ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ!


ನಮ್ಮ ಇಷ್ಟದ ಜೀವದ ಬಗ್ಗೆ ಇರುವ ಪೊಸೆಸಿವ್‌ನೆಸ್ ಅಥವಾ ವಿಪರೀತ ಕಾಳಜಿ, ನಿರೀಕ್ಷೆಯೇ ಮನಸ್ಸನ್ನು ಪ್ರಯೋಗಕ್ಕೆ ಇಡುತ್ತದೆ. ಒತ್ತಡದ ಬದುಕಿನಲ್ಲಿ ಜನ ವ್ಯಸ್ತರಾಗಿರುತ್ತಾರೆ ಅಂತ ಗೊತ್ತಿದ್ದರೂ ಸುಮ್ ಸುಮ್ನೇ ನಿರೀಕ್ಷೆಗಳನ್ನು ಇರಿಸಿರುತ್ತೇವೆ. ಅವನು ‘ಈ ಥರ ಅವಾಯ್ಡ್ ಮಾಡಿದ್ರೆ ಇನ್ನು ಮಾತನಾಡಲ್ಲ’ ಅಂತ ಕೈಗೊಳ್ಳುವ ಹುಸಿ ನಿರ್ಧಾರ ಮರೆತು ಎಂದಿಗಿಂತ ಹೆಚ್ಚು ಜಗಳ ಮಾಡುತ್ತೇವೆ. ಮಾತು ಬಿಡುತ್ತೇವೆ. ಮಾತು ಮುಂದುವರಿಸಲೇ ಸಿಟ್ಟು ಮಾಡುತ್ತೇವೆ! ಮರುದಿನ ಮತ್ತದೇ ನಿರೀಕ್ಷೆ, ತುಡಿತ, ಅವನ ಉಸಿರ ತಾಳದ ಲಯ ತಪ್ಪಿದೆಯೇ ಎಂದು ಪರೀಕ್ಷಿಸಿ ಹುಸಿ ಆತಂಕಕ್ಕೆ ದೂಡುವ ಮನಸ್ಸು...
-------------------------

ನಮಗೆ ಒಬ್ಬರು ಇಷ್ಟ ಅಂತ ಆದರೆ, ಅವರಿಗೆ ನೋವಾದರೆ, ಹುಶಾರಿಲ್ಲದಿದ್ದರೆ ಮನಸ್ಸಿನಲ್ಲೇ ಸಂಕಟ ಪಡ್ತೇವಲ್ವ?  ಅವರೆಷ್ಟೇ ಬೈದ್ರೂ ಮತ್ತೆ ಮತ್ತೆ ಮಾತನಾಡ್ತೇವಲ್ವ? ಅವರಿರುವ ಜಾಗವನ್ನೋ, ಅವರು ಇಷ್ಟಪಡುವುದನ್ನೋ ನಾವೂ ಪ್ರೀತ್ಸೋಕೆ ಶುರು ಮಾಡ್ತೇವಲ್ವ, ಇದಕ್ಕೆಲ್ಲ ಏನು ಹೆಸರು?
ಅವರು ನಮ್ಜೊತೆ ಸರಿಯಾಗಿ ಮಾತನಾಡದೆ ಇದ್ರೂ ಅವರ ನಾಲ್ಕಕ್ಷರದ ಒಂದು ಪದಕ್ಕೂ ಎಷ್ಟೊಂದು ಮಹತ್ವ ಕೊಟ್ಟು ಸಂಭಾಷಿಸುತ್ತೇವಲ್ವ? ಅವರು ಆದಷ್ಟು ನಮ್ಮ ಹತ್ರಾನೇ ಮಾತನಾಡಲಿ ಅಂತ ಆಶಿಸುತ್ತೇವಲ್ವ? ಅವರು ಅಂದಿದ್ದು ಮನಸಿಗೆ ನೋವಾದ್ರೂ ಅದನ್ನು ಅಷ್ಟೇ ಆನಂದದಿಂದ ಸ್ವೀಕರಿಸಿ ಅದರ ಬಗ್ಗೆ ಗಂಟೆಗಟ್ಟಲೆ ಮನಸ್ಸಿನಲ್ಲೇ ಗುದ್ದಾಡ್ತೇವಲ್ವ? ನಿಮಗೆ ಇಂತಹದ್ದೊಂದು ಭಾವನೆಗಳನ್ನು ತರುವ ಸ್ನೇಹಿತರಿದ್ದಾರಾ?
ಕಡೆಗೆ ಅವರಲ್ಲಿ ಮೆಟೀರಿಯಲಿಸ್ಟಿಕ್ ಆಗಿ ಕಾಣುವಂತಹ ಪ್ರಾಯ, ಬಣ್ಣ, ಉಡುಪು, ಅಂದ ಚೆಂದ, ಯಾವುದನ್ನೂ ಗಮನಿಸದೆ ಕೇವಲ ಅವರ ಮನಸ್ಸನ್ನೂ, ಅದರಲ್ಲಿ ನಮಗೋಸ್ಕರ ಇರಬಹುದಾದ ಒಲವೋ, ವಾತ್ಸಲ್ಯವೋ, ಕರುಣೆಯೋ, ಕನಿಷ್ಠ ಅನುಕಂಪವೋ ಯಾವುದನ್ನೋ ಅತ್ಯಂತ ಅಮೂಲ್ಯವಾದ ಖಜಾನೆ ಅಂತ ಪರಿಗಣಿಸ್ತೇವಲ್ವ, ಇದಕ್ಕೇನು ಹೇಳಬೇಕು?
ಹೇಳಿ ಕೇಳಿ ಬಾರದ ಅಕ್ಕರೆ: ಹೌದು, ಕಾರಣವೇ ಇಲ್ಲದೆ ಹುಟ್ಟಿಕೊಳ್ಳುವ ಅಭಿಮಾನದ ಜೊತೆಗೊಂದು ಅಕ್ಕರೆ, ಅದರ ಹಿಂದೆ ಒಂದಷ್ಟು ಪೊಸೆಸಿವ್‌ನೆಸ್ ಹಾಗೂ ನಿರೀಕ್ಷೆ ಎಲ್ಲ ಸೇರಿ ನಿಮ್ಮ ಆತ್ಮೀಯತೆಯ ಸಂವಹನದಲ್ಲೊಂದು ಪುಟ್ಟ ನೋವು, ಹತಾಶೆ ಆಗೀಗ ಕಾಡುವುದು ಸಹಜ.
ಆತ್ಮೀಯ ಜೀವವೊಂದು ನಮಕೋಸ್ಕರ ಹಿಡಿಯಷ್ಟು ಪ್ರೀತಿ, ಅರೆಕ್ಷಣ ಸಮಯ ಮೀಸಲಿಡಬೇಕು, ಮಾತಿಗೆ ಪ್ರತಿಕ್ರಿಯಿಸಬೇಕು, ಜೋಕಿಗೆ ನಗಬೇಕು, ಕಾತರಕ್ಕೊಂದು ಅಚ್ಚರಿಯ ನೋಟ ಕೊಡಬೇಕೆಂಬೆಲ್ಲಾ ನಿರೀಕ್ಷೆ ಸಹಜ. ಅದು ದಂಪತಿಯಿರಬಹುದು, ಸ್ನೇಹಿತರಿರಬಹುದು, ಮುಖ ಪರಿಚಯವೇ ಇಲ್ಲದ, ಭಾಷೆಯೇ ಅರಿಯದ ಆನ್‌ಲೈನ್ ಸ್ನೇಹಿತನಿರಬಹುದು. ಸಂಬಂಧದ ಹಿಂದಿನ ಕಾಳಜಿ, ನಿರೀಕ್ಷೆ ನಿರಾಸೆಯಾದಾಗ ಮೂಡ್ ಆಫ್ ಆಗುವುದು ಸಹಜ.
ಉತ್ತರ ಬಾರದಿದ್ರೆ ಅಸಹನೆ!:
ನೀವು ಮಾಡಿದ ಒಂದು ಮೆಸೇಜ್, ಹೋದ ಮಿಸ್ಡ್ ಕಾಲ್, ಈ ಮೇಲ್ ಯಾವುದಕ್ಕೂ ಒಂದಷ್ಟು ಗಂಟೆ ಪ್ರತಿಕ್ರಿಯೆಯೇ ಬಾರದೇ ಹೋದಾಗ ನಿಮ್ಮನ್ನು ಸಂಶಯ ಕಾಡುವುದು ಸಹಜ. ಅವನು ಸೇಫ್ ಆಗಿದ್ದಾನೆ ತಾನೆ? ತೊಂದರೆಗೆ ಸಿಲುಕಿಲ್ಲ ತಾನೆ? ಅಥವಾ ನನ್ನನ್ನು ಬಿಟ್ಟು ಇನ್ಯಾರ ಹತ್ರಾನೋ ಚಾಟ್ ಮಾಡ್ತಾ ಇರಬಹುದಾ? ಈಗೀಗ ನನ್ನನ್ನು ಅವಾಯ್ಡ್  ಮಾಡ್ತಾ ಇದ್ದಾನ? ಅಥವಾ ನಾನು ಮಾತನಾಡಿದ್ದು ಏನಾದರೂ ಹೆಚ್ಚು ಕಡಿಮೆಯಾಯ್ತ? ಇತ್ಯಾದಿ, ಇತ್ಯಾದಿ...
‘ಹಾಯ್‌‘ ಅಂತ ಬೆಳಗ್ಗೆ ಕಳಿಸಿದ ಮೆಸೇಜಿಗೆ ಸಂಜೆ ೬ ಗಂಟೆಯ ವೇಳೆಗೆ, ‘ಸಾರಿ ಬಿಝಿ ಇದ್ದೆ’ ಅಂತ ಮೂರು ಪದದ ಉತ್ತರ ಬಂದಾಗ ನಿರಾಳವಾದರೂ, ಸಿಟ್ಟು ಒದ್ದುಕೊಂಡು ಬರುತ್ತದಲ್ಲ, ಇದನ್ನು ಆಗಲೇ ಹೇಳಬಹುದಿತ್ತಲ್ವ ಅಂತ. ಪರಿಚಯವಾದಾಗ ಗಂಟೆಗಟ್ಟಲೆ ಮಾತನಾಡ್ತಾ ಇದ್ದವನು ಈಗ ಯಾಕೆ ನಾನು ಮಾತನಾಡಿಸಿದ್ರೆ ಮಾತ್ರ, ಅದೂ ಒತ್ತಾಯಕ್ಕೆಂಬಂತೆ ಉತ್ತರ ಕೊಡ್ತಾನೆ ಎಂಬ ವಿಮರ್ಶೆ ಬೇರೆ ಹುಟ್ಟಿಕೊಳ್ಳುತ್ತದೆ!
ಸುಲಭಕ್ಕೆ ಕಳಚಿಕೊಳ್ಳೋದಿಲ್ಲ: ಹುಚ್ಚು ಹುಚ್ಚೇ ಸಿಟ್ಟು, ಆತಂಕ ತರುವ ಬೆಚ್ಚನೆಯ ಸಂಬಂಧ ಹಾಗೆಲ್ಲಾ ತುಂಡಾಗುವುದಿಲ್ಲ ಬಿಡಿ. ನೀವು ಬೇಡ ಅಂದುಕೊಂಡರೂ ಆ ಭಾವ ಬೆಸುಗೆ ಮತ್ತೆ ನಿಮ್ಮನ್ನು ಹುಡುಕಿ ಕಟ್ಟಿ ಬಿಡುತ್ತದೆ.
ನಿಮಗೆ ಗೊತ್ತಾ?
-ಯಾರ ಜೊತೆಗೆ ಜಾಸ್ತಿ ಪ್ರೀತಿ ಇರುತ್ತದೋ ಅವರೊಂದಿಗೆ ಜಗಳವಾಗುವುದೂ ಜಾಸ್ತಿನೇ. ಅದು ಮೌಲ್ಯಕ್ಕೋಸ್ಕರ ಮಾಡುವ ಚರ್ಚೆಯೇ ಹೊರತು ದ್ವೇಷವಲ್ಲ.
-ನಾವು ಇಷ್ಟ ಪಡುವ ಜೀವ ನಮಗೋಸ್ಕರ ಸಮಯ ಮೀಸಲಿಡಬೇಕು ಎಂಬ ನಿರೀಕ್ಷೆಯೇ ನಮ್ಮೊಳಗೆ ತಳಮಳಗಳನ್ನು ಹುಟ್ಟುಹಾಕುವುದು. ಅವರ ಬಗ್ಗೆ ವಿಪರೀತ ಕಾಳಜಿಯನ್ನು ಇಟ್ಟುಕೊಂಡು ಸ್ವಲ್ಪ ಹೊತ್ತು ದೂರ ಹೋದಾಗಲೂ ವಿನಾ ಆತಂಕ ಮೂಡಿಸಿ ಕಾಡಿಸುವುದು.
-ಒಂದೊಮ್ಮೆ ಅರ್ಥ ಮಾಡಿಕೊಂಡು ಜೊತೆಗಿರುವ ಸ್ನೇಹಿತರು ಒಂದು ದಿನವೋ, ಒಂದು ವಾರವೋ ಮೂಡ್ ಬದಲಿಸಿದ್ದಾರೆ ಅಥವಾ ಮೌನವಾಗಿದ್ದಾರೆ ಎಂಬ ಮಾತ್ರಕ್ಕೆ ಅವರ ಸ್ವಭಾವ ಬದಲಾಗಿದೆ, ನಮ್ಮನ್ನು ವಂಚಿಸಿದ್ದಾರೆ, ದೂರವಿಟ್ಟಿದ್ದಾರೆ ಎಂದೆಲ್ಲಾ ದುಡುಕಿ ತೀರ್ಮಾನಿಸುವುದು ಖಂಡಿತಾ ಸರಿಯಲ್ಲ. ಅವರವರ ವೈಯಕ್ತಿಕ ಬದುಕು, ಪರಿಸ್ಥಿತಿ, ಸಂದರ್ಭಗಳು ತಾತ್ಕಾಲಿಕವಾಗಿ ಅವರನ್ನು ಹಾಗೆ ಮಾಡಿರಬಹುದು. ಅವನೇನು, ಹೇಗೆ ಅಂತ ಅಂತ ನನಗೆ ಗೊತ್ತಿದ್ದ ಮೇಲೆ ಯಾವತ್ತಿದ್ದರೂ ಅವನು ಹಾಗೇನೇ ಇರ್ತಾನೆ ಅನ್ನುವ ಧೈರ್ಯ ನಿಮಗಿದ್ದ ಮೇಲೆ ವೃಥಾ ಸಂಶಯ, ಭೀತಿಗೆ ಆಸ್ಪದವೇ ಇರಬಾರದು.
-ಸುಮ್ ಸುಮ್ನೇ ನಿಮ್ಮ ಪ್ರೀತಿಪಾತ್ರರ ಜೊತೆ ಕಾಲು ಕೆರೆದು ಜಗಳ ಮಾಡಿ, ಮಾತು ಬಿಟ್ಟ ಮೇಲೆ ಏನೋ ಕಳ್ಕೊಂಡ ಫೀಲ್ ಆವರಿಸಿಕೊಳ್ತಾ ಇದೆ, ಖಾಲಿ ಖಾಲಿ ಅನಿಸ್ತಾ ಇದೆ ಅಂತಾದ್ರೆ ಮತ್ತೊಮ್ಮೆ ಮಾತಡಬೇಕು ಎಂಬುದೇ ಅರ್ಥ. ಒಂದು ಪುಟ್ಟ ದುಡುಕು ಅಷ್ಟು ಕಾಲದ ದೀರ್ಘ ಸಂಬಂಧಕ್ಕೆ ಪೂರ್ಣವಿರಾಮ ಹಾಕಬಾರದಲ್ವ... ರಿಫ್ರೆಶ್ ಬಟನ್ ಥರ ಸಣ್ಣ ಸಣ್ಣ ಜಗಳಗಳು.
-ನೆನಪಿಟ್ಟುಕೊಳ್ಳಿ, ಕಾರಣವೇ ಇಲ್ಲದ ಆರಾಧನೆ, ಅಭಿಮಾನ, ಪ್ರೀತಿಯ ಋಣವನ್ನು ಎಂದಿಗೂ ತೀರಿಸಲಾಗದು. ಅವರಿಗೋಸ್ಕರ ಸ್ವಲ್ಪ ಸಮಯ ಮೀಸಲಿಟ್ಟು ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳುವುದು ದೊಡ್ಡ ಗುಣ. ಒಂದು ಬ್ಲಾಂಕ್ ಮೆಸೇಜು, ಮಿಸ್ಡ್ ಕಾಲು, ಮೌನ ಸಂಭಾಷಣೆಯೂ ಸಂಬಂಧದ ಕೊಂಡಿಯನ್ನು ತುಂಡಾಗದಂತೆ ಕಾಪಾಡುವ ನೋವು ನಿವಾರಕಗಳು ಎಂಬುದೂ ಗೊತ್ತಿರಲಿ.
-ಕೃಷ್ಣಮೋಹನ ತಲೆಂಗಳ.

No comments: