ಸಾವನ್ನೂ ನಿಷ್ಠುರವಾಗಿ ಕಾಡಿದ ಬಾಳೇಪುಣಿ... ಅವರು ಹತ್ತರೊಳಗೆ ಮತ್ತೊಬ್ಬ ಪತ್ರಕರ್ತ ಆಗಿರಲಿಲ್ಲ...! BALEPUNI

 




ಬಾಳೇಪುಣಿ ಭಯಂಕರ ನಿಷ್ಠುರ ಜನ... ಕಣ್ಣಿಗೈ ಕೈಹಾಕಿದ್ಹಾಗೆ ಮಾತಾಡ್ತಾರೆ... ಎದುರಿಗೆ ಯಾರಿದ್ದಾರೆ, ಯಾರಿಲ್ಲ ಅಂತ ಕ್ಯಾರೇ ಇಲ್ಲ... ನೇರ ಹೇಳುದೇ... ಯಬಾ...ಮೊನ್ನೆ ಗಣರಾಜ್ಯೋತ್ಸವದ ದಿನ ಭಾನುವಾರ (26.01.2025) ನಿಧರಾದ ಹಿರಿಯ ವರದಿಗಾರ (ಹೊಸದಿಗಂತದ ವಿಶೇಷ ಬಾತ್ಮೀದಾರ) ಗುರುವಪ್ಪ ಬಾಳೇಪುಣಿ (61) ಕುರಿತು ಸಾಮಾನ್ಯೀಕರಿಸಿ ಕೇಳಲ್ಪಡುವ ಮಾತಿದು. ಫೀಲ್ಡಿನಲ್ಲಿ, ಊರಿನಲ್ಲಿ ಸಹಿತ ಹೇಳ್ತಾರೆ. ಕೆಲವರು ಅವರಿಲ್ಲದಾಗ, ಕೆಲವರು ಗುಟ್ಟಿನಲ್ಲಿ ಹೇಳ್ತಾರೆ...!

ಆದರೆ...

ಈ ಚಿತ್ರಣದಾಚೆಗೆ ಬಾಳೇಪುಣಿ ಅವರಿಗೊಂದು ವ್ಯಕ್ತಿತ್ವ ಇತ್ತು. ಪ್ರತಿ ಜೀವನವೂ ಒಂದೊಂದು ಪುಟ ತೆರೆಯದ ಪುಸ್ತಕ ಎನ್ನುವ ಹಾಗೆ, ಬಾಳೇಪುಣಿ ಇಷ್ಟಕ್ಕೆ ಸೀಮಿತರಾಗಿರಲಿಲ್ಲ, ಅದು ಕೆಲವರಿಗೆ ಕಾಣಿಸಿದೆ, ಕೆಲವರಿಗೆ ಕಾಣಿಸಲಿಲ್ಲ... ಹಾಗೊಂದು ಬದುಕನ್ನು ಅವರು ದಾಟಿ ಬಂದಿದ್ದಾರೆ ಎಂಬ ಕಾರಣಕ್ಕೇ ಬಾಳೇಪುಣಿ ಸಾವು ಗಾಢವಾಗಿ ಕಾಡುತ್ತಲೇ ಇದೆ...

ಮತ್ತೊಂದು ವಿಪರ್ಯಾಸ ಎಂತ ಗೊತ್ತುಂಟ...?

ನನಗೆ ಈ ಬಾಳು ಸಾಕು, ದೇವರು ಕರ್ಕೊಂಡೋದ್ರೆ ಸಾಕು. ನಾನು ಸತ್ತ ಮೇಲೆ ನಿಮಗೆಲ್ಲ ಅರ್ಥವಾದೀತು... ಹೀಗೆಲ್ಲ ಇಮೋಶನಲ್ ಬ್ಲಾಕ್ ಮೇಲ್ ರೀತಿ ನಾವು ಮಾತನಾಡ್ತಾ ಇರ್ತೇವೆ... ಆದರೆ ಸಾಕೆಂದಾಗ ಬದುಕು ಮುಗಿಸಿಕೊಳ್ಳಲಿಕ್ಕೆ, ಬೇಕೆಂದಾಗ ಜೀವ ಉಳಿಸಿಕೊಳ್ಳಲಿಕ್ಕೆ ನಮಗೆ ಹಕ್ಕಿಲ್ಲ, ಆ ಶಕ್ತಿಯೂ ದೇವರು ಕೊಟ್ಟಿಲ್ಲ... ಹಾಗಿರುವಾಗ ಸುಮಾರು ಒಂದೂ ವರೆ ವರ್ಷದ ಅನಾರೋಗ್ಯದ ಹೋರಾಟದಲ್ಲಿ ಬಾಳೇಪುಣಿ ಸಾವನ್ನೂ ತುಂಬ ಕಾಡಿದ್ದಾರೆ. ನಿಷ್ಠುರವಾಗಿ ಸಾವನ್ನು ಕಾಡಿ... ಕಾಡಿ... ಒಮ್ಮೆ ಬದುಕನ್ನು ಗೆದ್ದು ಮತ್ತೆ ಮೌನವಾಗಿದ್ದಾರೆ... ಅವರ ಕೆಲವು ಆಪ್ತರಿಗೆ, ಮನೆಯವರಿಗೆ, ಮಾಧ್ಯಮ ರಂಗದ ಅವರ ಒಡನಾಡಿಗಳಿಗೆಲ್ಲ ಈ ವಿಚಾರ ಗೊತ್ತು... ಬಾಕಿ ಉಳಿದವರ ಪಾಲಿಗೆ ಬಾಳೇಪುಣಿ ನಿಷ್ಠುರ ವ್ಯಕ್ತಿ...!

ನಾನು ಮತ್ತು ಬಾಳೇಪುಣಿ ಒಂದೇ ಪತ್ರಿಕೆಯವರಲ್ಲ. ನಾವಿಬ್ಬರೂ ಸಹೋದ್ಯೋಗಿಗಳಲ್ಲ, ನಾನು ಡೆಸ್ಕ್ ಪತ್ರಕರ್ತ, ಅವರು ವರದಿಗಾರ. ನಾವು ಸಮಾನ ವಯಸ್ಕರೂ ಅಲ್ಲ, ನಾವಿಬ್ಬರೂ ಎಂದಿಗೂ ಜೊತೆಯಾಗಿ ವರದಿಗಾರಿಕೆಗೆ ಹೋದವರೂ ಅಲ್ಲ...

ಅವರು ನಮ್ಮೂರಿನವರು. ಅವರು ಕಲಿತ ಶಾಲೆಯಲ್ಲೇ ನಾನೂ ಕಲಿತವನು. ಇದರಾಚೆಗೆ ಕಂಡಲ್ಲಿ, ಭೇಟಿಯಾದಲ್ಲಿ, ಮಾತನಾಡಿದಲ್ಲಿ, ಪ್ರೆಸ್ ಕ್ಲಬ್ಬಿನಲ್ಲಿ, ಮುಡಿಪು ಪೇಟೆಯಲ್ಲಿ ಸಿಕ್ಕು ಮಾತನಾಡಿದ ಗುರ್ತ... ಅವರು ಸಾಯುವ ಕಾಲಕ್ಕೆ ಸಾವು ಮತ್ತು ಅವರ ನಡುವಿನ ಹೋರಾಟದ ಬೇರೆ ಬೇರೆ ಮಜಲುಗಳನ್ನು ಆಗಾಗ ನೋಡುವಂತಾಯಿತು. ಇದೇ ಕಾರಣಕ್ಕೆ ಕೊನೆಯ ದಿನದ ವರೆಗೂ ಅವರ ಬದುಕು ಕಾಡುತ್ತಲೇ ಇತ್ತು... ಈಗಲೂ ಸಹ...

ಸಾವಿನ ಬಗ್ಗೆ ಮಾತನಾಡುವುದಕ್ಕೂ, ಬರೆಯುವುದಕ್ಕೂ, ಸಾವಿನ ವರ್ಣನೆ ಮಾಡುವುದಕ್ಕೂ, ಕಾಣದೇ ಇರುವ ಸಾವಿನಾಚೆಯ ಬದುಕಿನ ಕುರಿತು ಪ್ರವಚನ ಕೊಡುವುದಕ್ಕೂ, ತಾನಿನ್ನು ಕೆಲವೇ ದಿನ ಬದುಕಬಲ್ಲೆ ಎಂಬುದು ಗೊತ್ತಾದ ಬಳಿಕ ಋಷಿಯ ಹಾಗೆ ಮೌನಿಯಾಗಿ, ನಿರ್ಲಿಪ್ತವಾಗಿ ಇರುವುದಕ್ಕೂ ತುಂಬ ವ್ಯತ್ಯಾಸವಿದೆ. ಬಾಳೇಪುಣಿ ಅವರು ಬದುಕಿನ ಕೊನೆಯ ಮೂರು ತಿಂಗಳು ಹಾಗೆ ಕಳೆದದ್ದನ್ನು ನಾಕಾರು ಬಾರಿ ಹತ್ತಿರದಿಂದ ಕಂಡಿದ್ದೇನೆ, ಏನೂ ಹೇಳಲಾಗದೆ ಮರಳಿದ್ದೂ ಇದೆ... ಅವರ ಮನಃಸ್ಥಿತಿಯ ಬಗ್ಗೆ ಯೋಚಿಸಿ ಭಯಂಕರ ತಳಮಳಗೊಂಡದ್ದೂ ಇದೆ... ಇದೇ ಚದುರಿದ ಯೋಚನೆಗಳನ್ನು ಒಟ್ಟು ಸೇರಿಸಲು ಈ ಬರಹ... ಅವರ ಬದುಕಿನ ಕೊನೆಯ ಕೆಲವು ಪುಟಗಳನ್ನು ತಿರುಗಿಸುವ ಸಣ್ಣ ಪ್ರಯತ್ನ ಅಷ್ಟೇ...

1)      ಬಾಳೇಪುಣಿ ವೃತ್ತಿ ಬದುಕು ಕುರಿತು ಕಳೆದ ವಾರವೇ ಒಂದು ಬರಹ ಹಂಚಿಕೊಂಡಿದ್ದೇನೆ. ಕೆಲವರು ಓದಿರಬಹುದು. ಹಾಗಾಗಿ ಆ ಬಗ್ಗೆ ಮತ್ತೆ ಹೇಳ್ಲಿಕೆ ಏನೂ ಇಲ್ಲ. ಬಾಳೇಪುಣಿ 2023 ಮೇ ಕೊನೆಗೆ ಹೊಸದಿಗಂತದಿಂದ ನಿವೃತ್ತಿ ಹೊಂದುವವರಿದ್ದರು 60ನೇ ವಯಸ್ಸಿನಲ್ಲಿ. ಅವರು ಆರೋಗ್ಯವಂತರಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ನಿವೃತ್ತಿ ಮಾಡಲಿಲ್ಲ. ಅವರೂ ಸಹಜವಾಗಿ ಕೆಲಸ ಮಾಡುತ್ತಿದ್ದರು. ಅದೇ ಹೊತ್ತಿಗೆ ಬಹುಶಃ 2023 ಮೇಯಲ್ಲಿ ಮಂಗಳೂರು ವಿ.ವಿ. ಸುಮಾರು 20ಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸಿ ಅವರ ಪಗ್ಗೆ ಪರಿಚಯಾತ್ಮಕ ಪುಸ್ತಕ ಹೊರ ತರಲು ನಿರ್ಧರಿಸಿತ್ತು. ಅದಕ್ಕೆ ಪದಗಳ ಮಿತಿ ಇತ್ತು... ಇದಕ್ಕೆ ಬಾಳೇಪುಣಿಯವರೇ ತಮ್ಮನ್ನು ತಾವೇ ಹೊಗಳಿ ಹೊಗಳಿ ಬರೆದು ಬರಹ ನೀಡಿದ್ದರೆ ಯಾರಿಗೂ ಅದು ತಿಳಿಯುತ್ತಿರಲಿಲ್ಲ (ತುಂಬ ಮಂದಿ ಸ್ವಘೋಷಿತ ಸಾಧಕರು ಈಗ ಅದೇ ಮಾಡುವುದು). ಆದರೆ ಅವರು ನನಗೆ ಕರೆ ಮಾಡಿ ನನ್ನ ಕೆಲಸ ಕಾರ್ಯಗಳ ಒಂದು ಬರಹ ಬೇಕು. ಅದು ನಿಂಗಳೇ ಬರೆಯಕ್ಕು, ಅದರಲ್ಲಿ ಏನೂ ಉತ್ಪ್ರೇಕ್ಷೆ ಇರಬಾರದು, ನಾನದನ್ನು ನೋಡುತ್ತಿಲ್ಲೆ, ನಿಂಗೊ ಬರದು ಕೊಟ್ಟರೆ ಸಾಕುಅಂತ ಹೇಳಿದರು. ಫೇಸ್ಬುಕಿನಲ್ಲಿ ನಾನು ಉದ್ದುದ್ದ ಗೀಚಿ ಬರೆದ ಲೇಖನಗಳಿಗೆ ಅವರೂ ಪ್ರತಿಕ್ರಿಯೆ ನೀಡುತ್ತಿದ್ದರು. ಅದಕ್ಕೆ ಅವರು ನನ್ನಲ್ಲಿ ಬರೆಯಲು ಹೇಳಿರಬಹುದು. ಅವರೊಂದು ಪತ್ರಿಕೆ, ನಾನೊಂದು ಪತ್ರಿಕೆ. ಹಾಗಾಗಿ ನಮ್ಮ ಪ್ರಧಾನ ಸಂಪಾದಕರ ಅನುಮತಿ ಪಡೆದು ಅವರ ಬಗ್ಗೆ ಲೇಖನ ಬರೆದು ಕೊಟ್ಟೆ. ಡಾ.ಧನಂಜಯ ಕುಂಬ್ಳೆ ಈ ಪುಸ್ತಕದ ಸಂಪಾದಕರು. ಸಾಧಕ ಸಂಭ್ರಮ ಹೆಸರಿನಲ್ಲಿ ನನ್ನ ಲೇಖನ ಪ್ರಕಟವಾಯಿತು. ಬರೆದ ನಂತರ ಅವರಿಗೆ ಕಳುಹಿಸಿ ನೀವೊಮ್ಮೆ ಕಣ್ಣು ಹಾಯಿಸಿ ನೋಡಿ ಸರ್ ಅಂದರೆ ಒಪ್ಪಲಿಲ್ಲ. ಅದು ವೇಣುವಿನೋದ್ (ನನ್ನ ಸ್ನೇಹಿತ, ಉದಯವಾಣಿ ಮುಖ್ಯ ವರದಿಗಾರ) ನೋಡಿದ್ರೆ ಸಾಕು ಅಂದ್ರು. ಈ ಲೇಖನ ಎಷ್ಟರ ಮಟ್ಟಿಗೆ ಅವರಿಗೆ ತೃಪ್ತಿ ಕೊಟ್ಟಿತೋ ಗೊತ್ತಿಲ್ಲ. ಪುಸ್ತಕದಲ್ಲಿ ಪ್ರಕಟವಾಯಿತು. ಅವರು ನಿಧನರಾದ ದಿನ ಈ ಲೇಖನವನ್ನು ನಾನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದೆ. ಅವರ ಉದ್ಯೋಗದಾತ ಪತ್ರಿಕೆ ಹೊಸದಿಗಂತ ಇಡೀ ಪುಟದಲ್ಲಿ ಈ ಲೇಖನದ ಪೂರ್ಣಪಾಠ ಪ್ರಕಟಿಸಿ ಅವರಿಗೆ ಗೌರವ ಸಲ್ಲಿಸಿದ್ದು ಮರೆಯಲಾಗದ ನೆನಪು... ಈ ಲೇಖನಕ್ಕೆ ಪೂರಕ ಮಾಹಿತಿ ಸಂಗ್ರಹಿಸಲು ಅವರ ಮನೆಗೆ ಹೋಗಿದ್ದಾಗ ದೊರಕಿದ ಮಾಹಿತಿ ಅವರ ಬದುಕಿನ ಇಡೀ ಚಿತ್ರಣವನ್ನು ಕಟ್ಟಿ ಕೊಟ್ಟಿತು ಅಂದರೆ ತಪ್ಪಿಲ್ಲ. ಈ ಲೇಖನದ ಲಿಂಕ್ ಕಮೆಂಟ್ ಬಾಕ್ಸಿನಲ್ಲಿ ಹಾಕುವೆ. ಅವರ ಬಯೋಡೇಟಾ ಓದಿದಾಗ ಗೊತ್ತಾಗ್ತದೆ ಬಾಳೇಪುಣಿ ಅಂದರೆ ಅಷ್ಟೇ ಅಲ್ಲ.... ಇಷ್ಟೆಲ್ಲ ಉಂಟು ಅಂತ... ಅದೇ ಕಾರಣಕ್ಕೆ ಅವರು ಕಾಡುತ್ತಾರೆ. ಉತ್ಪ್ರೇಕ್ಷೆ ಇಲ್ಲದೆ ನೀನೇ ಬರೆಯಬೇಕು ಅಂತ ಅವರು ಹೇಳಿದ್ದು ಕಾಡುತ್ತದೆ. ಮಾತ್ರವಲ್ಲ, ಆ ಲೇಖನವನ್ನು ವಿಸ್ತೃತವಾಗಿಸಿ ಪುಸ್ತಕ ಪ್ರಕಟಿಸುವ ಕನಸಿತ್ತು, ಆದರೆ ನನಸಾಗಲಿಲ್ಲ, ವಿಧಿ ಅವಕಾಶ ಕೊಡಲಿಲ್ಲ.

2)      ನಿವೃತ್ತಿ ಅವಧಿ ದಾಟಿ ದುಡಿಯುತ್ತಿದ್ದ ಬಾಳೇಪುಣಿ ಅವರಿಗೆ ಅನಾರೋಗ್ಯ ಇದ್ದದ್ದು ಗೊತ್ತಾಗಿದ್ದು 2023 ಅಕ್ಟೋಬರ್- ನವೆಂಬರಿನಲ್ಲಿ. ಸಾಮಾನ್ಯವಾಗಿ ಅನಾರೋಗ್ಯಗಳನ್ನು ವೈದ್ಯರು ಮನೆಯವರಿಗೆ ತಿಳಿಸಿ ರೋಗಿಗೆ ಗಾಬರಿ ಆಗುವಂತೆ ಹೇಳಬೇಡಿ ಅನ್ನುತ್ತಾರೆ. ಆದರೆ ಇಲ್ಲಿ ಉಲ್ಟಾ. ಬಾಳೇಪುಣಿ ಅವರೇ ಮನೆಯವರ ಗಮನಕ್ಕೆ ತಾರದೇ ಪರೀಕ್ಷೆ ಮಾಡಿಸಿದಾಗ, ಸೂಕ್ತ ಸಮಯದಲ್ಲೇ ಕಾಯಿಲೆ ಪತ್ತೆಯಾದಾಗ ಅವರು ಮನೆಯವರಿಗೆ ತಿಳಿಸಲಿಲ್ಲ. ಸೀದಾ ಹೋದದ್ದು ಅವರ ಆಪ್ತ ಸ್ನೇಹಿತನ ಹತ್ತಿರ. ಅವರಲ್ಲಿ ಈ ವಿಚಾರ ಹಂಚಿಕೊಂಡರು. ಬಾಳೇಪುಣಿ, ಅವರ ಬದುಕು, ಆರ್ಥಿಕ ಸ್ಥಿತಿಗತಿ ಬಗ್ಗೆ ಗೊತ್ತಿದ್ದ ಅವರ ಸ್ನೇಹಿತರು, ಮನೆ ಮಂದಿ, ಬಂಧುಗಳು ಸೇರಿ ಆಸ್ಪತ್ರೆಗ ಸೇರಿಸಿ ಸಕಾಲದಲ್ಲಿ ಚಿಕಿತ್ಸೆ ನೀಡಿದರು. ಶಸ್ತ್ರಚಿಕಿತ್ಸೆ ಹಾಗೂ ತದನಂತರದ ಚಿಕಿತ್ಸೆಗಳನ್ನು ನೀಡಲಾಯಿತು. ಆದಾಗಿ ಸುಮಾರು ಆರು ತಿಂಗಳಿನಲ್ಲಿ ಅವರು ತುಂಬ ಸುಧಾರಿಸಿದ್ದರು. ಆಯುರ್ವೇದ ಚಿಕಿತ್ಸೆಯೂ ಅವರನ್ನು ಗಟ್ಟಿಯಾಗಿಸಿತ್ತು. ಅಷ್ಟೇ ಅಲ್ಲ ಅವರ ವಿಲ್ ಪವರ್ ಭಯಂಕರ ಸ್ಟ್ರಾಂಗ್ ಇತ್ತು. ಒಂದು ಹಂತದಲ್ಲಿ ತಾನು ಕಾಯಿಲೆ ಗೆದ್ದೆ ಎಂಬ ಖುಷಿಯಲ್ಲಿ ತನ್ನ ಅನುಭವಗಳನ್ನು ದಾಖಲಿಸಲೂ ಅವರು ಯೋಚಿಸಿದ್ದರಂತೆ. ಇದಾದ ನಂತರ ಕಳೆದ 2024 ಅಕ್ಟೋಬರ್, ನವೆಂಬರ್ ವೇಳೆಗೆ ಎರಡು ತಿಂಗಳು ಮತ್ತೆ ಅವರು ಹೊಸದಿಗಂತ ಕಚೇರಿಗೇ ಹೋಗಿ ವರದಿಗಾರನಾಗಿ ಕೆಲಸ ಮಾಡಿದ್ದಾರೆ! ವಿಶೇಷ ವರದಿಗಳನ್ನು ನೀಡಿದ್ದಾರೆ. ತನ್ನ ಆರೋಗ್ಯ ಸ್ಥಿತಿ ಕುರಿತು ಸಹೋದ್ಯೋಗಿಗಳಿಗೆ ಅವರೇ ಧೈರ್ಯ ತುಂಬಿದ್ದಾರೆ. ಈ ನಡುವೆ 2-3 ಸಲ ಅವರ ಮನೆಗೆ ಹೋದಾಗಲೂ ತುಂಬ ಚೇತೋಹಾರಿಯಾಗಿದ್ದರು. ಅವರ ಮತ್ತೊಮ್ಮೆ ಕಚೇರಿಗೆ ತೆರಳಿದ ದಿನ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದೆ... ಸರ್ ಎಲ್ಲ ಕಡೆ ನೆಗೆಟಿವ್ ಸುದ್ದಿಯೇ ಕೇಳುವಾಗ ನೀವೊಬ್ಬ ಪಾಸಿಟಿವ್ ಉದಾಹರಣೆ ಆಗಿದ್ದೀರಿಅಂತ...

3)      ಆದರೆ ವಿಧಿಯ ನಿರ್ಧಾರ ಬೇರೆಯೇ ಇತ್ತು. ಅವರನ್ನು ಕಾಡಿದ ಕಾಯಿಲೆಯ ಸ್ವರೂಪವೇ ಪೂರ್ವನಿರ್ಧರಿತದಂತೆ ಇದ್ದುದರಿಂದ ಬಹುಶಃ  2024 ನವೆಂಬರ್ ನಲ್ಲಿ ಅವರು ಮತ್ತೆ ಅನಾರೋಗ್ಯಕ್ಕೆ ತುತ್ತಾದರು. ಮತ್ತೆ ಚಿಕಿತ್ಸೆ ನೀಡಲಾಯಿತು. ಅವರಿಗೆ ಆಹಾರ ನೀಡುವುದೇ ಸಮಸ್ಯೆಯಾಗಿತ್ತು. ನೀವು ನಂಬ್ಲಿಕಿಲ್ಲ. ಸುಮಾರು ಮೂರು ತಿಂಗಳ ಕಾಲ ಮೂಗಿನ ಪೈಪಿನಲ್ಲಿ ಅವರಿಗೆ ದ್ರವ ರೂಪದ ಆಹಾರ, ಔಷಧಿ ನೀಡಲಾಗುತ್ತಿತ್ತು. ಅವರಿಗೆ 2-3 ಹಂತದ ಚಿಕಿತ್ಸೆಗಳಾದವು. ಹಣಕಾಸು ನೆರವನ್ನು ಬೇರೆ ಬೇರೆ ಹಂತದಲ್ಲಿ ಸಹೋದ್ಯೋಗಿಗಳು, ಮಿತ್ರರು, ಪತ್ರಿಕಾ ಬಾಂಧವರು ನೀಡಿದರು. ಆದರೂ ನಿರೀಕ್ಷೆಗಳು ಕ್ಷೀಣಿಸುತ್ತಿರುವ ಕುರಿತು ವೈದ್ಯರ ಕಡೆಯಿಂದ ಮಾಹಿತಿ ಸಿಕ್ಕಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ತಾನಿನ್ನು ಹೆಚ್ಚು ದಿನ ಇಲ್ಲ ಎಂಬುದು ಬಾಳೇಪುಣಿ ಅವರಿಗೇ ಗೊತ್ತಾಗಿತ್ತು...! ಗೊತ್ತಾದ ನಂತರ ಅವರು ಮಾತನಾಡುವುದೇ ಕಮ್ಮಿ ಮಾಡಿದ್ದರು. ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮರುದಿನ ಅವರ ಮನೆಗೆ ಹೋಗಿದ್ದೆ. ಡಿಸೆಂಬರಿನಲ್ಲಿ. ಆಗ ಅವರು ಮಾತನಾಡುವುದು ನಿಲ್ಲಿಸಿದ್ದರು. ಆಯಾಸ ಆಗುತ್ತದೆ ಎಂಬುದು ಮೊದಲ ಕಾರಣವಾದರೆ, ಮಾತನಾಡುವ ಆಸಕ್ತಿ ಅವರಿಗಿರಲಿಲ್ಲ ಅಂತವೇ ಅನ್ನಿಸುತ್ತದೆ. ಏನೇ ಪ್ರಶ್ನೆ ಕೇಳಿದರೂ ಒಂದು ಡೈರಿಯಲ್ಲಿ ಸ್ಫುಟವಾಗಿ ಬರೆದು ತೋರಿಸುತ್ತಿದ್ದರು. ನಾವು ಹೇಳುವ ಧೈರ್ಯದ ಮಾತುಗಳಿಗೆ ಕಣ್ಣಿರೇ ಉತ್ತರವಾಗಿತ್ತು. ಅದಕ್ಕಿಂತ ಮೊದಲು ಅಪರೇಷನ್ ಆದ ಬಳಿಕ ಮಾತನಾಡಿದಾಗ ನಾನು ರಾಜಕಾರಣಿಗಳು, ದೊಡ್ಡ ಮನಷ್ಯರಿಗೆಲ್ಲ ಇಷ್ಟವಾಗುವ ಹಾಗೆ ಬರೆದವನಲ್ಲ, ನೇರವಾಗಿ ಮಾತನಾಡುತ್ತಿದ್ದೆ, ಈಗ ಈ ಪರಿಸ್ಥಿತಿಯಲ್ಲಿ ಯಾರ ಬಳಿಯೂ ಸಹಾಯ ಯಾಚಿಸುವ ಸ್ಥಿತಿಯಲ್ಲಿ ಇಲ್ಲಅಂದ ಮಾತು ನೆನಪಿದೆ.

4)      ಬಾಳೇಪುಣಿ ಜ.26ರಂದು ಕೊನೆಯುಸಿರೆಳೆದದ್ದು ಉಳ್ಳಾಲ ತಾಲೂಕು ಬಾಳೇಪುಣಿ ಗ್ರಾಮದ ಅನಂಗದ ತಮ್ಮ ಮನೆ ದುಡಿಮೆಯಲ್ಲಿ. ಆದರೆ ಅವರು ಹಠ ಹಿಡಿದು ಆಸ್ಪತ್ರೆಯಲ್ಲಿ ತನಗೆ ಚಿಕಿತ್ಸೆ ಬೇಡ, ಮನೆಗೇ ಬರ್ತೇನೆ ಅಂತ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬಂದು ಅಲ್ಲಿ ಸುಮಾರು ನಾಲ್ಕೈದು ದಿನ ಸಕ್ರಿಯರಾಗಿದ್ದರು. ದುರಾದೃಷ್ಟವಶಾತ್ ಜ.24 ಶುಕ್ರವಾರ ಅಪರಾಹ್ನ ಅವರ ಆರೋಗ್ಯ ಕುಂದಿದಾಗ ಅವರು ನಿಧನರಾದರು ಎಂಬ ಸುದ್ದಿ ತಪ್ಪಾಗಿ ಪ್ರಚಾರವಾಯಿತು. ಇದಕ್ಕೆ ವೈಯಕ್ತಿಕವಾಗಿ ಯಾರೂ ಹೊಣೆಯಲ್ಲ. ತಮ್ಮ ಸಹೋದ್ಯೋಗಿಯೊಬ್ಬ ನಿಧನರಾದ ಕುರಿತು ಸುಳ್ಳು ಸುದ್ದಿ ಹರಡಿ ಯಾವ ಪತ್ರಕರ್ತನೂ ಪ್ರಚಾರ, ಟಿಆರ್ಪಿ, ವ್ಯೂಸ್ ಗಳಿಸುವ ಮನಸು ಹೊಂದಿರಲಾರ. ಅವರ ಆರೋಗ್ಯ ತೀರಾ ಕುಂದಿದ್ದ ಹಿನ್ನೆಲೆಯಲ್ಲಿ ಸಂವಹನ ಕೊರತೆಯಿಂದ ಹಾಗೊಂದು ಸುದ್ದ ಹರಡಿತು. ಆದಾಗಬಾರದಿತ್ತು, ಸಕ್ರಿಯರಾಗಿದ್ದರೆ ಬಾಳೇಪುಣಿ ಇಂತಹ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಆದರೂ ಅವರ ಮೇಲಿನ ಅಭಿಮಾನದಿಂದ ನೂರಾರು ಮಂದಿ ಅವರ ಮನೆಗೆ ಬಂದು ಇನ್ನೂ ಸಕ್ರಿಯರಾಗಿದ್ದ ಅವರನ್ನು ಕಂಡು ಹೋಗುವಂತಾಯಿತು!

5)      ಅವರು ಕೊನೆಯುಸಿರೆಳೆದದ್ದು ಜ.26 ಅಪರಾಹ್ನ ಅಂದಾಜು 1 ಗಂಟೆ ಆಸುಪಾಸಿಗೆ. ಅದಕ್ಕೂ ಮೂರು ಗಂಟೆ ಮೊದಲು ನಾನು ಅವರ ಮನೆಗೆ ಹೋಗಿದ್ದೆ, ಕಾಕತಾಳೀಯವಾಗಿ ಅವರ ಸಹೋದ್ಯೋಗಿ ರಘುರಾಂ ಬಂದಿದ್ದರು. ಎಷ್ಟು ವಿಚಿತ್ರ ಅಂದರೆ, ಆ ಭೇಟಿಯ ವೇಳೆ ಅವರು ನಮ್ಮ ಮಾತುಗಳಿಗೆ ಸ್ಪಂದಿಸಿದ್ದಾರೆ. ಅವರ ಪುತ್ರ ಮನೇಶ ನೀಡಿದ ಎಲ್ಲ ಸೂಚನೆಗಳನ್ನು ಪಾಲಿಸಿದ್ದಾರೆ. ಕೈಕಾಲು ಅಲ್ಲಾಡಿಸುವುದು, ಬಾಚಿ ಮುಚ್ಚುವುದು ಎಲ್ಲ ಮಾಡಿದ್ದಾರೆ. ಕಣ್ಣು ತೆರೆದು ನಮ್ಮನ್ನು ನೋಡಿದ್ದಾರೆ, ನೀವು ಆಸ್ಪತ್ರೆಗೆ ಹೋಗಿ ಬಂದ್ರ?” ಅಂತ ಕೇಳಿದ ಪ್ರಶ್ನೆಗೆ ಕುತ್ತಿಗೆ ಅಲ್ಲಾಡಿಸುವ ಮೂಲಕ ಅತ್ಯಂತ ಸ್ಪಷ್ಟವಾಗಿ ಸ್ಪಂದಿಸಿದ್ದಾರೆ. ಈ ಭೇಟಿ ತೀರಾ ಕಾಕತಾಳೀಯವಾಗಿತ್ತು. ಅದಾಗಿ ಮೂರೇ ಗಂಟೆಗೆ ಅವರು ಸ್ತಬ್ಧರಾದರು. ಇದನ್ನೆಲ್ಲ ಯಾಕೇ ಹೇಳುತ್ತಿದ್ದೇನೆ ಎಂದರೆ ಬಾಳೇಪುಣಿಯವರ ಕೊನೆಯ ದಿನಗಳಲ್ಲಿ ಶರೀರ ಅವರನ್ನು ತುಂಬ ದುರ್ಬಲವಾಗಿಸಿತ್ತು. ಆದರೆ ಮನಸ್ಸು ಕೊನೆಯ ಕ್ಷಣದ ವರೆಗೂ ಸಕ್ರಿಯವೇ ಆಗಿತ್ತು. ನಾವು ಹೇಳಿದ್ದು ಎಲ್ಲ ಅರ್ಥವಾಗುತ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಭಯಂಕರ ನಿರ್ಲಿಪ್ತತೆಗೆ ಜಾರಿದ್ದರಿಂದ ಮೌನಿಯೇ ಆಗಿದ್ದರೂ. ಆದಾಗ್ಯೂ ವಿಧಿಗೆ ಅವರನ್ನು ಅಷ್ಟು ಸುಲಭವಾಗಿ ಸೆಳೆಯಲು ಸಾಧ್ಯವಾಗಲೇ ಇಲ್ಲ...ಅಷ್ಟೊಂದು ದಿವಸ ಅವರು ಇರಲೇಬೇಕಾದ್ದು ವಿಧಿ ಲಿಖಿತವೋ ಏನೋ... ಪತ್ರಿಕೆಗಳಲ್ಲಿ ನಾವು ಪ್ರತಿದಿನ ಎಂಬಂತೆ ನಿಧನ ಸುದ್ದಿಗಳನ್ನು ಬರೆಯುತ್ತೇವೆ. ಎಡಿಟ್ ಮಾಡುತ್ತೇವೆ, ಡಿಸೈನ್ ಮಾಡುತ್ತೇವೆ. ಬಹುತೇಕ ಸಿಂಗಲ್ ಕಾಲಂ ಸುದ್ದಿ ಆಗಿರುತ್ತದೆ. ಆದರೆ ಪ್ರತಿ ಸಾವಿನ ಹಿಂದೆಯೂ ಒಂದು ಕತೆ ಇರುತ್ತದೆ, ಸಾವಿನ ನಂತರದ ಬದುಕಿನ ಬದಲಾವಣೆ ಇರುತ್ತದೆ, ಸಾವಿಗೊಂದು ಕಾರಣ ಇರುತ್ತದೆ, ಒಂದು ನಿರಾಸೆ, ಒಂದು ದುಃಖ, ಒಂದು ನಿರ್ಲಿಪ್ತತೆ ಎಲ್ಲ ಇರ್ತದೆ. ಆದರೆ ಎಲ್ಲೋ ಕುಳಿತು ಬರೆಯುವ ನಿಧನ ಸುದ್ದಿಗಳಲ್ಲಿ ಅವುಗಳೆಲ್ಲ ಕಾಣಿಸುವುದಿಲ್ಲ. ಯಾರದ್ದೋ ಸಾವಿನ ಸುದ್ದಗಳನ್ನು ಬರೆಯುವ ಪತ್ರಕರ್ತ ಮರಣ ಶಯ್ಯೆಯಲ್ಲಿ ತನ್ನದೇ ಸಾವಿನ ದಿನಾಂಕವನ್ನು ಎಡಿಟ್ ಮಾಡಲೂ ಅಶಕ್ತ ಎಂಬುದು ನಮಗೆಲ್ಲ ತಿಳಿದಿರಲೇಬೇಕಾದ ಕಹಿಸತ್ಯ!

6)      ಬಾಳೇಪುಣಿ ಗ್ರಾಮೀಣ ಪತ್ರಿಕೋದ್ಯಮ, ಅಭಿವೃದ್ಧಿ ಪತ್ರಿಕೋದ್ಯಮದ ಕುರಿತೇ ಬರೆದವರು. ಸಾಕಷ್ಟು ಮಂದಿಯನ್ನು ಬೆಳಕಿಗೆ ತಂದಿದ್ದಾರೆ. ಅವರಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬರೂ ಒಬ್ಬರು. ಇವರೆಲ್ಲರ ಕುರಿತು ಇನ್ನಷ್ಟು ಮಾಹಿತಿ ಸೇರಿಸಿ ಅವರೊಂದು ಪುಸ್ತಕ ಬರೆದಿದ್ದರು. ದೊಡ್ಡವರು, ಇವರು ಸನ್ಮಾನ್ಯರುಅಂತ ಪುಸ್ತಕದ ಹೆಸರು. ಸುಮಾರು ನಾಲ್ಕು ವರ್ಷಗಳಿಂದ ಈ ಪುಸ್ತಕ ಹೊರತರಲು ಅವರು ಶ್ರಮಿಸಿದ್ದಾರೆ ಅಂತ ಅವರ ಕೊನೆಯ ದಿನಗಳಲ್ಲಿ ಗೊತ್ತಾಯಿತು. ಪ್ರೆಸ್ ಕ್ಲಬ್ಬಿನಲ್ಲೇ ಈ ಕೃತಿ ಬಿಡುಗಡೆ ಆಗಬೇಕು ಎಂಬುದು ಅವರ ಆಸೆಯಾಗಿತ್ತು. ಅವರು ಬದುಕಿರುವಾಗಲೇ ಈ ಪುಸ್ತಕ ಅವರಿಗೆ ಕಾಣಿಸಬೇಕು ಎಂಬ ಉದ್ದೇಶದಿಂದ ಅವರ ಪತ್ರಕರ್ತ ಮಿತ್ರ ಮಿಥುನ್ ಉಡುಪ ಈ ಕೃತಿಯನ್ನು ತಮ್ಮ ಅನಂತ ಪ್ರಕಾಶ, ಗಾಯತ್ರಿ ಪ್ರಕಾಶನ ಮೂಲದ ಪ್ರಕಟಿಸಿದರು. ಅದರ ಅಧಿಕೃತ ಬಿಡುಗಡೆ ಆಗದೇ ಇದ್ದರೂ ಬಾಳೇಪುಣಿ ಅವರಿಗೆ ಪುಸ್ತಕ ಹೊರ ಬಂದದ್ದು ತಿಳಿದಿತ್ತು. ದುರಾದೃಷ್ಟ ಅಂದರೆ, ಅದರ ಪ್ರತಿಯನ್ನು ಅವರಿಗೆ ತೋರಿಸಲು ತಲಪಾಡಿಯ ಆಸ್ಪತ್ರೆಗೆ ಪುಸ್ತಕದ ವಿನ್ಯಾಸಗಾರ ಹರೀಶ್ ಕೊಡೆತ್ತಾರೂ, ಪ್ರಕಾಶಕ ಮಿಥುನ್ ಹಾಗೂ ಬಾಳೇಪುಣಿ ಸಹೋದ್ಯೋಗಿ ಸುರೇಶ್ ಪಳ್ಳಿ ಹೋದಾಗ ನಾನೂ ಜೊತೆಗಿದ್ದೆ. ಅವರು ಆಗಲೇ ಮೌನಿಯಾಗಿದ್ದರು. ಪುಸ್ತಕ ತೋರಿಸಿದಾಗ ಗೊತ್ತಾಯಿತು ಎಂದಷ್ಟೇ ತಲೆ ಅಲ್ಲಾಡಿಸಿದರು. ಆ ದಿನ ನಮಗೆಲ್ಲ ಅವರ ಜೊತೆ ಹೇಗೆ ಮಾತನಾಡಬೇಕು ಎಂಬುದೇ ಅರ್ಥವಾಗದೇ ತಬ್ಬಿಬ್ಬಾಗಿ ಮರಳಿದ್ದು ಸ್ಪಷ್ಟವಾಗಿ ನೆನಪಿದೆ...! ಈ ಪುಸ್ತದ ಪ್ರಾಸ್ತಾವಿಕ ಮಾತುಗಳಲ್ಲಿ ಬಾಳೇಪುಣಿ ದಾಖಲಿಸಿದ ಎರಡು ಸಾಲುಗಳು ನನ್ನನ್ನು ತುಂಬ ಕಾಡುತ್ತಿವೆ. 1) ಮೊದಲ ಸಾಲು ನಾನು ಸಾಹಿತಿ ಅಲ್ಲ, ಪತ್ರಕರ್ತ ಅಂತ. ಸರಳ ವಾಕ್ಯ. ಆದರೆ ಇದರ ಹಿಂದೆ ತುಂಬ ಅರ್ಥಗಳಿವೆ. ತಮ್ಮನ್ನು ತಾವೇ ಭಯಂಕಾರ ಸಾಧಕ ಅಂತ ತೋರಿಸಿಕೊಳ್ಳುವವರ ನಡುವೆ ಈ ವಿನಯ ಇಷ್ಟವಾಗುತ್ತದೆ. 2) ಇದು ನನ್ನ ಚೊಚ್ಚಲ ಕೃತಿ ಅಂತ. ಎಂತಹ ವಿಪರ್ಯಾಸ ನೋಡಿ. ವಿಧಿಗೆ ನಮ್ಮ ಕನಸುಗಳ ಹಂಗುಗಳಿರುವುದಿಲ್ಲ ಎಂಬುದಕ್ಕೆ ಈ ಜೀವವೇ ಸಾಕ್ಷಿ. ಚೊಚ್ಚಲ ಕೃತಿಯೇ ಬದುಕಿನ  ಉತ್ತರಾರ್ಧದ ಕೊನೆಗೆ ಬೆಳಕು ಕಾಣುವಂತಾಯಿತು. ಕೆಲವೊಮ್ಮೆ ಬದುಕು ಯಾರೋ ಬರೆದಿಟ್ಟ ಚಿತ್ರಕತೆ ಥರ ಇರ್ತದೆ. ನಮಗದನ್ನು ಬದಲಿಸಲು, ಎಡಿಟ್ ಮಾಡಲು ಆಯ್ಕೆಗಳೇ ಸಿಗುವುದಿಲ್ಲ!

7)      ಎರಡನೇ ಸಲ ಅವರು ಅಸ್ವಸ್ಥರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಮರುದಿನ ಮನೆಗೆ ಬಂದಾಗ ಮಾತನಾಡಿಸಲು ಹೋಗಿದ್ದೆ. ಆಗ ಚಾವಡಿಯ ಸೋಫಾದಲ್ಲಿ ಕುಳಿತಿದ್ದರು. ಏನೇ ಕೇಳಿದರೂ ಬರೆದು ಉತ್ತರ ಕೊಡುತ್ತಿದ್ದರು. ನೀವು ಗುಣಮುಖರಾಗಿ ಮತ್ತೆ ಆಫೀಸಿಗೆ ಹೋಗಿ ಎರಡು ವಿಶೇಷ ವರದಿ ಮಾಡಿದ್ದೀರಲ್ವ, ಖುಷಿಯಾಯ್ತ?” ಅಂತ ಕೇಳಿದೆ. ನಿಧಾನವಾಗಿ ಆದರೆ, ಸ್ಫುಟವಾಗಿ ಬರೆದು ತೋರಿಸಿದರು ಹೌದು... ಇನ್ನೊಂದು ಸ್ಟೋರಿ (ವಿಶೇಷ ವರದಿ)ಗೆ ವಿಷಯ ಸಂಗ್ರಹ ಮಾಡಿದ್ದೆ, ಫೈಲ್ ಮಾಡಲು ಬಾಕಿ ಇದೆ... ಅಂತ!! ಬಹುಷಃ ಅದಿನ್ನು ಫೈಲ್ ಆಗುವುದಿಲ್ಲ. ಕಲಾವಿದ ಹಾಗೂ ಪತ್ರಕರ್ತ ಬದುಕಿನ ಕೊನೆಯ ತನಕ ಕೆಲಸದ ಗೀಳಿನಲ್ಲಿ ಎಷ್ಟು ತನ್ಮಯನಾಗಿರುತ್ತಾನೆ ಅನ್ನುವುದನ್ನು ಆ ದಿವಸ ಬಾಳೇಪುಣಿಯರಲ್ಲಿ ಕಂಡು ಆಶ್ಚರ್ಯವಾಯಿತು. ಕೊನೆಯ ದಿನಗಳ ವರೆಗೂ ಅವರೊಳಗಿನ ಪತ್ರಕರ್ತ ಸಕ್ರಿಯನೇ ಆಗಿದ್ದ. ಅದೇ ದಿನದ ಇನ್ನೊಂದು ಘಟನೆಯೇ ನನ್ನನ್ನು ಈ ಬರಹ ಬರೆಸಲು ಪ್ರಬಲ ಕಾರಣ. ಒಳಗೊಂದು ಪುಸ್ತಕ ಇದೆ ತಾ ಅಂತ ಮಗನಲ್ಲಿ ಹೇಳಿದರು. ಅದೊಂದು ಡೈರಿ, ಅದನ್ನು ಓದು ಅಂತ ನನ್ನನ್ನು ಕಣ್ಸನ್ನೆ ಮಾಡಿದರೂ. ಯಾವುದೋ ಅನುಭವ ಬರೆದಿದ್ದಾರೆ ಅಂದುಕೊಂಡು ಅವರೆದುರೇ ಕುಳಿತು ಓದಿದೆ. ಭರ್ತಿ ನಾಲ್ಕು ಪುಟಗಳನ್ನು ಡೈರಿಯಲ್ಲಿ ಬರೆದಿದ್ದರು. ವಿಷಯ ಏನು ಗೊತ್ತ? “ತಾನು ಇಲ್ಲವಾದ ಬಳಿಕ ತನ್ನ ಮನೆಯವರು ನಿಭಾಯಿಸಬೇಕಾದ ಜವಾಬ್ದಾರಿ ಬಗ್ಗೆ ಪಾಯಿಂಟ್ ಬೈ ಪಾಯಿಂಟ್ ಬರೆದಿದ್ದರು. ನನಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಗೊತ್ತಾಗಲಿಲ್ಲ. ಬಹುಶಃ ಅದನ್ನು ಓದಿದ ಮೊದಲನೆಯ ವ್ಯಕ್ತಿ ನಾನೇ, ಮನೆಯವರಿಗೂ ಗೊತ್ತಿರಲಿಲ್ಲ. ಇದು ನೀವು ಯಾವಾಗ ಬರೆದದ್ದು ಅಂತ ಕೇಳಿದೆ, ಬರಹದ ಕೊನೆಗೆ ನೋಡು ಅಂತ ಹೇಳಿದರು. ಅದರಲ್ಲಿ ಸಹಿಯ ಕೆಳಗೆ ಸುಮಾರು 6 ತಿಂಗಳ ಹಿಂದಿನ ಡೇಟ್ ಎದ್ದು ಕಾಣಿಸುತ್ತಿತ್ತು.! ನಂತರ ಪುನಃ ಬರೆದು ತೋರಿಸಿದರು ನಾನು ಇಲ್ಲವಾದ ಬಳಿಕ ಇದನ್ನು ತನ್ನ ಸ್ನೇಹಿತರೊಬ್ಬರು ಹಾಗೂ ತನ್ನ ಅಣ್ಣನ ಪುತ್ರ ಸುಧೀರ್ ಓದಬೇಕು, ಅಲ್ಲಿಯ ವರೆಗೆ ಯಾರೂ ನೋಡಬಾರದು ಅಂತ... ಅವರ ಕಾಲಾನಂತರ ಅವರು ಹೇಳಿದ ಅವರ ಆಪ್ತರು ಅದನ್ನು ಓದಿದ್ದಾರೆ ಎಂಬುದು ಬೇರೆ ವಿಷಯ. ಆ ಪುಸ್ತಕದಲ್ಲಿ ಏನು ಬರೆದಿದ್ದರು ಎಂಬುದು ಅವರ ವೈಯಕ್ತಿಕ ಸಂಗತಿ. ಅದು ಇಲ್ಲಿ ಅಪ್ರಸ್ತುತ. ಆದರೂ ಒಂದು ಹೇಳಲೇ ಬೇಕಾದ ಸಂಗತಿ ಇದೆ. ತನ್ನದೊಂದು ಸಾಲ ವಾಪಸ್ ನೀಡಲು ಬಾಕಿ ಇದ್ದು, ಅದರ ಮೊತ್ತ ಇಷ್ಟಿದೆ. ಅದನ್ನು ತನ್ನ ಪುತ್ರ ಗೌರವಪೂರ್ವಕವಾಗಿ ಮರಳಿಸಲೇಬೇಕು ಅಂತ ಬರೆದಿದ್ದು ಈ ಪಾಯಿಂಟುಗಳಲ್ಲಿ ಒಂದು! ತಮ್ಮ ವ್ಯಸನಗಳಿಗೋಸ್ಕರ ಸಾಲ ಮಾಡಿ, ಶೋಕಿಗೋಸ್ಕರ ಸಾಲ ಮಾಡಿ ಅದರಲ್ಲಿ ನಯಾಪೈಸೆ ವಾಪಸ್ ನೀಡದೆ, ಪೆದಂಬು ಮಾತನಾಡಿ, ನಮ್ಮ ನಂಬರ್ ಬ್ಲಾಕ್ ಮಾಡಿ ಓಡಾಡುವವರ ನಡುವೆ ಬಾಳೇಪುಣಿ ಅವರು ಈ ರೀತಿ ಬರೆದ ಬಗ್ಗೆ ಏನು ಹೇಳುತ್ತೀರಿ. ಎಲ್ಲೆ ಕೊರ್ಪೆ ಅಂತ ಸಾಲ ಪಡೆದು, ಕುಡಿತಕ್ಕೋ, ವ್ಯಸನಕ್ಕೋ ಬಳಸಿ, ವಾಪಸ್ ಮಾಡದೆ ನಿರ್ಭೀಡೆಯಿಂದ ಓಡಾಡುವವರ ನಡುವೆ, ಪಡೆದ ಸಾಲ ತನ್ನ ನಂತರಕ್ಕಾದರೂ ವಾಪಸ್ ಆಗಲೇಬೇಕು ಎಂಬ ಬದ್ಧತೆ ಹೊಂದಿದ ಮನುಷ್ಯನನ್ನು ಏನಂತ ಕರೀಬೇಕು.?!

8)      ನಮ್ಮ ನಡುವೆ ಯೋಗ್ಯತೆ ಇಲ್ಲದಿದ್ದರೂ ಪ್ರಚಾರ ಪಡೆಯುವ ಹುಚ್ಚು ಹಿಡಿಸಿಕೊಂಡವರಿದ್ದಾರೆ, ಕಾಡಿಬೇಡಿ ಸನ್ಮಾನ ಮಾಡಿಸಿಕೊಳ್ಳುವವರಿದ್ದಾರೆ, ಮಾಡಬಾರದ್ದೆಲ್ಲ ಮಾಡಿ ಶುಭ್ರ ಪಂಚೆ, ಶುಭ್ರ ಶಾಲು ಧರಿಸಿ ತನ್ನ ಜಾತಿ, ಧರ್ಮ, ದೇವರು, ಯತಿಗಳು, ಪಕ್ಷವನ್ನು ಗುರಾಣಿಯಾಗಿರಿಸಿ ಜನರನ್ನು ಮರಳು ಮಾಡಿ, ಭಾವನಾತ್ಮಕವಾಗಿ ಮಾತನಾಡಿ ಇಡೀ ಸಮುದಾಯವನ್ನು ಬಳಸಿ ತನ್ನ ಬೇಳೆ ಬೇಯಿಸುವವರಿದ್ದಾರೆ. ಅವರು ಮಾಡಿದ್ದು ತಪ್ಪು ಅಂತ ಗೊತ್ತಿದ್ದರೂ ಜನ ಕೇಳಲಾಗದ ಸನ್ನಿವೇಶ ಸೃಷ್ಟಿಸಿದವರಿದ್ದಾರೆ. ಇಂಥವರ ನಡುವೆ ಬಾಳೇಪುಣಿ ತುಂಬ ಭಿನ್ನರಾಗ್ತಾರೆ. ಅವರು ಪತ್ರಕರ್ತರಾಗಿದ್ದರು. ಸುಮಾರು ಮೂರು ದಶಕಗಳ ಕಾಲ ಸಕ್ರಿಯರಾಗಿದ್ದರು. ಅವರಿಗೆತುಂಬ ಸಂಪರ್ಕಗಳಿದ್ದವು, ವಾಮಮಾರ್ಗದಲ್ಲಿ ದುಡ್ಡು ಮಾಡಬಹುದಾದ ಅವಕಾಶಗಳಿತ್ತು, ಹೆಚ್ಚಿನ ಸಂಬಳ ಅರಸಿ ಬೇರೇ ಬೇರೆ ಪತ್ರಿಕೆಗಳಿಗೆ ಹೋಗುವ ಅವಕಾಶ ಇತ್ತು. ಆದರೆ ಅವರು ಅಂಥದ್ದೇನೂ ಮಾಡಲಿಲ್ಲ. ಅವರ ಸಂಸ್ಥೆಯವರೇ ಹೇಳುವ ಹಾಗೆ ಅವರು ಹೊಸದಿಗಂತಕ್ಕೆ ನಿಷ್ಠರಾಗಿದ್ದರು, ಬೇರೆ ಆಫರ್ ಬಂದರೂ ಹೋಗಲಿಲ್ಲ. ಅವರು ಪ್ರಾಮಾಣಿಕ ಪತ್ರಕರ್ತ ಎಂಬುದು ಅವರ ಎಲ್ಲ ಸಹಪಾಠಿಗಳು, ಸಹೋದ್ಯೋಗಿಳಿಗೆ ಗೊತ್ತು. ಅವರು ಕೂಡಿಟ್ಟದ್ದು ಅಷ್ಟಕ್ಕೇ ಇದೆ. ಪುಟ್ಟ ಮನೆ, ಪತ್ನಿ, ಪದವಿ ಕಲಿಯುತ್ತಿರುವ ಪುತ್ರನ ಚೊಕ್ಕ ಸಂಸಾರ ಅವರದ್ದು. ಎಂಥದ್ದೂ ಸಂಪತ್ತು ಅವರು ಕೂಡಿಡಲಿಲ್ಲ. ಅವರ ಮನೆಯ ಹೆಸರು ದುಡಿಮೆ. ಮನೆ ಹೆಸರಿನ ಶಿಲಾಫಲಕದಲ್ಲಿ ತನ್ನ ಹೆಸರಿನ ಜೊತೆ ಪತ್ನಿ ಹಾಗೂ ಮಗನ ಹೆಸರನ್ನೂ ಅಚ್ಚು ಹಾಕಿಸಿದ್ದಾರೆ.  ಅನಾರೋಗ್ಯಕ್ಕೀಡಾಗಿ ಅಸಹಾಯಕರಾಗಿದ್ದಾಗಲೂ ತಾವಾಗಿ ಯಾವುದೇ ಪ್ರಭಾವದ ಮೊರೆ ಹೋಗಲಿಲ್ಲ. ಇದು ಉತ್ಪ್ರೇಕ್ಷೆಯ ಮಾತಲ್ಲ. ಅವರ ಕಷ್ಟಕಾಲದಲ್ಲಿ ಅವರ ತೀರಾ ಆಪ್ತ ಸ್ನೇಹಿತರು (ಅವರ ಹೆಸರು ಉಲ್ಲೇಖಿಸುವುದಿಲ್ಲ, ಯಾಕೆಂದರೆ ಅವರೆಲ್ಲ ಪ್ರಚಾರ ಪ್ರಿಯರಲ್ಲ), ಅವರ ಸಹೋದ್ಯೋಗಿಗಳು ತಾವಾಗಿ ಬಂದು ನೆರವಾಗಿದ್ದಾರೆ. ಕುಟುಂಬದವರು ಸಹ ಸಹಯೋಗ ನೀಡಿದ್ದಾರೆ. ಅವರು ಉಳಿಸಿದ್ದು, ಪ್ರಾಮಾಣಿಕ ಪತ್ರಕರ್ತ ಎಂಬ ಇಮೇಜ್, ಬರೆದಿಟ್ಟ ವರದಿಗಳು, ತಮ್ಮದೆ ದಾರಿಯಲ್ಲಿ ನಡೆಯಬೇಕು ಎಂದು ತಾಕೀತು ಮಾಡಿ ಬಿಟ್ಟು ಹೋದ ಪತ್ನಿ ಮತ್ತು ಮಗ,ಪುಟ್ಟ ಮನೆ ದುಡಿಮೆ ಹಾಗೂ ಅದೇ ಹೆಸರಿನ ಅವರಿಗೆ ಪ್ರಶಸ್ತಿ ಬಂದ ದುಡ್ಡಿನಲ್ಲಿ ತಕ್ಕೊಂಡ ಸ್ಕೂಟರ್ ನ್ನು ಮಾತ್ರ. ಅವರ ಇಸ್ತ್ರಿ ಹಾಕಿದ ಅಂಗಿ, ಕೊನೆಯ ದಿನದ ವರೆಗೂ ಕಾಪಾಡಿಕೊಂಡು ಬಂದಿದ್ದು ಕ್ಲೀನ್ ಶೇವ್ ಮಾಡಿದ ಮುಖ, ತೀಕ್ಷ್ಣ ಕಣ್ಣು, ಸಪೂರ ದೇಹ, ಹಾವಿನ ಹೆಡೆಯಂತೆ ಬಲಗೈಯ್ಯನ್ನು ಅರಳಿಸಿ ನೀಡುವ ಒಂದು ನಮಸ್ಕಾರ... ಇಷ್ಟು ಅವರದ್ದೊಂದು ಸ್ವರೂಪ. ಅದರಾಚೆಗೆ ಅವರು ತುಂಬ ಮಂದಿಗೆ, ಸಂಸ್ಥೆಗಳಿಗೆ, ಅಸಹಾಯಕರಿಗೆ ನೆರವಾಗಿದ್ದಾರೆ, ಮಾರ್ಗದರ್ಶನ ನೀಡಿದ್ದಾರೆ. ಅದೆಲ್ಲ ನಮಗೆ ಗೊತ್ತಿಲ್ಲ. ಯಾಕಂದರೆ ಅದನ್ನವರು ಸುದ್ದಿ ಮಾಡಿ ಫೋಟೋ ಸಹಿತ ಎಲ್ಲೂ ಪ್ರಕಟಿಸಲಿಲ್ಲ. ಕಂಡದ್ದು, ಓದಿದ್ದು, ಫೇಸ್ಬುಕ್ಕಿನಲ್ಲಿ ಬಂದದ್ದು ಮಾತ್ರ ಸತ್ಯವೆಂದು ನಂಬುವ ನಮಗೆ ಎಲ್ಲಿಯೂ ಸುದ್ದಿಯಾಗದೇ ಇರುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾ?!! ಅವರು ತುಂಬ ಸಲ ಹಾಜಬ್ಬರನ್ನು ಗುರುತಿಸಿದ್ದು ತಾವು ಎಂಬುದ ಕ್ಲೈಮ್ ಮಾಡುತ್ತಿದ್ದರು ಎಂಬ ಆರೋಪ ಇತ್ತು. ನನಗೂ ಕೆಲವು ಸಲ ಅನ್ನಿಸಿತ್ತು. ಇವರು ಯಾಕೆ ಹಾಜಬ್ಬರನ್ನು ಯಾಕೆ ಆ ನಮೂನೆ ವಹಿಸಿಕೊಳ್ತಾರೆ ಅಂತ. ಬಾಳೇಪುಣಿ ಹಾಜಬ್ಬರ ಬಗ್ಗೆ ಸಹಪತ್ರಕರ್ತರೊಂದಿಗೆ ಹೋಗಿ ವರದಿ ಮಾಡಿದ್ದು ಮಾತ್ರವಲ್ಲ. ಕೊನೆಯ ತನ ಹಾಜಬ್ಬರ ಆತ್ಮೀಯ ಗೆಳೆಯ, ಮಾರ್ಗದರ್ಶಕ, ಗುರುವಾಗಿದ್ದರು. ಆ ಬಗ್ಗೆ ಸಂಶಯ ಇದ್ದವರು ಸ್ವತಃ ಹಾಜಬ್ಬರನ್ನೇ ಕೇಳಬಹುದು. ಹಾಜಬ್ಬರಿಗೂ ಬಾಳೇಪುಣಿ ಕುರಿತು ಅಷ್ಟೇ ಪ್ರೀತಿ, ಗೌರವ ಇತ್ತು... ಒಬ್ಬ ಅನಾರೋಗ್ಯ ಪೀಡಿತ ವ್ಯಕ್ತಿಗೆ 5000 ರುಪಾಯಿ ನೆರವು ನೀಡಿ ಆ ಅನಾರೋಗ್ಯಪೀಡಿತನನ್ನು ನಡುವೆ ಕೂರಿಸಿ, ಅವನ ನೊಂದ ಮುಖದ ಮನೆಯವರನನೂ ಫೋಟೋದಲ್ಲಿ ಸೇರಿಸಿ 10 ಜನ ನಿಂತು ಈ ಸುದ್ದಿ ಪ್ರಕಟಿಸಿ ಅಂತ ಪತ್ರಿಕೆ ಕಳುಹಿಸುತ್ತೇವೆ, ಹೌದ?! ಹಾಗಿರುವಾಗ, ಒಬ್ಬ ಬಾಳೇಪುಣಿ ಪದ್ಮಶ್ರೀ ಪ್ರಶಸ್ತಿ ತನಕ ಸಾಗಿದ ಹಾಜಬ್ಬರ ಕುರಿತು ವಹಿಸಿಕೊಂಡು ಮಾತನಾಡಿದ್ದಲ್ಲಿ ತಪ್ಪೇನಿದೆ, ಏನಾದರೂ ತಪ್ಪಿದೆಯಾ?!

9)      ಆಗಲೇ ಹೇಳಿದ ಹಾಗೆ ಬಾಳೇಪುಣಿ ಎಲ್ಲರಂಥಲ್ಲ. ಇತ್ತೀಚೆಗೆ ಪತ್ರಕರ್ತ ಮುಹಮ್ಮದ್ ಆರೀಫ್ ಅವರು ಫೇಸ್ಬುಕ್ಕಿನಲ್ಲಿ ಬರೆದ ಬರಹದಲ್ಲೂ ಇದನ್ನು ಗಮನಿಸಿದೆ. ಅವರು ಎಲ್ಲರಿಗೂ ಬೇಕಾಗಿದ್ದರು, ಎಲ್ಲರನ್ನೂ ಬಯ್ಯುತ್ತಿದ್ದರು... ಕಾಂಗ್ರೆಸ್ಸಿನವರು ಅವರು ಬಿಜೆಪಿಯವರೆಂದೂ, ಬಿಜೆಪಿಯವರು ಅವರು ಕಾಂಗ್ರೆಸ್ಸಿನವರೆಂದೂ ಭಾವಿಸುವಷ್ಟು ಮಟ್ಟಿಗೆ ಅವರು ಅರ್ಥಕ್ಕೆ ನಿಲುಕದವರಾಗಿದ್ದರು. ಕೆಲವು ವೃತ್ತಿ ಬಾಂಧವರೇ ಅವ ಕಮ್ಯೂನಿಸ್ಟ್ ಅಂತ ಲೇಬಲ್ ಹಚ್ಚಿದ್ದೂ ಇದೆ. ಪತ್ರಕರ್ತ ಮಿತ್ರ ರಾಜೇಶ್ ಶೆಟ್ಟಿ ಇತ್ತೀಚೆಗೆ ಫೇಸ್ಬುಕ್ ಬರಹದಲ್ಲಿ ಬಾಳೇಪುಣಿ ಪ್ರತಿ ಅಂಗಿಯ ಜೇಬಿನಲ್ಲಿ ಕಪ್ಪು ಪಟ್ಟಿ ಹೊಲಿಸುತ್ತಿದ್ದರು, ಅದು ಯಾಕೆ ಅಂತ ಕೇಳಿದರೂ ಹೇಳಿರಲಿಲ್ಲ ಅಂತ ಉಲ್ಲೇಖಿಸಿದ್ದರು. ಕಳೆದ ವಾರ ಅವರು ಅಂಗಿ ಹೊಲಿಸುತ್ತಿದ್ದ ಮುಡಿಪಿನ ಅಂಗಡಿಯ ಉಮರಬ್ಬ (ನನ್ನ ಕ್ಲಾಸ್ಮೇಟ್) ಸಿಕ್ಕಿದಾಗ, ಅವ ಹೇಳಿದು. ಪಟ್ಟಿ ಇಟ್ಟು ಕೊಡುತ್ತಿದ್ದದ್ದು ನಾನೇ. ಆದರೆ ಕಾರಣ ನನಗೂ ಗೊತ್ತಿರಲಿಲ್ಲ ಅಂತ. ತನಗೆ ಆರಾಮ ಇಲ್ಲ ಎಂಬುದನ್ನೂ ಅವರು ಆತನಲ್ಲಿ ಹೇಳಿರಲಿಲ್ಲವಂತೆ. ಆ ಪಟ್ಟಿ ಬಂಡಾಯದ ಸಂಕೇತ ಅಂತ ಜನ ಹೇಳುತ್ತಾರೆ... ಅವರು ರೇಡಿಯೋ ಕೇಳುಗರಾಗಿದ್ದರು. ರೇಡಿಯೋದಲ್ಲಿ ಏನಾದರೂ ಅಪಸವ್ಯವಾದರೆ ನೇರ ನಿಲಯ ನಿರ್ದೇಶಕರಿಗೇ ಕರೆ ಮಾಡಿ ವಿರೋಧ ವ್ಯಕ್ತಪಡಿಸುತ್ತಿದ್ದರಂತೆ. ಪ್ರೆಸ್ ಕ್ಲಬ್, ಪತ್ರಕರ್ತರ ಸಂಘ, ಗ್ರಾಮ ಪಂಚಾಯಿತಿ, ಎಲ್ಲೇ ಇರಲಿ. ಇಷ್ಟವಾಗದ್ದನ್ನು ನೇರ ಹೇಳುತ್ತಿದ್ದರು. ವಿವರವಾಗಿ ಏನನ್ನಾದರೂ ಹೇಳುವಾಗ ಇಂಗ್ಲಿಷ್ ವಾಕ್ಯ ಬಳಸುವುದು ಅವರ ವಿಶೇಷವಾಗಿತ್ತು. ನನ್ನ ಮಾತೃಭಾಷೆಯಲ್ಲೇ ನನ್ನ ಜೊತೆ ಮಾತನಾಡುತ್ತಿದ್ದರು. ಅವರಿಗೆ ಇಷ್ಟವಾದವರ ಬಗ್ಗೆ ತುಂಬ ಪ್ರೀತಿ ಇತ್ತು. ಅವರು ಮಾತು ನಿಲ್ಲಿಸಿದ ಬಳಿಕ ಮನೆಗೆ ಹೋದಾಗಲೂ ಅಲ್ಲಿ ಕಷಾಯ ಕುಡಿಯುವುದು ಕಡ್ಡಾಯವಾಗಿತ್ತು. ಅವರು ಪತ್ನಿ ಮತ್ತು ಪುತ್ರನನ್ನು ಆ ರೀತಿಯ ಬೆಳೆಸಿದ್ದಾರೆ. ಕಣ್ಸನ್ನೆಯಲ್ಲೇ ನನ್ನಲ್ಲಿ ಬಾಯಾರಿಕೆ ಕುಡಿ ಅಂತ ಕಟ್ಟುನಿಟ್ಟಾಗಿ ಹೇಳಿದ್ದರು. ಅವರ ಮಗ ಮನೇಶ ಸಣ್ಣ ಬಾಲಕನಾಗಿದ್ದರೂ ದಾರಿಯಲ್ಲಿ ಸಿಕ್ಕಾಗ ನನ್ನನ್ನು ತೋರಿಸಿ, ಇವರು ನನ್ನ ಫ್ರೆಂಡ್ ಕೈಮುಗಿ ಅಂತ ಹೇಳುತ್ತಿದ್ದದ್ದು ನೆನಪಿದೆ. ಅವ ಎರಡೂ ಕೈಜೋಡಿಸಿ ಕೈಮುಗಿಯುತ್ತಿದ್ದ... ಅವರು ಇದ್ದದ್ದೇ ಹೀಗೆ... ಶಿಸ್ತು ಮತ್ತು ಖಡಕ್. ತನ್ನ ಬಳಿಕವೂ ತನ್ನ ಮನೆ, ತನ್ನ ಸಂಸಾರ ಅದೇ ಮಾರ್ಗದಲ್ಲಿ ಸಾಗಬೇಕು. ತನಗೆ ನೆರವಾದವರನ್ನು, ತನ್ನ ಅಣ್ಣನ ಮನೆಯವರನ್ನು, ತನ್ನ ಮಾತೃಸಂಸ್ಥೆಯನ್ನು ತುಂಬ ಗೌರವಿಸಬೇಕು. ಯಾವ ಕಾಲಕ್ಕೂ ಮರೆಯಬಾರದು ಎಂಬ ತುಡಿತ ಅವರ ಕೊನೆಯ ದಿನಗಳ ಸಂವಹನದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು.
















10)   ಶುರುವಿಗೇ ಹೇಳಿದ ಹಾಗೆ ನಾನು ಬಾಳೇಪುಣಿಯವರ ತುಂಬ ಆತ್ಮೀಯನೇನಲ್ಲ. ಅವರ ಕಷ್ಟ ಕಾಲದಲ್ಲಿ ಅವರಿಗೆ ಕೈತುಂಬ ನೆರವಾಗುವಷ್ಟು ಅವಕಾಶವನ್ನೂ ಹೊಂದಿದವನಲ್ಲ. ಆದರೂ ಅವರಿಗೆ ನನ್ನ ಮೇಲೆ ಪ್ರೀತಿ ಇತ್ತು. ನನ್ನಿಂದ ಹೆಚ್ಚು ಅವರ ಬಗ್ಗೆ ತಿಳಿದವರಿದ್ದಾರೆ. ಅವರ ಬಗ್ಗೆ ಮರುಗಿದವರಿದ್ದಾರೆ. ಹೇಳದೇ ಅವರ ಮನೆಗೆ ತೆರಳಿ ಸಹಾಯ ಮಾಡಿದವರಿದ್ದಾರೆ. ಅವರ ಕೆಲವು ಕಠಿಣ ನಿರ್ಧಾರಗಳನ್ನು ಗದರಿಸಿ, ಬದಲಿಸಿದವರಿದ್ದಾರೆ.ಕೊನೆಯ ದಿನದ ವರೆಗೂ ಅವರನ್ನು ಗಮನಿಸಿ ಪೊರೆದವರಿದ್ದಾರೆ. ಅವರೆಲ್ಲರೂ ಬಾಳೇಪುಣಿಯಂಥವರೇ. ಹೆಸರಿಗಾಗಿ, ಪ್ರಚಾರಕ್ಕಾಗಿ, ಗುರುತಿಸುವುದಕ್ಕಾಗಲೀ ಈ ಕಾರ್ಯಗಳನ್ನು ಮಾಡಲಿಲ್ಲ. ನನಗೆ ಅವರಲ್ಲಿ ಬಹುತೇಕರ ಹೆಸರು ಗೊತ್ತಿದೆ, ಆದರೂ ಉಲ್ಲೇಖಿಸುವುದಿಲ್ಲ, ಯಾಕೆಂದರೆ ಅದು ಅವರಿಗೆಲ್ಲ ಇಷ್ಟವಾಗುವುದಿಲ್ಲ ಅಂತ ಗೊತ್ತಿದೆ. ಇವೆಲ್ಲದರ ನಡುವೆ ಕಳೆದ ಅಕ್ಟೋಬರಿನಲ್ಲಿ ತನ್ನ ಅಣ್ಣ ಡಾ. ಕೊಯಿರಾ ಬಾಳೇಪುಣಿ ಅವರ 12ನೇ ಪುಣ್ಯಸ್ಮರಣೆ ಸಂದರ್ಭ ಅಣ್ಣನ ಬಗ್ಗೆ ಬರೆಯುವಂತೆ ಬಾಳೇಪುಣಿ ಕೇಳಿಕೊಂಡಿದ್ದರು. ಬರೆದಿದ್ದೇನೆ. ಅದು ಅವರ ಅಣ್ಣನ ಮಗ ಸುಧೀರ್ ಫೇಸ್ಬುಕ್ ವಾಲ್ ನಲ್ಲಿ ಲಭ್ಯವಿದೆ. ಉಪೇಕ್ಷಿತ ಜನಾಂಗದಿಂದ ಬಂದ ಅಣ್ಣ-ತಮ್ಮ ಧನಾತ್ಮಕವಾಗಿ ಸಾಧಿಸಿದ ಹೆಮ್ಮೆ ಅವರ ಈ ಬರಹದ ಔಚಿತ್ಯಕ್ಕೊಂದು ಕಾರಣವಾಗಿದೆ ಎಂದರೆ ಖಂಡಿತಾ ಉತ್ಪ್ರೇಕ್ಷೆ ಆಗುವುದಿಲ್ಲ. ನಮಗೆ ಸಹಜ ಹೆಮ್ಮ ಮತ್ತು ಗರ್ವ ಹಾಗೂ ಅಹಂಕಾರ ಇವೆರಡರ ನಡುವಿನ ವ್ಯತ್ಯಾಸ ಅರ್ಥವಾದಷ್ಟೂ ಒಳ್ಳೆಯದು ಅಲ್ವ? ಅವರಿಗೆ ಬಂದ ಕಾಯಿಲೆ ಯಾವುದು? ಅದಕ್ಕೆಷ್ಟು ಖರ್ಚಾಯಿತು? ಅವರಿಗೆಷ್ಟು ಸಂಬಳ ಬರ್ತಾ ಇತ್ತು? ಇನ್ಶೂರೆನ್ಸ್ ಸಿಕ್ಕಿದೆಯ? ಅವರು ಡೈರಿಯಲ್ಲಿ ಬರೆದದ್ದೇನು...? ಈ ಯಾವುದೇ ವಿಚಾರಗಳ ಚರ್ಚೆ ಈ ಅಪ್ರಸ್ತುತ... ದೂರದಿಂದ ಕಂಡ ಬಾಳೇಪುಣಿಯ ಬದುಕಿನ ಹಿಂದೆ ಎಷ್ಟೊಂದು ಸಂಗತಿಗಳಿವೆ ಎಂಬುದನ್ನು ನಿಮಗೆಲ್ಲ ತಲುಪಿಸುವುದು ನನ್ನ ಉದ್ದೇಶವಾಗಿತ್ತು. ಕಮೆಂಟುಗಳು ಬರಲಿ, ನನ್ನ ಬರಹದ ಚಟ ತೋರಿಸುವ ಉಮೇದಿನಲ್ಲಿ, ಅವರ ಖಾಸಗಿ ಬದುಕಿಗೆ ಅನಧಿಕೃತ ಪ್ರವೇಶ ಮಾಡುವ ಉತ್ಸಾಹದಲ್ಲಿ ಈ ಲೇಖನ ಬರೆದಿಲ್ಲ. ನಾವು ಓದುವ ಒಂದೊಂದೂ ಸಾವಿನ ಸುದ್ದಿಯ ಹಿಂದೆಯೂ ಅನಾವರಣವಾಗದ ಕತೆಗಳಿರ್ತವೆ ಎಂಬುದಷ್ಟೇ ನನಗೆ ಹೇಳಬೇಕಾಗಿದ್ದ ತುಡಿತ. ಕಾಡುತ್ತಿರುವ ಅಷ್ಟೂ ಸಂಗತಿಗಳನ್ನು ಆಯ್ದು, ಪೋಣಿಸಿ ಇಲ್ಲಿ ಬರೆದಿದ್ದೇನೆ. ಇದರಲ್ಲಿ ಬಾಕಿ ಆದದ್ದೂ ಇರಬಹುದು... ನಾನು ಕಾಣದ ಸಂಗತಿಗಳು ಹಲವಿರಬಹುದು. ಆದರೆ, ಕಂಡದ್ದನ್ನು, ಗ್ರಹಿಸಿದ್ದನ್ನು ಇಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದೇನೆ. ಸಾವಿನ ಬಗ್ಗೆ ಉಡಾಫೆಯಿಂದ ಮಾತನಾಡಿದಷ್ಟು ತಮಾಷೆಯಲ್ಲ ತಾನು ಹೆಚ್ಚು ದಿನ ಬದುಕುವುದಿಲ್ಲ ಅಂತ ಗೊತ್ತಿದ್ದೂ ದಿನದೂಡುವುದು. ಅದು ಅವರಿಗೆ, ಅವರಿಗೆ ಮನೆಯವರಿಗಷ್ಟೇ ವಿಷದವಾಗಿ ಅರ್ಥವಾಗಲು ಸಾಧ್ಯ... ಸಾವು ಬೇಕೆಂದಾಗ ಬರಲಾರದು, ಬರಬೇಡ ಎಂದರೂ ನಿಲ್ಲದು. ಅದು ಗೊತ್ತಿದ್ದೂ ನಾವು ನಮ್ಮ ಅಹಂ ಪೋಷಿಸುತ್ತೇವೆ, ನನ್ನಿಂದಲೇ ಅನ್ನುವ ಭ್ರಮೆಗಳಲ್ಲಿ ಇರುತ್ತೇವೆ. ಒಂದೇ ಕಚೇರಿಯಲ್ಲಿ, ನೆರೆಕರೆಯಲ್ಲಿದ್ದೂ ಎದುರಿನಿಂದ ನಗು ನಗುತ್ತಾ ಮಾತನಾಡುತ್ತಾ ಹಿಂದಿನಿಂದ ದ್ರೋಹ ಬಗೆಯುತ್ತೇವೆ, ಚೂರಿ ಇರಿಯುತ್ತೇವೆ, ಪಡೆದ ಸಾಲವನ್ನು ಉಡಾಫೆಯಿಂದ ತೀರಿಸದೆ  ಸಾವಿರ ನೆಪಗಳನ್ನು ಹೇಳಿಕೊಂಡು ತಿರುಗಾಡುತ್ತೇವೆ.... ಈಗ ಹೇಳಿ... ಈ ವರ್ಗದವರಿಗಿಂತ ಬಾಳೇಪುಣಿ ಪ್ರತ್ಯೇಕ ಜನ ಅಲ್ವ...? ನಾವು ಎಷ್ಟೇ ವರ್ಷ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರೂ ಒಂದು ದಿನ ನಾವೂ ಸಾಯುತ್ತೇವೆ. ಸತ್ತಾಗ ನಮ್ಮ ಸಾವಿನ ಸುದ್ದಿಯನ್ನು ಪುಟಗಟ್ಟಲೆ ಪತ್ರಿಕೆಯಲ್ಲಿ ಪ್ರಕಟಿಸಲು ಆಗುವುದೂ ಇಲ್ಲ. ಯಾಕೆ ಗೊತ್ತ, ಕೇವಲ ಪತ್ರಿಕಾ ಉದ್ಯೋಗಿ ಆಗಿರುವುದು ದೊಡ್ಡ ಸಾಧನೆಯಲ್ಲ, ಸತ್ತ ನಂತರವೂ ನಮ್ಮ ಬಗ್ಗೆ ಬರಿದಿಡುವಂಥದ್ದು ನಾವು ಏನಾದರೂ ಮಾಡಿದ್ದೇವೆಯಾ ಅಂತ ಹೆಗಲು ಮುಟ್ಟಿ ನೋಡಿಕೊಳ್ಳಬೇಕು, ಆಗೆ ಬಾಳೇಪುಣಿ ಯಾಕೆ ಕಾಡುತ್ತಾರೆ ಎಂಬುದು ಅರ್ಥವಾದೀತು!

-ಕೃಷ್ಣಮೋಹನ ತಲೆಂಗಳ (01.02.2025)

No comments:

Popular Posts