ಸಾವಿನ ಮನೆಯ ಬಾಗಿಲಿಗೆ ಚಿಲಕ ಇರುವುದಿಲ್ಲ, ಸಿಗ್ನಲ್ಲೂ ತಡೆಯುವುದಿಲ್ಲ... ಸತ್ತವರು "ಸತ್ತೆನೆಂದು" ಹೇಳುವುದೂ ಇಲ್ಲ!




.................
ವ್ಯಕ್ತಿ ಸೋಲು ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ಸೋತಿಲ್ಲ ಎಂದರ್ಥವಲ್ಲ. ತಾನು ಸೋಲುತ್ತಿರುವುದು, ತಾನು ಕಡೆಗಣನೆಗೆ ಒಳಗಾಗುತ್ತಿರುವುದು, ತಾನು ಅಪ್ರಸ್ತುತವಾಗಿರುವುದು, ತಾನು ದಾರಿ ತಪ್ಪಿ ಸಾಗುತ್ತಿರುವುದು ಮತ್ತು ಇರುವ ದಿನಗಳನ್ನು ದೂಡುತ್ತಿರುವುದು ಖಂಡಿತಾ ಸೋಲಿನ ದವಡೆಗೆ ಸಿಲುಕಿದವನಿಗೆ ಅರ್ಥ ಆಗಿರುತ್ತದೆ ಅಥವಾ ಅನುಭವಕ್ಕೆ ಬರುತ್ತದೆ. ಇಂತಹ ಸೋಲು, ಹಿನ್ನಡೆಯನ್ನು ಅಹಂನಿಂದಾಗಿ ತೋರಿಸಿಕೊಳ್ಳದ ಮಾತ್ರಕ್ಕೆ ಆತ ಸೋತಿಲ್ಲ ಅಂತ ಅರ್ಥವಲ್ಲ. ನಗುವಂತೆ ನಟಿಸಿ, ನಾಟಕ ಮಾಡುತ್ತಲೇ ಬದುಕುವವರ ನಡುವೆ ತಾನೂ ಒಬ್ಬ ನಕ್ಕ ಹಾಗೆ ನಟಿಸುತ್ತಾ ನಟನೆಯಲ್ಲಿ ಪ್ರೌಢಿಮೆ ಮೆರೆದಲ್ಲಿಗೆ ಸೋಲಿನ ವಾಸನೆ ಅತ್ತಿತ್ತ ಸೋಕುವುದು ವಿಳಂಬವಾಗುತ್ತದೆ...
ಸಾವೂ ಸಹ ಹಾಗೆಯೇ...
ದೇಹ ಉಸಿರಾಡುತ್ತಿದ್ದರೂ ಅಂದುಕೊಂಡ ಹಾಗಿರುವ ಬದುಕು ಕೈಗೆಟುಕದೇ ಇದ್ದಾಗ, ‘ಜಗತ್ತು ಸಮಕಾಲೀನವಾಗಿ ತೋರಿಸಿಕೊಡುವ’ ವಾಸ್ತವದ ಜೊತೆ ಏಗಲಾಗದೆ, ವಸ್ತುನಿಷ್ಠವಾಗಿ, ಕಾಲನಿಷ್ಠವಾಗಿ ಬದುಕಲು ಆಗದೇ ಇದ್ದಾಗ, ಬಾಲ್ಯದಲ್ಲಿ ಕಲಿತ ಸತ್ಯಗಳು ನಿಜಜೀವನದ ಸತ್ಯಗಳ ಜೊತೆ ಸಂವಹನ ಸಾಧಿಸಲಾಗದೆ ನಂಬಿಕೆಗಳು ಮಂಡಿಯೂರಿ ಕುಳಿತಾಗ ಚೇತನವಿರುವ ವ್ಯಕ್ತಿಯೂ ಮಾನಸಿಕವಾಗಿ ಸತ್ತಿರುತ್ತಾನೆ. ಮಾನಸಿಕವಾಗಿ ಸತ್ತ ಮೂಲೆಗುಂಪಾದವನನ್ನು ಸಮಕಾಲೀನ ಜಗತ್ತಿನಲ್ಲಿ ಸಮಬಲದಿಂದ ಬದುಕುತ್ತಿರುವ ವ್ಯವಸ್ಥೆಯೂ ಮೂಲೆಗುಂಪು ಮಾಡುತ್ತದೆ.
ಅದರಾಚೆಗಿನ ಮಾನವೀಯತೆ, ಅನುಕಂಪ, ಸಂಕಷ್ಟಗಳನ್ನು ಹುಡುಕಿ ಸಾಂತ್ವನ ಹೇಳುವ ಸೂಕ್ಷ್ಮತೆ, ಉಪಕಾರಪ್ರಜ್ಞೆ... ಇತ್ಯಾದಿ ಯಾವುದೇ ಹಳಸಲು ಆದರ್ಶಗಳು ಮಾನಸಿಕವಾಗಿ ಸತ್ತವರನ್ನು ಬದುಕಿಸುವುದಿಲ್ಲ. ಯಾಕೆಂದರೆ ವಾಸ್ತವದಲ್ಲಿ ಅಂತಹ ಆದರ್ಶಗಳನ್ನು ಹಿಡಿದುಕೊಂಡು ಕೃತಕ ಉಸಿರಾಟ ನೀಡುವ ರಿಸ್ಕಿಗೆ ಯಾರೂ ಕೈ ಹಾಕುವುದೂ ಇಲ್ಲ.
ಪ್ರತಿ ದಿನ ನೀವು ಒಂದು ರಸ್ತೆಯಲ್ಲಿ ಸಕ್ರಿಯರಾಗಿ ಓಡಾಡುತ್ತಿದ್ದೀರಿ ಎಂದಿಟ್ಟುಕೊಳ್ಳೋಣ... ಅಲ್ಲಿ ನಿಮಗೆ ನಮಸ್ಕಾರ ಹೊಡೆಯುವರು, ಒಂದು ಹತ್ತು ರುಪಾಯಿ ಕೊಡಿ ಅಂತ ಕೇಳಿ ಪಡೆದವರು, ನಿಮ್ಮ ಬೈಕಿನಲ್ಲಿ ಅಷ್ಟು ದೂರ ಬಂದವರು, ನೀವು ಹಂಚಿದ ವಿಚಾರಗಳನ್ನು ಹೊಗಳಿ ಹೊಗಳಿ ಸ್ವೀಕರಿಸಿದವರು....ಹೀಗೆ ನಿಮ್ಮನ್ನು ಬಲ್ಲವರು ಕನಿಷ್ಠ 300-400 ಮಂದಿಯಾದರೂ ಇರ್ತಾರೆ ಎಂದಿಟ್ಟುಕೊಳ್ಳೋಣ. ಒಂದೊಮ್ಮೆಗೆ ಅದೇ ರಸ್ತೆಯಲ್ಲಿ ನಿಮ್ಮ ಓಡಾಟದ ಸಮಯ ಬದಲಾದರೆ, ಅದೇ ರಸ್ತೆಯಲ್ಲಿ ನೀವು ಕುಂಟಿಕೊಂಡು ನಡೆಯಲು ಶುರು ಮಾಡಿದರೆ, ನಿಧಾನವಾಗಿ ಹೋಗುತ್ತಿದ್ದರೆ, ನಿಮ್ಮ ಉತ್ಸಾಹ, ನಿಮ್ಮ ಚೈತನ್ಯ ಕುಂದುತ್ತಾ ಬಂದರೂ ಈ 300-400 ಮಂದಿಯಲ್ಲಿ ಶೇ.90ರಷ್ಟೂ ಮಂದಿ ಅದರ ಬಗ್ಗೆ ತಲೆಕೆಡಿಸುವುದಿಲ್ಲ... ಆರೋಗ್ಯದಿಂದಿದ್ದಾಗ ಓಡಾಡುತ್ತಿದ್ದ ನಿಮ್ಮ ವೇಗ ಕ್ರಮೇಣ ಕಡಿಮೆಯಾಗಿದೆ ಎಂಬುದು ಈ ಪೈಕಿ ತುಂಬ ಮಂದಿಯ ಅರಿವಿಗೇ ಬಂದಿರುವುದಿಲ್ಲ... ಅವರಿಗೆ ಅದು ಅನಿವಾರ್ಯವೂ ಆಗಿರುವುದಿಲ್ಲ. ಒಂದು ವೇಳೇ ನಡಿಗೆ ನಿಧಾನವಾಗಿರುವಾಗ ಎದುರು ಸಿಕ್ಕಿದರೂ ತುಂಬ ಮಂದಿ ನಿಮ್ಮ ಕಡಿಮೆಯಾದ ವೇಗಕ್ಕೆ ಹೊಂದಿಕೊಳ್ಳಲಾಗದೆ, ವಿಚಾರಿಸುವ ಗೋಜಿಗೂ ಹೋಗದೆ ಮುಂದೆ ಸಾಗುತ್ತಲೇ ಇರುತ್ತಾರೆ...
ಅಲ್ಲಿ ಸಿಗುತ್ತಿದ್ದ ನಮಸ್ಕಾರ, ‘ನಿಮ್ಮ ನೆರಳಿನಲ್ಲೇ ನಾವು ಬೆಳೆದವರು’ ಎಂಬಿತ್ಯಾದಿ ಒಣ ಪ್ರಶಂಸೆ, ನಿಮ್ಮ ವಿಚಾರಧಾರೆಗಳಿಗೆ ಕಿವಿಯಾಗುವ ಔದಾರ್ಯ ಎಲ್ಲವೂ ಕ್ರಮೇಣ ನಿಂತುಹೋಗುತ್ತದೆ.. ಎಲ್ಲಿಯ ತನಕ ಎಂದರೆ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಿದ್ದ ನೀವು ಕ್ರಮೇಣ ಅಲ್ಲಿಂದ ಹಿಂದೆ ಸರಿದರೆ ಜಾಲತಾಣವೂ ನಿಮ್ಮನ್ನು ‘ತಲುಪಿಸುವ’ ವೇಗ ಕಡಿಮೆ ಮಾಡುತ್ತದೆ...
ಇದನ್ನು ಸರಳವಾಗಿ ಹೀಗೆ ಹೇಳಬಹುದು..
ಪ್ರತಿದಿನ ನೀವು ಹೋಗುವ ಬಸ್ಸು ಕ್ರಮೇಣ ತನ್ನ ಸಮಯ ಬದಲಿಸಿದರೆ ಅಥವಾ ಅನಿಯಮಿತವಾಗಿ ಬರಲು ಶುರು ಮಾಡಿದರೆ, ಅಥವಾ ಒಂದು ದಿನ ಸಡನ್ ಬರುವುದನ್ನೇ ಸ್ಥಗಿತಗೊಳಿಸಿದರೆ ‘ಅದು ನನ್ನ ಇಷ್ಟದ ಬಸ್ಸು, ನಾನು ಅದು ಬರುವ ತನಕ ಎಲ್ಲಿಗೂ ಹೋಗುವುದಿಲ್ಲ’ ಅಂತ ಕೂರುತ್ತೀರ ಅಥವಾ ‘ನೆಕ್ಸ್ಟ್ ಅವೈಲೇಬಲ್’ ಬಸ್‌ ಯಾವುದಿದೆಯೋ ಅದರಲ್ಲಿ ಹೋಗುತ್ತೀರಾ...?!!!
ಮಾನಸಿಕ ಮತ್ತು ದೈಹಿಕ ಸಾವು ಸಹ ಹೀಗೆಯೇ... ಎಲ್ಲದಕ್ಕೂ ಪರ್ಯಾಯ ವ್ಯವಸ್ಥೆ ಇರುತ್ತದೆ. ವ್ಯಕ್ತಿತ್ವಗಳು ಅಳಿದರೆ ಜನ ಒಮ್ಮೆ ಅತ್ತಾರು, ಸ್ವಲ್ಪ ಕಾಡೀತು... ನಂತರ ಬದುಕಿದವರು ಬದುಕಲೇ ಬೇಕು. ಪರ್ಯಾಯ ವ್ಯವಸ್ಥೆಗಳೊಂದಿಗೆ ಬದುಕು ಹೋಗುತ್ತಲೇ ಇರುತ್ತದೆ. ವ್ಯಕ್ತಿ ಮಾನಸಿಕವಾಗಿ ಸತ್ತರೂ ಅಷ್ಟೇ.. ದೈಹಿಕವಾಗಿ ಸತ್ತರೂ ಅಷ್ಟೇ...
ಸಕ್ರಿಯರಾಗಿದ್ದಾಗ ಸಲಹೆ, ಸೂಚನೆ ಕೇಳಿ ಪಡೆದವರು, ದುಃಖಗಳನ್ನು ಹಂಚಿಕೊಂಡವರು, ನಮ್ಮನ್ನು ಸಿಕ್ಕಾಪಟ್ಟೆ ಹೊಗಳಿ ಕಂಡ ಕಂಡ ಬಿಟ್ಟಿ ಚಾಕರಿಗಳಿಗೆ ಬಳಸಿದವರು, ಬಿಟ್ಟಿ ಚಾಕರಿಯ ಋಣ ಬೇಡ ಅಂತ ಒಂದು ಮಾಲೆ, ಪೇಟ ಹಾಕಿ ಇಲ್ಲ ಸಲ್ಲದ್ದು ಹೇಳಿ ವೇದಿಕೆಗೆ ಹತ್ತಿಸಿ ಹೊಗಳಿ ಸನ್ಮಾನ ಮಾಡಿದವರೆಲ್ಲ ನಮ್ಮ ದುಃಖದಲ್ಲಿ, ಅಧಃಪತನದಲ್ಲಿ ನಮ್ಮ ಜೊತೆಗಿರ್ತಾರೆ ಅಂತ ಖಂಡಿತಾ ಅರ್ಥವಲ್ಲ. ಅವರ್ಯಾರೂ ನಮ್ಮ ಕುಸಿತದ ವೇಳೆ ತಮ್ಮ ಆಯುಷ್ಯವನ್ನು ನಮ್ಮ ಜೊತೆ ಹಂಚಿಕೊಳ್ಳುವುದಿಲ್ಲ, ನಾವು ದುಗುಡದಲ್ಲಿ ಇದ್ದಾಗ ನಮ್ಮ ನೋವುಗಳಿಗೆ ಕಿವಿಯಾಗಲೂ ಈ ಪೈಕಿ ಹಲವರಿಗೆ ಸಮಯವೂ, ಸಂಯಮವೂ ಇರುವದಿಲ್ಲ... ಶೇ.90 ಮಂದಿಗೆ ನಮ್ಮ ಸಮಯದ ಬೆಲೆಯೇ ಗೊತ್ತಿರುವುದೂ ಇಲ್ಲ. ಅಷ್ಟೇ ಯಾಕೆ. ಅವರಿಗೆ ಅದರ ಅನಿವಾರ್ಯತೆಯೂ ಆ ಹೊತ್ತಿಗೆ ಕಾಣಿಸುವುದಿಲ್ಲ...

ಅಷ್ಟೆಲ್ಲ ಯಾಕೆ... ದುಗುಡ ತುಂಬಿದ ಮನಸ್ಸಿಗೆ, ನೊಂದು ಕಂಗಾಲಾದ ಹೃದಯಕ್ಕೆ ಕನಿಷ್ಠ ಅದನ್ನು ಹಂಚಿಕೊಳ್ಳಲು, ಕೇಳಿಸಿಕೊಳ್ಳಲು ಒಂದು ಕಿವಿ, ಒಂದು ಮನಸು ಸಾಲುತ್ತದೆ... ಆದರೆ ತುಂಬ ಸಲ ಯಾರನ್ನು ನಂಬಿ ಬದುಕಿನ ಸಂಧಿಗ್ಥತೆಗಳನ್ನು, ನೋವುಗಳನ್ನು ಹಂಚಿಕೊಳ್ಳುತ್ತೇವೆಯೋ ಅದೇ ವಿಚಾರ ಮುಂದೊಮ್ಮೆ ನಮ್ಮನ್ನು ಹಂಗಿಸಲು, ನಮ್ಮನ್ನು ನಿಂದಿಸಲು ಅದೇ ವಿಚಾರಗಳು ಅವರಿಗೆ ಅಸ್ತ್ರವಾಗಿ ಬಿಡುತ್ತವೆ. ಕೋಲು ಕೊಟ್ಟು ಹೊಡೆಸಿಕೊಂಡ ಹಾಗೆ...! ನಾವು ನಮ್ಮ ಕಷ್ಟಗಳನ್ನು ಹಂಚಿಕೊಂಡು ಮತ್ತೆ ಅವರ ದೃಷ್ಟಿಯಲ್ಲಿ ಹಾಸ್ಯಾಸ್ಪದ ವ್ಯಕ್ತಿಗಳಾಗಿ ಬಿಡುತ್ತೇವೆ.
ಯಾರನ್ನು ನಂಬಬೇಕು, ಯಾರು ಆಪ್ತರು, ಯಾರು ನಿರ್ವಂಚನೆಯಿಂದ ಪ್ರೀತಿಸುವವರು, ಯಾರು ನಿಸ್ವಾರ್ಥಿಗಳು, ಯಾರು ಸಮಯಸಾಧಕರು, ಯಾರು ಹೊಗಳಿಸಿಕೊಂಡೇ, ದಾಕ್ಷಿಣ್ಯಕ್ಕೆ ಸಿಲುಕಿಸಿಯೇ ನಮ್ಮನ್ನು ಬಳಸಿಕೊಳ್ಳುವವರು ಎಂಬಿತ್ಯಾದಿ ಅರಥವಾಗದ ಅಯೋಮಯ ಜಗತ್ತಿನಲ್ಲಿ ನಾವಿರುವಾಗ ನಮ್ಮದೇ ನೋವುಗಳು ನಾವೇ ನಗೆಪಾಟಲಿಗೀಡಾಗುವ ಸರಕಾಗಿ ಯಾರದ್ದೋ ಕೈಸೇರಿದಾಗ ತಡವಾಗಿ ಎಚ್ಚರವಾದರೂ ಅಷ್ಟೊತ್ತಿಗೆ ಕಾಲ ಮಿಂಚಿರುತ್ತದೆ...
ಕಷ್ಟಕ್ಕೆ ಬಾರದವರು, ತಪ್ಪಾಗಿ ಅರ್ಥ ಮಾಡಿ ಹಂಗಿಸಿದವರು, ತಮ್ಮ ಸ್ವಾರ್ಥಕ್ಕೆ ಬಳಸಿದವರು, ಕೆಲಸ ಮುಗಿದ ಬಳಿಕ ಮರೆತವರು ಸಹ ನಾವು ಸತ್ತಾಗ ‘ಜೀವಂತ’ವಾಗಿರುತ್ತಾರೆ. ಸತ್ತರೆ ಅಂತ್ಯಸಂಸ್ಕಾರಕ್ಕೆ, ಸತ್ತ ಮೇಲೆ ಸ್ಟೇಟಸ್ ಹಾಕಲಿಕ್ಕೆ, ಗ್ರೂಪಿನಲ್ಲಿ ಸತ್ತ ಸಂಗತಿ ಬಂದಾಗ RIP ಹಾಕುವುದಕ್ಕೆ, ನಮ್ಮ ಹೆಸರಿನಲ್ಲಿ ಶ್ರದ್ಧಾಂಜಲಿ ಸಭೆ ಮಾಡಿ ಅದರ ಫೋಟೋ ಸಹಿತ ವರದಿಯನ್ನು ಪೇಪರಿಗೆ ಕಳುಹಿಸುವಲ್ಲಿ ಸಕ್ರಿಯರಾಗಿರುತ್ತಾರೆ.
ನಿರ್ಜೀವ ದೇಹದ ಮೇಲೆ ಹೂವಿನ ಹಾರ ಹಾಕಿ, ಸತ್ತವನ ಬಾಯಿಗೆ ತುಳಸಿ ನೀರು ಬಿಡುವುದಕ್ಕೆ ಇರುವ ಕಾಳಜಿ ಎಷ್ಟೋ ಸಲ ಆ ದೇಹ ಉಸಿರಾಡುತ್ತಿದ್ದಾಗ ಉಸಿರಿನ ಏರಿಳಿತಕ್ಕೆ ಸ್ಪಂದಿಸುವಲ್ಲಿ ಇರುವುದಿಲ್ಲ ಎಂಬುದು ಸೂರ್ಯ ಚಂದ್ರರಷ್ಟೇ ಸ್ಪಷ್ಟ ವಿಚಾರ.
ಸತ್ತ ಮೇಲೆ ಸತ್ತವನ ಫೋಟೋ ಸಹಿತ ರಸ್ತೆ ಪಕ್ಕ ಪ್ರತ್ಯಕ್ಷವಾಗುವ ಫ್ಲಕ್ಸ್ ಗಳ ಕೆಳಗೆ ಸಂತಾಪ ನೀಡಿದವನ ಹೆಸರು ದೊಡ್ಡದಾಗಿರುವುದು ಮುಖ್ಯ, ಶ್ರದ್ಧಾಂಜಲಿ ಸಭೆಯಲ್ಲಿ ಹಾಜರಿದ್ದವರ ಹೆಸರು ಫೋಟೋ ಸಮೇತ ಪೇಪರಿನಲ್ಲಿ ಬರುವುದು ಮುಖ್ಯ... ಯಾಕೆಂದರೆ ಸತ್ತವನು ಹೋಗಿ ಆಗಿರುತ್ತದೆ... ಬದುಕಿರುವವರಿಗೆ ಇನ್ನು ತಾವು ‘ಜೀವಂತ’ ಇರುವುದು ಜಗತ್ತಿಗೆ ತಿಳಿಯಬೇಕಾದ ಅನಿವಾರ್ಯತೆ ಇರುತ್ತದೆ. ಎಷ್ಟೇ ನಾಟಕ, ಎಷ್ಟೇ ತೋರಿಕೆ, ಎಷ್ಟೇ ಸಮಯಸಾಧಕತನ ಇದ್ದರೂ ವ್ಯಕ್ತಿಯ ಹಿನ್ನೆಲೆ, ಆರ್ಥಿಕ ಶಕ್ತಿ ಮತ್ತು ಆತನ ಪ್ರಭಾವದ ಎದುರು ಬಾಕಿ ಎಲ್ಲ ಗೌಣವಾಗುತ್ತದೆ... ಯಾರು ಮಾಡಿದ್ದರೆ ಎಂಬುದರ ಆಧಾರದಲ್ಲಿ ಅದರ ಸರಿ ತಪ್ಪು ನಿರ್ಧಾರವಾಗುತ್ತದೆ.
ವ್ಯಕ್ತಿ ಸತ್ತಾಗ ಮನಸು ಸಂಕಟ ಪಡುವುದಕ್ಕೂ, ಸಂತಾಪ ಹೊಂದುವುದಕ್ಕೂ ‘ಸಂತಾಪ ಸೂಚಿಸುವುದಕ್ಕೂ’ ತುಂಬ ವ್ಯತ್ಯಾಸವಿದೆ... ಬಹುತೇಕ ಸಂದರ್ಭ ಸಂತಾಪ ಆಗಿರುವುದಿಲ್ಲ.... ಸಂತಾಪ ‘ಸೂಚಿಸಲಾಗಿರುತ್ತದೆ’ ಅಷ್ಟೇ...
ಮಾನಸಿಕ ಸಾವು, ಅಥವಾ ತಾನು ಕಲಿತಿರುವುದೇ ಬೇರೆ... ಇಲ್ಲಿರುವ ಪರಿಸ್ಥಿತಿಯೇ ಬೇರೆ ಎಂಬ ವಿಚಾರಗಳೆಲ್ಲ ಅರಿವಾಗುವ ಸತ್ಯ ದರ್ಶನವಾದ ಬಳಿಕ ಸೃಷ್ಟಿಸುವ ಮೌನ ಮತ್ತಷ್ಟು ಸತ್ಯಗಳನ್ನು ತಾನಾಗಿ ಕಲಿಸುತ್ತದೆ.. ಕಲಿತು ಮಾಡುವದಕ್ಕೇನು ಎಂಬುದು ಪ್ರಶ್ನೆಯಲ್ಲ. ಬಹುಶಃ ವ್ಯಕ್ತಿಗೆ ತಾನು ಸಾಯುತ್ತಿದ್ದೇನೆ ಎಂಬುದು ಅರಿವಾಗಬಹುದು. ಆದರೆ, ತಾನು ಸತ್ತಾಯಿತು ಎಂದು ಹೇಳಲು ದೇಹದಲ್ಲಿ ಚೈತನ್ಯವೇ ಇರುವುದಿಲ್ಲ. ಹಾಗಾಗಿ ಅಸ್ತಿತ್ವ ಏನಿದ್ದರೂ ದೇಹ ಉಸಿರಾಡುತ್ತಿರುವ ವರೆಗೆ ಮಾತ್ರ.. ಮತ್ತೇನಿದ್ದರೂ ಅದು ಬದುಕುಳಿದವರ ಪ್ರೀತ್ಯರ್ಥ ಅಷ್ಟೇ...
ಅನುಭವ ಪಾಠ ಕಲಿಸುತ್ತದೆ, ಪಾಠ ಬಳಿಕ ನಡೆಯುವ ಪರೀಕ್ಷೆಯ ನಂತರ ಅದರ ಸಿಲಬಸ್ ಸಿಕ್ಕಿದರೂ ಪಾಠವೊಂದು ಪುಟವಾಗಿ ಬದುಕಿನ ಪುಸ್ತಕದಲ್ಲಿ ಉಳಿಯುತ್ತದೆ... ಮತ್ತೆಲ್ಲ ಯಾಂತ್ರಿಕ ದಿನಗಳು... ಇಷ್ಟುದ್ದ ಬರಹವನ್ನು ಯಾರೂ ಓದುವುದಿಲ್ಲ, ಓದಿದವರು ಏಕಾಗ್ರತೆಯಿಂದ ಓದುವುದಿಲ್ಲ, ಓದಿದ ಯಾರೂ ಪ್ರತಿಕ್ರಿಯೆ ನೀಡುವ ರಿಸ್ಕ್ ತೆಗೆದುಕೊಳ್ಲುವುದಿಲ್ಲ ಎಂಬ ಸತ್ಯ ಗೊತ್ತಿದ್ದೂ ಉದ್ದುದ್ದ ವ್ಯರ್ಥ ಬರಹಗಳನ್ನು ಹಂಚಿಕೊಳ್ಳುವ ‘ಮೂರ್ಖ ಲೇಖಕ’ನ ಹಾಗೆ...ಮಾನಸಿಕವಾಗಿ ಸತ್ತ ವ್ಯಕ್ತಿಗಳು ಬೇಕೆಂದರೂ, ಬೇಡವೆಂದರೂ ಆತ ಉಸಿರಾಟ ನಿಲ್ಲಿಸುವ ವರೆಗೆ ಆತನ ದಿನಗಳು ಉರುಳುತ್ತಲೇ ಇರುತ್ತವೆ... ಆತನ ಎದುರು ಗಹಗಹಿಸಿ ನಗುವ ಪೊಳ್ಳು ಆದರ್ಶಗಳು ಮತ್ತು ಕೆಲಸಕ್ಕೆ ಬಾರದ ನಂಬಿಕೆ ಮತ್ತು ವಿಶ್ವಾಸಗಳು ಸತ್ತ ನಂತರ ಹರಿದು ಬರುವ ಶ್ರದ್ಧಾಂಜಲಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿ ಆತನೊಂದಿಗೇ ಮಣ್ಣು ಸೇರುತ್ತವೆ... ನಂತರ ಅದರ ಬಗ್ಗೆ ಯಾರೂ ತಲೆಕೆಡಿಸುವುದಿಲ್ಲ... ಬದುಕು ಸಾಗಿಸಲು ಒಣ ಆದರ್ಶಗಳು ಬೇಕಾಗಿರುವುದಲ್ಲ, ವಾಸ್ತವಿಕ ಪ್ರಜ್ಞೆ ಮತ್ತು ಎಲ್ಲರನ್ನೂ ಮೆಚ್ಚಿಸಿ ಪ್ರವಾಹದಲ್ಲಿ ಸಾಗುವ ಕಲೆ ಗೊತ್ತಿರಬೇಕು ಎಂಬುದು ಸಮಕಾಲೀನ ಪ್ರಾಜ್ಞರಿಗೆ ತಿಳಿದಿರುವ ಕಾರಣಕ್ಕೇ ಬುದ್ಧಿವಂತರು ಅದರಂತೆ ‘ಸುಖವಾಗಿ ಬಾಳಿ ಬದುಕಿ’ ರೀಲ್ಸುಗಳು, ಕಾದಂಬರಿಗಳು, ಸಿನಿಮಾಗಳು, ವ್ಯಕ್ತಿತ್ವ ವಿಕಸನ ಮಾಲಿಕೆಯ ಲೇಖನಗಳೇ ನಾಚಿಸುವಂತೆ ಸಮಾಜದೆದುರು ಪ್ರಜ್ವಲಿಸಿ ಸುದ್ದಿಯಾಗ್ತಾರೆ. ಅಂಥವರಿಂದ ಸತ್ತು ಹೋಗುವ ಮೊದಲು ಕಲಿಯಬೇಕಾದ್ದು ಸಾಕಷ್ಟು ಇವೆ!

-ಕೃಷ್ಣಮೋಹನ ತಲೆಂಗಳ (28.11.2024)

No comments: