ತಂತ್ರಜ್ಞಾನಗಳಿಂದ ಐಶಾರಾಮ ಎಂಬ ಭ್ರಮೆ ಮತ್ತು ಸಂಕೀರ್ಣ ಸುತ್ತಾಟಗಳ ಅನಿವಾರ್ಯ ಕರ್ಮ...!
ತಂತ್ರಜ್ಞಾನದಿಂದ ಬದುಕು
ಸುಲಭವಾಗಿದೆ, ಜಗತ್ತೇ ಹಳ್ಳಿಯಾಗಿದೆ, ವ್ಯವಹಾರ ಸುಗಮವಾಗಿದೆ, ಬೆರಳ ತುದಿಯಲ್ಲಿ ಬ್ರಹ್ಮಾಂಡವೇ
ಇದೆ... ಅಂತೆಲ್ಲ ಹೇಳುತ್ತೇವೆ. ಅಂದುಕೊಳ್ಳುತ್ತೇವೆ. ಆದರೆ ತುಂಬ ಸಲ ಈ ತಂತ್ರಜ್ಞಾನವೇ
ಮೈವೆತ್ತ ಜಗತ್ತಿನಲ್ಲಿ ಬದುಕು ಸಂಕೀರ್ಣವಾಗಿದೆ ಅಂತಲೇ ನನಗಂತೂ ಅನ್ನಿಸುತ್ತದೆ. ಬದಲಾದ
ಭ್ರಮೆಯಲ್ಲಿ ಯಾವುದೋ ಅಸಹಜ ವ್ಯವಸ್ಥೆಗೆ ಒಗ್ಗಿಕೊಂಡ ಹಾಗೆ. ವೇಗವಾಗಿದೆ ಬದುಕು
ಅಂದುಕೊಳ್ಳುತ್ತೇವೆ. ಆದರೆ, ಕೆಲವೊಮ್ಮೆ ಅಲ್ಲೇ ಸುತ್ತುತ್ತಿರುತ್ತೇವೆ. ಪದೇ ಪದೇ ಕೊಡಬೇಕಾದ EKYC, ಥಂಬು, ಕಾನೇಶುಮಾರಿ, ಬದುಕಿದ್ದೇನೆ ಅಂತ ಕೊಡಬೇಕಾದ ಸರ್ಟಿಫಿಕೇಟು ಎಲ್ಲವೂ ಸಹ ಎಲ್ಲಿ
ಬದುಕು ಬದಲಾಗಿದೆ ಅಂತ ಯೋಚಿಸುವ ಹಾಗೆ ಮಾಡುತ್ತದೆ. ನಿಮಗೂ ಹಾಗೆ ಕಾಣುತ್ತದೆಯಾ ಗೊತ್ತಿಲ್ಲ...
ನಂಗೆ ಹೀಗನ್ನಿಸಲು ಕಾರಣಗಳಿವೆ.
1) ವ್ಯಕ್ತಿ ಸತ್ತಾಗ ಅಂತ್ಯಸಂಸ್ಕಾರ
ಮಾಡುವಾಗ ಆಧಾರ್ ಕಾರ್ಡ್ ಕೊಡಲಾಗುತ್ತದೆ. ನಂತರ ಡೆತ್ ಸರ್ಟಿಫಿಕೇಟ್ ಮಾಡುವಾಗಲೂ ಆಧಾರ್ ಕಾರ್ಡ್
ಕೊಡಲಾಗುತ್ತದೆ. ಆದರೂ ವ್ಯಕ್ತಿ ಸತ್ತಿದ್ದಾನೋ, ಬದುಕಿದ್ದಾನೋ ಅಂತ ಪರೀಕ್ಷೆ ಮಾಡಲು (ಅದೊಂದೇ
ಕಾರಣವಲ್ಲ, ಅದೂ ಒಂದು ಕಾರಣ ಹೌದು ತಾನೆ) ಪದೇ ಪದೇ ಈ ಕೆವೈಸಿ ಕೇಳಲಾಗುತ್ತದೆ. ಕಂಡ ಕಂಡಲ್ಲಿಗೆ
ಡೆತ್ ಸರ್ಟಿಫಿಕೇಟೇ ಕೊಟ್ಟು ಸತ್ತದ್ದನ್ನೂ, ಬದುಕಿದ್ದನ್ನೂ ಅವರವರೇ ದೃಢಪಡಿಸಬೇಕು. ಯಾವುದೂ
ತಂತ್ರಜ್ಞಾನದಿಂದ ಆಗುವುದಿಲ್ಲ. ಮ್ಯಾನುವಲ್ ಆಗಿ ಕಚೇರಿ ಕಚೇರಿ ಸುತ್ತಿಯೇ ಮಾಡಬೇಕು.
2) ನಿಮ್ಮ ಹಣ ನೀವು ಪಡೆಯಲು ಬ್ಯಾಂಕ್
ಕೌಂಟರಿಗೇ ಹೋಗಬೇಕಾಗಿಲ್ಲ ಅಂತ ಎಟಿಎಂ ತೆರೆದ್ರು, ಡೆಬಿಟ್, ಕ್ರೆಡಿಟ್ ಕಾರ್ಡ್ ಬಂತು,
ಡಿಮಾನಿಟೈಸೇಶನ್ ಬಳಿಕ ಯುಪಿಐ ಪಾವತಿ ಜನಪ್ರಿಯವಾಯಿತು. ಜನ ನಗದು ರಹಿತ ವ್ಯವಹಾರಕ್ಕೆ
ಒಗ್ಗಿಕೊಂಡರು. ನಂತರ ಎಟಿಎಂ ವ್ಯವಹಾರಕ್ಕೆ ಐದು ಟ್ರಾನ್ಸಾಕ್ಷನ್ ಮಿತಿ, ಯುಪಿಐ ಪಾವತಿಗೆ
ಶುಲ್ಕ... ಹೀಗೆಲ್ಲ ಶುಲ್ಕಗಳನ್ನು ಹಾಕತೊಡಗಿದರು. ಹಿಂದೆ ನಮ್ಮದೇ ದುಡ್ಡನ್ನು ಬ್ಯಾಂಕ್
ಕೌಂಟರಿನಲ್ಲಿ ಉಚಿತವಾಗಿ ವಿದ್ ಡ್ರಾ ಮಾಡುತ್ತಿದ್ದ ನಾವು, ಈಗ ನಾವೇ ಡೆಪಾಸಿಟ್ ಇಟ್ಟ
ದುಡ್ಡನ್ನು ವಿದ್ ಡ್ರಾ ಮಾಡುವಾಗ ಎಲ್ಲೆಲ್ಲ ಶುಲ್ಕಗಳು ಕಟ್ಟಾಗುತ್ತವೆ ಅಂತ ಯೋಚಿಸುವ ಹಾಗಾಗಿದೆ...
3) ಊರಿಂದೂರಿಗೆ ವೇಗವಾಗಿ ತಲುಪಲು ಚತುಷ್ಪಥ
ಮಾಡಿದ್ರು, ಷಟ್ಪಥ ಮಾಡಿದ್ರು, ಫ್ಲೈಓವರ್ ಮಾಡಿದ್ರು, ರೋಡ್ ಟ್ಯಾಕ್ಸ್, ಗಾಡಿ ಟ್ಯಾಕ್ಸ್
ಕಟ್ಟಿದ ನಂತರವೂ ಅಲ್ಲಲ್ಲಿ ಟೋಲ್ ಕಟ್ಟಿ ಅಲ್ಲೂ ಸುಂಕ ವಸೂಲಿ ಮಾಡಿದ್ರು. ಇಷ್ಟಾಗಿ ಹೈವೇಯಲ್ಲಿ
ಹೋಗುವಾಗ ಒಂದೂ ಊರಿನ ಗುರ್ತ ಸಿಗುವುದಿಲ್ಲ. ಸರ್ವಿಸ್ ರಸ್ತೆಗೆ ಸೇರುವ ಜಾಗ ದಿಢೀರ್
ತಿಳಿಯುವುದಿಲ್ಲ. ಡಿವೈಡರುಗಳು ಬಂದು ಒಂದೇ ಊರಿನ ಮಂದಿ ರಸ್ತೆಯ ಆಚೆಯ ಅಂಗಡಿಗೆ ಹೋಗಲು 3-4
ಕಿ.ಮೀ. ಸುತ್ತು ಬಂದು ಡಿವೈಡರ್ ದಾಟಿ ಆಚೆ ಹೋಗಬೇಕು.. ಎಲ್ಲದಕ್ಕೂ ಗೂಗಲ್ ಮ್ಯಾಪು ಬೇಕು.
ಮನುಷ್ಯರು, ಮರಗಳು ಕಾಡು, ಬಸ್ ಸ್ಟ್ಯಾಂಡು, ಶಾಲೆ ಯಾವುದೂ ಇಂತಹ ಹೈವೇಯಲ್ಲಿ ಹೋಗುವಾಗ
ಕಾಣುವುದಿಲ್ಲ. ಎಲ್ಲ ಊರು ಒಂದೇ ಥರ ಇರುತ್ತದೆ. ಉಪ್ಪಿನಂಗಡಿಗೂ, ಕಲ್ಲಡ್ಕಕ್ಕೂ ವ್ಯತ್ಯಾಸವೇ
ತಿಳಿಯುವುದಿಲ್ಲ. ಆದರೂ ರುಮ್ಮನೆ ಫ್ಲೈಓವರ್ ಮೇಲೆ ಹೋಗುವವರು ಪ್ರಪಂಚ ಬದಲಾಗಿದೆ ಅಂತಲೇ
ಭಾವಿಸುತ್ತಿರುತ್ತಾರೆ.
4) ಹಿಂದೆಲ್ಲ ದಿನಕ್ಕೊಮ್ಮೆ ಬೆಳಗ್ಗೆ
ಪೇಪರ್ ಓದಿದ್ರೆ ಸುದ್ದಿ ತಿಳಿಯುತ್ತಿತ್ತು, ದಿನಕ್ಕೆ ಮೂರು ಬಾರಿ ರೇಡಿಯೋ ವಾರ್ತೆ, ಪ್ರದೇಶ
ಸಮಾಚಾರ ಬರ್ತಾ ಇತ್ತು. ಅಷ್ಟು ಸುದ್ದಿ ಸಾಮಾನ್ಯ ವ್ಯಕ್ತಿಗೆ ಸಾಲುತ್ತಿತ್ತು. ಇವತ್ತು ಹಾಗಲ್ಲ.
ಪೆಟ್ರೋಲಿಯಂ ಸ್ಥಾವರದಲ್ಲಿ ಸ್ಫೋಟ ಆದ ತಕ್ಷಣ ವಾಟ್ಸಪ್ಪಿಗೆ ವಿಡೀಯೋ ಬರ್ತದೆ. ತಂತ್ರಜ್ಞಾನ
ಅಷ್ಟು ಮುಂದುವರಿದಿದೆ. ಬ್ರೇಕಿಂಗ್ ಸುದ್ದಿಗಲು ಸಿಗುತ್ತವೆ. ಆದರೂ, ಅಲ್ಲಿ ಏನಾಗಿದೆ ಅಂತ
ಸರಿಯಾದ ಮಾಹಿತಿ ಇರುವುದಿಲ್ಲ. ಟಿ.ವಿ.ಯಲ್ಲೊಂದು, ವೆಬ್ಸೈಟಿನಲ್ಲೊಂದು, ವಾಟ್ಸಪ್ಪಿನಲ್ಲಿ ಒಂದು
ಕಣ್ಣು ನೆಟ್ಟೇ ಇರಬೇಕಾಗಿರುತ್ತದೆ. ಅಷ್ಟಾಗಿ ಮರುದಿನ ಎದ್ದ ಕೂಡಲೇ ಪೇಪರ್ ಓದದಿದ್ದರೆ
(ಹಿಂದಿನವರಿಗೆ) ಸಮಾಧಾನ ಆಗುವುದಿಲ್ಲ. ಆದರೂ ಸುದ್ದಿ ಲೈವ್ ಆಗಿ ನಮಗೆ ಸಿಗುತ್ತದೆ ಅಂತ
ಬೀಗುತ್ತಲೇ ಇರುತ್ತೇವೆ. ಸತ್ಯ ಎಷ್ಟು ಸುಳ್ಳು ಎಷ್ಟು ಅಂತ ಲೆಕ್ಕವೇ ಹಾಕುವುದಿಲ್ಲ!
5) ಈಗ ಮೊಬೈಲ್ ಇದೆ. ಅನಿಯಮಿತ ಡೇಟಾ ಪ್ಲಾನುಗಳಿವೆ. ವೇಗದ ವೈಫೈ ಸಂಪರ್ಕಗಳಿವೆ.
ಆಗಿಂದಾಗ್ಗೆ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಯಾವುದೇ ISD ಕರೆ
ಮಾಡದೇ ಮಲ್ಟಿಮೀಡಿಯಾ ಮಾಹಿತಿ ಜೊತೆ ಸಂಪರ್ಕ ಮಾಡಬಹುದು. ಆದರೂ, ಜನರಿಗೆ ವೈಯಕ್ತಿಕವಾಗಿ ಕಳುಹಿಸಿದ
ಮೆಸೇಜ್ ಓಪನ್ ಮಾಡಿ ನೋಡಲೇ ಪುರುಸೊತ್ತು ಇರುವುದಿಲ್ಲ. ಕರೆ ಮಾಡಿದರೆ ಸ್ವೀಕರಿಸಲು, ನೆಂಟ್ರು
ಬಂದರೆ ಮಾತನಾಡಲು, ಸಂಜೆ ಕೂತು ಭಜನೆ ಮಾಡಲು, ಅಕ್ಕಪಕ್ಕದ ಮನೆಯವ ರ ಜೊತೆ ಪಟ್ಟಾಂಗ ಹೊಡೆಯಲು
ಟೈಂ... ಸಿಗುವುದಿಲ್ಲ!
6) ಸೈಬರ್ ಕ್ರೈಂ ಇಲಾಖೆ ಬಲಗೊಂಡಿದೆ. ಆಧುನಿಕ ತಂತ್ರಜ್ಞಾನಗಳು ಪೊಲೀಸ್
ಇಲಾಖೆಗೂ ಸಿಕ್ಕಿವೆ. ಆದರೂ ಒಟಿಪಿ ಕಳಿಸಿ, ಕೆವೈಸಿ ಕೇಳಿ ಆನ್ ಲೈನ್ ವಂಚನೆ ನಡೆಯುತ್ತಲೇ ಇದೆ.
ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಜನ ಲಕ್ಷಗಟ್ಟಲೇ ಕಳೆದುಕೊಳ್ಳುತ್ತಲೇ ಇದ್ದಾರೆ. ಆನ್ ಲೈನ್
ವಂಚನೆಯ ಪ್ರಮಾಣ ಸ್ವಲ್ಪವೂ ಕಡಿಮೆಯಾದ ಹಾಗಿಲ್ಲ. ಎಷ್ಟೋ ಪ್ರಕರಣಗಳಲ್ಲಿ ಅನಾಮಧೇಯ ತಪ್ಪಿತಸ್ಥರು
ಕೈಗೆ ಸಿಕ್ಕುವುದೂ ಇಲ್ಲ.
7) ಸಿಸಿ ಕೆಮರಾಗಳಲ್ಲೂ ಹೆಜ್ಜೆ ಹೆಜ್ಜೆಗೂ ಇವೆ. ಬಯೋಮೆಟ್ರಿಕ್
ದೃಢೀಕರಣಗಳು, ಮೊಬೈಲ್ ಟವರ್ ಲೊಕೇಶನ್ ಪತ್ತೆ ಸಾಧ್ಯತೆ, ಮೊಬೈಲ್ ಟ್ರಾಕಿಂಗ್.... ಎಂಥೆಂಥ
ತಂತ್ರಜ್ಞಾನಗಳು ಬಂದಿವೆ. ಆದರೂ ರಸ್ತೆ ಅಪಘಾತ, ಮನೆ ಕಳವು, ಬ್ಯಾಂಕ್ ದರೋಡೆ, ಅತ್ಯಾಚಾರ ಯಾವುದೇ
ಕ್ರೈಂಪ್ರಕರಣಗಳು ಕಡಿಮೆ ಆದ ಹಾಗಿಲ್ಲ... ಇದು ಋಣಾತ್ಮಕ ಗಮನಿಸುವಿಕೆ ಅಲ್ಲ. ಇಷ್ಟೆಲ್ಲ
ತಾಂತ್ರಿಕ ಸಾಧ್ಯತೆಗಳಿದ್ದರೂ ಚತುರ ಅಪರಾಧಿಗಳ ಅಪರಾಧ ಕೃತ್ಯಗಳು ಮುಂದುವರಿದೇ ಇದೆ.
ಯಾವುದರದ್ದೂ ಭಯ ಇಲ್ಲ.
8) ವೈದ್ಯಕೀಯ ರಂಗ ತುಂಬ ಬೆಳೆದಿದೆ. ಆಸ್ಪತ್ರೆಗಳು, ಮಲ್ಟಿ ಸ್ಪೆಷಾಲಿಟಿ
ಚಿಕಿತ್ಸಾ ಕೇಂದ್ರಗಳು, ಸರ್ಕಾರದ ನಾನಾ ಆರೋಗ್ಯ ಯೋಜನೆಗಳು ಪ್ರವರ್ಧಮಾನಕ್ಕೆ ಬಂದಿವೆ. ಆದರೂ...
ಕೆಲವು ಕಾಯಿಲೆಗಳು ಪತ್ತೆ ಹಚ್ಚುವಾಗಲೇ ತುಂಬ ತಡವಾಗಿರುತ್ತವೆ. ಪತ್ತೆ ಹಚ್ಚಿದ ಬಳಿಕ ಅದು
ಗುಣವಾಗುತ್ತದೆಯೇ ಎಂದು ಹೇಳಲು ವೈದ್ಯರಿಗೆ ಸಾಧ್ಯವಾಗುವುದಿಲ್ಲ. ಗುಣವಾದರೂ ಮತ್ತೆ ಮರುಕಳಿಸೀತೇ
ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಇರುವುದಿಲ್ಲ... ಆದಾಗ್ಯೂ ನಾವು ತಾಂತ್ರಿಕವಾಗಿ ತುಂಬ ಮುಂದೆ
ಹೋಗಿದ್ದೇವೆ ಅಂತ ಹೇಳುತ್ತಲೇ ಸುತ್ತಾಡುತ್ತೇವೆ.
9) ಉಚಿತ ಶಿಕ್ಷಣ ಇದೆ, ಆದರೆ ಸರ್ಕಾರಿ
ಶಾಲೆಗಳಿಗೆ ಮಕ್ಕಳ ಕೊರತೆ, ಯಾವ ಸರ್ಕಾರದ ಹತ್ರವೇ ಕೇಳಿ ಹಣಕಾಸು ಸಮಸ್ಯೆ ಇಲ್ಲ ಅಂತಾರೆ. ಆದರೆ
ಹಾಳಾದ ರಸ್ತೆ, ಸೋರುವ ಟ್ಯಾಂಕ್, ತುಂಬಿದ ಚರಂಡಿಗಳು ರಿಪೇರಿ ಆಗುವುದೇ ಇಲ್ಲ. ಸಕಾಲ ಬರಲಿ, ಮಾಹಿತಿ ಹಕ್ಕು ಕಾಯ್ದೆ ಬರಲಿ ಇಂದಿಗೂ
ಸರ್ಕಾರಿ ಕಚೇರಿಗಳಲ್ಲಿ ಕೆಲಸ ಬೇಗ ಆಗಬೇಕಿದ್ದರೆ ಮಧ್ಯವರ್ತಿಗಳ ಮೊರೆ ಹೋಗಲೇಬೇಕು, ಯಾವುದೇ
ವರ್ಗದ ಸಮಸ್ಯೆ ಸರ್ಕಾರಕ್ಕೆ ಗೊತ್ತಾಗಬೇಕಾದರೆ ಪ್ರತಿಭಟನೆ, ಉಪವಾಸ ಆಗಲೇಬೇಕು, ಇಷ್ಟೆಲ್ಲ
ಮಾಹಿತಿಯ ರಾಶಿ, ತಂತ್ರಜ್ಞಾನ ಇದ್ದರೂ ಸರ್ಕಾರಕ್ಕದು ತಾನಾಗಿ ತಿಳಿಯುವಿದಿಲ್ಲ. ಬೇರೆಲ್ಲ ಬಿಡಿ
ಅಂಗನವಾಡಿ ಸಿಬ್ಬಂದಿ ತಿಂಗಳುಗಟ್ಟಲೆ ಸಂಬಲ ಆಗಿಲ್ಲ ಅಂತ ಸರ್ಕಾರಕ್ಕೆ ತಿಳಿಯಬೇಕಾದರೆ ಸಿಬ್ಬಂದಿ
ಬೀದಿಗೆ ಇಳಿದು ಆಗಬೇಕು...
10) ಕಲಿಕೆಗೆ ಸಾಕಷ್ಟು ವೈಜ್ಞಾನಿಕ ಸವಲತ್ತು
ಬಂದಿದೆ, ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ, ಬೋಧಕರ ನೇಮಕಾತಿ ಆಗಿದೆ, ಸಾಕಷ್ಟು ಖಾಸಗಿ
ಶಿಕ್ಷಣ ಸಂಸ್ಥೆಗಳಿವೆ. ಆದರೆ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಪಾಸ್ ಮಾರ್ಕ್ ಮಿತಿ (35)ನ್ನು
ತಗ್ಗಿಸಲಾಗಿದೆ!!! ತರಗತಿಗಳಲ್ಲಿ ಫೇಲ್
ಮಾಡುವುದನ್ನು ನಿಷೇಧಿಸಲಾಗುತ್ತದೆ. ಮೂರು ಮೂರು ಸಪ್ಲಿಮೆಂಟರಿ ಪರೀಕ್ಷೆ ಮಾಡಿ ಪಾಸ್
ಮಾಡಲಾಗುತ್ತದೆ... ವಿಶ್ವವಿದ್ಯಾನಿಲಯಗಲ್ಲಿ ಸಾಲು ಸಾಲು ಕೋರ್ಸುಗಳನ್ನು ವಿದ್ಯಾರ್ಥಿಗಳ
ಕೊರತೆಯಿಂದ ಬಂದ್ ಮಾಡಲಾಗುತ್ತದೆ.... ಇವೆಲ್ಲದರ ಹೊರತೂ ದೇಶದ ಜನಸಂಖ್ಯೆ ಹೆಚ್ಚುತ್ತಲೇ ಇದೆ...!!!
ಎಲ್ಲೋ ಏನೋ ಅಸಹಜ ಅಂತ
ನಿಮಗೆ ಅನ್ಸುದಿಲ್ವ... ಒಂದಕ್ಕೊಂದು ತಾಳಮೇಳವೇ ಇಲ್ಲ. ಆಧಾರ್ ಕಾರ್ಡ್, ಬಯೋಮೆಟ್ರಿಕ್, ಸಿಸಿ
ಕೆಮರಾ, ಎಐ ಕೆಮರಾ, ಯುಪಿಐ, ಎನ್ಆರ್ಐ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನ್, ಮಲ್ಟಿಸ್ಪೆಶಾಲಿಟಿ
ಆಸ್ಪ್ಪತ್ರೆಗಳು, ಚತುಷ್ಪಥ ಹೆದ್ದಾರಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪೇಪರ್ ಲೆಸ್ ಆಫೀಸು,
5ಜಿ ಮೊಬೈಲು, ನೆಫ್ಟ್ ಹಣ ಪಾವತಿ, ಜಿಯೋಟ್ಯಾಗ್ ವ್ಯವಸ್ಥೆ, ಗೂಗಲ್ ಮ್ಯಾಪು... ಎಲ್ಲವೂ ಇದ್ದರೂ
ಸಾಕಷ್ಟು ಸಲ ಯಾಕೆ ಬದುಕು ಸಂಕೀರ್ಣವಾಗಿದೆ ಅಂತ ಅನ್ನಿಸುತ್ತದೆ... ಇದು 1970,80,90ರ
ದಶಕದಲ್ಲಿ ಹುಟ್ಟಿದವರ ಮನೋರೋಗಾವ ಹೇಗೆ? ಗೊತ್ತಿದ್ದರೆ ತಿಳಿಸಿ
-ಕೃಷ್ಣಮೋಹನ ತಲೆಂಗಳ
(01.10.2026)

No comments:
Post a Comment