ಕ್ಷಣ ಗಣನೆ...
ಹಿಡಿದಿಟ್ಟರೂ ಕೊನೆಗೊಮ್ಮೆ
ಕಳಚಲೇ ಬೇಕಾದ ಕೊಂಡಿ...
ಈಗಲೋ, ಆಗಲೋ
ಗ್ರಹಿಸಲಾರದ, ಹೇಳಲಾಗದ
ವೇಳೆ ತೋರದ, ಗುಂಡಿ
ಒತ್ತಿದಂತೆ ಬೀಳದ ಸೃಷ್ಟಿ
ಹಿಡಿದಿಟ್ಟಿದೆಯೆಂದು ತೂಗಿದರೂ ಕಷ್ಟ
ಬೀಳುವ ಭೀತಿಯಿಂದ ಜಿಗಿದರೂ ವ್ಯರ್ಥ
ಬರೆದವನೊಬ್ಬನಿದ್ದಾನೆ
ಕಾಲ ನಿರ್ಣಯದಲ್ಲಿ
ಎಂದು ಬೀಳಬೇಕು, ಹೇಗೆ ಜಿಗಿಯಬೇಕು
ಮತ್ತೆಲ್ಲಿಗೆ ಹೋಗಿ ಸೇರಬೇಕೆಂಬ ಹಾಗೆ...
ಎಳೆಯಹೊರಟರೆ ಪೆಟ್ಟಾದೀತು...
ಆಧಾರ ಕೊಟ್ಟವೆಂದರೆ ಭಾರವಾದೀತು
ಹಣ್ಣಾದ ಮೇಲೆ ಉದುರಲೇಬೇಕು
ಕಾಲ ಕಳೆದಾಗ ಸರಿಯಲೇಬೇಕು
ಅಲ್ಲಿಗೆ ಮತ್ತೊಂದು, ಮಗದೊಂದು ಹಾಳೆ...
ನಾಳೆಗಳ ಮೇಲೆ ನಾಳೆಗಳಾದಾಗ...
ದೂರದಿಂದ ಕಂಡ ಕೊಂಡಿಗೂ
ಸಮೀಪದಲ್ಲಿ ಗೋಚರಿಸಿದ ಬಂಧನಕ್ಕೂ
ಎಷ್ಟೊಂದು ಅಂತರ,
ಕಂಡದ್ದೂ, ಅಂದುಕೊಂಡದ್ದಕ್ಕೂ ವೈರುಧ್ಯ,
ಸಲುಗೆಗೂ, ಗೌರವಕ್ಕೂ ಆಗಿ ಬಾರದ ಹಾಗೆ!
ಎಷ್ಟು ದಿನದ ಗಟ್ಟಿಯೆಂದು ಸೃಷ್ಟಿಕರ್ತನೇ ಬಲ್ಲ...
-KM
No comments:
Post a Comment