ತೋಚಿದ್ದು....ಗೀಚಿದ್ದು ಭಾಗ 2

ನಮ್ಮನ್ನು ಯಾರಾದರೂ ನಿಷ್ಪ್ರಯೋಜಕ ಎಂದು ನಿರ್ಧರಿಸಿದಾಗ ಅಥವಾ ನಾವು ಅವರ ಪಾಲಿಗೆ ಗುಂಪಿಗೆ ಸೇರಲಾಗದ ವ್ಯಕ್ತಿಯೆಂದು ಅವರಿಗೆ ಕಂಡು ಬಂದಾಗ ನಿಜವಾಗಿ ನಮ್ಮ ಕುರಿತಾಗಿ ಅವರಿಗೆಂಥ ಭಾವನೆ ಇದೆ, ಎಷ್ಟು ಋಣಾತ್ಮಕ ಧೋರಣೆಯಿದೆ ಎಂಬ ಅಂಶಗಳು ಅವರ ಬಾಯಿಯಿಂದಲೇ ಹೊರ ಬೀಳುತ್ತವೆ. ಅವಶ್ಯಕತೆ ಇಲ್ಲದವನ ಕುರಿತು ಅಥವಾ ಇನ್ನು ಅವನಿಂದ ನಮಗೇನೂ ಆಗಬೇಕಾಗಿಲ್ಲ ಎಂದು ಅಂದುಕೊಂಡ ಕ್ಷಣದ ನಂತರ ಒಬ್ಬ ವ್ಯಕ್ತಿಯನ್ನು ಸುತ್ತಮುತ್ತಲಿನವರು ನೋಡುವ ದೃಷ್ಟಿ ಮತ್ತು ನೇರವಾಗಿ ಅವರು ಮಾತನಾಡುವ ರೀತಿ ಎರಡೂ ಬದಲಾಗುತ್ತದೆ. ಕುಡಿದವರು ಸತ್ಯವನ್ನೇ ಹೇಳುತ್ತಾರೆ ಎಂಬ ನಾಣ್ನುಡಿಯ ಹಾಗೆ. ನಮಗೆ ಸಂಬಂಧವೇ ಇಲ್ಲದಿದ್ದರೂ ಯಾರೋ ಹೇಳಿದರೆಂದು ಇನ್ಯಾರನ್ನೋ ವಿನಾ ಕಾರಣ ದ್ವೇಷಿಸುವುದು ಅಥವಾ ವಿನಾ ಕಾರಣ ಸಂಶಯ ಪಡುವುದು, ಅಥವಾ ಪರಾಂಬರಿಸಿ ನೋಡದೆ ಸ್ವತಹ ಕಲ್ಪಿಸಿಕೊಂಡು ಮಾಡುವ ಟೀಕೆ ಎಲ್ಲವೂ ಅಸಹಜ ಮತ್ತು ಅಪ್ರಬುದ್ಧವಾಗುತ್ತವೆ ಅಷ್ಟೇ.
-KmohanT

(26/05/2019)
------

ಹತ್ತಬೇಕಾದ ರೈಲು ಕಣ್ಣೆದುರೇ ಸಾಗಿ ಹೋಗುತ್ತಿದ್ದರೂ ಓಡಿ ಹತ್ತಲಾಗದ ಹಾಗೆ, ಬದುಕಿನಲ್ಲಿ ಕೆಲವೊಂದು ಅವಕಾಶಗಳು, ಅದೃಷ್ಟ, ವ್ಯಕ್ತಿಗಳ ಸಂಪರ್ಕ ತಪ್ಪಿ ಹೋಗುತ್ತಿದ್ದರೂ ಕಾರಣಾಂತರಗಳಿಂದ ತಡೆದು ನಿಲ್ಲಿಸಲಾಗುವುದೇ ಇಲ್ಲ. ಅದು ಸ್ವಯಂಕೃತಾಪರಾಧವೇ ಆಗಿರಬೇಕಾಗಿಲ್ಲ, ಕಾಕತಾಳೀಯ, ಸಮಯ ಸಂದರ್ಭ ದೋಷ, ದುರಾದೃಷ್ಟ ಯಾವುದೂ ಇರಬಹುದು. ಕಣ್ಣೆದುರೇ ಕಳೆದುಹೋಗುತ್ತಿರುವುದನ್ನು ನೋಡುವ ಅಸಹಾಯಕತೆ ಮತ್ತೆ ಶೂನ್ಯದಿಂದ ಬೆಳೆಯಬೇಕಾದ ಸಂದರ್ಭ ಕಲ್ಪಿಸುವುದು. ಯಾಕೆ, ಎಲ್ಲಿ, ಯಾವಾಗ ತಪ್ಪಿದೆವು ಎಂದೇ ಅರ್ಥವಾಗದ ಇಂತಹ ಸನ್ನಿವೇಶಗಳನ್ನೇ ಹಣೆಬರಹವೆಂದೂ, ಇನ್ನು ಕೆಲವರು ಟೈಂ ಚೆನ್ನಾಗಿಲ್ಲ ಎಂದೂ ಹೇಳುತ್ತಾರೆ. ಎರಡರದ್ದೂ ಅರ್ಥ ಒಂದೇ.

-KmohanT
(26/05/2019)
----

ಇಗೋ ಮತ್ತು ಪೊಸೆಸಿವ್ ನೆಸ್ ನಮಗೆ ಅರಿವಿಲ್ಲದಂತೆ ಮನಶಾಂತಿಯನ್ನು ಕೊಲ್ಲುತ್ತಿರುತ್ತದೆ. ಗೆದ್ದಲು ಹುಳದ ಹಾಗೆ. ಯಾವುದೇ ಹಂತದಲ್ಲಿ ಇನ್ನೊಬ್ಬರ ಜಾಗದಲ್ಲಿ ನಿಂತು ಯೋಚಿಸಲು ಆಗದ ಅಥವಾ ಯಾವುದೇ ಹಂತದಲ್ಲಿ ಒಬ್ಬರನ್ನು ಬಿಟ್ಟು ಕೊಡದೆ ಹೊಂದಿಕೊಂಡೇ ಇರಬೇಕೆಂದು ಬಯಸುವ ಎರಡೂ ವಿಚಾರಗಳಿಂದ ಯೋಚನೆಯ ವ್ಯಾಪ್ತಿ ಕಿರಿದಾಗುತ್ತಾ ಸಂಕುಚಿತರಾಗುತ್ತಾ ಹೋಗುತ್ತೇವೆ. ಬಿರುಕುಗಳು, ಸಂಶಯಗಳು ಹಾಗೂ ಹತಾಶೆಗಳಿಗೂ ಇವು ಕಾರಣವಾಗುತ್ತವೆ. ಅದು ಗೊತ್ತಾಗುವಾಗ ವ್ಯಾಧಿ ತುಂಬ ಬೆಳೆದಿರುತ್ತದೆ.

-KmohanT
(26/05/2019)

No comments: