ಬಲ್ಲಿರೇನಯ್ಯ ಯಕ್ಷಕೂಟ ವಾಟ್ಸಪ್ ಬಳಗಕ್ಕೆ ದಶಕ ಪೂರ್ಣ! Ballirenayya WhatsApp Group


ಹೌದು... ನೀವಿರುವ ಈ ಬಲ್ಲಿರೇನಯ್ಯ ಯಕ್ಷಕೂಟ ವಾಟ್ಸಪ್‌ ಬಳಗ ಶುರುವಾಗಿ ಇಂದಿಗೆ (2014 ನ.7ರಂದು ರಚನೆ) 10 ವರ್ಷಗಳು ಪೂರ್ಣವಾಗಿವೆ. ಸದ್ಯ ಗ್ರೂಪಿನಲ್ಲಿ 325ಕ್ಕೂ ಅಧಿಕ ಸದಸ್ಯರಿದ್ದಾರೆ. ಈ ಹತ್ತು ವರ್ಷಗಳಲ್ಲಿ ಯಕ್ಷಗಾನದ ತಲುಪುವಿಕೆ, ಮೇಳಗಳು, ಕಲಾವಿದರು, ಪ್ರೇಕ್ಷಕರ ಅಭಿರುಚಿ, ನೇರಪ್ರಸಾರದ ವಿಸ್ತಾರ, ಮೊಬೈಲ್ ತಂತ್ರಜ್ಞಾನ, ವೇಗದ ಅಂತರ್ಜಾಲ ಸಂಪರ್ಕ ಇವೆಲ್ಲವೂ ಭಯಂಕರ ಬದಲಾಗಿವೆ. ಹಾಗಾಗಿ ಈ ಗ್ರೂಪು ಕಟ್ಟಿದ ಹೊತ್ತಿಗೂ ದಶಕದ ಬಳಿಕ ಈಗಿನ ಸನ್ನಿವೇಶಕ್ಕೂ ತುಂಬ ಬದಲಾವಣೆಗಳನ್ನು ಕಾಣಬಹುದು.





ನಾನೊಬ್ಬ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ವ್ಯಕ್ತಿ (ಕಾರ್ಯಕ್ಷೇತ್ರ ಮಂಗಳೂರು). 2014 ವಾಟ್ಸಪ್‌ ಮೊಬೈಲುಗಳಲ್ಲಿ ಜನಪ್ರಿಯವಾಗುತ್ತಿದ್ದ ಸಂದರ್ಭ. ರಾತ್ರಿ ಡ್ಯೂಟಿ ಮುಗಿಸಿ ಆಟಕ್ಕೆ ಹೋಗುವಾಗ ಸಮಾನಮನಸ್ಕ ಸಹೋದ್ಯೋಗಿ ಮಿತ್ರರಲ್ಲಿ ‘ಇವತ್ತು ಆಟಕ್ಕೆ ಬರ್ತೀರ’ ಅಂತ ಮೆಸೇಜು ಮಾಡಿ ಕೇಳವ ಅಭ್ಯಾಸ ಇತ್ತು. (ಬಹುಶಃ ಅಂತಹ ನಾಲ್ಕೈದು ಮಂದಿ ಪತ್ರಕರ್ತರ ಮಿತ್ರರು ಇದ್ದರು). ಇವರಿಗೆಲ್ಲ ಪ್ರತ್ಯೇಕ ಪ್ರತ್ಯೇಕ ಎಸ್‌ಎಂಎಸ್‌ ಮಾಡಿ ಇವತ್ತು ಆಟಕ್ಕೆ ಬರ್ತೀರ ಅಂತ ಕೇಳುವ ಬದಲು ಹೊಸದಾಗಿ ಬಂದ ವಾಟ್ಸಪ್‌ ಪ್ರಯೋಜನ ಪಡೆದರೆ ಹೇಗೆ ಎಂಬ ಕ್ಷುಲ್ಲಕ ಕಾರಣದಿಂದ ಕಟ್ಟಿದ ಗ್ರೂಪು ‘ಬಲ್ಲಿರೇನಯ್ಯ’. ಗ್ರೂಪು ಕಟ್ಟಿದ ದಿನ ಬಹುಶಃ ನಾಲ್ಕೈದು ಮಂದಿ ಸದಸ್ಯರಿದ್ದರು (ಎಲ್ಲರೂ ಪತ್ರಕರ್ತ ಮಿತ್ರರು). ನಂತರ ಈ ಗ್ರೂಪಿನಲ್ಲಿ ಇವತ್ತು ಆಟ ಎಲ್ಲಿ, ಆಟಕ್ಕೆ ದಾರಿ ಎಲ್ಲಿ, ಯಾರೆಲ್ಲ ಬರ್ತೀರಿ ಎಂಬಿತ್ಯಾದಿ ಪುಟ್ಟ ಪುಟ್ಟ ಸಂಗತಿಗಳೇ ಚರ್ಚೆಗಳಾಗ್ತಾ ಇದ್ದವು.





ಆದರೆ ಈ ಗ್ರೂಪು ಶುರುವಾದಾಗ ಬೆರಳೆಣಿಕೆಯ ಯಕ್ಷಗಾನ ಗ್ರೂಪು ಚಾಲ್ತಿಯಲ್ಲಿತ್ತು. ಡಾ.ಪದ್ಮನಾಭ ಕಾಮತ್, ಅಕ್ಷಯಕೃಷ್ಣ ಮತ್ತಿತರರು ಸಕ್ರಿಯರಾಗಿದ್ದ ಯಕ್ಷಮಿತ್ರರು ವಾಟ್ಸಪ್ ಬಳಗ ಬಲ್ಲಿರೇನಯ್ಯಕ್ಕಿಂತಲೂ ಮೊದಲು ಅಸ್ತಿತ್ವದಲ್ಲಿತ್ತು. ನಂತರದ ದಿನಗಳಲ್ಲಿ ಮೇಳಕ್ಕೊಂದು, ಭಾಗವತರಿಗೊಂದು, ಊರಿಗೊಂದರ ಹಾಗೆ ಯಕ್ಷಗಾನ ಗ್ರೂಪುಗಳು ಹುಟ್ಟಲು ಶುರುವಾದವು. ಮಾತ್ರವಲ್ಲ ಯೂಟ್ಯೂಬ್ ಲೈವ್, ಕೇಬಲ್ ಚಾನೆಲ್‌ ಲೈವ್, ಮೇಳಗಳ ಪ್ರತ್ಯೇಕ ಫೇಸ್ಬುಕ್ಕು, ವಾಟ್ಸಪ್ ಗ್ರೂಪುಗಳೆಲ್ಲ ಶುರುವಾಗ್ತಾ ಬಂದ ಹಾಗೆ ಯಕ್ಷಗಾನ ವಾಟ್ಸಪ್ ಗ್ರೂಪುಗಳ ಮಹತ್ವ ಕುಂದ ತೊಡಗಿತು. ಸಾಮಾಜಿಕ ಜಾಲತಾಣದ ವಿಪರೀತ ಒತ್ತಡ, ಅನಗತ್ಯ ಫಾರ್ವರ್ಡ್, ಸಿಕ್ಕಾಪಟ್ಟೆ ಗ್ರೂಪುಗಳ ದಟ್ಟಣೆ ಬಳಕೆದಾರರಿಗೆ ತಲೆನೋವಾಗಿ ಪರಿಣಿಸಿತು, ಪರಿಣಿಮಿಸುತ್ತಿದೆ ಕೂಡಾ. ಯಾರೂ ಯಾವುದನ್ನೂ ಮನಃಪೂರ್ತಿಯಾಗಿ ಗಮನಿಸುವ ಸ್ಥಿತಿಯಲ್ಲಿಲ್ಲ. ಬಲ್ಲಿರೇನಯ್ಯ ಕೂಡಾ ಇದಕ್ಕೆ ಹೊರತಾಗಿಲ್ಲ. ಇಂದು ವಾಟ್ಸಪ್ ಗ್ರೂಪನ್ನೇ ನಂಬಿ ಯಾರೂ ಯಕ್ಷಗಾನ ಮಾಹಿತಿ ಪಡೆಯುತ್ತಿರುವುದಲ್ಲ. ಆದರೆ ಯಕ್ಷಗಾನ ಸಂವಹನಕ್ಕೆ ನಮ್ಮ ಗ್ರೂಪು ಪೂರಕ ಆಗಿತ್ತು, ಇಂದಿಗೂ ಇದೆ ಎಂದಷ್ಟೇ ಹೇಳಬಹುದು.



ಈ ಗ್ರೂಪನ್ನು ವಿಸ್ತರಿಸಿ ಸಂಘವಾಗಿಸುವುದು, ಗ್ರೂಪಿನ ಮೂಲಕ ಬಯಲಾಟ ಆಡಿಸುವುದು, ಗ್ರೂಪಿನ ಮೂಲಕ ಸಮಾಜಸೇವೆ ಮಾಡುವುದು ಮತ್ತಿತರ ಯಾವುದೇ ಉದ್ದೇಶ ಗ್ರೂಪಿಗೆ ಇಲ್ಲ. ಯಕ್ಷಗಾನದ ಮಾಹಿತಿ ಪ್ರಸಾರ, ಯಕ್ಷಗಾನ ಕುರಿತು ನಿಖರ ಸುದ್ದಿಗಳ ಪ್ರಕಟಣೆ, ಯಕ್ಷಗಾನ ಆಡಿಯೋ, ವಿಡಿಯೋ, ಫೋಟೋ ಹಂಚಿಕೆ... ಕಲಾವಿದರ ವಿವರ, ಪ್ರಸಂಗದ ವಿವರ ಎಂಬಿತ್ಯಾದಿ ಮಾಹಿತಿ ಪ್ರಸಾರಕ್ಕಷ್ಟೇ ಬಲ್ಲಿರೇನಯ್ಯ ಯಕ್ಷಕೂಟ ಸೀಮಿತ. ಯಾವುದೇ ಮಹತ್ವಾಕಾಂಕ್ಷೆಗಳನ್ನು ಇರಿಸಿ ಇದನ್ನು ಶುರು ಮಾಡಿದ್ದಲ್ಲ, ಈ ಗ್ರೂಪನ್ನು ಇನ್ನೇನನ್ನೋ ಆಗಿ ಪರಿವರ್ತಿಸುವ ಉದ್ದೇಶ ಸದ್ಯಕ್ಕಂತೂ ಇಲ್ಲ...
ಗ್ರೂಪಿನಿಂದ ಇದರ ಸದಸ್ಯರಿಗೆ ಯಕ್ಷಗಾನ ಮಾಹಿತಿ ಸಿಕ್ಕಿದೆ, ಖಚಿತ ಪಡಿಸಿದ ನಿಖರ ಸುದ್ದಿಯೇ ನಿಮಗೆ ದೊರಕಿದೆ, ಕಲಾವಿದರ, ಪ್ರಸಂಗಗಳ, ಯಕ್ಷಗಾನ ನಡೆಯುವ ಜಾಗಗಳ ಪರಿಚಯ ಆಗಿದೆ ಅಂತ ಅನ್ನಿಸಿದರೆ ಅದುವ ನಮ್ಮ ಸಾರ್ಥಕತೆ.



ಆರಂಭದಿಂದಲೂ ಗ್ರೂಪಿಗೊಂದು ಶಿಸ್ತು ಇದೆ. ಇಲ್ಲಿ ಯಕ್ಷಗಾನ ಹೊರತುಪಡಿಸಿ ಇನ್ನೇನನ್ನೂ ಶೇರ್ ಮಾಡಲು ಕಡ್ಡಾಯವಾಗಿ ಅವಕಾಶ ಇಲ್ಲ. ಈ ಗ್ರೂಪು ಯಾವುದೇ ಕಲಾವಿದರ, ಮೇಳಗಳ, ತಿಟ್ಟುಗಳ ಪರ ಅಥವಾ ವಿರೋಧವಾಗಿಲ್ಲ. ಯಾರೋ ಒಬ್ಬರು ಕಲಾವಿದರನ್ನು, ಮೇಳವನ್ನು ಪ್ರಮೋಟ್ ಮಾಡಲೂ ಈ ಗ್ರೂಪು ಇರುವುದಲ್ಲ. ತಮಗಿಷ್ಟ ಬಂದ ಕಲಾವಿದರು, ಮೇಳಗಳ ಬಗ್ಗೆ ಮಾಹಿತಿ ಹಂಚಲು ಎಲ್ಲರೂ ಸ್ವತಂತ್ರರು. ಆದರೆ, ಯಾರದ್ದೂ ವೈಯಕ್ತಿಕ ತೇಜೋವಧೆಗೆ ಅವಕಾಶ ಇಲ್ಲ. ಹಾಗಾಗಿ ಎಲ್ಲೋ ಒಂದೆರಡು ಬಾರಿ ಬಿಟ್ಟರೆ ಇನ್ಯಾವತ್ತೂ ಗ್ರೂಪನ್ನು ‘ಅಡ್ಮಿನ್ ಓನ್ಲಿ’ ಮಾಡುವ, ಯಾರನ್ನೋ ಗ್ರೂಪಿನಿಂದ ರಿಮೂವ್ ಮಾಡುವ ಅಥವಾ ಗದರಿ ಎಚ್ಚರಿಸುವಂತ ಸಂದರ್ಭ ಈ ಹತ್ತು ವರ್ಷಗಳಲ್ಲಿ ಬರಲಿಲ್ಲ (ಒಂದೆರಡು ಸಲ ಸಣ್ಣ ಮಟ್ಟಿನಲ್ಲಿ ಬಂದಿದೆ) ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಪ್ರತಿ ಸದಸ್ಯನಿಗೂ ತಾನಿರುವ ಗ್ರೂಪಿನ ಶಿಸ್ತು ಪಾಲಿಸಬೇಕು ಎಂಬ ಪ್ರಜ್ಞೆ ಇರುವುದೇ ಇಷ್ಟು ಸುಲಲಿತವಾಗಿ ಗ್ರೂಪು ನಡೆಯಲು ಕಾರಣ.
ನಾನು ಬಲ್ಲಿರೇನಯ್ಯ ಹೊರತಾಗಿ ವೈಯಕ್ತಿಕವಾಗಿ ಅನೇಕ ವಾಟ್ಸಪ್ ಗ್ರೂಪುಗಳನ್ನು ಶುರು ಮಾಡಿದ್ದೇನೆ, ನಡೆಸಿದ್ದೇನೆ, ಭ್ರಮನಿರಸನಗೊಂಡಿದ್ದೇನೆ, ಕೆಲವು ಗ್ರೂಪುಗಳಿಂದ ಹೊರ ಬಂದಿದ್ದೇನೆ. ಆದರೆ ಯಾವತ್ತೂ ಬಲ್ಲಿರೇನಯ್ಯ ಗ್ರೂಪು ಮಾತ್ರ ಒಂದು ಹೊರೆ ಅಂತಾಗಲಿ, ಒಂದು ಹೆಚ್ಚಿನ ಭಾರ ಅಂತಾಗಲೀ ಅನ್ನಿಸಲೇ ಇಲ್ಲ... ಹಾಗಾಗಲು ನೀವು ಪ್ರತಿಯೊಬ್ಬರೂ ಕಾರಣಕರ್ತರು.



ಗ್ರೂಪು ಆರಂಭಿಸುವುದು ಸಾಧನೆ ಅಲ್ಲ, ಅದಕ್ಕೆ ನೂರಾರು ಜನರನ್ನು ಸೇರಿಸುವುದೂ ಸಾಧನೆ ಅಲ್ಲ. ಅದು ಹೇಗೆ ನಡೆಯುತ್ತದೆ, ಸದಸ್ಯರು ಹೇಗೆ ಸ್ಪಂದಿಸುತ್ತಾರೆ ಎಂಬುದೇ ಮುಖ್ಯ. ಸಾವಿರಗಟ್ಟಲೆ ವಾಟ್ಸಪ್ ಗ್ರೂಪುಗಳ ಅತೀ ಭಯಂಕರ ಸಂವಹನದ ದಾಳಿಯಿಂದ ಜನ ಮಾನಸಿಕವಾಗಿ ಜರ್ಝರಿತರಾಗಿರುವ ಈ ದಿನಗಳಲ್ಲಿ ಬಲ್ಲಿರೇನಯ್ಯ ಎಂಬ ನಮ್ಮ ಈ ಗ್ರೂಪು ಹತ್ತು ವರ್ಷಗಳನ್ನು ಸಕ್ರಿಯ ಸದಸ್ಯರ ಸಹಿತ ಪೂರೈಸಿದೆ ಎಂಬುದು ಈ ಗ್ರೂಪಿನ ಅಡ್ಮಿನ್ ಆಗಿ ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.


ಈ ಗ್ರೂಪಿನಲ್ಲಿ ಬೆರಳೆಣಿಕೆಯ ಕಲಾವಿದರಿದ್ದಾರೆ, ಭಾಗವತರಿದ್ದಾರೆ, ಪತ್ರಕರ್ತರಿದ್ದಾರೆ, ಟೆಕ್ಕಿಗಳಿದ್ದಾರೆ, ಕೃಷಿಕರಿದ್ದಾರೆ, ಗೃಹಣಿಯರಿದ್ದಾರೆ,. ಖಾಸಗಿ ಸಂಸ್ಥೆ ಉದ್ಯೋಗಿಗಳಿದ್ದಾರೆ, ಯಕ್ಷಗಾನ ಗುರುಗಳಿದ್ದಾರೆ, ವೈದ್ಯರಿದ್ದಾರೆ.... ಹೀಗೆ ಅಂತಿಮವಾಗಿ ಯಕ್ಷಗಾನವನ್ನು ಪ್ರೀತಿಸುವ ಎಲ್ಲ ವರ್ಗದವರೂ ಇಲ್ಲಿದ್ದಾರೆ. (ಎಲ್ಲ ವರ್ಗದವರನ್ನು ಗುರುತಿಸಲು ನನಗೆ ಸಾಧ್ಯವಾಗುತ್ತಿಲ್ಲ, ವೈಯಕ್ತಿಕವಾಗಿ ಎಲ್ಲರ ಪರಿಚಯ ಇಲ್ಲ)


ಯಕ್ಷಗಾನದ ಬಗ್ಗೆ ಸ್ವಲ್ಪ ಮಾತ್ರ ತಿಳಿದುಕೊಂಡು ಇನ್ನಷ್ಟು ತಿಳಿಯುವ ಉದ್ದೇಶದಿಂದ ಗ್ರೂಪಿಗೆ ಸೇರಿ ಇಲ್ಲಿ ನನಗೆ ಸ್ವಲ್ಪ ಸಂಗತಿ ಕಲಿಯಲು ಸಿಕ್ಕಿತು ಅಂತ ವೈಯಕ್ತಿಕವಾಗಿ ತಿಳಿಸಿದವರಿದ್ದಾರೆ. ಸ್ವತಃ ನನಗೆ ಈ ಗ್ರೂಪಿನ ಮೂಲಕ ಪರಿಚಯವಾದ ನನ್ನಂಥ ‘ಯಕ್ಷಗಾನದ ಮರ್ಲರ’ ಗ್ರೂಪಿನಿಂದ ಯಕ್ಷಗಾನದ ಬಗ್ಗೆ ನನಗೆ ತಿಳಿಯದೇ ಇದ್ದ ಸಾಕಷ್ಟು ಸಂಗತಿಗಳು ಸ್ವತಃ ಅರಿತುಕೊಳ್ಳಲು ಸಾಧ್ಯವಾಗಿದೆ.
ಅಕ್ಷಯಕೃಷ್ಣರ ಯಕ್ಷಗಾನ ಆಡಿಯೋಗಳಿರಬಹುದು, ನಾಗರಾಜ ಶೆಟ್ಟಿ ಕೊಡೆತ್ತೂರು ಅವರ ವೀಡಿಯೋಗಳಿರಬಹುದು, ಸುದರ್ಶನ ನಂದಳಿಕೆಯವರಂತಹ ಚಂದದ ವೀಡಿಯೋ ಶೇರ್ ಮಾಡುವವರಿರಬಹುದು (ಅನೇಕರಿದ್ದಾರೆ, ಹೆಸರು ಉಲ್ಲೇಖಿಸಿದರೆ ಬರಹ ದೀರ್ಘವಾದೀತು), ಎಂಎಲ್ ಭಟ್ ಅವರಂತೆ ಅಮೂಲ್ಯ ಹಳೆ ಕ್ಯಾಸೆಟ್ಟುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ಗ್ರೂಪಲ್ಲಿ ಶೇರ್ ಮಾಡುವ ಮೂಲಕ ಗ್ರೂಪನ್ನು ಶ್ರೀಮಂತಗೊಳಿಸಿದ ಅನೇಕರು ಈ ಹತ್ತು ವರ್ಷಗಳಲ್ಲಿ ಬಲ್ಲಿರೇನಯ್ಯ ಗ್ರೂಪನ್ನು ಒಂದು ಅರ್ಥಪೂರ್ಣ ಬಳಗವಾಗಿಸಿದ್ದಾರೆ. ಅನೇಕ ಸಲ ಯಕ್ಷಗಾನಕ್ಕೆ ಸಂಬಂಧಿಸಿ ಅನೇಕ ನಿಖರ ಸುದ್ದಿಗಳನ್ನು ನಾವೇ ಮೊದಲು ಪ್ರಕಟಿಸಿ ಅದು ಇತರ ಗ್ರೂಪುಗಳಲ್ಲಿ ಶೇರ್ ಆದ ಉದಾರಹಣೆಗಳಿವೆ. (ನಾವೇ ಮೊದಲು ಎಂಬ ಯಾವುದೇ ವ್ಯಾವಹಾರಿಕ ಬೆಳವಣಿಗೆ ಇಲ್ಲಿಲ್ಲ, ಆದರೆ ನಿಖರ ಸುದ್ದಿ ನಿಮಗೆ ತಿಳಿಸಿದ ಖುಷಿ ನಮಗಿದೆ).

ಈ ಮೊದಲೇ ಹೇಳಿದ ಹಾಗೆ, ವಾಟ್ಸಪ್‌ ಗ್ರೂಪಿನ ಲೋಕದಲ್ಲಿ ಬಲ್ಲಿರೇನಯ್ಯ ಎಂಬುದು ಮೊದಲನೆಯದ್ದೂ ಅಲ್ಲ, ಕೊನೆಯದ್ದೂ ಅಲ್ಲ. ಎಲ್ಲರ ಹಾಗೆ ನಮ್ಮದೂ ಒಂದು ಗ್ರೂಪು. ಗ್ರೂಪಿನ ಮೂಲಕ ಹೇಳಿಕೊಳ್ಳುವಂತಹ ಲೋಕವಿಖ್ಯಾತ ಸಾಧನೆಯನ್ನೇನೂ ನಾವು ಮಾಡಿಲ್ಲ. ಗ್ರೂಪು ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ, ಯಾರಿಗೂ ಹೊರೆಯಾಗದ ಹಾಗೆ, ಗ್ರೂಪಿನ ಶೀರ್ಷಿಕೆಗೆ ಅನುಗುಣವಾಗಿಯೇ ನಡೆಯಬೇಕು ಎಂಬ ಆಶಯವನ್ನು ಈ ಹತ್ತು ವರ್ಷಗಳಲ್ಲಿ ಪಾಲಿಸಲು ಸಾಧ್ಯವಾಗಿದೆ ಎಂದು ಎದೆ ತಟ್ಟಿ ಹೇಳಬಹುದು. ಇನ್ನೂ ನೀವಾಗಿ, ಅಥವಾ ನಾನಾಗಿ ಅಥವಾ ನಿಮ್ಮ ಬಂಧು ಮಿತ್ರರ ಮೂಲಕ ಈ ಗ್ರೂಪಿನ ಭಾಗಗಳಾಗಿರುವ ನಿಮಗೆ ಈ ಗ್ರೂಪಿನಿಂದ ಏನು ಪ್ರಯೋಜನ ಆಗಿದೆ, ನಿಮಗಿಲ್ಲಿ ಏನು ಇಷ್ಟವಾಯಿತು, ಏನು ಇಷ್ಟವಾಗಿಲ್ಲ ಎಂಬುದನ್ನು ಮುಕ್ತವಾಗಿ ಹಂಚಿಕೊಳ್ಳಬಹುದು (ನಿಮಗೆ ಆಸಕ್ತಿ ಇದ್ದರೆ, ಅಥವಾ ಸಮಯಾವಕಾಶ ಇದ್ದರೆ). ಇದರಿಂದ ಈ ಗ್ರೂಪು ಎಷ್ಟರ ಮಟ್ಟಿಗೆ ನಿಮ್ಮನ್ನು ತಲುಪಿದೆ, ತಟ್ಟಿದೆ ಎಂಬುದನ್ನು ಸಂಚಾಲಕನಾಗಿ ಅರ್ಥ ಮಾಡಿಕೊಳ್ಳಲು ನನಗೂ ಸಾಧ್ಯವಾಗುತ್ತದೆ. ಇಷ್ಟು ಸಮಯದಿಂದ ಈ ಗ್ರೂಪಿನ ಭಾಗಗಳಾಗಿರುವ ನಿಮಗೆ ಪ್ರತಿಯೊಬ್ಬರಿಗೂ ಪ್ರೀತಿಪೂರ್ವಕ ಧನ್ಯವಾದಗಳು. ಮುಂದೆಯೂ ಗ್ರೂಪಿನ ಭಾಗಗಳಾಗಿರಿ ಎಂಬುದೇ ನನ್ನ ಮನವಿ.


-ಕೃಷ್ಣಮೋಹನ ತಲೆಂಗಳ , ಅಡ್ಮಿನ್, ಬಲ್ಲಿರೇನಯ್ಯ ಯಕ್ಷಕೂಟ, ವಾಟ್ಸಪ್ ಗ್ರೂಪು.


No comments: