ಪ್ರಶಸ್ತಿ, ಸನ್ಮಾನ, ಹೊಗಳಿಕೆಯ ಗಡಿಗೆ ನಿಲುಕದವರು... ಸದ್ದಿಲ್ಲದೇ ಸೇತುವೆ ದಾಟಿಸುವ “ದೇವರಂಥ”ವರು!

 



ನಾವು ಹೋಗ್ತಾ ಇರುವ ವಾಹನದ ಟಯರ್ ಸಡನ್ ಪಂಕ್ಚರ್ ಆಗುತ್ತದೆ. ತಕ್ಷಣಕ್ಕೆ ಚಕ್ರ ಬದಲಿಸಬೇಕಾ, ಗಾಡಿ ಅಲ್ಲೇ ಬಿಟ್ಟು ಹೋಗಬೇಕ, ಯಾರಾದರೂ ಮೆಕ್ಯಾನಿಕ್ ನಂಬರ್ ಸಿಗಬಹುದಾ ಅಂತ ಅಯೋಮಯವಾಗಿ ನಿಂತಿರುತ್ತೇವೆ. ಎಲ್ರೂ ನನ್ನನ್ನೇ ನೋಡ್ತಾ ಇದ್ದಾರ ಎಂಬ ಮುಜುಗರ ಬೇರೆ. ಆಗ ಯಾರೋ ಕಳುಹಿಸದ ಹಾಗೆ, ಒಬ್ರು ಡ್ರೈವರೋ, ದಾರಿಹೋಕರೋ ಬಂದು ಮಾತಾಡಿಸ್ತಾರೆ, ಏನಾಯ್ತು ಕೇಳ್ತಾರೆ. ಅವರೇ ಮುಂದೆ ನಿಂತು ಜಾಕ್ ಹಾಕಿ, ಗಾಡಿ ಮೇಲೆತ್ತಿ ಚಕ್ರ ಬದಲಿಸಿ ಎಲ್ಲ ಸೆಟ್ ಮಾಡಿಟ್ಟು ಸಣ್ಣ ಮುಗುಳ್ನಕ್ಕು ಹೋಗ್ತಾರೆ. ನೀವೊಂದು ಥ್ಯಾಂಕ್ಸ್ ಹೇಳುವುದನ್ನೂ ಅವರು ನಿರೀಕ್ಷೆ ಮಾಡಿರುವುದಿಲ್ಲ. ಕೊನೆ ಪಕ್ಷ ನೀವು ಅವರ ನಂಬರ್ ಸಹ ಕೇಳಲಾಗದಷ್ಟು ಖಾಲಿ ಆಗಿರ್ತೀರಿ ಆ ಹೊತ್ತಿಗೆ...

ಇದೊಂದು ಹೇಳದೇ ಕೇಳದೆ ಸಿಕ್ಕಿದ ಸಮಯೋಚಿತ ನೆರವಿಗೆ ಉದಾಹರಣೆ. ಇಂತಹ ಪ್ರತಿಫಲ ಬಯಸದೇ, ಕನಿಷ್ಠ ಥ್ಯಾಂಕ್ಸ್ ಕೂಡಾ ನಿರೀಕ್ಷಿಸದೆ, ಅಲ್ಲೇ ಸೆಲ್ಫೀ ತೆಗೆದು ಸೋಶಿಯಲ್ ಮೀಡಿಯಾಕ್ಕೆ ಹಾಕದೆ, ಕೊನೆ ಪಕ್ಷ ತಮ್ಮ ಮನೆಯವರಿಗೂ ಹೇಳದೆ ಸದ್ದೇ ಇಲ್ಲದೆ ಕಷ್ಟದಲ್ಲಿರುವವರಿಗೆ ಮೌನವಾಗಿ ಬಂದು ಸಹಾಯ ನೀಡಿ, ಮತ್ತೆಂದೂ ಸಿಕ್ಕದೆ ಮಾಯವಾಗುವ “ದೇವರಂಥ” ಸುಮನಸರಿರುತ್ತಾರೆ.  ಯಾರಲ್ಲೂ ಹೇಳಿಕೊಳ್ಳಲಾಗದ ತೊಳಲಾಟಕ್ಕೆ ಸಣ್ಣದೊಂದು ಆತ್ಮೀಯಸಲಹೆ  ನೀಡಿ ಧೈರ್ಯ ತುಂಬಿ, ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ಕಾಪಾಡುವವರಿರ್ತಾರೆ. ನಾವು ಅವರನ್ನು ಕಂಡು ಬೆರಗಾಗಬೇಕೇ ವಿನಃ ಅವರಿಗೊಂದು ಪೇಟ ತೊಡಿಸಿ, ಮಾಲೆ ಹಾಕಿ ಸನ್ಮಾನ ಮಾಡಿ, ನಾಲ್ಕು ಒಣ ಹೊಗಳಿಕೆಯ ಗೌರವ ಸಲ್ಲಿಸುವುದೂ ಅವರ ಅಪೇಕ್ಷೆ ಆಗಿರುವುದಿಲ್ಲ. ಇಂತಹ ಮಂದಿಗಳೇ ದೇವರಿದ್ದಾನೆ ಎಂಬ ವಿಶ್ವಾಸವನ್ನು ನೊಂದವರ ಬಾಳಿನಲ್ಲಿ ಮೂಡಿಸುವುದು.

