ಕರಾವಳಿಯಲ್ಲಿ ಮತ್ತೆ ಯಕ್ಷಗಾನವೇ ಫೇವರಿಟ್!

ಪಾರಂಪರಿಕ ಕಲೆಗಳಿಗೆ ಪ್ರೇಕ್ಷಕರಿಲ್ಲ, ಯುವಜನತೆಗೆ ಆಸಕ್ತಿಯಿಲ್ಲ ಎಂಬ ಆರೋಪಗಳು ಮಿಥ್ಯ ಎಂಬುದು ಕರಾವಳಿ ಜಿಲ್ಲೆಗಳಲ್ಲಿ ಸಾಬೀತಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು (ಕೇರಳ) ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮತ್ತೆ ವಿಜೃಂಭಿಸುತ್ತಿರುವ ಯಕ್ಷಗಾನ ಗಾನವೈಭವ, ನಾಟ್ಯವೈಭವ, ಕಾಲಮಿತಿಯ ಬಯಲಾಟಗಳೇ ಇದಕ್ಕೆ ಸಾಕ್ಷಿ.


ಶತಮಾನಗಳ ಇತಿಹಾಸವಿರುವ ಯಕ್ಷಗಾನದಲ್ಲಿ ಇಂದು ವೃತ್ತಿಪರ, ಹವ್ಯಾಸಿ ಸೇರಿದಂತೆ ೧೦೦ಕ್ಕೂ ಜಾಸ್ತಿ ಮೇಳಗಳು (ಪ್ರದರ್ಶನ ತಂಡಗಳು) ಇವೆ. ಪ್ರತಿವರ್ಷ ನವೆಂಬರ್‌ನಿಂದ ಮೇ ತಿಂಗಳ ತನಕ ಊರೂರು ಸುತ್ತಿ ಸಾವಿರಾರು ಯಕ್ಷಗಾನ ಪ್ರದರ್ಶನ ನೀಡುತ್ತಿವೆ. ಮಳೆಗಾಲದಲ್ಲೂ ಪ್ರವಾಸಿ ಮೇಳಗಳು, ಹಬ್ಬ ಹರಿದಿನಗಳ ಸಂದರ್ಭ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಿರಂತರ ನಡೆಯುತ್ತಿವೆ. ಯಕ್ಷಗಾನರಂಗದಲ್ಲಿ ಸಾವಿರಾರು ಕಲಾವಿದರಿದ್ದಾರೆ. ದೇಶ, ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. 


ಈಗಿನ ಟಿ.ವಿ., ಮೊಬೈಲು, ಕಂಪ್ಯೂಟರು, ಸೋಶಿಯಲ್ ಮೀಡಿಯಾಗಳಿಲ್ಲದ ಆ ದಿನಗಳಲ್ಲಿ (ಸುಮಾರು ಎರಡು ದಶಕದ ಹಿಂದೆ) ಕರಾವಳಿ ಮಂದಿಯ ಏಕೈಕ ಮನರಂಜನಾ ಮಾಧ್ಯಮವಾಗಿದ್ದುದು ಯಕ್ಷಗಾನ, ತಾಳಮದ್ದಳೆ (ಸಂಭಾಷಣೆ ಮಾತ್ರ, ಕುಣಿತ, ವೇಷಗಳಿಲ್ಲ) ಮಾತ್ರ. ಬರಬರುತ್ತಾ ಸಂಗೀತ ರಸಮಂಜರಿ, ಜಾದೂ, ಮಿಮಿಕ್ರಿ, ತುಳು ನಾಟಕಗಳು, ಫಿಲ್ಮೀ ಡ್ಯಾನ್ಸ್‌ಗಳು ಯಕ್ಷಗಾನದ ಜಾಗದಲ್ಲಿ ತಾವೂ ಪಾಲು ಪಡೆಯತೊಡಗಿದವು. ಶಾಲಾ ವಾರ್ಷಿಕೋತ್ಸವ, ಮದುವೆ ಮುಂಜಿ, ಗೌರಿ ಗಣೇಶ, ಅಷ್ಟಮಿ, ದಸರಾ ಹಬ್ಬಗಳಲ್ಲೆಲ್ಲಾ ಯಕ್ಷಗಾನ ಪ್ರದರ್ಶನವಿರಿಸಿದರೆ ಜನ ಸೇರೋದಿಲ್ಲ. ತುಳು ನಾಟಕವೋ, ಫಿಲ್ಮೀ ಡ್ಯಾನ್ಸೋ, ಆರ್ಕೆಸ್ಟ್ರಾನೋ ಇರಿಸಿದರೆ ಮಾತ್ರ ಜನ ಬರುತ್ತಾರೆ ಎಂಬ ಅಪವಾದವಿತ್ತು.
ಕಾಲ ಬದಲಾಯ್ತು: ಈಗ ಕಾಲಚಕ್ರ ಮತ್ತೆ ತಿರುಗಿದೆ. ಹಿರಿಯರೊಂದಿಗೆ ಹೊಸ ತಲೆಮಾರಿನ ಭಾಗವತರು, ಹೊಸ ತಲೆಮಾರಿನ ಪ್ರೇಕ್ಷಕರು, ಪೂರಕವಾದ ಆಧುನಿಕ ಮಾಧ್ಯಮದ ಪ್ರಚಾರ, ಕಾಲಮಿತಿಯ ಪ್ರಯೋಗಗಳಿಂದ ಕರಾವಳಿಯಾದ್ಯಂತ ಯಕ್ಷಗಾನ ಮತ್ತೆ ಸ್ಥಾನ ಪಡೆಯುತ್ತಿದೆ. ಹಬ್ಬಗಳು, ದೇವಸ್ಥಾನದ ಜಾತ್ರೆಗಳು, ವಾರ್ಷಿಕೋತ್ಸವಗಳು, ಅಷ್ಟೇ ಯಾಕೆ ಮದುವೆ, ಗೃಹಪ್ರವೇಶಗಳಲ್ಲೂ ಯಕ್ಷಗಾನಕ್ಕೆ ದೊಡ್ಡದೊಂದು ಸ್ಥಾನಮಾನ ಸಿಕ್ಕಿದೆ. ಸೀಮಿತ ಅವಧಿಯಲ್ಲಿ ಪ್ರಸಿದ್ಧ ಭಾಗವತರನ್ನು ಕರೆಸಿ ಹಾಡುಗಾರಿಕೆ ಇರಿಸುವ ‘ಯಕ್ಷಗಾನ ಗಾನ ವೈಭವ’, ಆಯ್ದ ಪ್ರಸಂಗಗಳ ನಾಟ್ಯ ಪ್ರಕಾರವನ್ನು ಮಾತ್ರ ಪ್ರಸ್ತುತಪಡಿಸುವ ಯಕ್ಷಗಾನ ನಾಟ್ಯವೈಭವ, ಚುಟುಕಾಗಿ ಪ್ರದರ್ಶನಗೊಳ್ಳುವ ಕಾಲಮಿತಿಯ ಬಯಲಾಟಗಳನ್ನು ಜನ ಇಷ್ಟಪಡುತ್ತಿದ್ದಾರೆ.
ಒಂದು ಕಾಲದಲ್ಲಿ ಧನಿಕರು, ದೇವಸ್ಥಾನಗಳು, ಊರ ಗಣ್ಯರ ರಾಜಾಶ್ರಯದಲ್ಲಿ ಪ್ರದರ್ಶನ ಕಾಣುತ್ತಿದ್ದ ಯಕ್ಷಗಾನವನ್ನು ಇಂದು ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಯುವಕ ಮಂಡಲಗಳು ಮಾತ್ರವಲ್ಲ, ಯಕ್ಷಗಾನ ಅಭಿಮಾನಿಗಳ ವಾಟ್ಸಪ್ ಗ್ರೂಪುಗಳೂ ಆಡಿಸುತ್ತಿವೆ!
ಯಾಕೆ ದಿಢೀರ್ ಜನಪ್ರಿಯತೆ ಸಿಕ್ತು?:
-ಈಗಿನ ಮಂದಿಗೆ ಇಡೀ ರಾತ್ರಿ ಕುಳಿತು ಬಯಲಾಟ ನೋಡುವ ತಾಳ್ಮೆಯಿಲ್ಲ. ಈಗಿನ ಜೀವನ ಶೈಲಿಗೆ ಅದು ಒಗ್ಗುವುದೂ ಇಲ್ಲ. ಹಾಗಾಗಿ ಕಾಲಮಿತಿಯ ಪ್ರದರ್ಶನಗಳು ಜನರಿಗೆ ತುಂಬಾ ಇಷ್ಟವಾಗುತ್ತಿವೆ.
-ಜನಪ್ರಿಯ ಕಲಾವಿದರನ್ನು ಕರೆಸಿ ಆಡುವ ಪ್ರದರ್ಶನಗಳಲ್ಲಿ ತಮಗಿಷ್ಟದ ಕಲಾವಿದರ ಹಾಡು, ಚೆಂಡೆ-ಮದ್ದಳೆ ವೈಭವ ಆಲಿಸುವ ಅವಕಾಶವಿರುವುದರಿಂದ ಪ್ರೇಕ್ಷಕರಿಗೆ ಆಯ್ಕೆ ಸ್ವಾತಂತ್ರ್ಯ ಸಿಕ್ಕಿದೆ.
-ಯುವ ತಲೆಮಾರಿನ ಭಾಗವತರು, ಕಲಾವಿದರಿಗೆ ಅವರದ್ದೇ ಆದ ಆರಾಧಕರು, ಅಭಿಮಾನಿಗಳ ವರ್ಗ ಹುಟ್ಟಿಕೊಂಟಿದೆ. ತಮಗಿಷ್ಟದ ಕಲಾವಿದರ ಪ್ರದರ್ಶನ ನೋಡುವುದಕ್ಕೆಂದೇ ಮಧ್ಯರಾತ್ರಿಯೂ ಎದ್ದು ಬಯಲಾಟಗಳಿಗೆ ಬರುವ ಪ್ರೇಕ್ಷಕ ವರ್ಗ ಹುಟ್ಟಿಕೊಂಡಿದೆ. ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು, ರಾಘವೇಂದ್ರ ಆಚಾರ್ಯ ಜನ್ಸಾಲೆ ಸೇರಿದಂತೆ ಹಲವು ಯುವ ಭಾಗವತರಿಗೆ, ಕಲಾವಿದರಿಗೆ ಅಪಾರ ಪ್ರಮಾಣದ ಆರಾಧಕರು ಕರಾವಳಿಯಲ್ಲಿದ್ದಾರೆ. ತೆಂಕು-ಬಡಗು ತಿಟ್ಟಿನ ವ್ಯತ್ಯಾಸವಿಲ್ಲದೆ ಪ್ರೇಕ್ಷಕರು ಇವರ ಗಾನವೈಭವಗಳನ್ನು ಆಸ್ವಾದಿಸುತ್ತಾರೆ.
-ಒಂದು ಕಾಲದಲ್ಲಿ ರಂಗಸ್ಥಳ, ಚೌಕಿಯನ್ನು ಬಿಟ್ಟು ಪ್ರೇಕ್ಷಕರಿಂದ ದೂರವೇ ಇರುತ್ತಿದ್ದ ಕಲಾವಿದರು ಇಂದು ಫೇಸ್‌ಬುಕ್, ವಾಟ್ಸಪ್, ಮೊಬೈಲ್ ಸಂಪರ್ಕ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಯಕ್ಷಗಾನ ಪ್ರದರ್ಶನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಸಿಗುತ್ತಿದೆ. ಯಕ್ಷಗಾನ ಕುರಿತು ಸಾಕಷ್ಟು ಪತ್ರಿಕೆಗಳು, ವೆಬ್‌ತಾಣಗಳು ಹುಟ್ಟಿಕೊಂಡಿದ್ದು ಪ್ರದರ್ಶನಗಳ ಒಳಿತು ಕೆಡುಕುಗಳ ಬಗ್ಗೆ ತಕ್ಷಣದ ಹಿಮ್ಮಾಹಿತಿ ಕಲಾವಿದರಿಗೂ ಸಿಗುತ್ತಿದ್ದು, ಪ್ರೇಕ್ಷಕ-ಕಲಾವಿದರ ನಡುವಿನ ಅಂತರ ಕಡಿಮೆಯಾಗಿದೆ.
-ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್‌ಗಳಲ್ಲಿ ಯಕ್ಷಗಾನ ಅಭಿಮಾನಿಗಳ ನೂರಾರು ಗ್ರೂಪುಗಳು ಹುಟ್ಟಿಕೊಂಡಿವೆ. ಕಲಾವಿದರು, ಮೇಳಗಳು, ತಿಟ್ಟುಗಳ ಹೆಸರಿನಲ್ಲಿ ಅನೇಕಾನೇಕ ಗುಂಪುಗಳಿದ್ದು, ಅವುಗಳಲ್ಲಿ ಯಕ್ಷಗಾನ ಮಾಹಿತಿ, ಹಾಡು, ವಿಡಿಯೋ, ಬರಹಗಳು ಕ್ಷಣ ಕ್ಷಣಕ್ಕೆ ಸಾವಿರಗಟ್ಟಲೆ ಮಂದಿಯನ್ನು ತಲಪುತ್ತಿದೆ. ಹೀಗೆ ಆಧುನಿಕ ಮಾಧ್ಯಮಗಳೂ ಯಕ್ಷಗಾನ ಪ್ರಸಾರದಲ್ಲಿ ತುಂಬಾ ಪ್ರಧಾನ ಪಾತ್ರ ವಹಿಸಿವೆ.
-ಹಿಂದಿನ ಕಾಲದ ಹಾಗೆ ಈಗ ಯಕ್ಷಗಾನ ಪ್ರದರ್ಶನಗಳಿಗೆ ಹೋಗುವುದು ಕಷ್ಟವಲ್ಲ, ಸಾಕಷ್ಟು ವಾಹನ ವ್ಯವಸ್ಥೆಯಿದೆ. ಬಯಲಾಟಗಳಲ್ಲಿ ಆಹಾರ, ಪಾನೀಯದಂಥಹ ಉಪಚಾರಗಳೂ ಸಿಗುತ್ತವೆ. ಹಿಂದಿನ ಹಾಗೆ ಬಯಲಲ್ಲಿ ಕುಳಿತು ಪ್ರದರ್ಶನ ನೋಡಬೇಕಾಗಿಲ್ಲ. ಉತ್ತಮ ಆಸನ ವ್ಯವಸ್ಥೆ, ಮಳೆಗೆ ಚಪ್ಪರದ ವ್ಯವಸ್ಥೆಯೂ ಇರುತ್ತದೆ. ಹೀಗಾಗಿ ಪ್ರೇಕ್ಷಕರಿಗೆ ಉತ್ತಮ ಅನುಕೂಲ ಇರುವಾಗ ಸಹಜವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.


ಅನುಕೂಲ ಏನೇನಾಯ್ತು?:
-ಬದಲಾದ ಸನ್ನಿವೇಶದಲ್ಲಿ ಕಲಾವಿದರಿಗೆ ಉತ್ತಮ ಗೌರವ ಸಿಗುತ್ತಿದೆ. ಬಹಳಷ್ಟು ಕಲಾವಿದರು ಸೆಲೆಬ್ರಿಟಿಗಳಾಗಿದ್ದಾರೆ. ವಿದೇಶಗಳು, ಹೊರರಾಜ್ಯಗಳಲ್ಲೂ ಯಕ್ಷಗಾನಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ.
-ಯಕ್ಷಗಾನ ಕಲಾವಿದರ ಆರ್ಥಿಕ ಸ್ಥಿತಿ (ಎಲ್ಲರದ್ದೂ ಅಲ್ಲ) ಈ ಜನಪ್ರಿಯತೆಯಿಂದ ಸುಧಾರಿಸಿದೆ. ಅದ್ಧೂರಿಯ ಯಕ್ಷಗಾನ ಬಯಲಾಟಗಳೂ ಹೆಚ್ಚುತ್ತಿದ್ದು, ಅದ್ಧೂರಿ ಪ್ರದರ್ಶನಗಳನ್ನು ಮಾಡಿದರೆ ಪ್ರೇಕ್ಷಕರು ಬರುತ್ತಾರೆ ಎಂಬುದು ದೃಢಪಟ್ಟಿದೆ.
-ಕಾಲಮಿತಿಯ ಬಯಲಾಟಗಳಿಂದಾಗಿ ಇಡೀ ರಾತ್ರಿ ನಿದ್ರೆ ಕೆಡಬೇಕಾದ ಅನಿವಾರ್ಯತೆಯಿಲ್ಲ. ರಾತ್ರಿ ೧೨ ಗಂಟೆ ತನಕವೋ, ೧ ಗಂಟೆ ತನಕವೋ ಪೂರ್ತಿ ಪ್ರದರ್ಶನ ನೋಡಿದ ತೃಪ್ತಿಯಿಂದ ಪ್ರೇಕ್ಷಕರು ಮನೆಗೆ ಮರಳಬಹುದು.
-ಯಕ್ಷಗಾನಕ್ಕೆ ಭವಿಷ್ಯವಿಲ್ಲ ಎಂಬ ಮಾತನ್ನು ಈಗಿನ ಟ್ರೆಂಡ್ ಸುಳ್ಳು ಮಾಡಿದೆ. ಉತ್ತಮ ಪ್ರೋತ್ಸಾಹದಿಂದ ಯುವ ಕಲಾವಿದರು ಬೆಳೆಯುತ್ತಿದ್ದಾರೆ. ಅವರ ಅಭಿಮಾನಿಗಳಾಗಿರುವ ಯುವ ಪ್ರೇಕ್ಷಕರು ಕೂಡಾ...


ವೇಗದ ಬೆಳವಣಿಗೆಯ ಹಿನ್ನಡೆಯೇನು:?
-ಕಡಿಮೆ ಅವಧಿಯಲ್ಲಿ ಪ್ರಸ್ತುತಪಡಿಸುವ ಗಾನವೈಭವ, ರಸಮಂಜರಿ ಜೊತೆಗಿನ ಫ್ಯೂಶನ್‌ನಂತಹ ಪ್ರದರ್ಶನ, ಒಂದೇ ರಾಗವನ್ನು ದೀರ್ಘವಾಗಿ ಆಲಾಪನೆ ಮಾಡುವುದು, ರಾಷ್ಟ್ರಭಕ್ತಿಗೀತೆ, ಭಕ್ತಿಗೀತೆ, ಭಾವಗೀತೆಗಳನ್ನೂ ಯಕ್ಷಗಾನೀಯ ಶೈಲಿಯಲ್ಲಿ ಹಾಡುವ ಪ್ರಯೋಗಗಳು, ನಾಲ್ಕೈದು ಚೆಂಡೆ ಮದ್ದಳೆಗಳ ವಾದನದಂತಹ ಪ್ರದರ್ಶನಗಳು ಜನಪ್ರಿಯತೆಯನ್ನೇನೋ ಪಡೆದಿವೆ. ಆದರೆ, ಇಂತಹ ಜನಪ್ರಿಯತೆ ಸುದೀರ್ಘ ಅವಧಿಯಲ್ಲಿ ಉಳಿದೀತೇ ಎಂಬ ಸಂಶಯವನ್ನು ಹಿರಿಯ ಕಲಾವಿದರು ವ್ಯಕ್ತಪಡಿಸುತ್ತಾರೆ. ಈಗಿನ ಕಾಲಮಾನಕ್ಕೆ ಇದು ಸರಿ. ಆದರೆ, ಈ ಅಭಿರುಚಿ ದೀರ್ಘಕಾಲ ಉಳಿದೀತೆಂದು ಹೇಳಲಾಗದು.
-ಯಕ್ಷಗಾನ ಕುರಿತು ಹೆಚ್ಚಿರುವ ಕ್ರೇಝ್‌ನಿಂದ ರಸಮಂಜರಿ, ತುಳು ನಾಟಕಗಳ ಕಲೆಕ್ಷನ್‌ಗಳು ಕರಾವಳಿಯಲ್ಲಿ ಗಣನೀಯವಾಗಿ ಕಡಿಮೆಯಾಗಿವೆ. ಇದನ್ನು ಸಂಘಟಕರೇ ಒಪ್ಪಿಕೊಳ್ಳುತ್ತಾರೆ. ಹಾಡುಗಾರರು, ನಾಟಕ ಕಲಾವಿದರಿಗೆ ಅವಕಾಶಗಳೇನೋ ಇವೆ. ಆದರೆ ನಾಲ್ಕೈದು ವರ್ಷಗಳ ಹಿಂದಿನಷ್ಟಿಲ್ಲ.
-ಕೆಲವು ನವೀನ ಪ್ರಯೋಗಗಳಿಗೆ ಪ್ರೇಕ್ಷಕರಿಂದ ಬೀಳುವ ಚಪ್ಪಾಳೆಗಳು, ಶಿಳ್ಳೆಗಳು ಎಷ್ಟೋ ಬಾರಿ ಕಲಾವಿದರಿಗೆ ಸಂತಸ ಕೊಡುತ್ತದೆ. ಆದರೆ, ಇದರಿಂದ ಮಾತ್ರ ಕಲಾವಿದರು ಬೆಳೆಯುವುದಲ್ಲ. ಪಾರಂಪರಿಕ ಶೈಲಿಯನ್ನೂ ಬೆಳೆಯಕೊಡಬೇಕು ಎಂಬುದು ವಿದ್ವಾಂಸರ ಅಭಿಮತ.
-ಕಾಲಮಿತಿಯಲ್ಲಿ ಯಕ್ಷಗಾನ ಪ್ರದರ್ಶನಗಳಿಂದ ಯಕ್ಷಗಾನಕ್ಕೆ ನ್ಯಾಯ ಸಲ್ಲಿಸಲಾಗದು ಎಂಬ ಅಪವಾದವಿದೆ. ವಿವಿಧ ರಾಗಗಳು, ಕಥಾವಿಸ್ತರಾಕ್ಕೆ, ವೇಷಗಳ ವೈವಿಧ್ಯತೆ, ಮಾತುಗಾರಿಕೆಗೆ ಕತ್ತರಿ ಬಿದ್ದು ಪೂರ್ಣ ಆಸ್ವಾದನೆ ಆಗದು ಎಂಬ ವಾಸ್ತವವೂ ಎದುರಿಗಿದೆ.
------

ಇಂದಿನ ಹೊಸ ಪ್ರೇಕ್ಷಕರಿಗೆ ಸುದೀರ್ಘ ಅವಧಿಯ ಕಾಲ ಕುಳಿತು ಬಯಲಾಟ ನೋಡುವ ತಾಳ್ಮೆಯಿಲ್ಲ. ಗಾನವೈಭವ, ಕಾಲಮಿತಿಯಂತಹ ಪ್ರಯೋಗಗಳು ಕಲಾವಿದರಿಗೆ ಸಾಕಷ್ಟು ಅವಕಾಶ ಕಲ್ಪಿಸಿವೆ, ಆರ್ಥಿಕ ಭದ್ರತೆ ನೀಡಿದೆ. ಬಹಳಷ್ಟು ಕಲಾವಿದರು ಇಂದು ಹೀರೋಗಳಾಗಿದ್ದಾರೆ. ಯಕ್ಷಗಾನದಲ್ಲೂ ಹೊಸತನ್ನು ಯೋಚಿಸುತ್ತಾ ಇರಬೇಕು. ಒಂದೇ ಶೈಲಿಯ ಪ್ರಯೋಗ ಮಾಡುತ್ತಿದ್ದರೆ ಅದಕ್ಕೆ ಹೆಚ್ಚು ಆಯುಷ್ಯ ಇರದು. ಪ್ರಯೋಗಗಳು ನಡೆಯುತ್ತಾ ಇರಬೇಕು.
-ವಾದಿರಾಜ ಕಲ್ಲೂರಾಯ, ಉಪನ್ಯಾಸಕ, ಯಕ್ಷಗಾನ ಕಲಾವಿದ, ನಿರೂಪಕ.
--------------
ಯಕ್ಷಾಭಿಮಾನ ಜಾಸ್ತಿಯಾಗಿರುವುದು ಖುಷಿಯ ವಿಚಾರ. ಆದರೆ, ಸಮಗ್ರ ಯಕ್ಷಗಾನವನ್ನು ಸ್ವೀಕರಿಸುವ, ನೋಡುವ ಕಲಾಭಿಮಾನಿಗಳ ಸಂಖ್ಯೆಕಡಿಮೆಯಾಗುತ್ತಿದೆ. ರಂಗದ ಒಂದು ಭಾಗದಲ್ಲೇ ತೃಪ್ತಿ ಪಡುವ, ಸುಖ ಅನುಭವಿಸುವವರ ಸಂಖ್ಯೆ ಹೆಚ್ಚಾಗುವುದು ಸಮಗ್ರ ಯಕ್ಷಗಾನದ ಬೆಳವಣಿಗೆ ದೃಷ್ಟಿಯಿಂದ ಪೂರಕವಲ್ಲ.
-ನಾ.ಕಾರಂತ ಪೆರಾಜೆ, ಯಕ್ಷಗಾನ ಕಲಾವಿದ, ಬರಹಗಾರ.
---------
-ಕೃಷ್ಣಮೋಹನ ತಲೆಂಗಳ.

No comments:

Popular Posts