‘ಕೆಂಪು ಕಳವೆ’ಯನ್ನು ಶ್ರವ್ಯ ಮಾಧ್ಯಮದಲ್ಲಿ ‘ಓದಿದ್ದು’....

ಶುರುವಾದ ಪ್ರತಿಯೊಂದೂ ಕೊನೆಗೊಳ್ಳಲೇ ಬೇಕು. ಹೌದು. ಕಳೆದ ಏಪ್ರಿಲ್‌ನಲ್ಲಿ ಆರಂಭವಾದ ಬಾನುಲಿ ಧಾರಾವಾಹಿ ‘ಕೆಂಪು ಕಳವೆ’ ೩೫ನೇ ಕಂತಿನೊಂದಿಗೆ ಡಿ.೨೪ರಂದು ಕೊನೆಗೊಳ್ಳುತ್ತಿದೆ. ಸುದೀರ್ಘ ಕಥೆ, ಸುದೀರ್ಘ ಸರಣಿ ಕೂಡಾ ಹೌದು. ಇಡೀ ಧಾರಾವಾಹಿಯ ಅಷ್ಟೂ ಭಾಗ ಕಳೆದ ಏಪ್ರಿಲ್‌ನಲ್ಲಿ ಮೂರು ದಿನಗಳಲ್ಲಿ ಧ್ವನಿಮುದ್ರಣ ಕಂಡಿತ್ತು. ಸರೋಜಿನಿ ಶೆಟ್ಟಿ, ಚಿನ್ನಾ ಕಾಸರಗೋಡು ಅವರಂತಹ ಹಿರಿಯ ಪಳಗಿದ ನಟರೊಂದಿಗೆ, ರಂಗಕರ್ಮಿಗಳು, ಇತ್ತೀಚೆಗೆ ನಾಟಕ ಧ್ವನಿಪರೀಕ್ಷೆಯಲ್ಲಿ ಆಯ್ಕೆಯಾದ ಕಲಾವಿದರೂ ಸೇರಿದ ತಂಡವಿದು. ಆಯಾ ಪಾತ್ರಗಳಿಗೆ ಅಗತ್ಯ ಸ್ಕ್ರಿಪ್ಟ್‌ಗಳನ್ನು ಅಚ್ಚುಕಟ್ಟಾಗಿ ರೂಪಿಸಿದ್ದ ಡಾ.ಸ್ವಾಮಿ ಸರ್ ನೇತೃತ್ವದ ತಂಡ ಪಾತ್ರಗಳಿಗನುಗುಣವಾಗಿ ಧ್ವನಿಮುದ್ರಣ ನಡೆಸುತ್ತಾ ಬಂದಿದ್ದು, ಪೂರ್ತಿ ಕತೆ ಆ ಹಂತದಲ್ಲಿ ಬಹುಷಃ ಯಾವ ಪಾತ್ರಧಾರಿಗಳಿಗೂ ಅರ್ಥವಾಗಿರಲಾರದು. ಹಿನ್ನೆಲೆ ಸಂಗೀತ ಸಹಿತ ರೇಡಿಯೋದಲ್ಲಿ ಪ್ರಸಾರವಾಗುತ್ತಾ ಬಂದಾಗಲೇ ಕಥಾ ಹಂದರ ಅನಾವರಣವಾಗಿದ್ದು...
ಕೆಂಪುಕಳವೆ ಕುರಿತು ತೋಚಿದ್ದು, ಗೀಚಿದ್ದು...: 
---------------


ಪ್ರತಿ ಬದುಕೂ ಒಂದು ಕಥೆಯೇ. ಪ್ರತಿಯೊಬ್ಬರ ಜೀವನಯಾತ್ರೆಯೂ ಧಾರಾವಾಹಿಯೇ. ಆದರೆ ಪ್ರತಿ ಜೀವನಗಾಥೆ ಬರಹವಾಗುವುದಿಲ್ಲ. ದಾಖಲಾಗಬೇಕಾದ ಅನುಭವಗಳೆಲ್ಲ ಕಥೆಗಳೋ, ಕಾದಂಬರಿಗಳೋ ಆಗುವುದಿಲ್ಲ. ಸಿನಿಮೀಯ ಜೀವನದ ತಿರುವುಗಳು ಎಂದಿಗೂ ಲೋಕಮುಖಕ್ಕೆ ಪ್ರಕಟವಾಗುವುದಿಲ್ಲ. ಜೀವನಾದರ್ಶಗಳು ಎಷ್ಟೋ ಬಾರಿ ತೆರೆ ಮರೆಯಲ್ಲಿ ಇತಿಹಾಸಗಳಾಗಿರುತ್ತವೆ. ಹಿರಿಯ ಲೇಖಕ ಕೆ.ಟಿ.ಗಟ್ಟಿ ಅವರು ತಾವು ಬದುಕಿನಲ್ಲಿ ಕಂಡದ್ದನ್ನೇ (ಅವರೇ ಹೇಳಿಕೊಂಡ ಹಾಗೆ) ದಾಖಲಿಸಿ ರಚಿಸಿದ ೪೫೩ ಪುಟಗಳ ಕಾದಂಬರಿ ಕೆಂಪು ಕಳವೆ ಮಂಗಳೂರು ಆಕಾಶವಾಣಿಯಲ್ಲಿ ಕಳೆದ ೩೪ ವಾರಗಳಿಂದ ಬಾನುಲಿ ಧಾರಾವಾಹಿ ರೂಪದಲ್ಲಿ ಪ್ರಸರಾಗುತ್ತಿತ್ತು. ಈ ಸರಣಿ ಡಿ.೨೪ರಂದು ೩೫ನೇ ಕಂತಿನೊಂದಿಗೆ ಕೊನೆಗೊಳ್ಳುತ್ತಿದೆ. ಸಾಮಾಜಿಕ ಗುರುತಿಸುವಿಕೆಯನ್ನೇ ಹೊಂದಿರದ ಮಾನು ಮತ್ತವಳ ಕುಟುಂಬದ ಒಂದು ತಲೆಮಾರಿನ ಕತೆಯ ಪ್ರಸ್ತುತಿ ಕೇಳುಗರನ್ನು ಪರಿಣಾಮಕಾರಿಯಾಗಿ ತಲುಪಿದೆ ಎನ್ನುವುದೇ ಈ ಕಾಲದ ವಿಶೇಷ ಹಾಗೂ ಸ್ವರ ಮಾಧ್ಯಮದ ಗೆಲವು ಕೂಡಾ...

ಇತಿಹಾಸಕ್ಕೂ ವರ್ತಮಾನಕ್ಕೂ ಸೇತು...: ಕಾಸರ ಎಂಬ ಪಟ್ಟಣದ ಸಮೀಪದ ಚೂರಿ ಎಂಬ ಗ್ರಾಮದ ಮಾನು ಎಂಬ ಮಹಿಳೆಯ ಹೆಸರೇ ಅಪರೂಪವಾಗಿರುವ ಮಾರ ಎಂಬ ಜಾತಿಗೆ ಸೇರಿದ ಕುಟುಂಬದ ಕಥೆ. ಬಿರುಮ ಎಂಬ ಮಣ್ಣಿನ ಗೋಡೆ ಕಟ್ಟುವ ಕಾಡುವಾಸಿ ಮೂಲದ ಜನಾಂಗದ ಧೀರನ ಪತ್ನಿ ಮಾನು. ಇಡೀ ಕಥೆಯಲ್ಲಿ ಜೀವನ್ಮುಖಿ ಉತ್ಸಾಹವಾಗಿರುವ ಮಹಿಳೆ. ಆಕೆಗೆ ಮೂವರು ಗಂಡು ಮಕ್ಕಳು ಮಾದ, ಜೂಜ, ಬೂದ. ಪತಿ ಅಕಾಲದಲ್ಲಿ ಮೃತಪಟ್ಟ ಬಳಿಕ. ಮಕ್ಕಳನ್ನು ಆಕೆಯ ಸಾಕುತ್ತಾಳೆ. ಕಥಾ ನಾಯಕ ಮಾದನಿಂದ ತೊಡಗಿ ಇತರ ಮೂವರು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಾರೆ. ತೀರಾ ಹಿಂದುಳಿದ ಜನಾಂಗಕ್ಕೆ ಸೇರಿದ ಅವರೂ ಬದುಕುತ್ತಾ, ಎಡರು ತೊಡರುಗಳನ್ನು ಎದುರಿಸುತ್ತಾ ಬೆಳೆದು ಶೈಕ್ಷಣಿಕವಾಗಿಯೂ ಗಟ್ಟಿಯಾಗಿ ತುಳಿತಗಳಿಗೆಲ್ಲ ಉತ್ತರ ನೀಡುವಷ್ಟರ ಮಟ್ಟಿಗೆ ಮುಂದೆ ಬಂದಿರುತ್ತಾರೆ.... 
ಚೂರಿಯೆಂಬ ಗ್ರಾಮದಲ್ಲಿ ಬೇರೆ ಬೇರೆ ಬೆಳವಣಿಗೆಗಳಿಗೆ ಸಾಕ್ಷಿಯಾಗಿ ಬೆಳೆದು ಬಂದ ಮಾನು ಮತ್ತವಳ ಕುಟುಂಬದ ಒಟ್ಟೂ ಬದುಕೇ ಕೆಂಪು ಕಳವೆ. ಅದು ಮಾನುವಿನ ದೊಡ್ಡ ಮಗ ಮಾದನ ಮೂಲಕ ನಿರೂಪಣೆಯಾಗುತ್ತಾ ಹೋಗುತ್ತದೆ.

ಕೆಂಪು ಕಳವೆ ಎಂಬ ಸಂಕೇತ: 
ಊರಿನ ಧನಿಕ ಶಿವರಾಮಯ್ಯ ಒಂದು ಕಾಲದಲ್ಲಿ ಮಾದನ ಮನೆಯಿಂದ ಕೊಂಡು ಹೋಗಿದ್ದ ಒಂದು ಸೇರು ಕೆಂಪು ಕಳವೆ (ಸುಗಂಧ ಭರಿತ ಬತ್ತದ ತಳಿ) ಯನ್ನು ವಾಪಸ್ ಮಾಡುವುದೇ ಇಲ್ಲ. ಎಳವೆಯಲ್ಲಿ ಕೇಳಲು ಹೋದ ಮಾದನನ್ನು ಜಾತಿ ಹೆಸರಿನಲ್ಲಿ ಅವಮಾನಿಸಿ ಕಳುಹಿಸುತ್ತಾನೆ. ಎಷ್ಟೋ ವರ್ಷದ ಬಳಿಕ ಓದು ಬರಹ ಕಲಿತ ಬಳಿಕವೂ ಮಾದನಿಗೆ ಅವರ ಮನೆಯಿಂದ ತಂದ ಬತ್ತವನ್ನು ಕೊಡಲು ಶಿವರಾಮಯ್ಯ ಒಪ್ಪುವುದೇ ಇಲ್ಲ. ಕೊನೆಗೆ ಶಿವರಾಮಯ್ಯನ ಮಗಳು, ತನ್ನ ಸಪಪಾಠಿ ಗೌರಿಯನ್ನೇ ಮದುವೆಯಾಗುವ ಮಾದ ಆ ಕೆಂಪು ಕಳವೆ ಬತ್ತವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ ಮಾತ್ರವಲ್ಲ. ಮಾನುವಿನ ಮನೆಯವರೂ ಬತ್ತ ಬೆಳೆದು ತಮ್ಮ ಸ್ವಾಭಿಮಾನ ಕಾಪಾಡಿಕೊಳ್ಳುತ್ತಾರೆ.

ಈ ಕತೆಯುದ್ದಕ್ಕೂ ಗ್ರಾಮ್ಯ ಪರಿಸರ, ಅಲ್ಲಿನ ಕ್ಷುಲ್ಲಕ ರಾಜಕೀಯ, ಮನಸ್ಸನ್ನು ಹಸಿರುಗೊಳಿಸುವ ಹಳ್ಳಿಯ ಹಸಿರಿನ ವಿವರಣೆ, ಕೃಷಿ ಪ್ರೀತಿ, ಚೂರಿ ಗ್ರಾಮವನ್ನು ಕಾಡಿದ ಕಳ್ಳಬಟ್ಟಿ ಸಾರಾಯಿಯ ಕಾಟ, ಪೇತ್ರು ಮತ್ತು ಅವನ ಮನೆಯವರು ಊರಿನವರಿಗೆ ಕೊಡುವ ಕಾಟ, ಲೋಭಿ ಕೊಗ್ಗು ಪೈಯಂತಹ ಪ್ರಾತಿನಿಧಿಕ ವರ್ತಕರು, ಜಾತಿ ಬಗ್ಗೆ ದ್ವಂದ್ವಗಳೊಂದಿಗೆ ಮಾದನನ್ನು ಕಾಡುವ ಕವಿ ಕುಮಾರ, ಮಾದನ ಬದುಕನ್ನೇ ಬದಲಿಸಿದ ಗೆಳೆಯ ಹರಿ, ಆತನ ತಂದೆ ಉಮೇಶ ರಾಯರು, ಮೇಷ್ಟ್ರು ಚಂದ್ರಕಾಂತ ಶರ್ಮ, ಓದಲು ಕಲಿಸಿದ ಗುರುಗಳಾದ ಶ್ರೀಧರ ಶರ್ಮರು ಹೀಗೆ ಬದುಕನ್ನು ಕುಗ್ಗಿಸುವ ಮತ್ತು ಜೀವನ ಪ್ರೀತಿ ಕಲಿಸಿದ ಎರಡೂ ಮಾದರಿಯ ಪಾತ್ರಗಳು ಕಾದಂಬರಿಯುದ್ದಕ್ಕೂ ಕಾಡುತ್ತವೆ

ಸ್ವಾತಂತ್ರ್ಯಪೂರ್ವದಲ್ಲಿ ಆರಂಭವಾಗುವ ಕತೆ ಅದೇ ಚಿತ್ರಣವನ್ನು ಹೊಂದಿದೆ. ಬೆಳೆದ ಬತ್ತಕ್ಕೆ ಲೆವಿ (ತೆರಿಗೆ) ಹಾಕುವುದು, ಮನೆ ಮನೆಗೆ ಬೆಳೆ ಪರಿಶೀಲಿಸಲು ಬರುವ ಕಂದಾಯ ಇಲಾಖೆಯವರು, ಪೊಲೀಸರು, ಬತ್ತವನ್ನು ರಹಸ್ಯ ಕೋಣೆಯಲ್ಲಿ ಬಚ್ಚಿಡುವ ಮಾನ ಮತ್ತವರ ಮನೆಯವರು...ಒಂದು ಹಂತದ ಶಿಕ್ಷಣದ ಬಳಿಕ ಅಪ್ಪಟ ಕೃಷಿಕನಾಗುವ ಜೂಜ. ಕೃಷಿಯಿಂದಲೇ ಬದುಕು ಆರಂಭಿಸಿ ಬಳಿಕ ವರ್ತಕನೂ ಆಗಿ ಸ್ವಾವಲಂಬಿಯಾದ ಉದಾಹರಣೆ ಕತೆಯುದ್ದಕ್ಕೂ ಆವರಿಸಿಕೊಳ್ಳುತ್ತದೆ...

ಸುಮ, ಐಡಾ, ಮೂಸ ಮತ್ತವನ ಮನೆಯವರು... ಹೀಗೆ ಎಲ್ಲ ಧರ್ಮಕ್ಕೆ ಸೇರಿದ ಎಲ್ಲ ವಿಚಾರಗಳಿಗೆ ಹೊಂದಿಕೊಂಡ ವ್ಯಕ್ತಿತ್ವಗಳು ಕಾಣಸಿಗುತ್ತವೆ ಚೂರಿ ಗ್ರಾಮದಲ್ಲಿ.
ಕಾದಂಬರಿಯಿಡೀ ನಾಯಕ ಮಾದನ ಅಂತರಾತ್ಮವೇ ‘ದೇವರು’ ಎಂಬ ಹೆಸರಿನಲ್ಲಿ ನೀಡುವ ಮಾರ್ಗದರ್ಶನದ ಮಾತುಗಳು ಒಟ್ಟೂ ಕತೆಯ ಆಶಯವನ್ನು ಆಗಾಗ ಸಮ್ಮರಿ ರೂಪದಲ್ಲಿ ನೀಡುತ್ತಾ ಹೋಗುತ್ತದೆ. ಈ ಪಾತ್ರವು ಹಲವು ಜಿಜ್ನಾಸೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತದೆ.

ಕಾಡುವ ತತ್ವಜ್ಞಾನ: ಇದಕ್ಕೆ ಹೊರತಾಗಿ ಇಡೀ ಕಾದಂಬರಿಯನ್ನು ಆವರಿಸಿರುವ ಫಿಲಾಸಫಿ ಬದುಕಿನ ಎಷ್ಟೋ ಸತ್ಯಗಳನ್ನು ಪರಿಣಾಮಕಾರಿಯಾಗಿ ಬಿಚ್ಚಿಡುತ್ತವೆ. ಮಾದನಾಗಲಿ, ಅವನಮ್ಮ ಮಾನುವಾಗಲೀ, ದೇವರು, ಚಂದ್ರಕಾಂತ ಶರ್ಮರು... ಕತೆಯ ನಡುನಡುವೆ ಉದ್ಧರಿಸುವ ಜೀವನಾನುಭವಗಳ ಪಾಠ ಓದುಗ ಅಥವಾ ಕೇಳುಗನ ಬದುಕಿನಲ್ಲಿ ಬಂದಿರುವಂಥಹ ಸತ್ಯಗಳೇ ಆಗಿವೆ. ಈ ಕಾರಣಕ್ಕೆ ಕತೆಯನ್ನು ಪ್ರತಿಯೊಬ್ಬರೂ ಎಲ್ಲೋ ಒಂದು ಕಡೆ ತಮ್ಮ ಬದುಕಿನೊಂದಿಗೆ ಸಮೀಕರಿಸಿ ನೋಡಬಹುದಾದ ಪ್ರಮೇಯವಿದೆ.

ಕತೆಯ ಪ್ರತಿ ಪಾತ್ರಕ್ಕೂ ಒಂದು ಆರಂಭದ ಜೊತೆಗೆ ತಾರ್ಕಿಕ ಅಂತ್ಯ ಅಥವಾ ನಡೆಯನ್ನು ಲೇಖಕರು ಯಶಸ್ವಿಯಾಗಿ ಒದಗಿಸಿದ್ದಾರೆ. ಯಾವುದೇ ಪ್ರಶ್ನೆಗಳು, ಗೊಂದಲಗಳನ್ನು ಬಾಕಿ ಇರಿಸದೆ ಕತೆಯನ್ನು ಮುಗಿಸುತ್ತಾರೆ. ಹಳ್ಳಿ, ಅಲ್ಲಿನ ಹಸಿರು, ನೀರು, ತಾಂತ್ರಿಕ ಬೆಳವಣಿಗೆ ಕಾಣದ ಹಿಂದಿನ ಕಾಲದ ಬದುಕು, ರಿವಾಜುಗಳು, ಜಾತಿಯ ಕಾಟ, ಅಸ್ಪೃಶ್ಯತೆ, ಸಾಮಾಜಿಕ ಕ್ರಾಂತಿ, ಸ್ವಾಭಿಮಾನ, ನವಿರು ಪ್ರೀತಿ, ವಾಂಛೆ ಎಲ್ಲವನ್ನೂ ಹದವಾಗಿ ಬೆರೆಸಿದ್ದಾರೆ. ಚೂರಿ ಎಂಬ ಗ್ರಾಮವಂತೂ ಕಣ್ಣಿಗೆ ಕಟ್ಟುವ ಹಾಗಿದೆ.

ಓದುವ ಕತೆ ಕೇಳುವ ಧಾರಾವಾಹಿಯಾಗಿದ್ದು: ಇನ್ನು ಈ ಕಾದಂಬರಿಯನ್ನು ರೇಡಿಯೋ ಧಾರಾವಾಹಿಯಾಗಿ ಪರಿವರ್ತಿಸಿದ ಮಂಗಳೂರು ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕ ಡಾ.ಬಿ.ಎಂ.ಶರಭೇಂದ್ರ ಸ್ವಾಮಿಯರ ಪ್ರಯತ್ನದ ಬಗ್ಗೆ ಉಲ್ಲೇಖಿಸಲೇ ಬೇಕು. ಓದಲೆಂದೇ ಕೆ.ಟಿ.ಗಟ್ಟಿಯವರು ರಚಿಸಿದ ಕೃತಿಯನ್ನು ಬಾನುಲಿಯೆಂಬೋ ಶ್ರವ್ಯ ಮಾಧ್ಯಮಕ್ಕೆ ಭಟ್ಟಿ ಇಳಿಸುವುದು ಸುಲಭದ ಮಾತಲ್ಲ. ಈ ಸೂಕ್ಷ್ಮವಾದ ಕತೆ ಕೇಳುಗರನ್ನು ಎಷ್ಟರ ಮಟ್ಟಿಗೆ ತಲುಪಬಹುದು ಎಂದು ಕಲ್ಪಿಸಿ ಅದರ ಸ್ಕ್ರಿಪ್ಟ್ ತಯಾರಿಯೂ ಸುಲಭದ ಮಾತಲ್ಲ. ಡಾ.ಸ್ವಾಮಿ ಮತ್ತು ಬಾನುಲಿಯ ಅವರ ನಿರ್ಮಾಣ ನೆರವಿನ ತಂಡ ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದಲ್ಲಿಗೇ ಧಾರಾವಾಹಿಗೆ ಅರ್ಧ ಪಾಲು ನ್ಯಾಯ ದೊರಕಿಸಿದೆ. ಇನ್ನು ಮಾನುವಿನ ಪಾತ್ರ ನಿರ್ವಹಿಸಿದ ಹಿರಿಯ ಕಲಾವಿದ ಸರೋಜಿನಿ ಶೆಟ್ಟಿ, ಗಂಭೀರ ಸ್ವರದ ದೇವರಾದ ಚಂದ್ರಹಾಸ ಉಳ್ಳಾಲ, ಜೂಜ ಪಾತ್ರಧಾರಿ ಕ್ರಿಸ್ಟೋಫರ್ ಡಿಸೋಜ ಸೇರಿದಂತೆ ಆಯಾ ಪಾತ್ರಗಳಿಗೆ ಜೀವ ತುಂಬಿದ ಕಲಾವಿದರು, ಕತೆಯ ನಿರ್ಮಾಣದಲ್ಲಿ ಬಳಸಿದ ಹಿನ್ನೆಲೆ ಸಂಗೀತ. ಇಡೀ ಕತೆಯನ್ನು ನಿರೂಪಕ ಹಾಗೂ ನಿರೂಪಕಿ ಮೂಲಕ ವಿವರಿಸಿದ ತಂತ್ರ ನಿರೂಪಕರಾಗಿ ಡಾ.ಶರಭೇಂದ್ರ ಸ್ವಾಮಿ ಹಾಗೂ ನಿರೂಪಕಿಯಾಗಿ ಎಸ್. ಉಷಾಲತಾ, ಮಂಜುಳಾ ಸುಬ್ರಹ್ಮಣ್ಯ, ಗಾಯತ್ರಿ ನಾನಿಲ್ ಹಾಗೂ ರೂಪಶ್ರೀ ನಾಗರಾಜ್ ಅವರ ನಿರೂಪಣೆಯೂ ಧಾರಾವಾಹಿಯನ್ನು ‘ಜನ ರೇಡಿಯೋ ಕೇಳುವುದಿಲ್ಲ’ ಎಂಬ ವಿಶಿಷ್ಟ ಆರೋಪವಿರುವ ಈ ಕಾಲದಲ್ಲೂ ಆಸಕ್ತ ಕೇಳುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಮಂಗಳೂರು ಬಾನುಲಿಯಲ್ಲಿ ‘ಕತೆ ಇನ್ನೂ ಇದೆ’, ಅನುಭವದಡುಗೆಯ ಮಾಡಿ, ತಾಳಮದ್ದಳೆ ಎಂಬಿತ್ಯಾದಿ ಬಾನುಲಿಗೆಂದೇ ಸಿದ್ಧಪಡಿಸಿದ ಕೆ.ಟಿ.ಗಟ್ಟಿಯವರ ಧಾರಾವಾಹಿಗಳು ಪ್ರಸಾರವಾದ ಬಳಿಕ ಮೊದಲ ಬಾಲಿಗೆ ನಿರ್ದೇಶಕ ಡಾ.ಶರಭೇಂದ್ರ ಸ್ವಾಮಿಯವರು ಕೆ.ಟಿ.ಗಟ್ಟಿಯವರ ಜೀವನ ಕಥನ ಕೆಂಪು ಕಳವೆ ಎಂಬ ಕಾದಂಬರಿಯನ್ನೇ ಬಾನುಲಿಯ ನಿರೂಪಾವಣಾ ಧಾರಾವಾಹಿಯಾಗಿ ಪರಿವರ್ತಿಸಿ ಕತೆಗೆ ಕುಂದುಂಟಾಗದ ಹಾಗೆ ಕೇಳುಗರಿಗೆ ತಲುಪಿಸಿದ್ದಾರೆ. ಸುದೀರ್ಘವಾದ ೩೪ ಕಂತುಗಳಲ್ಲಿ ಪ್ರತಿ ವಾರ ಅರ್ಧರ್ಧ ಗಂಟೆ ಪ್ರಸಾರವಾಗುತ್ತಾ ಬಂದು ಡಿ.೨೪ರಂದು ೩೫ನೇ ಹಾಗೂ ಕೊನೆಯ ಕಂತಿನೊಂದಿಗೆ ಮುಕ್ತಾಯ ಕಾಣಲಿದೆ.

ಓದುವಿಕೆಗೆ ಸೂಕ್ತವಾದ ಕೃತಿಯನ್ನು ಕೇಳುವಿಕೆಗೆ ಅನುಕೂಲವಾಗುವಂತೆ ಸಿದ್ಧಪಡಿಸಿ, ಬಳಿಕ ಪ್ರಸ್ತುತಪಡಿಸಿ, ಸಂಕಲನ ಮಾಡಿ ಅದಕ್ಕೆ ಜೀವ ತುಂಬಿ, ಮತ್ತೆ ಪ್ರಸಾರ ಮಾಡಿದ ಮಂಗಳೂರು ಆಕಾಶವಾಣಿ ಗೆದ್ದಿದೆ, ಜೊತೆಗೆ ಲೇಖಕ ಕೆ.ಟಿ.ಗಟ್ಟಿ, ನಿರ್ದೇಶಕ ಡಾ.ಬಿ.ಎಂ.ಶರಭೇಂದ್ರ ಸ್ವಾಮಿಯವರು ಅಭಿನಂದನಾರ್ಹರು. ನಿರ್ಮಾಣದಲ್ಲಿ ನೆರವಾದ ಆಕಾಶವಾಣಿಯ ದೀಪಾ ಪಾವಂಜೆ, ಗೀತಾ ಉದಯ್ ಹಾಗೂ ವಿದ್ಯಾ ಎಸ್. ಕೂಡಾ. ಮತ್ತಷ್ಟು ಕೃತಿಗಳು ಆಲಿಸುವಿಕೆಗೆ ಕೇಳುಗರಿಗೆ ಒದಗಿ ಬರಲಿ ಎಂಬ ಆಶಯದೊಂದಿಗೆ...
-ಕೆಎಂ

1 comment:

Chandrashekhar, AIR Mangalore said...

Congratulations to all
It's quality, dedication, right mixture of narration, music and dialogue delivery, what made it a stupendous success.
Only Akashvani can produce such programs, it's the script who is the king. Many congratulations to Dr Sharabhendra Swamy.
Let's hope the Legacy continues