ಸಾವಿನಿಂದ ಕಾಯುವವನೂ ಕಾಯುವವರ ಕರೆಗೆ ಓಗೊಟ್ಟು ಸಾಯಿಸುವುದಲ್ಲ... ಅದು ತರ್ಕಕ್ಕೆ ನಿಲುಕದ್ದು!

 



ಸಾವು ಖಚಿತ ಅಂತ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಆದರೆ, ನಾನೊಬ್ಬ ಇದಕ್ಕೆ ಅತೀತ ಅನ್ನುವ ವಿಚಿತ್ರ ಭ್ರಾಂತಿ ಬಹುಶಃ ಎಲ್ಲೋ ಮೂಲೆಯಲ್ಲಿ ಮನೆ ಮಾಡಿರುತ್ತದೆ. ಸಾವನ್ನು ತಪ್ಪಿಸಲು ಅಸಾಧ್ಯ ಅನ್ನುವುದು ಸಾಕಷ್ಟು ಜೀವಂತ ಘಟನೆಗಳೇ ಸಾರಿ ಸಾರಿ ಹೇಳಿವೆ. ಅಂತಹ ಘಟನೆಗಳನ್ನು ಕಾಣಲು, ಕಂಡು ಅರ್ಥ ಮಾಡಿಕೊಳ್ಳಲು ಮತ್ತು ಅರಗಿಸಿಕೊಳ್ಳಲು ಸಾಧ್ಯವಾಗುವುದೂ ಬದುಕಿದ್ದಾಗ ಮಾತ್ರ. ಸತ್ತವನಿಗೆ ಹೇಳಲು ಸಾಧ್ಯವಿಲ್ಲ, ನಾನು ಸತ್ತಾಗಿದೆ ಅಂತ.

ಅಷ್ಟೊಂದು ಕಠೋರ ಸತ್ಯ ಮತ್ತು ಒಪ್ಪಿಕೊಳ್ಳಲೇಬೇಕಾದ ಸಂಗತಿ ಇನ್ನಿಲ್ಲವಾಗುವುದು. ಎಷ್ಟೇ ನುಡಿ ನಮನ ಸಲ್ಲಿಸಿದರೂ, ಫ್ಲಕ್ಸ್ ಹಾಕಿದರೂ, ಸತ್ತವನಿಗೆ ಶ್ರದ್ಧಾಂಜಲಿ ಮಾಡಿದರೂ, ಬೊಜ್ಜಕ್ಕೆ ಮೂರು ಬಗೆ ಸ್ವೀಟ್ ಮಾಡಿಸಿದರೂ, ಸತ್ತವನ ಹೆಸರಿನಲ್ಲಿ ಸರ್ಕಲ್ಲು, ಬಸ್ ಸ್ಟ್ಯಾಂಡ್ ಮಾಡಿದರೂ ಸತ್ತವ ಮತ್ತೊಮ್ಮೆ ಎದ್ದು ಬರಲಿಕ್ಕಿಲ್ಲ. ನಾವು ಮತ್ತೊಮ್ಮೆ ಆ ವ್ಯಕ್ತಿತ್ವದ ಜೊತೆಗೆ ಒಡನಾಡಲಿಕ್ಕಿಲ್ಲ. ಅದೇ ಕಾರಣಕ್ಕೆ ಹೇಳದೇ ಕೇಳದೇ ಸತ್ತು ಹೋದವರ ಅಗಲುವಿಕೆಯೆಲ್ಲ ಅರಗಿಸಲಾಗದ ಶಾಕ್ ಥರ ಕಾಡುವುದು.

 

ಸಾವಿನ ಬಗ್ಗೆ ಅಧ್ಯಯನ ಮಾಡಿದವರು, ಸಾವಿನ ಮುನ್ಸೂಚನೆ ನೀಡಿದವರು, ಸಾವಿನ ಅಧ್ಯಾತ್ಮಿಕ ಮಗ್ಗುಲುಗಳ ಬಗ್ಗೆ ಪುಟಗಟ್ಟಲೆ ಬರೆದವರನ್ನೂ ಸಾವು ಇನ್ನಿಲ್ಲವಾಗಿಸಿದೆ. ಸತ್ತವರು ಸ್ವರ್ಗಕ್ಕೆ, ನರಕಕ್ಕೆ ಹೋಗುವುದರ ವ್ಯಾಖ್ಯಾನ ಮಾಡಿದವರಿಗೂ ಸತ್ತ ಬಳಿಕ ತಾವೆಲ್ಲಿಗೆ ಹೋಗಿದ್ದೇವೆ ಅಂತ ಹೇಳಲು ಆಗಿಲ್ಲ, ಆಗುವುದೂ ಇಲ್ಲ ಎಂಬುದೇ ಸಾವನ್ನು ತಿಳಿದೂ, ಅದರಿಂದಾಚೆಗೆ ಬರಲಾಗದೆ ಇರುವ ಅಸಹಾಯಕ ತಿಳಿವಳಿಕೆ. ಬ್ಲಾಕ್ ಸ್ಪಾಟ್ ಥರ ಅದುಂಟು ಅಂತ ಗೊತ್ತಿದ್ದರೂ ಅದನ್ನು ಹಾದು ಹೋಗುವಾಗ ಅದಕ್ಕೆ ಆಪೋಶನ ಆಗಲೇಬೇಕು.

 

ಸತ್ತರೆ ಸಾಕು ಅಂತ ಹೇಳುವವರೂ ತಕ್ಷಣ ಸಾಯ್ತಾರೆ ಅಂತಾದರೆ ಸಾಯುವ ಮಾತೇ ಆಡುತ್ತಿರಲಿಲ್ಲ ಅಂತ ಬರೆಹಗಾರ ಕೆ.ಟಿ.ಗಟ್ಟಿ ಅವರು ಒಂದು ಕಡೆ ಉಲ್ಲೇಖಿಸುತ್ತಾರೆ. ಸಾವಿನ ವೈರಾಗ್ಯ ಕಾಡುವುದಕ್ಕೂ ಸಾವನ್ನು ಹತ್ತಿರದಿಂದ ಕಾಣುವುದಕ್ಕೂ, ಸಾವು ಕಂಡ ಬಳಿಕ ತನ್ನ ಸಾವನ್ನು ನೆನೆದು ನಿರ್ಲಿಪ್ತನಾಗುವುದಕ್ಕೂ, ಅತ್ತಿತ್ತ ನಿತ್ಯವೆಂಬಂತೆ ಓದಲು, ಕಾಣಲು ಸಿಗುವ ಸಾವಿನ ಪುಟ ಪುಟಗಳ ಅಧ್ಯಾಯಗಳು ಹುಟ್ಟಿಸುವ ಶೂನ್ಯದ ಭಾವವೂ ಲೌಕಿಕದ ಭ್ರಮೆಗಳಡಿ ಕ್ಷಣ ಕಾಲ ಹುದುಗಿ ಹೋಗುತ್ತವೆ. ಇಲ್ಲವಾದರಲ್ಲಿ ಜಗತ್ತೊಂದು ನಿರಾಶವಾದದ ಕೂಪವಾಗಿರುತ್ತಿತ್ತು.

 

ಗುಟ್ಕಾ ತಿಂದು ಉಗುಳಲು ಬಸ್ಸಿನಿಂದ ತಲೆ ಹೊರಗೆ ಹಾಕಿದವನ ರುಂಡವೇ ತುಂಡಾಗಿ ಸತ್ತದ್ದು, ಮನೆಯವರಲ್ಲಿ ತನಗೆ ನಿಶ್ಚಯವಾದ ಹುಡುಗ ಇಷ್ಟವಿಲ್ಲ ಅಂತ ಹೇಳಲು ಧೈರ್ಯವಿಲ್ಲದಿದ್ದರೂ ಧೈರ್ಯ ಮಾಡಿ ತನಗೆ ಫಿಕ್ಸ್ ಆಗಿದ್ದ ಹುಡುಗನ್ನು ಪ್ರಿಯಕರನ ಜೊತೆ ಸೇರಿ ಕೊಂದದ್ದು, ಯಾರದ್ದೋ ನಿರ್ಲಕ್ಷ್ಯದ ಕೆಲಸದಿಂದ ನಡೆದ ಕೆಟ್ಟ ಕಾಮಗಾರಿಯಿಂದ ಉಂಟಾದ ಹೊಂಡಕ್ಕೆ ಬೈಕಿನ ಚಕ್ರ ಸಿಲುಕಿ ಹಿಂಬದಿ ಸವಾರ ಬಿದ್ದು, ತಲೆ ಮೇಲೆ ಲಾರಿ ಹೋಗಿ ಸತ್ತದ್ದು.... ಎಷ್ಟೊಂದು ರೀತಿಯ ಸಾವು. ಯಾರ ತಪ್ಪು, ಯಾರಿಗೆ ಯಾರು ಕೊಟ್ಟ ಶಿಕ್ಷೆ, ಯಾರಿಂದಾಗಿ ಬರುವ ಸಾವು, ತಪ್ಪೇ ಮಾಡದೆ ಸಂಭವಿಸುವ ಸಾವುಗಳಿಂದ ಪಾಠ ಯಾರಿಗೆ ಒಂದೂ ಅರ್ಥ ಆಗುವುದಿಲ್ಲ. ಮುಂಜಾನೆ ಮನೆಯೊಳಗೆ ಮಲಗಿದ್ದವರ ಮೇಲೆ ಗುಡ್ಡ ಬಿದ್ದು ಏನಾಗ್ತಿದೆ ಅಂತ ತಿಳಿಯುವ ಮೊದಲೇ ಮಂಗಳೂರು ನಾಗುರಿಯಲ್ಲಿ ಸಂಭವಿಸಿದ ಸಾವು. ಮನೆ ಮೇಲೆ ಗುಡ್ಡ ಬಿದ್ದು ಕಂದಮ್ಮಗಳು ಸತ್ತು, ಮನೆ ಮಂದಿ ಇಲ್ಲವಾದರೂ ತಾನು ಬದುಕುಳಿದು ಕಾಲು ಕಳೆದುಕೊಂಡು ಎಲ್ಲ ನೋವುಗಳನ್ನು ಶಾಶ್ವತವಾಗಿ ನುಂಗಿಕೊಂಡು, ಸಂಭವಿಸಿದ ಸಾವಿಗೆ ಯಾರು ಹೊಣೆ ಅಂತವೇ ಅರ್ಥವಾಗದೆ ದಿನ ದೂಡುತ್ತಿರುವ ಮಂಜನಾಡಿಯ ಅಶ್ವಿನಿ ಎಂಬ ಮಹಿಳೆ.. ಹೇಳುತ್ತಾ ಹೊರಟರೆ ಸಾವಿನ ಕತೆಗಳಿಗೆ ಚಿಲುಕವನ್ನೇ ಹಾಕಲು ಸಾಧ್ಯವಿಲ್ಲ....

 

ನನ್ನ ವಾಹನಕ್ಕೆ ಇನ್ನೊಂದು ವಾಹನ ಗುದ್ದಿತು, ಅದೃಷ್ಟವಶಾತ್ ನಾನಾಗ ವಾಹನದಲ್ಲಿ ಇಲರಲಿಲ್ಲ. ಗಾಡಿ ನಜ್ಜುಗುಜ್ಜಾಯಿತು, ನಾನು ಬದುಕಿದೆ, ನನ್ನ ಬೈಕಿಗೆ ಲಾರಿ ತಾಗುವುದು ಸ್ವಲ್ಪದರಲ್ಲಿ ತಪ್ಪಿತು, ಸೈಡ್ ಮಿರರ್ ಮಾತ್ರ ತುಂಡಾಯಿತು... ನಾನು ಬಿದ್ದೆ, ತಕ್ಷಣ ಯಾರೋ ದೇವರಂತೆ ಬಂದು ಎಬ್ಬಿಸಿದರು... ಹೀಗೆ ಸಾವಿನಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿದ ಕತೆಗಳೂ ತುಂಬಾ ಇವೆ. ಯಾರು ದೇವರಂತೆ ಬಂದು ಕಾಪಾಡಿದವರು, ಅವಘಡದ ಹೊತ್ತಿಗೆ ಅವಘಡ ಹಾನಿ ಮಾಡಿದರೂ ಅದರ ತೀವ್ರತೆ ತಗ್ಗುವಂತೆ ಮಾಡಿದವರು ಯಾರು, ಯಾಕಾಗಿ ಬದುಕುಳಿಸಿದ, ಅದರಿಂದ ಏನು ಕಲಿಯಬೇಕು ಎಂಬಿತ್ಯಾದಿ ಸಂಗತಿಗಳು ಎಷ್ಟೋ ಸಲ ತರ್ಕಕ್ಕೆ ನಿಲುಕದ ಸಂಗತಿಗಳು... ಜೀವಂತ ಇದ್ದಾಗಲೇ ಕೊಲ್ಲುವವರಿಗೂ, ಸಾಯುವ ಹಂತದಲ್ಲಿ ಬದುಕಿಸಿದವರಿಗೂ, ಜೀವಂತ ಶವದಂತೇ ಬದುಕಿದರೂ ಸಾಯುವ ಕಾಲಕ್ಕೆ ಅದನ್ನು ತಡೆಯಲು ದೇವರಿಂದ ಬಿಟ್ಟು ಇನ್ಯಾರಿಂದಲೂ ಸಾಧ್ಯವಿಲ್ಲ.

 

ಸತ್ತ ಮೇಲೆ ವ್ಯಕ್ತಿಯ ಮೌಲ್ಯ ಜಾಸ್ತಿ ಆಗ್ತದೆ. ಇನ್ನಿಲ್ಲ ಅಂತ ಗೊತ್ತಾದ ಮೇಲೆ ಏಕಾಏಕಿ ಅವ ಭಯಂಕರ ಬೆಲೆ ಬಾಳುವವನಾಗುತ್ತಾನೆ. ಬದುಕಿದ್ದಾಗ ಸಿಕ್ಕದ ಮರ್ಯಾದೆ, ಮೌಲ್ಯ ಮತ್ತು ಪ್ರಶಂಸೆ ಸತ್ತಾಗ ಎಲ್ಲೆಲ್ಲಿಂದಲೋ ಬರುತ್ತದೆ. ಆದರೆ ಅದ್ಯಾವುದೂ ಅವನಿಗೆ ಕೇಳುವುದೂ ಇಲ್ಲ, ಸತ್ತವರಿಗೆ ಅದರ ಅಗತ್ಯವೂ ಇಲ್ಲ. ಅಸಲಿಗೆ ಅವರೇ ಇಲ್ಲದಿದ್ದ ಮೇಲೆ ಅದು ಅವರ ಮನೆಯವರಿಗೆ ಕೇಳಿಸೀತೇ ವಿನಃ ಸತ್ತವನ ಜನ್ಮದಲ್ಲಿ ಕೇಳುವ ಯೋಗ ಅವನಿಗೆ ಒದಗುವುದೇ ಇಲ್ಲಂತ ಅರ್ಥ.

ಇತ್ತೀಚೆಗೆ ಓದಿದ ಒಂದು ಸಾಲು ತುಂಬ ಇಷ್ಟವಾಯಿತು. ಜನ ನಿಮ್ಮನ್ನು ತುಂಬಾ ಹೊಗುಳುತ್ತಾರೆ. ಆದರೆ, ಅದಕ್ಕೂ ಮೊದಲು ನೀವು ಸಾಯಬೇಕು!

-ಕೃಷ್ಣಮೋಹನ ತಲೆಂಗಳ (04.07.2026)

1 comment:

Unknown said...

ಅದಕ್ಕೇ ಸ್ಮಶಾನ ವೈರಾಗ್ಯ ಎಂಬ ಪದ ಹುಟ್ಟಿದ್ದು, ಉತ್ತಮ ಬರಹ