ಲೈವ್ ಕೊಟ್ರೆ, ಮಳೆ ಬಂದ್ರೆ ಆಟ ನೋಡಲು ಬರುವುದಿಲ್ಲ ಎಂಬ ಮಾತು ಸುಳ್ಳಾಯ್ತು. ಭ್ರಾಮರಿ ಯಕ್ಷವೈಭವಕ್ಕೆ ಪುರಭವನ ಹೌಸ್ ಫುಲ್!

 



ಸಾಮಾನ್ಯ ಒಂದು ಕಲ್ಪನೆ ಇರ್ತದೆ. ಯಕ್ಷಗಾನ ಬಯಲಾಟ ಯೂಟ್ಯೂಬ್ ಅಥವಾ ಕೇಬಲ್ ವಾಹಿನಿಯಲ್ಲಿ ಲೈವ್ ಕೊಟ್ರೆ ಜನ ಆಟಕ್ಕೆ ಬರುವುದಿಲ್ಲ ಅಂತ. ಮತ್ತೊಂದು ಧಾರಾಕಾರ ಮಳೆ ಬಂದರೆ ಜನ ಮನೆ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಅಂತ. ಈ ಎರಡೂ ಆರೋಪಗಳನ್ನು ನಿನ್ನೆ (ಆ.1, ಶನಿವಾರ) ಸುಳ್ಳು ಮಾಡಿದ್ದು. ಭ್ರಾಮರಿ ಯಕ್ಷವೈಭವ 2026. ಭ್ರಾಮರಿ ಯಕ್ಷಮಿತ್ರರು ವಾಟ್ಸಪ್ ಬಳಗದವರೇ ಸಂಯೋಜಿಸುತ್ತಿರುವ 9ನೇ ವರ್ಷದ ಕಾರ್ಯಕ್ರಮ.

ಸಂಜೆ 7 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ, 9 ಗಂಟೆಗೆ ಸರಿಯಾಗಿ ಬಯಲಾಟ ಪ್ರದರ್ಶನ. ಮೂರು ಪ್ರಸಂಗ. ಮಂಗಳೂರು ಪುರಭವನದಲ್ಲಿ ಕಾರ್ಯಕ್ರಮ. ಶನಿವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆ. ಸಂಜೆ ಮತ್ತೂ ಜೋರಾಯಿತು. ಅಲ್ಲಲ್ಲಿ ಟ್ರಾಫಿಕ್ ಜಾಂ ಬೇರೆ. ಆದರೂ, ಯಕ್ಷಗಾನ ಪ್ರಿಯರು ಉದಾಸೀನ ಮಾಡಲಿಲ್ಲ. ಸಭಾ ಕಾರ್ಯಕ್ರಮ ಶುರುವಾಗುವಾಗಲೇ ಅರ್ಧ ಪುರಭವನ ತುಂಬಿತ್ತು. ಯಕ್ಷಗಾನ ಶುರುವಾಗೂವಾಗ ಭರ್ತಿಯಾಯಿತು. ಶುರುವಾಗಿ ಒಂದು ಗಂಟೆ ಬಳಿಕ ಇದ್ದ ಸೀಟುಗಳು ಭರ್ತಿಯಾಗಿ ಮುಂದೆ ನಾಲ್ಕು ಸಾಲುಗಳಷ್ಟು ಹೆಚ್ಚು ಖುರ್ಚಿ ಇರಿಸಿ ಆಸನ ವ್ಯವಸ್ಥೆ ಮಾಡಲಾಯಿತು. ಬಾಲ್ಕನಿಯಲ್ಲಿ ಸಹ ಜನ ಕೂತಿದ್ದರು. ಹೊರಗೆ ಮಳೆ ಸುರಿಯುತ್ತಲೇ ಇತ್ತು. ಆಟ ಸಾಂಗವಾಗಿ ನೆರವೇರಿತು. ಒಂದಂತೂ ಸತ್ಯ. ಅಪ್ಪಟ ಯಕ್ಷಗಾನ ಪ್ರೇಮಿಗಳು ಸ್ಥಳಕ್ಕೇ ಹೋಗಿ ಆಟ ನೋಡುವುದನ್ನು ಯಾವು ಲೈವೂ, ಯಾವ ಮಳೆಯೂ ತಡೆಯಲಾರದು.

ಮೊದಲ ಪ್ರಸಂಗ ಅಂಬಾ ಶಪಥ. ಅನಾರೋಗ್ಯದಿಂದ ಕಳೆದ ಯಕ್ಷಋತುವಿನ ಪೂರ್ವಾರ್ಧದಲ್ಲಿ ಕೆಲ ತಿಂಗಳು ಯಕ್ಷಗಾನದಿಂದ ದೂರ ಉಳಿಯಬೇಕಾಗಿದ್ದ ಶಶಿಕಾಂತ ಶೆಟ್ಟಿ ಕಾರ್ಕಳ ಅವರ ಅಮೋಘ ಅಂಬೆ, ಸುಣ್ಣಂಬಳರ ಬೀಷ್ಮ, ನಾವಡರ ಸಾಲ್ವ ಸಹಿತ ಎಲ್ಲ ಪಾತ್ರಗಳೂ ತುಂಬ ಅಚ್ಚುಕಟ್ಟಾಗಿ ಮೂಡಿಬಂದವು. ಯುವ ಹಾಸ್ಯಗಾರ ಸಂದೇಶ್ ಮಂದಾರ ಅವರ ಸಮಯೋಚಿತ, ಸಭ್ಯ ಮತ್ತು ಸೃಜನಶೀಲ ದೂತನ ಪಾತ್ರ ತುಂಬ ಇಷ್ಟವಾಯಿತು. ಯುವ ಭಾಗವತ ಚಿನ್ಮಯ ಕಲ್ಲಡ್ಕ ಹಾಗೂ ಪಟ್ಲ ಸತೀಶ್ ಶೆಟ್ಟಿ ಅವರ ಗಾನ ಮೋಡಿ ಹಾಗೂ ಚೈತನ್ಯ, ಉಳಿತ್ತಾಯ ಚೆಂಡೆ ಪೂರಕವಾಯಿತು. ನಾನು ನೋಡಿದ ಮೊದಲ ಪ್ರಸಂಗದ ಎಲ್ಲ ಕಲಾವಿದರೂ ನಿರ್ವಹಣೆಯೂ ಇಷ್ಟವಾಯಿತು. ಪ್ರತ್ಯೇಕವಾಗಿ ಉಲ್ಲೇಖಿಸದೇ ಇದ್ದರೂ ಸಹ.

ಅಷ್ಟು ಮಳೆ ಇದ್ದರೂ ಸ್ವಯಂಸೇವಕರ ಸಹನೆಯ ಆತಿಥ್ಯ, ಆಸನ ವ್ಯವಸ್ಥೆ, ಸಹಕಾರ ಮನೋಭಾವ, ಸಮಯೋಚಿತ ಪ್ರಚಾರ, ಸನ್ಮಾನ, ಸಮಯ ಪಾಲನೆ ಸಕಲವೂ ಈ ಸಂಘಟನೆಯ ಯಶಸ್ವಿ ಕಾರ್ಯಕ್ರಮಗಳ ಆಯೋಜನೆಯ ಗುಟ್ಟು. ಇಡೀ ತಂಡಕ್ಕೆ ಅಭಿನಂದನೆಗಳು. ಯಕ್ಷಗಾನ ಸಂಘಟನೆ ಸಣ್ಣ ಸಂಗತಿಯಲ್ಲ. ಹತ್ತಾರು ಮಂದಿಯ ವಾಟ್ಸಪ್ ಗ್ರೂಪು ಮೂಲಕ ಆಯೋಜಿಸುವುದು ಮತ್ತು ಲೋಪವಿಲ್ಲದೆ ಅದಕ್ಕೊಂದು ದೊಡ್ಡ ಮೆಚ್ಚುಗೆ ಗಳಿಸುವುದು ಸಹ ಖುಷಿಯ ವಿಚಾರ.

 

ಆದರೆ, ಪುರಭವನದ ಬಾಲ್ಕನಿಯಲ್ಲಿ ಬಂದು ಸೇರಿಕೊಂಡು ಆಟದ ಗಂಧ ಗಾಳಿಯೇ ಗೊತ್ತಿಲ್ಲದೆ ಕುಡಿದು ತೂರಾಡುವವರ ಬಗ್ಗೆ ಪುರಭವನ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿ ಗಂಭೀರ ಕ್ರಮ ಕೈಗೊಳ್ಳಲೇಬೇಕು. ನಿನ್ನೆಯ ಆಟದಲ್ಲೂ ಕುಡುಕರ ತಾಳಮದ್ದಳೆ ತುಂಬ ಕಿರಿಕಿರಿ ಮಾಡುತ್ತಿತ್ತು. ಇದು ಕಲಾವಿದರಿಗೆ ಉಪಟಳ ಮತ್ತು ಸಂಘಟಕರಿಗೆ ತಲೆನೋವಿನ ಸಂಗತಿ. ಈ ಬಗ್ಗೆ ಕಠಿಣ ಕ್ರಮ ಆಗಬೇಕು. ಒಟ್ಟಿನಲ್ಲಿ ಮರೆಯಾಗುತ್ತಿರುವ ಇಡೀ ರಾತ್ರಿಯ ಆಟವನ್ನು ಜೀವಂತ ಇರಿಸುತ್ತಿರುವ ಭ್ರಾಮರಿ ಯಕ್ಷಮಿತ್ರರು ಸಂಘಟನೆಗೆ ಅಭಿನಂದನೆಗಳು.

-ಕೃಷ್ಣಮೋಹನ ತಲೆಂಗಳ (02.08.2026)

No comments: