ಬೇಸಿಕ್ಕು ಮೊಬೈಲ್ ಹ್ಯಾಂಡ್ ಸೆಟ್ಟು ಬಿದ್ದು ಮೂರು ಹೋಳಾದರೂ ಜೋಡಿಸಿದಾಗ ಮತ್ತೆ ಕೆಲಸ ಮಾಡ್ತಾ ಇತ್ತು!
ಒಂದು ಕಾಲವಿತ್ತು, ಸುಮಾರು 15 ವರ್ಷಗಳ ಹಿಂದೆ... ಸಿಂಪಲ್ ಬೇಸಿಕ್ ಮೊಬೈಲ್ ಹ್ಯಾಂಡ್ ಸೆಟ್ ಜಮಾನಾ. ಅದು ಕೈಜಾರಿ ಬಿದ್ದು ಮೊಬೈಲಿನ ಹಿಂಭಾಗದ ಕವರ್, ಬ್ಯಾಟರಿ ಹಾಗೂ ಶರೀರ ಮೂರು ಪ್ರತ್ಯೇಕವಾಗಿ ಬಿಡುತ್ತಿತ್ತು. ತಕ್ಷಣ ಅದನ್ನು ಜೋಡಿಸಿ ಆನ್ ಮಾಡಿದರೆ ಪರ್ಫೆಕ್ಟ್! ತುಂಬ ಚೆನ್ನಾಗಿ ಮೊದಲಿನ ಹಾಗೆ ಕೆಲಸ ಮಾಡುತ್ತಿತ್ತು. ಆ ಮೊಬೈಲಿನ ಬ್ಯಾಟರಿ ಚಾರ್ಜು ಎರಡು ದಿನಗಳ ವರೆಗೂ ಬಹುತೇಕ ಬರುತ್ತಿತ್ತು, ಇಂಟರ್ನೆಟ್ಟೇ ಬಳಸದ ಕಾರಣ ಇಂಟರ್ನಲ್ ಮೆಮೊರಿ ಫುಲ್ ಆಗುವ, ಹ್ಯಾಂಗ್ ಆಗುವ, ಡಿಸ್ ಪ್ಲೇ, ಮದರ್ ಬೋರ್ಡ್ ಹೋಗುವ, ಹೆಚ್ಚುವರಿ ಮೆಮೊರಿ ಕಾರ್ಡ್ ಕರಪ್ಟ್ ಆಗುವ, ಅಥವಾ ಫ್ಲಿಪ್ ಕವರ್ ಆರಿಸುವ, ಆಪರೇಟಿಂಗ್ ಸಿಸ್ಟಂ ಅಪ್ಡೇಟ್ ಮಾಡುವ ಮತ್ತಿತ್ಯಾದಿ ಯಾವ ರಗಳೆಗಳೂ ಇರಲಿಲ್ಲ. ಅಸಲಿಗೆ ಅಂತಹ ಬಹುತೇಕ ಮೊಬೈಲುಗಳು ತುಂಬ ವರ್ಷ ಹಾಳಾಗುತ್ತಲೇ ಇರಲಿಲ್ಲ! ಹೊಸ ಮಾಡೆಲ್ ಬಂದಾಗ ಜನರೇ ಬೇರೆ ಮೊಬೈಲ್ ಖರೀದಿಸುತ್ತಿದ್ದರು.
ನಂತರ 3ಜಿ, 4ಜಿ ಹಾಗೂ ಈಗ 5ಜಿ ಯುಗಗಳು ಬಂದವು.
ಸ್ಮಾರ್ಟ್ ಫೋನ್ ಬಂತು. ಅದರಲ್ಲಿ ಸಹಸ್ರಾರು ಆಯ್ಕೆಗಳು, ನೂರಾರು ಕಂಪನಿಗಳು, ತಲೆಬುಡ ತಿಳಿಯದ
ತಂತ್ರಜ್ಞಾನಗಳು. ಹಳೆ ಕಾಲದ ಬೇಸಿಕ್ ಫೋನಿನ ದರಕ್ಕಿಂತ ಹೆಚ್ಚಿನ ರೇಟ್ ಇರುವ ಕವರು, ಬ್ಯಾಕ್
ಕವರು, ಟ್ರೈಪಾಯ್ಡ್ ಇತ್ಯಾದಿ ಹೆಚ್ಚುವರಿ ಸಲಕರಣೆಗಳು ಕೂಡಾ ಅಗತ್ಯವೇ ಎನಿಸಿ ಕೇವಲ ಮೊಬೈಲಿಗೆ
ಎರಡು ವರ್ಷಕ್ಕೊಮ್ಮೆ ಸಾವಿರಾರು ರುಪಾಯಿ ಸುರಿಯುವಂತಾಗಿದೆ. ಜಂಕ್, ರಿಸೈಕಲ್ ಬಿನ್ನು,
ಹ್ಯಾಂಗ್, ವೈರಸ್ಸು, ಅಪ್ಡೇಟು, ಫ್ಯಾಕರಿ ರಿಸೆಟ್ಟು ಹೀಗೆ ಅರ್ಥವಾಗದ ನೂರಾರು ಸಂಗತಿಗಳು. ಹೊಸ
ಮೊಬೈಲು ಆಯ್ಕೆಯೇ ದೊಡ್ಡ ಸರ್ಕಸ್ಸು, ಹಳೆ ಮೊಬೈಲು ಮಾರಾಟ ಮತ್ತೊಂದು ತಲೆಬಿಸಿ. ಅಷ್ಟೆಲ್ಲ ಆದರೂ
ಮೊಬೈಲ್ ತಗೊಂಡು ಎರಡೇ ತಿಂಗಳಲ್ಲಿ ನಗು ನಗುತ್ತಾ ಜಾಹೀರಾತಿನಲ್ಲಿ ಬರುವ ಮತ್ತೊಂದು ಹೊಸ ವರ್ಷನ್,
ಕಡಿಮೆ ಬೆಲೆಯ ಮೊಬೈಲನ್ನು ನೋಡಿ ಪುನಃ ದಂಗಾಗುವ, ನಿರಾಶರಾಗುವ, ಕರುಬುವವರ ಸರದಿಗೇನೂ ಕೊರತೆ
ಇಲ್ಲ.
ಒಂದು ಕಾಲದಲ್ಲಿ ಬಿಎಸ್ಸೆಎನ್ನೆಲ್ 30 ದಿನಕ್ಕೆ 98
ರುಪಾಯಿಗೆ 1 ಜಿಬಿ ಡೇಟಾ ನೀಡುತ್ತಿತ್ತು. ಒಂದು ತಿಂಗಳಿಗೆ ಆ ಡೇಟಾ ಸಾಕಷ್ಟಾಗುತ್ತಿತ್ತು. ಇಂದು
ದಿನಕ್ಕೆ 2-3 ಜಿಬಿ ಡೇಟಾ ಇದ್ದರೂ ಸಾಲುವುದಿಲ್ಲ, ಉಚಿತವೆಂಬ ನೆಪದಲ್ಲಿ ತಿಂಗಳಿಗೆ ಕನಿಷ್ಠ
200-300 ರು. ರಿಚಾರ್ಜ್ ಮಾಡಿದರೂ ಟಾಪ್ ಅಪ್ ಪ್ಲಾನುಗಳು ನಮ್ಮನ್ನು ಅಣಕಿಸುತ್ತಲೇ ಇರುತ್ತವೆ.
ವರ್ಕ್ ಫ್ರಂ ಹೋಂ, ಆನ್ಲೈನ್ ಕ್ಲಾಸುಗಳ ಭರಾಟೆಯಲ್ಲಿ ಡೇಟಾ ಪ್ರವಾಹೋಪಾದಿಯಲ್ಲಿ
ಹರಿದಾಡುತ್ತಿದೆ. ಇದರ ನಡುವೆ ಖರ್ಚು ಜಾಸ್ತಿ ಆಗುತ್ತಿರುವುದು ನಮಗೆ ಅರಿವಾಗುವುದೇ ಇಲ್ಲ.
ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣ ಇಷ್ಟೇ...
ಬದುಕು ಸರಳವಾಗಿರುವಾಗ, ನಿರೀಕ್ಷೆ, ಸೌಕರ್ಯಗಳು ಸೀಮಿತವಾಗಿರುವಾಗ
ಇರುವ ತೃಪ್ತಿ, ಸಮಾಧಾನ, ಮನಃಶಾಂತಿ ಸೌಕರ್ಯಗಳು ಜಾಸ್ತಿಯಾದಾಗ, ಸಂಕೀರ್ಣವಾಗುತ್ತಾ ಹೋದಾಗ
ಕಳೆದುಹೋಗುವ ಆತಂಕ ಇದೆ. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ಸರಳವಾದ ಸೌಕರ್ಯಗಳು
ಪುಟ್ಟ ಪುಟ್ಟ ನಿರೀಕ್ಷೆಗಳನ್ನು, ಕಡಿಮೆ ಖರ್ಚುಗಳನ್ನು ಬಯಸುತ್ತವೆ. ಐಶಾರಾಮ ಅರಸುತ್ತಾ ಹೋದ
ಹಾಗೆ ಅದಕ್ಕೆ ಹೂಡಿಕೆಯೂ ಜಾಸ್ತಿ, ಅದರ ರಿಪೇರಿಗಳೂ ಜಾಸ್ತಿ, ಅದರ ನಿರ್ವಹಣೆಗೆ ಟೆನ್ಶನ್ನೂ
ಜಾಸ್ತಿ ಮಾತ್ರವಲ್ಲ, ಅದನ್ನು ನಿಭಾಯಿಸುವ ಜವಾಬ್ದಾರಿಗಳೂ ಜಾಸ್ತಿ. ಜವಾಬ್ದಾರಿ ಬಂದಾಗ ಒತ್ತಡವೂ
ಜಾಸ್ತಿ ಅನ್ನುವುದು ನಿರ್ವಿವಾದ, ಆದರೆ ಅದು ಸರಳ ಬದುಕಿನ ಪ್ರಶಾಂತತೆಯಿಂದ ನಮ್ಮನ್ನು ಆಚೆ
ಕೊಂಡು ಹೋಗುತ್ತದೆ. ಅಲ್ವ?
-ಪುಟ್ಟದೊಂದು ಸೈಕಲ್ಲೋ, ಬೈಕಿನಲ್ಲೋ ಓಡಾಡುತ್ತಿದ್ದ
ದಿನಗಳಲ್ಲಿ ಅದರ ನಿರ್ವಹಣೆ ದೊಡ್ಡ ತಲೆಬಿಸಿ ಅನ್ನಿಸಿರುವುದಿಲ್ಲ. ಮಾತ್ರವಲ್ಲ. ಪುಟ್ಟ
ಜಾಗದಲ್ಲಿ ನಿಲ್ಲಿಸಬಹುದು. ಪೇಟೆಗೆ ಹೋದಾಗ ಪಾರ್ಕಿಂಗು ಒಂದು ಸಮಸ್ಯೆಯೇ ಅಲ್ಲ. ಸಣ್ಣ ಪುಟ್ಟ
ರಿಪೇರಿ ನಾವೇ ಮಾಡಿಕೊಳ್ಳಬಹುದು ಇತ್ಯಾದಿ ಇತ್ಯಾದಿ. ಅದೇ ನೀವು ಕಾರು, ಎಸ್ ಯುವಿ ಕಾರುಗಳನ್ನು
ಖರೀದಿಸಿದರೆ ನಂತರ ಬದುಕು ಹೇಗೆ ಬದಲಾಗಿರುತ್ತದೆ ಎಂಬುದು ನಿಮಗೆ ಗೊತ್ತು. ಪ್ರತ್ಯೇಕ
ಹೇಳಬೇಕಾಗಿಲ್ಲ. ಬೇರೇನೂ ಬೇಡ ಒಂದು ಟ್ರಾಫಿಕ್ ಜಾಂ ಆದಲ್ಲಿ, ಪಾರ್ಕಿಂಗಿಗೇ ಜಾಗವೇ ಇಲ್ಲದಲ್ಲಿ
ಕಾರಿನಲ್ಲಿ ಹೋದವನಿಗೂ, ಬೈಕಿನಲ್ಲಿ ಹೋದವನಿಗೂ ಆಗುವ ಟೆನ್ಶನ್ನಿನ ವ್ಯತ್ಯಾಸ ಎರಡನ್ನೂ
ಬಳಸಿದವರಿಗೆ ಖಂಡಿತಾ ಅರ್ಥ ಆಗುತ್ತದೆ! ಬೈಕನ್ನು ಸರ್ವಿಸಿಗೆ ಇರಿಸುವುದಕ್ಕೂ, ಕಾರನ್ನು
ಸರ್ವಿಸ್ ಮಾಡಿಸುವುದಕ್ಕೂ ಎಷ್ಟು ವ್ಯತ್ಯಾಸ ಇದೆ ಎಂಬುದು ನಿಮಗೆ ಗೊತ್ತೇ ಇದೆ.
-ಪುಟ್ಟದೊಂದು ಹೆಂಚಿನ ಮನೆ, ಅಲ್ಲೊಂದು ಸರಳ ಬಚ್ಚಲುಮನೆ, ಹೂದೋಟದ
ಸಣ್ಣ ಅಂಗಳದ ಬದುಕು. ಮತ್ತೆ ನೀವೇ ಕಟ್ಟಿಸುವ ತಾರಸಿ ಮನೆ, ಕಾಂಕ್ರಿಟ್ ಸೌಕರ್ಯಗಳು,
ಅತ್ಯಾಧುನಿಕವಾದ ಸಮಕಾಲೀನ ಮನಃಸ್ಥಿತಿಗೆ ತಕ್ಕಂತ ಏರ್ಪಾಡುಗಳಿಗೆ ಮಾರ್ಪಾಡು ಹೊಂದಿದವರಿಗೆ ಹಳೆ
ಮನೆ ಹಾಗೂ ಹೊಸ ಮನೆಗಳ ನಡುವಿನ ವ್ಯತ್ಯಾಸ ಅರಿವಾಗೇ ಆಗುತ್ತದೆ. ಪುಟ್ಟದೊಂದು ಮನೆಯನ್ನು
ಕ್ಲೀನಾಗಿ ಇರಿಸುವುದಕ್ಕೂ, ಬಚ್ಚಲು ಮನೆ, ಟಾಯ್ಲೆಟ್ಟಿನ ಸ್ವಚ್ಛತೆಗೂ ಟೈಲ್ಸು, ಮಾರ್ಬಲ್ ಸಹಿತದ
ಹೊಸ ಮಾದರಿಯ ಮನೆಗಳ ನಿರ್ವಹಣೆಗೆ ಎಷ್ಟು ವ್ಯತ್ಯಾಸ ಇದೆ, ಎಷ್ಟು ಜೋಪಾನವಾಗಿ ನೋಡಿಕೊಳ್ಳಬೇಕು
ಎಂಬುದು ತಿಳಿದೇ ಇದೆ. ಎಲ್ಲೋ ಅಂಗಳದ ಮೂಲೆಯ ತೆಂಗಿನ ಮರದ ಬುಡದಲ್ಲಿ ನಿರಾಯಾಸವಾಗಿ ಪಾತ್ರೆ
ತೊಳೆದು ಬರುತ್ತಾ ಇದ್ದ ದಿನಗಳಿಗೂ ಅಡುಗೆ ಕೋಣೆಯಲ್ಲಿ ಪದೇ ಪದೇ ಬ್ಲಾಕ್ ಆಗುವ ಸಿಂಕಿನಲ್ಲಿ
ಪಾತ್ರೆ ತೊಳೆಯುವ ಸುಖಕ್ಕೂ ವ್ಯತ್ಯಾಸ ಇಲ್ವೇ ಹೇಳಿ! ಬೇರೆನೂ ಬೇಡ, ಲಕ್ಷಗಟ್ಟಲೆ ಸುರಿದು ಕಟ್ಟುವ ದೊಡ್ಡ
ಮನೆಗಳ ಪಾಯಿಖಾನೆಗಳಲ್ಲಿ ಕೆಲವೊಮ್ಮೆ ಇಂಡಿಯನ್ ಸ್ಟೈಲ್ ಕಮೋಡೇ ಇರುವುದಿಲ್ಲ! ಇದು ತಮಾಷೆ ಅನ್ನಿಸಬಹುದು. ಆದರೆ ತುಂಬ ಮಂದಿಗೆ ಇಂಡಿಯನ್ ಶೈಲಿ
ಕಮೋಡ್ ಬಳಸಿಯೇ ಅಭ್ಯಾಸ. ಅಂಥಹ ಹಳಬರಿಗೆ “ಮೇಲೆ ಹತ್ತಿ ಕೂರಬೇಕಾದ” ಭಯಂಕರ ಮುಜುಗರವನ್ನು ಹೇಳುವಂತೆಯೂ ಇಲ್ಲ,
ಅನುಭವಿಸುವಂತೆಯೂ ಇಲ್ಲ. ಆದರೆ ಇದು ವಾಸ್ತವವೇ ಹೌದು. ನವೀನ ಮಾದರಿಯ ಮನೆಗಳಲ್ಲಿ ಬಟ್ಟೆಗಳೆಲ್ಲ
ವಾರ್ಡ್ ರೋಬುಗಳ ಒಳಗೇ ಕೊಳೆಯಬೇಕು. ಗೋಡೆಗೆ ಮೊಳೆ ಹೊಡೆದು ಹಗ್ಗ ಕಟ್ಟಲು, ಬಟ್ಟೆ ಒಣಗಿಸಲು
ಕೋಲು ಕಟ್ಟಲು ಅವಕಾಶ ಇಲ್ಲ. ಹೆಚ್ಚೇಕೆ ಈಗಿನ ಗೋಡೆಗಳಿಗೆ ಬೇಕಾದಂತೆ ಮೊಳೆ ಹೊಡೆದರೆ ಕೂರುವುದೂ
ಇಲ್ಲ. ಅದು ಬಿಡಿ, ಅಷ್ಟೆಲ್ಲ ಖರ್ಚು ಮಾಡಿದ ಟೆರೇಸ್ ಮನೆಗಳು ಒಂದೆರಡು ಮಳೆ ಬಂದಾಗಲೇ ಸೋರುವುದೂ
ಸಾಮಾನ್ಯ. ಹಾಗಾಗಿ ಟೆರೇಸ್ ಮೇಲೆ ಶೀಟಿನ ಪ್ರತ್ಯೇಕ ಮಾಡು ಮಾಡುವುದೂ ಅನಿವಾರ್ಯತೆಗಳಲ್ಲಿ ಒಂದು.
ಮೊದಲಿನ ಹಳೆ ಮನೆಗಳಲ್ಲಿ ಹಂಚು ಒಡೆದು ಸೋರುತ್ತಿದ್ದರೆ, ಮಾಡಿನ ಕಸ ಸ್ವಚ್ಛಗೊಳಿಸಿದರೆ ಅಥವಾ
ಒಡೆದ ಹಂಚು ಬದಲಾಯಿಸಿದರೆ ಸಾಕಿತ್ತು!! ಅಲ್ವ.
-ಟಿ.ವಿ.ಗಳಲ್ಲೂ ಅಷ್ಟೇ. ಎರಡು ದಶಕಗಳ ಹಿಂದಿನ ಹಾಗೆ
ವಾರಕ್ಕೊಂದೇ ಚಿತ್ರಮಂಜರಿ, ವಾರಕ್ಕೊಂದೇ ಚಿತ್ರಹಾರ್, ವಾರಕ್ಕೊಂದೇ ಸಿನಿಮಾ, ದಿನಕ್ಕೆ ಮೂರೇ
ವಾರ್ತಾ ಬುಲೆಟಿನ್ ಅಂತ ಇದ್ದಾಗ ಟಿ.ವಿ. ನೋಡಲು ನಮಗಿದ್ದ ಆಸಕ್ತಿ, ನಮಗಿದ್ದ ಏಕಾಗ್ರತೆ ಈಗ
ಸಾವಿರ ಸಾವಿರ ಚಾನೆಲ್ಲುಗಳು ಸಿಗುವಾಗ ಇದೆಯೇ! ಯೋಚಿಸಿ. ಭಾನುವಾರ ಸಂಜೆ 4 ಗಂಟೆಗೆ ಮಾತ್ರ ಸಿನಿಮಾ
ಇರುವುದು ಎಂಬ ಜಮಾನಾದಲ್ಲಿ ಮನೆ ಮಂದಿ ಕಾದು ಕುಳಿತು ಒಟ್ಟಿಗೆ ಕುಳಿತು ಟಿ.ವಿ. ನೋಡ್ತಾ
ಇದ್ದೆವು. ಕಾದು ಕುಳಿತು ವಾರ್ತೆ ನೋಡ್ತಾ ಇದ್ವು. ಇವತ್ತು ಯಾವ ಸಿನಿಮಾವನ್ನೂ ಮನಸಿಟ್ಟು ಇಡೀ
ನೋಡುವುದಿಲ್ಲ. ಎಲ್ಲರಿಗೂ ಏಕಕಾಲದಲ್ಲಿ ಇಷ್ಟವಾಗುವ ಕಾರ್ಯಕ್ರಮಗಳು ಅಂತ ಇರುವುದಿಲ್ಲ. ಒಂದಷ್ಟು
ಟಿ.ವಿ., ಒಂದಷ್ಟು ವಾಟ್ಸಪ್ಪ್ ಚಾಟಿಂಗು, ಇನ್ ಸ್ಟಾ, ಫೇಸ್ಬುಕ್ಕು, ಹೊಸದಾಗಿ ಬಂದಿರುವ ಕ್ಲಬ್
ಹೌಸು, ಪುರುಸೊತ್ತಿರುವಾಗ ಲೈಕು, ಶೇರ್, ಸಬ್ ಸ್ಕ್ರೈಬ್ ಬಯಸುವ ಯೂಟ್ಯೂಬ್ ಚಾನೆಲ್ಲುಗಳು,
ಜೊತೆಗೆ ಇವೆಲ್ಲಾ ಜಾಲತಾಣಗಳಲ್ಲಿ ಹರಿದು ಬರುವ ಅಪಾರ ಮಾಹಿತಿಯ ಪ್ರವಾಹ. ಯಾವುದನ್ನು ನೋಡುವುದು,
ಯಾವುದನ್ನು ಬಿಡುವುದು? ಇವೆಲ್ಲದರ ನಡುವೆ ಏಕಾಗ್ರತೆ, ನಿರೀಕ್ಷೆ, ಅಚ್ಚರಿ, ಕುತೂಹಲ,
ತಾಳ್ಮೆ, ಸೂಕ್ಷ್ಮಪ್ರಜ್ಞೆ ಇವೆಲ್ಲ ಬಹಳಷ್ಟು ಸಲ ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ
ಅನ್ನಿಸ್ತಾ ಇದೆ.
-ಮನೆಯಲ್ಲಿ ರೇಡಿಯೋ ಮಾತ್ರ ಸಂಪರ್ಕ ಸಾಧನವಾಗಿದ್ದ ದಿನಗಳಲ್ಲಿ
ಯಾರದ್ದೋ ಮನೆಯಿಂದ ಎರವಲು ತರ್ತಾ ಇದ್ದ ಕಥೆ ಪುಸ್ತಕ, ಲೈಬ್ರೆರಿಯಿಂದ ತರ್ತಾ ಇದ್ದ
ಕಾದಂಬರಿಗಳು, ನೆಂಟರ ಮನೆಯ ಅಟ್ಟದಿಂದ ಹುಡುಕಿ ತರುತ್ತಿದ್ದ ಹಳೆ ಚಂದಮಾಮಾ, ಬಾಲಮಂಗಳ ಪುಸ್ತಕಗಳ
ಪರಿಮಳ, ಅದನ್ನು ಓದುವಲ್ಲಿ ಇದ್ದ ಆಸಕ್ತ, ಆ ಥ್ರಿಲ್, ಪುಸ್ತಕದ ರಾಶಿ ನಡುವೆ ಹುದುಗಿದಾಗ
ಸಿಗ್ತಾ ಇದ್ದ ಏಕಾಂತ ಈಗ ನಿಮಗೆ ಪ್ರೈಂ, ನೆಟ್ ಫ್ಲಿಕ್ಸಿನಿಂದ ಡೌನ್ಲೋಡ್ ಮಾಡಿ, ಅರ್ಧದಲ್ಲಿ
ಭ್ರಮನಿರಸನ ಉಂಟು ಮಾಡುವ ಸಿನಿಮಾ, ವೆಬ್ ಸೀರಿಸ್ ನೋಡುವಾಗ ಸಿಗ್ತದ? ಪ್ರಾಮಾಣಿಕವಾಗಿ ಯೋಚಿಸಿ ಬಹಳಷ್ಟು ಸಿನಿಮಾಗಳು
ಅರ್ಧದಲ್ಲೇ ಬೋರಿಂಗ್ ಅನ್ನಿಸಿದರೂ “ಇಷ್ಟು ನೋಡಿದೆ ತಪ್ಪಿಗೆ ಪೂರ್ತಿ ಮಾಡಿ ಸಾಯುಜ್ಯ
ಹೊಂದುತ್ತೇನೆ!” ಅಂತ ನೋಡುವವರೇ ಜಾಸ್ತಿ ಅಲ್ವ?
-ಚೊರೆ ಮಾಡಿ, ಚೌಕಾಸಿ ಮಾಡಿ ಖದೀರಿಗೆ ಅವಕಾಶ ಸಿಗ್ತಾ ಇದ್ದ ಊರಿನ
ಕಿರಾಣಿ ಅಂಗಡಿ, ಗೂಡಂಗಡಿ, ಟಾರ್ಪಲ್ ಹೊದೆಸಿದ ಹೋಟೇಲು, ಮನೆ ಮನೆಗೆ ಬಂದು ಮಾರಾಟ ಮಾಡುವ ಬೆಡ್
ಶೀಟ್, ಸೀರೆ, ಬಳೆಗಳ ವರ್ತಕರು ಇವರ ಜೊತೆಗಿನ ವ್ಯವಹಾರದ ಖುಷಿ ಮಾಲುಗಳಿಗೆ ಹೋಗಿ ನಿಗದಿತ ದರ
ಕೊಟ್ಟು ವಾಪಸ್ ಬರುವಾಗ, ಆನ್ ಲೈನ್ ನಲ್ಲಿ ಬುಕ್ ಮಾಡಿ ಬಾಗಿಲಿಗೇ ವಸ್ತು ಬರುವಾಗ ಸಿಗ್ತದೆಯಾ?
-ಕರೆಂಟೇ ಬಯಸದ ರೇಡಿಯೋ, ತಿಂಗಳ ರಿಜಾರ್ಜ್ ಇಲ್ಲದ
ಟಿ.ವಿ. ಆಂಟೆನಾ, ನಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡದಂತಹ ಸರಳ ಮತ್ತು
ಹಿತಮಿತವಾಗಿದ್ದ ಟಿ.ವಿ. ಕಾರ್ಯಕ್ರಮಗಳು, ದಿನಕ್ಕೊಂದು ಬಾರಿ ಇಡೀ ಜಗತ್ತಿನ ಸುದ್ದಿ ತಿಳಿಸುತ್ತಿದ್ದ
ರೇಡಿಯೋ ವಾರ್ತೆ, ಟಿ.ವಿ. ಅಗ್ರ ರಾಷ್ಟ್ರೀಯ ವಾರ್ತೆ, ಬೆಳಗಿನ ಜಾವದ ಪೇಪರುಗಳು, ನೆಟ್ವರ್ಕು,
ಸಿಗ್ನಲ್ಲು, ಡೇಟಾಗಳ ಹಂಗಿಲ್ಲದೆಯೂ ಸಂವಹನ ಸಾಧ್ಯವಾಗಿಸುತ್ತಿದ್ದ ಪತ್ರಗಳು, ಲ್ಯಾಂಡ್ ಲೈನು,
ಪೆಟ್ರೋಲಿನ ಅವಲಂಬನೆ ಕಡಿಮೆ ಮಾಡುತ್ತಿದ್ದ ಸ್ಥಳೀಯ ನಡಿಗೆ, ಸೈಕಲ್ಲು... ಲೈಕು, ಕಮೆಂಟು
ಶೇರುಗಳ ಹಂಗಿಲ್ಲದ ಜಗತ್ತು, ಹೀಗೆ ಸರಳವಾಗಿದ್ದ ದಿನಗಳು ಮತ್ತು ಸೌಕರ್ಯ ಹೆಚ್ಚಿಸುವ,
ತಾಂತ್ರಿಕವಾಗಿ ಮೇಲ್ದರ್ಜೆಗೆ ಏರುವ, ಸಮಕಾಲೀನತೆಗೆ ನಮ್ಮನ್ನು ರೂಢಿಸಿಕೊಳ್ಳುವ ಭರದಲ್ಲಿ ನಾವು
ಪಡೆದುಕೊಂಡ,ಹೊಂದಿದ ವ್ಯವಸ್ಥೆಗಳ ಬದುಕಿನ ದಿನಗಳನ್ನು ಪರಸ್ಪರ ಹೋಲಿಸಿದಾಗ ನಾವು ಸರಳವಾಗಿ
ಉಳಿದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಒಂದು ಕಾಲದಲ್ಲಿ ಪ್ಯಾಂಟಿನ ಕಿಸೆಯಲ್ಲಿ ಕರ್ಚೀಫು ತುಂಬಿಸಲು
ಬಾಕಿ ಆದರೆ, ಬಾಚಣಿಗೆ ಬಾಕಿಯಾದರೆ ದಿನವಿಡೀ ಚಡಪಡಿಸುವ ಹಾಗೆ ಆಗ್ತಾ ಇತ್ತು. ಇಂದು ಹಾಗಲ್ಲ.
ಮೊಬೈಲು ಮನೆಯಲ್ಲಿ ಬಾಕಿ ಆದರೆ, ಆ ಮೊಬೈಲಿನಲ್ಲಿ ಚಾರ್ಜು ಮುಗಿಯುತ್ತಾ ಬಂದರೆ, ಮೊಬೈಲಿನ
ಕರೆನ್ಸಿ ಖಾಲಿ ಆದರೆ, ನಾವು ಹೋದ ಊರಿನಲ್ಲಿ ನೆಟ್ವರ್ಕ್ ಇಲ್ಲದಿದ್ದರೆ ಬದುಕೇ ಶೂನ್ಯ ಅನ್ನಿಸಿ
ಬಿಡುತ್ತದೆ. ಅಷ್ಟೇ ಯಾಕೆ ಎಲ್ಲೋ ಒಂದು ಕಡೆ 4ಜಿ ನೆಟ್ವರ್ಕ್ ಸಿಗದೆ ಸಿಗ್ನಲ್ಲು 3ಜಿಗೆ ಇಳಿದರೆ
ನಾವು “ಸ್ಪೀಡ್ ಸಾಕಾಗದೆ” ಚಡಪಡಿಸುತ್ತೇವೆ. ಹೊರ ಜಗತ್ತಿನ ಸಂಪರ್ಕ ಕಡಿದೇ
ಹೊಯಿತು ಎಂಬ ಹಾಗೆ ಆತಂಕಕ್ಕೆ ಒಳಗಾಗುತ್ತೇವೆ. ತಾಂತ್ರಿಕ ಕಾರಣಗಳಿಂದ ವಾಟ್ಸಪ್ಪು, ಫೇಸ್ಬುಕ್ಕು
ಕೆಲವು ನಿಮಿಷಗಳ ಕಾಲ ಕ್ರ್ಯಾಶ್ ಆದರೆ, ಅಥವಾ ಸ್ತಬ್ಧವಾದರೆ ಜಗತ್ತೇ ಅಲ್ಲೋಲಕಲ್ಲೋಲವಾದ ಹಾಗೆ
ಕಂಗಾಲಾಗುತ್ತದೆ. ಅಷ್ಟೆಲ್ಲ ಯಾಕೆ. ನಿಮ್ಮ ಮನೆಯಲ್ಲಿ ಒಂದು ದಿನ ಕರೆಂಟೇ ಇಲ್ಲದಿದ್ದರೆ ಸಾಕು.
ಇಡೀ ಬದುಕು ವ್ಯರ್ಥವಾದ ಹಾಗೆ ಸ್ತಬ್ಧವಾಗುತ್ತದೆ. ಅಡುಗೆಯಿಂದ ತೊಡಗಿ ಮನರಂಜನೆ ವರೆಗೆ ಯಾವುದೂ
ನಡೆಯುವುದಿಲ್ಲ.
ನಮ್ಮ ಖುಷಿ, ನಮ್ಮ ನಿತ್ಯ ಬದುಕಿನ ಆಗುಹೋಗುಗಳು ಈಗ
ಕರೆಂಟು, ನೆಟ್ವರ್ಕು, ಡೇಟಾ, ಆನ್ ಲೈನ್ ವಹಿವಾಟು, ಜಾಗತಿಕ ಟ್ರೆಂಡುಗಳನ್ನು ಅವಲಂಬಿಸಿದೆ.
ಎಟಿಎಂ ಕಾರ್ಡು, ಕ್ರೆಡಿಟ್ ಕಾರ್ಡು, ಸಿಸಿ ಕೆಮರಾ, ಆಧಾರ್ ಕಾರ್ಡು, ಪಾನ್ ಕಾರ್ಡು, ಹೆಲ್ತ್
ಇನ್ಶೂರೆನ್ಸ್ ಕಾರ್ಡು, ಥಂಬ್ ಇಂಪ್ರೆಶನ್ ಇವುಗಳು ನಮ್ಮ ಅಸ್ತಿತ್ವವನ್ನು ನಿರ್ಧರಿಸುತ್ತವೆ
ಅಥವಾ ಇವುಗಳಿಂದಾಗಿ ನಮ್ಮ ಬದುಕು ಸಲೀಸಾಗಿ ಸಾಗುತ್ತದೆ ಎಂಬಲ್ಲಿದ್ದೇವೆ ನಾವು. ಇವುಗಳನ್ನು
ನಿರಾಕರಿಸಲು ಆಗುವುದಿಲ್ಲ. ಒಂದು ನೆನಪಿಡಿ ಗಳಿಕೆ, ಸಂಬಳ ಜಾಸ್ತಿಯಾಗ್ತಾ ಹೋದ ಹಾಗೆ ಅದರ
ಖರ್ಚಿಗೂ ದಾರಿಗಳು ಸಿದ್ಧವಾಗಿರುತ್ತವೆ. ವ್ಯವಸ್ಥೆ, ಅನುಕೂಲ ಹೆಚ್ಚಿದ ಹಾಗೆ ಅದರ ನಿರ್ವಹಣೆ,
ರಿಪೇರಿಗೂ ಅಷ್ಟೇ ಮೌಲ್ಯ ಇರುತ್ತದೆ. ಅದನ್ನು ನಿರಾಕರಿಸಿ ಬದುಕಲು ಆಗುವುದಿಲ್ಲ. ತಂತ್ರಜ್ಞಾನ
ಶಾಪ ಎಂಬುದು ನನ್ನ ನಿಲುವಲ್ಲ, ಅದು ದಶಕಗಳ ಹಿಂದಿನ ಅಲ್ಪತೃಪ್ತಿಯ ದಿನಗಳಿಗೆ ವ್ಯತಿರಿಕ್ತ ಅಂತ
ಮಾತ್ರ ನಾನು ಹೇಳುತ್ತಿರುವುದು.
ತಾಂತ್ರಿಕ ಬದಲಾವಣೆಗಳು ಈ ಕಾಲದ ಅನಿವಾರ್ಯತೆ.
ಇವುಗಳಿಲ್ಲದೆ ನಾವು ನಾವಾಗಿ ಇರಲು ವ್ಯವಸ್ಥೆ ಅವಕಾಶ ನೀಡುವುದಿಲ್ಲ. ಆದರೆ ನಾವು ಅವುಗಳ ಮೇಲೆ
ಎಷ್ಟು ಅವಲಂಬಿತರಾಗಿದ್ದೇವೆ ಎಂಬುದು ಒಂದಷ್ಟು ಹೊತ್ತು ಅವುಗಳಿಲ್ಲದೆ ಕಾಲ ಕಳೆಯುವ ಕಾಲ ಬಂದಾಗ
ಕಂಗಾಲಾಗುವಾಗ ಅರ್ಥವಾಗುತ್ತದೆ!
ಮನೆಯಲ್ಲಿ ಕರೆಂಟು ಎಂಬುದೇ ಇಲ್ಲದ ದಿನಗಳಲ್ಲಿ, ಈ
ಯಾವ ನಿರೀಕ್ಷೆಗಳೂ, ವ್ಯವಸ್ಥೆಗಳೂ ಇಲ್ಲದ ಕಾಲಕ್ಕೆ ಇಂತಹ ಯಾವುದೇ ಟೆನ್ಶನ್ನುಗಳೂ ಇರಲಿಲ್ಲ. ಆಗ
ನಿರೀಕ್ಷೆ, ಅನುಕೂಲ, ಸಾಧ್ಯತೆ ಎಲ್ಲವೂ ಕಮ್ಮಿ ಇತ್ತು, ಹಾಗಾಗಿ ಅಲ್ಪತೃಪ್ತಿ ಇತ್ತು. ಇಂದು
ನಿರೀಕ್ಷೆ, ಸಾಧ್ಯತೆ, ಅನುಕೂಲ ಎಲ್ಲವೂ ಧಾರಾಳ ಇದೆ, ಆದರೂ ತೃಪ್ತಿ ಎಷ್ಟರ ಮಟ್ಟಿಗೆ ಇದೆ
ಎಂಬುದು ಅವರವ ಭಾವಕ್ಕೆ, ಭಕುತಿಗೆ ಬಿಟ್ಟದ್ದು!
-ಕೃಷ್ಣಮೋಹನ ತಲೆಂಗಳ (03.07.2021)
No comments:
Post a Comment