ಹನಿ ಹನಿ ಸೇರಿ ಯಕ್ಷಸರೋವರವಾದ ಖುಷಿಗೆ ವರ್ಷದ ಸಂಭ್ರಮ....



BALLIRENAYYA FIRST GROUP

BALLIRENAYYA SECOND GROUP

ಕರಾವಳಿ ಮಾತ್ರವಲ್ಲ, ಕರಾವಳಿಯಿಂದ ಹೋಗಿ ಪರವೂರುಗಳಲ್ಲಿ ನೆಲೆಸಿದವರಲ್ಲೂ ಅಪಾರ ಯಕ್ಷಗಾನಾಭಿಮಾನಿಗಳಿದ್ದಾರೆ. ಮಂಗಳೂರು ಪರಿಸರದಲ್ಲಿ ಪ್ರತಿದಿನ ಎಂಬಂತೆ ಬಯಲಾಟಗಳು ಆಗುತ್ತಲೇ ಇರುತ್ತದೆ. ಅಂದಂದಿನ ಬಯಲಾಟಗಳಿಗೆ ಹೋಗುವ ಮಾಹಿತಿಯನ್ನು ನಾಲ್ಕೈದು ಮಂದಿ ಸಮಾನಮನಸ್ಕ ಸ್ನೇಹಿತರೊಂದಿಗೆ ಶೇರ್ ಮಾಡಲು (ಕರಾವಳಿಯಲ್ಲಿ ಯಕ್ಷಗಗಾನ ಸೀಸನ್ ನವೆಂಬರ್ ನಡುವಿನಿಂದ ಮೇ ಕೊನೆಯಾರ್ಧದ ವರೆಗೆ) ಒಂದು ವಾಟ್ಸಾಪ್ ಗ್ರೂಪ್ ಆರಂಭಿಸಿದೆ. ಉದ್ದೇಶ ಇಷ್ಟೆ, ಇವತ್ತು ಎಲ್ಲಿ ಬಯಲಾಟ ನಡೆಯುತ್ತದೆ, ಯಾರೆಲ್ಲಾ ಹೋಗುತ್ತೀರಿ ಎಂತ ಕೇಳೋದು ಅಷ್ಟೆ. ವಾಟ್ಸಾಪ್ ಗ್ರೂಪ್ ಆದರೆ, ಒಂದೇ ಕ್ಲಿಕ್ ಗೆ ಎಲ್ಲರಿಗೂ ಮೆಸೇಜ್ ಹೋಗುತ್ತದೆ ಎಂಬ ಉದ್ದೇಶ ಅಷ್ಟೆ...

ಆ ಹೊತ್ತಿಗಾಗಲೇ ಇನ್ನೂ ಕೆಲವು ಯಕ್ಷಗಾನ ವಾಟ್ಸಾಪ್ ಗ್ರೂಪ್ ಗಳು ಚಾಲ್ತಿಯಲ್ಲಿದ್ದವು, ಆದರೆ ನನಗಷ್ಟು ಮಾಹಿತಿ ಇರಲಿಲ್ಲ.

ದಿನಗಳೆದಂತೆ, ನನ್ನ ಸ್ನೇಹಿತರು ತಮ್ಮ ತಮ್ಮ ಸ್ನೇಹಿತರನ್ನೂ ಈ ಗ್ರೂಪ್ ಗೆ ಸೇರಿಸಲು ರೆಫರ್ ಮಾಡ್ತಾ ಹೋದ್ರು. 6-7 ಇದ್ದ ಸಂಖ್ಯೆ 30-50ಕ್ಕೆ ತಲುಪಿತು. ಇಷ್ಟು ಸ್ನೇಹಿತರು ತಮ್ಮ ಬಂಧುಗಳು, ಸ್ನೇಹಿತರು, ಸಹೋದ್ಯೋಗಿಗಳನ್ನೂ ಈ ಗ್ರೂಪಿಗೆ ಸೇರಿಸಲು ರೆಫರ್ ಮಾಡುತ್ತಾ ಹೋದರು. ಬೆಂಗಳೂರು, ಚೆನ್ನೈ, ಕೊಡಗು, ತುಮಕೂರು, ಕಾಸರಗೋಡು ಭಾಗದಿಂದಲೂ ಸ್ನೇಹಿತರು ಸೇರಿಕೊಂಡ್ರು (ವಾಟ್ಸಾಪ್ ಗೆ ಭಾಷೆ, ದೇಶ, ಜಾತಿಗಳ ಗಡಿ ಇಲ್ಲ, ಎಸ್ಟಿಡಿ, ಐಎಸ್ಡಿ ವ್ಯಾಪ್ತಿಯೂ ಅದಕ್ಕಿಲ್ಲ).

ಹೊಸದಾಗಿ ಸೇರ್ಪಡೆಗೊಂಡ ಸ್ನೇಹಿತರು ಆಟದ ಮಾಹಿತಿಯನ್ನಷ್ಟೇ ಹಂಚಿಕೊಂಡಿದ್ದಲ್ಲ. ತಾವು ನೋಡಿದ ಬಯಲಾಟದ ಫೋಟೊ, ವಿಡೀಯೋ, ಆಡಿಯೋಗಳನ್ನು ಶೇರ್ ಮಾಡಲು ಶುರು ಮಾಡಿದ್ರು, ಆಹ್ವಾನ ಪತ್ರಿಕೆ ಅಟಾಚ್ ಮಾಡ್ತಾ ಇದ್ರು. ಕಲಾವಿದರ ಬದಲಾವಣೆ, ಸೇರ್ಪಡೆ ಇತ್ಯಾದಿ ಮಾಹಿತಿಗಳೂ ಬರತೊಡಗಿದವು. ಒಂದು ದಿನ ವಾಟ್ಸಾಪ್ ಗ್ರೂಪಿನ 100ಕ್ಕೆ ನೂರೂ ಕ್ವೋಟಾ ಭರ್ತಿಯಾಗಿ ಧನ್ಯತಾ ಭಾವ ಮೂಡಿತು.

ಅಷ್ಟಕ್ಕೇ ನಿಲ್ಲಲಿಲ್ಲ...

ತಮ್ಮ ಸ್ನೇಹಿತರನ್ನು ಗ್ರೂಪಿಗೆ ಸೇರಿಸುವಂತೆ ಮತ್ತೂ ರಿಕ್ವೆಸ್ಟ್ ಗಳು ಬರತೊಡಗಿತು. ಯಾವ ಯಕ್ಷಗಾನ ಪ್ರೇಮಿಗಳಿಗೂ ಜಾಗವಿಲ್ಲ ಎನ್ನುವ ಮನಸ್ಸಾಗಲಿಲ್ಲ. ಇದೇ ಹೆಸರಿನಲ್ಲಿ (ಬಲ್ಲಿರೇನಯ್ಯ) ಎರಡನೇ ಗ್ರೂಪ್ ಶುರು ಮಾಡಲಾಯಿತು. ನಮ್ಮೊಳಗೇ ನಾಲ್ವರು ಸ್ನೇಹಿತರು ಎರಡೂ ಗುಂಪುಗಳಿಗೆ ಸಾಮಾನ್ಯ ಸದಸ್ಯರಾದೆವು. ಯಾವುದೇ ಭೇದವಿಲ್ಲದೆ, ಎರಡೂ ಗುಂಪುಗಳಲ್ಲಿ ಸಮಾನವಾಗಿ ಮಾಹಿತಿಗಳನ್ನು ವಿನಿಮಯ ಮಾಡತೊಡಗಿದೆವು. ಕಳೆದ ವರ್ಷ ಏಪ್ರಿಲ್ ವೇಳೆಗೆ ಶುರುವಾದ ಎರಡನೇ ಗ್ರೂಪಿನಲ್ಲಿ ಈಗ ಭರ್ತಿ 70 ಸದಸ್ಯರಿದ್ದೇವೆ. ನಾಲ್ವರು ಮಹಿಳಾ ಸದಸ್ಯರೂ ಇದ್ದಾರೆ. ಅವರಲ್ಲಿ ಇಬ್ಬರುು ಮಹಿಳಾ ಭಾಗವತರು. ಇಬ್ಬರು ಅಮೆರಿಕಾದಲ್ಲಿ ಉದ್ಯೋಗ ನಿಮಿತ್ತ ತೆರಳಿದ್ದಾರೆ....

ಈ ಗ್ರೂಪಿನ ಮೂಲಕ ನಾವೇನು ದೊಡ್ಡ ಸಾಧನೆಯನ್ನೋ, ಸಮಾಜ ಸೇವೆಯನ್ನೋ ಮಾಡಿದ್ದೇವೆ ಅಂತ ನಾನು ಹೇಳುತ್ತಿಲ್ಲ. ಸಮಾನ ಆಸಕ್ತಿ ಜನರನ್ನು ಹೇಗೆ ಒಟ್ಟು ಸೇರಿಸುತ್ತದೆ ಎಂದು ತಿಳಿದುಬಂತು. ಇಂದು ಸಾವಿರಾರು ವಾಟ್ಸಾಪ್ ಗ್ರೂಪುಗಳಿವೆ. ನಮ್ಮದು ಮಾತ್ರ ಡಿಫರೆಂಟ್ ಅಂತಲೂ ನಾನು ಹೇಳುತ್ತಿಲ್ಲ.

ಆದರೆ, ನಮ್ಮೊಳಗೊಂದು ಅಂಟರ್ ಸ್ಟ್ಯಾಂಡಿಂಗ್ ಇದೆ, ನಾವು ಗ್ರೂಪಿನ ಉದ್ದೇಶ ಹೊರತುಪಡಿಸಿ ಇನ್ಯಾವ ವಿಚಾರವನ್ನೂ ಮಾತನಾಡುದುವುದಿಲ್ಲ. ಯಾರ ಕುರಿತಾದ ವೈಯಕ್ತಿಕ ತೆಗಳಿಕೆಗೂ ಅವಕಾಶವಿಲ್ಲ. ಅವರವರ ಕೆಲಸದ ನಡುವೆಯೇ ಬಿಡುವು ಮಾಡಿಕೊಂಡು ಮಾಹಿತಿ ವಿನಿಮಯ ನಡೆಯುತ್ತದೆ. ಮಂಗಳೂರಿನ ಉರ್ವಾ ಮೈದಾನದಲ್ಲಿ ನಡೆಯುವ ಆಟದ ಲೈವ್ ಹಾಡುಗಳು, ಫೋಟೊಗಳನ್ನು ಬೆಂಗಳೂರೋ, ಮೈಸೂರೋ, ಅಮೆರಿಕಾವೋ ಎಲ್ಲೋ ಕುಳಿತ ಸ್ನೇಹಿತನಿಗೆ ನಮ್ಮ ಮೊಬೈಲ್ ನಲ್ಲೇ ಕಳುಹಿಸುತ್ತಿದ್ದೇವೆ ಅನ್ನುವುದೋ ರೋಮಾಂಚನದ ವಿಚಾರ.
ಮಾತ್ರವಲ್ಲ, ನಾವು ಪಡೆದ ಖುಷಿಯನ್ನು ಗುಂಪಿನ ಇತರ 99 ಮಂದಿಗೆ ಏಕಕಾಲಕ್ಕೆ ತಲುಪಿಸಿದ ಸಾರ್ಥಕತೆಯೂ ಮೂಡುತ್ತದೆ. ಗುಂಪಿನಲ್ಲಿ ಪಾಲ್ಗೊಂಡ ಬಳಿಕ ಯಕ್ಷಗಾನದ ಎಷ್ಟೋ ವಿಚಾರ ತಿಳಿಯಿತು. ಹಲವರ ಸಂಪರ್ಕ ಆಯಿತು. ಕಲಾವಿದರ ಕುರಿತು ಮಾಹಿತಿ ಸಿಕ್ಕಿತು....


ಅಪರೂಪಕ್ಕೊಮ್ಮೆ ಸೈದ್ಧಾಂತಿಕ ವಿಮರ್ಶೆ, ವಿಚಾರವಿನಿಮಯಗಳೂ ನಡೆಯುತ್ತಿವೆ. ಹಿರಿಯ, ಕಿರಿಯ ಸ್ನೇಹಿತರ ಪೈಕಿ ಹಲವರು ಸಕ್ರಿಯವಾಗಿ ಮಾಹಿತಿ ಶೇರ್ ಮಾಡಿದರೆ, ಸುಮಾರು ಅರ್ಧದಷ್ಟು ಮಂದಿ ಬಂದ ಹಾಡು, ವಿಡಿಯೋ ಮೌನವಾಗಿ ಡೌನ್ ಲೋಡ್ ಮಾಡಿ ಥಂಬ್ ರೈಸ್ ಮಾಡಿ ಪ್ರೋತ್ಸಾಹಿಸುತ್ತಾ ಇರುತ್ತಾರೆ....

ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಯಾರೂ ಗ್ರೂಪ್ ತ್ಯಜಿಸಿಲ್ಲ....
ಎಲ್ಲೋ ಗ್ರಾಮೀಣ ಭಾಗದಲ್ಲಿ ನಡೆಯುವ ಯಕ್ಷಗಾನಕ್ಕೆ ನಮ್ಮ ಗ್ರೂಪಿನಲ್ಲಿ ಹಂಚಿದ ಮಾಹಿತಿಯಿಂದ ಗ್ರೂಪಿನ ಶೇ.25 ಮಂದಿ ಸದಸ್ಯರು ತೆರಳಿದರೂ ಆ ಪ್ರದರ್ಶನಕ್ಕೆ ಸುಮಾರು 30-40 ಮಂದಿ ಪ್ರೇಕ್ಷಕರನ್ನು ಒದಗಿಸಿದ ಖುಷಿ ನಮಗಿರುತ್ತದೆ. ಅಷ್ಟರ ಮಟ್ಟಿಗೆ ಕಲೆಗೆ ಪ್ರೋತ್ಸಾಹ ನೀಡುವ ಸರಳ ಉದ್ದೇಶ ಗುಂಪಿನದ್ದು. 

ನ.7ರಂದು ನಮ್ಮ ಗುಂಪಿಗೆ ವರ್ಷ ತುಂಬಿದ ಖುಷಿಯಲ್ಲಿ ಗ್ರೂಪಿನಲ್ಲಿ ಶೇರ್ ಮಾಡಿದ ಬರಹದ ತುಣುಕು ಇದು.....



------------------------

ಎಲ್ಲಾ ಯಕ್ಷಕಲಾಭಿಮಾನಿಗಳಿಗೆ ವಂದನೆಗಳು.

ಸರಿಯಾಗಿ ಒಂದು ವರ್ಷದ ಹಿಂದೆ, 2014 ನ.7ರಂದು ಬಲ್ಲಿರೇನಯ್ಯ ವಾಟ್ಸಾಪ್ ಗ್ರೂಪ್ ಆರಂಭಿಸಲಾಯಿತು. ಅಂದು ಯಾವುದೇ ಗೊತ್ತು ಗುರಿ ಇಲ್ಲದೆ, ಯೋಜನೆ ಇಲ್ಲದ ಶುರು ಮಾಡಿದ ಗ್ರೂಪಿನಲ್ಲಿ (ಎರಡು ಗ್ರೂಪ್ ಗಳಲ್ಲಿ) ಇಂದು 170 ಸದಸ್ಯರಿದ್ದಾರೆ. ಗುಂಪಿಗೆ ಒಂದು ವರ್ಷ ತುಂಬಿದ ಖುಷಿಯಲ್ಲಿ ಈ ಪುಟ್ಟ ಬರಹ....

ಮಂಗಳೂರಿನಲ್ಲಿರುವ ಪತ್ರಕರ್ತ ಮಿತ್ರರೊಂದಿಗೆ ಇಂದು ಎಲ್ಲಿ ಆಟ ಎಂಬ ಮಾಹಿತಿ ಹಂಚಿಕೊಳ್ಳುವ ಉದ್ದೇಶದಿಂದ ಯಕ್ಷಗಾನ ವಾಟ್ಸಾಪ್ ಗ್ರೂಪ್ ರಚಿಸಲಾಯಿತು. 5-6 ಮಂದಿ ಆರಂಭದಲ್ಲಿ ಇದ್ದರು. ಆಗ, ನನಗೆ ತಿಳಿದ ಹಾಗೆ ಇಷ್ಟೊಂದು ಯಕ್ಷಗಾನ ಗ್ರೂಪುಗಳಿರಲಿಲ್ಲ. ನಂತರ, ನನ್ನ ಸ್ನೇಹಿತರು ತಮ್ಮ ತಮ್ಮ ಸ್ನೇಹಿತರ ನಂಬರ್ ನೀಡಿ ಇವರನ್ನು ಸೇರಿಸಿ....ಸೇರಿಸಿ ಎಂದು ನಂಬರ್ ನೀಡುತ್ತಾ ಹೋದರು. ಅವರು ನಮ್ಮ ಗುಂಪಿಗೆ ಸೇರುತ್ತಾ ಹೋದರು. ಹೀಗೆ ಪರಿಚಿತರು, ಅಪರಿಚಿತರು, ಪರಿಚಿತರಾಗಿದ್ದು ಯಕ್ಷಾಭಿಮಾನಿಗಳೆಂದು ತಿಳಿಯದೇ ಇರುವವರೆಲ್ಲ ಬಲ್ಲಿರೇನಯ್ಯ ಕುಟುಂಬಕ್ಕೆ ಸೇರುತ್ತಾ ಬಂದರು. ಒಂದು ಗುಂಪು ಕಳೆದ ವರ್ಷ ಮಾರ್ಚ್ ವೇಳೆಗೆ ಭರ್ತಿಯಾಯಿತು (ಗರಿಷ್ಠ ಸಂಖ್ಯೆ 100) ನಂತರ ಇನ್ನೊಂದು ಗುಂಪನ್ನು ಅಂಜಿಕೆಯಿಂದಲೇ ಶುರು ಮಾಡಲಾಯಿತು (ಕಡಿಮೆ ಸದಸ್ಯರಿದ್ದರೆ ಮಾಹಿತಿ ವಿನಿಮಯ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ) ಎರಡನೇ ಗುಂಪಿನಲ್ಲಿ ರವಿಚಂದ್ರ, ಸುಬ್ರಹ್ಮಣ್ಯಕುಮಾರ್ ಹಾಗೂ ಅಕ್ಷಯಕೃಷ್ಣ ಕಾಮನ್ ಸದಸ್ಯರಾಗಿ ಹೆಚ್ಚಿನ ಮಾಹಿತಿಗಳನ್ನು ಎರಡೂ ಗುಂಪುಗಳಲ್ಲಿ ಶೇರ್ ಮಾಡುತ್ತಾರೆ.

ಎರಡನೇ ಗುಂಪಿನಲ್ಲೂ ಸದಸ್ಯರು ಸೇರುತ್ತಾ ಬಂದು ಬಂದು ಈಗ ಅಲ್ಲಿ 70 ಮಂದಿ ಇದ್ದಾರೆ.

ಆರಂಭದಲ್ಲಿ ಗೊತ್ತಿರಲಿಲ್ಲ ಇಷ್ಟು ಮಂದಿ ಹಿರಿಯರು, ಯಕ್ಷಗಾನದ ಕಟ್ಟಾಭಿಮಾನಿಗಳು ಇಲ್ಲಿ ಸೇರುತ್ತಾರೆ ಎಂದು. ದಿನ ಕಳೆದಂತೇ ಹಿರಿಯ ಪತ್ರಕರ್ತ ಮಿತ್ರರು ಹಲವರು,(ನನ್ನ ಅನೇಕ ಸಮಕಾಲೀನ ಪತ್ರಕರ್ತ ಮಿತ್ರರು ಹಲವರಿದ್ದಾರೆ), ಭಾಗವತಾರದ ಭವ್ಯಶ್ರೀ ಮಂಡೆಕೋಲು ಅವರು, ದುರ್ಗಾಪರಮೇಶ್ವರಿ ಕುಕ್ಕಿಲ ಅವರು...ವಾಟ್ಸಾಪ್ ನಲ್ಲಿ ಮಾದರಿ ಯಕ್ಷಗಾನ ಗ್ರೂಪ್ ಕಟ್ಟಿ ಎರಡು ಆಟಗಳನ್ನು ಯಶಸ್ವಿಯಾಗಿ ಆಡಿಸಿದ ಯಕ್ಷಮಿತ್ರರು ಬಳಗದ ಪ್ರಧಾನ ಅಡ್ಮಿನ್ ಡಾ.ಪದ್ಮನಾಭ ಕಾಮತರು, ಹಲವು ಭಾಗವತರ ಹಾಡು ಶೇರ್ ಮಾಡುವ ಕಿರಿಯ ಮಿತ್ರ ಅಕ್ಷಯಕೃಷ್ಣ, ಹಾಡುಗಳನ್ನು ಶೇರ್ ಮಾಡುವ ಸುಬ್ರಹ್ಮಣ್ಯ ಕುಮಾರ್, ನೆಕ್ಕರಮೂಲೆ, ರವಿ ಭಟ್ ಪದ್ಯಾಣ (ಹಲವರಿದ್ದಾರೆ), ಫೋಟೊಗಳನ್ನು ಶೇರ್ ಮಾಡುವ ದಿನೇಶ್ ಚಿತ್ರಾಪುರ ಸೇರಿದಂತೆ, ಹಲವರು ಸಂಪನ್ಮೂಲ ವ್ಯಕ್ತಿಗಳ ಮಾದರಿಯಲ್ಲೂ ಗುಂಪಿನಲ್ಲಿ ಜೊತೆಯಾದರು.

ಆದಷ್ಟು ಪ್ರಮಾಣದಲ್ಲಿ ಪೂರ್ಣ ಪ್ರಮಾಣದ ವೃತ್ತಿಪರ ಕಲಾವಿದರನ್ನು ಗುಂಪಿಗೆ ಸೇರಿಸದೆ (ಅವರಿಗೆ ಗುಂಪಿನಿಂದ ಕಿರಿಕಿರಿ ಆಗುವುದು ಬೇಡ, ವಿಮರ್ಶೆಗಳು ತಪ್ಪು ಕಲ್ಪನೆಗಳಿಗೆ ಕಾರಣವಾಗುವುದು ಬೇಡ ಎಂಬ ಕಾರಣಕ್ಕೆ) ಗುಂಪನ್ನು ಇಲ್ಲಿಯವರೆಗೆ ಕೇವಲ ಕಲಾಭಿಮಾನಿಗಳು ಹಾಗೂ ಉದಯೋನ್ಮುಖ ಕಲಾವಿದರ ಸೇರ್ಪಡೆಗೆ ಸೀಮಿತಗೊಳಿಸಲಾಗಿದೆ.

ಇಲ್ಲಿಯವರೆಗೆ ವೈಯಕ್ತಿಕ ಕಾರಣಗಳಿಗೆ ಸುಮಾರು 10-15 ಮಂದಿ ಗುಂಪು ಬಿಟ್ಟಿರಬಹುದು (ಹಲವರು ಮತ್ತೆ ಸೇರಿದ್ದಾರೆ) ಹೊರತುಪಡಿಸಿ ನಮ್ಮ ಒಂದನೇ ಗುಂಪು ಸದಾ ಕಾಲ ಶೇ.100 ಭರ್ತಿಯಾಗಿಯೇ ಇರುತ್ತದೆ. ಹೊಸಬರನ್ನು ಎರಡನೇ ಗುಂಪಿಗೆ ಸೇರಿಸಲಾಗುತ್ತಿದೆ.

ಯಾವತ್ತೂ ನಮ್ಮ ಎರಡೂ ಗುಂಪುಗಳ ಸ್ನೇಹಿತರು ಅನಗತ್ಯ ಚಾಟಿಂಗ್, ಜನ್ಮದಿನದ ಶುಭಾಶಯ, ಅನಗತ್ಯ ಜೋಕು ಇತ್ಯಾದಿ ಯಾವುದನ್ನೂ ಕಳುಹಿಸಲು ನಮ್ಮ ಗ್ರೂಪನ್ನು ಬಳಸದೆ ಶೇ.200ರಷ್ಟು ಯಕ್ಷಗಾನಕ್ಕೇ ಸೀಮಿತಗೊಳಿಸಿ ಅತ್ಯಂತ ವಿನಮ್ರರಾಗಿ ಸಹಕರಿಸುತ್ತಿದ್ದಾರೆ. ಅಶಿಸ್ತಿನ ಕಾರಣಕ್ಕೆ ಈ ತನಕ ಯಾರೂ ಗುಂಪು ತ್ಯಜಿಸಿಲ್ಲ, ಕಂಪ್ಲೇಂಟ್ ಮಾಡಿಲ್ಲ ಹಾಗೂ ನನ್ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಅತ್ಯಂತ ಹೆಮ್ಮೆಯಿಂದ ಹೇಳಲು ಇಷ್ಟಪಡುತ್ತೇನೆ. ಹಾಗೂ ಇಷ್ಟು ಶಿಸ್ತುಬದ್ಧವಾಗಿ ವ್ಯವಹರಿಸುತ್ತಿರುವ ಎಲ್ಲಾ 170 ಮಂದಿಗೆ ವಿನಮ್ರವಾಗಿ ವೈಯಕ್ತಿಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ..

ಇಲ್ಲಿರುವ ಶೇ.75 ಮಂದಿ ಕಲಾವಿದರಲ್ಲ, ಯಕ್ಷಗಾನ ತಜ್ಞರಲ್ಲಿ, ಅಪ್ಪಟ ಯಕ್ಷಗಾನಾಭಿಮಾನಿಗಳು. ಯಕ್ಷಗಾನಕ್ಕೆ ನಮ್ಮ ದೊಡ್ಡ ನೇರವಾದ ಕೊಡುಗೆಯೇನಿಲ್ಲ. ಆದರೆ, ಪ್ರತಿದಿನ ಯಕ್ಷಗಾನ ಪ್ರದರ್ಶನದ ಮಾಹಿತಿ ವಿನಿಮಯ, ಹಾಡು, ಚಿತ್ರ, ವಿಡಿಯೋ ಶೇರ್ ಮಾಡುವ ಮೂಲಕ ನಮ್ಮೊಳಗೆ ಕಲೆಯ ಪ್ರಸರಣ ಹಾಗೂ ವಿನಿಮಯದ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ನಮ್ಮ ಗುಂಪಿನ ವತಿಯಿಂದ ಒಂದು ಕಾರ್ಯಕ್ರಮ ನಡೆಯಬೇಕು, ನಾವು ನಿಮ್ಮೊಂದಿಗಿದ್ದೇವೆ ಎಂದು ಹಲವು ಸದಸ್ಯರು ಹೇಳಿ ಪ್ರೋತ್ಸಾಹಿಸಿದ್ದರು. ಕೆಲಸದೊತ್ತಡ ಹಾಗೂ ನಿರ್ಹವಣೆ ಸಮಸ್ಯೆಯಿಂದ ಅದು ಕೈಗೂಡಲಿಲ್ಲ. ಮುಂದಿನ ದಿನಗಳಲ್ಲಿ ಕೈಗೂಡುವ ಭರವಸೆಯಿದೆ.

-ನಮ್ಮಲ್ಲಿ ಹಲವು ಬಾರಿ ಯಕ್ಷಗಾನ ವಿಚಾರಗಳ ಬಗ್ಗೆ ಉತ್ತಮ ಚರ್ಚೆಗಳು ನಡೆದಿವೆ.
-ಕೆಲವು ಸಕ್ರಿಯ ಸದಸ್ಯರು ನಿರಂತರವಾಗಿ ಆಟಗಳ ದಿನಾಂಕಗಳನ್ನು ಶೇರ್ ಮಾಡಿ ಅಗತ್ಯ ಮಾಹಿತಿಗಳನ್ನೊದಗಿಸಿದ್ದಾರೆ.
-ಈ ಗುಂಪಿನ ಎಲ್ಲ ಸದಸ್ಯರ ನಂಬರ್ ನನ್ನ ಮೊಬೈಲಿನಲ್ಲಿ ಸೇವ್ ಆಗಿರುವ ಕಾರಣಕ್ಕೆ, ಸಂಹವನ ಹಿನ್ನೆಲೆಯಲ್ಲಿ ಕನಿಷ್ಠ 25 ಉತ್ತಮ ಸ್ನೇಹಿತರನ್ನು ನಾನಿಲ್ಲಿ ವೈಯಕ್ತಿಕವಾಗಿ ಪಡೆದುಕೊಂಡಿದ್ದೇನೆ.
-ಹಲವು ಕಲಾವಿದರು, ಮೇಳಗಳ ಪರಿಚಯ ಈ ಗ್ರೂಪಿನಿಂದ ನನಗೆ ಆಗಿದೆ.
-ಅಮೆರಿಕಾದಲ್ಲಿರುವ ಎಸ್ ಎನ್ ಭಟ್ಟರು, ಶರತ್, ಚೆನ್ನೈಯಲ್ಲಿರುವ ಚೆನ್ನೈ ಭಾವ, ಮೈಸೂರಿನಲ್ಲಿರುವ ಅಕ್ಷಯಕೃಷ್ಣ, ತುಮಕೂರಿನಲ್ಲಿರುವ ಸಿಬಂತಿ ಪದ್ಮನಾಭ, ಬೆಂಗಳೂರನಲ್ಲಿರುವ ಹತ್ತು ಹಲವು ಸ್ನೇಹಿತರು ತಮ್ಮ ತಮ್ಮ ಊರುಗಳಲ್ಲೇ ಕುಳಿತು ಮಾಹಿತಿ ಪಡೆಯುವುದರ ಜೊತೆಗೆ ಮಾಹಿತಿ ವಿನಿಮಯ ಮಾಡಲು ಸಾಧ್ಯವಾಗುವಂತಹ ತಂತ್ರಜ್ಞಾನ ಕಟ್ಟಿಕೊಟ್ಟ ವಾಟ್ಸಾಪ್ ಗೆ ತಲೆಬಾಗಲೇ ಬೇಕು.
-ನಮ್ಮ ಸರಳ ನಿಮಯ-ಯಕ್ಷಗಾನ ಬಿಟ್ಟು ಬೇರಾವ ವಿಚಾರ ಶೇರ್ ಮಾಡಬಾರದು, ಚರ್ಚಿಸಬಾರದು ಹಾಗೂ ಕಲಾವಿದರ, ಮೇಳಗಳ ವೈಯಕ್ತಿಕ ನಿಂದನೆ ಮಾಡಬಾರದು, ಹೆಚ್ಚು ವಾಯ್ಸ್ ನೋಟ್ ಶೇರ್ ಮಾಡಬಾರದು ಎಂಬುದಷ್ಟೇ....
 ಮುಂದೆಯೂ ನಮ್ಮ ಗುಂಪು ಯಕ್ಷಗಾನ ಮಾಹಿತಿ ವಿನಿಮಯ, ಚರ್ಚೆ, ವಿಚಾರ ವಿನಿಮಯಗಳಿಗೆ ಸೂಕ್ತ ವೇದಿಕೆಯಾಗಿರುತ್ತದೆ. ಅದಕ್ಕೆ ಎಲ್ಲರ ಸಹಕಾರ ಬೇಕು. ಇಷ್ಟೊಂದು ಶಿಸ್ತುಬದ್ಧ ಸದಸ್ಯರಿರುವ ಗುಂಪಿನಲ್ಲಿ ಯಾವತ್ತೂ ಶಿಸ್ತಿನ ವಿಚಾರ ಪದೇ ಪದೇ ಹೇಳುವ ಸಂದರ್ಭ ಅಪರೂಪ. ಯಕ್ಷಗಾನ ಶಿಸ್ತು ಕಲಿಸುತ್ತದೆ ಅಂತ ಅಂದುಕೊಳ್ಳುತ್ತೇನೆ.
-ಒಂದು ವರ್ಷದ ಅವಧಿಯಲ್ಲಿ ಗುಂಪು ಕಟ್ಟುವಲ್ಲಿ, ಸಲಹೆಗಳನ್ನು ನೀಡುವಲ್ಲಿ ಹಲವರು ಬೆಂಬಲವಾಗಿದ್ದರು. ಕೆಲವರ ಹೆಸರುಗಳನ್ನಷ್ಟೇ ಇಲ್ಲಿ ಉಲ್ಲೇಖಿಸಿದ್ದೇನೆ. ಎಲ್ಲವನ್ನು ಉಲ್ಲೇಖಿಸಿದೆರ ಬರಹ ದೀರ್ಘವಾಗುತ್ತದೆ. ಅದಕ್ಕಾಗಿ ಕ್ಷಮೆ ಇರಲಿ

ಇತ್ತೀಚೆಗೆ ಕಿರಿಯ ಸ್ನೇಹಿತರೊಬ್ಬರ ಮೊಬೈಲ್ ಹಾಳಾಗಿತ್ತು, ಅವರು ಎರಡು ದಿನದ ಮಟ್ಟಿಗೆ ವಾಟ್ಸಾಪ್ ನಿಂದ ಎಕ್ಸಿಟ್ ಆಗಿದ್ದರು, ವೈಯಕ್ತಿಕ ಮೆಸೇಜ್ ಮಾಡಿ ಒಂದನೇ ಗ್ರೂಪಿನಲ್ಲಿ ಅವರಿಂದ ತೆರವಾಗುವ ಸ್ಥಾನ ಅವರಿಗೇ ಮೀಸಲಿರಿಸಲು ರಿಕ್ವೆಸ್ಟ್ ಕಳುಹಿಸಿದರು. (ಬೇರೆಯವರನ್ನು ಸೇರಿಸಬೇಡಿ ಎಂದು). ಗುಂಪಿನ ಮೇಲೆ ಅವರಿಗಿರುವ ಪ್ರೀತಿಗೆ ಧನ್ಯವಾದಗಳು...

ಗುಂಪಿನಲ್ಲಿ ಸಕ್ರಿಯರಾಗಿ ಮಾಹಿತಿ ಶೇರ್ ಮಾಡುವವರು, ಮೌನವಾಗಿ ಎಲ್ಲವನ್ನೂ ಅಸ್ವಾದಿಸುವವರು ಎರಡೂ ಥರದವರು ಇದ್ದಾರೆ. ಎರಡೂ ಥರದ ಯಕ್ಷಾಭಿಮಾನಿಗಳನ್ನೂ ನಾವು ಸಮಾನವಾಗಿ ಕಾಣುತ್ತೇವೆ. ಗುಂಪಿನ ಬಗ್ಗೆ ಸಲಹೆ ನೀಡಲು, ಕಿರಿಕಿರಿ ಎನಿಸಿದರೆ ತಿದ್ದಲು ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ. ಕೇವಲ ಯಕ್ಷಗಾನ ವಿಚಾರ ಮಾತ್ರ ಶೇರ್ ಮಾಡುವ ಕಲಾಸಕ್ತರಿಗೆ ಗ್ರೂಪಿಗೆ ಸೇರಲು ಮುಕ್ತ ಸ್ವಾಗತವೂ ಇದೆ.  (9481976969).
ಮುಂದೆಯೂ ನಿಮ್ಮ ಸಹಕಾರ ಇರಲಿ....ಯಕ್ಷಗಾನ ಗೆಲ್ಗೆ.
-(ಗ್ರೂಪ್ ಅಡ್ಮಿನ್).

No comments: