ಸ್ಮಶಾನ ವೈರಾಗ್ಯ ಮತ್ತು ಮರಕುಟಿಕನ ‌"ದೃಢನಿರ್ಧಾರ"... !



ಇದು ಅಮ್ಮ ಬಾಲ್ಯದಲ್ಲಿ ಹೇಳುತ್ತಿದ್ದ ಕತೆ: ಒಂದು ಮರಕುಟಿಕ ಪಕ್ಷಿ ಇತ್ತಂತೆ. ಪ್ರತಿ ದಿನ ಗಟ್ಟಿ ಮರಗಳನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ ಒಳಗಿರುವ ಹುಳಹುಪ್ಪಟೆಗಳನ್ನು ಹೆಕ್ಕಿ ತಿನ್ನುವುದು ಅದರ ಬದುಕು. ಪ್ರತಿ ದಿನ ರಾತ್ರಿ ಮರ ಕುಕ್ಕಿ ಕೊಕ್ಕು ನೋಯುತ್ತಿದ್ದಂತೆ ಅದು ದೃಧ ನಿರ್ಧಾರ ತಕೊಳ್ತಾ ಇತ್ತಂತೆ, ಇಂದೇ ಕೊನೆ. ನಾಳೆಯಿಂದ ಬೇರೆ ಕಸುಬು ಹುಡುಕಬೇಕು. ಈ ಒತ್ತಡ ತಡೆಯಲು ಕಷ್ಟ ಅಂತ….” ಆದರೆ, ಮರುದಿನ ಬೆಳಕು ಹರಿಯುವುದೇ ತಡ, ಹಿಂದಿನ ರಾತ್ರಿಯ ಒತ್ತಡದ ಒತ್ತಡ ಕಡಿಮೆಯಾಗಿ, ತನಗರಿವಿಲ್ಲದೇ ಮರಕುಟಿಕ ಮತ್ತೆ ಫ್ರಶ್ಶಾಗಿ ಮರ ಕುಟುಕಲು ಹಾರುತ್ತಿತ್ತಂತೆ...

ಕೆಲವು ಸಂದರ್ಭ, ಕೆಲವು ನಿರ್ಧಾರ ಮತ್ತು ಬದಲಾಯಿಸಲಾಗದ ವಿಧಿ ಮತ್ತು ಪರಿಸ್ಥಿತಿ ಹಾಗೆಯೇ... ಎಲ್ಲ ವಿಷಾದ, ಹತಾಶೆ, ಆ ಕ್ಷಣದ ದೃಢ ನಿರ್ಧಾರಗಲೆಲ್ಲ ಸ್ಮಶಾನ ವೈರಾಗ್ಯದಂತೆ ಮತ್ತೆ ಬೇರೆ ಆಯ್ಕೆಗಳಿಲ್ಲದೆ ಅಲ್ಲಿಗೆ ಹೋಗಿ ಪ್ರದಕ್ಷಿಣೆ ಬರುವ ಹಾಗೆ ಮಾಡುತ್ತದೆ. ಕಣ್ಣೆದುರೇ ವರ್ತಮಾನ ವ್ಯರ್ಥವಾಗಿ ಕರಗಿ ಹೋಗುತ್ತಿರುವುದು ಮನಸ್ಸನ್ನು ತೋಯಿಸುತ್ತಿದ್ದರೂ, ಕಾಣದ ಭವಿಷ್ಯದ ಅನಿವಾರ್ಯತೆ ಮತ್ತು ಕಾಣುತ್ತಲೇ ಇರುವ ವರ್ತಮಾನದ ಅಗತ್ಯಗಳು ನಿರೀಕ್ಷೆ ಮತ್ತು ಕನಸುಗಳನ್ನು ಹೊಸಕಿ ಹಾಕುತ್ತವೆ...

ಬದಲಾಯಿಸಲು ಸಾಧ್ಯವೇ ಆಗದ ಪರಿಸ್ಥಿತಿಗಳು, ಸುತ್ತುವರಿದ ಮಿತಿಗಳು, ಅವರವರ ಅದೃಷ್ಯ, ಪರಿಸ್ಥಿತಿ, ತಕ್ಕೊಂಡ ತಪ್ಪು ನಿರ್ಧಾರಗಳು ಮತ್ತು ಆಯ್ಕೆಗಳಿಲ್ಲದ ಜೀವನವು ಗೂಟಕ್ಕೆ ಕಟ್ಟಿದ ಹಸುವಿನಂತೆ, ಎಷ್ಟೇ ರಭಸವಾಗಿ ಹಗ್ಗ ಎಳೆದು ಓಡಲು ಯತ್ನಿಸಿದರೂ, ಹಗ್ಗ ಬಿಗಿಯಾಗಿ ಗೂಟಕ್ಕೆ ಮತ್ತೆ ಎಳೆದೆಳೆದು ತರುತ್ತದೆ. ಸಿಕ್ಕಾಪಟ್ಟೆ ಎಳೆಯಲು ಹೊರಟರೆ ಅದೇ ಹಗ್ಗ ಸಿಕ್ಕುಸಿಕ್ಕಾಗಿ ಗೂಟದ ಸುತ್ತಲಿನ ಸೀಮಿತ ಜಾಗದಲ್ಲೂ ಸಾವಕಾಶವಾಗಿ ಓಡಾಡಲು ಅಡ್ಡಿಯಾಗುವಂತ ಪರಿಸ್ಥಿತಿ ಸೃಷ್ಟಿಸುತ್ತದೆ.

 

ಅವರವರ ಅಗತ್ಯಕ್ಕೆ ಮಾತ್ರ ನೆನಪಿಸುವವರು, ಕೆಲಸ ಆಗುವ ವರೆಗೆ ಭಯಂಕರ ಗೌರವ ಕೊಟ್ಟು ಮತ್ತೆ ದಾಕ್ಷಿಣ್ಯವೇ ಇಲ್ಲದೆ ಮರೆಯುವವರು, ದುಡ್ಡು ತಕ್ಕೊಳ್ಳುವ ವರೆಗೆ ಇದ್ದ ವಿನೀತ ಭಾವ ನಂತರ ಉಡಾಫೆಯಾಗಿ ಬದಲಾಗುವುದು, ತನ್ನ ಬಿಡುವಿನ ಸಮಯದ ಹೊರತು ಇತರರ ಬಿಡುವಿಗೆ ನಯಾಪೈಸೆ ಗೌರವ ನೀಡದೆ, ತನ್ನ ಸಮಯ ಜಗತ್ತಿನ ಸಮಯವೇನೋ ಎಂಬಂತೆ ವರ್ತಿಸುವವರು... ಎಲ್ಲರೂ ಇಂತಹ ಮರಕುಟಿಕ ಪರಿಸ್ಥಿತಿಯಲ್ಲಿ ಕಾಡುವವರು ಮತ್ತು ಕಾಣುವವರು ಮತ್ತು ಪರಿಸ್ಥಿತಿಯನ್ನು ತಾವೆಲ್ಲಿ ವಿಕೋಪಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದು ಗ್ರಹಿಸಲು ವಿಫಲರಾಗುವ ಸ್ವಘೋಷಿತ ಪಂಡಿತರು...

 

ಬದುಕು ಕೆಲವೊಮ್ಮೆ ಯಾರೋ ಬರೆದಿಟ್ಟ ಚಿತ್ರಕತೆಯ ಹಾಗೆ... ಅದನ್ನು ಬದಲಾಯಿಸಲು, ತಿದ್ದಲು ಮತ್ತು ಮತ್ತೊಮ್ಮೆ ಬರೆಯಲು ಆಯ್ಕೆಗಳು ಇರುವುದಿಲ್ಲ. ನಾವು ಅಸಹಾಯಕರಾಗಿ ನೋಡುತ್ತಲೇ ಇರುತ್ತೇವೆ. ಈಗಾಗಲೇ ಶೂಟಿಂಗ್ ಮುಗಿದು ತೆರೆಗೆ ಬಂದು ಪರದೆಯಲ್ಲಿ ಕಾಣುತ್ತಿರುವ ಸಿನಿಮಾದ ಪ್ರೇಕ್ಷಕರ ಹಾಗೆ. ಕ್ಲೈಮಾಕ್ಸ್ ಬದಲಿಸಬೇಕು ಅಂತಂದ್ರೂ ಆದು ಪ್ರೇಕ್ಷಕನ ಆಯ್ಕೆಯಲ್ಲ....

ಸೇಫ್ ಝೋನ್ ಕಲ್ಪನೆಯ ಬದುಕಿನಲ್ಲಂತೂ ಇದು ತೀರಾ ಸಾಮಾನ್ಯ. ವ್ಯಕ್ತಿಗೆ ಭವಿಷ್ಯದ ಕಲ್ಪನೆ ಇರಬಹುದು. ಆದರೆ ಭವಿಷ್ಯವನ್ನು ಮೊದಲೇ ಅನುಭವಿಸಲು ಆಗುವುದಿಲ್ಲ, ಅದು ಮನುಷ್ಯನ ಮಿತಿ. ಎಂಥದ್ದೇ ಕೃತಕ ಬುದ್ಧಿಮತ್ತೆ (ಎಐ) ಬಂದಿರಬಹುದು. ಆದರೆ ನಮ್ಮತ್ರ ಟೈಂ ಮೇಷಿನ್ ಇಲ್ಲ. ಕಾಲವನ್ನು ರಿವೈಂಡ್ ಮಾಡಲು, ಫಾರ್ವರ್ಡ್ ಮಾಡಲು, pause ಮಾಡಲು ಸಹ ನಮ್ಮ ಕೈಯಲ್ಲಿ ಸಾಧ್ಯವೇ ಇಲ್ಲ.... ಓಡುವ ರೈಲಿನ ಕಿಟಕಿಯಲ್ಲಿ ಇಣುಕಿ ನೋಡುವ ಪ್ರಯಾಣಿಕರು ಮಾತ್ರ ನಾವು. ಅದೇ ಕಾರಣಕ್ಕೆ ಎಂದೋ ಬದುಕಿನಲ್ಲಿ ತಕ್ಕೊಂಡು ಉಡಾಫೆಯ, ಚಿಂತಿಸದ, ವೈಚಾರಿಕವಾಗಿ ಯೋಚಿಸದ, ಹೋಲಿಸದ ನಿರ್ಧಾರ ಬದುಕಿನುದ್ದಕ್ಕೂ ಪರಿತಪಿಸುವಂತೆ ಮಾಡುತ್ತವೆ... ಪರಿತಪಿಸಿದರೂ ಬದಲಾಗಲಾಗುವುದಿಲ್ಲ ಅಂತ ಗೊತ್ತಾದಾಗ ಬದಲಾಗದೇ ಇರುವುದೇ ಬದುಕಾಗಿ ಪರಿಣಿಸುತ್ತದೆ...

 

ಬದುಕಿನ ಚೌಕಟ್ಟಿನಾಚೆ ಏನೇನು ಸರಿದು ಹೋಗುತ್ತಲೇ ಇರುತ್ತವೆ ಎಂಬ ಅರಿವು ಇದ್ದಾಗ್ಯೂ ಸಹ, ಅದರ ಬಗ್ಗೆ ಹಲುಬಹುದೇ ವಿನಃ ಬದಲಿಸಲು ಆಗುವುದಿಲ್ಲ. ಧನಾತ್ಮಕವಾಗಿರಿ, ಪಾಸಿಟಿವ್ ಆಗಿ ಯೋಚಿಸಿ, ಧೈರ್ಯ ಗುಂದದೇ ಇರಿ, ಪ್ರಾಣಾಯಾಮ ಮಾಡಿ ಅಂತ ಸಲಹೆ ಕೊಡುವವರ ಬದುಕು ಸಹ ಡೋಲಾಯಮಾನವಾಗಿ ಪರಿಸ್ಥಿತಿಗಿಂತ ಆಚೆ ಹೋಗಲಾಗದೆ ಇರುವ ಸಂಧಿಗ್ಧತೆಯನ್ನು ಕಣ್ಣಾರೆ ಕಂಡಿದ್ದೇನೆ. ಹಾಗಿರುವಾಗ ಪಾಸಿಟಿವ್ ಯೋಚನೆಯ ಥಿಯರಿ ಮತ್ತು ಹೇಳಲೂ, ಅನುಭವಿಸುತ್ತಲೇ ಇರಲೂ, ವಿವರಿಸಲೂ ಆಗದ ಪರಿಸ್ಥಿತಿಗಳ ಪ್ರಾಕ್ಟಿಕರ್ ಸಂದರ್ಭ ಎರಡೂ ವಿರುದ್ಧ ಧ್ರುವಗಳು... ಓದಲು, ಹೇಳಲು, ಬರೆಯಲು ಸುಲಭ, ಅನುಭವಿಸಲು ಕಷ್ಟ....

 

ಒತ್ತಡಗಳಿಲ್ಲದ ವ್ಯಕ್ತಿಗಳೇ ಇಲ್ಲ. ಅದನ್ನು ಸ್ವೀಕರಿಸುವುದರಲ್ಲಿ, ಅದಕ್ಕೆ ಪ್ರತಿಕ್ರಿಯಿಸುವುದರಲ್ಲಿ, ಅದನ್ನು ಕಡೆಗಣಿಸಿ ಮುಂದೆ ಹೋಗುವುದರಲ್ಲಿ, ತುಂಬ ಗಂಭೀರವಾಗಿ ತಕ್ಕೊಂಡು ತೊಳಲಾಡುವುದರಲ್ಲಿ, ಅವರಿವರ ಹತ್ರ ಹಲುಬಿಕೊಂಡು ಹೇಳಿ ಅವರ ತಲೆಯನ್ನೂ ಕೆಡಿಸಿ, ನಾವೂ ಬದಲಾಗದೆ ಅಲೆದಾಡುವುದರಲ್ಲಿ ಅದರ ತೀವ್ರತೆ ನಿರ್ಧಾರವಾಗುತ್ತದೆ. ಜಾಲತಾಣದ ಕೃತಕ ತೋರಿಸುವಿಕೆ, ನಯವಾದ ಮಾತು, ಅಚ್ಚುಕಟ್ಟಾದ ಕಾಣಿಸಿಕೊಳ್ಳುವಿಕೆ ಎಲ್ಲ ವ್ಯಕ್ತಿಯ ಬದುಕಿನ ಒತ್ತಡಗಳನ್ನು ಮರೆ ಮಾಚುತ್ತವೆ... ಒತ್ತಡವನ್ನು ತಕ್ಕೊಂಡು ಕಪಾಟಿನ ಪೆಟ್ಟಿಗೆಯೊಳಗೆ ಬಚ್ಚಿಟ್ಟು ಅನಿವಾರ್ಯವಾದಾಗ ಮಾತ್ರ ಹೊರ ತೆಗೆದು ಸ್ವಚ್ಛಗೊಳಿಸಲು ಸಾಧ್ಯವಾಗುವ ಗಟ್ಟಿಗರು ಮಾತ್ರ ಅದನ್ನು ದಾಟಿ ಹಗುರಾಗಲು ಸಾಧ್ಯವೇನೋ...

ಇದು ತುಂಬ ಸರಳ... ನಾಲ್ಕು ಮಾರ್ಗದ ವೃತ್ತದಲ್ಲಿ ನೀವು ಪೂರ್ವಕ್ಕೆ ಹೋಗಬೇಕಾದವರು ತಪ್ಪಿ ಉತ್ತರದ ಮಾರ್ಗದಲ್ಲಿ ತಿರುಗಿ ಸಾವಿರಗಟ್ಟಲೆ ಮೈಲು ಸಂಚಾರ ಮಾಡಿದ ಮೇಲೆ ದಾರಿ ತಪ್ಪಿದ ಅರಿವಾದ ಮೇಲೆ ನಿಮ್ಮೆದುರು ಇರುವ ಆಯ್ಕೆಗಳೇನೇನು?

1)      ದಾರಿ ತಪ್ಪಿದ ವೃತ್ತದಲ್ಲಿಗೆ ಮತ್ತೆ ವಾಪಸ್ ಬಂದು ಸರಿಯಾದ ದಾರಿಯಲ್ಲಿ ಹೋಗುವುದು.

2)      ಆ ವೃತ್ತ ತಲುಪುವ ಹೊತ್ತಿಗೆ ಆಯುಷ್ಯ ಬಹುತೇಕ ಮುಗಿಯುತ್ತದೆ, ಮರಳಿ ಹೋಗುವ ಸಮಯವೂ ವ್ಯರ್ಥ ಅಂತ ಅಂದುಕೊಂಡು ಇರುವ ದಾರಿ ಎಲ್ಲಿಗೆ ತಲುಪುತ್ತದೋ ಅಲ್ಲಿ ವರೆಗೆ ಹೋಗೋಣ ಅಂತ ಗೊತ್ತು ಗಿರಿ ಇಲ್ಲದೆ ಮುಂದುವರಿಯುವುದು!

3)      ಆಯುಷ್ಯವೂ ವ್ಯರ್ಥವಾಗಬಾರದು, ತಪ್ಪು ದಾರಿಯಲ್ಲೀ ಹೋಗಿ ಟೈಂ ವೇಸ್ಟ್ ಮಾಡಬಾರದು ಅಂತ ತಕ್ಷಣದ ನಿರ್ಧಾರ ತಕ್ಕೊಂಡು ಶಾರ್ಟ್ ಕಟ್ ದಾರಿ ಹುಡುಕಿ ಹೊರಟಲ್ಲಿಗೆ ಅಲ್ಲದಿದ್ದರೂ ತಲುಪಬೇಕು ಅಂತುಕೊಂಡ ಗಮ್ಯ ತಲುಪಲು ಎಲ್ಲೆಲ್ಲೋ ಹೋಗಿ ಸರ್ಕಸ್ ಮಾಡುತ್ತಾ ಇರುವುದು. ಯಶಸ್ವಿಯಾದರೆ ಪಾಸ್, ದಾರಿ ಮತ್ತಷ್ಟು ಸಿಕ್ಕುಸಿಕ್ಕಾದರೆ ಅದು ಮತ್ತೊಂದು ಅನುಭವ ಅಂದುಕೊಂಡು ನಿರ್ಲಿಪ್ತರಾಗುವುದು...

ಇಷ್ಟೇ... ಪರಿಸ್ಥಿತಿ, ಸಂದರ್ಭ, ಮನಸ್ಥಿತಿ ಪ್ರತಿಬಾರಿಯೂ ಸ್ವಯಂಕೃತ ಅಪರಾಧವೇ ಆಗಿರಬೇಕಾಗಿಲ್ಲ, ಯಾರೋ ಬರೆದಿಟ್ಟಂಥ ಸಿನಿಮೀಯ ಸ್ಕ್ರಿಪ್ಟ್ ಕೂಡಾ ಆಗಿರಬಹುದು. ಕೆಲವೊಮ್ಮೆ ಆಯ್ಕೆಗಳಿರುವುದಿಲ್ಲ, ಕೆಲವೊಮ್ಮೆ ಕಣ್ಣೇದುರೇ ಆಯ್ಕೆ ಸರಿದು ಹೋದರೂ ಗುರುತಿಸಲು ಆಗುವುದಿಲ್ಲ. ಬೊಗಸೆಯಲ್ಲಿ ಹಿಡಿಯಲು ಯತ್ನಿಸುವ ಸಮುದ್ರದ ಆಗಾಧ ನೀರು ಸೋರಿ ಹೋಗುವುದನ್ನು ನಿರ್ಲಿಪ್ತವಾಗಿ ವೀಕ್ಷಿಸುವ ಹಾಗೆ. ಕೆಲವೊಮ್ಮೆ ಇದು ನನಗೆ ಹೇಳಿಸಿದ್ದಲ್ಲ ಅಂತ ಗೊತ್ತಿದ್ದರೂ ಅದರಿಂದ ಕಳಚಲಾಗದೆ ಮುಂದುವರಿಯುವ ಹಾಗೆ. ಇಷ್ಟುದ್ದ ಲೇಖನವನ್ನು ಕೊನೆ ತನಕ  ಯಾರೂ ಓದುವುದಿಲ್ಲ ಅಂತ ಗೊತ್ತಿದ್ದರೂ ಮೈಲುದ್ದ ಬರೆದು ಎಲ್ಲರೂ ಓದಿದ್ದಾರೆ ಅಂತ ಬರಿದೇ ಭ್ರಮಿಸುವ ಹುಚ್ಚು ಮನಸ್ಸನ ಹಾಗೆ. ವಿಚಿತ್ರ!


-
ಕೃಷ್ಣಮೋಹನ ತಲೆಂಗಳ (22.08.2026)

No comments: