ತಡರಾತ್ರಿಯ ಹೆದ್ದಾರಿ ಮತ್ತು ಹಗಲನ್ನೂ ಬೀದಿಗಳ ಕತ್ತಲಾಗಿಸಿದ ಕೊರೋನಾ...
ಹೆಬ್ಬಾವಿನಂತೆ
ಮಲಗಿರುವ ಹೆದ್ದಾರಿ ಬಹುತೇಕ ರಾತ್ರಿ ಹೊತ್ತು
ಸುಸ್ತಾಗಿ ಮಲಗಿರುವುದಕ್ಕೂ ಲಾಕ್ ಡೌನ್ ಬಂದ
ಮೇಲೆ ಸುಡು ಬಿಸಿಲಿನ ಹಗಲು
ಹೊತ್ತೂ ಸದ್ದಿಲ್ಲದೆ ಸಿಟ್ಟು ಮಾಡಿಕೊಂಡವನಂತೆ ಬಿಗುವಾಗಿರುವುದಕ್ಕೂ
ಹೆಚ್ಚಿನ ವ್ಯತ್ಯಾಸ ಕಾಣುವುದಿಲ್ಲ.
ಹಗಲೆಲ್ಲ
ನುಸುಳಲೂ ಸ್ಥಳವಿಲ್ಲದಂತೆ ಅಂಕುಡೊಂಕಾದ ದಾರಿಯಲ್ಲಿ ಬೆನ್ನಟ್ಟಿಕೊಂಡು ಹೋಗುವ ಆಟೋ, ಬೈಕು,
ರಕ್ಕಸ ಗಾತ್ರದ ಲಾರಿಗಳು, ಎಲ್ಲೆಂದರಲ್ಲಿ
ಸ್ಟಾಪ್ ನೀಡುವ ಬಸ್ಸುಗಳು, ದೂರದೆಲ್ಲೋ
ಊರಿಗೆ ಹೋಗುವ ಧಾವಂತದಿಂದ ಎರಡೂ
ಹೆಡ್ ಲೈಟ್ ಉರಿಸಿ ಅಪರಿಮಿತಿ
ವೇಗದಿಂದ ಹಾದು ಹೋಗುವ ದುಬಾರಿ
ಬೆಲೆಯ ಕಾರುಗಳೆಲ್ಲ ವಿರಳ ವಿರಳವಾಗಿ ರಾತ್ರಿ
11, 12ರ ಹೊತ್ತಿಗೆ ಚಿತ್ರವೇ ಬದಲಾಗಿರುತ್ತದೆ. ನಡು
ಮಧ್ಯಾಹ್ನ ಹಾರನ್ ಮಾಡಿ ಹಿಂದಿಕ್ಕಬೇಕಾದ
ಸ್ಥಳದಲ್ಲೇ ತಡರಾತ್ರಿ ಯಾರೂ ಇರುವುದಿಲ್ಲ ಹೇಳುವುದಕ್ಕೂ,
ಕೇಳುವುದಕ್ಕೂ ಬ್ಯಾರಿಕೇಡ್ ಹೊರತುಪಡಿಸಿ.
ಸುತ್ತ ಅಷ್ಟಿಷ್ಟು ಬೆಳಕು, ಕಣ್ಣು ಹಾಯಿಸುವಷ್ಟು
ದೂರದ ನಸು ಗೋಚರದ ದೃಶ್ಯಗಳು
ಬಿಟ್ಟರೆ ಮತ್ತೆಲ್ಲ ಕಾರ್ಗತ್ತಲು. ಕಸವೋ, ಧೂಳೋ, ಅರ್ಧಂಬರ್ಧ
ನಿರ್ಮಾಣವಾದ ಕಟ್ಟಡಗಳೋ, ರಸ್ತೆ ಪಕ್ಕ ರಾಶಿ
ಸುರಿದ ಕೊಳೆತ ತರಕಾರಿಯೋ ರಾತ್ರಿ
ಹೊತ್ತು ಕತ್ತಲೆಯ ಪದರದಡಿ ಹುದುಗಿ
ಕುಳಿತು ಒಂಥರಾ ಮಂಜು ಮುಸುಕಿದ
ವಾತಾವರಣ. ವಾಹನದ ಹಿಂದಿನ ಮುಂದಿನ
ಎರಡು ಕಣ್ಣು ಕುಕ್ಕುವ ದೀಪಗಳು,
ಕಾಸರಗೋಡಿನಿಂದ ಹಾದು ಬರುವ ಆಂಬುಲೆನ್ಸುಗಳ
ಸೈರನ್ನು, ಪೊಲೀಸರ ಪೆಟ್ರೋಲಿಂಗ್ ವಾಹನದ
ಮೇಲೆ ತಿರುಗುವ ಲೈಟು ಬಿಟ್ಟರೆ
ಮತ್ತೆಲ್ಲ ಕಪ್ಪು ಕಪ್ಪು.
ದೂರದ ಎಲ್ಲಿಂದಲೋ ಬಂದು ಕೇರಳದ ಮತ್ತೆಲ್ಲಿಗೋ
ಹೋಗುವ ಉದ್ದದ ಲಾರಿ. ಎಂಟ್ಹತ್ತು
ಚಕ್ರಗಳ ದೈತ್ಯ ವಾಹನದಲ್ಲಿ ಒಂಟಿ
ಡ್ರೈವರು, ಜೊತೆಗೆ ಕೆಲವೊಮ್ಮೆ ತೂಕಡಿಸುವ
ಕ್ಲೀನರ್ರು.... ಅದೇ ನಿರ್ಲಿಪ್ತ ವೇಗ,
ನಿಧಾನಗತಿಯ ಸಂಚಾರ, ಕಣ್ಣೆವೆಯಿಕ್ಕುವಷ್ಟರಲ್ಲಿ ವೇಗವಾಗಿ ತೂರಿ
ಬಂದು ಅಷ್ಟುದ್ದ ದೂರ ಸಾಗಿ ಕಣ್ಮರೆಯಾಗುವ
ಮಲ್ಪೆಯಿಂದ ಬರುವ ಮೀನಿನ ಲಾರಿಗಳು,
ಪಿಕಪ್ಪುಗಳು, ಸಿಕ್ಕಿದ ಜಾಗದಲ್ಲಿ ತೂರಿ
ಅವಸರವರಸರಾಗಿ ತಡರಾತ್ರಿ ವರೆಗೂ ಗ್ರಾಹಕರ ಕ್ಲಪ್ತ
ಸಮಯದಲ್ಲಿ ತಲುಪಲು ಬೈಕ್ಕಿನಲ್ಲಿ ವೇಗವಾಗಿ
ಸಾಗುವ ಝೊಮೆಟಾ, ಸ್ವಿಗ್ಗಿ ಹುಡುಗರು....
ಯಾರಿಗೂ ಪುರುಸೊತ್ತಿಲ್ಲ.... ಹಿಂದೆ ತಿರುಗಿ ನೋಡುವುದಿಲ್ಲ,
ಅಕ್ಕಪಕ್ಕದವರ ಗಮನಿಸುವುದಿಲ್ಲ, ಗಮ್ಯ ತಲುಪ ವಿಶ್ರಾಂತಿ
ಪಡೆಯುವ ಹಂಬಲ. ಇಂದಿನ ಓಡಾಟ
ಮುಗಿಯುತ್ತಾ ಬಂತೆಂಬ ಸಮಾಧಾನ, ನಾಳೆಗೆ
ಇನ್ನೇನೋ ಎಂಬ ನಸು ಆತಂಕ...
ಇಷ್ಟು ಮಾತ್ರವಲ್ಲ....
ಒಂದೆರಡು
ಕಡೆ ಪ್ರಖರ ಟಾರ್ಚು ತೋರಿಸಿ
ನಿಲ್ಲಿಸುವ ಪೊಲೀಸರು ಒಲ್ಪಡ್ದ್, ಓಡೆಗೆ
ಪೋಪರ್... ಅದೇ ಪ್ರಶ್ನೆ. ಮತ್ತೆ
ಪಾಡ್ದರ ಅನ್ನುವ ಸಂಶಯದ ದೃಷ್ಟಿ.
ಡೌಟು ಜಾಸ್ತಿಯಾದರೆ ಬಾಯಿಗೆ ಸ್ಟ್ರಾ ಇರಿಸಿ
ಊದರು ಹೇಳಿ... ಮುಂದುವರಿಯಲು ಅನುಮತಿ...
ಮೊಗೇರಿನ ನೇತ್ರಾವತಿ ಸಂಕದಲ್ಲಿ ಜಗತ್ತನ್ನೇ ಕಳೆದುಕೊಂಡವರ ಹಾಗೆ ನದಿಯನ್ನೇ ನೋಡುತ್ತಾ
ನಿಂತಿರುವ ಹುಡುಗರ ಹಿಂಡು. ಕೆಲವೊಮ್ಮೆ
ಕೈಯ್ಯಲ್ಲಿ ಕುಪ್ಪಿ ಹಿಡಿದು ಕೇಕೇ
ಹಾಕುತ್ತಾ ಕಿರುಚಿ ಪೊಲೀಸ್ ಪಿಸಿಆರ್
ವಾಹನ ಬಂದಾಗ ಜಾಗ ಖಾಲಿ
ಮಾಡುವವರು...
ಯಾರು ಇಲ್ಲವೆಂದು ನದಿಗೆ ಕಸ ಎಸೆಯುವವರು,
ತಣ್ಣನೆ ಗಾಳಿ ಹೀರುತ್ತಾ ಸೇತುವೆ
ನಡುವೆ ನಡೆದಾಡುವ ಜಾಗದಲ್ಲಿ ಸಿಗರೇಟ್ ಸೇದುವವರು... ಆತಂಕದಿಂದ
ವಾಹನ ನಿಲ್ಲಿಸಿ ಮಾತನಾಡಿಸುವ ಪೊಲೀಸರು ಸಾಮಾನ್ಯ ದೃಶ್ಯಗಳು.
ತಡರಾತ್ರಿಯ
ಕೆಲಸ ಮುಗಿಸಿ ಲಿಫ್ಟಿಗೆ ಪಂಪ್
ವೆಲ್ ಫ್ಲೈಓವರ್ ಪಕ್ಕ ವಾಹನಗಳಿಗೆ ಕೈ
ತೋರಿಸಿ ತೊಕ್ಕೊಟು ಮುಟ್ಟ ಬರೋಲಿಯಾ ಅಂತ
ಕೇಳುವವರು. ತಡರಾತ್ರಿ 12 ಗಂಟೆಗೆ ಕಾಸರಗೋಡಿಗೆ ಹೋಗುವ
ಕೇರಳ ಕೆಎಸ್ ಆರ್ಟಿಸಿಯ ಲಾಸ್ಟಿ
ಟ್ರಿಪ್ಪಿಗೆ ಕಾಯುವ ದೂರದೂರಿನಿಂದ ಬಂದವರು,
ವೇಷ ಕಳಚಿ ಬಂದ ಕಲಾವಿದರು....
ತುಂಬ ಮಂದಿ ಸಿಗುತ್ತಾರೆ....
ಯಾವುದೋ
ದ್ವೇಷಕ್ಕೆ ಸಿಕ್ಕಿದವರ ಹಾಗೆ ಶರವೇಗದಿಂದ ಗಾಡಿಯನ್ನು
ಬೆನ್ನಟ್ಟಿ ಬಂದು ಸ್ವಲ್ಪ ದೂರ
ಸಾಗಿದ ಮೇಲೆ ಆಸಕ್ತಿ ಕಳೆದುಕೊಂಡವರಂತೆ
ಸ್ವಸ್ಥಾನ ಸೇರುವ ನಾಯಿಗಳ ಹಿಂಡು,
ಸರಕ್ಕನೆ ರಸ್ತೆ ದಾಟುವ ಹೆಗ್ಗಣಗಳು,
ರಸ್ತೆ ಪಕ್ಕ ನಿರಾಸಕ್ತಿಯಿಂದ ಮಲಗಿ
ಮೆಲುಕು ಹಾಕುತ್ತಿರುವ ದನಗಳು... ಎಷ್ಟು ಮಂದಿ ಇರುತ್ತಾರೆ
ರಾತ್ರಿಯೂ ಎಚ್ಚರವಾಗಿ....
ನಾಳಿನ ಉತ್ಸವಕ್ಕೆ ರಸ್ತೆ ಪಕ್ಕ ತೋರಣ
ಕಟ್ಟುವವರು, ತಡರಾತ್ರಿ ಗೂಡಂಗಡಿ ಎದುರು ನಿಂತು
ಮೊಬೈಲ್ ಹಿಡ್ಕೊಂಡು ದೇಶದ ಬಗ್ಗೆ ಗಂಭೀರ
ಚರ್ಚೆ ಮಾಡುವವರು, ತಡರಾತ್ರಿ 407 ವಾಹನಗಳಲ್ಲಿ ಬಂದು ಅಂಗಡಿಗಳಿಗೆ ಹಾಲಿನ
ಪ್ಯಾಕೇಟ್ ಸಪ್ಲೈ ಮಾಡುವ ನಂದಿನಿ
ಹಾಲಿನವರು, ದೂರದೂರಿನಿಂದ ಪುಟ್ಟ ಪುಟ್ಟ ವಾಹನಗಳಲ್ಲಿ
ತರಕಾರಿ ಹೊತ್ತು ಮಂಗಳೂರಿನಿತ್ತ ಶರವೇಗದಿಂದ
ಧಾವಿಸುವವರೂ ಆಗೊಮ್ಮೆ ಈಗೊಮ್ಮೆ ಹಾದು
ಹೋಗುತ್ತಾರೆ. ದೇರಳಕಟ್ಟೆಯ ಆಸ್ಪತ್ರೆಗಳ ಕ್ಯಾಶುವಾಲಿಟಿ ಬೋರ್ಡುಗಳ ಕೆಂಪು ಬಣ್ಣದ ಬೆಳಕು
ಕಣ್ಣಿಗೆ ರಾಚುತ್ತಿರುತ್ತದೆ....
ಕತ್ತಲು
ಎನ್ನುತ್ತೇವೆ, ರಾತ್ರಿ ಎನ್ನುತ್ತೇವೆ, ನಿರ್ಜನ
ಎನ್ನುತ್ತೇವೆ.... ಒಳಗಿಳಿದು ನೋಡಿದಾಗ ಎಲ್ಲೋ, ಯಾರೋ,
ಎಲ್ಲಿಗೋ ಹೋಗುತ್ತಲೇ ಇರುತ್ತಾರೆ. ಇಹ ತೊರೆದು ಹೋಗುವವರಿಗೆ,
ಅಗತ್ಯ ಸೇವೆಗಳಿಗೆ ಕಟ್ಟು ಬಿದ್ದವರಿಗೆ, ಆರೋಗ್ಯ
ಕೆಟ್ಟವರಿಗೆ ಸಮಯದ ಪರಿವಿ ಇದೆಯೇ...
ಬೆಳ್ಳಬೆಂಳಗ್ಗೆ ಬರುವ ಹಾಲು, ಪತ್ರಿಕೆ,
ತರಕಾರಿ, ಹೂವುಗಳೆಲ್ಲ ರಾತ್ರಿಯಿಡೀ ಎಲ್ಲಿಂದಲೋ ಬಂದು ಇನ್ನೆಲ್ಲಿಗೋ ಸಪ್ಲೈ
ಆಗುತ್ತಲೇ ಇರುತ್ತದೆ.... ನಿದ್ರೆ ತಿಳಿದೆದ್ದು ಬೆಳಗ್ಗೆ
ಹಲ್ಲುಜ್ಜುವ ಹೊತ್ತಿಗೆ ಮನೆ ಬಾಗಿಲಿಗೆ ಬಂದಿರುತ್ತದೆ.
ಬಂದ ದಾರಿಯೂ, ತಂದು ಹಾಕಿದವರೂ
ಕಣ್ಣಿಗೆ ಕಾಣುವುದಿಲ್ಲ ಅಷ್ಟೆ.... ಕತ್ತಲು ಹೆದ್ದಾರಿಗಳಿಗೆ ಅನ್ವಿಯಿಸುವುದಿಲ್ಲ.
ಹೆದ್ದಾರಿ ಮಲಗುವುದೂ ಇಲ್ಲ. ರಾತ್ರಿಯಾದಂತೆ ಸ್ವಲ್ಪ
ಮಂಪರಿನ ಹಾಗಷ್ಟೇ... ಮತ್ತೆಲ್ಲ ಹಗಲಿನ ಹಾಗೆಯೇ ಅತ್ತಿಂದಿತ್ತ,
ಇತ್ತಿಂದತ್ತ ಹೋಗುವವರಿಗೆ ದಾರಿ ಮಾಡಿಕೊಡುತ್ತಲೇ ಇರುತ್ತದೆ.
ನೇರ ಸೇತುವೆ ಮೇಲಿನ ಹಳದಿ
ದೀಪಗಳ ಸಾಲು, ವಾಹನವನ್ನು ಬೆನ್ನತ್ತಿ
ಬಂದಂತೆ ಕಾಣುವ ಪ್ರಖರ ಚಂದ್ರಮ,
ತಡರಾತ್ರಿಯ ಪಾರ್ಟಿಯ ಗಮ್ಮತ್ತಿಗೆ ಉರಿಸಿದ
ಚಿತ್ತಾರದ ಪಟ್ಟಾಕಿಯ ರಂಗು ರಂಗು ಆಗಸದ
ತುಂಬೆಲ್ಲ ಹರಡಿರುತ್ತದೆ. ಮತ್ತೆಲ್ಲೋ ಭೂತಕೋಲ, ಇನ್ನೆಲ್ಲೋ ಬಯಲಾಟವಿದ್ದರೆ
ಟ್ಯೂಬುಲೈಟುಗಳ ಸಾಲೇ ಹೇಳುತ್ತದೆ ಅಲ್ಲಿ
ರಾತ್ರಿಯಿಡೀ ಬೆಳಕು ಹರಿದಿರುತ್ತದೆ ಎಂದು....
ಈಗ ಹಾಗಲ್ಲ....
ಹಗಲೂ ರಾತ್ರಿಗಿಂತಲೂ ಗಂಭೀರವಾಗಿದೆ. ಅಲ್ಲಲ್ಲಿ ರಸ್ತೆ ಬಂದ್ ಮಾಡಿದ್ದಾರೆ.
ಎಲ್ಲೆಂದರಲ್ಲಿ ಬ್ಯಾರಿಕೇಡುಗಳು, ಪೊಲೀಸರು, ತಪಾಸಣೆ, ಗುರುತು ಚೀಟಿ
ತೋರಿಸುವುದು, ಸೈರನ್ನು, ಮೈಕುಗಳಲ್ಲಿ ಘೋಷಣೆ, ಏನೋ ಆತಂಕ,
ಸಾಮಾಜಿಕ ಅಂತರ, ಕಿಲೋಮೀಟರ್ ಗಟ್ಟಲೆ
ಹೋದರೂ ಮೆಡಿಕಲ್ ಬಿಟ್ಟು ಮತ್ತಿನ್ನೇನೂ
ತೆರೆದಿಲ್ಲ.
ಬಸ್ಸುಗಳಿಗೆ
ಯಾರೂ ಕಾಯುವುದಿಲ್ಲ, ಪೆಟ್ರೋಲ್ ಬಂಕ್ ಗಳಲ್ಲಿ ಶತಮಾನಗಳಿಂದ
ನಿಂತಿವೆಯೋ ಎಂಬಂತೆ ಲಂಗರು ಹಾಕಿ
ನಿಂತಿರುವ ಬಸ್ಸುಗಳು, ಚಿತ್ರಣದಲ್ಲೇ ಇಲ್ಲದ ಆಟೋಗಳು, ಕೈಚೀಲದಲ್ಲಿ
ತರಕಾರಿ ಕೊಂಡು ಹೋಗುವವರು, ಜುಮ್ಮನೆ
ಬೈಕುಗಳಲ್ಲಿ ಹಾದು ಹೋಗುವವರು, ಕುತ್ತಾರ್,
ಅಸೈಗೋಳಿ, ಕೊಣಾಜೆ,ಸಾಲೆತ್ತೂರು ಬಲೇ
ಬಲೇ ಎಂದು ತೊಕ್ಕೊಟ್ಟಿನಲ್ಲಿ ದಿನವಿಡೀ
ಕೇಳಿ ಬರುವ ಕಂಡಕ್ಟರುಗಳ ಕರೆಯೋಲೆಯ
ಸದ್ದು, ಹೊಗೆ, ಧೂಳು, ಶಾಲೆ
ಬಿಟ್ಟು ಮನೆಗೆ ತೆರಳುವ ಪುಟಾಣಿಗಳು,
ರಸ್ತೆ ಬದಿ ಪಾನಿಪೂರಿ ತಿನ್ನುವವರು...
ಅವರು, ಇವರು ಯಾರೂ ಇರುವುದಿಲ್ಲ.
ಅಲ್ಲೊಬ್ಬರು, ಇಲ್ಲೊಬ್ಬರು ಸಿಕ್ಕಿದರೂ ಮುಖ ತುಂಬಾ ಗವಸು
ತೊಟ್ಟು ಅವಸರದಿಂದ ಹೋಗುತ್ತಿರುತ್ತಾರೆ, ಇನ್ಯಾರೋ ಪ್ರಶ್ನಿಸುವ ಮುನ್ನ
ಮನೆ ಸೇರುತ್ತೇನೆ ಎಂಬ ಹಾಗೆ.
ಅಂಗಡಿಗಳೆದುರಿನ
ಮಿನಿ ಚರ್ಚಾ ಕೂಟಗಳು, ಹೊಟೇಲುಗಳಲ್ಲಿನ
ಕುಶಲೋಪರಿ, ಸಂಜೆ ಗದ್ದೆಗಳು, ಮೈದಾನಗಳಲ್ಲಿನ
ಕ್ರಿಕೆಟ್ಟು, ವಾಲಿಬಾಲ್, ಬೀಚಿನ ಕಡೆಗೆ ಹೋಗುವ
ಜೋಡಿಗಳು, ಭಾನುವಾರ ಕುಟುಂಬ ಸಮೇತ
ಹೊಟೇಲಿನಲ್ಲಿ ಕಾಣಿಸಿಕೊಳ್ಳುವ ಸಂಭ್ರಮ, ಚೌಕಾಸಿ ಮಾಡುವ
ತರಕಾರಿ ವ್ಯಾಪಾರ... ಯಾವುದೂ ಇಲ್ಲ...
ಇಷ್ಟು ಮಂದಿಯನ್ನೆಲ್ಲ ಮನೆಗಳಲ್ಲೇ ಇರಿಸುವಷ್ಟು ಜಾಗ ಮನೆಗಳಿಗಿವೆಯ ಎಂಬಷ್ಟು
ಅಚ್ಚರಿ. ರಸ್ತೆಗಳೇ ಬ್ಲಾಕ್ ಆಗುವಷ್ಟು ವಾಹನಗಳೆಲ್ಲ
ಎಲ್ಲಿ ಹೋಗಿ ನಿಂತಿವೆ ಎಂಬ
ಪ್ರಶ್ನೆ. ವಾರಗಟ್ಟಲೆ ಬೀದಿಗಳಿಯದ ಮಂದಿ ಓಡಾಟವನ್ನೇ ಮರೆತಾರ
ಹೇಗೆ ಎಂಬ ಆತಂಕ. ನಾಳಿನ
ಬದುಕೇನು, ಇಂದು ಅವರೆಲ್ಲ ಸರಿಯಾಗಿ
ತಿನ್ನುತ್ತಾರೆಯೇ, ಇವರಲ್ಲಿ ಎಷ್ಟು ಮಂದಿಯ ಆರೋಗ್ಯ ಕೈಕೊಟ್ಟಿರಲಿಕ್ಕಿಲ್ಲ,
ಎಷ್ಟು ಮಂದಿಗೆ ವಾಕಿಂಗು, ಜಾಗಿಂಗು ತಪ್ಪಿರಲಿಕ್ಕಿಲ್ಲ. ಎಷ್ಟು ಮಂದಿಗೆ ಅನಿವಾರ್ಯ ಪ್ರಯಾಣ ಇದ್ದಿರಲಿಕ್ಕಿಲ್ಲ....
ಹೀಗೆ ಕೊರೋನಾ ಬಂದಿರುವಾಗ, ಬಂದು ಹೋದರೆ, ಹೋದ ಬಳಿಕವೂ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ....
ಎಲ್ಲರೂ ಇದ್ದಾಗ
ಹೋಗುವ ರಸ್ತೆ, ಯಾರೂ ಬಾರದಿರುವಾಗಿನ ರಸ್ತೆ ಅದುವೇ ಆದರೂ, ರಸ್ತೆಯ ಚಟುವಟಿಕೆ, ಆತಂಕ, ಬಿರುಸು,
ವೇಗ ಎಲ್ಲ ಬದಲಾಗಿದೆ. ಬರಬೇಕಾದವರು ಬಾರದೆ, ಅನಿವಾರ್ಯವಾದವರು ಹೋದಾಗಿನ ಆತಂಕ ಮತ್ತು ಎಂಥದ್ದೋ ಒಂದು
ಅಸಹಜ ನೀರವ ಎಲ್ಲವನ್ನೂ ಬದಲಾಯಿಸುತ್ತಿದೆ, ಅದರ ಪರಿಣಾಮದ ಅರಿವೇ ಇಲ್ಲದ ಹಾಗೆ.... ಇದು ಯಾರೋ ಕೊಟ್ಟ
ಚಾಲೆಂಜನ್ನು ಸ್ವೀಕರಿಸಿ ಸ್ಟೇಟಸ್ಸಿನಲ್ಲಿ ಹಾಕಿದ ಚಿತ್ರದ ಹಾಗಲ್ಲ. ನಿಜವಾದ ಚಾಲೆಂಜ್ ಮುಂದಿದೆ...
ಕೊರೋನಾ ತೊಲಗಿದ ಬಳಿಕ ಉಕ್ಕಿ ಹರಿಯುವ ಪ್ರವಾಹದ ಹಾಗೆ ರಸ್ತೆಗೆ ನುಗ್ಗುವ ಕಾಲದಲ್ಲಿ......
-ಕೃಷ್ಣಮೋಹನ ತಲೆಂಗಳ.
(10-04-2020)
4 comments:
ಚಿತ್ರಣ ಕಣ್ಣ ಮುಂದೆ ಬಂದು ನಿಂತಿತು ಮಾರ್ರೆ ...
ಕಾಲಾಯ ತಸ್ಮೈ ನಮಃ 🙏🙏.... ನಿರ್ಲಿಪ್ತತೆ...
ಧನ್ಯವಾದಗಳು :)
ಧನ್ಯವಾದಗಳು
Post a Comment