ತೋಚಿದ್ದು...ಗೀಚಿದ್ದು 2



ಮಾತಿಗೆ ಮೀರಿದ್ದು...
......

ಹೇಳಿದ್ದು, ಹೇಳದ್ದು
ಹೇಳೋದಕ್ಕಾಗದ್ದು
ಹೇಳಿಯೂ ಅರ್ಥಾವಾಗದಂಥದ್ದು...
ಕೇಳಿಯೂ ಕೇಳದಂತಿದ್ದು
ಕೇಳಿದ ಮೇಲೆ ಮರೆತದ್ದು
ಕೇಳಿಸಿಕೊಳ್ಳುವ ಸಹನೆ ಕಳೆದದ್ದು

ಹೇಳಿದ ಮೇಲೂ ಉಳಿದದ್ದು
ಕಾಣಿಸಿದ್ದು, ಅನುಭವಿಸಿದ್ದು
ಅಳಿಸಿ ಹೋಗದೆ ಕಾಡಿದ್ದು
ನಾಳೆಗೆ, ನಾಡಿದ್ದಿಗೆ ಸಾಗ ಹಾಕಿ
ಗೋಳಿಗೆ, ಖುಷಿಗೆ ಭಾಷೆ ಬರೆದು
ವೇಳೆಯನ್ನೇ ಕ್ಷಯಿಸಿದ್ದು...

ಹೇಳಿಕೆಗೆ ಬದ್ಧವಾಗಿ
ಕೇಳಿದ್ದಕ್ಕೆ ಶುದ್ಧವಾಗಿ
ಗಾಳಿಗೆ ತೂರಿಬಿಡದೆ
ಕಳಿಸದೆ ಮಾತುಗಳ
ಉಳಿಸದೆ ಭಾವಗಳ
ಕಷ್ಟಕ್ಕೆ, ಇಷ್ಟಕ್ಕೆ
ಅಷ್ಟಿಷ್ಟು ಒರೆದದ್ದಷ್ಟೇ ದಕ್ಕಿದ್ದು.

ಭಾವಕ್ಕೆ ಭಾಷೆಯ ಹಂಗು
ನೋವಿಗೆ ಕಣ್ಣೀರು
ನಗುವಿಗೆ ಮಂದಹಾಸ
ಸಿಟ್ಟಿಗೆ ಕೆಂಪುಮೂತಿ
ಇವಕ್ಕೆಲ್ಲ ಮೀರಿದ ಯೋಚನೆಗೆ
ಪದಗಳಿಗೆ ಸಿಲುಕಿಸಲಾಗದ ವೇದನೆಗೆ
ಪ್ರಸವದ ದಿನ ಬರಲಾರದೋ ಏನೋ

ಆಲಿಸಿದ ಕಿವಿಗಳಿಗೆ
ಲಾಲಿಸಿದ ಮನಗಳಿಗೆ
ಪಾಲಿಸಿ, ಚಿಂತಿಸಿ, ಸಲಹಿದವರಿಗೂ
ಕೆಲವೊಮ್ಮೆ ಹೇಳಲಾಗದೆ
ಕೇಳಲಾಗದೆ, ಊಹಿಸಲಾಗದೆ
ಕಾಡುವ ಮಾತುಗಳಿಗೆ ರೂಪವೇ ಇಲ್ಲ!


-KM
---------------



ಮೌನಕ್ಕೂ ಟಿಪ್ಪಣಿ!
.......

ಮೌನಕ್ಕೂ ವಿಮರ್ಶೆ ಬೇಕಾ?
ಮೌನವೆಂದರೆ ಸಾಲದೆ
ಮೌನಿಯನ್ನು ಮೌನಿಯಾಗಿಸಿದ
ಮಹಾ ಮೌನ ಕಾರಣದ
ಮೌಲ್ಯವದೇನೋ ಹಿರಿದೆಂದು
ಅರ್ಥವಾಗದೇ?

ಭಾಷೆ ಸೊರಗಿದಾಗ
ಮಾತು ಬಳಲಿದಾಗ
ಭಾವ ಕಳವಳಿಸಿದಾಗ
ಸೋತು, ಬೆವೆತು, ಸದ್ದು
ಕರ್ಕಶವೆನಿಸಿದಾಗ ತಾನಾಗಿ
ಮಾತಾಗುವುದು ಮೌನ

ಮಾತಿನೊಡನೆ ಸೋತು
ಕುಸಿದ ಭಾವವ ಹಸಿಹಸಿಯಾಗಿ
ಹೇಳಲಾಗದೆ ಚಡಪಡಿಸಿ
ಪದಪುಂಜಗಳ ಜೋಡಿಸಲಾಗದೆ
ವಿವರಣೆಗೆ ಸತ್ವ ಕಳೆದಾಗ
ಮೂಡಿದ್ದು ಮೌನ

ಮೌನಕ್ಕೂ ನೂರು ಪ್ರಶ್ನೆ
ವಿಶ್ಲೇಷಣೆ, ಟಿಪ್ಪಣಿಗಳ ಹಂಗೇಕೆ?
ಮಾತಿಗೂ ಆಚೆಗಿನ ಶಾಂತ
ಮಹಾಸಾಗರದ ಏಕಾಂತ ತೆಪ್ಪದಲಿ
ಸದ್ದಿನಾಚೆಗಿನ ಪ್ರಶ್ನೆಗೂ ಮೀರಿದ
ಆ ಕ್ಷಣದ ಪ್ರಶಾಂತತೆಯ ಸೌಧ

ಮೌನವೆಂದರೇ ಅಲ್ಪವಿರಾಮ
ಉಪಪ್ರಶ್ನೆಗಳಿಗೂ ಮೀರಿದ್ದು
ಶೃತಿ, ಲಯ, ತಾಳವ ಹುಡುಕುವ
ಪ್ರಯತ್ನ ವ್ಯರ್ಥ
ಕಂಡುಕೊಳ್ಳಬಾರದೇ
ಮಾತು ಸೋತಿದೆ ಎಂದು

ಆರ್ಭಟ, ಮೂದಲಿಕೆ
ಚುಚ್ಚುಮಾತುಗಳಿಲ್ಲ
ಬೆಚ್ಚನೆಯ ಸಲಹೆಗಳಿಲ್ಲ
ಪೆಚ್ಚುಪೆಚ್ಚಾದ ಭಾವವಿಲ್ಲ, ಜಗಳವಿಲ್ಲ
ಮತ್ತೊಂದು ಪ್ರಶ್ನೆಗೆ ಆಸ್ಪದವೇ ಇಲ್ಲ
ಲಾಕರಿನೊಳಗಿಟ್ಟ ದುರಸ್ತಿಗೊಳಗಾದ ಭಾವ!


-KM


-------------

ಖಾಲಿ ಹಾಳೆಯ ಸ್ವಗತ!
....

ಖಾಲಿಹಾಳೆಯ
ಮೇಲೆ ಶಾಯಿ ಚೆಲ್ಲಿದ ಕಲೆ
ನೀರು ಬಿದ್ದರೆ ಕದಡೀತು,
ಹಾಳೆ ಬಲು ಸೂಕ್ಷ್ಮ
ರಟ್ಟಿನಂತೆ ಒರಟಲ್ಲ
ಜೋರಾಗಿ ಎಳೆದರೆ
ಚಿಂದಿ ಖಚಿತ

ಖಾಲಿಹಾಳೆಲಿ ಅಕ್ಷರ
ಮೂಡುತ್ತಿಲ್ಲ
ಬರೆದರೂ ಸ್ಪಷ್ಟವಿಲ್ಲ
ಬರೆದದ್ದೆಲ್ಲ ಮಾಸುವುದೇನು?
ಲೇಖನಿಯ ಶಾಯಿ
ತೆಳುವಾದ ಭಾಸ
ಮೂಡಿದ ಪದಗಳೇ ಮೋಸ

ಬರಹ ಮುಗಿಯುತ್ತಿಲ್ಲ
ಅಸಲಿಗೆ ಶುರುವೇ
ಆಗುವುದಿಲ್ಲ
ಮನನ ಮಾಡಿದ್ದು
ಮರೆತ ಹಾಗೆ
ಶೀರ್ಷಿಕೆ ಸಿಕ್ಕದೆ, ಕವನವೇ
ಆಗುತ್ತಿಲ್ಲ, ಅರೆಬರೆ ಬರಹ

ಕೈಗೆ ಸಿಕ್ಕಿದ ಕವನ
ಹಾಳೆಗೆ ಜಾರುವುದಿಲ್ಲ
ಪೆನ್ನಿಗೆ ಅಕ್ಷರಗಳೆ
ಒಲಿಯುವುದಿಲ್ಲ
ಬರೆದದ್ದೂ ಉಳಿಯುವುದಿಲ್ಲ
ಉಳಿದದ್ದು ಮನನವಾಗ್ತಿಲ್ಲ
ಸೋರಿ ಹೋಗ್ತಿದೆ ಕವಿತೆ

ಕಾಗದ ಹರಿಯುವ ಮೊದಲು
ಖಾಲಿ ಉಳಿಸುವ ಬದಲು
ಯಾರೋ ಕಸಿದು,
ತಿವಿದು, ಕಿಸಿಯುವ
ಅದೃಷ್ಟದ ರೇಖೆಯ
ಗೀಚುವ ಮೊನೆ ಕಾಣದೆ
ಖಾಲಿಯೇ ಉಳಿದಿದೆ ಹಾಳೆ!


-KM
 -----------------

ಅರ್ಥಶಾಸ್ತ್ರ!
------

ಕಂಡದ್ದು, ಕೇಳಿದ್ದು
ನೋಡಿದ್ದು, ಓದಿದ್ದು
ದಿಟವೋ, ಅನರ್ಥವೋ
ಭ್ರಮಯೋ ಕನವರಿಕೆಯೋ
ಅರ್ಥವಾಗಿದೆ ಅಂದುಕೊಂಡದ್ದು

ಕಂಡಿದ್ದಕ್ಕಿಂತ ಕಾಣದ್ದು
ಆಡಿದ್ದಕ್ಕಿಂತ ಆಡದ್ದು
ಹೇಳದ್ದು, ತೋರದ್ದು
ಊಹೆಗೆ ನಿಲುಕದ್ದು...ಅದನ್ನೇ
ಅರ್ಥವಾಗಿದೆ ಅಂದುಕೊಂಡದ್ದು

ಹತ್ತಿರವೆನಿಸಿದ್ದು
ಮನಸಿಗೆ ಎಟಕಿದ್ದು
ಮೋರೆಗೆ, ಮೂಡಿಗೆ
ಮಾತಿಗೆ, ಮೌನಕ್ಕೆ ಮಾರ್ಕು ಕೊಟ್ಟು
ಅರ್ಥವಾಗಿದೆ ಅಂದುಕೊಂಡದ್ದು

ಅಪಾರ್ಥ ಮಾಡುವ ಮೊದಲು
ಅರ್ಥ ಮಾಡಿಕೊಳ್ಳುವುದು
ಉತ್ತಮ ಅರ್ಥೈಸುವಿಕೆ
ಎಂಬ ಪ್ರಾಜ್ಞನ ಸಾಲಿನ ವೇದಾಂತವನ್ನೇ
ಅರ್ಥವಾಗಿದೆ ಅಂದುಕೊಂಡದ್ದು

ಅಸ್ಪಷ್ಟ, ಅಗೋಚರ
ದಾರಿ ತಪ್ಪಿಸುವ ದೃಷ್ಟಿ
ಸ್ಪಷ್ಟವಾಗಿದೆ ಎಂಬ ಕನವರಿಕೆ
ಮೂಗಿನ ನೇರದ ಚಿಂತನೆಗಷ್ಟೇ
ಅರ್ಥವಾಗಿದೆ ಅಂದುಕೊಂಡದ್ದು.



-KM -----------

ಸೀಮಿತ ವ್ಯಾಲಿಡಿಟಿ....!


ಇಂದಿನ ಖುಷಿಗೆ
ಇಂದೇ ವ್ಯಾಲಿಡಿಟಿ
ಟಾಪ್ ಅಪ್ ಮಾಡ್ಕೊಂಡ್ರೂ ಅಷ್ಟೇ
ರಿಚಾರ್ಜ್ ಪ್ಲಾನುಗಳಿಲ್ಲ
ತಾರಿಫ್ ಪ್ಲಾನುಗಳೆಲ್ಲ ದುಬಾರಿ

ಆಹ್ಲಾದಕತೆಯ ಗಡುವು
ಈ ಹೊತ್ತು, ಈ ಕ್ಷಣ
ಇಂದಿನ ಸೂರ್ಯಾಸ್ತದ ವರೆಗೆ
ನಾಳೆಗೆ ಬ್ಯಾಲೆನ್ಸ್ ಖಾಲಿ
ಹೊಸ ಪ್ಲಾನಿನ ಅನ್ವೇಷಣೆ

ಲವಲವಿಕೆಗೆ ತೂತು ಕೊರೆಯಲು
ಹತ್ತಾರು ಆಫರ್ ಗಳು
ಜಗ್ಗಿ ನಿಲ್ಲಿಸಿ ತೋರಿಸುವ
ಲೈಫ್ ಟೈಂ ಬ್ಯಾಲೆನ್ಸು
ಎಕ್ಸ ಪಯರಿ ಡೇಟು ಕಾಣ್ತಾನೆ ಇಲ್ಲ

ಆಫರ್ ಬಂದಾಗ ಹಾಕಿಸ್ಕೊಳ್ಳಿ
ಬಳಸಿ, ಹಿತಾನುಭವವಾಗ್ಲಿ
ಹೊತ್ತು ಜಾಸ್ತಿಯಿರೋದಿಲ್ಲ
ರಿಚಾರ್ಜು ಮೆಸೇಜು ಬರಬಹುದು
ಕೊನೆಗೆ ಬ್ಯಾಟರಿಯೇ ಖಾಲಿ ಆದ್ರೆ!


---------

ಕಣ್ಣಿಗೆಟಕಿದ ರೈಲು, ಕಾಲಿಗೆ...

ಅಗೋ ಬಂದಿದೆ ರೈಲು
ಕಿಟಕಿ ಪಕ್ಕದ ಖಾಲಿ ಸೀಟು
ಜನಜಂಗುಳಿಯಿಲ್ಲ, ರೂಟೂ ಚೆಂದ
ಅಷ್ಟೊಂದು ವೇಗವಿಲ್ಲ, ಸೀದಾ ಸಾದಾ
ಬೇಕಾದಲ್ಲಿ ಸ್ಟಾಪು, ಗಡಿಬಿಡಿಯೇನಿಲ್ಲ
ರಿಸರ್ವೇಶನ್ನೂ ಬೇಕಿಲ್ಲ.

ಅದೇ ಟೈಮಿಗೆ ಹೊರಟರೆ
ಬೇಕಾದ ಹೊತ್ತಿಗೇ ತಲಪೋದು ಗ್ಯಾರಂಟಿ
ಆರಾಮಾಗಿ ಸೀನರಿ ನೋಡ್ಕೊಂಡು
ಮಾತಾಡ್ಕೊಂಡು, ತಿಂದ್ಕಂಡು
ಅಷ್ಟಿಷ್ಟೋ ನಿದ್ರೆ ಮಾಡ್ಕೊಂಡು
ಸುಖ ಪಯಣಕ್ಕೆ ಹೇಳಿ ಮಾಡ್ಸಿದ ರೈಲದು

ತುಂಬ ಹೊತ್ತು ನಿಲ್ಲುತ್ತಂತೆ
ಪ್ಲಾಟ್ ಫಾರಂ ಪಕ್ಕದಲ್ಲೇ ಇದೆಯಂತೆ
ಹಳಿ ದಾಟೋದು ಬೇಕಿಲ್ವಂತೆ
ನೋಡೋಕು ಎಷ್ಟು ವೈನಾಗಿದೆ ಗಾಡಿ
ಇಷ್ಟದ ನೀಲಿ ಬಣ್ಣ, ಗಾಜಿನ ಕಿಟಕಿ
ಅದ್ರಲ್ಲಿ ಕೂತ್ರೇ ನಾನಿನ್ನು ಸಮಕಾಲೀನ

ಗಂಟೆ ಹೊಡ್ದ್ರು, ಸಿಗ್ನಲ್ಲು ಬಂದಾಯ್ತು
ಶಿಳ್ಳೆ ಹೊಡೀತು, ರೈಲು ಹೊರಡ್ತು
ಅಯ್ಯೋ...ಯಾರದು, ನನ್ನ ಕಾಲು ಕಟ್ಟಿದ್ದು
ನಡಿಯೋಕಾಗ್ತಿಲ್ವಲ್ಲ,
ಜೇಬಲ್ಲೂ ಕಾಸಿಲ್ಲ, ಮುಂದೆ ಹೋಗ್ತಾನೇ ಇಲ್ಲ
ನೋಡ್ತಾನೆ ಇದ್ದೆ, ರೈಲು ಹೊರಟೋಯ್ತು

ಕಂಡದ್ದು ಕನಸ, ಅಲ್ವಲ್ಲ
ನಿಲ್ದಾಣದ ಪಕ್ಕದಲ್ಲೇ ಇದ್ದೇನೆ
ಮತ್ತೊಂದು ರೈಲು ಬಂದೀತು,
ಕಾಲು ಮುಂದೆ ಹೋದೀತು,
ಮತ್ತೆ ಕಟ್ಟಿದ್ರೆ, ಹೆಜ್ಜೆ ಜಾರಿದ್ರೆ
ನಡಿಗೆ ಇದ್ದೇ ಇದೆ, ಅಸ್ಪಷ್ಟದ ಕಡೆಗೆ....

No comments: