ಅಂದು ಆಕಾಶವಾಣಿಗೆ ಮೊದಲು ಹೋದಾಗಲೂ ಇಂಥದ್ದೇ ಜಡಿ ಮಳೆ ಇತ್ತು...
ಕುಂಜಾರು ಗಿರಿಯಲ್ಲಿ (ಉಡುಪಿ ಜಿಲ್ಲೆ) ಸುಶಿಲೇಂದ್ರ ಹಾಗೂ ವೇಣು ವಿನೋದ್ ಜೊತೆಗೆ, (ರೇಡಿಯೋಗೆ ಮಾಡಿದ ನಡೆದು ನೋಡು ಕಾರ್ಯಕ್ರಮ ಸರಣಿಗೆ ತೆರಳಿದ ಸಂದರ್ಭ) |
ಪುಷ್ಪಗಿರಿ (ಕುಮಾರಪರ್ವತ ಚಾರಣದಿಂದ ವಾಪಸಾದ ಸಂದರ್ಭ) |
ಕುಮಾರಪರ್ವತದ ಗಿರಿಗದ್ದೆ ನಾರಾಯಣ ಭಟ್ಟರ ಮನೆ ಎದುರು.
|
ಕವಲೇದುರ್ಗಕ್ಕೆ ತೆರಳುವ ದಾರಿಯಲ್ಲಿ ಆಗುಂಬೆ ಘಾಟಿಯಲ್ಲಿ ವೇಣುವಿನೋದ್ ಜೊತೆ ವಾಕ್ ಮ್ಯಾನ್ ನಲ್ಲಿ ಧ್ವನಿಮುದ್ರಣ. ಜೊತೆಗಿರುವವರು ಹಿರಿಯ ಸ್ನೇಹಿತ ವಸಂತ ಕೊಣಾಜೆ. |
ಆಗುಂಬೆ ಸಮೀಪ ಕವಲೆದುರ್ಗ ಕೋಟೆಯಲ್ಲಿ. |
ಗೋವಾ-ಕರ್ನಾಟಕ ಗಡಿಯ ಧೂದ್ ಸಾಗರ್ ಜಲಪಾತದ ತಳದಲ್ಲಿ (ಬೇಸಿಗೆಯ ಚಾರಣ) |
ಕೈಗಾ ಸಮೀಪದ ಕದ್ರಾಗೆ ತೆರಳಿ ನಡೆದು ನೋಡಿದ್ದು, ಮುಳುಗಡೆಯಾದ ಹಿನ್ನೀರು ಪ್ರದೇಶಕ್ಕೆ ದೋಣಿಯಲ್ಲಿ ಪಯಣ. |
ಕುಶಾಲನಗರದ ಕಾವೇರಿ ನಿರ್ಸಗಧಾಮ. |
20 ವರ್ಷಗಳ ಹಿಂದೆ ಆಕಾಶವಾಣಿಗೆ ಮೊದಲ ಬಾರಿಗೆ ತರಬೇತಿಗೆಂದು ಭೇಟಿ ಕೊಟ್ಟಾಗ ಬಹುಶಃ ಇಂಥದ್ದೇ ಜಡಿ ಮಳೆ ಬರ್ತಾ ಇತ್ತು. ಆ ದಿನಗಳ ನೆನಪು ನಿಚ್ಚಳವಾಗಿ ಕಣ್ಣೆದುರು ಹಾದು ಹೋಗುತ್ತವೆ.
2001ನೇ ಇಸವಿ... ಕೊಣಾಜೆ ಮಂಗಳಗಂಗೋತ್ರಿಯಲ್ಲಿ ಎಂಸಿಜೆ ಪ್ರಥಮ ವರ್ಷದ ತರಗತಿಗಳು ಮುಗಿದ ಬಳಿಕ ಎರಡನೇ ವರ್ಷದ ತರಗತಿಗಳು ಆರಂಭವಾಗುವುದಕ್ಕೂ ಮೊದಲು ನಡುವೆ ಎರಡು ತಿಂಗಳ ರಜೆ ಇತ್ತು. ನಮ್ಮ ವಿಭಾಗ ಮುಖ್ಯಸ್ಥರಾಗಿದ್ದ ಪ್ರೊ.ಕೆ.ವಿ.ನಾಗರಾಜ್ ಅವರು ಎಲ್ಲ ವಿದ್ಯಾರ್ಥಿಗಳನ್ನೂ (ಇದ್ದವರು 11 ಮಂದಿ ಮಾತ್ರ) ಬೇರೆ ಬೇರೆ ಮಾಧ್ಯಮ ಕಚೇರಿಗಳಿಗೆ ಇಂಟರ್ನ್ ಶಿಪ್ ಗೆ (ತರಬೇತಿಗಾಗಿ) ಕಳುಹಿಸುತ್ತಿದ್ದರು. ನನ್ನನ್ನು ಮತ್ತು ಸುಶೀಲೇಂದ್ರನನ್ನು ಕರೆದು “ಏನಪ್ಪಾ ಆಕಾಶವಾಣಿಗೆ ಹೋಗ್ತೀರ?” ಅಂತ ಕೇಳಿದ್ರು. ಚಿಕ್ಕಂದಿನಿಂದಲೂ ರೇಡಿಯೋ ಅಂದ್ರೆ ತುಂಬ ಇಷ್ಟ. ಅದ್ರಲ್ಲೂ ಪ್ರೊಫೆಸರ್ ಅವರೇ ಆಕಾಶವಾಣಿಗೆ ತರಬೇತಿಗೆ ಹೋಗ್ತೀರ ಅಂತ ಕೇಳಿದ್ದು, ಅಯಾಚಿತವಾಗಿ ಬಂದ ಅವಕಾಶವಾಗಿತ್ತು.
ಅವರ ಶಿಫಾರಸ್ ಮೇರೆಗೆ ನಾನು ಮತ್ತು ಸುಶಿಲೇಂದ್ರ ಇಂಥದ್ದೇ ಒಂದು ಜಡಿಮಳೆ ದಿವಸ ಕೊಡೆ ಹಿಡ್ಕೊಂಡು ಕದ್ರಿ ಪಾರ್ಕ್ ಹತ್ತಿರದ ಆಕಾಶವಾಣಿಗೆ ಮೊದಲ ಬಾರಿಗೆ ಅಳುಕುತ್ತಲೇ ಪಾದಾರ್ಪಣೆ ಮಾಡಿದಾಗ ನಮ್ಮನ್ನು ಮಾತನಾಡಿಸಿದ್ದು, ಆಗಿನ ಸಹಾಯಕ ಕೇಂದ್ರ ನಿರ್ದೇಶಕರಾಗಿದ್ದ ಸಿ.ಯು.ಬೆಳ್ಳಕ್ಕಿ ಅವರು. ಅವರು ನಮ್ಮ ಪ್ರೊಫೆಸರ್ ಅವರ ಪರಿಚಿತರು ಅಂತ ಬಳಿಕ ಗೊತ್ತಾಯ್ತು. ತುಂಬ ಚೆನ್ನಾಗಿ ಮಾತನಾಡಿಸಿದ ಬಳಿಕ ಅವರು ನಮ್ಮನ್ನು ತರಬೇತಿಗೆ ಕಳುಹಿಸಿದ್ದು, ಯುವವಾಣಿ ವಿಭಾಗಕ್ಕೆ. ಆಗಾ ಯುವವಾಣಿ ವಿಭಾಗದ ಕಾರ್ಯಕ್ರಮ ನಿರ್ವಾಹಕರಾಗಿದ್ದದ್ದು ಅಬ್ದುಲ್ ರಷೀದ್ ಅವರು. ಕುರುಚಲು ಗಡ್ಡದ ಜೀನ್ಸ್ ಪ್ಯಾಂಟ್ ಧರಿಸಿದ ತೀಕ್ಷ್ಣ ಕಣ್ಣುಗಳ ರಷೀದ್ ಸರ್ ಕುರಿತಾಗಿದ್ದ ಭಯ ಅವರ ಜೊತೆ ಕೆಲಸ ಮಾಡಿದ ಬಳಿಕ ದೂರವಾಯ್ತು.
ಅವರ ಕಾರ್ಯಕ್ರಮ ಮೊದಲಿನಿಂದಲೂ ನನಗೆ ತುಂಬ ಇಷ್ಟ. ಅವರ ಧ್ವನಿ ಹಾಗೂ ಕಾರ್ಯಕ್ರಮ ನಿರೂಪಿಸುವ ಶೈಲಿ ಎರಡರದ್ದೂ ಅಭಿಮಾನಿ ಬೇರೆ. ಅವರ ಜೊತೆಗೆ ಕೆಲಸ ಕಲಿಯಲು ಅವಕಾಶ ಸಿಕ್ಕಿದ್ದು ಒಂಥರಾ ಕನಸಿನ ಹಾಗೆ ಭಾಸವಾಗಿತ್ತು. ಅದರೆ ತುಂಬ ಮೂಡಿ ಮನುಷ್ಯ, ಅಷ್ಟೇ ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡುತ್ತಿದ್ದರು ಹಾಗೂ ತುಂಬ ಸೃಜನಶೀಲ ಕಲ್ಪನೆಗಳ ಕಾರ್ಯಕ್ರಮಗಳಿಗೆ ಅವರು ನಿಮಾರ್ತೃವಾಗಿದ್ದರು ಎಂಬುದು ಅಲ್ಲಿದ್ದ ಅಷ್ಟೂ ದಿನಗಳಲ್ಲಿ ಮನದಟ್ಟಾಗಿತ್ತು.
ಆರಂಭದಲ್ಲಿ ಅಲ್ಲಿ ರೆಕಾರ್ಡಿಂಗ್ ನಡೆಯುವುದು, ಟೇಪ್ ನಲ್ಲಿದ್ದ ಹಳೆ ಕಾರ್ಯಕ್ರಮ
ಇರೇಸ್ ಮಾಡುವುದು, (ಆಗ ಕಂಪ್ಯೂಟರೈಸೇಶನ್ ಆಗಿರಲಿಲ್ಲ), ಸ್ಪೂಲ್ ಗೆ ಟೇಪು ಸುತ್ತುವುದು,
ಗ್ರಾಮಾಫೋನ್ ಪ್ಲೇಟ್ ಪ್ಲೇ ಮಾಡುವುದು, ಓಪನಿಂಗ್, ಕ್ಲೋಸಿಂಗ್ ಬರೆಯುವುದು, ಜಿಂಗಲ್
ಮಾಡುವುದನ್ನು ಗಮನಿಸುವುದು ಇದೇ ಕೆಲಸವಾಗಿತ್ತು. ನಮ್ಮ ಮನೆಯಲ್ಲಿ ಟೇಪು ರೆಕಾರ್ಡರ್ ಹೆಡ್
ಕ್ಲೀನ್ ಮಾಡ್ತಾ ಇದ್ದೆವಲ್ಲ ಅದೇ ಥರ ಸೊಲ್ಯೂಶನ್ ಬಳಸಿ ಆಕಾಶವಾಣಿಯಲ್ಲೂ ಆಗಾಗ ರೆಕಾರ್ಡಿಂಗ್
ಯಂತ್ರದ ಹೆಡ್ ಕ್ಲೀನ್ ಮಾಡುವುದಕ್ಕಿತ್ತು! ಇಲ್ಲವಾದರೆ ಧ್ವನಿ ಗರ ಗರ ಆಗ್ತಾ ಇತ್ತು. ಸ್ಪೀಡ್
ವೇರಿಯೇಶನ್, ರಾಂಗ್ ಮೈಕ್ ಬಳಕೆ, ಫೇಡರ್ ಲೋ ಆಗುವುದು, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಜಾಸ್ತಿ
ಆಗುವುದು, ಮೈಕ್ ಹತ್ರ ನಿಂತು ಮಾತನಾಡಿದರೆ ಒತ್ತಕ್ಷರಗಳು ಬರ್ಸ್ಟ್ ಆಗುವುದು, ಪುಟ ತಿರುಗಿಸುವ
ಸದ್ದು ಕೇಳಿಸದಂತೆ ಜಾಗ್ರತೆ ಮಾಡುವುದು ಇವೆಲ್ಲ ಆರಂಭಿಕ ಪಾಠಗಳು. ತಪ್ಪುಗಳನ್ನು ಮಾಡಿಯೇ
ಸರಿಗಳನ್ನು ಕಲಿತದ್ದಂತೂ ಹೌದು.
ಆಗ ಸ್ಟುಡಿಯೋದಲ್ಲಿ, ಕಾರಿಡಾರಿನಲ್ಲಿ ಸಿಗ್ತಾ ಇದ್ದ ಉದ್ಘೋಷಕರಾದ ಶಂಕರ ಭಟ್ರು, ಕೆ.ಆರ್.ರೈಗಳು, ನಾರಾಯಣಿ ದಾಮೋದರ್, ಕಿಣಿ ಮೇಡಂ, ಮುದ್ದು ಮೂಡುಬೆಳ್ಳೆಯವರ ಸಹಿತ ಎಲ್ಲರೂ ಮೊದಲೇ ಪರಿಚಿತರೆಂಬ ಭಾವ. ಯಾಕೆಂದರೆ ಚಿಕ್ಕಂದಿನಲ್ಲೇ ಕೇಳ್ತಾ ಬಂದ ಧ್ವನಿಗಳು. ಆಗ ಪ್ರತ್ಯಕ್ಷ ನೋಡಲು ಸಾಧ್ಯವಾದ ಪುಳಕ ಬೇರೆ.
ರಷೀದ್ ಅವರಿಗೆ ಯಾವಾಗ ಹೇಗೆ ಕಾರ್ಯಕ್ರಮಕ್ಕೆ ಹುಮ್ಮಸ್ಸು ಬರುತ್ತದೋ ಹೇಳಲು ಸಾಧ್ಯವಿಲ್ಲ. ಹೊಸತೊಂದು ಕಾರ್ಯಕ್ರಮದ ಕಲ್ಪನೆ, ಅದಕ್ಕೊಂದು ಸಿಗ್ನೇಚರ್ ಟ್ಯೂನ್ ಅನ್ವೇಷಣೆ, ಮತ್ತೊಂದು ಓಪನಿಂಗ್, ಕ್ಲೋಸಿಂಗ್ ಅನೌನ್ಸ್ ಮೆಂಟ್ ಚಂದದ ಎಡಿಟಿಂಗ್ ಅದೆಲ್ಲ ಆಗಿನ ಹಳೆ ಶೈಲಿಯ ಯಂತ್ರದಲ್ಲಿ ಮಾಡುವುದನ್ನು ನೋಡುವುದೇ ಚಂದ. ಆ ಎಲ್ಲ ಆರಂಭಿಕ ಪಾಠಗಳು ಅವರ ಮೂಲಕವೇ ಆಗಿದ್ದು ರೋಚಕವೇ ಸರಿ.
ಶುರುವಾಗಿದ್ದು ಹೀಗೆ....:
ಶುರುವಿಗೆ ನಮಗಿಬ್ಬರಿಗೆ ಅವರು ಮಾಡಲು ಕೊಟ್ಟ ಕಾರ್ಯಕ್ರಮದ ಹೆಸರು “ಯುವ ಧ್ವನಿ” ಅಂತ ನೆನಪು. ಮಂಗಳೂರಿನ ಬೇರೆ ಬೇರೆ ಕಾಲೇಜಿಗೆ
ಅಡ್ಮಿಶನ್ನಿಗೆ ಬರುವ ವಿದ್ಯಾರ್ಥಿಗಳನ್ನು ಮಾತನಾಡಿಸಿ ಅರ್ಧ ಗಂಟೆಯ ಒಂದು ಕಾರ್ಯಕ್ರಮ
ಮಾಡುವುದು. ಅವರತ್ರ ಒಂದು ವಾಕ್ ಮ್ಯಾನ್ ಇತ್ತು. ಅದರಲ್ಲಿ ಕ್ಯಾಸೆಟ್ ಹಾಕಿ ರೆಕಾರ್ಡಿಂಗ್
ಮಾಡಬಹುದಿತ್ತು. ಆ ವಾಕ್ ಮ್ಯಾನ್ ನಮ್ಮತ್ರ ಕೊಟ್ಟು ಹೋಗಿ ಒಂದಷ್ಟು ಜನರನ್ನು ಮಾತನಾಡಿಸಿಕೊಂಡು
ಬನ್ನಿ ಅಂದ ಹೊರಗೆ ಕಳಿಸಿದ್ರು. ಇಂಥದ್ದೇ ಮಳೆಯಲ್ಲಿ ನಾನು ಮತ್ತು ಸುಶಿಲೇಂದ್ರ ಪೇಟೆಯ ಬೇರೆ
ಬೇರೆ ಕಾಲೇಜಿಗೆ ಸುತ್ತಿ ಒಂದಷ್ಟು ಮಂದಿಯನ್ನು ವಾಕ್ ಮ್ಯಾನಿನಲ್ಲಿ ಮಾತನಾಡಿಸಿ
ಧ್ವನಿಮುದ್ರಿಸಿದೆವು. “ಇದು ಆಕಾಶವಾಣಿಗೆ ಮಾತನಾಡಿಸುತ್ತಿರುವುದು” ಅಂತ ಹೇಳುವಾಗ ನಮ್ಮದೇ ಆದ ಗತ್ತು ಇತ್ತು. ಆದರೆ, ಯಾವಾಗ ಪ್ರಸಾರ
ಆಗ್ತದೆ ಅಂತ ಅವರು ಕೇಳಿದಾಗ ನಮ್ಮತ್ರವೂ ಇತ್ತರ ಇರ್ತಾ ಇರಲಿಲ್ಲ!! ಅದು ನಂತರ ನಿರ್ಧಾರವಾಗಬೇಕಾದ ವಿಚಾರ. ಅದರಲ್ಲೂ
ತುಂಬ ಮಂದಿ ನಮ್ಮ ಅಭಿಪ್ರಾಯ ಬೇಡ ಅಂತ ನಾಚಿಕೊಂಡೋ,ಹೆದರಿಕೊಂಡೋ ದೂರ ಹೋಗುವಾಗ ಈ ಸಂದರ್ಶನ
ಮಾಡುವುದು ಎಷ್ಟು ಕಷ್ಟ ಅಂತ ಭಾವಿ ಪತ್ರಕರ್ತರಾಗಿದ್ದ ನಮಗೆ ಅವತ್ತೇ ಮನದಟ್ಟಾಗಿತ್ತು.
ಎಲ್ಲ ಧ್ವನಿಗಳನ್ನು ಸೆರೆ ಹಿಡಿದು ಸ್ಟುಡಿಯೋಗೆ ಬಂದ
ಬಳಿಕ ಆ ಕ್ಯಾಸೆಟ್ಟಿನಲ್ಲಿರುವ ಧ್ವನಿಯನ್ನು ಆಕಾಶವಾಣಿಯ ಟೇಪಿಗೆ ಟ್ರಾನ್ಸ್ ಫರ್ ಮಾಡುವುದು
ಕಲಿಸಿಕೊಟ್ರು. ಆ ಟೇಪಿನಿಂದ ಇನ್ನೊಂದು 30 ನಿಮಿಷದ ಟೇಪಿಗೆ ಎಡಿಟ್ ಮಾಡ್ತಾ ಮಾಡ್ತಾ
ಧ್ವನಿಯನ್ನು ವರ್ಗಾಯಿಸಬೇಕು. ಎಡಿಟ್ ಮಾಡುವಾಗ ರೆಕಾರ್ಡಿಂಗ್ ಮತ್ತು ಪಾಸ್ ಬಟನ್ ಏಕಕಾಲಕ್ಕೆ
ರಿಲೀಸ್ ಮಾಡುವುದು ಒಂದು ಕಲೆ ಕ್ಲಚ್ ಬಿಡ್ತಾ ಆಕ್ಸಿಲೇಟರ್ ಒತ್ತಿದೆ ಹಾಗೆ! ಜೊತೆಗೆ ಓಪನಿಂಗ್, ಕ್ಲೋಸಿಂಗ್ ಅನೌನ್ಸ್ ಮೆಂಟ್ ನೀಡಬೇಕು, ನಡು
ನಡುವೆ ಹಾಡು ಸೇರಿಸಬೇಕು. ಸ್ಟುಡೀಯೋದಲ್ಲಿ ನಾವು ಮೈಕಿನಲ್ಲಿ ಮಾತನಾಡುವ ಜಾಗ ಹಾಗೂ
ಧ್ವನಿಮುದ್ರಿಸುವ ಕೊಠಡಿ ನಡುವೆ ಗಾಜಿನ ಪರದೆ ಇದೆ. ಸ್ಟುಡಿಯೋ ಸೌಂಡ್ ಪ್ರೂಫ್ ಬೇರೆ. ನಮ್ಮ
ವಾಯ್ಸ್ ಲೆವೆಲ್ ಪರೀಕ್ಷಿರಿದ ಬಳಿಕ ಧ್ವನಿಮುದ್ರಿಸುವವರು ಕೈಸನ್ನೆಯಲ್ಲಿ ಕೈ ಮೇಲೆ ಎತ್ತಿದ
ತಕ್ಷಣ ನಾವು ನಿರೂಪಣೆ ಮಾಡ್ತಾ ಇದ್ದೆವು. ರಷೀದ್ ಸರ್ ಹಾಗೆ ಕೈ ಮೇಲೆತ್ತುವುದನ್ನು ನಾವೆಷ್ಟು
ಸಲ ಅನುಕರಣೆ ಮಾಡಿದ್ದೇವೋ ನೆನಪಿಲ್ಲ.!
ಇವಿಷ್ಟೂ ಕಾರ್ಯಕ್ರಮ 27ರಿಂದ 28 ನಿಮಿಷದೊಳಗೆ
ಮುಗಿಯಬೇಕು. ಯಾಕೆಂದರೆ ಪ್ರತಿದಿನ ರಾತ್ರಿ 8ರಿಂದ ಪ್ರಸಾರವಾಗುತ್ತಿದ್ದ ಕನ್ನಡ ಯುವವಾಣಿಯ ಅವಧಿ
30 ನಿಮಿಷ ಮಾತ್ರ. ಅಲ್ಲಿ ಉದ್ಘೋಷಕರು... “ಆಕಾಶವಾಣಿ ಮಂಗಳೂರು, ಈಗ ಯುವವಾಣಿ, ಇಂದಿನ
ಯುವವಾಣಿಯಲ್ಲಿ ಕೇಳೋಣ…” ಅಂತೆಲ್ಲ ಹೇಳುವುದಕ್ಕೆ 2 ನಿಮಿಷದಷ್ಟು ಸಮಯ ಬೇಕು. ಅದಕ್ಕಾಗಿ
ಯಾವುದೇ ಕಾರ್ಯಕ್ರಮವಿದ್ದರೂ ಅದರ ನಿಗದಿತ ಅವಧಿಗಿಂತ 2 ಅಥವಾ 3 ನಿಮಿಷ ಕಡಿಮೆ ಅವಧಿಗೆ ನಮ್ಮ
ಟೇಪ್ ರೆಡಿ ಇರಬೇಕು.
ಶುರುವಿನ ಕಾರ್ಯಕ್ರಮ ಎಡಿಟ್ ಮಾಡಿದ್ದು ಅಬ್ದುಲ್
ರಷೀದ್ ಅವರೇ, ನಾವು ನೋಡಿದ್ದು ಮಾತ್ರ. ಕಾರ್ಯಕ್ರಮಕ್ಕೆ ಓಪನಿಂಗ್ ಮತ್ತು ಕ್ಲೋಸಿಂಗ್ ಅನೌನ್ಸ್
ಮೆಂಟ್ ಅವರೇ ಬರೆದು ಕೊಟ್ಟದ್ದ, ನಾವೇ ಬರೆದದ್ದ ಅಂತ ಸರಿ ನೆನಪಿಲ್ಲ. ನಾನು ಮತ್ತು ಸುಶೀಲೇಂದ್ರ
ಇಬ್ಬರು ಒಂದೊಂದು ಅನೌನ್ಸ್ ಮೆಂಟ್ ಓದಿದೆವು. ಆರಂಭದಲ್ಲಿ ರಷೀದ್ ಸರ್ ಹಾಕಿದ ಹಾಡು “ಮನಸಿದು ಹಕ್ಕಿಯ ಗೂಡು... ಅದರೊಳಗಡೆ ಏನಿದೇ ನೋಡು...” ಅದು ಸರಿ ನೆನಪಿದೆ. ಅವರು ಚಕಚಕನೆ ಎಡಿಟ್ ಮಾಡ್ತಾ, ನಾವು
ಧ್ವನಿಮುದ್ರಿಸಿದ ಸಂದರ್ಶನಗಳ ಆಯ್ದ ಭಾಗ ಹಾಕ್ತಾ, ಚಂದದ ಹಾಡುಗಳನ್ನೂ ಸೇರಿಸ್ತಾ ಎಡಿಟ್ ಮಾಡ್ತಾ
ಕೊನೆಗೂ ರೆಡಿ ಆದ ಕಾರ್ಯಕ್ರಮಕ್ಕೆ “ಯುವಧ್ವನಿ” ಅಂತ ಹೆಸರು ಕೊಟ್ರು. ಇಂಥ ದಿನ ಪ್ರಸಾರ ಆಗ್ತದೆ
ಅಂತಲೂ ತಿಳಿಸಿದ್ರು. ಆಕಾಶವಾಣಿಯಲ್ಲಿ ಸಾಮಾನ್ಯವಾಗಿ ಒಂದು ತಿಂಗಳ ಮಟ್ಟಿಗೆ ಇಂತಹ ಕಾರ್ಯಕ್ರಮ
ಇಂತಹ ಸಮಯದಲ್ಲಿ ಪ್ರಸಾರವಾಗಲಿದೆ ಅಂದ ಶೆಡ್ಯೂಲ್ ಆಗಿರ್ತದೆ. ಅದೇ ಪ್ರಕಾರ ನಮ್ಮದೇ ಧ್ವನಿಯಲ್ಲಿ
ನಮ್ಮದೇ ಕಾರ್ಯಕ್ರಮ, ನಮ್ಮದೇ ಹೆಸರು ಸಹಿತ ಬರುವುದು ಭಯಂಕರ ಉದ್ವಿಗ್ನ ಕ್ಷಣವಾಗಿತ್ತು.
ಮನೆಗೆ ಹೋಗಿ ಕಾರ್ಯಕ್ರಮದ ಹಿಂದಿನ ದಿನ ಸಂಜೆ
6.05ಕ್ಕೆ, ಮರುದಿನ ಬೆಳಗ್ಗೆ 7.05ಕ್ಕೆ, ಮರುದಿನ ಸಂಜೆ ಪುನಃ 6.05ಕ್ಕೆ “ರಾತ್ರಿ 8 ಗಂಟೆಗೆ ಯುವವಾಣಿ, ಇಂದಿನ ಯುವವಾಣಿಯಲ್ಲಿ
ಸಂದರ್ಶನಗಳನ್ನು ಆಧರಿಸಿದ ಯುವಧ್ವನಿ ಪ್ರಸಾರವಾಗಲಿದೆ, ಪ್ರಸ್ತುತಿ.... ” ಅಂತ ಹೇಳುವಾಗ ಕೇಳುವ ನಮ್ಮದೇ ಹೆಸರುಗಳು ಒಂದು
ಸಾರ್ಥಕತೆ ಮೂಡಿಸಿದ್ದು ಸುಳ್ಳಲ್ಲ. ಅಷ್ಟು ಮಂದಿಯ ಎದುರು ಸ್ಟುಡೀಯೋದಲ್ಲಿ ಮೈಕ್ ಎದುರು
ಸ್ಕ್ರಿಪ್ಟ್ ಓದುವುದಕ್ಕೂ ರಾತ್ರಿ ಮನೆಯಲ್ಲಿ 8 ಗಂಟೆಗೆ ರೇಡಿಯೋ ಎದುರು ಕುಳಿತು ಕೇಳುವ
ಅನುಭೂತಿಗೂ ತುಂಬ ವ್ಯತ್ಯಾಸ ಇದೆ ಅಂತ ನಂತರ ಗೊತ್ತಾಯ್ತು.
ಕಾರ್ಯಕ್ರಮ ಪ್ರಸಾರವಾದಾಗ ತೊದಲಿ ತೊದಲಿ ನೀಡಿದ
ನಿರೂಪಣೆ ಹಾಗೂ ಗೊತ್ತಿಲ್ಲದೇ ಅಬ್ದುಲ್ ರಷೀದ್ ಅವರದ್ದೇ ಶೈಲಿಯನ್ನು ಅನುಕರಿಸಿದ್ದೂ
ಗೊತ್ತಾಗಿತ್ತು.... ಜಾಲತಾಣ ಬಿಡಿ, ಮೊಬೈಲೇ ಇಲ್ಲದ ಆ ದಿನಗಳಲ್ಲಿ ಯಾರು, ಎಲ್ಲಿ, ಎಷ್ಟು ಮಂದಿ
ನಮ್ಮ ಕಾರ್ಯಕ್ರಮ ಕೇಳಿದ್ದಾರೆ ಎಂಬ ಕಲ್ಪನೆಯೇ ಇರಲಿಲ್ಲ (20 ವರ್ಷಗಳ ಹಿಂದೆ). ಮುಂದಿನ
ಗುರುವಾರ ಯುವಪತ್ರೋತ್ತರಕ್ಕೆ ಕಾದು ಕುಳಿತು ನಮ್ಮ ಕಾರ್ಯಕ್ರಮಕ್ಕೆ ಎಷ್ಟು ಪತ್ರ ಬಂತು ಅಂತ
ಕೇಳಲು ಕಾದ ನೆನಪೂ ಇದೆ. ನಾವಾಗ ತರಬೇತಿಗೆ ದಿನಾ ಆಕಾಶವಾಣಿಗೆ ಹೋಗ್ತಾ ಇದ್ದ ಕಾರಣ ನಿಲಯ
ನಿರ್ದೇಶಕರ ಅವರ ಆಪ್ತ ಸಹಾಯಕರಾದ ಮೇರಿ ಅವರ ಬಾಕ್ಸಿಗೆ ಬಂದು ಬೀಳ್ತಾ ಇದ್ದ ಅಸಂಖ್ಯಾತ
ಕಾರ್ಡುಗಳ ಪೈಕಿ ಯುವ ಪತ್ರೋತ್ತರಕ್ಕೆ ಎಷ್ಟು ಲೆಟರ್ ಬಂದಿದೆ ಅಂತ ನೋಡುವುದಕ್ಕೂ ಸಾಧ್ಯ ಇತ್ತು.
ಯುವ ವಾಣಿಗೆ ಬಂದ ಪತ್ರಗಳನ್ನು ಆಯ್ದು ತಂದು ರಷೀದ್ ಸರ್ ಟೇಬಲ್ ನಲ್ಲಿ ಯುವಪತ್ರೋತ್ತರದ ಫೈಲಿಗೆ ಜೋಡಿಸುವ ವಿಶೇಷ
ಜವಾಬ್ದಾರಿಯೂ ಇತ್ತು ಅನ್ನಿ.
ಅದು ಶುರು...
ನಂತರ ಅವರು ನಮಗೆ ಇನ್ನಷ್ಟು ಯುವಧ್ವನಿ ಮಾಡಲು
ಅವಕಾಶ ಕೊಟ್ರು. ನನ್ನೂರು ನನ್ನ ಕನಸು, ಪ್ರೀತಿಪಾತ್ರ, ಹನಿಹನಿ ಕವಿತೆ ಮತ್ತಿತರ
ಕಾರ್ಯಕ್ರಮಗಳಿಗೆ ನಿರೂಪಣೆಗೆ ಅವಕಾಶ ಸಿಕ್ಕಿತು. “ಹಲೋ ಕೆಎಂಸಿ... ನೇರ ಫೋನಿನ್ ಕಾರ್ಯಕ್ರಮ ಪ್ರತಿ
ಶುಕ್ರವಾರ ರಾತ್ರಿ 8 ಗಂಟೆಗೆ...” ಮತ್ತಿತರ ಕಾರ್ಯಕ್ರಮಗಳ ಪ್ರೋಮೋ ಜಿಂಗಲ್ ಗೆ ಧ್ವನಿ
ನೀಡಲು ಅವಕಾಶ ಸಿಕ್ಕಿತು. ಜಿಂಗಲ್ ಆಗಾಗ ರೇಡಿಯೋದಲ್ಲಿ ಬರುತ್ತಿದ್ದದ್ದು ಕೇಳಲಿಕ್ಕೆ ತುಂಬ
ಕಾತರವೂ ಇತ್ತು ಅನ್ನಿ.
ನಾವು ಜೂನ್ ತಿಂಗಳಲ್ಲಿ ತರಬೇತಿಗೆ ಸೇರಿದ್ದು,
ಆಗಸ್ಟ್ ವೇಳೆಗೆ ಆಕಾಶವಾಣಿಯಲ್ಲಿ ವರ್ಷಂಪ್ರತಿಯಂತೆ ತಾತ್ಕಾಲಿಕ ನಿರೂಪಕರು (ಕ್ಯಾಶುವಲ್
ಕಾಂಪಿರರ್) ಆಯ್ಕೆಗೆ ಕಾಲ್ ಫಾರ್ ಮಾಡಿದ್ದು, ನೀವು ಅರ್ಜಿ ಹಾಕಿ ಅಂತ ರಷೀದ್ ಸರ್ ಹೇಳಿದ್ರು.
ಅಷ್ಟೊತ್ತಿಗೆ ಅಲ್ಲಿ ಬಹುತೇಕರ ಗುರ್ತ ಆಗಿತ್ತು ನಮಗಿಬ್ಬರಿಗೆ. ನಮ್ಮತರಬೇತಿ ಮುಗಿಯುವ ವೇಳೆಗೆ
ಒಂದು ದಿನ ನಡೆದ ರಿಟನ್ ಟೆಸ್ಟ್ ಹಾಗೂ ಧ್ವನಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ನಾವಿಬ್ಬರೂ ಯುವವಾಣಿ
ವಿಭಾಗಕ್ಕೆ ತಾತ್ಕಾಲಿಕ ನಿರೂಪಕರಾಗಿ ಆಯ್ಕೆಯಾದೆವು (ಬಹುಶಃ 2001 ಆಗಸ್ಟ್). ತಾತ್ಕಾಲಿಕ
ನಿರೂಪಕ ಕೆಲಸ ಈಗಲೂ ಆಕಾಶವಾಣಿಯಲ್ಲಿ ಇದೆ. ಇತರ ಕೆಲಸ ಮಾಡಿಕೊಂಡೇ ತಮ್ಮ ಬಿಡುವಿನ ವೇಳೆಯಲ್ಲಿ
ಒಂದು ತಿಂಗಳ ಅವಧಿಗೆ ಮುಂಚತವಾಗಿ ಮಾಡುವ ಕಾಂಟ್ರಾಕ್ಟ್ ಆಧಾರದಲ್ಲಿ ಕಾರ್ಯಕ್ರಮ ರೆಕಾರ್ಡಿಂಗ್,
ಎಡಿಟಿಂಗ್ ಮಾಡಿ ಟೇಪ್ ಕೊಟ್ಟುಬರುವುದು ತಾತ್ಕಾಲಿಕ ನಿರೂಪಕರ ಜವಾಬ್ದಾರಿ. ಅವರು ಆಕಾಶವಾಣಿ
ಸ್ಟಾಫ್ ಅಲ್ಲ, ಸಂಬಳ ಅಂತ ಇಲ್ಲ, ಮಾಡಿದ ಕಾರ್ಯಕ್ರಮಕ್ಕೆ ಗೌರವ ಧನ ನೀಡಲಾಗುತ್ತದೆ, ತಿಂಗಳಿಗೆ
ಗರಿಷ್ಠ 4ರಿಂದ 6 ಕಾರ್ಯಕ್ರಮ ನೀಡಲು ಕಾಂಟ್ರಾಕ್ಟ್ ನೀಡಲಾಗುತ್ತದೆ. ಇಂಥದ್ದೆ ಸಮಯಕ್ಕೆ
ಹೋಗಬೇಕೆಂಬ ನಿರ್ಬಂಧ ಇಲ್ಲ. ನಮ್ಮ ಬಿಡುವಿನಲ್ಲಿ ಹೋಗಿ ಬರಬಹುದು.
ನಾನು ಮತ್ತು ಸುಶೀಲೇಂದ್ರ ಕೊಣಾಜೆಯಲ್ಲಿ ಎರಡನೇ
ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳಾಗಿದ್ದೆವು. ಮಧ್ಯಾಹ್ನ ತನಕ ಕ್ಲಾಸ್ ಇತ್ತು, ಮಧ್ಯಾಹ್ನದ
ಬಳಿಕ ಬಿಡುವು. ಕಾರ್ಯಕ್ರಮ ನೀಡಬೇಕಾದಾಗಲೆಲ್ಲ ಬಸ್ಸಿನಲ್ಲಿ ಕದ್ರಿಗೆ ಬಂದು ಕಾರ್ಯಕ್ರಮ ಮಾಡಿ
ಸಂಜೆ ಮನೆಗೆ ಹೋಗುತ್ತದ್ದೆವು. ಸಂದರ್ಶನದಲ್ಲಿ ನಮ್ಮ ಸಹಪಾಠಿ ವೇಣು ವಿನೋದ್, ನನ್ನ ಸೀನಿಯನ್
ವಿಜಯಲಕ್ಷ್ಮೀ ಶಿಬರೂರು (ಈಗ ವಿಜಯ ಟೈಂಸ್ ವೆಬ್ ಸೈಟ್ ನಡೆಸುತ್ತಿದ್ದಾರೆ) ಕೂಡಾ ಆಯ್ಕೆಯಾದರು.
ಬಳಿಕ ನಾನು, ಸುಶೀಲೇಂದ್ರ ಹಾಗೂ ವೇಣು ಒಂದು ಟೀಂ
ಆಯ್ತು. ನಾವು ಮೂವರು ಸೇರಿಯೇ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಎಂಸಿಜೆ ಕೋರ್ಸ್ ಮುಗಿಯುವ
ತನಕವೂ ತುಂಬ ಕಾರ್ಯಕ್ರಮ ಮಾಡಲು ಆಕಾಶವಾಣಿ ಅವಕಾಶ ಕಲ್ಪಿಸಿತು. ಅಬ್ದುಲ್ ರಷೀದ್ ಸರ್,
ಸಿ.ಯು.ಬೆಳ್ಳಕ್ಕಿ ಅವರು ಹಾಗೂ ಇತರ ಎಲ್ಲ ಹಿರಿಯ ಸಿಬ್ಬಂದಿ ತೋರಿಸಿದ ಪ್ರೀತಿ ಹಾಗೂ
ಮಾರ್ಗದರ್ಶನ ಮರೆಯುವಂಥದ್ದಲ್ಲ. ರಷೀದ್ ಸರ್ ಅವರ ಅದೇ ವಾಕ್ ಮ್ಯಾನ್ ಹಿಡ್ಕೊಂಡು ತುಂಬ
ಕಾರ್ಯಕ್ರಮ ಮಾಡಿದೆವು.
“ಅಡ್ಡಪ್ರಶ್ನೆ” ಅಂತ ಒಂದು ಕಾರ್ಯಕ್ರಮ ಇತ್ತು. ರಸ್ತೆಯಲ್ಲಿ ಹೋಗಿ
ಯುವಕರಲ್ಲಿ ತರಲೆ ಪ್ರಶ್ನೆ ಕೇಳುವುದು. “ಮನುಷ್ಯನಿಗೆ ತಲೆಕೂದಲು ಯಾಕೆ ಬೇಕು, ಗಂಡ ಹೆಂಡತಿಗೆ
ಯಾಕೆ ಹೆದರುತ್ತಾನೆ?” ಮತ್ತಿತರ ತರಲೆ ಪ್ರಶ್ನೆ ಕೇಳುವುದು ಅದನ್ನು ಎಡಿಟ್ ಮಾಡಿ, ಹಾಡು
ಸೇರಿಸಿ, ಯುವವಾಣಿಯಲ್ಲಿ ಪ್ರಸಾರ ಮಾಡುವುದು ಗಮ್ಮತ್ತಿನ ಅನುಭವ ಆಗಿತ್ತು. ಕೆಲವರನ್ನು
ಮಾತನಾಡಿಸಲೇ ಜೀವ ಕೈಗೆ ಬರ್ತಾ ಇತ್ತು. ಸುತಾರಾಂ ಸಂದರ್ಶನ ನೀಡಲು ಒಪ್ಪುತ್ತಿರಲಿಲ್ಲ.
ಯುವವಾಣಿಯಲ್ಲಿ ಪ್ರವಾಸವಾಗ್ತಾ ಇದ್ದ ಪ್ರೀತಿಪಾತ್ರ, ನನ್ನೂರು ನನ್ನ ಕನಸು, ಇದು ನನ್ನದೇ
ಸಿನಿಮಾ, ನನ್ನ ವೃತ್ತಿ ನನಗೆ ಪ್ರೀತಿ, ನಿನಗೆ ನೀನೇ ಒಡೆಯ, ಕಥಾಸಾಗರ... ಹೀಗೆ ಸುಮಾರು
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು.
ಇಂಟರ್ನೆಟ್ಟು, ಮೊಬೈಲು ಎರಡೂ ಇಲ್ಲದ ಯುಗ ಅದು.
ಜೊತೆಗೆ ಡಿಚಿಎಚ್, ಕೇಬಲ್ ವಾಹನಿಗಳೂ ಪ್ರವರ್ಧಮಾನಕ್ಕೆ ಜಾಸ್ತಿ ಬಾರದೇ ಇದ್ದ ಸಮಯ. ರೇಡಿಯೋ
ತಲಪುವಿಕೆ ತುಂಬ ಪ್ರಭಾವಶಾಲಿಯಾಗಿತ್ತು.
ಎಲ್ಲಕ್ಕಿಂತ ಚಂದದ ಅನುಭವ ನಾವು ಮೂವರು ಸೇರಿ
ಮಾಡ್ತಾ ಇದ್ದ “ನಡೆದು ನೋಡು” ಅನ್ನುವ ಚಾರಣ ಕಥನ. ನಾವು ಮೂವರು ಯಾವುದಾದರು
ಪ್ರವಾಸಿ ತಾಣಕ್ಕೆ ಸ್ನೇಹಿತರ ಜೊತೆ ಹೋಗುವುದು.ಹೋಗುವಾಗ ಅದೇ ವಾಕ್ ಮ್ಯಾನ್ ಗೆ ಖಾಲಿ ಕ್ಯಾಸೆಟ್
ಹಾಕಿ ತಗೊಂಡು ಹೋಗುವುದು. ದಾರಿಯಲ್ಲಿ ಸಿಕ್ಕವರನ್ನೆಲ್ಲ ಮಾತಾಡಿಸುವುದು, ಗಾಳಿ, ನೀರು,
ಅಲೆಗಳು, ರೈಲು, ಬಸ್ಸುಗಳ ಧ್ವನಿಗಳನ್ನೆಲ್ಲ ಧ್ವನಿಮುದ್ರಿಸುವುದು, ನಡುನಡುವೆ ನಮ್ಮ ಪ್ರವಾಸದ ಕುರಿತು
ಕಮೆಂಟರಿ ನೀಡ್ತಾ ಹೋಗುವುದು. ಸ್ಟುಡಿಯೋಗೆ ಬಂದು ಅವನ್ನೆಲ್ಲ ಎಡಿಟ್ ಮಾಡಿ, ಚಂದದ ಸ್ಕ್ರಿಪ್ಟ್
ಮಾಡಿ ಅಷ್ಟೂ ಧ್ವನಿಗಳನ್ನು 20 ನಿಮಿಷಕ್ಕೆ ಇಳಿಸಿ, ನಡುವೆ ನಿರೂಪಣೆ ಸೇರಿಸಿ, ಓಪನಿಂಗ್,
ಕ್ಲೋಸಿಂಗ್ ಕೊಟ್ಟು ತಯಾರು ಮಾಡುವ ಶ್ರಮ ಮತ್ತು ಆ ಥ್ರಿಲ್ ಬರಹಕ್ಕೆ ನಿಲುಕುವಂಥದ್ದಲ್ಲ. ವೇಣು
ಹತ್ರ ಆಗ ಕ್ಯಾಮೆರಾ ಇದ್ದ ಕಾರಣ ಅವುಗಳ ಫೋಟೋ ಈಗಲೂ ನನ್ನ ಬಳಿ ಇದೆ.
ಬಾನುಲಿ ಯುವವಾಣಿ ಕಾರ್ಯಕ್ರಮಕ್ಕಾಗಿ ನಡೆದು ನೋಡಿದ್ದು....:
ನಾವು ಗೌರವಧನಕ್ಕಾಗಿಯೋ, ಹೆಸರಿಗಾಗಿಯೋ ಮಾಡಿದ
ಕಾರ್ಯಕ್ರಮಗಳಲ್ಲ ಅವೆಲ್ಲ. ಅಷ್ಟು ಖುಷಿ, ಸಾರ್ಥಕತೆ ಕೊಡ್ತಾ ಇದ್ದ ಕಾರ್ಯಕ್ರಮಗಳವು. ಬಹುಶಃ ಕನಿಷ್ಠ
10 ನಡೆದು ನೋಡು ಕಾರ್ಯಕ್ರಮ ನಾವು ಮಾಡಿರಬಹುದು. ಆ ಕಾರ್ಯಕ್ರಮಗಳ ಧ್ವನಿಮುದ್ರಣ (ಒಂದೆರಡು
ಮಾತ್ರ ನನ್ನ ಸಂಗ್ರಹದಲ್ಲಿ ಇದೆ) ಈಗ ಲಭ್ಯ ಇಲ್ಲ. ಆಗ ಅವನ್ನು ಸಂಗ್ರಹಿಸಲು ಪೆನ್ ಡ್ರೈವ್
ಆಗಲಿ, ರೇಡಿಯೋ ಕಾರ್ಯಕ್ರಮ ರೆಕಾರ್ಡ್ ಮಾಡಬಲ್ಲ ಮೊಬೈಲ್ ಆಗಲೀ ಇರಲಿಲ್ಲ.
ಕುಮಾರಪರ್ವತ, ಕೊಣಾಜೆಕಲ್ಲು, ಕಾರಿಂಜ, ಗೋವಾದ ದೂದ್
ಸಾಗರ್, ವಜ್ರ ಫಾಲ್ಸ್ ಕೈಗಾ, ಸೈಂಟ್ ಮೇರಿಸ್ ದ್ವೀಪ, ಗುಂಪೆ ಗುಡ್ಡ ಬಾಯಾರು... ಹೀಗೆ ತುಂಬ
ಜಾಗಗಳಿಗೆ ನಾವು ಒಟ್ಟಿಗೆ ಹೋಗಿ ಮಾಡಿದ ಕಾರ್ಯಕ್ರಮಗಳು ಜನಪ್ರಿಯವಾಗಿದ್ದವು ಅಂತ ಇತ್ತೀಚೆಗೆ
ಸಿಕ್ಕಿದವರು ಹೇಳಿದಾಗಲೇ ಗೊತ್ತಾಗಿದ್ದು. ಆಗ ಏನಿದ್ದರೂ ಯುವಪತ್ರೋತ್ತರಕ್ಕೆ ಬರುವ ಪತ್ರಗಳು
ಮಾತ್ರ ನಮಗೆ ಫೀಡ್ ಬ್ಯಾಕ್ ನೀಡ್ತಾ ಇದ್ದದ್ದು. “ಅರ್ಧ ಗಂಟೆ ಕಳೆದದ್ದೇ ಗೊತ್ತಾಗಲಿಲ್ಲ, ದಯವಿಟ್ಟು
ಮರುಪ್ರಸಾರ ಮಾಡಿ…” ಮತ್ತಿತರ ಹೊಗಳಿಕೆಯ ಸಾಲುಗಳನ್ನು ನಾವು ಪದೇ ಪದೇ ಹೇಳುವುದೂ
ಇತ್ತು...
ಶಿಬರೂರು ಅವರ ಜೊತೆ, ರಷೀದ್ ಸರ್ ನೇತೃತ್ವದಲ್ಲಿ
ಫೋನ್ ಇನ್ ಕಾರ್ಯಕ್ರಮದಲ್ಲಿ (ರೆಕಾರ್ಡೆಡ್) ಮಾಡಿದ “ಹನಿ ಹನಿ ಕವಿತೆ” ಕಾರ್ಯಕ್ರಮ ಇನ್ನೂ ನನಪಿದೆ. ಕೇಳುಗರು ಕಾರ್ಡಿನಲ್ಲಿ
ಕಳುಹಿಸಿದ ಕವಿತೆಗಳನ್ನು ನಾವು ಸ್ಟುಡಿಯೋದಲ್ಲಿ ಕುಳಿತು ಓದಿದರೆ, ಅದೇ ಹೊತ್ತಿಗೆ ಕೇಳುಗರು
ಫೋನಿನಲ್ಲಿ ಓದುವ ಕವನಗಳನ್ನು ಅವರದ್ದೇ ಧ್ವನಿಯಲ್ಲಿ ಸೇರಿಸಿ ಮಾಡಿದ ಅರ್ಧ ಗಂಟೆಯ ಕಾರ್ಯಕ್ರಮ
ಅದು.
ಮತ್ತೂ ಒಂದಷ್ಟು ಕಾಲ ಕವಿತೆಗಳ ಕಣಜ, ಇದು ನನ್ನದೇ
ಸಿನಿಮಾ, ಪದಪಲ್ಲವಿ (ರೇಡಿಯೋದಲ್ಲಿ ಪದಬಂಧ ಬಿಡಿಸುವ ಕಾರ್ಯಕ್ರಮ) ಮತ್ತಿತರ ಕಾರ್ಯಕ್ರಮಗಳನ್ನು
ಮಾಡಿದ್ದು, ಅದಲ್ಲದೆ ಸುದ್ದಿಸಂಚಯ, ಸಂಡೇ ಟ್ಯೂನ್ಸ್ ಮತ್ತಿತರ ಯುವವಾಣಿಯೇತರ ಕಾರ್ಯಕ್ರಮ
ಮಾಡಿದ್ದು, ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಸರ್ ನಿರ್ದೇಶನದಲ್ಲಿ ಕೆ.ಟಿ.ಗಟ್ಟಿ ಅವರ ಬಾನುಲಿ
ಧಾರಾವಾಹಿ “ತಾಳಮದ್ದಳೆ” ಹಾಗೂ “ಕೆಂಪು ಕಳವೆ”ಯಲ್ಲಿ ಪಾತ್ರ ನಿರ್ವಹಿಸಲು ಅವಕಾಶ ಸಿಕ್ಕಿದ್ದು ನಂತರದ
ಅನುಭವಗಳು...
ಜಾಲತಾಣ ಬಿಡಿ, ಮೊಬೈಲೇ ಇಲ್ಲದ ದಿನಗಳವು. ನಿರ್ಲಿಪ್ತವಾದ
ಆಕಾಶವಾಣಿಯ ಸೌಂಡ್ ಪ್ರೂಫ್ ಎ.ಸಿ. ಸ್ಟುಡಿಯೋದಲ್ಲಿ ಕುಳಿತು ಎದುರಿಗೆ ಕೇಳುಗರನ್ನು ಕಲ್ಪಿಸಿ
ಆಪ್ತವಾಗಿ ಮಾತನಾಡಬೇಕು, ಅದು ಆಡು ಭಾಷೆ ಶೈಲಿ ಇರಬೇಕು, ಭಾಷೆ ಶುದ್ಧವಾಗಿ, ಸ್ಪಷ್ಟವಾಗಿರಬೇಕು,
ಕೇಳುಗರಿಗೆ ತಮ್ಮನ್ನೇ ಉದ್ದೇಶಿಸಿ ಆಡಿದ ಹಾಗಿರಬೇಕು, ಜೊತೆಗೆ ಮತ್ತೊಮ್ಮೆ ಕೇಳುವ ಅಂತ
ಅನ್ನಿಸುವಂತೆ ತಟ್ಟಬೇಕು ಎಂಬಿತ್ಯಾದಿ ವಿಚಾರಗಳನ್ನು ಮನಸ್ಸಿನಲ್ಲಿರಿಸಿ ಓದುವುದು. ನಾವು
ಓದಿದ್ದು ಸ್ಕ್ರಿಪ್ಟೇ ಆಗಿದ್ದರೂ ರಾತ್ರಿ ರೇಡಿಯೋದ ಎದುರು ಕುಳಿತು ಕೇಳುವಾಗ ಅದು ಕೇಳುಗನನ್ನೇ
ಉದ್ದೇಶಿಸಿ ಹೇಳಿದ ಹಾಗಿರಬೇಕು. ರೇಡಿಯೋ ಅಂದರೇ ಹಾಗೆ, ಆಪ್ತ ಮಿತ್ರ ಮಾತನಾಡಿದ ಹಾಗೆ. ಆ ಮೌನವೇ
ಕವಿದ ಸ್ಟುಡಿಯೋದಲ್ಲಿ ಕುಳಿತಾಗ ಇವೆಲ್ಲ ತಲೆಯಲ್ಲಿದ್ದರೂ ಆ ಫೀಲ್ ತರುವುದಕ್ಕೆ, ಆ ಮೂಡ್
ಆವಾಹಿಸಿಕೊಳ್ಳುವುದಕ್ಕೆ ಶುರು ಶುರುವಿಗೆ ಕಷ್ಟ ಆಗ್ತಾ ಇತ್ತು. ಕ್ರಮೇಣ ಅದು ಕೆಲಸದ ಭಾಗವಾಗಿ
ಬಿಡ್ತದೆ. ದಶಕಗಳ ಕಾಲ ಆಕಾಶವಾಣಿಯಲ್ಲಿ ದುಡಿದವರು ಸಹ ಎದುರು ಸಿಕ್ಕಾಗ ಸೀರಿಯಸ್ ಕಂಡರೂ ಮೈಕ್
ಎದುರು ಕುಳಿದಾಗ ಅವರ ಧ್ವನಿಯಲ್ಲಾಗುವ ಬದಲವಾವಣೆ, ಕೇಳುಗರನ್ನು ತಟ್ಟುವಂತಹ ಮಾತುಗಾರಿಕೆ ಅವರ
ವೃತ್ತಿಪರ ಅನುಭವದ ಪ್ರತೀಕ.
ನಂತರ ಟೇಪು, ಸ್ಪೂಲು, ಗ್ರಾಮಾಫೋನ್ ಪ್ಲೇಟುಗಳ
ಜಾಗಕ್ಕೆ ಕಂಪ್ಯೂಟರ್ ಬಂತು. ಕಂಪ್ಯೂಟರ್ ಎಡಿಟಿಂಗ್ ಬಂತು. ಎಡಿಟಿಂಗ್ ಸುಲಭವಾಯಿತು. ಫೋನ್ ಇನ್,
ಔಟ್ ಡೋರ್ ರೆಕಾರ್ಡಿಂಗ್ ಸುಲಭವಾಯಿತು. ಮಂಗಳೂರು ಆಕಾಶವಾಣಿ ಎಫ್ಎಂ ಪ್ರಸಾರ ಆರಂಭಿಸಿದ ಬಳಿಕ
ಪ್ರಸಾರ ಗುಣಮಟ್ಟ ಅದ್ಭುತವಾಗಿ ಇಂಪ್ರೂವ್ ಆಯ್ತು. ಆಕಾಶವಾಣಿಯ ಸಂಪರ್ಕ ದೂರವಾಗುತ್ತಾ ಬಂದರೂ
ಆಗಿಗ ನಾಟಕಗಳಲ್ಲಿ, ಅಥವಾ ಭಾಷಣಗಳಲ್ಲಾದರೂ ಧ್ವನಿ ನೀಡಲು ಸಾಧ್ಯತೆ ಸಿಕ್ಕಿತು.
ಏನೇ ಇದ್ದರೂ ತಾಲತಾಣ ರಹಿತ ಯುಗದಲ್ಲಿ ನಮ್ಮ
ಕಾರ್ಯಕ್ರಮದ ವ್ಯಾಪ್ತಿ ಅಥವಾ ತಲಪುವಿಕೆಯ ಅರಿವೇ ಇಲ್ಲದ ದಿನಗಳಲ್ಲಿ ನೀಡಿದ ಕಾರ್ಯಕ್ರಮಗಳ
ಅನುಭೂತಿ. ಗಂಟೆಗಟ್ಟಲೆ ಸ್ಟುಡಿಯೋದಲ್ಲಿ ಕುಳಿತು ಎಡಿಟ್ ಮಾಡಿ ಹೊರ ಬಂದಾಗ ಧಾರಾಕಾರ ಮಳೆ
ಸುರಿಯುತ್ತಿದ್ದುದು ಕಂಡಾಗ ಆ ಸೌಂಡ್ ಪ್ರೂಫ್ ಕೋಣೆಯಲ್ಲಿ ಇಷ್ಟೊಂದು ಮಳೆ ಇತ್ತ ಅಂತ ಗೊತ್ತೇ
ಆಗ್ಲಿಲ್ಲ ಅಚ್ಚರಿಪಟ್ಟಿದ್ದು, ತುಂಬ ಮಂದಿ ಇಷ್ಟ ಪಟ್ಟಿದ್ದ “ಇದು ನನ್ನದೇ ಸಿನಿಮಾ” ಕಾರ್ಯಕ್ರಮಕ್ಕೆ ಬಂದ 100ಕ್ಕೂ ಅಧಿಕ ಕಾರ್ಡ್
ಗಳನ್ನು ಪತ್ರೋತ್ತರದ ಬಳಿಕ ಎಸೆಯಬೇಡಿ, ನನಗೆ ಬೇಕು ಅಂತ ಎತ್ತಿಟ್ಟಿದ್ದು... ಯಾರೋ ಎಲ್ಲೋ
ಸಿಕ್ಕಾಗ ನೀವು ರೇಡಿಯೋದಲ್ಲಿದ್ದೀರ ಅಂತ ಕೇಳಿದಾಗ ಆಗುವ ಅಚ್ಚರಿ (ತುಂಬ ಮಂದಿಗೆ ಇವತ್ತಿಗೂ
ತಾತ್ಕಾಲಿಕ ನಿರೂಪಕ ಹುದ್ದೆಯ ಅರಿವಿಲ್ಲ, ಅಲ್ಲಿ ಧ್ವನಿ ಕೇಳುವವರೆಲ್ಲ ಅಲ್ಲಿಯ ಸ್ಟಾಫ್ ಅಂತ
ಅಂದ್ಕೊಳ್ತಾರೆ) ಇವೆಲ್ಲ ಮರೆಯಲಾಗದ ನೆನಪುಗಳು.
ಆಕಾಶವಾಣಿಗೆ ಸಿಕ್ಕ ಅನಿರೀಕ್ಷಿತ ಪ್ರವೇಶ, ಒಂದಷ್ಟು
ವರ್ಷಗಳ ಕಾಲ ಧ್ವನಿ ಮೂಲಕವೇ ಜಗತ್ತಿಗೆ ಗುರ್ತವಾಗಲು ಸಾಧ್ಯವಾದ ಸಂದರ್ಭ ಮತ್ತು ಎಷ್ಟೋ ವರ್ಷಗಳ
ಬಳಿಕವೂ ಅದನ್ನು ನೆನಪಿಟ್ಟು ಹೇಳುವ ಕೇಳುಗ ವರ್ಗ ಸಿಕ್ಕಾಗಲೆಲ್ಲ ಮೊದಲ ಬಾರಿಗೆ ಆ ಕಲ್ಲಿನ
ಕಟ್ಟಡ ಹೊಕ್ಕು ಬರುತ್ತಿದ್ದಾಗ ಸುರಿಯುತ್ತಿದ್ದ ಜಡಿ ಮಳೆಯೇ ನೆನಪಾಗುತ್ತದೆ... ಇವೆಲ್ಲ ಆಗಿ 20
ವರ್ಷ ಕಳೆದ ನೆನಪಿಗೆ ಈ ಬರಹ....
-ಕೃಷ್ಣಮೋಹನ ತಲೆಂಗಳ, 19.06.2021.
2 comments:
ಅಹಾ..ಮಧುರ ನೆನಪು. ಅನುಭವದ ಬುತ್ತಿಗೆ ಅಮೃತ ಸುರಿದಂತಾಯಿತು
ಏನೆಂದು ಬರೆಯಲಿ.. ಒಂದೇ ಶಬ್ದ.. ಅದ್ಭುತ...
ಅಂದ ಹಾಗೆ, ನಡೆದು ನೋಡು version ೨.೦ ಸುರು ಮಾಡುವ.
Post a Comment