5ಜಿ ಲೋಕದಿಂದ 10 ಪೈಸೆಯ ಕಾರ್ಡಿಗೆ ಒಂದು ಕಲ್ಲು ಬಿಸಾಡಿದ್ದು!
ಮೊನ್ನೆ ಫೇಸ್ಬುಕ್ಕಿನಲ್ಲಿ ಒಂದು ಪೋಸ್ಟು ನೋಡಿದೆ. ನಾವು ಸಣ್ಣವರಿದ್ದಾಗ ಕಷ್ಟ ಸುಖಗಳನ್ನು 10 ಪೈಸೆಯ ಪೋಸ್ಟು ಕಾರ್ಡಿನಲ್ಲಿ ಬರೆದು ಅಂಚೆ ಪೆಟ್ಟಿಗೆಯಲ್ಲಿ ಪೋಸ್ಟು ಮಾಡಿ ಹಂಚಿಕೊಳ್ಳುತ್ತಿದ್ದೆವು. ಆಗ ಯಾವ ಖಾಸಗಿತನದ ಉಲ್ಲಂಘನೆಯ ಆರೋಪವೂ ಕೇಳಿ ಬರುತ್ತಿರಲಿಲ್ಲ. ಆದರೆ ಇಂದು ತಂತ್ರಜ್ಞಾನ ಇಷ್ಟು ಮುಂದುವರಿದ್ದರೂ ನಮ್ಮೊಳಗೆ ಖಾಸಗಿತನದ ಉಲ್ಲಂಘನೆಯ ಆತಂಕ, ಭೀತಿ, ಸಂಶಯ, ಕೂಗು ಮುಗಿದೇ ಇಲ್ಲ, ಖಾಸಗಿತನ ಉಳಿಯುತ್ತಲೂ ಇಲ್ಲ...!!!
ಹೌದಲ್ವ?
ಎಂದಿನ ಹಾಗೆ, “ನಾನು ಸಣ್ಣವನಾಗಿದ್ದಾಗ ಕಾಲ ಚೆನ್ನಾಗಿತ್ತು, ಇಂದು
ಕೆಟ್ಟು ಹೋಗಿದೆ, ಯಾವುದೂ ಸರಿ ಇಲ್ಲ” ಎಂದು ಆರೋಪಿಸಲು ಇಷ್ಟು ದೊಡ್ಡ ಲೇಖನ
ಬರೆಯುತ್ತಿರುವುದು ಖಂಡಿತಾ ಅಲ್ಲ. ಅಂದು ಹೇಗಿತ್ತು ಅನ್ನುವುದರ ಸಣ್ಣ ಮೆಲುಕು ಅಷ್ಟೇ.
ಮಾಡುವುದಕ್ಕೇನೂ ಇಲ್ಲ. 10 ಪೈಸೆಯ ಕಾರ್ಡಿನಲ್ಲಿ ಕ್ಷೇಮ ಸಮಾಚಾರ ತಿಳಿದು ಖುಷಿ ಪಡುತ್ತಿದ್ದ
ಜಗತ್ತನ್ನು ದಾಟಿ “ದಿನಕ್ಕೆರಡು ಜಿಬಿ ಡೇಟಾ ಇದ್ದರೂ ಸಾಲುತ್ತಿಲ್ಲ, ಸಂವಹನ
ಸರಿಯಾಗುತ್ತಿಲ್ಲ” ಎಂದು ಗೊಣಗುತ್ತಿರುವ ಜಗತ್ತಿನಲ್ಲಿ ನಿಂತು ಮೂವತ್ತು ವರ್ಷಗಳ
ಹಿಂದೆ ಇಣುಕಿ ನೋಡಿದಾಗ, ಅಂದು ಬದುಕು ಎಷ್ಟು ಸರಳವಾಗಿತ್ತು, ಅದೇ “ನಾವುಗಳು” ಇಂದು ಬೆರಳ ತುದಿಯಲ್ಲೇ ಜಗತ್ತಿದೆ ಎಂದು ಹೇಳುತ್ತಲೇ
ಬದುಕನ್ನು ಎಷ್ಟು ಸಂಕೀರ್ಣವಾಗಿಸುತ್ತಿದ್ದೇವೆ ಎಂದು ಅರಿವಾದಾಗ ಆಶ್ಚರ್ಯ ಆಗುತ್ತಿದೆ.
ಬದಲಾಗಿರುವುದು ತಂತ್ರಜ್ಞಾನ ಮಾತ್ರವಲ್ಲ, ಅದೇ ಸರಳ ಬದುಕಿನ ಹಂತಗಳನ್ನು ದಾಟಿ ಬಂದ ನಾವು ಕೂಡಾ,
ಸರಳತೆ ಕುರಿತ ನಮ್ಮ ದೃಷ್ಟಿಕೋನ ಕೂಡಾ ಬದಲಾಗಿದೆ.!
ಭಾರತೀಯರು ಟೂತ್ ಪೇಸ್ಟಿನ ಟ್ಯೂಬನ್ನು ಹಿಸುಕಿ
ಹಿಸುಕಿ ಅದನ್ನು ಕೊರೆದಾದರೂ ಪೂರ್ತಿ ಪೇಸ್ಟನ್ನು ಬಳಸಿಯೇ ಬಳಸುತ್ತಾರೆ ಎಂಬಂರ್ಥದ ಒಂಥರಾ
ವ್ಯಂಗ್ಯವಾಡುವ ಜೋಕು ಕೂಡಾ ಇದನ್ನೇ ಹೇಳುತ್ತಿದೆ. “ಬಳಸಿ ಬಿಸಾಡು, ಬಳಸಿ ಬಿಸಾಡು, ಖರೀದಿಸು-ಬಿಸಾಡು,
ಖರೀದಿಸು-ಬಿಸಾಡು, ಬಳಸಿದ್ದನ್ನು ಮತ್ತೆ ಬಳಸಬೇಡ, ಪರಸ್ಪರ ಹಂಚಿಕೊಳ್ಳಬೇಡ, ವಿನಿಮಯ ಮಾಡಬೇಡ..”. ಇತ್ಯಾದಿ ಇತ್ಯಾದಿ. ಜಿಪುಣ, ಕುರೆ, ಪಿಟ್ಟಾಸಿ ಇತ್ಯಾದಿ ಪದಗಳಿಗೆ
ಈಗ ಬೇರೆಯದ್ದೇ ಅರ್ಥ ಬಂದಿದೆ. “ಕೊಳ್ಳುಬಾಕ” ಎಂಬ ಪದ ಭಯಂಕರ ವೈಚಾರಿಕವಾದೀತು. ಆದರೆ
ಕೊಳ್ಳುಬಾಕತನವೇ ಇದರ ಹಿಂದಿರುವುದು. ಯಾರೂ ಒಪ್ಪಿದರೂ ಸರಿ, ಒಪ್ಪದಿದ್ದರೂ ಸರಿ.
ನನಗೆ ನೆನಪಾದ್ದು ಹೇಳುತ್ತೇನೆ ಕೇಳಿ.
1) ಅಂದು ನಾವು ಶಾಲೆಗೆ ಹೋಗುವಾಗ ಚಡ್ಡಿಯೋ, ಪ್ಯಾಂಟೋ ಗಿಡ್ಡವಾದರೆ
ಅದರ ಕಾಲಿನ ತುದಿಯ ಕೊನೆಯ ಮಡಿಕೆಯ ಹೊಲಿಗೆ ಬಿಡಿಸಿ ಪ್ಯಾಂಟನ್ನು “ಉದ್ದ ಮಾಡಿ”ಯೂ ಒಂದು ವರ್ಷದ ಮಟ್ಟಿಗೆ ಆ ಪ್ಯಾಂಟನ್ನು
ಬಳಸುತ್ತಿದ್ದೆವು, ಮನೆಯ ಹಿರಿಯರ ಅಂಗಿ, ಲಂಗ, ಸೀರೆ, ಯೂನಿಫಾರ್ಮುಗಳು ಸಣ್ಣ ತರಗತಿಯಲ್ಲಿರುವ
ಸಹೋದರ, ಸಹೋಯದರಿಯರಿಗೆ ಮುಂದಿನ ವರ್ಷಕ್ಕೆ ಉಡುಪಾಗುತ್ತಿದ್ದವು. ಇಂದು ಎಷ್ಟು ಮಂದಿ ಅವರಿವರ
ಬಟ್ಟೆ ಧರಿಸಿ ಶಾಲೆಗೆ ಹೋಗುತ್ತಾರೆ?
2) ನಾನು ಶಾಲೆಗೆ ಹೋಗುತ್ತಿದ್ದಾಗ ನನ್ನ ತುಂಬ ಸಹಪಾಠಿಗಳು ಚಪ್ಪಲಿಯೇ
ಧರಿಸುತ್ತಿರಲಿಲ್ಲ (ಬಹುತೇಕರ ಬದುಕು ಚಪ್ಪಲಿಯನ್ನೂ ಕೊಳ್ಳಲಾಗದಷ್ಟು ದುರ್ಬಲವಾಗಿತ್ತು),
ಬಟ್ಟೆಯಲ್ಲಿ ಹೊಲಿದ ಹೆಗಲ ಚೀಲವನ್ನು (ಕೆಲವರಲ್ಲಿ ಅದೂ ಇಲ್ಲ) ತಲೆಗೆ ಧರಿಸಿ ಅಥವಾ ಆಗಿನ
ಫೇಮಸ್ಸು “ತಂಗೀಸು ಚೀಲ”ವನ್ನು ನೇತಾಡಿಸಿಕೊಂಡು ಖುಷಿಯಿಂದ ಶಾಲೆಗೆ
ಬರುತ್ತಿದ್ದರು. ಈಗ ವರ್ಷಕ್ಕೆ ಎರಡು ಚೀಲ ಹೊಸದಾಗಿ ತೆಗೆದರೂ ಅದು ಹರಿಯುತ್ತಲೇ ಇರುತ್ತದೆ!
3) ಪ್ರೈಮರಿಯಲ್ಲಿ ವರ್ಷದ ಕೊನೆಗೆ ಪಠ್ಯ ಪುಸ್ತಕಗಳನ್ನು ಶಾಲೆಗೆ “ಇದ್ದ ಸ್ಥಿತಿಯಲ್ಲೇ” ಮರಳಿಸಬೇಕಾಗಿತ್ತು, ಮುಂದಿನ ವರ್ಷದವರಿಗೆ ಅದೇ
ಪುಸ್ತಕವನ್ನು ಉಚಿತವಾಗಿ ನೀಡುತ್ತಿದ್ದರು. ಹೀಗೆ ಪುಸ್ತಕ, ಚಪ್ಪಲಿ, ಬ್ಯಾಗು, ಕೊಡೆ, ರೈನು
ಕೋಟು ಅವರಿವರಿಂದ ಅಜಸ್ಟ್ ಮಾಡಿ, ಹರಿದರೆ ಹೊಲಿಗೆ ಹಾಕಿ ಅಥವಾ ಸುಧಾರಿಸಿ ಬಳಸಿ ಸರಳವಾಗಿ ದಿನ
ಹೋಗುತ್ತಿತ್ತು. ಹರಿದರೆ, ಕಡಿದರೆ, ಒಡೆದರೆ ಎಸೆಯಬೇಕು ಎಂಬ ಪ್ರಜ್ಞೆಯೋ, ಪಾಠವೋ ಆಗ ನಮಗೆ
ಸಿಕ್ಕಿರಲಿಲ್ಲ. ಸ್ಲೇಟಿನಲ್ಲಿ ಬರೆಯುವ ಕಡ್ಡಿ (ಬಳಪ) ಸವೆದು ಗಿಡ್ಡವಾದರೆ ಸ್ಕೆಚ್ಚು ಪೆನ್ನಿನ ಖಾಲಿ
ಓಟೆ (ರೀಫಿಲ್ ತುಂಬಿಸುವ ಜಾಗ)ಗೆ ಕಡ್ಡಿಯನ್ನು ತುಂಬಿಸಿ ಬರೆಯುತ್ತಿದ್ದದ್ದು ಚೆನ್ನಾಗಿ
ನೆನಪಿದೆ. ನಟರಾಜ್ ಪೆನ್ಸಿಲ್ ಮೊನೆ ಮಾಡಿ (ಶಾರ್ಪ್ ಮಾಡಿ) ಗಿಡ್ಡವಾಗುತ್ತಾ ಬಂದ ಹಾಗೆ ಬರೆಯಲು
ಅನುಕೂಲವಾಗಲು ಅದಕ್ಕೊಂದು ಓಟೆ (ಕೊಳವೆ) ಸಿಕ್ಕಿಸಿ ಬರೆದದ್ದೂ ನೆನಪಿದೆ. ಕೊನೆಯ ಹಂತದ ವರೆಗೆ
ಬಳಕೆಯಾದ ಇರೇಸರ್ (ಲಬ್ಬರ್), ರಿಫೀಲುಗಳನ್ನೇ ಬಳಸುತ್ತಾ ವರ್ಷಗಟ್ಟಲೆ ಬಳಸಿದ ಪೆನ್ನುಗಳೆಲ್ಲ ಈಗ
ಕನಸುಗಳಂತೆ ಭಾಸವಾಗುತ್ತವೆ. ಯಾಕೆಂದರೆ ಈಗ ಎಷ್ಟೋ ಪೆನ್ನುಗಳಿಗೆ ರಿಫೀಲ್ ಬದಲಿಸಲು ಅವಕಾಶವೇ
ಇಲ್ಲ!
4) ಕಳೆದ ವರ್ಷದ ನೋಟ್ಸು ಪುಸ್ತಕಗಳ ಖಾಲಿ ಹಾಳೆಯನ್ನೆಲ್ಲ ಸಂಗ್ರಹಿಸಿ
ಊರಿನ ಪ್ರಿಂಟರಿಗೆ ಹೋಗಿ ಕೊಟ್ಟರೆ ಅವರದನ್ನು ಚಂದಕೆ ಜೋಡಿಸಿ ಬೈಂಡ್ ಹಾಕಿ ಕೊಟ್ಟರೆ ಅದೇ ನಮ್ಮ
ಪಾಲಿಗೆ ಈ ವರ್ಷದ ರಫ್ ಪುಸ್ತಕ ಆಗುತ್ತಿತ್ತು, ಅಥವಾ ಮನೆಯಲ್ಲೇ ನೂಲಿನಿಂದ ಹೊಲಿದು ಜೋಡಿಸಿ ರಫ್
ವರ್ಕ್ ಮಾಡಿ ಶಾಲೆಗೆ ಕೊಂಡು ಹೋದರೆ ಯಾರೂ ನಗುತ್ತಿರಲಿಲ್ಲ, ಆ ಪುಸ್ತಕಕ್ಕೆ ಒಂದು ಚಂದದ ಕಾಗದದ
ಪರಿಮಳವೂ ಇರ್ತಾ ಇತ್ತು. ಯಾಕೆಂದರೆ ಎಲ್ಲರ ಹತ್ರವೂ ಅಂಥದ್ದೇ ರಫ್ ಪುಸ್ತಕ ಇರ್ತಾ ಇತ್ತು. ಬಹುಶಃ
ನಾನು ಪದವಿ ಶಿಕ್ಷಣ ಮಾಡುತ್ತಿದ್ದ ಹೊತ್ತಿಗೆ ರೆಡಿಮೇಡ್ ರಫ್ ಪುಸ್ತಕಗಳು ಬರಲು ಶುರುವಾದವು, ಸುಮ್ಮನೆ
ಬಂಙ (ಕಷ್ಟ) ಯಾಕೆ ಅಂತ ಮಕ್ಕಳೂ ಹಳೆ ಪುಸ್ತಕಗಳಿಗೆ ಬೈಂಡ್ ಹಾಕುವುದು ಬಿಟ್ಟು ರೆಡಿಮೇಡ್ ರಫ್
ಪುಸ್ತಕಗಳನ್ನೇ ಖರೀದಿಸಲು ತೊಡಗಿದರು.
5) ನನ್ನ ನೆನಪಿನ ಪ್ರಕಾರ 2001ನೇ ಇಸವಿ ತನಕ ಭಾನುವಾರ ಹೊರತುಪಡಿಸಿ
ಬೇರೆ ದಿನಗಳಲ್ಲಿ ಕನ್ನಡ ಪತ್ರಿಕೆಗಳಲ್ಲಿ ಕಲರ್ ಪುಟುಗಳು ಇರ್ತಾ ಇರಲಿಲ್ಲ. ಭಾನುವಾರ,
ಶುಕ್ರವಾರ ಮಾತ್ರ ನುಣುಪಾದ ಪುಟಗಳು, ಚಂದದ ಫೋಟೋಗಳು. ತರಂಗ, ಸುಧಾ ಮ್ಯಾಗಝೀನುಗಳಲ್ಲೂ ಅಷ್ಟೇ
ಕೊನೆಯ ಹಾಗೂ ಆರಂಭದ ಕೆಲವು ಪುಟಗಳು ನುಣುಪಾದ ಕಾಗದದಲ್ಲಿ ಪ್ರಿಂಟ್ ಆಗುತ್ತಿತ್ತು. ಆ ಪುಟಗಳೇ
ನಮ್ಮ ಪುಸ್ತಕಕ್ಕೆ ತಟ್ಟಿ (ಬೈಂಡ್ ) ಆಗಿ ರಕ್ಷಾಕವಚಗಳಾಗುತ್ತಿದ್ದವು. ಪ್ರತ್ಯೇಕವಾಗಿ ಬೈಂಡ್
ಕಾಗದ,ಲೇಬಲ್ ತೆಗೆಯುವುದು ಕಡ್ಡಾಯವಾಗಿರಲಿಲ್ಲ. ಹಳೆ ಪತ್ರಿಕೆಗಳಿಗೆ ವಿಲೇವಾರಿಯೂ ಆಯಿತು, ಚಂದದ
ಬೈಂಡೂ ಸಿಕ್ಕಿತು. ಇದರಲ್ಲಿ ಸಣ್ಣವರಾಗುವುದಕ್ಕೆ, ಕೀಳರಿಮೆ ಪಟ್ಟುಕೊಳ್ಳುವುದಕ್ಕೆ ಏನಿದೆ?!
6) ಹಿರಿಯ ಸಂಬಂಧಿಯೊಬ್ಬರು ಪಿಯು ಶಿಕ್ಷಣ ಮಾಡುತ್ತದ್ದಾಗ ಅವರಲ್ಲಿ
ಕೇವಲ ಎರಡು ಸೆಟ್ ಪಂಚೆ ಇತ್ತಂತೆ. ಪಂಚೆಯ ಎರಡೂ ಅಂಚಿನಲ್ಲಿರುವ ಬಾರ್ಡರ್ ಬೇರೆ ಬೇರೆ
ಬಣ್ಣಗಳದ್ದು, ಅವರು ದಿನಾ ಅದನ್ನೇ ತೊಳೆದು ಒಣಗಿಸಿ ಪ್ರತಿದಿನ ಬೇರೆ ಬೇರೆ ಬಣ್ಣದ ಅಂಚು ಕೆಳಗೆ
ಕಾಣುವಂತೆ ಬಟ್ಟೆ ಧರಿಸಿ ಕಾಲೇಜಿಗೆ ಹೋಗುತ್ತಿದ್ದರಂತೆ! ಎಷ್ಟು ಸರಳ ಬದುಕು. ಅದು ಅನಿವಾರ್ಯವಾಗಿತ್ತು,
ಆರ್ಥಿಕವಾಗಿ ಕೊಳ್ಳುವುದಕ್ಕೆ ಶಕ್ತಿ ಇರಲಿಲ್ಲ ಎಂಬುದು ಮಾತ್ರ ಇಲ್ಲಿ ವಿಷಯವಲ್ಲ. ಆ ಕಾಲದಲ್ಲಿ
ಸ್ಟೇಟಸ್ಸಿಗೆ, ಅಂತಸ್ತಿಗೆ, ಕೀಳರಿಮೆಗೆ, ಬಡತನಕ್ಕೆ ಇವುಗಳಿಗೆಲ್ಲ ಇದ್ದ ವ್ಯಾಖ್ಯೆಯೇ ಬೇರೆ.
ಹೊಸದೊಂದು ಮೊಬೈಲು ಮಾರುಕಟ್ಟೆಗೆ ಬಂದಾಗ ಇದ್ದ ಮೊಬೈಲಿನಲ್ಲಿ ಕಳ್ಳ ನೆಪಗಳನ್ನು ಹುಡುಕಿ,
ಹಾಳಾಗಿದೆಂಯೆಂದು ಸುಳ್ಳು ಹೇಳಿ, “ಒಮ್ಮೆ ನನ್ನ ಮೊಬೈಲ್ ಹಾಳಾದರೆ ಸಾಕಪ್ಪ” ಎಂದ ಬರಿದೇ ಗೋಳಾಡಿ ಆರೇಳು ಸಾವಿರ ನಷ್ಟ ಮಾಡ್ಕೊಂಡು ಹೊಸ
ಮೊಬೈಲು ಖರೀದಿಸಿ ಸಂತೃಪ್ತರಾಗುವ ನಮಗೆ ಹಳೆ ಪುಸ್ತಕದ ಖಾಲಿ ಹಾಳೆಗಳನ್ನು ರಫ್ ಪುಸ್ತಕ
ಮಾಡುತ್ತಿದ್ದ ದಿನಗಳು ಹಾಸ್ಯಾಸ್ಪದದಂತೆ ತೋರಬಹುದೋ ಏನೋ.
7) ಆಗ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದದ್ದು, ವಾಟರ್ ಕ್ಯಾನ್ ಅಂತ
ಪ್ರತ್ಯೇಕ ಇಲ್ಲದೇ ಇದ್ದದ್ದು, ಇಂಥದ್ದೇ ಅಂಗಡಿಯಿಂದ ಇಂಥದ್ದೇ ಬಣ್ಣದ ಯೂನಿಫಾರಂ ತಗೊಳ್ಳಿ
ಅನ್ನುವ ಸೂಚನೆಗಳು ಬಾರದೇ ಇದ್ದದ್ದು, 25 ಪೈಸೆ ಐಸ್ ಕ್ಯಾಂಡಿಯಲ್ಲೇ ಮಧ್ಯಾಹ್ನ ಹೊಟ್ಟೆ
ತುಂಬ್ತಾ ಇದ್ದದ್ದು, ಐದು ರುಪಾಯಿಗೆ ಗತಿಯಿಲ್ಲದ ಕಾರಣಕ್ಕೆ ಅತ್ಯಮೂಲ್ಯವಾದ 7ನೆಯ, 10ನೆಯ ಕ್ಲಾಸಿನ
ಗ್ರೂಪ್ ಫೋಟೋವನ್ನು ಖರೀದಿಸಲು ಆಗದೆ ನಂತರ ಸಂಕಟ ಪಟ್ಟದ್ದು, ಯಾರದ್ದೋ ಮನೆಯ ಜಗಲಿಯಲ್ಲಿ
ಕುಳಿತು ಟಿ.ವಿ.ಯಲ್ಲಿ ರಾಮಾಯಣ, ಮಹಾಭಾರತ, ಕ್ರಿಕೆಟ್ಟು, ಆದಿತ್ಯವಾರದ ಸಿನಿಮಾ ನೋಡಿದ್ದು, ಹೊಸ
ಕೊಡೆ ತೆಗೆಯಲಾಗದೆ ತೂತು ಕೊಡೆಯಲ್ಲೇ ಮೈ ಒದ್ದೆ ಮಾಡಿಕೊಂಡು ಮನೆಗೆ ಬಂದರೂ ಬೈರಾಸಿನಲ್ಲಿ ತಲೆ
ಒರೆಸಿ ಒಲೆಯೆದುರು ಕುಳಿತು ಮೈ ಕಾಯಿಸಿದ್ದು, ಆದರೂ ಹೈಜಿನ್ ಕಾನ್ಸೆಪ್ಟ್ ಕೆಡದೆ ಆರೋಗ್ಯವಾಗಿಯೇ
ಇದ್ದದ್ದು... ಇವು ಯಾವುವೂ ಆ ಕಾಲಕ್ಕೆ ಇನ್ಸಲ್ಟಿಂಗ್ ಆಗಿಯೋ, ಪ್ರತ್ಯೇಕತಾವಾದವಾಗಿಯೋ
ಕಾಣಲಿಲ್ಲ, ವಾಸ್ತವಿಕವಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚಲು ಸಾಧ್ಯವಾಗುತ್ತಿದ್ದ ಆ ದಿನಗಳು
ಗ್ರೇಟ್ ಅನ್ನಲು ಈಗ ಬಹುಶಃ ಹಲವರಿಗೆ ನಾಲಗೆ ತಡವರಿಸಬಹುದೋ ಏನೋ.
8) ಟಾರ್ಚು ಲೈಟಿಗೆ, ರೇಡಿಯೋಕ್ಕೆ ಬ್ಯಾಟರಿ ಹೊಸತಾಗಿ
ಹಾಕುವಾಗ ಪೆನ್ನಿನಲ್ಲೋ, ಸೂಜಿಯಲ್ಲೋ ತಾರೀಕು ಬರೆದು ಹಾಕುತ್ತಿದ್ದದ್ದು. ಅದು ಸರಿಯಾಗಿ ಎರಡು
ತಿಂಗಳ ಕಾಲ ಕೆಲಸ ಮಾಡುತ್ತದೆ ಎಂದು ನೆನಪಿಸಲು. ಅದು ಯಾವತ್ತೂ ಕೈಕೊಟ್ಟ ನೆನಪಿಲ್ಲ. ಎರಡು
ತಿಂಗಳ ಬಳಿಕ ಬ್ಯಾಟರಿ ಚೇಂಜ್ ಮಾಡಿದರೆ ಸೈ. ದಿನಪೂರ್ತಿ ರೇಡಿಯೋ ಕೇಳಬಹುದಿತ್ತು. ಆಗ ಬ್ಲಾಕ್ ಆಗುವ 25 ಬೇಸಿನ್ನುಗಳು, ಪದೇ ಪದೆ “ಕುರೆ”ಯಾಗುವ ಟೈಲ್ಸಿನ ಬಾತ್ ರೂಮುಗಳೇ ಇಲ್ಲದ ಕಾರಣ,
ತೆಂಗಿನ ಮರದ ಬುಡದ ಪಾತ್ರೆ ತೊಳೆಯುವ ಜಾಗ, ತೋಟದ ಕೆರೆಯಂಚಿನ ಸ್ನಾನದ ಖುಷಿ ಎರಡೂ ಈಗ ಹೈಜೀನ್
ಹಾಗೂ ಸೊಫಿಸ್ಟಿಕೇಟೆಡ್ ಹೆಸರಿನಲ್ಲಿ ನಮ್ಮಿಂದ ದೂರವಾಗಿದೆ. ಆಧುನಿಕ ಮನೆಗಳಲ್ಲಿ ಬಟ್ಟೆ ಒಣಗಲು
ಹಾಕಲು ಬೆಡ್ ರೂಮುಗಳಲ್ಲಿ ಸರಿಯಾಗಿ ಮೊಳೆ ಹೊಡೆದು ಹಗ್ಗ ಕಟ್ಟುವ ಹಾಗೂ ಇಲ್ಲ. ಎಷ್ಟೋ
ಮನೆಗಳಲ್ಲಿ ಪಾಯಿಖಾನೆಯಲ್ಲಿ ಇಂಡಿಯನ್ ಕಮೋಡೇ ಇಲ್ಲ!!!! ಹೊಸ ಮನೆಗೆ ಲಕ್ಷಗಟ್ಟಲೆ ಖರ್ಚು ಮಾಡುತ್ತೇವೆ, ಆದರೆ
ನಾವು ಸಂಕೀರ್ಣರಾಗುತ್ತಲೇ ಹೋಗುತ್ತಿದ್ದೇವೆ. ಸಮಕಾಲೀನರಾಗುವ, ಆಗಲೇಬೇಕಾದ ಅಥವಾ ಎಲ್ಲರಂತೆ
ನಾನೂ ಇರಬೇಕಾದ ಅನಿವಾರ್ಯತೆ ನಡುವಿನ ಕಸರತ್ತು ಅಷ್ಟೇ.
9) ಟವೆಲ್ಲಿಗೆ ಅಂಚು ಹೊಲಿದುಕೊಡುತ್ತಿದ್ದ, ಹಳೆ ಬಟ್ಟೆಗಳನ್ನು
ತುಂಬಿಸಿ ಬೋರ್ಡ್ ಒರೆಸುವ ಡಸ್ಟರ್ ಮಾಡಿಕೊಡುತ್ತಿದ್ದ ಟೈಲರುಗಳು, ಚಪ್ಪಲಿ ಹೊಲಿಯುವವರು, ಕತ್ತಿ
ಸಾಣೆ ಮಾಡುವವರು, ಕೊಡೆ ರಿಪೇರಿಯವರು, ಗ್ಯಾಸ್ ಲೈಟ್ ಸರಿ ಮಾಡುವವರು, ಸೈಕಲ್ಲಿಗೆ ಗಾಳಿ ಹಾಕಿ
ಕೊಡುವವರು, ಮರದ ಕಟ್ಟೆಯಲ್ಲಿ ಕುಳಿತು ಕೂದಲು ತೆಗೆಯುವ ಕ್ಷೌರಿಕರು, ಸೈಕಲ್ಲಿನಲ್ಲಿ ಐಸ್
ಕ್ಯಾಂಡಿ ಮಾರುವವರು ಇವರೆಲ್ಲ ಈಗ ಎಲ್ಲಿ ಹೋದರು? ಮೊಬೈಲಿನಲ್ಲಿ ಆಯ್ಕೆ ಮಾಡಿ ನೆಟ್ ಬ್ಯಾಂಕಿಂಗಿಗೆ
ಕನೆಕ್ಷನ್ ಕೊಟ್ಟು ಕ್ಲಿಕ್ ಮಾಡಿದರೆ ಸಾಕು, ಮನೆ ಬಾಗಿಲಿಗೆ ಯಾಕೆ, ಕೂತಲ್ಲಿಗೆ ನಯವಿನಯದಿಂದ
ಕೇಳಿದ ವಸ್ತು ಬಂದು ತಲಪುತ್ತದೆ. “ನೋ ಬಾರ್ಗೈನಿಂಗ್, ನೋ ಪರ್ಸನಲ್ ರಿಲೇಶನ್...” ಯಾವುದೇ ವಸ್ತು ಸ್ವಲ್ಪ ಹಾಳಾದರೆ olxಗೆ ಹಾಕಿ ಮಾರು,
ಎಕ್ಸ್ ಚೇಂಜ್ ಮಾಡು ಅಥವಾ ಕಾರ್ಪೋರೇಶನ್ ಕೊಟ್ಟ ಎರಡೆರಡು ಕಸದ ಬುಟ್ಟಿಗಳಿವೆ, ಅವಕ್ಕೆ ಬಿಸಾಕು.
ಕಂತಿನ ಸಾಲ ಕೊಡಲು ಬ್ಯಾಂಕುಗಳು ರೆಡಿ ಇವೆ. ಹೊಸತು ತಗೋ ಹೊಸತು ತಗೋ ಅಂತಲೇ ಮನಸ್ಸು
ಪ್ರಚೋದಿಸುತ್ತದೆ. ಹೊಲಿಗೆ ಹಾಕಿ, ರಿಪೇರಿ ಮಾಡಿ ಕೊಂಡು ಹೋಗಲು ಕೀಳರಿಮೆ, “ಕುರೆ” ಅಂತ ಕರೆಸಿಕೊಳ್ಳುವ ಆಂತಕ, ಗಾಂಧಿ ಅಂತ ಹೇಳಿದರೆ
ಅಂತ ಟೆನ್ಶನ್ನು ಅಲ್ವ?
10) ಆಗೆಲ್ಲ ಮನೆಯಿಂದ ಪೇಟೆಗೆ ಹೋದವರು ಪದೇ ಪದೇ ಅಪ್ಡೇಟ್ ನೀಡಲು
ಮೊಬೈಲ್ ಇಲ್ಲದ ಕಾರಣ ಬಂದ ಮೇಲೆಯೇ ಗ್ಯಾರಂಟಿ ಇಷ್ಟೊತ್ತಿಗೆ ತಲಪಿದರು ಅಂತ. ಪೇಟೆಗೆ ಹೋದಾಗ
ಸಂಜೆಯ ತನಕವೂ ವಾಪಸ್ ಬಾರದೇ ಇದ್ದರೆ ರಾತ್ರಿ 8 ಗಂಟೆಯ ಲಾಸ್ಟು ಬಸ್ಸಿನಲ್ಲಿ ಬಂದೇ ಬರುತ್ತಾರೆ
ಎಂಬುದು ಗ್ಯಾರಂಟಿ. ಯಾಕಂದರೆ ಮತ್ತೆ ಬರಲು ಬೇರೆ ವ್ಯವಸ್ಥೆಯೇ ಇರಲಿಲ್ಲ! ರಾತ್ರಿಯಿಂದ ಬೆಳಗ್ಗಿನ ವರೆಗೂ ಬಯಲಾಟ ನೋಡುತ್ತಿದ್ದ
ದಿನಗಳು, ಮದುವೆಗೂ ಎರಡು ದಿನ ಮೊದಲೇ ಹೋಗಿ, ಮದುವೆ ಕಳೆದ ಎರಡು ದಿನಗಳ ಬಳಿಕ ನೆಂಟರ ಮನೆಯಿಂದ
ವಾಪಸ್ ಬರುವಷ್ಟು ಪುರುಸೊತ್ತು, ಔದಾರ್ಯತೆ, ವಿಶಾಲ ಮನಸ್ಸು ಮತ್ತು ಪುರುಸೊತ್ತು ಇವೆಲ್ಲವನ್ನೂ ನಾವು
ಅತ್ಯಂತ ಸ್ಪಷ್ಟವಾಗಿ ನಾವು ಕಳೆದುಕೊಂಡಿದ್ದೇವೆ. ಸಾರಣೆಯೇ ಆಗದ, ಕರೆಂಟೇ ಇಲ್ಲದ ಮನೆಗಳಲ್ಲಿ
ದಿಢೀರನೆ ಆರೇಳು ಮಂದಿ ನೆಂಟರು ಹೇಳದೇ ಕೇಳದೇ ಬಂದರೂ ಸುಧಾರಿಸುತ್ತಿದ್ದ ಹಳ್ಳಿ ಮನೆಗಳಿಗೂ ಈಗ
ಪೂರ್ವಸೂಚನೆ ಕೊಡದೆ ನೆಂಟರು ಹೋದರೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಒಂದು ಇನ್ಲ್ಯಾಂಡ್ ಲೆಟರು, ಪೋಸ್ಟು ಕಾರ್ಡು, 2
ರುಪಾಯಿಯ ಕವರು, ಆಟೋಗ್ರಾಫ್ ಪುಸ್ತಕ, ಕಪಾಟಿನಲ್ಲಿ ಮೂಲೆಯಲ್ಲಿದ್ದ ಡೈರಿಗಳಲ್ಲಿ ನಡೆಯುತ್ತಿದ್ದ
ಸಂವಹನ, ವಾರಕ್ಕೊಂದು ಸಿನಿಮಾ, ಎರಡು ಮ್ಯಾಗಝೀನ್ ಓದು, ಲೈಬ್ರೆರಿಯಲ್ಲಿ ಸಿಕ್ಕುವ ಕಾದಂಬರಿಗಳು,
ಊರಿನ ಬಯಲಾಟ, ದಿನವಿಡೀ ಸುದ್ದಿ ನೀಡುವ, ಕೋರಿಕೆ ತೀರಿಸುವ ಮುದ್ದಾದ ರೇಡಿಯೋ, ನೆಂಟರ ಮನೆಗೆ,
ಜಾತ್ರೆಗೆ, ಕೋಲಕ್ಕೆ, ಬಯಲಿಗೆ, ತೋಟಕ್ಕೆ ತಿರುಗಾಡಲು ಇದ್ದ ಸ್ವಾತಂತ್ರ್ಯ, ಸಾಧ್ಯತೆ, ಬಿಡುವು
ಇವುಗಳನ್ನು ಬಿಟ್ಟ “ಗ್ಲೋಬಲ್ ವಿಲೇಜ್” ಹೇಗಿದೆ ಅಂತ ಎಲ್ರಿಗೂ ಗೊತ್ತು. ಸೆಕೆಂಡು
ಸೆಕೆಂಡಿಗೂ ಜಗತ್ತು “ಕನೆಕ್ಟೆಡ್” ಆಗಿದೆ. ಯಾರೂ ಯಾರಿಂದಲೂ ದೂರವಾಗಿಲ್ಲ. ಒಂದಷ್ಟು
ಹೊತ್ತು ಆಫ್ ಲೈನ್ ಇರಲೂ ಈ ಬದುಕು ಅವಕಾಶ ನೀಡುವುದಿಲ್ಲ. ಬೇಕಾದರೂ ಬೇಡದಿದ್ದರೂ ಮಾಹಿತಿಯ ಸುರಿಮಳೆಗೆ
ದೃಷ್ಟಿ ಹಾಯಿಸಲೇ ಬೇಕು. ಬೇಕಾದ್ದು, ಬೇಡದ್ದೆನ್ನೆಲ್ಲ ಖರೀದಿಸಿ ರಾಶಿ ಹಾಕಲೇ ಬೇಕು. ಹಳತಾದರೆ,
ದುರಸ್ತಿಗೆ ಬಂದರೆ ಎಸೆಯಲು ಡಸ್ಟು ಬಿನ್ನುಗಳಿವೆ. ಆದರೂ ಈಗಲೂ ಸರಿ ಯಾವುದು, ತಪ್ಪು ಯಾವುದು
ತಿಳಿಯಲು ಕಷ್ಟಪಡಬೇಕು. ಸತ್ಯವನ್ನು ಸತ್ಯ ಅಂತ ನಿರೂಪಿಸಲು ಹೋರಾಡಬೇಕು, ಮನಸ್ಸು ಮನಸ್ಸುಗಳ
ಕಂದಕಗಳನ್ನು ಜಾಲ ತಾಣ ಹೆಚ್ಚು ಮಾಡುತ್ತಿದೆ ವಿನಃ ಜೋಡಿಸುತ್ತಲೇ ಇಲ್ಲ. ಸಂಶಯ, ಅಪನಂಬಿಕೆ,
ವಂಚನೆಗಳ ಸುದ್ದಿ ದಿನಂಪ್ರತಿ ಎಂಬಂತೆ ಮಾಧ್ಯಮಗಳಲ್ಲಿ ಬರುತ್ತಲೇ ಇದೆ. ಹಾಗಾದರೆ ಎಂಥದ್ದು ಅಭಿವೃದ್ಧಿ? ಬೆರಳ ತುದಿಯ ಜಗತ್ತು ನಮಗೆ ಕೊಟ್ಟದ್ದು ಎಂಥದ್ದು? ಇಡಿ ಜಗತ್ತೇ ಕನೆಕ್ಟೆಡ್ ಆಗಿರುವುದರಿಂದ ಸಿಕ್ಕಿದ
ಪ್ರಯೋಜನವಾದರೂ ಏನು?
ಅಷ್ಟೆಲ್ಲ ಯೋಚಿಸುತ್ತಾ ಕೂತರೂ, ಚಿಂತಿಸಿದರೂ, ಭಾಷಣ
ಬಿಗಿದರೂ ಇದರೊಳಗೆ ನಾವು ಭಾಗ ಎಂಬುದು ಅಪ್ಪಟ ವಾಸ್ತವ. ಚಿಂತಿಸಬಹುದೇ ವಿನಃ ಚಿಂತೆ ಮಾಡುತ್ತಾ
ಕೂಳಿತರೆ ದೊಡ್ಡ ಪರಿಹಾರವೇನೂ ಸಿಕ್ಕದು.
ಮೊಬೈಲಿಗೆ ಇಂಟರ್ನೆಟ್ ಬಂದ ಹೊಸದರಲ್ಲಿ 30 ದಿನಕ್ಕೆ
ಬಿಎಸ್ಸೆಎನ್ನೆಲ್ 98 ರುಪಾಯಿಗೆ 1 ಜಿಬಿ ಡೇಟಾ ನೀಡುತ್ತಿತ್ತು. ಅದರಲ್ಲೂ ಡೇಟಾ
ಉಳಿಯುತ್ತಿತ್ತು. ಇಂದು ದಿನಕ್ಕೆ ಎರಡು ಜಿಬಿ ಡೇಟಾ ಹಾಕಿದರೂ ನಮಗೆ ಸಾಲುತ್ತಿಲ್ಲ, ಟಾಪ್ ಅಪ್
ಮಾಡುತ್ತಲೇ ಇರುತ್ತೇವೆ, ಒಂದು ಸಿಂ ಸಾಕಾಗುವುದಿಲ್ಲ, ಬ್ರಾಡ್ ಬ್ಯಾಂಡ್ ಸಾಮರ್ಥ್ಯ ಕ್ಷೀಣ
ಅನ್ನಿಸ್ತಾ ಇದೆ, 4ಜಿ ಸ್ಲೋ ಅನ್ನಿಸ್ತಾ ಇದೆ, ಇಷ್ಟೆಲ್ಲ ಮಾಹಿತಿಗಳ ಗುಡ್ಡೆಯೇ ಎದುರಿಗಿದ್ದರೂ
ಕೊರೋನಾದ ಆಳ, ಅಗಲ ಅರಿಯುವಲ್ಲಿ ವಿಫಲರಾಗಿದ್ದೇವೆ...
ಅಲ್ವ?
10 ಪೈಸೆಯ ಕಾರ್ಡಿನಲ್ಲಿ ಬರೆದುಕೊಂಡು ಯಾವ
ಮುಜುಗರವೂ ಇಲ್ಲದೆ ಅಲ್ಪತೃಪ್ತರಾಗಿ ಬರಿಗಾಲಿನಲ್ಲಿ ನಡೆದ ದಿನಗಳ ಕೊಟ್ಟ ಬಿಡುವನ್ನು,
ಸಮಾಧಾನವನ್ನು, ಅಲ್ಪ ನಿರೀಕ್ಷೆಯ ಸಾವಕಾಶದ ಮನಸ್ಸನ್ನು, ಅನ್ ಲಿಮಿಟೆಡ್ ಇಂಟರ್ನೆಟ್ಟು,
ಮಾಲುಗಳು, ಆನ್ ಲೈನ್ ಫುಡ್ ಡೆಲಿವರಿ ಸಂಸ್ಥೆಗಳು, ಚಿಟಿಕೆ ಹೊಡೆಯುವದರಲ್ಲಿ ವ್ಯವಹಾರ
ಕುದುರಿಸುವ ವೆಬ್ ಸೈಟುಗಳು ನೀಡುತ್ತಿವೆಯಾ ಯೋಚಿಸಿ. 40-50 ವರ್ಷ ಪ್ರಾಯ ದಾಟಿದವರಿಗೆ ಖಂಡಿತಾ
ಉತ್ತರ ಸಿಗುತ್ತದೆ. ಸಿಕ್ಕರೆ ನನ್ನ ಕಮೆಂಟ್ ಬಾಕ್ಸಿನಲ್ಲಿ ಅದನ್ನು ಹಂಚಿಕೊಳ್ಳಿ.
ಓದದೇ ಲೈಕು ಮಾಡುವ, ಅರ್ಥ ಮಾಡಿಕೊಳ್ಳದೇ ಹೊಗಳುವ,
ತೆಗಳುವ, ಶೇರು ಮಾಡುವವರೂ ಇರುವ ಜಗತ್ತಿನಲ್ಲಿ ವಿಪರೀತ ಹೋಲಿಕೆ ಮಾಡುವುದು, ವಿಪರೀತ ನಿರೀಕ್ಷೆ
ಮಾಡುವುದೇ ಸಮಕಾಲೀನರಾಗಲು ಆಗುತ್ತಿರುವ ಅಡ್ಡಿ ಅಂತ ನನ್ನ ಭಾವನೆ!
-ಕೃಷ್ಣಮೋಹನ ತಲೆಂಗಳ
28.05.2021.
No comments:
Post a Comment