ತಿರ್ಗಾಸ್ ದಾಟಿ ಬರುವ ಬಸ್ಸುಗಳು ಮತ್ತು ತರ್ಕಕ್ಕೆ ನಿಲುಕದ ಮನಸ್ಸುಗಳು...!
ನಾನು ಸಣ್ಣವನಿದ್ದಾಗ
ಓಡಾಟದ ಸಾರಿಗೆ ಅಂದರೆ ಬಸ್ಸು ಮಾತ್ರ. ಆ ಬಸ್ ಏರಲು ಕಾಯುತ್ತಿದ್ದ ಸ್ಟಾಪಿನ ಹೆಸರು ಮಿತ್ತಕೋಡಿ.
ಒಂದು ಅತ್ತಿಯ ಮರ ಬಿಟ್ಟರೆ ಅಲ್ಲಿ ಬೇರೆ ನೆರಳೇ ಇಲ್ಲ. ಅಂಗಡಿ, ಕಟ್ಟೆ, ಕೂರಲು ಪುಟ್ಟ ಕಲ್ಲೂ
ಇಲ್ಲದ ನಿರ್ಜನ ಪ್ರದೇಶ. ಈಗ ದೊಡ್ ಪೆಟ್ರೋಲ್ ಬಂಕ್ ಸಹಿತ ಕಾಂಪ್ಲೆಕ್ಸ್ ಆಗಿರುವುದು ಬೇರೆ ವಿಚಾರ.
ಅಲ್ಲಿ ನಾವು ಕಾಯುತ್ತಾ ಕೂತಾದ ಬಸ್ ಬರುವುದು ಸುಮಾರು 50 ಮೀಟರ್ ಆಚೆಯ ಭಾರಿ ತಿರುವಿನ
(ತಿರ್ಗಾಸ್) ಏರು ಹಾದಿಯಿಂದ. ನಿಶ್ಯಬ್ಧ ವಾತಾವರಣದಲ್ಲಿ ಆ ಚಡಾವು ಏರಿಕೊಂಡು ಬಸ್ ಬರುವ ಏರು
ಶೃತಿಯ ಸದ್ದು ಸುಮಾರು 1 ನಿಮಿಷ ಮೊದಲೇ ಕೇಳಲು ಸುರುವಾಗುತ್ತಿತ್ತು. ಬಸ್ ಬರುತ್ತಿದೆ ಅಂತ
ಸದ್ದಿನಿಂದಲೇ ಗೊತ್ತಾದಾಗ ನಾವು ಬಸ್ ಏರಲು ಮಾನಸಿಕವಾಗಿ ಸಿದ್ಧರಾಗಿರುತ್ತಿದ್ದೆವು. ಬಸ್ ರಶ್
ಆಗಿದೆಯಾ, ಖಾಲಿ ಆಗಿದೆಯಾ? ಅಂತ ಆ ತಿರುವು ದಾಟಿದ ಕೂಡಲೇ
ಗೊತ್ತಾಗುತ್ತಿತ್ತು. ನಂತರ ಬಸ್ ಹತ್ತಿ ಪ್ರಯಾಣ ಮುಂದುವರಿಯುತ್ತಿತ್ತು.
ತಮಾಷೆ ಆಂದರೆ ಎಷ್ಟೋ ವರ್ಷ
ನಾವು ಆ ತಿರುವಿನ ಆಚೆ ಏನಿದೆ ಅಂತ ನೋಡುವ ಪ್ರಯತ್ನವೇ ಮಾಡಿರಲಿಲ್ಲ. ಆ ತಿರುವಿನಾಚೆ ಯಾವ
ಊರಿದೆ, ಅಲ್ಲಿಂದ ಮುಂದೆ ರಸ್ತೆ ನೇರವಾಗಿದೆಯಾ, ಅಲ್ಲಿ ಗಿಡಮರಗಳಿವೆಯಾ, ಬಸ್ ಎಲ್ಲಿಂದ
ಹೊರಡುತ್ತದೆ, ಅಲ್ಲಿಗೆ ತಲುಪಲು ಎಷ್ಟು ಹೊತ್ತು ಬೇಕು...? ಮತ್ತಿತರ ಸಂಗತಿಗಳ ಬಗ್ಗೆ ನಮಗೆ
ಗೊಡವೆಯೇ ಇರಲಿಲ್ಲ. ವಾಸ್ತವವಾಗಿ ಆ ತಿರುವಿನಾಚೆಗಿನ ಊರಲ್ಲಿ (ಮೇಲ್ಕಾರ್, ಬಿಸಿರೋಡ್ ಕಡೆ)
ನಮಗೆ ಹೆಚ್ಚಿನ ವ್ಯವಹಾರವಾಗಲಿ, ಬಂಧುಗಳಾಗಳಲೀ ಇಲ್ಲವಾದ ಕಾರಣ ವೈಸ್ ವರ್ಸ ಹೋಗುವ ಪ್ರಮೇಯ ತೀರಾ
ಅಪರೂಪ. ವಾಪಸ್ ಬರುವಾಗಲೂ ಅಷ್ಟೇ ತಿರುವಿನಿಂದ ಈಚೆಗೇ ಬಸ್ ಇಳಿದಲ್ಲಿಗೆ ನಮ್ಮ ಪ್ರಯಾಣ ಮುಗಿಯುತ್ತಿತ್ತು.
ನಮ್ಮನ್ನು ಇಳಿಸಿದ ಬಸ್ ತಿರುವು ದಾಟಿ ಹೋಗುವಾಗ ಅದರ ಬ್ರೆಕ್ ಲೈಟ್ ನ ಛಾಯೆ ಕಂಡು ಅದರ ಧ್ವನಿ
ಕ್ಷೀಣಿಸಿದಲ್ಲಿದೆ, ಹೊಗೆ ತೆಳುವಾಗಿ ಗಾಳಿಯಲ್ಲಿ ಕರಗಿ ಹೋಗಿ, ಧೂಳು ಮಾಯವಾಗುತ್ತಾ ಬಂದಲ್ಲಿಗೆ...
ನಮಗೂ, ಅದಕ್ಕೂ ಸಂಬಂಧ ಅಂದಿಗೆ ಮುಗಿಯಿತು ಎಂಬ ಹಾಗೆ.
ಈಗಂತೂ ದಿನಾ ಅದೇ ತಿರುವು
ದಾಟಿ ಮುಂದೆ ಹೋಗಬೇಕಾದ ಪ್ರಮೇಯ ಇದೆ. ಆಗಲೂ ಅಪರೂಪಕ್ಕೊಮ್ಮೆ ಆ ತಿರುವು ದಾಟಿ ಆಚೆ ಹೋದಾಗ ಏನೋ
ಹೊಸ ಲೋಕಕ್ಕೆ ಹೋದ ಹಾಗೆ. ಯಾಕೆ ಅಂದರೆ, ನಮ್ಮ ಅಗತ್ಯಗಳು ಮುಗಿದ ಮೇಲೆ ಅಥವಾ ಅನಿವಾರ್ಯತೆಗಳು
ದಾಟಿ ಬಂದ ಮೇಲೆ ತಿರುವಿನಾಚೆಗಿನ ಜಗತ್ತಿನ ಬಗ್ಗೆ ನಮ್ಮ ಯೋಚನೆ ಮುಂದುವರಿಯುವುದಿಲ್ಲ.
ರಾತ್ರಿಯಿಡೀ ಏಳೆಂಟು ಗಂಟೆ ಪ್ರಯಾಣಿಸಿ ಬಂದ ಬಸ್ಸಿನಿಂದ ಯಾಂತ್ರಿಕವಾಗಿ ಇಳಿದು ಬರುವಾಗ
ಸುರಕ್ಷಿತವಾಗಿ ತಲುಪಿಸಿದ ಡ್ರೈವರಿನ ಮುಖವನ್ನೂ ನೋಡದೆ “ದುಡ್ಡು ಕೊಟ್ಟಿಲ್ವ?: ಎಂಬಂತೆ ಧಾವಿಸುವ ಹಾಗೆ.
ಆ ತಿರುವಿನಾಚೆಗೆ
ಮತ್ತಷ್ಟು ತಿರುವುಗಳಿರಬಹುದು. ಅಲ್ಲಿಂದ ಮುಂದೆ ಚಂದದ ಪ್ರಕೃತಿ ಇರಬಹುದು. ಅಲ್ಲಿಂದಾಚೆಗೆ ಬಸ್
ವೇಗವಾಗಿ ಹೋಗಬಹುದು. ಮತ್ತಷ್ಟು ಗದ್ದೆಗಳು, ಚಂದದ ಮನೆಗಳಿರಬಹುದು. ಪ್ರತಿ ಸ್ಟಾಪಿನಲ್ಲೂ
ನಮ್ಮಂತೆ ಬಸ್ಸಿಗೆ ಕಾಯುತ್ತಿರುವ ಮನಸುಗಳಿರಬಹುದು. ಮತ್ತೂ ಅರ್ಧ ಗಂಟೆ ಆ ಬಸ್ ಪ್ರಯಾಣಿಸಿ
ಕೊನೆಯ ಸ್ಟಾಪು ಬಿಸಿರೋಡ್ ತಲುಪಬಹುದು ಅಂತೆಲ್ಲ ನಮಗೆ ಯೋಚನೆಯೇ ಆಗ ಬರುತ್ತಿರಲಿಲ್ಲ. ಅಸಲಿಗೆ ಆ
ತಿರುವು ದಾಟಿ ಆಚೆ ಹೋಗುವುದು ಒಂಥರಾ “ಅನಗತ್ಯ” ಎಂಬ ಭಾವವಿತ್ತು ಬಾಲ್ಯದಲ್ಲಿ. ಆ ಛಾಯೆ
ಇವತ್ತಿಗೂ ಇದೆ. ತಿರುವು ದಾಟಿದ ಕೂಡಲೇ ಯಾವುದೋ ಅನಪೇಕ್ಷಿತ ಜಾಗಕ್ಕೆ ಹೋದ ಹಾಗೆ. ಸೀಮೆ
ಉಲ್ಲಂಘಿಸಿದ ಹಾಗೆ!
ಅಜ್ಜನ ಮನೆಗೆ ಹೋಗುವಾಗ
ಪೆರ್ಲ ಸಮೀಪ ಅಡ್ಕಸ್ಥಳದಿಂದ ವಿಟ್ಲಕ್ಕೆ ಬರಬೇಕು. ಆಗ ಕೆಬಿಟಿ, ಅನುರಾಧಾ, ಕೃಷ್ಣ ಬಸ್ ಬಿಟ್ಟರೆ
ಬೆರಳೆಣಿಕೆ ಸ್ಟೇಟು ಬಸ್ಸು ಮಾತ್ರ ಇದ್ದದ್ದು ಬದಿಯಡ್ಕ-ವಿಟ್ಲ
ಮಾರ್ಗದಲ್ಲಿ. ಅದೂ ಫುಲ್ ರಶ್. ಹಾಗಾಗಿ ಸರ್ವೀಸ್ ಜೀಪೇ ನಮಗೆ ಓಡಾಡಲು ಆಸರೆ. ಆ ಜೀಪು ಅಡ್ಕಸ್ಥಳ
ಬಸ್ ಸ್ಟ್ಯಾಂಡ್ ಹಿಂದೆ ಅದೃಶ್ಯವಾಗಿ ನಿಂತಿರುತ್ತಿತ್ತು. ಒಂದು ಬಸ್ಸಿಳಿದ ಮೇಲೆ ಜನ ಸೇರಿದ
ಹಾಗೆ ಜೀಪು ಢರ್ ಅಂತ ಸ್ಟಾರ್ಟಾಗಿ ರಸ್ತೆ ಪಕ್ಕ ಬರುತ್ತಿತ್ತು. ಬಸ್ ಸ್ಟ್ಯಾಂಡ್ ಹಿಂದಿನಿಂದ
ಬರುತ್ತಿದ್ದ ಆ ಜೀಪು ತುಂಬ ಅಚ್ಚರಿ. ಎಲ್ಲಿಂದಲೋ ದೇವಲೋಕದಿಂದ ಇಳಿದು ದಿಢೀರ್ ಬರುತ್ತದೆಯೋ ಎಂಬ
ಹಾಗೆ... ಅಲ್ಲೂ ಹಾಗೆ, ಅದು ಬರುವ ಜಾಗ, ಬಂದ ರೀತಿ, ಮುಂದೆಲ್ಲಿಗೆ ಹೋಗುತ್ತದೆ ಎಂಬ ಬಗ್ಗೆ
ನಮ್ಮ ಚಿಂತನೆ ಇರಲಿಲ್ಲ....
ನಾವು ಅನಪೇಕ್ಷಿತ, ಅನಗತ್ಯ
ಅಂದುಕೊಳ್ಳುವ ತಿರುವುಗಳ ಆಚೆಗೆ ತುಂಬ ಸಂಗತಿಗಳು ಇರುತ್ತವೆ. ನಮ್ಮ ವ್ಯಾಪ್ತಿಯಿಂದ ನಾವು
ಬೇಕೆಂದೇ ಅವುಗಳನ್ನು ಹೊರಗಿಟ್ಟಿರುತ್ತೇವೆ. ನನ್ನ ಪ್ರಯಾಣ ಇಲ್ಲಿಂದ ಶುರು, ನನ್ನ ಪ್ರಯಾಣ
ಇಲ್ಲಿಗೇ ಕೊನೆ ಎಂಬ ಹಾಗೆ ಸೀಮೆ ವಿಧಿಸಿ ಎಲ್ಲವನ್ನೂ ಚೌಕಟ್ಟಿನೊಳಗೆ ತುರಿಕಿಸಿಡುವ ಧಾವಂತದಲ್ಲಿ
ನಾವು ತಿರುವಿನಾಚೆಗಿನ ದಾರಿಯನ್ನು, ಮನಸುಗಳನ್ನು ನೋಡುವ ಅವಕಾಶವನ್ನೇ ಕಳೆದುಕೊಂಡಿರುತ್ತೇವೆ. ಈ
ನಿರ್ಲಿಪ್ತತೆಯಲ್ಲಿ “ನನ್ನನ್ನು ಇಳಿಸಿದ ನಂತರವೂ ಬಸ್ ತಿರುವು
ದಾಟಿದ ಬಳಿಕ ನನ್ನಂತೆ ತುಂಬ ಮಂದಿಯನ್ನು ಹೊತ್ತು ಕೊಂಡು ಹೋಗುತ್ತದೆ”, “ಇಲ್ಲಿಯವರೆಗೆ ಬಸ್ ಚಲಾಯಿಸಿದ ಡ್ರೈವರು
ಇವತ್ತು ರಾತ್ರಿ ವರೆಗೂ ಇದೇ ರೀತಿ ಸಾವಧಾನದಿಂದ ಚಾಲನೆ ಮಾಡುತ್ತಾ ಇರಬೇಕಾಗುತ್ತದೆ”, “ನಾನು ಕೂತ ಸೀಟಿನಲ್ಲಿ ಇನ್ಯಾರೋ ಬಂದು
ಕೂರುತ್ತಾರೆ” ಎಂಬಿತ್ಯಾದಿ ಸಂಗತಿಗಳ
ಬಗ್ಗೆ ಯೋಚಿಸಲು ನಮಗೆ ಪುರುಸೊತ್ತೇ ಇರುವುದಿಲ್ಲ ಅಲ್ವ?
ದಾರಿ ಮಾತ್ರವಲ್ಲ,
ಮನಸುಗಳೂ ಹಾಗೆಯೇ... ಕಾಣುವುದಕ್ಕಿಂತಲೂ ಕಾಣದೇ ಇರುವ ಸಂಗತಿಗಳು ತುಂಬ ಇರುತ್ತವೆ. ತರ್ಕಕ್ಕೆ
ನಿಲುಕದ ವ್ಯಕ್ತಿತ್ವಗಳು ಕೂಡಾ ಹೀಗೆಯೇ... ದಿನಾ ಒಬ್ಬರನ್ನು ನೋಡುತ್ತಿರುತ್ತೇವೆ,
ಮಾತನಾಡುತ್ತಾ ಇರುತ್ತೇವೆ. ಆದರೆ, ಆ ತಿರುವಿನಾಚೆ ಅವರೇನು ಮಾಡುತ್ತಾರೋ, ಅವರ್ಯಾಕೆ
ಹಾಗಿದ್ದಾರೆ ಅಂತ ಅರ್ಥವೇ ಆಗುವುದಿಲ್ಲ. ಕತ್ತು ಎತ್ತಿ ನೋಡಿದರೂ ತಿರುವಿನ ಬರೆ ಅಡ್ಡವಾಗಿ
ಕಾಡುತ್ತದೆ. ಹಾಗಾಗಿ ನಮ್ಮೆದುರಿಗಿಲ್ಲದ ಹೊತ್ತಿನ ಅವರ ತುಮುಲಗಳು, ಕಷ್ಟಗಳು, ಸಾಧ್ಯತೆಗಳು
ಮತ್ತು ಪ್ರತಿಭೆಗಳು ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ನಮ್ಮ ಚಿಂತನೆಯ ಕ್ಯಾನ್ವಾಸಿನ ಅಂಚಿನಲ್ಲಿ
ನಮ್ಮ ದೃಷ್ಟಿಕೋನಕ್ಕೆ ಒಂದು ಸಾಂದರ್ಭಿಕ ಚೌಕಟ್ಟು ಎಲ್ಲವನ್ನೂ ಮರೆ ಮಾಚಿರುತ್ತದೆ...
ಕಾಣದ್ದನ್ನು ಕನಿಷ್ಠ ಒಮ್ಮೆಯಾದರೂ ಕಾಣಬೇಕು ಎಂಬ ಹಂಬಲ ಉದ್ದೀಪನ ಆಗದೇ ಇರುವುದು ಮತ್ತು
ತಿರುವಿನ ಈಚೆಗೇ ಉಳಿದು... “ಬಸ್ಸಿನ ಸದ್ದು ಕೇಳಲು
ಶುರುವಾದ ಹೊತ್ತಿನಿಂದಲೇ ಆ ಬಸ್ಸಿನ ಪ್ರಯಾಣ ಶುರುವಾಗಿದೆ” ಎಂಬ ನಮ್ಮ ಕೂಪ ಮಂಡೂಕ ಮಾದರಿಯ ಸೀಮಿತ
ಚಿಂತನೆಗಳು, ಸ್ವಲ್ಪ ಪ್ರಯತ್ನ ಪಟ್ಟು
ನಾಲ್ಕು ಹೆಜ್ಜೆ ಸಾಗಿ ತಿರುವಿನ ಆಚೆಗೆ ಇಣುಕಲು ಇರುವ ಸಹನೆ ಹಾಗೂ ಅವಕಾಶವನ್ನು ಯಾವತ್ತಿಗೂ
ಬಳಸದೇ ಇರುವುದು ಸಹ “ತಿರುವಿನಾಚೆಗಿನ ಲೋಕವನ್ನು ನಮಗೆ
ಕಾಣದಂತೆ ಕುರುಡಾಗಿಸುತ್ತದೆ”.... ಏನಂತೀರಿ...?
-ಕೃಷ್ಣಮೋಹನ ತಲೆಂಗಳ
(09.03.2026)

No comments:
Post a Comment