ಬರೆದಿಡದ ವಿಧಿ ನಡುವಿನ ಕಂಜಂಕ್ಷನ್ ಆಟೋ ಪ್ರಯಾಣ...! I AUTO

 



ಮಹಾನಗರದಲ್ಲಿ ಒಂದೇ ಥರ ರಸ್ತೆಗಳು. ರಸ್ತೆ ನಡುವೆ ನೀವು ಅಸಹಾಯಕರಾಗಿ ನಡೀತಾ ಇದ್ದೀರಿ. ಒಂದು ಅಡ್ರೆಸ್ ಹುಡುಕ್ಲಿಕೆ ರಸ್ತೆ ಸುತ್ತಿ ಸುತ್ತಿ ಸುಸ್ತಾಗಿದೆ. ಮೇಲೆ ಬಿಸಿಲು ಬೇರೆ, ಬೆವರ್ತಾ ಇದೆ, ಹೆಗಲಿನಲ್ಲಿ ಭಾರದ ಬ್ಯಾಗು... ಎಷ್ಟು ಸುತ್ತಿದರೂ ಮ್ಯಾಪು ಮತ್ತೆ ಮತ್ತೆ ಅದೇ ರಸ್ತೆಗೆ ಕರ್ಕೊಂಡು ಬರ್ತಾ ಇದೆ. ಯಾವ ಆಟೋದವನಿಗೆ ಕೈ ತೋರ್ಸಿದ್ರೂ, ನಿಲ್ಲಿಸ್ತಾ ಇಲ್ಲ, ಇಲ್ಲ ಸರ್, ಆ ಕಡೆ ಬರ್ಲಿಕೆ ಆಗುವುದಿಲ್ಲ ಅಂತ ನಿಷ್ಠುರವಾಗಿ ತಲೆ ಆಡಿಸಿ ಹೋಗ್ತಾರೆ... ಬಳಲಿ ಸುಸ್ತಾಗಿ, ಜೀವನದಲ್ಲಿ ಜಿಗುಪ್ಸೆ ಬಂದಿರುವ ನಿಮ್ಮ ಪಕ್ಕ ಸಡನ್ ಒಂದು ಆಟೋ ಬಂದು ಎಲ್ಲಿಗೋಗ್ಬೇಕು ಸಾರ್ ಅಂತ ಕೇಳಿದ್ರೆ. ಸತ್ಯ ಹೇಳಿ... ನಿಮಗೆ ದೇವರೇ ಬಂದ ಹಾಗೆ ಭಾಸವಾಗ್ಲಿಕಿಲ್ವ...?!

ಬ್ಯಾಗ್ ಆಟೋ ಒಳಗಿಟ್ಟು, ಸುಸ್ತಾದ ದೇಹವನ್ನು ಸೀಟಿನಲ್ಲಿ ಚಾಚಿ, ಅಡ್ರೆಸ್ ಚಾಲಕನ ಕೈಗಿತ್ತು ಸಂಪೂರ್ಣ ಭಾರ ಆತನ ಹೆಗಲಿಗೆ ಹಾಕಿ, ನಿರಾಳರಾಗಿ ಬಿಡಬಹುದಲ್ವ... ನಂತರ ಅವನ್ನು ಗಲ್ಲಿಗಲ್ಲಿಯಲ್ಲಿ ವೇಗವಾಗಿ ಹೋಗುವುದು, ಇನ್ನೇನು ಬಸ್ಸಿಗೆ ವರಸ್ತಾನೆ ಅಂದುಕೊಳ್ಳುವಷ್ಟರಲ್ಲಿ ರಪಕ್ಕ ತಿರುಗಿಸಿ ಚಾಕಚಕ್ಯತೆಯಲ್ಲಿ ಸಿಗ್ನಲ್ಲಿನ ಎದುರೇ ಸೇರಿಕೊಂಡು ರಪಕ್ಕ ಸಿಗ್ನಲ್ ದಾಟಿ, ರಾಂಗ್ ಸೈಡಿನಲ್ಲಿ ನುಗ್ಗಿಯಾದರೂ ನಿಮಗೆ ಬೇಕಾದ ಅಡ್ರೆಸ್ ಎದುರು ನಿಲ್ಲಿಸಿದಾಗ, ಬಾಡಿಗೆ ಎಷ್ಟಾದರೂ ಪರ್ವಾಗಿಲ್ಲ, ಯಾರೋ ಬಂದು ತಲುಪಿಸಿದರು ಅಂತ ಭಾಸವಾಗದೇ ಇದ್ದೀತ...?



ಬದುಕಿನ ಪ್ರತಿ ಪುಟವೂ ನಮ್ಮ ಪಾಲಿಗೆ ಪೂರ್ವನಿಗದಿತ ಅಲ್ಲ. ಇವತ್ತು ಯಾರ್ಯಾರು ಸಿಕ್ತಾರೆ, ಏನೇನಾಗ್ತದೆ ಎಂಬುದು ಖಂಡಿತಾ ನಮ್ಮ ಡೈರಿಯಲ್ಲಿ ಬರೆದಿಡಲ್ಪಿಟ್ಟಿರುವುದಿಲ್ಲ. ಹಾಗಿರುವಾಗ, ಎಲ್ಲೋ ದಾರಿ ತಪ್ಪಿದಾಗ, ಇನ್ನೆಲ್ಲೋ ಸ್ವಂತ ವಾಹನ ಕೈಕೊಟ್ಟಾಗ, ರಿಪೇರಿಗೆ ಹೋದಾಗ, ನಡೆಯಲು ಸುಸ್ತೋ ಸುಸ್ತು ಅಂತ ಅನ್ನಿಸಿದಾಗಲೆಲ್ಲ ದೇವರೇ ಕಳುಹಿಸಿದಂತೆ ಉದಾರವಾಗಿ, ಪರೋಪಕಾರಿಯಂತೆ ಸಿಕ್ಕುವ ಆಟೋಗಳು ನಡಿಗೆಯ ಭಾರ ಕಮ್ಮಿ ಮಾಡುವುದು ಸುಳ್ಳಲ್ಲ. ಮಾತ್ರವಲ್ಲ, ದಾರಿಯುದ್ದಕ್ಕೂ ನಮ್ಮ ಗೋಳಿಗೆ ಕಿವಿಯಾಗುವ, ಮುಂದಿನ ಮಾರ್ಗದ ಬಗ್ಗೆ ಮಾರ್ಗದರ್ಶನ ನೀಡುವ, ತನ್ನ ನಗರದ ಆಗುಹೋಗುಗಳ ಬಗ್ಗೆ ನಿರರ್ಗಳವಾಗಿ ವಿವರಿಸುವ, ನೋಡಬೇಕಾದ ಜಾಗಗಳ ಬಗ್ಗೆ ಸೂಚನೆ ನೀಡುವ, ನಮ್ಮ ಬ್ಯಾಗನ್ನು ತಾನೇ ಎತ್ತಿ ಆಚೆಗಿಡುವ ಸಹೃದಯಿ ಆಟೋ ಚಾಲಕರು ಸಾಕಷ್ಟು ಮಂದಿ ಇದ್ದೇ ಇರ್ತಾರೆ. ನೀವೂ ಇಂಥವರನ್ನು ನೋಡಿರ್ತೀರಿ...




 

ಒಮ್ಮೆ ಅಡ್ರೆಸ್ ಕೊಟ್ಟು ಅಥವಾ ಮ್ಯಾಪ್ ಹಾಕಿ ಕೊಟ್ಟು ಆಟೋದಲ್ಲಿ ಕೂತರೆ ಸಾಕು, ಆ ನಡುವಿನ ನಿಮಿಷಗಳು  ನಿಮಗೊಂದು ಯೋಚಿಸಲು, ವಿಶ್ರಮಿಸಲು, ಸುತ್ತಮುತ್ತ ಗಮನಿಸಲು           ಒಂದು ಏಕಾಂತ ಕಟ್ಟಿಕೊಡುತ್ತದೆ.... ಓರೆ ಕೋರೆಯಾಗಿ ರಣವೇಗದಲ್ಲಿ ಚಲಿಸುವ ಆಟೋ ಸಡನ್ ಅಡ್ಡ ರಸ್ತೆಗೆ ನುಗ್ಗುವುದು, ತಾಗಿಯೂ ತಾಗದಂತೆ ಅಂಕುಡೊಂಕಾಗಿ ನುಗ್ಗಿಕೊಂಡು ತೆರಳುವುದು, ಎಂಥದ್ದೇ ಟ್ರಾಫಿಕ್ ಜಾಂ ಇದ್ದರೂ ಜಾಗ ಮಾಡಿಕೊಂಡಾದರೂ ಮುಂದೆ ಮುಂದೆ ಹೋಗುವುದೆಲ್ಲ ನೋಡಲಿಕ್ಕೂ ಚಂದ...




ಮಳೆ ಬಂದರೆ ಪಕ್ಕದ ಟಾರ್ಪಲಿನ್ ಎಳೆಯಲ್ಪಟ್ಟು ಆಟೋ ಒಳಗೆ ಅಂಧಕಾರ ಇರುತ್ತದೆ ಎಂಬುದು ಬಿಟ್ಟರೆ, ಆಟೋದಲ್ಲಿ ಹೋಗುವುದೂ ಸಹ ಒಂದು ಖುಷಿ. ಅದ್ರಲ್ಲೂ ಹಾಡು ಬರ್ತದೆ, ರೇಡಿಯೋ ಹಾಕ್ತಾರೆ, ಓದಲು ಪೇಪರು, ಮ್ಯಾಗಝೀನ್ ಇಡುವ ಚಾಲಕರೂ ಇರ್ತಾರೆ, ಈಗ ಗೂಗಲ್ ಪೇ ಕೂಡ ಮಾಡಬಹುದು. ಆಟೋದಲ್ಲಿ ಹೋಗುವ ಅಷ್ಟೂ ಹೊತ್ತು ಬೇಕಾದರೆ ಫೋನಿನಲ್ಲಿ ಮಾತನಾಡಬಹುದು. ಡ್ರೈವಿಂಗ್ ಟೆನ್ಶನ್ ಇಲ್ಲ, ಪಾರ್ಕಿಂಗ್ ಎಲ್ಲಿ ಮಾಡಬೇಕು ಎಂಬ ಆತಂಕ ಬೇಡ, ಸಪೂರ ಮಾರ್ಗದಲ್ಲಿ ಗಾಡಿ ಕೊಂಡೋಗುವ ಬಗ್ಗೆ ಹೆದರಿಕೆಯೂ ಬೇಡ... ಇಷ್ಟೆಲ್ಲ ಇರುವಾಗ ಆಟೋ ಅಪದ್ಬಾಂಧವನಂತೆ ಕಾಣಿಸಿದರೆ ತಪ್ಪಿಲ್ಲ...



 

ಆಟೋ ಚಾಲಕರು ಸಹೃದಯಿಗಳಾಗಿದ್ದರೆ ನಮ್ಮ ಅದೆಷ್ಟೋ ಟೆನ್ಶನ್ನುಗಳು ಕಮ್ಮಿ ಆಗ್ತವೆ. ಹೋಗಬೇಕಾದ ಜಾಗದ ಬಗ್ಗೆ ತಿಳಿಸುವುದು, ನಮ್ಮ ಕಷ್ಟುಸುಖಗಳಿಗೆ ಕಿವಿಯಾಗುವುದು (ಎಲ್ಲರೂ ಸುಭಗರೇ ಇರ್ತಾರೆ ಅಂತ ಅರ್ಥ ಅಲ್ಲ), ತನಗೆ ಗೊತ್ತಿರುವ ಸಾಮಾನ್ಯ ಜ್ಞಾನದ ಸಂಗತಿ ಹಂಚಿಕೊಳ್ಳುವುದು ಇವೆಲ್ಲ ಪ್ರಯಾಣದ ಆಯಾಸ ಕಡಿಮೆ ಮಾಡ್ತದೆ...



ನಾವು ಹೋದ ಆಟೋದ ಚಾಲಕನ ಹೆಸರು ಕೇಳುವುದಿಲ್ಲ, ನಂಬರ್ ಬರ್ದಿಟ್ಟುಕೊಳ್ಳುವುದಿಲ್ಲ, ಅದರ ಫೋಟೋ ತೆಗೆಯುವುದಿಲ್ಲ, ಇಳಿದು ಆಚೆ ಹೋಗುವಾಗ ಒಂದು ಥ್ಯಾಂಕ್ಸ್ ಹೇಳುವುದಿಲ್ಲ (ಬಾಡಿಗೆ ಕೊಟ್ಟಿರ್ತೇವಲ್ಲ, ಅದರ ಅಗತ್ಯ ಇರುವುದಿಲ್ಲ), ನಾವು ಅಷ್ಟೊತ್ತು ಸುರಕ್ಷಿತವಾಗಿ ಕುಳಿತಿದ್ದ ಆಟೋ ನಾವಿಳಿದ ಬಳಿಕ ನಿಷ್ಠುರವಾಗಿ ಆಚೆ ಹೋಗುವಾಗ ಏನನ್ನೂ ಕಳೆದುಕೊಂಡ ಹಾಗೆ ನಮಗೆ ಭಾಗವಾಗುವುದಿಲ್ಲ. ಆದರೂ ಆ ಹೊತ್ತಿಗೆ, ಆ ದಾರಿಗೆ ಆ ಆಟೋ ನಮ್ಮದು ಎಂಬ ಹಾಗೆ... ಮತ್ತೆ ಅದೆಲ್ಲಿಗೋ, ನಾವೆಲ್ಲಿಗೋ...

 



ಆದರೂ ಒಂದಷ್ಟು ಹೊತ್ತು ನಮ್ಮೊಟ್ಟಿಗಿದ್ದು, ಅಥವಾ ನಾವು ಅದರೊಳಗಿದ್ದು, ಹಾರಿಕೊಂಡು, ಕುಣಿದುಕೊಂಡು, ಹೊಂಡ ತಪ್ಪಿಸಿಕೊಂಡು, ಅಷ್ಟಿಷ್ಟು ಅಕ್ಕಪಕ್ಕದ ವಾಹನಗಳಿಗೆ ಒರೆಸಿಕೊಂಡು ಹೋಗುವಾಗಿನ ಥ್ರಿಲ್, ಭಯ, ಖುಷಿ, ಹೊತ್ತಿಗೆ ಸರಿಯಾಗಿ ಸ್ಥಳಕ್ಕೆ ಎತ್ತುವ ಸಮಾಧಾನ ಇದನ್ನೆಲ್ಲ ನಮ್ಮದೇ ಆದ ವಾಹನದಲ್ಲಿ ಪಡೆಯಲು ಸಾಧ್ಯವಿಲ್ಲ...

 



ಬರೆದಿಡದೇ ಇದ್ದ ಭವಿಷ್ಯದ ದಾರಿಯಲ್ಲಿ ಸಿಕ್ಕುವ ಸಂಗಾತಿ, ಇಷ್ಟೇ ಹೊತ್ತು ನಿನ್ನೊಟ್ಟಿಗೆ ಅದು ಎಂಬಂಥ ವಿಧಿಯ ಲಿಖಿತ ಭಾಗವೋ ಎಂಬ ಹಾಗೆ ಹೀಗೆ ಬಂದು ಹಾಗೆ ಹೋಗುವ ಎಷ್ಟೋ ಆಟೋ ಪ್ರಯಾಣಗಳು ಕೂಡಾ ಬದುಕಿನ ಚುಕ್ಕಿಗಳನ್ನು ಜೋಡಿಸುತ್ತಾ ಸಾಗುವಲ್ಲಿ ದೊಡ್ಡ ಯೋಗದಾನ ನೀಡಿರ್ತವೆ ಅಲ್ವ? ಆಟೋದವರ ಜೊತೆ ಕೆಟ್ಟ ಅನುಭವಗಳೂ ನಿಮಗೆ ಆಗಿರಬಹುದು. ಅದು ವ್ಯಕ್ತಿಗಳನ್ನು ಅವಲಂಬಿಸಿರ್ತದೆ ಹೊರತು, ವ್ಯವಸ್ಥೆಯನ್ನಲ್ಲ... ಬೊಗಸೆಯಲ್ಲಿ ಸೋರಿ ಹೋಗುವ ನೆನಪುಗಳ ರಾಶಿಯ ನಡುವೆ ಆಟೋದಲ್ಲಿ ಹೋದದ್ದು ಕೂಡಾ ಒಂದು ಸಣ್ಣ ಸಣ್ಣ ಖುಷಿಯೇ ಹೌದು... ಏನಂತೀರಿ?

-ಕೃಷ್ಣಮೋಹನ ತಲೆಂಗಳ (07.10.2025)

No comments:

Popular Posts