ನೆನಪಿದೆಯೇ ಮೊದಲ ಎಸ್ಎಂಎಸ್? ನೆನಪಿದೆಯ ಮೊದಲ ಕರೆಯೂ...?! (ಮರೆತೇ ಹೋದ ಮೊಬೈಲ್ ನಡೆದು ಬಂದ ದಾರಿಯ ಸಿಂಹಾವಲೋಕನ)

 


ನಮ್ಮ ಕಾಲದಲ್ಲಿ ಹೀಗಿರ್ಲಲ್ಲಪ್ಪ, ಈಗ ತಂತ್ರಜ್ಞಾನ ಬದಲಾದ ಹಾಗೆ ಈಗಿನವರು ಹೇಗೆ ಬದಲಾಗ್ತಾರೆ ಅಂತವೇ ಗೊತ್ತಿಲ್ಲ, ಕಾಲ ಕೆಟ್ಟು ಹೋಗಿದೆಎಂಬುದು ಕ್ಲೀಷೆಗೊಳಗಾಗಿರುವ ವಾಕ್ಯ. ಈ ಮಾತಿಗೆ ಸಡ್ಡು ಹೊಡೆದಂತಿರುವ ವಿಚಾರ ಅಂದ್ರೆ ಮೊಬೈಲು. ನಮ್ಮ ನಿಮ್ಮ ಕೈಗೆ ಬಂದ ಈ ಸುಮಾರು 22 ವರ್ಷಗಳಲ್ಲಿ ಮೊಬೈಲು ಮತ್ತು ಅದರ ಸಾಧ್ಯತೆ, ಅನಿವಾರ್ಯತೆ ಎಷ್ಟು ಅಗಾಧವಾಗಿ ಬದಲಾಗಿದೆ. ಮೊಬೈಲ್ ಮುಷ್ಟಿಯೊಳಗಿರುವ ನಾವು ಸಹ ಬದಲಾಗಿದ್ದೇವೆ! ಹಾಗಾಗಿ ಮೊಬೈಲಿಗೋಸ್ಕರ ನಂ ಮನ್ಸು, ನಂ ಸಮ್ಯ, ನಂ ಹೃದಯವಂತಿಕೆ, ಸಹನೆ ಎಲ್ಲವನ್ನೂ ಕಳ್ಕೊಂಡಿರುವ ನಾವು ನಮ್ಮ ಕಾಲದಲ್ಲಿ ಹೀಗಿರ್ಲಲ್ಲಪ್ಪ ಅನ್ನುವ ಅರಣ್ಯರೋದನ ಶೈಲಿಯ ಡೈಲಾಗು ಹೇಳುವ ಅಗತ್ಯ ಇಲ್ಲ. ಯಾಕಂದ್ರೆ ನಮ್ಮದೇ ಕಾಲಘಟ್ಟದಲ್ಲಿ ಕೈಗೆ ಬಂದ ಮೊಬೈಲು 2ಜಿ,3ಜಿ,4ಜಿಯ ಹಾಗೆ ಐದು ವರ್ಷಗಳಿಗೊಮ್ಮೆ ಬದಲಾಗ್ತಾ ಈಗ 5ಜಿ ಹಂತದಲ್ಲಿ ಅಗಲಿ ಇರಲಾರದಷ್ಟು ವ್ಯಾಪಿಸಿ ತಂತ್ರಜ್ಞಾನ ವರ್ಷಗಳಲ್ಲಿ ಬದಲಾಗುವುದಲ್ಲ, ದಿನದಿನಕ್ಕೂ ಬದವಲಾಗ್ತಾ ಇರ್ತದೆ ಎಂಬುದನ್ನು ಸಾಬೀತುಪಡಿಸಿದೆ. ತಂತ್ರಜ್ಞಾನ ಬದುಕನ್ನು, ಸಂವಹವನ ಸಾಧ್ಯತೆಗಳನ್ನು ಮಾತ್ರ ಬದಲಾಯಿಸುವುದಲ್ಲ, ನಮ್ಮ ಮಾನಸಿಕತೆಯನ್ನೂ ಬದಲಾಯಿಸಬಲ್ಲುದು ಎಂಬುದು ಮೊಬೈಲ್ ಎಂಬ ದೈತ್ಯ ಪ್ರತಿಭೆ ಶೃತಪಡಿಸಿದೆ.

......

ನೀವು ಮೊದಲ ಬಾರಿಗೆ ಮೊಬೈಲ್ ಖರೀದಿ ಮಾಡಿದ್ದು ನೆನಪುಂಟ? ಆಗಿನ ಸಂಭ್ರಮ, ಕರೆಗೆ ಕಾಯ್ತಾ ಇದ್ದದ್ದು, ಮೊದಲ ಕರೆ ಯಾರಿಗೆ ಮಾಡಿದ್ದು ಎಲ್ಲ ನೆನಪುಂಟ, ಮೊಬೈಲಿಗೆ ಕವರ್ ತಕ್ಕೊಂಡದ್ದು, ಪುಟ್ಟ ಚೀಲ ಮಾಡಿ ಇರಿಸಿದ್ದು, ಬಣ್ಣದ ಟ್ಯಾಗ್ ಖರೀದಿ ಮಾಡಿದ್ದು, ಅದನ್ನಿಡ್ಲಿಕೆ ರಟ್ಟಿನ ಸ್ಟಾಂಡ್ ಮಾಡಿದ್ದೆಲ್ಲ ನೆನಪುಂಟ? ನಿಮಗೆ ಫಸ್ಟ್ ಮೆಸೇಜು ಮಾಡಿದ್ದು ಯಾರು, ನಿಮಗೆ ಫೋನ್ ಬಳಸ್ಲಿಕೆ ಕಲಿಸಿದ್ದು ಯಾರು, ನಿಮಗೆ ಇ ಮೇಲ್ ಅಕೌಂಟ್ ಮಾಡ್ಲಿಕೆ ಹೇಳಿಕೊಟ್ಟದ್ದು ಯಾರು? ಇದೆಲ್ಲ ನೆನಪುಂಟ...?! ಇದ್ರೆ ಒಮ್ಮೆ ನೆನಪಿಸಿಕೊಳ್ಳಿಯಂತೆ.

ಹೌದು, 2002ರ ಅಂದಾಜಿಗೆ ಕೈಗೆ ಬೇಸಿಕ್ ಸೆಟ್ಟು ಮೊಬೈಲು ಬಂದಾಗ ಯಾರಾದ್ರೂ SMS ಮಾಡಲಿ ಅಂತ ಮನಸ್ಸು ಹಾತೊರೆಯುತ್ತಿತ್ತು. ಅಷ್ಟೊಂದು ಕುತೂಹಲ ಮೊಬೈಲಿನ ಬಗ್ಗೆ. ಕಂಪನಿ SMSನಿಂದ ತೊಡಗಿ ನೀವೀಗ ಕೇರಳದ ಗಡಿ ದಾಟಿ ಬಂದಿದ್ದೀರಿ, ನಿಮಗೆ ಸ್ವಾಗತ ಬಯಸುವ ಬಿಎಸ್ಎನ್ಎಲ್ ಎಂಬ ಮೆಸೇಜ್ ತನಕ ಎಲ್ಲವನ್ನೂ ಓದ್ತಾ ಇದ್ದೆವು. ಆಗಿನ ಬೇಸಿಕ್ ಹ್ಯಾಂಡ್ ಸೆಟ್ಟಿಗೆ ಒಂದು ಎಲ್ಇಡಿ ಪುಟ್ಟ ಬಲ್ಬಿರುವ ಸ್ಟಿಕ್ಕರ್ ಅಂಟಿಸಿಟ್ಟರೆ ಸಾಕು, ಕಾಲು, ಮೆಸೇಜು ಬರುವುದಕ್ಕಿಂತ 2-3 ಸೆಕೆಂಡು ಮೊದಲೇ ಅದು ಬ್ಲಿಂಕ್ ಆಗಿ ಎಚ್ಚರಿಸ್ತಾ ಇತ್ತು. ಹಾಗೆ ಮೆಸೇಜು ಬರುವ ಮೊದಲೇ ಮನಸ್ಸು ಮೆಸೇಜಿಗೆ ಸಿದ್ಧವಾಗಿರ್ತಾ ಇತ್ತು. ಅಂಥಾದ್ರಲ್ಲಿ, ಇಂದು ಎಸ್ಎಂಎಸ್ ಬಿಡಿ, ವಾಟ್ಸಪ್ಪು, ಫೇಸ್ಬುಕ್ಕು, ಇನ್ ಸ್ಟಾ, ಎಕ್ಸು, ಯೂಟ್ಯೂಬು... ಹಾಗೂ ಇದರ ಕುಟುಂಬಕ್ಕೇ ಸೇರಿದ ನೂರಾರು ಅಜ್ಞಾ(ತ)ನತಾಣಗಳಲ್ಲಿ ಬರುವ ಸಾವಿರಾರು ಮೆಸೇಜಿನ ಪೈಕಿ ಎಷ್ಟು ಮೆಸೇಜನ್ನು ಓಪನ್ ಮಾಡ್ತೇವೆ, ಎಷ್ಟು ಮಸೇಜನ್ನು ಓಪನ್ ಮಾಡಿದ ನಂತ್ರ ಓದ್ತೇವೆ, ಇನ್ನೆಷ್ಟು ಮೆಸೇಜಿಗೆ ಉತ್ತರ ಕೊಡ್ತೇವೆ, ಆ ಉತ್ತರದಲ್ಲಿ ಎಷ್ಟು ಪರ್ಸಂಟೇಜ್ ಪ್ರಾಮಾಣಿಕ ಉತ್ತರ ಆಗಿರ್ತದೆ ಅಂತ ಆತ್ಮಸಾಕ್ಷಿ ಇರಿಸಿ ಉತ್ತರಿಸಿದ್ರೆ ಗೊತ್ತಾಗ್ತದೆ!

ಮೊಬೈಲು ಅಂದ್ರೆ ಹೊಸತು ಆಗಿದ್ದ ಕಾಲದಲ್ಲಿ, ಮೊಬೈಲ್ ಎಂಬುದು ಕೆಲವೇ ಮಂದಿಯ ಕೈಯ್ಯಲ್ಲಿ ಇದ್ದ ಕಾಲದಲ್ಲಿ, ಮೊಬೈಲ್ ಎಂದರೆ ಐಷಾರಾಮಿ ಎಂಬ ಕಲ್ಪನೆ ಇದ್ದ ಕಾಲದಲ್ಲಿ ನಾನಿದ್ದ ಕಾರಣ, ಮೊಬೈಲೇ ಇಲ್ಲದೆ ಬದುಕಿನ ಅರ್ಧ ಶತಮಾನದಷ್ಟು ಆಯುಷ್ಯ ಕಳೆದ ಕಾರಣ ಮೊಬೈಲೇ ಇಲ್ಲದ ಹಿಂದಿನ ಬದುಕು ಹೇಗಿತ್ತು, ಮೊಬೈಲ್ ಬಂದಾಗ ಬದುಕು ಹೇಗಾಯ್ತು, ಮೊಬೈಲೇ ನಮ್ಮನ್ನು ಆಳುತ್ತಿರುವ ಇಂದು ನಾವು ಹೇಗಿದ್ದೇವೆ ಎಂಬ ಹಾಗೆ ಚಿಂತಿಸಲು ಸಾಧ್ಯ ಆಗ್ತದೆ. ಇದೇ ಸಮಸ್ಯೆ ಆದದ್ದು. ಮೊಬೈಲ್ ಇಲ್ಲದ ಕಾಲದ ಬದುಕನ್ನೇ ಕಾಣದ 1995-2000ನೇ ಇಸವಿ ನಂತರ ಹುಟ್ಟಿದವರಿಗೆ ಅಂಥದ್ದೊಂದು ಹೋಲಿಕೆ ಸಾಧ್ಯ ಆಗದ ಕಾರಣ ಅವರ ಬದುಕು ಪ್ರಶಾಂತವಾಗಿದೆ, ಸಹಜವಾಗಿದೆ ಮತ್ತು ಗೊಂದಲಗಳ ಬೀಡಾಗಿಲ್ಲ ಅಂತ ನಾನಾದರೋ ನಂಬಿದ್ದೇನೆ.!

1995ರ ನಂತರ ಹುಟ್ಟಿದವರಿಗೆ... ನಿಮಗಿದು ಗೊತ್ತ?

1)      ನಮ್ಮ ಕೈಗೆ ಮೊಬೈಲ್ ಬಂದ ಸಂದರ್ಭ ಇನ್ ಕಮಿಂಗ್ ಕರೆಗಳಿಗೂ ನಿಮಿಷದ ಆಧಾರದಲ್ಲಿ ದುಡ್ಡು ಕಟ್ ಆಗ್ತಿತ್ತು!.

2)      ಪ್ರತಿ ಮೆಸೇಜಿಗೂ ದುಡ್ಡು ಕಟ್ ಆಗ್ತಿತ್ತು. ಆ ಬಳಿಕ ಕೆಲವು ಸರ್ವಿಸ್ ಪ್ರೊವೈಡರುಗಳು ದಿನದ ಆರಂಭದ ಮೆಸೇಜಿಗೆ ಮಾತ್ರ 1 ರುಪಾಯಿ ಕಟ್ ಆಗುವುದು ಎಂಬ ಪ್ಲಾನ್ ತಂದರು. ಮತ್ತೆ ಕೆಲವರು ಮಣಿಪಾಲ್ ಸ್ಟೂಡೆಂಟ್ ಸಿಂ ಅಂತ ಅನ್ ಲಿಮಿಡೆಟ್ ಫ್ರೀ ಮೆಸೇಜ್ ಪ್ಲಾನ್ ತಂದ್ರು. ಈ ಸಿಂ ಅನಧಿಕೃತವಾಗಿ ಸ್ಟೂಡೆಂಟ್ ಗಳಲ್ಲದವರಿಗೂ ಸಿಗ್ತಾ ಇತ್ತು. ಆ ಮೂಲಕ ಜನ ಯಥೇಚ್ಛವಾಗಿ ಎಸ್ಎಂಎಸ್ ಮಾಡಿ ಖುಷಿ ಪಡ್ತಾ ಇದ್ರು.

3)      ಮೊಬೈಲ್ ನಮ್ಮೂರಲ್ಲಿ ಪರಿಚಯ ಆದಾಗ ಅದರಲ್ಲಿ ಸಿಂಗಲ್ ಸಿಂ ಮಾತ್ರ ಹಾಕಲು ಅವಕಾಶ ಇದ್ದದ್ದು. ಆಗ ಬುದ್ಧಿವಂತ ಜನ ಅದೇ ಬೇಸಿಕ್ ಮೊಬೈಲಿನ ಸಿಂ ಇನ್ ಸರ್ಟ್ ಮಾಡುವ ಸ್ಥಳಕ್ಕೆ ಇನ್ನೊಂದು ಸಿಂ ಇನ್ಲರ್ಟ್ ಮಾಡುವಂತಹ ಚೀನಾ ಮಾದರಿ ಸಲಕರಣೆ ಅಳವಡಿಸಿ (ಕೆಲವೊಮ್ಮೆ ಡಬಲ್ ಸಿಂನಿಂದಾಗಿ ಮೊಬೈಲ್ ಬ್ಯಾಕ್ ಕವರ್ ಇದರಿಂದಾಗಿ ಉಬ್ಬಿರ್ತಾ ಇತ್ತು) ಎರಡೆರಡು ಸಿಂ ಅಳವಡಿಸಿ ಖುಷಿ ಪಡ್ತಾ ಇದ್ರು. ಸಿಂ ಚೇಂಜ್ ಓವರ್ ಆಗಬೇಕಾದರೆ ಮೊಬೈಲ್ ರಿಸ್ಟಾರ್ಟ್ ಮಾಡಬೇಕಾಗಿತ್ತು!

4)      ಈಗಿನ ಹಾಗೆ ಎಲ್ಲ ಕಡೆ ಮೊಬೈಲ್ ನೆಟ್ವರ್ಕ್ ಸಿಗ್ತಾ ಇರ್ಲಿಲ್ಲ. ಕೆಲವು ಊರುಗಳು ಆಗ (20 ವರ್ಷ ಹಿಂದೆ) ನಾಟ್ ರಿಚೇಬಲ್ ಆಗಿ ನೆಮ್ಮದಿಯಿಂದ ಬದುಕ್ತಾ ಇದ್ದವು. ಆಗ ನೆಟ್ವರ್ಕ್ ಸಿಗಬೇಕಾದರೆ (2ಜಿ) ಗುಡ್ಡಕ್ಕೆ, ಅಟ್ಟಕ್ಕೆ, ತೆಂಗಿನಮರಕ್ಕೆ ಹತ್ತಬೇಕಾದ ಪ್ರಮೇಯ ಇತ್ತು (ಹಳೆ ಕನ್ನಡ ಸಿನಿಮಾಗಳಲ್ಲಿ ಇದನ್ನು ಕಾಣಬಹುದು). ತಮಾಷೆಯಲ್ಲ. ಇದು ಈಗ ಇತಿಹಾಸ.

5)      ಆಗ ಮೊಬೈಲು ಈಗಿನ ಹಾಗೆ ಎಲ್ಲರ ಕೈಯ್ಯಲ್ಲಿ ಇರ್ಲಿಲ್ಲ. ಹಾಗಾಗಿ ಜನ ಮನೆಯಿಂದ, ಕಚೇರಿಯಿಂದ ಹೊರಗೆ ಬಂದು ಸರಿಯಾಗಿ ಎಲ್ರಿಗೆ ಕಾಣುವ ಹಾಗೆ ಮೊಬೈಲಿನಲ್ಲಿ ಮಾತನಾಡುವುದು ಫ್ಯಾಶನ್ ಆಗಿತ್ತು.

6)      ಆರಂಭದ ದಿನಗಳಲ್ಲಿ ಸಿಂ ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಹಾಗಾಗಿ ಬಿಎಸ್ಎನ್ಎಲ್ ಸಿಂಗೆ ಬುಕ್ ಮಾಡಿ ಅದು ಕೈಗೆ ಸಿಕ್ಕಲು ಕಾಯಬೇಕಾಗಿತ್ತು. ಕೆಲವರು ಇನ್ ಫ್ಲುಯೆನ್ಸ್ ಮಾಡಿ ಸಿಂ ಖರೀದಿ ಮಾಡ್ತಾ ಇದ್ರು.

7)      ಆರಂಭದ ಮೊಬೈಲು ಹ್ಯಾಂಡ್ ಸೆಟ್ಟುಗಳಲ್ಲಿ ರೇಡಿಯೋ ಬಿಟ್ರೆ ಇನ್ಯಾವ ಮನೋರಂಜನೆಯೂ ಇರ್ಲಿಲ್ಲ. ಕಾಲ್ ಮತ್ತು ಮೆಸೇಜ್ ಮಾತ್ರ. ಎಂಎಂಎಸ್ ಸಹ ಆಗ ಆರಂಭ ಆಗಿರ್ಲಿಲ್ಲ. ಎಲ್ಲವೂ ಕೀಬೋರ್ಡ್ ಆಧಾರಿತ ಸೆಟ್ ಆಗಿರ್ತಾ ಇತ್ತು. ಪ್ರತಿ ಮೆಸೇಜಿಗೂ, ಇನ್ ಕಮಿಂಗ್ ಕಾಲ್ ಗೂ ಚಾರ್ಜ್ ಆಗ್ತಾ ಇದ್ದ ಕಾರಣ, ಜನ ಜಾಗ್ರತೆಯಿಂದ ಮಾತನಾಡ್ತಾ ಇದ್ರು.

8)      ಈ ನಡುವೆ ಬಿಎಸ್ಎನ್ಎಲ್, ಡೊಕೋಮೋ, ಏರ್ಟೆಲ್ ಇವರೆಲ್ಲ ಫ್ಯಾಮಿಲಿ ಪ್ಯಾಕ್ ಪ್ಲಾನುಗಳನ್ನು ತಂದ್ರು. ಜನ ಆಯ್ದ 5,10 ಮಂದಿ ಜೊತೆ (ನಂಬರ್) ಉಚಿತವಾಗಿ ಮಾತನಾಡುವ, ರಾತ್ರಿ ಮಾತ್ರ ಫ್ರೀ ಆಗಿ ಕರೆ ಮಾಡುವ ಮುಂತಾದ ಪ್ಲಾನ್ ತಂದರು. ಈ ಪ್ಲಾನ್ ಸಹ ಯುವಜನರು ಹಾಗೂ ಹೆಂಗಸರ ವಲಯದಲ್ಲಿ ಜನಪ್ರಿಯವಾಗಿತ್ತು.

9)      ಅನಂತ್ ಅಥವಾ ಲೈಫೈ ಟೈಂ ಸಿಂ ಅಂತ ಬರ್ತಾ ಇತ್ತು. ಒಮ್ಮೆ ಖರೀದಿ ಮಾಡಿದ್ರೆ ಜೀವನ ಪೂರ್ತಿ ಇನ್ ಕಮಿಂಗ್ ಫ್ರೀ ಎಂಬಂಥ ಪ್ಲಾನ್ ಅದು. ಆ ಸಿಂ ತಕ್ಕೊಂಡವರಲ್ಲಿ ಬಹುತೇಕರೂ ಈಗಲೂ ಬದುಕಿದ್ದಾರೆ, ಆದರೆ ಪ್ಲಾನ್ ಎಂತ ಆಯ್ತು ಅಂತ ದೇವರಿಗೇ ಗೊತ್ತು.

10)   ಮೊಬೈಲ್ ಬಂದು ಸುಮಾರು 10 ವರ್ಷ ಜನರಿಗೆ ಮೊಬೈಲಿಗೆ ಇಂಟರ್ ನೆಟ್ ಸಂಪರ್ಕ ಮಾಡ್ಲಿಕಾಗ್ತದೆ ಎಂಬ ಕಲ್ಪನೆಯೇ ಇರಲಿಲ್ಲ. ಫೋಟೋ, ವಿಡಿಯೋ, ಹಾಡು ಬಿಡಿ ವಾಯ್ಸ್ ಮೆಸೇಜ್ ಕಳುಹಿಸಲೂ ಸಾಧ್ಯ ಇರಲಿಲ್ಲ. ಎಂತ ಇದ್ರೂ ಎಸ್ಎಂಎಸ್, ಕಾಲ್ ಮಾತ್ರ.

11)   ಮತ್ತೊಂದು ಗಮ್ಮತ್ತು ಅಂದ್ರೆ ನೋಕಿಯಾದವರ ಬೇಸಿಕ್ ಹ್ಯಾಂಡ್ ಸೆಟ್ಟಿನಲ್ಲಿ ಕಾಲ್ ಟ್ಯೂನ್ ನಾವೇ ಕಂಪೋಸ್ ಮಾಡಲು ಸಾಧ್ಯವಿತ್ತು, ಹಾಗೂ ಅದನ್ನು ಇತರರಿಗೂ ಕಳುಹಿಸಬಹುದಿತ್ತು, ಹೇಗೆ ಅಂತ ಈಗ ಮರ್ತೋಗಿದೆ. ಅದ್ರಲ್ಲಿ ಟೆಟೆಟೆಟೇ... ಅನ್ನುವ ವಿಷಾದದ ಟ್ಯೂನ್ ಅಂತೂ ಆಗ ಭಯಂಕರ ವೈರಲ್ ಆಗಿತ್ತು.

12)   ಆಗ ಒಂದು ಮೊಬೈಲಿನಲ್ಲಿ ಗರಿಷ್ಠ 12 ಮೆಸೇಜ್ ಮಾತ್ರ ಸೇವ್ ಆಗ್ತಾ ಇದ್ದದ್ದು ಅಂತ ನೆನಪು (ಆರಂಭದಲ್ಲಿ). ಆಗಾಗ ಅದನ್ನು ಡಿಲೀಟ್ ಮಾಡಬೇಕಿತ್ತು. ಎಕ್ಸಟರ್ನಲ್ ಮೆಮೊರಿ ಕಾರ್ಡ್ ಕಾನ್ಸೆಪ್ಟೇ ಇರ್ಲಿಲ್ಲ. ಮೊಬೈಲಿಗೆ ಟ್ಯಾಗ್ ಕಟ್ಟಿ ಕುತ್ತಿಗೆ ನೇತು ಹಾಕುವುದು ಪ್ರತಿಷ್ಠೆಯ ವಿಚಾರ ಆಗಿತ್ತು.

13)   ಆಗಿನ ಮೊಬೈಲುಗಳು ಐದಾರು ವರ್ಷಗಳ ಕಾಲ ಆರಾಮವಾಗಿ ಬಾಳಿಕೆ ಬರ್ತಾ ಇದ್ದವು. ಅದರ ಬ್ಯಾಟರಿ ಹಾಳಾದರೆ ಬದಲಿಸಲು ಅವಕಾಶ ಇತ್ತು.

14)   ನಾವು ಯಾವ ಟವರ್ ನಲ್ಲಿ ಇದ್ದೇವೆ ಅಂತ ಮೊಬೈಲ್ ಸ್ಕ್ರೀನಿನಲ್ಲಿ ಸಂದೇಶ ಬರ್ತಾ ಇತ್ತು. ರಾತ್ರಿ ಪ್ರಯಾಣದ ವೇಳೆ ಇದು ಉಪಕಾರ ಆಗ್ತಾ ಇತ್ತು. ಬರ್ತ್ ಡೇ ಇತ್ಯಾದಿಗಳಿಗೆ ಕಳುಹಿಸುವ ಶುಭಾಶಯದ ಎಸ್ಎಂಎಸ್ ಬ್ಲಿಂಕ್ ಆಗುವಂಥ ಪ್ಲಾಶ್ ಮೆಸೇಜ್ ಅಂಬ ಅದ್ಭುತ ಆಯ್ಕೆ ಆಗ ಇದ್ದ ನೆನಪು.

15)   ಆಗ ಜಿಪಿಆರ್ ಎಸ್ ಎಂಬ ಆಯ್ಕೆ ಮೂಲಕ ಇಂಟರ್ ನೆಟ್ ಸಂಪರ್ಕ ಪಡೆಯುತ್ತಿದ್ದ ನೆನಪು. ಆಗ ವೈಫೈ ಅಂದ್ರೆ ಏನಂತಲೇ ಗೊತ್ತಿರಲಿಲ್ಲ. ಬ್ಲೂಟೂತ್ ಕ್ರಮೇಣ ಪರಿಚಯ ಆಯ್ತು.

16)   ನಂತರ ನಿಮಗೆ ಗೊತ್ತಿದೆ ಎಂತ ಎಲ್ಲ ಆಯ್ತು ಅಂತ. ಕಲರ್ ಫೋನ್ ಗಳು ಬಂದವು, ಫೋನಿನ ಗಾತ್ರ ಜಾಸ್ತಿ ಆಯಿತು. 3ಜಿ ಆರಂಭದ ದಿನಗಳಲ್ಲೇ ಎಂಎಂಎಸ್ (ಎಸ್ಎಂಎಸ್ ಮೂಲಕ ಮಲ್ಟೀಮಿಡಿಯಾ ಕಳುಹಿಸಲು) ಕಳುಹಿಸಲು ಸಾಧ್ಯ ಆಯಿತು. ಫೋನಿನಲ್ಲೇ ಕ್ಯಾಮೆರಾ ಬಂತು. ಅದಾದ ಬಳಿಕ ಸೆಲ್ಫೀ ಕ್ಯಾಮೆರಾ ಬಂತು. ಮುಷ್ಟಿಯೊಳಿಗಿರ್ತಾ ಇದ್ದ ಫೋನ್ ಅಂಗೈ ಅಗಲದಷ್ಟು ಬೆಳೆಯುತ್ತಾ ಹೋಯ್ತು. ಫೋನಿನ ಬಾಳಿಕೆ ಆರು ವರ್ಷದಿಂದ ಮೂರು ವರ್ಷಕ್ಕೆ ಇಳಿಯಿತು!

17)   ನಂತರ 3ಜಿ ಸಂಪರ್ಕ, 4ಜಿ ಸಂಪರ್ಕ ಬಂತು. ಅದಕ್ಕೂ ಮೊದಲು ಮೊಬೈಲಿಗೂ ಇ ಮೇಲ್ ಆಯ್ಕೆ ಬಂತು, ಗೂಗಲ್ ಆರ್ಕೂಟ್ ಎಂಬ ಸೋಶಿಯಲ್ ಸಂವಹನ ವೇದಿಕೆ ಬಂತು, ಫೇಸ್ಬುಕ್ಕು ಬಂತು. ಗೂಗಲ್ ಸರ್ಚ್ ಮೊಬೈಲಿನಲ್ಲೂ ಸಿಕ್ಕಿತು. ಅಂದಾಜು 2013-14 ಆಸುಪಾಸಿಗೆ ವಾಟ್ಸಪ್ಪು ಎಂಬ ಭಯಂಕರ ಮೆಸೇಜಿಂಗ್ ಆಪ್ ಬಂತು. ಈ 10 ವರ್ಷಗಳಲ್ಲಿ ವಾಟ್ಸಪ್ ಬದಲಾಗ್ತಲೇ ಅಪ್ಡೇಟ್ ಆಗುತ್ತಲೇ ಹೋಯ್ತು. ಈಗ ಹೇಗಿದೆ ಅಂತ ನಾನು ಹೇಳ್ಲಿಕೆ ಏನೂ ಇಲ್ಲ. ನಿಮಗೆ ಗೊತ್ತಿದೆ.

18)   ಫೋನುಗಳ ಫೀಚರ್ ಜಾಸ್ತಿ ಆಗ್ತಾ ಬಂತು. ಬೆಲೆ ಕಡಿಮೆ ಆಗ್ತಾ ಬಂತು. ಡಿಜಿಟಲ್ ಪಾವತಿ ಬಂತು. ಆನ್ ಲೈನ್ ಬ್ಯಾಂಕಿಂಗ್ ಬಂತು, ಆನ್ ಲೈನ್ ಅಟೆಂಡನ್ಸ್ ವ್ಯವಸ್ಥೆ ಬಂತು, ಜಿಪಿಎಸ್ ಬಂತು, ಫೇಸ್ಬುಕ್ಕು ಸಹಿತ ಎಲ್ಲ ಸಾಮಾಜಿಕ ಜಾಲತಾಣಗಳನ್ನು ಮೊಬೈಲಿನಲ್ಲೇ ಬಳಸಲು ಸುಲಭ ಆಯ್ತು. ಕನ್ನಡ ಸಹಿತ ಪ್ರಾದೇಶಿಕ ಭಾಷೆಗಳಲ್ಲೂ ಫೋನ್ ಬಳಸಲು ಸಾಧ್ಯ ಆಯ್ತು. ನಿಮ್ಮ ಸಂಸ್ಥೆಯ ಕೆಲಸಗಳಿಗೆ, ಸರ್ಕಾರಿ ಯೋಜನೆಗಳನ್ನು ಪಡೆಯಲು, ಕೋವಿಡ್ ಕಾಲದಲ್ಲಿ ಆನ್ ಲೈನ್ ಕ್ಲಾಸುಗಳನ್ನು ಅಟೆಂಡ್ ಆಗಲು ಹೀಗೆ ನಾನಾ ಕಾರಣಕ್ಕೆ ಮನೆಯ ಎಲ್ಲರಿಗೂ ಮೊಬೈಲ್ ಕಡ್ಡಾಯ ಎಂಬ ಅಲಿಖಿತ ಅನಿವಾರ್ಯತೆ ಸೃಷ್ಟಿ ಆಯಿತು. ಸ್ಮಾರ್ಟ್ ಫೋನ್ ನಿರ್ಮಾಣದಲ್ಲಿ ಭಯಂಕರ ಪೈಪೋಟಿ ನಡೆದು ಜನರಿಗೆ ಯಾವ ಫೋನ್ ತೆಗೀಬೇಕು ಅಂತ ಭಯಂಕರ ಕನ್ ಫ್ಯೂಶನ್ ಶುರು ಆಗುವಷ್ಟು ಆಯ್ಕೆಗಳು ಬಂದವು. ಹೀಗಾಗಿ ಇಡೀ ಜಗತ್ತೇ ಮೊಬೈಲಿಗೊಂದು ಮಾರುಕಟ್ಟೆ ಆಯಿತು.

19)   ಸೆಲ್ಫೀ ಎಂಬ ಒಂದು ಹೊಸ ಆಯ್ಕೆ, ಫಿಂಗರ್ ಪ್ರಿಂಟ್ ಲಾಕ್, ವೀಡಿಯೋ ಕಾಲ್ ಎಂಬ ಆಯ್ಕೆ, ವಿಪರೀತ ಸಂಗ್ರಹ ಸಾಮರ್ಥ್ಯದ ಕಾರ್ಡು, ಇಂಟರ್ನಲ್ ಮೆಮೊರಿ ಅವಕಾಶ, ಮೊಬೈಲ್ ಮೂಲಕ ಕಾರನ್ನು, ಮನೆಯನ್ನು ರಿಮೋಟ್ ರೂಪದಲ್ಲಿ ಬಳಸಲು ಸಾಧ್ಯವಾಗುವುದು ಹೀಗೆ ಅಸಂಖ್ಯಾತ ಬೆಳವಣಿಗೆಗಳಿಂದ ಮೊಬೈಲ್ ಅಗತ್ಯ ಎಂದೂ ಆ ಬಳಿಕ ಅನಿವಾರ್ಯ ಎಂದೂ, ಇದೀಗ ಮೊಬೈಲ್ ಇಲ್ಲದೆ ಬದುಕೇ ಇಲ್ಲವೇನೋ ಎಂದೂ ಆಗುವ ಹಾಗಾಯಿತು.

20)   ಅಂದು ಮೊಬೈಲಿನಲ್ಲಿ ಡೇಟಾ ಸಂಪರ್ಕವೇ ಇರಲಿಲ್ಲ. ನಂತರ 2ಜಿಯಲ್ಲಿ ಸಾಧ್ಯ ಆಯ್ತು. 3ಜಿಯಲ್ಲಿ ಸ್ಪೀಡ್ ಆಯ್ತು. 4ಜಿಯಲ್ಲಿ ಸರಾಗ ಆಯ್ತು. 5ಜಿಯಲ್ಲಿ ಮನೋವೇಗ ಸಿಕ್ಕಿತು. ಅಂದು ನಾವು ಬೇಕಾದಾಗ ಮಾತ್ರ ಆನ್ ಲೈನ್ ಇರ್ತಾ ಇದ್ವು. ನಂತರ ರಾತ್ರಿ ಮಲಗುವಾಗಲಾದರೂ ಆಫ್ ಲೈನ್ ಹೋಗ್ತಾ ಇದ್ವು. ಇಂದು ತುಂಬ ಮಂದಿ ಆಫ್ ಲೈನ್ ಹೋಗುವುದೇ ಇಲ್ಲ. ಮುಂದೊಂದು ದಿನ ಬಹುಷಃ ಮೊಬೈಲಿನಲ್ಲಿ ಆನ್ ಲೈನ್ ಅನ್ನುವುದು ಡಿಫಾಲ್ಟ್ ಸೆಟ್ಟಿಂಗಿನಲ್ಲಿ ಇದ್ದೀತು. ಆಫ್ ಲೈನ್ ಹೋಗುವ ಅವಕಾಶ ಮೊಬೈಲಿನಲ್ಲಿ ಸಿಗ್ಲಿಕಿಲ್ಲ (ಈಗಿನ ಬೈಕುಗಳ ಹೈಡ್ಲೈಟ್ ಆಫ್ ಮಾಡಲಾಗದ ಹಾಗೆ!)

21)   ನಿಮಗೆ ನೆನಪುಂಟ? ಒಂದು ಕಾಲದಲ್ಲಿ ಬಿಎಸ್ಸೆಎನ್ಎಲ್ ತಿಂಗಳಿಗೆ 1 ಜಿಬಿ ಡೇಟಾ ಕೊಡ್ತಾ ಇತ್ತು. ತಿಂಗಳು ಅಂದ್ರೆ 30 ದಿನ. ಅದಕ್ಕೆ 90 ರುಪಾಯಿ ದರ ಇತ್ತು. ಸರೀ ನೆನಪಿದೆ. ಆ 1 ಜಿಬಿ ಡೇಟಾ ಒಂದು ತಿಂಗಳಲ್ಲಿ ಪೂರ್ತಿ ಮುಗಿಯುತ್ತಾ ಇರಲಿಲ್ಲ. ಈಗ ನೋಡಿ ಎಲ್ಲಿಗೆ ತಲುಪಿದ್ದೇವೆ. ದಿನಕ್ಕೆ 2 ಜಿಬಿ ಡೇಟಾ ಸಾಕಾಗುವುದಿಲ್ಲ. ಹೋದಲ್ಲಿ, ಬಂದಲ್ಲಿ ವೈಫ್ ಇದ್ರೂ ಸಾಕಾಗುವುದಿಲ್ಲ. ಅಲ್ವ?

22)   ಹಿಂದೆ ಹೊಟೇಲ್ ರೂಮುಗಳಲ್ಲಿ, ರೈಲ್ವೇ ಸ್ಟೇಷನ್ನುಗಳಲ್ಲಿ ವೈಪ್ ಸಂಪರ್ಕ ಇದೆ ಅಂತ ಉಲ್ಲೇಖಿಸುವುದು ದೊಡ್ಡ ಸಂಗತಿ ಆಗ್ತಿತ್ತು. ಈಗಲೂ ರೈಲು ಸ್ಟೇಟಸ್ಸಿನಲ್ಲಿ ಬರ್ತದೆ, ಫ್ರೀ ವೈಫೈ ಅವೈಲೇಬಲ್ ಅಂತ. ಆದರೆ ಯಾರಿಗೂ ಈಗ ಅದು ಬೇಡ. ಹೊರಿಗನ ವೈಫೈ ನಂಬಿ ಯಾರೂ ಬದುಕುವುದಿಲ್ಲ. ಅವರವ ಮೊಬೈಲಿನಲ್ಲೇ ತಿಂದು ತೇಗುವಷ್ಟು ಡೇಟಾ ರಾಶಿ ಬಿದ್ದಿರ್ತದೆ. ಆದರೆ, ಅರ್ಧ ದಿನಲ್ಲೇ ಖಾಲಿಯಾಗ್ತದೆ! ಏರ್ಟೆಂಲ್ ಡೇಟಾ 50 ಪರ್ಸಂಟ್ ಖಾಲಿ ಆದ ಕೂಡಲೇ ಯಾವ ಯಾವ ರೀತಿ ಟಾಪ್ ಅಪ್ ಮಾಡಬಹುದು ಎಂಬ ಉಚಿತ ಎಸ್ಎಂಎಸ್ ಸಡನ್ ಪ್ರತ್ಯಕ್ಷ ಆಗಿ ನಮಗೆ ಮಾರ್ಗದರ್ಶನ ನೀಡ್ತಲೇ ಇರ್ತವೆ!!!!

23)   ಕಳೆದ 10 ವರ್ಷಗಳಲ್ಲಿ ವಾಟ್ಸಪ್ ಬಂತು, ಯೂಟ್ಯೂಬು ಚಾನೆಲ್ಲುಗಳು ಹೆಚ್ಚು ಜನಪ್ರಿಯ ಆದ್ವು, ಇನ್ ಸ್ಟಾಗ್ರಾಂ ಜನಪ್ರಿಯ ಆಯ್ತು. ಸೆಲ್ಫೀ, ರೀಲ್ಸು, ವಾಟ್ಸಪ್ ಸ್ಟೇಟಸ್, ಬ್ಲಾಗು ಇವೆಲ್ಲ ಹೆಚ್ಚು ಹೆಚ್ಚು ಜನರನ್ನು ತಲಪುತ್ತಾ ಹೋದಂತೆ ನಿನಗೆ ನೀನೇ ಒಡೆಯ ಎಂಬ ಹಾಗೆ ಜನ ತಮಗೆ ಬೇಕಾದ ಪ್ರಚಾರವನ್ನು ಯಾವುದೇ ಮಾಧ್ಯಮಗಳ ಸಹಾಯ ಇಲ್ಲದೆ ತಾವೇ ಪಡೆಯಲು ಶುರು ಮಾಡಿದ್ರು.

24)   ಹಿಂದೆ ಮೊಬೈಲಿನಿಂದ ಕ್ಯಾನ್ಸರ್ ಬರ್ತದೆ, ಬ್ರೈನ್ ಟ್ಯೂಮರ್ ಆಗ್ತದೆ, ಮಕ್ಕಳಾಗುವುದಿಲ್ಲ ಅಂತ ಹೆದರಿ ಜನ ಪ್ಯಾಂಟು ಬೆಲ್ಟಿಗೆ ವ್ಯಾಲೆಟ್ ಸಿಕ್ಕಿಸಿ, ಅಥವಾ ವ್ಯಾನಿಟ್ ಬ್ಯಾಗಿನೊಳಗೆ ಫೋನ್ ಇಡ್ತಾ ಇದ್ರು. ಇಂದು ಅದನ್ನೆಲ್ಲ ಜನ ಕ್ಯಾರೇ ಮಾಡುವುದಿಲ್ಲ. ಇರುವಷ್ಟು ದಿನ ಮೊಬೈಲ್ ಜೊತೆಗೇ ಬದುಕೋಣ ಎಂಬ ಉದಾರತೆ ಬೆಳೆಸಿದ್ದಾರೆ!

25)   ಹಿಂದೆ ಮೊಬೈಲ್ ಜೊತೆಗೆ ಸಿಗ್ತಾ ಇದ್ದದ್ದು ಚಾರ್ಜರ್ ಮಾತ್ರ. ನಂತರ ಇಯರ್ ಫೋನ್ ಸಿಗಲು ಶುರುವಾಯಿತು. ಈಗ ಚಾರ್ಜರೂ ಸಿಗುವುದಿಲ್ಲ, ಇಯರ್ ಫೋನೂ ಸಿಗುವುದಿಲ್ಲ. ಎಂಥೆಂಥ ಇಯರ್ ಬಡ್ಸ್, ಎಐ ಡಿವೈಸುಗಳು, ಸ್ಪೀಕರುಗಳು, ಪ್ರಿಂಟರುಗಳು, ಬ್ಯಾಕ್ ಕವರುಗಳು ಸಹಿತ ಎಂಥೆಂಥದ್ದೆಲ್ಲ ಎಕ್ಸಸರೀಸ್ ಈಗ ಪ್ರತ್ಯೇಕ ಪ್ರತ್ಯೇಕ ಸಿಗ್ತಾ ಇವೆ. ಈಗ ತುಂಬ ಮಂದಿ ಅಂಗಡಿಗೆ ಹೋಗಿ ಮೊಬೈಲ್ ಖರೀದಿ ಮಾಡುವುದಿಲ್ಲ. ಎಲ್ಲವೂ ಆನ್ ಲೈನಿನಲ್ಲಿ ಸಿಕ್ಕುವುದರಿಂದ ಮೊಬೈಲು ಈ ಲೆವೆಲಿಗೆ ಜನಪ್ರಿಯ ಆಗಲು ಸಾಧ್ಯವಾಗಿದೆ.

 

ಇದು 25 ಪಾಯಿಂಟುಗಳಲ್ಲಿ ನಮ್ಮೂರಲ್ಲಿ ಮೊಬೈಲ್ ನಡೆದು ಬಂದ ದಾರಿಯ ಕಿರುಪರಿಚಯ. ಆಗಲೇ ಹೇಳಿದ ಹಾಗೆ ಇವೆಲ್ಲ ಮೊಬೈಲ್ ನಮ್ಮ ಬದುಕು ಬದಲಿಸಿದ ವೇಗ ಅಷ್ಟೆ. ಮೊಬೈಲ್ ಬಳಕೆಯ ಸಾಮಾಜಿಕ, ಮಾನಸಿಕ ಪರಿಣಾಮಗಳ ಬಗ್ಗೆ ಇಲ್ಲಿ ಬರೆಯಲು ಹೊರಟರೆ ಯಾರೂ ಓದರಿಕ್ಕಿಲ್ಲ, ಲೇಖನ ಸುದೀರ್ಘ ಆಗ್ತಾ ಇದೆ. ಇದು ನಮ್ಮೊಳಗೆ ನಾವೇ ಮೊಬೈಲಿನ ಕುರಿತು ಮರೆತು ಹೋದ ವಿಚಾರಗಳನ್ನು ನೆನಪಿಸಿದ್ದು ಅಷ್ಟೇ...

 

ಹಾಗಾದ್ರೆ ಮುಂದೆ ಮೊಬೈಲಿನ ದಾರಿ ಹೇಗಿರಬಹುದು... ಒಂದು ಕಾಲ್ಪನಿಕ ಸಮೀಕ್ಷೆ ಅಷ್ಟೆ

1)      ಮುಂದೆ ಮೊಬೈಲುಗಳಲ್ಲಿ ಎಸ್ಎಂಎಸ್ ಮಾಡುವ ಆಯ್ಕೆ ಇರಲಿಕ್ಕಿಲ್ಲ

2)      ಮುಂದೆ ಮೊಬೈಲುಗಳಲ್ಲಿ ಆನ್ ಲೈನ್ ಎಂಬುದು ಸಿಂ ಆನ್ ಎಂಬಷ್ಟೇ ಸಹಜ ಪ್ರಕ್ರಿಯೆ ಆಗಿರಬಹುದು. ಆಫ್ ಲೈನ್ ಹೋಗಲು ಸಾಧ್ಯ ಆಗಲಿಕ್ಕಿಲ್ಲ.

3)      ಪತ್ರಿಕೆ ಥರ ಮುಂದೆ ಟೀವಿಗಳಿಗೂ ನೇರ ಪ್ರೇಕ್ಷಕರು ಸಿಗುವುದಿಲ್ಲ. ಹಾಗಾಗಿ ಮುಂದೆ ಹುಟ್ಟುವ ಮಕ್ಕಳು ಟೀವಿಯನ್ನು ಮೊಬೈಲಿನಲ್ಲೇ ನೋಡಿಯಾರು. ಹಾಗಾಗಿ ಮೊಬೈಲಿನಲ್ಲಿ ಚೇಂಜ್ ಚಾನೆಲ್ ಆಯ್ಕೆ ಬರಬಹುದು.

4)      ಈಗಲೇ ಮೊಬೈಲುಗಳು ವಾಯ್ಸ್ ಕಮಾಂಡ್ ಅನುಸರಿಸುತ್ತವೆ. ಈಗಾಗಲೇ ನಾವು ಕೈಬರಹ ಬಿಟ್ಟು ಟೈಪಿಂಗ್ ಯುಗದಲ್ಲಿದ್ದೇವೆ. ಮುಂದೊಂದು ದಿನ ಟೈಪಿಂಗೂ ಸಹ ಕಷ್ಟ ಎಂದಾಗಿ ಕೇವಲ ಬಾಯಿ ಮಾತನ್ನೇ ಮೊಬೈಲುಗಳು ಅನುಸರಿಸಿ, ಕರೆ, ಮೆಸೇಜ್, ಫೋಟೋ ಸೆರೆ ಹಿಡಿಯುವುದು ಇತ್ಯಾದಿಗಳನ್ನು ಮಾಡಿಯಾವು. ಮೊಬೈಲುಗಳಲ್ಲಿ ಟೈಪಿಂಗ್ ಕೀ ಆಯ್ಕೆಗಳೇ ಇರಲಿಕ್ಕಿಲ್ಲ!

5)      ಮುಂದೆ ಮೊಬೈಲಿನಲ್ಲೇ ಪ್ರಿಂಟರ್ ಆಯ್ಕೆಯೂ ಬಂದೀತು. ತೆಗೆದ ಫೋಟೋಗಳನ್ನು ತಕ್ಷಣ ಅಲ್ಲೇ ಪ್ರಿಂಟು ತೆಗೆಯುವ ಹಾಗೆ!

6)      ಮುಂದೊಂದು ದಿನ ಮೊಬೈಲ್ ಡೇಟಾದಲ್ಲಿ ಅನ್ ಲಿಮಿಟೆಡ್ ಆಯ್ಕೆ ಮಾತ್ರ ಇರಬಹುದು. ಈಗಿನ ದಿನಕ್ಕೆ 2 ಜಿಬಿ ಡೇಟಾ ಎಂದರೆ 10 ವರ್ಷಗಳ ನಂತರ ಎಕರೆ ಲೆಕ್ಕದಲ್ಲಿ ಸೈಟು ಮಾರಿದ ಹಾಗೆ ಅಂತ ಜನ ನಕ್ಕಾರು.

7)      ಮತ್ತೂ ಕೆಲ ವರ್ಷ ಕಳೆದರೆ ಮೊಬೈಲಿನಲ್ಲೇ ಪರಿಮಳ ಬರುವುದು, ತಂಪು, ಬಿಸಿ ಮತ್ತಿತರ ವಾತಾನುಕೂಲಿ ವ್ಯವಸ್ಥೆಗಳು 4ಡಿ, 5ಡಿ, 6ಡಿ ಆಯಾಮಗಳ ಆಯ್ಕೆಗಳಾಗಿ ಬಂದಾವು. ಈಗ ಇದನ್ನು ಓದುವಾಗ ನಗು ಬಂದೀತು. ಆದರೆ ಹೊಸ ಹೊಸ ಫೀಚರುಗಳ ಮೂಲಕ ಗ್ರಾಹಕರನ್ನು ಹಿಡಿದಿಡಲು ಪ್ರಯತ್ನಿಸುವ ಮೊಬೈಲ್ ತಯಾರಕರು ಇವನ್ನು ಮಾಡಿಯೇ ಮಾಡುತ್ತಾರೆ ನೆನಪಿಡಿ.

8)      ನಿಮಗೆ ಗೊತ್ತೇ ಇದೆ. ಮೊಬೈಲ್ ನಂಬರ್ ಪೋರ್ಟೇಬೆಲಿಟಿ ಬಂದಿದೆ. ಇದೇ ಥರ ಕಂಪನಿಯಿಂದ ಕಂಪನಿಗೆ ಸಿಂ ಬದಲಾಯಿಸುವ ಸಂದರ್ಭ ಸಿಂ ಬದಲಾಯಿಸದಂತಹ ಈ ಸಿಂ (E SIM) ಕಲ್ಪನೆ ಈಗಾಗಲೇ ಜಾರಿಗೆ ಬಂದಿದೆ. ಸಿಂ ಇಲ್ಲದ ಮೊಬೈಲ್ ಯುಗ ಮುಂದೆ ಕಾದಿದೆ.

9)      ಈಗ ನಿಮ್ಮ ಸ್ಮಾರ್ಟ್ ವಾಚು ನೀವೆಷ್ಟು ಸ್ಟೆಪ್ ನಡ್ದಿದೀರಿ, ನಿಮ್ಮ ಬಿಪಿ ಎಷ್ಟು, ಎಷ್ಟು ನಿದ್ರಿಸಿದ್ದೀರಿ ಅಂತೆಲ್ಲ ಚೆಕ್ ಮಾಡಿ ವರದಿ ಕೊಡ್ತಿವೆ ಅಲ್ವ. ಇದೇ ರೀತಿ ಮುಂದೆ ನಿಮ್ಮ ಮೊಬೈಲು ದಿನದಲ್ಲಿ ಎಷ್ಟು ಕಣ್ಣೀರು ಹಾಕಿದ್ದೀರಿ?, ಎಷ್ಟು ನೆಮ್ಮದಿ ಕಳೆದುಕೊಂಡಿದ್ದೀರಿ?, ಎಷ್ಟು ಆಯುಷ್ಯ ಮುಗಿಯಿತು...?” ಅಂತ ಎಲ್ಲ ಹೇಳಿತೋ ಏನೋ. ಎಷ್ಟು ದಿನ ಬದುಕ್ತೀರಿ ಅಂತ ಮಾತ್ರ ಯಾವ ಕಾಲದಲ್ಲೂ ಹೇಳ್ತಿಕೆ ಅಸಾಧ್ಯ!

10)   ಆರ್ಟಿಫಿಶಿಯನ್ ಇಂಟಲಿನಜನ್ಸ್, ವರ್ಚುವಲ್ ರಿಯಾಲಿಟಿ, ಡೀಪ್ ಫೇಕ್ ತಂತ್ರಜ್ಞಾನ, ಜಿಪಿಎಸ್ ಇವೆಲ್ಲ ಸೇರಿ ಮುಂದೊಂದು ದಿನ ಮೊಬೈಲ್ ಯಾರು, ಮನುಷ್ಯ ಯಾರು ಅಂತ ತಿಳಿಯದ ಹಾಗೆ ಆಗ್ತದೆ ನೋಡ್ತಾ ಇರಿ….

ಮನವಿ: ತಾಳ್ಮೆಯಿಂದ ಯಾರಾದರೂ ಕೊನೆ ತನಕ ಲೇಖನ ಓದಿದ್ರೆ, ದಯವಿಟ್ಟು ಮೊಬೈಲ್ ಇತಿಹಾಸದಲ್ಲೇ ನನಗೆ ಬರೆಯಲು ಮರೆತು ಹೋದ ವಿಚಾರ ಇದ್ದರೆ ಕಮೆಂಟ್ ಬಾಕ್ಸನಲ್ಲಿ ನೆನಪಿಸಿ, ನಿಮ್ಮ ನೆನಪುಗಳನ್ನು ಹಂಚಿಕೊಳ್ಳಿ. ಓದಿದ್ದಕ್ಕೆ ಧನ್ಯವಾದಗಳು.

-ಕೃಷ್ಣಮೋಹನ ತಲೆಂಗಳ (28.04.2024)

No comments: