“ಬಾರದ ನಿದ್ರೆ” ಎಂಬ “ಮಂಪರು ಪರೀಕ್ಷೆ”!

 

Internet Photo


ನಿದ್ರೆ ತಕ್ಷಣ ಬಂದರೆ ಎಲ್ಲ ಸಮಸ್ಯೆಗಳು ಮರೆತು ಹೋಗ್ತದೆ, ಅದೇ ಬೇಕಾದಾಗ ನಿದ್ರೆ ಬಾರದೇ ಇದ್ರೆ ಮರತೆದ್ದೆಲ್ಲ ನೆನಪಾಗ್ತಾ ಹೋಗ್ತತೆ....!” ವಾಟ್ಸಪ್ಪಿನಲ್ಲಿ ಕಂಡ ಈ ಸಾಲು ತುಂಬ ಯೋಚಿಸುವ ಹಾಗೆ ಮಾಡಿತು. 


ಜೀವಂತ ಇದ್ಕೊಂಡೇ ನಮ್ಮನ್ನು ನಾವು ಮರೆಯುವ ಹೊತ್ತು ನಿದ್ರೆ. ಕರೆದರೆ ಬಾರದ, ಹೇಳಿದರೆ ಹೋಗದ, ನಿರ್ಧರಿಸಿದಂತೆ ಮುಗಿಯದ, ತುಂಬ ಸಲ ನಮ್ಮ ಕೈಯ್ಯೊಳಗಿಲ್ಲದ ಅವಸ್ಥೆ ನಿದ್ರೆ. ಅದರಲ್ಲೂ ನಿಮಿಷಗಳಷ್ಟೇ ಹೊತ್ತು ಕಣ್ಣೆಳೆದು ಮಂಪರು ಸೃಷ್ಟಿಸಿ ನಮ್ಮನ್ನೇ ತಬ್ಬಿಬ್ಬಾಗಿಸುವ ಮಂಪರು ನಿದ್ರೆ ನಮ್ಮನ್ನು ಕಾಲಾತೀತವಾಗಿ ಮಂಗ ಮಾಡ್ತದೆ.

ನಿದ್ರೆಯೇ ಬರುವುದಿಲ್ಲ ಎಂಬಂಥ ವಿಚಿತ್ರ ಆತಂಕದಲ್ಲಿ ಅರಿವಿಲ್ಲದೇ ಆವರಿಸುವ ನಿದ್ರೆ, ಐದಾರು ನಿಮಿಷಗಳಲ್ಲಿ ತೊರೆದು, ಗಂಟೆಗಟ್ಟಲೆ ಮಲಗಿದೆವೇನೋ ಎಂದು ಯೋಚಿಸುವಷ್ಟರಲ್ಲಿ ನಿಜ ಸಮಯ ತಿಳಿಸುವ ಗಡಿಯಾರ ನೋಡಿದಾಗಲೇ ಗೊತ್ತಾಗುವುದು ಮಾಡಿದ್ದು ಸಣ್ಣದೊಂದು ತೂಕಡಿಕೆ ಅಥವಾ ಆವರಿಸಿದ್ದು ನಿದ್ರೆ ಅಂತ.

ಯಕ್ಷಗಾನ ಬಯಲಾಟಕ್ಕೆ ಹೋದವರಿಗೆ, ರಾತ್ರಿ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಸಂಚಾರ ಮಾಡಿದವರಿಗೆ, ಹಿಂದಿನ ದಿನ ನಿದ್ರೆ ಕೆಟ್ಟು ಕಚೇರಿಯಲ್ಲಿ ಮಧ್ಯಾಹ್ನದ ಊಟದ ಬಳಿಕ ಜಡದಿಂದ ಕೂತವರಿಗೆಲ್ಲ ಮಂಪರು ಮತ್ತು ತೂಕಡಿಗೆಯ ಭಯಂಕರ ಅನುಭವ ಇದ್ದೇ ಇರುತ್ತದೆ. ನಿದ್ರಾಹೀನತೆ ಖಂಡಿತವಾಗಿ ಒಂದು ಭಯಂಕರ ಪೀಡೆ ಅಥವಾ ಶಾಪ.

ಚಿಕ್ಕವರಿದ್ದಾಗ, ಯಕ್ಷಗಾನ ಬಯಲಾಟ ಎಂದರೆ ಇಡೀ ರಾತ್ರಿಯ ಆಟ. ಎಷ್ಟೇ ಪ್ರಯತ್ನ ಪಟ್ಟರೂ ಪೂರ್ವರಂಗ ಮುಗಿದು ಪ್ರಸಂಗ ಸುರುವಾಗವಷ್ಟರಲ್ಲಿ ನಿದ್ರೆ ತೂಗಲು ಆರಂಭ ಆಗ್ತಾ ಇತ್ತು. ಕಣ್ಣನ್ನು ಪ್ರಯತ್ನ ಪೂರ್ವಕ ಬಿಡಿಸಿಟ್ಟರೂ ನಿದ್ರೆ ಭಯಂಕರವಾಗಿ ಕಾಡುತ್ತಿತ್ತು. ಅಬ್ಬರದ ಚೆಂಡೆ, ಮೈಕುಗಳ ಆರ್ಭಟದ ನಡುವೆಯೂ ಆಟದ ಮೈದಾನವೇ ಪಲ್ಲಂಗವಾಗಿ ನಿದ್ರೆಗೆ ಜಾರುತ್ತಿದ್ದೆವು.

ಯಾವುದೋ ಹೊತ್ತಿನಲ್ಲಿ ಮಹಿಷಾಸುರ ಬಂದ ಅಂತ ಜೊತೆಗಿದ್ದವರು ಮೈತಟ್ಟಿ ಎಬ್ಬಿಸಿದಾಗಲೇ ದಿಡಿಕ್ಕ ಅಂತ ಎಚ್ಚರವಾಗುತ್ತಿದ್ದದ್ದು. ಅದರ ಹಿಂದಿನ ಯಾವುದೇ ಕತೆ ಗೊತ್ತಿಲ್ಲದೆ, ಮಂಪರು ನಿದ್ರೆಯಲ್ಲಿ ಮಹಿಷನನ್ನು ಕಂಡಾಗ ಭಯಂಕರ ರಾಕ್ಷಸನೇ ಗಾಢಾಂಧಕಾರದಿಂದ ಎದ್ದು ಬಂದ ಅನುಭವ. ಆಗೊಮ್ಮೆ ನಿದ್ರೆ ಹಾರಿ ಹೋದರೂ ಮತ್ತೆ ಶುಂಭ ನಿಶುಂಭರ ಪ್ರವೇಶ ವೇಳೆಗೆ ನಿದ್ರೆ ಬಂದರೆ ಮತ್ತೆ ಅರೆಬರೆ ನಿದ್ರೆಯಲ್ಲಿ ಚಂಡ-ಮುಂಡರು, ರಕ್ತಬೀಜ ಎಲ್ಲ ಎಂಥದ್ದೆಂದೇ ಅರ್ಥವಾಗದೇ ಬೆಳಗ್ಗೆದ್ದು ಮನೆಗೆ ಬಂದಾಗ ಇಡೀ ಕತೆ ಗೊಜಲು ಗೊಜಲಾಗಿ ಮಸಸ್ಸಿನಲ್ಲಿ ಮೂಡಿರುತ್ತಿತ್ತು ಅಷ್ಟೇ.

ಬಾಲ್ಯವೇ ಹಾಗೆ, ನಿದ್ರೆಯನ್ನು ತಡೆದಿಡಲು ಕಷ್ಟ. ಒತ್ತಡರಹಿತ ಬದುಕು, ಚಟುವಟಿಕೆಯುಕ್ತ ಓಡಾಟ ಮತ್ತು ಬೆಳವಣಿಗೆ ಹಂತದ ದೇಹಕ್ಕೆ ಸಹಜವಾಗಿ, ಸುಲಭವಾಗಿ ನಿದ್ರೆ ಒಲಿಯುತ್ತಿತ್ತು. ದೇವಿಮಹಾತ್ಮೆ ಎಂಬ ಬಯಲಾಟ ಆ ಕಾಲಕ್ಕೆ ಚದುರಿದ ಚಿತ್ರದ ಹಾಗೆ... ಅಷ್ಟಿಷ್ಟು ಕಟ್ಟಿಕೊಂಡಿದ್ದ ಕತೆಯಾಗಿತ್ತೇ ಹೊರತು. ಇಡೀ ದೇವಿಮಹಾತ್ಮೆ ,ಸೀನ್ ಬೈ ಸೀನ್ ಅರ್ಥ ಆದದ್ದು ದೊಡ್ಡವನಾದ ಮೇಲೆಯೇ!

ರಾತ್ರಿ ಬಸ್ಸಿನ ಪ್ರಯಾಣವೂ ಅಷ್ಟೇ... ಸ್ಲೀಪರ್ ಬಸ್ಸಿನ ಪ್ರಯಾಣ ಬಹುತೇಕ ಅಸಹಜ ಹಾಸಿಗೆಯಲ್ಲಿ ಮಲಗಿದ ಹಾಗೆ. ಕಿಟಕಿ ತೆರೆದರೆ ಚಳಿ, ಕಿಟಕಿ ಹಾಕಿದರೆ ಬೆವೆತು ಬಿಡುವಷ್ಟು ಭಯಂಕರ ಸೆಕೆ, ತಿರ್ಗಾಸುಗಳಲ್ಲಿ, ಹಂಪುಗಳಲ್ಲಿ, ಘಾಟಿಗಳಲ್ಲಿ ಬಸ್ ಓರೆಕೋರೆ ರಣವೇಗದಲ್ಲಿ ಹೋಗುವಾಗ ಕುಲುಕುವುದೇನು, ಎತ್ತಿ ಹಾಕಿದಂತೆ ಆಗುವುದೇನು... ಜೊತೆಗೆ ಅಕ್ಕಪಕ್ಕದ ಪರದೆಗಳ ಹಿಂದೆ ಮಲಗಿದವರು ಮೊಬೈಲಿನಲ್ಲಿ ದೊಡ್ಡಕ್ಕೆ ಮಾತನಾಡುವುದು, ಹಾಡು ಕೇಳುವುದು, ಗಟ್ಟಿಯಾಗಿ ಪಟ್ಟಾಂಗ ಹೊಡೆಯುವುದು, ಕಿಟಕಿಯಿಂದ ತೂರಿ ಬರುವ ಬೇರೆ ವಾಹನಗಳ ಹೆಡ್ಲೈಟ್ ಬೆಳಕುಗಳು, ವಾಹನಗಳ ಹಾರನ್ನು ಎಲ್ಲ ಸೇರಿ... ಆರೇಳು ಗಂಟೆಯ ಪ್ರಯಾಣದಲ್ಲಿ ಬಹುತೇಕರು ಮಲಗುವುದು ಒಂದೆರಡು ಗಂಟೆ ಮಾತ್ರ. ಅದೂ ಸಹ ಚದುರಿದ ಚಿತ್ರಗಳ ಹಾಗೆ... ಸ್ವಲ್ಪ ಸ್ವಲ್ಪ ಸ್ವಲ್ಪ.... ಕಣ್ಣುಗಳು ಕೂಡಿ ಇನ್ನೇನು ಮಲಗಿಯೇ ಬಿಟ್ಟೆವು, ತುಂಬ ಹೊತ್ತು ನಿದ್ರೆ ಬಂತು ಅಂದುಕೊಂಡು ಯಾವುದೇ ಹಂಪಿನಲ್ಲಿ ಬಸ್ಸು ಹಾರಿದಾಗ ಧಡಕ್ಕನೆ ಎಚ್ಚರವಾಗಿ ಗಡಿಯಾರ ನೋಡಿದರೆ ಕೇವಲ ಅರ್ಧ ಗಂಟೆ ನಿದ್ರೆ ಆವರಿಸಿತ್ತಷ್ಟೇ ಅಂತ ನಿರಾಸೆಯಾಗ್ತದೆ.

ಅಷ್ಟೇ. ಗಾಢ ನಿದ್ರೆಗೆ ಜಾರಿದರೆ ವಾಶ್ ರೂಂ ಹತ್ರ ಬಸ್ ನಿಂತಾಗ ಎಚ್ಚರ ಆಗದಿದ್ದರೆ ಎಂಬ ಚಿಂತೆ ಕೆಲವರಿಗೆ. ಯಾರ್ರಿ... 10 ನಿಮಿಷ ನಿಲ್ತದೆ, ವಾಶ್ ರೂಂ ಹೋಗುವವರು ಹೋಗಬಹುದು ಅಂತ ಇಡೀ ಪ್ರಯಾಣದಲ್ಲಿ ಕಂಡಕ್ಟರು ಒಂದೇ ಸಲ ಕರೆಯುವುದು. ತಾನು ನಿದ್ರೆಗೆ ಜಾರಿ ಅದು ಮಿಸ್ಸಾದರೆ ಎಂಬ ವಿಚಿತ್ರ ಆತಂಕಸಹಿತ ಗಾಬರಿಯಲ್ಲಿ ಕೆಲವರಿಗೆ ನಿದ್ರೆಯೇ ಬರುವುದಿಲ್ಲ. ಜೊತೆಗೆ ವಾಶ್ ರೂಂ ಕ್ಲೀನಿರ್ತದ? ಹೋಗುವಾಗ ಬ್ಯಾಗ್ ಬಿಟ್ಟು ಹೋದರೆ ಯಾರಾದರೂ ಕದ್ದರೆ? ವಾಶ್ ರೂಮಿನಲ್ಲಿ ರಶ್ಶಿದ್ದು, ನನ್ನು ಕೆಲಸ ಮುಗಿಸಿ ಬರುವಾಗ ಬಸ್ ನನ್ನನ್ನು ಬಿಟ್ಟು ಹೋದರೆ? ಎಂಬಿತ್ಯಾಗಿ ಭಯಂಕರ ಆತಂಕ ಕೂಡಾ.... ಅದೆಲ್ಲ ಸುಸೂತ್ರವಾಗಿ ಮುಗಿದು ಬಂದು ಮತ್ತೆ ಮಲಗಿದರೂ ಸ್ವಲ್ಪ ಸ್ವಲ್ಪವೇ ನಿದ್ರೆ ಅಷ್ಟೇ...

ನಾನು ಇಳಿಯುವ ಸ್ಟಾಪ್ ಪಾಸಾದದ್ದು ತನಗೆ ತಿಳಿಯದೆ ತಾನು ಬಸ್ಸಿನಲ್ಲೇ ಬಾಕಿಯಾದರೆ? ಎಂಬ ವಿಚಿತ್ರ ಟೆನ್ಶನ್ನು ಕೆಲವರಿಗೆ. ಕೈಯ್ಯಲ್ಲಿ ಮೊಬೈಲ್ ಇದೆ, ಕಂಡಕ್ಟರು ಕರೀತಾನೆ, ಅಲಾರ್ಮ್ ಇಟ್ಟುಕೊಳ್ಳಬಹುದು. ಎಲ್ಲ ಇದ್ದರೂ ಸಹ ರಾತ್ರಿ ಪ್ರಯಾಣದಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ನಿದ್ರೆ ಕೆಡುವುದು ಸುಳ್ಳಲ್ಲ. ಇಡೀ ಪ್ರಯಾಣ ಮುಗಿಸಿ ಬಸ್ಸಿನಿಂದ ಇಳಿದಾಗ ತುಂಬ ಮಂದಿಗೆ ಇಡೀ ರಾತ್ರಿಯ ಬಯಲಾಟಕ್ಕೆ ಹೋಗಿ ಬಂದಂತಹ ಮಂಪರು ಮತ್ತು ಅಸಹಜ ಸುಸ್ತು.

ಸಣ್ಣವರಿದ್ದಾಗ ಮನೆಯಲ್ಲಿ ಸತ್ಯನಾರಾಯಣ ಪೂಜೆ ಸಾಮಾನ್ಯವಾಗಿ ರಾತ್ರಿಯೇ ಆಗ್ತಾ ಇದ್ದದ್ದು. ಮುಗಿಯುವಾಗ 10-11 ಗಂಟೆ ಸಾಮಾನ್ಯ. ಎಷ್ಟೇ ಪ್ರಯತ್ನ ಪಟ್ಟರೂ ಇಡೀ ಪೂಜೆ ನೋಡಲು ಸಾಧ್ಯವೇ ಆಗುತ್ತಿರಲಿಲ್ಲ. ನಿದ್ರೆ ಆವರಿಸುತ್ತಿತ್ತು. ಕೊನೆಗೆ ಮಂಪರಿನಲ್ಲೇ ಮಂಗಳಾರತಿ ಕಂಡು ಅದೇ ಸ್ಥಿತಿಯಲ್ಲಿ ಊಟ ಮುಗಿಸಿ ಮಲಗಿ ಮರುದಿನ ಬೆಳಗ್ಗೆ ಎದ್ದಾಗ ಹಿಂದಿನ ದಿನದ ಪೂಜೆ ಒಂದು ಕನಸಿನಂತೆ ಭಾಸವಾಗುತ್ತಿತ್ತು!

 

ತುಂಬ ಮಂದಿಗೆ ತಮ್ಮ ಮನೆ ಬಿಟ್ಟು ನೆಂಟರ ಮನೆಯಲ್ಲಿ, ಹೊಟೇಲುಗಳಲ್ಲಿ, ಸ್ನೇಹಿತರ ಮನೆಗಳಲ್ಲಿ, ಬಸ್ಸಿನಲ್ಲಿ, ರೈಲಿನಲ್ಲಿ ನಿದ್ರೆಯೇ ಬರುವುದಿಲ್ಲ. ನಿದ್ರೆ ಬರುವುದಿಲ್ಲ ಎಂಬುದಕ್ಕಿಂತ ತನಗೆ ನಿದ್ರೆ ಬರುವುದಿಲ್ಲ ಎಂದು ತಮಗೆ ತಾವೇ ನೀಡುತ್ತಾ ಬಂದ ಸೆಲ್ಫ್ ಸಜೆಶನ್ ಅವರನ್ನು ಭಯಂಕರ ಆತಂಕಕ್ಕೆ ತಳ್ಳಿ ನಿದ್ರೆ ಬಾರದೆ ಪರಿತಪಿಸುತ್ತಾರೆ. ಆಗಾಗ ನನಗೆ ಹೊಸ ಜಾಗದಲ್ಲಿ ನಿದ್ರೆಯೇ ಬರುವುದಿಲ್ಲ ಅಂತ ಜಪಿಸುತ್ತಲೇ ಇರುತ್ತಾರೆ.

ಯಕ್ಷಗಾನ ಕಲಾವಿದರೂ, ರಾತ್ರಿ ಪಾಳಿಯಲ್ಲಿ ದುಡಿಯುವ ಚಾಲಕರು, ಪೊಲೀಸರು, ದಾದಿಯರು, ವೈದ್ಯರು, ಪತ್ರಕರ್ತರು, ಟೆಕ್ಕಿಗಳು.... ಇವರಲ್ಲೆಲ್ಲ ಕೇಳಿ ರಾತ್ರಿ ಪಾಳಿ ಮತ್ತು ನಿದ್ರೆಯ ಬಗ್ಗೆ. ಈ ಪೈಕಿ ಸಿಂಹಪಾಲು ಮಂದಿ ರಾತ್ರಿ ದುಡಿಯುವುದು ಹೌದು. ಆದರೆ, ಕೌಟುಂಬಿಕ ವಿಚಾರಗಳಿಗೆ, ಸಮಾರಂಭಗಳಿಗೆ ಹಗಲೂ ಎಚ್ಚರದಲ್ಲಿ ಇರಬೇಕಾದ ಸಂದರ್ಭ ಬರುತ್ತದೆ. ಆಗೆಲ್ಲ ಸಿಕ್ಕಿದ ಗ್ಯಾಪಿನಲ್ಲಿ, ಸಿಕ್ಕಿದ ಸ್ಥಳದಲ್ಲಿ, ಸಿಕ್ಕಿದ ಅವಧಿಯಲ್ಲಿ ಸಿಕ್ಕಷ್ಟು ನಿದ್ರೆಗೆ ಶರಣಾಗಿ ಮರುದಿನದ ಕೆಲಸಕ್ಕೆ ರೆಡಿಯಾಗಬೇಕಾಗುತ್ತದೆ.

ಪ್ರತಿದಿನವೂ ನಿಗದಿಯಾದ ಐದು ಗಂಟೆಯೋ, ಆರು ಗಂಟೆಯೋ, ಏಳು ಗಂಟೆಯೋ ನಿದ್ರೆ ಒತ್ತಟ್ಟಿಗೆ ಸಿಕ್ಕದಿದ್ದರೆ ಮಂಪರು ಕವಿಯುವುದು, ತಾಳ್ಮೆ ತಪ್ಪುವುದು, ಊಟ ಸೇರದಿರುವುದು, ಕೆಲಸದಲ್ಲಿ ಏಕಾಗ್ರತೆ ತಪ್ಪುವುದು ಎಲ್ಲ ಸಂಭವಿಸುತ್ತದೆ. ಎಂತ ಮಾಡುವುದು ಪರಿಸ್ಥಿತಿ ಮತ್ತು ಮನಸ್ಥಿತಿ ಸೂಕ್ತವಾಗಿಲ್ಲದೇ ಹೋದರೆ ಅಗತ್ಯ ಬಿದ್ದಾಗ, ಅಗತ್ಯ ಬಿದ್ದಷ್ಟು ನಿದ್ರೆ ಮಾಡಲಾಗದೇ ಹೋದರೆ ಆ ದಿನದ ಮಟ್ಟಿಗೆ ಅದು ಹಿಂಸೆಯೇ ಸರಿ.

ನಿದ್ರೆ ಬಾರದವರಿಗೆ, ನಿದ್ರೆ ಸಿಕ್ಕದವರಿಗೆ ಗೊತ್ತು ಅದು ಎಂಥ ಶಿಕ್ಷೆ,ತ ಅದೆಂಥ ಶಾಪ, ಅದೆಂಥ ಅಸಹನೀಯ ಸ್ಥಿತಿ ಅಂತ. ನಮಗೆ ತಿಳಿಯದಂತೆ ಆವರಿಸಿ, ನಮ್ಮೊಳಗಿನ ದುಗುಡ, ಆತುರ, ನಿರಾಸೆ, ಖುಷಿ ಎಲ್ಲವನ್ನು ಕ್ಷಣಕಾಲ PAUSE MODEನಲ್ಲಿಟ್ಟು ಒಂದು REFRESH ಬಟನ್ ಒತ್ತಿದಂತೆ ಸಿದ್ಧ ಮಾಡಿಕೊಡುವ ನಿದ್ರೆಯ ಸುಖ ಎಂಬುದು ಒಂದು ವರ ಎಂಬುದು ಗಡದ್ದಾಗಿ ನಿದ್ರೆ ಮಾಡುವ ಮಂದಿಗೆ ಅರ್ಥ ಆಗುವುದಿಲ್ಲ.

ಬಯಲಾಜಿಕಲ್ ಕ್ಲಾಕ್ ನಮ್ಮ ದೇಹದ ಆಗುಹೋಗುಗಳನ್ನು ಸಮತೋಲನಗೊಳಿಸುತ್ತದೆ. ಆ ಗಡಿಯಾರದಲ್ಲಿ ನಿದ್ರೆ ಕಮ್ಮಿ ಆದರೆ, ದೇಹಕ್ಕೆ ವಿಶ್ರಾಂತಿ ಕೊರತೆ ಆಗಿ, ಆ ಮೂಲಕ ಮನಸ್ಸೂ ಪ್ರಕ್ಷುಬ್ಧಗೊಂಡು, ತನ್ಮೂಲಕ ಆರೋಗ್ಯ ಕೈಕೊಟ್ಟು ಅಧ್ವಾನವಾಗುತ್ತದೆ. ತುಂಬ ಮಂದಿಗೆ ಇದರ ಅನುಭವ ಇದೆ, ಹೊಸದಾಗಿ ವಿವರಿಸಬೇಕಾಗಿಲ್ಲ.

ಆಗಲೇ ಹೇಳಿದ ಹಾಗೆ ಕ್ಲಾಸಿನಲ್ಲಿ, ಕಚೇರಿಯಲ್ಲಿ, ಸಭೆಗಳಲ್ಲಿ, ವೇದಿಕೆಗಳಲ್ಲಿ ಬೇಡವೆಂದರೂ ಕಾಡುವ ನಿದ್ರೆ ಉಂಟು ಮಾಡುವ ಮುಜುಗರ, ತರಬಹುದಾದ ನಷ್ಟ, ಕಷ್ಟಗಳು ಅಷ್ಟಿಷ್ಟಲ್ಲ. ವಾಹನ ಚಾಲನೆ ಮಾಡುವಾಗ ನಿದ್ರೆ ಕವಿದರಂತೂ ಅದು ಚಾಲಕನ ಜೊತೆ ಸಹಪ್ರಯಾಣಿಕರನ್ನೂ ಚಿರನಿದ್ರೆಯತ್ತ ತಳ್ಳಿದ ಸಾಕಷ್ಟು ಪ್ರಕರಣಳನ್ನು ನಾವು ಓದುತ್ತಲೇ ಬಂದಿದ್ದೇವೆ. ಒಂದು ಸೆಕೆಂಡಿನ ತೂಕಡಿಕೆಯೂ ಸಾಕು ವಾಹನ ದಾರಿ ತಪ್ಪಿ ಅಪಘಾತ ಆಗಲು. ಆದರೂ ಕೆಲವೊಮ್ಮೆ ಪರಿಸ್ಥಿತಿಗೆ ಕಟ್ಟು ಬಿದ್ದು ಕಳೆದುಕೊಂಡ ನಿದ್ರೆಯನ್ನು ಸಕಾಲದಲ್ಲಿ ಹೊಂದಲಾಗದೆ ಸಂಕಷ್ಟ ಅನುಭವಿಸುವುದು ತಪ್ಪಿದ್ದಲ್ಲ.

ನಿದ್ರೆಯಿಲ್ಲದ ರಾತ್ರಿಗಳು ಸುದೀರ್ಘ ಅನ್ನಿಸುತ್ತವೆ. ಗಡಿಯಾರದ ಟಿಕ್ ಟಿಕ್ ಸದ್ದು ಸುತ್ತಿಗೆಯ ಪೆಟ್ಟಿನ ಹಾಗೆ ಭಾಸವಾಗುತ್ತವೆ. ಸೂರ್ಯ ಎಷ್ಟು ಹೊತ್ತಾದರೂ ಮೂಡುವುದೇ ಇಲ್ಲವೇನೋ ಎಂಬಂಥ ಅಸಹನೆ ಕಾಡುತ್ತದೆ, ಲೇಖನದ ಶುರುವಿಗೇ ಹೇಳಿದ ಹಾಗೆ ಮರೆಯಬೇಕೆಂದಿದ್ದ ಅಥವಾ ಮರೆತು ಹೋಗಿದ್ದ ಸಂಗತಿಗಳೆಲ್ಲ RECYCLE BINನಿಂದ ಧುತ್ತನೆ ಎದ್ದು ಬಂದು ತಲೆಯನ್ನು ತಿನ್ನಲು ತೊಡಗುತ್ತವೆ. ನಿದ್ರೆ ಬರ್ತಾ ಇಲ್ಲ ಎಂಬ ಆತಂಕ ಮತ್ತಷ್ಟು ನಿದ್ರೆಯ ಸಾಧ್ಯತೆಯನ್ನು ಕೊಂದು ವಿಜೃಂಭಿಸುತ್ತದೆ. ಸೆಕೆ, ಬೆವರು ಭಯಂಕರ ಸಿಟ್ಟು ತರಿಸುತ್ತವೆ. ಒಂದೇ ಒಂದು ಸೊಳ್ಳೆಯ ಝೇಂಕಾರ ಭಯಂಕರ ಕರ್ಕಶ ಹಾಡಿನಂತೆ ಕಾಡುತ್ತದೆ. ಒಮ್ಮೆ ಬೆಳಗಾದರೆ ಸಾಕು ಎಂಬ ನಿರೀಕ್ಷೆಯೂ ಹುಸಿಯಾಗಿ ಯಾವಾಗಿನಿಂದ ತಡವಾಗಿ ರಾತ್ರಿ ಸರಿಯುತ್ತಿದೆ ಎಂಬ ವಿಚಿತ್ರ ಅಸಹನೆ ಹುಟ್ಟಿಕೊಂಡು ರಾತ್ರಿಯನ್ನು ಹೈರಾಣಾಗಿಸುತ್ತದೆ ಎಂದರೆ ಒಪ್ತೀರ?

ಗಾಢ ನಿದ್ರೆ ಮುಗಿದ ಬಳಿಕ ಹಲವು ಸಂಧಿಗ್ಧಗಳು, ಹಲವು ಒತ್ತಡಗಳು, ಹಲವು ನಿತ್ರಾಣಗಳು ರಿಸ್ಟಾರ್ಟ್ ಆದ ಮೊಬೈಲಿನ ಹಾಗೆ ನಮ್ಮನ್ನು ತಾಜಾಗೊಳಿಸುವ ಮೂಲಕ ಹೊಸ ಯೋಚನೆ, ಹೊಸ ಸಾಧ್ಯತೆಗಳ ಕುರಿತಾದ ಚಿಂತನೆಗಳತ್ತ ಮನಸ್ಸು ಮಾಡಿಕೊಡುತ್ತದೆ, ಮೆದುಳೆಂಬ ಪ್ರೊಸೆಸರ್ ಅಲರ್ಟ್ ಆಗಿ ತಾರ್ಕಿಕ ಯೋಚನೆಗಳಿಗೆ ಮನಸ್ಸು, ದೇಹ ಸಿದ್ಧವಾಗಿರ್ತದೆ. ಆದರೂ ತುಂಬ ಮಂದಿ ಕಾಲೇ ಗಂಟೆ ಮಲಗಿ ಬಾಕಿಯಾದ ನಿದ್ರೆ ಮುಗಿಸುತ್ತೇನೆ ಎಂದು ಮಲಗಿದವರಿಗೆ ಕಾಲು ಗಂಟೆಯಲ್ಲಿ ಎಚ್ಚರವಾಗದೇ ನಾನು ಮಲಗಿದಲ್ಲೇ ಬಾಕಿ ಆದರೆ ಎಂಬ ಟೆನ್ಶನ್ನಿನಲ್ಲಿ ನಯಾಪೈಸೆ ನಿದ್ರೆ ಬಾರದೇ ಇರುವುದು ನಿದ್ರೆ ಎದುರು ನಾವೆಷ್ಟು ಅಸಹಾಯಕರು ಎಂಬುದನ್ನು ಜ್ವಲಂತವಾಗಿ ತೋರಿಸಿಕೊಡುತ್ತದೆ. ನಿದ್ರಿಸಿದವರನ್ನು ಎಚ್ಚರಿಸಬಹುದು, ನಿದ್ರೆ ನಟಿಸಿದವರನ್ನು ಎಚ್ಚರಿಸಲು ಅಸಾಧ್ಯ ಎಂಬುದು ಹಳೆ ಗಾದೆ. ನಿದ್ರೆಯನ್ನು ಬಯಸಿದವನು ಇಚ್ಛಿಸಿದರೂ ನಿದ್ರೆಯನ್ನು ನಟಿಸಲಾರ, ಏಕೆಂದರೆ ಅವನ ಪಾಲಿಗೆ ಅದು ಜೀವಾಮೃತ! ಅಷ್ಟೇ... ಏನಂತೀರ?

-ಕೃಷ್ಣಮೋಹನ ತಲೆಂಗಳ (08.04.2024).

No comments: