ರಿಂಗ್ ರೋಡು ತಲುಪುವ ವರೆಗಿನ ಟ್ರಾಫಿಕ್ ಜಾಂ ಮತ್ತು ಸೋರುವ ತಾಳ್ಮೆಯ ಅಗ್ನಿಪರೀಕ್ಷೆ! I TRAFFIC JAM
ಕೆಲ ಸಮಯದ ಹಿಂದೆ
ಬೆಂಗಳೂರಿನಿಂದ ಒಂದು ಸೆಕೆಂಡ್ ಹ್ಯಾಂಡ್ ಕಾರು ಊರಿಗೆ ತರಬೇಕಿತ್ತು, ನಾನು ಮತ್ತು ಭಾವ
ಹೋದದ್ದು. ಹೂಡಿ ಕಡೆಯಿಂದ ನೆಲಮಂಗಲ ಭಾಗಕ್ಕೆ ಬಂದು ಮಂಗಳೂರಿಗೆ ನಮ್ಮ ಪಯಣ. ಕಾರು ತಕ್ಕೊಂಡು
ಮುಖ್ಯರಸ್ತೆಗೆ ಇಳಿದದ್ದೇ ತಡ. ಏನಾಗುತ್ತಿದೆ ಎಂದೇ ಅರ್ಥ ಆಗಲಿಲ್ಲ. ನಮಗಿಬ್ಬರಿಗೂ ಬೆಂಗಳೂರಿನಲ್ಲಿ
ಡ್ರೈವಿಂಗ್ ಅಭ್ಯಾಸ ಇಲ್ಲ. ಕಡಿಮೆ ಅಲ್ಲ, ಅಭ್ಯಾಸವೇ ಇಲ್ಲ. ಎಡ, ಬಲಗಳಿಂದ “ಒರೆಸಿಕೊಂಡು” ಹೋದ ಹಾಗೆ ವಾಹನ ಪ್ರವಾಹ.
ಸಿಕ್ಕಾಪಟ್ಟೆ ಟ್ರಾಫಿಕ್ಕು. ಜೊತೆ ಜೊತೆಗೆ ಟ್ರಾಫಿಕ್ ಜಾಂ. ಮ್ಯಾಪ್ ಹಾಕಿಕೊಂಡು ಪ್ರಯಾಣ. ಆ
ಮ್ಯಾಪು ಆಗಾಗ ಸ್ಟ್ರಕ್ ಆಗುವುದು ಅಥವಾ ಕೊನೆ ಕ್ಷಣದಲ್ಲಿ ಸೂಚನೆ ಕೊಡುವುದು. ಇನ್ನೇನು ಲೆಪ್ಟ್
ತಿರುಗಬೇಕು ಅನ್ನುವಷ್ಟರಲ್ಲಿ “ಟರ್ನ್ ರೈಟ್” ಹೇಳುವುದು. ಸಡನ್ ರೈಟಿಗೆ
ತಕ್ಕೊಳ್ತಿಕಾಗ್ತದ? ವಾಹನ ಪ್ರವಾಹ, ನಡು
ನಡುವೆ ನುಗ್ಗುವ ಬೈಕು, ಆಟೋ ಎಲ್ಲಿ ಗಾಡಿಗೆ ಸ್ಕ್ರಾಚ್ ಆಗ್ತದೋ, ಡಭ್ ಆಂತ ಗುದ್ದುತ್ತದೋ ಅಂತ
ಭಯ. ಈ ನಡುವೆ ಗಾಡಿ ಸೈಡಿಗೆ ಹಾಕಿ ಊಟ ಮಾಡುವಷ್ಟರಲ್ಲಿ ಸಾಕು ಸಾಕಾಯ್ತು.
ಈ ನಡುವೆ ಒಂದು ಕಡೆ
ಮ್ಯಾಪು ತಪ್ಪು ಡೈರೆಕ್ಷನ್ ಸೂಚಿಸಿ, ಯೂಟರ್ನ್ ತಿರುಗಿಸಿ ಇಡೀ ದಾರಿಯೇ ತಪ್ಪಿತು. ಆಮೆ
ವೇಗದಲ್ಲಿ ಗಾಡಿ ಹೋಗ್ತಾ ಇತ್ತು. ಸಂಜೆ 4 ಗಂಟೆ ಕಳೆದರೆ ಮತ್ತು ಪೀಕ್ ಅವರಿನಲ್ಲಿ ಆ
ಬ್ರಹ್ಮಾಂಡದಿಂದ ಆಚೆ ಬರುವುದು ಸಾಧ್ಯವೇ ಇರಲಿಲ್ಲ. ಕೊನೆಗೂ ಹೇಗ್ಹೇಗೋ ಆ ಟ್ರಾಫಿಕ್ಕಿನಲ್ಲಿ
ಒದ್ದಾಡಿ, ದೇವರ ದಯೆಯಿಂದ ಯಾವುದೇ ವಾಹನಕ್ಕೆ “ಒರಸದೆ” ಜಾಲಹಳ್ಳಿ ಕ್ರಾಸ್ ಬಳಿ ನೆಲಮಂಗಲಕ್ಕೆ
ಸಂಪರ್ಕ ಕಲ್ಪಿಸುವ ಹೈವೇ ಸಿಕ್ಕಿತು... (ಹೇಗೆ ತಲುಪಿದ್ದು ಅಂತ ಖಂಡಿತಾ ಅರ್ಥ ಆಗಲಿಲ್ಲ).
ಅಲ್ಲಿಂದ ನಂತರ ನೆಲಮಂಗಲ,ಸ ಮತ್ತೆ ಎಡಕ್ಕೆ ತಿರುಗಿ ಹಾಸನದ ಮೂಲಕ ಬಂದು ಊರು ತಲುಪುವುದಕ್ಕೆ
ಕಷ್ಟ ಆಗಲಿಲ್ಲ... ದೊಡ್ಡ ನಿಟ್ಟುಸಿರು ಹೊರಟಿತು ಸುರಕ್ಷಿತವಾಗಿ ಬೆಂಗಳೂರಿನಿಂದ ಆಚೆ ವಾಹನ
ಸಹಿತ ಬರಲು ಸಾಧ್ಯವಾದದ್ದಕ್ಕೆ...!!!
....
ಒಮ್ಮೆ ಯೋಚಿಸಿ ನಿಮ್ಮ
ನಗರದಲ್ಲೂ ಪೀಕ್ ಅವರಿನಲ್ಲಿ, ಯಾವುದೋ ಮೆರವಣಿಗೆ, ಉತ್ಸವ, ದುರಂತಗಳ ಸಂದರ್ಭ ನಗರದುದ್ದಕ್ಕೂ
ಟ್ರಾಫಿಕ್ ಜಾಂ, ಇರುವೆಯಂತೆ ವಾಹನ ಸಾಲುಗಳಲ್ಲಿ ಸಿಕ್ಕಾಕ್ಕೊಂಡಿದ್ದೀರಿ. ಎರಡು ಚಕ್ರ
ವಾಹನವನ್ನಾದರೂ ಸಂದಿ ಗೊಂದಿಗಳಲ್ಲಿ ಹೊಗ್ಗಿಸಿ ಆಚೆ ಬರಬಹುದು. ನಾಲ್ಕು ಚಕ್ರದಲ್ಲಿ ಹೋದವನ ಗತಿ
ದೇವರಿಗೇ ಪ್ರೀತಿ. ಗಂಟೆ ಗಟ್ಟಲೆ ಟ್ರಾಫಿಕ್ ಜಾಂ. ಎಂತ ಮಾಡುವ ಹಾಗೂ ಇಲ್ಲ. ಹೊಗೆ, ಧೂಳು,
ಕೆಟ್ಟ ಹಾರನ್ನು, ಬೈಗಳು, ಇನ್ ಟೈಂ ತಲುಪಲು ಸಾಧ್ಯವಾಗದ ಅಸಹನೆ, ಅಸಹಾಯಕತೆ ಮತ್ತು ವಿಪರೀತ
ಸಿಟ್ಟು...
ಒಮ್ಮೆ ನನಗೆ ರಿಂಗ್ ರೋಡ್
ಲಿಂಕಿ ಸಿಕ್ಕಿದರೆ ಸಾಕಪ್ಪ, ಒಮ್ಮೆ ಡಬಲ್ ರೋಡ್ ಸಿಕ್ಕಿದರೆ ಸಾಕು, ಒಮ್ಮೆ ಹೈವೇ ಸಿಕ್ಕಿದರೆ
ಸಾಕಪ್ಪ ಅಂತ ಪ್ರಾರ್ಥಿಸುತ್ತಾ ಇರ್ತೇವೆ. ಒಮ್ಮೆ ಮುಖ್ಯ ರಸ್ತೆ ಸಿಕ್ಕಿದರೆ, ಒಮ್ಮೆ ನಗರದಿಂದ
ಆಚೆ ಬಂದು ಪಂಪುವೆಲ್ಲೋ, ಕೊಟ್ಟಾರವೋ, ನಂತೂರೋ ಸಿಕ್ಕಿದರೆ ಮತ್ತೆ ಸಿಕ್ಕಿದ ಹೈವೇಯಲ್ಲಿ ಹಾಗಿ
ಗಮ್ಯ ತಲುಪಿಯೇನು ಎಂಬ ವಿಶ್ವಾಸ...
ಯಾಕೆ ಹೇಳಿ...
ಸಾಧಾರಣವಾಗಿ ಹೈವೇಯಲ್ಲಿ
ಡಬಲ್ ರೋಡ್ ಇರ್ತದೆ. ಒಂದಲ್ಲದಿದ್ದರೆ ಇನ್ನೊಂದರಲ್ಲಾದರೂ ಹೋಗಬಹುದು. ಅಲ್ಲಿ ಸಿಗ್ನಲ್ಲುಗಳ ಕಾಟ
ಕಮ್ಮಿ, ಬ್ಯಾರಿಕೇಡುಗಳು ಇದ್ದರೂ ಗಂಟೆ ಗಟ್ಟಲೆ ಸಂಚಾರ ಬ್ಲಾಕ್ ಮಾಡಬಾರದು ಎಂಬುದು ನಿಯಮ.
ಹೈವೇಯಲ್ಲಿ ದಾರಿ ನಿಖರ ಮತ್ತು ಪ್ರಖರ, ಆಗಾಗ ತಿರುವು, ಸರ್ಕಲ್ಲುಗಳ ಗೊಂದಲ ಇರುವುದಿಲ್ಲ. ಸಿಗ್ನಲ್
ರಹಿತವಾಗಿ, ಟ್ರಾಫಿಕ್ ಜಾಂ ರಗಳೆ ಇಲ್ಲದೆ ಹೋಗಬಹುದು ಎಂಬ ನಂಬಿಕೆ (ಇದಕ್ಕೂ ಅಪವಾದ ಇದೆ, ಚರ್ಚೆ
ವ್ಯರ್ಥ). ಹಾಗಾಗಿಯೇ ನಗರದೊಳಗಿನ ಟ್ರಾಫಿಕ್ ವರ್ತುಲದೊಳಗೆ ಸಿಕ್ಕಾಕಿಕೊಂಡವ ಅದರಾಚೆಗಿನ
ಹೈವೇಗೆ, ರಿಂಗ್ ರೋಡು ತಲುಪಲಿಕ್ಕೆ ಹಾತೊರೆಯುತ್ತಾನೆ. ಅಲ್ಲಿಗೆ ತಲುಪುವ ವರೆಗೆ ಮಾತ್ರ ನನಗೆ
ಕಷ್ಟ. ಮತ್ತೆ ಸಂಚಾರ ಸರಾಗವಾಗುತ್ತದೆಂಬ ನಂಬಿಕೆ, ವಿಶ್ವಾಸ... ಹೈವೇ ಸಿಕ್ಕಾಗ ಒಂದು
ನಿಟ್ಟುಸಿರು...
ಈಗ ಮತ್ತೊಮ್ಮೆ ಬರಹ
ಓದಿ...
ಈ ಟ್ರಾಫಿಕ್ ಜಾಂನ್ನು
ನಿಮ್ಮ ಬದುಕಿನ ಕಷ್ಟಗಳಿಗೆ, ಸವಾಲುಗಳಿಗೆ, ಅಸಹಾಯಕವಾಗಿ ಬದುಕು ಸ್ಟ್ರಕ್ ಆದಲ್ಲಿಗೆ ಹೋಲಿಸಿ
ನೋಡಿ. ಕಷ್ಟ ಬಂದಾಗ, ಸಂಧಿಗ್ಧತೆ ಎದುರಾದಾಗ, ಮುಂದೆ ದಾರಿ ಸಿಕ್ಕಾಪಟ್ಟೆ ಜಾಂ ಆಗಿದೆ, ಬದುಕು
ನಿಂತಲ್ಲೇ ನಿಂತಿದೆ, ನಾನು ಚಲಿಸುತ್ತಲೇ ಎಲ್ಲ ಎಂಬ ತೀವ್ರ ಹತಾಶೆ ಕಾಡಿದಾಗಲೂ ಅದರಾಚೆಗೆ ಒಂದು
ಹೈವೇ ಇರ್ತದೆ ಎಂಬ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರ್ತದೆ. ಖಂಡಿತಾ ಇರ್ತದೆ. ಆ ಹೈವೇ ತಲುಪುವ
ವರೆಗಿನ ಸಹನೆ ಪರೀಕ್ಷೆ, ಅಗ್ನಿ ಪರೀಕ್ಷೆಯ ಹಂತದಲ್ಲಿ ಇಡೀ ಬದುಕು ಬ್ಲಾಂಕ್ ಆದ ಹಾಗೆ, ವಾಹನ ಶಾಶ್ವತವಾಗಿ
ಟ್ರಾಫಿಕ್ ಜಾಂನಲ್ಲಿ ಸಿಕ್ಕಾಕೊಂಡಾಗೆ ಭಾಸವಾಗುತ್ತದೆ. ಆದರೂ ಒಂದೊಮ್ಮೆ ಟ್ರಾಫಿಕ್ ಜಾಂ ಬೇಧಿಸಿ,
ಅಥವಾ ಅದು ಇಳಿದ ಬಳಿಕ ನಾವು ಒಂದು ಜಂಕ್ಷನ್ ಮೂಲಕ ಆಚೆ ಬಂದರೆ ಮತ್ತೊಮ್ಮೆ ನಮಗೆ ಬದುಕಿನ ಹಾದಿ
ಸ್ವಲ್ಪ ಮಟ್ಟಿಗಾದರೂ ನೇರವಾಗುತ್ತದೆ,ವೇಗವಾಗುತ್ತದೆ ಎಂಬ ಆಶಾವಾದ ಇರ್ತದೆ, ಇರಲೇಬೇಕಾಗುತ್ತದೆ.
ಎಷ್ಟೊತ್ತಿಗೆ ತಲುಪುತ್ತೇವೋ ಗೊತ್ತಿಲ್ಲ, ಆದರೆ ಹೊರಟವ ತಲುಪಲೇಬೇಕು ಅದು, ಶೀಘ್ರವೇ ಆಗಲಿ ಅಂತ
ಮನಸು ಹಾತೊರೆಯುತ್ತಿರುತ್ತದೆ..
ಹಾಗಾದರೆ ರಿಂಗ್ ರೋಡ್
ಸಿಕ್ಕಲು, ಹೈವೇ ಬೇಗ ತಲುಪಲು ಏನು ಮಾಡಬೇಕು?
1) ಟ್ರಾಫಿಕ್ ಜಾಂನಲ್ಲಿ
ಸಿಕ್ಕಾಕೊಂಡಾಗಿದೆ. ಅವಸರ ಮಾಡಿ ಯರ್ರಾಬಿರ್ರಿ ಓಡಿಸಿದರೆ ನಮ್ಮ ವಾಹನ ಮಾತ್ರ ಅಲ್ಲ, ಇತರರ
ವಾಹನಗಳಿಗೂ ಹಾನಿ ಆಗ್ತದೆ, ವಿನಾಕಾರಣ ಗಾಡಿ ಶೇಪೌಟ್ ಆಗ್ತದೆ
2) ನಾವು ತಾಳ್ಮೆ ಕಳೆದುಕೊಂಡು ಲೈನು
ತಪ್ಪಿಸಿ ಕಂಡ ಕಂಡಲ್ಲಿ ವಾಹನ ನುಗ್ಗಿಸಿದರೆ ಇಡೀ ವ್ಯವಸ್ಥೆ ಮತ್ತಷ್ಟು ದಟ್ಟಣೆಗೆ ಕಾರಣ ಆಗ್ತದೆ
ಮಾತ್ರವಲ್ಲ, ನಾವು ಹೈವೇ ತಲುಪುವಲ್ಲ ಸ್ವತಃ ವಿಳಂಬ ಕಾಣಬೇಕಾಗ್ತದೆ.
3) ಅಯ್ಯೋ ಮುಂದೆ ಹೋಗಲಾಗ್ತಾ ಇಲ್ಲ ಎಂಬ
ಅಸಹನೆಯಲ್ಲಿ ಅಳಿದುಳಿದ ತಾಳ್ಮೆಯನ್ನೂ ಕಳೆದುಕೊಂಡರೆ ಮತ್ತೆ ಹೈವೇ ತನಕ ಚಾಲನೆ ಮಾಡಬೇಕಾದ
ಉತ್ಸಾಹ, ಆಸಕ್ತಿ ಸಂಪೂರ್ಣ ನಶಿಸಿಹೋಗುತ್ತದೆ. ಉತ್ಸಾಹವನ್ನೇ ಕಳೆದುಕೊಂಡರೆ ಹೈವೇ ತಲುಪುವುದು
ಹೇಗೆ. ಮುಂದೆ ಸಾಗುವುದು ಹೇಗೆ, ಅಲ್ವ?
4) ಸ್ವಲ್ಪ ತಾಳ್ಮೆಯಿಂದ ಫಸ್ಟ್ ಗೇರಿನಲ್ಲೇ
ಸರತಿ ಸಾಲಿನಲ್ಲೇ ಹೋದರೆ, ಲಭ್ಯವಿರುವ ಮುಂದಿನ ತಿರುವಿನಲ್ಲಿ ಸರಿಯಾದ ಶಾರ್ಟ್ ಕಟ್ ಕಂಡು
ಹುಡುಕಿ ಸಾಗಿದರೆ, ಅಕ್ಕಪಕ್ಕದ ವಾಹನಗಳಿಗೆ ನಮ್ಮ ವಾಹನ ಸವರದಂತೆ ಜಾಗ್ರತೆ ಮಾಡಿದರೆ,
ಸಹನೆಯನ್ನು ಜಾಗ್ರತೆಯಿಂದ ಉಳಿಸಿದರೆ ಖಂಡಿತಾ ಸ್ವಲ್ಪ ತಡವಾಗಿಯಾದರೂ ರಿಂಗ್ ರೋಡು ಸಿಕ್ಕೇ
ಸಿಗ್ತದೆ.
5) ಬದುಕಿನಲ್ಲಿ ಇದು ನಾನು ಕಂಡ ಮೊದಲ
ಟ್ರಾಫಿಕ್ ಜಾಂ ಅಲ್ಲ, ಮುಂದೆಯೂ ಕಾಣಲೇಬೇಕಾಗ್ತದೆ ಅಂತ ನಮಗೆ ಗೊತ್ತಿರ್ತದೆ. ಆದರೂ ಆ ಕ್ಷಣಕ್ಕೆ
ತಾಳ್ಮೆ, ಉತ್ಸಾಹ ಕಳೆದುಕೊಂಡರೆ ವ್ಯವಸ್ಥೆಗೆ ನಷ್ಟವಲ್ಲ, ನಷ್ಟ ನಮಗೇ... ಎಲ್ಲಿ ತಲುಪಬೇಕೋ
ಅಲ್ಲಿಗೆ ತಲುಪುವುದಿಲ್ಲ. ಅಸಹನೆಯಿಂದ ದಾರಿಯನ್ನು ಮತ್ತಷ್ಟು ತಪ್ಪಿಸಿಕೊಂಡು, ಮತ್ತಷ್ಟು ಬಳಸು
ದಾರಿಗಳಲ್ಲಿ ಎಲ್ಲಿಗೋ ನಿರ್ಜನ ಪ್ರದೇಶ ತಲುಪಿ ಇಡೀ ಪ್ರಯಾಣವನ್ನು ಸ್ವತಃ
ಹಾಳುಗೆಡಹಿಕೊಳ್ಳುತ್ತೇವೆ... ಇದರಿಂದ ಏನಾದರೂ ಪ್ರಯೋಜನ ಆಗ್ತದ....?
ಇದನ್ನೇ ಬದುಕಿನ ಸಂಧಿಗ್ಧ
ಸ್ಥಿತಿಗಳಲ್ಲ ಅನ್ವಯಿಸಿ ನೋಡಿದರೆ... ಒಂದು ಬ್ಲಾಕ್, ಒಂದು ದಟ್ಟಣೆ, ಜಾಂನಲ್ಲಿ ಸಿಲುಕಿದ್ದರೂ
ಅದನ್ನು ತಾಳ್ಮೆಯಿಂದ ದಾಟಲು ಸಾಧ್ಯವಾದರೆ ಮುಂದೊಂದು ಸರಾಗ ದಾರಿ ಸಿಕ್ಕೀತು... ಅಲ್ಲಿ ನಾನು
ಸರಾಗವಾಗಿ ಚಾಲನೆ ಮಾಡಬಲ್ಲೆ ಎಂಬ ನಿರೀಕ್ಷೆ ಮತ್ತು ಆಶಾವಾದ ಇದ್ದರೆ ಮಾತ್ರ ನಮ್ಮ ಡಿಎಲ್ ಗೆ
ಒಂದು ಅರ್ಥ ಇರ್ತದೆ... ಇಲ್ಲವಾದರೆ ನಾವೇ ನಮ್ಮ ಪರವಾನಗಿಯನ್ನು ಕೊಂದು ಹಾಕಿದ ಫಲ ಅಷ್ಟೇ...
ಏನಂತೀರಿ?
-ಕೃಷ್ಣಮೋಹನ ತಲೆಂಗಳ
(14.10.2024)
No comments:
Post a Comment