ಮೊಬೈಲ್ ಇದ್ದರೆ ಸಾಕೆ... ಫೋಟೋಕ್ಕೆ ಬೇಕು ಬೆಳಕು, ಚಂದಕೆ ಸಾಕು ಫೋಕಸ್.. ಶೇರೂ ಮಾಡೋಕೆ!
![]() |
| Photo: Dheeraj Poyyekanda |
ತುಂಬ ಮಂದಿ ಗೊಣುಗುವುದು ಕೇಳಿದ್ದೇನೆ. ನನ್ನ
ಮೊಬೈಲಿನಲ್ಲಿ ಪೋಟೋ ಚಂದ ಬರುವುದೇ ಇಲ್ಲಂತ. ನೋಡುವುದಕ್ಕೆ ಹೋದರೆ ಅವರತ್ರ ದುಬಾರಿ ಮೊಬೈಲು
ಇರ್ತದೆ, ಸಶಕ್ತ ಲೆನ್ಸು, ಫೋಟೋ ಸೆರೆ ಆಯ್ಕೆಗಳು ಸಹ ಇರ್ತವೆ. ಆದರೆ ಫೋಟೋ ಸೆರೆ ಹಿಡಿಯುವ
ಮೂಲಭೂತ ಅಗತ್ಯಗಳ ಬಗ್ಗೆ ಅವರು ಗಮನ ಹರಿಸದಿರುವುದೇ ಫೋಟೋ ಚಂದ ಬಾರದಿರಲು ಕಾರಣ. ತುಂಬ ಮಂದಿಯ
ತಪ್ಪು ಕಲ್ಪನೆ ಏನು ಅಂತಂದ್ರೆ ದುಬಾರಿ ಬೆಲೆಯ ಅಥವಾ ಐಫೋನಿನಲ್ಲಿ ಮಾತ್ರ ಫೋಟೋ ಚಂದ ಬರುವುದು
ಅಂತ. ಆದರೆ, ಸಾಕಷ್ಟು ಮಂದಿಗೆ ಅರಿವಿಲ್ಲದ ಸಂಗತಿ ಏನು ಅಂದರೆ ಫೋಟೋ ಚಂದ ಬರುವುದು ಕೇವಲ
ಕೆಮರಾದ ಪವರ್ ನಿಂದಲ್ಲ, ಫೋಟೋ ತೆಗೆಯುವ ಪ್ರಾಥಮಿಕ ತಂತ್ರಗಳು ಗೊತ್ತಿರುವುದರಿಂದಲೂ ಹೌದು.
ಅಷ್ಟಕ್ಕೂ ಮೊಬೈಲಿನಲ್ಲಿ ಫೋಟೋ ಸೆರೆ ಹಿಡಿಯುವುದು
ಬ್ರಹ್ಮವಿದ್ಯೆ ಅಲ್ಲ. ಕೆಲವು ಮೂಲಭೂತ ಸಂಗತಿಗಳತ್ತ ಗಮನ ಹರಿಸಿದರೆ ಯಾರೂ ಬೇಕಾದರೂ ಯಾವುದೇ
ಸ್ಮಾರ್ಟ್ ಫೋನಿನಲ್ಲಿ ಚಂದದ ಫೋಟೋ ಸೆರೆ ಹಿಡಿಯಬಹುದು. ಅದಕ್ಕೆ ಐಫೋನ್ ಅಥವಾ ಸ್ಯಾಮ್ಸಂಗ್
ಗ್ಯಾಲಕ್ಸಿ ಎಸ್ 26 ಅಲ್ಟ್ರಾವೇ ಬೇಕೂಂತ ಇಲ್ಲ.
ಬೆಳಕು, ಫೋಕಸ್ ಮತ್ತು ಫ್ರೇಮಿಂಗ್, ಸ್ಟೆಡಿನೆಸ್ ಈ ನಾಲ್ಕು
ಸಂಗತಿಗಳನ್ನು ನಾವು ಕಡೆಗಣಿಸುವುದರಿಂದಲೇ ಮೊಬೈಲಿನಲ್ಲಿ ಫೋಟೋ ಚಂದ (ಆಕರ್ಷಕ) ಬಾರದೇ ಇರಲು
ಮುಖ್ಯ ಕಾರಣ. ಮೊಬೈಲಿನಲ್ಲಿ ಫೋಟೋ ತೆಗೆಯುವಾಗ ನಾವು ಮಾಡುವ ಸಾಮಾನ್ಯ ತಪ್ಪುಗಳು ಹಾಗೂ ಅದನ್ನು
ಸರಿಪಡಿಸಬೇಕಾದ ಸಂಗತಿಗಳನ್ನು ನನ್ನ ತಿಳಿವಳಿಕೆ ಮಟ್ಟದಲ್ಲಿ ಹೇಳಲು ಪ್ರಯತ್ನಿಸುತ್ತಿದ್ದೇನೆ.
(ನಾನು ನುರಿತ, ವೃತ್ತಿಪರ ಛಾಯಾಗ್ರಾಹಕ ಅಲ್ಲ, ನನಗೆ ಗೊತ್ತಿರುವುದನ್ನು ಹೇಳುತ್ತಿದ್ದೇನೆ
ಅಷ್ಟೇ)
1)
ಬೆಳಕು: ನಾವು ಫೋಟೋ
ಕ್ಲಿಕ್ ಮಾಡುವ ಮೊದಲು ಬೆಳಕಿನ ಲಭ್ಯತೆ ನೋಡಲೇಬೇಕು. ಎರಡು ಅಂಶಗಳನ್ನು ಖಚಿತಪಡಿಸಿಕೊಳ್ಳಿ.
ಒಂದು ಯಾರ ಫೋಟೋ ತೆಗೆಯುತ್ತೀರೋ (ಸಬ್ಜೆಕ್ಟ್) ಅವರ ಮೇಲೆ ಸರಿಯಾದ ಬೆಳಕು ಬೀಳುತ್ತಿರಬೇಕು.
ಎರಡನೆಯದು ಎದುರಿನಿಂದ (ಸಬ್ಜೆಕ್ಟಿನ ಹಿಂದಿನಿಂ) ಬೆಳಕು ಮೊಬೈಲ್ ಲೆನ್ಸಿನ ಮೇಲೆ
ಬೀಳುತ್ತಿರಬಾರದು. ಹಾಗೆ ಎದುರಿನಿಂದ ಬೆಳಕು ಬಿದ್ದರೆ ಅದು ಓಪೋಸಿಟ್ ಲೈಟ್ ಕಾರಣದಿಂದ ಇಡೀ
ಚಿತ್ರ ಮಸುಕು ಅಥವಾ ಕಪ್ಪಾಗಿ ಬರುತ್ತದೆ. ಈ ಎರಡು ಸಂಗತಿ ಪಾಲಿಸಿದರೆ ನಿಮ್ಮ ಫೋಟೋ ಶೇ.50 ಚಂದ
ಬಂದ ಹಾಗೆಯೇ. ಎದುರಿನಿಂದ ಬೀಳುವ ಬಾಗಿಲು, ಕಿಟಕಿ
ಬೆಳಕು, ಸೂರ್ಯ ಕಿರಣ, ವೇದಿಕೆಯ ಫೋಕಸ್ ಲೈಟು ಇತ್ಯಾದಿಗಳನ್ನು ಫ್ರೇಮಿನಿಂದ ಹೊರಗಿಟ್ಟೇ ಫೋಟೋ
ತೆಗೆಯುವುದು ಕಡ್ಡಾಯ.
2)
ಫೋಕಸಿಂಗ್: ಸುಮಾರು ಮಂದಿ ಫೋಟೋ ತೆಗೆಯುವಾಗ ಫೋಕಸಿಂಗ್ ಮಾಡುವುದೇ
ಇಲ್ಲ. ಈಗಿನ ಎಲ್ಲ ಸ್ಮಾರ್ಟ್ ಫೋನುಗಳಲ್ಲಿ ಫೋಕಸಿಂಗ್ ವ್ಯವಸ್ಥೆ ಇರುತ್ತದೆ. ಆಟೋ ಫೋಕಸ್
ವ್ಯವಸ್ಥೆ ಇದ್ದರೂ ನಮ್ಮ ಲೆನ್ಸು ಸಬ್ಜೆಕ್ಟನ್ನು ಫೋಕಸ್ ಮಾಡುವಷ್ಟು ನಾವು ಸಮಯ ಕೊಡಬೇಕು. ಅದರ
ಬದಲು ಒಬ್ಬರನ್ನು ನಿಲ್ಲಿಸಿ ಯಾವುದೇ ಸಿದ್ಧತೆ ಇಲ್ಲದೆ ಫೋಟೋ ಕ್ಲಿಕ್ಕಿಸಿದರೆ ಫೋಟೋ ಚೆನ್ನಾಗಿ
ಬರಲು ಸಾಧ್ಯವೇ ಇಲ್ಲ. ಯಾವ ಸಬ್ಜೆಕ್ಟ್ ಫೋಟೋ ತೆಗಯಬಯಸುತ್ತೀರೋ ಅದರ ಎದುರು ಕೆಮರಾ ಹಿಡಿದ ಬಳಿಕ
ಮೃದುವಾಗಿ ಪರದೆ ಮೇಲೆ ಆ ಸಬ್ಜೆಕ್ಟ್ ಮೇಲೆ ಪ್ರೆಸ್ ಮಾಡಿ. ಆಗ ಒಂದು ಹಳದಿ ಚೌಕ ಅಥವಾ ವೃತ್ತ ಆ
ಸಬ್ಜೆಕ್ಟಿನ ಮೇಲೆ ಫೋಕಸ್ ಮಾಡುತ್ತದೆ. ಸಬ್ಜೆಕ್ಟ್ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ.
ನಂತರವೇ ಫೋಟೋ ಕ್ಲಿಕ್ ಮಾಡಿ. ಫೋಕಸ್ ತಕ್ಷಣ ಆಗದಿದ್ದರೆ, ಪರದೆ ಮೇಲೆ ಎರಡೂ ಬೆರಳಿಟ್ಟು
ಹಿಂದಕ್ಕೆ ಅಥವಾ ಮುಂದಕ್ಕೆ ಝೂಮಿನ್ ಅಥವಾ ಝೂಮ್ ಔಟ್ ಮಾಡುವ ಮೂಲಕ ಫೋಕಸಿಂಗ್
ಖಚಿತಪಡಿಸಿಕೊಳ್ಳಿ. ಇದೆಲ್ಲ 3-4 ಸೆಕುಂಡುಗಳಲ್ಲಿ ಆಗುವ ಕೆಲಸ. ಈ ಥರ ಫೋಟೋ ತೆಗೆದರೆ ಫೋಟೋ
ಹೆಚ್ಚು ಸ್ಪಷ್ಟವಾಗಿರುತ್ತದೆ. ಅಗತ್ಯ ಬಿದ್ದರೆ ನೀವೇ ಸಬ್ಜೇಕ್ಟಿನ ಹತ್ತಿರ ಹೋಗಿ ಸಮೀಪದಿಂದ
ಫೋಟೋ ತೆಗೆಯಲು ಸಂಕೋಚ ಪಡಬಾರದು. ದೂರದಿಂದ ಝೂಮ್ ಮಾಡಿ ಫೋಟೋ ತೆಗೆದರೆ ಅದರ ಫಲಿತಾಂಶ
ದುರ್ಬಲವಾಗಿರುತ್ತದೆ.
3)
ಫ್ರೇಮಿಂಗ್: ಫೋಟೋ ತೆಗೆಯುವ ಸಬ್ಜೆಕ್ಟ್ ನಿಮ್ಮ ಕೆಮರಾ ಚೌಕಟ್ಟಿನಲ್ಲಿ
ಹೇಗೆ ಫ್ರೇಮಿಂಗ್ ಆಗಿದೆ ಅಂತ ಖಚಿತಪಡಿಸಿ. ವೈಡ್ ಆಂಗಲ್ ಇಲ್ಲದೆ ಹತ್ತಾರು ಜನ ನಿಂತರೆ ಅದರಲ್ಲಿ
ಯಾರ ಮುಖವೂ ಸ್ಪಷ್ಟ ಬರಲಿಕ್ಕಿಲ್ಲ. ಅದೇ ರೀತಿ ಅನಾವಶ್ಯಕ ಸಂಗತಿಗಳು ಅಥವಾ ಕೆಟ್ಟ ಬ್ಯಾಕ್
ಗ್ರೌಂಡ್ ಇದ್ದಾಗಲೂ ಫೋಟೋ ಚೆನ್ನಾಗಿ ಕಾಣಿಸಲಿಕ್ಕಿಲ್ಲ. ಹಾಗಾಗಿ ಫೋಟೋ ಚೌಕಟ್ಟಿನೊಳಗೆ ಏನೆಲ್ಲ
ಇದೆ, ಎಷ್ಟು ಮಂದಿ ಹೇಗೆ ನಿಂತಿದ್ದಾರೆ ಎಂಬುದನ್ನು ಗಮನಿಸಿಯೇ ಕ್ಲಿಕ್ ಮಾಡಬೇಕು. ಇದಕ್ಕಾಗಿ ಸಮೀಪದ ಫೋಟೋಗಳಿಗೆ ಪೋರ್ಟೈಟ್ ಮೋಡ್, ದೂರದ ಫೋಟೋಗಳಿಗೆ ವೈಡ್ ಆಂಗಲ್, ಅತ್ಯಂತ
ದೂರದ ಫೋಟೋಗಳಿಗೆ ಟೆಲಿ ಫೋಟೋ, ರಾತ್ರಿ ಫೋಟೋಗಳಿಗೆ ನೈಟ್ ಮೋಡ್, ಅಗಲದ ಪ್ರದೇಶ ಸೆರೆಹಿಡಿಯಲು
ಪನೋರಮಾ ವ್ಯೂ ಇತ್ಯಾದಿ ಆಯ್ಕೆಗಳ ಸದುಪಯೋಗ ಮಾಡಿ. ಕೇವಲ ಮೊಬೈಲ್ ಹಿಡಿದು ಫ್ರೇಮಿಂಗ್ ಇಲ್ಲದೇ
ಕ್ಲಿಕ್ ಮಾಡಿದರೆ ಫೋಟೋ ಫಲಿತಾಂಶ ದುರ್ಬಲವಾಗಿರುತ್ತದೆ.
4)
ಸ್ಥಿರತೆ: ಎಲ್ಲದಕ್ಕಿಂತ ಮುಖ್ಯವಾದದ್ದು ಕೈ ಸ್ಥಿರವಾಗಿರುವುದು.
ಸಾಕಷ್ಟು ಮಂದಿ ಮೊಬೈಲ್ ಹಿಡಿದು ಫೋಕಸಿಂಗ್ ಎಲ್ಲ ಮಾಡ್ತಾರೆ. ಆದರೆ ಫೋಟೋ ಕ್ಲಿಕ್ ಆಗುವ
ಹೊತ್ತಿಗೆ ಅವರ ಕೈ ನಡುಗುತ್ತದೆ ಅಥವಾ ಕ್ಲಿಕ್ ಆದ ಸೆಕುಂಡಾರ್ಧದಲ್ಲಿ ಕೈ ಆಚೆ ಸರಿಸುತ್ತಾರೆ.
ಆಗ ಮೊಬೈಲ್ ಅಲುಗಾಡಿ ಫೋಟೋ ಬ್ಲರ್ ಬರುತ್ತದೆ. ಆದ ಕಾರಣ ಸರಿಯಾಗಿ ಕೈ ಗಟ್ಟಿಯಾಗಿ ಇರಿಸಿ,
ಬೇಕಿದ್ದರೆ ಯಾವುದಾದರೂ ಆಧಾರ ಅಥವಾ ಮೊಣಕಾಲಿಗೆ ಮೊಣಕೈ ತಾಗಿಸಿ ಇರಿಸಿ ಅಲುಗಾಡದ ರೀತಿಯಲ್ಲೇ
ಫೋಟೋ ಕ್ಲಿಕ್ ಮಾಡಬೇಕು ಹಾಗೂ, ಫೋಟೋ ಪರದೆಯಲ್ಲಿ ಸ್ಪಷ್ಟವಾಗಿ ಕ್ಲಿಕ್ ಆದ ಬಳಿಕವೇ ಕೈಯ್ಯನ್ನು
ಆಚೆ ಎತ್ತಬೇಕು.
ಚೆನ್ನಾಗಿ ಫೋಟೋ ಸೆರೆ ಹಿಡಿಯಲು ಸಾಕಷ್ಟು ಸಂಗತಿಗಳನ್ನು
ಕಲಿಯಬಹುದು. ಆದರೆ, ನನ್ನ ಮೊಬೈಲಿನಲ್ಲಿ ಫೋಟೋ ಚಂದ ಬರುವುದಿಲ್ಲ ಅಂತ ವಿನಾ ಕಾರಣ ಗೊಣಗುವವರು ಈ
ನಾಲ್ಕು ಸಂಗತಿಗಳನ್ನು ಪ್ರಾಥಮಿಕವಾಗಿ ರೂಢಿಸಿಕೊಂಡರೆ, ನಿಮ್ಮ ಮೊಬೈಲು ಯಾವುದೇ ಆಗಿದ್ದರೂ ಫೋಟೋ
ಖಂಡಿತಾ ಕನಿಷ್ಠ ನೋಡುವಷ್ಟಾದರೂ ಚಂದ ಬರುವುದು ಗ್ಯಾರಂಟಿ. ಬೇಕಾದರೆ ಪ್ರಯತ್ನಿಸಿ ನೋಡಿ...!
-ಕೃಷ್ಣಮೋಹನ ತಲೆಂಗಳ (15.03.2026)

No comments:
Post a Comment