ರಿಪ್ಲೈಗೂ ಪುರ್ಸೊತ್ತಿಲ್ವ.....!!!!



ಒಂದು ಕಾಲ ಇತ್ತು... ಆತ್ಮೀಯರೊಬ್ಬರನ್ನು ಸಂಪರ್ಕಿಸಲು ಪತ್ರ ಬರೆದು, ಆ ಪತ್ರ ಅವರಿಗೆ ಸಿಕ್ಕಿ, ಉತ್ತರಿಸಿ ಪೋಸ್ಟ್ ಮಾಡಿ ಮತ್ತೆ ಅಂಚೆಯಲ್ಲಿ ಕೈ ಸೇರಲು 10-15 ದಿನ ಬೇಕಾಗುತ್ತಿತ್ತು. ಒಬ್ಬರು ಮೃತಪಟ್ಟರೆ, ಅವರ ಉತ್ತರಕ್ರಿಯೆ ವೇಳೆಗೆ ಅದರ ಆಮಂತ್ರಣ ಸಿಕ್ಕಿಯೇ ಸಾವಿನ ಸುದ್ದಿ ಗೊತ್ತಾಗುತ್ತಿತ್ತು. ಇನ್ನು ಲ್ಯಾಂಡ್ ಲೈನ್ ಫೋನ್, ಎಸ್ಎಂಎಸ್ ಇತ್ಯಾದಿಗಳೆಲ್ಲಾ...ಕನಸಿನ ಮಾತು....
ಅದನ್ನೆಲ್ಲಾ ದಾಟಿ ಇಂದು ಅದ್ಭುತ ಸಂವಹನ ಜಗತ್ತಿನಲ್ಲಿ ನಾವಿದ್ದೇವೆ. ಇಂದು ಯಾರು ಯಾರಿಂದಲೂ ಭಾವನಾತ್ಮಕವಾಗಿ ದೂರವಾಗುವ ಪ್ರಶ್ನೇಯೇ ಇಲ್ಲ. ದೈಹಿಕವಾಗಿ ದೂರ ಹೋಗಬಹುದಷ್ಟೇ ಆದರೂ ಈಗೀಗ ವಾಟ್ಸಾಪ್ನಲ್ಲೋ...ಹ್ಯಾಂಗೌಟ್ ನಲ್ಲೋ ಎಸ್ಎಂಎಸ್ನಲ್ಲೋ ಕಳುಹಿಸಿದ ಸಂದೇಶಗಳಿಗೆ ಜಸ್ಟ್ ಓಕೆ ಅನ್ನಲು ನಮಗೆ ಪುರುಸೊತ್ತಿಲ್ಲ....



----------------
ಹೌದಲ್ವೇ... ವಾಟ್ಸಾಪ್ನಲ್ಲೋ, ಎಸ್ಎಂಎಸ್ ನಲ್ಲಿ ಯಾರಾದರೂ ಸಂದೇಶ ಕಳುಹಿಸಿರುತ್ತೇವೆ. ಅದನ್ನು ಅವರು ಓದಿಯೂ ಇರುತ್ತಾರೆ (ಅದನ್ನು ತಿಳಿಯಲು ವಾಟ್ಸಾಪ್ನಲ್ಲಿ ವ್ಯವಸ್ಥೆ ಇದೆ). ಆದರೆ, ಸಂದೇಶ ಓದಿ ಗಂಟೆಗಳು ಕಳೆದರೂ, ದಿನಗಳು ಉರುಳಿದರೂ ಕೆಲವರಿಗೆ ಪುರುಸೊತ್ತೇ ಇರುವುದಿಲ್ಲ....
ನಿಜ, ಪ್ರತಿಯೊಬ್ಬರಿಗೂ ಅವರದೇ ಆದ ತಾಪತ್ರಯ, ಸಮಸ್ಯೆ, ಬ್ಯುಸಿ ಜೀವನ ಎಲ್ಲಾ ಇರುತ್ತದೆ. ಆದರೂ ಕೆಲವು ವಿಚಾರಗಳಿಗೆ ಪುರುಸೊತ್ತಿಲ್ಲ ಎಂದು ಕೈಚೆಲ್ಲುತ್ತೇವೆ. ಕೂಲಂಕಷವಾಗಿ ನೋಡಿದರೆ, ಒಂದು ಸಂದೇಶಕ್ಕೆ ಪ್ರತಿ ಸಂದೇಶ ನೀಡಲೂ ಪುರುಸೊತ್ತಿಲ್ಲದ ಘನ ಕಾರ್ಯ ಜನಸಾಮಾನ್ಯರೆನಿಸಿದ ಯಾರಿಗೂ ಇರದು....
ಒಪ್ಪಿಕೊಳ್ಳುತ್ತೇನೆ.... ಪುರುಸೊತ್ತಿಲ್ಲದೆ ದುಡಿಯುವವರು ನಮ್ಮ ನಡುವೆ ಇದ್ದಾರೆ. ಆದರೆ, ಉತ್ತರಿಸದೇ ಇರುವ ಎಲ್ಲರೂ ಬ್ಯುಸಿ ಅಂತಲೇ ಅಂದುಕೊಂಡರೆ ಅದು ಖಂಡಿತಾ ನಿಜವಗಾದು.
ಹೌದು, ಮತ್ತೆ ಕೆಲವರು ಹೇಳುತ್ತಾರೆ ವಾಟ್ಸಾಪ್ನಲ್ಲಿ ಹತ್ತಾರು ಗುಂಪುಗಳು, ಜೊತೆಗೆ ಫೇಸ್ ಬುಕ್ ಟ್ಯಾಗ್ ಗಳು, ಹ್ಯಾಂಗೌಟ್, ಮೆಸೆಂಜರ್, ಹೈಕ್.... ಹೀಗೆ... ಹೈರಾಣಾಗಿ ಹೋಗಿದ್ದೇನೆ. ಯಾವುದನ್ನು ನೋಡುವುದು ಬಿಡುವುದು ಅಂತ ಗೊತ್ತಾಗುವುದಿಲ್ಲ ಅಂತ. ನಿಜವಿರಬಹುದು. ಆದರೆ ನಿಮ್ಮ ಆತ್ಮೀಯರೆನಿಸಿಕೊಂಡವರೊಬ್ಬರ ಸಂದೇಶಕ್ಕೆ ಉತ್ತರಿಸಲೂ ಆಗದಿದ್ದರೆ ಅಂತಹ ತಂತ್ರಜ್ಞಾನವಾದರೂ ಯಾಕೆ ಬೇಕು....
ವಾಟ್ಸಾಪ್, ಹೈಕ್...ನಂತಹದ್ದು ಬಂದ ಮೇಲೆ ಸಂದೇಶ ಸಾಗಾಟ ಕ್ಷಿಪ್ರವಾಗಿ ಆಗಲು ಅನುಕೂಲ ಕಲ್ಪಿಸಿದೆ. ಆದರೆ ಸಂದೇಶ ವಾಹಕಗಳೇ ಟ್ರಾಫಿಕ್ ಜಾಂ ಸೃಷ್ಟಿಸಿ ಸಂಬಂಧಗಳನ್ನು ಮತ್ತಷ್ಟು ಕ್ಲಿಷ್ಟವಾಗಿಸಿದೆಯೋ, ಮನುಷ್ಯತ್ವವನ್ನು ಜಾಲಾಡಿ ಬಿಡುತ್ತದೋ ಗೊಂದಲವಾಗುತ್ತಿದೆ....
ಇಂದು ಶಾಲೆ ಕಾಲೇಜ್ ಬಿಡುವಾಗ ಆಟೋಗ್ರಾಫ್ ಬರೆಯಬೇಕೆಂದಿಲ್ಲ. ಯಾಕೆಂದರೆ, ಕೈಯಲ್ಲಿ ಮೊಬೈಲ್ ಇರುವಾಗ ಯಾರು ಯಾರಿಂದಲೂ ದೂರವಾಗುವ ಪ್ರಶ್ನೆಯಿಲ್ಲ... ಅಂಚೆ ವಿಳಾಸ, ಮನೆ ನಂಬರ್ ಬರೆದಿಟ್ಟು ಸಂಪರ್ಕಿಸಬೇಕೆಂದಿಲ್ಲ. ಕ್ಷಣ ಕ್ಷಣಕ್ಕೂ ಸಂದೇಶಗಳನ್ನು ಕಳುಹಿಸಿಕೊಂಡು ಸಂಪರ್ಕದಲ್ಲಿರಬಹುದು. ಜಗತ್ತು ನಮ್ಮನ್ನು ಅಷ್ಟು ಹತ್ತಿರವಾಗಿಸಿದೆ. ಆದರೆ, ನೆನಪಿಟ್ಟುಕೊಳ್ಳಿ ಸಂಪರ್ಕ ವಾಹಕ ಜಾಸ್ತಿಯಾಗಿದೆ ಹೊರತು ಅದನ್ನು ಬೆಸೆಯುವ ಮನಸ್ಸುಗಳಲ್ಲ...
ಯಾಕೆಂದರೆ ಸಂದೇಶಗಳು, ವಿಡಿಯೋ ಕ್ಲಿಪ್ಗಗಳ ಭರಾಟೆಯಲ್ಲಿ ನಮ್ಮ ಸೂಕ್ಷ್ಮ ಸಂವೇದನೆ, ಸ್ಪಂದಿಸುವ ಗುಣ, ಮಿಡಿಯುವ ಅಂತಃಕರಣವೇ ಮಾಯಾಗುತ್ತದೆಯೆಂದರೇ ಅಂತಹ ಸಂಪರ್ಕ ಮಾಧ್ಯಮದ ಪ್ರಯೋಜನವಾದರೂ ಏನು...
----------
ಒಂದು ವಿಷಯ ನೆನಪಿಟ್ಟುಕೊಳ್ಳಿ ಯಾರೋ ನಿಮಗೆ ಸಂದೇಶ ಕಳುಹಿಸುತ್ತಾರೆ, ವಿಶ್ ಮಾಡುತ್ತಾರೆ ಎಂದರೆ, ನಿಮಗೋಸ್ಕರ ಅಷ್ಟು ಸಮಯ ಅವರು ಮೀಸಲಿಟ್ಟಿದ್ದಾರೆ ಎಂದರ್ಥ. ಅದಕ್ಕೆ ಕನಿಷ್ಠ ಓಕೆ, ಹಾಯ್, ಹೌದು, ಇಲ್ಲ.... ಎಂದೂ ಉತ್ತರಿಸಲು ನಾವು ಉದಾಸೀನ ಮಾಡಿದರೆ, ಅಥವಾ ಸಂದೇಶ ಬಂದು ಗಂಟೆಗಳು ಕಳೆದರೂ ನಾವದಕ್ಕೆ ಸ್ಪಂದನೆಯೇ ನೀಡದಿದ್ದರೆ... ಸಂದೇಶ ಕಳುಹಿಸಿದವರು ಏನೆಂದುಕೊಳ್ಳಬೇಕು.
--------
 ಸಾಮಾಜಿಕ ತಾಣದಲ್ಲಿ ದಟ್ಟಣೆಯಲ್ಲಿ ನಾವು ಕಳದುಹೋಗಬಾರದು. ಅವುಗಳು ನಮ್ಮನ್ನು ನಿಯಂತ್ರಿಸದಿರಲಿ... ನಾವೇ ಬೇಕಾದಷ್ಟು ಬಳಸಿಕೊಂಡರೆ ಸಾಕು... ಸಾಮಾಜಿಕ ತಾಣಗಳು ಸ್ಪಂದಿಸುವ ಮನಸ್ಸುಗಳನ್ನು ಯಂತ್ರವಾಗಿಸದಿರಲಿ.... ಸಂಬಂಧಗಳನ್ನು ಯಾಂತ್ರಿಕವಾಗಿ ನೋಡದಿರಲಿ....
ಎಲ್ಲಾ ಸಂದೇಶಗಳು ಒಂದೇ, ಉತ್ತರಿಸದರೆಷ್ಟು, ಬಿಟ್ಟರೆಷ್ಟು.... ಯಾರು ನೋಡ್ತಾರೆ ಎಂಬ ಉಡಾಫೆ ಬೇಡ. ಸಂದೇಶ ಕಳುಹಿಸಿ ಉತ್ತರಕ್ಕೆ ಕಾಯುವ ಎಷ್ಟೋ ಮನಸ್ಸುಗಳೂ ಇರುತ್ತವೆ. ಎಲ್ಲರನ್ನೂ 10ರಲ್ಲಿ 11ರನೆಯವರಾಗಿ ನೋಡುವ ಜಡ್ಡುಗಟ್ಟಿದ ಮನೋಭಾವ ಬೇಡ....
ಮತ್ಯಾಕೆ ತಡ... ಮೊಬೈಲ್ ತೆರೆದು, ಎಷ್ಟೋ ದಿನದಿಂದ ಉತ್ತರಿಸದೇ ಬಿಟ್ಟ ಸಂದೇಶಗಳಿಗೆ ಒಂದು ಉತ್ತರ ಕೊಟ್ಟು ಗತಿ ಕಾಣಿಸುವ ಪ್ರಯತ್ನ ಮಾಡಿ ಅಲ್ಲ....

No comments: