ಬಸ್ಸಿಗೇ ಬಂದು ಚಿತ್ತುಪುಳಿ, ಕಸ್ತೂರಿ ಮಾತ್ರೆ ಮಾರುವವರು ಎಲ್ಲಿಗೆ ಹೋಗಿದ್ದಾರೆ?!

 

AI IMAGE


ನಮ್ಮ ಬಾಲ್ಯದಲ್ಲಿ ಮುಖ್ಯ ಮುಖ್ಯ ಬಸ್ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಬಸ್ಸುಗಳು ನಿಂತಿರುವಾಗ ಕಸ್ತೂರಿ ಮಾತ್ರೆ ಮಾರುವವರು  ಬರ್ತಾ ಇದ್ರು. ಅವರ ಮಾರಾಟದ ಶೈಲಿಯೇ ತುಂಬ ಗಮ್ಮತಿರ್ತಾ ಇತ್ತು. ಕೆಲವೆರೆಗೆ ಕಕ್ಯೆರೆ ಬರ್ಪುಂಡು, ಬಂಜಿಬೇನೆ ಆಪುಂಡು, ತಿಗಲೆ ಉರಿ ಬರ್ಪುಂಡು... ಅಂಚಿನಕ್ಲೆಗ್ ಮಾತ್ರ ಭಾರೀ ಎಡ್ಡೆ (ಕೆಲವರಿಗೆ ವಾಂತಿ ಬರ್ತದೆ, ಹೊಟ್ಟೆನೋವು ಆಗ್ತದೆ, ಎದೆ ಉರಿ ಬರುತ್ತದೆ, ಅಂಥವರಿಗೆಲ್ಲ ಈ ಗುಳಿಗೆ ಭಾರಿ ಉತ್ತಮ) ಅಂತ ರಾಗವಾಗಿ, ಮನಮುಟ್ಟುವ ರೀತಿ ಹೇಳುವುದು ಮಾತ್ರವಲ್ಲ, ವಿಶೇಷ ರೀತಿಯ ಬ್ಯಾಗಿನಿಂದ ಒಂದು ಪುಟ್ಟ ಹೋಮಿಯೋಪಥಿ ಮದ್ದು ಕೊಡುವ ಗಾತ್ರದ ಶೀಷೆಯಿಂದ ಸ್ಯಾಂಪಲ್ ಗೆ ಅಂತ ಒಂದೊಂದು ಮಾತ್ರ ಇಡೀ ಬಸ್ಸಿನಲ್ಲಿ ಹಂಚುತ್ತಾ ಹೋಗುತ್ತಿದ್ದರು. ನೆಕ್ಕ್ ಕಾಸ್ ಕೊರೋಡುಂದು ಇಜ್ಜಿ, ಫ್ರೀ ಅಂತ ಬೇರೆ. ಅವರ ಮಾತಿನ ಮೋಡಿ, ಮಾತಿನ ಓಘ, ಆತ್ಮವಿಶ್ವಾಸ ನೋಡಿಯೇ ಅಮ್ಮಂದ್ರು, ಅಜ್ಜಿಯಂದ್ರೆಲ್ಲ ಚಿಲ್ಲರೆ ಕೊಟ್ಟು (ದರ ನೆನಪಿಲ್ಲ) ಕಸ್ತೂರಿ ಮಾತ್ರ ತಕೊಳ್ತಾ ಇದ್ರು. ಇದು ಬಸ್ಸಿನಲ್ಲೇ ನಡೆಯುವ ವ್ಯಾಪಾರ. ಆ ಬಸ್ ಹೊರಟ ಮೇಲೆ ಅವರು ಇನ್ನೊಂದು ಬಸ್ಸಿಗೆ ಹತ್ತುತ್ತಾರೆ. ಅಲ್ಲಿ ಎಂಜಿನ್ ಬಾಕ್ಸ್ ಸಮೀಪ ನಿಂತು ಮಾತಾಡ್ತಾ, ಜನರ ಮನ ಗೆಲ್ತಾ... ಇದೇ ಮಾರುಕಟ್ಟೆ ತಂತ್ರ, ವ್ಯಾಪಾರ... ಒಂಥರ ಗಮ್ಮತಿತ್ತು. ಕಸ್ತೂರಿ ಮಾತ್ರೆ ಮಾರುವವರ ಬ್ಯಾಗ್ ಅಂತಲೇ ಜನಮಾನಸದಲ್ಲಿ ಅವರ ಬ್ಯಾಗ್ ಪ್ರಸಿದ್ಧವಾಗಿತ್ತು.

ವಿಟ್ಲ, ಕುಂಬಳೆ, ಬಿಸಿ ರೋಡ್, ಮೇಲ್ಕಾರ್, ಪಾಣೇರ್, ಪೆರ್ಲ, ಬದಿಯಡ್ಕ, ಕಾರ್ಕಳ, ಉಪ್ಪಿನಂಗಡಿ, ತೊಕ್ಕೊಟ್ಟು, ಬಂದ್ಯೋಡು, ಉಪ್ಪಳ, ಮೂಡುಬಿದಿರೆ, ಹಂಪನಕಟ್ಟೆಬಸ್ ಸ್ಟ್ಯಾಂಡ್ ಮತ್ತಿತರ ಕಡೆ ಬಸುಗಳ ಲಾಸ್ಟ್ ಸ್ಟಾಪ್ ಅಥವಾ ಪಜೆ ಹಾಕುವಂಥಹ ಜಂಕ್ಷನ್ ಸ್ಟಾಪುಗಳಲ್ಲಿ ಇಂತಹ ಬಸ್ ಸ್ಟ್ಯಾಂಡ್ ವ್ಯಾಪಾರಿಗಳ ಜೀವನ ಸಾಗುತ್ತಿತ್ತು... ಕುಂಬಳೆಯಲ್ಲಂತೂ ವೃತ್ತಾಕಾರದ ತಟ್ಟೆಯಲ್ಲಿ ಕರಬೂಜದ ಹಣ್ಣು ಕೊಯ್ದು ಆಕರ್ಷಕವಾಗಿ ಜೋಡಿಸಿಟ್ಟು ಬತ್ತಕ್ಕಾ.. ಬತ್ತಕ್ಕಾ... ಅಂತ ಮಾರುತ್ತಿದ್ದರು. ಮತ್ತೆ ಚಿತ್ತುಪುಳಿ... ಚಿತ್ತುಪುಳಿ (ಆರೆಂಜ್), ಮತ್ತೆಂಥದ್ದೋ ಮಿಠಾಯಿ (ಎಂಜಿ ಮಿಠಾಯಿ ಹಾಗೇನೋ ಹೇಳುತ್ತಿದ್ದರು) ಮಾರುತ್ತಿದ್ದದ್ದೂ ಇತ್ತು. ರಶ್ ಆಗಿ ತುಂಬಿ ತುಳುಕುತ್ತಿದ್ದ ಬಸ್ಸಿನಿಂದ ಇಳಿದು ಅಂಗಡಿಗೆ ಹೋಗಿ ಮಿಠಾಯಿಯೋ, ಹಣ್ಣೋ ತರಲು ಪುರುಸೊತ್ತಿಲ್ಲದ ಅಮ್ಮಂದಿರಿಗೆ ಇಂತಹ ವ್ಯಾಪಾರಿಗಳೇ ಮರಭೂಮಿಯ ಮರೀಚಿಕೆಗಳು. ಕೂತಲ್ಲಿಗೆ ತಂದು ಮಾರುತ್ತಾರಲ್ವ... ಮತ್ತೊಂದು ಮಿತಿಯೂ ಇತ್ತು. ಮಕ್ಕಳೆದುರು ಬಂದು ಮಿಠಾಯಿ ಬೇಕ, ಕ್ಯಾಂಡಿ ಬೇಕ, ಪೆಪ್ಸಿ ಬೇಕಾ ಅಂತ ಕೇಳಿದಾಗ ಮಕ್ಕಳಿಗೆ ಆಸೆಯಾಗಿ ಅವರು ಕೂಗಿ, ಅಮ್ಮನಿಗೆ ಹೊಡೆದು ಬಡಿದು ಅದನ್ನು ಖರೀದಿಸುವಂತೆ ಮಾಡುವುದೂ ಅಮ್ಮಂದಿರಿಗೆ ತಲೆನೋವಾಗಿತ್ತು.

ವಿಟ್ಲದಲ್ಲಿ ಒಬ್ಬರು ವ್ಯಾಪಾರಿ ಬರ್ತಾ ಇದ್ರು... ಯಾರಿಗೆ ಒಂದೊಂದು ರುಪಾಯಿ.... ಅಂತ ಹೇಳುವುದು. ಅವರ ಮಾತಿನ ಅರ್ಥ ಅವರು ಮಾರುವ ಪೇರಳೆ ಹಣ್ಣಿಗೆ ಒಂದು ರುಪಾಯಿ ಅಂತ. ಆದರೂ ಅದು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುತ್ತಿತ್ತು. ಆಗ ವಿಟ್ಲ ಭಯಂಕರ ಜಂಕ್ಷನ್. ಅಲ್ಲಿ ಸಾಕಷ್ಟು ಬಸ್ ವ್ಯಾಪಾರಿಗಳು ಬರ್ತಾ ಇದ್ರು (ಸುಮಾರು 35-40 ವರ್ಷ ಹಿಂದೆ). ಪೇರಳೆ, ಆರೆಂಜ್, ಐಸ್ ಕ್ಯಾಂಡಿ, ಪೆಪ್ಸಿ (ಚೀಪುವ ಕ್ಯಾಂಡಿ, ತೊಟ್ಟೆಯೊಳಗೆ ಇರುವುದು), ಲಾಲಿ (ದೂದ್ ಕ್ಯಾಂಡಿ), ಕಸ್ತೂರಿ ಮಾತ್ರೆ ಸಹಿತ ಏನೇನೋ ವ್ಯಾಪಾರಕ್ಕೆ ಬಸ್ಸಿಗೇ ಬರ್ತಾ ಇತ್ತು. ಚೀಲದಲ್ಲಿ, ಡಬ್ಬದಲ್ಲಿ, ಜೋಳಿಗೆಯಲ್ಲಿ ತರುವ ವಸ್ತುಗಳೇ ಬಸ್ಸೇರಿದ ತಕ್ಷಣ ಮಾರಾಟದ ಸರಕಾಗುತ್ತಿದ್ದವು. ಪೇರಳೆ, ನೇರಳೆ, ಮುಸುಂಬಿ, ಮಾವು ಸಹಿತ ಸೀಸನಲ್ ಹಣ್ಣುಗಳೇ ಅವರ ಮಾರಾಟದ ವಸ್ತುಗಳು. ಮಾರುಕಟ್ಟೆಯಲ್ಲಿ ಹೋಲ್ ಸೇಲ್ ದರದಲ್ಲಿ ಕೊಂಡು ತಂದು ಸಣ್ಣ ಮಾರ್ಜಿನ್ ಇರಿಸಿ ಬಸ್ಸಿನಲ್ಲಿ, ಬಸ್ ಸ್ಟ್ಯಾಂಡಿನಲ್ಲಿ ಮಾರುವುದು. ಅದೂ ಒಂದು ಕಲೆಯೇ ಸರಿ. ಅದರಲ್ಲೂ ಚೊರೆ ಮಾಡಿ ಜನ ರೇಟು ಕಡಿಮೆ ಮಾಡ್ಲಿಕಾಗ್ತದ ಅಂತ ಪ್ರಯತ್ನಿಸ್ತಾ ದ್ರು. ಮತ್ತೆ ಇದೇ ವ್ಯಾಪಾರಿಗಳು ನೆಕ್ಸ್ಟ್ ಬಸ್ ಎಷ್ಟೊತ್ತಿಗೆ, ಯಾವ ರೂಟು, ಎಲ್ಲಿ ಕಾಯಬಹುದು, ಕೂರಬಹುದು ಅಂತೆಲ್ಲ ಪ್ರಯಾಣಿಕ ಸ್ನೇಹಿ ಸಲಹೆಗಳನ್ನು ಕೊಟ್ಟು ಜನರ ಮನ ಗೆಲ್ಲುತ್ತಿದ್ದರು...


ವಿಟ್ಲದಲ್ಲಿ ಉದಯವಾಣಿ ಪೇಪರ್ ಮಾರುವವರೊಬ್ಬರಿದ್ರು‌‌‌. ಇಡೀ ದಿನ ಉದಯವಾಣಿ ಬಂಟಲ್ ಹಿಡ್ಕೊಂಡು ಆ ಉದಾಣಿ.... ಉದಾಣಿ ಅಂತ ಹೇಳ್ತಿದ್ರು!


ಬದಿಯಡ್ಕದಲ್ಲು ಅರೆಬರೆ ಕನ್ನಡದಲ್ಲಿ "ಆ ಯಾರಿಕ್ಕೇ ಕಾರವಲ್.... ಉತ್ತರದೇಶಂ... ಅಂತ ಹೇಳ್ತಾ ಓಡಾಡ್ತಾ ಇದ್ರು....

ಓಮಸತ್ವ.... ತ್ಯಾಂಪಣ್ಣ ಭಂಡಾರಿ ಎಣ್ಣೆ ಮಾರುವವರಿಗೂ ಕೊರತೆ ಇರ್ಲಿಲ್ಲ!



ಆಗ ಪೆಕ್ಸಿ, ಕೋಕಾ ಕೋಲ ಮಾರುಕಟ್ಟೆಗೆ ಪೂರ್ಣ ಪ್ರಮಾಣದಲ್ಲಿ ಬಂದಿರಲಿಲ್ಲ. ಮಿನರಲ್ ವಾಟರ್ ಅಂದರೆ ಏನೂಂತ ನಮಗೆ ಗೊತ್ತಿರಲಿಲ್ಲ. ಮೊಬೈಲ್ ಕಂಡಿರಲಿಲ್ಲ. ಆನ್ ಲೈನ್ ಟ್ರೇಡಿಂಗ್ ಕಲ್ಪನೆಯೇ ಇರಲಿಲ್ಲ. ಎಟಿಎಂ, ಡೆಬಿಟ್ ಕಾರ್ಡಿನ ಬಗ್ಗೆ ಊಹೆಯೂ ಇರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಕಂಡದ್ದು, ಕಂಡಲ್ಲಿಗೆ ಹೋಗಿ ಖರೀದಿಸುವಷ್ಟು ಜೇಬಿನಲ್ಲಿ ದುಡ್ಡೇ ಇರಲಿಲ್ಲ. ಹಾಗಾಗಿ ಇಂತಹ ಪುಟ್ಟ ಪುಟ್ಟ ವ್ಯಾಪಾರಿಗಳು ಕುಳಿತಲ್ಲಿದೇ ಬಂದು ಮಾರುವ ಚಿಲ್ಲರೆ ಕಾಸಿನಲ್ಲಿ ನಡೆಯುವ ವ್ಯಾಪಾರಕ್ಕೆ ಮರ್ಯಾದೆ ಇತ್ತು, ಜನರೂ ವ್ಯವಹಾರ ಮಾಡುತ್ತಿದ್ದರು. ಅವರ ಬದುಕೂ ಸಾಗುತ್ತಿತ್ತು. ಅದರ ಹಿಂದಿನ ಗುಣಮಟ್ಟ, ವ್ಯಾಪಾರ ತಂತ್ರ, ವ್ಯವಹಾರದ ಪ್ರಮಾಣಗಳ ಬಗ್ಗೆ ಯಾರೂ ತಲೆಕೆಡಿಸಬೇಕಾದಷ್ಟರ ಮಟ್ಟಿಗೆ ಆಗ ಜಗತ್ತು ಹಾಳಾಗಿರಲಿಲ್ಲ.

ತೀರಾ ಇತ್ತೀಚೆಗೆ ಮೇಲ್ಕಾರ್ ಜಂಕ್ಷನಿನಲ್ಲಿ

ವ್ಯಾಪಾರಿಯೊಬ್ಬರು ರಸವತ್ತಾಗಿ ವಿವರಿಸಿ ಉಪ್ಪಿನಕಾಯಿ ವ್ಯಾಪಾರ ಮಾಡುವುದು ನೋಡಿದ್ದೆ ಬಿಟ್ಟರೆ ಈಗ ಹಿಂದಿನಷ್ಟು ಪ್ರಮಾಣದಲ್ಲಿ ಚಿತ್ತುಪುಳಿ, ಕಸ್ತೂರಿ ಮಾತ್ರೆ, ಕ್ಯಾಂಡಿ, ಲಾಲಿ, ದೂದ್ ಬಸ್ಸುಗಳಿಗೇ ಬಂದು ಮಾರುವವರು, ಕೊಳ್ಳುವವರು ಇದ್ದಾರ ಅಂತ ನನಗೆ ಸರಿಯಾಗಿ ಗೊತ್ತಿಲ್ಲ. ಒಂದು ವೇಳೆ ಇದ್ದರೂ ಈಗ ಚಿಲ್ಲರೆ ನಾಣ್ಯಗಳು ಚಲಾವಣೆ ಆಗಲಿಕ್ಕಿಲ್ಲ. ಜಿಪೇ ಮಾಡಿಯಾರು. ಯಾಕೆಂದರೆ ಮಾರುವವರು, ಕೊಳ್ಳುವವರು ಹಾಗೂ ಇಬ್ಬರ  ಮನಸುಗಲೂ ಈಗ ಡಿಜಿಟಲ್ ಆಗಿದೆ. ಆ ದಿನಗಳು ಖಂಡಿತಾ ಮರೆಯಾಗಿವೆ...ಆ ಖುಷಿ, ಚತುರ ಮಾರಾಟಗಾರರು, ಮುಗ್ಧ ಗ್ರಾಹಕರ ನಡುವಿನ ಚಂದದ ಸಂವಹನ ಸಹ ಈಗ ಇಲ್ಲವಾಗಿದೆ. ಇದು ಸಿಸಿ ಕ್ಯಾಮೆರಾ, ಥಂಬ್ ಯುಗ. ಇಲ್ಲಿ ಸಾವಿರ ಸಾವಿರ ರೀತಿಯ ಪರೀಕ್ಷೆ ತಂತ್ರಗಳು ಬಂದರೂ ನಾವು ಮೋಸ ಹೋಗುತ್ತಲೇ ಇರುತ್ತೇವೆ. ಖರೀದಿಯಲ್ಲಿ ಆಗಿರುತ್ತಿದ್ದ ಸಮಾಧಾನವೇ ಕಾಣುವುದಿಲ್ಲ. ಏನಂತೀರಿ?

-ಕೃಷ್ಣಮೋಹನ ತಲೆಂಗಳ (25.03.2026)

No comments:

Popular Posts