ಉದುರಿದ ಹೂವಿನ ದಾರಿ...





ಹೂವ ಕೊಯ್ಯುವುದೋ?
ಬಿದ್ದ ಪುಷ್ಪಗಳ ಹೆಕ್ಕುವುದೋ?
ಸದ್ದಿಲ್ಲದ ಬದುಕಿನೊಳಗಿನ
ನಸು ಗದ್ದಲದ ನಡುವೆ
ಒಂದು ಜಿಜ್ನಾಸೆ...
ಬರೆದವನು ಬೇರೊಬ್ಬನಿದ್ದರೆ
ವ್ಯರ್ಥ ವಿಮರ್ಶೆ, ಗಾಢಾಲೋಚನೆ

 
ಉದುರಿದ್ದು ಸಿಕ್ಕುವುದೋ?
ಬಾಚಿ ಪಡೆಯುವುದೋ?
ಅಷ್ಟೆರಕ್ಕೆ ಕೊಕ್ಕೆ ಹಾಕಿ
ಅಲ್ಲಾಡಿಸಿ, ಗಡಗಡಿಸಿ
ಎಳೆಯುುವುದೋ
ಪಡೆಯುವುದಕ್ಕು,
ದೊರುಕುವುದಕ್ಕೂ ಅದೆಷ್ಟು ವ್ಯತ್ಯಾಸ?

ಬಾನೆತ್ತರದ ವೃಕ್ಷದುದ್ದಕ್ಕೂ
ನಿಲುಕದ ನೋಟ....
ಎಟಕದಿದ್ದರೂ ಹುಸಿ ನಿರಾಸೆ
ಬಾನಿಗೂ ಭುವಿಗೂ
ಅಂತರದ ಸೇತುವಿನ
ಪ್ರಜ್ಞೆ ಮರೆತಂತೆ
ಗೋಚರಕ್ಕೂ, ಲಭ್ಯತೆಗೂ ಅಂತರವಿದ್ದ ಹಾಗೆ


ಯಾರೋ ಹೊಯ್ದ ನೀರು,
ಇನ್ಯಾರಿಗೋ ನೆಳಲು...
ನೋಡುವುದಕ್ಕೂ,
ಕಾಡುವುದಕ್ಕೂ
ಬುಡದಲ್ಲಿ ಪವಡಿಸುವುದಕ್ಕೂ
ಬಿಟ್ಟು ತೆರಳುವುದಕ್ಕೂ
ಇದೆ ಕಾಲಮಿತಿ!

ದಾರಿ ಅದುವೇ,
ಸುತ್ತು ಬಳಸಿ ಹೋದರೂ
ಮತ್ತಲ್ಲಿಗೇ ಬರಬೇಕು
ಗೂಗಲ್ಲಿನ ಮ್ಯಾಪೂ ಬೇಕಾಗಿಲ್ಲ...
ಪುಷ್ಪದ ಕಂಪಿಗೂ
ನೆರಳಿನ ತಂಪಿಗೂ
ಆಚಿನ ಮುಗಿಯದ ದಾರಿ...!
-KM


No comments:

Popular Posts