ಇದೊಂದೇ ಅಲ್ಲ

1)      ಆಸ್ಪತ್ರೆಯಲ್ಲಿ ಡಾಕ್ಟ್ರು ದಿಢೀರ್ ಇಂತಹ ಗ್ರೂಪಿನ ರಕ್ತ ಬೇಕು ಅಂತ ಹೇಳ್ತಾರೆ. ಮೊದಲೇ ಹುಶಾರಿಲ್ಲದೆ ಕಂಗಾಲಾಗಿರುವ ರೋಗಿಗಳ ಕಡೆಯರಿಗೆ ಕೈಕಾಲೇ ಅಲ್ಲಾಡುವುದಿಲ್ಲ. ಯಾರೋ ಸ್ನೇಹಿತರತ್ರ ಹೇಳ್ತಾರೆ. ಅವರು ತಕ್ಷಣ ಜಾಲತಾಣದಲ್ಲಿ ಸಂದೇಶ ಪ್ರಸಾರ ಮಾಡ್ತಾರೆ. ಕೂಡಲೇ ಯಾರೋ ಪರಿಚಯವೇ ಇಲ್ಲದ ರಾರ್ಯಾರೋ ಬಂದು, ಯಾವುದೇ ಲಾಭದ ಆಸೆ ಇಲ್ಲದೆ ಸದ್ದಿಲ್ಲದೆ ನಮ್ಮ ಹೆಸರಿನಲ್ಲಿ ರಕ್ತ ನೀಡಿ (ರಿಪ್ಲೇಸ್ಮೆಂಟ್) ಹೋಗ್ತಾರೆ. ರಕ್ತ ಕೊಟ್ಟವರ ಹೆಸರು ಸಮೇತ ತಿಳಿಯುವ ವ್ಯವಧಾನ ನಮಗೆ ಇರುವುದಿಲ್ಲ.

2)      ಹೊಟೇಲಿನಲ್ಲಿ ಊಟ ಮಾಡಿ ಆಗಿದೆ, ಅಥವಾ ಬಸ್ಸಿಗೆ ಹತ್ತಿ ಆಗಿದೆ, ದುಡ್ಡು ಕೊಡ್ಲಿಕಾಗುವಾಗ ಕಿಸೆಯಲ್ಲಿ ಚಿಲ್ಲರೆ ಇಲ್ಲ, ಅಥವಾ ಪರ್ಸ್ ತಂದೇ ಇಲ್ಲ. GPAY ಧೈರ್ಯದಲ್ಲಿ ಓಡಾಡುತ್ತಿದ್ದೇವೆ. ಆ ಹೊತ್ತಿಗೆ ನೆಟ್ವರ್ಕ್ ಹೋಗಿದೆ, ಅಥವಾ ಜಿಪೇ ಕೆಲಸ ಮಾಡ್ತಿಲ್ಲ. ಅಪರಿಚಿತ ಜಾಗ, ದುಡ್ಡು ಕೊಡ್ಲೇ ಬೇಕು. ಯಾರೋ ಪುಣ್ಯಾತ್ಮರು ಸಿಕ್ತಾರೆ, ಒಂದು ಹಣ ಕೊಡ್ತಾರೆ, ಅಥವಾ ಅವರೇ ನಿಮ್ಮ ಪರವಾಗಿ ದುಡ್ಡು ಟ್ರಾನ್ಸ್ಪರ್ ಮಾಡ್ತಾರೆ. ನೀವು ವಾಪಸ್ ಕೊಡ್ತೀರೋ ಅಂತ ಅವರು ಯೋಚಿಸಿ ಸಹಾಯ ಮಾಡಿರುವುದಲ್ಲ. ಆ ಹೊತ್ತಿಗೆ ನಿಮ್ಮ ಮರ್ಯಾದೆ ಕಾಪಾಡಿರ್ತಾರೆ. ನಿಮಗೆ ಹೇಗೆ ಥ್ಯಾಂಕ್ಸ್ ಹೇಳಬೇಕು ಅಂತವೇ ಗೊತ್ತಾಗಿರುವುದಿಲ್ಲ.

3)      ನಿಮ್ಮಲ್ಲೊಂದು ಪ್ರತಿಭೆ ಇದೆ. ಅದಕ್ಕೆ ವೇದಿಕೆ ಬೇಕು. ನಿಮಗೆ ಅವರಿವರಿಗೆ ಬಕೆಟ್ ಹಿಡಿದು ಮುಂದೆ ಹೋಗುವ ಅಭ್ಯಾಸ ಇಲ್ಲ. ಆದರೂ ನನ್ನ ಪ್ರತಿಭೆ ನಾಲ್ಕು ಮಂದಿಗೆ ತೋರಿಸಬೇಕು ಅಂತ ಆಸೆ. ಆದರೆ ದಾಕ್ಷಿಣ್ಯ ಜಾಸ್ತಿ. ಆಗ ಯಾರೋ ಗುರ್ತದವರು, ಸ್ನೇಹಿತರು, ಗುರುಗಳು ಸಿಗ್ತಾರೆ. ನೀನು ಚಂದ ಬರೆಯುತ್ತಿ, ಕುಣಿಯುತ್ತಿ, ಹಾಡುತ್ತಿ... ಹೀಗೇ ಉಳಿಯಬಾರದು ಅಂತ ಅವರಾಗಿ ಮುಂದೆ ನಿಂತು ನಿಮಗೊಂದು ವೇದಿಕೆ ಕಲ್ಪಿಸಿಕೊಡ್ತಾರೆ. ನೀವು ಬೆಳಕಿಗೆ ಬರ್ತೀರಿ. ನಂತರ ಸತತ ವೇದಿಕೆಗಳು ಸಿಗ್ತವೆ. ಆದರೆ ಶುರುವಿಗೇ ವೇದಿಕೆ ಕೊಟ್ಟವರ ಔದಾರ್ಯ ಸದಾ ನಿಮ್ಮೊಳಗೆ ಋಣವಾಗಿ ಕಾಡುತ್ತಲೇ ಇರುತ್ತದೆ.

4)      ಆಸ್ಪತ್ರೆಗೆ ಹೋಗಿದ್ದೀರಿ. ಲ್ಯಾಬಿಗೆ ಬ್ಲಡ್ ಸ್ಯಾಂಪಲ್ ಕೊಟ್ಟಿದ್ದೀರಿ. ರಿಸಲ್ಟ್ ಬರ್ಲಿಕೆ ಅರ್ಧ ಗಂಟೆ ಬೇಕು. ಅದರ ನಡುವೆ ತಲೆಯಲ್ಲ ನೂರಾರು ಯೋಚನೆಗಳು. ಬರೇ ನೆಗೆಟಿವ್ ಚಿಂತೆಗಳು... ಒಬ್ಬರೇ ನಿರ್ಜೀವ ವೆರಾಂಡದಲ್ಲಿ ಗಡಿಬಿಡಿಯ ಆಸ್ಪತ್ರೆಯ ಸಿಬ್ಬಂದಿ ಓಡಾಟ ನೋಡ್ತಾ ನಿರ್ಲಿಪ್ತರಾಗಿ ಕೂರಿರ್ತೀರಿ. ಯಾರೋ ಗುರ್ತ ಇಲ್ಲದೆ ಪಕ್ಕದವರು ಅವರಾಗಿಯೇ ಮಾತನಾಡಿಸ್ತಾರೆ. ನಿಮ್ಮ ಸಮಸ್ಯೆ ಕೇಳ್ತಾರೆ. “ಏನೂ ಆಗುವುದಿಲ್ಲ, ಬ್ಲಡ್ ಟೆಸ್ಟ್ ಎಂಬುದು ಒಂದು ಸಹಜ ಪರೀಕ್ಷೆ ಅಷ್ಟೇ. ಹೆದರ್ಲಿಕೇ ಏನೂ ಇಲ್ಲ” ಅಂತ ಹೇಳ್ತಾರೆ. ನಿಮಿಗೂ ಸ್ವಲ್ಪ ಧೈರ್ಯ ಬರ್ತದೆ. ಅದಾಗಿ ಸ್ವಲ್ಪ ಹೊತ್ತಿಗೆ ರಿಸಲ್ಟ್ ಬರ್ತದೆ, ಫಲಿತಾಂಶ ಗಂಭೀರ ಏನೂ ಇರುವುದಿಲ್ಲ. ಆ ನಡುವೆ ನಿಮ್ಮಲ್ಲೊಂದು ಧೈರ್ಯ ತುಂಬಿದ ಆ ಅಪರಿಚಿತ ಆಪ್ತ ಮನಸ್ಸಿಗೆ ಮೌನವಾಗಿಯೇ ಥ್ಯಾಂಕ್ಸ್ ಹೇಳ್ತೀರಿ... ಆ ಹೊತ್ತಿಗೆ ಅವರಲ್ಲಿಂದ ಜಾಗ ಖಾಲಿ ಮಾಡಿರಲಿಕ್ಕೂ ಸಾಕು.


ಇಂತಹ ಸಾಕಷ್ಟು ಸಂದರ್ಭಗಳನ್ನು ಉಲ್ಲೇಖಿಸಬಹುದು. ಎಲ್ಲರ ಬದುಕಿನಲ್ಲಿ ನಡೆಯುವಂಥದ್ದೇ. ನೊಂದಾಗ, ಕುಸಿದಾಗ, ಕಷ್ಟ ಅಂತ ದಿಕ್ಕು ತೋಚದೆ ಕುಳಿದಾಗ ದುಡ್ಡು ಕೊಡುವುದೇ ಸಹಾಯವಲ್ಲ. ಒಂದೇ ಒಂದು ಸಾಂತ್ವನದ ಮಾತು, ಧನಾತ್ಮಕವಾಗಿ ಮುಂದಿನ ದಾರಿ ತೋರಿಸುವ ಸಹನೆ, ಏನಾಗುವುದಿಲ್ಲ ಎಂಬ ಅನುಭವದ ಮಾರ್ಗದರ್ಶನ, ಮತ್ತು ಬದುಕು ಪೂರ್ತಿ ಕುಸಿಯಲು ಬಿಡದೆ ಎದ್ದು ನಿಲ್ಲುವರೆಗೆ ಜೀವ ಮತ್ತು ಆಸಕ್ತಿಯನ್ನು ಉಳಿಸುವಂತಹ ಮಾನಸಿಕ ದೃಢತೆ ಕೊಡುವ ಅನುಭೂತಿ ಉಂಟಲ್ಲ. ಅದಕ್ಕೆ ಬೆಲೆ ಕಟ್ಟಲಾಗದು.

 

ಅವರು ಪರಿಚಿತರೇ ಇರಬಹುದು, ಅಪರಿಚಿತರೇ ಇರಬಹುದು. ಥಟ್ಟನೆ ಪ್ರತ್ಯಕ್ಷರಾಗಿ ನೆರವು ನೀಡಿ ಮಾಯವಾಗುವವರು, ಸದಾ ನಿಮ್ಮ ಕಷ್ಟದಲ್ಲಿ ಜೊತೆಗೆ ನಿಂತು, ಏನಾಯ್ತು ಅಂತ ವಿಚಾರಿಸಿ, ಕುಗ್ಗದಂತೆ ಕಾಪಾಡುವವರು ಈ ಎರಡೂ ವಿಭಾಗದವರಿಗೆ ನಿಮ್ಮಿಂದ ಯಾವುದೇ ಪ್ರತಿಫಲದ ಅಪೇಕ್ಷೆ ಇರುವುದಿಲ್ಲ. ನೀವು ಖುಷಿಯಾಗಿರಬೇಕು ಎಂಬ ನಿರೀಕ್ಷೆ ಮತ್ತು ನಾನೊಬ್ಬರನ್ನು ಸಂಕಟದಿಂದ ಪಾರು ಮಾಡಿದೆ ಎಂಬ ನಿರ್ಲಿಪ್ತ ಸಮಾಧಾನ ಅಷ್ಟೇ ಬೇಕಾದ್ದು... ಸಹಾಯ ಮಾಡಿದವರು ಮತ್ತೆ ಸಿಗ್ತಾರೋ ಗೊತ್ತಿಲ್ಲ, ಸಿಕ್ಕಿದಾಗ ಗುರ್ತ ಸಿಗ್ತದೋ ಅದೂ ಗೊತ್ತಿಲ್ಲ.

 

ಪ್ರಚಾರಕ್ಕೋಸ್ಕರ ಏನೇನೋ ಬರೆಯುವವರು, ಡ್ಯಾನ್ಸ್ ಹೆಸರಿನಲ್ಲಿ ಸರ್ಕಸ್ ಮಾಡುವವರು, ತನ್ನ ವಯಸ್ಸು, ಘನತೆ ಮರೆತು ರೀಲ್ಸ್ ಮಾಡುವವರು, ಪರಿಣಾಮ ಲೆಕ್ಕಿಸದೆ ಖಾಸಗಿ ಬದುಕನ್ನು ಜಾಲತಾಣದ ಎದುರು ತೆರೆದಿಡುವವರು, ಪ್ರಚಾರ ಬೇಕೆಂಬ ಒಂದೇ ಕಾರಣಕ್ಕೆ ಅತ್ತೂ ಕರೆದು ಸನ್ಮಾನ ಮಾಡಿಸಿಕೊಳ್ಳುವವರು ಇವರೆಲ್ಲರ ನಡುವೆ... ಎಂಥದ್ದೂ ಬೇಡ ಅಂತ ಸಹಾಯ, ಸಾಂತ್ವನ ನೀಡುವುದನ್ನು ಬದುಕಿನ ಧರ್ಮ ಅಂತ ಭಾವಿಸಿ ಮುಂದೆ ಹೋಗುವವರಿದ್ದಾರಲ್ವ, ಅವರೇ ನಿಜವಾದ ವಂದ್ಯರು, ಹೀರೋಗಳು...

 

ಬಸ್ಸಿನಲ್ಲಿ ಸೀಟು ಕೊಟ್ಟವರು, ಭಾರದ ಚೀಲವನ್ನು ಅಷ್ಟು ದೂರ ಹೊರಲು ಸೇರಿದವರು, ಮಾರ್ಗ ಸಿಕ್ಕದೆ ಅಲೆದಾಡುತ್ತಿದ್ದಾಗ ಸರಿಯಾಗಿ ದಾರಿ ತೋರಿಸಿದವರು, ಡಿಗ್ರಿ ಮುಗಿದ ಮೇಲೆ ಎಂತ ಮಾಡಬೇಕು ಎಂದೇ ತೋಚದಿದ್ದಾಗ ಭವಿಷ್ಯದತ್ತ ಟಾರ್ಚ್ ಲೈಟ್ ಹಾಕಿ ತೋರಿಸಿಕೊಟ್ಟವರು, ಇವ ನಮ್ಮ ಹುಡುಗ, ಇವನಿಗೊಂದುಕೆಲಸ ಕೊಡಿ ಅಂತ ನಮ್ಮ ಮೇಲಿನ ನಂಬಿಕೆಯಿಂದ ಶಿಫಾರಸ್ ಮಾಡಿ ಕೆಲಸಕ್ಕೆ ಸೇರಲು ಸಹಾಯ ಮಾಡಿದವರು, ತಿಂಗಳ ಕೊನೆಗೆ ಕೈ ಖಾಲಿಯಾದಾಗ ಯಾವುದಕ್ಕೂ ಕೊರತೆ ಆಗದ ಹಾಗೆ ಕಾಪಾಡಿದವರು... ಎಲ್ರೂ ಪ್ರಶಸ್ತಿ, ಸನ್ಮಾನ, ಹೊಗಳಿಕೆಯ ಪರಿಧಿ ಮೀರಿ ನಮ್ಮನ್ನು ಮುಳುಗಂತೆ ಪೊರೆದವರು... ಇಂಥವರನ್ನು ನೋಡಿದಾಗ, ಭೇಟಿಯಾದಾಗಲೇ ಅನ್ನಿಸುವುದು ದೇವರು ಇಲ್ಲೇ ಇಲ್ಲೋ ಇದ್ದಾನೆ ಅಂತ...  ನಿಮ್ಮದೂ ಈ ಥರದ ಅನುಭವ ಇದ್ದರೆ ಹಂಚಿಕೊಳ್ಳಿ.

-ಕೃಷ್ಣಮೋಹನ ತಲೆಂಗಳ (01.09.2026)

No comments: