ಬೆಟ್ಟದಾಚೆಯ ಅಜ್ಞಾತ ಕಣಿವೆ ನೋಡಲಾಗದಷ್ಟು ಉದಾಸೀನ ಎಂತಕೆ?
ನಾವು ಟೂರು ಹೋಗುವುದಾದರೆ
ಅದಕ್ಕೊಂದು ಪ್ಯಾಟರ್ನ್ (ಸಿದ್ದಮಾದರಿ) ಅಂತ ಇರ್ತದೆ. ಬಾಲ್ಯದಿಂದ ಶಾಲೆಯಿಂದ ಕರ್ಕೊಂಡು ಹೋಗ್ತಾ
ಇದ್ದದ್ದೂ ಹಾಗೆ. “ಬೇಲೂರು, ಹಳೆಬೀಡು,
ಶ್ರವಣಬೆಳಗೊಳ” ಪ್ಯಾಕೇಜ್ ಅಥವಾ “ಮೈಸೂರು, ಶ್ರೀರಂಗಪಟ್ಟಣ, ಕೊಡಗು” ಅಥವಾ ಈಗಿಗ “ತಣ್ಣೀರುಬಾವಿ, ಪಿಲಿಕುಳ,
ಮಾನಸ ವಾಟರ್ ಪಾರ್ಕ್...” ಇವತ್ತಿಗೂ ಹಾಗೆ
ಅಲ್ಪಾವಧಿ ಅಥವಾ ದೀರ್ಘಾವಧಿಯ ಪ್ರವಾಸಗಳು, ಔಟಿಂಗುಗಳೂ ಹೀಗೆಯೇ ಇರ್ತವೆ. ಯಾವ ಜಾಗ ಆಗ್ಬಹುದು,
ಯಾವ ಜಾಗ ಅಗ್ಬಹುದು ಅಂತ ತಿಂಗಾಳುಗಟ್ಟಲೆ ತಲೆ ಕೆಡಿಸಿ ಕೆಡಿಸಿ, ಟೂರು ತಜ್ಞರತ್ರ ಮಾತನಾಡಿ,
ರಜೆ ಹೊಂದಿಕೆ ಆಗ್ತದ ಅಂತ ನೋಡಿ, ಬರ್ತೇವೆ ಅಂತ ಹೇಳಿ ಕೈಕೊಟ್ಟವರ ಬಗ್ಗೆ ತಲೆ ಬಿಸಿ ಆಗಿ...
ಕೊನೆಗೆ ಇದೇ ರೀತಿ ಪೂರ್ವನಿರ್ಧರಿತ ಅದೇ ಸಿದ್ಧಮಾದರಿಯ ಜಾಗದ ಗುಚ್ಛಕ್ಕೇ ಮತ್ತೊಮ್ಮೆ ಹೋಗಿ
ಕೃತಾರ್ಥರಾಗುತ್ತೇವೆ!!!.
ಪರಿಸ್ಥಿತಿ ಇರಬಹುದು,
ಮನಸ್ಥಿತಿ ಇರಬಹುದು ಹೋದ ಜಾಗಕ್ಕೇ ಹೋಗುವುದು, ಹೋದ ರೀತಿಯಲ್ಲೇ ಹೋಗುವುದು, ಇತರರು
ನೋಡಿದ್ದನ್ನೇ ನಾವು ನೋಡುವುದು... ಅಷ್ಟಕ್ಕೇ “ಎಲ್ಲ ಕಂಡೆವು” ಅಂದುಕೊಂಡು ಬರುವುದು ರೂಢಿಯಾಗಿದೆ. ಯಾಕೆಂದರೆ
ನಮಗೆ ರಿಸ್ಕು ತಕ್ಕೊಳ್ಳುವಷ್ಟು ವ್ಯವಧಾನ, ಆಸಕ್ತಿ ಮತ್ತು ಮನವೊಲಿಸಿ ಸಲಹೆ ಕೊಡುವವರಿಲ್ಲ.
ಎರಡೇ ಉದಾಹರಣೆ ಮೂಲಕ ನನ್ನ
ಯೋಚನೆಯನ್ನು ಸ್ಪಷ್ಟಪಡಿಸುತ್ತೇನೆ...
1) ಜೋಗ ತಲಪಾತಕ್ಕೆ ಶತಮಾನದಿಂದ ಜನ
ಹೋಗ್ತಾನೇ ಇದ್ದಾರೆ. ಆದರೆ 2006ರಲ್ಲಿ ಮುಂಗಾರು ಮಳೆ ಬರುವ ತನಕ ಯಾಕೆ ಜನರಿಗೆ ಆ ಜಲಪಾತವನ್ನೂ
ಹಾಗೂ ವಿಶೇಷ ರೀತಿಯಲ್ಲಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಬಹುದು ಅಂತ ಗೊತ್ತಾಗ್ಲಿಲ್ಲ...?!
2) ಪ್ರವಾಸದ ಸೀಸನ್ನಿನಲ್ಲಿ ಊಟಿಗೆ ಪ್ರವಾಸ
ಹೋಗಿ ಬಂದವರೊಬ್ಬರು ನನ್ನತ್ರ ಹೇಳಿದ್ದು. ನನ್ನ ಅನುಭವವೂ ಅದೇ ಆದ ಕಾರಣ ಇಷ್ಟವಾಯಿತು. ಊಟಿಗೆ
ಅಂತ ಕುಟುಂಬ ಸಮೇತ ಹೋಗ್ತೇವೆ... ಅಲ್ಲಿ ಜಾಗ ನೋಡುವುದಕ್ಕಿಂತ ಹೆಚ್ಚಿನ ಸಮಸ್ಯೆ 1) ಟ್ರಾಫಿಕ್
ದಾಟಿ ಹೇಗೆ ರೂಂ ತಲುಪುವುದು ಅಂತ 2) ಹೊತ್ತಿಗೆ ಸರಿಯಾಗಿ ಬೇಕಾದ ಊಟ ಸಿಗ್ತದಾ ಅಂತ 3)
ನೋಡಬೇಕಾದ ಜಾಗದಲ್ಲಿ ಗಾಡಿ ಇಡಲು ಜಾಗ ಸಿಗ್ತದ ಅಂತ ಹುಡುಕುತ್ತಾ ಕಾಲ ಕಳೆಯುವುದು.... ಇದರಲ್ಲೇ
ಎರಡು ದಿನ ಕಳೆದ ಹೋಗುತ್ತದೆ. ಈ ನಡುವೆ ಊಟಿಯಂಥ ಜಾಗದಲ್ಲಿ ಎಂಟ್ರಿ ಫೀ ಕೊಡಬೇಕು, ಕುಡಿಯಲು
ನೀರಿಗೂ ದುಡ್ಡು ಕೊಡಬೇಕು, ಟಾಯ್ಲೆಟ್ಟಿಗೂ ದುಡ್ಡು ಕೊಡಬೇಕು, ಟ್ರಾಫಿಕ್ಕಿನಲ್ಲಿ ಪರದಾಡಿ
ಇಕ್ಕಟ್ಟು ಜಾಗದಲ್ಲಿ ಕಷ್ಟಪಟ್ಟು ಡ್ರೈವ್ ಮಾಡಿ ರೂಂ ತಲುಪಬೇಕು. ಈ ನಡುವೆ ಸಿಕ್ಕಸಿಕ್ಕ ಜಾಗ
ನೋಡಬೇಕು. ಜಾಗ ನೋಡುವುದಕ್ಕಿಂತಲೂ ಹೊಟ್ಟೆ ತುಂಬಿಸುವುದು ಮತ್ತು ಕಂಡ ಕಂಡದ್ದಕ್ಕೆಲ್ಲ ದುಡ್ಡು
ಕೊಟ್ಟು ನೆಮ್ಮದಿ ಕಳೆದುಕೊಳ್ಳುವುದೇ ಆಗಿ ಹೋಯ್ತು ಅಂತ...!
ಹೌದಲ್ವೇ... ಯಾರನ್ನೂ
ದೂರುವುದಲ್ಲ. ಪರಿಸ್ಥಿತಿ. ಮನೆ ಮಂದಿ ಎಲ್ಲ ಪ್ರವಾಸ ಹೋಗಬೇಕಾದರೆ ಬೇಸಿಗೆ ರಜೆಯೇ ಆಗಬೇಕು.
ಜಗತ್ತಿನ ಎಲ್ಲರೂ ಅದೇ ಹೊತ್ತಿಗೆ ಪ್ರವಾಸ ಬಂದರೆ ಮಾಡುವುದಾದರೂ ಏನನ್ನು?. ನಿಮ್ಮಲ್ಲೂ ತುಂಬ
ಮಂದಿಗೆ ಇದೇ ಅನುಭವ ಆಗಿರಬಹುದು. ಪ್ರವಾಸ ಎಂಬ ಹರಕೆ ಸಂದಾಯ,
ಅಷ್ಟೇ!
ಆ ಜನಜಂಗುಳಿಯಲ್ಲಿ, ಆ
ಟ್ರಾಫಿಕ್ಕಿನಲ್ಲಿ, ಅರೆಬರೆ ತಿನ್ನುವ ಆಹಾರದಲ್ಲಿ, ಹೊಟ್ಟೆ ಕೆಡಿಸಿಕೊಳ್ಳುವುದರಲ್ಲಿ,
ಪಾರ್ಕಿಂಗ್ ಮಾಡಲೇ ಹೆಣಗಾಡಿ ಜಾಗ ನೋಡುವ ಖುಷಿಯನ್ನೇ ಕಳೆದುಕೊಳ್ಳುವುದರಲ್ಲಿ ಪ್ರವಾಸವೇ
ಕಳೆದುಹೋಗುತ್ತದೆ. ಅರ್ಜೆಂಟಿನಲ್ಲಿ ರಚ್ಚೆಗೆ ಬಿದ್ದವರಂತೆ ತಕ್ಕೊಂಡ ಸೆಲ್ಫೀಗಳು, ರೀಲ್ಸುಗಳು
ಮಾತ್ರ ಶಾಶ್ವತ... ಅಲ್ಲಿನ ಅರೆಬರೆ ಖುಷಿ ಅಲ್ಲಲ್ಲೇ ಬಾಕಿ ಆಗಿ ಬಿಡುತ್ತವೆ...
ನಾವು ಯಾವತ್ತೂ
ಸಿದ್ಧಮಾದರಿಯ ಟೂರುಗಳಿಂದ ಆಚೆ ಹೋಗುವ ಬಗ್ಗೆ ಯೋಚಿಸುವುದೇ ಇಲ್ಲ.
1) ಆಫ್ ಸೀಸನ್ನಿನಲ್ಲೂ (ಮಳೆ, ಚಳಿ
ಆರಂಭದಲ್ಲೂ) ಊಟಿ, ಕೊಡೈಕನಲ್ಲಿಗೆ ಹೋಗಲು ಸಾಧ್ಯ, ಸ್ವಲ್ಪ ರಜೆ ಅಜಸ್ಟ್ ಮಾಡಬೇಕು ಅಷ್ಟೇ... ಆಗ
ದರವೂ ಕಮ್ಮಿ ಇರ್ತದೆ, ಜನರೂ ಕಮ್ಮಿ ಇರ್ತಾರೆ, ಹವೆಯೂ ಚೆನ್ನಾಗಿರ್ತದೆ... ಒತ್ತಡಗಳು ಕಡಿಮೆ
ಇರ್ತವೆ ಅಲ್ವ
2) ಮೈಸೂರಿಗೆ ಹೋದರೆ ಅರಮನೆ, ಚಾಮುಂಡಿ
ಬೆಟ್ಟ, ಝೂ ಮಾತ್ರ ಇರುವುದಲ್ಲ. ಬೇರೆಯೂ ಜಾಗಗಳಿರ್ತವೆ, ಚಂದದ ಪರಿಸರ, ಸುತ್ತಲಿನ ಹಳ್ಳಿಗಳಿರ್ತವೆ...
ಅವುಗಳ ಬಗ್ಗೆ ಗೂಗಲ್ಲೂ ಹೆಚ್ಚು ಹೇಳುವುದಿಲ್ಲ, ಹೋಗಿ ಅನುಭವ ಇರುವವರೂ ಕಮ್ಮಿ, ಜಾಗ ಹುಡುಕುವಷ್ಟು
ಸಹನೆ, ಸಮಯ ಎರಡೂ ಇರುವುದಿಲ್ಲ... ಅದೇ ಕಾರಣಕ್ಕೆ ಕಷ್ಟಪಟ್ಟು ಒಟ್ಟುಗೂಡಿಸಿದ ರಜೆಯಲ್ಲಿ
ಅರಮನೆ, ಬೆಟ್ಟ, ಝೂ ನೋಡಿ ಬರ್ತೇವೆ. ಮುಳ್ಳಯನಗಿರಿಗೆ ಹೋದರೆ ಅದೇ ಮುಳ್ಳಯನ ಗಿರಿ, ಬಾಬಾ ಬುಡನ್
ಗಿರಿ, ಚಾರ್ಮಾಡಿ.. ಅದೇ ದಾರಿ, ಅದೇ ಜಾಗ. ಮಂಗಳೂರು ಬಂದರೆ ತಣ್ಣೀರುಬಾವಿ, ಪಬ್ಬಾಸ್,
ಪಿಲಿಕುಳ... ಅದು ಬಿಟ್ಟರೆ ಮತ್ತೊಂದು ಜಾಗಕ್ಕಿಲ್ಲ. ಸಲಹೆ ಕೇಳುವವರು, ಸಲಹೆ ನೀಡುವವರ
ಕೆಮಿಸ್ಟ್ರಿ ಹೊಂದಿಕೆ ಆಗ್ತಾ ಇರುವವರೆಗೂ ಇದು ರಿಪೀಟ್ ಆಗುತ್ತಲೇ ಇರುತ್ತದೆ!
3) ಇದು ಬಿಡಿ, ಇಲ್ಲೇ ಲೋಕಲ್ ನರಹರಿ
ಬೆಟ್ಟ, ಕಾರಿಂಜ, ಸೋಮೇಶ್ವರ, ಬೇಕಲ ಕೋಟೆಗೆ ಹೋದರೂ ಅಷ್ಟೇ... ಅಲ್ಲಿ ಈ ಹಿಂದೆ ಹೋಗಿ ಫೋಟೋ
ತೆಗೆದವರು “ಚಂದದ ಫೋಟೋ ತೆಗೆದ ಜಾಗ”ಗಳಿರ್ತವೆ. ಅವನ್ನೇ ಹುಡುಕಿ, ಅವರಂತೆಯೇ
ನಿಂತು, ಅವರ ಹಾಗೆಯೇ ಎರಡು ಬೆರಳು ತೋರಿಸಿ ಸೆಲ್ಫೀ ತೆಗೆಯುತ್ತೇವೆ. ಅವರ ಹಾಗೆಯೇ ಬಂದರೆ ಅದೇ
ಸಾರ್ಥಕತೆ ಅಂದುಕೊಳ್ಳುತ್ತೇವೆ. ಅದೇ ಕಾರಿಂಜದಲ್ಲಿ ಇರಬಹುದಾದ ಒಂದು ಚಂದದ ಮರ, ಯಾರೂ ನೋಡದಿರುವ
ಬಂಡೆ, ಯಾವುದೋ ಒಂದು ಅಪರೂಪದ ಕಾಡು ಹೂವು, ಬೇಕಲ ಕೊಟೆಯ ಫಿರಂಗಿ ರಂಧ್ರದ ಮೂಲಕ ಸೆರೆ
ಹಿಡಿಯಬಹುದಾದ ಫೋಟೋದ ಒಂದು ಚಂದದ ಫ್ರೇಮ್ ಒಂದು “ಗಡಿಬಿಡಿಯ ಟ್ರಿಪ್ಪಿನ” ಪ್ರಹಸನದಲ್ಲಿ ಕಾಣುವುದೇ ಇಲ್ಲ. ಕಂಡರೂ
ವಿಮರ್ಶಿಸುವಷ್ಟು ಪುರುಸೊತ್ತು ಇರುವುದೂ ಇಲ್ಲ. ನಿಜ ತಾನೆ?
4) ಅದನ್ನೂ ಪಕ್ಕಕ್ಕಿಡಿ, ಪ್ರವಾಸಿ ತಾಣ
ಬೇಡ. ನಮ್ಮದೇ ಊರು, ನಮ್ಮದೇ ಬೀದಿ, ನಮ್ಮದೆ ಮನೆಯ ಕಂಪೌಂಡಿನ ಆಚೀಚೆ ನೋಡಬಹುದಾದ ಚಂದದ ವ್ಯೂ ಪಾಯಿಂಟು,
ಸಣ್ಣಬೆಟ್ಟ, ಪುಟ್ಟ ತೊರೆ, ಚೆಂದದ ಹಳೇ ಮರ, ಅಪರೂಪದ ಬೇಲಿಯಲ್ಲೇ ಅರಳುವ ಹೂವು ಇರಬಹುದು. ದಿನಾ
ಅರ್ಜೆಂಟಿಗೆ ಗಾಡಿ ಏರಿ ಸೈಡ್ ಕೊಡುವುದರ ಬಗ್ಗೆ ತಲೆ ಕೆಡಿಸುತ್ತಾ ರಸ್ತೆಯ ಅಂಚುಗಳನ್ನು ನೋಡಲು
ಮರೆಯುವ ನಮಗೆ ಇವೆಲ್ಲ ಕಾಣಿಸುವುದೇ ಇಲ್ಲ. ದಿನ, ವಾರ, ತಿಂಗಳುಗಟ್ಟಲೆ ನಾವು ನಮ್ಮದೇ ಬೀದಿಯ,
ಊರಿನ, ಪಕ್ಕದ ಗ್ರಾಮದ ಸೌಂದರ್ಯವನ್ನು ನೋಡಲು ನಿರಂತರ ಮರೆಯುತ್ತಲೇ ಇರುತ್ತೇವೆ. ನೋಡಲು ದಿನವೇ
ಸಿಗುವುದಿಲ್ಲ. ಒಪ್ತೀರ?
ಪ್ರವಾಸ ಅಂತಲ್ಲ. ಬದುಕು
ಹಾಗೂ ಬದುಕಿನ ಸುತ್ತಲು ಹೆಣೆದುಕೊಂಡಿರುವ ಸಂದರ್ಭಗಳು, ಸನ್ನಿವೇಶಗಳೆಲ್ಲ ಯಾರೋ
ನಿಗದಿಪಡಿಸಿದಂತೆ ನಡೆಯುತ್ತವೆ ವಿನಃ, ಅದರಾಚೆಗೆ ಯೋಚಿಸಲು ಸಾಧ್ಯವಿದ್ದರೂ ನಾವು ಯೋಚಿಸುವುದೂ
ಇಲ್ಲ. ಆ ಬಗ್ಗೆ ಪ್ರಯೋಗ ನಡೆಸುವ ಪ್ರಯತ್ನವನ್ನೂ ಮಾಡುವುದಿಲ್ಲ. ಉದಾಹರಣೆಗೆ-ದೊಡ್ಡ
ಸಮಾರಂಭಗಳಿಗೆ ಟೊಮೆಟೊ ಸಾರನ್ನೇ ಯಾಕೆ ಮಾಡಬೇಕು, ಬೇರೆ ತರಕಾರಿ ಅಥವಾ ಬೇಳೆ ಸಾರು ಮಾಡಬಾರದು
ಅಂತ ಶಾಸ್ತ್ರ ಏನಾದರೂ ಉಂಟ?, ಉದ್ದಿನ ಹಪ್ಪಳವೇ ಯಾಕೆ,
ಡಿಫರೆಂಟಿರಲಿ ಅಂತ ಹಲಸಿನ ಹಪ್ಪಳ ಯಾಕೆ ಮಾಡುವುದಿಲ್ಲ?, ಆತ್ಮೀಯರಿಗೆ ಜನ್ಮದಿನದ ಶುಭಾಶಯ ಕೋರುವಾಗ “ನಾಲ್ಕು ಜನರ ಗ್ರೂಪ್ ಫೋಟೋ ಹಾಕಿ, ಆ ದಿನದ ಬರ್ತ್ ಡೇ
ಆಚರಿಸುವವರ ತಲೆಗೆ ಕಿರಿಟದಂಥ ಇಮೋಜಿ ಸಿಕ್ಕಿಸಿಯೇ ಯಾಕೆ ವಿಶ್ ಮಾಡಬೇಕು?” ಸ್ಟೇಟಸ್ಸಿನಲ್ಲಿ. ಅದಕ್ಕಿಂತ ಚೆನ್ನಾಗಿ ವಿಶ್
ಮಾಡ್ಲಿಕೆ ನಮಗೇನೂ ಐಡಿಯಾಗಳು ಸತ್ತು ಹೋಗಿವೆಯಾ?, ಆನಿವರ್ಸರಿಗೆ, ಹುಟ್ಟಿದ ದಿನಕ್ಕೆ ಅವೇ ರೆಡಿಮೇಡ್
ಸಾಲುಗಳು, ಇಂಗ್ಲಿಷ್ ಕ್ವೋಟ್ಸ್, ಯಾರೋ ಬರೆದಿಟ್ಟ ನಲ್ಮೆಯ ನುಡಿಗಳು ಬಿಟ್ರೆ, ಅದಕ್ಕಿಂತ
ಚೆನ್ನಾಗಿ, ವಿಭಿನ್ನವಾಗಿ ಹೇಗೆ ಪ್ರಸ್ತುತಪಡಿಸಬಹುದು ಅಂತ ನಾವು ಯೋಚಿಸುವುದಕ್ಕೇ ಹೋಗುವುದಿಲ್ಲ!.
ನಾವು ಯಾಂತ್ರಿಕರು, ಅಲ್ಪತೃಪ್ತರು, ಹೆಚ್ಚು ರಿಸ್ಕ್
ತಕೊಳ್ಲಿಕೆ ಹಿಂಜರಿಯುವವರು, ತುಂಬ ಪ್ರತ್ಯೇಕವಾಗಿ ಬದುಕ್ಲಿಗೆ ಸಾಕಷ್ಟು ಯೋಚಿಸುವವರು, ಸೆಂಟರ್
ಆಪ್ ಅಟ್ರಾಕ್ಷನ್ ಆಗದೇ ದಿನದೂಡುವ ಸಾಧ್ಯತೆಗಳನ್ನು ಅಳವಡಿಸುವ ಬಗ್ಗೆ ಪರದಾಡುವವರು. ಇದು
ನನ್ನನ್ನೂ ಸೇರಿ ಹಲವರಿಗೆ ಅನ್ವಯಿಸುತ್ತದೆ. ಕೆಲವೇ ಕೆಲವು ಮಂದಿ ಈ ಸಿದ್ಧಮಾದರಿ ಬ್ರೇಕ್ ಮಾಡಿ
ತಮ್ಮದೇ ಲೋಕದಲ್ಲಿ ವಿಹರಿಸಿ, ಹೊಸತರ ಹುಡುಕಾಟದ ತುಡಿತದಲ್ಲಿ ಪ್ರತ್ಯೇಕರಾದರು. ಮತ್ತೊಂದು
ಕಾಲಘಟ್ಟದಲ್ಲಿ ಪ್ರಸಿದ್ಧರೂ ಆದರು. ಅವರೇ ಗ್ರಹಾಂಬೆಲ್, ಆರ್ಯಭಟ, ಅಬ್ದುಲ್ ಕಲಾಂ, ಮಾರ್ಕೋನಿ,
ಜುಕರ್ ಬರ್ಗ್ ಎಂದೆಲ್ಲ ನಮಗೆ ಆದರ್ಶವಾದರು. ಅವರೇನಾದರೂ ಹತ್ತರಲ್ಲಿ ಹನ್ನೊಂದರಂತೆ ಯೋಚಿಸುತ್ತಾ
ಕುಳಿತಿದ್ದರೆ ನಮಗೆ ಇಷ್ಟೊಂದು ಸಂಶೋಧನೆಗಳ ಫಲ ಸಿಕುತ್ತಲೇ ಇರಲಿಲ್ಲ ಅಲ್ವ?
ಫೇಸ್ಬುಕ್ಕಿನಲ್ಲೂ ಅಷ್ಟೇ ಪಚ್ಚು, ಧೀರಜ್ ಪೊಯ್ಯೆಕಂಡ,
ಮಹೇಶ್ ಪುಚ್ಚಪ್ಪಾಡಿ ಥರ ತುಂಬ ಮಂದಿ ವಿಭಿನ್ನವಾಗಿ, ಸಹಜವಾಗಿ, ಸರಳನಾಗಿ, ಜನೋಪಯೋಗಿಯಾಗಿ
ಬರೆಯುವವರಿದ್ದಾರೆ. ಅವರಿಗೆಲ್ಲ ಲಕ್ಷಗಟ್ಟಲೆವ್ಯೂಸ್ ಬರುವುದಿಲ್ಲ, ಅವರೆಂತ ಸೆಲೆಬ್ರಿಟಿಗಳಲ್ಲ
ಎಂಬುದು ಬೇರೆ ವಿಷಯ. ಆದರೆ. ಅವರ ಪ್ರಾಮಾಣಿಕ ಪ್ರಯತ್ನಗಳಿಗೆ ನಾವೆಷ್ಟು ಸಪೋರ್ಟ್
ಮಾಡುತ್ತಿದ್ದೇವೆ ಎಂಬುದನ್ನು ಯೋಚಿಸಬೇಕಾದ ಅಗತ್ಯ ಇದೆ. ಭಾಷಣ, ಬೋಧನೆ, ಚಿಂತನೆಯ ಪ್ರಸಾರ ಬೇರೆ.
ಚಿಂತನೆಯ ಹಾಗೆಯೇ ಬದುಕುವುದು ಬೇರೆ ಎಂಬುದು ನಮಗೆ ಅರ್ಥವೇ ಆಗದಿರುವುದು ದುರಂತ.
ಪ್ರವಾಸ, ಸಂಶೋಧನೆ,
ಚಿಂತನೆ, ರಾಷ್ಟ್ರಭಕ್ತಿಯ ವಿಚಾರ ಬಿಡಿ. ಒಂದು ಚಂದದ ಸ್ಥಳಕ್ಕೆ ಹೋದಾಗ ಡಿಫರೆಂಟಾಗಿ ಫೋಟೋ
ತೆಗೆಯಬೇಕು ಅಂತ ಸಹ ನಮಗೆ ಅನ್ನಿಸುವುದೇ ಇಲ್ಲ. ದೇವಸ್ಥಾನಕ್ಕೆ ಹೋದರೆ ಅಂಗೈಯಲ್ಲಿ ಪ್ರಸಾದ
ಹಿಡಿದು ಗೋಪುರದ ಎದುರು ಕೈಚಾಚಿ ಫೋಟೋ ತೆಗೆಯುವುದು, ಬೀಚಿಗೆ ಹೋದರೆ ಸೂರ್ಯನನ್ನು ಅಂಗೈಲಿ
ಹಿಡಿದ ಹಾಗೆ ಅದೇ ಸಿದ್ಧಮಾದರಿ ಫೋಟೋ ತೆಗೆಯುವುದು, ಬರ್ತ್ ಡೇ, ಮದುವೆ ಎಂಥದ್ದೇ ಇರಲಿ ಹತ್ತಾರು
ಮಂದಿ ಮಾಡಿದ್ದನ್ನೇ ಅನುಸರಿಸುವುದು ಬಿಟ್ಟರೆ, ಬೇರೆ ಥರ ಫೋಟೋ ಕ್ಲಿಕ್ಕಿಸಲುಹೊರಟರೆ ನಾನೆಲ್ಲಿ
ಪ್ರತ್ಯೇಕ ಆಗ್ತೇನೋ ಎಂಬ ವಿಚಿತ್ರ ಭಯ.
ಇದು ಬಿಡಿ...
ಪ್ರಚಾರಕ್ಕಾಗಿ ಕವಿಗಳಾಗುವವರು, ವ್ಯೂಸ್ ಬರ್ತದೆ, ಕಮೆಂಟು ಬರ್ತದೆ ಅಂತ ವಿಕಾರವಾಗಿ ಹಾಡುವವರು,
ಕಾಲಿಗೆ ದೆವ್ವ ಬಂದ ಹಾಗೆ ಕುಣಿಯುವವರು, ತಮ್ಮನ್ನೇ ತಾವು ಹೊಗಳಿ ಮಾಡುವ ಬಯೇಡೇಟಾ,
ಹೊಗಳುಭಟರಿಂದ ಹೊಗಳಿಸಿ ಹಾಕಿಸುವ ಪೋಸ್ಟುಗಳು, ಒಣಭಾಷಣ, ನಕಲಿ ಪ್ರಶಸ್ತಿಗಳು, ಸನ್ಮಾನ
ಪತ್ರಗಳು, ರೀಚ್ ಆಗಬೇಕು ಎಂಬ ಒಂದೇ ಕಾರಣಕ್ಕೆ ಮಾಡುವ ಸೋಶಿಯಲ್ ಮೀಡಿಯಾ ವೀಡಿಯೋಗಳು...
ಇವೆಲ್ಲದರ ಹಿನ್ನೆಲೆ ನಮಗೆ ಸುಲಭವಾಗಿ ಅರ್ಥವೇ ಆಗುವುದಿಲ್ಲ. ಕಣ್ಣು, ಬಾಯಿ ಬಿಟ್ಟು ನೋಡುತ್ತಲೇ
ಇರುತ್ತೇವೆ... ಅರಿವಿಲ್ಲದಂತೆಯೇ ಲೈಕ್ ಕೊಡ್ತೇವೆ, ಶೇರ್ ಮಾಡ್ತೇವೆ. ಹಿಪ್ನಟಿಸಂಗೆ ಒಳಗಾದಂತೆ ಅರೆ
ಹುಚ್ಚರ ಸೋಶಿಯಲ್ ಮೀಡಿಯೋ ಪೋಸ್ಟುಗಳ ಪ್ರಮೋಶನ್ ಎಂಬ ಯಜ್ಞಕ್ಕೆ ನಾವು ಆಹುತಿಯಾಗುತ್ತಲೇ ಇರುತ್ತೇವೆ.
ಹಿಂಸೆಯನ್ನು ಸೋಶಿಯಲ್ ಮೀಡಿಯಾ ವೈಭವೀಕರಿಸುತ್ತದೆ ಅಂತ “ತಾಳು ಮೇಲಾರಕ್ಕೆ ಕೊರೆಯಲು” ಹೋದಲ್ಲಿ ನಾಲ್ಕಾರು ಮಂದಿ ಅಮಾಯಕರ ಎದುರು ಭಾಷಣ ಮಾಡುತ್ತೇವೆ. ಬಿ.ಸಿ.ರೋಡ್ ಬಸ್ ಸ್ಟ್ಯಾಂಡಿನಲ್ಲಿ ಲಾವಣ್ಯ ಗೌಡ ಎಂಬ ಹೆಣ್ಣು ಮಗಳನ್ನು ಕೊಚ್ಚಿ ಕೊಚ್ಚಿ ಕೊಂದ ವೀಡಿಯೋವನ್ನು ಯಾರೋ ಯೂಟ್ಯೂಬರ್ ಖಂಡಿಸುವ ನೆಪದಲ್ಲಿ ರಿಪೀಟ್ ರಿಪೀಟ್ ಮಾಡಿ ಪ್ರಸಾರ ಮಾಡುತ್ತಾ ಶ್ರದ್ಧಾಂಜಲಿ ಸಂದೇಶದ ಥರ ಮಾತನಾಡುತ್ತಿದ್ದರೆ ಭಾವುಕರಾಗಿ ವಿಡಿಯೋ ನೋಡಿ ಆತನ ವ್ಯೂಸ್ ಹೆಚ್ಚಿಸುತ್ತೇವೆ. ಆತ ವ್ಯೂಸ್ ಗಿಟ್ಟಿಸಲೇ ಆ ಹಿಂಸೆಯ ವಿಡಿಯೋ ತುಣುಕು ಬಳಸುತ್ತಿದ್ದಾನೆ ಅಂತ ನಮಗೆ ಅರ್ಥವೇ ಆಗುವುದಿಲ್ಲ. ಅಸಂಬದ್ಧ ವ್ಲಾಗ್ ಗಳು, ರೀಲ್ಸುಗಳು, ಕವನಗಳು, ಡಬ್ಬಾ ವಿಮರ್ಶೆಗಳು, ವಾದ ವಿವಾದಗಳಿಗೆ ಪುಕ್ಕಟೆ ಪ್ರೇಕ್ಷಕರಾಗಿ, ವ್ಯೂಸ್ ಆಗಿ, ಶೇರ್ ಮಾಡುವ ಯಂತ್ರಗಳಾಗಿ ಅಸಂಬದ್ಧ ಹಂಚುವ ಕಾಯಕದಲ್ಲಿ ನಿರತರಾಗುತ್ತಲೇ ಇರ್ತೇವೆ, ನಮಗೆ ಅರಿವಿಲ್ಲದ ಹಾಗೆ!
ತಿರುವಿನಾಚೆಗೆ ಕಾಣದ ಜಾಗ
ತುಂಬ ಇರ್ತವೆ. ಪ್ರಸಿದ್ಧ ಬೆಟ್ಟ ಏರಲು ಮಾಡಿರುವ ಮೆಟ್ಟಿಲಿನ ಕೆಳಗೆ ಚಂದದ ಒಂದು ಕಣಿವೆ
ಇರುತ್ತದೆ, ಪ್ರಸಿದ್ಧ ಬೀಚಿನ ಬಂಡೆಯ ಮರೆಯೊಂದರಲ್ಲಿ ಚೆಂದದ ಶಂಖಗಳಿರುವ ಕುಳಿ ಅವಿತಿರುತ್ತದೆ,
ಪ್ರಸಿದ್ಧ ದೇವಸ್ಥಾನದ ಬಾಗಿಲಿನ ಕೆಳಗಡೆ ಸುಂದರ ಕಲಾಕೃತಿ ಕೆತ್ತನೆ ಇರುತ್ತದೆ, ಊಟಿಗೆ ಹೋಗುವ
ದಾರಿಯಲ್ಲೇ ಹೆಸರೇ ಗೊತ್ತಿಲ್ಲದ ಬೆಟ್ಟದ ಪಕ್ಕ ಪುಟ್ಟದೊಂದು ಅನಾಮಧೇಯ ಝರಿ ಇರುತ್ತದೆ,
ಮುಳ್ಳಯನಗಿರಿ ಪಾರ್ಕಿಂಗ್ ಏರಿಯಾದ ಪಕ್ಕ ನಡೆದುಕೊಂಡು ಹೋದರೆ ಶತಮಾನಗಳ ಹಳೆಯ ಮರವೊಂದು ಯಾವುದೇ
ಪ್ರಚಾರ ಹಂಗಿಲ್ಲದೆ ಬಿಮ್ಮನೆ ನಿಂತಿರುತ್ತದೆ. ಅವನ್ನೆಲ್ಲ ಹುಡುಕಲು, ನೋಡಲು, ಫೋಟೋ ತೆಗೆಯಲು,
ಸುಮ್ಮನೆ ನೋಡಿ ಖುಷಿ ಪಡಲು ನಮ್ಮ ಸಹನೆಯ ತೀವ್ರತೆ ಹೆಚ್ಚಬೇಕು, ಅಲ್ಪತೃಪ್ತಿಯಿಂದ ಆಚೆ ಸರಿದು
ಸ್ವಲ್ಪ ಮಹತ್ವಾಕಾಂಕ್ಷೆ ಹೆಚ್ಚಿಸಿಕೊಳ್ಳಬೇಕು, ಯಾರೂ ಕಾಣದ್ದನ್ನು ಕಾಣುವ, ಯಾರೂ ಮಾಡದ್ದನ್ನು
ಮಾಡುವ (ಸಭ್ಯವಾಗಿ) ತುಡಿತ ಇರಬೇಕು. ಇಲ್ಲವಾದರೆ ನಮಗೂ ನಮಗಿಂತ ಮೊದಲೂ ಅಲ್ಲಿ ಹೋದವರಿಗೆ ಯಾವ
ವ್ಯತ್ಯಾಸವೂ ಇರುವುದಿಲ್ಲ. ಏನಂತೀರಿ?!
-ಕೃಷ್ಣಮೋಹನ ತಲೆಂಗಳ (09.08.2026)

No comments:
Post a Comment