ರಾಜ್ಯದ ಎರಡನೇ ಅತಿ ಹಿರಿಯ ಕಾಲೇಜಿಗೆ 150ರ ಹೆಮ್ಮೆ.... ಫೆ.6ರಂದು ಸಂಭ್ರಮಾಚರಣೆ...
ಆತ್ಮೀಯರೇ....
ನಿಮಗೆಲ್ಲ ಗೊತ್ತಿರುವ ಹಾಗೆ ನಾಡಿದ್ದು ಫೆ.6ರಂದು ಗುರುವಾರ ನಮ್ಮ ನೆಚ್ಚಿನ ಮಂಗಳೂರು ವಿ.ವಿ.ಕಾಲೇಜ್ (ಹಳೆ ಸರ್ಕಾರಿ ಕಾಲೇಜು) ತನ್ನ 150ನೇ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಎಲ್ಲ ಸಿದ್ಧತೆಗಳು ನಡೆದಿವೆ. ವ್ಯಾಪಕ ಪ್ರಚಾರ ಕಾರ್ಯಗಳೂ ಭರದಿಂದ ಸಾಗಿವೆ. ಇನ್ನು ನಾವು-ನೀವೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಷ್ಟೇ ಬಾಕಿ.
ಎಷ್ಟೇ ಸಿದ್ಧತೆಗಳು ನಡೆದರೂ, ಎಷ್ಟೇ ಪ್ರಚಾರ ಕಾರ್ಯ ಕೈಗೊಂಡರೂ ಕಾರ್ಯಕ್ರಮ ಯಶಸ್ವಿಯಾಗುವುದು ಜನ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ. ಅದೂ ಸ್ವಯಂಪ್ರೇರಿತರಾಗಿ ನಾವೆಲ್ಲ ಕಾಲೇಜಿಗೆ ಹೋಗಿ ಕಾರ್ಯಕ್ರಮವನ್ನು ಚಂದಕಾಣಿಸಿಕೊಟ್ಟಾಗ ಕಾರ್ಯಕ್ರಮ ಮತ್ತಷ್ಟು ಅರ್ಥಪೂರ್ಣವಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ... ಫೆ.6ರ ದಿನಾಂಕವನ್ನು ಕಾಯ್ದಿರಿಸಿ, ನಮ್ಮ ಬದುಕಿನಲ್ಲಿ ಬರಬಹುದಾದ ಅಪರೂಪದ ಸಮಾರಂಭವೊಂದನ್ನು ಸಾಕ್ಷೀಕರಿಸಲು ಎಲ್ಲರೂ ಹುಮ್ಮಸ್ಸಿನಿಂದ ಸಿದ್ಧರಾಗಿ. ನಿಮ್ಮ ಸಹಪಾಠಿಗಳು, ಸ್ನೇಹಿತರೊಂದಿಗೆ ಆ ದಿವಸ ಕಾಲೇಜಿಗೆ ಬಂದು ದಿನಪೂರ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಿ. ಯಾರಿಗೆ ಗೊತ್ತು... ಎಷ್ಟೋ ವರ್ಷಗಳ ಹಿಂದೆ ನೀವು ಕಂಡು, ಭೇಟಿಯಾದ ಗೆಳೆಯ, ಗೆಳತಿ ಮತ್ತೊಮ್ಮೆ ಕಾಲೇಜಿನಲ್ಲಿ ಸಿಕ್ಕಬಹುದು. ನಿಮ್ಮ ಸೀನಿಯರ್ ಗಳು, ಜೂನಿಯರ್ ಗಳು ಮತ್ತೊಮ್ಮೆ ನಿಮಗೆ ಕ್ಯಾಂಪಸ್ ಆವರಣದಲ್ಲಿ ಎದುರಾಗಬಹುದು. ನಮಗೆ ಪಾಠ ಹೇಳಿದ ಲೆಕ್ಚರರ್ಸ್, ಬೋಧಕೇತರ ಸಿಬ್ಬಂದಿ , ಆ ಲೈಬ್ರರಿ, ರವೀಂದ್ರ ಕಲಾಭವನ, ಶಿವರಾಮ ಕಾರಂತ ಸಭಾಭವನ, ಸೈನ್ಸ್ ಬ್ಲಾಕ್, ವಿಶಾಲ ಗ್ರೌಂಡ್.... ಹೀಗೆ ಎಷ್ಟೊಂದು ಜಾಗಗಳಿವೆ ನೋಡಲು, ಸುತ್ತಾಡಲು... ಆ ದಿವಸ ಬನ್ನಿ. ನಿಮ್ಮ ಬ್ಯಾಚ್ ಮೇಟ್ ಗಳಿಗೂ ವಿಷಯ ತಿಳಿಸಿ ಎಲ್ಲರನ್ನೂ ಕಾಲೇಜಿಗೆ ಕರೆ ತನ್ನಿ. ನೆನಪಿಡಿ.. ಇಡಿ ರಾಜ್ಯದಲ್ಲೇ ಎರಡನೇ ಅತಿ ಹಿರಿಯ ಕಾಲೇಜು ನಮ್ಮದು. ಅಂತಹ ಕಾಲೇಜಿನಲ್ಲಿ ಕಲಿತ ಹೆಮ್ಮೆ ನಮಗಿದೆ. ಆ ದಿವಸವನ್ನು ಸ್ಮರಣೀಯವಾಗಿಸೋಣ.... ಅಂದ ಹಾಗೆ... 150ರ ಸಂಭ್ರಮದ ಪ್ರಯುಕ್ತ ಏನೇನಿದೆ... ದಿನಾಂಕ ಫೆ.5ರಂದು ಅಪರಾಹ್ನ 2.30ರಿಂದ ಹಳೆ ವಿದ್ಯಾರ್ಥಿಗಳ ನೋಂದಣಿ ನಡೆಯಲಿದೆ. ದಿನಾಂಕ ಫೆ.6ರಂದು ಬೆಳಗ್ಗೆ 10.20ಕ್ಕೆ ವಸ್ತು ಪ್ರದರ್ಶನ ಉದ್ಘಾಟನೆ, ಪೂರ್ವಾಹ್ನ 10.30ಕ್ಕೆ ಸಭಾ ಕಾರ್ಯಕ್ರಮ, ಅಪರಾಹ್ನ 2.30ರಿಂದ 5ರ ತನಕ ಹಳೆ ವಿದ್ಯಾರ್ಥಿಗಳ ಸಮ್ಮಿಲನ, ಸಂಜೆ 5ರಿಂದ 7ರ ತನಕ ಈಗಿನ ಹಾಗೂ ಹಳೆ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಮತ್ಯಾಕೆ ತಡ... ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ.... ವಿ.ವಿ.ಕಾಲೇಜು... ನಮ್ಮ ಕಾಲೇಜು... ನಮ್ಮ ಹೆಮ್ಮೆ...
-ಕೃಷ್ಣಮೋಹನ, (1999-2000ನೇ ಬ್ಯಾಚಿನ ಬಿ.ಕಾಂ. ಹಳೆ ವಿದ್ಯಾರ್ಥಿ, ವಿ.ವಿ.ಕಾಲೇಜು, ಮಂಗಳೂರು).
No comments:
Post a Comment