ಪ್ರೇಮದ ಊರಲಿ... ತಾಜಾ ಕತೆ ಇದ್ರೂ ಜನ ಮೆಚ್ತಾರೆ!
ಕತೆ ಮತ್ತು ಸಂದೇಶ ಗಟ್ಟಿಯಾಗಿದ್ದರೆ ಬಜೆಟ್ಟು, ಲೊಕೇಶನ್ನು, ದೊಡ್ಡ ದೊಡ್ಡ ಸ್ಟಾರುಗಳು, ಅತೀ ಮಧುರ ಹಾಡುಗಳು ಇಲ್ಲದಿದ್ದರೂ ಸಿನಿಮಾ ಜನರನ್ನು ಸೆಳೆಯಬಲ್ಲುದು ಎಂಬುದಕ್ಕೆ ಮತ್ತೊಂದು ಸಾಕ್ಷಿ ಇತ್ತೀಚೆಗೆ ತೆರೆ ಕಂಡ ಕನ್ನಡ ಸಿನಿಮಾ “ಪ್ರೇಮದ ಊರಲಿ...”.
ಜನ ಫ್ರೆಶ್ ಬಯಸ್ತಾರೆ ಎಂಬುದು ಈ ಸಿನಿಮಾದಿಂದ ಮತ್ತೊಂದು ಸಲ ಸ್ಪಷ್ಟವಾಯಿತು. ಈ ಸಿನಿಮಾದಲ್ಲಿ ತುಂಬ ಮರ ಸುತ್ತೋದು, ಫೈಟಿಂಗು, ವಿದೇಶದಲ್ಲಿ ಶೂಟಿಂಗು, ಟೂ ಪೀಸು, ದೊಡ್ಡ ದೊಡ್ಡ ಅಬ್ಬರದ ಮಾಸ್ ಡೈಲಾಗು, ಮಾಸ್ ಹೀರೋ, ಪರಭಾಷಾ ನಾಯಕಿ ಯಾರ, ಎಂತದ್ದೂ ಇಲ್ಲ. ಹಾಸನ ಸಮೀಪದ ಮಳೆ ಮಲ್ಲೇಶ್ವರ ಬೆಟ್ಟದ ಹಿನ್ನೆಲೆ ಕಾಣಿಸುವ ಹಳ್ಳಿಯೊಂದರ ಪರಿಸರದಲ್ಲೇ ಬಹುತೇಕ ಚಿತ್ರೀಕರಣಗೊಂಡಿದೆ. ರಂಗಾಯಣ ರಘು ಅವರನ್ನು ಬಿಟ್ಟರೆ ಮತ್ಯಾರೂ ಹೆಸರಾಂತ ಹಿರಿತೆರೆ ನಟ, ನಟಿಯರಿಲ್ಲ. ಆದರೂ, ಸಿನಿಮಾ ಜನರನ್ನು ಸೆಳೆದಿದೆ. ಬಾಯಿಂದ ಬಾಯಿಗೆ ಚಿತ್ರ ಪ್ರಚಾರ ಪಡೆಯುತ್ತಿದೆ. ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದಲ್ಲೂ ಹೆಸರು ಪಡೆಯುತ್ತಿದೆ.
ಇದು ಸಹ ಲವ್ ಸಿನಿಮಾವೇ. ಸಾವಿರಾರು ಲವ್ ಸಿನಿಮಾಗಳು ಬಂದಿವೆ. ಆದರು ಇಲ್ಲೊಂದು ಸಂದೇಶ ಇದೆ, ಇಲ್ಲೊಂದು ಭಾವನಾತ್ಮಕ ಸನ್ನಿವೇಶ ಇದೆ, ಇಲ್ಲಿ ತಾರ್ಕಿಕ ಉತ್ತರಗಳಿವೆ ಮತ್ತು ತುಂಬ ಸಾಮಾನ್ಯವಾಗಿ ಕಾಡುವ ಕೆಲವು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಿವೆ. ರಂಗಾಯಣ ರಘು ಅವರಿಗೆ ತುಂಬ ಚೆಂದದ ಅವಕಾಶ ಸಿಕ್ಕಿದೆ, ಮತ್ತವರು ಅದನ್ನು ಅತ್ಯಂತ ಚೆನ್ನಾಗಿ ನಿಭಾಯಿಸಿದ್ದಾರೆ. ನಾಯಕ, ನಾಯಕಿ, ಆರಂಭದಲ್ಲಿ ಗಂಡುಬೀರಿಯಾಗಿ, ನಡುವೆ ಭಾವುಕಳಾಗಿ, ಕೊನೆಗೆ ಕಲ್ಲಾಗಿ ನಟಿಸುವ ದುರಂತ ನಾಯಕಿ, ಇವರೆಲ್ಲರೂ ತಾವು ಹೊಸಬರೆಂಬುದನ್ನು (ಕಿರುತೆರೆಯಲ್ಲಿ ಕಾಣಿಸಿದವರೂ ಇದ್ದರೆ) ಮರೆತು ನಟಿಸಿದಂತೆ ಭಾಸವಾಗುತ್ತದೆ... ಹಾಡುಗಳು ತೀರಾ ಕಾಡದಿದ್ದರೂ ಟೈಟಲ್ ಸಾಂಗ್ ಅಂತೂ ಇಷ್ಟವಾಗುತ್ತದೆ.
ಇಡೀ ಸಿನಿಮಾದಲ್ಲಿ ಸಣ್ಣ ಪ್ರಾಯದವರಿಂದ ಅಜ್ಜಿ ಪಾತ್ರ ಮಾಡಿಸಿದ್ದು (ತುಸು ಕೃತಕ ಕಾಣಿಸುತ್ತದೆ) ಮತ್ತೊಂದು ಬೆಡ್ ಸೀನ್ (ಒಂದು ನಿಮಿಷದೊಳಗೆ) ಬಿಟ್ಟರೆ ಮತ್ತೆಲ್ಲ ಓಕೆ, ಕೌಟುಂಬಿಕ ಸಿನಿಮಾವೇ ಹೌದು ಎಂಬುದು ಈಗಾಗಲೇ ಸಿನಿಮಾ ನೋಡಿದವರ ಅನಿಸಿಕೆ.
ಹೇಳದೇ ಕೇಳದೆ ಬರುವ ಪ್ರೀತಿ, ದಡ ಸೇರದ ಪ್ರೇಮ, ಮತ್ತೊಂದು ಜೀವದ ಜೊತೆ ಮದುವೆ, ಮತ್ತು ಇವುಗಳ ನಡುವೆ ಕಾಡುವ ಸಂಶಯ, ಅತೃಪ್ತಿ ಮತ್ತು ಅದಕ್ಕೆ ಉತ್ತರ ಕಂಡುಕೊಳ್ಳುವ ದಾರಿ... ಇದು ಸಿನಿಮಾದ ಜೀವಾಳ.
ಇಡೀ ಸಿನಿಮಾ ಫೀಲ್ ಗುಡ್ ಮಾದರಿಯಿಂದಲೇ ಗೆದ್ದಿದೆ ಅನ್ನಬಹುದು. ಯಜಮಾನ ಸಿನಿಮಾ ಥರ, ಈಗೇನೋ ದುರಂತ ಘಟಿಸುತ್ತದೆ ಎಂಬಷ್ಟರಲ್ಲಿ ತಿರುವು ಬರುವುದು ವಿಶೇಷ ಮತ್ತು ಧನಾತ್ಮಕವಾಗಿ ಎಲ್ಲರೂ ಪರಿಸ್ಥಿತಿಯನ್ನು ಸ್ವೀಕರಿಸುವುದು ಮತ್ತು ಪಾತ್ರಗಳು ತನ್ಮಯವಾಗಿ ಅಭಿನಯಿಸಿದ್ದರಿಂದಲೇ ಚಿತ್ರ ಜನರಿಗೆ ಇಷ್ಟವಾಗಿದೆ.
ಬಿಡುಗಡೆಯಾದ ದಿನಾಂಕ: ಅಕ್ಟೋಬರ್ 9, 2026
ನಿರ್ದೇಶನ: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್
ಮುಖ್ಯ ತಾರಾಗಣ: ರಂಗಾಯಣ ರಘು, ಶ್ರೀ ಮಹದೇವ್ (ಶ್ರೀ ರಾಮ್), ತಪಸ್ವಿನಿ ಪೂನಾಚ, ರಮಿಕಾ ಶಿವು
ಸಂಗೀತ: ಸುನಾದ್ ಗೌತಮ್
ಕೊನೆಯ ಸಾಲು- ಇದು ಲವ್ ಸಿನಿಮಾ ಹೌದು. ಆದರೆ, ನೋಡಿ ಬಂದರೆ ಹೊಸದೊಂದು ನೋಡಿ ಬಂದ ಅನುಭವ ಆಗುವುದು ಖಂಡಿತಾ ಸುಳ್ಳಲ್ಲ...
-ಕೃಷ್ಣಮೋಹನ ತಲೆಂಗಳ (15.10.2026)
No comments:
Post a Comment