ಯಕ್ಷಗಾನದ ಆಡುಂಬೊಲ ತಲೆಂಗಳದಲ್ಲಿ ಪ್ರಪ್ರಥಮ ಯಕ್ಷಗಾನ ಸಂಭ್ರಮ: ನಾಲ್ಕು ತಲೆಮಾರಿನ ಶಿಕ್ಷಕರ ಕುಟುಂಬದಿಂದ ನಾಳೆ ಕಟೀಲು ಮೇಳದ ಸೇವಾ ಬಯಲಾಟ "ಶ್ರೀದೇವಿಮಹಾತ್ಮೆ"...

 


 




ಯಕ್ಷಪ್ರಿಯರೆಲ್ಲರಿಗೂ ಗೊತ್ತು... ಪದ್ಯಾಣ, ಮಾಂಬಾಡಿ, ತಲೆಂಗಳ, ಚಿಪ್ಪಾರು ಭಾಗಗಳ ಮನೆ ಮನೆಗಳಲ್ಲೂ ಯಕ್ಷಗಾನ ಪ್ರೇಮಿಗಳಿದ್ದಾರೆ. ಎಷ್ಟೋ ಮಂದಿ ಹೆಸರಾಂತ ಕಲಾವಿದರೂ ಈ ಊರಿನಲ್ಲಿ ಆಗಿ ಹೋಗಿದ್ದಾರೆ, ಈಗಲೂ ಸಕ್ರಿಯರಾಗಿದ್ದಾರೆ. ಈ ಊರಿನ ಮಣ್ಣಿನಲ್ಲೂ, ಈ ಊರ ಮಂದಿಯ ರಕ್ತದಲ್ಲೂ ಯಕ್ಷಗಾನದ ಆಸಕ್ತಿ ಸಮ್ಮಿಳತವಾಗಿದೆ.

ಈ ತಲೆಂಗಳದ ಆಸುಪಾಸಿನ ಬಾಯಾರು, ಸಜಂಕಿಲ, ನೇಲಳಕಟ್ಟೆ, ಸರ್ಕುತ್ತಿ, ಗಾಳಿಯಡ್ಕ, ಆವಳ, ನೀರಮೂಲೆ, ಕೆರೆಮೂಲೆ, ಉಳುವಾನ ಪರಿಸರದಲ್ಲೆಲ್ಲ ಯಕ್ಷಗಾನ ಪ್ರಿಯರೇ ಇರುವುದು. ಇಲ್ಲಿಯೇ ಹುಟ್ಟಿ ಬೆಳೆದವರು, ಇಲ್ಲಿಂದ ಮದುವೆಯಾಗಿ ಹೋದವರು, ಉದ್ಯೋಗ ನಿಮಿತ್ತ ಪರ ಊರುಗಳಲ್ಲಿರುವವರು, ಊರನ್ನೇ ತ್ಯಜಿಸಿ ಬೇರೆಡೆ ನೆಲೆಸಿದವರ ದೇಹದಲ್ಲೂ ಯಕ್ಷಗಾನ ಆಸಕ್ತಿ ಸಹಜವಾಗಿ ಇದ್ದೇ ಇರುತ್ತದೆ. ಪ್ರತ್ಯಕ್ಷ, ಪರೋಕ್ಷವಾಗಿ ಆಟದ ಸುತ್ತ ಅವರ ಚಿತ್ತ ಸುತ್ತುತ್ತಲೇ ಇರುತ್ತದೆ.


 ಸುತ್ತಮುತ್ತಲಿನ ಚಿಪ್ಪಾರು, ಪೈವಳಿಕೆ, ಮುಳಿಗದ್ದೆ, ಹಿರಣ್ಯ, ಬೆರಿಪದವು, ಪದ್ಯಾಣ, ಮಾಂಬಾಡಿ, ಪೆರ್ಮುದೆ, ಧರ್ಮತಡ್ಕ, ಬಾಯಿಕಟ್ಟೆ, ಕಾಯರ್ ಕಟ್ಟೆ ಸಹಿತ ಎಲ್ಲ ಊರುಗಳಲ್ಲೂ ಯಕ್ಷಗಾನ ಪ್ರಿಯರ ತವರು. ಅಂದಿನ ಮತ್ತು ಇಂದಿನ ತಲೆಮಾರಿನವರಲ್ಲೂ ಯಕ್ಷಗಾನ ಪ್ರೀತಿ ಗಾಢವಾಗಿದೆ. ಸುಮಾರು 40-50 ವರ್ಷಗಳ ಹಿಂದೆ ಬಾಯಾರು ಸೊಸೈಟಿ ಬಳಿ ಹಾಗೂ ಮುಳಿಗದ್ದೆ ಎಂಬಲ್ಲಿ ಸಾಕಷ್ಟು ಆಟಗಳು ಆಗುತ್ತಿದ್ದವು. ಟೆಂಟು ಮೇಳಗಳ ವಿಜೃಂಭಣೆಯ ಕಾಲದಲ್ಲಿ ಬಾಯಾರು ಸೊಸೈಟಿ ಬಳಿ ನಡೆಯುತ್ತಿದ್ದ ಬಯಲಾಟಗಳಿಗೆ ಲೆಕ್ಕ ಇರಲಿಕ್ಕಿಲ್ಲ.

ಬದಲಾದ ಕಾಲಘಟ್ಟದಲ್ಲಿ ಈಗ ಸೊಸೈಟಿ ಬಳಿ ಆಟವೇ ಆಗುವುದಿಲ್ಲ, ಟೆಂಟು ಮೇಳಗಳೂ ಇಲ್ಲ. ಈ ಊರಿನಲ್ಲಿ ಬಯಲಾಟ ನಡೆಯುವುದೇ ಅಪರೂಪ. ನಡೆದರೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಕೆಲ ವರ್ಷಗಳ ಹಿಂದೆ ಯಕ್ಷಮಿತ್ರರು ಬಾಯಾರು ವತಿಯಿಂದ ಬಾಯಾರು ಸೊಸೈಟಿ ಬಳಿಯೇ ಧರ್ಮಸ್ಥಳ ಮೇಳದವರ ತ್ರಿಪುರ ಮಥನ ಪ್ರಸಂಗ ಯಶಸ್ವಿ ಪ್ರದರ್ಶನ ಕಂಡಿತ್ತು. ಅದು ಬಿಟ್ಟರೆ ಸಜಂಕಿಲ ಸರ್ಕುತ್ತಿ ಬಳಿ ಕಟೀಲು ಮೇಳದವರ ಸೇವೆಯಾಟ ವರ್ಷವೂ ನಡೆಯುತ್ತದೆ. ಬಾಯಿಕಟ್ಟೆ, ಬೆರಿಪದವು, ಮೀಯಪದವು, ಚಿಗುರುಪಾದೆ ಮತ್ತಿತರ ಕಡೆ ಆಗೊಮ್ಮೆ, ಈಗೊಮ್ಮೆ ಆಟಗಳಾಗುತ್ತವೆ.

 

ಬಾಯಾರು ಪರಿಸರ ಯಕ್ಷಗಾನಕ್ಕೆ ಸಾಕಷ್ಟು ಕಲಾವಿದರನ್ನೂ ಕೊಟ್ಟಿದೆ. ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಮರಿಯಯ್ಯ ಬಲ್ಲಾಳ್, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಬಾಯಾರು ಸರವು ರಮೇಶ್ ಭಟ್, ಬಾಯಾರು ರಮೇಶ್ ಶೆಟ್ಟಿ, ಬಾಯಾರು ಗುರು ಶೆಟ್ಟಿ, ಮೋಹನ ಶೆಟ್ಟಿ ಬಾಯಾರು, ಗುರುವಪ್ಪ ಬಾಯಾರು, ಪದ್ಯಾಣ ಗಣಪತಿ ಭಟ್, ಚೈತನ್ಯ ಕೃಷ್ಣ, ವಿಷ್ಣು ಶರ್ಮ ವಾಟೆಪಡ್ಬು ಸಹಿತ ಅದೆಷ್ಟೋ ಕಲಾವಿದರು ಬಾಯಾರು ಪರಿಸರದವರು (ಪಟ್ಟಿ ಅಪೂರ್ಣ, ಹೆಸರುಗಳು ಬಾಕಿ ಆಗಿರಬಹುದು). ಇನ್ನು ತಲೆಂಗಳ ಎಂಬ ಪುಟ್ಟ ಊರನ್ನೇ ಪರಿಗಣಿಸುವುದಾದದರೆ. ಕಾಸರಗೋಡು ಜಿಲ್ಲೆಯ ಅತಿ ಎತ್ತರದ ಬೆಟ್ಟ ಗುಂಪೆ ಗುಡ್ಡದ ತಪ್ಪಲಿನಲ್ಲಿರುವ ಊರು ಬಾಯಾರು. ಆವಳ ಮಠ ಇದರ ಮಗ್ಗುಲಲ್ಲೇ ಇದೆ. ನೀರಿನಾಶ್ರಯಕ್ಕೆ ಸುರಂಗಗಳನ್ನು ಈಗಲೂ ಹೊಂದಿರುವುದು ಈ ಊರಿನ ವಿಶೇಷ.

ತಲೆಂಗಳ ಗೋಪಾಲಕೃಷ್ಣ ಭಟ್ (ಚಕ್ಕುಲಿ ಭಾಗವತರು), ತಲೆಂಗಳ ಶಂಭಟ್ರು ಮತ್ತಿತರ ಕಲಾವಿದರು ಯಕ್ಷರಂಗದಲ್ಲಿ ಹೆಸರು ಮಾಡಿದವರು. ತಲೆಂಗಳ ಈಶ್ವರ ಭಟ್ರು ಹವ್ಯಾಸಿಯಾಗಿ ಹನುಮಂತನ ಪಾತ್ರದಲ್ಲಿ ಹೆಸರುವಾಸಿ, ಅವರ ಪುತ್ರ ಕುಮಾರ ಶಂಕರ ತಲೆಂಗಳ ಯಕ್ಷಗಾನದಲ್ಲಿ ವೇಷ ಧರಿಸುತ್ತಾರೆ, ಶ್ಯಾಮಕುಮಾರ ತಲೆಂಗಳ ಭಾಗವತಿಕೆಯಲ್ಲಿ ಹೆಸರು ಮಾಡಿದವರು. ಹನುಮಗಿರಿ ಮೇಳದ ಯಜಮಾನರು, ಕಲಾವಿದರ ಕಾಮಧೇನು ಎಂದೇ ಖ್ಯಾತರಾದ ಟಿ. ಶ್ಯಾಮ್ ಭಟ್ ಅವರ ಊರು ಇದೇ ತಲೆಂಗಳ. ಹಿರಿಯ ಮಹಿಳಾ ಭಾಗವತ ಶ್ರೀಮತಿ ದುರ್ಗಾಪರಮೇಶ್ವರಿ ಕುಕ್ಕಿಲ, ಅವರ ಸಹೋದರ ಹವ್ಯಾಸಿ ಕಲಾವಿದ ಶಂ.ನಾ.ಬಾಯಾರು ಸಹ ಇದೇ ತಲೆಂಗಳ ಪರಿಸರದವರು. ನನ್ನ ತಿಳಿವಳಿಕೆಯಲ್ಲಿಲ್ಲದ ಇನ್ನಷ್ಟು ಕಲಾವಿದರು ಇರಬಹುದು, ಉಲ್ಲೇಖ ಆಗದಿದ್ದರೆ ಕ್ಷಮೆ ಇರಲಿ. ಇಂತಹ ಅದೆಷ್ಟೋ ಮಂದಿ ಈ ಮಣ್ಣಿನ ಸೊಗಡಿನಿಂದ ಕಲಾವಿದರಾಗಿ ಮೂಡಿ ಬಂದವರು. ವಿದ್ವಾನ್ ತಲೆಂಗಳ ರಾಮಕೃಷ್ಣ ಭಟ್ ಎಂಬವರು ಯಕ್ಷಗಾನ ಪ್ರಸಂಗಕರ್ತರೂ ಹೌದು. ನಮ್ಮ ಈ ಬಲ್ಲಿರೇನಯ್ಯ ಗ್ರೂಪಿನಲ್ಲೇ ಬಾಯಾರು ಹಾಗೂ ತಲೆಂಗಳ ಮೂಲದ ಸಾಕಷ್ಟು ಮಂದಿ ಸದಸ್ಯರಾಗಿದ್ದಾರೆ ಎಂಬುದೂ ಖುಷಿಯ ಸಂಗತಿ.

 

ಈ ತಲೆಂಗಳ ಪರಿಸರದ ಗಾಳಿಯಡ್ಕದಲ್ಲಿ ಏಳು ದಶಕಗಳಿಗೂ ಹಿಂದೆ ದೇವಿಮಹಾತ್ಮೆ ಯಕ್ಷಗಾನ ನಡೆದಿತ್ತು ಎಂದು ಹಿರಿಯರು ಹೇಳುತ್ತಾರೆ. ಈ ಬಗ್ಗೆ ಖಚಿತ ಮಾಹಿತಿ, ದಾಖಲೆ ನನಗಿಲ್ಲ. ಈ ತಲೆಂಗಳ ಸಮೀಪವೇ ಗಾಳಿಯಡ್ಕ ಎಂಬಲ್ಲಿ ಶತಮಾನ ದಾಟಿರುವ ಪ್ರಸಿದ್ಧ ಶಾಲೆಯಿದೆ. ಆವಳ ಏಯ್ಡೆಡ್ ಕಿರಿಯ ಪ್ರಾಥಮಿಕ ಶಾಲೆ ಗಾಳಿಯಡ್ಕ. ಇಲ್ಲಿನ ಪೂರ್ವಜರಾದ ಮಹಾಲಿಂಗ ಮಾಸ್ತರ್ ಕುಟುಂಬವೇ ಶಿಕ್ಷಕರ ಕುಟುಂಬ. ಅವರು ಶಿಕ್ಷಕರು. ಅವರ ಪುತ್ರ  ಅಪ್ಪು ಮಾಷ್ಟ್ರು ಹಾಗೂ ಅವರ ಪುತ್ರ ಬಾಬು ಮಾಷ್ಟ್ರು ಇದೇ ಗಾಳಿಯಡ್ಕ ಶಾಲೆಯಲ್ಲಿ ಶಿಕ್ಷಕರಾಗಿದ್ದವರು. ಬಾಬು ಮಾಷ್ಟ್ರ ಪುತ್ರರಲ್ಲೂ ಶಿಕ್ಷಕರಿದ್ದಾರೆ. ನಾಲ್ಕು ತಲೆಮಾರುಗಳಿಂದ ಶಿಕ್ಷಕರ ಕುಟುಂಬ ಅವರದ್ದು. ಬಾಬು ಮಾಷ್ಟ್ರ ನಾಲ್ವರು ಪುತ್ರರು ಸೇರಿ ಗುರುಜ್ಯೋತಿ ಪ್ರತಿಷ್ಠಾನ ಎಂಬ ಟ್ರಸ್ಟ್ ರಚಿಸಿದ್ದು, ಈ ಟ್ರಸ್ಟ್ ಮೂಲಕ ಬಾಬು ಮಾಷ್ಟ್ರ ಪತ್ನಿ ಶ್ರೀಮತಿ ರೋಹಿಣಿ ಅವರ ಹೆಸರಿನಲ್ಲಿ ಮಾ.19 ಗುರುವಾರ ಯುಗಾದಿ ದಿನ ತಲೆಂಗಳ ಗುರುನಿಲಯ ಎಂಬಲ್ಲಿ (ಬಾಬು ಮಾಷ್ಟ್ರ ಮನೆ) ಕಟೀಲು ನಾಲ್ಕನೇ ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ.

ತಲೆಂಗಳ ಊರಿನಿಂದ ಯಕ್ಷಗಾನಕ್ಕೆ ಅದೆಷ್ಟೊ ಕಲಾವಿದರು, ಕಲಾಪ್ರೇಮಿಗಳು ಸಿಕ್ಕಿರಬಹುದು. ಆದರೆ, ಇದೇ ಊರಿನಲ್ಲೇ ಪ್ರಥಮ ಬಾರಿಗೆ ಒಂದು ಆಟ ನಡೆಯುತ್ತದೆ ಎಂಬುದು ತುಂಬ ಖುಷಿ ಹಾಗೂ ಆ ಊರಿನವರಿಗೆ ಹೆಮ್ಮೆಯ ಸಂಗತಿಯೇ ಸರಿ. ಬಾಯಾರು ಸೊಸೈಟಿಯಿಂದ ಗಾಳಿಯಡ್ಕಕ್ಕೆ ಹೋಗುವಾಗ ಎಡಕ್ಕೆ ತಲೆಂಗಳ ದಾರಿಯಾಗಿ ಸುಮಾರು 100 ಮೀಟರ್ ಸಾಗಿದಾಗ ಸಿಗುವ ಮುಳಿಕೋಟೆಯ ಹೊರಗಡೆ ಈ ಆಟ ನಾಳೆ ನಡೆಯಲಿದೆ...

ದಶಕಗಳಿಂದ ಯಕ್ಷಗಾನದ ಸವಿಗೆ ಪ್ರೋತ್ಸಾಹಿಸುವ ಊರಿನಲ್ಲೇ ನಡೆಯುವ ಈ ಆಟ ವೈಭವದಿಂದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಲಿ ಎಂಬ ಆಶಯದೊಂದಿಗೆ... ಬಲ್ಲಿರೇನಯ್ಯ ಯಕ್ಷಕೂಟ ಬಳಗದಿಂದ ಈ ಆಟಕ್ಕೆ ಶುಭಾಶಯಗಳು.

-ಕೃಷ್ಣಮೋಹನ ತಲೆಂಗಳ (18.03.2026)

No comments:

Popular Posts