ನಿರಾಸೆಗಳ ಹಿಂದೆ ನಿರೀಕ್ಷೆಯೆಂಬ ದುಷ್ಟ!


ಮರಕುಟಿಕ ಅಂತೊಂದು ಪಕ್ಷಿಯಿದೆ. ಮರವನ್ನು ತನ್ನ ಕೊಕ್ಕಿನಿಂದ ಕುಕ್ಕಿ ತೂತು ಮಾಡಿ ಹುಳ ಹುಪ್ಪಟೆಳನ್ನು ಕಿತ್ತು ತಿನ್ನೋದೆ ಅದರ ಬದುಕು. ದಿನವಿಡೀ ಮರ ಕುಕ್ಕಿ ರಾತ್ರಿ ತನ್ನ ಕೊಕ್ಕು ನೋಯುವಾಗ ಅದು ಅಂದುಕೊಳ್ಳುತ್ತದಂತೆ, ‘ಈ ಬದುಕು ಸಾಕು, ನಾಳೆಯಿಂದ ಆಹಾರ ಹುಡುಕಲು ಬೇರೆ ಮಾರ್ಗ ನೋಡಬೇಕು’ ಅಂತ. ಆದರೆ, ಮರುದಿನ ಸೂರ್ಯೋದಯವಾದರೆ ಸಾಕು, ಮರಕುಟಿಕ ಎಲ್ಲ ಮರೆತು ಮತ್ತದೇ ಮರ ಕುಕ್ಕುವ ಕಾಯಕದಲ್ಲ ವ್ಯಸ್ತವಾಗಿ ಬಿಡುತ್ತದೆ. ಕೊಕ್ಕು ನೋಯುತ್ತದಾದರೂ ಅದಕ್ಕೆ ಆ ಕಸುಬು ಬಿಟ್ಟು ಬೇರೆ ಗೊತ್ತಿಲ್ಲ. ಕೆಲವೊಮ್ಮೆ ನಾವೂ ಹಾಗೆ... ಪರಿಣಾಮಗಳು ಗೊತ್ತಿದ್ದರೂ ನಾವು ಮತ್ತದೆ ಹುಸಿ ನಿರೀಕ್ಷೆಗಳಿಗೆ ಜೋತು ಬಿದ್ದು ನೆಮ್ಮದಿ ಕಳೆದುಕೊಳ್ಳುತ್ತಿದ್ದೇವಾ? ಇದ್ದುದನ್ನು ಇದ್ದಂತೆ ಯಾಕೆ ಸ್ವೀಕರಿಸ್ತಾ ಇಲ್ಲ?

............

‘ಆಸೆಯೇ ದುಖಕ್ಕೆ ಮೂಲ’ ಎಂದು ಅಂದು ಬುದ್ಧ ಹೇಳಿದ್ದು.... ಅದನ್ನು ‘ನಿರೀಕ್ಷೆಯೇ ನಿರಾಸೆಗಳಿಗೆ ಮೂಲ’ ಎಂದೂ ವಿಸ್ತರಿಸಬಹುದು ಅಲ್ವ? ಸಾಮಾನ್ಯ ಜ್ಞಾನ ಇರುವ ಪ್ರತಿಯೊಬ್ಬರಿಗೂ ಗೊತು,್ತ ಸಾಮಾಜಿಕ ಒಡನಾಟ, ಕೌಟುಂಬಿಕ ಬದುಕನಲ್ಲಿ ಹಾಸಿಗೆ ಮೀರಿ ಕಾಲು ಚಾಚಿಸುವ ನಿರೀಕ್ಷೆಗಳೇ ನಮ್ಮೊಳಗೊಂದು ಭ್ರಮ ನಿರಸನ, ನಿರಾಸೆ, ವೇದನೆಗಳನ್ನು ಹುಟ್ಟು ಹಾಕುವುದೆಂದು. ಅದು ಗೊತ್ತಿದ್ದೂ ಗೊತ್ತಿದ್ದೂ ನಮ್ಮೊಳಗೆ ಮೂಡಬಹುದಾದ ನಿರೀಕ್ಷೆಗಳಿಗೆ ಜೋತು ಬೀಳುವುದನ್ನು ನಾವು ನಿಲ್ಲಿಸುವುದಿಲ್ಲ. ಬಹುತೇಕ ನಿರೀಕ್ಷೆಗಳು ನಮ್ಮ ನಿಯಂತ್ರಣದೊಳಗೆ, ನಮ್ಮ ನಿರ್ಧಾರದ ಪರಿಧಿಯೊಳಗೇ ಕ್ಷಯಿಸುವಂಥವು. ಆದರೂ ಆ ಒಂದು ಮೋಹ, ಮಾಯೆಯ ಭ್ರಮೆಯಿಂದ ತಕ್ಷಣಕ್ಕೆ ಹೊರಬರಲು ಸಾಧ್ಯವಾಗುವುದಿಲ್ಲ.
ಕಂಡದ್ದು ಕಂಡ ಹಾಗೇ...: ಒಂದು ಸ್ನೇಹ, ಸಂಬಂಧ, ಒಂದು ಪರಿಸ್ಥಿತಿ, ಕೆಲಸ, ಅವಕಾಶವನ್ನು ಎಷ್ಟೋ ಬಾರಿ ಇದ್ದುದನ್ನು ಇದ್ದ ಹಾಗೆ ಸ್ವೀಕರಿಸುವಲ್ಲಿ ನಾವು ಎಡವುತ್ತೇವೆ. ಪ್ರತಿಯೊಂದರ ಇತಿಮಿತಿ ನಮಗೆ ಗೊತ್ತಿರುವುದೇ ಆದರೂ, ಇನ್ನಷ್ಟರ ನಿರೀಕ್ಷೆ ಅಥವಾ ನಮ್ಮ ಮೂಗಿನ ನೇರಕ್ಕೆ, ನಮ್ಮ ನಿರೀಕ್ಷೆಯ ತಾಳಕ್ಕೆ, ನಮ್ಮ ಮಾತಿನ ಧಾಟಿಗೆ ನಮ್ಮ ಸಂಪರ್ಕದಲ್ಲಿರುವುದು ನಿಲುಕಬೇಕು, ಬಾಗಬೇಕು, ಅನುಸರಿಸಬೇಕೆಂಬ ಹಂಬಲ.
ಸುಮ್ನೆ ಯೋಚಿಸಿ, ಬಹಳಷ್ಟು ಬಾರಿ ಕೈಗೂಡದ ಹಂಬಲಗಳನ್ನು ಪೋಷಿಸಿ, ಅವು ಹುಚ್ಚುತನವೆಂದು ಗೊತ್ತಿದ್ದೂ ಗೊತ್ತಿದ್ದೂ ಮತ್ತೊಮ್ಮೆ ಅವು ಸಂಭವಿಸದೆ ಹೋದಾಗ ನೊಂದುಕೊಳ್ಳುವುದು ಸ್ವಯಂಕೃತಾಪರಾಧ ಹೊರತು ಬೇರೆಯವರನ್ನು ದೂಷಿಸಿ ಪ್ರಯೋಜನವಿಲ್ಲ, ಅಲ್ವ?
ಜಸ್ಟ್ ಪಾಸ್ ಆಗುವಂತೆ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಸಾಧಿಸುವ ಕನಸು ಕಟ್ಟಿ, ಕೊನೆಗೆ ಅದೃಷ್ಟವಶಾತ್ ಫಸ್ಟ್ ಕ್ಲಾಸ್‌ನಲ್ಲಿ ಪಾಸಾದರೆ, ಅದಕ್ಕೂ ಸಂತಸ ಪಡದೆ ಅತ್ತರೆ ಅದು ಭ್ರಮೆ ಎನ್ನಲು ಬುದ್ಧನಂತೆ ತತ್ವಜ್ಞಾನಿಯಾಗಬೇಕಿಲ್ಲ. ಸಾಮಾನ್ಯ ಜ್ಞಾನ ಬೆಳೆಸಿಕೊಂಡರೆ ಸಾಕು!
ಅದಕ್ಕೇ ದಾರ್ಶನಿಕರೊಬ್ಬರು ಹೇಳಿದ್ದಾರೆ...
‘ಯಾವತ್ತೂ ನಿರೀಕ್ಷಿಸಬೇಡ, ಕಲ್ಪಿಸಬೇಡ, ಕೇಳಬೇಡ, ಆಗ್ರಹಿಸಬೇಡ, ಅದೇನು ಸಂಭವಿಸಲಿದೆಯೋ ಅದು ಘಟಿಸಲಿ, ಅದೇನು ಸಂಭವಿಸಬೇಕಿತ್ತೋ ಅದೇ ಆಗಲಿ, ಅದನ್ನು ನೀನು ಸ್ವೀಕರಿಸು’ ಅಂತ.
ಇದು ಆಧ್ಯಾತ್ಮಿಕ ಚಿಂತನೆಯ ಧಾಟಿ ಎನಿಸಿದರೂ ಇಲ್ಲೊಂದು ಬದುಕಿನ ಕಟು ವಾಸ್ತವದ ಚಿತ್ರಣ ಸಿಗುತ್ತದೆ.
---------
ನಿರೀಕ್ಷೆಗಳ ಹತ್ತು ಹಲವು ಮುಖ:
೧) ಅವನು/ಅವಳು ಹೀಗೆಯೇ ಇರಲೆಂಬ ನಿರೀಕ್ಷೆ: ಬದುಕಿನ ವಿವಿಧ ಮಜಲುಗಳಲ್ಲಿ ಸಂಪರ್ಕಕ್ಕೆ ಬರುವ ಸಹಪಾಠಿಯೋ, ಸ್ನೇಹಿತರೋ, ಸಹೋದ್ಯೋಗಿಗಳೋ ಯಾರೆ ಇರಲಿ... ಅವನು/ಅವಳು ಹೀಗೆಯೇ ಇದ್ರೆ ಚಂದ ಎಂಬ ಪೂರ್ವಾಗ್ರಹ ಪೀಡಿತ ನಿರೀಕ್ಷೆ ಎಷ್ಟೋ ಬಾರಿ ಸಂಬಂಧಗಳ ಎಳೆಗಳನ್ನು ಸಡಿಲಗೊಳಿಸುವುದು. ಪ್ರತಿಯೊಬ್ಬರೂ ಬೆಳೆದು ಬಂದ ದಾರಿ, ಕೌಟುಂಬಿಕ ಹಿನ್ನೆಲೆ, ದೊರೆತ ಅವಕಾಶಗಳು, ಅವರ ಅಧ್ಯಯನ ವಿಧಾನ, ಬದುಕಿನ ದಾರಿಯಲ್ಲಿ ಎದುರಿಸಿದ ಪರಿಸ್ಥಿತಿಗಳ ಆಧಾರದಲ್ಲಿ ಅವರವರ ಚಿಂತನೆ, ನಂಬಿಕೆ, ಮನೋಧರ್ಮ, ನಡವಳಿಕೆ ರೂಪುಗೊಂಡಿರುತ್ತದೆ. ಇದು ನನ್ನ, ನಿಮ್ಮ ಸಹಿತ ಪ್ರತಿಯೊಬ್ಬರ ಬಾಳಿನಲ್ಲೂ ಇರುವ ಸತ್ಯ. ಹಾಗಾಗಿ ಯಾರೋ ಒಬ್ಬರು ನಿಮ್ಮ ಸ್ನೇಹಿತರ ವಲಯಕ್ಕೆ ಬಂದ ತಕ್ಷಣ ನಿಮ್ಮ ನಂಬಿಕೆಗನುಗುಣವಾಗಿ ಅವರು ಇರಬೇಕು, ನಿಮ್ಮ ಅಭಿರುಚಿಗನುಗುಣವಾಗಿ ವರ್ತಿಸಬೇಕು ಎಂದು ನೀವು ನಿರೀಕ್ಷಿಸುವುದು ತಪ್ಪಾಗುತ್ತದೆ. ಇಬ್ಬರು ವ್ಯಕ್ತಿಗಳ ನಡುವಿರುವ ಸಾಮಾನ್ಯ ಅಭಿರುಚಿಗಳ ಕಾರಣಕ್ಕೆ ಸ್ನೇಹ ಚಿಗುರೊಡೆಯುತ್ತದೆ. ಅದೇ ತಳಹದಿ ಮೇಲೆ ಮುಂದುವರಿಯುತ್ತದೆ ವಿನಃ ನೂರಕ್ಕೆ ನೂರು ಇಬ್ಬರ ಚಿಂತನೆಗಳು ಒಂದೇ ಎಂಬ ಕಾರಣಕ್ಕಲ್ಲ. ಹಾಗಾಗಿ ನಿಮ್ಮ ಒಡನಾಡಿಗಳೆಲ್ಲಾ ನಿಮ್ಮ ಮೂಗಿನ ನೇರಕ್ಕೆ ಇರಬೇಕೆಂದು ಅಪೇಕ್ಷಿಸುವುದು ತಪ್ಪು. ಉದಾ: ನಿಮಗೆ ಮಾಂಸಾಹಾರ ತಿನ್ನುವುದು ಇಷ್ಟವಿಲ್ಲ, ಹಾಗಂತ ನಿಮ್ಮ ಸ್ನೇಹಿತರೂ ತಿನ್ನಬಾರದು ಎಂದರೆ ಹೇಗೆ? ಯಾವತ್ತೋ ಒಮ್ಮೆ ಅವರು ಮಾಸಾಂಹಾರ ತಿನ್ನುತ್ತಿದ್ದುದನ್ನು ಕಂಡು ‘ನಿನ್ನಿಂದ ಇದನ್ನು ನಿರೀಕ್ಷಿಸಿರಲಿಲ್ಲ ನಂಗೆ ಹರ್ಟ್ ಆಯ್ತು’ ಎಂದು ಮುಖ ತಿರುಗಿಸಿಕೊಂಡರೆ ಹೇಗೆ? ತಪ್ಪು ತಿಂದವರದ್ದಲ್ಲ, ತಿನ್ನೋದಿಲ್ಲ ಎಂದು ನಿರೀಕ್ಷಿಸಿದ ನಿಮ್ಮದು.
೨) ಬಂದಿದ್ದನ್ನು ಹಾಗೆಯೇ ಸ್ವೀಕರಿಸುವುದು: ಒಬ್ಬ ಸ್ನೇಹಿತನಿರಲಿ, ಒಂದು ಪರಿಸ್ಥಿತಿಯಿರಲಿ, ಒಂದು ಅವಕಾಶವಿರಲಿ ಎಷ್ಟೋ ಬಾರಿ ಬಂದಿದ್ದನ್ನು ಹಾಗೆಯೇ ಸ್ವೀಕರಿಸುವುದು ಜಾಣತನ ಹಾಗೂ ಅದು ಸಹಜ ಪ್ರವೃತ್ತಿ ಕೂಡಾ. ಯಾಕೆಂದರೆ ನಮ್ಮ ಮೂಗಿನ ನೇರಕ್ಕೆ ಜಗತ್ತು ಇರುವುದಲ್ಲ, ಜಗತ್ತಿನೊಳಗೆ ನಾವಿರುವುದು. ಪ್ರತಿಯೊಬ್ಬರಿಗೂ ಅವರವರ ಇಷ್ಟದಂತೆ ಬದುಕುವ ಹಕ್ಕಿದೆ.  ಈ ನಡುವೆ ಕಂಡು ಬರುವ ಕೆಲವು ದೈಹಿಕ ನ್ಯೂನತೆಗಳು, ಅವಕಾಶದ ಕೊರತೆಗಳು, ದುರಾದೃಷ್ಟದ ಕ್ಷಣಗಳನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ (ಮಾನವ ಪ್ರಯತ್ನದ ಹೊರತಾದ ಸಂದರ್ಭಗಳು). ಹಾಗಾಗಿ ಅವುಗಳ ಬಗ್ಗೆ ಕೊರಗುತ್ತಾ ಕೂರುವ ಬದಲು, ಬಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹಾಗೆಯೇ ಸ್ವೀಕರಿಸುವುದು ಆರೋಗ್ಯವಂತ ಮನಸ್ಸುಗಳ ವೃದ್ಧಿಗೆ ಸಹಕಾರಿ. ಕೊರಗಿದ ಕೂಡಲೇ, ಕೋಪಿಸಿಕೊಂಡ ಕೂಡಲೇ ಪರಿಸ್ಥಿತಿ ಬದಲಾಗುವುದಿಲ್ಲ. ಒಂದು ಅವಕಾಶ, ಒಬ್ಬ ಸ್ನೇಹಿತನನ್ನು ಅವನ ಉತ್ತಮ ಗುಣ, ಕೊರತೆಗಳ ಸಹಿತ ಸ್ವೀಕರಿಸಿದರೇನೇ ಸ್ನೇಹ, ಅವಕಾಶಗಳು ಉಳಿಯುವುದು. ಇಲ್ಲವಾದರೆ ನೀವೊಬ್ಬ ಪ್ರತ್ಯೇಕವಾದಿಯಾಗಿ ಬದುಕಬೇಕಾದೀತು ಅಷ್ಟೆ.
೩) ನಿರೀಕ್ಷೆಗಳನ್ನು ಬದಿಗಿರಿಸಿ ವಾಸ್ತವವಾದಿಗಳಾಗಿ: ಬದುಕಿನಲ್ಲಿ ಅನುಭವಿಸಿದ ಸನ್ನಿವೇಶಗಳು, ಕಲಿತ ಪಾಠಗಳು ಅನುಭವದ ಮೂಟೆಯೊಳಗೆ ಸಾಕಷ್ಟು ವಿಚಾರಗಳನ್ನು ತುಂಬಿರುತ್ತವೆ. ಹಾಗಾಗಿ ‘ಈ ದಾರಿಯಲ್ಲಿ ಹೋದರೆ ಎಲ್ಲಿ ತಲುಪೀತು?’ ಎಂಬ ಜ್ಞಾನ ಖಂಡಿತಾ ಪ್ರತಿಯೊಬ್ಬರಲ್ಲಿ ಇರುತ್ತದೆ. ಅರಬ್ಬಿ ಸಮುದ್ರಕ್ಕೆ ಹೋಗುವ ದಾರಿಯಲ್ಲಿ ನಡೆದು ಹಿಮಾಲಯ ತಲುಪಬೇಕು ಎಂಬ ಹುಚ್ಚು ಭ್ರಮೆ, ನಿರೀಕ್ಷೆ ಹೊಂದುವುದು ಮೂರ್ಖತನ. ಹಾಗೆಯೇ ದಿಢೀರ್ ಶ್ರೀಮಂತರಾಗಬೇಕು, ಸುಂದರವಾಗಿ, ಐಷಾರಾಮಿಯಾಗಿರುವುದು ಎಲ್ಲ ನನ್ನ ಪಾಲಾಗಬೇಕು, ನಾನು ಏಕಾಏಕಿ ಪ್ರಸಿದ್ಧನಾಗಬೇಕು ಎಂಬಿತ್ಯಾದಿ ಹುಚ್ಚು ನಿರೀಕ್ಷೆಗಳು, ಅದನ್ನು ಈಡೇರಿಸಲು ಹಿಡಿಯುವ ವಾಮ ಮಾರ್ಗಗಳು ಇವೆಲ್ಲಾ ಅಸಹಜ ನಡವಳಿಕೆಗಳ ಉತ್ಪತ್ತಿಗೆ ರಹದಾರಿಗಳು ಹೊರತು ದೀರ್ಘಾವಧಿಯಲ್ಲಿ ಬದುಕನ್ನು ಬೆಳಗುವ ಅಂಶಗಳಲ್ಲ. ಹಾಗಾಗಿ ಹುಸಿ ನಿರೀಕ್ಷೆ, ನಿಮ್ಮ ಅಂತರಾತ್ಮವನ್ನೇ ಮೋಸಗೊಳಿಸುವಂತಹ ಭ್ರಮೆಗಳೊಂದಿಗೆ ಬದುಕುವ ಬದಲು ವಾಸ್ತವವಾದಿಗಳಾಗಲು ಪ್ರಯತ್ನಿಸಿ. ಆಗ ಎಷ್ಟೋ ಪ್ರಮಾಣದ ನಿರಾಸೆಗಳನ್ನು ಕಡಿಮೆಗೊಳಿಸಬಹುದು. ವಿನಾ ಕಾರಣ ಕೊರಗು, ನಿರಾಸೆ, ಋಣಾತ್ಮಕ ಚಿಂತನೆಗಳನ್ನು ತಪ್ಪಿಸಿ ಆಹ್ಲಾದಕರ ಬದುಕು ರೂಪಿಸಬಹುದು. ಏನಂತೀರಿ?

No comments: