ಕಾಡುವ ಕಾಶಿಯ ಸುತ್ತ ಓಡಾಡುವ ಒಂದು ದಿನದ ಕಥೆ “ಚಿನ್ನ ಚಿನ್ನ ಆಸೈ”
ಈ ಸಿನಿಮಾ ನೋಡ್ತಾ ಇದ್ರೆ
ಕಾಶಿಯ ಗಂಗಾತೀರದಲ್ಲಿ ಓಡಾಡಿದ ಭಾಸವಾಗುತ್ತದೆ. ಅಷ್ಟು ಚೆಂದವಾಗಿ ಫ್ರೇಮುಗಳು ಕಾಡುತ್ತವೆ.
ಕಾಶಿಯ ಘಾಟ್ ಗಳು, ಓಣಿ ಓಣಿಗಳು, ಹಳೇ ಕಟ್ಟಡ, ಇಕ್ಕಟ್ಟು ರಸ್ತೆ, ಸೈಕಲ್ ರಿಕ್ಷಾ, ಅಲ್ಲಿನ
ಸಂಜೆ, ಅಲ್ಲಿನ ರಾತ್ರಿ ಮತ್ತು ಅಲ್ಲಿನ ಭಾಷೆ, ವಹಿವಾಟು ಮತ್ತು ವಿಶಾಲ ಮೆಟ್ಟಿಲುಗಳ ಸಹಿತ
ಪ್ರತಿಯೊಂದು ಕೊನೆ ವರೆಗೆ ಕಾಡುತ್ತದೆ. ಇದಕ್ಕಿಂತ ಮೊದಲು ಬಂದಿದ್ದ ಮಲಯಾಳಂನ FALIMY ಚಿತ್ರದಲ್ಲಿ
ಕಂಡದ್ದಕ್ಕಿಂತ ಚೆನ್ನಾಗಿ ವಾರಾಣಸಿ ಈ ಚಿತ್ರದ ಪ್ರತಿ ದೃಶ್ಯದಲ್ಲಿ ಕಾಣುತ್ತದೆ, ಕಾಡುತ್ತದೆ.
ಹೊರ ನಾಡಿನ ಲೊಕೇಶನ್ ಇಲ್ಲ, ಫೈಟಿಂಗ್ ಇಲ್ಲ, ಉತ್ಪ್ರೇಕ್ಷಿತ ದೃಶ್ಯಗಳಿಲ್ಲ, ದೀರ್ಘವಾಗಿ
ಎಳೆದಂತೆ ಅನ್ನಿಸುವ ಸನ್ನಿವೇಶಗಳಿಲ್ಲ. ತುಂಬ ಗೊಂದಲಕ್ಕೆ ಈಡು ಮಾಡುವಂಥದ್ದು ಏನಿಲ್ಲ. ಸಣ್ಣ
ಕತೆಯೊಂದನ್ನು ದಿನವೊಂದರೊಳಗೆ ನಡೆದ ಪುಟ್ಟ ಪುಟ್ಟ ಘಟನೆಗಳ ಗುಚ್ಛವನ್ನು ಸಿನಿಮಾವಾಗಿ ಹೆಣೆಂದತೆ
ಮೂಡಿರುವುದು ಮಲಯಾಂಳ ಚಿತ್ರ ಚಿನ್ನ ಚಿನ್ನ ಆಸೈ... ಕತೆ ಬಗ್ಗೆ ಹೇಳುವುದಕ್ಕಿಂತ ನೀವೇ
ನೋಡುವುದು ಒಳ್ಳೆಯದು. ಇಂದ್ರನ್ಸ್ ಮತ್ತು ಮಧು ನಟನೆಯ ಚಿತ್ರ. ಇವರೇ ಪ್ರಧಾನ. ಮತ್ತಿರುವವರು
ಪೂರಕ ನಟನೆ ಅಷ್ಟೇ...ಹಾಡುಗಳಿವೆ, ನೃತ್ಯ ಇದೆ. ಸ್ವಲ್ಪ ಅನಿರೀಕ್ಷಿತ ಅಂತ್ಯವೂ ಇದೆ. ತಡರಾತ್ರಿ,
ಗಾಢ ರಾತ್ರಿ ಮತ್ತು ಮುಂಜಾನೆಯ ಗಂಗೆಯನ್ನು ಫ್ರೇಮಿನಲ್ಲಿ ಕಟ್ಟಿಕೊಟ್ಟದ್ದು, ಸ್ಮಶಾನದ
ಸಮೀಪಕ್ಕೆ ಹೋಗದೆ ದೂರದಿಂದಲೇ ಹೆಣ ಸುಡುವುದು ನೋಡಲಿಕ್ಕಾಗುವುದಿಲ್ಲ ಅಂತ ನಾಯಕ ಹೇಳುವುದು,
ನಿಶ್ಯಬ್ಧವಾಗಿ ಗಂಗೆಯ ಅಲೆಗಳು ತೀರಕ್ಕೆ ಬಡಿಯುವಾಗ ಮನಸ್ಸಿನಲ್ಲಿ ಹೊರಳಾಡುವ ತಲ್ಲಣಗಳು ಎಲ್ಲವೂ
ಈ ಸಿನಿಮಾವನ್ನು ಪ್ರತ್ಯೇಕವಾಗಿಸಿದೆ. ನಾಯಕಿ ಮಧು ಅವರಿಗಿಂತ ಇನ್ನೂ ಉತ್ತಮ ಆಯ್ಕೆಗಳು
ಇದ್ದವೇನೋ ಅನ್ನಿಸಿದರೂ ಇಂದ್ರನ್ಸ್ ನಟನೆ ಬಗ್ಗೆ ಎರಡು ಮಾತಿಲ್ಲ. ಪಕ್ಕಾ ಮಲಯಾಳಿ ಛಾಪು
ಸಿನಿಮಾದಲ್ಲಿದೆ. ವರ್ಷಾ ವಾಸುದೇವ್ ನಿರ್ದೇಶನದ ಸಿನಿಮಾದಲ್ಲಿ ಜನಪ್ರಿಯ ನಟಿ ಅಪರ್ಣಾ ಬಾಲಮುರಳಿ
ಸಹ ಇದ್ದಾರೆ. JIOHOTSTAR OTTಯಲ್ಲಿ ಲಭ್ಯ. ಎಷ್ಟು ಹೊತ್ತು
ಜೊತೆಗಿದ್ದರೇನು. ಇದ್ದಷ್ಟು ಹೊತ್ತು ಹೇಗಿದ್ದೆವು ಎಂಬುದು ಮುಖ್ಯ ಎಂಬುದನ್ನು ಅರ್ಥಗರ್ಭಿತವಾಗಿ
ತೋರಿಸುವ ಸಿನಿಮಾ ಇದು!
-ಕೃಷ್ಣಮೋಹನ ತಲೆಂಗಳ. 06.08.2026

No comments:
Post a Comment