ಪ್ರೊಫೈಲ್ ಮೋಡ್ ಮತ್ತು ಮೂಡ್!

ಮುಂಜಾನೆ ಮೂಡಿದಾಗಿನಿಂದ ಹಿಡಿದು, ಸಂಜೆ ಮುಳುಗೋ ತನಕ ಕಣ್ಣೆದುರಿಗಿರೋದು ಅದೇ ಸೂರ್ಯ. ಆದರೆ ಬೆಳಗ್ಗೆ ಮತ್ತು ಸಂಜೆ ಕಂಡಾಗ ಅವನನ್ನು ಕಂಡಾಗ ಆಗುವ ಖಷಿ ನಡು ನೆತ್ತಿ ಮೇಲಿದ್ದು ತಲೆ ಸುಡುವಾಗ ಆಗುವುದಿಲ್ಲ ಅಲ್ವ. ಅಥವಾ ಬೆಳಗ್ಗೆ 10, 11 ಗಂಟೆಗೆ ಕಣ್ಣು ಕುಕ್ಕುವಾಗ, ಮಳೆಗಾಲದಲ್ಲಿ ಏಕಾಏಕಿ ಮಾಯವಾಗಿ ಮಬ್ಬು ಕವಿದಾಗಲೂ ಒಮ್ಮೊಮ್ಮೆ ಸೂರ್ಯನ ಮೇಲೆ ಅಸಮಾಧಾನ ಆಗುತ್ತದಲ್ವ. ಪಾಪ ಇದಕ್ಕೆ ಸೂರ್ಯನೇನು ಮಾಡಿಯಾನು. ಅವನ ಕೆಪಾಟಿಸಿ, ಹೊಳಪು ಅಷ್ಟೇ ಇರುತ್ತದೆ. ತಿರುಗುತ್ತಿರುವುದು ಭೂಮಿ, ಅಡ್ಡ ಬರುವುದು ಮೋಡಗಳು. ಹಾಗಾಗಿ ಆಯಾ ಸಮಯಕ್ಕೆ, ಆಯಾ ಪರಿಸ್ಥಿತಿಗೊಂದು ರೀತಿ ಸೂರ್ಯ ನಮಗೆ ಕಾಣಿಸ್ತಾನೆ. ಅಂದರೆ, ಯಾವ ಹೊತ್ತಿಗೆ ಹೇಗೆ ನೋಡುತ್ತೇವೆಯೋ ಹಾಗೆ ಆತ ಕಾಣಿಸ್ತಾನೆ. ನಿಜ ಅಲ್ವ. ಕೆಲವೊಮ್ಮೆ ನಮ್ಮ ಮೂಡ್ ಕೂಡಾ ಹೀಗೆಯೇ ಅಲ್ವ ಮೊಬೈಲ್ ನ ಪ್ರೊಫೈಲ್ ಮೋಡ್ ಥರಹ....


ಪ್ರತಿ ವ್ಯಕ್ತಿತ್ವಕ್ಕೊಂದು ಸಾಮಾನ್ಯ ಸ್ವಭಾವ ಇರುತ್ತದಲ್ವ. ನಾವವರನ್ನು ಅರ್ಥ ಮಾಡಿಕೊಂಡ ಹಾಗೆ ಅವರು ಪಾಪ, ಜೋರು, ಸಿಡುಕ, ಜಿಪುಣ, ರಸಿಕ, ಸೋ ಕಾಲ್ಡ್ ಒಳ್ಳೆಯೋನು ಅಂಥೆಲ್ಲ ನಾವೇ ಬ್ರಾಂಡ್ ಮಾಡಿರುತ್ತೇವೆ. ಎಷ್ಟೋ ಬಾರಿ ಅವರು ಹಾಗೆ ಹೇಳಿಕೊಂಡಿರುವುದಿಲ್ಲ. ನಮ್ಮ ಗ್ರಹಿಕೆಗೆ, ನಮಗೆ ನಿಲುಕಿದ್ದರ ಆಧಾರದಲ್ಲಿ ನಾವೇ ಒಂದು ಪ್ರೊಫೈಲ್ ಚಿತ್ರ ಕಲ್ಪಿಸಿಕೊಂಡು ಆ ಸ್ಥಾನದಲ್ಲಿರಿಸಿ ವ್ಯವಹರಿಸುತ್ತೇವೆ. ಈ ಸ್ವಭಾವ ಆಯಾ ಪರಿಸ್ಥಿತಿ, ಸಂದರ್ಭ, ಕಾಲಮಾನ,ವಯೋಮಾನಕ್ಕನುಗುಣವಾಗಿ ತಾತ್ಕಾಲಿಕವಾಗಿಯೋ, ಸಾಂದರ್ಭಿಕವಾಗಿಯೋ ಬದಲಾಗಬಹುದು. ಅದೇ ವ್ಯಕ್ತಿ ಇನ್ನೊಮ್ಮೆ ನಿಷ್ಠುರನಾಗಿ, ನಿರ್ದಯಿಯಾಗಿ, ಸಿಡುಕನಾಗಿ, ಅಳುಮುಂಜಿಯಾಗಿ, ಹೇಡಿಯಾಗಿ, ಸಮಯಸಾಧಕನಾಗಿಯೂ ಕಾಣಿಸಬಹುದೇನೋ. ಮೊಬೈಲನ್ನಾದರೇ ಮೊಬೈಲಿನ ಮಾಲೀಕನ ಆಯ್ಕೆಗನುಗುಣವಾಗಿ ಬೇರೆ ಬೇರೆ ಪ್ರೊಫೈಲ್ ಮೋಡ್ ನಲ್ಲಿಟ್ಟು ಅದರ ಸ್ವಭಾವ ಬದಲಿಸಬಹುದು. ಆದರೆ ವ್ಯಕ್ತಿಯದ್ದಾದರೆ ಅದು ತನ್ನಿಂತಾನೆ ಬದಲಾಗಬಹುದಾದ ಮೂಡುಗಳು ಅಲ್ವ... ಎಷ್ಟೋ ಬಾರಿ ಈ ಬದಲಾವಣೆ ಬೇಕೆಂದು ಆಗುವುದಲ್ಲ, ಪರಿಸ್ಥಿತಿ ವ್ಯಕ್ತಿ ಮೇಲೆ ಸವಾರಿ ಮಾಡಿದಾಗ, ಇಕ್ಕಟ್ಟು, ಅಸಹಾಯಕತೆ ಕಾಡಿದಾಗ, ಅತಿಯಾದ ಖುಷಿಯಾದಾಗ, ದೊಡ್ಡದೊಂದು ಬದಲಾವಣೆ ಸಂಭವಿಸಿದಾಗ ಆ ಕ್ಷಣಕ್ಕೆ, ಆ ದಿನಕ್ಕೆ, ಆ ಕಾಲಮಾನಕ್ಕೆ ವ್ಯಕ್ತಿತ್ವದ ಪ್ರೊಫೈಲ್ ಕೂಡಾ ಒಂದು ಘಳಿಗೆ ಬದಲಾಗೋದಿಲ್ವೇ... ಆದು ಕಾಲ ಸಹಜವಲ್ವೇ.... 


ಬಹುಷ ಇಂತಹ ಸಾಂದರ್ಭಿಕ ಸಂದರ್ಭಗಳಲ್ಲೇ ಅದೇ ವ್ಯಕ್ತಿ ನಮಗೆ ಸಿಡುಕನಾಗಿ, ಕಿವುಡನಾಗಿ, ಮೂಗನಾಗಿ, ನಮ್ಮನ್ನುಕಡೆಗಣಿಸುವವನಾಗಿ, ಮರೆತವನಾಗಿ ಕಾಣಿಸೋದು. ನಮ್ಮಲ್ಲೊಂದು ಸಹೃದಯತೆ ಇದ್ದರೆ, ಅರ್ಥ ಮಾಡಿಕೊಳ್ಳುವ ಮನಸ್ಸಿದ್ದರೆ, ತುಸು ವಿವೇಚನೆಯ ವ್ಯವಧಾನ ಇದ್ದರೆ, ಶಾಂತವಾಗಿ ಕುಳಿತು ಯೋಚಿಸಿದರೆ ನಮಗೂ ಅದು ಅರ್ಥವಾದೀತು. ಯಾರನ್ನು ನಾವು ಹೇಗೆಂದು ಅರ್ಥ ಮಾಡಿಕೊಂಡಿದ್ದೇವೆಯೋ, ಅದು ಸರಿ ಎಂದು ನಮಗೆ ಅರ್ಥವಾಗಿದೆಯೋ... ಹಾಗಿದ್ದರೆ, ನಮ್ಮ ಜಡ್ಜ್ ಮೆಂಟ್ ಸರಿ ಅಂತಾದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ತಾತ್ಕಾಲಿಕವಾಗಿ ಬದಲಾದ ಮಾತ್ರಕ್ಕೆ ಆ ವ್ಯಕ್ತಿಯೇ ಬದಲಾದ, ಎಕ್ಕುಟ್ಟೋದ ಅಂದುಕೊಳ್ಳುವುದು ಸರಿಯಲ್ಲ ಅಲ್ವ.

ಬಹಳಷ್ಟು ಬಾರಿ ನಾವು ಕಾಣೋದಕ್ಕೂ ವಾಸ್ತವಕ್ಕೂ ತುಂಬಾ ವ್ಯತ್ಯಾಸ ಇರುತ್ತದೆ. ನಾವು ಕಂಡಿದ್ದು ಮಾತ್ರ ಸತ್ಯಗಳಲ್ಲ. ಕಂಡುಕೊಂಡಿದ್ದು ಸತ್ಯ ಎಂಬದು ಅರಿವಿರಬೇಕು. ಪ್ರತಿದಿನ ಸೇತುವೆ ಮೇಲೆ ಪ್ರಯಾಣ ಮಾಡುತ್ತೇವೆ. ಗಟ್ಟಿಮುಟ್ಟಾಗಿದೆ, ಸಪಾಟಾಗಿದೆ. ನಿಜ. ಇದು ನಾವು ಕಂಡುಕೊಂಡಿದ್ದು. ಆ ಸೇತುವೆಯ ಒಂದು ಭಾಗ ಕುಸಿದು, ಅದು ಬೀಳದ ಹಾಗೆ ಅದಕ್ಕೊಂದು ಆಧಾರ ಕಂಭ ಕೊಟ್ಟಿರಬಹುದು ಕೆಳಗೆ, ಅದನ್ನು ನಾವು ಕೆಳಗಿಳಿದು ನೋಡುತ್ತೇವೆಯೇ, ಇಲ್ಲ. ಯಾಕೆಂದರೆ ಅದು ನಮ್ಮ ಕಣ್ಣಂದಜಾಗಿಂತ ಆಚೆ (ಕೆಳಗೆ) ಇರುವಂಥದ್ದು. ಅಲ್ವ... ಇದರಲ್ಲಿ ಸೇತುವೆಯ ತಪ್ಪೇನಿದೆ. ನಮ್ಮ ಕಣ್ಣೇ ನಮಗೆ ಪ್ರಥಮ ವರ್ತಮಾನ ಮಾಹಿತಿ ನೀಡುವಂಥದ್ದು. ಕಣ್ಣಿನಾಚಿಗಿನ ವಿವೇಚನೆ, ಚಿಂತನೆ, ಜಿಜ್ನಾಸೆ, ಸಂಶೋಧನೆಯ ಬಳಿಕ ಕಂಡುಕೊಳ್ಳುವಂಥದ್ದು ಇನ್ನಷ್ಟು ಇರುತ್ತವೆ. ಎಷ್ಟೋ ಬಾರಿ ಮೇಲ್ನೋಟಕ್ಕೆ ಕಂಡಿದ್ದರ ಆಧಾರದಲ್ಲಿ ನಾವೊಂದು ಜಡ್ಜ್ ಮೆಂಟಲ್ ನಿರ್ಧಾರಕ್ಕೆ ಬಂದು ಬಿಟ್ಟಿರುತ್ತೇವೆ. ಅದು ಹೀಗೆ, ಅವನು, ಅವಳು ಹೀಗೆ ಅಂಥ. ಅದೇ ಜಡ್ಜ್ ಮೆಂಟಲ್ ನಿರ್ಧಾರವನ್ನೇ ಆಧಾರವಾಗಿಟ್ಟು ಅವರಿಂದ ಒಂದಷ್ಟು ನಿರೀಕ್ಷೆ, ಒಂದು ವ್ಯಾವಹಾರಿಕ ಸಂಬಂಧ ಎಲ್ಲ ಇರುತ್ತದೆ. ಎಂದೋ ಒಂದು ದಿನ ಅವರ ಇನ್ನಷ್ಟು ಫೀಚರ್ ಗಳು ಕಂಡಾಗ ಅಥವಾ ಕಂಡುಕೊಂಡಾಗ ಜನವೇ ಬೇರೆಯೇನೋ ಅನಿಸುತ್ತದೆ. ನಿಮಗೆ ಎಷ್ಟೋ ಬಾರಿ ಹಾಗೆ ಅನ್ಸಿಲ್ವ....
ಡಿಪಿ ಯಲ್ಲಿ ಕಾಣುವ ಪ್ರಸನ್ನ ನಗು, ಎಫ್ ಬಿನಲ್ಲಿ ಹಾಕುವ ಬಿಂದಾಸ್ ಸ್ಟೇಟಸ್ ಗಳು, ಸಕತ್ ಸೆಲ್ಫೀಗಳನ್ನೂ ಮೀರಿದ ಒಂದು ಬದುಕು, ಕಾಣದ ಜಗತ್ತು, ಮನಸ್ಸಿನ ಇನ್ನೊಂದು ಮಗ್ಗುಲು ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲರಲ್ಲಿ ಮಸುಕಾಗಿ ಕಾಣಿಸುತ್ತದೆ. ಕೆಲವರದ್ದು ತಡವಾಗಿ, ಇನ್ನು ಕೆಲರದ್ದು ಅಪರೂಪವಾಗಿ ಅಷ್ಟೇ.... ಹಾಗೆ ಕಂಡಾಗಲೇ ಜನ ಬೇರೆ ಅಂತ ನಮಗನಿಸೋದು.
ವೊಮ್ಮೆ ಗ್ರಹಿಕೆಗೆ ಆಚೆಗೊಂದು ಬದುಕಿರುತ್ತದೆ. ಪ್ರತಿ ದಿನ ನಿಮ್ಮ ಹತ್ತಿರವೇ ಕುಳಿತು ಮಾತನಾಡಿ ಹೋಗುವವರು, ಅಕ್ಕಪಕ್ಕದಲ್ಲಿ ನಡೆದಾಡುವವರ ಹಿಂದೆಯೂ ಬೇರೆಯೇ ಒಂದು ಕಥೆ ಇರುತ್ತದೆ. ಅವರದನ್ನು ಹೇಳ್ಕೊಂಡಿರುವುದಿಲ್ಲ, ನೀವದನ್ನು ಕೇಳಿರುವುದಿಲ್ಲ. ಒಂದು ಸುಪ್ತ ಸಾಧನೆ, ಏನೋ ಒಂದು ಅನಾರೋಗ್ಯ, ಏನೋ ಸಂದಿಗ್ಧ, ಅಸಹಾಯಕತೆ, ಅವರಿಗಿರಬಹುದು. ಎಲ್ಲವನ್ನೂ ಎಲ್ಲರಲ್ಲೂ ಹೇಳಿಕೊಳ್ಳಲಾಗುವುದಿಲ್ಲ. ಅಸಲಿಗೆ ಎಷ್ಟನ್ನು ಹೇಳಿಕೊಳ್ಳಲಾಗುತ್ತದೆ ಹೇಳಿ. ಹೇಳಿಕೊಳ್ಳುತ್ತಾ ಕೂರುವುದೋ ಅಥವಾ ಪರಿಸ್ಥಿತಿಯನ್ನು ನಿಭಾಯಿಸುವುದೋ ಎಂಬ ಸಂದಿಗ್ಧ ಹಲವರಿಗೆ....



ಅದು ಮನಸ್ಸಿನ ಶಕ್ತಿಯೂ ಹೌದು ಮಿತಿಯೂ ಹೌದು. ಮನಸ್ಸಿಗೊಂದು ಸೆನ್ಸರ್ ಇಲ್ಲ ತಾನೆ. ಪಂಚೇಂದ್ರಿಯಗಳು ತಲುಪಿಸಿದ್ದನ್ನಷ್ಟೇ ಪ್ರೊಸೆಸಿಂಗ್ ಮಾಡುವುದು ಮನಸ್ಸು. ಎಕ್ಸರೇ ಥರ, ಸ್ಕ್ಯಾನಿಂಗ್ ಯಂತ್ರದ ಥರ ಇನ್ನೊಂದು ಮನಸ್ಸನ್ನು ಸ್ಕ್ಯಾನ್ ಮಾಡಿ, ಕ್ಷಕಿರಣಗಳನ್ನು ಇಳಿಸಿ ಇಡೀ ರಿಪೋರ್ಟ್ ಕೊಟ್ಟು ಈ ಜನ ಹೀಗೆ ಅಂಥ ಸರ್ಟಿಫಿಕೇಟ್ ಕೊಡುವ ವ್ಯವಸ್ಥೆ ಪುಣ್ಯಕ್ಕೆ ಇನ್ನೂ ಬಂದಿಲ್ಲ.

ಹಾಗಾಗಿ ನಾವು ಅರ್ಥಮಾಡಿದ್ದಕ್ಕಿಂತ ಹೆಚ್ಚು ಅರ್ಥ ಆಗುವುದಕ್ಕಿದೆ ಎಂಬ ಸತ್ಯ ಅರಿವಿದ್ದರೆ ಚೆನ್ನ. ಯಾರನ್ನೋ ತಪ್ಪಾಗಿ ಅರ್ಥ ಮಾಡುವ ಮೊದಲು, ನೀನು ಬದಲಾಗಿದ್ದಿ ಅಂತ ಹಿಯಾಳಿಸುವ ಮೊದಲು, ನಾಲ್ಕು ಜನರೆದುರು ಅಪಹಾಸ್ಯ ಮಾಡುವ ಮೊದಲು, ಮಾತು ಬಿಡುವ ಮೊದಲು, ಎಷ್ಟೋ ದಿನ ಕಟ್ಟಿಕೊಂಡು ಬಂದ ಆಪ್ಯಾಯತೆಯ ಸಂಕೋಲೆಯನ್ನು ಕಡಿಯುವ ಮೊದಲು ತುಸು ಯೋಚಿಸಿ...
ಅವರ ಜಾಗದಲ್ಲಿ ನಾವು ನಿಂತು, ನಮ್ಮ ಜಾಗದಲ್ಲಿ ಅವರನ್ನು ನಿಲ್ಲಿಸಿ ಚಿಂತಿಸಿ...
ಸಾವಧಾನದ ವಿವೇಚನೆಗೆ ಕಣ್ಣಿಗೆ ಕಾಣದ್ದನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತದೆ. ಯಂತ್ರಗಳಾಗದೆ, ವಿವೇಚನೆಗೆ ಕೆಲಸ ಕೊಟ್ಟಾಗ, ದುಡುಕುವ ಮೊದಲು ಯೋಚಿಸಲು ಸಾಧ್ಯವಾದಾಗ ಇದೆಲ್ಲಾ ಸುಲಭವಾಗುತ್ತದೆ. ಯಾರದೋ ಕಾಣದ ಕಣ್ಣೀರು, ಹೇಳಲಾಗದ ಸಂಧಿಗ್ಧ, ಬರೆಯಲಾಗದ ಸಂಕಷ್ಟ, ವಿವರಿಸಲಾಗದ ಖುಷಿ, ಅನುಭಿಸಲಾಗದ ವಿಷಾದಗಳು ಕಾಣದಿದ್ದರೂ ಒಳಗಣ್ಣಿಗೆ ಕಾಣಲು ಸಾಧ್ಯವಾದಾಗ ಮೂಡಬಹುದಾದ ಸಾಲುಗಳು.

ಕೇಳದೆ ನಿಮಗೀಗ ದೂರದಲ್ಲಿ ಯಾರೋ....


-KM

1 comment:

Unknown said...

ಚೆನ್ನಾಗಿದೆ