೆ. ದ್ವೇಷ, ವಂಚನೆ, ಅಹಂಕಾರ ಇತ್ಯಾದಿಗಳೆಲ್ಲವೂ ಸೀಮಿತ/ಅನಿಶ್ಚಿತ ಅವಧಿಯಲ್ಲಿ ಮಾಡುವ ಕ್ಷುಲ್ಲಕ ಪ್ರದರ್ಶನಗಳು ಅಷ್ಟೆ!
-KmohanT (15032019)


----------

41)
ಸುಳ್ಳುಗಳನ್ನು ಹೇಳಿ, ಪ್ರಭಾವಶಾಲಿ ಮಾತುಗಳಿಂದ ನಂಬಿಸಿ ಆ ಕ್ಷಣಕ್ಕೆ ನಂಬಿಸುವುದು, ಪ್ರಚಾರಕ್ಕೆ ಬರುವುದು ಸುಲಭ. ಆದರೆ, ಮತ್ತೊಂದು ಹಂತದಲ್ಲಿ ಮುಖವಾಡ ಕಳಚಬೇಕಾದರೆ ಒಂದು ಸುಳ್ಳನ್ನು ನಿರೂಪಿಸಲು ಹತ್ತಾರು ಕಥೆಗಳನ್ನು ಕಟ್ಟುತ್ತಾ ಹೋಗಬೇಕಾಗಬಹುದು. ಒಂದು ಹಂತದಲ್ಲಿ ಸುಳ್ಳು ಬಯಲಾದಾಗ ತನ್ನನ್ನು ತಾನು ನಿರೂಪಿಸಲು ಪರದಾಡುವಂತಾಗಬಹುದು. ಸತ್ಯ ನಿಷ್ಠುರ, ಅಪ್ರಿಯವೂ ಆಗಬಹುದು. ಕಲ್ಪನೆ, ಪೂರ್ವಾಗ್ರಹ ಮತ್ತು ನಿರೀಕ್ಷೆಗಳ ಹಂಗಿಗೆ ಸಿಲುಕಲಾರದ್ದು "ಸತ್ಯ". ಸುಳ್ಳು ನೋವು ನಿವಾರಕದ ಹಾಗೆ, ಆ ಕ್ಷಣಕ್ಕೆ ಮುಲಾಮು ಅಷ್ಟೆ. ಆದರೆ ಅಡ್ಡ ಪರಿಣಾಮಗಳು ಬಹಳ. ಸತ್ಯ ಶಸ್ತ್ರಚಿಕಿತ್ಸೆ ಥರ. ನೋವು ಕೊಡಬಹುದು, ಆದರೆ ಸಮಸ್ಯೆಗೆ ಪರಿಹಾರ ನೀಡುತ್ತದೆ.
-KmohanT. (14032019) 


------------


42)
ಸಮಸ್ಯೆಯನ್ನು "ಸಮಸ್ಯೆ" ಯೆಂದು ಸ್ವೀಕರಿಸಿದರೆ ಸಮಸ್ಯೆಯ ತೀವ್ರತೆ ಹೆಚ್ಚುತ್ತದೆ, ಪರಿಹಾರದ ದಾರಿ ಮುಚ್ಚುತ್ತದೆ. ಸವಾಲು ಅಥವಾ ಪರೀಕ್ಷೆ ಎಂದುಕೊಂಡರೆ ಹೊರಬರಲು ಸಣ್ಣ ಬೆಳಕಿನ ಎಳೆಯಾದರೂ ಸಿಕ್ಕೀತು. ಸಮಸ್ಯೆಯಿಂದ ನೊಂದು ಸ್ವತಃ ನಮ್ಮ ಅಧೀರತೆಯೇ ಸಮಸ್ಯೆಯಾಗುವ ಮೊದಲು ಸಮಸ್ಯೆಯ ಚೌಕಟ್ಟಿನಿಂದ ಹೊರನಿಂತು ಸಮಸ್ಯೆಯ ಸಿಕ್ಕುಗಳನ್ನು ವಸ್ತುನಿಷ್ಠವಾಗಿ ಬಿಡಿಸಹೊರಟರೆ ಏನಾದರೂ ಆಶಾಭಾವ ಸಿಕ್ಕಿಯೇ ಸಿಕ್ಕೀತು. ಸಮಸ್ಯೆಗಿಂತಲೂ ಸಮಸ್ಯೆ ಇದೆ ಎನ್ನುವುದೇ ಸಮಸ್ಯೆಯಾಗಿ ಕಾಡುತ್ತಿದ್ದರೆ ಸಮಸ್ಯೆಯು ಸಮಸ್ಯೆಯಾಗೇ ಉಳಿಯುತ್ತದೆ. ಬದುಕಿನಲ್ಲಿ ಕೆಲವು ಸನ್ನಿವೇಶಗಳನ್ನು ಆ ಕ್ಷಣಕ್ಕೆ ನಿರ್ಲಿಪ್ತವಾಗಿ ಒಪ್ಪಿಕೊಳ್ಳಲೇಬೇಕು. ನಮ್ಮ ಸಮಸ್ಯೆಗಳಿಗೆ ನಾವೇ ವಕ್ತಾರರಾಗದೆ, ಪರಿಹಾರ ಹುಡುಕುವ ರಾಯಭಾರಿಗಳಾಗಬೇಕು.
-KmohanT (13032019)


-----------

43)
ಒಳ್ಳೆಯ ಕೇಳುಗರಾಗಲು ಕಲಿತರೆ ವಿವೇಚನಾ ಶಕ್ತಿ ತಾನಾಗಿಯೇ ವೃದ್ಧಿಸುತ್ತದೆ. ಪರರ ಮಾತಿಗೆ ಕಿವಿಯಾಗದೆ/ಅರೆಬರೆ ಕೇಳಿಸಿಕೊಂಡು ಆತುರದಿಂದ ವ್ಯಕ್ತಿ/ವಿಚಾರದ ಕುರಿತು ಅತಿ ಆತ್ಮವಿಶ್ವಾಸದಿಂದ ದುಡುಕಿನ ನಿರ್ಧಾರಕ್ಕೆ ಬರುವುದು, ಅತಾರ್ಕಿಕ ನಿರೀಕ್ಷೆ ಇರಿಸಿ ಬಳಿಕ ಭ್ರಮನಿರಸನ ಹೊಂದುವುದು ಕೂಡಾ ಅಪಾರ್ಥ ಮತ್ತು ನಿರಾಸೆಗಳಿಗೆ ಕಾರಣವಾಗುತ್ತದೆ. ವಿಷಯ/ವ್ಯಕ್ತಿತ್ವಗಳು ಕಣ್ಣಿಗೆ ಕಂಡಷ್ಟು ಮಾತ್ರ ಇರುವುದಲ್ಲ. ಕೇಳಿಸಿ/ಪರೀಕ್ಷಿಸಿ/ವಿಮರ್ಶಿಸಿ "ಅರಿತುಕೊಳ್ಳುವುದು" ಬಹಳಷ್ಟಿರುತ್ತದೆ. ವಿಚಾರ/ವ್ಯಕ್ತಿಗಳ ಕುರಿತು ಹತ್ತು ಮಂದಿಯ ಬಳಿ ಅಭಿಪ್ರಾಯ ಕೇಳುವುದು ತಪ್ಪಲ್ಲ, ಆದರೆ ಅಂತಿಮ ನಿರ್ಧಾರ ನಮ್ಮದೇ ಆಗಿರಬೇಕು. "ಕೇಳಿಸಿಕೊಂಡು" ತಾಳುವ ನಿರ್ಧಾರಗಳು ಬಹಳಷ್ಟು ಬಾರಿ ಸರಿಯಾಗೇ ಇರುತ್ತದೆ!
-KmohanT (12032019)


----------------

44)
ಒಂದು ವಿಚಾರಕ್ಕೆ ನಮ್ಮ ಪ್ರತಿಕ್ರಿಯೆಯು, ಯಾವ ಮನಸ್ಥಿತಿಯಲ್ಲಿ ನಾವಿದ್ದೇವೆ ಎಂಬುದನ್ನು ಅವಲಂಬಿಸಿರುತ್ತದೆ. ಸಿಟ್ಟು,ಉದ್ವೇಗ, ಹತಾಶೆಯ ಮೂಡಿನಲ್ಲಿ ಕೇಳಿಸಿಕೊಳ್ಳುವುದು ಅಥವಾ ಪ್ರತಿಕ್ರಿಯಿಸುವುದು ಎರಡೂ ಸೂಕ್ತವಲ್ಲ. ಉದ್ವೇಗ ನಮ್ಮ ವಿವೇಚನ ಶಕ್ತಿಯನ್ನು ಕೆಡಿಸಿ ಅಪಾರ್ಥಗಳನ್ನು ಸೃಷ್ಟಿಸಬಹುದು. ಉದ್ವೇಗ ಶಮನವಾಗುತ್ತದೆ, ಆದರೆ ಆ ಸಂದರ್ಭ ಹೊರಬರುವ ಮಾತುಗಳ ಪರಿಣಾಮದಿಂದ ಅನರ್ಥಗಳಾಗಬಹುದು. ಯಾವ ಸಮಸ್ಯೆಗೂ ಉದ್ವೇಗ ಪರಿಹಾರವಲ್ಲ. ಆ ಕ್ಷಣಕ್ಕೆ ಮೌನವೇ ನೋವು ನಿವಾರಕ. ಪ್ರತಿಕ್ರಿಯೆ ಯಾವತ್ತೂ ನೇರ ಮತ್ತು ಸ್ಪಷ್ಟವಾಗಿರಲಿ. ಮೌನ ಬಲಹೀನತೆಯಾಗಿರಬೇಕಾಗಿಲ್ಲ. ಸಾತ್ವಿಕತೆಯೂ ಆಗಿರಬಹುದು, ಮೌನ ಮತ್ತು ತಾಳ್ಮೆ ನಮಗೆ ಅಂಗರಕ್ಷಕರಾಗಿರಬೇಕು. ಫಲಿತಾಂಶ ವಿಳಂಬವಾದರೂ ನಿಖರವಾಗಿರುತ್ತದೆ!
-KmohanT (11032019)


-----------

45)
ಸತ್ಯಸಂಧತೆ, ಪ್ರಾಮಾಣಿಕತೆ ಪ್ರವೃತ್ತಿಯಲ್ಲಿದ್ದರೆ ಭೂಷಣ, ಭಾಷಣಕ್ಕಲ್ಲ. ಪ್ರತಿಯೊಬ್ಬರ ಅಂತರಾತ್ಮಕ್ಕೆ ಬಹುಷಃ ಗೊತ್ತಿರುತ್ತದೆ ಸರಿ ತಪ್ಪುಗಳ ಲೆಕ್ಕಾಚಾರ. ನಿಮ್ಮ ನಡೆ ಪ್ರಾಮಾಣಿಕವೆಂದು ನಿಮಗೇ ಖಚಿತ ಇದ್ದ ಮೇಲೆ, ಪೂರ್ವಾಗ್ರಹದಿಂದಲೇ ವರ್ತಿಸುವವರೆದುರು ಪ್ರಾಮಾಣಿಕತೆ ಸಾಬೀತು ಪಡಿಸುವುದು ಅನಗತ್ಯ. ಪ್ರತಿಯೊಬ್ಬರನ್ನೂ ಮೆಚ್ಚಿಸಿ ಬದುಕುವುದು ಅಸಾಧ್ಯ. ಪ್ರಬುದ್ಧರು, ಅರ್ಥ ಮಾಡಿಕೊಂಡವರ ಹೊರತು ಪಡಿಸಿ ಇತರರ ಜೊತೆ ಸತ್ಯಸಂಧತೆಯ ಪ್ರದರ್ಶನ ಅದರ ದುರುಪಯೋಗ/ ಪರಿಹಾಸ್ಯದ ಮಾತುಗಳನ್ನು ಕೇಳಿಸಲು ಕಾರಣ ಆಗಬಹುದು. ಅವರವರ ಅಂತರಾತ್ಮವೇ ಅವರವರ ಪ್ರಾಮಾಣಿಕತೆಗೆ ದೊಡ್ಡ ಸಾಕ್ಷಿ.
-KmohanT (10032019)


-------

46)
ನಾವೇನು ಎನ್ನುವುದನ್ನು ಒಂದು ಹಂತದ ವರೆಗೆ ವಿವರಿಸಬಹುದು. ನಂತರವೂ ಅಪಾರ್ಥ ಮಾಡಿಕೊಳ್ಳುವವರು, ಸಂಶಯವನ್ನೇ ಪಡುವವರಿದ್ದರೆ ಏನೂ‌ ಮಾಡಲಾಗುವುದಿಲ್ಲ. ಅವರವರ ಭಾವಕ್ಕೆ ತಕ್ಕ ಹಾಗೆ ಅರ್ಥ ಮಾಡಿಕೊಳ್ಳುವುದು ಅವರವರ ಗ್ರಹಿಕೆ ಸಾಮರ್ಥ್ಯಕ್ಕೆ ಬಿಟ್ಟದ್ದು. ಎಷ್ಟೋ ಸಮಯದಿಂದ ಒಬ್ಬಾತ ಪ್ರಾಮಾಣಿಕತೆಯಿಂದ ಕಟ್ಟಿಕೊಂಡ ವ್ಯಕ್ತಿತ್ವ "ಪೂರ್ವಾಗ್ರಹಪೀಡಿತ ವ್ಯಕ್ತಿ" ನೀಡುವ ಗುಣನಡತೆ ಪ್ರಮಾಣಪತ್ರದಿಂದ ಸಾಬೀತಾಗುವುದಲ್ಲ. ಅವುಗಳಿಗೆ ಸ್ಪಷ್ಟನೆಯೂ ಅನಗತ್ಯ. ವೃಥಾ ಕೆಣಕುವಿಕೆ, ಕೆರಳಿಸಲು ಮಾಡುವ ಟೀಕೆಗಳಿಗೆ ತಾಳ್ಮೆ ಕಳೆದುಕೊಂಡು ಸಮರ್ಥಿಸುತ್ತಾ ಕೂರುವಷ್ಟು ಆಯುಷ್ಯ ಸುದೀರ್ಘವಾಗಿಲ್ಲ. ನಾವು ಅರ್ಧರ್ಧ ಅರ್ಥವಾಗುವುದಕ್ಕಿಂತ ಏನೂ ಅರ್ಥವಾಗದಿರುವುದೇ ವಾಸಿ. ಮೊಂಡುವಾದಕ್ಕೆ ಮೌನವೇ ಉತ್ತರವಾಗಿರಬೇಕು!
-KmohanT (10032019)


------

47) 

ವೈಯಕ್ತಿಕ ಹಾಗೂ ಸಾರ್ವಜನಿಕ ವಿಚಾರಗಳ ನಡುವೆ ವ್ಯತ್ಯಾಸ ಭಾವಿಸದೆ ವ್ಯವಹರಿಸುವವರು ಬದುಕಿನ ಸೂಕ್ಷ್ಮತೆಗಳನ್ನು ಕಳೆದುಕೊಂಡಿದ್ದಾರೆ ಅಂತ ತಿಳಿಯಬೇಕಾಗುತ್ತದೆ. ಕಿವಿಯಲ್ಲಿ ಹೇಳುವ ಪಿಸು ಮಾತುಗಳನ್ನು ಮೈಕ್ ಹಿಡಿದು ಬಿತ್ತರಿಸಿದರೆ ಅದು ಭಾವ ರಹಿತ ಸ್ಥಿತಿ ಇರಬಹುದೇನೋ. ಬದುಕಿನಲ್ಲಿ ಹುಡುಗಾಟಿಕೆ/ಹಾಸ್ಯಪ್ರಜ್ಞೆ ಬೇಕು. ಆದರೆ ಅದು ಜವಾಬ್ದಾರಿಗಳನ್ನು ಮರೆಸುವ ಸ್ಥಿತಿಗೆ ತಲುಪಬಾರದು. ಬೇಜವಾಬ್ದಾರಿಯನ್ನೂ ಸಮರ್ಥಿಸುವ ಹಂತಕ್ಕೆ ಯಾರಾದರೂ ತಲುಪಿದರೆ ಮೊಂಡುವಾದ ಮಾಡದೆ ಮೌನಕ್ಕೆ ಶರಣಾಗುವುದೇ ಲೇಸು.
-KmohanT (06032019)


--------

48) 

ಕೆಲವು ಸಮಸ್ಯೆಗಳು ಬಿದಿರಿನ ಮೆಳೆಯನ್ನು ಸ್ವಚ್ಛಗೊಳಿಸ ಹೊರಟ ಹಾಗೆ. ಆವೇಶ, ಅವಸರ, ಉಚಿತ ಸಲಹೆಗಳಿಂದ ನಿವಾರಣೆಯಾಗುವಂಥದ್ದಲ್ಲ. ತಾಳ್ಮೆಯ ನಡೆಯೊಂದೇ ಆಯ್ಕೆ ಇರುವುದು. ಇನ್ನು ಕೆಲವು ಸಮಸ್ಯೆಗಳು whatsapp status message ಥರ, ತನ್ನ ಅವಧಿ ಮುಗಿದಾಗ ಕಣ್ಮರೆಯಾಗಬಹುದು. ಇನ್ನು ಕೆಲವು ಕಷ್ಟಗಳು Facebook ಲ್ಲಿ ಯಾರ್ಯಾರೋ tag ಮಾಡಿದ ಅನಪೇಕ್ಷಿತ post ಥರ ಒಂದು ಕಡೆ ಡಿಲೀಟ್ ಮಾಡಿದರೆ ಮತ್ತೊಂದು ಕಡೆ ಪ್ರತ್ಯಕ್ಷವಾಗಬಹುದು. DPಯಲ್ಲಿ ತೋರಿಸಿಕೊಳ್ಳುವ ನಗುವಿನಿಂದ ಕಷ್ಟಗಳು ನಿವಾರಣೆಯಾಗದು. ನಿಜ ಬದುಕಿನಲ್ಲಿ ಜಂಕ್ ಕ್ಲೀನ್, restart, block, delete ಆಯ್ಕೆಗಳಿಲ್ಲ. ತಾರ್ಕಿಕ, ವಾಸ್ತವಿಕ ಚಿಂತನೆ ಮಾತ್ರ ಪರಿಹಾರ.
-KmohanT (05032019)


------------------

49)
ಸೋಲು-ಗೆಲವು, ಮಾನ-ಅಪಮಾನ, ಖುಷಿ-ದುಃಖಗಳೆಲ್ಲ ಗ್ರಹಿಕೆಯಿಂದ ಉಂಟಾಗುವುದು. ಹೋಲಿಕೆ ಮತ್ತು ನಿರೀಕ್ಷೆಗಳು ಇದರ ಪ್ರಮಾಣವನ್ನು ಬದಲಾಯಿಸಬಹುದು. ಪ್ರಯಾಣ, ಓದು, ಮನರಂಜನೆ, ಅವಕಾಶ, ಸಾಂಗತ್ಯ ಎಲ್ಲದರಲ್ಲೂ ಅಂತಿಮವಾಗಿ ತೃಪ್ತಿ-ಅತೃಪ್ತಿಗಳು ಗ್ರಹಿಕೆಯಿಂದಾಗಿ ಉಂಟಾಗುವುದು. ಧನ, ದೈಹಿಕ ಬಲ, ಪ್ರಭಾವಗಳಿರುವ ವ್ಯಕ್ತಿಗೂ "ಸಂತೃಪ್ತ" ಭಾವ ಕೊಡುವುದು "ಅನುಭೂತಿಗಳೇ" ಹೊರತು ಲೌಕಿಕ ಸಂಪತ್ತಲ್ಲ. ಕಂಡುಕೊಳ್ಳುವ ಕಣ್ಣು, ಸ್ವಲ್ಪ ಅದೃಷ್ಟ, ಅಪಾರ ತಾಳ್ಮೆ, ಸ್ಥಿತಪ್ರಜ್ಞತೆಯೂ ಗ್ರಹಿಕೆಗಳನ್ನು ನಿರ್ಧರಿಸಬಲ್ಲವು.
-KmohanT (04032019)


---------------

50)
ಜಗತ್ತಿನ ಪ್ರತಿಯೊಬ್ಬರಿಗೂ ತಾವು "ಅಂದುಕೊಂಡ" ಹಾಗೆ ಬದುಕಲು ಸಾಧ್ಯವಾಗದೇ ಹೋಗಬಹುದು. ಎಲ್ಲೋ ಕೆಲವರಿಗೆ ಹವ್ಯಾಸ ಮತ್ತು ವೃತ್ತಿಬದುಕು ಏಕರೂಪವಾಗಿ ಪ್ರದಾನವಾಗುತ್ತದೆ. ಇನ್ನು ಹಲವರು "ತಮಗೋಸ್ಕರ ಎಲ್ಲೋ ಒಂದು ಕಡೆ ಸ್ವರ್ಗಸದೃಶ ಬದುಕು ಕಾದಿರಿಸಲ್ಪಟ್ಟಿದೆ, ಅದನ್ನು ಅನುಭವಿಸುವ ದಿನ ಹುಡುಕಿಕೊಂಡು ಬರುತ್ತದೆಂಬ" ಅಸ್ಪಷ್ಟ ನಿರೀಕ್ಷೆಯಲ್ಲಿ ವರ್ತಮಾನದ ಖುಷಿಯನ್ನೂ ಅನುಭವಿಸಲಾಗದೆ, ಕನಸಿನ ಭವಿಷ್ಯವನ್ನೂ ತಲುಪಲಾಗದೆ ತೊಳಲಾಡ್ತಾ ಇರ್ತಾರೆ. ನಮ್ಮ ಖುಷಿ ಎಲ್ಲಿದೆ? ಯಾತಕ್ಕೋಸ್ಕೋರ ದುಡಿಯುತ್ತಿದ್ದೇವೆ, ನಮ್ಮ ಮಿತಿಗಳೇನು ಎಂಬುದು ಅರ್ಥವಾದರೆ, ವ್ಯರ್ಥ ಭ್ರಮೆಗಳು ಕಳಚಿ, ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಸುತ್ತಮುತ್ತಲ ಚಿಕ್ಕಪುಟ್ಟ ಖುಷಿಗಳಿಗೆ ಸಾಕ್ಷಿಗಳಾಗಲು ಪ್ರಯತ್ನಿಸಬಹುದು!
-KmohanT (03032019)


--------------

51)
"ಶೂನ್ಯ ನಿರೀಕ್ಷೆ, ಸ್ಥಿತಪ್ರಜ್ಞತೆಯಿಂದ ನಿರಾಸೆ, ಒತ್ತಡ, ಸಂಘರ್ಷಗಳನ್ನು ಕಡಿಮೆ ಮಾಡಬಹುದು...."
ಈ ರೀತಿಯ ಸಾಲುಗಳು ತೀರಾ ಆಪ್ತ, ವಾಸ್ತವಿಕ ಎಂದೆನಿಸುತ್ತದೆ. ಆದರೆ, ಇಂತಹ ಬೋಧನೆಗಳನ್ನು ಅನುಸರಿಸುವುದು ಹೇಳಿದಷ್ಟು ಸುಲಭವಲ್ಲ ಎಂಬುದು ಬೋಧಕರಿಗೂ ಗೊತ್ತು. ಕಠಿಣವಾದ ಭಾವ ನಿಗ್ರಹಗಳನ್ನು ಸಾಧಿಸಿದವರು ಅಸಾಮಾನ್ಯರಾಗುತ್ತಾರೆ. ಚಿಂತಿಸಿ ಬರೆಯುವ ಪಠ್ಯಕ್ಕೂ, ಅನಿರೀಕ್ಷಿತ ಪರಿಸ್ಥಿತಿಗಳ ಜೊತೆ ಹೋರಾಡಿ ನಡೆಸುವ ಬದುಕಿಗೂ ತುಂಬ ವ್ಯತ್ಯಾಸವಿದೆ. ಸ್ವನಿಗ್ರಹ, ನಿರ್ಲಿಪ್ತತೆ ರೂಢಿ ಅಷ್ಟು ಸುಲಭವೆಂದಾದರೆ ಜಗತ್ತಿನಲ್ಲಿ ವೈದ್ಯರು, ಆಪ್ತಸಮಾಲೋಚಕರು, ನ್ಯಾಯವಾದಿಗಳು ಮತ್ತಿತರರ ಕೆಲಸಗಳು ತುಂಬಾ ಕಡಿಮೆಯಾಗುತ್ತಿತ್ತು!
-ಕೃ.ಮೋ. (02032019)


--------

52)
ಪೂರ್ವಾಗ್ರಹಪೀಡಿತ ಟೀಕೆ ಮತ್ತು ನಿರಂತರ ಅವಹೇಳನದಿಂದ ಸತ್ಯವೊಂದು ಸುಳ್ಳಾಗುವುದಿಲ್ಲ, ಮಾಡಿದ ತಪ್ಪು ಅಳಿಸಿ ಹೋಗುವುದೂ ಇಲ್ಲ. ನಮ್ಮ ತಪ್ಪುಗಳನ್ನು ತಿದ್ದುವ ಟೀಕೆಗಳನ್ನು ತಲೆಬಾಗಿ ಸ್ವೀಕರಿಸಬೇಕು. ಕೆಣಕಲೆಂದೇ ಮಾಡುವ ಟೀಕೆ, ಕೆರಳಿಸಲು ಮಾಡುವ ಅವಹೇಳನಗಳಿಗೆ ಸ್ಥಿತಪ್ರಜ್ನ ಮೌನಕ್ಕಿಂತ ಉತ್ತಮ ಪ್ರತಿಕ್ರಿಯೆ ಬೇರಿಲ್ಲ. ನಮ್ಮ ನಂಬಿಕೆಗಳ ಮೇಲೆ ನಮಗೆ ವಿಶ್ವಾಸವಿದ್ದರೆ ಮತ್ತದನ್ನು ವಾದಗಳ ಮೂಲಕ ವಿತಂಡವಾದಿಗಳಿಗೆ ಸ್ಪಷ್ಟಪಡಿಸುವುದು ಕಾಲಹರಣವಾದೀತು ಅಷ್ಟೆ. ಸತ್ಯ ಮತ್ತು ವಾಸ್ತವ ಎನ್ನುವುದು ಅಪಪ್ರಚಾರ, ಅಪನಂಬಿಕೆಗಳ ಹಂಗಿನಲ್ಲಿ ಇರುವುದಲ್ಲ, ತಡವಾಗಿಯಾದರೂ ಬೆಳಗಿಯೇ ಬೆಳಗುತ್ತದೆ. ಮೌನವೆಂದರೆ ದೌರ್ಬಲ್ಯವಾಗಬೇಕಿಲ್ಲ, ದೃಢ ನಂಬಿಕೆಯ ಸಾತ್ವಿಕತೆಯೂ ಆಗಿರಬಹುದು!
-KmohanT. (01032019)


-------

53)
ಬೆಳೆದು ಬಂದ ರೀತಿ, ಕೌಟುಂಬಿಕ ಹಿನ್ನೆಲೆ, ಪ್ರಭಾವಗಳು, ಓದು, ಅವಕಾಶ, ವಿಶ್ಲೇಷಣಾ ಸಾಮರ್ಥ್ಯದ ಕಾರಣಗಳಿಂದ ಒಬ್ಬೊಬ್ಬರು ಯೋಚಿಸುವ ರೀತಿ ಭಿನ್ನವಾಗಿರುತ್ತದೆ. ಸಂಭವಿಸಿದ ಘಟನೆ ಒಂದೇ ಆದರೂ ಅದರ ಗ್ರಹಿಕೆ, ವಿಶ್ಲೇಷಣೆ, ಪ್ರಚಾರ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಿ ನಾನಾ ಆಯಾಮ ಪಡೆಯುತ್ತಾ ಹೋಗಿ ಮೂಲ ಘಟನೆ (ವಾಸ್ತವ) ಕ್ಷುಲ್ಲಕವಾಗಿ ಅದರ ಸುತ್ತಲಿನ ಚರ್ಚೆಗಳೇ ವಿಜೃಂಭಿಸಿ ಭಿನ್ನ ಆಯಾಮಗಳನ್ನು ಪಡೆಯುತ್ತಾ ಹೋಗ್ತವೆ. ಭಿನ್ನ ಗ್ರಹಿಕೆಗಳು ನಮಗರಿವಿಲ್ಲದೇ ನಮ್ಮದೇ ಆದ ಪೂರ್ವಾಗ್ರಹವನ್ನು ಮನಸ್ಸಿನಲ್ಲಿ ಸೃಷ್ಟಿಸಿ, ನಮ್ಮ ನಂಬಿಕೆಗೆ ವ್ಯತಿರಿಕ್ತ ಘಟನೆಗಳು ನಡೆದಾಗ ಒಪ್ಪಲಾಗದೆ ಹತಾಶರಾಗ್ತೇವೆ, ತಾಳ್ಮೆ ಕಳೆದುಕೊಳ್ತೇವೆ (ವೈಯಕ್ತಿಕ/ಸಾಮಾಜಿಕ ಎರಡಕ್ಕೂ ಅನ್ವಯ). ಇದೇ ಕಾರಣಕ್ಕೆ "ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ" ಎಂಬ ಮಾತು ಆಗಾಗ ಕೇಳಿ ಬರುವುದು!
-KmohanT. (28022019)


------

54)
16-17 ವರ್ಷಗಳ ಹಿಂದಿನ ವರೆಗೆ ಲ್ಯಾಂಡ್ ಲೈನ್ ಸಂಪರ್ಕ ಮತ್ತು ಪತ್ರಗಳು ಮಾತ್ರ ಸೀಮಿತ ಸಂವಹನದ "ಶಾಂತಿಯುತ" ವಾಹಕಗಳಾಗಿದ್ದವು. ಇಂದು ಬೇಕಿದ್ದರೂ ಬೇಡದಿದ್ದರೂ ಆವರಿಸಿರುವ ಅಂತರ್ಜಾಲ ಸಹಿತ ಮೊಬೈಲು ಸಂಪರ್ಕದ "ಅತಿರೇಕದ ಸಂವಹನ" ಮನುಷ್ಯನಿಗೆ ಯೋಚನೆ ಮಾಡುವುದಕ್ಕೆ ಅವಕಾಶ ನೀಡದೆ, ವೈಯಕ್ತಿಕ ಮನಃಶಾಂತಿಯನ್ನೆ ಕಬಳಿಸಿ ವಿಜೃಂಭಿಸುತ್ತಿದೆ!
Offline ಇರುವುದಕ್ಕೂ ಕಾರಣ ಕೊಡಬೇಕಾದ ಪರಿಸ್ಥಿತಿ ಒದಗಿದ್ದು, ವ್ಯಕ್ತಿಯ ಅಸ್ತಿತ್ವ ಮತ್ತು ಕ್ರಿಯಾಶೀಲತೆಗೆ online ಇರುವುದೇ ಮಾನದಂಡ ಆಗುತ್ತಿದೆ! ಪತ್ರಗಳನ್ನೇ ಸಂವಹನ ಮಾಧ್ಯಮವಾಗಿ ನೋಡಿದ ಪೀಳಿಗೆಯವರಿಗೆ
ಈ ವಾಸ್ತವವನ್ನು ಅರಗಿಸಲಾಗುತ್ತಿಲ್ಲ!
-ಕೃ.ಮೋ‌. (29022019)

------

55)
ನ್ಯೂನತೆ, ಸಮಸ್ಯೆಗಳಿಲ್ಲದ ವ್ಯಕ್ತಿಗಳು ಇರಲಾರರು. ಕೆಲವರು ಹೇಳುತ್ತಾರೆ, ಹಲವರು ಹೇಳುವುದಿಲ್ಲ. ಕೆಲವರಲ್ಲಿ ಕಾಣಿಸುತ್ತದೆ, ಹಲವರಲ್ಲಿ ಕಾಣಿಸುವುದಿಲ್ಲ. ಎದುರಿಸಲಿರುವ ಧೈರ್ಯ, ತಾಳ್ಮೆ, ಮನಃಶಕ್ತಿಯ ಆಧಾರದಲ್ಲಿ ಸಮಸ್ಯೆಗಳ ಪ್ರತಿಫಲನ ಕಾಣಿಸುತ್ತದೆ. ನಗು-ಅಳು ಆ ಹೊತ್ತಿನ ಭಾವದ ಬಿಂಬಗಳೇ ಹೊರತು ದೀರ್ಘ ಕಾಲದಿಂದ ಮಡುಗಟ್ಟಿದ ಆತಂಕಗಳ ಅಳೆಯಬಹುದಾದ ಮಾನದಂಡಗಳಲ್ಲ. ಮನಸ್ಸಿನ ನಿರಾಳತೆ ಸಮಸ್ಯೆಯನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದನ್ನು ಅವಲಂಬಿಸಿರುತ್ತದೆ. ಸಮಸ್ಯೆಯನ್ನು ಸ್ವೀಕರಿಸಿದ ರೀತಿಯಿಂದಲೇ ಪರಿಹಾರ ಪ್ರಯತ್ನ ಶುರುವಾಗುತ್ತದೆ!
-ಕೃಮೋ (24022019)

-----

56)
ಪ್ರತಿ ವ್ಯಕ್ತಿತ್ವಕ್ಕೂ ಭಿನ್ನ ಗುರುತಿಸುವಿಕೆ ಇದೆ. ಅದನ್ನು ವಿನಾಕಾರಣ ಬೇರೆಯವರ ಜೊತೆ ಹೋಲಿಸುವ ಮೂಲಕ ಒಳ್ಳೆಯದು/ಕೆಟ್ಟದರ ತೀರ್ಮಾನ ಮಾಡಲಾಗುತ್ತದೆ. ಸತ್ಯಸಂಧತೆ ಮತ್ತು ಯಥಾಶಕ್ತಿ ಪ್ರಾಮಾಣಿಕತೆಯೇ ವ್ಯಕ್ತಿತ್ವಕ್ಕೆ ಶ್ರೀರಕ್ಷೆ. ನೇರ ನಡೆ ಬಗ್ಗೆ ಆತ್ಮವಿಶ್ವಾಸ ಇರುವವರು ಆಗಾಗ ತಮ್ಮನ್ನು ಸಮರ್ಥಿಸುವ ಅಗತ್ಯ ಇಲ್ಲ. ಸಂದರ್ಭಗಳೇ ವ್ಯಕ್ತಿತ್ವವನ್ನು ತನ್ನಿಂತಾನೆ ತಿಳಿಸಿಕೊಡುತ್ತವೆ. ಸಾಮರ್ಥ್ಯದ ಬಗ್ಗೆ ಕೀಳರಿಮೆ ಇರುವವರಿಗೆ ಸಮರ್ಥನೆ ಮತ್ತು ಸ್ವಯಂ ಪ್ರಚಾರದ ಹಾತೊರೆಯುವಿಕೆ ಬಹುಷಃ ಜಾಸ್ತಿ ಇರುತ್ತದೆ.
-ಕೃಮೋ. (22022019)

--------

57)
ಪರಿಸ್ಥಿತಿ, ಒತ್ತಡಗಳಿಂದ ಮನಸ್ಥಿತಿ ರೂಪುಗೊಳ್ಳುತ್ತದೆ. ಅದು ಆ ಹೊತ್ತಿಗೆ ಸೀಮಿತ. ಪೂರಕವಲ್ಲದ ಮನಸ್ಥಿತಿಗಳ ನಡುವಿನ ಸಂವಹನ ಅಪಾರ್ಥ ಸೃಷ್ಟಿಸುತ್ತದೆ. ಮನಸ್ಥಿತಿ ವ್ಯಘ್ರವಾಗಿದ್ದರೆ ಅದನ್ನು ಇತರರ ಮೇಲೆ ಹೇರುವುದು ತಪ್ಪು. ತಮಾಷೆ, ವಾದ, ವಿವಾದ, ಸಮರ್ಥನೆ ಎಲ್ಲವೂ ಕೆಟ್ಟ ಮನಸ್ಥಿತಿಯಲ್ಲಿ ಸಂವಹನ ಹೊಂದಲು ಸಾಧ್ಯವೇ ಇಲ್ಲ. ಆ ಹೊತ್ತಿಗೆ ಮಾತಿಗಿಂತ ಮೌನ ಲೇಸು. ಪರರ ಮನಸ್ಥಿತಿ, ಒತ್ತಡಗಳ ಅರಿವಿದ್ದು ಮಾತನಾಡಿದರೇ ಜಗತ್ತಿನ‌ ಎಷ್ಟೋ ಅಪಾರ್ಥಗಳನ್ನು ತಪ್ಪಿಸಬಹುದು. ಈ ಹೊತ್ತಿಗೆ ನನ್ನಲ್ಲಿರುವ ಮನಸ್ಥಿತಿಯೇ ಜಗತ್ತಿನಾದ್ಯಂತ ಇರುತ್ತದೆಯೆಂಬ ಭ್ರಮೆ ಮತ್ತು ಸಮರ್ಥನಾ ಭಾವ ರೂಢಿಸಿಕೊಂಡಿದ್ದರೆ ಅಲ್ಲಿ ಅಹಂ ತಾಂಡವ ಆಡುತ್ತದೆ!
-ಕೃಮೋ (20022019)

-------

58) 
ಉದ್ದೇಶಪೂರ್ವಕ ಅಲ್ಲದೇ ಸಂಭವಿಸುವುದು "ಪ್ರಮಾದ". ಆ ಕುರಿತು ಕಿಂಚಿತ್ತೂ ಪಶ್ಚಾತ್ತಾಪ ಪಡದೇ ಸಂಭವಿಸಿದ್ದನ್ನು ಮತ್ತಷ್ಟು ಸಮರ್ಥಿಸುತ್ತಾ ಹೋಗುವುದು ನಮ್ಮ ವ್ಯಕ್ತಿತ್ವ ಸುಧಾರಿಸಲು ನಮಗಿರುವ ಅವಕಾಶವನ್ನು ನಾವೇ ಕೈಯಾರೇ ತಪ್ಪಿಸಿಕೊಂಡ ಹಾಗೆ ಹಾಗೂ ಇನ್ನಷ್ಟು ಪ್ರಮಾದಗಳಿಗೆ
ರಹದಾರಿ ಕೊಟ್ಟ ಹಾಗೆ!
-ಕೃಮೋ (19022019)

------

59)
ಪ್ರತಿ ಪ್ರಕರಣಕ್ಕೂ ಇನ್ನೊಂದು ಮಗ್ಗುಲು ಇರುತ್ತದೆ. ನಮ್ಮ ಮೂಗಿನ ನೇರದ ಯೋಚನೆ, ಅಹಂ, ಆವೇಶ, ಆಕ್ರೋಶ ಮರೆತು ತಾಳ್ಮೆಯಿಂದ ವಿವೇಚಿಸಿದರೆ ಆ ಮಗ್ಗುಲು ಕೂಡಾ ಕಾಣಿಸುತ್ತದೆ. ಆಗ ನಮಗಿರುವಷ್ಟೇ ಭಾವ ತೀವ್ರತೆ ಇತರರೊಳಗೂ ಇರುವುದರ ಅರಿವಾಗುತ್ತದೆ. ಪ್ರತಿ ಪ್ರತಿಕ್ರಿಯೆಯೂ ವ್ಯಕ್ತಿಯ ಮನಸ್ಥಿತಿ, ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಇವೆರಡನ್ನು ಮರೆತು ಯಾರ ವರ್ತನೆಯ ಬಗೆಗೂ "ಇದಮಿತ್ಥಂ" ಎಂದು ತೀರ್ಪು ಕೊಡುವುದು ಸಮಂಜಸ ಆಗಲಾರದು.
-ಕೃಮೋ. (19022019)

-------

60)
ಮಾತಿಗೆ ಮೌನ ಪರ್ಯಾಯ ಅಲ್ಲ.
ಆದರೆ... ಮೌನಕ್ಕೆ "ಮೌನ" ಎಂಬುದು ಮಾತ್ರ ಆರೋಪ. ಮಾತಿನ ಎಡವಟ್ಟುಗಳಿಗೆ ಹತ್ತಾರು ಸ್ಪಷ್ಟೀಕರಣಗಳು. ಮಾತು ಸೋತಲ್ಲಿಗೆ ಮೌನವೇ ಮಾತು. ಮೌನದ ಮಾತು ಅರಿಯದವರಿಗೆ ಮಾತೂ ಮೌನದಂತೆ ಕಂಡೀತು. ಹದ ತಪ್ಪಿದ ಮಾತಿಗೆ ಮೌನವೇ ಅಂತ್ಯ. ಮೌನದಂತಹ ಮಾತಿಗೆ ಗಾಂಭೀರ್ಯ, ಸಂಯಮ, ನಿರಂತರತೆಯೂ ಇರುತ್ತದೆ.
-ಕೃಮೋ (19022019)

------

61)
"ಪ್ರದರ್ಶನ" ದಲ್ಲಿ ತೋರಿಸಿಕೊಳ್ಳದ ವಿಚಾರಗಳು "ಇಲ್ಲ" ಅಂತ ಅರ್ಥ ಅಲ್ಲ.
ವೈಯಕ್ತಿಕ ಆಗಿರಬೇಕಾಗಿರುವುದರ ಪ್ರದರ್ಶನ, ಮಾತಿಗಿಂತ ಕೃತಿಯಲ್ಲೇ ಕಾಣಬೇಕಾದ್ದಕ್ಕೆ ನೀಡುವ ವಿವರಣೆಗಳು, ಪುರಾವೆಗಳು
"ಭಾವಕ್ಕೆ ಚೌಕಟ್ಟು ಕಟ್ಟಿದ ಹಾಗೆ"!
-ಸೂಕ್ತಿ (14022019)
-----

62) 
ಎಲ್ಲವನ್ನೂ ಜಗತ್ತಿಗೆ ನಾನೇ ಮೊದಲು ತಿಳಿಸುತ್ತೇನೆಂಬ ಭ್ರಮೆಯಲ್ಲಿ forwarded messageಗಳನ್ನು ಕಂಡ ಕಂಡವರಿಗೆ ಯಾಂತ್ರಿಕವಾಗಿ forward ಮಾಡಿ ತೊಂದರೆ ಕೊಡುವ ಮೊದಲು ಆ ಮೆಸೇಜನ್ನು ಸ್ವತಃ ನಾವೂ ಒಮ್ಮೆ ಓದುವುದು ಆರೋಗ್ಯಕ್ಕೆ ಒಳ್ಳೆಯದು!
-ಸೂಕ್ತಿ (03022019)

-----

63)
ಸ್ವತಃ ನಾವೇ ಓದದ ಉದ್ದುದ್ದ ಸಂದೇಶಗಳನ್ನು ಉಳಿದವರೆಲ್ಲ ಓದುತ್ತಾರೆಂಬ ಭ್ರಮೆಯಲ್ಲಿ ಕಂಡ ಕಂಡ ವಾಟ್ಸಪ್ ಗ್ರೂಪುಗಳಿಗೆ ಮುಂದೂಡದೇ ಇರುವ ಸಂಯಮ‌ ಬೆಳೆಸಿಕೊಂಡರೆ.... ಸಾಮಾಜಿಕ ಮನಶಾಂತಿಗೆ ಭಂಗ ತಾರದ ಹಿನ್ನೆಲೆಯಲ್ಲಿ ಸಾಕಷ್ಟು ಪುಣ್ಯ ಸಂಚಯನವಾಗುತ್ತದೆ!
-ಸೂಕ್ತಿ. (26012019)

------

64)
ಸಾಧಕರಿಗೆ ಚಪ್ಪಾಳೆ ತಟ್ಟುವ ಸಭಿಕನಾಗಿ ಉಳಿಯುವಲ್ಲಿಗೆ ಕನಸು ಸೀಮಿತ ಇರಬಾರದು. ಮುಂದೊಂದು ದಿನ ಸ್ವತಃ ಚಪ್ಪಾಳೆ ಗಿಟ್ಟಿಸುವ ಆಸೆ ಇರಬೇಕು.
ಅದೇ ರೀತಿ....
ಯಾರ್ಯಾರ ಪೋಸ್ಟ್ ಗಳನ್ನು ಯಾಂತ್ರಿಕವಾಗಿ "forward/share" ಮಾಡುವಲ್ಲಿಗೆ ಸಾಧನೆ ನಿಲ್ಲದಿರಲಿ. ನಮ್ಮ ಸ್ವಂತ ಪೋಸ್ಟುಗಳನ್ನು ಇನ್ಯಾರೋ forward ಮಾಡುವಂತೆ ಬರೆಯುವ ತುಡಿತ ಬರಲಿ🙏
-ಸೂಕ್ತಿ. (24012019)

-----

65)
Onlineಲ್ಲಿ ವ್ಯಕ್ತಿಗಳು ತಮ್ಮನ್ನು ತಾವು "ತೋರಿಸಿಕೊಳ್ಳುವುದಕ್ಕೂ" ವಾಸ್ತವದಲ್ಲಿ ನಾವಾಗಿ ಅವರನ್ನು "ಕಾಣುವುದಕ್ಕೂ" ವ್ಯತ್ಯಾಸಗಳಿರ್ತವೆ. ಈ ಜ್ಞಾನ ಹೊಂದಲು ಸ್ವಂತ ಸಂದೇಶ ಹಂಚಿಕೊಳ್ಳುವುದು ಮತ್ತು forwarded ಸಂದೇಶ ಹಂಚಿಕೊಳ್ಳುವುದರ ನಡುವಿನ ವ್ಯತ್ಯಾಸ ಗುರುತಿಸುವ ಶಕ್ತಿ ನಮಗಿದ್ದರೆ ಸಾಕು!
-ಸೂಕ್ತಿ. (24012019)

------

66)
Online ಇರುವವರು ಕೆಲಸವಿಲ್ಲದೆ ನಿರಾಳರಿದ್ದಾರೆ ಎಂದೂ, offline ಇರುವವರು busy/ಶ್ರಮಜೀವಿಗಳು ಎಂದೂ ಅರ್ಥ ಮಾಡಿಕೊಳ್ಳಬೇಕಿಲ್ಲ. Online ಇರುವುದು ಸಮಕಾಲೀನ ಬದುಕಿನ ಅನಿವಾರ್ಯತೆ ಅಷ್ಟೆ!
-ಸೂಕ್ತಿ. (23012019)




No comments: